ಈ ಭೂಮಿಯಿಂದಾಚೆಯಿರುವ
ಅನ್ಯ ಗ್ರಹವೊಂದಕ್ಕೆ ಹೋಗಲು
ನನ್ನ ಬಳಿ ಸ್ಪೇಶಲ್ ಟಿಕೇಟ್ ಇದೆ.
ತುಂಬಾ ಆರಾಮದಾಯಕ ಮತ್ತು ಸುಂದರವಾದ ಜಗತ್ತು ಅದು;
ತುಂಬಾ ಹೊಗೆಯಿಲ್ಲದ
ತುಂಬಾ ಬಿಸಿಯಿಲ್ಲದ
ಮತ್ತು ತುಂಬಾ ಚಳಿಯಿಲ್ಲದ
ಗ್ರಹ ಅದು.
ಅಲ್ಲಿರುವ ಜೀವಿಗಳು ತುಂಬಾ ವಿನಮ್ರ
ಮತ್ತು ಅಲ್ಲಿನ ಸರಕಾರಗಳಿಗೆ
ಗುಟ್ಟುಗಳಂದರೇನೆಂಬುದೇ ಗೊತ್ತಿಲ್ಲ.
ಅಲ್ಲಿ ಪೋಲಿಸರಿಲ್ಲ
ಸಮಸ್ಯೆಗಳಿಲ್ಲ
ಜಗಳಗಳಿಲ್ಲ.
ಮತ್ತು ಅಲ್ಲಿನ ಸ್ಕೂಲುಗಳು
ಮಕ್ಕಳಿಗೆ ತುಂಬಾ ಕಲಿಸಿ
ಅವರನ್ನು ಹೈರಾಣು ಮಾಡುವದಿಲ್ಲ
ಏಕೆಂದರೆ ಅಲ್ಲಿನ್ನೂ ಇತಿಹಾಸ ಶುರುವಾಗಬೇಕಿದೆ
ಭೂಗೋಳ ಇಲ್ಲವೇ ಇಲ್ಲ
ಅನ್ಯ ಭಾಷೆಗಳಂತೂ ಮುನ್ನಾ ಇಲ್ಲ.
ಇದಕ್ಕಿಂತ ಹೆಚ್ಚಾಗಿ ಅಲ್ಲಿ
ಯುದ್ಧಗಳು ನಡೆಯುವದೇ ಇಲ್ಲ
ಅವು ಪ್ರೀತಿಗಳಾಗಿ ಮಾರ್ಪಾಡಾಗಿವೆ
ಹಾಗಾಗಿ ಅಲ್ಲಿ ಶಸ್ತ್ರಾಸ್ತ್ರಗಳು
ಧೂಳಿನಡಿ ಮಲಗಿಕೊಂಡಿವೆ,
ವಿಮಾನಗಳು ಸಿಡಿಗುಂಡುಗಳನ್ನು
ಸಿಡಿಸದೇ ಸುಮ್ಮನೆ ಸಾಗುತ್ತವೆ
ದೋಣಿಗಳು
ನೀರಿನ ಮೇಲೆ
ಮಂದಹಾಸದಂತೆ ಕಾಣುತ್ತವೆ
ಈ
ಅನ್ಯ ಗ್ರಹದಲ್ಲಿ
ಎಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದಿದ್ದಾರೆ
ಆದರೂ ನಾನು ಅಲ್ಲಿಗೆ
ಒಂಟಿಯಾಗಿ ಹೋಗಲು
ಹಿಂದುಮುಂದು ನೋಡುತ್ತೇನೆ.
ಮೂಲ ಅರೇಬಿ: ದುನ್ಯಾ ಮಿಖೇಲ್ (ಇರಾಕಿ ಕವಿ)
ಇಂಗ್ಲೀಷಿಗೆ: ಕರೀಂ ಜೇಮ್ಸ್ ಅಬು-ಜೇದ್
ಕನ್ನಡಕ್ಕೆ: ಉದಯ್ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ