Demo image Demo image Demo image Demo image Demo image Demo image Demo image Demo image

ಹೊಸವರ್ಷಕ್ಕೆ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ

  • ಗುರುವಾರ, ಡಿಸೆಂಬರ್ 31, 2009
  • ಬಿಸಿಲ ಹನಿ
  • ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ ಕಲಕೋಟಿಯಲ್ಲಿ. ಹೀಗಾಗಿ ಅಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಸಡಗರ, ಸಂಭ್ರಮಗಳ ‘ನಾಗರಿಕತೆ’ ಆ ಊರಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಹೀಗಾಗಿ ಹೊಸವರ್ಷದ ದಿನವೂ ಸಹ ಎಲ್ಲ ದಿನಗಳಂತೆ ಯಾವುದೇ ವಿಶೇಷವಿಲ್ಲದೆ ಕಳೆದು ಹೋಗುತ್ತಿತ್ತು. ಮುಂದೆ ನಾನು ಗದಗ್ಗೆು ಬಂದೆ. ಅದು ಆಗಿನ್ನೂ ತಾಲೂಕ ಕೇಂದ್ರವಾಗಿತ್ತು. ಅಲ್ಲಿ ಕೂಡ ಹೊಸವರ್ಷದ ದಿನದಂದು ಹೇಳಿಕೊಳ್ಳುವಂಥ ಆಚರಣೆಗಳು ನಡೆಯದಿದ್ದರೂ atleast ಪರಸ್ಪರ ಶುಭಾಷಯಗಳನ್ನು ಹೇಳುವ ಪದ್ದತಿಯಿತ್ತು. ಮುಂದೆ ಪಿ.ಯು.ಸಿಗೆ ಧಾರವಾಡಕ್ಕೆ ಬಂದಾಗಲೂ ನಾನು ಯಾವುದೇ ತರದ ಆಚರಣೆಗಳನ್ನು ಮಾಡಲಿಲ್ಲ. ಬಹುಶಃ ಅದಕ್ಕೆ ಹೇಳಿಕೊಳ್ಳುವಂಥ ಆತ್ಮೀಯ ಸ್ನೇಹಿತರ ಕೊರತೆ ಇದ್ದಿರಬಹುದು.


    ಧಾರವಾಡದಿಂದ ನಾನು ಡಿಗ್ರಿ ಮಾಡಲು ಮಂಡ್ಯಕ್ಕೆ ಬಂದಾಗ ಅಲ್ಲಿ ಒಂದು ಸ್ನೇಹಿತರ ಗುಂಪಿಗೆ ಸೇರ್ಪಡೆಯಾದೆ. ಆ ಗುಂಪಿನವರಲ್ಲಿಯೇ ಇಬ್ಬರಾದ ಮಂಜು ಮತ್ತು ರಾಘು ಇಂದಿಗೂ ಕೂಡ ಜೀವದ ಗೆಳೆಯರಾಗಿ ಮುಂದುವರಿಯುತ್ತಿದ್ದಾರೆ. ಅವರೊಂದಿಗೆ ಒಂದು ವರ್ಷ ಸೇರಿ ಆಚರಿಸಿದ್ದೆ. ನನಗೆ ಅದು ಮೊಟ್ಟ ಮೊದಲ ಬಾರಿಗೆ ಒಂದು ಪಾರ್ಟಿಯೆಂದರೆ ಹೇಗಿರುತ್ತದೆ ಎನ್ನುವ ಅನುಭವವವನ್ನು ಕೊಟ್ಟಿದ್ದು ಬಿಟ್ಟರೆ ಹೇಳಿಕೊಳ್ಳುವಂಥ ಖುಶಿ ಕೊಟ್ಟಿರಲಿಲ್ಲ. ಡಿಗ್ರಿ ಮುಗಿದ ಮೇಲೆ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಮಂಜು ಇಬ್ಬರೇ ಸೇರಿ ಆಚರಿಸಿದ್ದೆವು. ನಂತರ ಉದ್ಯೋಗದಲ್ಲಿ ಮುಂದುವರೆದು ಒಂದಷ್ಟು ದುಡ್ಡು ಕೈಯಲ್ಲಿ ಓಡಾಡತೊಡಗಿದಾಗ ಗೆಳೆಯರೆಲ್ಲ ಸೇರಿ ಬೇರೆ ಬೇರೆ ಕಡೆ ಹೋಗಿ ಪಾರ್ಟಿ ಮಾಡಿದ್ದಿದೆ. ಆದರೆ ನಾನು ಆ ಪಾರ್ಟಿಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸುತ್ತಿರಲಿಲ್ಲ. ಏಕೆಂದರೆ ಹೊಸವರ್ಷ ನನಗೆ ಯಾವತ್ತೂ ವಿಶೇಷ ದಿನವಾಗಿ ಕಾಣಿಸಿಯೇ ಇಲ್ಲ. ಇದಕ್ಕೆ ಸರಿಯಾದ ಕಾರಣವೇನೆಂದು ಈವರೆಗೂ ತಿಳಿದಿಲ್ಲ. ಬರು ಬರುತ್ತಾ ನಾವು ಸ್ನೇಹಿತರು ಪಾರ್ಟಿ ಮಾಡುವದನ್ನು, ಗ್ರೀಟಿಂಗ್ಸ್ ಕಳಿಸುವದನ್ನೂ ನಿಲ್ಲಿಸಿಬಿಟ್ಟೆವು. ಹಾಗಂತ ನಮ್ಮ ನಡುವೆ ಇರುವ ಆತ್ಮೀಯತೆ ನಿಂತಿಲ್ಲ. ಅದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ. ಬಹುಶಃ ಹೊಸ ವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿದು ಹೋಗುವದಷ್ಟೇ ಎನ್ನುವ ಸತ್ಯವನ್ನು ಕಂಡುಕೊಂಡೆವೆ? ಗೊತ್ತಿಲ್ಲ.

    ಇದೇ ಭಾವವನ್ನು ಬಿಂಬಿಸುವ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ ‘ಹೊಸವರ್ಷ’ ಮೊನ್ನೆ ನನ್ನ ಹಳೆಯ ಡೈರಿಯಲ್ಲಿ ಸಿಕ್ಕಿತು. ಯಾಕೋ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೆ ಇಷ್ಟವಾಗದಿರಬಹುದು.

    ಹೊಸವರ್ಷ

    ಹೊಸವರ್ಷ ಬರುತ್ತೆ ಹೊಸವರ್ಷ ಬರುತ್ತೆ

    ಅಂತ ಬೆಳಗ್ಗಿನಿಂದ ನನ್ನ ನಾಲ್ಕು ವರ್ಷದ ಮಗಳು

    ಹುಮ್ಮಸ್ಸಿನಿಂದ ಕಾದಳು.



    ನೋಡೋಕೆ ಹೇಗಿರುತ್ತಮ್ಮ

    ನೀನು ನೋಡಿದ್ದೀಯಾಮ್ಮಾ

    ಮಕ್ಕಲನ್ನು ಹೆದರಿಸುತ್ತಾಮ್ಮ

    ಬಚ್ಚಿಟ್ಟುಕೊಳ್ಳಲೇನಮ್ಮ

    ಎಂದು ಆತಂಕದಲಿ ಚಡಪಡಿಸಿದಳು.



    ರಾತ್ರಿ ಹನ್ನೆರಡಕ್ಕೆ ಬರುತ್ತೇ-

    ಸುಮ್ನೆ ಇರು ಗಲಾಟೆ ಮಾಡ್ದೆ

    ಊಟ ತಿಂಡಿ ಹಾಲು ಮುಗಿಸಿಬಿಡು ತೆಪ್ಗೆ

    ಎಂದು ನಾನೂ ಸಂದರ್ಭ ಉಪಯೋಗಿಸಿಕೊಂಡೆ.



    ವರ್ಷದ ಕೊನೆಯ ದಿನವಿಡೀ ಹಾರಾಡಿ

    ಕೊನೆಗೆ ರಾತ್ರಿ ಟೀವಿಯ ಮುಂದೆ ಕೂತೆವು

    ಆಕಳಿಸಿ ತೂಕಡಿಸಿ ಕಣ್ಣು ಮಿಟುಕಿಸುತ್ತ

    ಪಿಳಪಿಳನೆ ಟೀವಿಯಲ್ಲಿ ಕಣ್ಣುನೆಟ್ಟು

    ಹೊಸವಷಕ್ಕೆ ಕಾದೆವು

    ನಿದ್ದೆ ತಡೆಯದ ಮಗಳು ಪವಡಿಸಿದಳು.



    ಏನೇನೋ ಕಾಯಕ್ರಮಗಳ ನಂತರ

    ನಡುರಾತ್ರಿ ಸರಿಯಾಗಿ

    ಟೀವಿಯಲ್ಲೆಲ್ಲ ಗದ್ದಲ

    ಹೊರಗೆ ಪಟಾಕಿ ಸಿಡಿಮದ್ದು

    ಹೋಯೆಂದೆವು ನಾವೆಲ್ಲ

    ಎಚ್ಚೆತ್ತ ಮಗಳು ಏನಮ್ಮ ಏನಮ್ಮ ಅಂದಳು.

    ನೋಡು ಹನ್ನೆರಡಾಯಿತು

    ಹಳೆವರ್ಷ ಸರಿದುಹೋಯಿತು

    ಹೊಸವರ್ಸ ಕಾಲಿಟ್ಟಿತು ಎಂದೆ.



    ಟೀವಿ ಪರದೆಯಲ್ಲಿ ನೋಡಿ

    ಹೊಸವರ್ಷ ಅಂದರೆ ಗಡಿಯಾರ ಏನಮ್ಮ

    ಅದು ಯಾವಾಗ್ಲೂ ಓಡುತ್ತಿರತ್ತಾಲ್ಲಾಮ್ಮಾ

    ಎಂದು ಪೆಚ್ಚಾಗಿ ಪುನಃ ನಿದ್ದೆ ಹೋದಳು



    ಮಾರನೆಯ ದಿನ

    ಹೊಸವರ್ಷ ಅಂದರೆ ಏನಿಲ್ಲ ತಾತಾ

    ಗಡಿಯಾರದ ಮುಳ್ಳು ತಿರುಗೋದು ಅಷ್ಟೇ

    ಎಂದು ತಾತನಿಗೆ ಬೋಧಿಸುತ್ತಿದ್ದಳು.



    ಅಷ್ಟೇಮ್ಮಾ ಅಷ್ಟೆ ಎಂದರು ಅವರು

    ಬೊಚ್ಚು ಬಾಯಗಲಿಸಿ.



    -ಪ್ರತಿಭಾ ನಂದಕುಮಾರ್

    ಘರ್ಜನೆ ನಿಲ್ಲಿಸಿದ ಸಿಂಹ

  • ಬುಧವಾರ, ಡಿಸೆಂಬರ್ 30, 2009
  • ಬಿಸಿಲ ಹನಿ
  • ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಗರಬಡಿದಂತೆ ಕಾಣುತ್ತಿದೆ. ವರ್ಷಾಂತ್ಯದ ಕೊನೆಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ ಗಣ್ಯಾತಿಗಣ್ಯರನ್ನು ಕಳೆದುಕೊಳ್ಳುತ್ತಿದ್ದೇವೆ. ನಿನ್ನೆಯಷ್ಟೆ ಅಶ್ವತ್ಥ್ ಹೋದರು. ಇಂದು ಕನ್ನಡದ ಮೇರು ನಟ ವಿಷ್ಣುವರ್ಧನ. ಯಾಕೋ ಮಾತೇ ಹೊರಡುತ್ತಿಲ್ಲ. ಒಂದಾದ ಮೇಲೊಂದರಂತೆ ಬರಸಿಡಿಲು ಬಂದು ಬಡಿಯುತ್ತಿದ್ದರೆ ಮಾತು ಹೊರಡುವದಾದರು ಹೇಗೆ? ಹೆಪ್ಪುಗಟ್ಟಿದ ಎದೆಯೊಳಗಿನ ನೋವನ್ನು ಹೊರಹಾಕುವದಾದರೂ ಹೇಗೆ?


    ‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಾಗರ ಹಾವಿನ ರಾಮಾಚಾರಿಯಾಗಿ ಮೆರೆದು, ಕನ್ನಡಿಗರ ಮನದ ಬಂಧನದಲ್ಲಿ ಸಿಲುಕಿ, ಮುತ್ತಿನಹಾರ ಹಾಕಿಕೊಂಡು ಕನ್ನಡ ಚಿತ್ರರಂಗದ ಯಜಮಾನನಾಗಿ, ಕನ್ನಡಿಗರ ಆಪ್ತಮಿತ್ರನಾಗಿ ಬೆಳೆದ ಈ ಕೋಟಿಗೊಬ್ಬನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.

    ಓ ದೇವರೆ! ನಾಳೆ ಬೆಳಿಗ್ಗೆ ಮತ್ತೆ ಇಂಥದೇ ಕೆಟ್ಟ ಸುದ್ದಿಯನ್ನು ಕರುಣಿಸದಿರು.

    ಗಿಳಿಯು ಪಂಜರದೊಳಿಲ್ಲ

  • ಮಂಗಳವಾರ, ಡಿಸೆಂಬರ್ 29, 2009
  • ಬಿಸಿಲ ಹನಿ
  • ಪ್ರೀತಿಯ ಅಶ್ವತ್ಥ್ ಅವರೆ,


    ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ ಎಲ್ಲರೂ ಯಾಕೆ ಯಾಕೆ ಎಂದು ಕೇಳುತ್ತಿದ್ದಾರೆ. ಹೇಗೆ ಹೇಳಲಿ ಅವರಿಗೆ ನೀವಿಲ್ಲದೆ ಉಂಟಾದ ತಳಮಳವನ್ನು? ಹೇಗೆ ಹೇಳುವದು ಅವರಿಗೆ ನೀವಿಲ್ಲದೆ ಸ್ಮಶಾನವಾಗಿದೆ ಮನದಂಗಳ ಎಂದು. ಹೇಗೆ ಹೇಳಲಿ ಅವರಿಗೆ ನಮ್ಮ ನಾಡಿನ ಮುದ್ದಿನ ಗಿಳಿಯೊಂದು ಪಂಜರದೊಳಗಿಂದ ಹಾರಿ ಹೋಗಿದೆ ಎಂದು. ಏನ ಹೇಳಲಿ ಅವರಿಗೆ ನಿಮ್ಮ ಸಾಧನೆಯ ಬಗ್ಗೆ. ಹೇಗೆ ತಿಳಿಸಲಿ ಅವರಿಗೆ ನಿಮ್ಮ ಹಾಡುಗಳ ಬಗ್ಗೆ. ದೂರದ ಲಿಬಿಯಾದಲ್ಲಿ ಕುಳಿತು ಮನಸ್ಸು ಒಂದೇ ಸಮನೆ ನಿಡುಸೊಯ್ಯುತಿದೆ ನೀವಿಲ್ಲದ ಸುದ್ದಿ ಕೇಳಿ. ಛೇ, ನಾನು ಬೆಂಗಳೂರಿನಲ್ಲಿದ್ದಿದ್ದರೆ ನಿಮ್ಮ ಅಂತ್ಯಕ್ರಿಯೆಯಲ್ಲಾದರೂ ಪಾಲುಗೊಳ್ಳಬಹುದಿತ್ತಲ್ಲವೆ? ಅಂತಿಮ ದರ್ಶನವನ್ನಾದರು ಪಡೆಯಬಹುದಿತ್ತು. ಏನು ಮಾಡುವದು? ಟೀವಿ ಚಾನೆಲ್ಗಬಳಲ್ಲಿ ತೋರಿಸುವ ನಿಮ್ಮ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ನೋಡಿ ಇಲ್ಲಿಂದಲೇ ನಿಮಗೊಂದು ಕಂಬನಿ ಮಿಶ್ರಿತ ಅಂತಿಮ ವಿದಾಯವನ್ನು ಹೇಳಿದ್ದೇನೆ.

    ಮೊನ್ನೆ ನವೆಂಬರ್ ೧ ರಂದು ಸುವರ್ಣ ಚಾನೆಲ್ನಹಲ್ಲಿ ಪ್ರಸಾರವಾದ ನಿಮ್ಮ ಸಂದರ್ಶನವೊಂದರದಲ್ಲಿ ಹಾಡುತ್ತಿರುವಾಗ ಏಕೋ ನಿಮ್ಮ ಧ್ವನಿ ನಡುಗುತ್ತಿರುವದನ್ನು ನೋಡಿ ಅಶ್ವತ್ಥ್ ಅವರಿಗೆ ವಯಸ್ಸಾಯಿತು. ಇನ್ಮುಂದೆ ಅಶ್ವತ್ಥ್ ಅವರು ಹಾಡುವದನ್ನು ನಿಲ್ಲಿಸಿದರೆ ಒಳಿತು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ. ಛೇ, ಅದ್ಯಾವ ಗಳಿಗೆಯಲ್ಲಿ ಹಾಗೆಂದುಕೊಂಡೆನೋ ಕಾಕತಾಳಿಯವೆಂಬಂತೆ ನೀವು ಹಾಡುವದನ್ನು ನಿಲ್ಲಿಸಿ ಹೋಗಿ ಬಿಟ್ಟಿರಿ. ಆ ಗಿಲ್ಟ್ ನನ್ನನ್ನು ಬೆಳಿಗ್ಗೆಯಿಂದ ಕ್ಷಣ ಕ್ಷಣವೂ ಹಿಂಡಿಹಿಪ್ಪಿ ಮಾಡುತ್ತಿದೆ. ನಾನು ಹಾಗೆ ಅಂದುಕೊಂಡ ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆಸ್ಪತ್ರೆಗೆ ದಾಖಲಾದಿರಿ. ಇದು ನಮಗೆಲ್ಲ ಅನಿರೀಕ್ಷೀತ ಆಘಾತವಾಗಿತ್ತು. ಆಸ್ಪತ್ರೆಗೆ ದಾಖಲಾದವರು ಬೇಗ ಗುಣಮುಖರಾಗುತ್ತೀರಿ, ಅಲ್ಲಿಂದ ಎದ್ದು ಬಂದು ರೇ.. ರೇ.. ರೇ.. ಎಂದು ಹಾಡುತ್ತಾ ಮತ್ತೆ ನಮ್ಮನ್ನೆಲ್ಲ ನಿಮ್ಮ ರಾಗಗಳೊಂದಿಗೆ ಕುಣಿಸಿತ್ತೀರಿ, ಇನ್ನಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡುತ್ತೀರಿ ಎಂದೆಲ್ಲಾ ನಿರೀಕ್ಷಿಸಿದ್ದೆವು. ಆದರೆ ನಮ್ಮನ್ನೆಲ್ಲ ನಿರಾಶೆಗೊಳಿಸಿ ನೇರವಾಗಿ ಸಾವಿನ ಮನೆಗೆ ನಡೆದುಬಿಟ್ಟಿರಿ. ಹೇಳಿ, ಹಾಡಿ ಹಾಡಿ ಬೇಸರವಾಗಿತ್ತೆ ನಿಮಗೆ? ಅಥವಾ ವಿಧಿ ನಿಮ್ಮ ಹಾಡು ಕೇಳಲು ನಿಮ್ಮನ್ನು ಬಲವಾಗಿ ಎಳೆದೊಯ್ಯಿತೇ? ಕಾರಣ ಹೇಳದೆ ಹೋಗಿಬಿಟ್ಟಿರಿ.

    ಹಾಗೆ ನೋಡಿದರೆ ನಾನು ಸುಗಮ ಸಂಗೀತದೆಡೆಗೆ ಆಕರ್ಷಿತನಾಗಿದ್ದು ನಿಮ್ಮ ಧ್ವನಿಯಿಂದಲೇ! ನಿಮಗಿಂತ ಮೊದಲೇ ಇದ್ದ ಅನಂತಸ್ವಾಮಿಯವರ ಧ್ವನಿಯನ್ನು ನಾನು ಕೇಳಿದ್ದು ನಿಮ್ಮ ಧ್ವನಿಯನ್ನು ಕೇಳಿದ ಮೇಲೆ. ಅದೇಕೋ ಅನಂತಸ್ವಾಮಿಯವರಿಗಿಂತ ನಿಮ್ಮ ಧ್ವನಿಯೇ ತುಂಬಾ ಇಷ್ಟವಾಯಿತು. ನನಗೆ ಮಾತ್ರವಲ್ಲ ಬಹಳಷ್ಟು ಕನ್ನಡಿಗರಿಗೆ ಕೂಡ ನಿಮ್ಮ ಧ್ವನಿ ಇಷ್ಟವಾಯಿತು, ಏಕೆಂದರೆ ಅಂಥದೊಂದು ಮಾಂತ್ರಿಕ ಶಕ್ತಿ ನಿಮ್ಮ ಧ್ವನಿಗಿತ್ತು. ಅನಂತಸ್ವಾಮಿಯರ ಸಾವಿನೊಂದಿಗೆ ಸುಗಮ ಸಂಗೀತ ಕ್ಷೇತ್ರ ಬಡವಾಯಿತೆಂದುಕೊಂಡರೂ ಜನ, ಹೇಗೂ ಅಶ್ವಥ್ ಇದಾರಲ್ಲ! ಆ ಕೊರತೆಯನ್ನು ನೀಗಿಸುತ್ತಾರೆ ಎಂದುಕೊಂಡು ಸುಮ್ಮನಾದರು. ನೀವು ಖಂಡಿತವಾಗಿ ಆ ಕೊರತೆಯನ್ನು ನೀಗಿಸಿಬಿಟ್ಟಿರಿ. ಮಾತ್ರವಲ್ಲ ಮುಂದೆ ನೀವದನ್ನು ಹೊಸ ಹೊಸ ಪ್ರಯೋಗಗಳೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಂದಿರಿ. ಆದರೆ ಈಗ ನಿಮ್ಮ ಸಾವಿನೊಂದಿಗೆ ಆ ಕೊರತೆ ದಟ್ಟವಾಗಿ ಎದ್ದು ಕಾಣುತ್ತಿದೆ. ನಿಮ್ಮ ನಂತರದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

    ಕನ್ನಡನಾಡಿನ ಶ್ರೇಷ್ಟ ಹಾಗೂ ಉದಯೋನ್ಮುಖ ಕವಿಗಳ ಕವಿತೆಗಳನ್ನು ಮನೆ ಮನೆಗೆ ತಲುಪಿಸುವದರ ಮೂಲಕ ನೀವು ಮನೆ ಮಾತಾಗಿಬಿಟ್ಟಿರಿ. ಬಹುಶಃ ನಿಮ್ಮ ಹಾಡುಗಳನ್ನು ಜನ ಕೇಳಿದ ಮೇಲೆಯೇ ಕವಿಗಳನ್ನು ಮುಗಿಬಿದ್ದು ಓದತೊಡಗಿದರು. ಮುಂದೆ ಎಂದೂ ಕೇಳಿರದ ಶಿಶುನಾಳ ಶರೀಫರ್ ತತ್ವ ಪದಗಳಿಗೆ ನಿಮ್ಮದೇ ಆದಂಥ ವಿಶಿಷ್ಟ ಶೈಲಿಯ ಸಂಗೀತವನ್ನು ಅಳವಡಿಸಿ ಹಾಡುವದರ ಮೂಲಕ ನಾಡಿನ ಜನಮನವನ್ನು ಗೆದ್ದುಬಿಟ್ಟಿರಿ. ನೇಗಿಲ ಯೋಗಿ ಹಾಡಿನ ಮೂಲಕ ಈ ನಾಡಿನ ರೈತರ ಕಣ್ಮಣಿಯಾಗಿಬಿಟ್ಟಿರಿ. ನೀವು ಹಾಡುತ್ತಾ ಹಾಡುತ್ತಾ ಇಡಿ ನಾಡಿನ ಜನಸಾಗರವನ್ನೇ ಸುಗಮ ಸಂಗೀತದಲ್ಲಿ ಮುಳುಗಿಸಿಬಿಟ್ಟಿರಿ, ಅದಕ್ಕೆ ಬೆಂಗಳೂರು ಮತ್ತು ನಾಡಿನ ಇತರ ಭಾಗಗಳಲ್ಲಿ ನಡೆಸಿದ ನಿಮ್ಮ ಸುಗಮ ಸಂಗೀತದ ಕಛೇರಿಗಳೇ ಸಾಕ್ಷಿ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಎಷ್ಟೊ ಸಾಫ್ಟವೇರ್ ಇಂಜಿನೀಯರಗಳು ಸಹ ನಿಮ್ಮ ಸಂಗೀತ ಕಛೇರಿಗಳಿಗೆ ಮುಗಿಬಿದ್ದು ಬರತೊಡಗಿದರು. ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಿಮ್ಮೊಂದಿಗೆ ತಾವು ಹಾಡುತ್ತಾ ಧನ್ಯರಾದರು. ನೀವು ‘ಕನ್ನಡ ಸತ್ಯವೇ’ ಹಾಡನ್ನು ಹಾಡುತ್ತಿದ್ದರೆ ಎಲ್ಲರಲ್ಲೂ ಕನ್ನಡದ ಕಿಚ್ಚು ತಾನೇ ತಾನಾಗಿ ಹೊತ್ತಿಕೊಳ್ಳುತ್ತಿತ್ತು. ಅದಲ್ಲದೇ ಶಿಶುನಾಳ್ ಶರೀಫ್ರಎ ‘ತರವಲ್ಲ ತೆಗಿ’ ಹಾಡಿನ ರೆರೇ... ರೇ... ಎಂಬ ಆಲಾಪನೆ ಎತ್ತಿಕೊಳ್ಳುತ್ತಿದ್ದಂತೆ ನೆರೆದ ಇಡಿ ಜನಸಾಗರವೇ ಯಾವುದೇ ಸಮ್ಮೋಹನಕ್ಕೊಳಗಾದಂತೆ ಹುಚ್ಚೆದ್ದು ಕುಣಿಯುತ್ತಿದ್ದರು.

    ಅಶ್ವತ್ಥ್ ಅವರಿಗೆ ಅಶ್ವಥ್ರೇಣ ಸಾಟಿ ಎಂದು ಜನ ನಿಮ್ಮ ಬಗ್ಗೆ ಹೇಳುತ್ತಿದ್ದರೂ ನೀವೊಬ್ಬ ಮುಂಗೋಪಿ, ದುರಂಕಾರಿ, ಪ್ರಚಾರ ಪ್ರಿಯ, ಹಾಡಿದ್ದ ಹಾಡನ್ನು ಇನ್ನೊಮ್ಮೆ ಹಾಡುವಾಗ ಸ್ವಲ್ಪ ಬದಲಾಯಿಸಿ ಹಾಡುತ್ತಾರೆ, ಧಾರವಾಡ ಕನ್ನಡದ ಹಾಡುಗಳನ್ನು ಅದರ accentನ್ನು ಕೆಡಿಸಿ ಹಾಡುತ್ತಾರೆ ಎನ್ನುವ ಆಪಾದನೆಗಳು ನಿಮ್ಮ ಮೇಲೆ ಇದ್ದವು. ಆದರೆ ಅವೆಲ್ಲ ನಿಮ್ಮ ಕಂಚಿನ ಕಂಠದ ಮುಂದೆ ಹಾಗೂ ಸಾಧನೆಗಳ ಮುಂದೆ ಗೌಣವಾಗಿಬಿಟ್ಟವು. ನೀವು ಯಾವ ಶಿಷ್ಯರನ್ನೂ ಬೆಳೆಸಲಿಲ್ಲ. ಆದರೆ ಒಳ್ಳೊಳ್ಳೆ ಗಾಯಕ, ಗಾಯಕಿಯರನ್ನು ಬೆಳೆಸಿದಿರಿ. ಅವರಿಂದ ಲೈಫ್ ಟೈಮ್ ಹಾಡುಗಳನ್ನು ಹಾಡಿಸಿದಿರಿ. ಆದರೆ ಅವರೆಲ್ಲ ನೀವೇರಿದ ಎತ್ತರಕ್ಕೆ ಏರುತ್ತಾರೆಯೆ? ನಿಮ್ಮ ನಂತರದ ಸುಗಮ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೆ? ಅವರಲ್ಲಿ ಯಾರಾದಾರೊಬ್ಬರು ಸುಗಮ ಸಂಗೀತದ ದಿಗ್ಗಜರಾಗುತ್ತಾರೆಯೇ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.

    ನೀವು ಕೊಟ್ಟ ಭಾವಗೀತೆಗಳು, ಸಿನಿಮಾ ಹಾಡುಗಳು ಒಂದೇ... ಎರಡೆ? ಆಕಾಶದ ನೀಲಿಯಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರು, ರಾಯರು ಬಂದರು ಮಾವನ ಮನೆಗೆ, ನಾಯಿ ತಲೆಮ್ಯಾಲಿನ ಬುತ್ತಿ, ಗಿಳಿಯು ಪಂಜರದೊಳಿಲ್ಲ, ಗೆದಿಯಬೇಕು ಮಗಳೆ, ಆಕಾಶ ಬಿಕ್ಕುತಿದೆ ಇನ್ನೂ ಮುಂತಾದ ಹಾಡುಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಾಯುವಾಗಿರುತ್ತಿರಿ. ನಿಮ್ಮ ಸಾವಿನಿಂದ ಸುಗಮ ಸಂಗೀತದಲ್ಲಿ ಆವರಿಸಿರುವ ಶೂನ್ಯ ಬೇಗನೆ ಮಾಯವಾಗಿ ಮತ್ತೆ ಚೇತರಿಸಿಕೊಳ್ಳಲಿ, ನೀವೇ ಬೆಳೆಸಿರುವ ಪ್ರತಿಭೆಗಳು ನೀವೇರಿದ ಎತ್ತರಕ್ಕೆ ಏರುವಂತಾಗಲಿ. ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ನಾಡಿನಲ್ಲಿ. ಏಕೆಂದರೆ ನಿಮ್ಮಂತವರೊಬ್ಬರು ನಮಗೆ ಬೇಕು ಹಾಡಲು...ಹಾಡಿಸಲು.........

    ನಿಮ್ಮ ನೊಂದ ಅಭಿಮಾನಿ

    ಉದಯ್ ಇಟಗಿ

    ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

  • ಗುರುವಾರ, ಡಿಸೆಂಬರ್ 24, 2009
  • ಬಿಸಿಲ ಹನಿ
  • ವಿಷಯ ಸೂಚನೆ: ಈ ಲೇಖನವನ್ನು ನನ್ನ ಬ್ಲಾಗಿನ ಒಂದು ವರುಷದ ಹುಟ್ಟುಹಬ್ಬದ ವಿಶೇಷತೆಗಾಗಿ ಸಿದ್ಧಪಡಿಸಿದ್ದೆ. ಆದರೆ ಹುಟ್ಟುಹಬ್ಬದ ಲೇಖನ ಮತ್ತು ಈ ಲೇಖನಗಳೆರಡೂ ಸೇರಿ ಓದಲು ತುಂಬಾ ದೊಡ್ಡದಾಗುತ್ತದೆಂದು ಇಂದು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

    ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960), “Arrow of God” (1964), “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952), "Dead Men's Path" (1953), “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

    ಚೀನು ಅಚಿಬೆಯು ಕಾದಂಬರಿಗಳನ್ನು ಬರೆಯುವದರಲ್ಲಿ ಪ್ರಸಿದ್ಧಿ ಪಡೆದಷ್ಟೆ ಸಣ್ಣ ಕಥೆಗಳನ್ನು ಬರೆಯುವದರಲ್ಲಿಯೂ ಸಹ ಎತ್ತಿದ ಕೈ. ಆತನ ಬಹಳಷ್ಟು ಕಥೆಗಳು ಗಾತ್ರ ಮತ್ತು ರಚನೆಯಲ್ಲಿ ಚಿಕ್ಕದಾಗಿದ್ದರೂ ಅಗಾಧವಾದದ್ದನ್ನೇನೋ ಹೇಳುತ್ತವೆ. ಅಂಥ ಕಥೆಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಚರ್ಚಿಸುವಂತೆ ಮಾಡುವ ಕಥೆ “ಡೆಡ್ ಮೆನ್ಸ್ ಪಾಥ್”. ಘಟನೆಯಿಂದ ಘಟನೆಗೆ ಬಹಳಷ್ಟು ವಿವರಣೆಗಳಿಲ್ಲದೆ ಬೇಗ ಬೇಗನೆ ಸಾಗುವ ಈ ಕಥೆ ಕೊನೆಯಲ್ಲಿ ಓದುಗರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಈ ಕಥೆಯು ಆಧುನಿಕತೆ ಮತ್ತು ಸಾಂಪ್ರದಾಯಕತೆಯ ನಡುವಿನ ತಿಕ್ಕಾಟವನ್ನು ಹೇಳುತ್ತದೆ.

    ಕಥೆ ಆರಂಭವಾಗುವದು ಆಫ್ರಿಕಾದ ಯಾವುದೋ ಒಂದು ಭಾಗದಲ್ಲಿ. ಅದರ ಕಥಾನಾಯಕ ಮೈಕೆಲ್ ಓಬಿ ಉನ್ನತ ವ್ಯಾಸಾಂಗವನ್ನು ಮುಗಿಸಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ದಕ್ಷ ಹಾಗೂ ನಿಷ್ಟಾವಂತತನಕ್ಕೆ ಹೆಸರುವಾಸಿಯಾಗಿರುತ್ತಾನೆ. ಇದೇ ಕಾರಣಕ್ಕೆ ಅತ್ಯಂತ ಹಿಂದುಳಿದ ಶಾಲೆಯಾದ ಎನ್ಡುಮೆ ಸೆಂಟ್ರಲ್ ಶಾಲೆಯ ಮುಖ್ಯಸ್ತರು ಅದನ್ನು ಮುಂದೆ ತರಲು ಓಬಿ ಸೂಕ್ತವಾದ ವ್ಯಕ್ತಿಯೆಂದು ಪರಿಗಣಿಸಿ ಅವನನ್ನು ಅದರ ಹೆಡ್ ಮಾಸ್ಟರನ್ನಾಗಿ ನೇಮಿಸುತ್ತಾರೆ. ಅವನಲ್ಲಿ ಹೊಸ ಹೊಸ ವಿಚಾರಗಳಿದ್ದವು ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂಬ ದೂರದೃಷ್ಟಿ ಅವನಲ್ಲಿತ್ತು. ಇದೀಗ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಓಬಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದರಿಂದ ಅತಿ ಉತ್ಸುಕತೆಯಿಂದ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಅವನಲ್ಲಿ ಎರಡು ಗುರಿಗಳಿದ್ದವು. ಮೊದಲನೆಯದು ತನ್ನ ಶಾಲೆಯಲ್ಲಿ ಅತಿ ಉನ್ನತ ಕಲಿಕಾ ವಿಧಾನಗಳನ್ನು ಪರಿಚಯಿಸುವದು. ಎರಡನೆಯದು ಇಡಿ ಶಾಲೆಯ ಕೌಂಪೊಂಡನ್ನು ಹೂದೋಟಗಳಿಂದ ಅಲಂಕರಿಸುವದು. ಆ ನಿಟ್ಟಿನಲ್ಲಿ ಅವನು ಕಾರ್ಯೋನ್ಮುಖನಾಗುತ್ತಾನೆ.

    ಒಂದು ದಿವಸ ಹೂದೋಟಗಳನ್ನು ಪರಿಶೀಲಿಸುವಾಗ ಕೌಂಪೊಂಡಿನೊಳಗೆ ಹೆಂಗಸೊಬ್ಬಳು ನಡೆದುಹೋಗುತ್ತಾಳೆ. ಇವಳೇಕೆ ಕೌಂಪೊಂಡಿನೊಳಗೆ ನಡೆದುಹೊಗುತ್ತಿದ್ದಾಳೆ ಎಂದು ಹತ್ತಿರ ಹೋಗಿ ನೋಡುತ್ತಾನೆ. ಅಲ್ಲಿ ಆಗಲೇ ಬಳಸಿಬಿಟ್ಟ ಕಾಲುದಾರಿಯೊಂದು ನಿರ್ಮಾಣವಾಗಿದೆ. ನೀವೇಕೆ ಈ ಊರಿನವರನ್ನು ಇಲ್ಲಿ ಹಾದುಹೋಗಲು ಅಪ್ಪಣೆ ನೀಡಿದಿರಿ ಎಂದು ಅಲ್ಲಿ ಅದಾಗಲೇ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಕೇಳುತ್ತಾನೆ. ಅದಕ್ಕವನು “ಹಿಂದೆ ನಾವು ಈ ದಾರಿಯನ್ನು ಮುಚ್ಚುಹಾಕಲು ಪ್ರಯತ್ನಿಸಿದಾಗ ನಮ್ಮ ಮತ್ತು ಊರಿನವರ ನಡುವೆ ದೊಡ್ದ ಜಗಳವೇ ಆಯಿತು. ಏಕೆಂದರೆ ಈ ಹಾದಿ ಊರಿನ ದೇವಸ್ಥಾನವನ್ನು ಮತ್ತು ಸ್ಮಶಾಣವನ್ನು ಒಂದುಗೂಡಿಸುವದರಿಂದ ಅವರಿಗೆ ಬಹಳ ಮುಖ್ಯವಾಗಿದೆ ” ಎಂದು ಹೇಳುತ್ತಾನೆ. “ಅದಕ್ಕೂ ಇದಕ್ಕೂ ಏನು ಸಂಬಂಧ? ಅದಲ್ಲದೆ ಇದು ನಡೆದಿದ್ದು ಹಿಂದೆ. ಈಗ ಹೀಗಾಗಲು ಸಾಧ್ಯವಿಲ್ಲ” ಎಂದು ಮಾರನೇ ದಿವಸವೇ ಆ ಹಾದಿಯನ್ನು ಮುಚ್ಚಿಹಾಕುತ್ತಾನೆ. ಈ ಘಟನೆಯ ಮಾರನೇ ದಿವಸವೇ ಆ ಊರಿನ ಪೂಜಾರಿ ಶಾಲೆಗೆ ಬಂದು ಓಬಿಯನ್ನು ಮತ್ತೆ ಆ ಹಾದಿಯನ್ನು ತೆರೆಯುವಂತೆ ಆಗ್ರಹಿಸುತ್ತಾನೆ. ಆದರೆ ಓಬಿ ಇದಕ್ಕೆ ಒಪ್ಪುವದಿಲ್ಲ. “ಈ ದಾರಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ನೀಡುವದು. ಅದಲ್ಲದೆ ನಮ್ಮ ಮಕ್ಕಳು ಹುಟ್ಟಿ ಬರುವದು ಈ ದಾರಿಯಿಂದಲೇ.” ಎಂದು ಹೇಳಿ ಪೂಜಾರಿ, ಓಬಿಯ ಮನವೊಲಿಸಲು ನೋಡುತ್ತಾನೆ. ಆದರೆ ಓಬಿ ಅವನಿಗೆ “ಇಂಥ ಮೂಢನಂಬಿಕೆಗಳನ್ನು ನಾವು ನಂಬುವದಿಲ್ಲ. ಇಂಥ ಕಂದಾಚಾರಗಳನ್ನು ನಮ್ಮ ಶಾಲೆಯ ಮಕ್ಕಳು ನೋಡಿ ನಗುವಂತೆ ಮಾಡುವದೇ ನಮ್ಮ ಉದ್ದೇಶ. ಈ ಹಾದಿಯನ್ನು ಮತ್ತೆ ತೆರೆಯಲಾಗುವದಿಲ್ಲ. ಬೇಕಾದರೆ ಕೌಂಪೊಂಡಿನಿಂದಾಚೆ ಈ ದಾರಿಯನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿ ಅವನನ್ನು ಲೇವಡಿಮಾಡಿ ಕಳಿಸುತ್ತಾನೆ. ಸರಿಯೆಂದು ಊರಿನ ಪೂಜಾರಿ ಹೊರಟುಹೋಗುತ್ತಾನೆ. ಇದಾಗಿ ಎರಡು ದಿವಸಗಳ ನಂತರ ಆ ಊರಿನಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೇನಿರಬಹುದೆಂದು ಜೋತಿಸಿಯೊಬ್ಬರನ್ನು ಊರಿನವರು ಕೇಳಿದಾಗ ಪೂರ್ವಿಕರ ಹಾದಿಯನ್ನು ಮುಚ್ಚಿದ್ದರಿಂದ ಹೀಗಾಗಿದೆ ಎಂಬ ಉತ್ತರ ಬರುತ್ತದೆ. ಮಾರನೇ ದಿವಸ ಓಬಿ ಎದ್ದು ನೋಡುತ್ತಾನೆ ಶಾಲೆಯ ಅವಶೇಷಗಳು ಬಿದ್ದಿದ್ದವು. ಹಿಂದಿನ ರಾತ್ರಿ ಊರಿನ ಜನರು ಬಿದಿರಿನ ಕಡ್ದಿಗಳನ್ನು ಕಿತ್ತೆಸೆದು ಮತ್ತೆ ಆ ಹಾದಿಯನ್ನು ತೆರೆದಿದ್ದರು. ಅಲ್ಲದೇ ಹೂದೋಟಗಳನ್ನು ಹಾಳುಮಾಡಿದ್ದರು. ಶಾಲೆಯ ಕಟ್ಟಡವೊಂದನ್ನು ಸಹ ಕೆಡುವಿದ್ದರು. ಅದೇ ದಿವಸ ಸ್ಕೂಲ್ ಇನ್ಸ್ಪೆಕ್ಟರ್ ಶಾಲೆಯ ತಪಾಷಣೆಗಾಗಿ ಬರುತ್ತಾನೆ. ಸ್ಕೂಲ್ ಇನ್ಸ್ಪೆಕ್ಟರ್ ಅಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ನೋಡಿ ಶಾಲೆಯ ಬಗ್ಗೆ ಮಾತ್ರವಲ್ಲದೆ ಓಬಿಯು ಬುಡಕಟ್ಟು ಜನಾಂಗದವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸಲು ಕಾರಣನಾಗಿದ್ದಾನೆ ಎಂದು ಅವನ ಬಗ್ಗೆಯೂ ಸಹ ಕೆಟ್ಟ ವರದಿಯೊಂದನ್ನು ನೀಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಮೈಕೆಲ್ ಓಬಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿ.

    ಇಲ್ಲಿ ಯಾವುದೇ ಬದಲಾವಣೆಯನ್ನು ಶಿಘ್ರದಲ್ಲಿ ತರಲಾಗುವದಿಲ್ಲ ಮತ್ತು ಅದನ್ನು ತರುವದಾದರೆ ಹಂತ ಹಂತವಾಗಿ ಜನರ ಭಾವನೆಗಳಿಗೆ ನೋವಾಗದಂತೆ ತಂದರೆ ಒಳ್ಳೆಯದು ಎನ್ನುವದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಈ ಮೂಲಕ ಮೈಕೆಲ್ ಓಬಿ ಮತ್ತು ಊರ ಜನರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಓಬಿ ಆಧುನಿಕತೆಯನ್ನು ಪ್ರತಿನಿಧಿಸಿದರೆ ಊರಿನ ಪೂಜಾರಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ನಡುವಿನ ತಿಕ್ಕಾಟವೇ ಕಥೆಯ ತಿರುಳು. ಮೈಕೆಲ್ ಓಬಿಯು ತಾನಂದುಕೊಂಡಿದ್ದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೊರಡುತ್ತಾನೆ ಮತ್ತು ಹಾಗೆ ಬದಲಾವಣೆಯನ್ನು ತರಬೇಕಾದರೆ ಆತ ತನ್ನ ಸಹಚರರ ಮೇಲೆ ಅದು ಯಾವ ಪರಿಣಾಮ ಬೀರಬಹುದು ಎಂದು ಯೋಚಿಸುವದೇ ಇಲ್ಲ. ಈ ನಿಟ್ಟಿನಲ್ಲಿ ತುಂಬಾ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ.

    ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್‍ದ್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು. ನಾಟಕದಲ್ಲಿನ ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. ಆದರೆ ಅದು ಅವನ ಅನುಯಾಯಿಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವದನ್ನು ಯೋಚಿಸುವದೇ ಇಲ್ಲ. ಈ ಅಸಮಾಧನದ ಹೊಗೆಯೊಂದಿಗೆ ಅವರು ಅವನ ಬದಲಾವಣೆಯನ್ನು ಸಹಿಸಿಕೊಳ್ಳುತ್ತಾರೆ. ಮುಂದೆ ಇದು ಒಬ್ಬರ ನಂತರ ಒಬ್ಬರ ಶರಣರ ತಲೆದಂಡಕ್ಕೆ ಕಾರಣವಾಗುತ್ತದೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ. ಅದೇ ರೀತಿ ತುಘಲಕ್ ನಾಟಕದಲ್ಲಿ ಮೊಹಮ್‍ದ್ ಬೀನ್ ತುಘಲಕ್‍ನನ್ನು ಗಿರೀಶ್‍ರು ಒಬ್ಬ ದಕ್ಷ, ಚತುರ ಆಡಳಿತಗಾರನನ್ನಾಗಿ ಚಿತ್ರಿಸಿದ್ದಾರೆ. ಅವನು ಹಿಂದೂ- ಮುಸ್ಲಿಂರ ಏಕತೆಗಾಗಿ ಶ್ರಮಿಸುವದು, ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವದು, ನಾಣ್ಯಗಳನ್ನು ಬದಲಾಯಿಸುವದು ಎಲ್ಲವನ್ನು ಪ್ರಜೆಗಳ ಒಳಿತಿಗಾಗಿ ಮಾಡುತ್ತಾನೆ. ಆದರೆ ಅವನ ಪ್ರಜೆಗಳು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದರಿಂದ ಅವನ ಕೆಲಸಗಳು ಅವನ ಅವನತಿಗೆ ಕಾರಣವಾಗುತ್ತವೆ. ಇದು ನಾಟಕದ ಕೊನೆಯಲ್ಲಿನ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಇವರಿಬ್ಬರ ಶೀಘ್ರ ಬದಲಾವಣೆಗಳು ಅವರಿಗೇ ಮುಳುವಾಗುವಂತೆ ಓಬಿಯ ಶೀಘ್ರ ಬದಲಾವಣೆಗಳು ಸಹ ಅವನಿಗೇ ಮುಳುವಾಗುತ್ತವೆ.

    ಹಾಗಿದ್ದರೆ ನಮಗೆಲ್ಲಾ ಬದಲಾವಣೆ ಬೇಡವಾ? ಖಂಡಿತ ಬೇಕು. ಆದರೆ ಅದು ಜನರ ಸಹಕಾರದೊಂದಿಗೆ ನಿಧಾನಗತಿಯಲ್ಲಿ ಆದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುವದನ್ನು ಕಥೆ ಒತ್ತಿ ಹೇಳುತ್ತದೆ.

    (ಈ ಕಥೆಯ ಅನುವಾದವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಿ)
    -ಉದಯ್ ಇಟಗಿ

    ಹ್ಯಾಪಿ ಬರ್ಥಡೆ ಟು ಯೂ “ಬಿಸಿಲ ಹನಿ”

  • ಬಿಸಿಲ ಹನಿ
  • ಮೊಟ್ಟ ಮೊದಲಿಗೆ ನಿಮಗೊಂದು ಸಂತಸದ ವಿಚಾರವನ್ನು ಹೇಳುತ್ತೇನೆ. ಇಂದಿಗೆ ಅಂದರೆ ಡಿಸೆಂಬರ್ 24 ಕ್ಕೆ ನಾನು ಬ್ಲಾಗ್ ಆರಂಭಿಸಿ ಒಂದು ವರ್ಷವಾಯಿತು. ಹ್ಯಾಪಿ ಬರ್ಥಡೇ ಟು ಯೂ ‘ಬಿಸಿಲ ಹನಿ’. ನೋಡ ನೋಡುತ್ತಿದ್ದಂತೆಯೇ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ನನಗೆ ಸಾಕಷ್ಟು ಬ್ಲಾಗ್ ಗೆಳೆಯರನ್ನು ಹಾಗೂ ನನ್ನದೇ ಆದಂಥ ಸಾಂಸ್ಕೃತಿಕ ವಲಯವೊಂದನ್ನು ತಂದುಕೊಟ್ಟಿದೆ.

    ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ 24. 2008ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಜೀವದ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನೂ ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು.

    ಯಾರ ಹಂಗಿಗೊಳಗಾಗದೆ, ಯಾವುದೇ ಮುಲಾಜಿಲ್ಲದೆ ನಮಗನಿಸಿದ್ದನ್ನು ಬರೆಯಲು ಹುಟ್ಟಿಕೊಂಡ ಬ್ಲಾಗಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಾನು ಈಗಾಗಲೆ ಹೇಳಿದಂತೆ ಅದು ನನ್ನೊಳಗಿನ ಬರಹಗಾರನನ್ನು ಬಡಿದೆಬ್ಬಿಸಿದೆ. ನನಗೆ ನನ್ನದೆ ಆದ ಬರಹಗಾರರ ವಲಯವನ್ನು ನಿರ್ಮಿಸಿಕೊಟ್ಟಿದೆ. ಸಮಾನ ಆಸಕ್ತರು, ಸಮಾನ ದುಃಖಿಗಳು, ಒಳ್ಳೊಳ್ಳೆ ಸ್ನೇಹಿತರನ್ನು ಕಟ್ಟಿಕೊಟ್ಟಿದೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಂಥ ಚಡಪಡಿಕೆ. ಈ ನಿಟ್ಟಿನಲ್ಲಿ ನಾನು ಇಷ್ಟರಮಟ್ಟಿಗೆ ಬೆಳೆಯಲು ಪ್ರೋತ್ಸಾಹಿಸಿದ ನನ್ನ ಸಹ ಬ್ಲಾಗಿಗರಿಗೆ, ಸ್ನೇಹಿತರಿಗೆ, ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

    ಹಾಗೆ ನೋಡಿದರೆ ನಾನು ಇದನ್ನು ಬರೆಯಬೇಕೋ ಬೇಡವೋ ಎನ್ನುವ ಗೊಂದಲದೊಳಗೆ ಅಂಥ ಗಟ್ಟಿಯಾದದ್ದೇನೂ ಬರೆದಿಲ್ಲ. ಇನ್ನು ಮುಂದೆ ಅನುವಾದದ ಜೊತೆಗೆ ಸ್ವಂತದ್ದೇನಾದರು ಬರೆಯಬೇಕೆಂದು ನಿರ್ಧರಿಸುವೆ. ಆದರೆ ಬರೆಯಬೇಕೋ ಬೇಡವೂ ಎನ್ನುವ ಗೊಂದಲ ಇದ್ದೇ ಇರುತ್ತದೆ. ಅದು ನನ್ನೊಬ್ಬನನ್ನು ಮಾತ್ರವಲ್ಲ ಎಲ್ಲ ಬರಹಗಾರರನ್ನು ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಗೊಂದಲಗಳೊಂದಿಗೆ ಸದಾ ಬದುಕುತ್ತಲೇ ಇರುತ್ತೇವೆ. ಆ ಗೊಂದಲಗಳನ್ನು ಸೀಳಿಕೊಂಡು ನಮ್ಮ ಬರಹದಲ್ಲಿ ಸ್ಪಷ್ಟವಾಗುತ್ತಾ ಹೋಗಬೇಕು. ಹಾಗಾಗಲು ಸಾಧ್ಯವೇ? ಹಾಗಾಗುತ್ತೇನೆಯೇ? ಗೊತ್ತಿಲ್ಲ.

    ನಿಮ್ಮೆಲ್ಲ ಪ್ರೀತಿ, ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನ ಮುಂದಿನ ಬರಹದೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬೈ, ಬೈ.

    -ಉದಯ್ ಇಟಗಿ

    ಉಣ್ಣಿಕಥಾ

  • ಬುಧವಾರ, ಡಿಸೆಂಬರ್ 16, 2009
  • ಬಿಸಿಲ ಹನಿ
  • ಕಥಾ ಹಿನ್ನೆಲೆ: "ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.



    ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

    ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.



    “ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.


    ಮುಠಾಶಿ ಆಗಷ್ಟೆ ತನ್ನ ರಾತ್ರಿಯ ಮಿತವಾದ ಗಂಜಿ ಊಟವನ್ನು ಮುಗಿಸಿ ಸಂತೃಪ್ತಿಯಿಂದ ಎಲೆ ಅಡಿಕೆಯನ್ನು ಜಗಿಯುತ್ತಾ ಅದರ ರಸಸ್ವಾದವನ್ನು ಹೀರುತ್ತಾ ಕುಳಿತಿದ್ದಳು. ಈಗ ಉಣ್ಣಿಗಾಗಿ ಕಾಯಹತ್ತಿದಳು. ಉಣ್ಣಿಯ ಕಥೆಯನ್ನು ಕೇಳದೇ ಮುಠಾಶಿಗೆ ನಿದ್ರೆಯೇ ಬರುತ್ತಿರಲಿಲ್ಲ. ಉಣ್ಣಿ ಬರುವ ಸೂಚನೆಗಳು ಕಾಣದೆ ಹೋದಾಗ ತೆರೆದಿಟ್ಟ ಬಾಗಿಲಿನೊಳಗೆ ಇಣುಕುತ್ತಾ ಮತ್ತೊಮ್ಮೆ ಅವನನ್ನು ಕೂಗಿದಳು “ಬಾ ಉಣ್ಣಿ”. ಅವಳು ಅವನ ಕಥೆ ಕೇಳುವದಕ್ಕೆ ಪರಿತಪಿಸುತ್ತಿದ್ದಳು.


    “ಉಣ್ಣಿ ಹೋಂ ವರ್ಕ್ ಮಾಡ್ತಿದಾನೆ. ಶಾಲೆಯಲ್ಲಿ ಈಗಾಗಲೇ ಅವನ ಕ್ಲಾಸುಗಳು ಜೋರಾಗಿ ಸಾಗಿವೆ. ಅದಲ್ಲದೆ ಅವನದು ಈಗ ಎರಡನೇ ಕ್ಲಾಸು ಬೇರೆ.” ಅವನ ತಾಯಿ ಮುಠಾಶಿಯನ್ನು ಎಚ್ಚರಿಸಿದಳು.
    “ಉಣ್ಣಿ, ಒಂದೇ ಒಂದು ಸಣ್ಣಕತಿ ಹೇಳು ಸಾಕು. ಅದೇ ಉಣ್ಣಿಕಥಾ!” ಮುಠಾಶಿ ಬೇಡಿದಳು. ಅವಳು ಗೋಡೆಗೊರಗಿ ಕಾಲುಚಾಚಿಕೊಂಡು ಮಂಚದ ಮೇಲೆ ಕುಳಿತಿದ್ದಳು. ಕೋಣೆಯಲ್ಲಿ ಕಡಿಮೆ ಪ್ರಕಾಶಮಾನವುಳ್ಳ ಬಲ್ಬ್ ಇದ್ದುದರಿಂದ ಅಲ್ಲಿ ಮಬ್ಬು ಮಬ್ಬಾದ ಬೇಳಕಿತ್ತು.


    “ಅಮ್ಮಾ, ಉಣ್ಣಿ ಯಾವಾಗ್ಲೂ, ದಿನಾಲೂ ಹೇಗೆ ತಾನೆ ಕತಿ ಹೇಳ್ತಾನೆ? ಅವನೀಗ ಹೋಂ ವರ್ಕ್ ಮಾಡಬೇಕು”


    “ಇದೇ ಕಡೇದ್ದು ಮಗಳೇ, ಇನ್ಮುಂದೆ ಕೇಳಲ್ಲ”
    “ಅಮ್ಮಾ, ನಿನ್ನೆನೂ ನೀನು ಹೀಗೆ ಹೇಳಿರಲಿಲ್ವಾ?”


    ಮುಠಾಶಿ ಅಪರಾಧಿ ಪ್ರಜ್ಞೆಯಿಂದ ತನ್ನ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿದಳು. ಅವಳಿಗೆ ವಯಸ್ಸಾಗಿದ್ದರಿಂದ ಅವಳ ದೇಹವೆಲ್ಲಾ ಸುಕ್ಕುಗಟ್ಟಿ ಹೋಗಿತ್ತು. ಇದೀಗ ಚಿಕ್ಕ ಮಗುವಿನಂತೆ ಸಪ್ಪೆ ಮುಖ ಮಾಡಿ ಕುಳಿತಿದ್ದನ್ನು ನೋಡಿ ಉಣ್ಣಿಯ ಅಮ್ಮನ ಮನಸ್ಸು ಕರಗಿತು.


    “ಉಣ್ಣಿ, ಹೋಗು ಮುಠಾಶಿಗೆ ಕಥೆ ಹೇಳು ಹೋಗು. ಅವಳನ್ನು ಮಲಗಿಸಿದ ಮೇಲೆ ನಿನ್ನ ಹೋಂ ವರ್ಕ್ ಮಾಡುವಂತಿ”


    ತನ್ನ ಅಜ್ಜಿಗೆ ಬೇಗನೆ ನಿದ್ರೆ ಬರಲೆಂದು ಉಣ್ಣಿ ಮನದಲ್ಲಿಯೇ ಪ್ರಾರ್ಥಿಸಿದ. ಗಂಟೆ ಅದಾಗಲೇ 9.30 ಆಗಿತ್ತು.


    ಈಗ ಉಣ್ಣಿ ಬಂದು ಮುಠಾಶಿಯ ಪಕ್ಕ ಕುಳಿತ. ಅವಳ ಮುಖ ಖುಶಿಯಿಂದ ಹೊಳೆಯತೊಡಗಿತು. ದಿನಾ ರಾತ್ರಿ ಮುಠಾಶಿ ಉಣ್ಣಿಯ ಕಥೆಯನ್ನು ಕೇಳದೇ ಮಲಗುವದಿಲ್ಲ. ಅದವಳಿಗದು ಒಂದು ರೀತಿಯ ಅಭ್ಯಾಸವಾಗಿದೆ. ಕೆಟ್ಟ ಅಭ್ಯಾಸ! ಅದನ್ನು ಬಿಡಬೇಕೆಂದರೂ ಅವಳ ಕೈಯಿಂದ ಇನ್ನೂ ಸಾಧ್ಯವಾಗಿಲ್ಲ.


    “ನಿನಗೆ ಎಂಥಾ ಕತಿ ಬೇಕು, ಮುಠಾಶಿ?”


    “ಚನ್ನಾಗಿರೋದು ಯಾವದೋ ಒಂದು, ನಂಗೆ ನಿದ್ರೆ ತರುವಂಥದ್ದು”


    “ಹಾಗಾದರೆ, ಗಾಜಿನ ಮರದ ಕತೆ ಹೇಳಲೆ?”


    “ಹೂಂ”


    ಉಣ್ಣಿ ಮುಠಾಶಿಯ ಕಡೆ ಸರಿಯುತ್ತಾ ತದೇಕಚಿತ್ತದಿಂದ ತನ್ನ ಮುಂದಿರುವ ಗೋಡೆಯನ್ನೇ ನೋಡುತ್ತಾ ಕುಳಿತ. ಅದೊಂದು ಖಾಲಿ ಗೋಡೆ. ಅಲ್ಲಿ ಯಾವುದೇ ಫೋಟೊಗಳಾಗಲಿ, ಅಲಂಕಾರಿಕ ವಸ್ತುಗಳಾಗಲಿ ಇರಲಿಲ್ಲ. ಈಗ ಆ ಗೋಡೆಯ ಮೇಲೆ ಮೊಟ್ಟಮೊದಲಿಗೆ ಮೋಟುಮೋಟಾದ ಮನುಷ್ಯನ ಚಿತ್ರವೊಂದು ಮೂಡಿತು. ಆ ಮನುಷ್ಯನ ಕಿವಿಯಲ್ಲಿ ಚಿನ್ನದಿಂದ ಮಾಡಿದ ದಪ್ಪ ದಪ್ಪನಾದ ಓಲೆಗಳಿದ್ದವು. ಮಾತ್ರವಲ್ಲ ಅವನ ಮೋಟುಮೊಟಾದ ಬೆರಳುಗಳಲ್ಲೂ ಸಹ ಚಿನ್ನದ ಉಂಗುರಗಳಿದ್ದವು.


    “ಮುಠಾಶಿ, ಅಗೋ ಅಲ್ಲಿ ನೋಡು. ಅದು ಕುರುಮಾನ್ ಪಣಿಕ್ಕನ್”


    ಗೋಡೆಯ ಮೇಲೆ ಮೂಡಿರುವ ಮನುಷ್ಯನ ಚಿತ್ರವನ್ನು ಉದ್ದೇಶಿಸಿ ಉಣ್ಣಿ ಹೇಳಿದ. ಅಷ್ಟರಲ್ಲಿ ಪಲ್ಲಕ್ಕಿಯೊಂದು ಗೋಡೆಯ ಮೇಲೆ ಅಡ್ದಲಾಗಿ ಹೋಯಿತು. ಕೈಯಲ್ಲಿ ಬೀಸಣಿಗೆಯೊಂದನ್ನು ಹಿಡಿದುಕೊಂಡು ಕುರುಮಾನ್ ಆ ಪಲ್ಲಕಿಯಲ್ಲಿ ತುಸು ಗಂಭೀರವಾಗಿ ಕುಳಿತಿದ್ದಾನೆ. ಅದರ ಸುತ್ತಲೂ ಅವನ ಪರಿಚಾರಕರಿದ್ದಾರೆ. ಮುಂದೆ ಮುಂದೆ ಒಬ್ಬ ಪಂಜನ್ನು ಹಿಡಿದು ಬಂಗಾರದ ಬೆಳಕನ್ನು ಬೀರುತ್ತಾ ನಡೆಯುತ್ತಿದ್ದಾನೆ.


    “ಉಣ್ಣಿ, ಕುರುಮಾನ್ ಪಣಿಕ್ಕನ್ ಎಲ್ಲಿಗೆ ಹೋಗುತ್ತಿದ್ದಾನೆ?”


    “ಸಂಪಿಗೆ ಮರದ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾನೆ”


    ತಕ್ಷಣ ಆ ಬಿಳಿಗೋಡೆಯ ಮೇಲೆ ದೊಡ್ದದೊಂದು ಹಸಿರು ಹಸಿರಾದ ಸಂಪಿಗೆ ಮರ ಅರಳಿ ನಿಂತಿತು. ಆ ಮರವು ಸಂಪೂರ್ಣವಾಗಿ ಹೂಗಳಿಂದ ತುಂಬಿ ಹೋಗಿದ್ದರಿಂದ ಅವುಗಳ ಭಾರಕ್ಕೆ ಮರವು ತುಸು ಬಾಗಿದಂತೆ ಭಾಸವಾಯಿತು. ಆ ಸಂಪಿಗೆ ಮರದ ಹೂಗಳ ಸುಗಂಧ ಗಾಳಿಯಲ್ಲಿ ಸೇರಿಕೊಂಡು ಇಡಿ ವಾತಾವರಣ ಮತ್ತಷ್ಟು ಆಹ್ಲಾದಕರಗೊಂಡಿತ್ತು.


    ಕುರುಮಾನ್‍ನ ಸೇವಕರು ಪಲ್ಲಕ್ಕಿಯನ್ನು ಮೆಲ್ಲಗೆ ಮರದ ಮುಂದೆ ಇರಿಸಿದರು. ಕುರುಮಾನ್ ಪಣಿಕ್ಕನ್ ತನ್ನ ಬಲಗಡೆಯಿಂದ ಕೆಳಗಿಳಿದ. ತಕ್ಷಣ ಒಬ್ಬ ಸೇವಕ ಓಡಿ ಬಂದು ಅವನ ಕೈಯಲ್ಲಿದ್ದ ಬೀಸಣಿಗೆಯನ್ನು ತೆಗೆದುಕೊಂಡು ಪಲ್ಲಕ್ಕಿಯಲ್ಲಿಟ್ಟ. ನಸುಕಿನ ತಂಗಾಳಿಗೆ ಮರದ ಎಲೆಗಳು ಅಲುಗಾಡಿದವು. ಕುರುಮಾನ್ ಎಲ್ಲಿಗಾದರು ಹೋಗಬೇಕಾದರೆ ಸದಾ ತನ್ನ ಜೊತೆಯಲ್ಲಿ ಬೀಸಣಿಗೆಯನ್ನು ಒಯ್ಯುತ್ತಿದ್ದ-ಅದು ಮಳೆಗಾಲವಾದರೂ ಸರಿಯೇ!


    ಆ ಸಂಪಿಗೆ ಮರದ ಬುಡದಲ್ಲಿ ಸಣ್ಣದೊಂದು ಕಟ್ಟೆಯಿತ್ತು. ಆ ಕಟ್ಟೆಯ ಮೇಲೆ ಮೂರ್ತಿಯೊಂದನ್ನು ಇರಿಸಲಾಗಿತ್ತು. ಅದು ಎಣ್ಣೆಗಟ್ಟಿತ್ತು. ಕುರುಮಾನ್ ಪಣಿಕ್ಕನ್ ಪೂಜೆ ಸಲ್ಲಿಸಿದ ಮೇಲೆ ತನ್ನ ಎರಡೂ ಹಸ್ತಗಳನ್ನು ಜೋಡಿಸಿ ಕಾವಿಲಮ್ಮನಿಗೆ ನಮಸ್ಕರಿಸಿದ. ಕಾವಿಲಮ್ಮನ ಪಕ್ಕ ಯಾವುದೋ ಪುರಾತನ ಕಾಲದ ಪಣತಿಯೊಂದು ಉರಿಯುತ್ತಿತ್ತು. ಅದರ ಬೆಳಕು ಸ್ವಲ್ಪ ಹೆಚ್ಚೇ ಇತ್ತು.


    “ಉಣ್ಣಿ, ಯಾರದು?”


    ಚನ್ನಾಗಿರುವ ಉಡುಪಧಾರಿಯೊಬ್ಬ ಆ ಬಿಳಿ ಗೋಡೆಯ ಮೇಲೆ ಮೂಡಿದ. ಅವನು ಅಂಗಿ ಧರಿಸಿದ್ದ. ಕೂದಲನ್ನು ನೀಟಾಗಿ ಕತ್ತರಿಸಿ ಬಾಚಿದ್ದ. ಆದರೆ ಅಲ್ಲಿರುವರೆಲ್ಲರೂ ತಮ್ಮ ಕೂದಲನ್ನು ಬಾಚಿ ತುರುಬಿನಂತೆ ಗಂಟು ಕಟ್ಟಿದ್ದರಿಂದ ಅವರ ಮಧ್ಯ ಈ ವ್ಯಕ್ತಿ ಅಪರಿಚಿತನಂತೆ ಕಂಡ.


    “ಅವನು ಮೆಲಕ್ಕೋರನ್. ಮಸಿದಿ ಮಂದಿರಗಳನ್ನು ಕಟ್ಟುವವ.” ಉಣ್ಣಿ ಹೇಳಿದ.
    ಮೆಲಕ್ಕೋರನ್, ಕುರುಮಾನ್ ಪಣಿಕ್ಕನ್ ಇರುವಲ್ಲಿಗೆ ನಡೆದುಬಂದು ತಲೆ ಬಗ್ಗಿಸಿ ತನ್ನ ಎರಡೂ ಕೈಗಳನ್ನು ಜೋಡಿಸಿ ಅತ್ಯಂತ ಗೌರವದಿಂದ ನಮಸ್ಕರಿಸಿದ.


    ಪೂರ್ವದ ದಿಗಂತ ಕಳೆಗುಂದುತ್ತಿತ್ತು.
    “ಯಾರು ನೀನು?”


    “ನಾನು ಪಶ್ಚಿಮ ದೇಶದವನು. ಒಬ್ಬ ಮೇಸ್ತ್ರಿ. ಮೆಲಕ್ಕೋರನ್ ನನ್ನ ಹೆಸರು”


    “ನಿನಗೇನು ಬೇಕು?”


    “ಕೆಲಸ”


    ಪಣಿಕ್ಕನ್ ತನ್ನ ಆಪ್ತಸಲಹಾಗಾರನತ್ತ ನೋಡಿದ. ಆ ಪಂಜಿನ ಬೆಳಕಲ್ಲಿ ಅವನು ತನ್ನ ತಲೆ ಅಲ್ಲಾಡಿಸುತ್ತಿರುವದು ಕಾಣಿಸಿತು.
    ಒಡನೆಯೇ ಸಂಪಿಗೆ ಮರದ ಎಲೆಗಳು ಚರಚರನೆ ಸದ್ದು ಮಾಡಿದವು. ಅದರಲ್ಲಿದ್ದ ಬಣ್ಣ ಬಣ್ಣದ ಪಕ್ಷಿಗಳು ತಮ್ಮ ನಿದ್ರೆಯಲ್ಲಿಯೇ ಒಮ್ಮೆ ಕದಲಿದವು. ಗೂಡಿನಲ್ಲಿದ್ದ ಮೊಟ್ಟೆಗಳು ಗಾಳಿಯಲ್ಲಿ ಏನನ್ನೋ ಪಿಸುಗುಟ್ಟಿದಂತೆ ಭಾಸವಾಯಿತು.


    “ಮೆಲಕ್ಕೋರನ್, ನಿನಗಿಲ್ಲಿ ಕೆಲಸವಿಲ್ಲ. ಪಕ್ಕದ ರಾಜ್ಯಗಳಿಗೆ ಹೋಗಿ ಕೇಳು”


    “ಇಲ್ಲ, ಇಲ್ಲಿಯೇ ನಿಮ್ಮ ಕಣ್ಣೆದುರಿಗೆ ಈಗಲೇ ಮಾಡುವಂಥ ಒಂದು ಕೆಲಸವಿದೆ” ಮೆಲಕ್ಕೋರನ್ ಹೇಳಿ ಪುನಃ ವಿನಮ್ರನಾಗಿ ತಲೆಬಾಗಿ ನಿಂತ.


    ಪಣಿಕ್ಕನ್ ಆಶ್ಚರ್ಯಚಕಿತನಾಗಿ ಮತ್ತೊಮ್ಮೆ ತನ್ನ ಆಪ್ತಸಲಹಾಗಾರನತ್ತ ನೋಡಿದ.


    “ಈ ಮರವನ್ನೇ ನೋಡಿ” ಮೆಲಕ್ಕೋರನ್ ಹೇಳುತ್ತಾ ಹೋದ “ತುಂಬಾ ಹಳೆಯದಾಗಿದೆ. ಗೆದ್ದಲು ಹಿಡಿದು ಈಗಲೋ ಆಗಲೋ ಬಿದ್ದುಹೋಗುವಂತಿದೆ. ಕಾವಿಲಮ್ಮನಿಗೆ ಹೆಚ್ಚು ದಿನ ನೆರಳು ಕೊಡಲಾರದು. ಇದನ್ನು ಕಿತ್ತೊಗೆದು ಹೊಸ ಮರವೊಂದನ್ನು ನೆಡೋಣ”


    “ಹಾಗೆ ಮಾಡಲು ಸಾಧ್ಯವೇ?”
    “ನಾನು, ಎಂದೆಂದಿಗೂ ಗೆದ್ದಲು ಹಿಡಿಯದ, ಎಲೆಗಳನ್ನು ಉದುರಿಸಲಾರದಂಥ ಮರವೊಂದನ್ನು ನೇಡುತ್ತೇನೆ.”


    “ಅಂಥದ್ದೊಂದು ನಿಜಕ್ಕೂ ಇದೆಯೇ ಮೆಲಕ್ಕೋರನ್?”


    “ಹಾ, ಹೌದು ಪಶ್ಚಿಮ ದೇಶದಲ್ಲಿದೆ”


    “ಸರಿ, ಹಾಗಾದರೆ. ನಮಗೂ ಅಂಥದ್ದೊಂದು ಮರವೊಂದವಿರಲಿ. ಈ ಕೂಡಲೇ ನಿನ್ನ ಕೆಲಸವನ್ನು ಆರಂಭಿಸು.”


    ಮೆಲಕ್ಕೋರನ್ ತನ್ನ ತಲೆ ನೆಲಕ್ಕೆ ತಾಗುವಂತೆ ಬಗ್ಗಿ ನಮಸ್ಕರಿಸಿ ಆ ಕತ್ತಲಲ್ಲಿ ಮಾಯವಾದ. ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಕುಳಿತ. ಸೇವಕನೊಬ್ಬ ಬೀಸಣಿಗೆಯನ್ನು ಅವನ ಕೈಗಿತ್ತ. ಮುಂದೆ ಮುಂದೆ ಪಂಜಿನ ಬೆಳಕು ಹಿಂದೆ ಹಿಂದೆ ಪಲ್ಲಕ್ಕಿ ಹೊರಟು ಕುರುಮಾನ್ ಪಣಿಕ್ಕನ್‍ನ ವಾಡೆಯನ್ನು ತಲುಪಿತು.


    ಕತ್ತಲು ಕರಗುತ್ತಿತ್ತು. ಮರದ ಮೇಲ್ತುದಿಗಳು ಬಿಳಿಚಿಕೊಂಡಿದ್ದವು. ಪಣತಿಯಲ್ಲಿನ ಎಣ್ಣೆ ತೀರಿಹೋಗುತ್ತಿತ್ತು.


    “ಉಣ್ಣಿ, ಆ ಸಂಪಿಗೆ ಮರವನ್ನು ಕತ್ತರಿಸುತ್ತಾರಾ?” ಮುಠಾಶಿ ಹತಾಶಳಾಗಿ ಕೇಳಿದಳು.


    ಅಷ್ಟರಲ್ಲಿ ಮರ ಕತ್ತರಿಸಿದ ಸದ್ದು ಕೇಳಿಸಿತು. ಈ ಭೂಮಿಯಷ್ಟು ಹಳೆಯದಾದ ಮರವನ್ನು ಕತ್ತರಿಸಿದ ಮೇಲೆ ದಣಿವಾರಿಸಿಕೊಳ್ಳಲು ಮೆಲಕ್ಕೋರನ್ ಪಕ್ಕದಲ್ಲಿದ್ದ ಕಲ್ಲುಬಂಡೆಗೆ ಆತು ಕುಳಿತನು. ಆಹಾರವನ್ನು ಹುಡುಕಿಕೊಂಡು ಹೊರಗೆ ಹೋಗಿದ್ದ ಹಕ್ಕಿಗಳೆಲ್ಲಾ ಮರವನ್ನು ಕತ್ತರಿಸಿದ ಸದ್ದಿಗೆ ಹಾರುತ್ತಾ ವಾಪಾಸಾದವು. ತಮ್ಮ ಗೂಡುಗಳು, ಮೊಟ್ಟೆಗಳು ಕಾಣಿಸದೆ ಕಬ ಕಬ ಎಂದು ಚೀರುತ್ತಾ ಅಸಹಾಯಕವಾಗಿ ಅತ್ತಿಂದಿತ್ತ ವೃತ್ತಾಕಾರದಲ್ಲಿ ಹಾರಾಡತೊಡಗಿದವು. ಮೆಲಕ್ಕೋರನ್ ಅವುಗಳತ್ತ ಗರಸನ್ನು ಎಸೆದು ಓಡಿಸಲು ಪ್ರಯತ್ನಿಸಿದ. ಆದರವು ತಕ್ಷಣಕ್ಕೆ ಹಾರಿಹೋಗದೆ ಕತ್ತರಿಸಿದ ಮರದ ಬಳಿ ಸ್ವಲ್ಪ ಹೊತ್ತು ಸುಳಿದಾಡಿದವು.


    “ಅಯ್ಯೋ! ಪಾಪ ಉಣ್ಣಿ, ಪಾಪ” ಮುಠಾಶಿ ಮರುಗಿದಳು.


    ಉಣ್ಣಿ ಮುಂದುವರಿಸಿದ.


    ಗೋಡೆಯ ಮೇಲೆ ಮತ್ತೆ ಮೆಲಕ್ಕೋರನ್‍ನ ಆಕೃತಿ ಮೂಡಿತು. ಅವನು ಹುಚ್ಚಿಗೆ ಬಿದ್ದವರ ತರ ಮರವನ್ನು ಕಟ್ಟುವದರಲ್ಲಿ ಮಗ್ನನಾಗಿದ್ದ. ಮಧ್ಯ ಮಧ್ಯ ತಂಪಾದ ಎಳೆನೀರನ್ನು ಕುಡಿಯುತ್ತಿದ್ದುದರಿಂದ ಅದರ ಸಿಪ್ಪೆಗಳೆಲ್ಲಾ ಅವನ ಸುತ್ತಲೂ ಬಿದ್ದಿದ್ದವು. ಆಗಾಗ ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಬಂದು ಮೆಲಕ್ಕೋರನ್ ಏನು ಮಾಡುತ್ತಿದ್ದಾನೆಂಬುದನ್ನು ನೋಡಿಹೋಗುತ್ತಿದ್ದ. ಅವನು ಗಾಜಿನ ದಿನ್ನೆಯನ್ನು ಸಲಿಸಾಗಿ ನಯವಾಗಿ ಕೆತ್ತುವದನ್ನು ನೋಡಿ ಆಶ್ಚರ್ಯಚಕಿತನಾದ. ಗಾಜಿನ ಚೂರುಗಳು ಕಾವಿಲಮ್ಮಳ ಮುಂದೆ ರಾಶಿ ರಾಶಿಯಾಗಿ ಬಿದ್ದಿದ್ದವು. ಕೆಲವು ತುಂಟ ಮಕ್ಕಳು ಮಿರುಗುವ ಗಾಜಿನ ಚೂರುಗಳೊಂದಿಗೆ ಆಡುತ್ತಾ ಆಡುತ್ತಾ ತಮ್ಮ ಬೆರಳುಗಳನ್ನು ಕತ್ತರಿಸಿಕೊಂಡರು.


    “ಓ, ಉಣ್ಣಿ ಅವರಿಗೆ ರಕ್ತ ಬರ್ತಿದಿಯಾ?” ಮುಠಾಶಿ ಕೇಳಿದಳು


    ಮೊದಲು ಮೆಲಕ್ಕೋರನ್ ಮರದ ಬೇರುಗಳನ್ನು ನಂತರ ರೆಂಬೆಕೊಂಬೆಗಳನ್ನು ಕೆತ್ತಿದ. ಉಳಿದಿದ್ದು ಹೂ, ಎಲೆಗಳು ಮಾತ್ರ.


    ಎಲೆಗಳಿಗೆ ಹಸಿರು ಗಾಜು, ಹೂಗಳಿಗೆ ಬಿಳಿಗಾಜು ಬೇಕಾಗಿತ್ತು.


    ಮುಠಾಶಿ ಆ ಬೋಳುಬೋಳಾದ ಮರದತ್ತ ಒಮ್ಮೆ ನೋಡಿದಳು.


    “ಉಣ್ಣಿ, ಹೋಂ ವರ್ಕ್ ಮುಗಿಸೋದಿಲ್ವಾ? ಗಂಟೆ ಆಗಲೆ ಹತ್ತು ಮುಕ್ಕಾಲಾಗುತ್ತಾ ಬಂತು” ಉಣ್ಣಿಯ ಅಮ್ಮ ಕೇಳಿದಳು.


    “ಇನ್ನೇನು ಮುಗಿತಾ ಬಂತು ಅಮ್ಮ”


    “ಬೇಗ ಬೇಗ ಮುಗಿಸು”


    ಮುಠಾಶಿಗೆ ಇನ್ನೇನು ಕಥೆ ಮುಗಿತಾ ಬಂತು ಎಂದು ಗೊತ್ತಾಗಿ ಬೇಸರವಾಯಿತು. ತನ್ನ ಮುಖವನ್ನು ಕೆಳಗೆ ಹಾಕಿದಳು. ನಿದ್ರೆ ಹತ್ತಿರ ಸುಳಿಯುತ್ತಿಲ್ಲ.


    “ಉಣ್ಣಿ” ಅವನ ಕಿವಿಯಲ್ಲಿ ಪಿಸುಗುಟ್ಟಿದಳು “ಅವಸರದಿಂದ ಕತಿ ಮುಗಿಸಬೇಡ”
    ಉಣ್ಣಿ ನಿಧಾನಿಸಿದ.


    ಮೆಲಕ್ಕೋರನ್ ಎಲೆಗಳನ್ನು ಹಾಗೂ ಹೂಗಳನ್ನು ಕೆತ್ತಲು ಬಹಳ ದಿನಗಳನ್ನು ತೆಗೆದುಕೊಂಡ. ಪ್ರತಿಯೊಂದು ಹೂವನ್ನು, ಎಲೆಯನ್ನು ಅತ್ಯಂತ ನಾಜೂಕಾಗಿ ನಿರ್ಮಿಸಿದ.


    ಮೆಲಕ್ಕೋರನ್‍ನ ಕೆಲಸ ನೋಡಲು ಕುರುಮಾನ್ ಆಗಾಗ ತನ್ನ ಪಲ್ಲಕಿಯಲ್ಲಿ ಬಂದುಹೋಗಿ ಮಾಡಿದ. ಕೆಲವು ತುಂಟ ಹುಡುಗರು ಗಾಜಿನ ಚೂರುಗಳ ರಾಶಿಯ ಸುತ್ತ ನೆರೆದು ಅವುಗಳೊಂದಿಗೆ ಆಟವಾಡುತ್ತ ಮತ್ತೆ ಮತ್ತೆ ತಮ್ಮ ಬೆರಳುಗಳಿಗೆ ಗಾಯವನ್ನು ಮಾಡಿಕೊಳ್ಳುತಿದ್ದರು.


    “ಕೊನೆಗೂ ಒಂದೂವರೆ ವರ್ಷದ ನಂತರ ಮರದ ಕೆಲಸ ಮುಗಿಯಿತು” ಉಣ್ಣಿ ಹೇಳಿದ.


    ಕುರುಮಾನ್ ಪಣಿಕ್ಕನ್ ಆ ಮನಮೋಹಕ ಗಾಜಿನ ಮರವನ್ನೊ ನೋಡಿ ಮೋಹಕ್ಕೊಳಗಾದನು. ಹಸಿರು ಗಾಜಿನ ಎಲೆಗಳು ಹಾಗೂ ಬಿಳಿ ಗಾಜಿನ ಎಲೆಗಳು ಸೂರ್ಯನ ಬೆಳಕಿಗೆ ಮಿಂಚುತ್ತಿದ್ದುದರಿಂದ ಆ ನಸುಗತ್ತಲಲ್ಲೂ ಅವುಗಳ ಪಾರದರ್ಶಕತೆ ಆ ಸೂರ್ಯನನ್ನೂ ನಾಚಿಸುವಂತಿತ್ತು.


    ಈ ಅದ್ಭುತವಾದ ಮರವನ್ನು ನೋಡಲು ಜನ ಎಲ್ಲೆಂದರಲ್ಲಿಂದ ಬರತೊಡಗಿದರು. ಕುರುಮಾನ್‍ನಿಗೆ ಮಾತ್ರ ಇಂಥ ಮರವನ್ನು ಕಟ್ಟಿಸಲು ಸಾಧ್ಯ ಎಂದು ಜನ ಮಾತಾಡಿಕೊಂಡರು. ಕುರುಮಾನ್ ಹೆಮ್ಮೆಯಿಂದ ಬೀಗಿದ.


    ಮೆಲಕ್ಕೋರನ್‍ನ ಕೆಲಸವನ್ನು ಮೆಚ್ಚಿಕೊಂಡು ಕುರುಮಾನ್ ಅವನಿಗೆ ಬೆಲೆಬಾಳುವ ಉಡುಗೂರೆಗಳನ್ನು ನೀಡಿ ಸತ್ಕರಿಸಿದ.
    ಗಾಜಿನ ಮರವು ನೋಡಲು ಅದ್ಭುತವಾಗಿತ್ತು. ಸೌಂದರ್ಯದಖಣಿಯಂತಿತ್ತು. ಸೌಂದರ್ಯದಲ್ಲಿ ಅದನ್ನು ಸರಿಗಟ್ಟುವ ಮತ್ತಾವ ವಸ್ತುಗಳು ಅಲ್ಲಿರಲಿಲ್ಲ. ಆದರೇನು? ಅದರಲ್ಲಿ ಸುವಾಸನೆಯೇ ಇರಲಿಲ್ಲ. ಆ ಮರದ ಟೊಂಗೆಗಳಿಗೆ ರಮ್ಯವಾದ ಕೃತಕ ಗೂಡುಗಳನ್ನು ನೇತುಹಾಕಲಾಗಿತ್ತು. ಆದರೆ ಅಲ್ಲಿ ಬಣ್ಣಬಣ್ಣದ ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಫಡಫಡಿಸುತ್ತಾ ಕುಳಿತಿರಲಿಲ್ಲ.


    ಈಗ ಉಣ್ಣಿ ಕಥೆ ಹೇಳುವದನ್ನು ಮುಗಿಸಿ ಮುಠಾಶಿಯೆಡೆಗೆ ನೋಡಿದ. ಅವಳು ಅದಾಗಲೇ ಗೋಡೆಗೊರಗಿಕೊಂಡು ನಿದ್ರೆ ಹೋಗಿದ್ದಳು.


    ಮಲಯಾಳಂ ಮೂಲ: ಎಮ್. ಮುಕುಂದನ್
    ಇಂಗ್ಲೀಷಗೆ: ಕೆ,ಎಮ್.ಶರೀಫ್ ಮತ್ತು ನೀರದಾ ಸುರೇಶ್
    ಕನ್ನಡಕ್ಕೆ: ಉದಯ್ ಇಟಗಿ


    1೦-4-2011 ರ ಉದಯವಾಣಿಯಲ್ಲಿ ಪ್ರಕಟವಾಗಿದೆ http://www.udayavani.com/news/61820L15-ಉಣ-ಣ-ಕಥ-.html