Demo image Demo image Demo image Demo image Demo image Demo image Demo image Demo image

ಎಲ್ಲ ಬಿಟ್ಟು ಅವಳು ಅವನ ಹಿಂದೆ ಹೋದದ್ದಾದರೂ ಏಕೆ?

  • ಶನಿವಾರ, ಡಿಸೆಂಬರ್ 11, 2010
  • ಬಿಸಿಲ ಹನಿ
  • ನಮ್ಮಲ್ಲಿ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಜನ ಮಾತಾಡಿಕೊಳ್ಳುವದಿಲ್ಲ. ತಲೆಕೆಡಿಸಿಕೊಳ್ಳುವದಿಲ್ಲ. ಅಸಲಿಗೆ ಅದೊಂದು ಸುದ್ದಿಯಾಗುವದಿಲ್ಲ. ಹೋದರೆ ಹೋದ. ಇಲ್ಲೇ ಎಲ್ಲೋ ಹೋಗಿರಬೇಕು. ಇವತ್ತಲ್ಲ ನಾಳೆ ಮತ್ತೆ ಬರುತ್ತಾನೆ ಎಂದು ತುಂಬಾ ಉದಾಸೀನವಾಗಿ ಮಾತಾಡಿ ಜನ ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹೆಚ್ಚೆಂದರೆ ಅವನೆಲ್ಲಿದ್ದಾನೆಂದು ಹುಡುಕಿ, ಅವನಿಗೊಂದಿಷ್ಟು ಬೈದು, ಇನ್ಮೇಲೆ ಹಂಗೆಲ್ಲಾ ಬಿಟ್ಟುಹೋಗಬೇಡ ಅಂತಾ ನಾಲ್ಕು ಬುದ್ದಿ ಮಾತು ಹೇಳಿ ವಾಪಾಸು ಕರೆತರುತ್ತಾರೆ. ಹಾಗೆ ವಾಪಾಸು ಬಂದವನಿಗೆ ಅದ್ದೂರಿ ಸ್ವಾಗತವೂ ಇರುತ್ತೆ. ಆತ ಕ್ಷಮೆಗೆ ಅರ್ಹನು ಹೌದೋ ಅಲ್ವೋ ಆದರೂ ಅವನನ್ನು ಕ್ಷಮಿಸಿ ಸಮಾಜದಲ್ಲಿ ಆತನಿಗೊಂದು ಮೊದಲಿನ ಸ್ಥಾನವನ್ನು ಕಲ್ಪಿಸಿಕೊಡುತ್ತಾರೆ. ಅಂದರೆ ಜನ ಆತನ ವಿಷಯದಲ್ಲಿ ಭಾರಿ ರಿಯಾಯಿತಿ ತೋರಿಸುತ್ತಾರೆ. ಆದರೆ ಹೆಂಡತಿ ಗಂಡನನ್ನು ಬಿಟ್ಟು ಹೋದರೆ? ಶಿವ ಶಿವ ಎಲ್ಲಾದರೂ ಉಂಟೆ? ಜನ ಊಹಿಸಲು ಕೂಡ ಹೆದರಿಕೊಳ್ಳುತ್ತಾರೆ. ಅಕಸ್ಮಾತಾಗಿ ಹೆಂಡತಿಯೊಬ್ಬಳು ಗಂಡನನ್ನು ಬಿಟ್ಟುಹೋದರೆ ಇನ್ನಿಲ್ಲದಂತೆ ಮಾತಾಡಿಕೊಳ್ಳುತ್ತಾರೆ. ಅದನ್ನೊಂದು ಭಾರಿ ಸುದ್ದಿಯನ್ನಾಗಿ ಮಾಡುತ್ತಾರೆ. ಅವಳನ್ನು ಓಡಿಹೋದವಳು, ಹಾದರಗಿತ್ತಿ ಅಂತೆಲ್ಲಾ ಕರೆಯುತ್ತಾರೆ. ತಿಂಗಳುಗಟ್ಟಲೆ ಅವಳ ಬಗ್ಗೆಯೇ ಮಾತಾಡಿ ಮಾತಾಡಿ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ. ಅವಳನ್ನು ಹುಡುಕಿ ವಾಪಾಸು ಕರೆತರುವದಿರಲಿ, ಅವಳ ಬಗ್ಗೆ ಯೋಚಿಸುವದು ಕೂಡ ಅಸಹ್ಯವೆಂದುಕೊಳ್ಳುತ್ತಾರೆ. ಇನ್ನು ಅವಳಾಗಿಯೇ ವಾಪಾಸು ಬಂದರೂ ಮನೆ ಬಾಗಿಲು ತೆರೆಯುವ ಮಾತಂತೂ ದೂರವೇ ಉಳಿಯಿತು. ಏಕೆಂದರೆ ನಮ್ಮಲ್ಲಿ ಅವಳ ವಿಷಯದಲ್ಲಿ ಯಾವುದೇ ಕ್ಷಮೆಯಾಗಲಿ ರಿಯಾಯಿತಿಗಳಾಗಲಿ ಇಲ್ಲ! ಅದು ಸರಿಯೋ? ತಪ್ಪೋ? ಮೊದಲಿನಿಂದಲೂ ನಮ್ಮ ಸಮಾಜ ಅವಳನ್ನು ಬೆಳೆಸಿಕೊಂಡಬಂದ ರೀತಿ ಹಾಗಿದೆ ಮತ್ತು ಈಗಲೂ ಅದೇ ನಿರ್ಬಂಧಗಳಲ್ಲಿ ಅವಳನ್ನು ನೋಡಲು ಬಯಸುತ್ತದೆ. ಹೀಗಿದ್ದೂ ಅವಳು ಗಂಡ, ಮನೆ, ಮಕ್ಕಳನ್ನೆಲ್ಲಾ ಬಿಟ್ಟು ಅವನ ಹಿಂದೆ ಹೋದದ್ದಾದರೂ ಏಕೆ? ಅಸಲಿಗೆ ಗಂಡನನ್ನು ಬಿಟ್ಟುಹೋಗಲು ಕಾರಣಾಂತ ಒಂದು ಇರಬೇಕಲ್ಲವೆ? ಹಾಗಾದರೆ ಆ ಕಾರಣವಾದರೂ ಯಾವುದು? ಎಲ್ಲ ಬಿಟ್ಟು ಅವನ ಹಿಂದೆ ಹೋಗುವದೆಂದರೆ? ಅದೂ ಏನೂ ಇಲ್ಲದ ಲೋಲು ಕಿನ್ನುರಿ ನುಡಿಸುವವನ ಹಿಂದೆ! ಈ ನಿಟ್ಟಿನಲ್ಲಿ ಇದನ್ನೊಂದು ತ್ರಿಕೋನ ಪ್ರೇಮ ಕಥೆಯೆನ್ನಬೇಕೆ? ಹಾದರದ ಕಥೆಯೆನ್ನಬೇಕೆ? ಅಥವಾ ವಿಚಿತ್ರ ಮನೋಲೋಕದ ಹೆಣ್ಣಿನ ಕಥೆಯೆನ್ನಬೇಕೆ? ನಿರ್ಧರಿಸಲು ಸಾಧ್ಯವಾಗುವದಿಲ್ಲ.

    ಅದೆಲ್ಲ ಇರಲಿ. ಒಬ್ಬ ಹೆಂಗಸು ತನ್ನ ಗಂಡನನ್ನು ಏಕೆ ಬಿಟ್ಟುಹೋಗುತ್ತಾಳೆ? ಅಷ್ಟಕ್ಕೂ ಬಿಡಲು ಅಂತಹ ಕಾರಣಗಳೇನಿರುತ್ತವೆ? ಅವನೊಬ್ಬ ಬಡವನಾಗಿರಬೇಕು, ಕುಡುಕನಾಗಿರಬೇಕು, ಬೇಜವಾಬ್ದಾರಿಯವನಾಗಿರಬೇಕು, ಬೇರೆ ಹೆಂಗಸಿನ ಸಹವಾಸ ಮಾಡಿರಬೇಕು, ದುಷ್ಟನಾಗಿರಬೇಕು. ಅಥವಾ ಕೊನೆಗೆ ಇದ್ಯಾವುದು ಅಲ್ಲದಿದ್ದರೆ ಅವನೊಬ್ಬ ಷಂಡನಾಗಿರಬೇಕು. ಇದಕ್ಕಿಂತ ಬೇರೆ ಕಾರಣವಾದರು ಏನಿರುತ್ತೆ? ಅಷ್ಟಕ್ಕೂ ಬಿಟ್ಟು ಹೋಗಲೇಬೇಕೆಂದರೆ ಅದು ಸಾಧ್ಯವಾಗೋದು ವಿದ್ಯಾವಂತ ಅಥವಾ ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರ! ಆದರೆ ವಿದ್ಯಾವಂತೆಯೂ ಅಲ್ಲದ ಉದ್ಯೋಗಸ್ಥೆಯೂ ಅಲ್ಲದ ಹಳ್ಳಿಯ ಹೆಣ್ಣುಮಗಳೊಬ್ಬಳು ಗಂಡನನ್ನು ಬಿಡುವ ಯೋಚನೆಯನ್ನಾದರೂ ಮಾಡುತ್ತಾಳೆಯೆ? ಅವಳಿಗೆ ಏನೇ ಕಷ್ಟವಿದ್ದರೂ ಅವನ್ನೆಲ್ಲಾ ನುಂಗಿಕೊಳ್ಳುತ್ತಾಳೆ. ಇಲ್ಲವೇ ಆ ಸಮಸ್ಯೆಗಳಿಗೆ ಬೇರೆ ಪರಿಹಾರ ಕಂಡುಕೊಳ್ಳುತ್ತಾಳೆ. ಹೀಗೆ ಏಕಾಏಕಿ ಬಿಟ್ಟುಹೋಗುತ್ತಾಳೆಯೆ? ಸಾಧ್ಯಾನೇ ಇಲ್ಲ! ಹಾಗಿದ್ದರೆ ಈ ಹೆಂಗಸು ಎಲ್ಲ ಇದ್ದ ತನ್ನ ಗಂಡನನ್ನು ಬಿಟ್ಟುಹೋಗುವ ನಿರ್ಧಾರ ಮಾಡುವದೇಕೆ? ಅದೂ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ! ಹಾಗೆ ಹೋಗುವಾಗ ಅವಳಿಗೆ ಒಂಚೂರು ಅಪರಾಧಿ ಪ್ರಜ್ಞೆ ಕಾಡಲಿಲ್ಲವೆ? ಸಮಾಜದ ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ಅವಳ ಮನಸ್ಸು ಒಂಚೂರು ಅಳುಕಲಿಲ್ಲವೆ? ಅಂಥ ಧೈರ್ಯ ಆಕೆಗೆ ಬಂದದ್ದಾದರೂ ಎಲ್ಲಿಂದ? ಆ ಸಂದರ್ಭದಲ್ಲಿ ಅವಳ ಮನಸ್ಥಿತಿಯಾದರೂ ಹೇಗಿತ್ತು? ಬೇರೆಲ್ಲ ಹೋಗಲಿ ಕಡೆಪಕ್ಷ ಅವಳ ಮಗನ ಮೇಲಿನ ಪ್ರೀತಿಯಾದರೂ ಅವಳನ್ನು ಹೋಗದಂತೆ ತಡೆಹಿಡಿದು ನಿಲ್ಲಿಸಲಿಲ್ಲವೆ? ಎಲ್ಲವನ್ನೂ ಧಿಕ್ಕರಿಸಿ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗಬೇಕಾದರೆ ಅದರ ಹಿಂದೆಯಿದ್ದ ಶಕ್ತಿಯಾದರೂ ಎಂಥದು? ಅದು ಪ್ರೇಮವೋ? ಕಾಮವೋ? ಮೋಹವೋ? ಅಥವಾ ಬರೀ ಆಕರ್ಷಣೆಯೋ? ಎಲ್ಲ ಬಿಟ್ಟು ಯಾತಕ್ಕಾಗಿ ಅವನ ಹಿಂದೆ ಹೋಗುತ್ತಾಳೆ? ಮತ್ತೆ ಮತ್ತೆ ಕಾಡುವ ಪ್ರಶ್ನೆಗಳು! ಉತ್ತರ ಹುಡುಕಿ ಹೋದಷ್ಟು ಅವಳು ನಿಗೂಢವಾಗಿ ಉಳಿಯುತ್ತಾಳೆ ಮತ್ತು ಹೆಣ್ಣಿನ ಭಾವನಾತ್ಮಕ ಪ್ರಪಂಚಕ್ಕೆ ಒಂದು ಸವಾಲಾಗಿ ನಿಲ್ಲುತ್ತಾಳೆ.

    ಈ ಜಾನಪದ ಗೀತೆ ಮೇಲ್ನೋಟಕ್ಕೆ ಜೋಗಿ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ನಡುವಿನ ಸರಸ ಸಲ್ಲಾಪದಂತೆ ಕಂಡರೂ ಅವಳ ವಿಚಿತ್ರ ಮನೋಲೋಕವನ್ನು ಅನಾವರನಗೊಳಿಸುತ್ತದೆ. ಅವಳು ಅವನ ಹಿಂದೆ ಪ್ರೇಮಕ್ಕಾಗಿ ಹೋಗುತ್ತಾಳೋ? ಕಾಮಕ್ಕಾಗಿ ಹೋಗುತ್ತಾಳೋ? ಅಥವಾ ಅವನ ಮೇಲಿನ ಆಕರ್ಷಣೆಗೋಸ್ಕರ ಹೋಗುತ್ತಾಳೋ? ಯಾತಕ್ಕಾಗಿ ಎಂದು ಕವನ ಸ್ಪಷ್ಟವಾಗಿ ಹೇಳುವದಿಲ್ಲ. ಬರಿ ಅವರಿಬ್ಬರ ನಡುವಿನ ಸರಸ ಸಲ್ಲಾಪವನ್ನಷ್ಟೇ ಕಟ್ಟಿಕೊಡುತ್ತದೆ. ಈ ಹಾಡು ಜೋಗಪ್ಪ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ಸಂಭಾಷಣೆಯ ರೂಪದಲ್ಲಿದೆಯಾದರೂ ಇಡಿ ಹಾಡಿನುದ್ದಕ್ಕೂ ಅವನೇನೋ ಕೇಳುತ್ತಾನೆ. ಅವಳೇನೋ ಹೇಳುತ್ತಾಳೆ. ಅಥವಾ ಅವಳೇನೋ ಕೇಳುತ್ತಾಳೆ. ಅವನೇನೋ ಹೇಳುತ್ತಾನೆ. ಅಂದರೆ ಪರಸ್ಪರರ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುವದಿಲ್ಲ. ಇಬ್ಬರರ ಉತ್ತರಗಳಲ್ಲಿ ಪಲಾಯನವಿದೆ ಅಥವಾ ಹಾರ್ಷ್ ಉತ್ತರ ಕೊಡುವದು ಬೇಡವೆಂದು ಮೊದಲೇ ಯೋಚಿಸಿ ಇಬ್ಬರೂ ಒಬ್ಬರಿಗೊಬ್ಬರು ನೋವಾಗದಂತೆ ಹಿತವಾದ ಉತ್ತರ ಕೊಡುತ್ತಾರೆ. ಆ ಮೂಲಕ ಪರಸ್ಪರ ಆ ಕ್ಷಣದ ಸುಖವನ್ನು ಮಾತ್ರ ಅನುಭವಿಸಲು ನೋಡುತ್ತಾರೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಯೋಚಿಸುವದೇ ಇಲ್ಲ. ಹಾಗೆ ನೋಡಿದರೆ ಕವನದ ಮೊದಲಿನೆರಡು ಸಾಲುಗಳಲ್ಲಿ ಮಾತ್ರ ಅವಳ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತದೆ. ಅವಳು ಅವನ ಹಿಂದೆ ಹೋಗುವಾಗ “ಎಲ್ಲೋ ಜೋಗಪ್ಪ ನಿನ್ನರಮನೆ? ಎಲ್ಲೋ ಜೋಗಪ್ಪ ನಿನ್ನ ತಳಮನೆ?” ಎಂದು ಕೇಳುತ್ತಾಳೆ. ಅದಕ್ಕವನು “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಉತ್ತರ ಕೊಡುತ್ತಾನೆ. ಬಲು ಖಿಲಾಡಿ ಜೋಗಿ ಅವನು! ಅಸಲಿಗೆ ಊರೂರು ತಿರುಗುತ್ತಾ ತನ್ನ ಹೊಟ್ಟೆ ಹೊರೆದುಕೊಳ್ಳುವ ಜೋಗಿಗೆ ಒಂದು ಮನೆಯಾದರೂ ಇರಲು ಸಾಧ್ಯವೆ? ಅವನಿಗೆ ಇವತ್ತು ಈ ಊರು, ನಾಳೆ ಇನ್ನೊಂದು ಊರು. ಅದನ್ನವನು ಬಹಳ ಜಾಣತನದಿಂದ “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ. ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಹೇಳುತ್ತಾನೆ. ಅಥವಾ ತನಗೆ ಮನೆಯೇ ಇಲ್ಲ, ಮನೆಯಿದ್ದರೂ ಅಲ್ಲಿಗೆ ಹೋಗುವ ದಾರಿ ಬಲು ಕಠಿಣವಾದುದು ಎನ್ನುವದನ್ನು ಸೂಚ್ಯವಾಗಿ ಹೇಳುತ್ತಾನೆ. ಅಂದರೆ “ನೀನು ಎಲ್ಲ ಬಿಟ್ಟು ನನ್ನ ಹಿಂದೆ ಬರುತ್ತಿದ್ದೀಯಾ. ನನ್ನ ಬದುಕು ದುಸ್ತರವಾದುದು. ಮುಂದೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಿದ್ದಾನೆ. ಒಂದು ರೀತಿಯಲ್ಲಿ ಅವಳನ್ನು ಮುಂದಿನ ಬದುಕಿಗಾಗಿ ಮಾನಸಿಕವಾಗಿ ತಯಾರಿ ಮಾಡಿಸುತ್ತಾನೆ. ಮುಂದೆ ಅವಳೊಟ್ಟಿಗೆ ಬಾಳ್ವೆ ಮಾಡುತ್ತಾನೋ? ಇಲ್ವೋ? ಆ ಮಾತು ಬೇರೆ. ಅಂತೂ ಅವಳಿಗೆ ಸಮಾಧನಕರ ಉತ್ತರವನ್ನು ಆ ಕ್ಷಣಕ್ಕೆ ಕೊಡುತ್ತಾನೆ. ಅವಳೋ ಅದಾಗಲೇ ಎಲ್ಲ ಬಿಟ್ಟು ಅವನ ಬೆನ್ಹತ್ತಿ ಬಂದಾಗಿದೆ. ಆದರೂ ಅವನ ಮನದಲ್ಲಿನ್ನೂ ಕೆಲವು ಸಂಶಯಗಳಿವೆ. ಅವನ್ನು ಸ್ಪಷ್ಟಪಡಿಸಿಕೊಳ್ಳುವದಕ್ಕೋಸ್ಕರ “ಎಳ್ಳಿನ ಹೊಲವ ಬಿಟ್ಟೆ ಒಳ್ಳೆಯ ಗಂಡನ ಬಿಟ್ಟೆ/ಉದ್ದಿನ ಹೊಲವ ಬಿಟ್ಟೆ ಮುದ್ದಿನ ಮಗನ ಬಿಟ್ಟೆ/ ಕಳ್ಳಾಟ ಜೋಗಿ ಕೂಡ ಬರಬಹುದೆ?” ಎಂದು ಕೇಳುತ್ತಾನೆ. ಅಂದರೆ ಒಳ್ಳೆಯ ಗಂಡ, ಅನುಕೂಲಸ್ಥ ಮನೆ, ಮುದ್ದಿನ ಮಗನನ್ನು ಬಿಟ್ಟು ನನ್ನಂತ ಕಳ್ಳಾಟ ಜೋಗಿ ಕೂಡ ಬರುತ್ತಿದ್ದೀಯಲ್ಲ? ಇಂಥವರನ್ನೇ ಬಿಟ್ಟ ಮೇಲೆ ನಾಳೆ ನನ್ನನ್ನು ಬಿಡುವದಿಲ್ಲ ಎನ್ನುವದಕ್ಕೆ ಏನು ಗ್ಯಾರಂಟಿ? ಎಂದು ಕೇಳುತ್ತಾನೆ. ಅದಕ್ಕವಳು ಸಮಂಜಸವಾದ ಉತ್ತರ ಕೊಡುವದಿಲ್ಲವಾದರೂ “ನಿನ್ನಲ್ಲಿ ನನಗೆ ಮನಸಾದೆ ಜೋಗಿ” ಎಂದಷ್ಟೇ ಹೇಳುತ್ತಾಳೆ. ಅದಕ್ಕೇ ನಾನು ಆರಂಭದಲ್ಲೇ ಹೇಳಿದ್ದು; ಅವನೇನೋ ಕೇಳುತ್ತಾನೆ, ಅವಳೇನೋ ಹೇಳುತ್ತಾಳೆ ಎಂದು. ಈ ಪ್ರಕ್ರಿಯೆ ಕವನದುದ್ದಕ್ಕೂ ಅಲ್ಲಲ್ಲಿ ಕಾಣಿಸುತ್ತದೆ. ಕೊನೆಯಲ್ಲಿ ಅವನು “ಎಲ್ಲಾನೂ ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ?” ಎಂದು ಕೇಳುತ್ತಾನೆ. ಆದರೆ ಅವಳಿಂದ ಬರುವ ಉತ್ತರ ಎಂಥದಾಗಿರುತ್ತದೋ? ಅದೊಂದು ವೇಳೆ ಆತಂಕಕಾರಿ ಉತ್ತರವಾಗಿದ್ದರೆ? ಅದನ್ನವನು ಊಹಿಸಲು ಕೂಡ ತಯಾರಿಲ್ಲ. ಹಾಗಾಗಿ ಅವಳ ಉತ್ತರಕ್ಕೂ ಕಾಯದೆ ತಾನೇ “ನಿನ್ನಲ್ಲಿ ನನಗೆ ಮನಸಾದೆ ನಾರಿ” ಎಂದು ಹೇಳುವದರ ಮೂಲಕ ಆ ಕ್ಷಣದ ಆತಂಕಕ್ಕೆ ತೆರೆಯೆಳೆಯುತ್ತಾನೆ ಮತ್ತು ಅವಳ ಬಾಯಿ ಮುಚ್ಚಿಸುತ್ತಾನೆ. ಹಾಡಿನ ಕೊನೆಯಲ್ಲಿ “ನನ್ನ ತೋಳಲ್ಲಿ ನಿನ್ನ ಕಿನ್ನುರಿ ಮಾಡಿಕೊಂಡು ಚೆಂದಾದ ಪದವ ನುಡಿಸೇನು ನಾರಿ, ಚೆಂದಾದ ಪದವ ನುಡಿಸೇನು” ಎಂದು ಹಾಡುತ್ತಾ ಹೊರಟು ಹೋಗುತ್ತಾನೆ. ಮುಂದೆ ಅವರಿಬ್ಬರು ಹೇಗೆ ಇರುತ್ತಾರೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಕವನ ಮುಂದುವರಿಯುವದೇ ಇಲ್ಲ.

    ಇಲ್ಲಿ ಅವನ ಹಿಂದೆ ಹೋಗುವ ಅವಳು ಅವನ ಯಾವುದಕ್ಕೆ ಮನಸೋತಿದ್ದಾಳೆ? ಅಸಲಿಗೆ ಜೋಗಿಗೇ ಆ ವಿಷಯ ಸ್ಪಷ್ಟವಾಗಿಲ್ಲ. ಎಲ್ಲಬಿಟ್ಟು ಏನೂ ಇಲ್ಲದ ನನ್ನ ಹಿಂದೆ ಬರಬೇಕಾದರೆ ಅವಳು ಮನಸೋತಿದ್ದು ಯಾವುದಕ್ಕೆ ಎನ್ನುವ ಗೊಂದಲ ಅವನಲ್ಲಿದೆ. ಹಾಗೆಂದೇ “ಚಿಕ್ಕಿನುಂಗರಕ್ಕೆ ಮನಸೋತಳೋ? ನಾರಿ ಬೆಳ್ಳಿನುಂಗರಕ್ಕೆ ಮನಸೋತಳೋ?” ಎಂದು ತನ್ನನ್ನೇ ತಾನು ಕೇಳಿಕೊಳ್ಳುವದರ ಮೂಲಕ ಇರಬಹುದೇನೋ ಎಂದು ಭಾವಿಸುತ್ತಾನೆ. ಆದರೆ ಅವಳು ಉಂಗುರಗಳಿಗೆ ಮನಸೋಲಲು ಸಾಧ್ಯವಿಲ್ಲ. ಏಕೆಂದರೆ ಅವಳ ಗಂಡ ಎಳ್ಳು, ಉದ್ದಿನ ಹೊಲವಿದ್ದವನಾಗಿದ್ದಾನೆ. ಶ್ರೀಮಂತನಲ್ಲದಿದ್ದರೂ ಅಂಥ ಉಂಗುರಗಳನ್ನು ತೆಗೆದುಕೊಡುವಷ್ಟು ಅನುಕೂಲಸ್ಥನಾಗಿದ್ದಾನೆ. ಮೇಲಾಗಿ ಹಾಗೆಲ್ಲ ಚಿನ್ನ, ಬೆಳ್ಳಿಗೆ ಆಸೆಪಟ್ಟು ಒಂದು ಹೆಣ್ಣು ಅದೂ ಒಬ್ಬ ಗೃಹಿಣಿ ಇನ್ನೊಬ್ಬನ ಹಿಂದೆ ಹೋಗಲು ಸಾಧ್ಯವೆ? ಹಾಗಿದ್ದರೆ ಅವಳು ಸೋತಿದ್ದು ಇದಕ್ಕಲ್ಲ. ಮತ್ತಿನ್ಯಾವುದಕ್ಕೆ? ಅವನ ಧ್ವನಿಗೆ? ಅವನ ಧ್ವನಿ ಅವಳನ್ನು ಆಕರ್ಷಿಸುವಷ್ಟು ಮಾದಕವಾಗಿತ್ತೆ? ಒಂದುವೇಳೆ ಹಾಗೇ ಇರಬಹುದೆಂದು ಇಟ್ಟುಕೊಂಡರೆ ಒಬ್ಬ ಹಳ್ಳಿಯ ಹೆಣ್ಣು ಇಷ್ಟೆಲ್ಲ ನಿರ್ಬಂಧಗಳ ನಡುವೆ ಗಂಡ, ಮನೆ, ಮಗ ಎಲ್ಲ ಬಿಟ್ಟು ಕೇವಲ ಪರಪುರುಷನ ಧ್ವನಿಗೆ ಸೋತು ಹೋಗುವದುಂಟೆ? ಸಾಧ್ಯವಿಲ್ಲ. ಹಾಗಿದ್ದರೆ ಇನ್ಯಾವುದಕ್ಕೆ ಹೋಗುತ್ತಾಳೆ? ಅವಳು ಕಿನ್ನುರಿ ನುಡಿಸುವ ಅವನ ಬೆರಳಿನಂದಕ್ಕೆ ಸೋತುಹೋದಳೆ? ಅಂದರೆ ಅವನಿಗೆ ಆಕರ್ಷಕ ಮೈಕಟ್ಟಿತ್ತೆ? ಅದನ್ನು ಮೆಚ್ಚಿಕೊಂಡು ಹೋದಳೆ? ಅವಳಿಗೆ ತನ್ನ ಗಂಡನಿಂದ ಪಡೆದ ಮಗುವೇನೋ ಇತ್ತು. ಆದರೆ ನಿತ್ಯವೂ ಬೇಕಾಗಿರುವ ದೈಹಿಕ ಸುಖವನ್ನು ಅವಳಿಗೆ ಕೊಡುವದರಲ್ಲಿ ಅವನು ವಿಫಲನಾಗಿದ್ದನೆ? ಆ ಕೊರತೆಯನ್ನು ನೀಗಿಸಿಕೊಳ್ಳಲು ಅವನ ಹಿಂದೆ ಹೋಗುತ್ತಾಳಾ? ಹಾಗೆಂದು ಕೂಡ ಹೇಳಲು ಬರುವದಿಲ್ಲ. ಏಕೆಂದರೆ ಒಂದುವೇಳೆ ಅವಳು ಇದೇ ಕಾರಣಕ್ಕೆ ಅವನ ಹಿಂದೆ ಹೋಗುವದಾದರೆ ಅವಳು ಈಗಾಗಲೆ ಅವನೊಂದಿಗೆ ಸಂಪರ್ಕ ಬೆಳೆಸಿ ಇವನೇ ನನ್ನ ದೈಹಿಕ ವಾಂಚೆಗಳನ್ನು ತೀರಿಸಲು ಯೋಗ್ಯನಾದ ಗಂಡು ಎಂದು ನಿರ್ಧರಿಸಬೇಕಾಗಿರುತ್ತದೆ. ಆದರೆ ಒಂದು ಸಾರಿಯೂ ಅವರಿಬ್ಬರ ಮಧ್ಯ ಅದು ಸಂಭವಿಸಯೇ ಇಲ್ಲ ಎಂದು ಅವರಿಬ್ಬರ ನಡುವಿನ ಸಂಭಾಷಣೆಯಿಂದ ಗೊತ್ತಾಗುತ್ತದೆ. ಹಾಗಾದರೆ ಅವಳು ತನ್ನ ಕಾಮತೃಷೆಯನ್ನು ತೀರಿಸಲು ಇವನೇ ಯೋಗ್ಯನಾದ ಗಂಡು ಎಂದು ಹೇಗೆ ನಿರ್ಧರಿಸುತ್ತಾಳೆ? ಇನ್ನು ಇವರಿಬ್ಬರ ನಡುವೆ ಈಗಷ್ಟೆ ಹುಟ್ಟಿದ ಪ್ರೀತಿಯಿದೆ. ಅದು ಎಳಸು ಪ್ರೀತಿ. ಅದು ಪರಸ್ಪರ ಒಬ್ಬರಿಗೊಬ್ಬರು ಮಾತಾಡಿಕೊಳ್ಳುವಾಗ “ನನ್ನಲ್ಲಿ ನಿನಗ ಮನಸಾದೆ” ಎನ್ನುವ ಮಾತಲ್ಲಿ ವ್ಯಕ್ತವಾಗುತ್ತದೆ. ಆ ಎಳಸು ಪ್ರೀತಿಗೆ ಗಂಡ, ಮನೆ, ಮಗನನ್ನು ಬಿಟ್ಟು ಹೋಗಬಹುದೆ? ಅವಳ ದಾಂಪತ್ಯ ಜೀವನದಲ್ಲೇನಾದರೂ ಬಿರುಕುಗಳಿದ್ದವೆ? ಆ ಬಿರುಕುಗಳೇ ಜೋಗಿಯ ಹಿಂದೆ ಹೋಗುವಂತೆ ಮಾಡಿತೆ? ಅಥವಾ ಅವಳಿಗೆ ಅವನ ಮೇಲೆ ಹುಟ್ಟಿದ ಒಂದು ಆಕರ್ಷಣೆಯೇ? ಆ ಆಕರ್ಷಣೆಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರೀತಿಯ ಲೇಪನವನ್ನು ಹಚ್ಚುತ್ತಿದ್ದಾಳೆಯೇ? ಅಥವಾ ಗಂಡನಲ್ಲಿ ಸಿಗದ ಪ್ರೀತಿಯನ್ನು ಅವನಲ್ಲಿ ಹುಡುಕಿ ಹೋದಳೆ? ಕವನ ಇದರ ಬಗ್ಗೆ ಸರಿಯಾಗಿ ಏನನ್ನೂ ಹೇಳುವದಿಲ್ಲ.

    ಹೋದವಳು ಹೋದಳು ತನ್ನ ಗಂಡನಿಗಿಂತ ಎಲ್ಲದರಲ್ಲೂ ಉತ್ತಮವಾಗಿರುವ ಗಂಡಸಿನೊಂದಿಗೆ ಹೋದಳೆ? ಇಲ್ಲ. ಏನೂ ಇಲ್ಲದ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗುತ್ತಾಳಲ್ಲ? ಅದು ನಮ್ಮನ್ನೆಲ್ಲ ತುಸು ಯೋಚಿಸುವಂತೆ ಮಾಡುವದು! ಯಾವ ಕಾರಣಕ್ಕೆ ಹೋಗುತ್ತಾಳೆ ಎನ್ನುವದು ಕೊನೆವರೆಗೂ ಗೊತ್ತಾಗುವದೇ ಇಲ್ಲ. ಅವಳೇನೋ ಬಿಟ್ಟುಹೋದಳು. ಹಾಗೆ ಬಿಟ್ಟು ಹೋದವಳು ಕಡೆತನಕ ಆ ಜೋಗಿಯೊಂದಿಗೆ ಇರುತ್ತಾಳಾ? ಅವನೊಟ್ಟಿಗೆ ಬಾಳ್ವೆ ಮಾಡುತ್ತಾಳಾ? ಆ ಸಂಬಂಧವನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾಳಾ? ಅಥವಾ ತದನಂತರದಲ್ಲಿ ಅವನ ಬಗ್ಗೆಯೂ ಭ್ರಮೆ ನಿರಸನಕ್ಕೊಳಗಾಗಿ ಮತ್ತೆ ತನ್ನ ಗಂಡನಲ್ಲಿಗೆ ವಾಪಾಸಾಗುತ್ತಾಳೋ? ಇದ್ಯಾವುದು ನಮಗೆ ಗೊತ್ತಾಗುವದಿಲ್ಲ. ಆದರೆ ಹಾಗೆ ಬಿಟ್ಟುಹೋಗುವಾಗ ಅವಳ ಗಂಡನ ಮನಸ್ಥಿತಿ ಹೇಗಿರಬೇಡ? ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಕಂಡವರೆಲ್ಲಾ ಅವನನ್ನು ನೋಡಿ ಕಿಸಕ್ಕೆಂದು ನಗುವಾಗ ಅವನ ಪರಿಸ್ಥಿತಿ ಹೇಗಿರಬೇಡ? ಅಕಸ್ಮಾತ್ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಅವಳು ತನ್ನ ಮುಂದಿನ ಬದುಕನ್ನು ಅದ್ಹೇಗೋ ಕಟ್ಟಿಕೊಂಡುಬಿಡುತ್ತಾಳೆ. ಆ ತಾಕತ್ತು ಅವಳಲ್ಲಿದೆ. ಆದರೆ ಹೆಂಡತಿಯಾದವಳು ಸುಕಾಸುಮ್ಮನೆ ಕಾರಣ ಹೇಳದೆ ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋದರೆ? ಅವನು ಮಾನಸಿಕವಾಗಿ ನೊಂದುಹೋಗುತ್ತಾನೆ. ಬೆಂದುಹೋಗುತ್ತಾನೆ. ಹೊರಗೆ ಅವನು ಎಷ್ಟೇ ಧೀರನಾಗಿ ಶೂರನಾಗಿ ಕಂಡರೂ ಒಳಗೊಳಗೆ ಅವನು ತುಂಬಾ ಜರ್ಝರಿತನಾಗುತ್ತಾನೆ. ಅಧೀರನಾಗಿಹೋಗುತ್ತಾನೆ. ಅಷ್ಟು ದಿವಸ ಕಾಪಡಿಕೊಂಡುಬಂದ ಅವನ ಮರ್ಯಾದೆ, ಪ್ರತಿಷ್ಟೆ, ಎಲ್ಲವೂ ಮಣ್ಣುಪಾಲಾಗಿ ಅವನು ಇದ್ದೂ ಸತ್ತಂತೆ ಬದುಕತ್ತಾನೆ.

    -ಉದಯ್ ಇಟಗಿ

    4 ಕಾಮೆಂಟ್‌(ಗಳು):

    ಸಾಗರದಾಚೆಯ ಇಂಚರ ಹೇಳಿದರು...

    nimma baraha bahalashtu yochanegalannu teredidduttade, aste alla kelavakke uttarave illada sthitiyannu srashtisuttade
    badukina bagegina nimma sundara barahakke abhinandane

    shivu.k ಹೇಳಿದರು...

    ಸರ್,
    ಒಂದು ಜಾನಪದ ಹಾಡಿನ ಮೂಲವನ್ನು ಹಿಡಿದು ಅದನ್ನು ವಿವರಿಸಿರುವ ರೀತಿ ಬಲು ಚೆನ್ನಾಗಿದೆ. ಹೀಗೆ ಇಂಥ ನೂರಾರು ಹಾಡುಗಳ ಹಿಂದೆ ಹೀಗೆ ವೈವಿಧ್ಯಮಯವಾದ ಅರ್ಥಗಳಿರಬಹುದಲ್ಲವೇ...
    ಚೆನ್ನಾಗಿದೆ.

    suresh bujari ಹೇಳಿದರು...

    Uday, Neenu nanage avagle(ninna roomate iddag) helidde. Barahad moolaka innmme tiliside. Tumba channagide. Keep it up.

    ಅನಾಮಧೇಯ ಹೇಳಿದರು...

    nimma lekhana chennagide..

    geeteya vivida majalugalannu torisuttade. nimma karyvannu heege munduvarisi.