ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ‘“ವಿದೇಶದಲ್ಲಿ ಕನ್ನಡ”’ ಎನ್ನುವ ವಿಷಯದ ಮೇಲೆ ಡಾ. ಹಂ. ಪ.ನಾಗರಾಜಯ್ಯನವರು ಒಂದು ಲೇಖನವನ್ನು ಬರೆದು ಕಳಿಸಿ ಎಂದು ನನ್ನ ಕೇಳಿದಾಗ ಸಮಯದಭಾವ ಮತ್ತು ನನ್ನ ಒಂದಿಷ್ಟು ಸೋಂಬೇರಿತನದಿಂದಾಗಿ ಲೇಖನ ಕಳಿಸಿಕೊಡಲಾಗಲಿಲ್ಲ. ಈಗ ವಿಶ್ವ ಕನ್ನಡ ಸಮ್ಮೇಳನ ಮುಗಿದು ಅದರ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಿದ್ದು ಹಳೆಯ ಮಾತು. ಆದರೆ ಅದರ ಸಂಪಾದಕ ಮಂಡಳಿ ಇದೀಗ ಮತ್ತೆ ಆ ಪುಸ್ತಕವನ್ನು ಪುನರ್ ಪರಿಶೀಲಿಸಿ ಪ್ರಕಟಿಸುವದರಿಂದ ನನಗೆ ಮತ್ತೆ ಲೇಖನ ಬರೆದುಕೊಡಲು ಕೇಳಿದ್ದಾರೆ. ಹೀಗೆ ಕೇಳಿದ ಮೇಲೂ ನಾನು ಬರೆಯದೆ ಸುಮ್ಮನೆ ಕುಳಿತರೆ ಅದು ನನ್ನ ಅಹಂಕಾರವನ್ನು ಹಾಗೂ ನಿರ್ಲಕ್ಷ್ಯತನವನ್ನು ತೋರಿಸುವದರಿಂದ ಈ ಸಾರಿ ತಪ್ಪಿಸಿಕೊಳ್ಳಲು ನನ್ನ ಮನಸ್ಸು ಒಪ್ಪಲಿಲ್ಲ. ಅದರ ಪರಿಣಾಮವೇ ಈ ಲೇಖನ.
ಸಂಪಾದಕ ಮಂಡಳಿ ಹೊರನಾಡ ಕನ್ನಡಿಗರಿಗೆ ಮುಖ್ಯವಾಗಿ ಮೂರು ಪ್ರಶ್ನೆಗಳನ್ನು ಕೇಳಿತ್ತು. ಅವು ಯಾವುವೆಂದರೆ-
1. ನೀವು ಕಂಡಂತೆ ವಿದೇಶದಲ್ಲಿ ಕನ್ನಡ ಬೆಳೆದು ಬಂದ ಬಗೆ ಹೇಗೆ?
2. ಒಳನಾಡಿನ ಕನ್ನಡಿಗರಿಗಿಂತ ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯ ಮೆಲೆ ಹೆಚ್ಚು ಪ್ರೀತಿ ಹಾಗೂ ಒಲವಿರುತ್ತದಂತೆ, ಹೌದೆ?
3. ಅಲ್ಲಿಯ ಕನ್ನಡ ಸಂಘಗಳಿಂದ ನಡೆಸುವ ಚಟುವಟಿಕೆಗಳು/ಕಾರ್ಯಕ್ರಮಗಳು ಹೇಗಿರುತ್ತವೆ? ಹಾಗೂ ಅಂಥ ಕಾರ್ಯಕ್ರಮಗಳನ್ನು ನಡೆಸುವಾಗ ಸ್ಥಳೀಯ ಸರಕಾರದಿಂದ ಪ್ರೋತ್ಸಾಹವೇನಾದರೂ ಸಿಗುತ್ತದೆಯೇ? ಅಥವಾ ತೊಂದರೆಗಳೇನಾದರೂ ಎದುರಾಗುತ್ತವೆಯೇ?
ಈ ಮೇಲಿನ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖನ ಸಿದ್ಧಪಡಿಸಿ ಎಂದು ಹೇಳಿತ್ತು. ಆದ ಕಾರಣ ಲೇಖನದಲ್ಲಿ ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ. ಇದೀಗ ಅದು ಪ್ರಿಂಟಾಗಿ ಹೊರಬರಲಿದೆ ಎಂದು ಅದರ ಜವಾಬ್ದಾರಿಯನ್ನು ಹೊತ್ತುಕೊಂಡ ಜಿ. ಎನ್. ಮೋಹನ್ ಸರ್ ಹೇಳಿದ್ದಾರೆ. ಅದೇ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.
ವಿದೇಶಿ ಕನ್ನಡಿಗರು ಹಾಗೂ ಅವರ ಕನ್ನಡ ಪ್ರೇಮ ಕುರಿತಂತೆ ಒಂದು ವಿಶೇಷವಾದ ಪ್ರೀತಿ ಹಾಗು ಅಭಿಮಾನದಿಂದ ಮಾತನಾಡುವ ಚಟ ನಮ್ಮಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಏಕೆಂದರೆ ನಮಗೆ ಹತ್ತಿರದಲ್ಲಿರುವವರಿಗಿಂತ ದೂರದಲ್ಲಿರುವವರ ಬಗ್ಗೆಯೇ ಹೆಚ್ಚು ಕುತೂಹಲ ಹಾಗೂ ಆಸಕ್ತಿ. ಹೀಗಾಗಿ ಅವರೇನೇ ಮಾಡಿದರು ಅದು ವಿಶೇಷ ಅನಿಸುತ್ತದೆ ಹಾಗೂ ಸಹಜವಾಗಿ ಬೇರೆಯವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನನಗೆ ಒಂದೊಂದು ಸಾರಿ ಈ ರೀತಿಯ ಮೆಚ್ಚುಗೆ ಉತ್ಪ್ರೇಕ್ಷೆ ಅನಿಸಿಬಿಡುತ್ತದೆ. ಏಕೆಂದರೆ ಒಬ್ಬನು ವಿದೇಶದಲ್ಲಿದ್ದು ತನ್ನ ತಾಯ್ನಾಡಿಗೆ ಮರಳಿ ಬಂದು ಕನ್ನಡದಲ್ಲಿ ಮಾತನಾಡಿದರೆ ‘“ಓ! ಪರ್ವಾಗಿಲ್ರಿ ಅವನಿನ್ನೂ ಕನ್ನಡದಲ್ಲಿಯೇ ಮಾತನಾಡುತ್ತಾನೆ”’ ಎಂದು ಉದ್ಗಾರ ತೆಗೆಯುತ್ತಾರೆ. ಉದಾಹರಣೆಗೆ ಮೊನ್ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೊರನಾಡ ಕನ್ನಡತಿ ಐಶ್ಚರ್ಯ್ ರೈ ತಪ್ಪು ತಪ್ಪು ಕನ್ನಡದಲ್ಲಿ ಮಾತನಾಡಿದಾಗಲೂ ಸಹ ಜನ ಚಪ್ಪಾಳೆ ಹೊಡೆದರು. ಆಕೆಯ ಭಾಷಣಕ್ಕೆ ಚಪ್ಪಾಳೆ ಹೊಡೆದಷ್ಟು ಅನಂತಮೂರ್ತಿಯವರ ಭಾಷಣಕ್ಕಾಗಲಿ, ಶಿವರುದ್ರಪ್ಪನವರ ಭಾಷಣಕ್ಕಾಗಲಿ ಹೊಡೆಯಲಿಲ್ಲ. ಏಕೆಂದರೆ ಆಕೆ ಒಬ್ಬ ಸಿನಿಮಾ ತಾರೆ, ವಿಶ್ವ ಸುಂದರಿ ಎನ್ನುವದರ ಜೊತೆಗೆ ಹೊರನಾಡ ಕನ್ನಡತಿ ಎಂಬ ಕಾರಣವೂ ಇದ್ದಿರಬಹುದಲ್ಲವೆ ಆಕೆಗೆ ವಿಶೇಷ ರಿಯಾಯಿತಿ ತೋರಿಸಲು? ಪರ್ವಾಗಿಲ್ಲ ಇಷ್ಟಾದರು ಕನ್ನಡದಲ್ಲಿ ಮಾತನಾಡಿದಳಲ್ಲ ಎಂದು ಜನ ಅಷ್ಟಕ್ಕೆ ಸಮಾಧಾನಪಟ್ಟುಕೊಂಡರು. ಇನ್ನು ಅಲ್ಲಿಗೆ ಬಂದ ಕೆಲವು ವಿದೇಶಿ ಕನ್ನಡಿಗರು ಸಭೆಯನ್ನು ಉದ್ದೇಶಿಸಿ ಮಾತನಡುವಾಗ ಮಧ್ಯ ಮಧ್ಯ ಒಂದೆರೆಡು ವಾಕ್ಯಗಳನ್ನು ಇಂಗ್ಲೀಷಿನಲ್ಲಿಯೇ ಉದ್ದರಿಸಿದರು. ಆದರೂ ಅವರು ಅಡಿದ್ದೆಲ್ಲವೂ ಚೆಂದವಾಗಿಯೇ ಕಂಡಿತು. ಅದನ್ಯಾರು ಪ್ರತಿಭಟಿಸಲು ಹೋಗಲಿಲ್ಲ. ಏಕೆಂದರೆ ಅವರೆಲ್ಲಾ ಅಷ್ಟಾದರೂ ಕನ್ನಡಕ್ಕೆ ಕಿಂಚಿತ್ತು ಸೇವೆ ಸಲ್ಲಿಸುತ್ತಿದ್ದಾರಲ್ಲ ಎಂದು ಜನ ಭಾವಿಸಿದಂತಿತ್ತು. ಇನ್ನು ವಿದೇಶದಲ್ಲಿದ್ದವನು ಬರಹಗಾರನಾಗಿದ್ದರಂತೂ ಮುಗಿದೇಹೋಯಿತು. ಅವನದು ಕಳಪೆ ಸಾಹಿತ್ಯವಾಗಿದ್ದರೂ ಸರಿಯೇ. ದೂರದ ದೇಶದಲ್ಲಿದ್ದರೂ ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಕ್ಕರೆ ಹಾಗೂ ಒಲವು ಎಂಬ ಕನಿಕರ ಭಾವಕ್ಕೊಳಗಾಗುತ್ತದೆ. ಮಾತ್ರವಲ್ಲ ಅವರು ಬರೆದಿದ್ದು ‘ಕನ್ನಡದ ಕೈಂಕರ್ಯ’ ಎಂಬ ಅನುಕಂಪದ ಲೇಬಲ್ ನಡಿ ವಿಶೇಷ ಸ್ಥಾನಮಾನ ಗಳಿಸಿಬಿಡುತ್ತದೆ. ನನ್ನ ಪ್ರಕಾರ ಇದೇ ರೀತಿಯ ಬೆಳವಣಿಗೆಗಳು ಮುಂದುವರೆದರೆ ಇಂಥ ಕಳಪೆ ಸಾಹಿತ್ಯವನ್ನೇ ಮುಂದೆ ಎಂದಾದರೂ ಒಂದು ದಿನ ಶ್ರೇಷ್ಟ ಸಾಹಿತ್ಯ ಎಂದು ಪರಿಗಣಿಸುವ ದಿನಗಳು ದೂರವಿಲ್ಲ ಎಂದನಿಸುತ್ತದೆ.
ನಾನು ಈ ಮೊದಲೇ ಹೇಳಿದಂತೆ ಹೊರನಾಡ ಕನ್ನಡಿಗರ ಬಗ್ಗೆ ‘ವಿದೇಶದಲ್ಲಿದ್ದರೂ ಕನ್ನಡ ಭಾಷೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಒಲವು ಹಾಗೂ ಕನ್ನಡ ಭಾಷೆಯ ಮೇಲೆ ಎಲ್ಲರಿಗಿಂತ ತುಸು ಹೆಚ್ಚೇ ಅಭಿಮಾನವಿರುತ್ತದೆ’ ಎಂದು ಜನ ವೈಭವಿಕರಿಸಿ ಹೇಳುವದು ವಾಡಿಕೆ. ಆದರೆ ನನ್ನ ಪ್ರಕಾರ ಅದು ಶುದ್ಧ ತಪ್ಪು. ಅದೇನಿದ್ದರೂ ಬರೀ ಹಪಹಪಿಕೆ ಅಷ್ಟೇ. ಒಬ್ಬ ಕನ್ನಡಿಗ ಉದ್ಯೋಗ ನಿಮಿತ್ತ ಹೊರನಾಡಿಗೆ ಹೋದಾಗ ಕನ್ನಡಿಗರಿಲ್ಲದ ನೆಲದಲ್ಲಿ ಆತ ತನ್ನ ಮಾತೃಭಾಷೆಯಾದ ಕನ್ನಡವನ್ನು ಕುರಿತು ಯೋಚಿಸುವದು ಸರ್ವೇಸಾಮಾನ್ಯ. ಏಕೆಂದರೆ ಅಲ್ಲಿ ಕನ್ನಡದಲ್ಲಿ ಮಾತನಾಡುವವರು ಯಾರಾದರೂ ಸಿಗುತ್ತಾರೆಯೇ ಎಂದು ಸದಾ ಹಂಬಲಿಸುತ್ತಿರುತ್ತಾನೆ, ಹಪಹಪಿಸುತ್ತಿರುತ್ತಾನೆ. ಈ ಹಪಹಪಿಕೆಯನ್ನೇ ನಾವು ಅಭಿಮಾನವೆಂದು ತಪ್ಪಾಗಿ ಗ್ರಹಿಸುವದು ಎಷ್ಟರಮಟ್ಟಿಗೆ ಸರಿ?
ನಾವು ನಮ್ಮ ಕನ್ನಡ ನೆಲದಿಂದ ಉದ್ಯೋಗ ಅರಸಿ ಹೊರನಾಡಿಗೆ ಹೋದಾಗ ಸಹಜವಾಗಿ ನಮ್ಮ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಒಂದು ಪ್ರೀತಿ ಇದ್ದೇ ಇರುತ್ತದೆ. ಈ ಪ್ರೀತಿಯೇ ನಮ್ಮನ್ನು ನಮ್ಮ ಭಾಷೆಯ ಬಗ್ಗೆ ಸದಾ ಯೋಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ಜೊತೆಗೆ ಕನ್ನಡ ಸಂಘಗಳನ್ನು ಹುಟ್ಟುಹಾಕುವಂತೆ ಪ್ರೇರಣೆ ನೀಡುತ್ತದೆ. ನಾವು ಇಂಥ ಸಂಘಗಳನ್ನು ಹುಟ್ಟುಹಾಕುವ ಮೂಲ ಉದ್ದೇಶ ಅಲ್ಲಿರುವ ಕನ್ನಡಿಗರೆಲ್ಲರನ್ನೂ ಒಂದು ಕಡೆ ಕಲೆ ಹಾಕುವದಕ್ಕೆ. ಬರೀ ಸಂಘವೊಂದಿದ್ದರೆ ಎಲ್ಲರೂ ಒಟ್ಟಾಗಿ ಸೇರಲು ಹೇಗೆ ಸಾಧ್ಯ? ಅಲ್ಲಿ ಏನಾದರೊಂದು ಕಾರ್ಯಕ್ರಮ ನಡೆದರೆ ತಾನೆ ಸಾಧ್ಯವಾಗೋದು? ಹೀಗಾಗಿ ಅಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಇಂಥ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತಾವಾದರೂ ಅವು ಕನ್ನಡ ಭಾಷೆಯ ಬೆಳವಣಿಗೆಗೆ ಒಂಚೂರು ಸಹಾಯ ಮಾಡುವದಿಲ್ಲ ಎನ್ನುವದು ನನ್ನ ಅಭಿಪ್ರಾಯ. ಏಕೆಂದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗುವಂಥ ಯಾವೊಂದೂ ಗಂಭೀರ ಚಿಂತನೆಯೂ ಅಲ್ಲಿ ನಡೆಯುವದಿಲ್ಲ. ಅಕಸ್ಮಾತ್ ಆ ಸಂಘಗಳು ಸಾಹಿತ್ಯಿಕ ಪತ್ರಿಕೆಗಳನ್ನೇನಾದರೂ ಹೊರತರುತ್ತಿದ್ದರೆ ಅವು ಗುಣಮಟ್ಟದಲ್ಲಿ ಅತ್ಯಂತ ಕೆಳದರ್ಜೆಯಿಂದ ಕೂಡಿದ್ದು ಅವುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಲೇಖನಗಳು ಮಾತ್ರ ಚನ್ನಾಗಿರುತ್ತವೆ. ಇನ್ನುಳಿದಂತೆ ಇತರೆ ಪುಟಗಳ ತುಂಬ ಬರೀ ‘ಪುಷ್ಫ ಕವಿ’, ‘ಪೋರಿ ಕವಿ’, ‘ಮತ್ಸ್ಯ ಕವಿ’ ‘ಪತಂಗ ಕವಿ’ಗಳ ಕವನಗಳೇ ರಾರಾಜಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನಾವು ಹುಟ್ಟುಹಾಕಿದ ಕನ್ನಡದ ವೇದಿಕೆಗಳಿಂದ ನಿಜಕ್ಕೂ ಕನ್ನಡ ಭಾಷೆಯ ಬೆಳವಣಿಗೆಯಾಗುತ್ತದೆ ಎನ್ನುವದು ಬರಿ ಭ್ರಮೆ ಅಷ್ಟೇ.
ಇನ್ನು ಈ ತರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ನಮ್ಮಲ್ಲಿ ಅಲ್ಲಿಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುವದಿಲ್ಲ. ಹಾಗೆ ನಿರೀಕ್ಷಿಸುವದು ಕೂಡ ತಪ್ಪಾಗುತ್ತದೆ. ಆದರೆ ಇದುವರೆಗೂ ಲಿಬಿಯಾದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಲಿ, ಆತಂಕವಾಗಲಿ ಎದುರಾಗಿಲ್ಲ. ಹಾಗೆ ನೋಡಿದರೆ ಕರ್ನಾಟಕದಲ್ಲಿಯೇ ಇಂಥ ಪ್ರಸಂಗಗಳು ಎದುರಾಗೋದು ಹೆಚ್ಚು. ಉದಾಹರಣೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂದರೆ ಹೆಚ್ಚಾಗಿ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನೆರೆರಾಜ್ಯದವರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈಗ ವಿಶ್ವ ಕನ್ನಡ ಸಮ್ಮೇಳನವನ್ನೇ ನೋಡಿ. ಅದನ್ನು ಬೆಳಗಾವಿಯಲ್ಲಿ ನಡೆಸಕೂಡದೆಂದು ಮರಾಠಿಗರು ಎಷ್ಟೊಂದು ಬೆದರಿಕೆಯನ್ನು ಒಡ್ಡಿದ್ದರು. ಸಮ್ಮೇಳನ ಮುಗಿಯುವವರೆಗೂ ಅವರು ಏನಾದರೂ ತೊಂದರೆ ಮಾಡಿಯಾರು ಎಂಬ ಭಯ, ಆತಂಕವಿದ್ದೇ ಇತ್ತು. ಈ ತರದ ತೊಂದರೆಗಳ್ಯಾವವು ಅಲ್ಲಿ ಜರಗುವದಿಲ್ಲ ಎನ್ನುವದು ಮಾತ್ರ ನೆಮ್ಮದಿಯ ವಿಷಯ.
- ಉದಯ್ ಇಟಗಿ
ಕಲಾವಿದರು ಬೇಕಾಗಿದ್ದಾರೆ
5 ಗಂಟೆಗಳ ಹಿಂದೆ
6 ಕಾಮೆಂಟ್(ಗಳು):
ಉದಯ್
ನಿಮ್ಮ ಲೇಖನ ಚೆನ್ನಾಗಿದೆ. ನಿಮ್ಮ ನೇರ ಅಭಿವ್ಯಕ್ತಿ ಇಷ್ಟವಾಯಿತು. ಐಶ್ವರ್ಯ ರೈಗೆ ಹೆಚ್ಚು ಚಪ್ಪಾಳೆ ಬಿದ್ಇದ್ದು ಆಕೆ ಹೊರನಾಡ ಕನ್ನಡಿಗಳು ಎಂದಲ್ಲ. ಆಕೆ ಸಿನಿಮಾ ನಟಿ ಮತ್ತು ವಿಶ್ವಸುಂದರಿಯಾಗಿದ್ದವಳು ಎಂಬ ಕಾರಣಕ್ಕೆ. ಇರಬಹುದು ಅಲ್ಲವೆ?
ಸತ್ಯನಾರಾಯಣ ಸರ್,
ನಿಮ್ಮ ಮಾತನ್ನು ಒಪ್ಪುತ್ತೇನೆ. ಅವಳು ಹೊರನಾಡ ಕನ್ನಡತಿ ಎಂಬುದಕ್ಕಿಂತ ಹೆಚ್ಚಾಗಿ ಒಬ್ಬ ಸಿನಿಮಾ ನಟಿ ಎಂಬ ಕಾರಣಕ್ಕಾಗಿ ಹೆಚ್ಚು ಚಪ್ಪಾಳೆ ಬಿದ್ದಿರಬಹುದು.
ಪ್ರೀತಿಯ ಉದಯ್ ಸರ್
ಸರ್ ನಿಮ್ಮ ಲೇಖನ ಓದಿ ಖುಷಿಯಾಯ್ತು . ವಿಷಾದವೂ ಆಯ್ತು ಸರ್ .. ಬರಿ ಹೊರನಾಡ ಕನ್ನಡಿಗರೆಂಬ ಕಾರಣಕ್ಕೆ ಪುಕ್ಕಟೆ ಗೌರವ
ನೀಡುವ ಸಂಪ್ರದಾಯ ಯಾವ ನ್ಯಾಯ ಅಲ್ಲವೇ ?? ನೀವೊಬ್ಬ ಕನ್ನಡಿಗರಾಗಿದ್ದು , ಲಿಬಿಯಾದಲ್ಲಿದ್ದು , ನಿಮಗೆ ಸಿಕ್ಕ ಅವಕಾಶವನ್ನು ನೀವು
ಎಲ್ಲರಂತೆ ಆತ್ಮ ಪ್ರಶಂಸೆಗೆ ಬಳಸಿಕೊಳ್ಳದೆ ಸತ್ಯವನ್ನು , ವಾಸ್ತವವನ್ನು ಬರೆದಿದ್ದಕ್ಕೆ ಹೆಮ್ಮೆಯೆನಿಸುತ್ತದೆ ಸರ್ .. ಹಾಗೆ ನೋಡಿದರೆ ನಿಜಕ್ಕೂ ಕನ್ನಡ ಇಲ್ಲಿರುವವರಿಂದಲೂ
ಪೋಷಿಸಲ್ಪಡುತ್ತಿಲ್ಲ.. ಬೆಂಗಳೂರಿನ ಯಾವುದೇ ಬಸ್ , ಮಾಲ್ , ಕಂಪನಿ , ಲೇಔಟ್ ಗಳಲ್ಲಿ ನೀವು ನೋಡಿದರೆ ಸಣ್ಣ ಮಕ್ಕಲಿರುವಾಗಲೇ ಇಂಗ್ಲಿಷ್ ನಲ್ಲಿ ಮಾತಾಡಬೇಕೆಂಬ
ಅಘೋಷಿತ ನಿಯಮ ಜಾರಿಯಲ್ಲಿದೆ ಸರ್ .. ಇಂತ ಪರಿಸ್ತಿತಿಯಲ್ಲಿ ಹೊರಗಿರುವ ನೀವುಗಳು ಮಾಡುವ ಕನ್ನಡದ ಯಾವುದೇ ಕೆಲಸವಾದರೂ ಶ್ಲಾಘನೀಯವೇ ಅಲ್ಲವೇ ಎಂಬುದಷ್ಟೇ ನನ್ನ ಅರಿಕೆ .
ಗುಣಕ್ಕೆ ಮತ್ಸರವೇಕೆ ಅಲ್ವ ಸರ್ ??? ನಾನೂ ಕೂಡ ನಿಮ್ಮಂತೆಯೇ ನಂಬಿದ್ದೇನೆ ಅವರು ಮಾಡುವ ಒಂದು ದಿನದ ಯಾವ ಕಾರ್ಯಕ್ರಮವೂ ಕನ್ನಡದ ಏಳ್ಗೆಗೆ ಏನೋ ದೊಡ್ಡದೊಂದು
ಕಾಣ್ಕೆ ಆಗಲು ಸಾಧ್ಯವೇ ಇಲ್ಲ . ಆದರೆ " Something is better than nothing " ಅಂತಾರಲ್ಲ ಸರ್ .. ನಿಮ್ಮ ನಿರ್ಭಿಡೆಯ ಈ ಲೇಖನಕ್ಕೆ ನನ್ನ ಪ್ರೀತಿ ಪೂರ್ವಕ ಅಭಿನಂದನೆಗಳು ಸರ್ .
ನಿಮ್ಮವ ,
ಶಿವೂ .
ನಿಮ್ಮ ಲೇಖನದಲ್ಲಿ ವ್ಯಕ್ತ ಪಡಿಸಿದ ವಿಷಯಗಳನ್ನೂ ಹೊರನಾಡ ಕನ್ನಡಿಗನಾಗಿರುವ ನಾನು ಸಮರ್ಥಿಸುತ್ತೇನೆ.
-ಪ.ರಾಮಚಂದ್ರ ,
ರಾಸ್ ಲಫಾನ್, ಕತಾರ್.
ರಾಮಚಂದ್ರವರೆ,
ನೀವೂ ಒಬ್ಬ ಹೊರನಾಡ ಕನ್ನಡಿಗನಾಗಿದ್ದುಕೊಂಡು ನನ್ನ ನೇರ ಅನಿಸಿಕೆಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ಈ ಪ್ರೀತಿ ಮತ್ತು ಅಭಿಮಾನ ಹಿಗೆ ಇರಲಿ.
ಪ್ರೀತಿಯ ಶಿವುಕುಮಾರ್,
ನಿಮ್ಮ ಈ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ.
"ಹಾಗೆ ನೋಡಿದರೆ ನಿಜಕ್ಕೂ ಕನ್ನಡ ಇಲ್ಲಿರುವವರಿಂದಲೂ
ಪೋಷಿಸಲ್ಪಡುತ್ತಿಲ್ಲ.. ಬೆಂಗಳೂರಿನ ಯಾವುದೇ ಬಸ್ , ಮಾಲ್ , ಕಂಪನಿ , ಲೇಔಟ್ ಗಳಲ್ಲಿ ನೀವು ನೋಡಿದರೆ ಸಣ್ಣ ಮಕ್ಕಲಿರುವಾಗಲೇ ಇಂಗ್ಲಿಷ್ ನಲ್ಲಿ ಮಾತಾಡಬೇಕೆಂಬ
ಅಘೋಷಿತ ನಿಯಮ ಜಾರಿಯಲ್ಲಿದೆ ಸರ್ .. ಇಂತ ಪರಿಸ್ತಿತಿಯಲ್ಲಿ ಹೊರಗಿರುವ ನೀವುಗಳು ಮಾಡುವ ಕನ್ನಡದ ಯಾವುದೇ ಕೆಲಸವಾದರೂ ಶ್ಲಾಘನೀಯವೇ ಅಲ್ಲವೇ ಎಂಬುದಷ್ಟೇ ನನ್ನ ಅರಿಕೆ."
ಕನ್ನಡ ನಾಡಿನಲ್ಲಿಯೇ ಕನ್ನಡವನ್ನು ಹೇಗೆ ಬೆಳೆಸಬೇಕು ಎಂಬ ಚರ್ಚೆ, ಗಂಭೀರ ಚಿಂತನೆಗಳು ನಡೆದರೂ ಮೂಲ ಕನ್ನಡವನ್ನು ಉಳಿಸಿಕೊಳ್ಳುವದಕ್ಕೆ ನಾವಿನ್ನೂ ಹೋರಾಟ ಮಾಡುತ್ತಲೇ ಇದ್ದೇವೆ. ಇನ್ನು ಹೊರನಾಡ ಕನ್ನಡಿಗರ ಕಾರ್ಯಕ್ರಮಗಳಿಂದ ಕನ್ನಡ ಹೇಗೆ ತಾನೆ ಉದ್ದಾರವಾದೀತು?
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ