ಇತ್ತೀಚಿಗೆ ನಾನು ನಾನಾಗಿರಲು ಸಾಧ್ಯವಾಗುತ್ತಿಲ್ಲ; ಬೇರೆ ಇನ್ನೇನೋ ಆಗುತ್ತಿದ್ದೇನೆ. ಅಥವಾ ನನ್ನ ಸುತ್ತಲಿನ ಸಮಾಜ, ಪರಿಸರ ಹಾಗೂ ಮನುಷ್ಯರು ನನ್ನನ್ನು ನಾನಾಗಿರಲು ಬಿಡುತ್ತಿಲ್ಲ. ಹಾಗಂತ ನನಗೆ ಬಲವಾಗಿ ಅನ್ನಿಸತೊಡಗಿದೆ. ನನಗೆ ಮಾತ್ರವಲ್ಲ. ಬಹುಶಃ, ನಿಮಗೂ ಒಮ್ಮೆಯಾದರೂ ಹಾಗೆ ಅನಿಸಿರುತ್ತೆ. ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಬಹಳಷ್ಟು ಬದಲಾಗಿಬಿಡುತ್ತಾನೆ. ಜೀವನದ ಸಂದರ್ಭಗಳೇ ಹಾಗೆ! ಅವು ಎಂಥವನನ್ನು ಕೂಡ ಬದಲಾಯಿಸಿಬಿಡುತ್ತವೆ. ಆದರೆ ಇಲ್ಲಿ ನನಗೆ ಒಂದೊಂದು ಸಾರಿ ಗೊಂದಲ ಉಂಟಾಗುತ್ತೆ- ಮನುಷ್ಯ ಸಂದರ್ಭಗಳಿಗೆ ತಕ್ಕಂತೆ ಬದಲಾಗುತ್ತಾನೋ? ಅಥವಾ ಸಂದರ್ಭಗಳೇ ನಿಜವಾಗಿ ಮನುಷ್ಯನನ್ನು ಬದಲಾಯಿಸುತ್ತವೆಯೋ? ಎಂದು. ನನ್ನ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬಹುಶಃ, ಸಿಗುವದಿಲ್ಲವೇನೋ?! ಏಕೆಂದರೆ ಕೆಲವು ಗೊಂದಲಗಳಿಗೆ ಪರಿಹಾರವಿಲ್ಲ ಮತ್ತು ಒಂದುವೇಳೆ ಪರಿಹಾವಿದ್ದರೂ ನಾವು ಇಂಥ ಅಸಂಖ್ಯ ಗೊಂದಲಗಳ ನಡುವೆಯೇ ಬದುಕುವದನ್ನು ಅಭ್ಯಾಸ ಮಾಡಿಕೊಂಡಿರುವದರಿಂದ ಅದು ನಮಗೆ ಕಾಣುವದಿಲ್ಲ.
ಹಾಗಿದ್ದರೆ ನಾನು ನಾನಾಗಿರಲು ಯಾವಾಗ ಸಾಧ್ಯ? ಬಹುಶಃ, ನಾನೊಬ್ಬಂಟಿಯಾಗಿದ್ದಾಗ ಮಾತ್ರ ಅನಿಸುತ್ತೆ. ಆದರೆ ಈ ವಿಶಾಲ ಜಗತ್ತಿನಲ್ಲಿ ಒಬ್ಬಂಟಿಯಿರುವದಾದರೂ ಹೇಗೆ? ನಾವು ಇತರರೊಟ್ಟಿಗೆ ಇರುವಾಗ ಇನ್ನೆಲ್ಲೋ ಕಳೆದುಹೋಗುತ್ತೇವೆ. ಇನ್ನೇನೋ ಆಗುತ್ತೇವೆ. ಯಾರ್ಯಾರದೋ ಪ್ರಭಾವಕ್ಕೊಳಗಾಗುತ್ತೇವೆ. ಯಾರ್ಯಾರನ್ನೋ ಅನುಕರಿಸುತ್ತೇವೆ. ಒಟ್ಟಿನಲ್ಲಿ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪಾತ್ರಗಳಾಗುತ್ತೇವೆ. ಒಮ್ಮೆ ರೋಮಿಯೋ, ಒಮ್ಮೆ ಹ್ಯಾಮ್ಲೆಟ್, ಒಮ್ಮೆ ಒಥೆಲೋ, ಒಮ್ಮೆ ಇಯಾಗೋ, ಒಮ್ಮೆ ಆಂಟನಿ, ಒಮ್ಮೆ ಪ್ರಾಣೇಶಾಚಾರ್ಯ, ಹೀಗೆ ಇನ್ನೂ ಏನೇನೋ ಅಗುತ್ತೆವೆ. ಕೊನೆಗೆ ನಾನು ಏನೂ ಆಗಲಿಲ್ಲ. ನಾನು ನಾನಾಗಿಯೇ ಉಳಿದೆ ಅನಿಸುತ್ತೆ. ಆದರೂ ನಮಗೆ ಗೊತ್ತಿಲ್ಲದಂತೆ ಇನ್ನೇನೋ ಆಗಿಬಿಟ್ಟಿರುತ್ತೇವೆ.
ಅಬ್ಬಾ, ನಾನು ನಾನಾಗಿರುವದು ಎಷ್ಟೊಂದು ಕಷ್ಟ! ಹಾಗಾದರೆ ನಾನೇಕೆ ಇನ್ನೂ ನಾನು ನಾನಾಗಿಯೇ ಬದುಕಬೇಕೆಂಬ ಹಟವನ್ನಿಟ್ಟುಕೊಂಡಿದ್ದೇನೆ. ಅದನ್ನೇಕೆ ಕೈ ಬಿಡಬಾರದು? ಒಂದೊಂದು ಸಾರಿ ಅನಿಸುತ್ತೆ; ನಾನು ನಾನಾಗದೆ ಬದುಕುವದರಲ್ಲಿಯೇ ಎಷ್ಟೊಂದು ಖುಶಿ, ಎಷ್ಟೊಂದು ನೆಮ್ಮದಿಯಿದೆಯೆಂದು!
ಕಲಾವಿದರು ಬೇಕಾಗಿದ್ದಾರೆ
1 ದಿನದ ಹಿಂದೆ
1 ಕಾಮೆಂಟ್(ಗಳು):
ನಾನು ನಾನಾಗಿರೋದು ತುಂಬಾ ಕಷ್ಟ...
ಕಾಮೆಂಟ್ ಪೋಸ್ಟ್ ಮಾಡಿ