Demo image Demo image Demo image Demo image Demo image Demo image Demo image Demo image

ಎಂದಿಗೂ ಸತ್ಯವನ್ನು ಹೇಳಬೇಡ....

  • ಭಾನುವಾರ, ಫೆಬ್ರವರಿ 28, 2010
  • ಬಿಸಿಲ ಹನಿ
  • ನೀನು ಸತ್ಯವನ್ನು ಹೇಳಿದರೆ, ಜನ ಕೋಪಗೊಳ್ಳುತ್ತಾರೆ
    ಇನ್ನುಮುಂದೆ ಸತ್ಯವನ್ನು ಹೇಳಲೇಬೇಡ
    ಈ ಕಾಲ ಗೆಲಿಲಿಯೋನ ಕಾಲವಲ್ಲ.
    ಇದು ಇಪ್ಪತ್ತೊಂದನೇ ಶತಮಾನ,
    ಆದರೂ ಈ ಸಮಾಜ ನಿನ್ನ ಬಹಿಷ್ಕರಿಸುತ್ತದೆ,
    ನಿನು ಸತ್ಯವನ್ನು ಹೇಳಿದರೆ.
    ನಿನ್ನ ದೇಶ ನಿನ್ನ ಗಡಿಪಾರು ಮಾಡುತ್ತದೆ,
    ಬಂದಿಖಾನೆಯಲ್ಲಿ ಇಡುತ್ತದೆ,
    ಇಲ್ಲವೇ ಹಿಂಸಿಸುತ್ತದೆ
    ಹಾಗಾಗಿ ಸತ್ಯವನ್ನು ಹೇಳಲೇಬೇಡ
    ಬದಲಾಗಿ ಸುಳ್ಳನ್ನೇ ಹೇಳು.

    ಸೂರ್ಯ ಭೂಮಿಯ ಸುತ್ತ ತಿರುಗುತ್ತಾನೆ ಎಂದು ಹೇಳು
    ಚಂದ್ರನಿಗೂ ಕೂಡಾ ಸೂರ್ಯನಂತೆ ತನ್ನದೇ ಆದಂತ ಸ್ವಂತ ಬೆಳಕಿದೆ ಎಂದು ಹೇಳು
    ಬೆಟ್ಟಗುಡ್ಡಗಳನ್ನು ಭೂಮಿಗೆ ಮೊಳೆ ಹೊಡೆದು ನಿಲ್ಲಿಸಿದ್ದಾರೆ,
    ಆದ್ದರಿಂದಲೇ ಭೂಮಿ ಖಾಲಿ ಜಾಗದೆಡೆಗೆ ಜಾರುವದಿಲ್ಲ ಎಂದು ಹೇಳು
    ಹೆಂಗಸರು ಗಂಡಸರ ತೋಳಿನಿಂದ ಜನಿಸಿದ್ದಾರೆ ಎಂದು ಹೇಳು
    ತಾರೆಗಳು, ಗೃಹಗಳು, ಉಪಗೃಹಗಳು, ಗುರುತ್ವಾಕರ್ಷಣೆ ಮತ್ತು ಈ ವಿಶ್ವ
    ಎಲ್ಲವೂ ಬರಿ ಬೊಗಳೆ ಎಂದು ಹೇಳು
    ಮಾನವ ಚಂದ್ರನ ಮೇಲೆ ಕಾಲೇ ಇಡಲಿಲ್ಲ ಎಂದು ಸಹ ಹೇಳು
    ಏನಾದರು ಹೇಳು ಸುಮ್ಮನೆ ಸುಳ್ಳನ್ನೇ ಹೇಳು
    ಸದಾ ಸುಳ್ಳನ್ನೇ ಹೇಳುತ್ತಿರು.......

    ನೀನು ಸುಳ್ಳನ್ನು ಹೇಳಿದರೆ,
    ನಿನಗೆ ವನವಾಸದಲ್ಲಿರುವ ಪ್ರಸಂಗ ಬರುವದಿಲ್ಲ
    ನಿನಗೆ ನಿನ್ನದೇ ಅಂತ ಒಂದು ದೇಶವಿರುತ್ತದೆ, ಗೆಳೆಯರಿರುತ್ತಾರೆ
    ನಿನಗೆ ನಿನ್ನ ಬಂಧನಗಳಿಂದ ಬಿಡುಗಡೆಯಾಗುತ್ತದೆ
    ಆಗ ದಿನವೂ ನೀನು ಬೆಳಕು ಮತ್ತು ನೀಲಾಕಾಶವನ್ನು ನೋಡುತ್ತಿ
    ಯಾರೂ ನಿನ್ನನ್ನು ಕತ್ತಲು ಕೋಣೆಯೊಳಗೆ ಕೂಡಿಹಾಕಲಾರರು,
    ಅಮಾನುಷವಾಗಿ ನಡೆಸಿಕೊಳ್ಳಲಾರರು, ಮೃತ್ಯುಕೂಪಕ್ಕೆ ತಳ್ಳಲಾರರು......

    ಹಾಗಾಗಿ ಎಂದಿಗೂ ಸತ್ಯವನ್ನು ಹೇಳಬೇಡ
    ಉಳಿದವರಂತೆ ಸುಳ್ಳನ್ನೇ ಹೇಳುತ್ತಾ ಬದುಕಿಬಿಡು.....

    ಬಂಗಾಳಿ ಮೂಲ: ತಸ್ಲಿಮಾ ನಜ್ರಿನ್
    ಕನ್ನಡಕ್ಕೆ: ಉದಯ್ ಇಟಗಿ

    ತಸ್ಲಿಮಾ ನಜ್ರೀನ್- ಒಂದು ಅನುವಾದಿತ ಕವನ

  • ಶುಕ್ರವಾರ, ಫೆಬ್ರವರಿ 26, 2010
  • ಬಿಸಿಲ ಹನಿ
  • ಹುಡುಗಿ, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ!

    ಅವರು ಹೇಳುತ್ತಾರೆ-ಎಲ್ಲವನ್ನೂ ಹಗುರಾಗಿ ತೆಗೆದುಕೋ
    ಸುಮ್ಮನಿರು, ಮಾತನಾಡಬೇಡ,
    ಬಾಯಿಮುಚ್ಚಿಕೊಂಡಿದ್ದರೆ ಒಳಿತು.
    ಕುಳಿತುಕೊಂಡಿರು, ತಲೆ ತಗ್ಗಿಸಿ ನಡೆ,
    ಸದಾ ಅಳುತ್ತಿರು, ಕಣ್ಣೀರು ಬತ್ತಿಹೋಗಲಿ.........

    ಆದರೆ ಇವಕ್ಕೆಲ್ಲಾ ನೀನು ಹೇಗೆ ಪ್ರತಿಕ್ರಿಯಿಸಬೇಕು?

    ನೀನು ಎದ್ದು ನಿಲ್ಲಬೇಕು
    ಈಗಿಂದೀಗಲೇ ಎದ್ದು ನಿಲ್ಲಬೇಕು
    ನಿನ್ನ ಬೆನ್ನನ್ನು, ತಲೆಯನ್ನು ಎತ್ತರಿಸಿ ನಡೆಯಬೇಕು
    ನೀನೀಗ ಮಾತನಾಡಬೇಕು
    ನಿನ್ನ ಮನದ ಮಾತುಗಳನ್ನು ಹೊರಗೆಡವಬೇಕು
    ಜೋರಾಗಿ ಮಾತಾಡು
    ಸಾಧ್ಯವಾದರೆ ಕಿರುಚಿಬಿಡು!
    ನೀನು ಕಿರುಚಿದ್ದು ಕೇಳಿ ಅವರೆಲ್ಲಾ ಹೆದರಿ ಓಡಿಹೋಗಲಿ….

    ಅವರು ಹೇಳುತ್ತಾರೆ – ‘ನೀನು ನಾಚಿಕೆಗೆಟ್ಟವಳು!’
    ನೀನದನ್ನು ಕೇಳಿಸಿಕೊಂಡರೆ ಸುಮ್ಮನೆ ನಕ್ಕು ಬಿಡು...
    ಅವರು ಹೇಳುತ್ತಾರೆ – ‘ನೀನು ನಡತೆಗೆಟ್ಟವಳು’
    ನೀನದನ್ನು ಕೇಳಿಸಿಕೊಂಡರೆ ಜೋರಾಗಿ ನಕ್ಕು ಬಿಡು...
    ಅವರು ಹೇಳುತ್ತಾರೆ – ‘ನೀನು ಕೆಟ್ಟುಹೋಗಿದ್ದೀಯ’
    ನೀನದನ್ನು ಕೇಳಿಸಿಕೊಂಡರೆ ಇನ್ನೂ ಜೋರಾಗಿ ನಕ್ಕು ಬಿಡು...
    ನೀನು ನಗುವದನ್ನು ಕೇಳಿ ಅವರು ಕೂಗಿ ಹೇಳುತ್ತಾರೆ-
    ‘ನೀನು ಹಾದರಗಿತ್ತಿ!’

    ಅವರು ಹಾಗೆ ಹೇಳಿದಾಗ
    ನಿನ್ನ ಎರಡೂ ಕೈಗಳನ್ನು ನಿನ್ನ ಕುಂಡಿಯ ಮೇಲಿಟ್ಟುಕೊಂಡು
    ದೃಡವಾಗಿ ನಿಂತು ಕೂಗಿ ಹೇಳು
    ‘ಹೌದು, ನಾನು ಹಾದರಗಿತ್ತಿ!’

    ಆಗವರು ಆಘಾತಕ್ಕೊಳಗಾಗುತ್ತಾರೆ
    ನಂಬಲಾಗದೆ ನಿನ್ನ ಒಮ್ಮೆ ಕೆಕ್ಕರಿಸಿ ನೋಡುತ್ತಾರೆ
    ಆದರೆ ನೀನು ಹೇಳುವದನ್ನು, ಇನ್ನಷ್ಟು ಹೇಳುವದನ್ನು ಕೇಳಲು ಕಾಯುತ್ತಾರೆ...

    ಆಗ ಗಂಡಸರು ತಮ್ಮೊಳಗೆ ತಾವೇ ಕುದಿದು ಬೆವರುತ್ತಾರೆ
    ಹೆಂಗಸರು ತಮ್ಮೊಳಗೆ ತಾವೇ ನಿನ್ನಂತೆ ಹಾದರಗಿತ್ತಿಯಾಗಲು ಬಯಸುತ್ತಾರೆ...

    ಬಂಗಾಳಿ ಮೂಲ: ತಸ್ಲಿಮಾ ನಜ್ರೀನ್
    ಕನ್ನಡಕ್ಕೆ: ಉದಯ್ ಇಟಗಿ

    ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......

  • ಶುಕ್ರವಾರ, ಫೆಬ್ರವರಿ 05, 2010
  • ಬಿಸಿಲ ಹನಿ

  • ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸಿಕೊಂಡು ಹೋಗುತ್ತಾರೆ. ಈ ವ್ಯಾನಿಟಿ ಬ್ಯಾಗ್ ಇರುವದರಿಂದಲೋ ಏನೋ ಸದಾ ಅವರ ಮುಖದಲ್ಲೊಂದು ಸುರಕ್ಷಿತ ಭಾವನೆ ಎದ್ದು ಕಾಣುತ್ತಿರುತ್ತದೆ ಹಾಗೂ ತಮ್ಮೆಲ್ಲ ರಹಸ್ಯಗಳನ್ನು ಅದರಲ್ಲಿ ಬಚ್ಚಿಟ್ಟುಕೊಂಡಿರುವದರಿಂದಲೋ ಏನೋ ಅವರ ಮುಖದ ಮೇಲೆ ಸಹಜವಾದ ಒಂದು ನಿರಾಳತೆ ಮೂಡಿರುತ್ತದೆ. ಈ ನಿರಾಳತೆಯನ್ನೇ ನಾವು ‘ವ್ಯಾನಿಟಿ’ ಎಂದುಕೊಂಡು, ಅದನ್ನು ಯಾವಾಗಲೂ ಅವರ ವ್ಯಾನಿಟಿ ಬ್ಯಾಗಿನ ಜೊತೆ ಸಮೀಕರಿಸಿ, ಈ ವ್ಯಾನಿಟಿ ಬ್ಯಾಗಿನಿಂದಲೇ ಅವರಿಗೆ ‘ವ್ಯಾನಿಟಿ’ ಬಂದಿದೆಯೇನೋ ಎಂಬಂತೆ ಮಾತನಾಡುತ್ತೇವೆಯೆ? ಗೊತ್ತಿಲ್ಲ!

    ನನಗೆ ಚಿಕ್ಕಂದಿನಿಂದಲೂ ಹೆಂಗಸರ ವ್ಯಾನಿಟಿ ಬ್ಯಾಗ್ ನೋಡಿದಾಗಲೆಲ್ಲಾ ಏನೋ ಒಂದು ತರ ವಿಚಿತ್ರ ಕುತೂಹಲ ತಾನೆ ತಾನಾಗಿ ಮೂಡುತ್ತಿತ್ತು. ಯಾಕೆ ಹೆಂಗಸರು ಹೊರಗೆ ಹೋಗುವಾಗ ಯಾವಗಲೂ ತಮ್ಮ ಬಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಹೋಗ್ತಾರೆ ಮತ್ತು ಅದರಲ್ಲಿ ಅಂಥಾದ್ದೇನಿರುತ್ತದೆ ಎಂದು ತಿಳಿಯಬೇಕೆಂಬ ಕುತೂಹಲ. ಏಕೆಂದರೆ ನನ್ನ ಸಂಬಂಧಿಕರಲ್ಲಿ ಬಹಳಷ್ಟು ಹೆಂಗಸರು ಹೊರಗೆ ಹೋಗುವಾಗ ಇದನ್ನು ತಪ್ಪದೇ ಒಯ್ಯುತ್ತಿದ್ದರು ಮತ್ತು ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಭದ್ರವಾಗಿ ಇಟ್ಟು ನಿರಾಳರಾಗುತ್ತಿದ್ದರು. ಇವರೇಕೆ ಅದನ್ನು ಒಯ್ಯುತ್ತಾರೆ? ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಏಕೆ ಇಡುತ್ತಾರೆ? ಹೊರಗೇ ಇಡಲು ಏನು ಕಷ್ಟ? ಎಂದು ನನ್ನಷ್ಟಕ್ಕೆ ನಾನೆ ಕೇಳಿಕೊಳ್ಳುತ್ತಿದ್ದೆ. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಒಂದು ಸಾರಿ ಕುತೂಹಲ ತಡೆಯಲಾರದೆ ನನ್ನ ದೊಡ್ದಮ್ಮನನ್ನು ಕೇಳಿಯೂ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಿಮಗೆ ಗಂಡಸರಿಗಾದರೆ ಜೇಬುಗಳಿರುತ್ತವೆ ಅದರಲ್ಲಿ ಎಲ್ಲಾನೂ ಇಟ್ಕೊಳಿತೀರಿ. ಪಾಪ, ಹೆಂಗಸರಿಗಾದರೆ ಎಲ್ಲಿ ಜೇಬುಗಳಿರುತ್ತವೆ? ಅದ್ಕೆ ಅವರು ಹೊರಗೆ ಹೋಗುವಾಗ ವ್ಯಾನಿಟಿ ಬ್ಯಾಗ್ ಒಯ್ಯುತ್ತಾರೆ ಎಂದು ಉತ್ತರ ಕೊಟ್ಟಿದ್ದಳು. ನಾನಿನ್ನೂ ಚಿಕ್ಕವನಾಗಿದ್ದರಿಂದ ಮತ್ತು ಅಷ್ಟಾಗಿ ತಿಳುವಳಿಕೆ ಇಲ್ಲದ್ದರಿಂದ ಅವಳು ಹೇಳಿದ್ದು ಸರಿಯಿರಬಹುದೆಂದು ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ಅದರ ಬಗ್ಗೆ ಇರುವ ಅಪಾರ ಕುತೂಹಲ ಮಾತ್ರ ತಣಿದಿರಲಿಲ್ಲ.
    ನಾನು ಹೈಸ್ಕೂಲಿನಲ್ಲಿ ಓದುವಾಗ ಹುಡುಗಿಯರು ಯಾವತ್ತೂ ವ್ಯಾನಿಟಿ ಬ್ಯಾಗ್ ತಂದಿದ್ದನ್ನು ನೋಡಿರಲಿಲ್ಲ. ಏಕೆಂದರೆ ಅವರಿಗೆ ನಮ್ಮ ಹಾಗೆ ಸ್ಕೂಲ್ ಬ್ಯಾಗ್ ಇರುತ್ತಿತ್ತಾದ್ದರಿಂದ ವ್ಯಾನಿಟಿ ಬ್ಯಾಗ್ ತರುವ ಪ್ರಮೆಯವೇ ಇರಲಿಲ್ಲ. ಅಥವಾ ವ್ಯಾನಿಟಿ ಬ್ಯಾಗನ್ನು ಒಯ್ಯುವಷ್ಟು ‘ವ್ಯಾನಿಟಿ’ ಅವರಿಗಿನ್ನೂ ಬಂದಿರಲಿಲ್ಲ. ಬರು ಬರುತ್ತಾ ಅಂದರೆ ನಾನು ಕಾಲೇಜು ಮೆಟ್ಟಿಲು ಹತ್ತಿದಾಗ ಹುಡುಗಿಯರು ನಮ್ಮ ಮುಂದೆಯೇ ವ್ಯಾನಿಟಿ ಬ್ಯಾಗಿನಿಂದ ಬಾಚಣಿಗೆ ತೆಗೆದು ಬಾಚಿಕೊಳ್ಳುವಾಗ ಹಾಗೂ ಹಣೆಬೊಟ್ಟು ಇಟ್ಟುಕೊಳ್ಳುವಾಗಲೆಲ್ಲಾ ಓ ಇದೊಂದು ಮೇಕಪ್ ಕಿಟ್ ಇರಬೇಕೆಂದುಕೊಂಡಿದ್ದೆ. ಆದರೆ ದಿನ ಕಳೆದೆಂತೆಲ್ಲಾ ಹಂತ ಹಂತವಾಗಿ ಅದೊಂದು ಹೆಂಗಸರು ತಮ್ಮ ಖಾಸಗಿ ಜೀವನದ ರಹಸ್ಯ ಸಂಗತಿಗಳನ್ನು ಕಾಪಾಡುವ ಚೀಲ ಎಂದು ಗೊತ್ತಾಯಿತು.

    ನನಗಿನ್ನೂ ಚನ್ನಾಗಿ ನೆನಪಿದೆ. ನಾನಾಗ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದೆ. ಆಗಷ್ಟೆ ಹರೆಯಕ್ಕೆ ಕಾಲಿಟ್ಟ ಹೊಸ ಹುರುಪು ನಮ್ಮಲ್ಲಿತ್ತು. ಕಾಲೇಜು ಎಂದ ಮೇಲೆ ಕೇಳುತ್ತಿರಾ ಹುಡುಗಿಯರನ್ನು ಬರಿ ಗೋಳು ಹೊಯ್ದುಕೊಳ್ಳುವದೇ ಕೆಲಸ. ನಮ್ಮ ಕ್ಲಾಸಿನಲ್ಲಿ ಒಂದು ತರ್ಲೆ ಗ್ಯಾಂಗ್ ಇತ್ತು. ತರ್ಲೆ ಗ್ಯಾಂಗ್ ಎಂದರೆ ಹುಡುಗಿಯರು ಏನೇನು ಮಾಡುತ್ತಾರೆಂಬುದನ್ನು ಪತ್ತೆ ಹಚ್ಚುವ ಕೆಲಸ. ಅವರು ಯಾವಾಗಲೂ ಯಾವ್ಯಾವ ಹುಡುಗಿ ಲೈಬ್ರೇರಿಯಲ್ಲಿ ಎಷ್ಟು ಹೊತ್ತು ಕಳೆಯುತ್ತಾಳೆ? ಕ್ಲಾಸ್ ರೂಮಿನಲ್ಲಿ ಎಷ್ಟು ಹೊತ್ತು ಇರುತ್ತಾಳೆ? ಕ್ಯಾಂಟಿನಿನಲ್ಲಿ ಎಷ್ಟು ಸಮಯ ಕಳೆಯುತ್ತಾಳೆ? ಯಾವ್ಯಾವ ಡ್ರೆಸ್ ಹಾಕುತ್ತಾಳೆ? ಯಾವ್ಯಾವ ಲೆಕ್ಚರರ್ ಜೊತೆ ಸಲಿಗೆಯಿಂದ ಇದ್ದಾಳೆ? ಬರಿ ಇಂಥವೇ ವಿಷಯಗಳ ಮೇಲೆ ಅವರ ನಿಗಾ ಇರುತ್ತಿತ್ತು. ಏಕೆಂದರೆ ಇಂಥ ವಿಷಯಗಳ ಆಧಾರದ ಮೇಲೆಯೇ ಹುಡುಗಿಯರು ಬೋಲ್ಡಾ ಇಲ್ಲಾ ಮೈಲ್ಡಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು. ನಮ್ಮ ಕ್ಲಾಸಿನ ಹುಡುಗಿಯೊಬ್ಬಳು (ಅವಳ ಹೆಸರು ಗೊತ್ತಿಲ್ಲ. ಆದರೆ ಅವಳ ರೋಲ್ ನಂಬರ್ 86) ಪ್ರತಿದಿನವೂ ತನ್ನ ಡ್ರೆಸ್ಗೆನ ಮ್ಯಾಚ್ ಆಗುವಂಥ ಒಂದೊಂದು ವ್ಯಾನಿಟಿ ಬ್ಯಾಗನ್ನು ತರುತ್ತಿದ್ದಳು. ಇದನ್ನು ಗಮನಿಸಿದ ಹುಡುಗರು ಇವಳು ಶ್ರೀಮಂತನ ಮಗಳೇ ಇರಬೇಕು ಎಂದು ಲೆಕ್ಕಾಚಾರ ಹಾಕಿದ್ದರು. ಹೀಗಿರುವಾಗ ನಮ್ಮ ಕ್ಲಾಸ್ ಡೇ ಫಂಕ್ಷನ್ ಬಂತು. ಅಂದು ಎಲ್ಲ ಕಾರ್ಯಕ್ರಮಗಳ ಜೊತೆಗೆ ‘ಫಿಶ್ ಪಾಂಡ್’ ಕಾರ್ಯಕ್ರಮವೂ ಇತ್ತು. ಈ ಕಾರ್ಯಕ್ರಮದಲ್ಲಿ ಯಾರು ಯಾರಿಗೆ ಬೇಕಾದರೂ ವ್ಯಯಕ್ತಿಕ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಪ್ರಶ್ನೆಗಳನ್ನು ಕೇಳಬಹುದಿತ್ತು. ಆದರೆ ಸಭ್ಯತೆಯ ಎಲ್ಲೆಯನ್ನು ಮೀರುವಂತಿರಲಿಲ್ಲ. ಸರಿ, ಈ ರೋಲ್ ನಂಬರ್ 86 ಗೆ ಒಂದು ಪ್ರಶ್ನೆಯನ್ನು ಕೇಳಿಯೇ ಬಿಡೋಣ ಎಂದು “ನೀವು ಸದಾ ನಿಮ್ಮ ಡ್ರೆಸ್ಗೆ. ಮ್ಯಾಚ್ ಆಗುವಂಥ ವ್ಯಾನಿಟಿ ಬ್ಯಾಗನ್ನು ತರುತ್ತೀರಲ್ಲ, ಆ ವ್ಯಾನಿಟಿ ಬ್ಯಾಗಲ್ಲಿ ಎಷ್ಟು ದುಡ್ಡಿರಬಹುದು?” ಎಂದು ಕೇಳಿದ್ದರು. ಅದಕ್ಕ ಆಕೆ ಒಂಚೂರು ಅಧೀರಳಾಗದೆ “ನಿಮ್ಮನ್ನೆಲ್ಲಾ ಕೊಂಡುಕೊಳ್ಳುವಷ್ಟು” ಎಂದು ಉತ್ತರವನ್ನು ನೀಡಿ ಅವರನ್ನೆಲ್ಲಾ ಮಂಗ್ಯಾನ್ನ ಮಾಡಿದ್ದಳು.

    ನಾನು ಮಂಡ್ಯದ ಪಿ. ಇ. ಎಸ್. ಕಾಲೇಜಿನಲ್ಲಿ ಓದುತ್ತಿರಬೇಕಾದರೆ ನನ್ನನ್ನೂ ಸೇರಿದಂತೆ ಮೂರ್ನಾಲ್ಕು ಸ್ನೇಹಿತರಿಗೆ ಒಂದು ಕೆಟ್ಟ ಚಾಳಿಯಿತ್ತು. ಹುಡುಗಿಯರ ವ್ಯಾನಿಟಿ ಬ್ಯಾಗನ್ನು ಚೆಕ್ ಮಾಡುವದು. ಚೆಕ್ ಮಾಡುವದೆಂದರೆ ಕೆಟ್ಟ ಉದ್ದೇಶದಿಂದ ಚೆಕ್ ಮಾಡುವದಲ್ಲ. ತಿನ್ನಲು ಏನಾದರು ಸಿಗುತ್ತದೆಯೆ? ಎಂದು. ಏಕೆಂದರೆ ಹುಡುಗಿಯರು ಸಾಮಾನ್ಯವಾಗಿ ಲೀಸರ್ ಅವರ್ನುಲ್ಲಿ ಬಿಸ್ಕಿಟ್ ಇಲ್ಲವೆ ಚಾಕ್ಲೋಟ್ಸನ್ನು ವ್ಯಾನಿಟಿ ಬ್ಯಾಗಿನಿಂದ ತೆಗೆದು ತಿನ್ನುವದನ್ನು ನೋಡಿದ್ದೆವು. ಮೊದಮೊದಲು ಹುಡುಗಿಯರು ತಾವು ಹೋದಲ್ಲಿಗೆ ಜೊತೆಯಲ್ಲಿಯೇ ಬ್ಯಾಗನ್ನು ಒಯ್ಯುತ್ತಿದ್ದರಿಂದ ನಮಗೆ ತಿಂಡಿ ತಿನಿಸುಗಳನ್ನು ಕದ್ದು ತಿನ್ನುವ ಪ್ರಮೆಯವೇ ಬಂದಿರಲಿಲ್ಲ. ಆದರೆ ಅದ್ಯಾವ ಧೈರ್ಯದ ಮೇಲೆಯೋ ನಾ ಕಾಣೆ, ಆನಂತರ ಅವರು ತಮ್ಮ ವ್ಯಾನಿಟಿ ಬ್ಯಾಗಗಳನ್ನು ಕ್ಲಾಸ್ ರೂಮಿನಲ್ಲಿಯೇ ಬಿಟ್ಟು ಒಟ್ಟಾಗಿ ಕ್ಯಾಂಟೀನಿಗೆ ಹೋಗತೊಡಗಿದರು. ನಾವು ಇದೇ ಸಮಯವೆಂದು ಮೆಲ್ಲಗೆ ಹುಡುಗಿಯರ ವ್ಯಾನಿಟಿ ಬ್ಯಾಗುಗಳಿಗೆ ಕೈ ಹಾಕಿ ತಿಂಡಿ ತಿಂದು ಹುಡುಗಿಯರು ವಾಪಾಸ್ ಬರುವಷ್ಟರಲ್ಲಿಯೇ ಅದು ಹೇಗಿತ್ತೋ ಹಾಗೆ ಇಟ್ಟು ಏನೂ ಆಗಿಲ್ಲವೆಂಬಂತೆ ತೆಪ್ಪಗೆ ಕುಳಿತುಬಿಡುತ್ತಿದ್ದೆವು. ಒಮ್ಮೊಮ್ಮೆ Little Heart ಬಿಸ್ಕಿಟ್ಸ್ ಇರುತ್ತಿದ್ದವು. ಅವನ್ನು ಹೆಚ್ಚಾಗಿ ಉಷಾರಾಣಿ ಎಂಬ ಹುಡುಗಿ ಇಡುತ್ತಿದ್ದಳು. ನೋಡಲು ಸುಂದರವಾಗಿದ್ದ ಈ ಹುಡುಗಿಯ ಬ್ಯಾಗ್ ಮೇಲೆ ನಮಗೆಲ್ಲಾ ಕಣ್ಣು. ಈ Little Heart ಬಿಸ್ಕಿಟ್ಸ್ ಹೆಸರಿಗೆ ತಕ್ಕಂತೆ ಹೃದಯದಾಕಾರದಲ್ಲಿದ್ದು ನೋಡಲು ಆಕರ್ಷಕವಾಗಿಯೂ ಹಾಗೂ ತಿನ್ನಲು ರುಚಿಕರವಾಗಿರುತ್ತಿದ್ದವು. ಒಂದೊಂದು ಸಾರಿ ಪ್ಯಾಕೆಟಿನೊಳಗಿಂದ ಅಕಸ್ಮಾತ್ ಮುರಿದ Little Heart ಬಿಸ್ಕಿಟ್ಸ್ ಏನಾದರು ಸಿಕ್ಕದರೆ, ‘ಬ್ರೋಕನ್ ಹಾರ್ಟ್ ಎಲ್ಲ ನನಗೆ ಬೇಡಪ್ಪಾ, ನೀನೆ ಇಟ್ಕೊ’ ಎಂದು ತೆಗೆದುಕೊಡುವವನಿಗೆ ಹೇಳುತ್ತಾ ನಾವು ಮುರಿದಿರದ ಬಿಸ್ಕಿಟೊಂದನ್ನು ತೆಗೆದು ತಿನ್ನುತಾ ಅದೇನೋ ಒಂದು ತರದ ರೋಮಾಂಚನವನ್ನು ಅನುಭವಿಸತ್ತಿದ್ದವು. ಹೀಗೆಯೇ ಎಷ್ಟು ದಿನಾಂತ ಮಾಡೋಕಾಗುತ್ತೆ? ಕೊನೆಗೊಂದು ದಿನ ಹುಡುಗಿಯರಿಗೆ ಅದು ನಾವೇ ನಾಲ್ಕು ಜನ ಎಂದು ಗೊತ್ತಾಯಿತು. ಆದರೂ ಅವರು ಕೇಳುವ ಧೈರ್ಯ ಮಾಡಲಿಲ್ಲ ಹಾಗೂ ವಿಷಯ ಗೊತ್ತಾದ ಮೇಲೂ ಅವರು ಬ್ಯಾಗನ್ನು ಕ್ಲಾಸ್ ರೂಮಿನಲ್ಲಿಯೇ ಬಿಟ್ಟು ಹೋಗುವದನ್ನು ನಿಲ್ಲಿಸಲಿಲ್ಲ. ನಾವೂ ಕೂಡ ನಮ್ಮ ತರ್ಲೆಗಳನ್ನು ನಿಲ್ಲಿಸಲಿಲ್ಲ. ಮೊದಲು ಬರಿ ತಿಂಡಿಗಳನ್ನು ಮಾತ್ರ ಹುಡುಕಿ ತಿನ್ನುತ್ತಿದ್ದ ನಾವು ನಿಧಾನಕ್ಕೆ ಅದರಲ್ಲಿ ಏನೆಲ್ಲಾ ಇರಬಹುದೆಂದು ತಲೆ ಕೆಡಿಸಿಕೊಳ್ಳುತ್ತಿದ್ದೆವು. ಒಂದಷ್ಟು ಹೇರ್ ಪಿನ್ಸ್, ಕ್ಲಿಪ್, ಲಿಪ್ ಸ್ಟಿಕ್, ನವಿಲು ಗರಿ, ಅವರಿಗಷ್ಟೇ ಅರ್ಥವಾಗುವ ಹಾಗೆ ಕೋಡ್ ಲಾಂಗ್ವೇಜಿನಲ್ಲಿ ಬರೆದಿಟ್ಟ ಕೆಲವು ಚೀಟಿಗಳು, ಕೆಲವು ಗ್ರೀಟಿಂಗ್ ಕಾರ್ಡುಗಳು ಹೀಗೆ ಇನ್ನೂ ಏನೇನೋ ಇರುತ್ತಿದ್ದವು. ಬರುಬರುತ್ತಾ ಸಣ್ಣ ಸಣ್ಣ ಸಂದೇಶಗಳನ್ನು ಹೊತ್ತ ಚೀಟಿಗಳು ಅದರಲ್ಲಿ ಸಿಗತೊಡಗಿದವು. ಅವೆಲ್ಲಾ ಅವರಂದುಕೊಂಡಂತೆ ನಮ್ಮ ನಾಲ್ಕೂ ಜನ ಹುಡುಗರನ್ನು ಬೇಕಂತಲೇ ಕೀಟಲೆ ಮಾಡಲೆಂದು ಬರೆದಿರುತ್ತಿದ್ದವು. ಅದರಲ್ಲಿ ನನ್ನ ಸ್ನೇಹಿತ ರಾಜೀವನನ್ನು ಕುರಿತು ಹೀಗೆ ಬರೆಯಲಾಗಿತ್ತು. “Rajeev looks what he is not”. ನನ್ನನ್ನು ಕುರಿತು “Uday is good but appears to be a flirt”, ಮಧು ಎನ್ನುವ ಇನ್ನೊಬ್ಬ ಸ್ನೇಹಿತನನ್ನು ಕುರಿತು ‘ಬಾಲವಿಲ್ಲದ ಕೋತಿ’ ಎಂದು ಕರೆದರೆ ಶರತ್ನ ನ್ನು ಕುರಿತು ‘ಹುಡುಗಿಯರ ಹೃದಯವನ್ನು ಹೇಗೆ ಕದಿಯಬೇಕೆಂದು ಗೊತ್ತಿಲ್ಲದವ ಅವರ ವ್ಯಾನಿಟಿ ಬ್ಯಾಗಿನಲ್ಲಿರುವ ಬಿಸ್ಕಿಟುಗಳನ್ನು ಕದ್ದು ತಿನ್ನುವ ಚೆಲುವ’ ಎಂದು ಕರೆದಿದ್ದರು. ಇವನ್ನೆಲ್ಲ ಓದಿದ ನಮಗೆ ಕಿರಿಕಿರಿಯ ಜೊತೆಗೆ ತಮಾಷೆಯೆನಿಸಿದರೂ ಮುಂದೆ ಇಂಥ ವಿಷಯಗಳೇ ನಮ್ಮ ಮತ್ತು ಹುಡುಗಿಯರ ಗಟ್ಟಿ ಸ್ನೇಹಕ್ಕೆ ಕಾರಣವಾಯಿತು. ಹೀಗಾಗಿ ಹುಡುಗಿಯರ ಸ್ನೇಹಕ್ಕೆ ಕಾರಣವಾದ ಈ ವ್ಯಾನಿಟಿ ಬ್ಯಾಗಿಗೆ ನಾನೊಂದು ಥ್ಯಾಂಕ್ಸ್ ಹೇಳಲೇಬೇಕು.

    ನನ್ನ ಭಾವಮೈದುನನಿಗೆ ಒಂದು ಕೆಟ್ಟ ಚಾಳಿಯಿತ್ತು. ಯಾವಾಗಲೂ ಅವರ ತಂಗಿಯರ ವ್ಯಾನಿಟಿ ಬ್ಯಾಗನ್ನು ನೋಡುವದು. ಆ ಸಲಿಗೆಯನ್ನು ಅವರೇ ತೆಗೆದುಕೊಂಡಿದ್ದರೋ ಅಥವಾ ಅವರ ತಂಗಿಯರೇ ಕೊಟ್ಟಿದ್ದರೋ ಗೊತ್ತಿಲ್ಲ. ಆಗಾಗ ಅವರ ಬ್ಯಾಗನ್ನು ನೋಡಿ ಇಡುವದು. ಅಷ್ಟಕ್ಕೆ ಸುಮ್ಮನಿರದೆ “ಓಹೋ, ಇದೇನಿದು?” ಎಂದು ಮಧ್ಯ ಮಧ್ಯ ಯಾವದಾದರೊಂದು ವಸ್ತುವನ್ನು ಹೊರತೆಗೆದು ಕೇಳುತ್ತಿದ್ದರು. ಒಂದು ಸಾರಿ ಹೀಗೆ ಅವರ ತಂಗಿಯ ಬ್ಯಾಗನ್ನು ಚೆಕ್ ಮಾಡಿ ಯಾವುದೋ ಒಂದು ವಸ್ತುವನ್ನು ಹೊರತೆಗೆದು “ಓಹೋ, ಇದೇನು ಬನಿಯನ್ ಇದ್ದಂಗಿದೆ. ಇದ್ಯಾರಿಗೆ?” ಎಂದು ಕೇಳುತ್ತಾ ಅದನ್ನು ಸಂಪೂರ್ಣವಾಗಿ ಹೊರಗೆಳೆದಿದ್ದರು. ಆದರದು ಬನಿಯನ್ ಆಗಿರದೆ ಬ್ರಾ ಎಂದು ಗೊತ್ತಾಗಿ ಅಲ್ಲಿರವರೆಲ್ಲರೂ ನಕ್ಕಿದ್ದೇ ನಕ್ಕಿದ್ದು. ಆದರೆ ನಮ್ಮ ಭಾವ ಮೈದುನ ನಾಚಿ ನೀರಾಗಿದ್ದು ನಾವಿನ್ನೂ ಮರೆತಿಲ್ಲ.

    ವಸುಧೇಂದ್ರವರ ಕಥೆಯೊಂದರಲ್ಲಿ ಒಂದು ಪ್ರಸಂಗ ಬರುತ್ತದೆ. ಆ ಕಥೆಯಲ್ಲಿ ಕಥಾನಾಯಕಿ ತನ್ನ ವ್ಯಾನಿಟಿ ಬ್ಯಾಗಿನ ಬಗ್ಗೆ ಎಷ್ಟು ಜಾಗೂರಕಳಾಗಿರುತ್ತಾಳೆಂಬುದನ್ನು ನೀವೇ ಗಮನಿಸಿ. “ಮಂಜಿ ಮನೆಗೆ ಬಂದಾಗ ರಾತ್ರಿ ಒಂಬತ್ತೂವರೆಯಾಗಿತ್ತು. ಪಡಸಾಲೆಯಲ್ಲಿ ಕುಳಿತಿದ್ದ ಅವರಮ್ಮನ ಕಡೆ ನೋಡದೆ, ಒಂದೂ ಮಾತನಾಡದೆ ಸೀದಾ ತನ್ನ ಕೋಣೆಗೆ ಹೋಗಿ, ಹಾಸಿಗೆ ಮೇಲೆ ತನ್ನ ವ್ಯಾನಿಟಿ ಬ್ಯಾಗನ್ನು ಒಗೆದು, ಪಡಸಾಲೆಗೆ ಬಂದಳು. ಕೃಷ್ಣವೇಣಮ್ಮನಿಗೆ ಇನ್ನು ತಡೆದುಕೊಳ್ಳಲಾಗಲಿಲ್ಲ. “ಊರೆಲ್ಲಾ ಮೆರೆದಿದ್ದು ಆಯ್ತೇನೆ?” ಅಂತ ಕೆಣಕಿದರು. ಮಂಜಿಗೆ ರೇಗಿ ಹೋಯ್ತು. “ಅಲ್ಲಿ ನನ್ನ ಮಿಂಡ ಕಾಯ್ಕೊಂಡು ಕೂತಿದ್ದ. ಇಷ್ಟೊತ್ತು ಚಕ್ಕಂದ ಹೊಡೆದು ಬಂದೆ” ಅಂತ ಛಟೀರೆಂದು ಉತ್ತರಿಸಿ ಬಚ್ಚಲು ಮನೆಗೆ ಕಾಲು ತೊಳೆಯಲು ಹೋದಳು. ಬಚ್ಚಲು ಬಾಗಿಲು ಹಾಕಿ, ಚಿಲಕ ಹಾಕಿಕೊಂಡು, ತಂಬಿಗೆಯಲ್ಲಿ ನೀರಿ ತ್ಬಿಸಿಕೊಂಡರೂ ಅಮ್ಮನಿಂದ ಯಾವುದೇ ಮಾತು ಕೇಳಿ ಬರಲಿಲ್ಲ. ತಕ್ಷಣ ಅನುಮಾನವಾಯ್ತು. ಬಾಗಿಲು ತೆಗೆದು ಹೊರಗೋಡಿ ಬಂದಳು. ಅವಳ ಅನುಮಾನ ನಿಜವಾಯ್ತು. ಕೃಷ್ಣವೇಣಮ್ಮ ಕೋಣೆಗೆ ನುಗ್ಗಿ ಅವಳ ವ್ಯಾನಿಟಿ ಬ್ಯಾಗಿಗೆ ಹಾಕಿದ್ದರು. ಹುಲಿಯಂತೆ ಅವರಮ್ಮನ ಮೇಲೆ ಎಗರಿ ಬ್ಯಾಗನ್ನು ಕಸಿದುಕೊಂಡಳು. ಅವರಮ್ಮ ಬಿಡಲಿಲ್ಲ. ತಾನೂ ಕೈ ಹಾಕಿ ಬ್ಯಾಗನ್ನು ಜಗ್ಗಲಾರಂಭಿಸಿದಳು. ಇಬ್ಬರ ಜಗ್ಗಾಟದಲ್ಲಿ ಬ್ಯಾಗಿನ ಹೆಗಲದಾರಿ ಕಿತ್ತು ಹೋಗಿ, ಕೃಷ್ಣವೇಣಮ್ಮ ಹಾಸಿಗೆಯಲ್ಲಿ ದೊಪ್ಪನೆ ಕುಸಿದು ಬಿದ್ದರು. ಅಸಹಾಯಕತೆಯಿಂದ ಮಗಳೆಡೆಗೆ ನೋಡಲಾರಂಭಿಸಿದರು. ಮಂಜಿ ಬ್ಯಾಗನ್ನು ತೆಗೆದು, ಅದರಲ್ಲಿನ ಇನ್ಸುಲಿನ್ ಸೂಜಿಗಳನ್ನು ಹೊರತೆಗೆದು, ಅವರಮ್ಮನ ಕಡೆ ಎಸೆದು “ಚುಚ್ಚಿಗೊಂಡು ಸಾಯಿ” ಎಂದು ಹೇಳಿ, ಬ್ಯಾಗನ್ನು ಅಲಮಾರದಲ್ಲಿಟ್ಟು ಬೀಗ ಜಡಿದು, ಬಚ್ಚಲು ಮನೆಗೆ ಹೋದಳು.” ಮಂಜಿಯ ತಾಯಿ ತಾನೊಂದು ಹೆಣ್ಣಾಗಿದ್ದರೂ ಇನ್ನೊಂದು ಹೆಣ್ಣಾದ ತನ್ನ ಮಗಳ ಬ್ಯಾಗಲ್ಲಿ ಇಣುಕಿನೋಡಲಾಗಲಿಲ್ಲ. ಅದಕ್ಕೆ ಮಂಜಿ ಅವಕಾಶ ಮಾಡಿಕೊಡಲಿಲ್ಲ. ಏಕೆಂದರೆ ಅದರಲ್ಲಿ ಅವಳು ತನಗೆ ಮಾತ್ರ ಬೇಕಾಗುವ ಕೆಲವು ರಹಸ್ಯ ವಸ್ತುಗಳನ್ನು ಇಟ್ತಿದ್ದಳು. ಮೇಲಾಗಿ ಅದು ಅವಳ ಸ್ವಾತಂತ್ರ್ಯಕ್ಕೆ ಭಂಗವಾದಂತೆ ಎಂದು ಭಾವಿಸಿದ್ದಳು. ಅಂದ ಮೇಲೆ ಗಂಡಸರೇನಾದರು ಕೈ ಹಾಕಿದರೆ ಹೇಗಿರಬೇಡ?

    ಒಂದು ಸಾರಿ ನನ್ನ ಅತ್ತಿಗೆ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರಲು ಲಿಸ್ಟ್ ಮಾಡಲು ಹೇಳಿದರು. ಸರಿ ಎಂದು ಪೆನ್ನಿಗಾಗಿ ಹುಡಕಾಡತೊಡಗಿದೆ. ಎಲ್ಲೂ ಸಿಗಲಿಲ್ಲ. ಕೊನೆಗೆ ನನ್ನ ಅತ್ತಿಗೆ ಯಾವಾಗಲೂ ಒಂದು ಪೆನ್ನನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಟ್ಟಿರುತ್ತಿದ್ದರು. ಅದು ತಕ್ಷಣ ನೆನಪಾಗಿ ಅವರ ವ್ಯಾನಿಟಿ ಬ್ಯಾಗನ್ನು ತೆಗೆದು ಹುಡುಕಾಡತೊಡಗಿದೆ. ಮೊದಲು ಮುಂದಿನ ಜಿಪ್ಪಿನಲ್ಲಿ ಹುಡುಕಿದೆ. ಅಲ್ಲಿ ಸಿಗದೇ ಹೋದಾಗ ಇನ್ನೊಂದು ಕಂಪಾರ್ಟ್ ಮೆಂಟಿನಲ್ಲಿ ಇದ್ದಿರಬಹುದೇನೋ ಎಂದುಕೊಂಡು ಅಲ್ಲಿ ಕೈ ಹಾಕಿ ಹುಡಕತೊಡಗಿದೆ. ಪೆನ್ನು ಸಿಗಲಿಲ್ಲ ಆದರೆ ರಟ್ಟಿನಂಥ ಪ್ಯಾಡ್ ಸಿಕ್ಕಿತು. ನಾನು ಕುತೂಹಲ ತಡೆಯಲಾರದೆ ಹೊರಗೆ ತೆಗೆದು ಅದೇನೆಂದು ಪರಿಶೀಲಿಸತೊಡಗಿದೆ. ಏನೂ ಗೊತ್ತಾಗಲಿಲ್ಲ. ಮತ್ತೆ ಕುತೂಹಲ ತಡೆಯಲಾರದೆ ನಮ್ಮ ಅತ್ತಿಗೆಯನ್ನು ಕೇಳೀಯೂ ಬಿಟ್ಟೆ. ಅದಕ್ಕವರು ಸ್ವಲ್ಪ ಹುಸಿಮುನಿಸಿನಿಂದ “ಹಾಗೆಲ್ಲ ಹೆಂಗಸರ ವ್ಯಾನಿಟಿ ಬ್ಯಾಗನ್ನು ಅವರ ಅನುಮತಿಯಿಲ್ಲದೆ ಮುಟ್ಟಬಾರದು. ಅದರಲ್ಲಿ ಏನೇನೋ ಇರುತ್ತವೆ. ನಿನಗೆ ಗೊತ್ತಿಲ್ಲ ಅಂದರೆ ವ್ಯಾನಿಟಿ ಬ್ಯಾಗಿನ ಮೇಲೆ ವೈದೇಹಿಯವರು ಬರೆದ ಪದ್ಯವೊಂದನ್ನು ಓದಿ ತಿಳ್ಕೊ” ಎಂದು ಹೇಳಿದಾಗ ಪೆಚ್ಚಾಗಿ ನಿಂತಿದ್ದೆ. ಅಂದಿನಿಂದ ಅವರ ವ್ಯಾನಿಟಿ ಬ್ಯಾಗನ್ನು ಮುಟ್ಟುತ್ತಿರಲಿಲ್ಲ. ಆದರೆ ಬೇರೆಯವರ ವ್ಯಾನಿಟಿ ಬ್ಯಾಗನ್ನು ಅವಾಗವಾಗ ನೋಡುತ್ತಿದ್ದೆ. ಏಕೆಂದರೆ ವೈದೇಹಿಯವರ ಕವನವನ್ನು ಓದಲು ನನಗಾಗ ಎಲ್ಲೂ ಸಿಕ್ಕಿರಲಿಲ್ಲ. ಸಿಕ್ಕಿದ್ದರೆ ಅವತ್ತಿನಿಂದಲೇ ಯಾರ ವ್ಯಾನಿಟಿ ಬ್ಯಾಗನ್ನು ಮುಟ್ತುತ್ತಿರಲಿಲ್ಲ. ಮುಂದೊಂದು ದಿನ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನ ಲೈಬ್ರೇರಿಯೊಂದರಲ್ಲಿ ಈ ಕವನ ಓದಲು ಸಿಕ್ಕಿತು. ಕವನ ಓದಿದ ಮೇಲೆ ಅವತ್ತೇ ಇನ್ನುಮುಂದೆ ಯಾರ ವ್ಯಾನಿಟಿ ಬ್ಯಾಗನ್ನು ಮುಟ್ಟಬಾರದೆಂದು ನಿರ್ಧರಿಸಿದೆ. ಕವನ ಆರಂಭವಾಗುವದೇ

    ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
    ಎಂದಿಗೂ ಉಚಿತವಲ್ಲ ಪುರುಷರೇ

    ಎಂದು. ಮುಂದಿನದು ಎಲ್ಲರಿಗೂ ಅರ್ಥವಾಗುವಷ್ಟು ಸರಳವಾಗಿದೆ. ಓದಿದ ಮೇಲೆ ನಾನು ಸುಸ್ತೋ ಸುಸ್ತು! ಆ ಕವನವನ್ನು ಸಂಪೂರ್ಣವಾಗಿ ಓದಿದ ಮೇಲೆ ನಾಚಿಕೆಯಾಗಿ ಅಂದಿನಿಂದ ಹೆಂಗಸರ ವ್ಯಾನಿಟಿ ಬ್ಯಾಗಿನೊಳಗನ್ನು ನೋಡುವದುಬಿಟ್ಟೆ. ತಡವಾದರೂ ಈ ವಿಷಯದಲ್ಲಿ ನನ್ನ ಕಣ್ಣು ತೆರೆಸಿದ ವೈದೇಹಿಯವರಿಗೆ ಒಂದು ದೊಡ್ದ ಥ್ಯಾಂಕ್ಸ್ ಹೇಳಿದ್ದೇನೆ. ನಿಮ್ಮ ಅವಗಾಹನೆಗಾಗಿ ಆ ಪದ್ಯವನ್ನು ಕೆಳಗೆ ಕೊಡುತ್ತಿದ್ದೇನೆ. ಓದಿ ಆನಂದಿಸಿ. ಹಾಗೆಯೇ ನೀವೇನಾದರೂ ಹೆಂಗಸರ ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುತ್ತಿದ್ದರೆ ಇನ್ನುಮುಂದಾದರೂ ದಯವಿಟ್ಟು ನಿಲ್ಲಿಸಿ. ಒಂದು ವೇಳೆ ನೋಡಿದರೂ ಅದರಲ್ಲಿ ಸಿಗುವ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಡಿ. ನಿಮಗೂ ಅದಕು ಸಂಬಂಧವಿಲ್ಲದಂತೆ ಇದ್ದು ಬಿಡಿ.

    ನೋಡಬಾರದು ಚೀಲದೊಳಗನು

    ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
    ಎಂದಿಗೂ ಉಚಿತವಲ್ಲ ಪುರುಷರೇ
    ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು
    ಬಯಲು ಮಾಡುವೇ?
    ಒಂದು ಕನ್ನಡಿ ಹಣೆಗೆ ಕಾಡಿಗೆ ಕರಡಿಗೆ
    ಪೆನ್ನು ಪೌಡರು ಕ್ಲಿಪ್ಪು ಸೆಂಟು
    ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
    ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
    ಇರಬಹುದು ಹುಣಸೆ ಬೀಜಗಳೂ!
    ವ್ಯಾನಿಟಿ ಬ್ಯಾಗಿನಲಿ ಬಟಾಣಿಯೇ ಇರಬೇಕೆಂದು
    ಉಂಟೇ ಯಾರ ರೂಲು?
    ಇದ್ದೀತು ಶುಂಠಿ ಪೆಪ್ಪರಮಿಂಟೂ, ಕಂಫಿಟ್ಟೂ.
    ಒಣಗಿ ರೂಹುಗಳಾದ ಎಲೆ- ಹೂಗಳಿರಬಹುದು
    ಇರಬಹುದು ಯಾರದೋ ಮನೆ ದಾರಿ ನಕ್ಷೆ
    ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
    ತೇದಷ್ಟೂ ಸವೆಯದಾ ನೆನಪು
    ಟಿಕ್ಕಿ ಎಲೆ ಪರಿಮಳ
    ಮರಿ ಇಡುವ ನವಿಲುಗರಿ
    ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
    ಇರಬಹುದು ಎಲ್ಲಿನದೋ ಮರುಳು- ಮಣ್ಣು.
    ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
    ಮುಗಿಯಲಾರದ ಕತ್ತಲಲ್ಲಿ
    ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
    ಗುಸುಗುಟ್ಟುತಿರಬಹುದು ಗಂಟಲಲ್ಲೇ
    ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
    ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
    ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
    ಚಂದದಕ್ಷರದ ಬಂಧದಲ್ಲಿ
    ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
    ಉತ್ಕಂಠ ರಾಗದ ಮುಟ್ಟು ಇರಬಹುದು
    ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
    ಹೆಸರಿಲ್ಲದ ಫೋಟೋ ಕೂಡ ಇರಬಹುದು!
    ಬಾಲ್ಯಯೌವನ ವೃದ್ಧಾಪ್ಯ ನೆರಳುಗಳು
    ಸೇರಿಕೊಂಡಿರಬಹುದು ಆ ಕೋಶದಲ್ಲಿ
    ಗೃಹಸ್ಥ ವೇಶ್ಯಾ ಅಭಿಸಾರ ವಾಸನೆಗಳು
    ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
    ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ
    ಇಲ್ಲವೇ ಹಲವು ಜೊತೆಗಳು?
    ಹಾಗೆಯೇ ಈ ಚೀಲದೊಳಗಿನ ಲೋಕಗಳು!
    ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
    ಒಂದೇ ಎಂದೀಗ ತೂಗಿ ನೋಡುವಿರೇನು?
    ಬೆಪ್ಪು ಕಾಪುರುಷರೇ
    ವ್ಯರ್ಥ ಕೈ ನೋವೇಕೆ?
    ತೂಗಲಾರಿರಿ ತಪ್ಪು ಸಮೀಕರಣವನು.
    ಮನಸಿನೊಳಗಡೆ ಎಂದೂ
    ಇಣುಕಲಾರಿರಿ ನೀವು, ಹುಡುಕಿ
    ತೆಗೆಯಲಾರಿರಿ ಏನನೂ
    ಇಣುಕಲಾದರೂ ಹಾಗೆ ಮಾಡಲಾಗದು ನೀವು
    ಚೀಲದೊಳಗಿನ ತಿರುಳನು
    ಹುಡುಕಿ ತೆಗೆಯಲಾದರೂ ಹಾಗೆ
    ಮಾಡಲಾಗದು ನೀವು
    ನೋಡಬಾರದು ಚೀಲದೊಳಗನು.

    - ವೈದೇಹಿ

    ಕವನ ಸಂಕಲನ - ಅಕ್ಷರ ಹೊಸ ಕಾವ್ಯ

    ಕೃಪೆ: www.kannadalyrics.com

    -ಉದಯ್ ಇಟಗಿ

    (ಸಾಧ್ಯವಾದರೆ ಮುಂದಿನ ವಾರ ಒಂದು ವಾರದ ಮಟ್ಟಿಗೆ ಇಂಡಿಯಾಗೆ ಬರುವವನಿದ್ದೇನೆ. ಅದಿನ್ನೂ ಖಾತ್ರಿಯಾಗಿಲ್ಲ. ಬಂದಾಗ ನಿಮಗೆ ತೊಂದರೆಯಾಗದಿದ್ದರೆ ಫೋನ್ ಮಾಡುವೆ. ನಿಮ್ಮ ಹಳೆಯ ನಂಬರ್ ಏನಾದರು ಚೇಂಜ್ ಆಗಿದ್ದರೆ ನನ್ನ Emailಗೆ ನಿಮ್ಮ ಫೋನ್ ನಂಬರ್ ಕಳಿಸಿ. ಈ ಕಾರಣಕ್ಕಾಗಿ ನಿಮ್ಮ ಬ್ಲಾಗುಗಳಿಗೆ ಭೇಟಿಕೊಡಲಾಗುವದಿಲ್ಲ. ದಯವಿಟ್ಟು ಕ್ಷಮಿಸಿ)