ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ಆವರಿಸಿತ್ತು. ತಕ್ಷಣ ನೀನು ಪಕ್ಕದಲ್ಲಿಯೇ ಇದ್ದ ನಿನ್ನಮ್ಮನನ್ನು ತಬ್ಬಿಕೊಂಡು ಗೊಳೋ ಅಂತ ಅಳಲು ಶುರುವಿಟ್ಟೆ. ಅರೆ ಅತ್ತಿದ್ದೇಕೆ? ಪೀಡೆ ತೊಲಗಿತೆಂದು ಖುಶಿಖುಶಿಯಾಗಿರುವದು ಬಿಟ್ಟು! ಇನ್ನು ಇವನ ಜೊತೆ ಏನೇ ಸರ್ಕಸ್ ಮಾಡಿದರೂ ಏಗಲಾರೆನೆಂದು ತಾನೇ ನೀನು ನನಗೆ ಡೈವೋರ್ಸ್ ಕೊಟ್ಟಿದ್ದು? ನಮ್ಮಿಬ್ಬರ ಜಗಳದಲ್ಲಿ ಎಷ್ಟೋ ಸಾರಿ ನೀನು ನನಗೆ “ಹಾಳಾಗಿ ಹೋಗು, ನನ್ನ ಬದುಕನ್ನು ನರಕ ಮಾಡಿಟ್ಟಿ.” ಎಂದು ಆಗಾಗ್ಗೆ ಚುಚ್ಚುತ್ತಿದ್ದವಳು ಈಗ ಸಂತೋಷವಾಗಿರುವದು ಬಿಟ್ಟು ಅತ್ತಿದ್ದೇಕೆ? ಸಂಕಟಪಟ್ಟಿದ್ದೇಕೆ? ನನಗೆ ಗೊತ್ತು ನನ್ನ ಪ್ರಶ್ನೆಗಳಿಗೆ ನಿನ್ನ ಹತ್ತಿರ ಉತ್ತರವಿಲ್ಲವೆಂದು. ಏಕೆಂದರೆ ನನ್ನದೂ ಅದೇ ಕಥೆಯೇ! ನೀನು ಅನುಭವಿಸುತ್ತಿರುವ ಯಾತನೆಯನ್ನೇ ನಾನೂ ಅನುಭವಿಸುತ್ತಿದ್ದೇನೆ. ಈ ಯಾತನೆ ನಿನಗೇಕೆ? ಎಂದು ನೀನು ನನ್ನ ಪ್ರಶ್ನಿಸಿದರೆ ನಾನು ಕೂಡ ಉತ್ತರಿಸಲಾರೆ. ಕೆಲವು ಪ್ರಶ್ನೆಗಳೇ ಹಾಗೆ! ಅವನ್ನು ಉತ್ತರಿಸಲಾಗದು!
ನಿನ್ನದು ಈ ಅವಸ್ಥೆಯಾದರೆ ನನ್ನದು ಮತ್ತೊಂದು ಅವಸ್ಥೆ! ಅಂದು ನೀನು ಹಾಗೆ ಅಳುತ್ತಿದ್ದುದನ್ನು ನೋಡಿ ನನಗೂ ತಡೆಯಾಗಲಿಲ್ಲ. ನನ್ನ ಕಿಬ್ಬೊಟ್ಟೆಯ ಕೆಳಗೆ ಕಸಿವಿಸಿಯೊಂದು ಛಳ್ಳೆಂದು ಸಿಡಿದು ಇಡಿ ಕರುಳನ್ನು ವ್ಯಾಪಿಸಿಬಿಟ್ಟಿತು. ಮನಸ್ಸು ವಿಲವಿಲ ಅಂತ ಒದ್ದಾಡಿತು. ಹೃದಯ ಕಿವುಸಿದಂತಾಗಿತ್ತು. ನಿಜ ಹೇಳಲೆ? ಅಂದು ನಿನಗಿಂತ ಹೆಚ್ಚಾಗಿ ನನಗೆ ಸಂಕಟವಾಗಿತ್ತು! ಸರಿ, ನೀನೇನೋ ಅತ್ತು ಅತ್ತು ಹಗುರಾಗಿಬಿಟ್ಟೆ. ನನ್ನ ಪಾಡೇನು? ನಾನು ಗಂಡಸು! ಅಳುವ ಹಾಗಿಲ್ಲ. ಏಕೆಂದರೆ ಏನೇ ಆದರೂ ಗಂಡಸು ಅಳಬಾರದೆಂಬ ಅಲಿಖಿತ ನಿಯಮವೊಂದನ್ನು ಈ ಲೋಕ ಅವನಿಗಾಗಿ ರೂಪಿಸಿಟ್ಟಿದೆಯಲ್ಲ? ನೀನೋ ಹೆಣ್ಣು! ನೀನು ಅತ್ತರೆ ಎಲ್ಲರೂ ಕಾರಣ ಕೇಳಿ ಓಡಿ ಬರುವವರೇ! ನಿನ್ನ ಕಣ್ಣೀರಿಗಿಲ್ಲಿ ಬೆಲೆಯಿದೆ. ಅನುಕಂಪವಿದೆ. ಸಾಂತ್ವನವಿದೆ. ಆದರೆ ನನ್ನ ಕಣ್ಣೀರನ್ನು ಕೇಳುವರ್ಯಾರು? ಅದಕ್ಕೆ ಸ್ಪಂದಿಸುವವರ್ಯಾರು? ಅನುಕಂಪಿಸುವವರ್ಯಾರು? ಯಾರೂ ಇಲ್ಲ! ಏಕೆಂದರೆ ನಾನು ಗಂಡಸು! ನಾನು ಅತ್ತರೆ ಇಲ್ಲಿ ಎಲ್ಲರೂ ನನ್ನ ಲೇವಡಿ ಮಾಡುವವರೇ! ಅಪಹಾಸ್ಯ ಮಾಡುವವರೇ! ಕೀಳಾಗಿ ಕಾಣುವವರೇ! ಇಲ್ಲಿ ಹೆಂಗಸಿನ ಕಣ್ಣೀರಿಗಿರುವಷ್ಟು ಬೆಲೆ ಗಂಡಸಿನ ಕಣ್ಣೀರಿಗಿಲ್ಲ! ನಾವು ಗಂಡಸರೇ ಹಾಗೆ! ನಿಮ್ಮಂತೆ ಅತ್ತು ಅತ್ತು ಮನಸ್ಸು ಹಗುರಮಾಡಿಕೊಳ್ಳಲಾರೆವು! ಅಳದೆ ನಮ್ಮ ನೋವನ್ನೆಲ್ಲಾ ಎದೆಯೊಳಗೆ ಬಚ್ಚಿಟ್ಟುಕೊಂಡು ಮೇಲೆ ಮಾತ್ರ ನಗುವಿನ ಮುಖವಾಡ ಹಾಕಿಕೊಂಡು ಮೌನವಾಗಿ ಬಿಕ್ಕಬೇಕು. ಹೀಗಾಗಿ ಲೋಕಕ್ಕೆ ನಮ್ಮ ಬಿಕ್ಕುಗಳು ಯಾವತ್ತೂ ಕೇಳಿಸುವದೇ ಇಲ್ಲ. ನಮ್ಮ ಕಂಗಳ ಹಿಂದಿರುವ ಕಣ್ಣಿರು ಕಾಣಿಸುವದೇ ಇಲ್ಲ. ಓ ಗಂಡಸೇ, ನೀನೆಷ್ಟೊಂದು ಪಾಪಿ? ಆಗೆಲ್ಲಾ ನಾನು ನೀನಾಗಿದ್ದರೆ ಎಷ್ಟು ಚನ್ನಾಗಿತ್ತು? ಎಂದುಕೊಂಡಿದ್ದೇನೆ.
ಅಂದಹಾಗೆ ಆವತ್ತು ನನಗೆ ಕಸಿವಿಸಿಯಾಗಿದ್ದು ನೀನು ಅತ್ತಿದ್ದಕ್ಕಲ್ಲ: ಇನ್ನು ನಿನ್ನ ಮುಂದಿನ ಬದುಕು ನೀನು ಹೇಗೆ ಬದುಕುತ್ತಿ? ಎಂಬ ಯೋಚನೆಯಿಂದ. ಇನ್ನೊಂದು ಮದುವೆಯಾಗುತ್ತೀಯಾ? ಒಬ್ಬಳೇ ಹಾಗೇ ಇರುತ್ತೀಯಾ? ಇಲ್ಲವೇ ಇದ್ಯಾವ ಜಂಜಾಟ ಬೇಡೆಂದು ದೂರ ಹೊರಟು ಹೋಗುತ್ತೀಯಾ? ಇಂಥದೇ ನೂರಾರು ಯೋಚನೆಗಳು ಒಂದಾದ ಮೇಲೊಂದರಂತೆ ಬಂದು ಮುತ್ತಿಕ್ಕುತ್ತಿವೆ. ವಿಪರ್ಯಾಸವೆಂದರೆ ಇದೆ ನೋಡು! ನಿನಗೆ ಡೈವೋರ್ಸ್ ಕೊಟ್ಟಿದ್ದೇ ನಿನ್ನಿಂದ ದೂರವಾಗಲೆಂದು; ನಿನ್ನ ಮರೆತು ಹಾಯಾಗಿರಲೆಂದು. ಆದರೆ ನನ್ನ ಮನಸ್ಸು ಮತ್ತೆ ಮತ್ತೆ ನಿನ್ನ ಕುರಿತೇ ಯೋಚಿಸಿತ್ತಿದೆ. ಹಪಹಪಿಸುತ್ತಿದೆ. ಇದೇನಾಶ್ಚರ್ಯ? ಬಿಡುಗಡೆಯಾದರೂ ಬಿಡುಗಡೆಯಾಗುತ್ತಿಲ್ಲ ನಿನ್ನ ಭಾವಬಂಧ!
ನೀನು ರೂಪವಂತೆ, ಗುಣವಂತೆ, ವಿದ್ಯಾವಂತೆ. ತಿಳುವಳಿಕೆಸ್ಥೆ. ಎಲ್ಲದಕ್ಕೂ ಹೊಂದಿಕೊಂಡುಹೋಗುವವಳು. ಆದರೆ ಅದೇಕೋ ನಿನ್ನ ತಿಳುವಳಿಕೆ, ಹೊಂದಾಣಿಕೆ ನನ್ನೊಂದಿಗೆ ಮಾತ್ರ ವರ್ಕ್ ಔಟ್ ಆಗಲಿಲ್ಲ. ಅಥವಾ ನಾನೇ ನಿನಗೆ ಹೊಂದಿಕೊಂಡುಹೋಗಲಿಲ್ವೋ? ಶತಾಯ ಗತಾಯ ಇಬ್ಬರೂ ಒಬ್ಬರಿಗೊಬ್ಬರು ಸರಿಯಾದ ಜೋಡಿಯಾಗಿರಲು ಪ್ರಯತ್ನಪಟ್ಟರೂ ಅದೇಕೋ ಸಾಧ್ಯವಾಗಲೇ ಇಲ್ಲ. ನಮ್ಮ ಬಿಡುಗಡೆಗೆ ಕಾರಣ ಒಂದಿತ್ತೆ? ಎರಡಿತ್ತೆ? ಅಥವಾ ನೂರಿತ್ತೆ? ಗೊತ್ತಿಲ್ಲ. ಆದರೆ ಎಲ್ಲ ಮುಗಿದ ಮೇಲೆ ಇಂತಿಂಥದೇ ಕಾರಣ ನಮ್ಮ ಬಿಡುಗಡೆಗೆ ಕಾರಣವಾಯಿತು ಎಂದು ಹುಡುಕುವದರಲ್ಲಿ ಯಾವ ಪುರುಷಾರ್ಥವಿದೆ? ಬದುಕು ತೀರ ಹಿಂಸೆ ಅನಿಸತೊಡಗಿದಾಗ ಒಟ್ಟಾಗಿ ಇರುವದರಲ್ಲಿ ಅರ್ಥವಿಲ್ಲವೆಂದುಕೊಂಡು ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದೆವು. ನಾವು ಡೈವೋರ್ಸಿಗೆ ಅಪ್ಲೈ ಮಾಡಿದ ದಿವಸವೇ ನೀನು ನನ್ನನ್ನು, ನನ್ನ ಮನೆಯನ್ನು ಬಿಟ್ಟುಹೋಗಿದ್ದಿ. ಆ ಕ್ಷಣಕ್ಕೆ ಮನಸ್ಸಿಗೆ ನೋವಾಗಿತ್ತಾದರೂ ಹಾಗೆ ಹೋದವಳು ಮನಸ್ಸು ಬದಲಾಯಿಸುತ್ತಿ, ಮತ್ತೆ ವಾಪಾಸು ಬರುತ್ತೀಯೆಂದು ದೂರದ ಆಶಾಕಿರಣವೊಂದು ನನ್ನಲ್ಲಿನ್ನೂ ಉಳಿದಿತ್ತು. ಆದರೆ ಅದೀಗ ಸಂಪೂರ್ಣವಾಗಿ ಕತ್ತರಿಸಿಬಿದ್ದಿದೆ. ನೀನೇನೋ ಈ ಮನೆಯನ್ನು ಬಿಟ್ಟುಹೋದಿ. ಆದರೆ ನೀ ಬಿಟ್ಟುಹೋದ ನೆನಪುಗಳು ಅಷ್ಟು ಬೇಗ ಹೋದಾವೆ? ಅವಿನ್ನೂ ಈ ಮನೆಯ ತುಂಬ ಮನದ ತುಂಬ ಗಸ್ತು ಹೊಡೆಯುತ್ತಲೇ ಇವೆ!
ನಾನು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಇವತ್ತೇನೋ ಮಿಸ್ ಆಯಿತಲ್ಲ? ಎಂದುಕೊಳ್ಳುತ್ತಿರುವಾಗಲೇ ನೆನಪಾಗುತ್ತದೆ; ನನ್ನ ಕೆನ್ನೆಗೊಂದು ನೀ ಮುತ್ತು ಕೊಟ್ಟು ಎಬ್ಬಿಸುತ್ತಿದ್ದುದು. ನಾನು ಆಫೀಸಿಗೆ ಹೋಗಲು ರೆಡಿಯಾಗಿ ಬರುತ್ತಿದ್ದಂತೆ ತಿಂಡಿಗಾಗಿ ಡೈನಿಂಗ್ ಟೇಬಲ್ ನತ್ತ ನೋಡುತ್ತೇನೆ. ಅಲ್ಲೇನೂ ಕಾಣುವದಿಲ್ಲ. ತಕ್ಷಣ ಸಿಟ್ಟಾಗಿ ನಿನ್ನ ಹೆಸರು ಹಿಡಿದು ಕೂಗಿ ‘ತಿಂಡಿ ಎಲ್ಲಿ?’ ಎಂದು ಕೇಳುತ್ತೇನೆ. ಅರೆ, ಅವಳೇ ಮನೆಬಿಟ್ಟು ಹೋದ ಮೇಲೆ ಅವಳ ತಿಂಡಿ ಎಲ್ಲಿಂದ ಬರಬೇಕು? ಎಂದು ಸುಮ್ಮನಾಗುತ್ತೇನೆ. ಸಾಯಂಕಾಲದ ಹೊತ್ತು ಬಿಸಿ ಬಿಸಿ ಕಾಫಿ ಕುಡಿಯುವಾಗ ಆ ಸಮಯದಲ್ಲಿ ನೀ ಮಾಡಿಕೊಡುತ್ತಿದ್ದ ಮಿರ್ಚಿಗಳು ನೆನಪಾಗಿ ಬಾಯಲ್ಲಿ ನೀರು ತರಿಸುತ್ತವೆ. ಯಾವಾಗಲಾದರೂಮ್ಮೆ ನಾ ಮಳೆಯಲ್ಲಿ ನೆನೆದು ಬಂದಾಗ ನೀನು “ಅಯ್ಯೋ, ಶೀತ ಆಗುತ್ತೆ” ಎಂದು ಓಡಿ ಬಂದು ಟಾವೆಲ್ ನಲ್ಲಿ ನನ್ನ ತಲೆಯನ್ನು ಒರೆಸುತ್ತಾ ಮೈ ಬಿಸಿಯೇರಿಸುತ್ತಿದ್ದುದು ನೆನಪಾಗಿ ಮೈ ಬಿಸಿಯಾಗುತ್ತದೆ. ಸುರಿಯುವ ಮಳೆಯಲ್ಲೇ ಕನಸುಗಳನ್ನು ಕಟ್ಟುತ್ತಾ ನಾವು ಬೈಕ್ ರೈಡಿಂಗ್ ಹೋಗುತ್ತಿದ್ದುದು ಕಣ್ಣಮುಂದೆ ತೇಲಿಬಂದು ಮೈಯಲ್ಲಿ ಸಣ್ಣದೊಂದು ಬಿಸಿ ಛಳಕು ಹುಟ್ಟಿಸುತ್ತದೆ. ನಾನು ಆಫೀಸಿಗೆ ಹೋಗುವಾಗ ಬೆನ್ನು ಹಿಡಿದು “ಆಫಿಸಿಗೆ ಹೋಗಲೇಬೇಕಾ? ಇವತ್ತು ನಿನ್ನ ಬಾಸ್ ಗೆ ಏನೋ ಒಂದು ಸುಳ್ಳು ಹೇಳಿಬಿಡು. ನಾನೂ ರಜೆ ತೆಗೆದುಕೊಳ್ಳುತ್ತೇನೆ. ಎಲ್ಲಾದ್ರೂ ಹೋಗೋಣ?” ಎಂದು ಹಿಂದಿನಿಂದ ತಬ್ಬುತ್ತಿದ್ದುದು ನೆನಪಾಗಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ನಾನು ರಾತ್ರಿ ಹಾಸಿಗೆಗೆ ಉರುಳುತ್ತಿದ್ದಂತೆ ಮೆಲ್ಲನೆ ನಿನ್ನ ವಾಸನೆ ಕಾಡತೊಡಗುತ್ತದೆ. ನಿನ್ನ ಆ ಉದ್ದನೆಯ ಕೂದಲುಗಳು ನನ್ನ ಎದೆಯ ರೋಮಗಳೊಂದಿಗೆ ತಳುಕು ಹಾಕಿಕೊಂಡು ಬಿಡಿಸಿಕೊಳ್ಳುತ್ತಿರುವದು ಕಣ್ಣಮುಂದೆ ಬಂದು ನಿದ್ರೆ ಬಾರದೆ ಒದ್ದಾಡುತ್ತೇನೆ. ಒಂದೇ? ಎರಡೇ? ಎಷ್ಟೊಂದು ನೆನಪುಗಳನ್ನು ಬಿಟ್ಟು ಹೋಗಿರುವೆ? ನಿನ್ನ ಬಗ್ಗೆ ಆಗಿರಬೇಕಾಗಿದ್ದ ಸಾಫ್ಟ್ ಕಾರ್ನರ್ ಈಗ ಹೆಚ್ಚಾಗತೊಡಗುತ್ತಿದೆ. ಏನು ಮಾಡುವದು? ಮದುವೆಯ ವ್ಯವಸ್ಥೆಯೇ ಹಾಗೆ! ಆರಂಭದಲ್ಲಿ ಎಲ್ಲವೂ ಚನ್ನಾಗಿರುತ್ತದೆ. ಎಲ್ಲವೂ ಹೊಂದಾಣಿಕೆಯಾಗುತ್ತದೆ. ಆದರೆ ಬರುಬರುತ್ತಾ ಇಬ್ಬರ ಒಪ್ಪು ತಪ್ಪುಗಳು ದೊಡ್ಡದಾಗಿ ಕಾಣಿಸತೊಡಗುತ್ತವೆ. ಬದುಕು ಅಸಹನೀಯವೆನಿಸಿ ದೊಡ್ಡ ಕಂದರವೇ ನಿರ್ಮಾಣವಾಗಿಬಿಡುತ್ತದೆ. ಇರಲಿ, ಇದರ ಬಗ್ಗೆ ಮುಂದೆ ಯಾವತ್ತಾದರೂ ಬರೆದೇನು! ಏನೇ ಆಗಲಿ ನೀ ಮತ್ತೆ ಮತ್ತೆ ನನ್ನ ಕಣ್ಣಮುಂದೆ ಬರುತ್ತಿ, ನೆನಪಾಗಿ ಕಾಡುತ್ತೀ, ನೀ ನನ್ನ ಬಿಟ್ಟುಹೋದರೂ ನಿನ್ನ ನೆನಪುಗಳು ನನ್ನ ಬಿಡಲೊಲ್ಲವು. ಓ ದೇವರೆ! ಮನೆಯನ್ನು ಸುಲಭವಾಗಿ ಬಿಟ್ಟು ಹೋದವರು ಮನವನ್ನೇಕೆ ಬಿಟ್ಟುಹೋಗುವದಿಲ್ಲ?
ನನಗನಿಸುತ್ತಿರುವಂತೆಯೇ ನಿನಗೂ ಅನಿಸುತ್ತಿರಬೇಕಲ್ಲವೆ? ಅನಿಸದೆ ಏನು? ಯಕಶ್ಚಿತ್ ಬಸ್ಸಲ್ಲೋ ಟ್ರೇನಲ್ಲೋ ಪರಿಚಯವಾದ ಸಹಪ್ರಯಾಣಿಕನೊಬ್ಬ ಇಳಿದುಹೋದಮೇಲೂ ತುಂಬಾ ಹೊತ್ತು ಕಾಡಬೇಕಾದರೆ ಮೂರ್ನಾಲ್ಕು ವರ್ಷ ನಿನ್ನೊಟ್ಟಿಗೆ ಸಂಸಾರ ಮಾಡಿದವ ನಾನು ನಿನ್ನನ್ನು ಕಾಡದೇ ಇರುತ್ತೇನೆಯೇ? ನನ್ನ ನೆನೆಪಗಳು ನಿನ್ನನ್ನು ಕಿತ್ತು ತಿನ್ನದೆ ಇರುತ್ತೇವೆಯೇ? ನೀನು ನನಗೆ ಇಲ್ಲ ಎಂದು ಸುಳ್ಳು ಹೇಳಬಹುದು. ಆದರೆ ನಿನಗೆ ನೀನು ಸುಳ್ಳು ಹೇಳಿಕೊಳ್ಳಬಲ್ಲೆಯೇ? ಖಂಡಿತ ಇಲ್ಲ! ಏಕೆಂದರೆ ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ; ಒಂದಲ್ಲ ಒಂದು ರೂಪದಲ್ಲಿ ನಮ್ಮನ್ನು ಕಾಡುತ್ತಲೇ ಇರುತ್ತದೆ!
-ಉದಯ್ ಇಟಗಿ
ತಲೆ ಬರಹ ಕದ್ದಿದ್ದು ಚಾಮರಾಜ ಸವಡಿಯವರಿಂದ
ಈ ಲೇಖನ ಅವಧಿಯಲ್ಲಿ ಪ್ರಕಟವಾಗಿದೆ. http://avadhimag.com/?p=58297