ನಾನು ಈ ಹಿಂದೆ ಗಡಾಫಿ ಕಾಲದ ಇಲ್ಲಿಯ ಸಮಾನತೆಯ ಸಿದ್ಧಾಂತದ ಬಗ್ಗೆ ಹೇಳಿದ್ದೆ. ಈ ತೆರದ
ಸಮಾನತೆಯ ಪರಿಕಲ್ಪನೆ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಹೇಗೆ ಇರಲು ಸಾಧ್ಯ? ಎಂದು ಆಶ್ಚರ್ಯ ಮತ್ತು ಅನುಮಾನಗಳೆರೆಡನ್ನೂ ಒಟ್ಟಿಗೆ
ವ್ಯಕ್ತಪಡಿಸಿದ್ದೆ. ಆದರೆ ಒಂದು ದಿನ ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ಸಿಕ್ಕ ಗಡಾಫಿಯ “ದಿ
ಗ್ರೀನ್ ಬುಕ್” ಎಂಬ ಪುಸ್ತಕ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ಓದುತ್ತಿದ್ದಂತೆ
ಆತನ ವಿಚಾರಧಾರೆಗಳಿಗೆ ನಿಬ್ಬೆರಗಾಗಿದ್ದೆ. ಸಪ್ಟಂಬರ್ 1, 1969 ರಂದು ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ಗಡಾಫಿ 1972 ರಲ್ಲಿ ಆ ಹುದ್ದೆಗೆ
ರಾಜೆನಾಮೆಯನ್ನಿತ್ತು “Brotherly
Leader and Guide of the First of September Great Revolution of the Socialist
People's Libyan Arab Jamahiriya” ಎನ್ನುವ ಆಕರ್ಷಕ
ಬಿರದನ್ನು ಧರಿಸಿಕೊಂಡು ಲಿಬಿಯಾವನ್ನು ಆಳತೊಡಗಿದ. ಇದು ಹಲವರಲ್ಲಿ ಭರವಸೆಯನ್ನು ಮೂಡಿಸಿತು. ಏಷ್ಯಾ
ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ
ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡನು. ಬಹಳ ಬೇಗನೆ ಗಡಾಫಿ
ಲಿಬಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಲಿಬಿಯಾವನ್ನು ಇಡಿ ಆಫ್ರಿಕಾ ಖಂಡದಲ್ಲಿ
ಮುಂಚೂಣಿಯಲ್ಲಿರುವ ರಾಷ್ಟ್ರವನ್ನಾಗಿ ಮಾಡಿದ.
ಮಾವೋನ “ಲಿಟಲ್ ರೆಡ್ ಬುಕ್” ನಂತೆ ಗಡಾಫಿ ಕೂಡಾ 1975 ರಲ್ಲಿ ಅಂದರೆ ತಾನು ಅಧಿಕಾರಕ್ಕೆ ಬಂದು ಆರು ವರ್ಷಗಳ ನಂತರ ಲಿಬಿಯಾ
ಅಳವಡಿಸಿಕೊಂಡಿದ್ದ ಸಂವಿಧಾನವನ್ನು ರದ್ದು ಮಾಡಿ ತನ್ನದೇ ಆದ್ “ದಿ ಗ್ರೀನ್ ಬುಕ್” ನ್ನು ಪ್ರಕಟಿಸಿ ಅದರನುಸಾರ ಆಡಳಿತ ನಡೆಸತೊಡಗಿದ. ಗಡಾಫಿ ಇದರಲ್ಲಿ ತನ್ನ ಹೊಸ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ಮಂಡಿಸುವದರ
ಮೂಲಕ ಜಗತ್ತನ್ನು ನಿಬ್ಬೆರೆಗುಗೊಳಿಸಿದ್ದ. ಎಂದಿನಂತೆ ಅವನ “ಗ್ರೀನ್ ಬುಕ್” ಕುರಿತು ಬಹಳಷ್ಟು
ಜನ ಬಹಳಷ್ಟು ಮಾತನಾಡಿದ್ದರು: ಇದೊಂದು ಗಡಾಫಿಯ ಸುಳ್ಳು ಚಿಂತನೆಗಳ ಪುಸ್ತಕ. ಇದೊಂದು ಜನರ
ಕಣ್ಣೊರೆಸುವ ತಂತ್ರ. ಈ ಪುಸ್ತಕವನ್ನು ಮುಂದಿಟ್ಟುಕೊಂಡು ಗಡಾಫಿ ಲಿಬಿಯಾದ ಜನತೆಯನ್ನು ತನ್ನತ್ತ
ಒಲಿಸಿಕೊಳ್ಳುವದರ ಮೂಲಕ ನಿಧಾನವಾಗಿ ಅವರನ್ನು ತನ್ನ ಹತೋಟಿಗೆ ತೆಗೆದುಕೊಂಡ, ಹಾಗೆ ಹೀಗೆ ಇನ್ನೂ ಏನೇನೋ ಮಾತಾಡಿದರು. ಆದರೆ ಆತನ
“ಗ್ರೀನ್ ಬುಕ್” ಬಹಳ ಬೇಗನೆ ಲಿಬಿಯಾದ ತುಂಬಾ
ಜನಪ್ರಿಯತೆಯನ್ನು ಪಡೆದಿದ್ದು ಮಾತ್ರ ಸುಳ್ಲಲ್ಲ. ಶಾಲಾ, ಕಾಲೇಜುಗಳಲ್ಲಿ ಸಹ ಪಠ್ಯಪುಸ್ತಕವಾಗಿ
ಅಳವಡಿಕೆಯಾಯಿತು. ಮಕ್ಕಳು, ಯುವಕರು, ಹಿರಿಯರು ಆತನ ಚಿಂತನೆಗಳಿಂದ ಪ್ರಭಾವಿತರಾದರು. ಹೀಗೆ ಗಡಾಫಿ
ತನ್ನ “ಗ್ರೀನ್ ಬುಕ್” ಚಿಂತನೆಗಳ ಮೂಲಕ ಜನರ ಮನಸ್ಸಿನಲ್ಲಿ ಬಹಳ ಬೇಗನೆ ಗಟ್ಟಿಯಾಗಿ ತಳವೂರಿದ.
ಕೆಲವು ತಜ್ಞರು “ಗ್ರೀನ್ ಬುಕ್” ನಲ್ಲಿ ಮಂಡಿಸಿದ ಗಡಾಫಿಯ ರಾಜಕೀಯ ಮತ್ತು ಆರ್ಥಿಕ
ಚಿಂತನೆಗಳನ್ನು ರೂಸೋ, ಕಾರ್ಲ್ ಮಾರ್ಕ್ಸ್, ಮತ್ತು ಮಾವೋನ
ಚಿಂತನಗಳಿಗೆ ಹೋಲಿಸಿದ್ದರು. ಇನ್ನು ಕೆಲವರು ಇಸ್ಲಾಮಿಕ್ ತತ್ವಗಳನ್ನು
ಮೂಲವಾಗಿಟ್ಟುಕೊಂಡು ಅವುಗಳ ಆಧಾರದ ಮೇಲೆ ತನ್ನ ಚಿಂತನೆಗಳನ್ನು ರೂಪಿಸಿದ್ದಾನೆ ಎಂದು
ಹೇಳಿದ್ದರು. ಆದರೆ 1979 ರಲ್ಲಿ ಇಂಗ್ಲೀಷ್
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಗಡಾಫಿ ಅತ್ಯಂತ ಆತ್ಮವಿಶ್ವಾಸದಿಂದ ತನ್ನ “ಹಸಿರು
ಪುಸ್ತಕ” (ಗ್ರೀನ್ ಬುಕ್) ದ ಬಗ್ಗೆ ಹೀಗೆ ಹೇಳಿದ್ದ: ಅಮೆರಿಕಾ ನಮ್ಮ ಮೇಲೆ ಯುದ್ಧ ಸಾರಬಹುದು,
ಪಶ್ಚಿಮದವರು ನಮ್ಮನ್ನು ಹೊಸಕಿ ಹಾಕಬಹುದು. ಚಿಂತೆಯಿಲ್ಲ. ಆದರೆ ನನ್ನ “ಹಸಿರು ಪುಸ್ತಕ” ಈ
ಜಗತ್ತಿನೊಡನೆ ಸದಾ ಮಾತನಾಡುತ್ತಿರುತ್ತದೆ. ಆ ನಿಟ್ಟಿನಲ್ಲಿ ಅವನ ಗ್ರೀನ್ ಬುಕ್ ಇಲ್ಲಿಯವರ
ಪಾಲಿಗೆ ಒಂದು ಅಮೂಲ್ಯ ಗ್ರಂಥದಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವರೆಲ್ಲಾ ಹಸಿರು ಪುಸ್ತಕವೇ
ತಮ್ಮ ಉಸಿರು, ತಮ್ಮ ಉಸಿರೇ ಹಸಿರು ಪುಸ್ತಕವೆಂದು ನಂಬಿದ್ದರು.
ಹಾಗಾದರೆ “ಗ್ರೀನ್ ಬುಕ್” ನಲ್ಲಿ ನಿಜಕ್ಕೂ ಇದ್ದಿದ್ದೇನು? ಅದರಲ್ಲಿ ಗಡಾಫಿ ಏನು ಹೇಳಿದ್ದ?
ಬನ್ನಿ ನೋಡೋಣ. ಗಡಾಫಿಯ ಗ್ರೀನ್ ಬುಕ್‍ನ ಮೊದಲ ಪುಟಗಳು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು
ಟೀಕಿಸುವದರೊಂದಿಗೆ ಆರಂಭವಾಗುತ್ತವೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷ ಹೆಚ್ಚು
ಮತಗಳನ್ನು ಪಡೆದುಕೊಳ್ಳುತ್ತದೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಉದಾಹರಣೆಗೆ ‘ಎ’ ಮತ್ತು ‘ಬಿ’
ಎನ್ನುವ ಪಕ್ಷಗಳಿವೆ ಅಂದುಕೊಳ್ಳೋಣ. ಚುನಾವಣೆಯಲ್ಲಿ ‘ಎ’ ಪಕ್ಷ 51% ರಷ್ಟು ಮತಗಳನ್ನು ಹಾಗೂ ‘ಬಿ’ ಪಕ್ಷ 49% ಮತಗಳನ್ನು ಪಡೆದುಕೊಂಡರೆ ಸಹಜವಾಗಿ 51% ರಷ್ಟು ಮತಗಳನ್ನು ಪಡೆದುಕೊಂಡ ಪಕ್ಷ ಅಧಿಕಾರಕ್ಕೆ
ಬರುತ್ತದೆ. ಅಂದರೆ ಉಳಿದ 49% ಜನಕ್ಕೆ ಆ ಸರಕಾರ
ಇಷ್ಟವಿಲ್ಲವೆಂದೇ ಅರ್ಥ. ಆದರೂ ಅವರು 51% ರಷ್ಟು ಮತಗಳನ್ನು
ಪಡೆದು ಅಧಿಕಾರಕ್ಕೆ ಬಂದ ಸರಕಾರದ ಅಧೀನಕ್ಕೆ ಒಳಪಡುತ್ತಾರೆ ಮತ್ತು ಅವರು ಏನು ಹೇಳುತ್ತಾರೋ
ಅದನ್ನಿವರು ಕೇಳಿಕೊಂಡಿರಬೇಕಾಗುತ್ತದೆ. ಅಷ್ಟಕ್ಕೂ ನಿಜವಾದ ಪ್ರಜಾಪ್ರಭುತ್ವ ಎಂದರೆ ಅಲ್ಲಿ ಯಾವುದೇ ಪಕ್ಷಗಳಿರುವದಿಲ್ಲ.
ಏಕೆಂದರೆ ಪಕ್ಷಗಳನ್ನು ಕಟ್ಟುವದೆಂದರೆ ಸಮಾಜವನ್ನು ಒಡೆದು ಎರಡು ಹೋಳು ಮಾಡಿದಂತೆ. ಒಂದು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ನೇರವಾಗಿ ಎಲ್ಲದರಲ್ಲೂ ಭಾಗಿಯಾಗಬೇಕೆ ಹೊರತು ಅವರು ಚುನಾಯಿಸಿದ
ಪ್ರತಿನಿಧಿಗಳಲ್ಲ. ಆದರೆ ಬಹಳಷ್ಟು ರಾಜಕೀಯ ತಜ್ಞರು ಗಡಾಫಿ ತನ್ನ ಈ ಸಿದ್ಧಾಂತವನ್ನು ಲಿಬಿಯನ್‍ರ
ಮೇಲೆ ಒಂದು ಅಸ್ತ್ರದಂತೆ ಉಪಯೋಗಿಸಿದನೆಂದು ಕಟುವಾಗಿ ಟೀಕಿಸುತ್ತಾರೆ. ಗಡಾಫಿ ಪ್ರಜಾಪ್ರಭುತ್ವ
ವ್ಯವಸ್ಥೆಯ ಬಗೆಗಿನ ಹುಳುಕುಗಳನ್ನು ಲಿಬಿಯಾದ ಜನತೆಗೆ ಮನದಟ್ಟುಮಾಡುತ್ತಾ ಅವರನ್ನು ತನ್ನ
ಸಮಾಜವಾದ ಸಿದ್ಧಾಂತದ ಬಲೆಗೆ ಹಾಕಿಕೊಳ್ಳುತ್ತಾ ಅವರನ್ನು ಮರಳುಮಾಡಿದನಲ್ಲದೆ ಅಲ್ಲಿ ಪ್ರಜಾರಾಜ್ಯ
ಸ್ಥಾಪನೆಯಾಗದಂತೆ ಎಚ್ಚರಿಕೆವಹಿಸಿದ ಎಂದು ಹೇಳುತ್ತಾರೆ.
ಎರಡನೆಯ ಭಾಗದಲ್ಲಿ ಸಮಾಜವಾದ ಹಾಗೂ ಆರ್ಥಿಕ ವ್ಯವಸ್ಥೆ ಬಗ್ಗೆ ಹೇಳುತ್ತಾನೆ. ಒಂದು ಸಮಾಜವಾದ
ಸಮಾಜದಲ್ಲಿ ದಿನಗೂಲಿಗಳಿರುವದಿಲ್ಲ. ಒಂದುವೇಳೆ ಇದ್ದರೂ ಅವರನ್ನು ಕೂಲಿಗಳೆಂದು ಕರೆಯಬೇಡಿ.
ಬದಲಾಗಿ ಅವರನ್ನು ನಿಮ್ಮ ಸಹಕೆಲಸಗಾರರೆಂದು ಭಾವಿಸಿ. ಅವರು ನಿಮಗಿಂತ ಕೆಳಗಿನ ದರ್ಜೆಯವರಲ್ಲ. ಅವರು ನಿಮ್ಮಷ್ಟೇ ಸಮಾಜದ ಏಳ್ಗೆಗಾಗಿ ತಮ್ಮದೇ
ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಹಾಗೂ ಸಮಾಜದಲ್ಲಿ ಸಹಭಾಗಿಗಳಾಗಿದ್ದಾರೆ ಎಂಬುದು ನಿಮ್ಮ
ನೆನಪಿನಲ್ಲಿರಲಿ. ದಿನಗೂಲಿಗಳು ತಮ್ಮ ಒಡೆಯನಿಗೆ ಯಾವತ್ತಿದ್ದರೂ ಗುಲಾಮರಾಗಿರುತ್ತಾರೆ. ಗುಲಾಮಗಿರಿ ಪದ್ಧತಿಯನ್ನು ಹೋಗಲಾಡಿಸಲಿರುವ
ಒಂದೇ ಒಂದು ಅತ್ಯುತ್ತಮ ಮಾರ್ಗವೆಂದರೆ ಆ ಪದ್ಧತಿಯನ್ನೇ ತೆಗೆದುಹಾಕುವದು. ಹಾಗೆಂದೇ ಇಲ್ಲಿ
ಕೂಲಿಯವರು ನಿಮಗೆ ಹೆಚ್ಚಾಗಿ ಕಾಣಿಸುವದಿಲ್ಲ. ಏಕೆಂದರೆ ಗಡಾಫಿ ಪ್ರತಿಯೊಂದು ಕುಟಂಬವು ತಮ್ಮ
ದಿನನಿತ್ಯದ ಮನೆಗೆಲಸವನ್ನು ತಾವೇ ಮಾಡುವಂತಾಗಬೇಕು ಎಂದು ಹೇಳಿದ್ದ. ಆತನ ದೃಷ್ಟಿಯಲ್ಲಿ ಮನೆಯಾಳುಗಳು
ತಮ್ಮ ಕೆಲಸಕ್ಕೆ ವೇತನವನ್ನು ಪಡೆಯಲಿ ಅಥವಾ ಪಡೆಯದಿರಲಿ ಅವರು ಯಾವತ್ತಿದ್ದರೂ ಗುಲಾಮರೇ. ಒಬ್ಬ ಖೈದಿ ಮತ್ತು ಒಬ್ಬ ಆಳು ಹೆಚ್ಚು ಕಮ್ಮಿ ಇಬ್ಬರೂ
ಒಂದೇ. ಏಕೆಂದರೆ ಇಬ್ಬರೂ ಸದಾ ಬಂಧಿಗಳು. ದಿನಗೂಲಿಗಳ ಬಗ್ಗೆ ಇದ್ದ ಅವನ ಅತೀವ ಕಾಳಜಿಯು ಇಲ್ಲಿಯ
ಜನರ ಮೇಲೆ ಗಾಢ ಪರಿಣಾಮ ಬೀರಿದೆ. ಹಾಗೆಂದೇ ಇಲ್ಲಿಯ ಟ್ಯಾಕ್ಷಿ ಡ್ರೈವರ್ ಗಳು ನಿಮ್ಮ ಲಗೇಜ್‍ನ್ನು
ಎತ್ತಿಡಲಾರರು, ಇಳಿಸಲಾರರು. ಒಂದು ವೇಳೆ ನಿಮ್ಮ ಲಗೇಜ್ ತೀರಾ ಭಾರವಾಗಿದ್ದರೆ ನೀವು ಅವರನ್ನು
ವಿನಂತಿಸಿಕೊಂಡರೆ ಮಾತ್ರ ಮಾನವೀಯತೆ ದೃಷ್ಟಿಯಿಂದ ಅವರು ಎತ್ತಿಡುವದು ಇಲ್ಲವೇ ಇಳಿಸುವದನ್ನು
ಮಾಡುತ್ತಾರೆ. ಇಲ್ಲವಾದರೆ ನೀವೇ ಅಷ್ಟೂ ಕೆಲಸವನ್ನು ಮಾಡಬೇಕು. ಮೇಲಾಗಿ ಇಲ್ಲಿಯವರಿಗೆ ಯಾವುದೇ dignity of labor ಇಲ್ಲ. ನಾನು ಟ್ರಿಪೋಲಿಯಲ್ಲಿ ಎಷ್ಟೋ ಸಾರಿ ಟ್ಯಾಕ್ಷಿಗಳಲ್ಲಿ
ಓಡಾಡುತ್ತಿರಬೇಕಾದರೆ ಆ ಡ್ರೈವರ್ ಗಳನ್ನು ಮಾತನಾಡಿಸಿದ್ದೇನೆ. ಎಷ್ಟೊ ಜನಕ್ಕೆ ಇದು ಪಾರ್ಟ್ ಟೈಂ
ಕೆಲಸ. ಬೆಳಿಗ್ಗೆ ಹೊತ್ತು ಅವರು ಶಿಕ್ಷಕರೋ, ಉಪನ್ಯಾಸಕರೋ ಅಥವಾ ಬೇರೆ ಏನೋ ಆಗಿ ಕೆಲಸ
ಮಾಡುತ್ತಿರುತ್ತಾರೆ. ಆದರೆ ನಿಮ್ಮ ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ ಎಂದು ಹೇಳುತ್ತಿದ್ದ
ಗಡಾಫಿ ತನ್ನ ಮನೆತುಂಬಾ ನರ್ಸ್‍ಗಳನ್ನು ಹಾಗೂ ಅನೇಕ ಕೆಲಸಗಾರರನ್ನು ಇಟ್ಟುಕೊಂಡಿದ್ದು ಮಾತ್ರ
ವಿಪರ್ಯಾಸ!
ಗಡಾಫಿ ತನ್ನ ದೇಶದ ಜನರೆಲ್ಲರೂ ಸ್ವಂತ ಮನೆಯೊಂದನ್ನು
ಹೊಂದುವಂತಾಗಬೇಕು ಎಂಬ ಕನಸು ಕಂಡಿದ್ದ. ಅವನ ಪ್ರಕಾರ ಇನ್ನೊಬ್ಬರ ಮನೆಯಲ್ಲಿ ವಾಸಿಸುವ ವ್ಯಕ್ತಿ ಬಾಡಿಗೆ
ನೀಡಲಿ ಬಿಡಲಿ ಅವನು ಆ ಮನೆಯ ಮಾಲಿಕನಿಗೆ ಯಾವತ್ತಿದ್ದರೂ ಗುಲಾಮನಾಗಿರಬೇಕಾಗಿರುತ್ತದೆ. ಹಾಗೆಂದೇ
ಅವನು ಇಲ್ಲಿಯ ಪ್ರತಿಯೊಂದು ಸಂಸಾರಕ್ಕೆ ಒಂದೊಂದು ಮನೆಯನ್ನು ಕಟ್ಟಿಸಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದ. ಇದಲ್ಲದೆ ನೀವು
ಓಡಿಸುವ ವಾಹನ ನಿಮ್ಮದೇ ಆಗಿರಬೇಕೆಂದು ಕಾರುಕೊಳ್ಳಲು ಬಡ್ಡಿರಹಿತ ಸಾಲ ಕೊಡುತ್ತಿದ್ದ. ಹಾಗೆ
ನೋಡಿದರೆ ಲಿಬಿಯನ್ನರು ಅದರ ಒಂದೋ, ಎರಡೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಿದ್ದರು.
ಮುಂದಿನದನ್ನು ಯಾಕೆ ಕಟ್ಟಲಿಲ್ಲ ಎಂದು ಕೂಡಾ ಆತ ಕೇಳಲಿಕ್ಕೆ ಹೋಗುತ್ತಿರಲಿಲ್ಲ. ಗಡಾಫಿ ಕಾರ್ಮಿಕರ
ಬಗ್ಗೆ ಹೇಳಿದ ಕೆಲವು ಮಾತುಗಳು ವಾಸ್ತವಕ್ಕೆ ದೂರವಾಗಿದ್ದವು. ಹೇಗೆ ಕಾರ್ಲ್ ಮಾರ್ಕ್ಸನ
“ಬಂಡವಾಳಶಾಹಿಗಳಲ್ಲಿ ಸೇರಿರುವ ಅರ್ಧದಷ್ಟು ಹಣವು ಕಾರ್ಮಿಕ ವರ್ಗದವರನ್ನು ಸೇರಬೇಕು” ಎನ್ನುವ
ಹೇಳಿಕೆಯು ವಾಸ್ತವಕ್ಕೆ ದೂರವಾಗಿತ್ತೋ ಹಾಗೆಯೇ ಈತನ ಕೆಲವು ಸಿದ್ಧಾಂತಗಳು ವಾಸ್ತವಕ್ಕೆ ಬಹಳ
ದೂರವಾಗಿದ್ದವು.
ಮೂರನೆಯ ಭಾಗದಲ್ಲಿ ಗಡಾಫಿ ತನ್ನ ಮಹಿಳಾಪರ ಧೋರಣೆಯನ್ನು ಪ್ರಸ್ತುತಪಡಿಸುತ್ತಾನೆ.
ಹೆಂಗಸರು ಗಂಡಸರಷ್ಟೇ ಸರಿಸಮಾನರು ಎನ್ನುವದನ್ನು ಅಲ್ಲಗಳೆಯುವಂತಿಲ್ಲ. ಜೈವಿಕವಾಗಿ ದೇಹರಚನೆಯೊಂದನ್ನು
ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿ ಹೆಂಗಸರು ಗಂಡಸರಷ್ಟೇ ಸಮರ್ಥರು. ಹಾಗೆ ನೋಡಿದರೆ ಹೆಂಗಸರು
ಗಂಡಸರಿಗಿಂತ ವಿಭಿನ್ನರು ಮತ್ತು ಅದೃಷ್ಟವಂತರು. ಅವರಂತೆ ಗಂಡಸರು ಪ್ರತಿ ತಿಂಗಳು
ಮುಟ್ಟಾಗಲಾರರು, ಹೊರಲಾರರು, ಹೆರಲಾರರು, ಹಾಲುಣಿಸಲಾರರು. ಆದರೆ ಗಂಡಸರು ಈ ಎಲ್ಲ ನಿಸರ್ಗ ದತ್ತ ಸಂಭ್ರಮಗಳಿಂದ
ವಂಚಿತರು. ಹೀಗಾಗಿ ಆತ ಹೆಣ್ತನ ಒಂದು ಶಾಪವೆಂದು ಭಾವಿಸದೇ ವರವೆಂದು ಭಾವಿಸಿರೆಂದು ಇಲ್ಲಿಯ
ಮಹಿಳೆಯರಿಗೆ ಕರೆಕೊಟ್ಟಿದ್ದ. ಆ ನಿಟ್ಟಿನಲ್ಲಿ ಹೆಂಗಸರಿಗೆ ಎಲ್ಲ ರಂಗಗಳಲ್ಲಿ ಸರಿಸಮನಾದ
ಅವಕಾಶಗಳನ್ನು ಕಲ್ಪಿಸಿಕೊಟ್ಟ. ಅಂತರಾಷ್ಟ್ರೀಯ ಮಟ್ಟದಲ್ಲಿ ಲಿಬಿಯನ್ ಹೆಂಗಸರ ಸ್ಥಾನಮಾನಗಳಿಗಾಗಿ
ಬಡಿದಾಡಿದ. ಒಂದುವೇಳೆ ಲಿಬಿಯನ್ ಹೆಣ್ಣುಮಗಳೊಬ್ಬಳು ಯೂರೋಪಿಯನ್ನರನ್ನೋ, ಇಂಗ್ಲೀಷ್‍ರನ್ನೋ
ಮದುವೆಯಾದರೆ ಅವರಿಗೆ ಅಲ್ಲಿಯ ಪೌರತ್ವ ಸಿಗುವದರ ಬಗ್ಗೆ ಹೋರಾಡಿದ ಹಾಗೂ ಒಂದುವೇಳೆ ಅವರಿಂದ ಆಕೆಗೇನಾದರು
ವಿಚ್ಛೇದನವಾದರೆ ಗಂಡನಿಂದ ನ್ಯಾಯಯುತವಾಗಿ ಆಕೆಗೆ ಏನೇನೋ ಸಿಗಬೇಕೋ ಅದೆಲ್ಲಾ ಸಿಗುವಂತೆ ಮಾಡಿದ. ಇನ್ನು
ಗಡಾಫಿ ಹೆಂಗಸರಿಗೆ ಎಷ್ಟು
ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು! ಮತ್ತು ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ
ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ
ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ
ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ. ಹಾಗೆ ನೋಡಿದರೆ ಗಡಾಫಿ ಮಹಿಳೆಯರನ್ನು ತನ್ನ
ಅಂಗರಕ್ಷಕಿಯರನ್ನಾಗಿ (ದೇಶದ ಮಿಲ್ಟ್ರಿಪಡೆಯ ಅತ್ಯುನ್ನತ ಹುದ್ದೆ) ನೇಮಿಸಿಕೊಳ್ಳುವದರ ಮೂಲಕ ಅವರ
ಕಾರ್ಯದಕ್ಷತೆಯ ಬಗ್ಗೆ ಹೊರಜಗತ್ತಿಗೆ ಮನದಟ್ಟು ಮಾಡಿದ ಪ್ರಪಂಚದ ಮೊಟ್ಟಮೊದಲ ಗಂಡಸೆಂಬ
ಹೆಗ್ಗಳಿಕೆಗೆ ಪಾತ್ರನಾದ.
ಗಡಾಫಿ ಗ್ರೀನ್‍ಬುಕ್‍ನ್ನು ಬರೆಯುವಾಗ ಹೆಚ್ಚು ಓದಿಕೊಂಡವನಾಗಲಿ, ಅಥವಾ ಹೆಚ್ಚು ಶಿಕ್ಷಣವನ್ನು
ಪಡೆದುಕೊಂಡಿರವನಾಗಲಿ ಆಗಿರಲಿಲ್ಲ. ಆದರೆ ಆ ಸಮಯದಲ್ಲಿ ಆತ ಈಜಿಪ್ಟಿನ ಗಮಾಲ್ ಅಬ್ದುಲ್ ನಾಸರ್ ನ
ಭಾಷಣಗಳಿಂದ ಸಾಕಷ್ಟು ಪ್ರಭಾವಕ್ಕೊಳಗಾಗಿದ್ದನೆಂದು ಹೇಳಲಾಗುತ್ತದೆ. 1952 ರಲ್ಲಿ ಈಜಿಪ್ಟಿನಲ್ಲಿ
ಬ್ರಿಟಿಷ್‍ರ ಕೈಗೊಂಬೆಯಾಗಿದ್ದ ಅರಸ ಫಾರೂಕ್‍ನನ್ನು ಕಿತ್ತೆಸೆದು ಅಧಿಕಾರಕ್ಕೆ ಬಂದ ಗಮಾಲ್
ಅಬ್ದುಲ್ ನಾಸರ್ ಯುವಕ ಗಡಾಫಿಗೆ ರೋಲ್ ಮಾಡೆಲ್ ಆದ. ಕೈರೋದ ರೇಡಿಯೋದಿಂದ “Voices of Arabs” ಎಂಬ ಕಾರ್ಯಕ್ರಮದ ಮೂಲಕ ಪ್ರಸಾರವಾಗುತ್ತಿದ್ದ ಆತನ ಭಾಷಣಗಳು
ಗಡಾಫಿಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿದವು. ನಾಸರ್ 1955 ರಲ್ಲಿ ಪ್ರಕಟಣೆಯಾದ ತನ್ನ “Egypt’s
Liberation: The Philosophy of the Revolution” ಎನ್ನುವ ಪುಸ್ತಕದಲ್ಲಿ ಅರಬ್ ಜಗತ್ತು ಗೊತ್ತು ಗುರಿಯಿಲ್ಲದೆ
ಅಲೆದಾಡುತ್ತಿದೆ, ಅದನ್ನು ಒಟ್ಟುಗೂಡಿಸಿ ಮುನ್ನಡೆಸಲು ತುರ್ತಾಗಿ
ನಾಯಕನೊಬ್ಬ ಬೇಕಾಗಿದ್ದಾನೆ ಎಂದು ಹೇಳಿದ್ದ. ಆ ನಾಯಕ ನಾನೇ ಯಾಕೆ ಆಗಬಾರದೆಂದು ಗಡಾಫಿ ಆ
ನಿಟ್ಟಿನಲ್ಲಿ ಕೆಲಸಮಾಡತೊಡಗಿದ ಮತ್ತು ಗ್ರೀನ್ ಬುಕ್‍ನಲ್ಲಿ ಹೇಳಿದ ಸಂಗತಿಗಳನ್ನು ಜಾರಿಗೆ ತಂದು
ಬಹಳ ಬೇಗನೆ ಜನಪ್ರಿಯ ನಾಯಕನಾದ. ಅಷ್ಟಕ್ಕೆ ಸುಮ್ಮನಿರದೆ ತನ್ನ ತತ್ವಗಳು ಜಗತ್ತಿನ ತುಂಬಾ
ಪ್ರಚಾರವಾಗಬೇಕೆಂದು 1980- 1990 ರ ಅವಧಿಯ ನಡುವೆ “ಗ್ರೀನ್ ಬುಕ್”ನ್ನು ಮೂವತ್ತಕ್ಕೂ ಹೆಚ್ಚು ವಿವಿಧ
ಭಾಷೆಗಳಿಗೆ ಅನುವಾದಿಸಲು, ಅದರ ಬಗ್ಗೆ ವಿಚಾರ ಮಂಥನಗಳನ್ನು ನಡೆಸಲು, ಹಾಗೂ ಅದರ ಮೇಲೆ ಸಂಶೋಧನೆ
ನಡೆಸಲು ಕೋಟಿಗಟ್ಟಲೆ ಡಾಲರ್ ಗಳನ್ನು ವ್ಯಯಿಸಿದ.
ಆದರೆ 2011, ಫೆಬ್ರುವರಿ 17 ರಂದು ಬಂಡುಕೋರರು ಗಡಾಫಿಯ
“ಗ್ರೀನ್ ಬಕ್”ನ್ನು ಸುಡದೆ ತಮಗೆ ಮುಕ್ತಿಯಿಲ್ಲ ಎಂದುಕೊಂಡು ಅದನ್ನು ಸುಟ್ಟುಹಾಕುವದರ ಮೂಲಕ
ತಮ್ಮ ಪ್ರತಿಭಟನೆಯ ಮೊಟ್ಟಮೊದಲ ಕಿಡಿಯನ್ನು ಹೊತ್ತಿಸಿ ಲಿಬಿಯಾದ ಕ್ರಾಂತಿಗೆ ನಾಂದಿ ಹಾಡಿದರು. ಆಮೇಲೆ
ಲಿಬಿಯಾದಲ್ಲಿ ಏನೇನಾಯಿತೆಂದು ನಿಮಗೆಲ್ಲಾ ಗೊತ್ತೇ ಇದೆ!
-ಉದಯ್ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ