ಲಿಬಿಯಾದಲ್ಲಿ ಕ್ರಾಂತಿಯೆದ್ದ ದಿನದಿಂದ ಹಿಡಿದು ಅದು ಮುಗಿದಾದ ಮೇಲೂ ನಾನು ಆಗಾಗ ನನ್ನ ಬ್ಲಾಗಿನಲ್ಲಿ ಗಡಾಫಿ ಬಗ್ಗೆ, ಆತ ಇಲ್ಲಿಯ ಜನಕ್ಕೆ ಕೊಟ್ಟ ಸೌಲತ್ತುಗಳ ಬಗ್ಗೆ, ಇಲ್ಲಿಯ ಕ್ರಾಂತಿಯ ಹಿಂದಿನ ಕೈವಾಡದ ಬಗ್ಗೆ, ಆತನ ದುರಂತ ಸಾವಿನ ಬಗ್ಗೆ, ಇಲ್ಲಿಯವರು ಆತನನ್ನು ಮಿಸ್ ಮಾಡಿಕೊಂಡಿರುವದರ ಬಗ್ಗೆ, ಆತನಿಲ್ಲದ ಲಿಬಿಯಾದ ಬಗ್ಗೆ ಹಾಗೂ ಇಲ್ಲಿನ ಸಣ್ಣಪುಟ್ಟ ಗಲಭೆಗಳ ಬಗ್ಗೆ ಕಾಲಕಾಲಕ್ಕೆ ನಾ ಪ್ರತ್ಯಕ್ಷ ಕಂಡಂತೆ ನಿಮಗೆ ವರದಿ ಮಾಡಿದ್ದೇನೆ. ಈಗ ಅಂಥದೇ ಮತ್ತೊಂದು ವಿಷಯವನ್ನು ಆದರೆ ಈ ಮೇಲಿನ ವಿಷಯಗಳಿಗೆ ತದ್ವಿರುದ್ಧವಾದ ಸುದ್ದಿಯೊಂದನ್ನು ವರದಿ ಮಾಡಲು ಹೊರಟಿದ್ದೇನೆ. ಹೊಸನೀರು ಹರಿದು ಬಂದಂತೆ ಹಳೆನೀರು ಕೊಚ್ಚಿಹೋಗುವದು ಸಹಜ. ಅಂತೆಯೇ ಹಂಗಾಮಿ ಸರಕಾರದ “ದೈತ್ಯ ಶಕ್ತಿ”ಯ ಮುಂದೆ ಹಳೆ ಸರಕಾರದ ರೀತಿ ರಿವಾಜುಗಳು ಮತ್ತು ಬೆಂಬಲಿಗರು ಹೇಗೆ ತೆರೆಮರೆಯ ಹಿಂದೆ ಸರಿಯುತ್ತಿದ್ದಾರೆ ಹಾಗೂ ಮೊನ್ನೆ ಮೊನ್ನೆಯವರೆಗೂ ಗಡಾಫಿಯನ್ನು ಕೊಂಡಾಡುತ್ತಿದ್ದ ಜನ ಈಗ ಹೇಗೆ ಕ್ರಮೇಣ ಅವನನ್ನು ಮರೆತು ಹೊಸ ಬದುಕಿನತ್ತ ಮುಖ ಮಾಡುತ್ತಿದ್ದಾರೆ ಎನ್ನುವದನ್ನು ಹೇಳಲು ಹೊರಟಿದ್ದೇನೆ.
ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಅಂದರೆ ಜುಲೈ ೭ ರಂದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ರಾಜ್ಯ ಸ್ಥಾಪನೆಗಾಗಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆದು ಹೊಸ ಇತಿಹಾಸ ಸೃಷ್ಟಿಸಿದವು. ಮಾತ್ರವಲ್ಲ ಸುಮಾರು ಐವತ್ತು ವರ್ಷಗಳ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆಗೂ ಪಾತ್ರವಾದವು. ಹಾಗೆ ನೋಡಿದರೆ ಇದು ಲಿಬಿಯಾದ ಎರಡನೆ ಚುನಾವಣೆ. ಮೊಟ್ಟ ಮೊದಲನೆಯ ಚುನಾವಣೆ ನಡೆದಿದ್ದು ಫ಼ೆಬ್ರುವರಿ ೧೯, ೧೯೫೨ರಂದು. ಲಿಬಿಯಾ ಆಗಷ್ಟೆ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆಹೊಂದಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಯೂರೋಪಿಯನ್ನರ ದಾಸ್ಯದಿಂದ ಮುಕ್ತಿಹೊಂದಿದ ಆಫ್ರಿಕಾ ಖಂಡದ ಮೊಟ್ಟಮೊದಲ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಗಿನ ದೊರೆ ಮೊದಲನೇ ಇದ್ರಿಸ್ ವಿಶ್ವಸಂಸ್ಥೆಯ ಜೊತೆ ಲಿಬಿಯಾದ ಸಂಧಾನುಕಾರನಾಗಿದ್ದುಕೊಂಡು ಆ ದೇಶಕ್ಕೆ ಸ್ವಾತಂತ್ರ್ಯವನ್ನು (ಡಿಸೆಂಬರ್ ೨೪, ೧೯೫೧ರಂದು) ದಕ್ಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ. ಹೀಗೆ ಪರಕೀಯರಿಂದ ಬಿಡುಗಡೆ ಹೊಂದಿದ ದೇಶಕ್ಕೆ ಹೊಸ ಸರಕಾರವೊಂದನ್ನು ಸ್ಥಾಪಿಸುವ ಹುಕಿಯಿತ್ತು. ಅದು ಪ್ರಜಾಪ್ರಭುತ್ವದ ರೀತಿಯಲ್ಲಿದ್ದರೆ ಸರಿಯೆಂದುಕೊಂಡು ಎಲ್ಲ ಸೇರಿ ದೇಶದ ತುಂಬಾ ಫೆಬ್ರುವರಿ ೧೯, ೧೯೫೨ರಂದು ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದರು. ಇಪ್ಪತ್ತೊಂದರ ಮೇಲ್ಪಟ್ಟ ಎಲ್ಲ ನಾಗರಿಕರಿಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಕೆಲವು ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ರಹಸ್ಯ ಮತದಾನ ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಮತಪೆಟ್ಟಿಗೆಯಲ್ಲಿ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಮತದಾರರು ಯಾರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ ಎನ್ನುವ ಹೇಳಿಕೆಯನ್ನು ಕಮಿಟಿಯ ಮುಂದೆ ಧ್ವನಿಮುದ್ರಿಸಲಾಯಿತು.
೧೯೫೨ರಲ್ಲಿ ನಡೆದ ಚುನಾವಣೆಯ ಒಂದು ಚಿತ್ರ
ಆಗ ಅಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ನನ್ನು ಬೆಂಬಲಿಸುವ ಗುಂಪು. ಇನ್ನೊಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಶಿರ್ ಬೇ ಸಾದವಿಯನ್ನು ಬೆಂಬಲಿಸುವ ಗುಂಪು. ಚುನಾವಣೆಯಲ್ಲಿ ಒಟ್ಟು ೧೪೧ ಅಬ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಹೆಚ್ಚಿನವರು ಸ್ವತಂತ್ರ ಅಬ್ಯರ್ಥಿಗಳು. ಫಲಿತಾಂಶ ಹೊರಬಂದಾಗ ಕಾಗ್ರೆಸ್ ಪಕ್ಷ ಟ್ರಿಪೋಲಿಯಲ್ಲಿ ಗೆದ್ದಿತ್ತು. ಆದರೆ ಬಹಳಷ್ಟು ಸೀಟುಗಳನ್ನು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ಬಾಚಿಕೊಂಡಿದ್ದ. ಅಲ್ಲಿಗೆ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿ ವಿರೋಧ ಪಕ್ಷದ ಪಡೆ ಹೋರಾಟಕ್ಕೆ ಇಳಿಯಿತು. ನೋಡನೋಡುತ್ತಿದ್ದಂತೆ ಹೋರಾಟ ಹಿಂಸೆಗೆ ತಿರುಗಿ ಘಟನೆಯಲ್ಲಿ ಒಂದಿಬ್ಬರು ಸತ್ತು ಸಾಕಷ್ಟು ಜನ ಗಾಯಗೊಂಡರು. ಈ ಘಟನೆ ಇಡಿ ಚುನಾವಣೆ ಪ್ರಕ್ರಿಯೆಯ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿ ಆಗಷ್ಟೆ ಮುಗಿದ ಚುನಾವಣೆಯನ್ನು ರದ್ದುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮುಂದೆ ಲಿಬಿಯಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಒಂದನೇಯ ಇದ್ರಿಸ್‍ನಿಗೆ ಅಧಿಕಾರವನ್ನು ವಹಿಸುವದರ ಮೂಲಕ ಅವನನ್ನು ಸ್ವತಂತ್ರ ಲಿಬಿಯಾದ ಮೊಟ್ಟಮೊದಲ ಅರಸನನ್ನಾಗಿ ಮಾಡಿದರು. ಆದರೆ 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ಈ ರಾಜಕುಮಾರನನ್ನು ಅರಸೊತ್ತಿಗೆಯಿಂದ ಕಿತ್ತೆಸೆದು ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಒಂದು ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಸಪ್ಟೆಂಬರ್ ೧, ೧೯೬೯ರಂದು ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸ ಮೌಮರ್ ಗಡಾಫಿಯ ಕೈವಶವಾಯಿತು. ಆತ ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕೊನೆಗೆ ಹೇಳಹೆಸರಿಲ್ಲದಂತೆ ನಾಶವಾಗಿಹೋಗಿದ್ದು ಈಗ ಇತಿಹಾಸ.
ಚುನಾವಣೆ ಅಂದ ಮೇಲೆ ಗದ್ದಲ, ಗಲಾಟೆಗಳಿರುವದು ಸರ್ವೇ ಸಾಮಾನ್ಯ. ಇನ್ನು ಲಿಬಿಯಾದ ಚುನುವಾಣೆಯ ಬಗ್ಗೆ ಕೇಳಬೇಕೆ? ಅಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆಯಲ್ಲಿ ಕೊನೆಯಾಗಿ ಎಲ್ಲ ತಣ್ಣಗಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಇಲ್ಲಿ ಗಡಾಫಿಗೆ ಸಾಕಷ್ಟುಜನ ಬೆಂಬಲಿಗರಿರುವದರಿಂದ ಅವರ ಮಧ್ಯ ಮತ್ತು ಹಂಗಾಮಿ ಸರಕಾರ NTC ಯ ಮಧ್ಯ ಆಗಾಗ ಘರ್ಷಣೆಗಳೇರ್ಪಡುತ್ತಿದ್ದವು. ಅವರನ್ನು ಹತ್ತಿಕ್ಕಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಚುನಾವಣೆಯ ಹಿಂದಿನ ದಿನದವರೆಗೂ ಆಗಾಗ ಅಲ್ಲಲ್ಲಿ ಏನಾದರೊಂದು ಕೆಟ್ಟಘಟನೆ ಜರಗುತ್ತಲಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿದ್ದರೂ ಚುನಾವಣೆಗೆ ಸಂಬಂಧಪಟ್ಟಹಾಗೆ ಹೇಳಬೇಕೆಂದರೆ ಗಡಾಫಿ ಬೆಂಬಲಿಗರಿಗೆ ಮತ್ತು ಆತನ ಅಧಿಕಾರದ ಅವಧಿಯಲ್ಲಿದ್ದ ಅಧಿಕಾರಿಗಳಿಗೆ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ ಇದ್ದುದಕ್ಕಾಗಿ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ಇನ್ನು ಬೆಂಗಾಜಿಯ ಪೂರ್ವಭಾಗದ ಜನ ನಮ್ಮದು ದೊಡ್ಡ ಕ್ಷೇತ್ರವಾಗಿದ್ದರಿಂದ ಹೆಚ್ಚು ಟಿಕೇಟುಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದರು. ಅವರು ಕೇಳಿದಷ್ಟು ಟಿಕೇಟುಗಳು ಸಿಗದೆ ಹೋದಾಗ ನೇರವಾಗಿ ಚುನಾವಣಾ ಕಮಿಷನರ್ ಕಛೇರಿಗೆ ದಾಳಿಯಿಟ್ಟು ಅಲ್ಲಿಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಇನ್ನು ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಚುನಾವಣೆ ನಡೆಯಲಿ. ಸಂವಿಧಾನವೇ ಇಲ್ಲದ ಮೆಲೆ ಅದ್ಹೇಗೆ ಚುನಾವಣೆಗಳನ್ನು ನಡೆಸುತ್ತೀರಿ? ಎಂದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಚುನಾವಣೆಯ ಹಿಂದಿನ ದಿವಸ ಪೂರ್ವ ಬೆಂಗಾಜಿಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಇದಲ್ಲದೆ ಬೆಂಗಾಜಿಯ ಮೆಡಿಕಲ್ ಕಾಲೇಜಿನ ಮೇಲೆಯೂ ಸಹ ದಾಳಿ ನಡೆದಿದೆ. ಈ ಎಲ್ಲದರ ಮಧ್ಯ ಸಾಕಷ್ಟು ಬಿಗಿಭದ್ರತೆಗಳ ನಡುವೆ ಹಂಗಾಮಿ ಸರಕಾರ ಚುನಾವಣೆಗಳನ್ನು ಜುಲೈ ೭, ೨೦೧೨ರಂದು ಒಟ್ಟು ೭೨ ಕ್ಷೇತ್ರಗಳಲ್ಲಿ ನಡಿಸಿತು. ಆ ಪೈಕಿ ೧೨೦ ಸ್ವತಂತ್ರ ಅಬ್ಯರ್ಥಿಗಳು ಹಾಗೂ ೮೦ ಬೇರೆಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರು. ಮತದಾನ ನಡೆದಿದ್ದು ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ. ಇದಲ್ಲದೆ ಬಹಳಷ್ಟು ಲಿಬಿಯನ್ ನಾಗರಿಕರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜೋರ್ಡಾನ್, ಬ್ರಿಟನ್‍ನಲ್ಲಿ ನೆಲಿಸಿದ್ದರಿಂದ ಅಲ್ಲೆಲ್ಲಾ ಮತಗಟ್ಟೆಗಳನ್ನು ಆರಂಭಿಸಿದ್ದರು. ಅವರಿಗೆಲ್ಲಾ ಒಂದು ವಾರದಷ್ಟು ಕಾಲದ ಗಡುವನ್ನು ಕೊಟ್ಟು ಬೆಳಿಗ್ಗೆ ೯ರಿಂದ ಸಂಜೆ ೫ರ ಒಳಗೆ ಒಂದು ವಾರದ ಅವಧಿಯಲ್ಲಿ ಯಾವಾಗಬೇಕಾದರು ಬಂದು ಮತಹಾಕಲು ಅನುಕೂಲಮಾಡಿಕೊಟ್ಟಿದ್ದರು.
ಚುನಾವಣೆ ಸಿದ್ಧತೆಯ ಮುಂಚೆ ತೆಗೆದ ಮತಪೆಟ್ಟಿಗೆಯ ಚಿತ್ರ
ಅಂದು ಸುಮಾರು ಅರ್ಧ ಶತಮಾನದ ನಂತರ ಲಿಬಿಯಾ ಚುನಾವಣೆಯನ್ನು ನಡೆಸಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಬಹಳಷ್ಟು ಜನಕ್ಕೆ ಇದೇ ಮೊದಲ ಚುನಾವಣೆಯಾಗಿತ್ತು. ಮತಗಟ್ಟೆಯ ಒಳಕ್ಕೆ ಹೋಗುವ ಮುನ್ನ ಮತದಾರರನ್ನು ಸಾಕಷ್ಟು ಸೆಕ್ಯೂರಿಟಿ ತಪಾಸಣೆಗೆ ಒಳಪಡಿಸಿ ಒಳಗೆ ಕಳಿಸಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿ ಮತಗಟ್ಟೆಯಲ್ಲಿ ಸಾಕಷ್ಟು ಜನ ಪೋಲಿಷರನ್ನು ನೇಮಿಸಲಾಗಿತ್ತು. ಹೀಗಿದ್ದೂ ಮತದಾನ ಭಯ, ಆತಂಕಗಳ ನಡುವೆಯೇ ಆರಂಭವಾಯಿತು. ಕೆಲವರು ಉತ್ಸಾಹದಿಂದ ಭಾಗವಹಿಸಿದರೆ, ಇನ್ನು ಕೆಲವರು ಅರೆಮನಸ್ಸಿನಿಂದ ಭಾಗವಹಿಸಿದರು. ಮತ್ತೆ ಕೆಲವರು ಮೊಟ್ಟಮೊದಲಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವದಕ್ಕೋಸ್ಕರ ಭಾಗವಹಿಸಿದರು. ಇದೀಗ ಎಣಿಕೆಯೆಲ್ಲಾ ಮುಗಿದು ಫಲಿತಾಂಶ ಹೊರಬಂದಿದ್ದು National Forces Alliance (NFA) ಬಹುಮತಗಳಿಸಿರುವದು ಬಹುತೇಕ ಖಚಿತವಾಗಿದೆ. ಲಿಬಿಯಾ ಪ್ರಜಾಪ್ರಭುತ್ವ ಸರಕಾರ ರಚನೆಗಾಗಿ ಉತ್ಸಾಹದಿಂದ ಮುನ್ನುಗ್ಗುತ್ತಿದೆ.
ಲಿಬಿಯಾದಲ್ಲಿ ಎದ್ದ ಕ್ರಾಂತಿ ತಣ್ಣಗಾದ ಮೇಲೆ ಈಗ್ಗೆ ಆರು ತಿಂಗಳ ಹಿಂದೆ ನಾನು ಮತ್ತೆ ನಮ್ಮ ವಿಶ್ವವಿದ್ಯಾನಿಲಯದ ಕರೆಯ ಮೇರೆಗೆ ನನ್ನ ಕೆಲಸಕ್ಕೆ ಬಂದು ಹಾಜರಾಗಿದ್ದೆ. ಆ ಪ್ರಕಾರ ನಾನಿಲ್ಲಿಗೆ ಬಂದಿಳಿದಾಗ ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ ಹೆಮ್ಮೆ ಈ ಜನರಲ್ಲಿರುತ್ತದೆ, ಹೊಸ ಗಾಳಿ ಬೀಸುತ್ತಿರುತ್ತದೆ. ಹೊಸ ಕನಸುಗಳು, ಹೊಸ ಚಿಂತನೆಗಳಿಗಾಗಿ ಜನರು ತುಡಿಯುತ್ತಿರುತ್ತಾರೆಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಈ ವಿಷಯದ ಕುರಿತಂತೆ ನಾನು ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸುತ್ತಾ ಹೋದೆ. ಆಗ ನನಗೆ ಸಿಕ್ಕ ಚಿತ್ರಣ ಅಚ್ಚರಿಯನ್ನು ಮೂಡಿಸಿತ್ತು. ಅವರು ಹೇಳಿದ್ದು ಹೀಗಿತ್ತು: “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ತಮಗೇ ಸೆಡ್ದು ಹೊಡೆದು ನಿಲ್ಲುತ್ತಾನೆ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರವಾದ ದ್ವೇಷವಿತ್ತು ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಹೀಗಾಗಿ ಅವನನ್ನು ಮುಗಿಸಿದರು. ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಮೇಲಾಗಿ ಗಡಾಫಿ ಇಡಿ ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಒಗ್ಗೂಡಿಸಿ “ಯುನೈಟೆಡ್ ನೇಶನ್ಸ್ ಆಫ್ ಆಫ್ರಿಕಾ” ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದ. ಒಂದುವೇಳೆ ಆಫ್ರಿಕಾ ಖಂಡದ ಎಲ್ಲ ರಾಷ್ಟ್ರಗಳು ಒಗ್ಗೂಡಿದ್ದರೆ ಎಲ್ಲ ರೀತಿಯಿಂದ ಅಮೆರಿಕಾಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ನು ಯಾವ ಭಯವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಟ್ಟಿದ್ದರು. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದ್ದೆ. ಅದಕ್ಕವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್‍ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್‍ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ ಮತ್ತು ಮಿತ್ರರಾಷ್ಟ್ರಗಳ ಪಾಲಾಗುತ್ತಿದೆ.” ಎಂದು ಕಣ್ಣೀರಿಟ್ಟಿದ್ದರು. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸಿದ್ದರು. ಅದೇನೆಂದರೆ ಈ ಅಮೆರಿಕನ್ನರಿಗೆ ಮತ್ತು ಮಿತ್ರರಾಷ್ಟ್ರಗಳಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಎಲ್ಲ ರೀತಿಯಿಂದ ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತ್ತಿರಲಿಲ್ಲ ಹಾಗೂ ಅವರ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಅಭಿವೃದ್ಧಿಗೆ ಭಾರಿ ಹಿನ್ನೆಡೆಯುನ್ನುಂಟು ಮಾಡಲಿದ್ದವು. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಟ್ಟಿದ್ದರು.
ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಸ್ವತಂತ್ರ ಅಬ್ಯರ್ಥಿ
ಈಗ ಅದೇ ಜನ ಬೇರೆ ದಾಟಯಲ್ಲಿ ಮಾತನಾಡುತ್ತಿದ್ದಾರೆ. ಹೋದವನು ಹೋದ ಇನ್ನು ಮುಂದಿನ ಬದುಕನ್ನು ನಾವು ಬದುಕಬೆಕಲ್ಲ. ಏನು ಮಾಡುವದು? ಸತ್ತವರಿಗಾಗಿ ಎಷ್ಟು ದಿನ ಅಂತಾ ಅಳುತ್ತಾ ಕೂರೋಕಾಗುತ್ತೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ವ್ಯಕ್ತಿಗಿಂತ ಬದುಕು ಮುಖ್ಯವಾಗುತ್ತದೆ ಎನ್ನುವದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಕೆಲವರು ಗಡಾಫಿಯ ಆಡಳಿತವನ್ನು ನೆನೆಯುತ್ತಾ ಅಂಥದೇ ಇನ್ನೊಂದು ಬರಲಿ ಎಂದು ಆಶಿಸುತ್ತಿದ್ದಾರೆ. ಇನ್ನು ಕೆಲವರು “Shit ಗಡಾಫಿ! ಅವನ ಕಾಲ ಮುಗಿಯಿತು. ಈಗೇನಿದ್ದರೂ ಹೊಸ ಸರಕಾರ, ಹೊಸ ಆಡಳಿತ, ಎಲ್ಲವೂ ಹೊಸತು” ಎಂದು ಹೇಳುತ್ತಾ ಹೊಸತನಕ್ಕೆ ಮುಖಮಾಡುತ್ತಿದ್ದಾರೆ. ನಾನು ಕ್ರಾಂತಿಯೆಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೆ ಬಂದಿಳಿದ ಹೊಸತರಲ್ಲಿ ಇಲ್ಲಿಯ ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರಾಗಿದ್ದರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. ಸರಕಾರ ಜನರ ಮೆಲೆ ಒತ್ತಡದ ತಂತ್ರವನ್ನು ಹೇರುವದರ ಮೂಲಕ ಅವರನ್ನು ತನ್ನತ್ತ ಬಗ್ಗಿಸಿಕೊಂಡಿತ್ತು. ಮೊನ್ನೆ ಕೂಡ ಗಡಾಫಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿರುವ ಇಲ್ಲಿನ (ಘಾಟ್‍ನ) ಕಾಲೊನಿಯೊಂದಕ್ಕೆ ಎರಡ ತಿಂಗಳ ಕಾಲ ನೀರು ಪೂರೈಸದೆ ಇದ್ದುದರಿಂದ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಂಗಾಮಿ ಸರಕಾರ ಅವರನ್ನು ಹತ್ತಿಕ್ಕಿ ನೀರು ಬಿಡುತ್ತೇವೆ, ನಮ್ಮನ್ನು ಒಪ್ಪಿಕೊಳ್ಳಿ ಎಂದು ಹೆದರಿಸಿತ್ತು. ಇದೀಗ ಅವರು ಹಂಗಾಮಿ ಸರಕಾರಕ್ಕೆ ಜೈ ಹೇಳಿ ಎಲ್ಲವನ್ನೂ ಸುಲಭವಾಗಿಸಿಕೊಂಡಿದ್ದಾರೆ. ಮೊನ್ನೆ ಹಂಗಾಮಿ ಸರಕಾರ ದಕ್ಷಿಣ ಭಾಗದ ಎಲ್ಲ ಸರಕಾರಿ ಕಛೇರಿಗಳಿಗೆ ಗಡಾಫಿಯ ಹೆಸರನ್ನು ಎಲ್ಲೂ ಎತ್ತಕೂಡದು ಹಾಗೆ ಒಂದುವೇಳೆ ಉಪಯೋಗಿಸಿದರೆ ಅಂಥವರನ್ನು ಉಗ್ರವಾಗಿ ಶಿಕ್ಷಿಸಲಾಗುವದು ಎನ್ನುವ ಸುತ್ತೋಲೆಯನ್ನು ಹೊರಡಿಸುವದರ ಮೂಲಕ ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಿದ್ದರು. ಜೊತೆಗೆ ಚುನಾವಣೆಯ ನಂತರ ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನುವ ಭರವಸೆಯನ್ನೂ ನೀಡೀದ್ದಾರೆ.
ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಮತ್ತೊಬ್ಬ ಸ್ವತಂತ್ರ ಅಬ್ಯರ್ಥಿ
ಈಗ ಜನ ಯಾವ ಸರಕಾರ ಬಂದರೇನಂತೆ ನಮಗೆ ಒಳ್ಳೆಯದು ಮಾಡಿದರೆ ಸಾಕು ಎಂದು ನಿಟ್ಟುಸಿರಿಡುತ್ತಿದ್ದಾರೆ. ಅದು ಅವರ ಭಯವೋ? ಪ್ರೀತಿಯೋ? ಅಥವಾ ಬದಲಾವಣೆಯತ್ತ ಹೊಸಹೆಜ್ಜೆಯೋ? ಅಂತೂ ಲಿಬಿಯಾದ ಜನತೆ ಹೊಸತನವನ್ನು ಒಪ್ಪಿಕೊಳ್ಳುತ್ತಾ ಹೊಸದಿಕ್ಕಿನತ್ತ ಹೆಜ್ಜೆಹಾಕುತ್ತಿದ್ದಾರೆ. ಎಲ್ಲರೀತಿಯಿಂದ ಲಿಬಿಯಾಕ್ಕೆ ಹೊಸ ಭವಿಷ್ಯ ಸಿಗುವ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತಿವೆ. ಕಾಲಾಯ ತಸ್ಮೇ ನಮಃ!
-ಉದಯ್ ಇಟಗಿ
ಇಂದು ಸಂಜೆ ಅಷ್ಟಾವಧಾನ
2 ದಿನಗಳ ಹಿಂದೆ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ