ಅಪ್ಪನೇ,
ನಾನು ನಿನ್ನನ್ನು ಹೀಗೆ ನೇರಾನೇರ ಬರೀ “ಅಪ್ಪನೇ” ಎಂದು ಕರೆದಿದ್ದು ನಿನಗೆ ಕಸಿವಿಸಿಯೆನಿಸುತ್ತಿರಬಹುದು. ಅಥವಾ ಅನ್ನಿಸದೆಯೂ ಇರಬಹುದು! ಕಸಿವಿಸಿ ಯಾಕೆಂದರೆ ಸೌಜನ್ಯಕ್ಕಾದರೂ ನನ್ನ ಮಗ ನನ್ನನ್ನು “ಪ್ರೀತಿಯ ಅಪ್ಪನೇ” ಎಂದು ಸಂಬೋಧಿಸಬಹುದಿತ್ತಲ್ಲ ಎಂದು! ಕ್ಷಮಿಸು! ನಾನು ನಿನನ್ನು ಹಾಗೆ ಕರೆಯಲಾರೆ! ಏಕೆಂದರೆ ನೀನು ಬರೀ ಅಪ್ಪನಾಗಿಯೇ ಉಳಿದೇ ಹೊರತು ನಮಗ್ಯಾರಿಗೂ ಪ್ರೀತಿಯ ಅಪ್ಪನಾಗುವ ಪ್ರಯತ್ನವನ್ನು ನೀನು ಯಾವತ್ತೂ ಮಾಡಲಿಲ್ಲ! ಪ್ರೀತಿಗೆ ಪಾತ್ರರಾಗದವರನ್ನು “ಪ್ರಿತಿಯ” ಎಂದು ಕರೆಯುವದಾದರೂ ಹೇಗೆ?
ಹಾಗಂತ ನನಗೆ ಸೌಜನ್ಯವಾಗಲಿ, ಪ್ರೀತಿಸುವದಾಗಲಿ ಗೊತ್ತಿಲ್ಲ ಅಂತಾ ಅಲ್ಲಾ! ಖಂಡಿತ ಇದೆ! ನಿನ್ನ ಹೊಟ್ಟೆಯಲ್ಲಿ ಹುಟ್ಟಿಯೂ ನಿನ್ನಂತಾಗದೆ ಅದ್ಭುತವಾಗಿ ಪ್ರಿತಿಸುವದನ್ನು ಕಲಿತಿದ್ದೇನೆ, ಜವಾಬ್ದಾರಿಗಳನ್ನು ನಿರ್ವಹಿಸುವದನ್ನು ಕಲಿತಿದ್ದೇನೆ, ಕರ್ತವ್ಯಗಳನ್ನು ನಿಭಾಯಿಸುವದನ್ನು ಕಲಿತಿದ್ದೇನೆ. ಹೆಂಡತಿ-ಮಗಳ ಬೇಕು-ಬೇಡಗಳನ್ನು ಗಮನಿಸುವದನ್ನು ಕಲಿತಿದ್ದೇನೆ. ನಿನ್ನಂತೆ ಉಂಡಾಡಿ ಗುಂಡನಾಗದೆ ಘನತೆಯ ಬದುಕನ್ನು ಬದುಕುವದನ್ನು ಕಲಿತಿದ್ದೇನೆ!
ನಿನಗೀಗ ಎಪ್ಪತ್ತೈದೋ ಎಪ್ಪತ್ತಾರೋ? ನನಗೆ ಮೂವತ್ತೆಂಟು! ಇವತ್ತು ಕುಳಿತುಕೊಂಡು ಈ ಮೂವತ್ತೆಂಟು ವರ್ಷಗಳಲ್ಲಿನ ನನ್ನ ನೆನಪುಗಳಲ್ಲಿ ನೀನೆಲ್ಲಿ? ಎಂದು ಹುಡುಕುತ್ತಿದ್ದೇನೆ. ಊಹೂಂ, ಎಲ್ಲೂ ನಿನ್ನ ಸುಳಿವೇ ಇಲ್ಲ! ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಇನ್ನೂ ಏನೇನೋ ನೆನಪುಗಳು ಅಂತಾ ಹೇಳುತ್ತಾರಲ್ಲ? ಇದ್ಯಾವ ನೆನಪುಗಳನ್ನು ನೀನು ನನಗೆ ಕೊಡದೆ ನನ್ನನ್ನು ವಂಚಿಸಿಬಿಟ್ಟಿ!
ಯಾವತ್ತಾದರೂ ನೀನು ನನ್ನನ್ನು ನಿನ್ನ ಹೆಗಲ ಮೇಲೆ ಹೊತ್ತು ತಿರುಗಾಡಿದ್ದು, ನಿನ್ನ ನೋಡಿದ ಕೂಡಲೇ ನಾನು ನನ್ನ ಎರಡೂ ಕೈ ಚಾಚಿ ನಕ್ಕಿದ್ದು, ಒಂದು ದಿನವಾದರೂ ನನ್ನ ಕೈ ಹಿಡಿದು ನಡೆಸಿದ್ದು, ಒಂದು ನಾಲ್ಕು ರಸ್ತೆ ಸುತ್ತಿಸಿದ್ದು, ಹತ್ತಿರ ಕೂತು ಮಾತನಾಡಿದ್ದು, ಪ್ರೀತಿಯಿಂದ ನನ್ನ ಕರೆದಿದ್ದು, ಯಾವ ಸ್ಕೂಲು? ಏನು? ಎಂದು ವಿಚಾರಿಸಿದ್ದು. ಊಹೂಂ, ಒಂದೂ ನನ್ನ ನೆನಪಲ್ಲಿಲ್ಲ! ನಿನ್ನ ನೆನಪಲ್ಲೇನಾದರೂ ಇದೆಯಾ? ಹೋಗಲಿ, ನಾನು ಅಪ್ಪ ಎಂಬ ಸಲಿಗೆಯಿಂದ ನಿನ್ನ ಹತ್ತಿರ ಯಾವತ್ತಾದರೂ ಹಟ, ರಚ್ಚೆ ಹಿಡಿದಿದ್ದು, ಅದಕ್ಕೆ ಪ್ರತಿಯಾಗಿ ನೀನು ಗದರಿದ್ದು ನೆನಪಿದಿಯಾ? ಬಹುಶಃ, ಇರಲಿಕ್ಕಿಲ್ಲ! ಪ್ರೀತಿಸಿದರೆ ತಾನೆ? ದಂಡಿಸುವ ಹಕ್ಕು ಬರೋದು?
ಇನ್ನು ಕಸಿವಿಸಿ ಅನಿಸದಿರಬಹುದು ಎಂದು ಹೇಳಿದ್ದು ಇಷ್ಟು ದಿನ ಯಾವೊಂದೂ ವಿಷಯಕ್ಕೆ ಕಸಿವಿಸಿಗೊಳ್ಳದವ ‘ಪ್ರೀತಿಯ’ ಎನ್ನುವ ಒಂದೇ ಒಂದು ಪದವನ್ನು ಪ್ರಯೋಗಿಸದಿದ್ದಕ್ಕೆ ಕಸಿವಿಸಿಗೊಳ್ಳುತ್ತೀಯಾ ಎಂದು ನನಗೆ ಅನಿಸುವದಿಲ್ಲ. ಏಕೆಂದರೆ ಏನು ತಿವಿದರೂ ಏನು ಅಂದರೂ ಏನೂ ಆಗದವ ನೀನು! ಏನೊಂದೂ ಆಗದವರ ಹತ್ತಿರ ಪ್ರೀತಿಯ ಅಗಾಧತೆ ಮತ್ತು ಅದಕ್ಕಂಟಿ ಬರುವ ಜವಾಬ್ದಾರಿಗಳ ಕುರಿತು ಮಾತನಾಡುವದರಲ್ಲಿ ಏನು ಅರ್ಥವಿದೆ?
ನನಗೆ ಗೊತ್ತು ನನ್ನ ಈ ಪತ್ರ ನಿನ್ನ ಮನಸ್ಸನ್ನಾಗಲಿ, ಮಿದುಳನ್ನಾಗಲಿ ತಟ್ಟಲಾರದೆಂದು. ಆದರೂ ಇದನ್ನು ಬರೆಯುತ್ತಿದ್ದೇನೆ! ಏಕೆ ಗೊತ್ತಾ? ನನ್ನೊಳಗಿನ ಸಿಟ್ಟನ್ನು, ಕೇವಲ ನನ್ನೊಳಗಿನ ಸಿಟ್ಟನ್ನು ಹೊರಹಾಕುವದಕ್ಕೆ ಮಾತ್ರ! ಅದಾಗಲೇ ನಿನ್ನ ಬಗ್ಗೆ ಆಗಾಗ ಅಲ್ಲಲ್ಲಿ ಅಷ್ಟಿಷ್ಟು ಬರೆದು ನನ್ನ ಸಿಟ್ಟನ್ನು, ಆಕ್ರೋಶವನ್ನು ಹೊರಹಾಕಿದ್ದೇನೆ. ಆದರೂ ಕಮ್ಮಿಯಾಗಿಲ್ಲ ನೋಡು! ಹೊರಹಾಕಿದಷ್ಟೂ ಮತ್ತೆ ಮತ್ತೆ ಉಕ್ಕಿ ಬರುತ್ತಲೇ ಇರುತ್ತದೆ!
ಅಪ್ಪ ನನಗೆ ಬರೀ ನೆನಪು! ಎದುರಿಗೆ ಅಲೆದಾಡೋ ನೀನು ಅವನ ಭೂತ! ಜೀವಂತವಾಗಿದ್ದು ಇಲ್ಲದೆ ಛಾಯೆಯಾಗಿ ಬದುಕುವ ಸ್ಥಿತಿ ತಲುಪಿ ಬಿಟ್ಟಿದ್ದೀಯಾ. ಏಕೆಂದರೆ ನಾನು ಬುದ್ಧಿ ಬಂದಾಗಿಂದ ನಿನ್ನೊಟ್ಟಿಗಿನ ನನ್ನ ತಂತುಗಳನ್ನು ಕಡಿದುಕೊಂಡು ಬಂದಿದ್ದೇನೆ. ಒಂದು ವೇಳೆ ನೀನು ಇಲ್ಲದೇ ಇದ್ದಿದ್ದರೆ ನಿನ್ನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುತಿದ್ದೆ. ಎದುರಿಗಿದ್ದು ಇಲ್ಲದ ಹಾಗೆ ಆದೆಲ್ಲ! ನನಪಿನಲ್ಲಿ ಎದುರುಗಡೆ ಕೂತು ಕೈಗೆ ಸಿಗದೆ, ಕನಸಿನಲ್ಲೂ ತಂದೆ ಸುಖ ಇಲ್ಲದ ಹಾಗೆ ಮಾಡಿದೆಯೆಲ್ಲ? ನಾನಿವತ್ತು ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ ನಿನ್ನಂತ ಅಪ್ಪನಿಗೆ ಮಗನಾಗಿ ಹುಟ್ಟಿಯೂ ನಾನು ನಿನ್ನಂತಾಗದೆ ನನ್ನ ಬುದ್ಧಿ ಮತ್ತು ಚೈತನ್ಯದ ಮೇಲೆ ಮೇಲೆ ಬಂದಿದ್ದೇನೆಂದು ಹೇಳಲು! ಅದಕ್ಕೆ ನಿನ್ನ ಜೀನ್ಸ್ ಗಳು ಸಹಕಾರಿಯಾಗಿರಬಹುದು ಎಂದು ನೀನು ಒಳಗೊಳಗೆ ಎಣಿಸಿ ಹೆಮ್ಮಪಡುತ್ತಿದ್ದರೆ ಅದು ನಿನ್ನ ತಪ್ಪು! ಏಕೆಂದರೆ ನಿನ್ನ ಜೀನ್ಸ್ ಗಳೇನಿದ್ದರೂ ನನ್ನನ್ನು ನಿನ್ನಂತೆ ಕಾಣಿಸಿಕೊಳ್ಳುವದರಲ್ಲಿ ಮಾತ್ರ ಸಹಕಾರಿಯಾದವೇ ಹೊರತು ನಿನ್ನ ಬುದ್ಧಿ ಮತ್ತು ಗುಣವನ್ನು ರೂಪಿಸುವಲ್ಲಿ ಅಲ್ಲ! ಹಾಗೆಂದೇ ನಾನಿವತ್ತು ಎಲ್ಲ ಸ್ತರಗಳಲ್ಲಿ ನಿನಗಿಂತ ಎಷ್ಟೋ ಭಿನ್ನವಾಗಿ ನಿಂತಿದ್ದೇನೆ!
ಅಂದಹಾಗೆ ನೀನು ನನಗೆ ನಿನ್ನ ಜೀನ್ಸ್ ಗಳನ್ನು ಕೊಡುವದರ ಜೊತೆಗೆ ಒಂದಿಷ್ಟು ಪ್ರಿತಿಯನ್ನೂ ಕೊಟ್ಟಿದ್ದಿದ್ದರೆ ಬಹುಶಃ, ಇವತ್ತು ಯಾವ ಮಕ್ಕಳೂ ಬರೆಯಲಾರದಂಥ ಅದ್ಭುತವಾದಂಥ ಒಲುಮೆಯ ಪತ್ರವೊಂದನ್ನು ನಿನಗೆ ಬರೆದು ನಿನ್ನನ್ನು ಈ ಜಗತ್ತು ಹಾಡಿ ಹೊಗಳುವಂತೆ ಮಾಡುತ್ತಿದ್ದೆನೇನೋ!
ಕ್ಷಮಿಸು, ಆ ಅದೃಷ್ಟಕ್ಕೆ ನೀನು ಪಾತ್ರನಾಗಲಿಲ್ಲ!
ಇತಿ ನಿನ್ನ ಮಗ
ಉದಯ್ ಇಟಗಿ

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ