ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ - ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್‍ನ ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ಆ ಗಡಿಯಾರವನ್ನು ನೋಡುತ್ತಾ ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆ ಒಂದೇಸಮನೇ ಜೋರಾಗಿ ಹೊಡೆದುಕೊಳ್ಳುತ್ತಿತ್ತು; ಅದೆಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತೆಂದರೆ ಆ ಸದ್ದನ್ನು ಕೇಳಿ ಅವನೇ ಭಯಗೊಂಡನಲ್ಲದೆ ಅವನದನ್ನು ತಹಬದಿಗೆ ತರಲು ಇನ್ನಿಲ್ಲದ ಪ್ರಯತ್ನಮಾಡಿ ಸೋಲುತ್ತಿದ್ದ.
ಇನ್ನಾರೇ ಆರು ನಿಮಿಷ! ಆ ಆರು ನಿಮಿಷಗಳಲ್ಲಿ ಆತ ಅವಳನ್ನು ಭೇಟಿಯಾಗಲಿದ್ದ; ಅವಳೆಂದರೆ ಹದಿಮೂರು ತಿಂಗಳುಗಳಿಂದ ಅವನ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಾಕೆ. ಅವಳನ್ನೆಂದೂ ನೋಡಿಲ್ಲ, ಮಾತನಾಡಿಸಿಲ್ಲ. ಆದರೆ ಅವಳು ಬರೆದ ಪತ್ರಗಳು ಮಾತ್ರ ಅವನೊಟ್ಟಿಗೆ ಬಹಳಷ್ಟು ಮಾತನಾಡಿವೆ. ಜೊತೆಗೆ ಸಾಕಷ್ಟು ಸ್ಫೂರ್ತಿ, ಬೆಂಬಲ ನೀಡಿವೆ.
ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಂತೆ ಆತನಿಗೆ ಆ ಭಯಾನಕ ಯುದ್ಧದ ರಾತ್ರಿಯ ನೆನಪಾಯಿತು. ಪಕ್ಕದಲ್ಲೇ ಜನರು ಪ್ರಶ್ನೆಗಳ ಮಳೆ ಸುರಿಸುತ್ತಾ ಅಲ್ಲಿನ ಅಧಿಕಾರಿಗಳಿಗೆ ಮುಗಿಬಿದ್ದಿದ್ದರು.
ಒಂದುಸಾರಿ ತಾನು ಯುದ್ಧ ಮಾಡುತ್ತಿದ್ದ ಕತ್ತಲ ರಾತ್ರಿಯಲ್ಲಿ ಅಚಾನಾಕಾಗಿ ತನ್ನ ಯುದ್ಧ ವಿಮಾನವೊಂದು ವೈರಿಗಳ ಪಾಳಯದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನಾತ ಬಿಡಿಸಿಕೊಳ್ಳಲು ಹೆಣಗಾಡುತ್ತಿರಬೇಕಾದರೆ ಅದನ್ನು ನೋಡಿ ವೈರಿ ವಿಮಾನ ಚಾಲಕ ಕುಹಕ ನಗೆ ನಕ್ಕಿದ್ದ. ಅಂದಿನಿಂದ ಅವನಿಗೆ ಆಗಾಗ ಭಯ ಆವರಿಸುತ್ತಿತ್ತು.
ಈ ರೀತಿ ಅವನು ಆಗಾಗ ಭಯಗೊಳ್ಳುತ್ತಿದ್ದುದನ್ನು ತನ್ನದೊಂದು ಪತ್ರದಲ್ಲಿ ಆಕೆಯ ಹತ್ತಿರ ನಿವೇದಿಸಿಕೊಂಡಿದ್ದ. ಅದಕ್ಕವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ.....ಎಲ್ಲ ಯೋಧರಂತೆ! ಹೆದರದ ಯೋಧರು ಯಾರಿದ್ದಾರೆ? ಅಂಥಾ ಧೀರಾನುಧೀರ ರಾಜ ಡೇವಿಡ್‍ನೂ ಹೆದರಿರಲಿಲ್ಲವೆ? ಅದಕ್ಕೆ ಅಲ್ಲವೇ ಆತ ಇಪ್ಪತ್ಮೂರನೇ ಪ್ರಾರ್ಥನಾಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು? ಮುಂದಿನ ಬಾರಿ ನೀ ಭಯಗೊಂಡಾಗ ನಾ ನಿನಗಾಗಿ ಪಠಿಸುತ್ತಿರುವದನ್ನು ಕಲ್ಪಿಸಿಕೋ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆದಾಡುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ, ಏಕೆಂದರೆ ನೀ ನನ್ನ ಜೊತೆಯಲ್ಲಿರುವೆ.” ಅವನು ಅವಳ ದ್ವನಿಯನ್ನು ಕಲ್ಪಿಸಿಕೊಂಡು ಉತ್ತೇಜಿತನಾಗಿದ್ದ.
ಇನ್ನು ಕೆಲವೇ ಕೆಲವು ಕ್ಷಣಗಳಲ್ಲಿ ಅವಳ ನೈಜ, ಮಧುರ ಧ್ವನಿಯನ್ನು ಕೇಳುವವನಿದ್ದಾನೆ.
ಆರಕ್ಕೆ ನಾಲ್ಕು ನಿಮಿಷ ಮಾತ್ರ ಬಾಕಿಯಿದೆ. ಅವನು ಚುರುಕಾದ.
ಅಸಂಖ್ಯ ತಾರಾಗಣಗಳ ಚಪ್ಪರದಡಿ ಜನ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರೆಲ್ಲರ ಮಧ್ಯದಿಂದ ಚೆಂದನೆಯ ಹುಡುಗಿಯೊಬ್ಬಳು ನಡೆದು ಬಂದು ಅವನ ಹತ್ತಿರದಲ್ಲೇ ಹಾದು ಹೋದಳು. ಲೆಫ್ಟಿನಂಟ್ ಬ್ಲಾಂಡ್ಫೋರ್ಡ್ ಕುಳಿತಲ್ಲೇ ಕದಲಿದ. ಅವಳು ತನ್ನ ಸೂಟಿನ ಮೇಲೆ ಕಡುಗೆಂಪು ಬಣ್ಣದ ಹೂ ಧರಿಸಿದ್ದಳು. ಆದರದು ಇವರಿಬ್ಬರ ಒಪ್ಪಂದದಂತೆ ಚಿಕ್ಕ ಕೆಂಗುಲಾಬಿಯಾಗಿರಲಿಲ್ಲ. ಮೇಲಾಗಿ ಈ ಹುಡುಗಿ ಹದಿನೆಂಟರ ತರುಣಿಯಾಗಿದ್ದಳು. ಆದರೆ ಹೋಲಿಸ್ ಮೀನಲ್ ಅವನಿಗೆ ಯಾವುದೇ ಮುಚ್ಚುಮರೆಯಿಲ್ಲದೆ ತನಗೆ ಮೂವತ್ತು ವರ್ಷ ಎಂದು ಹೇಳಿದ್ದಳು. “ಆದರೇನಂತೆ? ನನಗೀಗ ಮೂವತ್ತೆರೆಡು.” ಎಂದು ಬರೆದಿದ್ದ. ಆದರೆ ಅವನಿಗಾದುದು ಇಪ್ಪತ್ತೊಂಬೊತ್ತು ಮಾತ್ರ.
ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. ಆ ಪುಸ್ತಕದ ಹೆಸರು “Of Human Bondage”. ಅದರ ತುಂಬಾ ಹೆಂಗಸೊಬ್ಬಳು ತನ್ನ ಕೈ ಬರಹದಲ್ಲಿ ಬರೆದಿಟ್ಟ ಕೆಲವು ಟಿಪ್ಪಣಿಗಳಿದ್ದವು. ಈ ರೀತಿ ಪುಸ್ತಕಗಳಲ್ಲಿ ಬರೆಯುವದನ್ನು ಅವನು ಎಂದೂ ಇಷ್ಟಪಡುತ್ತಿರಲಿಲ್ಲ. ಆದರೆ ಇಲ್ಲಿ ಬರೆದಿದ್ದ ಟಿಪ್ಪಣಿಗಳು ತುಂಬಾ ವಿಭಿನ್ನವಾಗಿದ್ದರಿಂದ ಅವನ ಮನಸ್ಸನ್ನು ಬಹುವಾಗಿ ತಾಕಿದ್ದವು. ಒಂದು ಹೆಂಗಸು ಇಷ್ಟು ಸೂಕ್ಷ್ಮವಾಗಿ ಮತ್ತು ಇಷ್ಟು ಚನ್ನಾಗಿ ಒಬ್ಬ ಗಂಡಸಿನ ಎದೆಯಾಳವನ್ನು ಅರ್ಥಮಾಡಿಕೊಳ್ಳಬಹುದೆಂಬ ಊಹೆ ಕೂಡ ಆತನಿಗಿರಲಿಲ್ಲ. ಆಕೆ ಹೋಲಿಸ್ ಮೀನಲ್; ಆಕೆಯ ಹೆಸರು ಪುಸ್ತಕ-ಫಲಕದ ಮೇಲೆ “ಹೋಲಿಸ್ ಮೀನಲ್” ಎಂದು ಬರೆದಿತ್ತು. ನ್ಯೂಯಾರ್ಕ್ ಟೆಲಿಫೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿ ಅಂದೇ ಅವಳಿಗೆ ಪತ್ರವನ್ನು ಬರೆದ. ಅವಳೂ ಉತ್ತರಿಸಿದಳು. ಅವನು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂತು. ಹೋದ ಕಡೆಗಳಿಂದಲೇ ಬಿಡುವು ಮಾಡಿಕೊಂಡು ಅವಳಿಗೆ ಪತ್ರ ಬರೆಯುತ್ತಿದ್ದ. ಅವಳೂ ಉತ್ತರಿಸುತ್ತಿದ್ದಳು. ಅವರಿಬ್ಬರ ಪತ್ರವ್ಯವಹಾರ ಮುಂದುವರಿಯಿತು.
ಹದಿಮೂರು ತಿಂಗಳುಗಳು ಕಾಲ ಅವಳು ಶ್ರದ್ಧೆಯಿಂದ ಚಾಚೂ ತಪ್ಪದೇ ಉತ್ತರ ಬರೆದಳು ಮತ್ತು ಅವನಿಂದ ಯಾವುದೇ ಕಾಗದ ಬರದೇ ಹೋದಾಗ ಅವಳೇ ಬರೆಯುತ್ತಿದ್ದಳು. ನಿಧಾನವಾಗಿ ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನಿಗೆ ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವಳೂ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಅನಿಸತೊಡಗಿತು.
ಒಂದುಸಾರಿ ಅವಳಿಗೆ ಅವಳ ಫೋಟೋ ಕಳುಹಿಸಲು ಕೋರಿದ. ಆದರೆ ಆಕೆ ಆತನ ಕೋರಿಕೆಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಲಿಲ್ಲ. ಮೇಲಾಗಿ, ಹಾಗೆಲ್ಲಾ ಫೋಟೋ ಕಳಿಸುವದು ಅವಳಿಗೆ ಸರಿಯೆನಿಸಲಿಲ್ಲ. ಅದಕ್ಕವಳು ಕಾರಣವನ್ನೂ ಕೊಟ್ಟಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ, ಪ್ರಾಮಾಣಿಕವಾಗಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ ಮತ್ತು ಆ ರೀತಿಯ ಪ್ರೀತಿ ನನ್ನಲ್ಲಿ ಹೇಸಿಕೆ ಹುಟ್ಟಿಸುತ್ತದೆ. ಒಂದುವೇಳೆ ನಾನೇನಾದರೂ ಕುರೂಪಿಯಾಗಿದ್ದರೆ, (ಇರಬಹುದೆಂದು ನೀನು ನಂಬಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನಿನ್ನ ಒಂಟಿತನವನ್ನು ಹೋಗಲಾಡಿಸಲು ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ನಂಬಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ಒಂದು ನಿರ್ಧಾರಕ್ಕೆ ಬರುವಿಯಂತೆ. ನೆನಪಿರಲಿ, ನನ್ನ ನೋಡಿದ ಮೇಲೆ ನಿನಗೆ ನನ್ನ ಸಂಬಂಧ ಮುಂದುವರಿಸಬೇಕೆನಿಸಿದರೆ ಮುಂದುವರಿಸು. ಇಲ್ಲವಾದರೆ ಇಲ್ಲ. ಆಯ್ಕೆ ನಿನಗೆ ಬಿಟ್ಟಿದ್ದು.”
ಇದೀಗ ಹಸಿರು ಸೂಟು ಧರಿಸಿದ್ದ ಹುಡುಗಿಯೊಬ್ಬಳು ಅತಿ ವೇಗವಾಗಿ ಅವನ ಪಕ್ಕದಲ್ಲೇ ನಡೆದು ಹೋದಳು. ಆರಕ್ಕೆ ಒಂದು ನಿಮಿಷ ಮಾತ್ರ...............
ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನ ಎದೆ ಆತನ ವಿಮಾನದ ಎತ್ತರಕ್ಕೆ ಜಿಗಿಯಿತು.
ಒಬ್ಬಳು ನವತರುಣಿ ಅವನ ಬಳಿಗೆ ನಡೆದು ಬಂದಳು. ಅವಳು ನೀಳ ಮತ್ತು ತೆಳ್ಳಗಿನ ಶರೀರದವಳಾಗಿದ್ದು ಆಕರ್ಷಕ ಮೈಕಟ್ಟನ್ನು ಹೊಂದಿದ್ದಳು. ಅವಳ ಹೊಂಬಣ್ಣದ ಕೂದಲು ಸುರುಳಿ ಸುರುಳುಯಾಗಿ ಸುತ್ತಿಕೊಂಡು ಅವಳ ಕೋಮಲ ಕಿವಿಗೆ ಮುತ್ತನ್ನಿಡುತ್ತಿದ್ದವು. ಅವಳ ಕಂಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವನ್ನು ತಳೆದಿದ್ದವು. ಅವಳು ತನ್ನ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೇ ಮೈವೆತ್ತಂತೆ ಬಂದಳು. ಅವನು ಅವಳೆಡೆಗೆ ನಡೆದುಬಂದ. ಆದರೆ ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಆತ ಗಮನಿಸಲಿಲ್ಲ.
ಆತ ಅವಳನ್ನು ಸಮೀಪಿಸುತ್ತಿದ್ದಂತೆ ಅವಳ ತುಟಿಗಳ ಮೇಲೆ ಸಣ್ಣದೊಂದು ತುಂಟ ನಗು ಸುಳಿದು ಮಾಯವಾಯಿತು.
“ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಎಂದೇನೋ ಗುನುಗುನಿಸಿದಳು. ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅಲ್ಲಿ ಹೋಲಿಸ್ ಮೀನಲ್‍ಳನ್ನು ನೋಡಿದ. ಆಕೆ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ಸುಮಾರು ನಲವತ್ತರ ಹತ್ತಿರವಿರಬಹುದಾದ ಹೆಂಗಸು ಆಕೆ. ಅವಳು ತನ್ನ ಮಾಸಲು ಕೂದಲನ್ನು ತಾನು ಧರಿಸಿದ್ದ ಟೋಪಿಯೊಳಗೆ ಅಡಗಿಸಿಟ್ಟಿದ್ದಳು. ನೋಡಲು ಸ್ವಲ್ಪ ಧಡೂತಿಯಾಗಿದ್ದು ತನ್ನ ದಪ್ಪನೆಯ ಕಾಲುಗಳನ್ನು ಷೂನೊಳಗೆ ಬಲವಂತವಾಗಿ ತುರುಕಿದಂತೆ ಕಾಣುತ್ತಿತ್ತು. ಆದರೆ ಅವಳು ತನ್ನ ಸುಕ್ಕುಗಟ್ಟಿದ್ದ ಕಂದುಬಣ್ಣದ ಮೇಲಂಗಿ(ಸೂಟಿನಲ್ಲಿ)ಯಲ್ಲಿ ಕೆಂಗುಲಾಬಿ ಧರಿಸಿದ್ದಳು.
ತಿಳಿ ಹಸಿರು ಬಣ್ಣದ ಉಡುಗೆ (ಸೂಟು) ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದ ಮಾಯವಾದಳು.
ಬ್ಲಾಂಡ್ಫೋರ್ಡ್ ಇಕ್ಕಟ್ಟಿಗೆ ಸಿಲುಕಿದ. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಬೇಕೋ? ಅಥವಾ ತನ್ನ ಕಣ್ಮುಂದೆ ಇರುವ ಹೋಲಿಸ್ ಮೀನಲ್‍ಳಿಗೆ ಮನಸೋಲಬೇಕೋ? ಒಂದು ಕ್ಷಣ ಗಲಿಬಿಲಿಗೊಂಡ. ಆದರೆ ಪ್ರತಿಬಾರಿ ಅವನನ್ನು ಹುರಿದುಂಬಿಸಿದ, ಅವನಲ್ಲಿ ಸ್ಫೂರ್ತಿಯನ್ನು ತುಂಬಿದ ಹಾಗೂ ಇನ್ಮುಂದೆ ಜೀವನ ಪೂರ್ತಿ ತನ್ನ ಜೊತೆಯಲ್ಲೇ ಇರುವ ಹೋಲಿಸ್ ಮೀನಲ್‍ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಇದೀಗ ಅವರಿಬ್ಬರು ಮುಖಾಮುಖಿಯಾಗಿ ನಿಂತಿದ್ದರು. ಅವಳಿಗೆ ದುಂಡುದುಂಡಾದ ಮಾಸಲು ಮುಖವಿತ್ತು. ಆದರೆ ಅದರಲ್ಲಿ ಸ್ಥಿಗ್ನಸೌಂದರ್ಯ ಮನೆಮಾಡಿತ್ತು. ಅವಳ ಕಂಗಳು ಬೆಚ್ಚನೆಯ ಪ್ರೀತಿಯನ್ನು ಹೊರಸೂಸುತ್ತಿದ್ದವು.
ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು “Of Human Bondage” ಪುಸ್ತಕವನ್ನು ದೃಢವಾಗಿ ಹಿಡಿದಿದ್ದವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿಯಾಗಿತ್ತು. ಪ್ರಾಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಅಮೂಲ್ಯವಾದ ಜೀವಮಾನವಿಡಿ ಒಬ್ಬರಿಗೊಬ್ಬರು ಋಣಿಯಾಗಿರಬೇಕಾದ ಒಂದು ಅಪೂರ್ವ ಸ್ನೇಹ ಸಂಬಂಧ.
ಆತ ತನ್ನ ಎದೆ ಸೆಟಿಸಿ ಆಕೆಗೆ ಒಂದು ಸೆಲ್ಯೂಟ್ ಹೇಳಿದ. ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ ತನಗೆ ನಿರಾಶೆಯಾದರೂ ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಫೋರ್ಡ್ ಮತ್ತು ನೀವು...... ? ನೀವು....... ಮಿಸ್ ಮೀನಲ್ ಅಲ್ಲವೆ? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು..... ನಿಮ್ಮದೇನೂ ಅಭ್ಯಂತರವಿರದಿದ್ದರೆ ನನ್ನ ಜೊತೆ......ನನ್ನ ಜೊತೆ ಊಟಕ್ಕೆ ಬರುವಿರಾ?” ಅವಳ ಮುಖ ನಗುವಿನಿಂದ ಅರಳಿತು. “ಇದೆಲ್ಲಾ ಏನೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತಳಾಗಿ ಹೇಳಿದಳು. “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಉಡುಗೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೊಡುವಂತೆ ವಿನಂತಿಸಿದಳು. ಒಂದುವೇಳೆ ನೀವೇನಾದರೂ ನನ್ನನ್ನು ಊಟಕ್ಕೆ ಕರೆದರೆ ಅವಳು ನಿಮಗಾಗಿ ಮುಂದಿನ ರಸ್ತೆಯಲ್ಲಿರುವ ಹೋಟೆಲ್‍ನಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ನಾನು ಒಪ್ಪಿದೆ. ಇದೊಂದು ರೀತಿಯ ಪರೀಕ್ಷೆ........ಪ್ರೇಮಪರೀಕ್ಷೆಯೆಂದೂ ಹೇಳಿದಳು. ನನಗೀಗಾಗಲೇ ನಿನ್ನಷ್ಟೆತ್ತರ ಬೆಳೆದಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕೇ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಖುಶಿಯಿಂದ ಆ ಹೋಟೆಲ್‍ನತ್ತ ಹೆಜ್ಜೆ ಹಾಕತೊಡಗಿದ.
ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್
ಕನ್ನಡಕ್ಕೆ: ಉದಯ್ ಇಟಗಿ
ಈ ಕಥೆ ಇವತ್ತಿನ ಅಂದರೆ ಅಕ್ಟೋಬರ್ 14, 2012 ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ; http://www.udayavani.com/news/199761L15-ಈ-ಸ-ಜ--ಪ-ರ-ತ-ಯ-ಡನ-.html
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ