Demo image Demo image Demo image Demo image Demo image Demo image Demo image Demo image

ಗಡಾಫಿ ಗರ್ಲ್ಸ್

  • ಭಾನುವಾರ, ಆಗಸ್ಟ್ 10, 2014
  • ಬಿಸಿಲ ಹನಿ

  • ಗಡಾಫಿ ಎಷ್ಟೊಂದು ಇಂಟೆರೆಸ್ಟಿಂಗ್ ವ್ಯಕ್ತಿಯಾಗಿದ್ದನೋ ಅಷ್ಟೇ ವಿವಾದಾತ್ಮಕ ವ್ಯಕ್ತಿ ಕೂಡಾ ಆಗಿದ್ದ. ಆತ ಕೊನೆತನಕ ವಿವಾದಾತ್ಮಕ ವ್ಯಕ್ತಿಯಾಗಿಯೇ ಉಳಿದ. ಅವನೇ ವಿವಾದಗಳಿಗೆ ಸಿಲುಕಿಕೊಳ್ಳುತ್ತಿದ್ದನೋ ಅಥವಾ ವಿವಾದಗಳೇ ಅವನನ್ನು ಸುತ್ತಿಕೊಳ್ಳುತ್ತಿದ್ದವೋ ಎಂದು ನಿರ್ಧರಿಸುವದು ಕಷ್ಟ. ಜೊತೆಗೆ ಆತನ ಬಗೆಗಿನ ದಂತಕಥೆಗಳು ಕೂಡಾ ಅವನಷ್ಟೇ ಜನಪ್ರಿಯವಾಗಿದ್ದವು. ಗಡಾಫಿ ಒಬ್ಬ ಕ್ರೂರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ, ಹರಕು ಬಾಯಿಯವ ಹಾಗಂತೆ ಹೀಗಂತೆ ಇನ್ನೂ ಏನೇನೋ ಆಪಾದನೆಗಳು ಅವನ ಮೇಲಿದ್ದವು. ಆದರೆ ವಾಸ್ತವದಲ್ಲಿ ಅವೆಲ್ಲಾ ಆಧಾರರಹಿತವಾಗಿದ್ದವು. ಹಾಗೆ ನೋಡಿದರೆ ಗಡಾಫಿ ಅಧಿಕಾರಕ್ಕೆ ಬಂದ ಮುಂಚಿನ ಕೆಲವು ವರ್ಷಗಳಲ್ಲಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕ್ರೂರಿಯಾಗಿದ್ದು ನಿಜ. ಆದರೆ ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕ್ರೂರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ, ಲಂಪಟನಾಗಲಿ. ಐಷಾರಮಿಯಾಗಲಿ. ಲಿಬಿಯನ್ನರ ರಕ್ತ ಹೀರಿದವನಾಗಲಿ ಯಾವತ್ತೂ ಆಗಿರಲಿಲ್ಲ. ಬದಲಿಗೆ ಆತ ಲಿಬಿಯನ್ನರನ್ನು ತಾನು ಅಧಿಕಾರಕ್ಕೆ ಬಂದ ದಿನದಿಂದಲೂ ಎಷ್ಟು ಚನ್ನಾಗಿ ನೋಡಿಕೊಂಡಿದ್ದ ಮತ್ತು ಅವರಿಗೆ ಏನೆಲ್ಲಾ, ಎಷ್ಟೆಲ್ಲಾ ಸೌಲತ್ತುಗಳನ್ನು ಕೊಟ್ಟಿದ್ದನೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಇನ್ನು ಆತ ತಿಕ್ಕಲು ಮತ್ತು ಹರಕು ಬಾಯಿಯವನಾಗಿದ್ದಂತೂ ನಿಜ. ಆತ ಎಂಥ ತಿಕ್ಕಲುನಾಗಿದ್ದ ಮತ್ತು ಆತನ ತಿಕ್ಕಲುತನದಿಂದಾಗಿ ಹೇಗೆ ಇಡಿ ಲಿಬಿಯಾ ಒಂದು ದಶಕದ ಕಾಲ ಇಂಗ್ಲೀಷ್ ಭಾಷೆಯ ಕಲಿಕೆಯಿಲ್ಲದೆ ಕತ್ತಲ ಕೂಪದಲ್ಲಿ ಮುಳುಗುವಂತಾಯಿತು ಎಂಬುದನ್ನು ಸಹ ನಾನು ನಿಮಗೆ ಈ ಹಿಂದಿನ (ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ) ಕಂತಿನಲ್ಲಿ ಹೇಳಿದ್ದೇನೆ.
    ನಾನು ಈ ಮೊದಲೇ ಹೇಳಿದಂತೆ ಕೆಲವು ಆಫ್ರಿಕನ್ ಪತ್ರಿಕೆಗಳನ್ನು ಹೊರತುಪಡಿಸಿ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿಯನ್ನು ಮುಂಚಿನಿಂದಲೂ ಅವನೊಬ್ಬ ಖಳನಾಯಕನೆಂಬಂತೆ ಚಿತ್ರಿಸಿಕೊಂಡು ಬಂದವು. ಅಷ್ಟೇ ಏಕೆ? ಅವರು ಅವರಿವರ ಬಾಯಿಂದ ಅವನ ಖಾಸಗಿ ವಿಷಯಗಳಿಗೆ ಬಗ್ಗೆ ತಿಳಿದುಕೊಂಡು, ಅವುಗಳಿಗೆ ರೆಕ್ಕೆಪುಕ್ಕ ಕಟ್ಟಿ, ಇಲ್ಲಸಲ್ಲದ್ದನ್ನು ಹೇಳಿ ರೋಚಕವಾಗಿ ವರದಿ ಮಾಡಿದವು. ಅದಕ್ಕೆ ಅವನ “ಹುಡುಗಿಯರು” ಕೂಡಾ ಹೊರತಾಗಿರಲಿಲ್ಲ. ಆ ಹುಡುಗಿಯರನ್ನು ಗಡಾಫಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಅದಕ್ಕೆಂದೇ ಅವರನ್ನು ತನ್ನ ಅರಮನೆಯಲ್ಲಿ ಇಟ್ಟುಕೊಂಡಿದ್ದ ಹಾಗಂತೆ ಹೀಗಂತೆ ಅಂತೆಲ್ಲಾ ಅಂತೆಕಂತೆಗಳ ಸುದ್ದಿ ಹಬ್ಬಿಸಿದ್ದರು. ಹಾಗಾಗಿ ಈ ವಿಷಯದಲ್ಲಿ ಗಡಾಫಿ ಎಷ್ಟೊಂದು ಕುಪ್ರಸಿದ್ಧಿಯನ್ನು ಪಡೆದಿದ್ದನೋ ಅಷ್ಟೇ ಕುಪ್ರಸಿದ್ಧಿಯನ್ನು ಅವನ “ಹುಡುಗಿಯರು” ಸಹ ಪಡೆದಿದ್ದರು. ಮಾಧ್ಯಮಗಳು ಅವರನ್ನೆಲ್ಲಾ “ಗಡಾಫಿ ಗರ್ಲ್ಸ್” ಎಂದೇ ಪರಿಹಾಸ ಮಾಡುತ್ತಿದ್ದವು.
    ಹಾಗಾದರೆ ಗಡಾಫಿ ಗರ್ಲ್ಸ್ ಎಂದರೆ ಯಾರು? ಅವರಿಗೂ ಗಡಾಫಿಗೂ ಏನು ಸಂಬಂಧ? ಅವರ ಸುತ್ತ ಹರಡಿಕೊಂಡಿದ್ದ ಕಥೆಗಳೆನು? ಅವು ಎಷ್ಟು ನಿಜವಾಗಿದ್ದವು ಮತ್ತು ಎಷ್ಟು ಸುಳ್ಳಿನಿಂದ ಕೂಡಿದ್ದವು ಎಂಬುದನ್ನು ಈಗ ನೋಡೋಣ.
    ಅಂಗರಕ್ಷಕಿಯರು (ಬಾಡಿಗಾರ್ಡ್ಸ್):
    ಅಸಲಿಗೆ ಗಡಾಫಿ ಗರ್ಲ್ಸ್ ಎಂದರೆ ಬೇರೆ ಯಾರೂ ಅಲ್ಲ. ಆತನ ಅಂಗರಕ್ಷಣೆಗೆಂದು ಅವನಿಂದಲೇ ನೇಮಕವಾದ ಅಂಗರಕ್ಷಕಿಯರು (ಬಾಡಿಗಾರ್ಡ್ಸ್) ಮತ್ತು ಪ್ರತಿನಿತ್ಯ ಆತನ ಆರೋಗ್ಯ ತಪಾಸಣೆ ಮಾಡಲು ನೇಮಕವಾದ ಉಕ್ರೇನಿಯನ್ ನರ್ಸ್‍ಗಳು. ಅವರೆಲ್ಲಾ ದಿನದ ಇಪ್ಪತ್ನಾಲ್ಕು ಘಂಟೆ ಸರದಿಯ ಮೇಲೆ ಅವನ ಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೇ ವಿನಃ ಯಾವತ್ತೂ ಅವನೊಟ್ಟಿಗೆ ಅವನ ಮನೆಯಲ್ಲಿ ಇರುತ್ತಿರಲಿಲ್ಲ. ಅವರೆಲ್ಲಾ ಬೇರೆಬೇರೆ ಕಡೆ ಇದ್ದು ತಮ್ಮ ಸರದಿ ಬಂದಾಗ ಕರ್ತವ್ಯ ನಿರ್ವಹಿಸಲು ಅವನ ಮನೆಗೆ ಬರುತ್ತಿದ್ದರು. ಆದರೆ ಅವರೆಲ್ಲಾ ಹೊರಗಡೆ ವಾಸಿಸುವಾಗ ಗಡಾಫಿಯ ಸುರಕ್ಷತೆಯ ದೃಷ್ಟಿಯಿಂದ ಅವರ ಚಲನವಲನಗಳನ್ನು ಮತ್ತು ಫೋನ್ ಕಾಲ್‍ಗಳನ್ನು ಅವರಿಗೆ ಗೊತ್ತಿಲ್ಲದಂತೆ ಗಮನಿಸಲಾಗುತ್ತಿತ್ತು.
    ಅದೆಲ್ಲಾ ಇರಲಿ. ಜಗತ್ತಿನ ಬೇರೆಲ್ಲಾ ನಾಯಕರುಗಳು ತಮ್ಮ ಅಂಗರಕ್ಷಣೆಗೆ ಪುರುಷ ಸೈನಿಕರನ್ನು ನೇಮಿಸಿಕೊಂಡರೆ ಗಡಾಫಿ ಮಾತ್ರ ಯಾಕೆ ತನ್ನ ಅಂಗರಕ್ಷಣೆಗೆ ಮಹಿಳಾ ಸೈನಿಕರನ್ನೇ ನೇಮಿಸಿಕೊಳ್ಳುತ್ತಿದ್ದ? ಅವನಿಗೆ ಸ್ತ್ರೀಯರೆಂದರೆ ಅಷ್ಟು ವ್ಯಾಮೋಹವಿತ್ತೆ? ಅಥವಾ ಆತ ನಿಜಕ್ಕೂ ಹೆಣ್ಣುಬಾಕನಾಗಿದ್ದು ಅವರೊಂದಿಗೆ ಚಕ್ಕಂದವಾಡುತ್ತಿದ್ದನೆ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿತ್ತೆ? ಎಂಬ ಇತಿಹಾಸವನ್ನು ಅವನ “ಗ್ರೀನ್ ಬುಕ್” ಮತ್ತು ಸ್ಥಳಿಯರ ಅಬಿಪ್ರಾಯದ ಹಿನ್ನೆಲೆಯಲ್ಲಿ ಕೆದಕುತ್ತಾ ಹೋದರೆ ನಮಗೆ ಗೊತ್ತಾಗುವದಿಷ್ಟೇ. ಗಡಾಫಿ ಒಬ್ಬ ಮುಸ್ಲಿಂ ನಾಯಕನಾಗಿದ್ದರೂ ಮುಂಚಿನಿಂದಲೂ ಮಹಿಳಾಪರ ಧೋರಣೆಯನ್ನು ಹೊಂದಿದವನಾಗಿದ್ದು ಆತ ಪರುಷರನ್ನು ಮತ್ತು ಮಹಿಳೆಯರನ್ನು ಸರಿಸಮನಾಗಿ ಕಾಣುತ್ತಿದ್ದ ಹಾಗೂ ತನ್ನ ದೇಶದ ಮಹಿಳೆಯರಿಗೆ ಸಮಾಜದ ಎಲ್ಲ ರಂಗಗಳಲ್ಲಿ ಸರಿಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ಏಕೆಂದರೆ ಅವನಿಗ ಮಹಿಳೆಯರ ಕಾರ್ಯದಕ್ಷತೆಯ ಬಗ್ಗೆ ಅಷ್ಟೊಂದು ವಿಶ್ವಾಸವಿತ್ತು. ಹಾಗೆಂದೇ ಗಡಾಫಿ ತನ್ನ ಅಂಗರಕ್ಷಣೆಗೆ ಮಹಿಳಾ ಸೈನಿಕರನ್ನು ನೇಮಿಸಿಕೊಳ್ಳುತ್ತಿದ್ದ ಮತ್ತು ಹಾಗೆ ನೇಮಿಸಿಕೊಳ್ಳುವದರ ಮೂಲಕ ಆತ ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟ. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿನವರು ಹೇಳುತ್ತಾರೆ. ಆ ನಿಟ್ಟಿನಲ್ಲಿ ಗಡಾಫಿ ಮಹಿಳೆಯರನ್ನು ತನ್ನ ಅಂಗರಕ್ಷಕಿಯರನ್ನಾಗಿ (ದೇಶದ ಮಿಲ್ಟ್ರಿಪಡೆಯ ಅತ್ಯುನ್ನತ ಹುದ್ದೆ) ನೇಮಿಸಿಕೊಳ್ಳುವದರ ಮೂಲಕ ಅವರ ಕಾರ್ಯದಕ್ಷತೆಯನ್ನು ಹೊರಜಗತ್ತಿಗೆ ಮನದಟ್ಟು ಮಾಡಿದ ಪ್ರಪಂಚದ ಮೊಟ್ಟಮೊದಲ ಗಂಡಸೆಂಬ ಹೆಗ್ಗಳಿಕೆಗೆ ಪಾತ್ರನಾದ.

     

    1972 ರಲ್ಲಿ ಗಡಾಫಿ ತನ್ನ ದೇಶದ ಮುಖ್ಯಸ್ಥ ಹುದ್ದೆಗೆ ರಾಜೆನಾಮೆಯನ್ನಿತ್ತು “Brotherly Leader and Guide of the First of September Great Revolution of the Socialist People's Libyan Arab Jamahiriya” ಎಂಬ ಆಕರ್ಷಕ ಬಿರುದನ್ನಿಟ್ಟುಕೊಂಡು ದೇಶವನ್ನು ಆಳತೊಡಗಿದನೋ ಆಗ ತನ್ನ ಅಂಗರಕ್ಷಣೆಗಾಗಿ ಮಹಿಳೆಯರನ್ನು ನೇಮಿಸಿಕೊಂಡ. ಅವರ ಸಂಖ್ಯೆ ಸುಮಾರು 300-4೦೦ ರಷ್ಟಿದ್ದು ಅವರು ಸರದಿಯ ಮೇಲೆ ದಿನದ ಇಪ್ಪತ್ನಾಲ್ಕು ಘಂಟೆ ಗಡಾಫಿಯ ಕಾವಲು ಕಾಯಬೇಕಿತ್ತು. ಅವರೆಲ್ಲಾ ಲಿಬಿಯನ್ ಹುಡುಗಿಯರೇ ಆಗಿದ್ದು ಆತನ ಅಂಗರಕ್ಷಕರಾಗಲು ಅನೇಕ ಸುತ್ತುಗಳ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಕೊನೆಯ ಸುತ್ತಿನ ಆಯ್ಕೆಯನ್ನು ಗಡಾಫಿಯೇ ಮಾಡುತ್ತಿದ್ದ ಹಾಗೂ ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸೈನಿಕರಿಂದ “ನಾವು ನಮ್ಮ ನಾಯಕನ ರಕ್ಷಣೆಗಾಗಿ ಸದಾ ಸಿದ್ಧ ಮತ್ತು ಅಗತ್ಯ ಬಿದ್ದರೆ ನಮ್ಮ ಪ್ರಾಣವನ್ನು ಬಲಿ ಕೊಟ್ಟಾದರು ಸರಿ ನಮ್ಮ ನಾಯಕನನ್ನು ಕಾಪಾಡುತ್ತೇವೆ ಮತ್ತು ನಾವು ಸೇವೆಯಲ್ಲಿರುವವರೆಗೂ ಕನ್ಯೆಯರಾಗಿಯೇ ಉಳಿಯತ್ತೇವೆ” ಎಂಬ ಪ್ರಮಾಣವಚನವನ್ನು ತೆಗೆದುಕೊಳ್ಳುತ್ತಿದ್ದ. 
     
    ಹಾಗೆ ನೇಮಕವಾದ ಅಂಗರಕ್ಷಕಿಯರಲ್ಲಿ ಗಡಾಫಿಗೆ ಮೂರು ಜನ ಅತ್ಯಂತ ನಂಬಿಕಸ್ತ ಅಂಗರಕ್ಷಕಿಯರಿದ್ದರು. ಅವರು ಕಾಯಂ ಆಗಿ ಅವನ ಹತ್ತಿರವೇ ಇರುತ್ತಿದ್ದರು ಹಾಗೂ ಅವನು ಎಲ್ಲೇ ಹೊದರು ಆ ಮೂರು ಜನರನ್ನು ಅವನೊಂದಿಗೆ ಕರೆದೊಯ್ಯುತ್ತಿದ್ದ. ಆದರೆ ಆತ ವಿದೇಶಕ್ಕೆ ಹೋದಾಗಲೆಲ್ಲಾ ಹೆಚ್ಚುವರಿಯಾಗಿ ತಾನೇ ಆರಿಸಿದ ಇತರೆ ನಾಲ್ಕು ಜನ ಅಂಗರಕ್ಷಕಿಯರನ್ನು ಕರೆದೊಯ್ಯುತ್ತಿದ್ದ. ಆ ಮೂರು ನಂಬಿಕಸ್ತ ಅಂಗರಕ್ಷಕಿಯರಲ್ಲಿ ಒಬ್ಬಳು ಸೆಭಾದ ಹತ್ತಿರವಿರುವ ತರಗನ್ ಎಂಬ ಊರಿನವಳು. ಆಕೆ ಹೇಳುವ ಪ್ರಕಾರ ಗಡಾಫಿ ತನ್ನ ವಿದೇಶ ಪ್ರವಾಸಕ್ಕಾಗಿ ಹೆಚ್ಚುವರಿಯಾಗಿ ಇತರೆ ನಾಲ್ಕು ಜನ ಅಂಗರಕ್ಷಕಿಯರನ್ನು ತಾನೇ ಆಯ್ಕೆ ಮಾಡಿ ಕರೆದೊಯ್ಯುತ್ತಿದ್ದ. ಹಾಗೆ ಆಯ್ಕೆಯಾದವರು ಎಷ್ಟು ಸಂತೋಷಪಡುತ್ತಿದ್ದರೆಂದರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಏಕೆಂದರೆ ಹಾಗೆ ಹೋದವರಿಗೆ ಗಡಾಫಿ ತನ್ನ ಭಾವಚಿತ್ರವಿರುವ ಚಿನ್ನದ ವಾಚೊಂದನ್ನು ಉಡುಗೊರೆಯಾಗಿ ಕೊಡುತಿದ್ದನಲ್ಲದೇ ಬೋನಸ್ ಸಹ ಕೊಡುತ್ತಿದ್ದ. ಆ ಕಾರಣಕ್ಕಾಗಿ ಎಲ್ಲರೂ ತಮ್ಮನ್ನು ಆರಿಸಲಿ ತಮ್ಮನ್ನು ಆರಿಸಲಿ ಎಂಬ ಅಪೇಕ್ಷೆಯಿಂದ ಉತ್ಸುಕರಾಗಿ ಕಾಯುತ್ತಿದ್ದರಂತೆ. ಒಂದೊಂದು ಸಾರಿ ಗಡಾಫಿ ಕರೆದೊಯ್ದವರನ್ನೇ ಮತ್ತೊಮ್ಮೆ ಕರೆದೊಯ್ಯುತ್ತಿದ್ದನಂತೆ. ಹೀಗೆ ಆಯ್ಕೆ ಮಾಡುವದಕ್ಕೆ ನಿರ್ಧಿಷ್ಟ ಮಾನದಂಡಗಳೇನೂ ಇರಲಿಲ್ಲ. ಅದೆಲ್ಲಾ ಗಡಾಫಿಯ ಮೂಡು ಮತ್ತು ಆ ಹುಡುಗಿಯರ ಅದೃಷ್ಟವನ್ನು ಅವಲಂಬಿಸಿತ್ತಿರುತ್ತಂತೆ.        
    ಹಾಗಾದರೆ ಜಗತ್ತಿನ ಬಹುತೇಕ ಮಾಧ್ಯಮಗಳು ಹೇಳುವಂತೆ ಅವರೆಲ್ಲಾ ನಿಜಕ್ಕೂ ಸುಂದರಿಯರಾಗಿದ್ದರೆ? ಖಂಡಿತ ಎಲ್ಲರೂ ಸುಂದರಿಯರಾಗಿರಲಿಲ್ಲ. ಆದರೆ ಅವರೆಲ್ಲಾ ಗಡಾಫಿಯ ಮುಂದೆ ಸದಾ ಸುಂದರವಾಗಿ ಕಾಣಬೇಕಿತ್ತು. ಹಾಗೆಂದೇ ಅವರು ಸದಾ ಮುಖಕ್ಕೆ ಮೇಕಪ್ ಹಾಕಿಕೊಳ್ಳುತ್ತಿದ್ದರು, ತುಟಿಗಳಿಗೆ ಬಣ್ಣ ಬಳಿದುಕೊಳ್ಳುತ್ತಿದ್ದರು, ಉಗುರುಗಳಿಗೆ ನೇಲ್ ಪಾಲೀಶ್ ಹಚ್ಚಿಕೊಳ್ಳುತ್ತಿದ್ದರು ಹಾಗೂ ಹೈಹೀಲ್ಡ್ ಚಪ್ಪಲಿಗಳನ್ನು ಧರಿಸಿಕೊಂಡು ಸುಂದರವಾಗಿ ಕಾಣುತ್ತಿದ್ದರು. ಏಕೆಂದರೆ ಗಡಾಫಿ ಒಬ್ಬ ಸೌಂದರ್ಯ ಆರಾಧಕನಾಗಿದ್ದು ತನ್ನ ಸುತ್ತಲೂ ಸುಂದರವಾದ ವಸ್ತುಗಳು ಮತ್ತು ಸುಂದರವಾದ ಮನುಷ್ಯರಿರಬೇಕೆಂದು ಇಷ್ಟಪಡುತ್ತಿದ್ದ ಎಂದು ಆತನನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಅವರೆಲ್ಲಾ ಎಷ್ಟು ನಿಷ್ಟೆಯಿಂದ ಕೆಲಸ ಮಾಡುತ್ತಿದ್ದರೆಂದರೆ ತಮ್ಮ ನಾಯಕನ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಸಹ ಬಲಿ ಕೊಡಲು ಸಿದ್ಧರಿದ್ದರು. ಒಮ್ಮೆ ಅಂದರೆ 1998 ರಲ್ಲಿ ಗಡಾಫಿ ಲಿಬಿಯಾದ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ ಕೆಲವು ಇಸ್ಲಾಂ ಮೂಲಭೂತವಾದಿಗಳು ಆತನ ಮೇಲೆ ಗುಂಡಿನ ಮಳೆಗರೆಯಲು ಪ್ರಯತ್ನಿಸಿದರು. ಆಗ ಆಯಿಷಾ ಎನ್ನುವ ಆಪ್ತ ಅಂಗರಕ್ಷಕಿ ಅವನಿಗೆ ಅಡ್ಡಲಾಗಿ ನಿಂತು ತಾನೇ ಗುಂಡುಗಳನ್ನು ತಾಕಸಿಕೊಂಡು ಅವನ ಪ್ರಾಣವನ್ನು ರಕ್ಷಿಸಿದಳು.
    ಅದೆಲ್ಲಾ ಸರಿ. ಗಡಾಫಿ ಯಾಕೆ ತನ್ನ ಅಂಗರಕ್ಷಕಿಯರೆಲ್ಲಾ ಕನ್ಯೆಯರೇ ಆಗಿರಬೇಕೆಂದು ಬಯಸುತ್ತಿದ್ದ? ಇದರ ಹಿಂದೆ ಏನು ಬಲವಾದ ಕಾರಣವಿತ್ತು? ಎಂದು ಕೇಳಿದರೆ ವಿದೇಶಿ ಮಾಧ್ಯಮಗಳು ಹೀಗೆ ಹೇಳುತ್ತವೆ; ಕನ್ಯೆಯರೇ ಯಾಕಿರಬೇಕಿತ್ತು ಎಂದರೆ ವಿಕೃತ ಕಾಮಿಯಾದ ಗಡಾಫಿ ತನ್ನ ಅಂಗರಕ್ಷಕಿಯರನ್ನು ಆಗಾಗ ಲೈಂಗಿಕವಾಗ ಶೋಷಿಸುತ್ತಿದ್ದನಲ್ಲದೇ ಅವರ ಮೀಸಲು ಮುರಿಯುವದರಲ್ಲಿ ಅವನು ಏನೋ ಒಂದು ವಿಲಕ್ಷಣ ತೃಪ್ತಿಯನ್ನು ಕಾಣುತ್ತಿದ್ದ ಎಂದು ಹೇಳುತ್ತವೆ. ಆದರೆ ಸ್ಥಳೀಯರ ಪ್ರಕಾರ ಇದೆಲ್ಲಾ ಬರೀ ಬೊಗಳೆ, ಆತ ಕನ್ಯೆಯರನ್ನೇ ಯಾಕೆ ತನ್ನ ಅಂಗರಕ್ಷಕಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದನೆಂದರೆ ಪ್ರಾಚೀನ ಕಾಲದಲ್ಲಿ ಗ್ರೀಕರಲ್ಲಿ ಒಂದು ನಂಬಿಕೆಯಿತ್ತು; ಕನ್ಯೆಯರಾದವರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಮತ್ತು ಗಮನವಿರುತ್ತದೆ ಹಾಗೂ ಅವರಿಗೆ ನಾವೇನೇ ಹೇಳಿದರೂ ಅದನ್ನು ಲಕ್ಷವಿಟ್ಟು ಮಾಡುತ್ತಾರೆ. ಈ ನಂಬಿಕೆಯನ್ನು ಗಡಾಫಿ ಕೂಡಾ ಬಲವಾಗಿ ನಂಬಿದ್ದ. ಹೀಗಾಗಿ ಅವನು ಸದಾ ಕನ್ಯೆಯರನ್ನೇ ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಳ್ಳುತ್ತಿದ್ದ.
    ಅಂದಹಾಗೆ ಗಡಾಫಿಯ ಅಷ್ಟು ಜನ ಅಂಗರಕ್ಷಕಿಯರು ಏನಾದರು? ಕ್ರಾಂತಿಯ ಸಮಯದಲ್ಲಿ ಕೆಲವರು ಬಂಧಿತರಾದರು, ಕೆಲವರು ನ್ಯಾಟೋ ದಾಳಿಯಲ್ಲಿ ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಲ್ಲಿ ತಲೆತಪ್ಪಿಸಿಕೊಂಡರು. ಯಾವಾಗ ಟ್ರಿಪೋಲಿ ಗಡಾಫಿಯ ಹಿಡಿತದಿಂದ ತಪ್ಪಿಹೋಯಿತೋ ಆಗ ತನ್ನ ಉಳಿದ ಅಷ್ಟು ಜನ ಅಂಗರಕ್ಷಕಿಯರಿಗೆ ಆತಇನ್ನು ನನ್ನನ್ನು ಬಿಟ್ಟುಬಿಡಿ. ನೀವು ಎಲ್ಲಾದರೂ ಪಾರಾಗಿ” ಎಂದು ಹೇಳಿದನಂತೆ. ಪ್ರಕಾರ ಪಾರಾಗುವ ಸಂದರ್ಭದಲ್ಲಿ ಕೆಲವರು ಸಿಕ್ಕಿಬಿದ್ದರು. ಕೆಲವರು ಬಂಡುಕೋರರ ಕೈಗೆ ಸಿಕ್ಕು ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಿಗೆ ಓಡಿಹೋದರು.
    ನರ್ಸುಗಳು:
    ಗಡಾಫಿಗೆ ನರ್ಸುಗಳ ಕ್ರೇಜು ವಿಪರೀತ ಇತ್ತು, ಹಾಗೆಂದೇ ಆತ ತನ್ನ ಮನೆ ತುಂಬಾ ನರ್ಸುಗಳನ್ನು ತುಂಬಿಕೊಂಡು ಅವರನ್ನು ಸಹ ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಎಂದಿನಂತೆ ವಿದೇಶಿ ಪತ್ರಿಕೆಗಳು ಮತ್ತು ಟೀವಿ ಮಾಧ್ಯಮಗಳು ಅದೇ ಹಳೆಯ ಹಾಡನ್ನೇ ಹಾಡಿದ್ದವು. ಆದರೆ ವಾಸ್ತವದಲ್ಲಿ ಬೇರೆಯದೇ ಸಂಗತಿ ಇತ್ತು. ಗಡಾಫಿಗೆ ತನ್ನ ಆರೋಗ್ಯದ ಬಗ್ಗೆ ವಿಪರೀತ ಕಾಳಜಿಯಿತ್ತು. ಅದಕ್ಕಾಗಿ ಆತ ತನ್ನ ಮತ್ತು ತನ್ನ ಕುಟುಂಬದವರ ಆರೋಗ್ಯ ತಪಾಸಣೆಗಾಗಿ ತನ್ನ ಮನೆಯಲ್ಲಿ ಇಬ್ಬರು ನುರಿತ ಲಿಬಿಯನ್ ಡಾಕ್ಟರುಗಳನ್ನು ಮತ್ತು ಐದು ಜನ ಉಕ್ರೇನಿಯನ್ ನರ್ಸುಗಳನ್ನು ಕಾಯಾಂಗಿ ನೇಮಿಸಿಕೊಂಡಿದ್ದ. ಅವರೆಲ್ಲಾ ಸರದಿಯ ಮೇಲೆ ಬಂದು ಕೆಲಸ ಮಾಡುತ್ತಿದ್ದರು. ಮೇಲಾಗಿ ಗಡಾಫಿಗೆ ಮುಂಚಿನಿಂದಲೂ ರಕ್ತದೊತ್ತಡ ಇದ್ದಿದ್ದರಿಂದ ಆಗಾಗ್ಗೆ ವೈದ್ಯಕೀಯ ಸಲಹ ಪಡೆಯಲು ನುರಿತ ವೈದ್ಯರು ಮತ್ತು ನರ್ಸುಗಳ ಪರಿವಾರವನ್ನೇ ಇಟ್ಟುಕೊಂಡಿದ್ದ. ಜೊತೆಗೆ ತಾನು ವಿದೇಶಕ್ಕೆ ಹೋದಾಗಲೆಲ್ಲಾ ಅವರನ್ನು ತನ್ನ ಸಂಗಡ ಕರೆದೊಯ್ಯುತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಇಂಗ್ಲೀಷ್ ಪತ್ರಿಕೆಗಳು ಮತ್ತು ಟೀವಿ ಚಾನಲ್ ಗಳು ಅವನ ಮತ್ತು ಅವನ ನರ್ಸುಗಳ ಬಗ್ಗೆ ಕೆಟ್ಟದಾಗಿ ವರದಿ ಮಾಡಿದವು.
    ಆದರೆ ಗಡಾಫಿಯನ್ನು ತುಂಬಾ ಹತ್ತಿರದಿಂದ ನೋಡಿದ ಹಾಗೂ ಅವನ ಐದು ನರ್ಸುಗಳಲ್ಲಿ ಒಬ್ಬಳಾದ ಓಸ್ಕಾನಾ ಬಾಲಿನ್ಸ್ಕಾಯ ಗಡಾಫಿ ಬಗ್ಗೆ ಕೊಡುವ ಚಿತ್ರಣವೇ ಬೇರೆ. ಆಕೆ ಅವನನ್ನು ಕುರಿತು ಹೀಗೆ ಹೇಳುತ್ತಾಳೆ; ನಾವೆಲ್ಲರೂ (ಉಕ್ರೇನಿಯನ್ ನರ್ಸುಗಳು) ಅವನನ್ನು ‘ಡ್ಯಾಡಿ’ ಎಂದೇ ಕರೆಯುತ್ತಿದ್ದೆವು. ನಾವು ದಿನನಿತ್ಯ ಡ್ಯಾಡಿಯ ರಕ್ತದೊತ್ತಡವನ್ನು ಪರೀಕ್ಷಿಸಿ ಅದಕ್ಕೆ ತಕ್ಕನಾಗೆ ಮಾತ್ರೆಗಳನ್ನು ಕೊಡುತ್ತಿದ್ದೆವು. ಇದೊಂದನ್ನು ಬಿಟ್ಟರೆ ಡ್ಯಾಡಿ ಮಿಕ್ಕೆಲ್ಲಾ ವಿಷಯಗಳಲ್ಲಿ ಆರೋಗ್ಯವಂತನಾಗಿದ್ದ. ಡ್ಯಾಡಿ ನಮಗೆ ಕೆಲಸ ಕೊಟ್ಟ, ಒಳ್ಳೆ ಸಂಬಳ ಕೊಟ್ಟ, ಒಳ್ಳೆ ಬದುಕನ್ನು ಕೊಟ್ಟ. ಡ್ಯಾಡಿ ನಮ್ಮ ಬಗ್ಗೆ ಅತೀವ ಕಾಳಜಿಯನ್ನು ತೋರಿಸುತ್ತಿದ್ದು ನಾವಲ್ಲಿ ನಮ್ಮ ಮನೆ ಮತ್ತು ಮಕ್ಕಳೊಂದಿಗೆ ಸುಖವಾಗಿ ಇದ್ದೇವೋ ಇಲ್ವೋ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಆತ ಪ್ರತಿ ವರ್ಷ ಸಪ್ಟಂಬರ್ 1 ರಂದು (ಅದು ಆತ ಅಧಿಕಾರಕ್ಕೆ ಬಂದ ದಿನ) ನಮಗೆ ಬೆಲೆಬಾಳುವ ಉಡುಗೂರೆಗಳನ್ನು ಹಾಗೂ ತನ್ನ ಭಾವ ಚಿತ್ರವಿರುವ ಬಂಗಾರದ ವಾಚನ್ನು ಗಿಫ್ಟಾಗಿ ಕೊಡುತ್ತಿದ್ದನಲ್ಲದೇ ನಮ್ಮೆಲ್ಲರನ್ನೂ ಗೌರವದಿಂದ ಕಾಣುತ್ತಿದ್ದ. ದುರಂತವೆಂದರೆ ಆತ ನಮ್ಮನ್ನು ಮತ್ತು ತನ್ನ ಅಂಗರಕ್ಷಕಿಯರನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದ ಎಂಬ ಗಾಳಿಸುದ್ದಿಯನ್ನು ಯಾರು ಹಬ್ಬಿಸಿದರೋ, ಯಾಕೆ ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಡ್ಯಾಡಿ ಯಾವತ್ತೂ ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. 
     
    ನಮ್ಮ ವೇಷ ಭೂಷಣಗಳ ಬಗ್ಗೆ ಕೆಲವು ಕಟ್ಟಳೆಗಳನ್ನು ವಿಧಿಸಿದ್ದ ಅಷ್ಟೇ. ನಾವು ಲಿಪ್ಸ್ಟಿಕ್ ಹಾಕುವದಾಗಲಿ, ಬಣ್ಣಬಣ್ಣದ ಉಡುಗೆಗಳನ್ನು ತೊಡುವದನ್ನಾಗಲಿ ಮಾಡುವಂತಿರಲಿಲ್ಲ. ನರ್ಸುಗಳು ಸೇವೆಗೆ ಒತ್ತು ಕೊಡಬೇಕೇ ಹೊರತು ವೇಷಭೂಷಣಕ್ಕಲ್ಲ ಎನ್ನುವದು ಅವನ ಅಭಿಪ್ರಾಯವಾಗಿತ್ತು. ನಾವು ಡ್ಯಾಡಿಯನ್ನು ಅವನ ರಕ್ತದೊತ್ತಡವನ್ನು ಪರೀಕ್ಷೆ ಮಾಡುವಾಗ ಮಾತ್ರ ಮುಟ್ಟುತ್ತಿದ್ದೆವು. ಆದರೂ ನಮ್ಮ ಬಗ್ಗೆ ಕೆಟ್ಟ ಸುದ್ದಿಯನ್ನು ಹಬ್ಬಿಸಿದರು. ಪ್ರತಿನಿತ್ಯ ಅವನ ಮನೆಯ ಕೌಂಪೊಂಡಿನೊಳಗಿರುವ ಉದ್ಯಾನವನದಲ್ಲಿ ಅವನನ್ನು ವಾಕ್ ಮಾಡಿಸುತ್ತಿದ್ದೆವು. ಡ್ಯಾಡಿ ಒಬ್ಬ ಒಳ್ಳೆ ಮನಶಾಸ್ತ್ರಜ್ಞನಾಗಿದ್ದ. ಆತ ಎಂಥ ಒಳ್ಳೆ ಮನಶಾಸ್ತ್ರಜ್ಞನಾಗಿದ್ದನೆಂದರೆ ಯಾರನ್ನಾದರು ಮೊಟ್ಟಮೊದಲಬಾರಿಗೆ ಭೇಟಿ ಮಾಡಿದಾಗ ಅವರ ಕೈ ಕುಲುಕುವದರ ಮೂಲಕ ಮತ್ತು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವದರ ಮೂಲಕ ಅವರು ಎಂಥ ವ್ಯಕ್ತಿ ಎಂಬುದನ್ನು ಆ ಕ್ಷಣದಲ್ಲಿಯೇ ಗ್ರಹಿಸಿಬಿಡುತ್ತಿದ್ದ.
    ಡ್ಯಾಡಿ ಲಿಬಿಯಾವನ್ನು ಕಟ್ಟಿ ಬೆಳಸಿದ್ದಲ್ಲದೇ ಲಿಬಿಯನ್ ರನ್ನು ಒಂಟೆ ಡುಬ್ಬದ ಮೇಲಿಂದ ಇಳಿಸಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ. ಅಂಥ ಒಳ್ಳೆ ವ್ಯಕ್ತಿಯನ್ನು ಕೊಲ್ಲಲು ಅವರಿಗೆ ಮನಸ್ಸಾದರು ಹೇಗೆ ಬಂತು? ಎಂದು ನಿಟ್ಟುಸಿರಿಡುತ್ತಾಳೆ.   
    ಅಂದಹಾಗೆ ಇದುವರೆಗೂ ಬರೀ ಗಡಾಫಿಯ ಬಗ್ಗೆ ಬರೆಯುತ್ತಿದ್ದ ನಾನು ಇನ್ನು ಮುಂದೆ ಲಿಬಿಯಾದಲ್ಲಿನ ನನ್ನ ಅನುಭವಗಳು,  ಇಲ್ಲಿಯ ಜನಜೀವನ ಹಾಗೂ ಇತರೆ ವಿಷಯಗಳನ್ನು ಕುರಿತು ಬರೆಯುತ್ತೇನೆ. ಅಲ್ಲಿಯವರೆಗೆ ಕಾಯುತ್ತಿರಿ!      
     ಉದಯ್ ಇಟಗಿ
    ಫೋಟೋಗಳು:  ಅಂತರ್ಜಾಲ ಕೃಪೆ