ಮಂಡೋದರಿಯ ಸ್ವಗತ ...
ಹತ್ತು ಬಾರಿ ತಲೆ ಕಡಿದಾಗಲೂ ಹತ್ತೂ ಬಾರಿ ಅವನು ಚೀತ್ಕರಿಸಿದ್ದು ನನ್ನ ಹೆಸರನ್ನೇ... ಸೀತೆಯೆಂದಲ್ಲ !!! ಅವನ ಎದೆಯಲ್ಲಿ ಅಮೃತ ಕಳಶವಿದೆಯೆಂದು ನನ್ನೊಬ್ಬಳಿಗೆ ಮಾತ್ರ ಗೊತ್ತಿತ್ತು.
ರಾಮಬಾಣ ಆಕಸ್ಮಿಕವಷ್ಟೇ !. ದಂಡಕಾರಣ್ಯದ ಪ್ರಶಾಂತತೆಯಲ್ಲಿ ಮುದ್ದು ಶೂರ್ಪನಖಿಯ ನರಳಾಟ ನನ್ನವನಿಗಷ್ಟೇ ಗೊತ್ತು. ರಾಮನಿಗೆ ತಂಗಿಯೂ ಇಲ್ಲ
..... !! ತಂಗಿಯ ಪ್ರೀತಿಯೂ ಇಲ್ಲ
!!! ಬೆಂಕಿಯುಂಡೆಯ ತಂದು ಅಶೋಕ ವನದಲ್ಲಿಟ್ಟ
ರಾತ್ರಿ , ಅಂತಃಪುರದಲ್ಲಿ ತಣ್ಣನೆಯ ದೀಪವುರಿದಿತ್ತು. ಅಜಾನುಬಾಹು ಬರಸೆಳೆದು ಪಿಸುಗುಟ್ಟಿದ್ದ " ಎದೆಯಲ್ಲಿರುವುದು ಸೇಡಷ್ಟೇ, ಸೀತೆಯಲ್ಲ !.....ಅಕ್ಷಯನ ಮೇಲಾಣೆ
". ಹತ್ತೂ ತಲೆಗಳನ್ನ ನೇವರಿಸಿ ಸಂತೈಸಿದ್ದೆ. ನೇಗಿಲ ಕುಳದಿಂದ ಮೇಲೆದ್ದವಳು ಮೇಗಲ ಕುಲದಿಂದ ಮೇಲೆದ್ದವಳ ಸವತಿಯಾಗುವುದುಂಟೆ ಛೇ...... ಲಂಕೆಯ ಸಾಮಾನ್ಯ ರಕ್ಕಸಿಯಷ್ಟೂ ಸುಖಪಡದ ಸೀತೆಯ ಬಗ್ಗೆ ಮರುಕವಿದೆ. ಈಗ ರಾಮ ರಾಜ್ಯದಲ್ಲಿ ದಿನಃಪ್ರತಿ ನೂರು ಸೀತೆಯರ ಅಗ್ನಿಪರೀಕ್ಷೆ. ಗೆದ್ದವರಾರೂ ಇಲ್ಲ, ಬೂದಿಯಾದವರೇ ಎಲ್ಲಾ.....! ಸ್ತ್ರೀಮೇಧದ ಕಟು ಕಮಟು ದೂರದ ಲಂಕೆಗೆ ಅಡರಿ ಗೋರಿಯೊಳಗೆ ಉಸಿರುಗಟ್ಟಿ ಸರ್ರನೆ ಎದ್ದು ಕುಂತು ಉಸುರಿದ್ದಾಳೆ ಮಂಡೋದರಿ “
ರಾವಣನ ರಾಜ್ಯದಲ್ಲಿ ಹೀಗೆಂದೂ ಆಗಿರಲಿಲ್ಲ…. ಪ್ಚ್”
- ಗಂಧರ್ವ ರಾಯರಾವುತ್ |
|
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ