“ಇಂದು ಮಹಿಳಾ ದಿನಾಚಾರಣೆ. ಹಾಗಂದರೇನು?” ಅಂತಾ ನಮ್ಮ ಪಕ್ಕದ ಮನೆಯ ಆರನೇ ಕ್ಲಾಸಿನ ಹುಡುಗನೊಬ್ಬ ನನ್ನ ಕೇಳುತ್ತಾನೆ. ನಾನು “ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಆಚರಿಸುವ ದಿನಾಚಾರಣೆ” ಎಂದು ಹೇಳುತ್ತೇನೆ. ಅವನು ಇದೇನೋ ಪ್ರಜಾಪ್ರಭುತ್ವದ ಡೆಫಿನೇಶನ್ ಇದ್ದಹಾಗೆ ಇದೆಯಲ್ಲಾ ಎಂದು ಪಿಳಿಪಿಳಿ ಕಣ್ಣುಬಿಡುತ್ತಾ ಜೋರಾಗಿ ನಗುತ್ತಾನೆ. ಅವನೊಟ್ಟಿಗೆ ನಾನೂ ನಗುತ್ತೇನೆ. ತಕ್ಷಣ ನನ್ನ ಹೆಂಡತಿ “ನಿಮಗೆ ಗಂಡಸರಿಗೆ ಎಲ್ಲವೂ ತಮಾಷೆಯಾಗಿಯೇ ಕಾಣಿಸುತ್ತದೆ” ಎಂದು ಸಿಡುಕುತ್ತಾಳೆ. ನಾನು “ತಮಾಷೆ ಅಲ್ವೇ. ಬೇಸರ” ಎನ್ನುತ್ತನೆ. “ಬೇಸರನಾ? ಯಾಕೆ?” ಎಂದು ಕೇಳುತ್ತಾಳೆ. ನಾನು ಮೆಲ್ಲಗೆ ತಕರಾರು ತೆಗೆಯುತ್ತೇನೆ; “ಅಲ್ಲಾ, ನಿಮಗೆ ಹೆಂಗಸರಿಗೆ “ಮಹಿಳಾ ದಿನಾಚಾರಣೆ”ಯಿರುವಂತೆ ನಮಗೆ ಗಂಡಸರಿಗೆ “ಪುರುಷ ದಿನಾಚಾರಣೆ” ಅಂತಾ ಯಾಕಿಲ್ಲ? ಏಕೀ ಲಿಂಗ ತಾರತಮ್ಯ?” ಎಂದು ಸದಾ ಲಿಂಗ ತಾರತಮ್ಯತೆಯ ಬಗ್ಗೆ ಮಾತನಾಡುವ ನನ್ನ ಹೆಂಡತಿಯನ್ನು ಕೇಳುತ್ತೇನೆ. ಅವಳೋ “ಎಲ್ಲಾ ದಿನಗಳು ನಿಮ್ಮ ದಿನಗಳಾಗಿರುವದರಿಂದ ಪ್ರತ್ಯೇಕವಾಗಿ ನಿಮಗೆ ಅಂತಾ ಇನ್ನೊಂದು ‘ಪುರುಷ ದಿನಾಚಾರಣೆ’ಯ ಅವಶ್ಯಕತೆಯಿಲ್ಲ” ಎಂದು ಮಹಿಳೆಯರ ಪರವಾಗಿಯೇ ಉತ್ತರ ಕೊಡುತ್ತಾಳೆ. “ಎಷ್ಟೇ ಆಗಲಿ ನೀವು ಮಹಿಳೆಯರು ಶತ ಶತಮಾನಗಳಿಂದ ನಾವು ಶೋಷಣೆಗೊಳಗಾದವರು ಎಂಬ ಸಿದ್ಧ ಮಾದರಿಯ ಕಲ್ಪನೆಯಲ್ಲೇ ಬಂದರಲ್ಲವೆ? ಎಲ್ಲಿ ಬಿಟ್ಟುಕೊಡುತ್ತಿರಿ ನಿಮ್ಮ ಜಾಯಮಾನವನ್ನು?” ಎಂದು ಕಟುಕುತ್ತೇನೆ. ಅದಕ್ಕವಳು “ಸರಿ ಸರಿ. ಈ ಪುರಾಣ ಎಲ್ಲಾ ಬಿಟ್ಟು ಇವತ್ತು ನೀವು ಅಡಿಗೆ ಮಾಡಿ. ನಾನು ರೆಸ್ಟ್ ತಗೊಳ್ಳತೇನೆ. ಇವತ್ತು ಮಹಿಳಾ ದಿನಾಚಾರಣೆಯಲ್ಲವೆ?” ಎನ್ನುತ್ತಾಳೆ. ನಾನು “ಆಯ್ತು.” ಎಂದು ಅಡಿಗೆ ಮನೆಗೆ ಹೋಗಿ ತರಕಾರಿಯನ್ನು ಸಿದ್ಧಮಾಡಿಕೊಂಡು ಹೆಚ್ಚಲು ಕುಳಿತರೆ ನನ್ನವಳು “ಅಯ್ಯೋ! ಹೀಗಾ ಹೆಚ್ಚೋದು? ಹಿಂಗಾದ್ರೆ ನೀವು ಅಡಿಗೆ ಮಾಡಿದಂಗೆ. ಕೊಡಿಲ್ಲಿ. ನಾನು ಮಾಡುತ್ತೆನೆ. ಎಷ್ಟೇ ಆಗಲಿ. ಹೆಂಗಸರು, ಹೆಂಗಸರೇ! ನಿಮಗೆ ಗಂಡಸರಿಗೆ ಮಾಡಿಹಾಕಿದ್ದನ್ನು ತಿನ್ನುವದೊಂದು ಗೊತ್ತು” ಎಂದು ಗೊಣಗುತ್ತಾ ಅವಳೇ ತರಕಾರಿ ಕತ್ತರಿಸುತ್ತಾಳೆ. ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.
ಅದೆಲ್ಲಾ ಇರಲಿ. ನಾನು ಮೊನ್ನೆ ಯುವ ಕವಯಿತ್ರಿಯೊಬ್ಬರ ಪುಸ್ತಕ ಬಿಡುಗಡೆಯ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿ ಆಕೆ ಪ್ರಾಸ್ತವಿಕ ನುಡಿಗಳನ್ನಾಡುತ್ತಾ “ನಾನು ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡೆ. ನಿಮಗೆ ಗೊತ್ತಲ್ಲ ಗಂಡನಿಲ್ಲದ ಹೆಂಡತಿಯನ್ನು ಈ ಸಮಾಜ ಹೇಗೆ ಕಾಣುತ್ತದೆ ಎಂದು? ಪುರುಷ ಪ್ರಧಾನ ಸಮಾಜದ ವಿವಿಧ ರೀತಿಯ ಶೋಷಣೆಗಳನ್ನು ಎದುರಿಸಿ ಬರಬೇಕಾದರೆ ಸಾಕುಸಾಕಾಯಿತು ನನಗೆ. ಈ ಶೋಷಣೆಯನ್ನು ನಿಲ್ಲಿಸಬೇಕಿದೆ. ಹೆಣ್ಣು, ಗಂಡಸಿನ ಸರಿಸಮಾನವಾಗಿ ಬದುಕಬೇಕಿದೆ” ಎಂದು ಅಲವತ್ತುಕೊಳ್ಳುತ್ತಿದ್ದರು. ಆದರೆ ಅ ಶೋಷಣೆಯನ್ನು ಹೋಗಲಾಡಿಸುವದಕ್ಕೆ ತಾವು ಏನು ಮಾಡಿದ್ದಾರೆ? ಯಾವ ರೀತಿಯ ಕೊಡುಗೆಯನ್ನು ನೀಡಿದ್ದಾರೆ? ಎಂಬುದರ ಬಗ್ಗೆ ಅವರು ಏನೂ ಹೇಳಲೇ ಇಲ್ಲ. ಇವತ್ತಿನ ಹೆಣ್ಣುಮಕ್ಕಳು ಎಲ್ಲ ರಂಗದಲ್ಲೂ ಮಿಂಚುತ್ತಿದ್ದಾರೆ. ಬಹಳಷ್ಟು ಕಾನೂನುಗಳು ಸಹ ಅವರ ಪರವಾಗಿವೆ. ಅವುಗಳ ದುರ್ಬಳೆಕೆಯೂ ಆಗುತ್ತಿದೆ. ಆದರೂ ಇದ್ಯಾವುದು ತಮಗೆ ಅರಿವೇ ಇಲ್ಲವೆನ್ನುವಂತೆ ಇಪ್ಪತ್ತೊಂದನೆ ಶತಮಾನದ ಈ `ಯುವ ಕವಯಿತ್ರ' ಮಾತ್ರ ಇನ್ನೂ ಶೋಷಣೆ, ಸಮಾನತೆ ಎಂದು ಬಡಬಡಿಸುತ್ತಲೇ ಇದ್ದುದು ಮಾತ್ರ ನನಗೆ ಆಶ್ಚರ್ಯ ತಂದಿತ್ತು.
ನಾನು ಹಿಂದೊಮ್ಮೆ ನನ್ನ ಸ್ನೇಹಿತನನ್ನು ನೋಡಲು ಆಂಧ್ರಪ್ರದೇಶದ ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನಾವು ಹೊರಗಡೆ ಬೆಂಚಿನ ಮೇಲೆ ವೈದ್ಯರಿಗಾಗಿ ಕಾಯುತ್ತಾ ಕುಳಿತಂತೆ ಒಬ್ಬ ಹೆಣ್ಣುಮಗಳು ತನ್ನ ಗಂಡನನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದದ್ದನ್ನು ನೋಡಿ ನನಗೆ ಅಳುವೇ ಬಂದುಬಿಟ್ಟಿತು. ಆಕೆ ಕ್ಯಾನ್ಸರ್ ಪೀಡಿತ ತನ್ನ ಗಂಡನನ್ನು ಆಸ್ಪತ್ರೆಯೊಳಗೆ ಹೊತ್ತು ತಂದಿದ್ದಳು. ಆಕೆ ಅನಕ್ಷರಸ್ಥೆ. ಹಳ್ಳಿಗಾಡಿನ ಹೆಣ್ಣುಮಗಳು. ಶೋಷಣೆ, ಲಿಂಗತಾರತಮ್ಯ, ಸ್ತ್ರೀವಾದ ಈ ಯಾವ ಪದಗಳನ್ನೂ ಕೇಳದಾಕೆ. ನಾವು ಅವಳನ್ನು ಮಾತನಾಡಿಸಿದಾಗ “ಯಪ್ಪಾ, ಗಂಡಗ ಕ್ಯಾನ್ಸರ್ ಅಂತರೀ. ಅವಂಗ ನಡೆಯಾಕ ಆಗಂಗಿಲ್ಲ. ಅದಕ ಹೊತ್ಗೊಂಡು ಬಂದೆ. ಏನು ಮಾಡೋದು? ಅವಂಗ ನಾನು, ನಾನು ಅವಂಗ ಆಗಬೇಕಲ್ರಿ?” ಎಂದು ಅ ನೋವಿನಲ್ಲೂ ನಗಲು ನೋಡಿದಾಗ ಬಹುಶಃ, ಬದುಕು ಎಂದರೇನು ಎಂದು ಸರಿಯಾಗಿ ಅರ್ಥ ಮಾಡಿಕೊಂಡಾಕಿ ಇರಬೇಕು ಎಂದುಕೊಂಡೆ. ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಬ್ರಾಹ್ಮೀ ಮತ್ತು ನಾಗರೀ ಲಿಪಿ ಕಲಿಯಿರಿ
15 ಗಂಟೆಗಳ ಹಿಂದೆ
6 ಕಾಮೆಂಟ್(ಗಳು):
"ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ."
ಉಳಿದೆಲ್ಲವನ್ನೂ ಸರಿಯಾಗಿ ಹೇಳಿರುವಿರಿ ಈ ಮೇಲೆ ನಮೂದಿಸಿದ ಮಾತೊಂದನ್ನು ಹೊರತುಪಡಿಸಿ... ಮೇಲಿನ ನಿಮ್ಮ ಹೇಳಿಕೆ ಸಂಕುಚಿತ ಅನಿಸಿತು ನನಗೆ.
ಮಾನ್ಯರೇ
ವಿದ್ಯಾವಂತೆಯಾದವರಾರೂ ತಮ್ಮ ಗಂಡನ ಸೇವೆ ಮಾಡಲಾರರು ಎಂಬ ನಿಮ್ಮ ಮೌಡ್ಯಕ್ಕೆ ಏನೆನ್ನಬೇಕೊ ತಿಳಿಯುತ್ತಿಲ್ಲ. ಸಮಾನತೆ, ಶೋಷಣೆ, ಸ್ತ್ರೀವಾದ ಎನ್ನುವಂತಹ ವಾದ ಮಾಡುವವರಿಗೆ ಮನಸ್ಸು ಇರುವುದೇ ಇಲ್ಲ, ಅವರಿಗೆ ಗಂಡ-ಮಕ್ಕಳು-ಸಂಸಾರ ಎಂಬುದು ಬೇಕಾಗಿಯೇ ಇಲ್ಲ ಎಂದು ನಿಮ್ಮಂತಹ ಅನೇಕರು ಭಾವಿಸಿರುತ್ತಾರೆ, ಅದು ನಿಮ್ಮ ಮಿತಿ, ಅದರಾಚೆ ನೀವು ಯೋಚಿಸಲಾರಿರಿ ಎನ್ನುವುದರ ಪ್ರತೀಕವಷ್ಟೆ. ಒಬ್ಬ ಅವಿದ್ಯಾವಂತ, ಗ್ರಾಮೀಣ ಮಹಿಳೆಗೆ ಕೂಡ ಗಂಡ-ಮಕ್ಕಳು-ಸಂಸಾರ ಬೇಕು, ಹಾಗೆಯೇ ಒಬ್ಬ ವಿದ್ಯಾವಂತ, ಪ್ರಗತಿಪರ, ಕಾರ್ಯನಿರತ ಮಹಿಳೆಗೂ ಗಂಡ-ಮಕ್ಕಳು-ಸಂಸಾರ ಬೇಕು. ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ. ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ. ಮನೆ ರಣರಂಗವಾದೀತು...
ಮಾನ್ಯರೇ,
ನೀವ್ಯಾರೋ ನನಗೆ ಗೊತ್ತಿಲ್ಲ. ಆದರೆ ನೀವು ನನಗೊಬ್ಬಳು ಪತ್ನಿ ಮತ್ತು ಒಬ್ಬಳು ಮಗಳು ಇದ್ದಾಳೆ ಎಂದು ಕರಾರುವಕ್ಕಾಗಿ ಹೇಳುತ್ತಿರಬೇಕಾದರೆ ನೀವ್ಯಾರೋ ನನಗೆ ಗೊತ್ತಿರುವವರೇ ಇರಬೇಕು ಅಥವಾ ನನ್ನನ್ನು ಬಲ್ಲವರಾಗಿರಬೇಕು ಅನಿಸುತ್ತದೆ. ಇರಲಿ. ನಿಮ್ಮ ಪ್ರಶ್ನೆಗೆ ವಿವರಣೆಯನ್ನು ಕೊಡುವದಕ್ಕಿಂತ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಅದೇನೆಂದರೆ ಇಲ್ಲಿ ನಮೂದಿತವಾಗಿರುವ ‘ನಾನು’ ಖಂಡಿತ ನಾನಲ್ಲ. ಹೆಸರೇ ಹೇಳುವಂತೆ ಇದು ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳಲ್ಲಿನ ಒಂದು ಪುಟವಷ್ಟೆ. ಆದರೆ ಅದನ್ನು ಸೃಷ್ಟಿಸಿದವನು ನಾನೇ ಆಗಿದ್ದರಿಂದ ನಿಮಗೆ ವಿವರಣೆ ಕೊಡುವ ಅಗತ್ಯವಿದೆ. ನೀವು ನನ್ನ ಲೇಖನವನ್ನು ಸರಿಯಾಗಿ ಓದದೇ ಆವೇಶದಲ್ಲಿ ಪ್ರತಿಕ್ರಿಯಿಸಿದ್ದೀರ ಅನಿಸುತ್ತದೆ. ನಾನು ಇಲ್ಲಿ ಬರೀ ವಿದ್ಯಾವಂತ ಮಹಿಳೆಯ ಬಗ್ಗೆ ಹೇಳಿಲ್ಲ. ಇನ್ನೊಮ್ಮೆ ಸರಿಯಾಗಿ ಓದಿ; ಎಂದಿದೆ. ಅಂದರೆ ವಿದ್ಯಾವಂತೆಯಾಗುವದರ ಜೊತೆಗೆ ಸ್ತ್ರೀವಾದ, ಸಮಾನತೆ, ಶೋಷಣೆಗಳ ಬಗ್ಗೆ ಗೊತ್ತಿರುವವಳು ಗಂಡನ ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಳೇನೋ ಎಂದು ಹೇಳಿದೆ.
ಇಂಗ್ಲೀಷಿನಲ್ಲಿ Ignorance is a bliss ಅಂತಾ ಒಂದು ಗಾದೆ ಮಾತಿದೆ. ಅಂದರೆ ನಿನ್ನ ಅಜ್ಞಾನವೇ ನಿನ್ನ ಖುಷಿಗೆ ಕಾರಣ ಎಂದು. ಜೊತೆಗೆ ವಿದ್ಯೆಯೆನ್ನುವದು ನಮಗೆ ಜ್ಞಾನವನ್ನು ಕೊಡುವದರೊಟ್ಟಿಗೆ ಒಂದಷ್ಟು ಅಹಂಕಾರ, ಗರ್ವವನ್ನು ಸಹ ತಂದುಕೊಡುತ್ತದೆ. ಆ ಮೂಲಕ ಸಮಾಜದಲ್ಲಿ ಒಂದಷ್ಟು ಅಸಮಾನತೆಯನ್ನು ಸಹ ಹುಟ್ಟುಹಾಕುತ್ತದೆ. ಉದಾಹರಣೆಗೆ ಎಷ್ಟೋ ಜನ ವಿದ್ಯಾವಂತರು ಧಿಮಾಕಿನಿಂದ ಮೆರೆಯುತ್ತಾ ಅವಿದ್ಯಾವಂತರನ್ನು ಕಡೆಗಣಿಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು, ವಿದ್ಯಾವಂತಳಾದವಳು ಅದರಲ್ಲೂ ಸ್ತ್ರೀವಾದ, ಸಮಾನತೆ, ಶೋಷಣೆ ಇತ್ಯಾದಿ ಪರಿಕಲ್ಪನೆಗಳ ಬಗ್ಗೆ ಗೊತ್ತಿರುವವಳು ತನ್ನ ಹೃದಯಾಂತರಾಳದಿಂದ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದೇನೆ. ಅಂದರೆ ಅವಳಿಗೆ ನಾನೇಕೆ ಮಾಡಬೆಕು? ಎನ್ನುವ ಅಹಂ ಕಾಡಬಹುದು ಅಥವಾ ಆ ರೀತಿ ಸೇವೆ ಮಾಡುವದನ್ನೇ ಅವಳು ಶೋಷಣೆ ಎಂದು ಭಾವಿಸಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದೆನೆ. ಈ ತರದ ಪರಿಕಲ್ಪನೆಗಳ ಪ್ರಭಾವದಿಂದಲೇ ಅಲ್ವಾ ಇವತ್ತು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಒಡೆದಿದ್ದು?
ನಾನು ಹೇಳಿದ ಸಾಲುಗಳ ಹಿಂದೆ ಒಂದು ನೋವಿದೆ. ಆ ನೋವನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳದೆ ನನ್ನದು ಮೌಢ್ಯ ಹಾಗೆ ಹೀಗೆ ಅಂತೆಲ್ಲಾ ಹೇಳಿದ ನಿಮ್ಮ ಅಜ್ಞಾನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. “ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ” ಖಂಡಿತ ನಿಮ್ಮ ಈ ಮಾತುಗಳನ್ನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. “ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ” ನಿಮಗೆ ನಾನು ಹಾಗಿದ್ದೇನೆ ಅಂತಾ ಯಾರು ಹೇಳಿದರೋ?
ಜಯಲಕ್ಷ್ಮೀ ಮೇಡಮ್,
ಮೇಲಿನ ಉತ್ತರದಲ್ಲಿ ನಾನು ಯಾವ ಅರ್ಥದಲ್ಲಿ ಹೀಗೆ ಹೇಳಿರಬಹುದು ಎಂದು ನಿಮಗೆ ಅರ್ಥವಾಗಬಹುದು.
ನಮಸ್ಕಾರ,
<< ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.>>
- ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಮೂಲತಃ ಪುರುಷರು ಸೋಮಾರಿಗಳು..ಕೆಲಸ (ಮನೆಯ) ಮಾಡಿದರೂ ಅದರಲ್ಲಿ ನಯ ನಾಜೂಕುತನ ಇರುವುದಿಲ್ಲ..ಅದಕ್ಕೆ ನಿಮ್ಮ ಪತ್ನಿ ಗೊಣಗುತ್ತ ತಾವೆ ತರಕಾರಿ ಹಚ್ಚಲು ಕುಳಿತರು . ಬೇಕಿದ್ದರೆ ಕೇಳಿ ನೋಡಿ! :-)
ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು.
ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ. ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು!
ಇನ್ನೊಂದು ವಿಷಯ- ಪುರುಷರ ದಿನವೂ ಇದೆ..ಆದರೆ ಸರಿಯಾಗಿ ನೆನಪಿಲ್ಲ..ಫೇಸ್ ಬುಕ್ಕಿನಲ್ಲಿ ಅ. ಸುರೇಶ್ ಹೆಗ್ಡೆಯರು ಅದರ ಬಗ್ಗೆ ಒಂದು ಸ್ಟೇಟಸ್ ಹಾಕಿದ್ದರು.
-ಶೀಲಾ
ಶೀಲಾ ಮೇಡಂ ನಮಸ್ಕಾರ,
ನಾನು ಇಲ್ಲಿ ಸೆಮೆಸ್ಟರ್ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವದರ ಬಿಜಿಯಲ್ಲಿದ್ದೆ. ಹೀಗಾಗಿ ನಿಮ್ಮ ಕಾಮೆಂಟಿಗೆ ಬೇಗನೆ ಉತ್ತರ ಕೊಡಲಾಗಲಿಲ್ಲ. ಕ್ಷಮಿಸಿ.
“ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ.” ಖಂಡಿತ ನಿಮ್ಮ ಮಾತನ್ನು ಒಪ್ಪುತ್ತೇನೆ ಮತ್ತು ಇಲ್ಲಿ ನಿಮಗೆ ಮನದಟ್ಟು ಮಾಡುವದೇನೆಂದರೆ ಇವತ್ತಿನನ ಬಹಳಷ್ಟು ಗಂದಸರು ಬದಲಾಗಿದ್ದಾರೆ ಹಾಗೂ ಅವರು ಮನೆ ಕೆಲಸದಲ್ಲಿ ಸಹಕರಿಸಲು ಬಯಸುತ್ತಾರೆ. ಆದರೆ ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕಷ್ಟೆ. ಆಯ್ತು ಗಂಡಸರು ನಯ, ನಾಜೂಕು ಇಲ್ಲದವರು. ಒಪ್ಪೋಣ. ಆ ನಯ ನಾಜೂಕತನವನ್ನು ಏಕೆ ನಿರೀಕ್ಷಿಸುತ್ತೀರಿ? ನಿಮ್ಮಂತೆ ಅವರು ಇರಬೇಕೆಂದು ಏಕೆ ಬಯಸುತ್ತೀರಿ? ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದ ಏಕೆ ಅಳೆಯುತ್ತೀರಿ? ನಿಮಗೆ ಕೆಲಸವಾದರೆ ಆಯ್ತಪ್ಪ! ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದೇ ಆಗಿರಲು ಹೇಗೆ ಸಾಧ್ಯ? ಮೊದಲು ಹೆಣ್ಣುಮಕ್ಕಳು, ಗಂಡಸರು ಮನೆಯ ಕೆಲಸದ ವಿಷಯದಲ್ಲಿ ತಮ್ಮಂತೆ ಅಲ್ಲ ಎನ್ನುವದನ್ನು ಅರಿಯಬೇಕಿದೆ. ಜೊತೆಗೆ ತಾವೇ ನಯ ನಾಜೂಕಿನವರು ನಮ್ಮನ್ನು ಬಿಟ್ಟರೆ ಇಲ್ಲ ಎನ್ನುವ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಿದೆ.
“ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು.” ಇದು ಸಾರ್ವಕಾಲಿಕ ಸತ್ಯ :-).
<<ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ.” ನಿಮ್ಮ ಮಾತು ನಿಜ. ವಿದ್ಯಾವಂತ ದಂಪತಿಗಳಲ್ಲಿ ಒಂದು ಅಹಂ, ಸ್ವಪ್ರತಿಷ್ಟೆ ಜಾಸ್ತಿ ಇರುತ್ತದೆ. ಈ ಕಾರಣದಿಂದಲೇ ಅವರು ಆಗಾಗ ಒಬ್ಬರಿಂದ ಇನ್ನೊಬ್ಬರು ವಿಮುಖರಾಗುತ್ತಾರೆ. ಏಕೆಂದರೆ ನಾವು ಮೊದಲು ಏನೇ ಮಾಡಿದರೂ ನಮ್ಮ ಸಂಗಾತಿಗೋಸ್ಕರ ಮಾಡುತ್ತಿದ್ದೇವೆ ಎನ್ನುವ ಭಾವ ಖುಶಿ ಕೊಡುತ್ತದೆ. ಅದು ತ್ಯಾಗ ಅನಿಸಿಕೊಳ್ಳುತ್ತದೆ. ಆದರೆ ಬರುಬರುತ್ತಾ ಅದು ಗುಲಾಮಗಿರಿ ಅನಿಸೋಕೆ ಶುರುವಾಗುತ್ತೆ. ಹೀಗಾಗಿ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಸೇವಾ ಮನೋಭಾವದ ಕೊರತೆಯಿರುತ್ತದೆ.
“ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು” ಇದು ತುಂಬಾ ವಿರಳ.
ಪುರುಷರ ದಿನವೂ ಇದೆ ಅಂತಾ ಹೇಳಿದ್ದೀರಿ. ಮಾಹಿತಿಗಾಗಿ ಹುಡುಕುತ್ತೇನೆ.
ಧನ್ಯವದಗಳು
ಉದಯ್ ಇಟಗಿ
ಕಾಮೆಂಟ್ ಪೋಸ್ಟ್ ಮಾಡಿ