ಗಡಾಫಿ ಒಬ್ಬ
ಸ್ತ್ರೀವಾದಿ ಮತ್ತು ಜಾತ್ಯಾತೀತ ನಾಯಕನಾಗಿದ್ದ: ಗಡಾಫಿ ಒಬ್ಬ ನಿಜವಾದ
ಸ್ತ್ರೀವಾದಿ ಮತ್ತು
ಜಾತ್ಯಾತೀತ ನಾಯಕನಾಗಿದ್ದ. ಹೆಂಗಸರು
ಗಂಡಸರಷ್ಟೇ ಸರಿಸಮಾನರು ಎಂಬ ಮಹಿಳಾಪರ ಧೋರಣೆಯನ್ನು ಪ್ರತಿಪಾದಿಸುತ್ತಿದ್ದ. ತನ್ನ ಅಧಿಕಾರಾವಧಿಯಲ್ಲಿ ತನ್ನ ದೇಶದ ಸ್ತ್ರೀಯರಿಗೆ ಎಲ್ಲ ರಂಗಗಳಲ್ಲಿ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ಆತ ತನ್ನ “ಗ್ರೀನ್ ಬುಕ್” ನಲ್ಲಿ ಸ್ತ್ರೀಯರನ್ನು ಕುರಿತಂತೆ ಹೀಗೆ ಹೇಳುತ್ತಾನೆ.; “ಗಂಡಸಿನಂತೆ ಹೆಣ್ಣು ಸಹ ಕುಡಿಯುತ್ತಾಳೆ, ತಿನ್ನುತ್ತಾಳೆ, ಪ್ರೀತಿಸುತ್ತಾಳೆ, ದ್ವೇಷಿಸುತ್ತಾಳೆ, ಯೋಚಿಸುತ್ತಾಳೆ, ಕಲಿಯತ್ತಾಳೆ, ಮತ್ತು ಅರ್ಥಮಾಡಿಕೊಳ್ಳುತ್ತಾಳೆ. ಹಾಗಿದ್ದ ಮೇಲೆ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದ್ದ. ಜೈವಿಕವಾಗಿ
ದೇಹರಚನೆಯೊಂದನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿ ಹೆಂಗಸರು ಗಂಡಸರಷ್ಟೇ ಸಮರ್ಥರು. ಹಾಗೆ
ನೋಡಿದರೆ ಹೆಂಗಸರು ಗಂಡಸರಿಗಿಂತ ವಿಭಿನ್ನರು ಮತ್ತು ಅದೃಷ್ಟವಂತರು. ಅವರಂತೆ ಗಂಡಸರು ಪ್ರತಿ
ತಿಂಗಳು ಮುಟ್ಟಾಗಲಾರರು, ಹೊರಲಾರರು, ಹೆರಲಾರರು, ಹಾಲುಣಿಸಲಾರರು. ಆದರೆ ಗಂಡಸರು ಈ ಎಲ್ಲ
ನಿಸರ್ಗದತ್ತ ಸಂಭ್ರಮಗಳಿಂದ ವಂಚಿತರು. ಹೀಗಾಗಿ ಆತ ಹೆಣ್ತನ ಒಂದು ಶಾಪವೆಂದು ಭಾವಿಸದೇ ವರವೆಂದು ಭಾವಿಸಿರಿ”
ಎಂದು ಇಲ್ಲಿಯ
ಮಹಿಳೆಯರಿಗೆ ಕರೆಕೊಟ್ಟಿದ್ದ. ಆ ನಿಟ್ಟಿನಲ್ಲಿ ಹೆಂಗಸರಿಗೆ ಎಲ್ಲ ರಂಗಗಳಲ್ಲಿ ಸರಿಸಮನಾದ
ಅವಕಾಶಗಳನ್ನು ಕಲ್ಪಿಸಿಕೊಟ್ಟ. ಅವರು ಓದಿದ ಮೇಲೆ ಅವರಿಗೆ ಕೆಲಸ ಸಿಕ್ಕರೆ ಪರ್ವಾಗಿಲ್ಲ. ಒಂದು ವೇಳೆ ಸಿಗದೇ ಹೋದರೆ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 100 ದಿನಾರುಗಳನ್ನು ಕೊಡುತ್ತಿದ್ದ. ಒಂದು ವೇಳೆ ಅವರು ಅನಕ್ಷರಸ್ಥರಾಗಿದ್ದರೆ ಅವರು ಯಾವುದಾದರೂ ವ್ಯಾಪಾರ ಮಾಡಲು ಅವರಿಗೆ ಹದಿನೈದು ಸಾವಿರ ದಿನಾರಗಳಷ್ಟು ಸಾಲ ಕೊಟ್ಟು ಅದನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ತೀರಿಸುವಂತೆ ಹೇಳುತ್ತಿದ್ದ. ಒಂದು ವೇಳೆ ಅವರಿಗೆ ವ್ಯಾಪಾರದಲ್ಲಿ ನಷ್ಟವುಂಟಾದರೆ ಇನ್ನೊಂದು ಅವಕಾಶವನ್ನು ಕೊಟ್ಟು ಬರೀ ಅರ್ಧದಷ್ಟು ಮೊತ್ತವನ್ನು ತೀರಿಸಲು ಹೇಳುತ್ತಿದ್ದ. ಆಗಲೂ ಅಭಿವೃದ್ಧಿಯಾಗದೇ ಹೋದರೆ ಅವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿದ್ದ. ಒಟ್ಟಿನಲ್ಲಿ ಗಡಾಫಿ ಹೆಣ್ಣುಮಕ್ಕಳು ಆರ್ಥಿಕವಾಗಿ ಆದಷ್ಟು ಸ್ವತಂತ್ರವಾಗಿರಬೇಕು ಎಂದು ಹೇಳುತ್ತಿದ್ದ. ಇನ್ನು ಗಂಡನಿಂದ ವಿಚ್ಛೇದನ ಪಡೆದ ಹೆಣ್ಣುಮಗಳು ಆಕೆ ಗಂಡನಿಂದ ಪರಿಹಾರವನ್ನು ಪಡೆಯುವದಲ್ಲದೇ ಸರಕಾರದಿಂದಲೂ ಸಹ ಪ್ರತಿ ತಿಂಗಳು ಪರಿಹಾರವನ್ನು ಪಡೆಯುತ್ತಿದ್ದಳು. ವಿಚ್ಛೇದಿತಳು ಸರಕಾರಿ ಕೆಲಸದಲ್ಲಿದ್ದರೆ ಅವಳಿಗೆ 250 ದಿನಾರಗಳನ್ನು ಕೊಡುತ್ತಿದ್ದ. ಇಲ್ಲದಿದ್ದರೆ 450 ದಿನಾರುಗಳನ್ನು ಕೊಡುತ್ತಿದ್ದ. ಇದೇ ನೀತಿ ವಿಧವೆಯರಿಗೂ ಅನ್ವಯಿಸುತ್ತಿತ್ತು. ಅವರು ಪ್ರತಿ ಸಾರಿ ಮಗು ಹೆತ್ತಾಗಲೂ ಅವರಿಗೆ 5000 ಡಾಲರ್ಗಳಷ್ಟು ಪರಿಹಾರ ನೀಡುತ್ತಿದ್ದ. ಮದುವೆ ಮಾಡಿಕೊಳ್ಳುವ
ಇಲ್ಲಿನ ಗಂಡಸರು ಖಡ್ಡಾಯವಾಗಿ ತಮ್ಮ
ಹೆಂಡತಿಯ ಹೆಸರಲ್ಲಿ ಒಂದು ಮನೆಯನ್ನು ಬರೆಯಲೇಬೇಕಿತ್ತು. ಒಂದು ವೇಳೆ ಅವರು ಇನ್ನೊಂದು ಮದುವೆಯಾಗುವದಾದರೆ ಖಡ್ಡಾಯವಾಗಿ ಮೊದಲ ಹೆಂಡತಿಯ ಅಪ್ಪಣೆಯನ್ನು ಪಡೆಯಲೇಬೇಕೆನ್ನುವ ಕಾನೂನನ್ನು ಜಾರಿಗೆ ತಂದನು. ಮಾತ್ರವಲ್ಲ ಅಂತರಾಷ್ಟ್ರೀಯ
ಮಟ್ಟದಲ್ಲಿ ಲಿಬಿಯನ್ ಹೆಂಗಸರ ಸ್ಥಾನಮಾನಗಳಿಗಾಗಿ ಬಡಿದಾಡಿದ. ಒಂದುವೇಳೆ ಲಿಬಿಯನ್
ಹೆಣ್ಣುಮಗಳೊಬ್ಬಳು ಯೂರೋಪಿಯನ್ನರನ್ನೋ, ಇಂಗ್ಲೀಷ್‍ರನ್ನೋ ಮದುವೆಯಾದರೆ ಅವರಿಗೆ ತತ್‍ಕ್ಷಣ ಅಲ್ಲಿಯ ಪೌರತ್ವ ಸಿಗಬೇಕೆಂದು ಆಗ್ರಹಿಸಿದ. ಒಂದುವೇಳೆ ಅವರಿಂದ
ಆಕೆಗೇನಾದರು ವಿಚ್ಛೇದನವಾದರೆ ಗಂಡನಿಂದ ನ್ಯಾಯಯುತವಾಗಿ ಆಕೆಗೆ ಏನೇನೋ ಸಿಗಬೇಕೋ ಅದೆಲ್ಲಾ
ಸಿಗುವಂತೆ ಮಾಡಿದ.
ಇನ್ನು ಗಡಾಫಿ ಹೆಂಗಸರಿಗೆ
ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ
ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು ಮತ್ತು
ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸುವ
ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು
ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ.
ಹಾಗೆ ನೋಡಿದರೆ ಗಡಾಫಿ ಮಹಿಳೆಯರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಳ್ಳುವದರ ಮೂಲಕ ಅವರ
ಕಾರ್ಯದಕ್ಷತೆಯ ಬಗ್ಗೆ ಹೊರಜಗತ್ತಿಗೆ ಮನದಟ್ಟು ಮಾಡಿದ ಪ್ರಪಂಚದ ಮೊಟ್ಟಮೊದಲ ಗಂಡಸೆಂಬ
ಹೆಗ್ಗಳಿಕೆಗೆ ಪಾತ್ರನಾದ. ಮೇಲಾಗಿ ಇತರೆ ಕೆಲವು
ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿರುವಂತೆ ಅಂಥ
ನಿರ್ಬಂಧಗಳ್ಯಾವವನ್ನೂ ಆತ ಅವರಿಗೆ ವಿಧಿಸಿರಲಿಲ್ಲ. ಉದಾಹರಣೆಗೆ ಇಲ್ಲಿನ ಹೆಣ್ಣು ಮಕ್ಕಳು ಬುರ್ಖಾ ಹಾಕುತ್ತಿರಲಿಲ್ಲ
ಮತ್ತು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತಮಗೆ ಪರಿಚಯವಿರುವ ಗಂಡಸರನ್ನು ಅವರು ಯಾವುದೇ ಅಳುಕಿಲ್ಲದೇ
ಕೈ ಕುಲುಕಿ ಮಾತನಾಡಿಸುತ್ತಿದ್ದರು. ಇಲ್ಲಿನ ಹೆಣ್ಣು ಮಕ್ಕಳು ಆದಷ್ಟು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವತಂತ್ರವಾಗಿದ್ದರು.
ಆದರೆ ಅವನ ಈ ಅತಿಯಾದ ಮಹಿಳಾಪರ ಧೋರಣೆ ಮತ್ತು ಹೆಣ್ಣುಮಕ್ಕಳ ವಿಷಯದಲ್ಲಿ ಅವನು ಅನುಸರಿಸುತ್ತಿದ್ದ ಉದಾರ ನೀತಿ ಇಲ್ಲಿನ ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕುಕ್ಕಿಸಿತ್ತು. ಇದೇ ಕಾರಣಕ್ಕಾಗಿ ಒಮ್ಮೆ ಅಂದರೆ 1998 ರಲ್ಲಿ ಗಡಾಫಿ ಲಿಬಿಯಾದ
ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ ಕೆಲವು ಇಸ್ಲಾಂ ಮೂಲಭೂತವಾದಿಗಳು ಆತನ ಮೇಲೆ ಗುಂಡಿನ
ಮಳೆಗರೆದು ಕೊಲೆಗಯ್ಯಲು ಪ್ರಯತ್ನಿಸಿದರು. ಆದರೆ ಕೂದಲೆಳೆಯಲ್ಲಿ ಪಾರಾಗಿದ್ದ
ಗಡಾಫಿಯ ಅತಿಯಾದ ರಾಷ್ಟ್ರೀಯತವಾದ; ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು
ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ
ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ
ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ
ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು. ಆತ ಅಧಿಕಾರಕ್ಕೆ ಬಂದ ತಕ್ಷಣ ಅಲ್ಲಿಯವರೆಗೆ ಲಿಬಿಯಾದಲ್ಲಿ ಬೀಡು ಬಿಟ್ಟಿದ್ದ ಅಮೆರಿಕಾ ಮತ್ತು ಬ್ರಿಟಿಷ್ ಮಿಲ್ಟ್ರಿ ಬೇಸ್‍ನ್ನು ಹೊರಗೆ ದಬ್ಬಿದನು. ಜೊತೆಗೆ ಲಿಬಿಯಾದ ಸಂವಿಧಾನವನ್ನು ರದ್ದುಪಡಿಸಿ ತನ್ನದೇ ಆದ “ಲಿಬಿಯಾನಾ ಅರಬ್ ಜಮ್ಹಾರಿಯಾ” ಎನ್ನುವ ಹೊಸ ಸಂವಿಧಾನವನ್ನು ಜಾರಿಗೆ ತರುವದರ ಮೂಲಕ ಆಡಳಿತ ನಡೆಸತೊಡಗಿದನಲ್ಲದೇ ಪಾಶ್ಚಿಮಾತ್ಯರಿಂದ ಜಮ್ಹಾರಿಯಾದ ಸ್ವಾಂತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಂಡನು.
ಆತ ಮುಂಚಿನಿಂದಲೂ ಒಬ್ಬ ರಾಷ್ಟ್ರೀಯತವಾದಿಯಾಗಿದ್ದ. ಎಷ್ಟೆಂದರೆ ಆತನ ವಿಷಯದಲ್ಲಿ ಬೇರೆ ಯಾರೂ ಮೂಗು
ತೂರಿಸುವದು ಅವನಿಗೆ ಸರಿಹೋಗುತ್ತಿರಲಿಲ್ಲ. ಅವನೊಬ್ಬ ಯಾರ ಮೇಲೂ ಅವಲಂಬಿತನಾಗದ ದೊರೆಯಾಗಿದ್ದನಲ್ಲದೆ ಲಿಬಿಯಾವನ್ನು ಎಲ್ಲ ವಿಷಯಗಳಲ್ಲೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ ಅಧಿಕಾರಕ್ಕೆ ಬಂದ ತಕ್ಷಣ ಲಿಬಿಯಾದ ವಿದೇಶಿ ನೀತಿಯನ್ನು ಹಾಗೂ ಆಂತರಿಕ ನೀತಿಗಳನ್ನು ಮಾರ್ಪಡಿಸಿ ದೇಶವನ್ನು ಆಳತೊಡಗಿದನು. ಪರಿಣಾಮವಾಗಿ ಲಿಬಿಯಾ ಬಹಳ ಬೇಗನೆ ಪ್ರಗತಿಯತ್ತ ದಾಪುಗಾಲಿಡತೊಡಗಿತು. ಅವನು ಇತರೆ ಆಫ್ರಿಕಾದ ರಾಜರಂತೆ ಪಶ್ಚಿಮದವರ ಕೈಗೊಂಬೆಯಾಗದೆ ಅವರಿಗೆ ತೊಡೆ ತಟ್ಟಿ ನಿಲ್ಲುವದರ ಮೂಲಕ ಅವರ ಕೆಂಗಣ್ಣಿಗೆ ಗುರಿಯಾದ.
ಗಡಾಫಿಯ ಅತಿಯಾದ ಸಮಾಜವಾದ ಸಿದ್ಧಾಂತ: ಅವನ ಅತಿಯಾದ ಸಮಾಜವಾದದ ಸಿದ್ಧಾಂತ ಕೂಡಾ ಅವನಿಗೆ ಮುಳುವಾಯಿತೆಂದು ಇಲ್ಲಿನವರು ಹೇಳುತ್ತಾರೆ. ಅವನ ದೇಶದಲ್ಲಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಅಕ್ಷರಶಃ ಜಾರಿಯಲ್ಲಿತ್ತು. ಆತ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದ. ಇಲ್ಲಿ ಮೇಲಾಧಿಕಾರಿ-ಕೆಳಾಧಿಕಾರಿ, ಬಡವ- ಶ್ರೀಮಂತ ಎಂಬ ಬೇಧ ಭಾವ ಇರಲಿಲ್ಲ. ಅಥವಾ ಮೇಲಾಧಿಕಾರಿಯಾದವನು
ತನ್ನ ಕೈ ಕೆಳಗಿರುವ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವಂತಿರಲಿಲ್ಲ. ಒಬ್ಬ ಅಟೆಂಡರ‍್ ನಿಂದ
ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ
ಯಾವುದೇ ಹಿಂಜರಿಕೆಯಿಲ್ಲದೆ ಕುಳಿತುಕೊಳ್ಳುತ್ತಿದ್ದ. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರನ್ನು
ಬಳಸುತ್ತಿದ್ದ. ಆತನೊಟ್ಟಿಗೆ ಕುಳಿತು ಕಾಫಿ ಕುಡಿಯುತ್ತಿದ್ದ. ಹಾಗೆಯೇ ಡೀನ್ ಆದವನು
ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿರಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ
ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತಿತ್ತು. ಒಂದುವೇಳೆ ಅವನು ಬೇರೆ
ಕೆಲಸದಲ್ಲಿ ಮಗ್ನನಾಗಿದ್ದರೆ ಅವನ ಕೆಲಸ ಮುಗಿಯುವವರೆಗೂ ಈತನು ಕಾಯಬೇಕಾಗುತ್ತಿತ್ತು. ಇವತ್ತು ಒಂದು ಆಸ್ಪತ್ರೆಯ ಕಸಗೂಡಿಸುವವನು ನಾಳೆ ದಿಢೀರ್ ಅಂತಾ ಅದೇ ಆಸ್ಪತ್ರೆಯ ಮುದೀರ್ (ಮುಖ್ಯಸ್ಥ) ಆಗಬಹುದಿತ್ತು. ಹೀಗಾಗಿ ಮುದೀರ್ ಆದವನು ಯಾವತ್ತೂ ತನ್ನ ಕೆಳಾಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರಲಿಲ್ಲ ಮತ್ತು ಅಧಿಕಾರದ ಅಮಲಿನಲ್ಲಿ ತೇಲುತ್ತಿರಲಿಲ್ಲ. ಏಕೆಂದರೆ ಇವತ್ತು ಮೇಲಾಧಿಕಾರಿಯಾದವನು ತನ್ನ ಕೆಳಾಧಿಕಾರಿಯ ಮೇಲೆ ಅಧಿಕಾರ ಚಲಾಯಿಸಿಬಿಟ್ಟರೆ ನಾಳೆ ಅವನೂ ಕೂಡಾ ಮುದೀರ್ ಆಗಿ ತಮ್ಮ ಮೇಲೆ ಅಧಿಕಾರ ಚಲಾಯಿಸಬಹುದು ಎನ್ನುವ ಭಯವಿತ್ತು.
ಆದರೆ ಇಲ್ಲಿನ ಅತ್ಯಂತ ಶ್ರೀಮಂತ ವರ್ಗ ಹಾಗೂ ಉನ್ನತ ಅಧಿಕಾರಿಗಳ ಪಡೆಗಳಿಗೆ ಗಡಾಫಿಯ ಈ ನೀತಿ ಕುರಿತಂತೆ
ತೀವ್ರ
ಅಸಮಾಧಾನವಿತ್ತು. ಅವರು ಬಡವರು-ಶ್ರೀಮಂತರು, ಓದಿದವರು-ಓದದವರು ಎಲ್ಲರೂ ಒಂದೇ ಆಗಲು ಹೇಗೆ ಸಾಧ್ಯ? ಗಡಾಫಿಗೆ ಅಷ್ಟೂ ತಿಳಿಯಬಾರದೇ? ಎಂದೆಲ್ಲಾ ವಾದಿಸುತ್ತಿದ್ದರು. ಮೇಲಾಗಿ ಅವರಲ್ಲಿ ತಾವೂ ದೇಶದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಇಚ್ಚೆ ಬಲವಾಗುತ್ತಿತ್ತು. ಇಂಥವರನ್ನೇ ಮುಂದಿಟ್ಟುಕೊಂಡು ಅಮೆರಿಕಾ, ಬ್ರಿಟನ್, ಮತ್ತು ಯೂರೋಪ್ ರಾಷ್ಟ್ರಗಳು ಇಲ್ಲೊಂದು ಕ್ರಾಂತಿ ಎಬ್ಬಿಸಿ ಅವನನ್ನು ಮುಗಿಸುವಲ್ಲಿ ಯಶಸ್ವಿಯಾದವು.