Demo image Demo image Demo image Demo image Demo image Demo image Demo image Demo image

ನಸುಗತ್ತಲು

  • ಶನಿವಾರ, ಏಪ್ರಿಲ್ 18, 2015
  • ಬಿಸಿಲ ಹನಿ
  • 1 
    ನೋರ್ಮನ್ ಗೋರ್ಟ್ಸ್‍ಬೈ ಹೈಡ್ ಪಾರ್ಕಿನಲ್ಲಿ ಗಿಡ ಗಂಟೆಗಳಿಗೆ ಬೆನ್ನು ಮಾಡಿ ಅಲ್ಲಿಯ ಬೆಂಚೊಂದರ ಮೇಲೆ ಕುಳಿತಿದ್ದನು. ಆ ಪಾರ್ಕಿಗೆ ಸುತ್ತಲೂ ಕಂಬಿಬೇಲಿಯನ್ನು ಬಿಗಿಯಲಾಗಿತ್ತು. ಅದರ ಮುಂದುಗಡೆ ರಸ್ತೆಯೊಂದು ಹಾಯ್ದಿತ್ತು. ಅದು ಒಂದು ಕುದರೆ ಗಾಡಿ ಹೋಗುವಷ್ಟು ಮಾತ್ರ ಅಗಲವಾಗಿತ್ತು. ಅವನ ಬಲಭಾಗದಲ್ಲಿ ಸಂಚಾರ ದಟ್ಟಣೆಯ ಮತ್ತೊಂದು ರಸ್ತೆಯಿತ್ತು. ಅದು ಕುದರೆ ಗಾಡಿಯ ಲಟಲಟ ಶಬ್ಧ ಹಾಗೂ ಮೋಟಾರು ವಾಹನಗಳ ಕರ್ಕಶ ಶಬ್ಧಗಳಿಂದ ತುಂಬಿಹೋಗಿತ್ತು. ಅದು ಮಾರ್ಚ್ ತಿಂಗಳ ಆರಂಭದ ಸಂಜೆ. ಘಂಟೆ ಸುಮಾರು ಆರೂವರೆಯಾಗಿದ್ದಿರಬಹುದು. ಮುಸ್ಸಂಜೆಯಾಗಿದ್ದರಿಂದ ಅದಾಗಲೇ ಸಾಕಷ್ಟು ನಸುಗತ್ತಲು ಆವರಿಸಿಕೊಂಡಿತ್ತು. ಆದರೆ ಆ ನಸುಗತ್ತಲನ್ನು ಚಂದ್ರನ ಮಂದ ಬೆಳಕು ಮತ್ತು ಬೀದಿ ದೀಪಗಳು ಶಮನಮಾಡಿದ್ದವು. ರಸ್ತೆ ಮತ್ತದರ ಮಗ್ಗುಲ ಹಾದಿಗಳು ಖಾಲಿ ಹೊಡೆಯುತ್ತಿದ್ದವು. ಆದರೂ ಅಲ್ಲೊಂದು ಇಲ್ಲೊಂದು ಅಸ್ಪಷ್ಟ ಆಕೃತಿಗಳು ಆ ಮಂದ ಬೆಳಕಲ್ಲಿ ನಡೆದುಹೋಗುವದು ಕಾಣಿಸುತ್ತಿತ್ತು. ಜೊತೆಗೆ ಪಾರ್ಕಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕಂಡೂ ಕಾಣದಂತೆ ಬೆಂಚುಗಳ ಮೇಲೆ ಕುಳಿತಿದ್ದರು. 

    ಒಂದು ಕ್ಷಣ ಆ ದೃಶ್ಯವು ಗೋರ್ಟ್ಸ್‍ಬೈಗೆ ಹಿತವಾಗಿ ಕಂಡಿತಾದರೂ ಮರು ಕ್ಷಣ ಏನನ್ನೋ ನೆನೆದು ಅವನ ಮನಸ್ಸು ಮುದುಡಿತು. ಅವನ ಪ್ರಕಾರ ಮುಸ್ಸಂಜೆಯು ಜೀವನದ ಹೋರಾಟದಲ್ಲಿ ಗುದ್ದಾಡಿ ಸೋತವರ ಸಮಯ. ಸೋತವರು ಜಗತ್ತಿಗೆ ಮುಖ ತೋರಿಸಲಾಗದೆ ಒಳಗೇ ಕೂತಿದ್ದು ನಸುಗತ್ತಲಾವರಿಸುತ್ತಿದ್ದಂತೆ ಮೆಲ್ಲನೆ ಹೊರಬರುವ ಸಮಯ. ಹೈಡ್ ಪಾರ್ಕಿನಲ್ಲಿ ಗಂಡಸರು ಹೆಂಗಸರು ಎಂಬ ಬೇಧ-ಭಾವವಿಲ್ಲದೆ ಎಲ್ಲ ತೆರದ ಜನರು ನೆರದಿದ್ದರು. ಕೆಲವರು ತಮ್ಮ ಜೀವನದ ಹೋರಾಟದಲ್ಲಿ ಗುದ್ದಾಡಿ ಸೋತವರಿದ್ದರು. ಇನ್ನು ಕೆಲವರು ತಮ್ಮ ಸತ್ತ ಆಸೆ-ಆಕಾಂಕ್ಷೆಗಳನ್ನು ಹೂತಿಟ್ಟು ಒಣಗಿದ ಮುಖವನ್ನು ಹೊತ್ತು ಕೂತಿದ್ದರು. ಮತ್ತೆ ಕೆಲವರು ತಾವು ಕಳೆದುಕೊಂಡ ಅದೃಷ್ಟಗಳನ್ನು ಬೇರೆಯವರಿಗೆ ಕಾಣದಂತೆ ಬಚ್ಚಿಟ್ಟಿದ್ದರು. ಇನ್ನುಳಿದಂತೆ ಕೆಲವರು ಬಾಗಿದ ಭುಜಗಳನ್ನಿಟ್ಟುಕೊಂಡು, ಮಾಸಲು ಬಟ್ಟೆಗಳನ್ನು ಹಾಕಿಕೊಂಡು, ಕಂಗಳಲ್ಲಿ ವಿಷಾದವನ್ನು ತುಂಬಿಕೊಂಡು ಕಂಡೂ ಕಾಣದಂತೆ ಕುಳಿತಿದ್ದರು. ಅವರೆಲ್ಲಾ ಅಲ್ಲಿಗೆ ಆ ಮುಸ್ಸಂಜೆ ಹೊತ್ತಲ್ಲಿ ಬಹುಶಃ ಎಲ್ಲರೂ ಹೋದ ಮೇಲೆ ನಿರ್ಭಿಡೆಯಿಂದ ಬಂದು ಕುಳಿತಿರುವಂತೆ ತೋರುತ್ತಿತ್ತು. 

    ನೋರ್ಮನ್ ಗೋರ್ಟ್ಸ್‍ಬೈ ಬೆಂಚಿನ ಮೇಲೆ ಕುಳಿತಂತೆ ಅವನಿಗೆ ಪಾರ್ಕಿಗೆ ಅತಿ ಹತ್ತಿರದಲ್ಲಿದ್ದ ಮನೆಗಳು ಹಾಗೂ ಅಪಾರ್ಟ್ಮೆಂಟ್‍ಗಳ ಕಿಟಕಿಗಳಿಂದ ತೂರಿಬರುತ್ತಿದ್ದ ಝಗಮಗಿಸುವ ವಿದ್ಯುದ್ದೀಪಗಳ ಬೆಳಕು ಕಂಡಿತು. ಆತ ಬಹುಶಃ ಅವು ಜೀವನದ ಹೋರಾಟದಲ್ಲಿ ಯಶಸ್ಸನ್ನು ಕಂಡವರ ಅಥವಾ ಜೀವನದಲ್ಲಿ ಒಮ್ಮೆಯೂ ಸೋಲನ್ನು ಕಂಡಿರದವರ ಮನೆಗಳಿರಬೇಕೆಂದು ಭಾವಿಸಿದ. ಜೊತೆಗೆ ಅಲ್ಲಿ ಕುಳಿತಿರುವವರ ಬಗ್ಗೆ ತನ್ನಷ್ಟಕ್ಕೆ ತಾನೇ ಏನೇನೋ ಕಲ್ಪಿಸಿಳ್ಳುತ್ತಾ ತನ್ನನ್ನು ತಾನು ಅವರೊಟ್ಟಿಗೆ ಹೋಲಿಸಿಕೊಂಡನು. ಅಲ್ಲಿದ್ದವರೆಲ್ಲಾ ಒಂದಲ್ಲಾ ಒಂದು ದುಖಃದಲ್ಲಿ ಅಥವಾ ಹತಾಶೆಯಲ್ಲಿ ಮುಳುಗಿದ್ದರು. ನೋರ್ಮನ್ ಗೋರ್ಟ್ಸ್‍ಬೈ ಕೂಡಾ ಆ ಗುಂಪಿನಿಂದ ಹೊರತಾಗಿರಲಿಲ್ಲ. ಆತ ಹಣದ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಮನಸ್ಸು ಮಾಡಿದ್ದರೆ ಆತ ಸಾಕಷ್ಟು ಹಣವನ್ನು ಗಳಿಸಿ ಇಂದು ಅತ್ಯಂತ ಶ್ರೀಮಂತ ವರ್ಗದವರ ಸಾಲಿಗೆ ಸೇರಿರುತ್ತಿದ್ದ. ಆದರೆ ಹಾಗೆ ಮಾಡದೆ ಅವನು ತನ್ನ ಯಾವುದೋ ಒಂದು ವಿರಳ ಗುರಿಯನ್ನು ಬೆನ್ನಟ್ಟಿ ಹೋಗಿ ಜೀವನದಲ್ಲಿ ಸೋತು ಬಹಳಷ್ಟು ಹತಾಶೆ ಹಾಗೂ ಭ್ರಮೆನಿರಸನಗೊಳಗಾಗಿದ್ದ. ಹಾಗಾಗಿ ಆ ನಸುಗತ್ತಲಲ್ಲಿ ಬಾಡಿದ ಮುಖವನ್ನು ಹೊತ್ತುಕೊಂಡು ಸರಿಯುತ್ತಿರುವವರನ್ನು ನೋಡಿ ಅವನಿಗೆ ವಿಲಕ್ಷಣ ಖುಷಿಯಾಗಲಿಲ್ಲ.     
      2  
    ಅದೇ ಬೆಂಚಿನ ಮೇಲೆ ಅವನ ಪಕ್ಕ ಹಿರಿಯ ನಾಗರಿಕರೊಬ್ಬರು ಕುಳಿತಿದ್ದರು. ಅವರು ಜೀವನದಲ್ಲಿ ಬಹಳಷ್ಟು ನೊಂದವರಂತೆ, ಹತಾಶೆಗೊಳಗಾದವರಂತೆ ಕಾಣುತ್ತಿದ್ದರು. ಅವರ ಬಟ್ಟೆಗಳು ಅಲ್ಲಲ್ಲಿ ಕೊಳೆಯಾಗಿದ್ದವು. ಅವು ಅವರ ಹತಾಶೆಯನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡಿದ್ದವು. ಅವರು ಮನೆಯಲ್ಲಿ ಅನಾದರಕ್ಕೊಳಗಾಗಿರುವಂತೆ ಹಾಗೂ ಅದೇ ಕಾರಣಕ್ಕಾಗಿ ಒಂಟಿಯಾಗಿರುವಂತೆ ಕಂಡು ಬಂದರು. ಅವರು ಅಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ನಂತರ ಹೊರಟರು. ಅವರು ಹೊರಡುವಾಗ ಗೋರ್ಟ್ಸ್‍ಬೈ ಬಹುಶಃ ಅವರು ತಮಗೆ ಪ್ರೀತಿ ಮತ್ತು ಆದರಗಳೇ ಸಿಗದ ತಮ್ಮ ಮನೆಯ ಕಡೆ ಹೊರಟರೇನೋ ಎಂದು ಭಾವಿಸಿದ.

    ಆ ಹಿರಿಯರು ಅತ್ತ ಹೋದ ತಕ್ಷಣ ಇತ್ತ ಯುವಕನೊಬ್ಬ ಅದೇ ಜಾಗದಲ್ಲಿ ಬಂದು ಕುಳಿತನು. ಆತ ಹಾಕಿಕೊಂಡಿದ್ದ ಬಟ್ಟೆಗಳು ಅವನೊಬ್ಬ ಸಭ್ಯ ಯುವಕನೆಂದು ಹೇಳಿದರೂ ಅವನೇಕೋ ಸಂತೋಷವಾಗಿರುವಂತೆ ಕಾಣಲಿಲ್ಲ. ಇಡಿ ಜಗತ್ತೇ ಅವನಿಗೆ ಕೇಡು ಬಗೆದಿದೆ ಎನ್ನುವ ತರ ಆತ ಕೋಪದಲ್ಲಿ ಏನನ್ನೋ ಗೊಣಗುತ್ತಾ ಅಲ್ಲಿ ಕುಳಿತುಕೊಂಡನು.    

     “ನೀವು ಒಳ್ಳೆ ಮೂಡಲ್ಲಿ ಇದ್ದಂತೆ ಕಾಣುತ್ತಿಲ್ಲ.”  ಅವನ ಮುಖದ ಭಾವವನ್ನು ಗುರುತಿಸುತ್ತಾ ಗೋರ್ಟ್ಸ್‍ಬೈ ಕೇಳಿದ.
    ಆ ಯುವಕ ಅವನೆಡೆಗೆ ತಿರುಗುತ್ತಾ ಅತ್ಯಂತ ದೃಢವಾಗಿ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿದ.

    “ನಾನು ಸಿಕ್ಕಿಹಾಕಿಕೊಂಡಿರುವ ಸಮಸ್ಯೆಯಲ್ಲಿ ಬಹುಶಃ, ನೀವೇನಾದರು ಸಿಕ್ಕಿಹಾಕಿಕೊಂಡಿದ್ದರೆ ಖಂಡಿತ ನೀವು ಕೂಡಾ ಒಳ್ಳೆ ಮೂಡಲ್ಲಿರಲು ಸಾಧ್ಯವಾಗುತ್ತಿರಲಿಲ್ಲ ಬಿಡಿ,” ಅವನು ಹೇಳಿದ. “ನಾನು ಎಂದೂ ಮಾಡಬಾರದ ಮೂರ್ಖತನದ ಕೆಲಸವೊಂದನ್ನು ಮಾಡಿಬಿಟ್ಟಿದ್ದೇನೆ.”

    “ಹೌದಾ?” ಯಾವುದೇ ಭಾವೋದ್ರೇಕವಿಲ್ಲದೆ ಗೋರ್ಟ್ಸ್‍ಬೈ ಅವನನ್ನು ಕೇಳಿದ.

    “ನಾನು ಈ ಮಧ್ಯಾಹ್ನ ಬರ್ಕ್‍ಸ್ಕ್ವೇರ್‍ನಲ್ಲಿರುವ ಪೆಟಗೋನಿಯನ್ ಹೋಟೆಲ್‍ನಲ್ಲಿ ಉಳಿದುಕೊಳ್ಳೋಣವೆಂದು ಇಲ್ಲಿಗೆ ಬಂದೆ. ಆದರೆ ನಾನಿಲ್ಲಿಗೆ ಬಂದ ಮೇಲೆ ನಂಗೆ ಗೊತ್ತಾಯಿತು ಕೆಲವು ವಾರಗಳ ಹಿಂದೆಯಷ್ಟೇ ಆ ಹೋಟೆಲ್‍ನ್ನು ಕೆಡವಿ ಅದರ ಜಾಗದಲ್ಲಿ ಸಿನಿಮಾ ಥೇಟರೊಂದನ್ನು ಕಟ್ಟಿದ್ದಾರೆಂದು. ನನ್ನ ಟ್ಯಾಕ್ಷಿ ಡ್ರೈವರ್ ನನ್ನನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಇನ್ನೊಂದು ಹೋಟೆಲ್‍ಗೆ ಕರೆದುಕೊಂಡು ಹೋದ. ನಾನು ಆ ಹೋಟೆಲ್‍ಗೆ ಹೋದ ತಕ್ಷಣ ನನ್ನವರಿಗೆಲ್ಲಾ ನಾನಿಲ್ಲಿಗೆ ಸುರಕ್ಷಿತವಾಗಿ ಬಂದು ಮುಟ್ಟಿದ್ದೇನೆಂಬ ಸಂದೇಶದೊಂದಿಗೆ ಆ ಹೋಟೆಲ್‍ನ ವಿಳಾಸವನ್ನು ಸಹ ನಮೂದಿಸಿ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದೆ. ನಂತರ ನಾನು ಸೋಪ್‍ನ್ನು ಕೊಂಡುಕೊಳ್ಳಲು ಹೊರಗೆ ಬಂದೆ. ಏಕೆಂದರೆ ನನಗೆ ಹೋಟೆಲ್ ಸೋಪುಗಳನ್ನು ಬಳಸಿ ಅಭ್ಯಾಸವಿರಲಿಲ್ಲ. ಮೇಲಾಗಿ ನಾನು ನನ್ನದೇ ಸೋಪನ್ನು ಪ್ಯಾಕ್  ಮಾಡಲು ಮರೆತಿದ್ದೆ. ಹೊರಗೆ ಬಂದ ಮೇಲೆ ಅಲ್ಲಿ ಇಲ್ಲಿ ಸ್ವಲ್ಪ ಸುತ್ತಾಡಿದೆ. ನಂತರ ಬಾರ್‍ ವೊಂದರಲ್ಲಿ ಸ್ವಲ್ಪ ಡ್ರಿಂಕ್ಸ್ ತಗೊಂಡೆ. ತದನಂತರ ಅಂಗಡಿಯೊಂದಕ್ಕೆ ಹೋಗಿ ಸೋಪನ್ನು ಕೊಂಡುಕೊಂಡೆ. ಆಮೇಲೆ ಹೋಟೆಲ್‍ನತ್ತ ಹೆಜ್ಜೆ ಹಾಕುತ್ತಿದ್ದಂತೆ ನನಗೆ ತಕ್ಷಣ ಹೊಳೆಯಿತು-ನಾನು ಹೋಟೆಲ್ ಹೆಸರನ್ನೂ ಹಾಗೂ ಅದು ಇದ್ದ ಬೀದಿಯ ಹೆಸರನ್ನೂ ಮರೆತಿರುವೆನೆಂದು. ಲಂಡನ್‍ನಲ್ಲಿ ನನಗೆ ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಯಾರೂ ಇಲ್ಲವಾದ್ದರಿಂದ ಇದೀಗ ನಾನು ಪೇಚಿಗೆ ಸಿಲುಕಿದ್ದೇನೆ. ಆಫ್ಕೋರ್ಸ್, ನಾನು ನನ್ನವರಿಗೆ ಈ ಹೋಟೆಲ್‍ನ ವಿಳಾಸವನ್ನು ಕಳಿಸಿಕೊಡಿ ಎಂದು ತಂತಿಯೊಂದನ್ನು ಅವರಿಗೆ ಕಳಿಸಿಕೊಡಬಹುದು. ಆದರೆ ನನ್ನ ಪತ್ರ ಅವರನ್ನು ತಲುಪವದೇ ನಾಳೆಯಾದ್ದರಿಂದ ನಾನು ತಂತಿಯನ್ನು ಕಳಿಸಿ ಏನು ಪ್ರಯೋಜನ? ಮೇಲಾಗಿ ಈಗ ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ. ಹೋಟೆಲ್‍ನಿಂದ ಹೊರಡುವಾಗ ಒಂದು ಶಿಲ್ಲಿಂಗ್ ತೆಗೆದುಕೊಂಡು ಬಂದೆ. ಅದನ್ನೇ ಡ್ರಿಂಕ್ಸ್ ತೆಗೆದುಕೊಳ್ಳುವದಕ್ಕೆ ಹಾಗೂ ಸೋಪು ಕೊಂಡುಕೊಳ್ಳುವದಕ್ಕೆ ಖರ್ಚು ಮಾಡಿದೆ. ಇದೀಗ ನನ್ನ ಜೇಬಿನಲ್ಲಿ ಬರೀ ಎರಡು ಪೆನ್ಸ್‍ಗಳನ್ನಿಟ್ಟುಕೊಂಡು ಈ ರಾತ್ರಿಯನ್ನು ಎಲ್ಲಿ ಕಳೆಯಬೇಕೆಂದು ತಿಳಿಯದೆ ಓಡಾಡುತ್ತಿದ್ದೇನೆ. 
     3  

    ಆತ ನಿರರ್ಗಳವಾಗಿ ತನ್ನ ಕಥೆಯನ್ನು ಹೇಳಿ ಒಂದು ಕ್ಷಣ ನಿಲ್ಲಿಸಿದ. “ನಿಮಗೆ ಅನಿಸ್ತಿರಬಹುದು ನಾನೊಂದು ನಂಬಲಸಾಧ್ಯವಾದ ಕಥೆಯನ್ನು ಹೆಣೆದು ಹೇಳಿರಬಹುದೆಂದು.” ಆತನ ದನಿ ಕಹಿಯಾಗಿತ್ತು.   

    “ಇಲ್ಲ, ಹಾಗೇನಿಲ್ಲ,” ಗೋರ್ಟ್ಸ್‍ಬೈ ದೃಢವಾಗಿ ಹೇಳಿದ. “ನಾನೂ ಒಮ್ಮೆ ವಿದೇಶಕ್ಕೆ ಹೋದಾಗ ನನಗೂ ಇಂಥದೇ ಒಂದು ಅನುಭವವಾಗಿತ್ತು. ಆದರೆ ಆ ಸಂದರ್ಭದಲ್ಲಿ ನಾವು ಇಬ್ಬರಿದ್ದೆವು. ಅದು ಒಂದು ರೀತಿಯಲ್ಲಿ ಒಳಿತೇ ಆಯಿತು. ಅದೃಷ್ಟವಶಾತ್, ಆ ಹೋಟೆಲ್ ಯಾವುದೋ ಒಂದು ಕಾಲುವೆ ದಂಡೆಯ ಮೇಲಿರುವದು ನಮಗೆ ನೆನಪಾಯಿತು. ಆ ಸುಳಿವನ್ನು ಹಿಡಿದು ನಾವಲ್ಲಿಗೆ ಹೋದಾಗ ನಮಗೆ ನಮ್ಮ ಹೋಟೆಲ್ ದಾರಿ ಸಿಕ್ಕಿತು.”

    ಅವನ ಜ್ಞಾಪಕ ಶಕ್ತಿಯನ್ನು ನೋಡಿ ಆ ಯುವಕನಿಗೆ ಆಶ್ಚರ್ಯವಾಯಿತು. “ನಾನು ಬೇಕಾದರೆ ನನ್ನ ರಾಯಭಾರ ಕಛೇರಿಗೆ ಹೋಗಿ ಅವರ ಸಹಾಯವನ್ನು ಪಡೆಯಬಹುದು,” ಅವನು ಹೇಳಿದ. “ಆದರೆ ನನ್ನ ತರಾನೆ ಸಮಸ್ಯೆಯೊಂದರಲ್ಲಿ ಸಿಕ್ಕಿಹಾಕಿಕೊಂಡು ಕಷ್ಟವನ್ನು ಅನುಭವಿಸಿದ ವ್ಯಕ್ತಿಯೊಬ್ಬ ನನ್ನ ಬಳಿ ಇರುವಾಗ ಅಲ್ಲಿಗೆ ಹೋಗುವ ಅವಶ್ಯಕತೆಯಾದರೂ ಏನಿದೆ? ಇದೀಗ ಯಾರಾದರು ನನ್ನ ಕಷ್ಟವನ್ನು ಅರ್ಥಮಾಡಿಕೊಂಡು ನನಗೆ ಹಣದ ಸಹಾಯ ಮಾಡದೇ ಹೋದರೆ ನಾನು ಬಹುಶಃ ಈ ರಾತ್ರಿಯನ್ನು ಇಲ್ಲಿಯ ಬೀದಿಗಳಲ್ಲಿ ಕಳೆಯಬೇಕಾಗುತ್ತದೆ. ನನಗೆ ಖುಷಿಯ ಸಂಗತಿ ಏನೆಂದರೆ ನಾನು ಹೇಳಿದ್ದನ್ನು ನೀವು ಕಟ್ಟು ಕಥೆಯೆಂದು ನಂಬಲಿಲ್ಲವಲ್ಲ, ಅಷ್ಟು ಸಾಕು ನನಗೆ.”

    ಅವನ ಕೊನೆಯ ಸಾಲು ತುಂಬಾ ಪರಿಣಾಮಕಾರಿಯಾಗಿತ್ತು. ಅದನ್ನು ಕೇಳಿ ಗೋರ್ಟ್ಸ್‍ಬೈ ಕರಗಿದಂತೆ ಕಂಡನು.
    “ಆಫ್ಕೋರ್ಸ್,” ಗೋರ್ಟ್ಸ್‍ಬೈ ತಡವರಿಸುತ್ತಾ ಹೇಳಿದ, “ನಿನ್ನ ಕಥೆಯ ದೌರ್ಬಲ್ಯವೇನೆಂದರೆ ನೀನು ನನಗೆ ಸೋಪನ್ನು ತೋರಿಸಲು ಅಸಮರ್ಥನಾಗಿದ್ದೀಯ.”

    ಆ ಯುವಕ ಒಮ್ಮೆ ಕೂತಲ್ಲೇ ಕದಲಿದ. ನಂತರ ಅವಸರವಸರವಾಗಿ ತನ್ನ ಓವರ್‍ಕೋಟಿನ ಪಾಕೇಟ್‍ಗಳನ್ನು  ತಡಕಾಡಿ ಒಮ್ಮೆಲೆ ಜಿಗಿದು ನಿಂತನು.

    “ನಾನದನ್ನು ಕಳೆದುಕೊಂಡಿರಬೇಕು,” ಅವನು ಕೋಪದಲ್ಲಿ ವಟಗುಟ್ಟಿದ. 

    “ಒಂದೇ ದಿನದಲ್ಲಿ ಹೋಟೆಲ್ ಅಡ್ರೆಸ್‍ನ್ನೂ ಹಾಗೂ ಸೋಪನ್ನೂ ಕಳೆದುಕೊಳ್ಳುವವನು ನಿಜಕ್ಕೂ ಮೂರ್ಖನೇ ಸರಿ.” ಗೋರ್ಟ್ಸ್‍ಬೈ ಹೇಳಿದ. ಇದನ್ನು ಕೇಳಿ ಆ ಯುವಕ ಮರು ಮಾತನಾಡದೆ ಅಲ್ಲಿಂದ ಬಳಲಿದವನಂತೆ ನಿಧಾನವಾಗಿ ಕಾಲೆಳೆಯುತ್ತಾ ರಸ್ತೆಯೆಡೆಗೆ ನಡೆದುಬಂದನು.  

    “ವಾಟ್ ಎ ಪಿಟಿ,” ಗೋರ್ಟ್ಸ್‍ಬೈ ಆಲೋಚಿಸುತ್ತಾ ತನ್ನಷ್ಟಕ್ಕೆ ತಾನೇ ಹೇಳಿಕೊಂಡ. “ಅವನ ಇಡಿ ಕಥೆಯ ಜೀವಾಳವೇ ಆ ಸೋಪು. ಅದನ್ನು ಆತ ತೋರಿಸಲು ಅಸಮರ್ಥನಾಗಿದ್ದರಿಂದ ಅವನು ಇಕ್ಕಟ್ಟಿಗೆ ಸಿಲುಕಿದ. ಅವನು ನಿಜಕ್ಕೂ ಕಷ್ಟದಲ್ಲಿದ್ದನಾ ಅಥವಾ ಇಲ್ಲವಾ? ಒಂದು ವೇಳೆ ಆತ ನಿಜವಾಗಿಯೂ ಸುಳ್ಳು ಹೇಳಿ ದುಡ್ಡು ಕೀಳುವದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದರೆ ಈ ಮೊದಲೇ ಆತ ಅಂಗಡಿಯೊಂದರಲ್ಲಿ ಸೋಪನ್ನು ಕೊಂಡುಕೊಂಡು ಬಂದಿದ್ದು ನಾನು ಕೇಳಿದಾಗ ಅದನ್ನು ತನ್ನ ಜೇಬಿನಿಂದ ತೆಗೆದು ತೋರಿಸಬಹುದಿತ್ತಲ್ಲ? ಪಾಪ, ಅವನು ಅಂಥ ವ್ಯಕ್ತಿಯಿರಲಿಕ್ಕಿಲ್ಲ! ನಾನವನಿಗೆ ಸಹಾಯ ಮಾಡಬಹುದಿತ್ತೇನೋ! ಛೇ, ಎಂಥ ಕೆಲಸವಾಯಿತು!”    
     4  

    ಹೀಗೆ ಯೋಚಿಸುತ್ತಾ ಗೋರ್ಟ್ಸ್‍ಬೈ ಮನೆಗೆ ಹೋಗಲು ಎದ್ದು ನಿಂತಂತೆ ಅಲ್ಲಿ ಅವನಿಗೊಂದು ಅಚ್ಚರಿ ಕಾದಿತ್ತು. ಅವನು ಕುಳಿತಿದ್ದ ಬೆಂಚಿನ ಪಕ್ಕದಲ್ಲಿಯೇ ಸೋಪ್ ಪ್ಯಾಕೇಟ್ ಬಿದ್ದಿರುವದು ಕಾಣಿಸಿತು. ಅದರ ಮೇಲೆ ಫಾರ್ಮಸಿ ಅಂಗಡಿಯ ಸೀಲು ಸಹ ಇತ್ತು. ಅದು ನಿಜಕ್ಕೂ ಸೋಪೇ ಆಗಿತ್ತು! ಬಹುಶಃ, ಆ ಯುವಕ ಇಲ್ಲಿ ಕುಳಿತುಕೊಳ್ಳುವಾಗ ಅವನ ಕೋಟಿನಿಂದ ಜಾರಿ ಬಿದ್ದಿರಬೇಕು. ಅರೆರೆ, ಎಂಥ ಕೆಲಸವಾಯಿತು ಎಂದುಕೊಂಡು ಅವನು ಆ ಕೂಡಲೇ ಅದನ್ನೆತ್ತಿಕೊಂಡು ಆ ಯುವಕನನ್ನು ಹುಡುಕಿಕೊಂಡು ಕತ್ತಲು ಕವಿದ ಹಾದಿಯಲ್ಲಿ ಅವನು ಹೊದತ್ತ ಸರಸರನೆ ಹೆಜ್ಜೆಹಾಕತೊಡಗಿದ. ಆತ ಓವರ್ ಕೋಟು ತೊಟ್ಟ ಆ ಯುವಕನಿಗಾಗಿ ಎಲ್ಲ ಕಡೆ ಹುಡುಕಿದ. ಊಹೂಂ, ಆತ ಎಲ್ಲೂ ಕಾಣಿಸಲಿಲ್ಲ. ಅವನಿಗೆ ಹುಡುಕಿ ಹುಡುಕಿ ಸಾಕಾಯಿತು. ಇನ್ನು ಅವನಿಗಾಗಿ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ ಎಂದು ಭಾವಿಸಿ ತಾನು ಕುಳಿತಿದ್ದ ಜಾಗಕ್ಕೆ ವಾಪಾಸಾಗಬೇಕು ಎಂದುಕೊಳ್ಳುತ್ತಿದ್ದಂತೆ ಮುಖ್ಯರಸ್ತೆಯ ಪಕ್ಕದಲ್ಲಿ ಓವರ್ ಕೋಟು ತೊಟ್ಟ ಯುವಕನೊಬ್ಬ ನಿಂತಿರುವದು ಕಾಣಿಸಿತು. ಆತ ಸಂಚಾರ ದಟ್ಟಣೆಯ ಆ ರಸ್ತೆಯನ್ನು ದಾಟಲು ಹರಸಾಹಸಪಡುತ್ತಿದ್ದ. ಗೋರ್ಟ್ಸ್‍ಬೈ ಅವನತ್ತ ರಭಸದಿಂದ ನಡೆದನು. ಗೋರ್ಟ್ಸ್‍ಬೈ ತನ್ನತ್ತ ರಭಸದಿಂದ ನಡೆದುಬರುವದನ್ನು ನೋಡಿ ಆ ಯುವಕನಿಗೆ ಅನುಮಾನವಾಯಿತು. ಅವನು ಭಯ ಮಿಶ್ರಿತ ನಾಚಿಕೆಯಿಂದ ಅವನಿಗೆ ಮುಖ ತೋರಿಸಲಾಗದೆ ತಕ್ಷಣ ಆ ಕಡೆ ಮುಖ ಮಾಡಿ ನಿಂತನು.

    “ನಿಮ್ಮ ಕಥೆ ನಿಜವೆಂದು ನಂಬಲು ನನಗೆ ಸಾಕ್ಷಿಯೊಂದು ಸಿಕ್ಕಿದೆ,” ಗೋರ್ಟ್ಸ್‍ಬೈ ತನ್ನ ಕೈಯಲ್ಲಿದ್ದ ಸೋಪನ್ನು ತೋರಿಸುತ್ತಾ ಹೇಳಿದ, “ನೀವು ಅಲ್ಲಿ ಕುಳಿತುಕೊಳ್ಳಬೇಕಾದರೆ ಬಹುಶಃ ಇದು ನಿಮ್ಮ ಓವರ್‍ ಕೋಟಿನ ಜೇಬಿನಿಂದ ಕೆಳಕ್ಕೆ ಬಿದ್ದಿರಬಹುದನಿಸುತ್ತೆ. ನೀವು ಹೋದ ಮೇಲೆ ನನಗಿದು ಸಿಕ್ಕಿತು. ನಾನು ನಿಮ್ಮನ್ನು ನಂಬದಿದ್ದಕ್ಕೆ ಕ್ಷಮೆಯಿರಲಿ. ನೀವು ಹೇಳಿದ ಕಥೆಗೂ ಹಾಗೂ ನೀವಿದ್ದ ಸ್ಥಿತಿಗೂ ಒಂಚೂರು ತಾಳೆಯಾಗುತ್ತಿರಲಿಲ್ಲವಾದ್ದರಿಂದ ನಾನು ನಿಮ್ಮನ್ನು ನಂಬಲಿಲ್ಲ. ಈಗ ನನಗೆ ಸಾಕ್ಷಿ ಸಿಕ್ಕಿದ್ದರಿಂದ ನಾನದಕ್ಕೆ ನ್ಯಾಯ ಒದಗಿಸಲೇಬೇಕು. ತಗೊಳ್ಳಿ ಈ ಹಣವನ್ನು. ನಾನು ಇದನ್ನು ನಿಮಗೆ ಸಾಲವಾಗಿ ಕೊಡುತ್ತಿರುವೆ.”
     
    ಆ ಯುವಕ ತನ್ನೆಲ್ಲಾ ಅನುಮಾನಗಳನ್ನು ತೆಗೆದುಹಾಕುತ್ತಾ ಆ ಹಣವನ್ನು ಇಸಿದುಕೊಂಡು ಕಿಸೆಯಲ್ಲಿಟ್ಟುಕೊಂಡನು.

    “ಇದು ನನ್ನ ಅಡ್ರೆಸ್ ಕಾರ್ಡ್,” ಗೋರ್ಟ್ಸ್‍ಬೈಹೇಳಿದ. “ಒಂದು ವಾರದೊಳಗೆ ಈ ವಿಳಾಸಕ್ಕೆ ನನ್ನ ಹಣವನ್ನು ಹಿಂತಿರುಗಿಸಿ. ಇದೋ, ನಿಮ್ಮ ಸೋಪು ಇಲ್ಲಿದೆ. ಇದನ್ನೂ ಇಟ್ಕೊಳ್ಳಿ. ಇದು ನಿಮ್ಮ ಒಳ್ಳೆ ಫ್ರೆಂಡ್. ಮತ್ತೆ ಇದನ್ನು ಕಳೆದುಕೊಳ್ಳಬೇಡಿ.”
    “ಇದು ನಿಮಗೆ ಸಿಕ್ಕಿದ್ದು ನನ್ನ ಅದೃಷ್ಟ,” ಅದನ್ನು ತೆಗೆದುಕೊಳ್ಳುತ್ತಾ ಆ ಯುವಕ ಹೇಳಿದ. ಮರುಕ್ಷಣ ಅವನಿಗೆ ಧನ್ಯವಾದ ಅರ್ಪಿಸಿ ಅಲ್ಲಿಂದ ಸಣ್ಣದಾಗಿ ಸಿಳ್ಳೆ ಹಾಕುತ್ತಾ ನೈಟ್ಸ್‍ಬ್ರಿಡ್ಜ್ ಕಡೆಗೆ ನಡೆದನು.

    “ಪೂರ್ ಬಾಯ್, ತುಂಬಾ ತೊಂದರೆಯನ್ನು ಅನುಭವಿಸಿದ!” ಗೋರ್ಟ್ಸ್‍ಬೈ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು. “ಇಕ್ಕಟ್ಟಿನಲ್ಲಿ ಸಿಲುಕಿದ್ದ ಅವನಿಗೆ ನನ್ನ ಸಹಾಯದಿಂದ ಖಂಡಿತ ನಿರಾಳವಾಗಿರುತ್ತೆ. ಈ ಘಟನೆಯಿಂದ ನಾನೊಂದು ಪಾಠವನ್ನು ಕಲಿತೆ. ಇನ್ನು ಮುಂದೆ ನಾನು ಯಾವತ್ತೂ ಪರಿಸ್ಥಿತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ಅಳೆಯಲು ಹೋಗಬಾರದು.”

     5  


    ಗೋರ್ಟ್ಸ್‍ಬೈಗೆ ಏನನ್ನಿಸಿತೋ ಆತ ಮತ್ತೆ ಇಷ್ಟೊತ್ತು ನಡೆದ ನಾಟಕದ ಜಾಗಕ್ಕೆ ಮರಳಿ ನಡೆದುಕೊಂಡು ಬಂದನು. ಅಲ್ಲಿ ಹಿರಿಯ ನಾಗರಿಕರೊಬ್ಬರು ಬೆಂಚಿನ ಕೆಳಗೆ ಹಾಗೂ ಅದರ ಸುತ್ತಮುತ್ತ ಏನನ್ನೋ ಹುಡುಕುತ್ತಿರುವದು ಅವನಿಗೆ ಕಾಣಿಸಿತು. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಅದೇ ಬೆಂಚಿನ ಮೇಲೆ ತನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರೇ ಅವರು ಎಂದು ಗೋರ್ಟ್ಸ್‍ಬೈ ಕೂಡಲೇ ಗುರುತಿಸಿದ.

    “ನೀವು ಏನನ್ನಾದರು ಕಳೆದುಕೊಂಡಿರುವಿರಾ?”  ಗೋರ್ಟ್ಸ್‍ಬೈ ಅವರನ್ನು ಕೇಳಿದ.

    “ಹೌದು ಸರ್, ನನ್ನ ಸೋಪು ಕಳೆದುಹೋಗಿದೆ.” 

    ಮೂಲ ಇಂಗ್ಲೀಷ್: ಎಚ್.ಎಚ್.ಮನ್ರೋ (ಸಾಕಿ)
    ಕನ್ನಡಕ್ಕೆ: ಉದಯ್ ಇಟಗಿ
        
    http://avadhimag.com/2015/04/18/%E0%B2%89%E0%B2%A6%E0%B2%AF%E0%B3%8D-%E0%B2%87%E0%B2%9F%E0%B2%97%E0%B2%BF-%E0%B2%85%E0%B2%A8%E0%B3%81%E0%B2%B5%E0%B2%BE%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%95%E0%B2%A5%E0%B3%86/
      

        
        


    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ

  • ಶುಕ್ರವಾರ, ಏಪ್ರಿಲ್ 10, 2015
  • ಬಿಸಿಲ ಹನಿ
  • (ಈ ಕವಿತೆ ಇಸ್ರೇಲಿಗರು ಪ್ಯಾಲೈಸ್ತೇನಿಯನ್‍ರ ಮೇಲೆ ನಡೆಸುವ ರಾಜಕೀಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯನ್ನು ವಿರೋಧಿಸುವದರ ಜೊತೆಗೆ ಅವರ ಅಸಹಾಯಕತೆಯನ್ನು ಸಹ ಸೂಚಿಸುತ್ತದೆ. ದುರಂತವೆಂದರೆ ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ ಮತ್ತು ಆ ಕಾರಣಕ್ಕಾಗಿಯೇ ಪ್ಯಾಲೈಸ್ತೇನಿಯನ್‍ರು ನಮ್ಮನ್ನು ಇಸ್ರೇಲಿಗರ ಹಿಡಿತದಿಂದ ಬಿಡುಗಡೆಗೊಳಿಸಿ ನಮಗೆ ಪ್ರತ್ಯೇಕ ರಾಜ್ಯವನ್ನು ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಹಾಗಾಗಿ ಅಲ್ಲಿ ಮೇಲಿಂದ ಮೇಲೆ ರಕ್ತಪಾತವಾಗುತ್ತಿದೆ. ಅಂದ್ಹಾಗೆ ಸಮಿಹ ಆಲ್-ಕಾಶೀಮ್ ಒಬ್ಬ ಪ್ಯಾಲೆಸ್ತೇನಿಯನ್ ಕವಿ. ಈ ಕವಿತೆಯಲ್ಲಿ ಕವಿಯು ಇಸ್ರೇಲಿಗರ ವಿರುದ್ಧ ಸಿಟ್ಟು, ಆಕ್ರೋಶ, ವ್ಯಂಗ್ಯ ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ.) 

    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಇಲ್ಲವೇ ಗೆಳೆತನ, ಭ್ರಾತೃತ್ವ ಅಥವಾ ಸಾಂಗತ್ಯದ ಬಗ್ಗೆ ಹಾಡಲಿ.
    ಯಾರಾದರು ಕಾಗೆಗಳ ಬಗ್ಗೆ ಹಾಡಲಿ
    ಇಲ್ಲವೇ ಮುರಿದು ಬಿದ್ದ ಪಾರಿವಾಳಗಳ ಗೋಪುರಗಳ
    ಮೇಲೆ ಬಾವಲಿಗಳು ಕಟ್ಟಿರುವ ಗೂಡುಗಳ ಬಗ್ಗೆ ಹಾಡಲಿ.
    ಅಥವಾ ನನ್ನ ಕಾವ್ಯದ ಸಾಲುಗಳಲ್ಲಿ
    ಸಿಲಕಿರುವ ಅವಶೇಷಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಹೊಲಗದ್ದೆಗಳಲ್ಲಿ ಬಾಗಿ ಬಳುಕುತ್ತಿದ್ದ ತೆನೆಗಳ ಬಗ್ಗೆ ಹಾಡಲಿ
    ಅಥವಾ ಅಲ್ಲಿ ಪ್ರತಿಧ್ವನಿಸುವ ಕೊಯ್ಲುಗಾರರ ಹಾಡುಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಮುಳ್ಳುತಂತಿ ಬೇಲಿಯ ಹಿಂದೆ  ಕತ್ತಲ ಕೂಪದಲ್ಲಿ ಮುಳುಗಿರುವ ನನ್ನ ಜನರ ಬಗ್ಗೆ ಹಾಡಲಿ
    ಇಲ್ಲವೇ ಬಾಗಿ ನಿಂತ ಟೆಂಟ್ ನಗರಗಳ ಬಗ್ಗೆ
    ಅಥವಾ ಅಲ್ಲಿ ಬದುಕುವ ಜನರ ಬಗ್ಗೆ ಹಾಡಲಿ
    ಇಲ್ಲ ಅವರ ಕೋಪ-ತಾಪಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಇಲ್ಲವೇ ಬದುಕು ಸುಟ್ಟು ಕರಕುಲಾಗಿರುವ ನನ್ನ ಜನರ ಬಗ್ಗೆ ಹಾಡಲಿ
    ಅಥವಾ ಯಾರಿಗೂ ತೊಂದರೆ ಕೊಡದ ಇಲ್ಲಿಯ ಮುಗ್ಧ ಜನರ ಬಗ್ಗೆ ಹಾಡಲಿ.
    ಇಲ್ಲಿ ಸುರಿದಿದೆ
    ಎಲ್ಲವೂ ಹೆಚ್ಚಾಗಿಯೇ ಸುರಿದಿದೆ
    ಅವರ ಪೂರ್ವಿಕರು ಅವರಿಗೆ ಹೇರಳವಾಗಿ ಬಿಟ್ಟುಹೋಗಿದ್ದಾರೆ
    ಅಯ್ಯೋ, ಅವರಿಗಷ್ಟೇ ಅಲ್ಲ ಹೊರಗಿನವರಿಗೂ ಸಹ.
    ನಮ್ಮ ಪೂರ್ವಿಕರು ಬೆವರು ಸುರಿಸಿ ದುಡಿದುದರಲ್ಲಿ ಪಾಲು ಅವರಿಗೀಗ
    ಹೊಟ್ಟೆ ಬಿರಿಯುವಷ್ಟು ತಿನ್ನಲಿ.
    ಅವರು ಔತಣಕೂಟದಲ್ಲಿ ತಿಂದು ಬಿಟ್ಟಿದ್ದನ್ನು ನಮ್ಮ ಮಕ್ಕಳು ತಿನ್ನಲಿ 
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ನನ್ನ ದೇಶದಲ್ಲಿ, ಅದರ ಬೆಟ್ಟ-ಗುಡ್ಡಗಳಲ್ಲಿ ಹಾಗೂ ಅದರ ಕಣಿವೆ-ಕಂದರಗಳಲ್ಲಿ.
    ಯಾಕೆಂದರೆ ಇಲ್ಲಿ ಶಾಂತಿ ಕೊಲೆಯಾಗಿ ಹೋಗಿದೆ.
    ಅರೇಬಿ ಮೂಲ: ಸಮಿಹ ಆಲ್-ಕಾಶೀಮ್
    ಕನ್ನಡಕ್ಕೆ: ಉದಯ್ ಇಟಗಿ
    http://avadhimag.com/2015/04/10/%E0%B2%AF%E0%B2%BE%E0%B2%B0%E0%B2%BE%E0%B2%A6%E0%B2%B0%E0%B3%81-%E0%B2%B6%E0%B2%BE%E0%B2%82%E0%B2%A4%E0%B2%BF%E0%B2%97%E0%B3%80%E0%B2%A4%E0%B3%86%E0%B2%AF%E0%B3%8A%E0%B2%82%E0%B2%A6%E0%B2%A8/




    ಪಾದ್ರಿ

  • ಗುರುವಾರ, ಮಾರ್ಚ್ 19, 2015
  • ಬಿಸಿಲ ಹನಿ
  • ಅಂದು ಮಧ್ಯಾಹ್ನ ನೆವಿಲ್ಲಿ ಸ್ಕ್ವೇರ್‍ನಲ್ಲಿರುವ ಸೇಂಟ್ ಪೀಟರ್ ಚರ್ಚಿನಲ್ಲಿ ನಾಮಕರಣದ ಸಮಾರಂಭವೊಂದು ನಡೆದಿತ್ತು. ಅಲ್ಬರ್ಟ್ ಎಡ್ವರ್ಡ್ ಪೋರ್ಮನ್ ಚರ್ಚಿನ ಸಮವಸ್ತ್ರವಾದ ಗೌನನ್ನು ಇನ್ನೂ ಧರಿಸಿಯೇ ಇದ್ದ. ಆತ ಅದನ್ನು ಎಷ್ಟೊಂದು ಜತನದಿಂದ ಕಾಪಾಡಿಕೊಂಡು ಬಂದಿದ್ದನೆಂದರೆ ಅದಿನ್ನೂ ಹೊಸತರದಂತೆ ಕಾಣುತ್ತಿತ್ತಲ್ಲದೇ ಅದರ ಮಡಿಕೆಗಳು ಹೊಸದರಲ್ಲಿ ತಂದಾಗ ಹೇಗೆ ಕಾಣುತ್ತಿದ್ದವೋ ಈಗಲೂ ಹಾಗೆಯೇ ಕಾಣುತ್ತಿದ್ದವು. ಆತನಿಗೆ ಆ ದಿರಿಸನ್ನು ಕಂಡರೆ ಮುಂಚಿನಿಂದಲೂ ಅದೇನೋ ವಿಶೇಷ ಅಕ್ಕರೆ. ಆತ ಅದನ್ನು ಶುಭ ಸಮಾರಂಭ ಹಾಗೂ ಶವಸಂಸ್ಕಾರದ ಸಂದರ್ಭಗಳಾದಿಯಾಗಿ ಎಲ್ಲ ಸಂದರ್ಭಗಳಲ್ಲೂ ಧರಿಸುತ್ತಿದ್ದ. ಆತ ಅದನ್ನು ಧರಿಸಿದಾಗಲೆಲ್ಲಾ ಅತ್ಯಂತ ಹೆಮ್ಮೆಯಿಂದ ಬೀಗುತ್ತಿದ್ದನಲ್ಲದೇ ಆ ಉಡುಪು ತನ್ನ ಕೆಲಸದ ಘನತೆಯನ್ನು ಎತ್ತಿ ಹಿಡಿಯುವದರ ಸಂಕೇತವೆಂದೂ ಭಾವಿಸಿದ್ದ. ಆತ ಮನೆಗೆ ಹೋದ ಮೇಲೆ ಅದನ್ನು ಕಳಚಿಟ್ಟ ನಂತರ ಆತನಿಗೆ ತಾನು ಅರ್ಧಂಬರ್ಧ ಬಟ್ಟೆ ಹಾಕಿಕೊಂಡಿರುವನೇನೋ ಎಂಬ ಕಸಿವಿಯುಂಟಾಗುತ್ತಿತ್ತು. ಆತ ಅದನ್ನು ಚನ್ನಾಗಿಡಲು ಎಷ್ಟು ಕಾಳಜಿವಹಿಸುತ್ತಿದ್ದನೆಂದರೆ ಯಾವಾಗಲೂ ಸ್ವತಃ ತಾನೇ ಒಗೆದು ಈಸ್ತ್ರಿ ಮಾಡಿಡುತ್ತಿದ್ದ. ಆತ ಚರ್ಚಿನ ಪಾದ್ರಿಯಾಗಿ ತನ್ನ ಹದಿನಾರು ವರ್ಷಗಳ ಕೆಲಸದ ಅವಧಿಯಲ್ಲಿ ಎಷ್ಟೊಂದು ಗೌನುಗಳನ್ನು ಬದಲಾಯಿಸಿಲ್ಲ? ಆದರೆ ಅವು ಹರಿದಾದ ಮೇಲೂ ಒಂದನ್ನೂ ಆತ ಎಸೆಯದೆ ಅವನ್ನೆಲ್ಲಾ ಖಾಕಿ ಕಾಗದದಲ್ಲಿ ಸುತ್ತಿ ತನ್ನ ಬೆಡ್‍ರೂಮಿನಲ್ಲಿರುವ ವಾರ್ಡೋಬಿನ ಡ್ರಾಯರಿನಲ್ಲಿಟ್ಟಿದ್ದ.   
     
    ಪಾದ್ರಿಯು ಅವಸರವಸರವಾಗಿ ಸಂಗಮವರಿ ಕಲ್ಲಿನ ತೊಟ್ಟಿಯನ್ನು ಬಣ್ಣ ಹಚ್ಚಿದ್ದ ಮುಚ್ಚಳದಿಂದ ಮುಚ್ಚುತ್ತಾ ಅಲ್ಲಿಗೆ ಬಂದಿದ್ದ ವಯಸ್ಸಾದ ಹೆಂಗಸೊಬ್ಬಳಿಗೆ ಕುಳಿತುಕೊಳ್ಳಲು ಹಾಕಿದ್ದ ಖುರ್ಚಿಯನ್ನು ಅತ್ತ ಕಡೆ ಸರಿಸಿ ಈಗಾಗಲೇ ಚರ್ಚಿನ ಮುಖ್ಯಸ್ಥ ವಸ್ತ್ರಾಗಾರದಲ್ಲಿ ತನ್ನ ಬಟ್ಟೆಯನ್ನು ಬದಲಾಯಿಸಿ ಮನೆಗೆ ಹೋಗಲು ಸಜ್ಜಾಗುತ್ತಿರಬಹುದೇನೋ ಎಂದು ಎಣಿಸುತ್ತಾ ಅವನಿಗಾಗಿ ಕಾಯುತ್ತಾ ಕುಳಿತನು. ಆದರೆ ಇದೀಗ ಆತ ಮೂಡಣ ದಿಕ್ಕಿನಲ್ಲಿ ನಡೆದು ಬರುವದು ಕಾಣಿಸಿತು. ಅಲ್ಲಿಂದ ಆತ ನಿವೇದನ ಪೀಠಕ್ಕೆ ಹೋಗಿ ಅಲ್ಲಿ ಮಂಡಿಯೂರಿ ಕುಳಿತು ಕ್ಷಣಕಾಲ ಏನನ್ನೋ ಪ್ರಾರ್ಥಿಸಿ ಹಜಾರಕ್ಕೆ ನಡೆದು ಬಂದನು. ಆದರೆ ಅವನಿನ್ನೂ ಚರ್ಚಿನ ನಿಲುವಂಗಿಯಲ್ಲಿದ್ದ.
    ಆತ ಇತ್ತೀಚಿಗಷ್ಟೇ ಚರ್ಚಿನ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಕೆಂಪು ಮೂತಿಯ, ಉತ್ಸಾಹಭರಿತ ಈ ಮನುಷ್ಯ ನಲವತ್ತರ ಅಂಚಿನಲ್ಲಿದ್ದ. ಅಲ್ಬರ್ಟ್ ಎಡ್ವರ್ಡ್‍ನಿಗೆ ತನ್ನ ಈ ಹಿಂದಿನ ಮುಖ್ಯಸ್ಥನ ನೆನಪಾಯಿತು. ಆತ ಕೆಲಸ ಬಿಟ್ಟು ಹೋಗಿದ್ದರ ಬಗ್ಗೆ ಇವನಿಗೆ ಬೇಜಾರಿತ್ತು. ಆತ ಹಳೆಯ ಕ್ರೈಸ್ತ ಶಾಲೆಯೊಂದರಲ್ಲಿ ದೀಕ್ಷೆಯನ್ನು ಪಡೆದು ಪಾದ್ರಿಯಾಗಿದ್ದನಲ್ಲದೆ ತನ್ನ ಕಂಚಿನ ಕಂಠದಲ್ಲಿ ಆಕರ್ಷಕವಾಗಿ ಧರ್ಮೋಪದೇಶವನ್ನು ನೀಡುತ್ತಿದ್ದ. ಆತನಿಗೆ ಪ್ಯಾರಿಸ್‍ನ ಶ್ರೀಮಂತ ವರ್ಗದವರೊಂದಿಗೆ ಹೆಚ್ಚು ಒಡನಾಟವಿತ್ತಲ್ಲದೇ ಆಗಾಗ ಅವರೊಟ್ಟಿಗೆ ಭೋಜನಕೂಟವನ್ನು ಸಹ ನಡೆಸುತ್ತಿದ್ದ. ಆತ ಚರ್ಚಿನ ಸಂಗತಿಗಳನ್ನು ಈ ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿಯಲ್ಲಿಯೇ ನಡೆಸಿಕೊಂಡು ಹೋಗುತ್ತಿದ್ದ. ಆದರೆ ಯಾವತ್ತೂ ಕೋಪಗೊಳ್ಳುತ್ತಿರಲಿಲ್ಲ. ಆತ ಈ ಹೊಸ ಮುಖ್ಯಸ್ಥನಂತೆ ಎಲ್ಲ ವಿಷಯಗಳಿಗೆ ತನ್ನ ಮೂಗು ತೂರಿಸುತ್ತಿರಲಿಲ್ಲ. ಆದರೆ ಅಲ್ಬರ್ಟ್ ಎಡ್ವರ್ಡ್ ಆತನೊಂದಿಗೆ ಸಹನೆಯಿಂದಿದ್ದ. ಸೇಂಟ್ ಪೀಟರ್ ಚರ್ಚು ಒಳ್ಳೆ ನೆರೆಹೊರೆಯವರ ಮಧ್ಯದಲ್ಲಿತ್ತು ಮತ್ತು ಆ ಭಾಗದ ಜನರೆಲ್ಲರೂ ಒಳ್ಳೆಯ ಹಿನ್ನೆಲೆಯಿಂದ ಬಂದವರಾಗಿದ್ದರು. ಈ ಹೊಸ ಮುಖ್ಯಸ್ಥ ಈಸ್ಟ್ ಎಂಡ್‍ನಿಂದ ಬಂದಿದ್ದ. ಅಲ್ಬರ್ಟ್ ಎಡ್ವರ್ಡ್‍ನಿಗೆ ಈ ಹೊಸ ಮುಖ್ಯಸ್ಥ ಇಡಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವವನಂತೆ ಕಂಡುಬಂದಿರಲಿಲ್ಲ.
    ಇದೀಗ ಚರ್ಚಿನ ಮುಖ್ಯಸ್ಥ ಹಜಾರದ ಮುಖ್ಯಭಾಗಕ್ಕೆ ಬಂದು ಪಾದ್ರಿಯನ್ನುದ್ದೇಶಿಸಿ ಅತ್ಯಂತ ಸಹಜವಾಗಿ ಹೇಳಿದ.
    “ಪೋರ್ಮನ್, ಒಂದು ನಿಮಿಷ ವಸ್ತ್ರಾಗಾರಕ್ಕೆ ಬರುವೆಯಾ? ನಾನು ನಿನಗೆ ಏನೋ ಹೇಳೋದಿದೆ.”  
    “ವೇರಿ ಗುಡ್, ಸರ್.”       
    ಮುಖ್ಯಸ್ಥ ಆತ ಮೇಲೆ ಬರುವವರೆಗೂ ಕಾಯ್ದು ಅವ ಮೇಲೆ ಬಂದ ನಂತರ ಇಬ್ಬರೂ ಚರ್ಚಿನ ಒಳಗೆ ನಡೆದರು.
    “ನಾಮಕರಣ ಸಮಾರಂಭ ಚನ್ನಾಗಿ ನಡೀತು, ಅಲ್ವಾ ಸರ್? ಏನಾಶ್ಚರ್ಯ, ನೀವು ಮಗುವನ್ನು ಕೈಗೆತ್ತಿಕೊಂಡಾಕ್ಷಣ ಆ ಮಗು ಅಳುವದನ್ನೇ ನಿಲ್ಲಿಸಿತು.”
    “ಹಾಂ, ಹೌದು. ಬಹಳಷ್ಟು ಸಾರಿ ನಾನೂ ಇದನ್ನು ಗಮನಿಸಿದ್ದೇನೆ,” ತನ್ನ ಮುಖದ ಮೇಲೆ ಸಣ್ಣದೊಂದು ನಗುವನ್ನು ತಂದುಕೊಳ್ಳುತ್ತಾ ಹೇಳಿದ. “ಎಷ್ಟೇ ಆಗಲಿ, ದಿನಾ ಬೆಳಗಾದರೆ ನನಗೆ ಇಂಥ ಜನರನ್ನು ಸಂಭಾಳಿಸಿ ಅಭ್ಯಾಸವಿದೆಯಲ್ವೇ?”
    ಹೌದು, ಅದು ಅವನಿಗೆ ಒಂಥರಾ ಹೆಮ್ಮೆಯ ವಿಷಯವಾಗಿತ್ತು. ಅವನೇ ಗಮನಿಸಿದಂತೆ ಬಹಳಷ್ಟು ನಾಮಕರಣದ ಸಂದರ್ಭಗಳಲ್ಲಿ ಮಕ್ಕಳು ಅಳುವಾಗ ಅವನ್ನು ಆತ ತನ್ನ ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಅವು ಸುಮ್ಮನಾಗುತ್ತಿದ್ದವು. ಇದನ್ನು ನೋಡಿ ಆ ಮಕ್ಕಳ ತಾಯಂದಿರು ಹಾಗೂ ದಾದಿಯರು ಬೆರಗಾಗಿದ್ದರಲ್ಲದೇ ಅವರೆಲ್ಲಾ ಇವನ ತೋಳುಗಳಲ್ಲಿ ಅದೇನೋ ಮಾಂತ್ರಿಕ ಶಕ್ತಿಯಿದೆ ಎಂದು ಮಾತನಾಡಿಕೊಳ್ಳುವದನ್ನು ಪೋರ್ಮನ್ ಕೂಡಾ ಕೇಳಿದ್ದ. ಅವನನ್ನು ಹಾಗೆ ಹೊಗಳಿದ್ದು ಅವನಿಗೆ ಸಂತೋಷವನ್ನುಂಟು ಮಾಡಿತು ಎಂಬುದು ಪಾದ್ರಿಗೆ ಗೊತ್ತಾಯಿತು.   
    ಮಾತನಾಡುತ್ತಾ ಚರ್ಚಿನ ಮುಖ್ಯಸ್ಥ ಅಲ್ಬರ್ಟ್ ಎಡ್ವರ್ಡ್‍ನನ್ನು ವಸ್ತ್ರಾಗಾರಕ್ಕೆ ಕರೆದುಕೊಂಡು ಬಂದನು. ಅಲ್ಬರ್ಟ್ ಎಡ್ವರ್ಡ್‍ನಿಗೆ ಅಲ್ಲಿ ಅದಾಗಲೇ ಇಬ್ಬರು ಚರ್ಚ್ ವಾರ್ಡೆನ್‍ಗಳು ಕುಳಿತಿರುವದು ಕಂಡು ಆಶ್ಚರ್ಯವಾಯಿತು. ಅವರು ಒಳ ಬರುವದನ್ನು ಆತ ಗಮನಿಸಿರಲಿಲ್ಲ. ಅವರು ಇವನನ್ನು ನೋಡಿ ಸಂತೋಷದಿಂದ ತಲೆ ಆಡಿಸಿದರು. 
    “ಗುಡ್ ಆಫ್ಟರ್‍ನೂನ್, ಮೈ ಲಾರ್ಡ್, ಗುಡ್ ಆಫ್ಟರ್‍ನೂನ್, ಸರ್,” ಆತ ಒಬ್ಬೊಬ್ಬರಿಗೂ ಶುಭಾಶಯ ಕೋರಿದ.  
    ಅವರಿಬ್ಬರೂ ಹಿರಿಯರು ಹಾಗೂ ಅವರು ಅಲ್ಬರ್ಟ್ ಎಡ್ವರ್ಡ್ ಪಾದ್ರಿಯಾಗಿದ್ದಾಗಿನಿಂದ ಹಿಡಿದು ಈಗಲೂ ಅಲ್ಲಿಯೇ ಚರ್ಚ್ ವಾರ್ಡೆನ್‍ಗಳಾಗಿದ್ದಾರೆ. ಅವರು ಅಲ್ಲೇ ಇದ್ದ ಉದ್ದನೆಯ ಟೇಬಲ್ ಬಳಿ ಕುಳಿತಿದ್ದರು. ಅವರಿಬ್ಬರ ಮಧ್ಯ ಖಾಲಿಯಿದ್ದ ಖುರ್ಚಿಯ ಮೇಲೆ ಚರ್ಚಿನ ಮುಖ್ಯಸ್ಥ ಹೋಗಿ ಕುಳಿತನು. ಅಲ್ಬರ್ಟ್ ಎಡ್ವರ್ಡ್ ಅವರ ಎದುರಿಗೆ ಕುಳಿತುಕೊಳ್ಳುತ್ತಾ ವಿಷಯ ಏನಿರಬಹುದೆಂದು ಸ್ವಲ್ಪ ಕಳವಳಗೊಂಡನು. ಅವನಿಗಿನ್ನೂ ಚನ್ನಾಗಿ ನೆನಪಿದೆ. ಒಂದು ಸಾರಿ ಆರ್ಗನ್ ವಾದಕನೊಬ್ಬ ಅದ್ಯಾವುದೋ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಪಜೀತಿಗೀಡಾಗಿದ್ದು ಮತ್ತದನ್ನು ಅವರು ಮುಚ್ಚಿಹಾಕಲು ಎಷ್ಟೆಲ್ಲಾ ಕಷ್ಟಪಟ್ಟರೆಂಬುದೆಲ್ಲಾ ಅವನಿಗಿನ್ನೂ ಚನ್ನಾಗಿ ಗೊತ್ತಿದೆ. ನೆವಿಲ್ಲಿ ಸ್ಕ್ವೇರ್‍ನ ಸೇಂಟ್ ಪೀಟರ್‍ನಂಥ ಚರ್ಚಿಗೆ ಇಂಥ ಹಗರಣಗಳು ಸಲ್ಲವು. ತನಗೇ ಗೊತ್ತಿಲ್ಲದಂತೆ ತಾನು ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆಯೇ ಎಂಬ ಅನುಮಾನ ಅವನನ್ನು ಕಾಡಿತು. ಚರ್ಚಿನ ಮುಖ್ಯಸ್ಥನ ಮುಖ ಶಾಂತವಾಗಿತ್ತು. ಆದರೆ ಇನ್ನಿಬ್ಬರ ಮುಖಗಳು ಗೊಂದಲದಿಂದ ಕೂಡಿದ್ದವು.  
    “ಇವರು ಏನನ್ನೋ ಹೇಳಲು ತಡವರಿಸುತ್ತಿದ್ದಾರೆ,” ಪಾದ್ರಿಯು ತನ್ನಷ್ಟಕ್ಕೆ ತಾನೇ ಹೇಳಿಕೊಂಡನು ಹಾಗೂ ಅವರು ಹೇಳುವದನ್ನು ಕೇಳಲು ಕಾಯುತ್ತಾ ಕುಳಿತನು.
    ಇದೀಗ ಚರ್ಚಿನ ಮುಖ್ಯಸ್ಥ ರಾಜಗಾಂಭೀರ್ಯದಿಂದ ಎದ್ದು ನಿಂತು ಹೇಳತೊಡಗಿದ.  
    “ಫೋರ್‍ಮನ್, ನಾವು ನಿನಗೆ ಇಷ್ಟವಾಗದ ಸಂಗತಿಯೊಂದನ್ನು ಹೇಳುವದಿದೆ. ನೀನಿಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿರುವಿ. ನೀನು ನಿನ್ನ ಕೆಲಸವನ್ನು ಹಾಗೂ ನಿನ್ನ ಕರ್ತವ್ಯವನ್ನು ನಾವಷ್ಟೇ ಅಲ್ಲ ಆ ದೇವರು ಕೂಡಾ ಮೆಚ್ಚುವಂತೆ ನಿಭಾಯಿಸಿದ್ದೀಯಾ. ಇದರ ಬಗ್ಗೆ ಸಂಶಯವೇ ಬೇಡ.”
    ಇಬ್ಬರು ಚರ್ಚ್ ವಾರ್ಡೆನ್‍ಗಳು ತಲೆ ಆಡಿಸಿದರು.
    “ಆದರೆ ಮೊನ್ನೆಯಷ್ಟೇ ನನಗೆ ಯಾವುದೋ ಒಂದು ಸಂದರ್ಭದಲ್ಲಿ ನಿನಗೆ ಓದುಬರಹ ಬರುವದಿಲ್ಲ ಎಂದು ಗೊತ್ತಾಗಿ ಆಶ್ಚರ್ಯವಾಯಿತು.” 
    ಪಾದ್ರಿಯ ಮುಖದ ಮೇಲೆ ಯಾವುದೇ ಮುಜುಗುರ ಕಾಣಲಿಲ್ಲ.
    “ಈ ಹಿಂದಿನ ಮುಖ್ಯಸ್ಥರಿಗೆ ಇದು ಗೊತ್ತಿತ್ತು, ಸರ್.” ಅವನು ಉತ್ತರಿಸಿದ. “ಅವರ ಪ್ರಕಾರ ಅದು ಅಂಥಾ ದೊಡ್ಡ ಸಂಗತಿಯಾಗಿರಲಿಲ್ಲ. ಅವರು ಆಗಾಗ ಹೇಳ್ತಾ ಇದ್ದರು; ಈ ಜಗತ್ತಿನಲ್ಲಿ ಓದಿ ಕಲಿಯುವದಕ್ಕಿಂತ ನೋಡಿ ಕಲಿಯುವದು ಬಹಳಷ್ಟಿದೆ ಎಂದು.” 
    “ನನಗೆ ಇದನ್ನು ಕೇಳಿ ಆಶ್ಚರ್ಯ ಆಗ್ತಾ ಇದೆ.” ಚರ್ಚ್ ವಾರ್ಡನ್ ಒಬ್ಬ ಹೇಳಿದ. “ಅಂದ್ರೆ....ನೀನಿಲ್ಲಿ ಹದಿನಾರು ವರ್ಷಗಳಿಂದ ಕೆಲಸಮಾಡುತ್ತಿದ್ದರೂ ಇನ್ನೂ ಓದುಬರಹವನ್ನು ಕಲಿತಿಲ್ವಾ?”     
    “ನಾನು ಹನ್ನೆರೆಡು ವರ್ಷದವನಿರುವಾಗಲೇ ಅಡಿಗೆ ಕೆಲಸದವನಾಗಿ ಸೇರಿಕೊಂಡೆ. ಅಲ್ಲಿ ಬಾಣಸಿಗನೊಬ್ಬ ಒಮ್ಮೆ ನನಗೆ ಓದುಬರಹ ಕಲಿಸಲು ನೋಡಿದ. ಆದರೆ ನನಗೆ ಅದರಲ್ಲಿ ಆಸಕ್ತಿ ಮೂಡಲಿಲ್ಲ. ಮೇಲಾಗಿ ನನ್ನ ಬಳಿ ಕಲಿಯಲು ಅಷ್ಟು ಸಮಯವೂ ಇರಲಿಲ್ಲ ಮತ್ತು ನನಗೆ ಯಾವತ್ತೂ ಕಲಿಯಬೇಕು ಅನಿಸಲೇ ಇಲ್ಲ. ನನಗೆ ಅನಿಸುತ್ತೆ; ಇವತ್ತಿನ ಹುಡುಗರು ತಮ್ಮ ಬಹಳಷ್ಟು ಸಮಯವನ್ನು ಯಾವುದಾದರು ಕೆಲಸದ ಮೇಲೆ ಸದ್ವಿನಿಯೋಗ ಮಾಡುವ ಬದಲು ಬರೀ ಓದುವದರಲ್ಲಿಯೇ ಕಳೆಯುತ್ತಾರೆ ಎಂದು.
    “ಮತ್ತೆ ನಿನಗೆ ಸುದ್ದಿ ಸಮಾಚಾರಗಳು ತಿಳಿಯುವದಾದರೂ ಹೇಗೆ?” ಇನ್ನೊಬ್ಬ ಚರ್ಚ್ ವಾರ್ಡೆನ್ ಕೇಳಿದ. “ಪತ್ರಗಳನ್ನು ನೀನು ಯಾವತ್ತೂ ಬರೆಯುವದಿಲ್ಲವೇ?”   
    “ನೋ, ಮೈ ಲಾರ್ಡ್, ಅದಿಲ್ಲದೆನೇ ನಾನು ಚನ್ನಾಗಿ ನಿಭಾಯಿಸಬಲ್ಲೆ ಹಾಗೂ ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳು ಸುದ್ದಿಸಮಾಚಾರಗಳನ್ನು ಚಿತ್ರಗಳ ಸಮೇತ ಪ್ರಕಟಿಸುವದರಿಂದ ಅವನ್ನು ನೋಡಿಯೇ ಈ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಬಲ್ಲೆ. ನನ್ನ ಹೆಂಡತಿ ಚನ್ನಾಗಿ ಓದಿದ್ದಾಳೆ. ಒಂದುವೇಳೆ ನಾನು ಪತ್ರ ಬರೆಯಬೇಕೆಂದರೆ ನನ್ನ ಪರವಾಗಿ ಆಕೆಯೇ ಬರೆಯುತ್ತಾಳೆ.”
    ಇಬ್ಬರು ಚರ್ಚ್ ವಾರ್ಡೆನ್‍ಗಳು ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯದೆ ಅನುಮಾನದಿಂದ ತಮ್ಮ ಮುಖ್ಯಸ್ಥನತ್ತ ದೃಷ್ಟಿ ಹಾಯಿಸಿ ಮತ್ತೆ ಟೇಬಲ್ ನೋಡುತ್ತಾ ಕುಳಿತರು.  
    “ವೆಲ್, ಫೋರ್‍ಮನ್, ನಾನು ಈಗಾಗಲೇ ಈ ವಿಷಯದ ಬಗ್ಗೆ ಈ ಇಬ್ಬರು ಮಹನೀಯರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಸೇಂಟ್ ಪೀಟರ್‍ನಂಥ ಚರ್ಚಿನಲ್ಲಿ ಒಬ್ಬ ಅನಕ್ಷರಸ್ಥ ಪಾದ್ರಿಯನ್ನು ಇಡಲಾಗದು.” 
    ಅಲ್ಬರ್ಟ್ ಎಡ್ವರ್ಡ್‍ನ ಸಣಕಲು ಮತ್ತು ಬಿಳಿಚು ಮುಖ ಇದೀಗ ಕೆಂಪಾಯಿತು. ಅವನು ನಿಂತಲ್ಲಿಯೇ ನಡುಗಿದ. ಆದರೆ ಯಾವುದೇ ಉತ್ತರವನ್ನು ಕೊಡಲಿಲ್ಲ. 
    “ನನ್ನನ್ನು ಅರ್ಥಮಾಡಿಕೋ ಫೋರ್‍ಮನ್. ನನಗೆ ನಿನ್ನ ಬಗ್ಗೆ ಯಾವುದೇ ತಕರಾರಿಲ್ಲ. ನೀನು ನಿನ್ನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತೀಯಾ. ನನಗೆ ನಿನ್ನ ಗುಣದ ಬಗ್ಗೆಯಾಗಲಿ ಅಥವಾ ನಿನ್ನ ಸಾಮರ್ಥ್ಯದ ಬಗ್ಗೆಯಾಗಲಿ ಅನುಮಾನವಿಲ್ಲ. ಆದರೆ ಅಕಸ್ಮಾತಾಗಿ ನಿನ್ನ ಅಜ್ಞಾನದಿಂದ ನಡೆಯಬಹುದಾದ ಅತಾಚುರಕ್ಕೆ ನಾವು ಹೊಣೆಯಾಗಲಾರೆವು. ಇದು ಚರ್ಚಿನ ಗೌರವದ ಪ್ರಶ್ನೆ ಹಾಗೂ ನಿಯಮ ಕೂಡಾ ಆಗಿದೆ.”
    “ಈಗಲಾದರೂ ನೀನು ಪ್ರಯತ್ನಿಸಬಹುದಲ್ವಾ?” ಚರ್ಚ್ ವಾರ್ಡೆನ್ ಕೇಳಿದ.  
    “ಇಲ್ಲ ಸರ್, ಈಗ ಅದು ನನ್ನಿಂದ ಸಾಧ್ಯವಾಗುವದಿಲ್ಲ ಅಂತಾ ಕಾಣುತ್ತೆ. ಈಗ ಒಂದು ಅಕ್ಷರವೂ ನನ್ನ ತಲೆಯೊಳಗೆ ಹೋಗಲಾರದು. ಇಲ್ಲ..... ಸಾಧ್ಯವಾಗುವದಿಲ್ಲ ಬಿಡಿ.”
    “ಫೋರ್‍ಮನ್, ನಾವು ನಿನ್ನೊಂದಿಗೆ ಕಠಿಣವಾಗಿ ನಡೆದುಕೊಳ್ಳಲು ಇಚ್ಛಿಸುವದಿಲ್ಲ.” ಚರ್ಚಿನ ಮುಖ್ಯಸ್ಥ ಹೇಳಿದ. “ನಾನು ಮತ್ತು ಚರ್ಚ್ ವಾರ್ಡೆನ್‍ಗಳು ಒಂದು ನಿರ್ಧಾರಕ್ಕೆ ಬಂದಿದ್ದೇವೆ. ನಾವು ನಿನಗೆ ಮೂರು ತಿಂಗಳ ಸಮಯವನ್ನು ಕೊಡುತ್ತೇವೆ. ಅಷ್ಟರಲ್ಲಿ ನೀನು ಓದುಬರಹವನ್ನು ಕಲಿತರೆ ಸರಿ. ಇಲ್ಲವಾದರೆ ನೀನು ಹೊರಗೆ ಹೋಗಬೇಕಾಗುತ್ತದೆ.”   
    ಅಲ್ಬರ್ಟ್ ಎಡ್ವರ್ಡ್‍ನಿಗೆ ಹೊಸ ಮುಖ್ಯಸ್ಥನ ತಲೆ ಕಂಡರೆ ಆಗುತ್ತಿರಲಿಲ್ಲ. ಆತ ಮುಂಚಿನಿಂದಲೂ ಹೇಳುತ್ತಿದ್ದುದು ಒಂದೇ; ಈತನನ್ನು ಸೇಂಟ್ ಪೀಟರ್‍ ಚರ್ಚಿನ ಮುಖ್ಯಸ್ಥನನ್ನಾಗಿ ಮಾಡಿ ಆಡಳಿತ ಮಂಡಳಿಯವರು ದೊಡ್ಡ ತಪ್ಪು ಮಾಡಿದ್ದಾರೆಂದು. ಅವರು ಎಣಿಸಿದಂತೆ ಅವನು ಒಳ್ಳೆಯ ಸಮುದಾಯದಿಂದ ಬಂದವನಂತೆ ಕಾಣುತ್ತಿರಲಿಲ್ಲ. ಇದೀಗ ಅಲ್ಬರ್ಟ್ ಸ್ವಲ್ಪ ನೇರವಾಗಿ ನಿಂತುಕೊಂಡನು. ಅವನಿಗೆ ತನ್ನ ಬೆಲೆ ಏನೆಂದು ಗೊತ್ತಿತ್ತು. ಹಾಗಾಗಿ ಆತ ಇವರ್ಯಾರು ತನ್ನ ಬಗ್ಗೆ ಆಡಿಕೊಳ್ಳಲು ಅವಕಾಶ ಮಾಡಿಕೊಡಬಾರದೆಂದು ನಿರ್ಧರಿಸಿದ.
    “ಐ ಯ್ಯಾಮ್ ವೇರಿ ಸಾರಿ ಸರ್, ಐ ಯ್ಯಾಮ್ ಅಫ್ರೇಡ್ ಇಟ್ ಇಸ್ ನೋ ಗುಡ್. ನಾನೊಂದು ಹೊಸ ಕೌಶಲಗಳನ್ನು ಕಲಿಯಲಾರದ ಹಳೆ ನಾಯಿ ಇದ್ದಂತೆ. ಇಷ್ಟು ದಿನ ನನಗೆ ಓದುಬರಹ ಬಾರದಿದ್ದರೂ ನಾನು ಒಳ್ಳೆಯ ಜೀವನವನ್ನೇ ನಡೆಸಿದ್ದೇನೆ. ಇಲ್ಲ, ಇದು ನನ್ನಿಂದ ಸಾಧ್ಯವಾಗುವದಿಲ್ಲ.”
    “ಹಾಗಾದ್ರೆ ಫೋರ್‍ಮನ್, ನೀನು ಈ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತೆ.”
    “ಎಸ್ ಸರ್, ನಂಗೆ ಅರ್ಥವಾಗುತ್ತೆ. ನೀವು ನನ್ನ ಜಾಗಕ್ಕೆ ಹೊಸಬರನ್ನು ಹುಡುಕಬಹುದು. ಅವರು ಬಂದ ದಿನ ನಾನು ನನ್ನ ಕೆಲಸಕ್ಕೆ ಸಂತೋಷದಿಂದ ರಾಜಿನಾಮೆಯನ್ನು ಕೊಡುತ್ತೇನೆ.”
    ಅಲ್ಬರ್ಟ್ ಎಡ್ವರ್ಡ್ ಅತ್ಯಂತ ವಿನಮ್ರತೆಯಿಂದ ಕೋಣೆಯ ಬಾಗಿಲನ್ನು ಮುಚ್ಚಿ ಹೊರಬಂದನು. ಅಲ್ಲಿ ಇಷ್ಟು ದಿನ ತಾನು ಕಾಯ್ದುಕೊಂಡು ಬಂದಿದ್ದ ಮರ್ಯಾದೆಗೆ ಏಟು ಬಿದ್ದಿತ್ತು. ಒಂದು ಕ್ಷಣ ಅಲ್ಲಿ ಅವನಿಗೆ ಉಸಿರಾಡಲು ಕಷ್ಟವೆನಿಸಿ ಹೊರಗೆ ಬಂದನು. ಕೊಂಚ ಹೊತ್ತು ಬಿಟ್ಟು ಆತ ಮತ್ತೆ ಏನನ್ನೋ ಜ್ಞಾಪಿಸಿಕೊಂಡವನಂತೆ ವಸ್ತ್ರಾಗಾರಕ್ಕೆ ವಾಪಾಸು ನಿಧಾನವಾಗಿ ನಡೆದು ಬಂದನು. ಅಲ್ಲಿ ತನ್ನ ನಿಲುವಂಗಿಯನ್ನು ಕಳಚಿ ಗೂಟಕ್ಕೆ ನೇತುಹಾಕಿದನು. ಇಷ್ಟು ದಿನ ಆತ ನೆರವೇರಿಸಿದ ಮದುವೆ ಹಾಗೂ ಅಂತ್ಯ ಸಂಸ್ಕಾರದ ಕಾರ್ಯಕ್ರಮಗಳನ್ನು ಒಮ್ಮೆ ನೆನೆದು ನಿಟ್ಟುಸಿರಿಟ್ಟನು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಟ್ಟು ತನ್ನ ಕೋಟು ಮತ್ತು ಟೋಪಿಗಳನ್ನು ಧರಿಸಿ ಪಡಸಾಲೆಗೆ ಬಂದನು. ಅಲ್ಲಿ ಒಂದು ಕ್ಷಣ ನಿಂತು ಚರ್ಚನ್ನು ಒಮ್ಮೆ ಕಣ್ತುಂಬ ನೋಡಿದನು. ಹೃದಯ ಭಾರವಾಯಿತು. ಕಣ್ಣುಗಳು ಮಂಜು ಮಂಜಾದವು. ಇದೀಗ ಚರ್ಚಿನ ಬಾಗಿಲನ್ನು ಮುಚ್ಚಿ ರಸ್ತೆಗಿಳಿದನು. ಅವನಿಗೆ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಬಲು ದೊಡ್ಡ ಆಘಾತವಾಗಿತ್ತು. ಅದೇ ಯೋಚನೆಯಲ್ಲಿ ಅವ ಮನೆಯ ಹಾದಿಯನ್ನು ತುಳಿಯದೇ ಮೊದಲು ಎಲ್ಲಾದರು ಒಂದು ಕಪ್ ಟೀ ಕುಡಿಯೋಣವೆಂದುಕೊಂಡು ಅತ್ತ ಹೆಜ್ಜೆ ಹಾಕಿದನು. ಅವನು ರಸ್ತೆಗುಂಟ ನಿಧಾನವಾಗಿ ನಡೆದನು. ಹೃದಯ ಭಾರವಾಗಿತ್ತು. ಮುಂದೆ ಏನು ಮಾಡಬೇಕೆಂದು ಅವನಿಗೆ ಗೊತ್ತಾಗಲಿಲ್ಲ. ಇಷ್ಟು ದಿನ ಸೇಂಟ್ ಪೀಟರ್ ಚರ್ಚಿನಲ್ಲಿ ಒಡೆಯನಂತೆ ದುಡಿದು ಇದೀಗ ಬೇರೆ ಕಡೆ ಆಳಾಗಿ ದುಡಿಯುವದು ಅವನ ಮನಸ್ಸಿಗೆ ಹಿಡಿಸಲಿಲ್ಲ. ಅವನು ಇಷ್ಟು ದಿನ ತನ್ನ ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿಸಿದ್ದನಾದರೂ ಅದು ಅವನ ಮುಂದಿನ ಬದುಕಿಗೆ ಏನೇನೂ ಸಾಕಾಗುತ್ತಿರಲಿಲ್ಲ. ದಿನೆದಿನೆ ನಿರ್ವಹಣಾ ವೆಚ್ಚ ಏರುತ್ತಿದ್ದರಿಂದ ಜೀವನವನ್ನು ಸರಿದೂಗಿಸಲು ಅವನು ಮತ್ತೆ ದುಡಿಯಲೇಬೇಕಿತ್ತು. ತನಗೆ ಒಂದು ದಿನ ಇಂಥ ಗತಿ ಬರುತ್ತದೆಂದು ಆತ ಕನಸು ಮನಸಿನಲ್ಲಿಯೂ ಎಣಿಸಲಿರಲಿಲ್ಲ. ಒಮ್ಮೆ ಆಳವಾಗಿ ಉಸಿರೆಳೆದುಕೊಂಡು ಬಿಟ್ಟನು.   
    ಅಲ್ಬರ್ಟ್ ಎಡ್ವರ್ಡ್ ಪ್ರತಿನಿತ್ಯ ಸಿಗರೇಟು ಸೇದುತ್ತಿರಲಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ರಾತ್ರಿಯ ಊಟದ ನಂತರ ಒಂದು ಗ್ಲಾಸು ಬೀಯರ್ ಕುಡಿಯುತ್ತಿದ್ದ ಹಾಗೂ ಬೇಜಾರಾದಗಲೊಮ್ಮೆ ಸಿಗರೇಟು ಸೇದಿ ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದ. ಇದೀಗ ಆತನಿಗೆ ಒಂದು ಸಿಗರೇಟು ಸೇದಿ ತನ್ನ ಮನಸ್ಸನ್ನು ನಿರಾಳಮಾಡಿಕೊಳ್ಳಬೇಕೆನಿಸಿತು. ಆದರೆ ಆ ಸಮಯದಲ್ಲಿ ಅವನ ಬಳಿ ಯಾವುದೇ ಸಿಗರೇಟುಗಳಿರಲಿಲ್ಲವಾದ್ದರಿಂದ ಅದರ ಅಂಗಡಿಗಾಗಿ ಹುಡುಕತೊಡಗಿದ. ಅವನಿಗೆ ಕೂಡಲೇ ಅಲ್ಲೆಲ್ಲೂ ಒಂದು ಅಂಗಡಿಯೂ ಕಾಣಿಸಲಿಲ್ಲ. ಸ್ವಲ್ಪ ಮುಂದಕ್ಕೆ ನಡೆದನು. ಅಲ್ಲಿ ಅಂಗಡಿಗಳ ಉದ್ದನೆಯ ಸಾಲೇ ಇತ್ತು. ಆದರೆ ಅವುಗಳಲ್ಲಿ ಒಂದಾದರೂ ಸಿಗರೇಟಿನ ಅಂಗಡಿ ಇರಲಿಲ್ಲ.   
    “ಆಶ್ಚರ್ಯ” ಅಲ್ಬರ್ಟ್ ಎಡ್ವರ್ಡ್ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು.   
    ಆತ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಲು ತಿರುಗಿ ಹಿಂದಕ್ಕೆ ನಡೆದು ಬಂದನು. ಊಹೂಂ, ಅಲ್ಲಿ ಒಂದೇ ಒಂದು ಸಿಗರೇಟಿನ ಅಂಗಡಿಯೂ ಕಾಣಿಸಲಿಲ್ಲ. ಆತ ರಸ್ತೆಯಲ್ಲಿ ನಿಂತು ಆಲೋಚನಪರನಾಗಿ ಒಮ್ಮೆ ಅತ್ತಿಂದಿತ್ತ, ಇತ್ತಿಂದತ್ತ ನೋಡಿದನು.       
    “ಇಲ್ಲಿ ಸಿಗರೇಟನ್ನು ಹುಡುಕಿಕೊಂಡು ನಾನೊಬ್ಬನೇ ಇಷ್ಟು ದೂರ ನಡೆದುಕೊಂಡುಬಂದಿರಲಿಕ್ಕಿಲ್ಲ.” ಅವನು ಹೇಳಿದ. “ಇಲ್ಲಿ ಯಾರಾದರು ಸಣ್ಣದೊಂದು ಸಿಗರೇಟು ಅಂಗಡಿಯೊಂದನ್ನು ತೆರೆದರೆ ಸಾಕು, ಅವನಿಗೆ ಚನ್ನಾಗಿ ಲಾಭವಾಗುವದರಲ್ಲಿ ಅನುಮಾನವೇ ಇಲ್ಲ.”   
    ಅವನಿಗೆ ಇದ್ದಕ್ಕಿದ್ದಂತೆ ಯೋಚನೆಯೊಂದು ಹೊಳೆಯಿತು.
    “ಅರೆ, ಅದು ನಾನೇ ಯಾಕೆ ಆಗಬಾರದು?” ಅವನು ಹೇಳಿದ. “ಕೆಲವೊಮ್ಮೆ ನೀವು ಯೋಚಿಸದೆಯೇ ಒಳ್ಳೊಳ್ಳೆ ಆಲೋಚನೆಗಳು ನಿಮಗೆ ಥಟ್ಟನೆ ಹೊಳೆಯುತ್ತವೆ.”
    ಅವನು ತಿರುಗಿ ಮನೆ ಕಡೆ ನಡೆದ.
    “ನೀನು ಇವತ್ಯಾಕೋ ತುಂಬಾ ಸಪ್ಪಗಿದ್ದಿಯಾ, ಅಲ್ಬರ್ಟ್.” ಅವನ ಹೆಂಡತಿ ಅವನಿಗೆ ಟೀ ಕೊಡುತ್ತಾ ಹೇಳಿದಳು.
    “ನಾನು ಯೋಚಿಸುತ್ತಿದ್ದೇನೆ.” ಅವನು ಟೀ ಕುಡಿಯುತ್ತಾ ಹೇಳಿದ.
    ಅವನು ಅದೇ ವಿಷಯದ ಕುರಿತು ಎಲ್ಲ ರೀತಿಯಿಂದಲೂ ಮತ್ತೆ ಮತ್ತೆ ಯೋಚಿಸಿ ಒಂದು ನಿರ್ಧಾರಕ್ಕೆ ಬಂದನು. ಮರು ದಿವಸ ಅದೇ ಬೀದಿಗೆ ಹೋಗಿ ಅಲ್ಲಿ ಬಾಡಿಗೆಗೆ ಅಂಗಡಿಯೊಂದೇನಾದರು ಸಿಗುತ್ತದಾ ಎಂದು ನೋಡಿದನು. ದೇವರ ದಯೆಯಿಂದ ಅಲ್ಲೊಂದು ಸಣ್ಣ ಅಂಗಡಿ ಖಾಲಿಯಿತ್ತು. ಅದವನಿಗೆ ಎಲ್ಲ ರೀತಿಯಿಂದಲೂ ಸೌಕರ್ಯವೆನಿಸಿತು. ಮುಂದಿನ ಇಪ್ಪತ್ನಾಲ್ಕು ಘಂಟೆಗಳಲ್ಲಿ ಆತ ಅದನ್ನು ಬಾಡಿಗೆಗೆ ಹಿಡಿದು ಅಲ್ಲಿ ತಂಬಾಕು ವ್ಯಾಪಾರ ಮತ್ತು ನ್ಯೂಸ್‍ಏಜೆಂಟಾಗಿ ಕೆಲಸ ಆರಂಭಿಸಿದನು. ಅದಾಗಿ ಒಂದು ತಿಂಗಳ ನಂತರ ತನ್ನ ಪಾದ್ರಿ ಕೆಲಸಕ್ಕೆ ರಾಜಿನಾಮೆಯನ್ನು ಕೊಟ್ಟು ತನ್ನನ್ನು ತಾನು ಸಂಪೂರ್ಣವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡನು. ಅವನ ಹೆಂಡತಿ ಆತ ಪಾದ್ರಿ ಕೆಲಸವನ್ನು ಬಿಟ್ಟ ನಂತರ ಬರುವ ಆದಾಯದಲ್ಲಿ ತನಗೆ ಸಂಸಾರವನ್ನು ನಡೆಸಲು ಕಷ್ಟವಾಗುತ್ತಿದೆ ಎಂದಳು. ಆತ “ಏನು ಮಾಡಾಕಾಗಲ್ಲ. ಕಾಲಕ್ಕೆ ತಕ್ಕ ಹಾಗೆ ನಡೆಯಬೇಕು. ಆ ಚರ್ಚು ಹಿಂದಿನ ಚರ್ಚಿನಂತಿರಲಿಲ್ಲ. ಅಲ್ಲಿ ನನಗೆ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕೇ ಬಿಟ್ಟೆ” ಎಂದು ಅವಳನ್ನು ಸಮಾಧಾನಪಡಿಸಿದ.    
    ಅಲ್ಬರ್ಟ್ ಎಡ್ವರ್ಡ್‍ನ ವ್ಯಾಪಾರ ಚನ್ನಾಗಿ ನಡೆಯತೊಡಗಿತು. ಎಷ್ಟು ಚನ್ನಾಗಿ ಎಂದರೆ ವರ್ಷದೊಪ್ಪತ್ತಿನೊಳಗೆ ಇನ್ನೊಂದು ಅಂಗಡಿಯನ್ನು ತೆರೆಯಬೇಕೆನ್ನುವಷ್ಟು. ಹಾಗಾಗಿ ಆ ನಿಟ್ಟಿನಲ್ಲಿ ಆತ ಕಾರ್ಯೋನ್ಮುಖನಾದ. ಕೂಡಲೇ ಆತ ಅಂಥದೇ ಒಂದು ತಂಬಾಕುರಹಿತ ಉದ್ದನೆಯ ಬೀದಿಯಲ್ಲಿ ಸಣ್ಣ ಅಂಗಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ನೋಡಿಕೊಳ್ಳಲು ಒಬ್ಬ ಮ್ಯಾನೇಜರ್‌ನ್ನು ನೇಮಿಸಿದ. ಅದು ಕೂಡಾ ಬಹಳ ಬೇಗನೆ ಯಶಸ್ವಿಯಾಯಿತು. ಅವನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಾ ಹೋದಂತೆ ಅವನಿಗೆ ಅನಿಸಿತು. ನಾನು ಎರಡು ಅಂಗಡಿಗಳನ್ನು ನಡೆಸಬಲ್ಲವನಾದರೆ  ಅರ್ಧ ಡಜನ್ ಅಂಗಡಿಗಳನ್ನು ಯಾಕೆ ನಡೆಸಬಾರದು? ಹಾಗಾಗಿ ಆತ ಇಡಿ ಲಂಡನ್ ನಗರವನ್ನು ಸುತ್ತಿ ಎಲ್ಲೆಲ್ಲಿ ತಂಬಾಕುರಹಿತ ಉದ್ದನೆಯ ಬೀದಿಗಳಿವೆಯೋ ಅಲ್ಲೆಲ್ಲಾ ಹೋಗಿ ಖಾಲಿ ಇರುವ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ತನ್ನ ವ್ಯಾಪಾರವನ್ನು ಆರಂಭಿಸಿದನು. ಹೀಗೆ ಆರಂಭಿಸಿದ ಈತನ ವ್ಯಾಪಾರ ಎಷ್ಟು ಚನ್ನಾಗಿ ಬೆಳೆಯಿತೆಂದರೆ ಹತ್ತು ವರ್ಷಗಳ ಅವಧಿಯಲ್ಲಿ ಆತ ಹತ್ತು ಕಡೆ ಅಂಗಡಿಗಳನ್ನು ತೆರೆದು ಕೈ ತುಂಬಾ ಹಣವನ್ನು ಸಂಪಾದಿಸತೊಡಗಿದ. ಅಲ್ಲಿಂದಾಚೆ ಪ್ರತಿ ಸೋಮವಾರ ಅವನೇ ಖುದ್ದಾಗಿ ಎಲ್ಲ ಅಂಗಡಿಗಳಿಗೆ ಭೇಟಿಕೊಟ್ಟು ಒಂದು ವಾರದ ಸಂಪಾದನೆಯನ್ನು ತೆಗೆದುಕೊಂಡು ಬಂದು ಬ್ಯಾಂಕಿನಲ್ಲಿಡುತ್ತಿದ್ದ. 
    ಒಂದು ಮುಂಜಾನೆ ಆತ ಹೀಗೆ ನೋಟುಗಳ ಬಂಡಲ್‍ಗಳನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಅಲ್ಲಿ ಕ್ಯಾಷಿಯರ್ ಬಳಿ ಹಣವನ್ನು ಕಟ್ಟುತ್ತಿರಬೇಕಾದರೆ ಕ್ಯಾಷಿಯರ್ ಅವನಿಗೆ “ಬ್ಯಾಂಕ್ ಮ್ಯಾನೇಜರ್ ನಿಮ್ಮನ್ನು ನೋಡಬೇಕಂತೆ. ದಯವಿಟ್ಟು ನೀವು ಅವರನ್ನು ಭೇಟಿಮಾಡಿ.” ಎಂದು ಹೇಳುತ್ತಾ ಮ್ಯಾನೇಜರ್ ಇರುವ ಆಫೀಸನ್ನು ತೋರಿಸಿದ. ಮ್ಯಾನೇಜರ್ ಎದ್ದು ನಿಂತು ಅವನ ಕೈ ಕುಲುಕಿದ.
    “ಮಿಸ್ಟರ್ ಫೋರ್‍ಮನ್, ನೀವು ನಮ್ಮಲ್ಲಿ ಠೇವಣಿಯಿಟ್ಟ ಹಣದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಬೇಕಿತ್ತು. ನಿಮಗೆ ಸರಿಯಾಗಿ ಗೊತ್ತಾ ಎಷ್ಟು ಹಣವನ್ನಿಟ್ಟಿದ್ದೀರಿ ಎಂದು?” 
    “ನನಗೆ ಸರಿಯಾಗಿ ಗೊತ್ತಿಲ್ಲ, ಸರ್. ಆದರೆ ಒಂದು ಅಂದಾಜಿದೆ.”
    “ನೀವು ಇವತ್ತು ಬೆಳಿಗ್ಗೆ ಕಟ್ಟಿದ ಹಣವನ್ನು ಬಿಟ್ಟು ಒಟ್ಟು ಮೂವತ್ತು ಸಾವಿರ ಪೌಂಡುಗಳಿಗಿಂತ ಮೇಲಿದೆ. ಅದು ಭಾರಿ ದೊಡ್ಡ ಮೊತ್ತ. ಅದನ್ನು ಠೇವಣಿ ಇಡುವದಕ್ಕಿಂತ ನೀವು ಬೇರೆ ಯಾವುದರಲ್ಲಾದರು ತೊಡಗಿಸಿದರೆ ಉತ್ತಮ.”
    “ನನಗೆ ಯಾವುದೇ ರಿಸ್ಕ್ ತೆಗೆದುಕೊಳ್ಳೋಕೆ ಇಷ್ಟವಾಗಲ್ಲ ಸರ್. ಬ್ಯಾಂಕಲ್ಲಿದ್ದರೆ ಸುರಕ್ಷಿತವಾಗಿರುತ್ತೆ.”
    “ನೀವೇನೂ ಚಿಂತಿಸಬೇಕಿಲ್ಲ. ನಾವು ನಿಮಗೆ ಭರವಸೆಯನ್ನು ಕೊಡುತ್ತೇವೆ. ನೀವು ನಿಮ್ಮ ಹಣವನ್ನು ನಾವು ಹೇಳುವದರಲ್ಲಿ ತೊಡಗಿಸಿದರೆ ಖಂಡಿತ ನಿಮಗೆ ನಾವು ಕೊಡುವ ಬಡ್ಡಿಗಿಂತ ಇದರಲ್ಲಿ ಇನ್ನೂ ಉತ್ತಮ ಲಾಭ ಸಿಗುತ್ತೆ.” 
    ಮಿಸ್ಟರ್ ಫೋರ್‍ಮನ್‍ನ ಸಿರಿವಂತಿಕೆಯ ಮುಖದ ಮೇಲೆ ಗಲಿಬಿಲಿಯೊಂದು ಕಾಣಿಸಿತು. “ನನಗೆ ಈ ಸ್ಟಾಕ್ಸ್ ಮತ್ತು ಶೇರ್ ಮಾರುಕಟ್ಟೆ ಬಗ್ಗೆ ಒಂಚೂರು ಜ್ಞಾನವವಿಲ್ಲ. ನಾನು ನಿಮ್ಮನ್ನು ನಂಬಿ ನನ್ನ ಹಣವನ್ನು ನಿಮ್ಮ ಕೈಗಿಡಬಲ್ಲೆ ಅಷ್ಟೇ.” 
    ಮ್ಯಾನೇಜರ್ ನಸುನಗುತ್ತಾ, “ನಾವು ಎಲ್ಲ ಏರ್ಪಾಡನ್ನು ಮಾಡುತ್ತೇವೆ. ಮುಂದಿನ ಸಾರಿ ನೀವು ಇಲ್ಲಿಗೆ ಬಂದಾಗ ನಿಮ್ಮ ಹಣವನ್ನು ವರ್ಗಾಯಿಸಿದ್ದಕ್ಕೆ ಸಹಿ ಹಾಕಿದರೆ ಸಾಕು.”
    “ಅದೆಲ್ಲಾ ಸರಿ,” ಅಲ್ಬರ್ಟ್ ಅನುಮಾನಿಸುತ್ತಾ ಕೇಳಿದ. “ನಾನು ಯಾವುದಕ್ಕೆ ಸಹಿ ಹಾಕುತ್ತಿದ್ದೇನೆಂದು ನನಗೆ ಹೇಗೆ ಗೊತ್ತಾಗಬೇಕು?” 
    “ಅದೇನಿಲ್ಲ, ಸಹಿ ಮಾಡುವ ಮೊದಲು ಒಮ್ಮೆ ಎಲ್ಲವನ್ನು ಓದಿದರಾಯ್ತು.” ಕೊಂಚ ಸ್ಪಷ್ಟವಾಗಿ ಹೇಳಿದನು.
    ಮಿಸ್ಟರ್ ಫೋರ್‍ಮನ್ ಅವನತ್ತ ಹುಳ್ಳನಗೆಯೊಂದನ್ನು ಬೀರುತ್ತಾ ಹೇಳಿದನು. “ವೆಲ್, ಸರ್, ಅದು ಅಷ್ಟೇ ಅಂದು ನನಗೂ ಗೊತ್ತು. ಆದರೆ......ಆದರೆ.... ನಿಮಗೆ ತಮಾಷೆ ಎನಿಸಬಹುದು .....ನನಗೆ ಏನನ್ನೂ ಓದುವದಿಕ್ಕಾಗಲಿ ಬರೆಯುವದಿಕ್ಕಾಗಲಿ ಬರುವದಿಲ್ಲ....... ನನ್ನ ಹೆಸರೊಂದನ್ನು ಬಿಟ್ಟು ......ಅದನ್ನೂ ನಾನು ವ್ಯಾಪಾರ ಆರಂಭಿಸಿದ ಮೇಲೆ ಕಲಿತಿದ್ದು.”
    ಮ್ಯಾನೇಜರ್ ದಿಗ್ಗನೆ ಖುರ್ಚಿಯನ್ನು ಬಿಟ್ಟೆದ್ದು ನಿಂತನು.
    “ಅಸಾಧಾರಣ ಸಂಗತಿಯೊಂದನ್ನು ನಾನು ಕೇಳುತ್ತಿದ್ದೇನೆ.”
    “ಯೂ ಸೀ ಸರ್, ಅದೇನಾಯಿತೆಂದರೆ ನಾನು ದೊಡ್ಡವನಾಗುವವರೆಗೂ ನನಗೆ ಕಲಿಯಲು ಅವಕಾಶಗಳೇ ಸಿಗಲಿಲ್ಲ. ನಂತರ ಸಿಕ್ಕರೂ ನಾನವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಈ ವಿಷಯದಲ್ಲಿ ನಾನೊಂಥರಾ ದಡ್ಡನಿದ್ದೆ.” 
    ಮ್ಯಾನೇಜರ್ ಅವನನ್ನು ಪುರಾತನ ಕಾಲದ ಆಸಾಮಿಯನ್ನು ನೋಡುವಂತೆ ನೋಡಿದ. 
    “ಅಂದರೆ ನೀವು ಓದುಬರಹ ಗೊತ್ತಿಲ್ಲದೆಯೇ ಈ ವ್ಯಾಪಾರವನ್ನು ಆರಂಭಿಸಿ ಅದರಿಂದ ಮೂವತ್ತು ಸಾವಿರ ಪೌಂಡುಗಳಷ್ಟು ಹಣವನ್ನು ಗಳಿಸಿದಿರಾ? ಗುಡ್, ವೇರಿ ಗುಡ್ ಮ್ಯಾನ್......ಒಂದು ವೇಳೆ ಓದುಬರಹ ಬಲ್ಲವನಾಗಿದ್ದರೆ ಏನಾಗಿರುತ್ತಿದ್ದಿರಿ?”
    “ಹೇಳ್ತಿನಿ ಸರ್,” ಮಿಸ್ಟರ್ ಫೋರ್‍ಮನ್ ತನ್ನ ಸಿರಿವಂತಿಕೆಯ ಲಕ್ಷಣಗಳುಳ್ಳ ಮುಖದ ಮೇಲೆ ನಗುವೊಂದನ್ನು ತಂದುಕೊಳ್ಳುತ್ತಾ ಹೇಳಿದ. “ನಾನು ನೆವಿಲ್ಲಿ ಸ್ಕ್ವೇರ್‍ನಲ್ಲಿರುವ ಸೇಂಟ್ ಪೀಟರ್ ಚರ್ಚಿನ ಪಾದ್ರಿಯಾಗಿರುತ್ತಿದ್ದೆ.”
    ಮೂಲ ಇಂಗ್ಲೀಷ್: ಸಾಮರ್‍ಸೆಟ್ ಮೌಮ್
    ಕನ್ನಡಕ್ಕೆ: ಉದಯ್ ಇಟಗಿ



    ಲಂಚಿನ್

  • ಗುರುವಾರ, ಮಾರ್ಚ್ 12, 2015
  • ಬಿಸಿಲ ಹನಿ
  • ನಾನವಳನ್ನು ಈ ಹಿಂದೆ ಒಂದು ನಾಟಕವನ್ನು ನೋಡಲು ಹೋದಾಗ ನೋಡಿದ್ದೆ. ಈ ಸಾರಿ ಮಧ್ಯಂತರ ವಿರಾಮದ ವೇಳೆಯಲ್ಲಿ ಅವಳು ನನ್ನನ್ನು ಕಣ್ಸನ್ನೆಯಲ್ಲಿ ಕರೆದಿದ್ದರಿಂದ ನಾನು ಅವಳ ಕರೆಗೆ ಓಗೊಟ್ಟು ಅವಳ ಬಳಿ ಹೋಗಿ ಕುಳಿತೆ. ನಾನವಳನ್ನು ನೋಡಿ ತುಂಬಾ ದಿನಗಳಾಗಿದ್ದರಿಂದ ನನಗೆ ಅವಳ ಗುರುತು ಸಹ ಸಿಕ್ಕಿರಲಿಲ್ಲ. ನಾನವಳನ್ನು ಯಾರೋ ಇರಬೇಕು ಎಂದುಕೊಂಡಿದ್ದೆ. ಆದರೆ ಅಕಸ್ಮಾತಾಗಿ ಯಾರೋ ಒಬ್ಬರು ಅವಳ ಹೆಸರು ಹೇಳಿದ್ದರಿಂದ ನನಗೆ ಅವಳು ಯಾರೆಂದು ಗೊತ್ತಾಯಿತು. ಇಲ್ಲದೆ ಹೋದರೆ ಬಹುಶಃ ಅವಳ ಗುರುತೇ ಸಿಗುತ್ತಿರಲಿಲ್ಲವೇನೋ! ಅವಳು ಖುಷಿಯಿಂದ ನನ್ನನ್ನು ಮಾತನಾಡಿಸಿದಳು.
    “ವೆಲ್, ನಾವು ಮೊದಲ ಸಾರಿ ಭೇಟಿ ಮಾಡಿ ತುಂಬಾ ವರ್ಷಗಳೇ ಆದವು, ಅಲ್ವಾ? ಸಮಯ ಎಷ್ಟು ಬೇಗ ಸರಿಯುತ್ತದೆ! ನಿನಗೆ ನೆನಪಿದಿಯಾ ನಾನು ನಿನ್ನನ್ನು ಮೊದಲು ಸಾರಿ ನೋಡಿದ್ದು ಮತ್ತು ನೀನು ನನ್ನನ್ನು ಲಂಚಿನ್‍ಗೆ (ಮಧ್ಯಾಹ್ನದ ಊಟಕ್ಕೆ) ಆಹ್ವಾನಿಸಿದ್ದು?
    ನನಗೆ ನೆನಪಿದಿಯೇ?
    ಹೌದು, ನೆನಪಿದೆ. ಅದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಪ್ಯಾರಿಸ್‍ನಲ್ಲಿದ್ದೆ. ಸ್ಮಶಾನಕ್ಕೆ ಎದುರಾಗಿ ನಿಂತಿದ್ದ ಸಣ್ಣ ಅಪಾರ್ಟ್‍ಮೆಂಟೊಂದರಲ್ಲಿ ವಾಸಿಸುತ್ತಿದ್ದೆ. ನಾನಾಗ ನನ್ನ ಹೊಟ್ಟೆಗೆ ಮತ್ತು ಬಟ್ಟೆಗೆ ಸಾಕಾಗುವಷ್ಟನ್ನು ಅದ್ಹೇಗೋ ಕಷ್ಟಪಟ್ಟು ಸಂಪಾದಿಸುತ್ತಿದ್ದೆ. ಆ ದಿನಗಳಲ್ಲಿ ಆಕೆ ನನ್ನ ಪುಸ್ತಕವೊಂದನ್ನು ಓದಿ ಅದರ ಬಗ್ಗೆ ನನಗೊಂದು ಪತ್ರವನ್ನು ಬರೆದಿದ್ದಳು. ನಾನವಳಿಗೆ ಮರಳಿ ಧನ್ಯವಾದಗಳನ್ನು ಅರ್ಪಿಸಿ ಒಂದು ಪತ್ರವನ್ನು ಬರೆದಿದ್ದೆ. ಇದೀಗ ಅವಳಿಂದ ಮತ್ತೊಂದು ಪತ್ರ ಬಂದಿತ್ತು. ಅದರಲ್ಲಿ ಅವಳೀಗ ಪ್ಯಾರಿಸ್ ಮೂಲಕ ಹೋಗುತ್ತಿದ್ದಾಳೆ ಹಾಗೂ ಅಲ್ಲಿ ನನ್ನನ್ನು ನೋಡಲು ಬಯಸುತ್ತಾಳೆಂದು ಬರೆದಿದ್ದಳು. ಆದರೆ ಅಲ್ಲಿ ಅವಳಿಗೆ ಕಡಿಮೆ ಸಮಯವಿದೆಯೆಂದು ಹಾಗೂ ಅವಳು ಪುರುಸೊತ್ತಾಗಿರುವದು ಗುರುವಾರದಂದು ಮಾತ್ರವೆಂದು ಹೇಳಿದ್ದಳು. ಆಕೆ ತನ್ನ ಮುಂಜಾನೆಯನ್ನು ಲಕ್ಸಂಬರ್ಗ್‍ನಲ್ಲಿ ಕಳೆಯುವವಳಿದ್ದಳು. ಆನಂತರ ನಾನವಳಿಗೊಂದು ಫೋಯೋಟ್‍ನಲ್ಲಿ ಲಂಚಿನ್ ಕೊಟ್ಟರೆ ಹೇಗಿರುತ್ತದೆ? ಫೋಯೋಟ್‍ ರೆಸ್ಟೋರೆಂಟ್‍ ಎಂದರೆ ಅದು ಫ್ರೆಂಚ್ ಸೆನೆಟರ್‍ಗಳು ಊಟ ಮಾಡುವ ರೆಸ್ಟೋರೆಂಟ್‍ ಮತ್ತದು ನನ್ನ ಆದಾಯಕ್ಕೆ ಮೀರಿದ ರೆಸ್ಟೊರೆಂಟಾಗಿದ್ದರಿಂದ ನಾನೆಂದೂ ಅಲ್ಲಿಗೆ ಹೋಗುವ ಯೋಚನಯನ್ನೇ ಮಾಡಿರಲಿಲ್ಲ. ಆದರೆ ಅವಳ ಕರೆಗೆ ನಾನು ಪುಳಕಿತಗೊಂಡಿದ್ದೆ ಹಾಗೂ ಆಗ ನಾನಿನ್ನೂ ತರುಣನಾಗಿದ್ದರಿಂದ ಹೆಂಗಸೊಬ್ಬಳಿಗೆ ‘ನೋ’ ಎಂದು ಹೇಳಲು ಸಾಧ್ಯವಾಗಲಿಲ್ಲ. ನನ್ನ ಬಳಿ ಆ ತಿಂಗಳಿನ ಉಳಿದ ದಿನಗಳನ್ನು ಪೂರೈಸಲು ಎಂಬತ್ತು ಫ್ರ್ಯಾಂಕ್‍ಗಳಷ್ಟೇ ಇದ್ದವು. ಅಲ್ಲಿ ಒಂದು ಮಿತವಾದ ಊಟ ಹದಿನೈದು ಫ್ರ್ಯಾಂಕ್‍ಗಳಿಗಿಂತ ಹೆಚ್ಚಾಗಲಾರದು ಮತ್ತು ಮುಂದಿನ ಎರಡು ವಾರಗಳ ಕಾಲ ಕಾಫಿ ಕುಡಿಯುವದನ್ನು ನಿಲ್ಲಿಸಿದರೆ ಉಳಿದ ಖರ್ಚನ್ನು ಅದ್ಹೇಗೋ ಸರಿದೂಗಿಸಬಹುದು ಎಂದು ಭಾವಿಸಿ ಅಲ್ಲಿ ಅವಳಿಗೆ ಒಂದು ಊಟವನ್ನು ಕೊಡಿಸಬೇಕೆಂದು ನಿರ್ಧರಿಸಿದೆ. 
    ನಾನವಳಿಗೆ ಪತ್ರದ ಮೂಲಕ ಗುರುವಾರ ಮಧ್ಯಾಹ್ನ ಸರಿಯಾಗಿ ಹನ್ನೆರೆಡುವರೆ ಘಂಟೆಗೆ ಫೋಯೋಟ್‍ ರೆಸ್ಟೋರೆಂಟ್‍ನಲ್ಲಿ ಅವಳನ್ನು ಭೇಟಿಮಾಡುತ್ತೇನೆಂದು ತಿಳಿಸಿದ್ದೆ. ನಾನು ಎಣಿಸಿದಂತೆ ಅವಳು ತರುಣಿಯಾಗಿರಲಿಲ್ಲ. ನೋಡಲು ಕೂಡಾ ಅಷ್ಟೇನೂ ಚನ್ನಾಗಿರಲಿಲ್ಲ. ವಯಸ್ಸು ಸುಮಾರು ನಲವತ್ತಾಗಿರಬೇಕು. ಅವಳು ನನ್ನನ್ನು ನೋಡಿ ನಕ್ಕಾಗ ನಾನವಳಿಗೆ ದೊಡ್ಡದೊಡ್ಡ ಹಲ್ಲುಗಳಿರುವದನ್ನು ಗಮನಿಸಿದೆ. ಅವಳು ಮಾತಿನ ಮಲ್ಲಿ. ಆದರೆ ಅವಳು ನನ್ನ ಬಗ್ಗೆಯೇ ಆಸಕ್ತಿಯಿಂದ ಮಾತನಾಡುತ್ತಿದ್ದರಿಂದ ನಾನವಳನ್ನು ಸುಮ್ಮನೆ ಕೇಳುತ್ತಾ ಕುಳಿತುಕೊಂಡೆ. ವೇಟರ್ ಮೆನು ಕಾರ್ಡ್‍ನ್ನು ತಂದಿಟ್ಟನು. ನಾನು ಅದರಲ್ಲಿನ ಬೆಲೆಗಳನ್ನು ನೋಡಿ ಬೆಚ್ಚಿಬಿದ್ದೆ. ಏಕೆಂದರೆ ಅಲ್ಲಿ ಎಲ್ಲ ಪದಾರ್ಥಗಳ ಬೆಲೆಗಳು ನಾನು ನಿರೀಕ್ಷಿಸಿದ್ದಿಕ್ಕಿಂತ ಹೆಚ್ಚಿದ್ದವು. ಆದರೆ ಆಕೆ ನನಗೆ ಭರವಸೆಯನ್ನು ನೀಡಿದಳು.
    “ನಾನು ಲಂಚಿನ್‍ಗೆ ಏನನ್ನೂ ತಿನ್ನುವದಿಲ್ಲ.” ಆಕೆ ಹೇಳಿದಳು.
    “ಓ, ಡೋಂಟ್ ಸೇ ದ್ಯಾಟ್!” ನಾನು ಔದಾರ್ಯದಿಂದ ಹೇಳಿದೆ.     
    “ನಾನು ಒಂದಕ್ಕಿಂತ ಹೆಚ್ಚಾಗಿ ಬೇರೇನನ್ನೂ ತಿನ್ನುವದಿಲ್ಲ. ನನಗನಿಸುತ್ತೆ ಇತ್ತೀಚಿನ ದಿನಗಳಲ್ಲಿ ಜನ ಚನ್ನಾಗಿ ತಿಂತಾರೆಂದು. ನನಗೆ ಸಣ್ಣದೊಂದು ಮೀನಾದರೆ ಅಡ್ಡಿಯಿಲ್ಲ. ಇವರ ಬಳಿ ಸಾಲ್ಮನ್ ಮೀನು ಇದೆಯಾ ನೋಡಬೇಕು.”
    ಆದರೆ ಸಾಲ್ಮನ್ ಮೀನುಗಳು ವರ್ಷದ ಆರಂಭದಲ್ಲಿ ಸಿಗುವದಿಲ್ಲವೆಂದು ನನಗೆ ಗೊತ್ತಿತ್ತು. ಮೇಲಾಗಿ ಮೆನು ಕಾರ್ಡಿನಲ್ಲಿ ಅದನ್ನು ಹೆಸರಿಸಿರಲಿಲ್ಲ. ಅದರ ಬದಲಿಗೆ ಬೇರೆ ಏನಾದರು ಇದೆಯಾ ಎಂದು ನಾನು ವೇಟರ್‍ನನ್ನು ಕೇಳಿದೆ. ಅವನು ಈಗಷ್ಟೇ ಸಾಲ್ಮನ್ ಮೀನು ಬಂದಿದೆ ಎಂದು ಹೇಳಿದ. ನಾನದನ್ನು ನನ್ನ ಅತಿಥಿಗಾಗಿ ಆರ್ಡರ್ ಮಾಡಿದೆ. ವೇಟರ್ ಅವಳನ್ನು ಅದು ತಯಾರಾಗುವವರೆಗೂ ಬೇರೆ ಏನಾದರು ಬೇಕಾ ಎಂದು ಕೇಳಿದ.   
    “ಬೇಡ,” ಅವಳು ಉತ್ತರಿಸಿದಳು, “ನಾನು ಒಂದಕ್ಕಿಂತ ಹೆಚ್ಚಾಗಿ ಬೇರೆ ಏನನ್ನೂ ತಿನ್ನುವದಿಲ್ಲ ಕೇವರಿಯನ್ನು ಬಿಟ್ಟು. ನನಗೆ ಕೇವರಿ ಅಡ್ಡಿಯಿಲ್ಲ.” ನನ್ನೆದೆ ಒಂದು ಕ್ಷಣ ಧಸಕ್ ಎಂದಿತು. ನನಗೆ ಗೊತ್ತಿತ್ತು ಕೇವರಿ ನನಗೆ ನಿಲುಕದ್ದು ಎಂದು. ಆದರೂ ವೇಟರ್‍ಗೆ ಒಂದು ಕೇವರಿ ತರಲು ಹೇಳಿದೆ ಮತ್ತು ನನಗೋಸ್ಕರ ಮೆನು ಕಾರ್ಡಿನಲ್ಲಿ ಅತ್ಯಂತ ಅಗ್ಗದ ಪದಾರ್ಥವೊಂದನ್ನು ನೋಡಿ ಕೊನೆಗೆ ಮಟನ್ ಚಾಪ್ ತರಲು ಹೇಳಿದೆ. 
    “ಇಷ್ಟೊತ್ತಲ್ಲಿ ಮಟನ್ ತಿನ್ನೋದು ನೋಡಿದರೆ ನೀನು ತಪ್ಪು ಮಾಡುತ್ತಿದ್ದೀಯಾ ಅಂತಾ ನನಗನಿಸುತ್ತೆ.” ಅವಳು ಹೇಳಿದಳು. “ಚಾಪ್ಸ್‍ನಂಥ ಭಾರವಾದ ಪದಾರ್ಥಗಳನ್ನು ತಿಂದ ಮೇಲೆ ನೀನು ಮತ್ತೆ ನಿನ್ನ ಕೆಲಸವನ್ನು ಹೇಗೆ ಮುಂದುವರಿಸುತ್ತೀಯಾ ಅಂತಾ ನನಗೆ ಆಶ್ಚರ್ಯ. ಆದರೆ ನಾನು ಮಾತ್ರ ಯಾವತ್ತೂ ನನ್ನ ಹೊಟ್ಟೆಯನ್ನು ಮಿತಿಮೀರಿ ತುಂಬುವದಿಲ್ಲ.”
    ಈಗ ಡ್ರಿಂಕ್ಸ್ ತೆಗೆದುಕೊಳ್ಳುವ ಪ್ರಶ್ನೆ ಬಂತು.
    “ನಾನು ಲಂಚ್‍ಗೆ ಏನನ್ನೂ ಕುಡಿಯುವದಿಲ್ಲ.” ಅವಳು ಹೇಳಿದಳು.
    “ನಾನು ಕೂಡಾ ಏನನ್ನೂ ಕುಡಿಯುವದಿಲ್ಲ.” ನಾನು ಕೂಡಲೇ ಉತ್ತರಿಸಿದೆ.
    “ವೈಟ್ ವೈನ್ ಬಿಟ್ಟು” ನಾನು ಮಾತನಾಡಿಯೇ ಇಲ್ಲವೆಂಬಂತೆ ಆಕೆ ಮುಂದುವರಿದಳು.
    “ಫ್ರೆಂಚ್ ವೈಟ್ ವೈನ್‍ಗಳು ತುಂಬಾ ಹಗುರ. ಅವು ಪಚನಕ್ರಿಯೆಗೆ ತುಂಬಾ ಸಹಾಯ ಮಾಡುತ್ತವೆ.”
    “ಏನು ತಗೊಳ್ತೀರಾ?”  ನಾನು ಆದರಪೂರ್ವಕವಾಗಿ ಅವಳನ್ನು ಕೇಳಿದೆ ಆದರೆ ಬಲವಂತ ಮಾಡಲಿಲ್ಲ.
    “ನನ್ನ ಡಾಕ್ಟರ್ ನನಗೆ ಶಾಂಪೇನ್ ಬಿಟ್ಟು ಬೇರೇನನ್ನೂ ಕುಡಿಯಲು ಬಿಡುವದಿಲ್ಲ.”
    ನಾನು ಸ್ವಲ್ಪ ಮಂಕಾದನೆಂದು ನನಗನಿಸಿತು. ಆದರೆ ಅದನ್ನು ತೋರಿಸಿಕೊಳ್ಳದೆ ಅರ್ಧ ಬಾಟಲ್‍ಗೆ ಆರ್ಡರ್ ಮಾಡಿ ನಾನು ಸಹಜವಾಗಿ ಅವಳಿಗೆ “ನನ್ನ ಡಾಕ್ಟರ್ ನಾನು ಯಾವತ್ತೂ ಶಾಂಪೇನ್ ಕುಡಿಯಕೂಡದೆಂದು ಹೇಳಿದ್ದಾರೆ.” ಎಂದು ಹೇಳಿದೆ.    
    “ಹಾಗಾದ್ರೆ ನೀನು ಏನು ಕುಡಿತೀಯಾ?”
    “ನೀರು.”
    ಆಕೆ ಕೇವರಿ ಮತ್ತು ಸಾಲ್ಮನ್‍ಗಳೆರಡನ್ನೂ ತಿಂದಳು. ಆಕೆ ಕಲೆ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ವಿನೋದವಾಗಿ ಮಾತನಾಡಿದಳು. ಆದರೆ ಬಿಲ್ಲು ಎಷ್ಟು ಬರಬಹುದೆಂಬ ಆತಂಕದಲ್ಲಿ ನಾನು ಕುಳಿತಿದ್ದೆ. ನನ್ನ ಮಟನ್ ಚಾಪ್ ಬಂದಾಗ ಅವಳು ನನಗೆ ಗಂಭೀರವಾಗಿ ಹೇಳಿದಳು.
    “ನನಗನಿಸುತ್ತೆ ನೀನು ಸದಾ ಭಾರವಾದ ಲಂಚ್ ತಗೊಳ್ತೀಯಾ ಅಂತಾ. ಅದು ತಪ್ಪು. ನೀನ್ಯಾಕೆ ನನ್ನ ತರ ಒಂದನ್ನೇ ತಿನ್ನಬಾರದು? ಅದು ಯಾವಾಗ್ಲೂ ಒಳ್ಳೇದು.” 
    “ನಾನು ಒಂದನ್ನೇ ತಿಂತಾ ಇರೋದು.” ನಾನು ಹೇಳಿದೆ. ಮತ್ತೆ ವೇಟರ್ ಬಿಲ್ಲು ಹಿಡಿಕೊಂಡು ಬಂದ.  
    ಆದರೆ ಆಕೆ ಅವನನ್ನು ಕೈ ಸನ್ನೆಯಿಂದ ನಿರಾಕರಿಸುತ್ತಾ ಹೇಳಿದಳು.
    “ನೋ, ನೋ, ನಾನು ಲಂಚ್‍ಗೆ ಬೇರೇನನ್ನೂ ತಿನ್ನುವದಿಲ್ಲ. ಬಹುಶಃ, ಅಸ್ಪರಾಗಸ್ (ಒಂದು ತೆರದ ಫ್ರೆಂಚ್ ಸೊಪ್ಪಿನ ಎಲೆಗಳು) ಬಿಟ್ಟರೆ ನಾನು ಬೇರೇನೂ ತಗೊಳ್ಳಲಾರೆ ಅನಿಸುತ್ತೆ. ಪ್ಯಾರಿಸ್‍ಗೆ ಬಂದ ಮೇಲೆ ಅವನ್ನು ತಿನ್ನದೆ ಹಾಗೆ ಹೋಗುವದು ಮೂರ್ಖತನವೆನಿಸುತ್ತದೆ.” 
    ನನ್ನೆದೆಗೆ ಚುಚ್ಚಿದಂತಾಯಿತು. ನಾನವನ್ನು ಅಂಗಡಿಗಳಲ್ಲಿ ನೋಡಿದ್ದೆ ಹಾಗೂ ಅವು ತುಂಬಾ ದುಬಾರಿಯವು ಎಂದು ನನಗೆ ಗೊತ್ತಿತ್ತು. ಅವನ್ನು ನೋಡಿ ಎಷ್ಟೋ ಸಾರಿ ನನ್ನ ಬಾಯಲ್ಲಿ ನೀರಾಡಿತ್ತು.
    “ಮೇಡಮ್, ಅಸ್ಪರಾಗಸ್ ಇವೆಯಾ ಎಂದು ಕೇಳುತ್ತಿದ್ದಾರೆ.”  ನಾನು ವೇಟರ್‍ನನ್ನು ಕೇಳಿದೆ. 
    ಅವನು ಇಲ್ಲ ಎಂದು ಹೇಳಲಿ ಎಂಬಂತೆ ಅವನನ್ನು ಕೇಳಿದ್ದೆ. ಆದರೆ ಅವನ ಮುಖದ ಮೇಲೆ ಸಂತೋಷದ ಮುಗುಳ್ನಗೆಯೊಂದು ಅಗಲವಾಗಿ ಕಾಣಿಸಿತು. ಅವನು ಅವು ಇವೆಯೆಂದೂ, ಸೊಗಸಾಗಿವೆಯೆಂದೂ, ಎಳೆಯವಾಗಿವೆಯೆಂದೂ ಮತ್ತು ಚನ್ನಾಗಿವೆಯೆಂದೂ ಹೇಳಿದ.
    “ನಿಜ ಹೇಳಬೇಕೆಂದರೆ ನನಗೆ ಹಸಿವೆ ಇಲ್ಲ,” ನನ್ನ ಅತಿಥಿ ನಿಟ್ಟುಸಿರಿಡುತ್ತಾ ಹೇಳಿದಳು, “ಆದರೆ ನಿಮ್ಮ ಒತ್ತಾಯಕ್ಕೆ ಮಣಿದು ಕೆಲವು ಅಸ್ಪರಾಗಸ್ ತಿನ್ನಬಲ್ಲೆ.”
    ನಾನು ಅವನ್ನು ತರಲು ಹೇಳಿದೆ.
    “ನೀನು ತಗೋಳಲ್ವಾ?”
    “ಇಲ್ಲ, ನಾನು ಅಸ್ಪರಾಗಸ್ ತಿನ್ನುವದಿಲ್ಲ.”
    “ನಂಗೊತ್ತು ಕೆಲವರು ಅವನ್ನು ತಿನ್ನುವದಿಲ್ಲವೆಂದು. ಆದರೆ ನಿಜ ಏನೆಂದರೆ ಬರೀ ಮಾಂಸವನ್ನೇ ತಿನ್ನುವದರಿಂದ ನೀನು ನಿನ್ನ ಅಭಿರುಚಿಯನ್ನು ಕಳೆದುಕೊಳ್ತಿಯಾ.”
    ಅಸ್ಪರಾಗಸ್ ತಯಾರಾಗುವವರೆಗೂ ಕಾಯುತ್ತಾ ಕುಳಿತೆವು. ಭಯ ನನ್ನನ್ನು ಆವರಿಸಿತ್ತು. ಉಳಿದ ತಿಂಗಳನ್ನು ಹೇಗೆ ಕಳೆಯುತ್ತೆನೆ ಎನ್ನುವದಕ್ಕಿಂತ ಹೆಚ್ಚಾಗಿ ಇದೀಗ ಬಿಲ್ಲು ಕೊಡಲು ನನ್ನ ಬಳಿ ಅಷ್ಟು ಹಣವಿದೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಬಿಲ್ಲು ಕೊಡಲು ನನ್ನ ಬಳಿಯಿರುವ ಹಣದಲ್ಲಿ ಹತ್ತು ಫ್ರಾಂಕ್‍ಗಳಷ್ಟು ಕಡಿಮೆಬೀಳಬಹುದೇನೋ. ಆಗ ನನ್ನ ಅತಿಥಿಯ ಕಡೆಯಿಂದ ಸಾಲ ತೆಗೆದುಕೊಳ್ಳಬೇಕು. ಆದರೆ ನನಗೆ ಅದು ಸರಿ ಕಾಣಲಿಲ್ಲ. ನನ್ನ ಬಳಿ ಎಷ್ಟು ಹಣವಿದೆಯೆಂದು ನನಗೆ ಚನ್ನಾಗಿ ಗೊತ್ತಿತ್ತು. ಒಂದು ವೇಳೆ ಬಿಲ್ಲು ಹೆಚ್ಚು ಬಂದರೆ ನಾನು ನನ್ನ ಜೇಬಿನಲ್ಲಿ ಕೈಯಿಟ್ಟು ಹಣಕ್ಕಾಗಿ ಹುಡುಕುವ ತರ ನಾಟಕ ಮಾಡಿ ನಂತರ ಅದು ಕಳೆದುಹೋಗಿದೆ ಎಂದು ಹೇಳಲು ನಿರ್ಧರಿಸಿದ್ದೆ. ಒಂದು ವೇಳೆ ಬಿಲ್ಲು ಕಟ್ಟಲು ಅವಳ ಹತ್ತಿರಾನೂ ಅಷ್ಟೊಂದು ದುಡ್ಡು ಇರದೆ ಹೋದರೆ ಪೇಚಿಗೆ ಸಿಲುಕಬೇಕಾಗುತ್ತದೆ. ಆಗ ನನ್ನ ವಾಚ್‍ನ್ನು ಅವರ ಬಳಿ ಅಡ ಇಟ್ಟು ಆಮೇಲೆ ಬಂದು ಬಿಲ್ಲು ಕಟ್ಟುತ್ತೇನೆ ಎಂದು ಹೇಳಬೇಕಂದೆ.     
    ಅಸ್ಪರಾಗಸ್ ಬಂದವು. ಅವು ದೊಡ್ಡದಾಗಿಯೂ, ರಸವತ್ತಾಗಿಯೂ, ಬಾಯಲ್ಲಿ ನೀರೂರಿಸುವಂತೆಯೂ ಇದ್ದವು. ಕರಗಿದ ಬೆಣ್ಣೆಯ ವಾಸನೆ ನನ್ನ ಮೂಗಿನ ಹೊಳ್ಳೆಗಳನ್ನು ಚುರುಕುಗೊಳಿಸಿದವು. ಆದರೆ ನಾನು ಅವಳು ತಿನ್ನುವದನ್ನೇ ನೋಡುತ್ತಾ ಕುಳಿತೆ. ಅವಳು ಅವನ್ನು ಒಂದೊಂದಾಗಿ ತಿಂದು ಮುಗಿಸಿದಳು.
    “ಕಾಫಿ?” ನಾನು ಕೇಳಿದೆ.
    “ಎಸ್, ಜಸ್ಟ್ ಯ್ಯಾನ್ ಐಸ್ ಕ್ರೀಮ್ ಯ್ಯಾಂಡ್ ಕಾಫಿ.” ಅವಳು ಹೇಳಿದಳು.
    ಇದೀಗ ನಾನು ಮಿತಿಮೀರಿ ಕಾಳಜಿ ತೋರಿಸುತ್ತಿದ್ದೆ. ಅಥವಾ ಹಾಗೆ ನಾಟಕ ಮಾಡುತ್ತಿದ್ದೆ. ನಾನು ನನಗೊಂದು ಕಾಫಿಯನ್ನು ಹಾಗೂ ಅವಳಿಗೊಂದು ಐಸ್ ಕ್ರೀಮ್ ಮತ್ತು ಕಾಫಿಯನ್ನು ಹೇಳಿದೆ.
    “ಯೂ ನೋ, ನನಗೆ ಅನಿಸೋದು ಏನಂದರೆ,” ಅವಳು ಐಸ್ ಕ್ರೀಮ್ ತಿನ್ನುತ್ತಾ ಹೇಳಿದಳು. “ನಾವು ಯಾವಾಗ್ಲೂ ಇನ್ನೂ ಸ್ವಲ್ಪ ತಿಂದಿದ್ದರೆ ನಡೆಯುತ್ತಿತ್ತೇನೋ ಎನ್ನುವ ಭಾವನೆಯೊಂದಿಗೆ ಊಟದ ತಟ್ಟೆಯನ್ನು ಬಿಟ್ಟೇಳಬೇಕು.”  
    “ನಿಮಗಿನ್ನೂ ಹಸಿವಿದೆಯಾ?” ನಾನು ಕೇಳಿಯೂ ಕೇಳದಂತೆ ಕೇಳಿದೆ.
    “ಓ, ನೋ! ಐ ಯ್ಯಾಮ್ ನಾಟ್ ಹಂಗ್ರಿ. ಯೂ ಸೀ, ಐ ಡೋಂಟ್ ಈಟ್ ಲಂಚಿನ್. ಬೆಳಿಗ್ಗೆ ಕಾಫಿ ಬಿಟ್ಟರೆ ಇನ್ನು ನಾನು ಊಟ ಮಾಡುವದು ರಾತ್ರಿಗೇನೆ. ಆದರೆ ಮಧ್ಯಾಹ್ನದ ಊಟಕ್ಕೆ ಮಾತ್ರ ನಾನು ಒಂದಕ್ಕಿಂತ ಹೆಚ್ಚಾಗಿ ಬೇರೇನೇನನ್ನೂ ತಿನ್ನುವದಿಲ್ಲ.”
    “ಓ, ಐ ಸೀ!”
    ಆಗ ಅಲ್ಲೊಂದು ಅಸಾಧ್ಯವಾದ ಘಟನೆ ನಡೆಯಿತು. ನಾವು ಕಾಫಿಗಾಗಿ ಕಾಯುತ್ತಾ ಕುಳಿತಿರುವಾಗ ಹೆಡ್ ವೇಟರ್ ನಮ್ಮ ಅನುಗ್ರಹವನ್ನು ಸಂಪಾದಿಸಲೆಂಬಂತೆ ಔಪಚಾರಿಕ ನಗು ನಗುತ್ತಾ ನಮ್ಮತ್ತ ಧಾವಿಸಿ ಬಂದ. ಅವನ ಕೈಯಲ್ಲಿ ಪೀಚ್ ಹಣ್ಣುಗಳ ಬುಟ್ಟಿಯಿತ್ತು. ಅವು ಹದಿಹರೆಯದ ಹುಡುಗಿಯೊಬ್ಬಳ ಕೆಂಪೇರಿದ ಕೆನ್ನೆಗಳಂತೆ ಕಾಣುತಿದ್ದವು. ಆದರೆ ಅದು ಆಗ ಪೀಚ್ ಹಣ್ಣುಗಳಿಗೆ ಖಂಡಿತ ಸೂಕ್ತಕಾಲವಾಗಿರಲಿಲ್ಲ. ಅವುಗಳ ಬೆಲೆ ಎಷ್ಟೆಂದು ಆ ದೇವರಿಗೊಬ್ಬನಿಗೆ ಮಾತ್ರ ಗೊತ್ತಿತ್ತು. ನಂತರ ನನಗೂ ಗೊತ್ತಾಯಿತು. ಆಕೆ ನನ್ನೊಂದಿಗೆ ಮಾತನಾಡುತ್ತಾ ಅವಳಿಗರಿವಿಲ್ಲದೆ ಒಂದು ಹಣ್ಣನ್ನು ಎತ್ತಿಕೊಂಡಳು.
    “ಯೂ ಸೀ , ನೀನು ಹೊಟ್ಟೆ ಬಿರಿಯುವಂತೆ ಮಾಂಸವನ್ನು ತಿಂದಿದ್ದಿರಿಂದ ಈಗ ನೀನು ಬೇರೇನನ್ನೂ ತಿನ್ನಲಾರಿ. ಆದರೆ ನಾನು ಬರೀ ಸ್ನ್ಯಾಕ್ ಅಷ್ಟೇ ತಿಂದಿದ್ದೇನೆ. ಹಾಗಾಗಿ ನಾನು ಈ ಪೀಚ್ ಹಣ್ಣನ್ನು ತಿನ್ನುತ್ತೇನೆ.”  
    ಬಿಲ್ ಬಂತು. ನಾನದನ್ನು ಪಾವತಿಸಿದಾಗ ಟಿಪ್ಸ್ ಕೊಡಲು ನನ್ನ ಬಳಿ ಮೂರೇ ಮೂರು ಫ್ರಾಂಕ್‍ಗಳು ಉಳಿದಿದ್ದವು. ನಾನದನ್ನು ವೇಟರ್‍ಗಾಗಿ ಬಿಟ್ಟೆ. ಅವಳದನ್ನು ನೋಡಿ ನಾನು ಜಿಪುಣನಿರಬೇಕೆಂದು ಭಾವಿಸಿದಳೇನೋ. ಆದರೆ ನಾನು ರೆಸ್ಟೋರೆಂಟ್‍ನಿಂದ ಹೊರಗೆ ನಡೆದಾಗ ನನಗೆ ಗೊತ್ತಾಯಿತು ನನ್ನ ಮುಂದೆ ಅರ್ಧ ತಿಂಗಳು ಬಾಕಿ ಇದೆಯೆಂದೂ ಆದರೆ ಕಿಸೆಯಲ್ಲಿ ಒಂದು ಪೈಸೆಯೂ ಇಲ್ಲವೆಂದು. 
    “ನನ್ನ ಉದಾಹರಣೆಯನ್ನು ಅನುಸರಿಸು.” ಅವಳು ನನ್ನ ಕೈ ಕುಲುಕುತ್ತಾ ಹೇಳಿದಳು. “ಮತ್ತು ಮಧ್ಯಾಹ್ನದ ಊಟಕ್ಕೆ ಒಂದಕ್ಕಿಂತ ಹೆಚ್ಚಿಗೆ ಬೇರೇನನ್ನೂ ತಿನ್ನಬೇಡ.”
    “ನಿಮ್ಮ ಉದಾಹರಣೆಗಿಂತ ನನ್ನ ಉದಾಹರಣೆಯನ್ನೇ ಅನುಸರಿಸುತ್ತೇನೆ,” ನಾನು ಮಾರ್ನುಡಿದೆ. “ಇವತ್ತು ರಾತ್ರಿಯ ಊಟಕ್ಕೆ ನಾನು ಏನನ್ನೂ ತಿನ್ನುವದಿಲ್ಲ.”  
    “ಹಾಸ್ಯಗಾರ,” ಆಕೆ ಕ್ಯಾಬಿನಲ್ಲಿ ಕುಳಿತುಕೊಳ್ಳುತ್ತಾ ಖುಷಿಯಿಂದ ಕಿರುಚಿದಳು. “ನೀನೊಬ್ಬ ಒಳ್ಳೆ ಹಾಸ್ಯಗಾರ!” ಎನ್ನುತ್ತಾ ಹೊರಟು ಹೋದಳು.
    ಕೊನೆಯಲ್ಲಿ ನಾನು ನನ್ನ ಬಳಿಯಿದ್ದ ಎಲ್ಲ ದುಡ್ಡನ್ನು ಕಳೆದುಕೊಂಡಿದ್ದೆ. ಆದರೆ ಅದರ ಬಗ್ಗೆ ನನಗೆ ಒಂಚೂರು ಪಶ್ಚಾತಾಪವಿರಲಿಲ್ಲ. ಏಕೆಂದರೆ ಒಂದು ಹೆಣ್ಣಿಗೆ ನನ್ನ ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ಒಂದು ಪಾರ್ಟಿ ಕೊಟ್ಟ ಖುಷಿ ನನ್ನ ಜೊತೆಯಲ್ಲಿತ್ತು. ಆ ದೇವರು ಇಂಥ ಅವಕಾಶಗಳನ್ನು ನನ್ನಂಥವರಿಗೆ ತಾನಾಗಿಯೇ ಕರುಣಿಸಿದಾಗ ತಿರಸ್ಕರಿಸಲು ಸಾಧ್ಯವೇ? 
    ಅಂದ್ಹಾಗೆ ಆಕೆ ಇವತ್ತು 294 ಪೌಂಡುಗಳಷ್ಟು ತೂಗುತ್ತಾಳೆ.
    ಮೂಲ ಇಂಗ್ಲೀಷ್: ಸೋಮರ್‍ಸೆಟ್ ಮೌಮ್
    ಕನ್ನಡಕ್ಕೆ: ಉದಯ್ ಇಟಗಿ
    ದಿನಾಂಕ 8-3-2015 ರ “ಉದಯವಾಣಿ”ಯಲ್ಲಿ ಈ ಕಥೆ ಪ್ರಕಟ

      
    ಅವಧಿಯಲ್ಲಿ ಪ್ರಕಟವಾದ ಕಥೆ:
    http://avadhimag.com/2015/03/04/%E0%B2%89%E0%B2%A6%E0%B2%AF%E0%B3%8D-%E0%B2%87%E0%B2%9F%E0%B2%97%E0%B2%BF-%E0%B2%85%E0%B2%A8%E0%B3%81%E0%B2%B5%E0%B2%BE%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%B8%E0%B2%BE%E0%B2%AE/

    ಪ್ರೀತಿ ಈ ದಿನಗಳಲ್ಲಿ ಹೇಗೆ ಸಾಯುತ್ತದೆ?

  • ಗುರುವಾರ, ಡಿಸೆಂಬರ್ 04, 2014
  • ಬಿಸಿಲ ಹನಿ


  • ಪ್ರೀತಿ ಕೂಡಾ ಈ ದಿನಗಳಲ್ಲಿ
    ಕಾಗೆಗಳು ಸತ್ತಷ್ಟೇ ಸುಲಭವಾಗಿ ಸಾಯುತ್ತದೆ.
    ನಾವು ಒಬ್ಬರೊನ್ನೊಬ್ಬರು ನೋಡುವದನ್ನು ಯಾವಾಗ
    ನಿಲ್ಲಿಸುತ್ತೇವೆ ಎಂಬುದು ನಮಗೇ ಗೊತ್ತಿರುವದಿಲ್ಲ.
    ಒಂದು ಕಾಲಕ್ಕೆ ನಿಮ್ಮ ಮೈ-ಮನಸ್ಸುಗಳನ್ನು ಮುದಗೊಳಿಸುತ್ತಿದ್ದ ಆ ಹೆಸರು
    ಈಗ ಕಿರಿಕಿರಿಯೆನಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವದಿಲ್ಲ.
    ಅವಳಿಗಿಟ್ಟ ಮುದ್ದುಮುದ್ದಾದ ಹೆಸರುಗಳೆಲ್ಲಾ
    ಶಬ್ಧಕೋಶದಿಂದಲೇ ಅಳಿಸಿಹೋಗುತ್ತವೆ.   
    ನಾವು ಒಂದೊಮ್ಮೆ ಅವಳಿಗಾಗಿ ಬರೆಯುವದಕ್ಕಸ್ಕೋರ ಸೃಷ್ಟಿಸಿದ
    ಸುಳ್ಳುಸುಳ್ಳು ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ಗಳನ್ನು ಕಂಪ್ಯೂಟರ್ ಸಹ ಮರೆತುಬಿಡುತ್ತದೆ.
    ಟೈಪಿಸಿಟ್ಟ ಮೆಸ್ಸೇಜ್‍ಗಳು ವಿದ್ಯುತ್ ಸಂಪರ್ಕ ಕಡಿತಗೊಂಡು
    ಕಣ್ಮರೆಯಾಗುತ್ತವೆ.
    ದಿನಕ್ಕೆ ಮೂರು ಬಾರಿ ನೋಡುತ್ತಿದ್ದ
    ಅವಳ ಫೇಸ್‍ಬುಕ್ ಪೇಜ್
    ಈಗ ಎಲ್ಲೋ ಮೂಲೆಯಲ್ಲಿ ಮಿನುಗುವ ನಕ್ಷತ್ರ.
    ಒಂದೊಮ್ಮೆ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸಿದ ಅವಳ ದನಿ
    ಈಗ ಗಾಳಿಯಲ್ಲಿ ಎಲ್ಲಿಂದಲೋ ತೇಲಿಬರುವ ಹಾಡು.
    ಅವಳ ವಾಸನೆ ನೀವು ಬಾಲ್ಯದಲ್ಲಿ
    ಬೆಟ್ಟಗುಡ್ದಗಳ ಸಾಲಿನಲ್ಲಿ ಓಡಾಡುವಾಗ
    ತಟ್ಟನೆ ಪ್ರತಿಫಲಿಸಿದ ಒಂದು ಹೆಸರಿರದ ಹೂವು.
    ಅವಳ ಸ್ಪರ್ಶ ದಾರಿ ಪಕ್ಕದ ಗಿಡವೊಂದು
    ನಿಮ್ಮ ಅಂಗಿಗೆ ತಗುಲಿದ ಹಾಗೆ.
    ಈಗ ಅವಳ ಹೆಸರು ಮಳೆನೀರಲ್ಲಿ ಕೊಚ್ಚಿ
    ಸಾಗರದಲ್ಲಿ ಲೀನವಾಗಿ,
    ನಿಶ್ಚಿತ ಉನ್ಮತ್ತ ಮಧ್ಯಾಹ್ನಗಳ ಬಿಸಿಲಿನಲ್ಲಿ,
    ಅಲೆಗಳ ಅಂಚಿನಲ್ಲಿ,
    ಕತ್ತಿಯ ಅಲಗಿನಂತೆ ಹೊಳೆಯುತ್ತಿದೆ.

    ಮೂಲ ಮಲಯಾಳಂ: ಕೆ. ಸಚ್ಚಿದಾನಂದ
    ಇಂಗ್ಲೀಷಿಗೆ: ಕೆ. ಸಚ್ಚಿದಾನಂದ
    ಕನ್ನಡಕ್ಕೆ: ಉದಯ್ ಇಟಗಿ