Demo image Demo image Demo image Demo image Demo image Demo image Demo image Demo image

ಗೌರಜ್ಜಿಯನ್ನು ನೆನೆಯುತ್ತಾ

  • ಭಾನುವಾರ, ಜನವರಿ 11, 2009
  • ಬಿಸಿಲ ಹನಿ
  • ಅಪ್ಪನ ಬೇಜವಾಬ್ದಾರಿತನ ಮತ್ತು ಸತತ ಬರಗಾಲದ ಪರಿಣಾಮವಾಗಿ ಹೊಲದಿಂದ ಬರುವ ಆದಾಯ ಏನೂ ಸಾಕಾಗದೆ ನಾವು ಮೂರೂ ಜನ ಮಕ್ಕಳು ಬೇರೆ ಬೇರೆಯವರ ಹತ್ತಿರ ಇದ್ದು ಬೆಳೆದವರು. ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ ಅಂದರೆ ಅಪ್ಪನ ಅಣ್ಣ ತಮ್ಮೂರು ಅಳವಂಡಿಗೆ, ತಂಗಿಯನ್ನು ತಾಯಿ ತವರು ಮನೆಯವರು ಸುಲ್ತಾನಪೂರಕ್ಕೆ, ಹಾಗೂ ನನ್ನನ್ನು ದೊಡ್ಡಪ್ಪ ಅಂದರೆ ಅವ್ವನ ಅಕ್ಕನ ಗಂಡ ತಮ್ಮ ಊರು ಕಲಕೋಟಿಗೆ ಕರೆದುಕೊಂಡು ಬಂದರು.

    ಹೀಗೆ ದೊಡ್ಡಪ್ಪ ದೊಡ್ಡಮ್ಮನವರ ತುಂಬು ಆರೈಕೆಯಲ್ಲಿ ಶುರುವಾದ ನನ್ನ ಬಾಲ್ಯದ ಮೇಲೆ ಗಾಢವಾದ ಪರಿಣಾಮ ಬೀರಿದ ವ್ಯಕ್ತಿಯೆಂದರೆ ಗೌರಜ್ಜಿ. ಗೌರಜ್ಜಿಯ ನಿಷ್ಠೆ, ಕಾಳಜಿ, ಬದುಕಿನ ಮೇಲಿದ್ದ ಅಪಾರ ಪ್ರೀತಿ, ಛಲ, ನಿಸ್ವಾರ್ಥ ಸೇವೆ ಇವತ್ತಿಗೂ ನನ್ನ ಆಶ್ಚರ್ಯಚಕಿತಗೊಳಿಸುವದಲ್ಲದೆ ನನ್ನ ಸುಪ್ತ ಪ್ರಜ್ಞೆಯ ಹಿಂದೆ ಈಗಲೂ ಕೆಲಸ ಮಾಡುತ್ತವೆ. ಗೌರಜ್ಜಿಯ ನೆನಪಾದಾಗಲೆಲ್ಲಾ ನಾನು ಇಂಥ ಅಜ್ಜಿಯರು ಮನೆಗೊಬ್ಬರು ಇರಬೇಕು ಅಂದುಕೊಳ್ಳುವದುಂಟು.

    ಹಾಗೆ ನೋಡಿದರೆ ಈ ಗೌರಜ್ಜಿ ನಮ್ಮ ಸಂಬಧಳಿಕಳೇನಲ್ಲ ಆದರೆ ಸಂಬಧಿಕಳಿಗಿಂತ ಹೆಚ್ಚಾಗಿ ಆ ಮನೆಯಲ್ಲಿ ಒಬ್ಬಳಾದದ್ದು. ಉತ್ತರ ಕರ್ನಾಟಕದ ಕಡೆ ಅಜ್ಜಿ ಎನ್ನುವ ಪದ ಅಷ್ಟಾಗಿ ಬಳಕೆಯಲ್ಲಿಲ್ಲ. ಸಾಮಾನ್ಯವಾಗಿ ಮುದುಕಿಯರಿಗೆ ಅಮ್ಮ ಎಂದು ಕರೆಯುವ ವಾಡಿಕೆ. ಆದರೆ ಈಕೆಯನ್ನು ಮಾತ್ರ ಅದ್ಹೇಗೆ ಅಜ್ಜಿ ಎಂದು ಕರೆದರೋ ನನಗೆ ಗೊತ್ತಿಲ್ಲ. ಇಡಿ ಊರಲ್ಲಿ ಅವಳು ಗೌರಜ್ಜಿಯೆಂದೇ ಹೆಸರು ವಾಸಿ. ನನ್ನ ಬಾಲ್ಯಕ್ಕೆ ಏನು ಸಿಗಬೇಕಿತ್ತೋ ಅದನ್ನೆಲ್ಲ ಒದಗಿಸಿಕೊಡುವದರಲ್ಲಿ ಗೌರಜ್ಜಿಯ ಪಾತ್ರ ಹಿರಿದಾದು. ತನ್ನದೆಲ್ಲವನ್ನೂ ಧಾರೆಯೆರೆದ ನನಗೆ ಗೌರಜ್ಜಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾಳೆ. ಅದಕ್ಕೋಸ್ಕರ ಅವಳಿಗೆ ಕೃತಜ್ಞತೆ ಸಲ್ಲಿಸಲೆಂದೇ ಈ ಲೇಖನ ಬರೆಯುತ್ತಿದ್ದೇನೆ.

    ಈಕೆ ಒಬ್ಬ ಬಾಲ ವಿಧವೆ. ಚಿಕ್ಕಂದಿನಲ್ಲಿ ತೊಟ್ಟಿಲಲ್ಲಿರಬೇಕಾದರೆ ಮದುವೆ ಮಾಡಿದ್ದರಂತೆ. ಮುಂದೆ ಪ್ಲೇಗ್ ಬಂದು ಅವಳು ಮೈ ನೆರಯುವ ಮುನ್ನವೇ ಅವಳ ಗಂಡ ತೀರಿ ಹೋಗಿದ್ದರಿಂದ ಜೀವನ ಪರ್ಯಂತ ಬಾಲವಿಧವೆಯಾಗಿ ಉಳಿಯಬೇಕಾಯಿತು. ಕಾಲಾನುಕ್ರಮವಾಗಿ ತನ್ನ ಬೆರಳೆಣಿಕೆಯಷ್ಟೆ ಇರುವ ಬಂಧುಗಳನ್ನು ಕಳೆದುಕೊಂಡು ಒಂಟಿಯಾಗಿ ಕಲಕೋಟಿಯಲ್ಲಿ ವಾಸ್ತವ್ಯ ಹೂಡಿದಳು. ಅವಳಿಗೆ ಹೇಳಿಕೊಳ್ಳುವಂಥ ಬಂಧುಗಳು ಯಾರೂ ಇರಲಿಲ್ಲವಾದರೂ ಸಿದ್ಧಪೂರದಲ್ಲಿ ಅದ್ಯಾರೋ ಒಬ್ಬ ಸಂಬಂಧಿಯಿರುವರೆಂದು ವರ್ಷಕ್ಕೋ ಎರಡುವರ್ಷಕ್ಕೋ ಒಂದು ಸಾರಿ ಆ ಊರಿಗೆ ಹೋಗಿ ಎರಡು ದಿನ ಇದ್ದು ಮತ್ತೆ ವಾಪಾಸಾಗುತ್ತಿದ್ದಳು.

    ಅದ್ಹೇಗೆ ಗೌಡರ (ನಮ್ಮ ದೊಡ್ಡಪ್ಪ ಊರಿಗೆ ಗೌಡರಾದ್ದರಿಂದ ಅವರ ಮನೆಯನ್ನು ಗೌಡರ ಮನೆಯೆಂದು ಕರೆಯುತ್ತಿದ್ದರು) ಮನೆಗೆ ಬಂದು ಸೇರಿದೆ ಎಂದು ಒಮ್ಮೆ ಅವಳನ್ನೇ ನಾನು ಖುದ್ದಾಗಿ ಕೇಳಿದ್ದಾಗ ಹೇಳಿದ್ದೇನೆಂದರೆ ಹಿಂದೆ ನನ್ನ ದೊಡ್ಡಪ್ಪನ ಹಿರಿಯರು ಇವಳ ಮಾವ ಜಾತಿಯಲ್ಲಿ ನಮಗಿಂತ ಉಚ್ಛವಾಗಿದ್ದರಿಂದ ಹಾಗೂ ಊರಲ್ಲಿ ಮಠವನ್ನು ನದೆಸುತ್ತಿದ್ದದರಿಂದ ನಾಲ್ಕೆಕರೆ ಹೊಲವನ್ನು ದಾನವಾಗಿ ಕೊಟ್ಟಿದ್ದಲ್ಲದೆ ಆಗಾಗ್ಗೆ ಆರ್ಥಿಕ ಸಹಾಯ ನೀಡಿದ್ದರಂತೆ. ಹೀಗಾಗಿ ಸಾಯುವ ಕಾಲಕ್ಕೆ ಗೌರಜ್ಜಿಯ ಮಾವ ಅವಳನ್ನು ಕರೆದು ಗೌಡರ ಮನೆಗೆ ನಿಷ್ಠೆಯಾಗಿದ್ದು ಅವರ ಮನೆ ಋಣ ತೀರಿಸೆಂದು ವಚನ ತೆಗೆದುಕೊಂಡಿದ್ದನಂತೆ. ಆ ಪ್ರಕಾರ ಗೌರಜ್ಜಿ ನಡೆದುಕೊಂಡಳು. ಹೀಗಾಗಿ ಗೌಡರ ಮನೆಗೂ ಗೌರಜ್ಜಿಗೂ ಬಿಡಿಸಿಲಾರದ ನಂಟು! ಹಾಗಂತ ಗೌರಜ್ಜಿ ಸಂಪೂರ್ಣವಾಗಿ ಇವರ ಮನೆಯ ಮೇಲೆ ಅವಲಂಬಿತಳಾಗಿರಲಿಲ್ಲ. ಅವಳಿಗೆ ಬೇರೆ ಆಸ್ತಿ ಪಾಸ್ತಿಯಿರಲಿಲ್ಲವಾದರೂ ಇದ್ದ ಮಠವನ್ನು ತಾನು ಹೆಂಗಸು ಎಂಬ ಕಾರಣಕ್ಕೆ ನಡೆಸಲಾಗುವದಿಲ್ಲವೆಂದು ಅದನ್ನು ತನ್ನದೇ ದೂರದ ಸಂಬಂಧಿಯೊಬ್ಬರಿಗೆ ವರ್ಗಾಯಿಸಿಬಿಟ್ಟಳು. ಮಠವನ್ನು ಕೊಟ್ಟ ಮೇಲೆ ಮಠಕ್ಕೆ ಸೇರಿದ್ದ ನಾಲ್ಕೆಕರೆ ಹೊಲವನ್ನು ಕೊಡದೇ ಇರಲಿಕ್ಕಾಗುತ್ತದೆಯೇ? ಅದನ್ನೂ ಕೊಟ್ಟಬಿಟ್ಟಳು. ಇದಲ್ಲದೆ ಅವಳಿಗೆ ತಿಂಗಳಿಗೆ ಸರಕಾರದಿಂದ ೫೦ ರೂಪಾಯಿಯಷ್ಟು ಬಾಲವಿಧವಾ ವೇತನ ಬರುತ್ತಿತ್ತು. ಅಷ್ಟರಲ್ಲಿಯೇ ಜೀವನ ನಡೆಸುತ್ತಿದ್ದಳು. ನಮ್ಮ ಮನೆಯಲ್ಲಿ ಹೈನು ಚೆನ್ನಾಗಿದ್ದರಿಂದ ಹಾಲು, ಮೊಸರು, ಮಜ್ಜಿಗೆಯನ್ನು ದಿನಾಲೂ ಇಲ್ಲಿಂದಾನೆ ತೆಗೆದುಕೊಂಡು ಹೋಗುತ್ತಿದ್ದಳು.

    ನಮ್ಮ ದೊಡ್ಡಪ್ಪ "ನೀನೊಬ್ಬಾಕಿ ನನಗೇನೂ ಭಾರ ಆಗೋದಿಲ್ಲ, ಇಲ್ಲೆ ನಮ್ಮ ಮನ್ಯಾಗ ಬಂದು ಇದ್ದುಬಿಡು" ಅಂತ ಹೇಳಿದರು ಕೇಳದೇ ಮಠದಲ್ಲಿಯೇ ಇರಲಿಕ್ಕೆ ಅಂತ ಒಂದು ಸಣ್ಣ ಗೂಡು ಮಾಡಿಕೊಂಡಿದ್ದಳು. ಅವಳ ಮನೆಯ ಬಾಗಿಲು ಬಹಳ ಚಿಕ್ಕದಾಗಿದ್ದರಿಂದ ಯಾವಾಗಲೂ ಬಗ್ಗಿಕೊಂಡೇ ಒಳಗೆ ಹೋಗಬೇಕಾಗುತ್ತಿತ್ತು. ಹೀಗಾಗಿ ನಾವೆಲ್ಲಾ ಅದನ್ನು ಗುಬ್ಬಿ ಮನೆಯೆಂದು ಕರೆಯುತ್ತಿದ್ದೆವು. ಇದು ಅವಳ ಅಡಿಗೆ ಮನೆ. ಅಡಿಗೆ ಮನೆಗೆ ಹೊಂದಿಕೊಂಡಂತೆ ಹೊರಗಡೆ ಒಂದು ಕಟ್ಟೆಯಿತ್ತು. ಬೇಸಿಗೆಯಲ್ಲಿ ಈ ಕಟ್ಟೆಯ ಮೇಲೆ, ಚಳಿಗಾಲದಲ್ಲಿ ತನ್ನ ಮನೆಯ ಒಳಗೆ ಮಲಗುತ್ತಿದ್ದಳು. ಈ ಮನೆಗೆ ಬಚ್ಚಲು ಇರಲಿಲ್ಲವಾದ್ದರಿಂದ ದಿನಾಲೂ ಸ್ನಾನಕ್ಕಾಗಿ ಊರಲ್ಲಿ ಸದಾಕಾಲ ಹರಿಯುವ ವರದಾ ನದಿಗೆ ಹೋಗುತ್ತಿದ್ದಳು. ಅಲ್ಲಿಂದ ಬಂದ ಮೇಲೆ ಪೂಜೆಯೆಲ್ಲಾ ಮುಗಿಸಿ ಅಡಿಗೆ ಮಾಡುತ್ತಿದ್ದಳು. ನಾನು ಕಂಡಂತೆ ಗೌರಜ್ಜಿ ಎರಡು ದಪ್ಪ ದಪ್ಪನಾದ ರೊಟ್ಟಿ ಮಾಡಿ ಅದನ್ನು ಯಾವದೋ ಒಂದು ಪಲ್ಯದ ಜೊತೆಗೆ ತಿನ್ನುತ್ತಿದ್ದಳು. ಒಂದೊಂದು ಸಾರಿ ಜೋಳದ ಅಂಬಲಿ ಮಾಡಿಕೊಂಡು ಮಜ್ಜಿಗೆಯೊಂದಿಗೆ ಕುಡಿಯುತ್ತಿದ್ದಳು. ಒಮ್ಮೊಮ್ಮೆ ಅವಳು ಊಟ ಮಾಡುವಾಗ ತಟ್ಟೆಯಲ್ಲಿ ನೊಣ ಬಿದ್ದರೆ ಅದನ್ನು ಎಸೆದು ಅದರ ಜೊತೆ ಗುಡಿಯಿಂದ ತಂದ ಅಂಗಾರವನ್ನು ಬೆರಸಿ ತಿನ್ನುವಾಗ ನಾವೆಲ್ಲ "ಇಸ್ಸಿಸ್ಸಿ" ಎನ್ನುತ್ತಿದ್ದೆವು. ಆಗ ಗೌರಜ್ಜಿ "ಹಂಗೆಲ್ಲಾ ಅನಬಾರದು. ತಿನ್ನೋ ಕೂಳಿನ ಮೇಲೆ ಯಾವತ್ತೂ ಸೊಕ್ಕು ಮಾಡಬಾರದು" ಎಂದು ನಮಗೆಲ್ಲಾ ಬುದ್ದಿವಾದ ಹೇಳುತ್ತಿದ್ದಳು. ಸ್ನಾನ, ಪೂಜೆ, ಬೆಳಗಿನ ಊಟ ಮುಗಿಸುವಷ್ಟೊತ್ತಿಗೆ ೯ ಗಂಟೆಯಾಗುತ್ತಿತ್ತು. ಆನಂತರ ಗೌಡರ ಮನೆ ಕಡೆ ಸವಾರಿ ಹೊರಡುತ್ತಿದ್ದಳು.


    ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದರೆ ದೊಡ್ದಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡೋದು, ಹಸನು ಮಾಡೋದು, ದನಕರುಗಳನ್ನು ಆಳುಮಕ್ಕಳ ಕೈಯಿಂದ ಹೊಳೆಗೆ ಅಟ್ಟಿಸಿ ಮೈ ತೊಳೆಸೋದು, ಅವುಗಳನ್ನು ಹಿಂಡಿಸೋದು ಮುಂತಾದ ಕೆಲಸಗಲನ್ನು ಮಾಡುತ್ತಿದ್ದಳು.ಸುಗ್ಗಿಕಾಲದಲ್ಲಿ ಕಣದಲ್ಲಿ ಒಕ್ಕಲಿ ನಡೆಯುತ್ತಿದ್ದರೆ ಅಲ್ಲಿಗೆ ಸ್ವತಃ ತಾನೆ ಹೋಗಿ ಆಳುಗಳು ಸೋಂಬೇರಿಯಾಗಿ ಕೂತು ಕಾಲ ಕಳೆಯದಂತೆ ನಿಗಾವಹಿಸುತ್ತಿದ್ದಳು.ಆಳುಗಳ ಮೇಲೆ ಗೌರಜ್ಜಿಗೆ ಯಾವತ್ತೂ ನಂಬಿಕೆಯಿರಲಿಲ್ಲ. ಏಕೆಂದರೆ ಆಳುಗಳು ಎಷ್ಟೊಸಾರಿ ಕಾಳು ಕಡಿಗಳನ್ನು ಕದ್ದು ಅವಳ ಕಲಿ ಸಿಕ್ಕು ಬಿದ್ದು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದು ಇದೆ.ಹೀಗಾಗಿ ಆಳುಗಳು "ಮನೆಯವರಿಗಿಂತ ಈ ಮುದುಕಿದು ಅತಿಯಾಯಿತು" ಎಂದು ಹಿಡಿಶಾಪ ಹಾಕಿದ್ದು ಉಂಟು.ಮನೆಯ ಚಕ್ಕಡಿ ಯಾವ ಹೊಲದಲ್ಲಿದೆ. ಯಾವ್ಯಾವ ಆಳು ಯಾವ್ಯಾವ ಹೊಲದಲಿದ್ದಾರೆ ಎಂಬುದನ್ನು ಅವರಿವರಿಂದ ಕೇಳಿ ಲೆಕ್ಕ ಇಡುತ್ತಿದ್ದಳು. ನಾವೆಲ್ಲಾ ಹೊರಗೆ ಕಟ್ಟೆಯ ಮೇಲೆ ಕುಳಿತುಕೊಂಡಾಗ ಅಕಸ್ಮಾತ್ ಆಳು ಒಳಗೆ ಹೋದರೆ "ಅಯ್ಯ, ಒಳಗ ಹೋಗು! ಅವಾ ಬಸ್ಯಾ ದೋತರದ ಕಚ್ಯಾಗ ಬೆಲ್ಲಾ ಇಟಗೊಂಡು ಹೊಕ್ಕಾನಸ" ಎಂದು ನಮ್ಮನ್ನೆಲ್ಲಾ ಒಳಗೆ ಕಳಿಸುವವರಿಗೂ ಅವಳಿಗೆ ಸಮಾಧಾನ ಇರುತ್ತಿರಲಿಲ್ಲ. ಆಳುಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುವದಂತಲ್ಲ ಆಕೆಗೆ ಆ ಮನೆಯ ಬಗ್ಗೆ ಅಷ್ಟೊಂದು ಕಾಳಜಿಯಿತ್ತು. ಅವಳ ಸರ್ಪಗಾವಲಿನಲ್ಲಿ ಗೌಡರ ಮನೆಯ ಸಾಮಾನುಗಳು ಆಚೆ ಈಚೆ ಸರಿದಿದ್ದಿಲ್ಲ.


    ಪ್ರತಿ ಬೇಸಿಗಿಗೆ ದೊಡ್ಡಮ್ಮ ಶಾವಿಗೆ ಮಾಡೋದು, ಹಪ್ಪಳ ಮಾಡೋದು, ಉಪ್ಪಿನಕಾಯಿ ಹಾಕೋದು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಳು. ಆಗ ಗೌರಜ್ಜಿ ದೊಡ್ಡಮ್ಮನಿಗೆ ಶಾವಿಗೆ, ಹಪ್ಪಳ ಒಣಗಿಸಿಕೊಡೋದು, ಮಾವಿನಕಾಯಿ ಹೋಳುಗಳನ್ನು ಹೆಚ್ಚಿಕೊಡೋದು ಮಾಡುತ್ತಿದ್ದಳು.ಶಾವಿಗೆ ಮಾಡುವಾಗಲೆಲ್ಲಾ ನನಗೆ ಬಹಳ ಖುಶಿ. ಏಕೆಂದರೆ ಪ್ರತಿದಿನ ನನಗೊಂದು ಯಾರಾದರು ಶಾವಿಗೆ ಹಿಟ್ಟಿನಿಂದ ಗುಬ್ಬಿ ಮಾಡಿಕೊಡಬೇಕು. ಆ ಜವಾಬ್ದಾರಿಯನ್ನು ಗೌರಜ್ಜಿ ತೆಗೆದುಕೊಳ್ಳುತ್ತಿದ್ದಳು. ನಾನು ಪ್ರತಿದಿನ ಶಾಲೆಯಿಂದ ಬರುವಷ್ಟರಲ್ಲಿ ಗುಬ್ಬಿ ಮಾಡಿ ಅದನ್ನು ಬಿಸಿಲಲ್ಲಿ ಒಣಗಿಸಿ ಬೆಂಕಿ ಕೆಂಡದಲ್ಲಿ ಸುಟ್ಟು ಅದಕ್ಕೆ ಬೆಲ್ಲ ಹಾಕಿ ಕೊಡುತ್ತಿದ್ದಳು.ಹೀಗೆ ದಿನಾಲು ಸಂಜೆ ೬-೭ ಗಂಟೆಯವರೆಗೆ ಇದ್ದು ಚಹಾ ಕುಡಿದು ತನ್ನ ಮನೆಗೆ ಹೋಗಿ ದೀಪ ಹಚ್ಚಿ ಮತ್ತೆ ಬಂದು ರಾತ್ರಿ ಇಲ್ಲಿಯೇ ಊಟ ಮಾಡಿ ಮತ್ತೆ ತನ್ನ ಮನೆಗೆ ವಾಪಾಸಾಗುತ್ತಿದ್ದಳು. ಒಂದೊಂದು ಸಾರಿ ಇಲ್ಲಿಯೇ ವಸ್ತಿ ಉಳಿಯುತ್ತಿದ್ದಳು.

    ನಾನು ಕಲಕೋಟಿಗೆ ಬಂದಾಗಿನಿಂದಲೂ ಗೌರಜ್ಜಿಯೆಡೆಗೆ ನನಗೆ ಅದೇನೋ ಅಕರ್ಷಣೆ. ಗೌರಜ್ಜಿಗೂ ಅಷ್ಟೆ ನನ್ನ ಕಂಡರೆ ಬಲು ಪ್ರೀತಿ. ನಾನು ಶಾಲೆಯಿಂದ ಬಂದ ತಕ್ಷಣ ನನಗೊಂದು ಮುತ್ತು ಕೊಟ್ಟು ನನಗೇನಾದರು ತಿನ್ನಲು ಕೊಟ್ಟು ಆಟಕ್ಕೆ ಕಳಿಸುತ್ತಿದ್ದಳು. ನಾನು ಆಟದಿಂದ ಮರಳಿ ಬರುವಷ್ಟರಲ್ಲಿ ಅವಳು ತನ್ನ ಮನೆಗೆ ಹೋಗಿ ಬಂದಿರುತ್ತಿದ್ದಳು. ಆಮೇಲೆ ನನ್ನ ಸಂಬಂಧಿಕರೊಬ್ಬರ ಹತ್ತಿರ ಮನೆಪಾಠಕ್ಕೆ ಕಳಿಸಿ ಬಂದಮೇಲೆ ನನಗೊಂದು ಕತೆ ಹೇಳಿ ಹೋಗುತ್ತಿದ್ದಳು. ಗೌರಜ್ಜಿ ಒಬ್ಬ ಅನಕ್ಷರಸ್ಥೆಯಾದರೂ ಅದ್ಹೇಗೆ ಪುರಾಣದ ಕತೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಕಲೆ ಹಾಕಿದ್ದಳೋ ನನಗೆ ಗೊತ್ತಿಲ್ಲ. ಯಾರಿಗೂ ಬೇಸರವಾಗದಂತೆ ಎಲ್ಲರನ್ನೂ ಹಿಡಿದಿಡುತ್ತಾ ಅವಳು ಕತೆ ಹೇಳುವ ಕಲೆಗೆ ನಿಬ್ಬೆರಗಾಗಿದ್ದೇನೆ. ರಾಮಾಯಣದ ಮಹಾಭಾರತದ ಕತೆಗಳನ್ನು ತನ್ನ ಭಂಡಾರದಿಂದ ಒಂದೊಂದೇ ತೆಗೆದು ಹೇಳುತ್ತಿದ್ದಳಾಕೆ. ದಿನವೂ ಒಂದೊಂದು ಹೊಸ ಕತೆ ನಡೆಯುತ್ತಿತ್ತು. ಅವಳ ಕತೆಗಳ ಕಣಜ ಬರಿದಾಗಿದ್ದೇ ಇಲ್ಲ. ಇದಲ್ಲದೆ ಹಟ್ಟಿ(ದೀಪಾವಳಿ)ಹಬ್ಬದಂದು ಲಕ್ಷ್ಮಿ ಪೂಜೆಯ ದಿನ ಮತ್ತು ಕಣದ ರಾಶಿಯ ಪೂಜೆಯ ದಿನ ಗೌರಜ್ಜಿ ತನ್ನ ಬೊಚ್ಚುಬಾಯಿಯಲ್ಲಿ ಹಾಡುಗಳನ್ನು ಸ್ವಚ್ಚವಾಗಿ ಹಾಡುತ್ತಿದ್ದಳು. ಮುಂದೆ ನನಗೆ ಸಾಹಿತ್ಯದಲ್ಲಿ ಹೆಚ್ಚು ಒಲವು ಮೂಡುವದಕ್ಕೆ ಮತ್ತು ನನ್ನೊಳಗಿನ ಬರಹಗಾರ ಮೊಳಕೆಯೊಡೆಯುವದಕ್ಕೆ ಬಹುಶಃ ಗೌರಜ್ಜಿಯ ಕತೆ ಮತ್ತು ಹಾಡು ಹೇಳುವಿಕೆ ಎಲ್ಲೋ ಒಂದು ಕಡೆ ಬಾಲ್ಯದಿಂದಲೇ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿವೆ ಎನಿಸುತ್ತದೆ. ಅದಕ್ಕೆ ನಾನು ಗೌರಜ್ಜಿಗೆ ಸದಾ ಚಿರಋಣಿ! ಒಂದೊಂದು ಸಾರಿ ಬಿಡುವಿದ್ದಾಗ ನನ್ನೊಂದಿಗೆ ಚಕ್ಕಾ (ಚೌಕಾ ಬಾರಾ) ಆಡುತ್ತಿದ್ದಳು. ಅಕಸ್ಮಾತ್ ನನಗ ಕಡತಾ ಸಿಗದ ಹೋದರ ನಾನು ಮಾರಿ ಸಣ್ಣಗ ಮಾಡತಿದ್ದೆ. ಆಗ ಬೇಕಂತಲೆ ಕಡತಾ ಕೊಟ್ಟು ನನ್ನ ಪ್ರಸನ್ನಗೊಳಿಸುತ್ತಿದ್ದಳು.
    ಮುಂಗಾರು ಮಳೆ ಸಕಾಲಕ್ಕೆ ಬರದೆ ಹೋದರೆ ಗೌರಜ್ಜಿ ಮಳೆ ಕೇಳಿಸುತ್ತಿದ್ದಳು. ನಾನು ಶಾಲೆಗೆ ಹೋಗುವ ಮುನ್ನ "ನಾನು ಸಂಜಿ ಮುಂದ ಮಳಿ ಕೇಳಸತೇನಿ. ನಾಲ್ಕು ಜನ ಸಾಲಿ ಹುಡುಗರನ್ನ ಕರ್ಕೊಂಡು ಬಾ" ಅಂತ ಹೇಳಿ ನಾವು ಶಾಲೆಯಿಂದ ಹಿಂತಿರಿಗುವಷ್ಟರಲ್ಲಿ ನಾಲ್ಕು ಬೇರೆ ಬೇರೆ ಸಗಣಿ ಕುಡಿಕೆಯಲ್ಲಿ ಬೂದಿ, ಕಾಳು, ನೀರು, ತುಂಬಿಟ್ಟು ಒಂದನ್ನು ಖಾಲಿ ಬಿಟ್ಟಿರುತ್ತಿದ್ದಳು. ನಾವೆಲ್ಲ ಶಾಲೆಯಿಂದ ಬಂದ ಮೇಲೆ ಮುಖತೊಳೆದುಕೊಂಡು ಬರಲು ಹೇಳುತ್ತಿದ್ದಳು.ಅಷ್ಟರಲ್ಲಿ ಮನೆಯ ಮುಂಚಿಬಾಗಿಲದ ಹೊಸ್ತಿಲ ಮೇಲೆ ಅವನ್ನು ಜೋಡಿಸಿಟ್ಟಿರುತ್ತಿದ್ದಳು. ನಂತರ ನಾವು ನಾಲ್ಕು ಜನ ಒಂದೊಂದಾಗಿ ತೆಗೆಯುತ್ತಾ ಹೋಗುತ್ತಿದ್ದೆವು. ಮೊದಲು ನೀರಿನ ಕುಡಿಕೆ ಬಂದರೆ ಮಳೆ ಬರುತ್ತದೆ ಅಂತ. ಬೂದಿ ಬಂದರೆ ಬರಗಾಲ ಅಂತ. ಕಾಳು ಬಂದರೆ ಜೀವನ ನಡೆಸಲು ಏನೂ ತೊಂದರೆಯಿಲ್ಲ ಹಾಗೂ ಖಾಲಿ ಕುಡಿಕೆ ಬಂದರೆ ಏನೂ ಹೇಳಲಾಗುವದಿಲ್ಲ ಅಂತ ತನ್ನದೇ ಲೆಕ್ಕಾಚಾರದಲ್ಲಿ ಅರ್ಥೈಸುತ್ತಿದ್ದಳು. ಇಲ್ಲಿ ಇದು ನಮಗೆ ಮೂಡನಂಬಿಕೆಯಾಗಿ ಕಂಡುಬಂದರೂ ಎಲ್ಲರಿಗೂ ಒಳಿತಾಗಲೆನ್ನುವ, ಇನ್ನೊಭ್ಭರ ಕುರಿತು ಯೋಚಿಸುವ ಮನಸ್ಸು ನನಗೆ ಪ್ರಿಯವಾಗುತ್ತದೆ.

    ನಾನು ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ದೊಡ್ಡಪ್ಪ ಹೃದಯಾಘಾತದಿಂದ ಬಹಳ ಬೇಗನೆ ತೀರಿಕೊಂಡಿದ್ದರಿಂದ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಪ್ರೀತಿ ವಾತ್ಸಲ್ಯದ ಜಾಗದಲ್ಲಿ ನಿಧಾನವಾಗಿ ವ್ಯವಹಾರಿಕತೆ ತಲೆ ಎತ್ತತೊಡಗಿತ್ತು. ಮೊದಲಿನ ಧಾರಾಳತೆ ಎಲ್ಲರಲ್ಲೂ ಕಣ್ಮರೆಯಾಗತೊಡಗಿತ್ತು. ಅತ್ತ ನನ್ನ ದೊಡ್ಡಪ್ಪನ ಮಗಳು ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ನನ್ನ ಜೊತೆಯಲ್ಲಿರಲಿ ಎಂದು ನನ್ನನ್ನು ಗದುಗಿಗೆ ಕರೆದುಕೊಂಡುಹೋದಳು. ಆಗೆಲ್ಲಾ ನಾನು ಗೌರಜ್ಜಿಯನ್ನು ತುಂಬಾ miss ಮಾಡಿಕೊಂಡಿದ್ದೇನೆ. ಆದರೂ ನಾನು ರಜೆಗೆ ಕಲಕೋಟಿಗೆಂದು ಬಂದಾಗ ಗೌರಜ್ಜಿಯ ಮತ್ತದೇ ತುಂಬು ಪ್ರೀತಿಯಲ್ಲಿ ಮುಳುಗುತ್ತಿದ್ದೆ. ಗೌರಜ್ಜಿ ದೊಡ್ಡಪ್ಪ ಸತ್ತ ನಂತರವೂ ಐದಾರು ವರುಷ ಕಲಕೋಟಿಯಲ್ಲಿ ಇದ್ದಳು. ನಂತರ ಅದೇಕೋ ಗೊತ್ತಿಲ್ಲ ಸಿದ್ಧಾಪೂರದಲ್ಲಿರುವ ತನ್ನ ಒಬ್ಬನೇ ಒಬ್ಬ ದೂರದ ಸಂಬಂಧಿಯ ಮೇಲೆ ಸೆಳೆತ ಹೆಚ್ಚಾಗಿ ಸಾಯುವ ಕಾಲಕ್ಕೆ ಅವನೇ ನನ್ನ ನೋಡಿಕೊಳ್ಳುತ್ತಾನೆಂದು ಶಾಶ್ವತವಾಗಿ ಸಿದ್ಧಾಪೂರಕ್ಕೆ ಹೋಗಿಬಿಟ್ಟಳು. ಆಗೆಲ್ಲಾ ನಾನು ಕಲಕೋಟಿಗೆ ರಜೆಗೆಂದು ಬಂದಾಗ ಅವಳಿಲ್ಲದ ಮನೆ ಬಿಕೋ ಎನಿಸುತ್ತಿತ್ತು. ಮನಸ್ಸು ಮಾಡಿದ್ದರೆ ದೊಡ್ಡಮ್ಮ ಅವಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬಹುದಿತ್ತು ಆದರೆ ಅದೇಕೋ ಅವರು ಮನಸ್ಸು ಮಾಡಲಿಲ್ಲ. ಹೋದವಳು ಹಿಂತಿರುಗಿ ಬರಲೇ ಇಲ್ಲ. ಮುಂದೆ ಎರಡು ವರುಷಕ್ಕೆ ಅಂದರೆ ನಾನು P.U.C. ಇರಬೇಕಾದರನಿಸುತ್ತೆ ಗೌರಜ್ಜಿ ಸತ್ತ ಸುದ್ದಿ ಬಂತು. ಅವಳ ಋಣವನ್ನು ಹೇಗಾದರು ಮಾಡಿ ತೀರಿಸಬೇಕೆಂದುಕೊಂಡಿದ್ದೆ. ತೀರಿಸಲಾರದ ನನ್ನ ಅಸಹಾಯಕತೆಗೆ ಒಬ್ಬನೆ ಕುಳಿತುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೇನೆ.

    ಹೋದವರು ಹಿಂತಿರುಗಿ ಬರಲಾರರು. ಉಳಿಸಿಕೊಳ್ಳಬಹುದೆ ಉಳಿದವರನ್ನು? ಇವತ್ತಿನ ಬದಲಾದ ಜೀವನ ಪದ್ದತಿಯಲ್ಲಿ, ಬದಲಾದ ಮೌಲ್ಯಗಳಲ್ಲಿ ಇಂಥ ಅಜ್ಜಿಯರನ್ನು ನಮ್ಮ ಬಳಿ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಅತ್ಯಮೂಲ್ಯ ಉಡುಗೊರೆಯನ್ನು ಕೊಡಲಾದೀತೆ? ಕೊನೆಪಕ್ಷ ಗೌರಜ್ಜಿಯಂಥವರಲ್ಲದಿದ್ದರೂ ನಮ್ಮ ತಾಯಂದಿರನ್ನು ನಮ್ಮ ಬಳಿ ಇಟ್ಟುಕೊಂಡು ಅಜ್ಜಿ ಮೊಮ್ಮಕ್ಕಳ ಅವಿನಾಭಾವ ಸಂಬಧವನ್ನು ಕಲ್ಪಿಸಿಕೊಡುವಷ್ಟು ವ್ಯವಧಾನ, ತಾಳ್ಮೆ, ಪ್ರೀತಿ, ಚೈತನ್ಯ ಇನ್ನೂ ನಮ್ಮಲ್ಲಿ ಉಳಿದಿದೆಯೆ?
    -ಉದಯ ಇಟಗಿ
















































    3 ಕಾಮೆಂಟ್‌(ಗಳು):

    sunaath ಹೇಳಿದರು...

    ಉದಯರೆ,
    ನಿಮ್ಮ ಗೌರಜ್ಜಿಯ ಕತೆಯನ್ನು ಕೇಳಿ ನನಗೂ ನಮ್ಮ ಅಜ್ಜಿಯ ನೆನಪಾಯಿತು
    ಹಳೆಯ ಕಾಲದ ಈ ಅಜ್ಜಿಯರಲ್ಲಿ ಎಷ್ಟೊಂದು ಆತ್ಮೀಯತೆ, ಪ್ರೀತಿ ಇರುತ್ತದೆ, ಅಲ್ವಾ?
    ಮನ ಮುಟ್ಟುವಂತೆ ಬರೆದಿದ್ದೀರಿ.

    ಬಿಸಿಲ ಹನಿ ಹೇಳಿದರು...

    ಸುನಾಥ ಅವರೆ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳಿದಂತೆ ಹಳೆಯ ಕಾಲದವರು ಪ್ರೀತಿ, ಆತ್ಮೀಯತೆಗಳ ಆಗರವಾಗಿದ್ದರು.

    Chamaraj Savadi ಹೇಳಿದರು...

    ಉದಯ್‌, ನಾನು ಅಜ್ಜಿಯರ ಪ್ರೀತಿ ಕಂಡವನಲ್ಲ. ಆದರೆ, ನಿಮ್ಮ ಈ ಬರಹ ಪ್ರೀತಿಯ ಬೇರೆಯ ಸಾಧ್ಯತೆಯನ್ನೇ ತೋರಿಸಿತು. ವಿಷಯದ ತೀವ್ರತೆಯಲ್ಲಿ ಮುಳುಗಿಹೋಗಿದ್ದರಿಂದ, ಒಂದೇ ಲೇಖನದಲ್ಲಿ ಎಲ್ಲವನ್ನೂ ಹೇಳಲು ಯತ್ನಿಸಿದ್ದೀರಿ, ಅಲ್ಲವೆ?

    ಇಂಥ ಆತ್ಮೀಯರ ನೆನಪನ್ನು ಒಂದೇ ಕಂತಿನಲ್ಲಿ ಹೇಳಿ ಮುಗಿಸಲಾಗದು. ಒಂದೋ ಎರಡೋ ಘಟನೆಯನ್ನು ಮಾತ್ರ ಎತ್ತಿಕೊಂಡು ಹೇಳಿ. ಮುಂದೆ ಮನಸ್ಸು ಉಕ್ಕಿದಾಗೊಮ್ಮೆ ಮತ್ತೆ ಮತ್ತೆ ಬರೆಯಬಹುದು. ಅಲ್ವೆ?

    - ಚಾಮರಾಜ ಸವಡಿ