ಪ್ರಿಯ ಸ್ನೇಹಿತರೇ,
ನಿಮ್ಮೊಂದಿಗೆ ನಾನು ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿನ ಹಾಡಿಗಾಗಿ (ತತ್ವಪದಕ್ಕೆ) ನಾನು ಇಂಗ್ಲೀಷ್ ಸಬ್‍ಟೈಟಲ್ಸ್ ನ್ನು ಬರೆದುಕೊಟ್ಟು ಅದಾಗಲೇ ಏಳೆಂಟು ತಿಂಗಳಾಗಿತ್ತು ಮತ್ತು ನಾನದನ್ನು ಮರೆತೂ ಬಿಟ್ಟಿದ್ದೆ. ಆದರೆ ಇವತ್ತು ಆ ಹಾಡನ್ನು ಬರೆದಿರುವ ಕವಿಮಿತ್ರ ಗಿರೀಶ್ ಹಂದಲಗೆರೆಯವರು ಫ಼ೇಸ್ಬುಕ್‍ನಲ್ಲಿ ಅಪ್ಡೇಟ್ ಮಾಡಿದಾಗ ಖುಷಿಯೋ ಖುಷಿ! ಇದನ್ನು ಇವತ್ತು ಕನ್ನಡದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬಿಡುಗಡೆ ಮಾಡಿದ್ದಾರೆ.
ಏಳೆಂಟು ತಿಂಗಳ ಹಿಂದೆ ಗಿರೀಶ್ ಅವರು ಫೋನ್ ಮಾಡಿ ನನ್ನ ಹಾಡಿಗೆ ಇಂಗ್ಲೀಷ್ ಸಬ್‍ಟೈಟಲ್ಸ್ ಬರೆದುಕೊಡೋಕಾಗುತ್ತಾ? ಎಂದು ಕೇಳಿಕೊಂಡಾಗ ನಾನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಏಕೆಂದರೆ ಇಂಥ ಸೃಜನಶೀಲ ಕೆಲಸಗಳೇ ನನ್ನನ್ನು ಜೀವಂತವಾಗಿಡೋದು ಮತ್ತು ನನ್ನ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ನನ್ನಲ್ಲಿ ಹೊಸ ಉತ್ಸಾಹವನ್ನು ತುಂಬುವದು. ಕಾವ್ಯ, ನಾಟಕ, ವಿಮರ್ಶೆ, ಸಿನಿಮಾ, ಬರವಣಿಗೆ, ಅನುವಾದ, ಆಕಾಶವಾಣಿ, ಟೀವಿ, ಸಮ್ಮೇಳನಗಳೊಂದಿಗೆ ನನ್ನದು ನಿರಂತರ ಅನುಸಂಧಾನ ನಡೆಯುತ್ತಲೇ ಇರುತ್ತದೆ. ಬಹುಶಃ, ಇವಿಲ್ಲದೆ ಹೋದರೆ ನನ್ನೊಳಗೇ ಒಂದು ಚಡಪಡಿಕೆ ಶುರುವಾಗುತ್ತದೆ. ಹಾಗೆಂದೇ ಆಗಾಗ್ಗೆ ನಾನು ಇಂಥ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿರುತ್ತೇನೆ.
ಇಗೋ ನಿಮ್ಮ ಮುಂದೆ ಕನ್ನಡದ ಭರವಸೆಯ ಕವಿ ಗಿರೀಶ್ ಹಂದಲಗೆರೆಯವರ ಈ ಹಾಡು! ಈತ ಈಗಾಗಲೇ ಅನೇಕ ತತ್ವಪದಗಳನ್ನು ಬರೆದಿದ್ದಾನೆ. ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ತತ್ವಜ್ಞಾನ ಈತನಿಗೆ ಅದ್ಹೇಗೆ ಹೊಳೆಯಿತು? ಎಂದು ನನಗೆ ಒಮ್ಮೊಮ್ಮೆ ಅಚ್ಚರಿಯಾಗುತ್ತದೆ. ಇರಲಿ, ಈಗ ಈ ಸುಂದರ ಹಾಡನ್ನು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಮೊಬೈಲ್ ಸ್ಕ್ರೀನ್ಗಿಂತ ನೀವು ಕಂಪ್ಯೂಟರ್ ಸ್ಕ್ರೀನ್ ಮೇಲೆ ನೋಡಿದರೆ ಸಬ್‍ಟೈಟಲ್ಸ್ ಸ್ಪಷ್ಟವಾಗಿ ಕಾಣುವವು ಎಂದು ನನ್ನ ನಂಬಿಕೆ.
ಸ್ನೇಹದಿಂದ
ಉದಯ ಇಟಗಿ
https://m.youtube.com/watch?v=uriBGkvp1oM&feature=youtu.be