ಮಳೆಹನಿಗಳನ್ನು ಬಲ್ಲಿರಿ. ಬಿಸಿಲ ಹನಿಗಳನ್ನು ಬಲ್ಲಿರಾ? ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿ ಈ ಬಿಸಿಲ ಹನಿಗಳ ಸೃಷ್ಟಿಕರ್ತರು. ಅಂದಹಾಗೆ, ಅವರು ಹೊಲದಲ್ಲಿ ಬೆವರು ಸುರಿಸುತ್ತಿಲ್ಲ. ಬ್ಲಾಗ್ನಲ್ಲಿ ಅಕ್ಷರ ಮಳೆಗರೆಯುತ್ತಿದ್ದಾರೆ. ‘ಬಿಸಿಲ ಹನಿ’
(bisilahani.blogspot.in) ಅವರ ಬ್ಲಾಗ್ ಹೆಸರು.
ಉದಯ್ ಪ್ರಸ್ತುತ ನೆಲೆಸಿರುವುದು ಲಿಬಿಯಾದಲ್ಲಿ. ಅಲ್ಲಿನ ‘ಸೆಭಾ ವಿಶ್ವ ವಿದ್ಯಾನಿಲಯ’ದಲ್ಲಿ ಅವರು ಇಂಗ್ಲೀಷ್ ಅಧ್ಯಾಪಕರು. ಇಂಗ್ಲಿಷ್ನಲ್ಲಿ ಪಾಠ ಹೇಳುತ್ತಿದ್ದರೂ, ಅವರ ಮನಸ್ಸು ಕನ್ನಡ – ಕರ್ನಾಟಕವನ್ನೇ ನೆನೆಯುತ್ತಿದೆ.
ಓದು – ಬರವಣಿಗೆಯಲ್ಲಿ ಆಸಕ್ತರಾದ ಅವರು, ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಬ್ಲಾಗ್ ಬರವಣಿಗೆಯನ್ನು ಮಾಧ್ಯಮ ಆಗಿಸಿಕೊಂಡಿದ್ದಾರೆ. ಅಂದಹಾಗೆ, ಉದಯ್ ಬೇರೆ ಬೇರೆ ಭಾಷೆಗಳ ಕಥೆ – ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆಲವು ಅನುವಾದಿತ ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆಗೆ– ಪ್ರವಾಸ, ಛಾಯಾಗ್ರಹಣ ಹಾಗೂ ತೋಟಗಾರಿಕೆ ಅವರ ಆಸಕ್ತಿಯ ಕ್ಷೇತ್ರಗಳು.
‘ಬಿಸಿಲ ಹನಿ’ಗಳ ವ್ಯವಸಾಯ ಭರವಸೆ ಹುಟ್ಟಿಸುವಂತಿದೆ. ‘ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು’ ಎನ್ನುವ ಅವರ ಪ್ರಬಂಧವನ್ನು ಓದಿಯೇ ಸವಿಯಬೇಕು. ವೈದೇಹಿ ಅವರ ‘ನೋಡಬಾರದು ಚೀಲದೊಳಗನು’ ಕವಿತೆಯ ನೆಪದಲ್ಲಿ ಹುಟ್ಟಿದ ಬರಹ, ಭೀಷ್ಮ ಸಹಾನಿ ಅವರ ಅನುವಾದಿತ ಕಥೆ, ಪ್ಯಾಲೆಸ್ತೇನಿಯನ್ ಕವಿಯ ಶಾಂತಿಗೀತೆ, ಹುಳಿ ಮಾವಿನ ಮರದ ನೆನಪು– ಹೀಗೆ, ಉದಯ್ ಬರಹಗಳ ವೈವಿಧ್ಯ ಸೊಗಸಾಗಿದೆ. ‘ಬಿಸಿಲ ಹನಿ’ಗಳಿಗೆ ಮೈಯೊಡ್ಡುವುದು ಹಿತವಾದ ಅನುಭವ.
ಲಿಂಕ್ ಇಲ್ಲಿದೆ:
http://www.prajavani.net/article/%E0%B2%B9%E0%B2%A8%E0%B2%BF-%E0%B2%B9%E0%B2%A8%E0%B2%BF-%E2%80%98%E0%B2%AC%E0%B2%BF%E0%B2%B8%E0%B2%BF%E0%B2%B2-%E0%B2%B9%E0%B2%A8%E0%B2%BF%E2%80%99
http://www.prajavani.net/article/%E0%B2%B9%E0%B2%A8%E0%B2%BF-%E0%B2%B9%E0%B2%A8%E0%B2%BF-%E2%80%98%E0%B2%AC%E0%B2%BF%E0%B2%B8%E0%B2%BF%E0%B2%B2-%E0%B2%B9%E0%B2%A8%E0%B2%BF%E2%80%99