Demo image Demo image Demo image Demo image Demo image Demo image Demo image Demo image

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೨

  • ಶನಿವಾರ, ಏಪ್ರಿಲ್ 18, 2009
  • ಬಿಸಿಲ ಹನಿ
  • ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪುಸ್ತಕಗಳನ್ನು ಓದೋದು ಯಾವಾಗ?” ಎಂದು ಬೈಸಿಕೊಂಡಿದ್ದಿದೆ. ಹಾಗೆ ನೋಡಿದರೆ ನಾನು ಮೊಟ್ಟ ಮೊದಲಿಗೆ ಬರೆದಿದ್ದು ತೀರ ಆಕಸ್ಮಿಕವಾಗಿ. ಅಲ್ಲಿ ಯಾವುದೇ ಪೂರ್ವಯೋಜನೆಗಳಾಗಲಿ, ಸಿದ್ಧತೆಗಳಾಗಲಿ ಇರಲಿಲ್ಲ. ನನಗಿನ್ನೂ ಚನ್ನಾಗಿ ನೆನಪಿದೆ. ನಾನು ಮೊಟ್ಟಮೊದಲಿಗೆ ಬರೆದಿದ್ದು “ಮಳೆ” ಎನ್ನುವ ಕವನವನ್ನು. ಅದು ನಾನು S.S.L.C ಓದುತ್ತಿರಬೇಕಾದರೆ ಬರೆದಿದ್ದು. ಮಳೆಗಾಲದ ಒಂದು ದಿನ ಯಾವುದೋ leisure period ಇತ್ತು. ಕ್ಲಾಸ್ ರೂಮಿನಲ್ಲಿ ಕುಳಿತಂತೆ ಹೊರಗೆ ಮಳೆ ಹುಯ್ಯತೊಡಗಿತು. ಮೆಲ್ಲಗೆ ಮಳೆಮಣ್ಣಿನ ವಾಸನೆ ಮೂಗಿಗೆ ಅಡರಲಾರಂಭಿಸಿತು. ತಕ್ಷಣ ಅದೇನನ್ನಿಸಿತೋ ಗೊತ್ತಿಲ್ಲ ನೋಟ್ ಪುಸ್ತಕದ ಕೊನೆಯಲ್ಲಿ “ಹುಯ್ಯಿತು ಮಳೆ/ತೊಳೆಯಿತು ಕೊಳೆ” ಎಂದೇನೋ ಬಾಲಿಶವಾಗಿ ಬರೆದಿಟ್ಟೆ. ಆಮೇಲೆ ಅದನ್ನು ಮರೆತೂಬಿಟ್ಟೆ! ನಂತರ ಅದೆಲ್ಲಿ ಕಳೆದುಹೋಯಿತೋ ಗೊತ್ತಿಲ್ಲ. ಪುನಃ ಎರಡು ತಿಂಗಳು ಕಳೆದ ಮೇಲೆ ನಾನು ಬರೆದಿದ್ದನ್ನೇ ಜ್ಞಾಪಿಸಿಕೊಂಡು ಮತ್ತೆ ಅದೇ ಕವನವನ್ನು ಬರೆದೆ. ಈ ಸಾರಿ ಮುಂಚೆಗಿಂತ ಪರ್ವಾಗಿಲ್ಲ ಎನ್ನುವಷ್ಟರಮಟ್ಟಿಗೆ ಬರೆದಿದ್ದೇನೆಂದು ಅನಿಸುತಿತ್ತು. ಆದರೆ ಬಾಲಿಶತನ ಇನ್ನೂ ಮಾಯವಾಗಿರಲಿಲ್ಲ. ನಂತರ “ಹೊಸವರ್ಷ” ಎನ್ನುವ ಕವನವನ್ನು ಹಾಗು ಒಂದೆರಡು ಚುಟುಕುಗಳನ್ನು ಬರೆದೆನಂದು ಕಾಣುತ್ತದೆ. ಬರೆದಿದ್ದನ್ನು ಯಾಕೆ ಸಂಗ್ರಹಿಸಿಡಬಾರದೆಂದೆನಿಸಿ ನಾನು ಬರೆದ ಕವನಗಳನ್ನು ಒಂದೆಡೆ ಸಂಗ್ರಹಿಸಡತೊಡಗಿದೆ. ಆಮೇಲೆ ಪರೀಕ್ಷೆ ಅದು ಇದೂಂತಾ ಆಗಾಗ ಏನನ್ನೋ ಗೀಚಿಡುವದು ಕೂಡ ನಿಂತುಹೋಯಿತು. ನಮ್ಮ ಓದಿನ ಅವಧಿ ಮುಗಿಯುತ್ತಿದ್ದಂತೆ ನಾವೆಲ್ಲಾ ಸಹಪಾಠಿಗಳಿಂದ “ಆಟೋಗ್ರಾಫ್” ತೆಗೆದುಕೊಳ್ಳುವದು ಪರಿಪಾಠವಷ್ಟೆ? ಹೀಗಿರಬೇಕಾದರೆ ನನ್ನ ಸಹಪಾಠಿಯೊಬ್ಬಳು ಆಟೋಗ್ರಾಫ್ ಕೊಟ್ಟಳು. ಅದರಲ್ಲಿ “What do you want to become in future?” ಎನ್ನುವ ಕಾಲಂ ಇತ್ತು. ಎಲ್ಲರೂ ಡಾಕ್ಟರ್, ಇಂಜಿನೀಯರ್ ಅಂತ ಏನೇನೋ ಬರೆದಿದ್ದರೆ ನಾನು ಮಾತ್ರ ನನಗೆ ಅರಿವಿಲ್ಲದಂತೆ “writer” ಆಗುತ್ತೇನೆ ಎಂದು ಬರೆದುಕೊಟ್ಟಿದ್ದೆ. ಇದನ್ನು ನಾನು ಅಳೆದು ತೂಗಿ ಸಾಕಷ್ಟು ಯೋಚಿಸಿ ಬರೆದದ್ದಲ್ಲ. ಆಗ ತಾನೆ ಏನೇನೋ ಬರೆಯಲು ಆರಂಭಿಸಿದ ಹುಮ್ಮುಸ್ಸಿನಲ್ಲಿ ಬರೆದು ಕೊಟ್ಟಿದ್ದು.

    ನಾನು ಮುಂದೆ P.U.C. ವ್ಯಾಸಂಗಕ್ಕಾಗಿ ಧಾರವಾಡದ ಕಿಟ್ಟೆಲ್ ಸಾಯಿನ್ಸ್ ಕಾಲೇಜನ್ನು ಸೇರಿದೆ. ಅಲ್ಲಿ ನಮ್ಮದೇ ಕಾಲೇಜಿನ ಆರ್ಟ್ಸ್ ವಿಭಾಗದಲ್ಲಿ ದ.ರಾ.ಬೇಂದ್ರೆಯವರ ಮಗ ವಾಮನ ಬೇಂದ್ರೆಯವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಶಿಫಾರಸ್ಸಿನಡಿ ಪ್ರತಿವಾರವೂ ಒಬ್ಬೊಬ್ಬ ವಿದ್ಯಾರ್ಥಿಯ ಕವನವು ನೋಟಿಸ್ ಬೋರ್ಡಿನ ಮೇಲೆ ಕಂಗೊಳಿಸುತ್ತಿತ್ತು. ಇದನ್ನು ನೋಡಿ ನಾನೂ ಏಕೆ ಬರೆಯಬಾರದು ಎನ್ನುವ ತುಡಿತ ಮತ್ತೆ ತೀವ್ರವಾಯಿತು. ಆದರೆ ಹಾಗೆ ಬರೆದು ನೋಟಿಸ್ ಬೋರ್ಡಿನ ಮೇಲೆ ಹಾಕುವ ಅವಕಾಶ ಆರ್ಟ್ಸ್ ವಿದ್ಯಾರ್ಥಿಗಳಿಗೆ ಮಾತ್ರ ಇದ್ದುದರಿಂದ ನನ್ನ ಈ ತುಡಿತ ತಣ್ಣಗಾಯಿತು. ಇದನ್ನು ಬಿಟ್ಟರೆ ಕಾಲೇಜು ಮ್ಯಾಗಜೀನ್ಗೆ ಬರೆಯುವ ಅವಕಾಶವಿತ್ತಾದರೂ ನಾನು ಬರೆಯುವ ಕವನಗಳು ಗುಣಮಟ್ಟದಲ್ಲಿ ಹೇಳಿಕೊಳ್ಳುವಂಥ ವಾಗಿರಲಿಲ್ಲವಾದ್ದರಿಂದ ಬಹುಶಃ ಪ್ರಕಟವಾಗಲಾರವು ಎಂದು ನನ್ನಷ್ಟಕ್ಕೆ ನಾನೇ ಕಲ್ಪಿಸಿಕೊಂಡು ಅವುಗಳನ್ನು ಕಳಿಸಲು ಹೋಗುತ್ತಿರಲಿಲ್ಲ. ಈ ಮಧ್ಯ ನಾನು ಬರೆಯುವದು ಅಷ್ಟು ಚನ್ನಾಗಿಲ್ಲ ಹಾಗು ಬರವಣಿಗೆ ನನಗೆ ಒಗ್ಗದು ಎಂದುಕೊಂಡು ಬರೆಯುವದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನಾನು ವಿಜ್ಞಾನವನ್ನು ಬಲವಂತವಾಗಿ ತೆಗೆದುಕೊಂಡಿದ್ದರಿಂದ ಅದರಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಹೀಗಾಗಿ ಕ್ಲಾಸುಗಳನ್ನು ತಪ್ಪಿಸಿ ಧಾರವಾಡದ ವಿದ್ಯಾವರ್ಧಕ ಸಂಘದ ವಾಚನಾಲಯದಲ್ಲಿ ಕತೆ ಕಾದಂಬರಿಗಳನ್ನು ಓದತೊಡಗಿದೆ. ಕಾವ್ಯವೆಂದರೆ ಅಷ್ಟಕ್ಕಷ್ಟೆ. ಆದರೆ ಭಾವಗೀತೆಗಳನ್ನು ಪ್ರೀತಿಯಿಂದ ಕೇಳುತ್ತಿದ್ದೆ. ಮೊದಲಿನಿಂದಲೂ ನಮ್ಮ ಪಠ್ಯಪುಸ್ತಕದಲ್ಲಿನ ಕವನಗಳನ್ನು ಬಿಟ್ಟರೆ ನಾನು ಯಾವತ್ತೂ ಬೇರೆ ಕವನಗಳನ್ನು ಓದಿದ್ದಿಲ್ಲ. ಅವು ನಿಜಕ್ಕೂ ನನ್ನ ಗ್ರಹಿಕೆಗೆ ನಿಲುಕುತ್ತಿರಲಿಲ್ಲವೋ ಅಥವಾ ಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ನನ್ನ ಬುದ್ಧಿಮಟ್ಟ ಬೆಳೆದಿರಲಿಲ್ಲವೋ ನನಗೆ ಗೊತ್ತಿಲ್ಲ. ಅಚ್ಚರಿಯೆಂದರೆ ನನ್ನ ಮೊದಲ ಬರವಣಿಗೆ ಶುರುವಾಗಿದ್ದೇ ಕವನ ಬರೆಯುವದರ ಮೂಲಕ ಹಾಗೂ ನನ್ನ ಮುಂಚಿನ ಬರವಣಿಗೆ ಬರಿ ಕವನ ಬರೆಯುವದಕ್ಕಷ್ಟೆ ಸೀಮಿತವಾಗಿತ್ತು. ಕೆಲವರು ಹೇಳುತ್ತಾರೆ-ಕವನ ಬರೆಯುವದಕ್ಕೆ ಸಾಕಷ್ಟು ಕವಿಗಳನ್ನು ಓದಿಕೊಂಡಿರಬೇಕು, ಅಧ್ಯಯನಶೀಲರಾಗಿರಬೇಕು ಹಾಗೆ ಹೀಗೆ ಎಂದು. ಆದರೆ ನಾನೂ ಇದ್ಯಾವುದನ್ನು ಒಪ್ಪುವದಿಲ್ಲ. ಏಕೆಂದರೆ ನಾನು ಬಿ.ಎ ಹಾಗೂ ಎಮ್.ಎ ತರಗತಿಗಳಲ್ಲಿ ಇಂಗ್ಲೀಷ ಕಾವ್ಯವನ್ನು ಶಿಸ್ತುಬದ್ಧವಾಗಿ ಅಭ್ಯಸಿಸುವದು ಅನಿವಾರ್ಯವಾಗಿದ್ದರಿಂದ ಅದನ್ನು ಆಳವಾಗಿ ಅಧ್ಯಯನ ಮಾಡಿದಷ್ಟು ಯಾವತ್ತೂ ಕನ್ನಡ ಕಾವ್ಯವನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡಲೇ ಇಲ್ಲ. ಆದರೂ ಕಾವ್ಯದಿಂದಲೇ ನನ್ನ ಬರವಣಿಗೆ ಶುರುವಾಯಿತೆಂದರೆ ನನಗೆ ಈಗಲೂ ನಂಬಲಿಕ್ಕೆ ಆಗುವದಿಲ್ಲ! ಹೀಗಾಗಿ ಕಾವ್ಯವೊಂದನ್ನೇ ಅಲ್ಲ ಏನೇ ಬರೆಯಲು ಜೀವನಾನುಭವ ಹಾಗು ಭಾಷೆಯ ಮೇಲೆ ಹಿಡಿತವಿದ್ದರೆ ಸಾಕು, ಅದ್ಭುತವಾದದ್ದು ತಾನೇ ತಾನಾಗಿ ಹರಿದು ಬರುತ್ತದೆ.

    ನನಗೆ ವಿಜ್ಞಾನದಲ್ಲಿ ಆಸಕ್ತಿಯಿಲ್ಲದ ಪರಿಣಾಮವಾಗಿ P.U.C.ಯಲ್ಲಿ ಫೇಲಾಗಿ ಮುಂದಿನ ಎರಡು ವರ್ಷ ನನ್ನ ಬದುಕು ದುಸ್ತರವಾಯಿತು. ಆಗ ಮತ್ತೆ ಬರೆಯತೊಡಗಿದೆ. ಏಕೆ ಬರೆಯತೊಡಗಿದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಈ ಸಲ ಸ್ವಲ್ಪ ಗಂಭೀರವಾಗಿಯೇ ಬರೆಯತೊಡಗಿದೆ. ಆಗ ಮೊದಲಿಗಿಂತ ನನ್ನ ಬರವಣಿಗೆ ಸುಧಾರಿಸಿದೆ ಎಂದು ನನಗೇ ಅನಿಸಿದ್ದರಿಂದ ಆತ್ಮವಿಶ್ವಾಸದಿಂದ ಬರೆಯುತ್ತಾ ಹೋದೆ. ನಾನು P.U.C.ಯಲ್ಲಿರಬೇಕಾದರೆ ನಡೆದ ಬಾಬ್ರಿ ಮಸಿದಿ ಗಲಾಟೆಯ ಬಿಸಿ ಇನ್ನೂ ಆಗಾಗ ಅಲ್ಲಲ್ಲಿ ತಟ್ಟುತ್ತಿತ್ತು. ಇದನ್ನೇ ವಸ್ತುವನ್ನಾಗಿಟ್ಟುಕೊಂಡು “ಅಜ್ಜ ಮತ್ತು ನಾವು” ಎನ್ನುವ ಕವನ ಬರೆದೆ. ೧೯೯೩ರಲ್ಲಿ ಲಾತೂರ್ ಮತ್ತು ಕಿಲಾರಿ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿ ಅಪಾರ ಸಾವು ನೋವು ಉಂಟಾಗಿ ಒಂದು ವರ್ಷ ಕಳೆದ ಮೇಲೆ ಅದರ ನೆನಪಿಗೋಸ್ಕರ “ಲಾತೂರ್ ಮತ್ತು ಕಿಲಾರಿ ಗ್ರಾಮಗಳ ಭೂಕಂಪ ದುರಂತ-ಒಂದು ನೆನಪು” ಎನ್ನುವ ಕವನವನ್ನು ಬರೆದೆ. ಇದಾದ ಮೇಲೆ “ಕಾಲೇಜು ಹುಡುಗರು”, “ಈ ಹುಡುಗಿಯರಿಗೆ” ಎನ್ನುವ ಕವನಗಳನ್ನು ಬರೆದೆ. ಈ ಮಧ್ಯ ಹದಿಹರೆಯಕ್ಕೆ ಕಾಲಿಟ್ಟ ಮೇಲೂ ಪ್ರೀತಿಸಲು ಹುಡುಗಿಯೊಂದು ಸಿಗಲಿಲ್ಲ ಎನ್ನುವ ಹಪಹಪಿಕೆಯೊಂದಿಗೆ “ಹುಡುಗಿ ನೀ ಬೇಗ ಬಾ” ಎಂದು ವಿನಂತಿಸಿಕೊಳ್ಳುತ್ತಾ ಕೆಳಗಿನ ಪದ್ಯವನ್ನು ಬರೆದೆ.
    “ಹುಡುಗಿ ನೀ ಬೇಗ ಬಾ
    ಖಾಲಿ ಖಾಲಿಯಿರುವ
    ನನ್ನ ಹೃದಯ ಖೋಲಿಯ ಕೀಲಿ
    ತೆಗೆದು ನೀ ಭದ್ರವಾಗಿ ತಳವೂರಲು...........”
    ಒಂದು ಮಧ್ಯಮರ್ಗದ ಗೃಹಸ್ಥನೋಬ್ಬನ ಆರ್ಥಿಕ ಸಂಕಷ್ಟಗಳನ್ನು ನೋಡಿ ಬೇಸತ್ತು ಹೋಗಿ ಇದನ್ನು ವಿವರಿಸಲೆಂದೇ “ಕಿರುಗುಡುವ ಮಂಚ” ಎನ್ನುವ ಕವನವನ್ನು ಬರೆದೆ. ಇದು ಆಳದಲ್ಲಿ ಮಧ್ಯಮರ್ಗದ ಗ್ರಹಸ್ಥನೊಬ್ಬನ ಆರ್ಥಿಕ ಸಂಕಷ್ಟಗಳನ್ನು ಒತ್ತಿ ವಿವರಿಸಿದರೆ ಮೇಲುನೋಟಕ್ಕೆ ಇದರಲ್ಲಿ ಲೈಂಗಿಕತೆಯ ಭಾವ ದಟ್ಟವಾಗಿದೆ ಎನಿಸುತ್ತಿತ್ತು. ಅದನ್ನು ಓದಿದ ಕೆಲವರು ನಾನೇನೋ ಮಹಾಪರಾಧ ಮಾಡಿರುವೆನೇನೋ ಎನ್ನುವ ತರ ನೋಡಿದ್ದರು. ಕೆಲವರು ನನಗಾಗ ಹದಿನೆಂಟು ದಾಟಿದ್ದರೂ ಈಗಲೇ ಬರೆಯಬಾರದಾಗಿತ್ತು ಎಂದು ಉಪದೇಶಿಸಿದ್ದರು. ಇನ್ನು ನನ್ನ ಹೈಸ್ಕೂಲು ಸ್ನೇಹಿತರು “ಏನು ಅನುಭವದಿಂದ ಬರೆದಿದ್ದಾ?” ಎಂದು ತುಂಟತನದ ಮಾತುಗಳನ್ನಾಡಿದ್ದರು. ನಾನು ನಕ್ಕು “ಅನುಭವಾನೂ ಇಲ್ಲ, ಏನೂ ಇಲ್ಲ ಬರಿ ಕಲ್ಪನೆಯಷ್ಟೆ” ಎಂದು ಹೇಳಿದ್ದೆ. ಯಾಕೆ ಜನ ಒಳಾರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದೆ ಮೇಲುನೋಟಕ್ಕೆ ಕಂಡಿದ್ದನ್ನು ಮಾತ್ರ ಹೈಲೈಟ್ ಮಾಡುತ್ತಾರೆ? ಲೈಂಗಿಕತೆಯಂಥ ವಿಷಯವನ್ನು ಹದಿಹರೆಯದ ಹುಡುಗನೊಬ್ಬ ಬರಿ ಕಲ್ಪಿಸಿಕೊಂಡು ಬರೆದರೆ ಏನು ತಪ್ಪು? ಜನ ಏಕೆ ಅಪಾರ್ಥ ಮಾಡಿಕೊಳ್ಳಬೇಕು? ಎಂದು ನನ್ನಷ್ಟಕ್ಕೆ ನಾನೇ ಕೇಳಿಕೊಳ್ಳುತ್ತಿದ್ದೆ. ಆದರೆ ನಾನು ಬೆಳೆಯುತ್ತಾ ಹೋದಂತೆ ಭಾರತದಂಥ ದೇಶದಲ್ಲಿ ಲೈಂಗಿಕತೆಯಂಥ ವಿಷಯವನ್ನು ಯಾವಾಗಲೂ ಗುಟ್ಟಾಗಿ ಮಾತನಾಡಿ ಮುಗಿಸುವದರಿಂದ ಈ ತರದ ಪ್ರತಿಕ್ರಿಯೆಗಳು ಬರುವದು ಸರ್ವೇಸಾಮಾನ್ಯ ಎಂದು ಕಂಡುಕೊಂಡಿದ್ದೇನೆ. ಹೀಗೆ ಬರೆದಿದ್ದನ್ನು ಆಗೊಮ್ಮೆ ಈಗೊಮ್ಮೆ ನಾನೇ ಓದಿ ಖುಶಿ ಪಡುತ್ತಿದ್ದೆನೆ ಹೊರತು ಯಾವ ಪತ್ರಿಕೆಗೂ ಕಳಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಬಾಲಿಶ ಪದ್ಯಗಳನ್ನು ಯಾರು ತಾನೆ ಪ್ರಕಟಿಸಿಯಾರು?

    ಮುಂದೆ ನಾನು ಬಿ.ಎ ಓದಲು ಮಂಡ್ಯಕ್ಕೆ ಬಂದಾಗ ನನ್ನಲ್ಲಿ ಮೊಳಕೆಯೊಡೆದಿದ್ದ ಬರಹಗಾರನನ್ನು ಬೆಳೆಯುವಂತೆ ಮಾಡಿದ್ದು ನಮ್ಮ ಕನ್ನಡ ಪ್ರೊಫೆಸರಾದ ಮರಿಗೌಡರು. ಅವರ ಉತ್ತೇಜನ, ಪ್ರೋತ್ಸಾಹದಿಂದ ನಾನು ಮತ್ತೆ ಬರೆಯತೊಡಗಿದೆ. ಅವರ ತರಗತಿಯ ಕೊನೆಯಲ್ಲಿ ನಾನು ಬರೆದ ಕವನಗಳನ್ನು ಓದುವಂತೆ ಹೇಳುತ್ತಿದ್ದರು. ಆಗೆಲ್ಲಾ ಖುಶಿಯಾಗಿ ನಾನು ಬರೆದ ಕವನಗಳನ್ನು ಹೆಮ್ಮೆಯಿಂದ ಓದಿ ಹೇಳುತ್ತಿದ್ದೆ. ಹೀಗಾಗಿ ನಾನು ಕಾಲೇಜಿನಲ್ಲಿ ಬಹಳ ಬೇಗನೆ ತುಂಬಾ ಪೊಪ್ಯುಲರಾದೆ. ನಾನು ಕವನ ಬರೆಯುವ ವಿಷಯ ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಹೊಳ್ಳರವರ ಕಿವಿಗೂ ಬಿತ್ತು. ಈ ಕಾರಣಕ್ಕಾಗಿ ಅವರು ನಮ್ಮ ಕಾಲೇಜಿನಲ್ಲಿ ಆ ವರ್ಷವಷ್ಟೆ ಆರಂಭಿಸಿದ literary clubಗೆ ನನ್ನನ್ನು joint secretaryಯನ್ನಾಗಿ ಮಾಡಿದರು. ಹೀಗೆ ಕ್ಲಾಸ್ ರೂಮಿನಲ್ಲಿ ಕವನಗಳನ್ನು ಓದುತ್ತಿರಬೇಕಾದರೆ ಒಂದು ಸಾರಿ “ಒಂದು ಹುಡುಗಿಯ ಸ್ವಗತ” ಎನ್ನುವ ಕವನವನ್ನು ಓದಿದೆ. ಅದನ್ನು ಯಾವಾಗ ಬರೆದಿದ್ದೆನೋ ಗೊತ್ತಿಲ್ಲ! ಆದರದನ್ನು ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲದಕ್ಕೂ ಹೆಣ್ಣನ್ನು ಹೇಗೆ ಶೋಷಿಸಲಾಗುತ್ತೆ ಹಾಗೂ ಹೇಗೆ ಅವಳನ್ನು ಅಪವಾದಕ್ಕೆ ಗುರಿಮಾಡಲಾಗುತ್ತೆ ಎನ್ನುವ ಹಿನ್ನೆಲೆಯಲ್ಲಿ ಬರೆದಿದ್ದೆ. ಇದನ್ನು ಒಪ್ಪಿಕೊಳ್ಳುತ್ತಲೇ ಈ ವ್ಯವಸ್ಥೆಯ ವಿರುದ್ಧ ಹುಡುಗಿಯೋರ್ವಳು ತನ್ನದೆ ಮಾತಿನಲ್ಲಿ ಹೇಗೆ ತಣ್ಣನೆಯ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾಳೆ ಎನ್ನುವದನ್ನು ಆ ಕವನದಲ್ಲಿ ಹರಿತವಾದ ಶಬ್ದಗಳ ಮೂಲಕ ವಿವರಿಸಿದ್ದೆ. ಇದನ್ನು ಕೇಳಿದ ಮೇಲೆ ಹುಡುಗಿಯರಂತೂ ನನ್ನನ್ನು ಬಹಳಷ್ಟು ಇಷ್ಟಪಡತೊಡಗಿದರು. ಇವರ ಮೂಲಕ ನನ್ನ ಶೀನಿಯರ್ ಹುಡುಗಿಯರಿಗೂ ಈ ವಿಷಯ ತಲುಪಿ ಅವರೆಲ್ಲ ನನ್ನ ಸ್ನೇಹಿತರಾದರು. ನನ್ನ ಪುರುಷ ಸಹಪಾಠಿಗಳೆಲ್ಲ “femnist” ಎಂದು ಕಟುಕಿಯಾಡಿದರು. ಒಂದೊಂದು ಸಾರಿ ಹುಡುಗಿಯರು ಬೇಕಂತಲೆ “ಏನು, ನಿಮ್ಮ ಮುಂದಿನ ಕವನ ಮತ್ತೆ ಹುಡುಗಿಯರ ಮೇಲೇನಾ?” ಎಂದು ಕೇಳಿ ತುಂಟನಗೆ ಬೀರುತ್ತಿದ್ದರು. ಆಗೆಲ್ಲಾ ಯೌವನದ ಸಹಜ ಪುಳಕಗಳೆದ್ದು ನನ್ನಷ್ಟಕ್ಕೆ ನಾನೇ ಪ್ರೇಮಲೋಕದಲ್ಲಿ ತೇಲಾಡಿದ್ದಿದೆ.
    -ಉದಯ ಇಟಗಿ
    ಚಿತ್ರ ಕೃಪೆ: www.flickr.com

    12 ಕಾಮೆಂಟ್‌(ಗಳು):

    Ittigecement ಹೇಳಿದರು...

    ಉದಯ್....

    ನಿಮ್ಮ ಸಿಂಹಾವಲೋಕನ ಚೆನ್ನಾಗಿದೆ..
    ಓದುತ್ತ ನಮ್ಮ ನೆನಪಿನ ಪುಟಗಳು ಬಿಚ್ಚಿಕೊಳ್ಳುವಂತೆ ಮಾಡಿಬಿಡುತ್ತೀರಿ...

    ನಿಮ್ಮ ಬರವಣಿಗೆ ಇಷ್ಟವಾಯಿತು...
    ಇನ್ನಷ್ಟು ಬರೆಯಿರಿ...

    ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

    ಸರ್,
    ನಿಮ್ಮ ನೆನಪಿನ ಜಾತ್ರೆ ತುಂಬ ಇಂಟರೆಸ್ಟಿಂಗಾಘಿದೆ. ಈ ಜಾತ್ರೆಯಲ್ಲಿ ಬತ್ತಾಸಿದೆ, ಮಂಡಕ್ಕಿಯಿದೆ, ಬಣ್ಣದ ಪುಗ್ಗಿಯಿದೆ, ಪೀಪಿಯಿದೆ, ದೇವರ ರಥವಿದೆ....ಏನೆಲ್ಲಾ ಇದೆ.
    ಎಲ್ಲವನ್ನೂ(ಹಳೆಯ ಕವನ ಮತ್ತು ಸಂಧರ್ಭ) ನೆನಪಿಟ್ಟು ಇದ್ದದ್ದನ್ನು ಇದ್ದಹಾಗೇ ಹೇಳಿರುವುದು ಇನ್ನೂ ಇಷ್ಟವಾಯಿತು.

    shivu.k ಹೇಳಿದರು...

    ಉದಯ್ ಸರ್,

    ಇದು ನಿಜಕ್ಕೂ ನಿಮ್ಮ ಬರವಣಿಗೆಯ ನೆನಪಿನ ಮೆರವಣಿಗೆ..

    ಓದುತ್ತಿದ್ದಂತೆ ಹಿತವಾದ ಅನುಭವ...ನಿಮ್ಮ ಪ್ರಾರಂಭದ ಕವನದಿಂದ..ಕಾಲೇಜು ದಿನಗಳ ಬರವಣಿಗೆಯ ಅನುಭವ ಅದರ ಲಾಭ[ಪ್ರೇಮಲೋಕಕ್ಕೆ ಬಿದ್ದದ್ದು...ಅಹ ಅಹ..ಅಹ.. ಹುಡುಗಿಯರ ಗೆಳೆತನ]ವೆಲ್ಲಾ ಬಾಯಲ್ಲಿ ಹಾಕಿಕೊಂಡ ಸಕ್ಕರೆ ಹಚ್ಚಿನ ಹಾಗೆ...ಸಿಹಿ ಅನುಭವ ನೀಡುತ್ತಾ ಬಾಯಲ್ಲೇ ಕರಗುತ್ತಲ್ಲ...ಹಾಗೆ...

    ಧನ್ಯವಾದಗಳು...

    Unknown ಹೇಳಿದರು...

    ಉದಯ್ ನಿಮ್ಮ ನೆನಪಿನ ಮೆರವಣಿಗೆ ಚೆನ್ನಾಗಿ, ಓದಿಸಿಕೊಳ್ಳುವಂತೆ ಬರುತ್ತಿದೆ. ಒಳ್ಳೆಯ ಆರಂಭ. ಧಾರವಾಡದಿಂದ ಮಂಡ್ಯದವರೆಗೂ ಬಂದು ಕಾಲೇಜಿಗೆ ಸೇರಿರುವ ಸಂದರ್ಭ ಎಂತಹದ್ದು ಇರಬಹುದು ಎಂಬ ಸಣ್ಣ ಪ್ರಶ್ನೆ ಓದುವಾಗ ಕಾಣಿಸಿತು.

    ಸಾಗರದಾಚೆಯ ಇಂಚರ ಹೇಳಿದರು...

    ಉದಯ್ ಸರ್,
    ನಿಮ್ಮ ಕಥೆ ಚೆನ್ನಾಗಿದೆ, ಹೀಗೆ ಬರೆಯುತ್ತಿರಿ

    ಬಿಸಿಲ ಹನಿ ಹೇಳಿದರು...

    ಪ್ರಕಾಶ್ ಅವರೆ,
    ಬಹುಶಃ ಎಲ್ಲ ಬರಹಗಾರನ ಆರಂಭದ ದಿನಗಳು ಮೆಲುಕು ಹಾಕುವಂತೆ ಇರುತ್ತವೆ. ಕೆಲವರು ಹಂಚಿಕೊಳ್ಳುವದಿಲ್ಲ. ಕೆಲವರು ಹಂಚಿಕೊಳ್ಳುತ್ತಾರೆ. ನಾನು ಎರಡನೆ ಗುಂಪಿಗೆ ಸೇರಿದವ.
    ನನ್ನ ಬರವಣಿಗೆಯನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಮಲ್ಲಿಕಾರ್ಜುನವರೆ,
    ಈ ಜೀವನದ ಜಾತ್ರ್ಯಾಗ ಚಿಂಯಾ ಪಿಂಯಾ ಮಕ್ಕಳ ಅಳವು ಗದ್ದಲವೋ ಗದ್ದಲ! ಇಂಥ ಗದ್ದಲಗಳಿಗೆ ಕಿವಿಗೊಟ್ಟಾಗಲ್ಲವೇ ಬರಹಗಾರನಿಗೆ ಸಾಕಷ್ಟು ಸರಕು ಸಿಗುವದು? ಇಂಥ ಗದ್ದಲಗಳ ನಡುವೆಯಿಂದಲ್ಲವೆ ಆತ ಎದ್ದು ಬರುವದು?
    ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಶಿವು ಅವರೆ,
    ನಾನು ಹುಡುಗಿಯರನ್ನು ಆಕರ್ಷಿಸುವ ಲಾಭಕ್ಕಾಗಿ ಬರೆಯಲಿಲ್ಲ. ಬರೆಯುವಾಗ ನನಗೆ ಆ ಕಲ್ಪನೆಯೂ ಇರಲಿಲ್ಲ. ಆದರೆ ಹುಡುಗಿಯರ ಮೇಲಿನ ಕವನಗಳನ್ನು ಕೇಳಿದ ನಂತರ ಹುಡುಗಿಯರೇ ನನ್ನೆಡೆಗೆ ಆಕರ್ಷಿತರಾದರು. ನಾವು ಹೇಳಿಕೊಳ್ಳಲಾಗದ್ದನ್ನು ನಿಮ್ಮ ಕವನಗಳು ಹೇಳುತ್ತವೆ ಎಂದು ನನ್ನ ಅಭಿನಂದಿಸಿದರು ಕೂಡ.Anyway thanks for your nice comment.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣ ಸರ್,
    ನೆನಪುಗಳ ಮೆರವಣಿಗೆಯೊಂದಿಗೆ ಬಿಚ್ಚಿಕೊಳ್ಳುವ ಮಾತುಗಳು ಎಂದಿಗೂ ಮಧುರ ಮಧುರ ಅಲ್ಲವೆ?
    ಇನ್ನು ನಾನು ಧಾರವಾಡದಿಂದ ಮಂಡ್ಯಕ್ಕೆ ಬಂದಿದ್ದರ ಬಗ್ಗೆ ಕುತೂಹಲ ತೋರಿವಿರಿ. ಅದಕ್ಕೆ ಕಾರಣ ಅಲ್ಲಿ ನನ್ನ ದೊಡ್ಡಪ್ಪನ ಮಗ ವೆಟರ್ನರಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಹತ್ತಿರ ಇದ್ದುಕೊಂಡು ನನ್ನ ಓದು ಮುಂದುವರೆಸಿದೆ. ಇದನ್ನು ನನ್ನ ಆತ್ಮಕಥನದಲ್ಲಿ ಹೇಳಿಕೊಳ್ಳುವೆ. ಅಲ್ಲಿಯವರೆಗೆ ಕಾದು ನೋಡಿ.

    ಬಿಸಿಲ ಹನಿ ಹೇಳಿದರು...

    ಥ್ಯಾಂಕ್ ಯು ಗುರುಮೂರ್ತಿಯವರೆ.

    ಅಂತರ್ವಾಣಿ ಹೇಳಿದರು...

    udaya avare,

    baalyave ellarigu spoorthi annodu nija.

    nimma kavanagaLannu post maaDi.. naavella oda bahudu.

    ಬಿಸಿಲ ಹನಿ ಹೇಳಿದರು...

    ಜಯಶಂಕರವರೆ,
    ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಹೇಳಿದಂತೆ ಪೋಸ್ಟ್ ಮಾದಲು ನೋಡುತ್ತೇನೆ. ಆದರೆ ಅವು ತೀರ ಬಾಲಿಶವಾಗಿವೆ ಎನಿಸುತ್ತದೆ.