Demo image Demo image Demo image Demo image Demo image Demo image Demo image Demo image

ಗಡಾಫಿ ಇಲ್ಲದ ಲಿಬಿಯಾ

  • ಮಂಗಳವಾರ, ಫೆಬ್ರವರಿ 21, 2012
  • ಬಿಸಿಲ ಹನಿ
  • ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.

    ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. ಈ ನಿಟ್ಟಿನಲ್ಲಿ ಆ ಕ್ರಾಂತಿಯ ಮೊದಲ ಯಶಸ್ಸು, ಕೀರ್ತಿ ಹಾಗೂ ಹೆಮ್ಮೆ ಈ ನೆಲದ ಜನರಿಗೆ ಸಲ್ಲುತ್ತದೆ. ಇದೀಗ ನಾನು ಆ ನೆಲದ ಮೇಲೆ ನಿಂತಿದ್ದೆ. ನಿಂತಂತೆ ಏನೋ ಒಂದು ತೆರದ ಪುಳಕ, ಹೆಮ್ಮೆ ನನ್ನಲ್ಲಿ ಮೂಡಿದವು. ಜೊತೆಗೆ ‘ನಾವು ಎಷ್ಟೇ ಆಗಲಿ ಹೊರಗಿನವರು. ಇಲ್ಲಿ ಕೆಲಸ ಮಾಡಲು ಬಂದವರು. ಗಡಾಫಿಯಿದ್ದರೇನು? ಇನ್ನೊಬ್ಬ ಇದ್ದರೇನು? ನಮಗೆ ಎಲ್ಲರೂ ಅಷ್ಟೆ’ ಎನ್ನುವ ಭಾವವೊಂದು ನನ್ನ ಮನದಲ್ಲಿ ಹಾದು ಹೋಯಿತು. ಆದರೆ ಇದೀಗ ನಾನು ಗಡಾಫಿಯಿದ್ದ ನಾಡಿಗೂ ಮತ್ತು ಗಡಾಫಿಯಿಲ್ಲದ ನಾಡಿಗೂ ಪ್ರತ್ಯಕ್ಷದರ್ಶಿಯಾಗಿ ನಿಂತಿದ್ದೆ. ಗಡಾಫಿಯಿದ್ದಾಗ ಈ ನಾಡು ಹೇಗಿತ್ತೆಂದು ಇಲ್ಲಿ ಮೂರುವರೆ ವರ್ಷಗಳ ಕಾಲ ಇದ್ದು ನೋಡಿದ್ದೆ. ಈಗ ಸಹಜವಾಗಿ ಆತನಿಲ್ಲದ ನಾಡು ಹೇಗಿದೆ ಎಂದು ತಿಳಿಯುವ ಕುತೂಹಲ ನನ್ನಲ್ಲಿತ್ತು. ಹೀಗಾಗಿ ಈ ಒಂದು ತಿಂಗಳ ಕಾಲ ಗಡಾಫಿಯಿಲ್ಲದ ನಾಡಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ಹಾಗೂ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.



    ಲಿಬಿಯನ್ನರ ಹೊಸದೆಂದು ಹೇಳಲಾದ ಹಳೆಯ ರಾಷ್ಟ್ರಧ್ವಜ
    ನಾನು ಬೆಂಗಾಜಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ಹೊರಬರುತ್ತಿದ್ದಂತೆ ನನ್ನನ್ನು ಮೊಟ್ಟಮೊದಲು ಸ್ವಾಗತಿಸಿದ್ದು ಆ ದೇಶದ ಹೊಸ ಭಾವುಟ. ಗಡಾಫಿಯ ಹಸಿರು ಭಾವುಟ ಹೋಗಿ ಅದರ ಜಾಗದಲ್ಲಿ ಮಧ್ಯ ಅರ್ಧ ಚಂದ್ರ ಮತ್ತು ನಕ್ಷತ್ರವೊಂದರ ಚಿಹ್ನೆಯಿರುವ ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳ ತ್ರಿವರ್ಣ ಧ್ವಜ ಬಂದು ಕುಳಿತಿತ್ತು. ನಾನದನ್ನು ಮೊದಲು ಹೊಸ ಭಾವುಟ ಇರಬೇಕೆಂದುಕೊಂಡಿದ್ದೆ. ಆದರೆ ಆಮೇಲೆ ಗೊತ್ತಾಯಿತು ೧೯೫೧ ರಲ್ಲಿ ಲಿಬಿಯಾ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಈ ಭಾವುಟವನ್ನು ಸ್ವತಂತ್ರ ಲಿಬಿಯಾದ ಅಧಿಕೃತ ಭಾವುಟವೆಂದು ಘೋಷಿಸಿದ್ದರೆಂದು. ಜೊತೆಗೆ ಈ ದೇಶದ ನೇತಾರ ಒಮರ್ ಮುಖ್ತಾರನ ಫೋಟೋವೊಂದು ನಿಲ್ದಾಣದ ಹೊರಗೆ ರಾರಾಜಿಸುತ್ತಿರುವದು ಕಾಣಿಸಿತು. ಈ ಒಮರ್ ಮುಖ್ತಾರ ಲಿಬಿಯಾದ ಸಿರನೈಕಾ ಪ್ರಾಂತ್ಯದವನಾಗಿದ್ದು ಇಟೆಲಿಯ ಸಾಮ್ರಾಜ್ಯಶಾಹಿಗಳ ವಿರುದ್ಧ ಮೊಟ್ಟ ಮೊದಲಿಗೆ ಬಂಡೆದ್ದು ಲಿಬಿಯನ್ನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವನಾಗಿದ್ದ. ಈತನನ್ನು “ಲಯನ್ ಆಫ್ ಡೆಸರ್ಟ್” ಎಂದು ಸಹ ಕರೆಯುತ್ತಾರೆ. ನನಗೆ ಈ ಬದಲಾವಣೆಯನ್ನು ನೋಡಿ ಖುಶಿಯಾಯಿತು; ಪರ್ವಾಗಿಲ್ಲ ಹೊಸ ಸರಕಾರ ತನ್ನ ದೇಶಕ್ಕಾಗಿ ಹೋರಾಡಿದ ಮಹಾತ್ಮನನ್ನು ನೆನೆಸಿಕೊಂಡಿದೆ ಎಂದು. ಒಳಗಡೆ ಗಡಾಫಿಯ ಉಳಿದ ಮಕ್ಕಳ ಫೋಟೋಗಳನ್ನು ಹಾಕಿ ಕೆಳಗಡೆ ಇವರ ಸುಳಿವು ಸಿಕ್ಕಲ್ಲಿ ತಕ್ಷಣ ಸಂಪರ್ಕಿಸಬೇಕೆಂದು ಹೇಳಿ ಒಂದು ಫೋನ್ ನಂಬರ‍್ ನ್ನು ಕೊಡಲಾಗಿತ್ತು.


    ಬಂಡುಕೋರರಿಗೆ ಬೇಕಾಗಿರುವ ಗಡಾಫಿಯ ಉಳಿದ ಮಕ್ಕಳು

    ಅದರ ಪಕ್ಕದಲ್ಲಿಯೇ ಗನ್ನಿನ ಚಿತ್ರವೊಂದನ್ನು ಹಾಕಿ ಅದರ ಕೆಳಗೆ ಇವುಗಳನ್ನು ಲೈಸನ್ಸ್ ಇಲ್ಲದೆ ಉಪಯೋಗಿಸುವದು ಶಿಕ್ಷಾರ್ಹ ಎಂದು ಬರೆಯಲಾಗಿತ್ತು. ನನಗೆ ಬೆಂಗಾಜಿಯಿಂದ ಟ್ರಿಪೋಲಿಗೆ ಮುಂದಿನ ಎರಡು ಗಂಟೆಗಳಲ್ಲಿ ವಿಮಾನವಿದ್ದುದರಿಂದ ಅಲ್ಲಿ ಸಾಕಷ್ಟು ಸಮಯ ಕಳೆಯಲಾಗಲಿಲ್ಲ. ಅಲ್ಲಿಂದ ಬೆಳಿಗ್ಗೆ ೧೧.೩೦ಕ್ಕೆ ಟ್ರಿಪೋಲಿಯತ್ತ ಹೊರಟೆ. ಮುಂದೆ ಅಲ್ಲಿಂದ ನಾನು ಮಾರನೆ ದಿನ ಸೆಭಾಕ್ಕೆ ಹೋಗಬೇಕಾಗಿತ್ತು.


    ನಮ್ಮ ವಿಮಾನ ಟ್ರಿಪೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತಿದ್ದಂತೆ ಅದರ ಕೆಲವು ಜಾಗಗಳು ನನಗೆ ವಿಮಾನದ ಒಳಗಿನಿಂದಲೇ ಯುದ್ಧದ ಸಮಯದಲ್ಲಿ ಅಲ್ಲಲ್ಲಿ ಹಾನಿಯಾಗಿರುವದು ಕಾಣಿಸಿತು. ಇಳಿದು ಶೌಚಾಲಯಕ್ಕೆ ಹೋದರೆ “ಅಬ್ಬ, ನಮ್ಮಲ್ಲಿನ ಪಬ್ಲಿಕ್ ಟಾಯ್ಲೆಟ್‍ಗಳು ಎಷ್ಟೋ ವಾಸಿ” ಎನಿಸಿತು. ಬಹುಶಃ, ಈ ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಗಡಾಫಿ ಅರ್ಧ ಕಟ್ಟಿಸಿಬಿಟ್ಟ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುತ್ತಿರಬೇಕು, ಹೀಗಾಗಿ ಇದನ್ನು ನಿರ್ಲಕ್ಷ್ಯಸಿಸಲಾಗಿದೆ ಎಂದುಕೊಂಡು ಸುಮ್ಮನಾದೆ. ಅಲ್ಲಿಂದ ಟ್ಯಾಕ್ಶಿಯೊಂದನ್ನು ತೆಗೆದುಕೊಂಡು ಹೋಟೆಲ್‌ನತ್ತ ಹೊರಟೆ. ಹೋಗುವಾಗ ದಾರಿಯಲ್ಲಿ ಗಡಾಫಿಯ ವಿರುದ್ಧ ಬರೆದ ಆತನ ವ್ಯಂಗ್ಯ ಚಿತ್ರಗಳು ಮತ್ತು ಸ್ಲೋಗನ್‍ ಗಳು ಕಾಣಿಸಿದವು.




    ಗಡಾಫಿಯ ವಿರುದ್ಧ ಬರೆದ ಸ್ಲೋಗನ್ ಗಳು

    ಜೊತೆಗೆ ಸ್ವತಂತ್ರ ಲಿಬಿಯಾದ ಹರ್ಷೋದ್ಗಾರದ ವಾಕ್ಯಗಳು ಕಾಣಿಸಿದವು. ಅವುಗಳ ಫೋಟೊ ತೆಗೆಯುತ್ತಾ ಟ್ಯಾಕ್ಷಿ ಡ್ರೈವರ್ ನನ್ನು “ಈಗ ಲಿಬಿಯಾ ಹೇಗಿದೆ?” ಎಂದು ಕೇಳಿದೆ. ಅವನು ಅರ್ಧ ಇಂಗ್ಲೀಷ್ ಅರ್ಧ ಅರೇಬಿಕ್ ಭಾಷೆಯಲ್ಲಿ “ತವ್ವಾ ಲಿಬಿಯಾ ಮಿಯ್ಯಾ ಮಿಯ್ಯಾ (ಈಗ ಲಿಬಿಯಾ ತುಂಬಾ ಚನ್ನಾಗಿದೆ) Now Libya is free. Gadafi no good. He was killed because he was eating alone” ಎಂದು ತನ್ನದೇ ಭಾಷೆಯಲ್ಲಿ ಹೇಳಿದ. ಗಡಾಫಿಯನ್ನು ಒಂದಷ್ಟು ಬಯ್ಯುತ್ತಾ ಆತನ ಮಕ್ಕಳಿಗೆ ಏನೇನಾಯಿತು? ಅವರಲ್ಲಿ ಎಷ್ಟು ಜನ ಸತ್ತಿದ್ದಾರೆ? ಎಷ್ಟು ಜನ ಎಲ್ಲೆಲ್ಲಿದ್ದಾರೆ? ಎನ್ನುವದನ್ನು ಸಹ ಹೇಳಿದ. ಅಷ್ಟರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೌಮರ್ ಗಡಾಫಿಯ ಅರಮನೆ ‘ಬಾಬ್-ಆಲ್-ಅಜಿಜಾ’ ಬಂತು. ನಾನು ಅವನಿಗೆ ಅಲ್ಲಿ ಸ್ವಲ್ಪ ಹೊತ್ತು ನಿಲ್ಲಿಸುವಂತೆ ಹೇಳಿ ಫೋಟೋ ತೆಗೆಯಲು ಹೊರಟೆ. ಅವನು ಒಳಗೆ ಹೋಗುವಂತಿಲ್ಲ ಎಂದು ಎಚ್ಚರಿಸಿದ. ನಾನು ಹೊರಗಿನಿಂದಲೇ ಸರಸರನೆ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಅಲ್ಲಿ ಗಡಾಫಿಯ ಭವ್ಯ ಅರಮನೆ ಹೇಳಹೆಸರಿಲ್ಲದಂತೆ ಅವಶೇಷಗಳಾಗಿ ಬಿದ್ದಿತ್ತು. ಇಲ್ಲೇ ಅಲ್ಲವೇ ಗಡಾಫಿ ಐಷಾರಾಮಿ ಜೀವನ ನಡೆಸಿದ್ದು? ಐಭೋಗದ ಬದುಕನ್ನು ಬದುಕಿದ್ದು? ಒಂದೊಮ್ಮೆ ಸಕಲ ಸೌಲತ್ತುಗಳನ್ನು ಹೊಂದಿದ್ದ ಈ ಅರಮನೆ ಈಗ ಸಂಪೂರ್ಣವಾಗಿ ನೆಲಸಮವಾಗಿತ್ತು.


    ಒಡೆದು ಹಾಕಿರುವ ಗಡಾಫಿಯ ಅರಮನೆ

    ಗಡಾಫಿ ಅರಮನೆಯ ಅವಶೇಷಗಳು

    ಗಡಾಫಿ ಅರಮನೆಯ ಕೌಂಪೊಂಡು ಗೋಡೆಯ ಮೇಲೆ ಕಾವಲುಗಾರರು ನಿಲ್ಲುತ್ತಿದ್ದ ಎತ್ತರದ ಸ್ಥಳ


    ಈ ಮೊದಲು ಸಾಮಾನ್ಯವಾಗಿ ಇಡಿ ಲಿಬಿಯಾದ ತುಂಬಾ ಬಹಳಷ್ಟು ರಸ್ತೆಗಳಲ್ಲಿ, ಬೀದಿಗಳಲ್ಲಿ, ಕಛೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಡ್ಡಾಯವಾಗಿ ಗಡಾಫಿಯ ವಿವಿಧ ಭಂಗಿಯ ಹಾಗೂ ವಿವಿಧ ಪೋಷಾಕುಗಳನ್ನು ಧರಿಸಿದ ಪೋಸ್ಟರ್ ಅಥವಾ ಫೋಟೋಗಳು ರಾರಾಜಿಸುತ್ತಿದ್ದವು. ಈಗ ಅವನ್ನೆಲ್ಲಾ ತೆಗೆದು ಖಾಲಿಬಿಡಲಾಗಿದೆ.



    ಗಡಾಫಿಯ ಪೋಸ್ಟರನ್ನು ಕಿತ್ತು ಹಾಕಿ ಖಾಲಿ ಬಿಟ್ಟಿರುವ ಫ್ರೇಮುಗಳು

    ಒಂದಷ್ಟು ಕಡೆ ಅವುಗಳ ಜಾಗದಲ್ಲಿ ಆ ದೇಶದ ಮಹಾತ್ಮ ಒಮರ್ ಮುಖ್ತಾರನ ಫೋಟೋಗಳನ್ನು ಹಾಕಲಾಗಿದೆ. ನಾನು ಟ್ರಿಪೋಲಿಯ ಮುಖ್ಯ ಶಾಪಿಂಗ್ ಏರಿಯಾದಲ್ಲಿರುವ ಹೋಟೆಲ್‍ಗೆ ಬಂದ ನಂತರ ಸಂಜೆ ಒಂದಷ್ಟು ಸುತ್ತಾಡಿ ಬರಲೆಂದು ಹೊರಗೆ ಹೋದೆ. ಇಡಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಸ್ವಲ್ಪ ಹೊತ್ತು ಓಡಾಡಿರಲಿಕ್ಕಿಲ್ಲ ರಾತ್ರಿ ಎಂಟು ಗಂಟಗೆಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿಸುವದು ಕಾಣಿಸಿತು. “ಅರೆ, ಇದೇನಿದು? ಮೊದಲೆಲ್ಲಾ ಈ ರಸ್ತೆಗಳಲ್ಲ ರಾತ್ರಿ ಹನ್ನೆರೆಡರ ತನಕ ಅಂಗಡಿಗಳ ಬಾಗಿಲುಗಳನ್ನು ತೆರದಿಡುತ್ತಿದ್ದರು. ಈಗ ಗಲಾಟೆಯೆಲ್ಲಾ ಮುಗಿದು ತಣ್ಣಗಾದ ಮೇಲೂ ಏಕಿಷ್ಟು ಅವಸರ?” ಎಂದು ಅಚ್ಚರಿಗೊಂಡು ಅಂಗಡಿಯ ಮಾಲಿಕನೊಬ್ಬನನ್ನು ಕೇಳಿಯೇಬಿಟ್ಟೆ. ಅದಕ್ಕವನು “ಗಡಾಫಿ ಹೋದ ಮೇಲೆ ಲಿಬಿಯಾದಲ್ಲಿ Law and Order ಪ್ರಾಬ್ಲಂ ಇದೆ. ಇಲ್ಲಿ ಯಾವಾಗಬೇಕಾದರೂ ಏನಾದರೂ ಆಗಬಹುದು. ಕಳ್ಳತನ, ದರೋಡೆಗಳು ಹೆಚ್ಚಾಗಿವೆ. ಇದ್ದಕ್ಕಿದ್ದಂತೆ ಗುಂಡಿನ ಮೊರೆತ ಕೇಳಿಸುತ್ತದೆ. ಏಕೆಂದರೆ ಯುದ್ಧದ ಸಮಯದಲ್ಲಿ ಅದ್ಹೇಗೋ ಎಲ್ಲರ ಕೈಯಲ್ಲಿ ಗನ್‍ಗಳು ಬಂದಿವೆ.” ಎಂದು ಹರಕುಮುರುಕು ಇಂಗ್ಲೀಷಿನಲ್ಲಿ ಹೇಳಿದ. ನಾನು ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಟ್ಯಾಕ್ಷಿ ಹಿಡಿದು ಹೋಟೆಲ್‍ಗೆ ಬಂದೆ. ಬರುವಾಗ ಆ ಟ್ಯಾಕ್ಷಿ ಡ್ರವರ‍್ ನನ್ನು ಬೇಕಂತಲೇ “ಈಗ ಗಡಾಫಿಯಿಲ್ಲ. ಲಿಬಿಯಾ ಸ್ವತಂತ್ರವಾಗಿದೆ. ನಿಮಗೆಲ್ಲಾ ಖುಶಿಯಾಗಿರಬೇಕಲ್ಲವೆ? ಇನ್ನುಮುಂದೆ ಈ ದೇಶ ಬಹಳಬೇಗನೆ ಅಭಿವೃದ್ಧಿ ಹೊಂದುತ್ತದಲ್ಲವೆ?” ಎಂದು ಕೇಳಿದೆ. ಅದಕ್ಕವನು “ಏನು ಅಭಿವೃದ್ಧಿನೋ ಏನೋ! ಗಡಾಫಿಯಿರುವಾಗಲೇ ನಮ್ಮ ದೇಶ ಸುಸ್ಥಿತಿಯಲ್ಲಿತ್ತು. ಏಕೆಂದರೆ ಆತ ಅಮೆರಿಕನ್ನರನ್ನು ದೂರವಿಟ್ಟಿದ್ದ. ಈಗ ಇವರು ಅವರ ಕೈಗೆ ಕೊಟ್ಟು ಕುಳಿತಿದ್ದಾರೆ. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಈ ಅಮೆರಿಕನ್ನರು ಮತ್ತು ಯೂರೋಪಿಯನ್ನರು ಮೂಗು ತೂರಿಸಿದ ಮೇಲೆ ಮುಗಿಯಿತು; ಅಲ್ಲಿ ಶಾಂತಿ ನೆಲೆಸಲು ತುಂಬಾ ದಿನ ಬೇಕಾಗುತ್ತದೆ. ಇಲ್ಲೇ ನೋಡಿ ಟ್ರಿಪೋಲಿಯಲ್ಲಿ ಕ್ರಾಂತಿ ಮುಗಿದು ೪ ತಿಂಗಳಾಗುತ್ತಾ ಬಂದರೂ ಪ್ರತಿನಿತ್ಯ ಒಂದಲ್ಲ ಒಂದು ಗಲಭೆ ನಡೆಯುತ್ತಲೇ ಇರುತ್ತವೆ. ಗಡಾಫಿಯ ಬೆಂಬಲಿಗರು ಇನ್ನೂ ಸಾಕಷ್ಟು ಜನ ಇದ್ದಾರೆ. ಅವರನ್ನು ಹತ್ತಿಕ್ಕಲು ಈಗಿನ ಸರಕಾರ ಹರಸಾಹಸ ಮಾಡುತ್ತಿದೆ” ಎಂದು ವಿಷಾದದಿಂದ ಹೇಳಿದ.


    ಯುದ್ಧದಲ್ಲಿ ಮಡಿದವರು
    “ಗಡಾಫಿಯಿಲ್ಲದ ಲಿಬಿಯಾ ನಿಮಗೆ ಹೇಗೆ ಕಾಣಿಸುತ್ತದೆ?” ಎಂದು ಸೆಭಾಗೆ ಬಂದಿಳಿದ ಮೇಲೆ ಕನ್ನಡದವರೇ ಆದ ನನ್ನ ಸಹೋದ್ಯೋಗಿ ಡಾ. ನವೀನ್ ಅವರನ್ನು ಕೇಳಿದ್ದೆ. ಅವರು ನಸುನಗುತ್ತಾ “ಗಂಡನಿಲ್ಲದ ಹೆಂಡತಿಯಂತೆ” ಎಂದು ಉತ್ತರಿಸಿದ್ದರು. ಆ ನಸುನಗೆಯ ಹಿಂದೆ ಗಡಾಫಿಯಿಲ್ಲದ ಲಿಬಿಯಾದ ಮೇಲೆ ಇನ್ಯಾರ್ಯಾರೋ ಕಣ್ಣು ಹಾಕುತ್ತಿದ್ದಾರೆ ಎನ್ನುವ ಅವ್ಯಕ್ತ ನೋವಿತ್ತು. ಮಾತ್ರವಲ್ಲ ಗಡಾಫಿಯಿಲ್ಲದ ಲಿಬಿಯಾವನ್ನು ಸ್ವೀಕರಿಸುವದು ಕಷ್ಟಸಾಧ್ಯ ಎನ್ನುವ ಭಾವವಿತ್ತು. ಈ ಭಾವ ನಮ್ಮಂಥ ವಿದೇಶಿಯರಿಗಿದ್ದಿದ್ದು ನನಗೆ ಅಚ್ಚರಿ ಎನಿಸಲಿಲ್ಲ. ಆದರೆ ಇಲ್ಲಿನ ಅನೇಕ ಸ್ಥಳೀಯರಲ್ಲೂ ಇದೇ ಭಾವನೆಯಿದ್ದಿದ್ದು ನನಗೆ ಅಚ್ಚರಿಯನ್ನು ತಂದಿತ್ತು. ಆದರೆ ಅವರು ಇದನ್ನು ಬಹಿರಂಗಪಡಿಸದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಮಾತ್ರವಲ್ಲ ಇಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಗಡಾಫಿ ಬೆಂಬಲಿಗರನ್ನು ಬದಲಾಯಿಸಲಾಗಿದೆ. ಈ ದಕ್ಷಿಣದ ಭಾಗದಲ್ಲಿ ಸಾಕಷ್ಟು ಜನ ಗಡಾಫಿ ಬೆಂಬಲಿಗರಿರುವದರಿಂದಲೇ ಸಧ್ಯದ ಸರಕಾರ ಈ ಭಾಗದ ಕಡೆಗೆ ಮೊದಲು ಮೊಬೈಲ್ ಸಿಗ್ನಲ್‍ಗಳು ಸಿಗದಂತೆ ಮಾಡಿದರು. ಆಮೇಲೆ ಇಂಟರ್ನೆಟ್ ಸೌಲಭ್ಯವನ್ನು ಕತ್ತರಿಸಿದರು. ನಂತರ ವಾರಕ್ಕೊಂದು ಸಾರಿ ೧೮ ಗಂಟೆಗಳ ಕಾಲ ವಿದ್ಯುತ್ ಸರಬುರಾಜು ನಿಲ್ಲಿಸಿದರು. ಆ ಮೂಲಕ ಸರಕಾರ ಪರೋಕ್ಷವಾಗಿ ಇಲ್ಲಿಯ ಜನರ ಮೇಲೆ ಒತ್ತಡ ಹೇರುವದರ ಮೂಲಕ ತನ್ನತ್ತ ಬಗ್ಗಿಸಿಕೊಳ್ಳಲು ನೋಡುತ್ತಿದೆ ಎಂದು ಜನ ಮಾತಾಡಿಕೊಂಡರು. ಈಗಲೂ ಇದೇ ಸ್ಥಿತಿ ಇಲ್ಲಿ ಮುಂದುವರಿದಿದೆ.

    ಗಲಭೆಯ ಸಮಯದಲ್ಲಿ ಹಾನಿಗೀಡಾದ ಸೆಭಾ ವಿಶ್ವವಿದ್ಯಾನಿಲಯ

    ಲಿಬಿಯಾ ಈಗ ಸಂಪೂರ್ಣವಾಗಿ ಗಡಾಫಿಯ ದಾಸ್ಯದಿಂದ ಮುಕ್ತವಾಗಿದೆ. ಸ್ವತಂತ್ರವಾಗಿದೆ. ಆದರೆ ಸ್ವಾತಂತ್ರ್ಯದ ಪರಿಕಲ್ಪನೆಯ ಕುರಿತಂತೆ ಅವರವದೇ ಅಭಿಪ್ರಾಯಗಳನ್ನು ಹಾಗೂ ಗೊಂದಲಗಳನ್ನು ಇಲ್ಲಿಯವರು ಮುಂದಿಡುತ್ತಾರೆ. ನಾನು ಘಾಟ್‍ಗೆ ಬಂದ ಮೇಲೆ ನನ್ನ ವಿಭಾಗದ ಮುಖ್ಯಸ್ಥರಾದ ಅಹಮ್‍ದನನ್ನು (ಹೆಸರು ಬದಲಾಯಿಸಲಾಗಿದೆ) “ಈಗ ಲಿಬಿಯಾ ಸ್ವತಂತ್ರವಾಗಿದೆ. ಇನ್ನುಮುಂದೆ ಶೀಘ್ರದಲ್ಲಿಯೇ ನೀವು ಒಂದು ಪ್ರಜಾರಾಜ್ಯವನ್ನು ಹೊಂದಲಿದ್ದೀರಿ. ನಿಮಗೆ ಹೇಗನಿಸುತ್ತೆ?” ಎಂದು ಕೇಳಿದ್ದೆ. ಅದಕ್ಕವರು ಉತ್ತರಿಸುತ್ತಾ “ಈ ಕ್ರಾಂತಿಯೆನ್ನುವದು ಒಂದು ಸಾಮೂಹಿಕ ಸನ್ನಿಯಿದ್ದಂತೆ. ಎಲ್ಲೋ ಯಾರೋ ಒಂದಷ್ಟು ಜನ ದಂಗೆಯೆದ್ದರು. ಅವರನ್ನು ನೋಡಿ ಬೇರೆಯವರೂ ದಂಗೆಯಿದ್ದರು. ಅವರೊಂದಿಗೆ ಈ ನ್ಯಾಟೋ ಕೈಜೋಡಿಸಿತು. ಅಲ್ಲಿಗೆ ಎಲ್ಲ ಮುಗಿಯಿತು. ಈ ರಕ್ತಪಾತ, ಅಪಾರ ಸಾವು, ನೋವು ಎಲ್ಲ ಬೇಕಾಗಿತ್ತ? ಇವರು ಪ್ರಜಾರಾಜ್ಯ ಬೇಕೆನ್ನುತ್ತಿದ್ದಾರೆ. ಪ್ರಜಾರಾಜ್ಯದಲ್ಲಿ ಎಲ್ಲವೂ ಸರಿಯಾಗಿರುತ್ತದಾ? ಅಲ್ಲಿ ಪ್ರತಿಭಟಿಸುವ ಹಕ್ಕೊಂದನ್ನು ಬಿಟ್ಟರೆ ಬೇರೆ ಏನಿರುತ್ತದೆ? ಹೋಗಲಿ ಪ್ರತಿಭಟಿಸುವ ಎಲ್ಲರಿಗೂ ನ್ಯಾಯ ಸಿಗುತ್ತದಾ? Take for example your country India. Do you think that all the principles of democracy are fully implemented over there? Can you go and ask your primeminister directly for what you have not got? Or can you say that so called your ‘democratic’ politicians are not corrupt and have not made any property for themselves? Or you being a part of democracy, against how many politicians have you raised your voice? Have you ever enjoyed the true freedom of democracy? I know you have not and it’s not possible also. Then why should we have this system?” ಎಂದು ನನಗೆ ಮರು ಪ್ರಶ್ನೆ ಹಾಕುತ್ತಾರೆ. ಮುಂದುವರಿದು “ಹಿಂದೆ ನಮ್ಮವನೇ ಆದ ಗಡಾಫಿ ಕೊಳ್ಳೆಹೊಡೆದರೂ ನಮಗೆ ಚನ್ನಾಗಿ ಅನುಕೂಲಮಾಡಿಕೊಟ್ಟಿದ್ದ. ಆದರೆ ಈಗ ಅಮೆರಿಕನ್ನರು, ಮತ್ತು ಬೇರೆಯವರು ಇಲ್ಲಿಯ ತೈಲವನ್ನು ಮುಂದಿನ ಇಪ್ಪತ್ತು ವರ್ಷಗಳ ಕಾಲ ಕೊಳ್ಳೆಹೊಡೆಯುತ್ತಾರೆ. ನನಗೆ ಇದರಲ್ಲಿ ಯಾವ ವ್ಯತ್ಯಾಸವೂ ಕಾಣಿಸುವದಿಲ್ಲ.” ಎಂದು ನಗುತ್ತಾರೆ. ಪೋಸ್ಟ್ ಆಫಿಸಿನ ಜನರಲ್ ಮ್ಯಾನೇಜರ್ ಒಬ್ಬರು “ಹಿಂದೆ ಗಡಾಫಿಯಿರುವಾಗ ಹಸಿರು ಭಾವುಟವಿತ್ತು. ಈಗ ಹೊಸ ಸರಕಾರ ಅದನ್ನು ಬದಲಾಯಿಸಿ ಎಂದು ಹೇಳಿತು. ಬದಲಾಯಿಸಿದ್ದೇವೆ. ಯಾರು ಬಂದರೂ ಹೋದರೂ ನಮಗೆಲ್ಲಾ ಒಂದೇ! ನಾವೆನು ಮಾಡೋಕಾಗುತ್ತೆ?” ಎಂದು ಕೈ ಚೆಲ್ಲುತ್ತಾರೆ. ಅವರ ಅಸಿಸ್ಟಂಟ್ ಜುಮಾ (ಹೆಸರು ಬದಲಾಯಿಸಲಾಗಿದೆ “ಹಿಂದೆ ನಾನು ಆಪಿಸಿಗೆ ಬೆಳಿಗ್ಗೆ ೮ ಕ್ಕೆ ಬಂದು ಮದ್ಯಾಹ್ನ ೧.೩೦ಕ್ಕೆ ಹೋಗುತ್ತಿದ್ದೆ. ಈಗ ಬೆಳಿಗ್ಗೆ ೧೦ ಗಂಟೆಗೆ ಬಂದು ಮದ್ಯಾಹ್ನ ೧೨.೩೦ಕ್ಕೆಲ್ಲಾ ಹೊರಟು ಹೋಗುತ್ತೆನೆ. ಏಕೆಂದರೆ ಈಗ ನಾವು ಸ್ವತಂತ್ರರು. ಏನು ಬೇಕಾದರು ಮಾಡಬಹುದು. Libya is free” ಎಂದು ಜೋರಾಗಿ ನಗತೊಡಗುತ್ತಾಳೆ. ಮುಂದೆ ನಾನು ಸ್ಥಳಿಯ ಪತ್ರಕರ್ತನೊಬ್ಬನನ್ನು ಭೇಟಿಮಾಡಿದೆ. “ನಾನು ಹಿಂದೆ freelance journalist ಆಗಿ ಕೆಲಸ ಮಾಡುತ್ತಿದ್ದೆ. ಈಗ full time journalist ಆಗುತ್ತಿದ್ದೇನೆ. ಏಕೆಂದರೆ ಲಿಬಿಯಾ democratic country ಆಗಲಿದೆ. ಈ democratic country ಗಳಲ್ಲಿ ಬರೆಯಲು ಸಾಕಷ್ಟು ವಿಷಯಗಳಿರುತ್ತವೆ. Freedom of expression ಇರುವದರಿಂದ ನಿಮಿಷಕ್ಕೊಂದೊಂದು ಸುದ್ಧಿಯನ್ನು ಹಾಕಬಹುದು” ಎಂದು ಕಣ್ಣು ಮಿಟುಕಿಸುತ್ತಾನೆ. ಇನ್ನು ವಿದ್ಯಾರ್ಥಿಗಳಂತೂ “ನಮಗೆ ಹೊಸ ಸರಕಾರ ಬೇಡವೇ ಬೇಡ. ಇಷ್ಟವಿಲ್ಲ.” ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಇನ್ನೂ ಗಡಾಫಿಯ ಫೋಟೋವನ್ನು ತಮ್ಮ ಖಾಸಗಿ ಕೋಣೆಗಳಲ್ಲಿ ಮತ್ತು ಹಾಸ್ಟೆಲ್‍ಗಳಲ್ಲಿ ಹಾಕಿಕೊಂಡಿದ್ದಾರೆ. ನಾನು ಮೊನ್ನೆ ಗ್ರಾಮರ್ ವಿಷಯವನ್ನು ಹೇಳಿಕೊಡುವಾಗ ಸುಮ್ಮನೆ ”Gadafi was a dictator” ಎನ್ನುವ ವಾಕ್ಯವೊಂದನ್ನು ಬೋರ್ಡಿನ ಮೇಲೆ ಬರೆದೆ. ತಕ್ಷಣ ವಿದ್ಯಾರ್ಥಿಗಳೆಲ್ಲಾ “No, never. He was never ever a dictator. Mr. Uday, don’t say anything bad of Gadafi. He had given so much for us. We still love him and we still love his favorite color ‘green’. See….. ....” ಎಂದು ಹಸಿರು ಬಣ್ಣದ ಮೊಬೈಲ್ ಮತ್ತು ಪೆನ್ಸಿಲ್‍ಗಳನ್ನು ತೋರಿಸುತ್ತಾರೆ. ನಾನು ನೀವೆಲ್ಲಾ ವಿದ್ಯಾರ್ಥಿಗಳು ಇಂಥ ಚರ್ಚೆಯನ್ನೆಲ್ಲಾ ಬಿಟ್ಟು ಓದಿನ ಕಡೆ ಗಮನ ಕೊಡಬೇಕು ಎಂದು ಬುದ್ಧಿವಾದ ಹೇಳುತ್ತೇನೆ.


    ವಿಜಯದ ಸಂಕೇತವನ್ನು ಬಿಂಬಿಸುವ ಗೋಡೆ ಚಿತ್ರ
    ಹೊಸ ಹಂಗಾಮಿ ಸರಕಾರಕ್ಕೆ ದೇಶದ ಎಲ್ಲೆಡೆ ಗಡಾಫಿ ಬೆಂಬಲಿಗರ ಸಂಖ್ಯೆ ಸಾಕಷ್ಟಿದೆ ಎಂದು ಗೊತ್ತು. ಈಗಾಗಲೇ ಸುಮಾರು 2000 ದಷ್ಟು ಬೆಂಬಲಿಗರನ್ನು ಜೈಲಿಗೆ ಹಾಕಿ ಮನಬಂದಂತೆ ಹಿಂಸಿಸಲಾಗಿದೆ. ಇದನ್ನುಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ತೀವ್ರವಾಗಿ ಖಂಡಿಸಿದೆ. ಜೈಲಲ್ಲಿರುವವರು ನ್ಯಾಯಾಲಯದ ಮೊರೆಹೊಕ್ಕಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಾ? ಇಲ್ಲ ಸಾವೇ ಗತಿಯಾಗುತ್ತಾ? ಎನ್ನುವದನ್ನು ಕಾದುನೊಡಬೇಕಿದೆ. ಈಗಲೂ ಟ್ರಿಪೋಲಿ, ಬೆಂಗಾಜಿ, ಮಿಸ್ರತಾಗಳಲ್ಲಿ ಆಗಾಗ ಗಡಾಫಿ ಬೆಂಬಲಿಗರು ಮತ್ತು ಬಂಡುಕೋರರ ಮಧ್ಯ ಘರ್ಷಣೆಗಳು ಸಂಭವಿಸುತ್ತಿವೆ. ಈ ತೆರದ ಘರ್ಷಣೆಗಳು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವೆ. ಹೊಸ ಸರಕಾರ ಮೊದಲು ಬಲಪ್ರಯೋಗ ಮಾಡಿ ಜನರನ್ನು ತಮ್ಮತ್ತ ಒಲಿಸಿಕೊಳ್ಳಲು ನೋಡಿದರು. ಆದರೆ ಅದು ಸಾಧ್ಯವಾಗದೇ ಹೋದಾಗ ಹೊಸಹೊಸ ಸವಲತ್ತುಗಳನ್ನು ಕೊಡುವದರ ಮೂಲಕ ಅವರನ್ನು ಒಲಿಸಿಕೊಳ್ಳಲು ನೋಡುತ್ತಿದ್ದಾರೆ. ಆ ಪ್ರಕಾರ ಲಿಬಿಯನ್ನರ ಸಂಬಳ ಸಧ್ಯದಲ್ಲಿಯೇ ದ್ವಿಗುಣವಾಗಲಿದೆ ಎಂಬ ಸುದ್ಧಿಯಿದೆ. ಈ ರಮದಾನ್ ಮತ್ತು ಈದ್ ಹಬ್ಬಗಳ ಕೊಡುಗೆಯಾಗಿ ಸರಕಾರಿ ಒಡೆತನದಲ್ಲಿರುವ “ಲಿಬಿಯಾನಾ ಮತ್ತು ಆಲ್ ಮದಾರ್” ಮೊಬೈಲ್‍ಗಳಿಗೆ ತಲಾ ೬೦ ದಿನಾರ್ (ರೂ. ೨೪೦೦) ಗಳಷ್ಟು ಉಚಿತ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಸಚಿವರು ಇನ್ನುಮುಂದೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ೭೫ ದಿನಾರ್ (ರೂ. ೩೦೦೦) ಗಳಷ್ಟು ಒಂಬತ್ತು ತಿಂಗಳ ಕಾಲ ಸ್ಟೈಫಂಡ್ ನೀಡಲಾಗುವದು ಎಂದು ಘೋಷಿಸಿದ್ದಾರೆ. ಒಂದು ಸಾರಿ ಜನರ ಮೇಲೆ ಹಿಡಿತ ಸಾಧಿಸಿದ ಮೇಲೆ ಹಂಗಾಮಿ ಸರಕಾರ ಚುನಾವಣೆಗಳನ್ನು ನಡೆಸಲಿದೆ. ಆನಂತರ ಪ್ರಜಾಪ್ರಭುತ್ವ ಸರಕಾರಕ್ಕೆ ಚಾಲನೆ ಸಿಗಲಿದೆ. ಆದರೆ ಸಧ್ಯದ ಸರಕಾರ, ಗಡಾಫಿಯ ಬೆಂಬಲಿಗರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಾಕೀತು ಮಾಡುತ್ತಿದೆ. ಆದರೆ ಅವರು ನಮಗೇಕೆ ಅವಕಾಶವಿಲ್ಲ? ಅವಕಾಶ ಮಾಡಿಕೊಡದೆಹೋದರೆ ಉಗ್ರರೂಪದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


    ಇತ್ತ ಕಡೆ ಹೊಸ ಸರಕಾರ ಗಡಾಫಿಯ ಹೆಸರನ್ನು ಸಂಪೂರ್ಣವಾಗಿ ಅಳಿಸಿಹಾಕಲು ನೋಡುತ್ತಿದೆ. ಗಡಾಫಿತನ ಎಲ್ಲೂ ಇರಲೇಬಾರದೆಂಬಂತೆ ಪಣ ತೊಟ್ಟಂತೆ ಕಾಣಿಸುತ್ತಿದೆ. ಆತನ ಭಾವಚಿತ್ರವಿರುವ ನೋಟುಗಳನ್ನು ನಿಧಾನವಾಗಿ ಚಲಾವಣೆಯಿಂದ ರದ್ದುಪಡಿಸಲು ನೋಡುತ್ತಿದೆ. ಎಲ್ಲ ಸಾರ್ವಜನಿಕ ಕಛೇರಿ, ಸ್ಥಳಗಳಿಂದ ಆತನ ಫೋಟೋಗಳನ್ನು ತೆಗೆದುಹಾಕಲಾಗಿದೆ. ಆತ ಹಾಕಿಕೊಟ್ಟ ರೀತಿ ರಿವಾಜುಗಳನ್ನು, ಚಿಂತನೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುತ್ತಿದೆ. ಹಣದುಬ್ಬರದಿಂದ ಪದಾರ್ಥಗಳ ಬೆಲೆಗಳು ಮೊದಲಿಗಿಂತ ೧೫% ನಷ್ಟು ಹೆಚ್ಚಾಗಿದ್ದರಿಂದ ಅದನ್ನು ಹತೋಟಿಗೆ ತರಲು ಸರಕಾರ ಹೆಣಗಾಡುತ್ತಿದೆ. ಬ್ಯಾಂಕುಗಳಲ್ಲಿ ಯಾವಾಗಲೂ ದುಡ್ಡಿನ ಕೊರತೆಯಿದ್ದು ಪರಿಸ್ಥಿತಿ ಸುಧಾರಿಸುವವರಿಗೂ ಒಬ್ಬನು ತನ್ನ ಸಂಬಳದ ೪೦% ಭಾಗದಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಯುದ್ಧದ ಸಮಯದಲ್ಲಿ ಎಲ್ಲರ ಕೈಗೆ ಬಂದ ಗನ್ನುಗಳನ್ನು ಸರಕಾರ ಹಿಂತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

    ಸ್ವಾತಂತ್ರ್ಯ ಪ್ರತೀಕದ ಗೋಡೆ ಚಿತ್ರ


    ಈ ಎಲ್ಲದರ ಮಧ್ಯ ಮೊನ್ನೆ ಅಂದರೆ ಫೆಬ್ರುವರಿ ೧೭ ರಂದು ಬಿಗಿ ಭದ್ರತೆಯ ನಡುವೆಯೇ ಲಿಬಿಯಾ ಮೊದಲ ವರ್ಷದ ಕ್ರಾಂತಿಯ ಸಂಭ್ರಮದಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಬೆಂಗಾಜಿಯಲ್ಲಿ ಈ ಆಚರಣೆಗೆ ದೊಡ್ಡಮಟ್ಟದ ಪ್ರತಿಕ್ರಿಯೆ ಸಿಕ್ಕಿತು. ಪ್ರತಿಯೊಂದು ಮನೆಯ ಹೆಣ್ಣುಮಕ್ಕಳು ನವವಧುವಿನಂತೆ ಸಿಂಗರಿಸಿಕೊಂಡು ತಮ್ಮ ಮನೆಯನ್ನು ಬೇರೆ ಬೇರೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಮತ್ತು ರಾಷ್ಟ್ರ ಧ್ವಜಗಳಿಂದ ಅಲಂಕರಿಸಿ ಸ್ವಾತಂತ್ರೋತ್ಸವನ್ನು ಆಚರಿಸಿದರು ಎಂದು ಲಿಬಿಯಾದ ಇಂಗ್ಲೀಷ್ ಪತ್ರಿಕೆ “ದಿ ಟ್ರಿಪೋಲಿ ಪೋಸ್ಟ್” ವರದಿ ಮಾಡಿದೆ. ಆದರೆ ದಕ್ಷಿಣದ ಭಾಗದಲ್ಲಿ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ನೀರಸವಾಗಿತ್ತು. ಈ ಉತ್ಸವದ ಮುನ್ನಾ ದಿನ ಸರಕಾರ ಇಡಿ ಲಿಬಿಯಾದ ತುಂಬಾ ಪ್ರತಿಯೊಂದು ಮನೆಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ ಹಿಟ್ಟು, ಶಾವಿಗೆ, ಎಣ್ಣೆ ಮುಂತಾದ ದಿನಸಿಗಳನ್ನು ಉಚಿತವಾಗಿ ವಿತರಿಸಿದೆ. ಆ ದಿನ ಶುಕ್ರವಾರ ಬಂದಿದ್ದರಿಂದ ಸರಕಾರ ಮಾರನೆ ದಿವಸ
    ಸಾರ್ವತ್ರಿಕ ರಜೆಯನ್ನು ಘೋಷಿಸಿ ಲಿಬಿಯನ್ನರ ಮೆಚ್ಚುಗೆ ಗಳಿಸಲು ನೋಡಿತು. ಸರಕಾರ, ಇದೆ ರೀತಿ ಮುಂದೆಯೂ ಸಹ ಎಲ್ಲ ರಿತಿಯಲ್ಲಿ ಲಿಬಿಯನ್ನರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತದಾ? ಕಾದು ನೋಡಬೇಕಿದೆ.

    -ಉದಯ್ ಇಟಗಿ
    ಈ ಲೇಖನ 4-3-2012 ರ “ಸಂಯುಕ್ತ ಕರ್ನಾಟಕ”ದಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ http://www.samyukthakarnatakaepaper.com/27598/Samyuktha-Karnataka/Mar-04-2012-Bangalore#page/13/1

    1 ಕಾಮೆಂಟ್‌(ಗಳು):

    Unknown ಹೇಳಿದರು...

    ಲಿಬಿಯಾದ ಚಿತ್ರಣವನ್ನು ಚೆನ್ನಾಗಿಯೇ ನೀಡಿದ್ದೀರಿ.. ಇಷ್ಟೆಲ್ಲಾ ಅಲ್ಲಿ ಆಗ್ತಾ ಇರೋದು ಗೊತ್ತೇ ಇರಲಿಲ್ಲ..