Demo image Demo image Demo image Demo image Demo image Demo image Demo image Demo image

ಲಂಚಿನ್

  • ಗುರುವಾರ, ಮಾರ್ಚ್ 12, 2015
  • ಬಿಸಿಲ ಹನಿ
  • ನಾನವಳನ್ನು ಈ ಹಿಂದೆ ಒಂದು ನಾಟಕವನ್ನು ನೋಡಲು ಹೋದಾಗ ನೋಡಿದ್ದೆ. ಈ ಸಾರಿ ಮಧ್ಯಂತರ ವಿರಾಮದ ವೇಳೆಯಲ್ಲಿ ಅವಳು ನನ್ನನ್ನು ಕಣ್ಸನ್ನೆಯಲ್ಲಿ ಕರೆದಿದ್ದರಿಂದ ನಾನು ಅವಳ ಕರೆಗೆ ಓಗೊಟ್ಟು ಅವಳ ಬಳಿ ಹೋಗಿ ಕುಳಿತೆ. ನಾನವಳನ್ನು ನೋಡಿ ತುಂಬಾ ದಿನಗಳಾಗಿದ್ದರಿಂದ ನನಗೆ ಅವಳ ಗುರುತು ಸಹ ಸಿಕ್ಕಿರಲಿಲ್ಲ. ನಾನವಳನ್ನು ಯಾರೋ ಇರಬೇಕು ಎಂದುಕೊಂಡಿದ್ದೆ. ಆದರೆ ಅಕಸ್ಮಾತಾಗಿ ಯಾರೋ ಒಬ್ಬರು ಅವಳ ಹೆಸರು ಹೇಳಿದ್ದರಿಂದ ನನಗೆ ಅವಳು ಯಾರೆಂದು ಗೊತ್ತಾಯಿತು. ಇಲ್ಲದೆ ಹೋದರೆ ಬಹುಶಃ ಅವಳ ಗುರುತೇ ಸಿಗುತ್ತಿರಲಿಲ್ಲವೇನೋ! ಅವಳು ಖುಷಿಯಿಂದ ನನ್ನನ್ನು ಮಾತನಾಡಿಸಿದಳು.
    “ವೆಲ್, ನಾವು ಮೊದಲ ಸಾರಿ ಭೇಟಿ ಮಾಡಿ ತುಂಬಾ ವರ್ಷಗಳೇ ಆದವು, ಅಲ್ವಾ? ಸಮಯ ಎಷ್ಟು ಬೇಗ ಸರಿಯುತ್ತದೆ! ನಿನಗೆ ನೆನಪಿದಿಯಾ ನಾನು ನಿನ್ನನ್ನು ಮೊದಲು ಸಾರಿ ನೋಡಿದ್ದು ಮತ್ತು ನೀನು ನನ್ನನ್ನು ಲಂಚಿನ್‍ಗೆ (ಮಧ್ಯಾಹ್ನದ ಊಟಕ್ಕೆ) ಆಹ್ವಾನಿಸಿದ್ದು?
    ನನಗೆ ನೆನಪಿದಿಯೇ?
    ಹೌದು, ನೆನಪಿದೆ. ಅದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಪ್ಯಾರಿಸ್‍ನಲ್ಲಿದ್ದೆ. ಸ್ಮಶಾನಕ್ಕೆ ಎದುರಾಗಿ ನಿಂತಿದ್ದ ಸಣ್ಣ ಅಪಾರ್ಟ್‍ಮೆಂಟೊಂದರಲ್ಲಿ ವಾಸಿಸುತ್ತಿದ್ದೆ. ನಾನಾಗ ನನ್ನ ಹೊಟ್ಟೆಗೆ ಮತ್ತು ಬಟ್ಟೆಗೆ ಸಾಕಾಗುವಷ್ಟನ್ನು ಅದ್ಹೇಗೋ ಕಷ್ಟಪಟ್ಟು ಸಂಪಾದಿಸುತ್ತಿದ್ದೆ. ಆ ದಿನಗಳಲ್ಲಿ ಆಕೆ ನನ್ನ ಪುಸ್ತಕವೊಂದನ್ನು ಓದಿ ಅದರ ಬಗ್ಗೆ ನನಗೊಂದು ಪತ್ರವನ್ನು ಬರೆದಿದ್ದಳು. ನಾನವಳಿಗೆ ಮರಳಿ ಧನ್ಯವಾದಗಳನ್ನು ಅರ್ಪಿಸಿ ಒಂದು ಪತ್ರವನ್ನು ಬರೆದಿದ್ದೆ. ಇದೀಗ ಅವಳಿಂದ ಮತ್ತೊಂದು ಪತ್ರ ಬಂದಿತ್ತು. ಅದರಲ್ಲಿ ಅವಳೀಗ ಪ್ಯಾರಿಸ್ ಮೂಲಕ ಹೋಗುತ್ತಿದ್ದಾಳೆ ಹಾಗೂ ಅಲ್ಲಿ ನನ್ನನ್ನು ನೋಡಲು ಬಯಸುತ್ತಾಳೆಂದು ಬರೆದಿದ್ದಳು. ಆದರೆ ಅಲ್ಲಿ ಅವಳಿಗೆ ಕಡಿಮೆ ಸಮಯವಿದೆಯೆಂದು ಹಾಗೂ ಅವಳು ಪುರುಸೊತ್ತಾಗಿರುವದು ಗುರುವಾರದಂದು ಮಾತ್ರವೆಂದು ಹೇಳಿದ್ದಳು. ಆಕೆ ತನ್ನ ಮುಂಜಾನೆಯನ್ನು ಲಕ್ಸಂಬರ್ಗ್‍ನಲ್ಲಿ ಕಳೆಯುವವಳಿದ್ದಳು. ಆನಂತರ ನಾನವಳಿಗೊಂದು ಫೋಯೋಟ್‍ನಲ್ಲಿ ಲಂಚಿನ್ ಕೊಟ್ಟರೆ ಹೇಗಿರುತ್ತದೆ? ಫೋಯೋಟ್‍ ರೆಸ್ಟೋರೆಂಟ್‍ ಎಂದರೆ ಅದು ಫ್ರೆಂಚ್ ಸೆನೆಟರ್‍ಗಳು ಊಟ ಮಾಡುವ ರೆಸ್ಟೋರೆಂಟ್‍ ಮತ್ತದು ನನ್ನ ಆದಾಯಕ್ಕೆ ಮೀರಿದ ರೆಸ್ಟೊರೆಂಟಾಗಿದ್ದರಿಂದ ನಾನೆಂದೂ ಅಲ್ಲಿಗೆ ಹೋಗುವ ಯೋಚನಯನ್ನೇ ಮಾಡಿರಲಿಲ್ಲ. ಆದರೆ ಅವಳ ಕರೆಗೆ ನಾನು ಪುಳಕಿತಗೊಂಡಿದ್ದೆ ಹಾಗೂ ಆಗ ನಾನಿನ್ನೂ ತರುಣನಾಗಿದ್ದರಿಂದ ಹೆಂಗಸೊಬ್ಬಳಿಗೆ ‘ನೋ’ ಎಂದು ಹೇಳಲು ಸಾಧ್ಯವಾಗಲಿಲ್ಲ. ನನ್ನ ಬಳಿ ಆ ತಿಂಗಳಿನ ಉಳಿದ ದಿನಗಳನ್ನು ಪೂರೈಸಲು ಎಂಬತ್ತು ಫ್ರ್ಯಾಂಕ್‍ಗಳಷ್ಟೇ ಇದ್ದವು. ಅಲ್ಲಿ ಒಂದು ಮಿತವಾದ ಊಟ ಹದಿನೈದು ಫ್ರ್ಯಾಂಕ್‍ಗಳಿಗಿಂತ ಹೆಚ್ಚಾಗಲಾರದು ಮತ್ತು ಮುಂದಿನ ಎರಡು ವಾರಗಳ ಕಾಲ ಕಾಫಿ ಕುಡಿಯುವದನ್ನು ನಿಲ್ಲಿಸಿದರೆ ಉಳಿದ ಖರ್ಚನ್ನು ಅದ್ಹೇಗೋ ಸರಿದೂಗಿಸಬಹುದು ಎಂದು ಭಾವಿಸಿ ಅಲ್ಲಿ ಅವಳಿಗೆ ಒಂದು ಊಟವನ್ನು ಕೊಡಿಸಬೇಕೆಂದು ನಿರ್ಧರಿಸಿದೆ. 
    ನಾನವಳಿಗೆ ಪತ್ರದ ಮೂಲಕ ಗುರುವಾರ ಮಧ್ಯಾಹ್ನ ಸರಿಯಾಗಿ ಹನ್ನೆರೆಡುವರೆ ಘಂಟೆಗೆ ಫೋಯೋಟ್‍ ರೆಸ್ಟೋರೆಂಟ್‍ನಲ್ಲಿ ಅವಳನ್ನು ಭೇಟಿಮಾಡುತ್ತೇನೆಂದು ತಿಳಿಸಿದ್ದೆ. ನಾನು ಎಣಿಸಿದಂತೆ ಅವಳು ತರುಣಿಯಾಗಿರಲಿಲ್ಲ. ನೋಡಲು ಕೂಡಾ ಅಷ್ಟೇನೂ ಚನ್ನಾಗಿರಲಿಲ್ಲ. ವಯಸ್ಸು ಸುಮಾರು ನಲವತ್ತಾಗಿರಬೇಕು. ಅವಳು ನನ್ನನ್ನು ನೋಡಿ ನಕ್ಕಾಗ ನಾನವಳಿಗೆ ದೊಡ್ಡದೊಡ್ಡ ಹಲ್ಲುಗಳಿರುವದನ್ನು ಗಮನಿಸಿದೆ. ಅವಳು ಮಾತಿನ ಮಲ್ಲಿ. ಆದರೆ ಅವಳು ನನ್ನ ಬಗ್ಗೆಯೇ ಆಸಕ್ತಿಯಿಂದ ಮಾತನಾಡುತ್ತಿದ್ದರಿಂದ ನಾನವಳನ್ನು ಸುಮ್ಮನೆ ಕೇಳುತ್ತಾ ಕುಳಿತುಕೊಂಡೆ. ವೇಟರ್ ಮೆನು ಕಾರ್ಡ್‍ನ್ನು ತಂದಿಟ್ಟನು. ನಾನು ಅದರಲ್ಲಿನ ಬೆಲೆಗಳನ್ನು ನೋಡಿ ಬೆಚ್ಚಿಬಿದ್ದೆ. ಏಕೆಂದರೆ ಅಲ್ಲಿ ಎಲ್ಲ ಪದಾರ್ಥಗಳ ಬೆಲೆಗಳು ನಾನು ನಿರೀಕ್ಷಿಸಿದ್ದಿಕ್ಕಿಂತ ಹೆಚ್ಚಿದ್ದವು. ಆದರೆ ಆಕೆ ನನಗೆ ಭರವಸೆಯನ್ನು ನೀಡಿದಳು.
    “ನಾನು ಲಂಚಿನ್‍ಗೆ ಏನನ್ನೂ ತಿನ್ನುವದಿಲ್ಲ.” ಆಕೆ ಹೇಳಿದಳು.
    “ಓ, ಡೋಂಟ್ ಸೇ ದ್ಯಾಟ್!” ನಾನು ಔದಾರ್ಯದಿಂದ ಹೇಳಿದೆ.     
    “ನಾನು ಒಂದಕ್ಕಿಂತ ಹೆಚ್ಚಾಗಿ ಬೇರೇನನ್ನೂ ತಿನ್ನುವದಿಲ್ಲ. ನನಗನಿಸುತ್ತೆ ಇತ್ತೀಚಿನ ದಿನಗಳಲ್ಲಿ ಜನ ಚನ್ನಾಗಿ ತಿಂತಾರೆಂದು. ನನಗೆ ಸಣ್ಣದೊಂದು ಮೀನಾದರೆ ಅಡ್ಡಿಯಿಲ್ಲ. ಇವರ ಬಳಿ ಸಾಲ್ಮನ್ ಮೀನು ಇದೆಯಾ ನೋಡಬೇಕು.”
    ಆದರೆ ಸಾಲ್ಮನ್ ಮೀನುಗಳು ವರ್ಷದ ಆರಂಭದಲ್ಲಿ ಸಿಗುವದಿಲ್ಲವೆಂದು ನನಗೆ ಗೊತ್ತಿತ್ತು. ಮೇಲಾಗಿ ಮೆನು ಕಾರ್ಡಿನಲ್ಲಿ ಅದನ್ನು ಹೆಸರಿಸಿರಲಿಲ್ಲ. ಅದರ ಬದಲಿಗೆ ಬೇರೆ ಏನಾದರು ಇದೆಯಾ ಎಂದು ನಾನು ವೇಟರ್‍ನನ್ನು ಕೇಳಿದೆ. ಅವನು ಈಗಷ್ಟೇ ಸಾಲ್ಮನ್ ಮೀನು ಬಂದಿದೆ ಎಂದು ಹೇಳಿದ. ನಾನದನ್ನು ನನ್ನ ಅತಿಥಿಗಾಗಿ ಆರ್ಡರ್ ಮಾಡಿದೆ. ವೇಟರ್ ಅವಳನ್ನು ಅದು ತಯಾರಾಗುವವರೆಗೂ ಬೇರೆ ಏನಾದರು ಬೇಕಾ ಎಂದು ಕೇಳಿದ.   
    “ಬೇಡ,” ಅವಳು ಉತ್ತರಿಸಿದಳು, “ನಾನು ಒಂದಕ್ಕಿಂತ ಹೆಚ್ಚಾಗಿ ಬೇರೆ ಏನನ್ನೂ ತಿನ್ನುವದಿಲ್ಲ ಕೇವರಿಯನ್ನು ಬಿಟ್ಟು. ನನಗೆ ಕೇವರಿ ಅಡ್ಡಿಯಿಲ್ಲ.” ನನ್ನೆದೆ ಒಂದು ಕ್ಷಣ ಧಸಕ್ ಎಂದಿತು. ನನಗೆ ಗೊತ್ತಿತ್ತು ಕೇವರಿ ನನಗೆ ನಿಲುಕದ್ದು ಎಂದು. ಆದರೂ ವೇಟರ್‍ಗೆ ಒಂದು ಕೇವರಿ ತರಲು ಹೇಳಿದೆ ಮತ್ತು ನನಗೋಸ್ಕರ ಮೆನು ಕಾರ್ಡಿನಲ್ಲಿ ಅತ್ಯಂತ ಅಗ್ಗದ ಪದಾರ್ಥವೊಂದನ್ನು ನೋಡಿ ಕೊನೆಗೆ ಮಟನ್ ಚಾಪ್ ತರಲು ಹೇಳಿದೆ. 
    “ಇಷ್ಟೊತ್ತಲ್ಲಿ ಮಟನ್ ತಿನ್ನೋದು ನೋಡಿದರೆ ನೀನು ತಪ್ಪು ಮಾಡುತ್ತಿದ್ದೀಯಾ ಅಂತಾ ನನಗನಿಸುತ್ತೆ.” ಅವಳು ಹೇಳಿದಳು. “ಚಾಪ್ಸ್‍ನಂಥ ಭಾರವಾದ ಪದಾರ್ಥಗಳನ್ನು ತಿಂದ ಮೇಲೆ ನೀನು ಮತ್ತೆ ನಿನ್ನ ಕೆಲಸವನ್ನು ಹೇಗೆ ಮುಂದುವರಿಸುತ್ತೀಯಾ ಅಂತಾ ನನಗೆ ಆಶ್ಚರ್ಯ. ಆದರೆ ನಾನು ಮಾತ್ರ ಯಾವತ್ತೂ ನನ್ನ ಹೊಟ್ಟೆಯನ್ನು ಮಿತಿಮೀರಿ ತುಂಬುವದಿಲ್ಲ.”
    ಈಗ ಡ್ರಿಂಕ್ಸ್ ತೆಗೆದುಕೊಳ್ಳುವ ಪ್ರಶ್ನೆ ಬಂತು.
    “ನಾನು ಲಂಚ್‍ಗೆ ಏನನ್ನೂ ಕುಡಿಯುವದಿಲ್ಲ.” ಅವಳು ಹೇಳಿದಳು.
    “ನಾನು ಕೂಡಾ ಏನನ್ನೂ ಕುಡಿಯುವದಿಲ್ಲ.” ನಾನು ಕೂಡಲೇ ಉತ್ತರಿಸಿದೆ.
    “ವೈಟ್ ವೈನ್ ಬಿಟ್ಟು” ನಾನು ಮಾತನಾಡಿಯೇ ಇಲ್ಲವೆಂಬಂತೆ ಆಕೆ ಮುಂದುವರಿದಳು.
    “ಫ್ರೆಂಚ್ ವೈಟ್ ವೈನ್‍ಗಳು ತುಂಬಾ ಹಗುರ. ಅವು ಪಚನಕ್ರಿಯೆಗೆ ತುಂಬಾ ಸಹಾಯ ಮಾಡುತ್ತವೆ.”
    “ಏನು ತಗೊಳ್ತೀರಾ?”  ನಾನು ಆದರಪೂರ್ವಕವಾಗಿ ಅವಳನ್ನು ಕೇಳಿದೆ ಆದರೆ ಬಲವಂತ ಮಾಡಲಿಲ್ಲ.
    “ನನ್ನ ಡಾಕ್ಟರ್ ನನಗೆ ಶಾಂಪೇನ್ ಬಿಟ್ಟು ಬೇರೇನನ್ನೂ ಕುಡಿಯಲು ಬಿಡುವದಿಲ್ಲ.”
    ನಾನು ಸ್ವಲ್ಪ ಮಂಕಾದನೆಂದು ನನಗನಿಸಿತು. ಆದರೆ ಅದನ್ನು ತೋರಿಸಿಕೊಳ್ಳದೆ ಅರ್ಧ ಬಾಟಲ್‍ಗೆ ಆರ್ಡರ್ ಮಾಡಿ ನಾನು ಸಹಜವಾಗಿ ಅವಳಿಗೆ “ನನ್ನ ಡಾಕ್ಟರ್ ನಾನು ಯಾವತ್ತೂ ಶಾಂಪೇನ್ ಕುಡಿಯಕೂಡದೆಂದು ಹೇಳಿದ್ದಾರೆ.” ಎಂದು ಹೇಳಿದೆ.    
    “ಹಾಗಾದ್ರೆ ನೀನು ಏನು ಕುಡಿತೀಯಾ?”
    “ನೀರು.”
    ಆಕೆ ಕೇವರಿ ಮತ್ತು ಸಾಲ್ಮನ್‍ಗಳೆರಡನ್ನೂ ತಿಂದಳು. ಆಕೆ ಕಲೆ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ವಿನೋದವಾಗಿ ಮಾತನಾಡಿದಳು. ಆದರೆ ಬಿಲ್ಲು ಎಷ್ಟು ಬರಬಹುದೆಂಬ ಆತಂಕದಲ್ಲಿ ನಾನು ಕುಳಿತಿದ್ದೆ. ನನ್ನ ಮಟನ್ ಚಾಪ್ ಬಂದಾಗ ಅವಳು ನನಗೆ ಗಂಭೀರವಾಗಿ ಹೇಳಿದಳು.
    “ನನಗನಿಸುತ್ತೆ ನೀನು ಸದಾ ಭಾರವಾದ ಲಂಚ್ ತಗೊಳ್ತೀಯಾ ಅಂತಾ. ಅದು ತಪ್ಪು. ನೀನ್ಯಾಕೆ ನನ್ನ ತರ ಒಂದನ್ನೇ ತಿನ್ನಬಾರದು? ಅದು ಯಾವಾಗ್ಲೂ ಒಳ್ಳೇದು.” 
    “ನಾನು ಒಂದನ್ನೇ ತಿಂತಾ ಇರೋದು.” ನಾನು ಹೇಳಿದೆ. ಮತ್ತೆ ವೇಟರ್ ಬಿಲ್ಲು ಹಿಡಿಕೊಂಡು ಬಂದ.  
    ಆದರೆ ಆಕೆ ಅವನನ್ನು ಕೈ ಸನ್ನೆಯಿಂದ ನಿರಾಕರಿಸುತ್ತಾ ಹೇಳಿದಳು.
    “ನೋ, ನೋ, ನಾನು ಲಂಚ್‍ಗೆ ಬೇರೇನನ್ನೂ ತಿನ್ನುವದಿಲ್ಲ. ಬಹುಶಃ, ಅಸ್ಪರಾಗಸ್ (ಒಂದು ತೆರದ ಫ್ರೆಂಚ್ ಸೊಪ್ಪಿನ ಎಲೆಗಳು) ಬಿಟ್ಟರೆ ನಾನು ಬೇರೇನೂ ತಗೊಳ್ಳಲಾರೆ ಅನಿಸುತ್ತೆ. ಪ್ಯಾರಿಸ್‍ಗೆ ಬಂದ ಮೇಲೆ ಅವನ್ನು ತಿನ್ನದೆ ಹಾಗೆ ಹೋಗುವದು ಮೂರ್ಖತನವೆನಿಸುತ್ತದೆ.” 
    ನನ್ನೆದೆಗೆ ಚುಚ್ಚಿದಂತಾಯಿತು. ನಾನವನ್ನು ಅಂಗಡಿಗಳಲ್ಲಿ ನೋಡಿದ್ದೆ ಹಾಗೂ ಅವು ತುಂಬಾ ದುಬಾರಿಯವು ಎಂದು ನನಗೆ ಗೊತ್ತಿತ್ತು. ಅವನ್ನು ನೋಡಿ ಎಷ್ಟೋ ಸಾರಿ ನನ್ನ ಬಾಯಲ್ಲಿ ನೀರಾಡಿತ್ತು.
    “ಮೇಡಮ್, ಅಸ್ಪರಾಗಸ್ ಇವೆಯಾ ಎಂದು ಕೇಳುತ್ತಿದ್ದಾರೆ.”  ನಾನು ವೇಟರ್‍ನನ್ನು ಕೇಳಿದೆ. 
    ಅವನು ಇಲ್ಲ ಎಂದು ಹೇಳಲಿ ಎಂಬಂತೆ ಅವನನ್ನು ಕೇಳಿದ್ದೆ. ಆದರೆ ಅವನ ಮುಖದ ಮೇಲೆ ಸಂತೋಷದ ಮುಗುಳ್ನಗೆಯೊಂದು ಅಗಲವಾಗಿ ಕಾಣಿಸಿತು. ಅವನು ಅವು ಇವೆಯೆಂದೂ, ಸೊಗಸಾಗಿವೆಯೆಂದೂ, ಎಳೆಯವಾಗಿವೆಯೆಂದೂ ಮತ್ತು ಚನ್ನಾಗಿವೆಯೆಂದೂ ಹೇಳಿದ.
    “ನಿಜ ಹೇಳಬೇಕೆಂದರೆ ನನಗೆ ಹಸಿವೆ ಇಲ್ಲ,” ನನ್ನ ಅತಿಥಿ ನಿಟ್ಟುಸಿರಿಡುತ್ತಾ ಹೇಳಿದಳು, “ಆದರೆ ನಿಮ್ಮ ಒತ್ತಾಯಕ್ಕೆ ಮಣಿದು ಕೆಲವು ಅಸ್ಪರಾಗಸ್ ತಿನ್ನಬಲ್ಲೆ.”
    ನಾನು ಅವನ್ನು ತರಲು ಹೇಳಿದೆ.
    “ನೀನು ತಗೋಳಲ್ವಾ?”
    “ಇಲ್ಲ, ನಾನು ಅಸ್ಪರಾಗಸ್ ತಿನ್ನುವದಿಲ್ಲ.”
    “ನಂಗೊತ್ತು ಕೆಲವರು ಅವನ್ನು ತಿನ್ನುವದಿಲ್ಲವೆಂದು. ಆದರೆ ನಿಜ ಏನೆಂದರೆ ಬರೀ ಮಾಂಸವನ್ನೇ ತಿನ್ನುವದರಿಂದ ನೀನು ನಿನ್ನ ಅಭಿರುಚಿಯನ್ನು ಕಳೆದುಕೊಳ್ತಿಯಾ.”
    ಅಸ್ಪರಾಗಸ್ ತಯಾರಾಗುವವರೆಗೂ ಕಾಯುತ್ತಾ ಕುಳಿತೆವು. ಭಯ ನನ್ನನ್ನು ಆವರಿಸಿತ್ತು. ಉಳಿದ ತಿಂಗಳನ್ನು ಹೇಗೆ ಕಳೆಯುತ್ತೆನೆ ಎನ್ನುವದಕ್ಕಿಂತ ಹೆಚ್ಚಾಗಿ ಇದೀಗ ಬಿಲ್ಲು ಕೊಡಲು ನನ್ನ ಬಳಿ ಅಷ್ಟು ಹಣವಿದೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಬಿಲ್ಲು ಕೊಡಲು ನನ್ನ ಬಳಿಯಿರುವ ಹಣದಲ್ಲಿ ಹತ್ತು ಫ್ರಾಂಕ್‍ಗಳಷ್ಟು ಕಡಿಮೆಬೀಳಬಹುದೇನೋ. ಆಗ ನನ್ನ ಅತಿಥಿಯ ಕಡೆಯಿಂದ ಸಾಲ ತೆಗೆದುಕೊಳ್ಳಬೇಕು. ಆದರೆ ನನಗೆ ಅದು ಸರಿ ಕಾಣಲಿಲ್ಲ. ನನ್ನ ಬಳಿ ಎಷ್ಟು ಹಣವಿದೆಯೆಂದು ನನಗೆ ಚನ್ನಾಗಿ ಗೊತ್ತಿತ್ತು. ಒಂದು ವೇಳೆ ಬಿಲ್ಲು ಹೆಚ್ಚು ಬಂದರೆ ನಾನು ನನ್ನ ಜೇಬಿನಲ್ಲಿ ಕೈಯಿಟ್ಟು ಹಣಕ್ಕಾಗಿ ಹುಡುಕುವ ತರ ನಾಟಕ ಮಾಡಿ ನಂತರ ಅದು ಕಳೆದುಹೋಗಿದೆ ಎಂದು ಹೇಳಲು ನಿರ್ಧರಿಸಿದ್ದೆ. ಒಂದು ವೇಳೆ ಬಿಲ್ಲು ಕಟ್ಟಲು ಅವಳ ಹತ್ತಿರಾನೂ ಅಷ್ಟೊಂದು ದುಡ್ಡು ಇರದೆ ಹೋದರೆ ಪೇಚಿಗೆ ಸಿಲುಕಬೇಕಾಗುತ್ತದೆ. ಆಗ ನನ್ನ ವಾಚ್‍ನ್ನು ಅವರ ಬಳಿ ಅಡ ಇಟ್ಟು ಆಮೇಲೆ ಬಂದು ಬಿಲ್ಲು ಕಟ್ಟುತ್ತೇನೆ ಎಂದು ಹೇಳಬೇಕಂದೆ.     
    ಅಸ್ಪರಾಗಸ್ ಬಂದವು. ಅವು ದೊಡ್ಡದಾಗಿಯೂ, ರಸವತ್ತಾಗಿಯೂ, ಬಾಯಲ್ಲಿ ನೀರೂರಿಸುವಂತೆಯೂ ಇದ್ದವು. ಕರಗಿದ ಬೆಣ್ಣೆಯ ವಾಸನೆ ನನ್ನ ಮೂಗಿನ ಹೊಳ್ಳೆಗಳನ್ನು ಚುರುಕುಗೊಳಿಸಿದವು. ಆದರೆ ನಾನು ಅವಳು ತಿನ್ನುವದನ್ನೇ ನೋಡುತ್ತಾ ಕುಳಿತೆ. ಅವಳು ಅವನ್ನು ಒಂದೊಂದಾಗಿ ತಿಂದು ಮುಗಿಸಿದಳು.
    “ಕಾಫಿ?” ನಾನು ಕೇಳಿದೆ.
    “ಎಸ್, ಜಸ್ಟ್ ಯ್ಯಾನ್ ಐಸ್ ಕ್ರೀಮ್ ಯ್ಯಾಂಡ್ ಕಾಫಿ.” ಅವಳು ಹೇಳಿದಳು.
    ಇದೀಗ ನಾನು ಮಿತಿಮೀರಿ ಕಾಳಜಿ ತೋರಿಸುತ್ತಿದ್ದೆ. ಅಥವಾ ಹಾಗೆ ನಾಟಕ ಮಾಡುತ್ತಿದ್ದೆ. ನಾನು ನನಗೊಂದು ಕಾಫಿಯನ್ನು ಹಾಗೂ ಅವಳಿಗೊಂದು ಐಸ್ ಕ್ರೀಮ್ ಮತ್ತು ಕಾಫಿಯನ್ನು ಹೇಳಿದೆ.
    “ಯೂ ನೋ, ನನಗೆ ಅನಿಸೋದು ಏನಂದರೆ,” ಅವಳು ಐಸ್ ಕ್ರೀಮ್ ತಿನ್ನುತ್ತಾ ಹೇಳಿದಳು. “ನಾವು ಯಾವಾಗ್ಲೂ ಇನ್ನೂ ಸ್ವಲ್ಪ ತಿಂದಿದ್ದರೆ ನಡೆಯುತ್ತಿತ್ತೇನೋ ಎನ್ನುವ ಭಾವನೆಯೊಂದಿಗೆ ಊಟದ ತಟ್ಟೆಯನ್ನು ಬಿಟ್ಟೇಳಬೇಕು.”  
    “ನಿಮಗಿನ್ನೂ ಹಸಿವಿದೆಯಾ?” ನಾನು ಕೇಳಿಯೂ ಕೇಳದಂತೆ ಕೇಳಿದೆ.
    “ಓ, ನೋ! ಐ ಯ್ಯಾಮ್ ನಾಟ್ ಹಂಗ್ರಿ. ಯೂ ಸೀ, ಐ ಡೋಂಟ್ ಈಟ್ ಲಂಚಿನ್. ಬೆಳಿಗ್ಗೆ ಕಾಫಿ ಬಿಟ್ಟರೆ ಇನ್ನು ನಾನು ಊಟ ಮಾಡುವದು ರಾತ್ರಿಗೇನೆ. ಆದರೆ ಮಧ್ಯಾಹ್ನದ ಊಟಕ್ಕೆ ಮಾತ್ರ ನಾನು ಒಂದಕ್ಕಿಂತ ಹೆಚ್ಚಾಗಿ ಬೇರೇನೇನನ್ನೂ ತಿನ್ನುವದಿಲ್ಲ.”
    “ಓ, ಐ ಸೀ!”
    ಆಗ ಅಲ್ಲೊಂದು ಅಸಾಧ್ಯವಾದ ಘಟನೆ ನಡೆಯಿತು. ನಾವು ಕಾಫಿಗಾಗಿ ಕಾಯುತ್ತಾ ಕುಳಿತಿರುವಾಗ ಹೆಡ್ ವೇಟರ್ ನಮ್ಮ ಅನುಗ್ರಹವನ್ನು ಸಂಪಾದಿಸಲೆಂಬಂತೆ ಔಪಚಾರಿಕ ನಗು ನಗುತ್ತಾ ನಮ್ಮತ್ತ ಧಾವಿಸಿ ಬಂದ. ಅವನ ಕೈಯಲ್ಲಿ ಪೀಚ್ ಹಣ್ಣುಗಳ ಬುಟ್ಟಿಯಿತ್ತು. ಅವು ಹದಿಹರೆಯದ ಹುಡುಗಿಯೊಬ್ಬಳ ಕೆಂಪೇರಿದ ಕೆನ್ನೆಗಳಂತೆ ಕಾಣುತಿದ್ದವು. ಆದರೆ ಅದು ಆಗ ಪೀಚ್ ಹಣ್ಣುಗಳಿಗೆ ಖಂಡಿತ ಸೂಕ್ತಕಾಲವಾಗಿರಲಿಲ್ಲ. ಅವುಗಳ ಬೆಲೆ ಎಷ್ಟೆಂದು ಆ ದೇವರಿಗೊಬ್ಬನಿಗೆ ಮಾತ್ರ ಗೊತ್ತಿತ್ತು. ನಂತರ ನನಗೂ ಗೊತ್ತಾಯಿತು. ಆಕೆ ನನ್ನೊಂದಿಗೆ ಮಾತನಾಡುತ್ತಾ ಅವಳಿಗರಿವಿಲ್ಲದೆ ಒಂದು ಹಣ್ಣನ್ನು ಎತ್ತಿಕೊಂಡಳು.
    “ಯೂ ಸೀ , ನೀನು ಹೊಟ್ಟೆ ಬಿರಿಯುವಂತೆ ಮಾಂಸವನ್ನು ತಿಂದಿದ್ದಿರಿಂದ ಈಗ ನೀನು ಬೇರೇನನ್ನೂ ತಿನ್ನಲಾರಿ. ಆದರೆ ನಾನು ಬರೀ ಸ್ನ್ಯಾಕ್ ಅಷ್ಟೇ ತಿಂದಿದ್ದೇನೆ. ಹಾಗಾಗಿ ನಾನು ಈ ಪೀಚ್ ಹಣ್ಣನ್ನು ತಿನ್ನುತ್ತೇನೆ.”  
    ಬಿಲ್ ಬಂತು. ನಾನದನ್ನು ಪಾವತಿಸಿದಾಗ ಟಿಪ್ಸ್ ಕೊಡಲು ನನ್ನ ಬಳಿ ಮೂರೇ ಮೂರು ಫ್ರಾಂಕ್‍ಗಳು ಉಳಿದಿದ್ದವು. ನಾನದನ್ನು ವೇಟರ್‍ಗಾಗಿ ಬಿಟ್ಟೆ. ಅವಳದನ್ನು ನೋಡಿ ನಾನು ಜಿಪುಣನಿರಬೇಕೆಂದು ಭಾವಿಸಿದಳೇನೋ. ಆದರೆ ನಾನು ರೆಸ್ಟೋರೆಂಟ್‍ನಿಂದ ಹೊರಗೆ ನಡೆದಾಗ ನನಗೆ ಗೊತ್ತಾಯಿತು ನನ್ನ ಮುಂದೆ ಅರ್ಧ ತಿಂಗಳು ಬಾಕಿ ಇದೆಯೆಂದೂ ಆದರೆ ಕಿಸೆಯಲ್ಲಿ ಒಂದು ಪೈಸೆಯೂ ಇಲ್ಲವೆಂದು. 
    “ನನ್ನ ಉದಾಹರಣೆಯನ್ನು ಅನುಸರಿಸು.” ಅವಳು ನನ್ನ ಕೈ ಕುಲುಕುತ್ತಾ ಹೇಳಿದಳು. “ಮತ್ತು ಮಧ್ಯಾಹ್ನದ ಊಟಕ್ಕೆ ಒಂದಕ್ಕಿಂತ ಹೆಚ್ಚಿಗೆ ಬೇರೇನನ್ನೂ ತಿನ್ನಬೇಡ.”
    “ನಿಮ್ಮ ಉದಾಹರಣೆಗಿಂತ ನನ್ನ ಉದಾಹರಣೆಯನ್ನೇ ಅನುಸರಿಸುತ್ತೇನೆ,” ನಾನು ಮಾರ್ನುಡಿದೆ. “ಇವತ್ತು ರಾತ್ರಿಯ ಊಟಕ್ಕೆ ನಾನು ಏನನ್ನೂ ತಿನ್ನುವದಿಲ್ಲ.”  
    ಹಾಸ್ಯಗಾರ,” ಆಕೆ ಕ್ಯಾಬಿನಲ್ಲಿ ಕುಳಿತುಕೊಳ್ಳುತ್ತಾ ಖುಷಿಯಿಂದ ಕಿರುಚಿದಳು. “ನೀನೊಬ್ಬ ಒಳ್ಳೆ ಹಾಸ್ಯಗಾರ!” ಎನ್ನುತ್ತಾ ಹೊರಟು ಹೋದಳು.
    ಕೊನೆಯಲ್ಲಿ ನಾನು ನನ್ನ ಬಳಿಯಿದ್ದ ಎಲ್ಲ ದುಡ್ಡನ್ನು ಕಳೆದುಕೊಂಡಿದ್ದೆ. ಆದರೆ ಅದರ ಬಗ್ಗೆ ನನಗೆ ಒಂಚೂರು ಪಶ್ಚಾತಾಪವಿರಲಿಲ್ಲ. ಏಕೆಂದರೆ ಒಂದು ಹೆಣ್ಣಿಗೆ ನನ್ನ ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ಒಂದು ಪಾರ್ಟಿ ಕೊಟ್ಟ ಖುಷಿ ನನ್ನ ಜೊತೆಯಲ್ಲಿತ್ತು. ಆ ದೇವರು ಇಂಥ ಅವಕಾಶಗಳನ್ನು ನನ್ನಂಥವರಿಗೆ ತಾನಾಗಿಯೇ ಕರುಣಿಸಿದಾಗ ತಿರಸ್ಕರಿಸಲು ಸಾಧ್ಯವೇ? 
    ಅಂದ್ಹಾಗೆ ಆಕೆ ಇವತ್ತು 294 ಪೌಂಡುಗಳಷ್ಟು ತೂಗುತ್ತಾಳೆ.
    ಮೂಲ ಇಂಗ್ಲೀಷ್: ಸೋಮರ್‍ಸೆಟ್ ಮೌಮ್
    ಕನ್ನಡಕ್ಕೆ: ಉದಯ್ ಇಟಗಿ
    ದಿನಾಂಕ 8-3-2015 ರ “ಉದಯವಾಣಿ”ಯಲ್ಲಿ ಈ ಕಥೆ ಪ್ರಕಟ

      
    ಅವಧಿಯಲ್ಲಿ ಪ್ರಕಟವಾದ ಕಥೆ:
    http://avadhimag.com/2015/03/04/%E0%B2%89%E0%B2%A6%E0%B2%AF%E0%B3%8D-%E0%B2%87%E0%B2%9F%E0%B2%97%E0%B2%BF-%E0%B2%85%E0%B2%A8%E0%B3%81%E0%B2%B5%E0%B2%BE%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%B8%E0%B2%BE%E0%B2%AE/

    1 ಕಾಮೆಂಟ್‌(ಗಳು):

    sunaath ಹೇಳಿದರು...

    ಆಹ್! ತುಂಬ ಸುಂದರವಾದ ಕಥೆ! ಅನುವಾದವೂ ಸಹ ಸೊಗಸಾಗಿದೆ.