Demo image Demo image Demo image Demo image Demo image Demo image Demo image Demo image

ಪಾದ್ರಿ

  • ಗುರುವಾರ, ಮಾರ್ಚ್ 19, 2015
  • ಬಿಸಿಲ ಹನಿ
  • ಅಂದು ಮಧ್ಯಾಹ್ನ ನೆವಿಲ್ಲಿ ಸ್ಕ್ವೇರ್‍ನಲ್ಲಿರುವ ಸೇಂಟ್ ಪೀಟರ್ ಚರ್ಚಿನಲ್ಲಿ ನಾಮಕರಣದ ಸಮಾರಂಭವೊಂದು ನಡೆದಿತ್ತು. ಅಲ್ಬರ್ಟ್ ಎಡ್ವರ್ಡ್ ಪೋರ್ಮನ್ ಚರ್ಚಿನ ಸಮವಸ್ತ್ರವಾದ ಗೌನನ್ನು ಇನ್ನೂ ಧರಿಸಿಯೇ ಇದ್ದ. ಆತ ಅದನ್ನು ಎಷ್ಟೊಂದು ಜತನದಿಂದ ಕಾಪಾಡಿಕೊಂಡು ಬಂದಿದ್ದನೆಂದರೆ ಅದಿನ್ನೂ ಹೊಸತರದಂತೆ ಕಾಣುತ್ತಿತ್ತಲ್ಲದೇ ಅದರ ಮಡಿಕೆಗಳು ಹೊಸದರಲ್ಲಿ ತಂದಾಗ ಹೇಗೆ ಕಾಣುತ್ತಿದ್ದವೋ ಈಗಲೂ ಹಾಗೆಯೇ ಕಾಣುತ್ತಿದ್ದವು. ಆತನಿಗೆ ಆ ದಿರಿಸನ್ನು ಕಂಡರೆ ಮುಂಚಿನಿಂದಲೂ ಅದೇನೋ ವಿಶೇಷ ಅಕ್ಕರೆ. ಆತ ಅದನ್ನು ಶುಭ ಸಮಾರಂಭ ಹಾಗೂ ಶವಸಂಸ್ಕಾರದ ಸಂದರ್ಭಗಳಾದಿಯಾಗಿ ಎಲ್ಲ ಸಂದರ್ಭಗಳಲ್ಲೂ ಧರಿಸುತ್ತಿದ್ದ. ಆತ ಅದನ್ನು ಧರಿಸಿದಾಗಲೆಲ್ಲಾ ಅತ್ಯಂತ ಹೆಮ್ಮೆಯಿಂದ ಬೀಗುತ್ತಿದ್ದನಲ್ಲದೇ ಆ ಉಡುಪು ತನ್ನ ಕೆಲಸದ ಘನತೆಯನ್ನು ಎತ್ತಿ ಹಿಡಿಯುವದರ ಸಂಕೇತವೆಂದೂ ಭಾವಿಸಿದ್ದ. ಆತ ಮನೆಗೆ ಹೋದ ಮೇಲೆ ಅದನ್ನು ಕಳಚಿಟ್ಟ ನಂತರ ಆತನಿಗೆ ತಾನು ಅರ್ಧಂಬರ್ಧ ಬಟ್ಟೆ ಹಾಕಿಕೊಂಡಿರುವನೇನೋ ಎಂಬ ಕಸಿವಿಯುಂಟಾಗುತ್ತಿತ್ತು. ಆತ ಅದನ್ನು ಚನ್ನಾಗಿಡಲು ಎಷ್ಟು ಕಾಳಜಿವಹಿಸುತ್ತಿದ್ದನೆಂದರೆ ಯಾವಾಗಲೂ ಸ್ವತಃ ತಾನೇ ಒಗೆದು ಈಸ್ತ್ರಿ ಮಾಡಿಡುತ್ತಿದ್ದ. ಆತ ಚರ್ಚಿನ ಪಾದ್ರಿಯಾಗಿ ತನ್ನ ಹದಿನಾರು ವರ್ಷಗಳ ಕೆಲಸದ ಅವಧಿಯಲ್ಲಿ ಎಷ್ಟೊಂದು ಗೌನುಗಳನ್ನು ಬದಲಾಯಿಸಿಲ್ಲ? ಆದರೆ ಅವು ಹರಿದಾದ ಮೇಲೂ ಒಂದನ್ನೂ ಆತ ಎಸೆಯದೆ ಅವನ್ನೆಲ್ಲಾ ಖಾಕಿ ಕಾಗದದಲ್ಲಿ ಸುತ್ತಿ ತನ್ನ ಬೆಡ್‍ರೂಮಿನಲ್ಲಿರುವ ವಾರ್ಡೋಬಿನ ಡ್ರಾಯರಿನಲ್ಲಿಟ್ಟಿದ್ದ.   
     
    ಪಾದ್ರಿಯು ಅವಸರವಸರವಾಗಿ ಸಂಗಮವರಿ ಕಲ್ಲಿನ ತೊಟ್ಟಿಯನ್ನು ಬಣ್ಣ ಹಚ್ಚಿದ್ದ ಮುಚ್ಚಳದಿಂದ ಮುಚ್ಚುತ್ತಾ ಅಲ್ಲಿಗೆ ಬಂದಿದ್ದ ವಯಸ್ಸಾದ ಹೆಂಗಸೊಬ್ಬಳಿಗೆ ಕುಳಿತುಕೊಳ್ಳಲು ಹಾಕಿದ್ದ ಖುರ್ಚಿಯನ್ನು ಅತ್ತ ಕಡೆ ಸರಿಸಿ ಈಗಾಗಲೇ ಚರ್ಚಿನ ಮುಖ್ಯಸ್ಥ ವಸ್ತ್ರಾಗಾರದಲ್ಲಿ ತನ್ನ ಬಟ್ಟೆಯನ್ನು ಬದಲಾಯಿಸಿ ಮನೆಗೆ ಹೋಗಲು ಸಜ್ಜಾಗುತ್ತಿರಬಹುದೇನೋ ಎಂದು ಎಣಿಸುತ್ತಾ ಅವನಿಗಾಗಿ ಕಾಯುತ್ತಾ ಕುಳಿತನು. ಆದರೆ ಇದೀಗ ಆತ ಮೂಡಣ ದಿಕ್ಕಿನಲ್ಲಿ ನಡೆದು ಬರುವದು ಕಾಣಿಸಿತು. ಅಲ್ಲಿಂದ ಆತ ನಿವೇದನ ಪೀಠಕ್ಕೆ ಹೋಗಿ ಅಲ್ಲಿ ಮಂಡಿಯೂರಿ ಕುಳಿತು ಕ್ಷಣಕಾಲ ಏನನ್ನೋ ಪ್ರಾರ್ಥಿಸಿ ಹಜಾರಕ್ಕೆ ನಡೆದು ಬಂದನು. ಆದರೆ ಅವನಿನ್ನೂ ಚರ್ಚಿನ ನಿಲುವಂಗಿಯಲ್ಲಿದ್ದ.
    ಆತ ಇತ್ತೀಚಿಗಷ್ಟೇ ಚರ್ಚಿನ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಕೆಂಪು ಮೂತಿಯ, ಉತ್ಸಾಹಭರಿತ ಈ ಮನುಷ್ಯ ನಲವತ್ತರ ಅಂಚಿನಲ್ಲಿದ್ದ. ಅಲ್ಬರ್ಟ್ ಎಡ್ವರ್ಡ್‍ನಿಗೆ ತನ್ನ ಈ ಹಿಂದಿನ ಮುಖ್ಯಸ್ಥನ ನೆನಪಾಯಿತು. ಆತ ಕೆಲಸ ಬಿಟ್ಟು ಹೋಗಿದ್ದರ ಬಗ್ಗೆ ಇವನಿಗೆ ಬೇಜಾರಿತ್ತು. ಆತ ಹಳೆಯ ಕ್ರೈಸ್ತ ಶಾಲೆಯೊಂದರಲ್ಲಿ ದೀಕ್ಷೆಯನ್ನು ಪಡೆದು ಪಾದ್ರಿಯಾಗಿದ್ದನಲ್ಲದೆ ತನ್ನ ಕಂಚಿನ ಕಂಠದಲ್ಲಿ ಆಕರ್ಷಕವಾಗಿ ಧರ್ಮೋಪದೇಶವನ್ನು ನೀಡುತ್ತಿದ್ದ. ಆತನಿಗೆ ಪ್ಯಾರಿಸ್‍ನ ಶ್ರೀಮಂತ ವರ್ಗದವರೊಂದಿಗೆ ಹೆಚ್ಚು ಒಡನಾಟವಿತ್ತಲ್ಲದೇ ಆಗಾಗ ಅವರೊಟ್ಟಿಗೆ ಭೋಜನಕೂಟವನ್ನು ಸಹ ನಡೆಸುತ್ತಿದ್ದ. ಆತ ಚರ್ಚಿನ ಸಂಗತಿಗಳನ್ನು ಈ ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿಯಲ್ಲಿಯೇ ನಡೆಸಿಕೊಂಡು ಹೋಗುತ್ತಿದ್ದ. ಆದರೆ ಯಾವತ್ತೂ ಕೋಪಗೊಳ್ಳುತ್ತಿರಲಿಲ್ಲ. ಆತ ಈ ಹೊಸ ಮುಖ್ಯಸ್ಥನಂತೆ ಎಲ್ಲ ವಿಷಯಗಳಿಗೆ ತನ್ನ ಮೂಗು ತೂರಿಸುತ್ತಿರಲಿಲ್ಲ. ಆದರೆ ಅಲ್ಬರ್ಟ್ ಎಡ್ವರ್ಡ್ ಆತನೊಂದಿಗೆ ಸಹನೆಯಿಂದಿದ್ದ. ಸೇಂಟ್ ಪೀಟರ್ ಚರ್ಚು ಒಳ್ಳೆ ನೆರೆಹೊರೆಯವರ ಮಧ್ಯದಲ್ಲಿತ್ತು ಮತ್ತು ಆ ಭಾಗದ ಜನರೆಲ್ಲರೂ ಒಳ್ಳೆಯ ಹಿನ್ನೆಲೆಯಿಂದ ಬಂದವರಾಗಿದ್ದರು. ಈ ಹೊಸ ಮುಖ್ಯಸ್ಥ ಈಸ್ಟ್ ಎಂಡ್‍ನಿಂದ ಬಂದಿದ್ದ. ಅಲ್ಬರ್ಟ್ ಎಡ್ವರ್ಡ್‍ನಿಗೆ ಈ ಹೊಸ ಮುಖ್ಯಸ್ಥ ಇಡಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವವನಂತೆ ಕಂಡುಬಂದಿರಲಿಲ್ಲ.
    ಇದೀಗ ಚರ್ಚಿನ ಮುಖ್ಯಸ್ಥ ಹಜಾರದ ಮುಖ್ಯಭಾಗಕ್ಕೆ ಬಂದು ಪಾದ್ರಿಯನ್ನುದ್ದೇಶಿಸಿ ಅತ್ಯಂತ ಸಹಜವಾಗಿ ಹೇಳಿದ.
    “ಪೋರ್ಮನ್, ಒಂದು ನಿಮಿಷ ವಸ್ತ್ರಾಗಾರಕ್ಕೆ ಬರುವೆಯಾ? ನಾನು ನಿನಗೆ ಏನೋ ಹೇಳೋದಿದೆ.”  
    “ವೇರಿ ಗುಡ್, ಸರ್.”       
    ಮುಖ್ಯಸ್ಥ ಆತ ಮೇಲೆ ಬರುವವರೆಗೂ ಕಾಯ್ದು ಅವ ಮೇಲೆ ಬಂದ ನಂತರ ಇಬ್ಬರೂ ಚರ್ಚಿನ ಒಳಗೆ ನಡೆದರು.
    “ನಾಮಕರಣ ಸಮಾರಂಭ ಚನ್ನಾಗಿ ನಡೀತು, ಅಲ್ವಾ ಸರ್? ಏನಾಶ್ಚರ್ಯ, ನೀವು ಮಗುವನ್ನು ಕೈಗೆತ್ತಿಕೊಂಡಾಕ್ಷಣ ಆ ಮಗು ಅಳುವದನ್ನೇ ನಿಲ್ಲಿಸಿತು.”
    “ಹಾಂ, ಹೌದು. ಬಹಳಷ್ಟು ಸಾರಿ ನಾನೂ ಇದನ್ನು ಗಮನಿಸಿದ್ದೇನೆ,” ತನ್ನ ಮುಖದ ಮೇಲೆ ಸಣ್ಣದೊಂದು ನಗುವನ್ನು ತಂದುಕೊಳ್ಳುತ್ತಾ ಹೇಳಿದ. “ಎಷ್ಟೇ ಆಗಲಿ, ದಿನಾ ಬೆಳಗಾದರೆ ನನಗೆ ಇಂಥ ಜನರನ್ನು ಸಂಭಾಳಿಸಿ ಅಭ್ಯಾಸವಿದೆಯಲ್ವೇ?”
    ಹೌದು, ಅದು ಅವನಿಗೆ ಒಂಥರಾ ಹೆಮ್ಮೆಯ ವಿಷಯವಾಗಿತ್ತು. ಅವನೇ ಗಮನಿಸಿದಂತೆ ಬಹಳಷ್ಟು ನಾಮಕರಣದ ಸಂದರ್ಭಗಳಲ್ಲಿ ಮಕ್ಕಳು ಅಳುವಾಗ ಅವನ್ನು ಆತ ತನ್ನ ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಅವು ಸುಮ್ಮನಾಗುತ್ತಿದ್ದವು. ಇದನ್ನು ನೋಡಿ ಆ ಮಕ್ಕಳ ತಾಯಂದಿರು ಹಾಗೂ ದಾದಿಯರು ಬೆರಗಾಗಿದ್ದರಲ್ಲದೇ ಅವರೆಲ್ಲಾ ಇವನ ತೋಳುಗಳಲ್ಲಿ ಅದೇನೋ ಮಾಂತ್ರಿಕ ಶಕ್ತಿಯಿದೆ ಎಂದು ಮಾತನಾಡಿಕೊಳ್ಳುವದನ್ನು ಪೋರ್ಮನ್ ಕೂಡಾ ಕೇಳಿದ್ದ. ಅವನನ್ನು ಹಾಗೆ ಹೊಗಳಿದ್ದು ಅವನಿಗೆ ಸಂತೋಷವನ್ನುಂಟು ಮಾಡಿತು ಎಂಬುದು ಪಾದ್ರಿಗೆ ಗೊತ್ತಾಯಿತು.   
    ಮಾತನಾಡುತ್ತಾ ಚರ್ಚಿನ ಮುಖ್ಯಸ್ಥ ಅಲ್ಬರ್ಟ್ ಎಡ್ವರ್ಡ್‍ನನ್ನು ವಸ್ತ್ರಾಗಾರಕ್ಕೆ ಕರೆದುಕೊಂಡು ಬಂದನು. ಅಲ್ಬರ್ಟ್ ಎಡ್ವರ್ಡ್‍ನಿಗೆ ಅಲ್ಲಿ ಅದಾಗಲೇ ಇಬ್ಬರು ಚರ್ಚ್ ವಾರ್ಡೆನ್‍ಗಳು ಕುಳಿತಿರುವದು ಕಂಡು ಆಶ್ಚರ್ಯವಾಯಿತು. ಅವರು ಒಳ ಬರುವದನ್ನು ಆತ ಗಮನಿಸಿರಲಿಲ್ಲ. ಅವರು ಇವನನ್ನು ನೋಡಿ ಸಂತೋಷದಿಂದ ತಲೆ ಆಡಿಸಿದರು. 
    “ಗುಡ್ ಆಫ್ಟರ್‍ನೂನ್, ಮೈ ಲಾರ್ಡ್, ಗುಡ್ ಆಫ್ಟರ್‍ನೂನ್, ಸರ್,” ಆತ ಒಬ್ಬೊಬ್ಬರಿಗೂ ಶುಭಾಶಯ ಕೋರಿದ.  
    ಅವರಿಬ್ಬರೂ ಹಿರಿಯರು ಹಾಗೂ ಅವರು ಅಲ್ಬರ್ಟ್ ಎಡ್ವರ್ಡ್ ಪಾದ್ರಿಯಾಗಿದ್ದಾಗಿನಿಂದ ಹಿಡಿದು ಈಗಲೂ ಅಲ್ಲಿಯೇ ಚರ್ಚ್ ವಾರ್ಡೆನ್‍ಗಳಾಗಿದ್ದಾರೆ. ಅವರು ಅಲ್ಲೇ ಇದ್ದ ಉದ್ದನೆಯ ಟೇಬಲ್ ಬಳಿ ಕುಳಿತಿದ್ದರು. ಅವರಿಬ್ಬರ ಮಧ್ಯ ಖಾಲಿಯಿದ್ದ ಖುರ್ಚಿಯ ಮೇಲೆ ಚರ್ಚಿನ ಮುಖ್ಯಸ್ಥ ಹೋಗಿ ಕುಳಿತನು. ಅಲ್ಬರ್ಟ್ ಎಡ್ವರ್ಡ್ ಅವರ ಎದುರಿಗೆ ಕುಳಿತುಕೊಳ್ಳುತ್ತಾ ವಿಷಯ ಏನಿರಬಹುದೆಂದು ಸ್ವಲ್ಪ ಕಳವಳಗೊಂಡನು. ಅವನಿಗಿನ್ನೂ ಚನ್ನಾಗಿ ನೆನಪಿದೆ. ಒಂದು ಸಾರಿ ಆರ್ಗನ್ ವಾದಕನೊಬ್ಬ ಅದ್ಯಾವುದೋ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಪಜೀತಿಗೀಡಾಗಿದ್ದು ಮತ್ತದನ್ನು ಅವರು ಮುಚ್ಚಿಹಾಕಲು ಎಷ್ಟೆಲ್ಲಾ ಕಷ್ಟಪಟ್ಟರೆಂಬುದೆಲ್ಲಾ ಅವನಿಗಿನ್ನೂ ಚನ್ನಾಗಿ ಗೊತ್ತಿದೆ. ನೆವಿಲ್ಲಿ ಸ್ಕ್ವೇರ್‍ನ ಸೇಂಟ್ ಪೀಟರ್‍ನಂಥ ಚರ್ಚಿಗೆ ಇಂಥ ಹಗರಣಗಳು ಸಲ್ಲವು. ತನಗೇ ಗೊತ್ತಿಲ್ಲದಂತೆ ತಾನು ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆಯೇ ಎಂಬ ಅನುಮಾನ ಅವನನ್ನು ಕಾಡಿತು. ಚರ್ಚಿನ ಮುಖ್ಯಸ್ಥನ ಮುಖ ಶಾಂತವಾಗಿತ್ತು. ಆದರೆ ಇನ್ನಿಬ್ಬರ ಮುಖಗಳು ಗೊಂದಲದಿಂದ ಕೂಡಿದ್ದವು.  
    “ಇವರು ಏನನ್ನೋ ಹೇಳಲು ತಡವರಿಸುತ್ತಿದ್ದಾರೆ,” ಪಾದ್ರಿಯು ತನ್ನಷ್ಟಕ್ಕೆ ತಾನೇ ಹೇಳಿಕೊಂಡನು ಹಾಗೂ ಅವರು ಹೇಳುವದನ್ನು ಕೇಳಲು ಕಾಯುತ್ತಾ ಕುಳಿತನು.
    ಇದೀಗ ಚರ್ಚಿನ ಮುಖ್ಯಸ್ಥ ರಾಜಗಾಂಭೀರ್ಯದಿಂದ ಎದ್ದು ನಿಂತು ಹೇಳತೊಡಗಿದ.  
    “ಫೋರ್‍ಮನ್, ನಾವು ನಿನಗೆ ಇಷ್ಟವಾಗದ ಸಂಗತಿಯೊಂದನ್ನು ಹೇಳುವದಿದೆ. ನೀನಿಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿರುವಿ. ನೀನು ನಿನ್ನ ಕೆಲಸವನ್ನು ಹಾಗೂ ನಿನ್ನ ಕರ್ತವ್ಯವನ್ನು ನಾವಷ್ಟೇ ಅಲ್ಲ ಆ ದೇವರು ಕೂಡಾ ಮೆಚ್ಚುವಂತೆ ನಿಭಾಯಿಸಿದ್ದೀಯಾ. ಇದರ ಬಗ್ಗೆ ಸಂಶಯವೇ ಬೇಡ.”
    ಇಬ್ಬರು ಚರ್ಚ್ ವಾರ್ಡೆನ್‍ಗಳು ತಲೆ ಆಡಿಸಿದರು.
    ಆದರೆ ಮೊನ್ನೆಯಷ್ಟೇ ನನಗೆ ಯಾವುದೋ ಒಂದು ಸಂದರ್ಭದಲ್ಲಿ ನಿನಗೆ ಓದುಬರಹ ಬರುವದಿಲ್ಲ ಎಂದು ಗೊತ್ತಾಗಿ ಆಶ್ಚರ್ಯವಾಯಿತು.” 
    ಪಾದ್ರಿಯ ಮುಖದ ಮೇಲೆ ಯಾವುದೇ ಮುಜುಗುರ ಕಾಣಲಿಲ್ಲ.
    “ಈ ಹಿಂದಿನ ಮುಖ್ಯಸ್ಥರಿಗೆ ಇದು ಗೊತ್ತಿತ್ತು, ಸರ್.” ಅವನು ಉತ್ತರಿಸಿದ. “ಅವರ ಪ್ರಕಾರ ಅದು ಅಂಥಾ ದೊಡ್ಡ ಸಂಗತಿಯಾಗಿರಲಿಲ್ಲ. ಅವರು ಆಗಾಗ ಹೇಳ್ತಾ ಇದ್ದರು; ಈ ಜಗತ್ತಿನಲ್ಲಿ ಓದಿ ಕಲಿಯುವದಕ್ಕಿಂತ ನೋಡಿ ಕಲಿಯುವದು ಬಹಳಷ್ಟಿದೆ ಎಂದು.” 
    “ನನಗೆ ಇದನ್ನು ಕೇಳಿ ಆಶ್ಚರ್ಯ ಆಗ್ತಾ ಇದೆ.” ಚರ್ಚ್ ವಾರ್ಡನ್ ಒಬ್ಬ ಹೇಳಿದ. “ಅಂದ್ರೆ....ನೀನಿಲ್ಲಿ ಹದಿನಾರು ವರ್ಷಗಳಿಂದ ಕೆಲಸಮಾಡುತ್ತಿದ್ದರೂ ಇನ್ನೂ ಓದುಬರಹವನ್ನು ಕಲಿತಿಲ್ವಾ?”     
    “ನಾನು ಹನ್ನೆರೆಡು ವರ್ಷದವನಿರುವಾಗಲೇ ಅಡಿಗೆ ಕೆಲಸದವನಾಗಿ ಸೇರಿಕೊಂಡೆ. ಅಲ್ಲಿ ಬಾಣಸಿಗನೊಬ್ಬ ಒಮ್ಮೆ ನನಗೆ ಓದುಬರಹ ಕಲಿಸಲು ನೋಡಿದ. ಆದರೆ ನನಗೆ ಅದರಲ್ಲಿ ಆಸಕ್ತಿ ಮೂಡಲಿಲ್ಲ. ಮೇಲಾಗಿ ನನ್ನ ಬಳಿ ಕಲಿಯಲು ಅಷ್ಟು ಸಮಯವೂ ಇರಲಿಲ್ಲ ಮತ್ತು ನನಗೆ ಯಾವತ್ತೂ ಕಲಿಯಬೇಕು ಅನಿಸಲೇ ಇಲ್ಲ. ನನಗೆ ಅನಿಸುತ್ತೆ; ಇವತ್ತಿನ ಹುಡುಗರು ತಮ್ಮ ಬಹಳಷ್ಟು ಸಮಯವನ್ನು ಯಾವುದಾದರು ಕೆಲಸದ ಮೇಲೆ ಸದ್ವಿನಿಯೋಗ ಮಾಡುವ ಬದಲು ಬರೀ ಓದುವದರಲ್ಲಿಯೇ ಕಳೆಯುತ್ತಾರೆ ಎಂದು.
    “ಮತ್ತೆ ನಿನಗೆ ಸುದ್ದಿ ಸಮಾಚಾರಗಳು ತಿಳಿಯುವದಾದರೂ ಹೇಗೆ?” ಇನ್ನೊಬ್ಬ ಚರ್ಚ್ ವಾರ್ಡೆನ್ ಕೇಳಿದ. “ಪತ್ರಗಳನ್ನು ನೀನು ಯಾವತ್ತೂ ಬರೆಯುವದಿಲ್ಲವೇ?”   
    “ನೋ, ಮೈ ಲಾರ್ಡ್, ಅದಿಲ್ಲದೆನೇ ನಾನು ಚನ್ನಾಗಿ ನಿಭಾಯಿಸಬಲ್ಲೆ ಹಾಗೂ ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳು ಸುದ್ದಿಸಮಾಚಾರಗಳನ್ನು ಚಿತ್ರಗಳ ಸಮೇತ ಪ್ರಕಟಿಸುವದರಿಂದ ಅವನ್ನು ನೋಡಿಯೇ ಈ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಬಲ್ಲೆ. ನನ್ನ ಹೆಂಡತಿ ಚನ್ನಾಗಿ ಓದಿದ್ದಾಳೆ. ಒಂದುವೇಳೆ ನಾನು ಪತ್ರ ಬರೆಯಬೇಕೆಂದರೆ ನನ್ನ ಪರವಾಗಿ ಆಕೆಯೇ ಬರೆಯುತ್ತಾಳೆ.”
    ಇಬ್ಬರು ಚರ್ಚ್ ವಾರ್ಡೆನ್‍ಗಳು ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯದೆ ಅನುಮಾನದಿಂದ ತಮ್ಮ ಮುಖ್ಯಸ್ಥನತ್ತ ದೃಷ್ಟಿ ಹಾಯಿಸಿ ಮತ್ತೆ ಟೇಬಲ್ ನೋಡುತ್ತಾ ಕುಳಿತರು.  
    “ವೆಲ್, ಫೋರ್‍ಮನ್, ನಾನು ಈಗಾಗಲೇ ಈ ವಿಷಯದ ಬಗ್ಗೆ ಈ ಇಬ್ಬರು ಮಹನೀಯರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಸೇಂಟ್ ಪೀಟರ್‍ನಂಥ ಚರ್ಚಿನಲ್ಲಿ ಒಬ್ಬ ಅನಕ್ಷರಸ್ಥ ಪಾದ್ರಿಯನ್ನು ಇಡಲಾಗದು.” 
    ಅಲ್ಬರ್ಟ್ ಎಡ್ವರ್ಡ್‍ನ ಸಣಕಲು ಮತ್ತು ಬಿಳಿಚು ಮುಖ ಇದೀಗ ಕೆಂಪಾಯಿತು. ಅವನು ನಿಂತಲ್ಲಿಯೇ ನಡುಗಿದ. ಆದರೆ ಯಾವುದೇ ಉತ್ತರವನ್ನು ಕೊಡಲಿಲ್ಲ. 
    ನನ್ನನ್ನು ಅರ್ಥಮಾಡಿಕೋ ಫೋರ್‍ಮನ್. ನನಗೆ ನಿನ್ನ ಬಗ್ಗೆ ಯಾವುದೇ ತಕರಾರಿಲ್ಲ. ನೀನು ನಿನ್ನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತೀಯಾ. ನನಗೆ ನಿನ್ನ ಗುಣದ ಬಗ್ಗೆಯಾಗಲಿ ಅಥವಾ ನಿನ್ನ ಸಾಮರ್ಥ್ಯದ ಬಗ್ಗೆಯಾಗಲಿ ಅನುಮಾನವಿಲ್ಲ. ಆದರೆ ಅಕಸ್ಮಾತಾಗಿ ನಿನ್ನ ಅಜ್ಞಾನದಿಂದ ನಡೆಯಬಹುದಾದ ಅತಾಚುರಕ್ಕೆ ನಾವು ಹೊಣೆಯಾಗಲಾರೆವು. ಇದು ಚರ್ಚಿನ ಗೌರವದ ಪ್ರಶ್ನೆ ಹಾಗೂ ನಿಯಮ ಕೂಡಾ ಆಗಿದೆ.”
    “ಈಗಲಾದರೂ ನೀನು ಪ್ರಯತ್ನಿಸಬಹುದಲ್ವಾ?” ಚರ್ಚ್ ವಾರ್ಡೆನ್ ಕೇಳಿದ.  
    “ಇಲ್ಲ ಸರ್, ಈಗ ಅದು ನನ್ನಿಂದ ಸಾಧ್ಯವಾಗುವದಿಲ್ಲ ಅಂತಾ ಕಾಣುತ್ತೆ. ಈಗ ಒಂದು ಅಕ್ಷರವೂ ನನ್ನ ತಲೆಯೊಳಗೆ ಹೋಗಲಾರದು. ಇಲ್ಲ..... ಸಾಧ್ಯವಾಗುವದಿಲ್ಲ ಬಿಡಿ.”
    “ಫೋರ್‍ಮನ್, ನಾವು ನಿನ್ನೊಂದಿಗೆ ಕಠಿಣವಾಗಿ ನಡೆದುಕೊಳ್ಳಲು ಇಚ್ಛಿಸುವದಿಲ್ಲ.” ಚರ್ಚಿನ ಮುಖ್ಯಸ್ಥ ಹೇಳಿದ. “ನಾನು ಮತ್ತು ಚರ್ಚ್ ವಾರ್ಡೆನ್‍ಗಳು ಒಂದು ನಿರ್ಧಾರಕ್ಕೆ ಬಂದಿದ್ದೇವೆ. ನಾವು ನಿನಗೆ ಮೂರು ತಿಂಗಳ ಸಮಯವನ್ನು ಕೊಡುತ್ತೇವೆ. ಅಷ್ಟರಲ್ಲಿ ನೀನು ಓದುಬರಹವನ್ನು ಕಲಿತರೆ ಸರಿ. ಇಲ್ಲವಾದರೆ ನೀನು ಹೊರಗೆ ಹೋಗಬೇಕಾಗುತ್ತದೆ.”   
    ಅಲ್ಬರ್ಟ್ ಎಡ್ವರ್ಡ್‍ನಿಗೆ ಹೊಸ ಮುಖ್ಯಸ್ಥನ ತಲೆ ಕಂಡರೆ ಆಗುತ್ತಿರಲಿಲ್ಲ. ಆತ ಮುಂಚಿನಿಂದಲೂ ಹೇಳುತ್ತಿದ್ದುದು ಒಂದೇ; ಈತನನ್ನು ಸೇಂಟ್ ಪೀಟರ್‍ ಚರ್ಚಿನ ಮುಖ್ಯಸ್ಥನನ್ನಾಗಿ ಮಾಡಿ ಆಡಳಿತ ಮಂಡಳಿಯವರು ದೊಡ್ಡ ತಪ್ಪು ಮಾಡಿದ್ದಾರೆಂದು. ಅವರು ಎಣಿಸಿದಂತೆ ಅವನು ಒಳ್ಳೆಯ ಸಮುದಾಯದಿಂದ ಬಂದವನಂತೆ ಕಾಣುತ್ತಿರಲಿಲ್ಲ. ಇದೀಗ ಅಲ್ಬರ್ಟ್ ಸ್ವಲ್ಪ ನೇರವಾಗಿ ನಿಂತುಕೊಂಡನು. ಅವನಿಗೆ ತನ್ನ ಬೆಲೆ ಏನೆಂದು ಗೊತ್ತಿತ್ತು. ಹಾಗಾಗಿ ಆತ ಇವರ್ಯಾರು ತನ್ನ ಬಗ್ಗೆ ಆಡಿಕೊಳ್ಳಲು ಅವಕಾಶ ಮಾಡಿಕೊಡಬಾರದೆಂದು ನಿರ್ಧರಿಸಿದ.
    ಐ ಯ್ಯಾಮ್ ವೇರಿ ಸಾರಿ ಸರ್, ಐ ಯ್ಯಾಮ್ ಅಫ್ರೇಡ್ ಇಟ್ ಇಸ್ ನೋ ಗುಡ್. ನಾನೊಂದು ಹೊಸ ಕೌಶಲಗಳನ್ನು ಕಲಿಯಲಾರದ ಹಳೆ ನಾಯಿ ಇದ್ದಂತೆ. ಇಷ್ಟು ದಿನ ನನಗೆ ಓದುಬರಹ ಬಾರದಿದ್ದರೂ ನಾನು ಒಳ್ಳೆಯ ಜೀವನವನ್ನೇ ನಡೆಸಿದ್ದೇನೆ. ಇಲ್ಲ, ಇದು ನನ್ನಿಂದ ಸಾಧ್ಯವಾಗುವದಿಲ್ಲ.”
    “ಹಾಗಾದ್ರೆ ಫೋರ್‍ಮನ್, ನೀನು ಈ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತೆ.”
    “ಎಸ್ ಸರ್, ನಂಗೆ ಅರ್ಥವಾಗುತ್ತೆ. ನೀವು ನನ್ನ ಜಾಗಕ್ಕೆ ಹೊಸಬರನ್ನು ಹುಡುಕಬಹುದು. ಅವರು ಬಂದ ದಿನ ನಾನು ನನ್ನ ಕೆಲಸಕ್ಕೆ ಸಂತೋಷದಿಂದ ರಾಜಿನಾಮೆಯನ್ನು ಕೊಡುತ್ತೇನೆ.”
    ಅಲ್ಬರ್ಟ್ ಎಡ್ವರ್ಡ್ ಅತ್ಯಂತ ವಿನಮ್ರತೆಯಿಂದ ಕೋಣೆಯ ಬಾಗಿಲನ್ನು ಮುಚ್ಚಿ ಹೊರಬಂದನು. ಅಲ್ಲಿ ಇಷ್ಟು ದಿನ ತಾನು ಕಾಯ್ದುಕೊಂಡು ಬಂದಿದ್ದ ಮರ್ಯಾದೆಗೆ ಏಟು ಬಿದ್ದಿತ್ತು. ಒಂದು ಕ್ಷಣ ಅಲ್ಲಿ ಅವನಿಗೆ ಉಸಿರಾಡಲು ಕಷ್ಟವೆನಿಸಿ ಹೊರಗೆ ಬಂದನು. ಕೊಂಚ ಹೊತ್ತು ಬಿಟ್ಟು ಆತ ಮತ್ತೆ ಏನನ್ನೋ ಜ್ಞಾಪಿಸಿಕೊಂಡವನಂತೆ ವಸ್ತ್ರಾಗಾರಕ್ಕೆ ವಾಪಾಸು ನಿಧಾನವಾಗಿ ನಡೆದು ಬಂದನು. ಅಲ್ಲಿ ತನ್ನ ನಿಲುವಂಗಿಯನ್ನು ಕಳಚಿ ಗೂಟಕ್ಕೆ ನೇತುಹಾಕಿದನು. ಇಷ್ಟು ದಿನ ಆತ ನೆರವೇರಿಸಿದ ಮದುವೆ ಹಾಗೂ ಅಂತ್ಯ ಸಂಸ್ಕಾರದ ಕಾರ್ಯಕ್ರಮಗಳನ್ನು ಒಮ್ಮೆ ನೆನೆದು ನಿಟ್ಟುಸಿರಿಟ್ಟನು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಟ್ಟು ತನ್ನ ಕೋಟು ಮತ್ತು ಟೋಪಿಗಳನ್ನು ಧರಿಸಿ ಪಡಸಾಲೆಗೆ ಬಂದನು. ಅಲ್ಲಿ ಒಂದು ಕ್ಷಣ ನಿಂತು ಚರ್ಚನ್ನು ಒಮ್ಮೆ ಕಣ್ತುಂಬ ನೋಡಿದನು. ಹೃದಯ ಭಾರವಾಯಿತು. ಕಣ್ಣುಗಳು ಮಂಜು ಮಂಜಾದವು. ಇದೀಗ ಚರ್ಚಿನ ಬಾಗಿಲನ್ನು ಮುಚ್ಚಿ ರಸ್ತೆಗಿಳಿದನು. ಅವನಿಗೆ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಬಲು ದೊಡ್ಡ ಆಘಾತವಾಗಿತ್ತು. ಅದೇ ಯೋಚನೆಯಲ್ಲಿ ಅವ ಮನೆಯ ಹಾದಿಯನ್ನು ತುಳಿಯದೇ ಮೊದಲು ಎಲ್ಲಾದರು ಒಂದು ಕಪ್ ಟೀ ಕುಡಿಯೋಣವೆಂದುಕೊಂಡು ಅತ್ತ ಹೆಜ್ಜೆ ಹಾಕಿದನು. ಅವನು ರಸ್ತೆಗುಂಟ ನಿಧಾನವಾಗಿ ನಡೆದನು. ಹೃದಯ ಭಾರವಾಗಿತ್ತು. ಮುಂದೆ ಏನು ಮಾಡಬೇಕೆಂದು ಅವನಿಗೆ ಗೊತ್ತಾಗಲಿಲ್ಲ. ಇಷ್ಟು ದಿನ ಸೇಂಟ್ ಪೀಟರ್ ಚರ್ಚಿನಲ್ಲಿ ಒಡೆಯನಂತೆ ದುಡಿದು ಇದೀಗ ಬೇರೆ ಕಡೆ ಆಳಾಗಿ ದುಡಿಯುವದು ಅವನ ಮನಸ್ಸಿಗೆ ಹಿಡಿಸಲಿಲ್ಲ. ಅವನು ಇಷ್ಟು ದಿನ ತನ್ನ ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿಸಿದ್ದನಾದರೂ ಅದು ಅವನ ಮುಂದಿನ ಬದುಕಿಗೆ ಏನೇನೂ ಸಾಕಾಗುತ್ತಿರಲಿಲ್ಲ. ದಿನೆದಿನೆ ನಿರ್ವಹಣಾ ವೆಚ್ಚ ಏರುತ್ತಿದ್ದರಿಂದ ಜೀವನವನ್ನು ಸರಿದೂಗಿಸಲು ಅವನು ಮತ್ತೆ ದುಡಿಯಲೇಬೇಕಿತ್ತು. ತನಗೆ ಒಂದು ದಿನ ಇಂಥ ಗತಿ ಬರುತ್ತದೆಂದು ಆತ ಕನಸು ಮನಸಿನಲ್ಲಿಯೂ ಎಣಿಸಲಿರಲಿಲ್ಲ. ಒಮ್ಮೆ ಆಳವಾಗಿ ಉಸಿರೆಳೆದುಕೊಂಡು ಬಿಟ್ಟನು.   
    ಅಲ್ಬರ್ಟ್ ಎಡ್ವರ್ಡ್ ಪ್ರತಿನಿತ್ಯ ಸಿಗರೇಟು ಸೇದುತ್ತಿರಲಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ರಾತ್ರಿಯ ಊಟದ ನಂತರ ಒಂದು ಗ್ಲಾಸು ಬೀಯರ್ ಕುಡಿಯುತ್ತಿದ್ದ ಹಾಗೂ ಬೇಜಾರಾದಗಲೊಮ್ಮೆ ಸಿಗರೇಟು ಸೇದಿ ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದ. ಇದೀಗ ಆತನಿಗೆ ಒಂದು ಸಿಗರೇಟು ಸೇದಿ ತನ್ನ ಮನಸ್ಸನ್ನು ನಿರಾಳಮಾಡಿಕೊಳ್ಳಬೇಕೆನಿಸಿತು. ಆದರೆ ಆ ಸಮಯದಲ್ಲಿ ಅವನ ಬಳಿ ಯಾವುದೇ ಸಿಗರೇಟುಗಳಿರಲಿಲ್ಲವಾದ್ದರಿಂದ ಅದರ ಅಂಗಡಿಗಾಗಿ ಹುಡುಕತೊಡಗಿದ. ಅವನಿಗೆ ಕೂಡಲೇ ಅಲ್ಲೆಲ್ಲೂ ಒಂದು ಅಂಗಡಿಯೂ ಕಾಣಿಸಲಿಲ್ಲ. ಸ್ವಲ್ಪ ಮುಂದಕ್ಕೆ ನಡೆದನು. ಅಲ್ಲಿ ಅಂಗಡಿಗಳ ಉದ್ದನೆಯ ಸಾಲೇ ಇತ್ತು. ಆದರೆ ಅವುಗಳಲ್ಲಿ ಒಂದಾದರೂ ಸಿಗರೇಟಿನ ಅಂಗಡಿ ಇರಲಿಲ್ಲ.   
    “ಆಶ್ಚರ್ಯ” ಅಲ್ಬರ್ಟ್ ಎಡ್ವರ್ಡ್ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು.   
    ಆತ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಲು ತಿರುಗಿ ಹಿಂದಕ್ಕೆ ನಡೆದು ಬಂದನು. ಊಹೂಂ, ಅಲ್ಲಿ ಒಂದೇ ಒಂದು ಸಿಗರೇಟಿನ ಅಂಗಡಿಯೂ ಕಾಣಿಸಲಿಲ್ಲ. ಆತ ರಸ್ತೆಯಲ್ಲಿ ನಿಂತು ಆಲೋಚನಪರನಾಗಿ ಒಮ್ಮೆ ಅತ್ತಿಂದಿತ್ತ, ಇತ್ತಿಂದತ್ತ ನೋಡಿದನು.       
    “ಇಲ್ಲಿ ಸಿಗರೇಟನ್ನು ಹುಡುಕಿಕೊಂಡು ನಾನೊಬ್ಬನೇ ಇಷ್ಟು ದೂರ ನಡೆದುಕೊಂಡುಬಂದಿರಲಿಕ್ಕಿಲ್ಲ.” ಅವನು ಹೇಳಿದ. “ಇಲ್ಲಿ ಯಾರಾದರು ಸಣ್ಣದೊಂದು ಸಿಗರೇಟು ಅಂಗಡಿಯೊಂದನ್ನು ತೆರೆದರೆ ಸಾಕು, ಅವನಿಗೆ ಚನ್ನಾಗಿ ಲಾಭವಾಗುವದರಲ್ಲಿ ಅನುಮಾನವೇ ಇಲ್ಲ.”   
    ಅವನಿಗೆ ಇದ್ದಕ್ಕಿದ್ದಂತೆ ಯೋಚನೆಯೊಂದು ಹೊಳೆಯಿತು.
    ಅರೆ, ಅದು ನಾನೇ ಯಾಕೆ ಆಗಬಾರದು?” ಅವನು ಹೇಳಿದ. “ಕೆಲವೊಮ್ಮೆ ನೀವು ಯೋಚಿಸದೆಯೇ ಒಳ್ಳೊಳ್ಳೆ ಆಲೋಚನೆಗಳು ನಿಮಗೆ ಥಟ್ಟನೆ ಹೊಳೆಯುತ್ತವೆ.”
    ಅವನು ತಿರುಗಿ ಮನೆ ಕಡೆ ನಡೆದ.
    ನೀನು ಇವತ್ಯಾಕೋ ತುಂಬಾ ಸಪ್ಪಗಿದ್ದಿಯಾ, ಅಲ್ಬರ್ಟ್.” ಅವನ ಹೆಂಡತಿ ಅವನಿಗೆ ಟೀ ಕೊಡುತ್ತಾ ಹೇಳಿದಳು.
    “ನಾನು ಯೋಚಿಸುತ್ತಿದ್ದೇನೆ.” ಅವನು ಟೀ ಕುಡಿಯುತ್ತಾ ಹೇಳಿದ.
    ಅವನು ಅದೇ ವಿಷಯದ ಕುರಿತು ಎಲ್ಲ ರೀತಿಯಿಂದಲೂ ಮತ್ತೆ ಮತ್ತೆ ಯೋಚಿಸಿ ಒಂದು ನಿರ್ಧಾರಕ್ಕೆ ಬಂದನು. ಮರು ದಿವಸ ಅದೇ ಬೀದಿಗೆ ಹೋಗಿ ಅಲ್ಲಿ ಬಾಡಿಗೆಗೆ ಅಂಗಡಿಯೊಂದೇನಾದರು ಸಿಗುತ್ತದಾ ಎಂದು ನೋಡಿದನು. ದೇವರ ದಯೆಯಿಂದ ಅಲ್ಲೊಂದು ಸಣ್ಣ ಅಂಗಡಿ ಖಾಲಿಯಿತ್ತು. ಅದವನಿಗೆ ಎಲ್ಲ ರೀತಿಯಿಂದಲೂ ಸೌಕರ್ಯವೆನಿಸಿತು. ಮುಂದಿನ ಇಪ್ಪತ್ನಾಲ್ಕು ಘಂಟೆಗಳಲ್ಲಿ ಆತ ಅದನ್ನು ಬಾಡಿಗೆಗೆ ಹಿಡಿದು ಅಲ್ಲಿ ತಂಬಾಕು ವ್ಯಾಪಾರ ಮತ್ತು ನ್ಯೂಸ್‍ಏಜೆಂಟಾಗಿ ಕೆಲಸ ಆರಂಭಿಸಿದನು. ಅದಾಗಿ ಒಂದು ತಿಂಗಳ ನಂತರ ತನ್ನ ಪಾದ್ರಿ ಕೆಲಸಕ್ಕೆ ರಾಜಿನಾಮೆಯನ್ನು ಕೊಟ್ಟು ತನ್ನನ್ನು ತಾನು ಸಂಪೂರ್ಣವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡನು. ಅವನ ಹೆಂಡತಿ ಆತ ಪಾದ್ರಿ ಕೆಲಸವನ್ನು ಬಿಟ್ಟ ನಂತರ ಬರುವ ಆದಾಯದಲ್ಲಿ ತನಗೆ ಸಂಸಾರವನ್ನು ನಡೆಸಲು ಕಷ್ಟವಾಗುತ್ತಿದೆ ಎಂದಳು. ಆತ “ಏನು ಮಾಡಾಕಾಗಲ್ಲ. ಕಾಲಕ್ಕೆ ತಕ್ಕ ಹಾಗೆ ನಡೆಯಬೇಕು. ಆ ಚರ್ಚು ಹಿಂದಿನ ಚರ್ಚಿನಂತಿರಲಿಲ್ಲ. ಅಲ್ಲಿ ನನಗೆ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕೇ ಬಿಟ್ಟೆ” ಎಂದು ಅವಳನ್ನು ಸಮಾಧಾನಪಡಿಸಿದ.    
    ಅಲ್ಬರ್ಟ್ ಎಡ್ವರ್ಡ್‍ನ ವ್ಯಾಪಾರ ಚನ್ನಾಗಿ ನಡೆಯತೊಡಗಿತು. ಎಷ್ಟು ಚನ್ನಾಗಿ ಎಂದರೆ ವರ್ಷದೊಪ್ಪತ್ತಿನೊಳಗೆ ಇನ್ನೊಂದು ಅಂಗಡಿಯನ್ನು ತೆರೆಯಬೇಕೆನ್ನುವಷ್ಟು. ಹಾಗಾಗಿ ಆ ನಿಟ್ಟಿನಲ್ಲಿ ಆತ ಕಾರ್ಯೋನ್ಮುಖನಾದ. ಕೂಡಲೇ ಆತ ಅಂಥದೇ ಒಂದು ತಂಬಾಕುರಹಿತ ಉದ್ದನೆಯ ಬೀದಿಯಲ್ಲಿ ಸಣ್ಣ ಅಂಗಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ನೋಡಿಕೊಳ್ಳಲು ಒಬ್ಬ ಮ್ಯಾನೇಜರ್‌ನ್ನು ನೇಮಿಸಿದ. ಅದು ಕೂಡಾ ಬಹಳ ಬೇಗನೆ ಯಶಸ್ವಿಯಾಯಿತು. ಅವನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಾ ಹೋದಂತೆ ಅವನಿಗೆ ಅನಿಸಿತು. ನಾನು ಎರಡು ಅಂಗಡಿಗಳನ್ನು ನಡೆಸಬಲ್ಲವನಾದರೆ  ಅರ್ಧ ಡಜನ್ ಅಂಗಡಿಗಳನ್ನು ಯಾಕೆ ನಡೆಸಬಾರದು? ಹಾಗಾಗಿ ಆತ ಇಡಿ ಲಂಡನ್ ನಗರವನ್ನು ಸುತ್ತಿ ಎಲ್ಲೆಲ್ಲಿ ತಂಬಾಕುರಹಿತ ಉದ್ದನೆಯ ಬೀದಿಗಳಿವೆಯೋ ಅಲ್ಲೆಲ್ಲಾ ಹೋಗಿ ಖಾಲಿ ಇರುವ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ತನ್ನ ವ್ಯಾಪಾರವನ್ನು ಆರಂಭಿಸಿದನು. ಹೀಗೆ ಆರಂಭಿಸಿದ ಈತನ ವ್ಯಾಪಾರ ಎಷ್ಟು ಚನ್ನಾಗಿ ಬೆಳೆಯಿತೆಂದರೆ ಹತ್ತು ವರ್ಷಗಳ ಅವಧಿಯಲ್ಲಿ ಆತ ಹತ್ತು ಕಡೆ ಅಂಗಡಿಗಳನ್ನು ತೆರೆದು ಕೈ ತುಂಬಾ ಹಣವನ್ನು ಸಂಪಾದಿಸತೊಡಗಿದ. ಅಲ್ಲಿಂದಾಚೆ ಪ್ರತಿ ಸೋಮವಾರ ಅವನೇ ಖುದ್ದಾಗಿ ಎಲ್ಲ ಅಂಗಡಿಗಳಿಗೆ ಭೇಟಿಕೊಟ್ಟು ಒಂದು ವಾರದ ಸಂಪಾದನೆಯನ್ನು ತೆಗೆದುಕೊಂಡು ಬಂದು ಬ್ಯಾಂಕಿನಲ್ಲಿಡುತ್ತಿದ್ದ. 
    ಒಂದು ಮುಂಜಾನೆ ಆತ ಹೀಗೆ ನೋಟುಗಳ ಬಂಡಲ್‍ಗಳನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಅಲ್ಲಿ ಕ್ಯಾಷಿಯರ್ ಬಳಿ ಹಣವನ್ನು ಕಟ್ಟುತ್ತಿರಬೇಕಾದರೆ ಕ್ಯಾಷಿಯರ್ ಅವನಿಗೆ “ಬ್ಯಾಂಕ್ ಮ್ಯಾನೇಜರ್ ನಿಮ್ಮನ್ನು ನೋಡಬೇಕಂತೆ. ದಯವಿಟ್ಟು ನೀವು ಅವರನ್ನು ಭೇಟಿಮಾಡಿ.” ಎಂದು ಹೇಳುತ್ತಾ ಮ್ಯಾನೇಜರ್ ಇರುವ ಆಫೀಸನ್ನು ತೋರಿಸಿದ. ಮ್ಯಾನೇಜರ್ ಎದ್ದು ನಿಂತು ಅವನ ಕೈ ಕುಲುಕಿದ.
    “ಮಿಸ್ಟರ್ ಫೋರ್‍ಮನ್, ನೀವು ನಮ್ಮಲ್ಲಿ ಠೇವಣಿಯಿಟ್ಟ ಹಣದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಬೇಕಿತ್ತು. ನಿಮಗೆ ಸರಿಯಾಗಿ ಗೊತ್ತಾ ಎಷ್ಟು ಹಣವನ್ನಿಟ್ಟಿದ್ದೀರಿ ಎಂದು?” 
    “ನನಗೆ ಸರಿಯಾಗಿ ಗೊತ್ತಿಲ್ಲ, ಸರ್. ಆದರೆ ಒಂದು ಅಂದಾಜಿದೆ.”
    “ನೀವು ಇವತ್ತು ಬೆಳಿಗ್ಗೆ ಕಟ್ಟಿದ ಹಣವನ್ನು ಬಿಟ್ಟು ಒಟ್ಟು ಮೂವತ್ತು ಸಾವಿರ ಪೌಂಡುಗಳಿಗಿಂತ ಮೇಲಿದೆ. ಅದು ಭಾರಿ ದೊಡ್ಡ ಮೊತ್ತ. ಅದನ್ನು ಠೇವಣಿ ಇಡುವದಕ್ಕಿಂತ ನೀವು ಬೇರೆ ಯಾವುದರಲ್ಲಾದರು ತೊಡಗಿಸಿದರೆ ಉತ್ತಮ.”
    “ನನಗೆ ಯಾವುದೇ ರಿಸ್ಕ್ ತೆಗೆದುಕೊಳ್ಳೋಕೆ ಇಷ್ಟವಾಗಲ್ಲ ಸರ್. ಬ್ಯಾಂಕಲ್ಲಿದ್ದರೆ ಸುರಕ್ಷಿತವಾಗಿರುತ್ತೆ.”
    “ನೀವೇನೂ ಚಿಂತಿಸಬೇಕಿಲ್ಲ. ನಾವು ನಿಮಗೆ ಭರವಸೆಯನ್ನು ಕೊಡುತ್ತೇವೆ. ನೀವು ನಿಮ್ಮ ಹಣವನ್ನು ನಾವು ಹೇಳುವದರಲ್ಲಿ ತೊಡಗಿಸಿದರೆ ಖಂಡಿತ ನಿಮಗೆ ನಾವು ಕೊಡುವ ಬಡ್ಡಿಗಿಂತ ಇದರಲ್ಲಿ ಇನ್ನೂ ಉತ್ತಮ ಲಾಭ ಸಿಗುತ್ತೆ.” 
    ಮಿಸ್ಟರ್ ಫೋರ್‍ಮನ್‍ನ ಸಿರಿವಂತಿಕೆಯ ಮುಖದ ಮೇಲೆ ಗಲಿಬಿಲಿಯೊಂದು ಕಾಣಿಸಿತು. “ನನಗೆ ಈ ಸ್ಟಾಕ್ಸ್ ಮತ್ತು ಶೇರ್ ಮಾರುಕಟ್ಟೆ ಬಗ್ಗೆ ಒಂಚೂರು ಜ್ಞಾನವವಿಲ್ಲ. ನಾನು ನಿಮ್ಮನ್ನು ನಂಬಿ ನನ್ನ ಹಣವನ್ನು ನಿಮ್ಮ ಕೈಗಿಡಬಲ್ಲೆ ಅಷ್ಟೇ.” 
    ಮ್ಯಾನೇಜರ್ ನಸುನಗುತ್ತಾ, “ನಾವು ಎಲ್ಲ ಏರ್ಪಾಡನ್ನು ಮಾಡುತ್ತೇವೆ. ಮುಂದಿನ ಸಾರಿ ನೀವು ಇಲ್ಲಿಗೆ ಬಂದಾಗ ನಿಮ್ಮ ಹಣವನ್ನು ವರ್ಗಾಯಿಸಿದ್ದಕ್ಕೆ ಸಹಿ ಹಾಕಿದರೆ ಸಾಕು.”
    “ಅದೆಲ್ಲಾ ಸರಿ,” ಅಲ್ಬರ್ಟ್ ಅನುಮಾನಿಸುತ್ತಾ ಕೇಳಿದ. “ನಾನು ಯಾವುದಕ್ಕೆ ಸಹಿ ಹಾಕುತ್ತಿದ್ದೇನೆಂದು ನನಗೆ ಹೇಗೆ ಗೊತ್ತಾಗಬೇಕು?” 
    “ಅದೇನಿಲ್ಲ, ಸಹಿ ಮಾಡುವ ಮೊದಲು ಒಮ್ಮೆ ಎಲ್ಲವನ್ನು ಓದಿದರಾಯ್ತು.” ಕೊಂಚ ಸ್ಪಷ್ಟವಾಗಿ ಹೇಳಿದನು.
    ಮಿಸ್ಟರ್ ಫೋರ್‍ಮನ್ ಅವನತ್ತ ಹುಳ್ಳನಗೆಯೊಂದನ್ನು ಬೀರುತ್ತಾ ಹೇಳಿದನು. “ವೆಲ್, ಸರ್, ಅದು ಅಷ್ಟೇ ಅಂದು ನನಗೂ ಗೊತ್ತು. ಆದರೆ......ಆದರೆ.... ನಿಮಗೆ ತಮಾಷೆ ಎನಿಸಬಹುದು .....ನನಗೆ ಏನನ್ನೂ ಓದುವದಿಕ್ಕಾಗಲಿ ಬರೆಯುವದಿಕ್ಕಾಗಲಿ ಬರುವದಿಲ್ಲ....... ನನ್ನ ಹೆಸರೊಂದನ್ನು ಬಿಟ್ಟು ......ಅದನ್ನೂ ನಾನು ವ್ಯಾಪಾರ ಆರಂಭಿಸಿದ ಮೇಲೆ ಕಲಿತಿದ್ದು.”
    ಮ್ಯಾನೇಜರ್ ದಿಗ್ಗನೆ ಖುರ್ಚಿಯನ್ನು ಬಿಟ್ಟೆದ್ದು ನಿಂತನು.
    “ಅಸಾಧಾರಣ ಸಂಗತಿಯೊಂದನ್ನು ನಾನು ಕೇಳುತ್ತಿದ್ದೇನೆ.”
    “ಯೂ ಸೀ ಸರ್, ಅದೇನಾಯಿತೆಂದರೆ ನಾನು ದೊಡ್ಡವನಾಗುವವರೆಗೂ ನನಗೆ ಕಲಿಯಲು ಅವಕಾಶಗಳೇ ಸಿಗಲಿಲ್ಲ. ನಂತರ ಸಿಕ್ಕರೂ ನಾನವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಈ ವಿಷಯದಲ್ಲಿ ನಾನೊಂಥರಾ ದಡ್ಡನಿದ್ದೆ.” 
    ಮ್ಯಾನೇಜರ್ ಅವನನ್ನು ಪುರಾತನ ಕಾಲದ ಆಸಾಮಿಯನ್ನು ನೋಡುವಂತೆ ನೋಡಿದ. 
    “ಅಂದರೆ ನೀವು ಓದುಬರಹ ಗೊತ್ತಿಲ್ಲದೆಯೇ ಈ ವ್ಯಾಪಾರವನ್ನು ಆರಂಭಿಸಿ ಅದರಿಂದ ಮೂವತ್ತು ಸಾವಿರ ಪೌಂಡುಗಳಷ್ಟು ಹಣವನ್ನು ಗಳಿಸಿದಿರಾ? ಗುಡ್, ವೇರಿ ಗುಡ್ ಮ್ಯಾನ್......ಒಂದು ವೇಳೆ ಓದುಬರಹ ಬಲ್ಲವನಾಗಿದ್ದರೆ ಏನಾಗಿರುತ್ತಿದ್ದಿರಿ?”
    “ಹೇಳ್ತಿನಿ ಸರ್,” ಮಿಸ್ಟರ್ ಫೋರ್‍ಮನ್ ತನ್ನ ಸಿರಿವಂತಿಕೆಯ ಲಕ್ಷಣಗಳುಳ್ಳ ಮುಖದ ಮೇಲೆ ನಗುವೊಂದನ್ನು ತಂದುಕೊಳ್ಳುತ್ತಾ ಹೇಳಿದ. “ನಾನು ನೆವಿಲ್ಲಿ ಸ್ಕ್ವೇರ್‍ನಲ್ಲಿರುವ ಸೇಂಟ್ ಪೀಟರ್ ಚರ್ಚಿನ ಪಾದ್ರಿಯಾಗಿರುತ್ತಿದ್ದೆ.”
    ಮೂಲ ಇಂಗ್ಲೀಷ್: ಸಾಮರ್‍ಸೆಟ್ ಮೌಮ್
    ಕನ್ನಡಕ್ಕೆ: ಉದಯ್ ಇಟಗಿ



    1 ಕಾಮೆಂಟ್‌(ಗಳು):

    sunaath ಹೇಳಿದರು...

    ಸೋಮರ್‍ಸೆಟ್ ಮಾಮ್ ಒಳ್ಳೇ ಕತೆಗಾರ. ಅವನ ಸೊಗಸಾದ ಕತೆಯೊಂದನ್ನು ಅಷ್ಟೇ ಸೊಗಸಾಗಿ ಅನುವಾದಿಸಿ ನಮಗೆ ಕೊಟ್ಟಿರುವಿರಿ. ಧನ್ಯವಾದಗಳು.