ಎಂಬತ್ತರ ದಶಕದ ಕೊನೆಯಲ್ಲಿ ಸಮಾಜವಾದಿ ಸೋವಿಯತ್ ರಷ್ಯ ಮತ್ತು ಪೂರ್ವ ಯುರೋಪಿನ ಸೋಷಲಿಸ್ಟ್ ದೇಶಗಳು ಪತನಗೊಂಡ ನಂತರ ಜಗತ್ತಿನ ಎಲ್ಲ ಕಡೆ ಅಮೆರಿಕನ್ ಸಾಮ್ರಾಜ್ಯಶಾಹಿ ಆಡಿದ್ದೇ ಆಟವಾಗಿದೆ.ಅದಕ್ಕೆ ಎದುರಾಳಿಗಳೇ ಇಲ್ಲ. ಇರಾಕಿನ ಸದ್ದಾಮ ಹುಸೇನ್ ಅವರನ್ನು ಮುಗಿಸುವ ಮುನ್ನ ಅದನ್ನು ಆಕ್ರಮಿಸಲು ಅಮೆರಿಕ ಆಡಿದ ನಾಟಕ ಮತ್ತು ಲಿಬಿಯಾದಲ್ಲಿ ಕರ್ನಲ್ ಮೊಹಮ್ಮದ್ ಗಡಾಫಿಯನ್ನು ಮುಗಿಸಿದ ಕತೆ ನಮ್ಮ ಮಾಧ್ಯಮಗಳಲ್ಲಿ ಸಿಗುವದಿಲ್ಲ.ಪಾಶ್ಚಿಮಾತ್ಯ ದೇಶಗಳ ಸುದ್ದಿ ಮೂಲಗಳನ್ನು ಆಧರಿಸಿದ ಇವುಗಳ ವರದಿಗಳು ಸದ್ದಾಮ ಮತ್ತು ಗಡಾಫಿಯನ್ನು ಖಳನಾಯಕರಂತೆ ಬಿಂಬಿಸುತ್ತವೆ.ಸತ್ಯ ಗೊತ್ತಾದರೆ ನಾವು ಹುಡುಕಬೇಕು.ಇರಾಕಿನ ಸತ್ಯ ಗೊತ್ತಾಗಿದ್ದು ಅಲ್ಲಿ ನೆಲಸಿದ್ದ ಭಾರತಿಯರಿಂದ.ಅದೇ ರೀತಿ ಲಿಬಿಯಾ. ನಮ್ಮ ಕರ್ನಾಟಕದವರೆ ಆದ ಕೊಪ್ಪಳದ ಉದಯ ಇಟಗಿಯವರು ಇಂಗ್ಲಿಷ್ ಉಪನ್ಯಾಸರಾಗಿ ಲಿಬಿಯಾದಲ್ಲಿ ಸೇವೆ ಸಲ್ಲಿಸಿ ಬಂದವರು ಅವರು ಬರೆದ ಅಪರೂಪದ ಪುಸ್ತಕ "ಲಿಬಿಯಾ ಡೈರಿ" . ಇದನ್ನು ಓದಲು ಕೈಗೆತ್ತಿಕೊಂಡಾಗ ನಮ್ಮ ಮಾಧ್ಯಮಗಳಲ್ಲಿ ದೊರಕದ ಅನೇಕ ವಿವರಗಳು ದೊರೆತವು.
ಜಗತ್ತಿನ ಸಂಪದ್ಭರಿತ ದೇಶಗಳನ್ನು ಬಲಿಷ್ಠ ಸಾಮ್ರಾಜ್ಯಶಾಹಿ ಶಕ್ತಿಗಳು ಹೇಗೆ ಕೊಳ್ಳೆ ಹೊಡೆಯುತ್ತವೆ ,ಹೇಗೆ ಲೂಟಿ ಮಾಡುತ್ತವೆ ಎಂಬುದರ ಕುರಿತು ಹುಡುಕುತ್ತ ,ಯೋಚಿಸುತ್ತ ಹೋದರೆ ಅನೇಕ ಭಯಾನಕ ಚಿತ್ರಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.ಮುಖ್ಯವಾಗಿ ಆಫ್ರಿಕಾ,ಲ್ಯಾಟಿನ್ ಅಮೆರಿಕ, ಮತ್ತು ಏಶಿಯಾದ ರಾಷ್ಟ್ರಗಳನ್ನು ಹೇಗೆ ಸಿರಿವಂತ ದೇಶಗಳು ದೋಚುತ್ತ ಬಂದವು ಎಂಬುದೊಂದು ಘನ ಘೋರ ಇತಿಹಾಸ ತಮ್ಮ ದರೋಡೆಗೆ ಅಡ್ಡಿಯಾಗುವ ಆ ದೇಶಗಳಲ್ಲಿ ಅರಾಜಕತೆ ಉಂಟು ಮಾಡಿ ಅಲ್ಲಿನ ಆಡಳಿತಗಾರರನ್ನು ಮುಗಿಸುತ್ತ ಬಂದ ಕರಾಳ ಚರಿತ್ರೆ ಅಮೆರಿಕನ್ ಸಾಮ್ರಾಜ್ಯಶಾಹಿಯದು.ಇದರ ಕುತಂತ್ರಕ್ಕೆ ಬಲಿಯಾದವರು ಒಬ್ಬಿಬ್ಬರಲ್ಲ. ತೀರ ಇತ್ತೀಚೆಗೆ ಇರಾಕಿನ ಸದ್ದಾಮ ಹುಸೇನ್ ಮತ್ತು ಲಿಬಿಯಾದ ಕರ್ನಲ್ ಮೊಹಮ್ಮದ್ ಗಡಾಫಿಯನ್ನು ಇವರು ಹೇಗೆ ಮುಗಿಸಿದರೆಂಬ ವಿವರಗಳನ್ನು ಓದಿದರೆ ಎದೆ ನಡುಗುತ್ತದೆ
ಅನೇಕರಿಗೆ ಅಚ್ಚರಿಯಾಗುವ ಸಂಗತಿಗಳ ಮೇಲೆ ಉದಯ ಇಟಗಿ ಬೆಳಕು ಚೆಲ್ಲಿದ್ದಾರೆ.ಗಡಾಫಿ ಸರ್ವಾಧಿಕಾರಿಯಾಗಿದ್ದರೂ ಒಬ್ಬ ಸ್ತ್ರೀ ವಾದಿಯಾಗಿದ್ದ.ಜಾತ್ಯತೀತ ನಾಯಕನಾಗಿದ್ದ.ಆತ ಬರೆದ ಗ್ರೀನ್ ಬುಕ್ ಮಾವೋತ್ಸೆ ತುಂಗರ ರೆಡ್ ಬುಕ್ ನಷ್ಟೇ ಹೆಸರಾಗಿತ್ತು.ಆ ಪುಸ್ತಕದಲ್ಲಿ ಆತ ಮಹಿಳೆಯರ ಬಗ್ಗೆ ಬರೆಯುತ್ತಾ " ಗಂಡಸಿನಂತೆ ಹೆಣ್ಣು ಸಹ ಊಟ ಮಾಡುತ್ತಾಳೆ, ಕುಡಿಯುತ್ತಾಳೆ , ಪ್ರೀತಿಸುತ್ತಾಳೆ,ಯೋಚಿಸುತ್ತಾಳೆ,ದ್ವೇಷಿಸುತ್ತಾಳೆ,ಕಲಿಯುತ್ತಾಳೆ ಮತ್ತು ಅರ್ಥ ಮಾಡಿಕೊಳ್ಳುತ್ತಾಳೆ" ಹಾಗಿದ್ದ ಮೇಲೆ ತಾರತಮ್ಯ ಏಕೆ ಎಂದು ಪ್ರಶ್ನಿಸುತ್ತಾನೆ.
ಲಿಬಿಯಾದಲ್ಲಿ ಹೇರಳವಾದ ತೈಲ ಸಂಪತ್ತಿದೆ.ಆದರೆ ಜನಸಂಖ್ಯೆ ಕಡಿಮೆ. ಅದರೂ ಈ ಸಂಪತ್ತಿನ ಪ್ರಯೋಜನ ಜನರಿಗಾಗಿರಲಿಲ್ಲ.ಪಾಶ್ಚಿಮಾತ್ಯ ಕಾರ್ಪೊರೇಟ್ ತೈಲ ಕಂಪನಿಗಳು ಕೊಳ್ಳೆ ಹೊಡೆಯುತ್ತಿದ್ದವು.೧೯೬೯ ರಲ್ಲಿ ಮೊಹಮ್ಮದ್ ಗಡಾಫಿ ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ತೈಲ ಕಂಪನಿಗಳಿಗೆ ಕಡಿವಾಣ ಹಾಕಿದರು.ತೈಲ ಸಂಪನ್ಮೂಲಗಳಿಂದ ಬರುವ ಲಾಭವನ್ನು ಜನಸಾಮಾನ್ಯರ ಏಳಿಗೆಗೆ ವಿನಿಯೋಗಿಸಿದರು.ಈ ಗಡಾಫಿ ಯಾವುದೇ ರಾಜ ಮನೆತನದವನಲ್ಲ.ಅಲೆಮಾರಿ ಬುಡಕಟ್ಟು ಮನೆಯಲ್ಲಿ ಜನಿಸಿ ರಾಷ್ಟ್ರ ನಾಯಕನಾಗಿ ಬೆಳೆದ ಕತೆ ರೋಮಾಂಚನಕಾರಿಯಾದುದು.
ಲಿಬಿಯಾ ಎಂಬುದು ಆಫ್ರಿಕಾದ ಮೂಲೆಯಲ್ಲಿರುವ ಆದರೆ ಅರಬ್ ಜಗತ್ತಿಗೆ ಹತ್ತಿರವಾಗಿರುವ ಪುಟ್ಟ ದೇಶ.ಸಮಾಜವಾದಿವಕ್ಯೂಬಾದಂತೆ ಲಿಬಿಯಾ ಕೂಡ ಸಂಪದ್ಭರಿತ ದೇಶ .ಇಲ್ಲಿನ ತೈಲ ಸಂಪತ್ತಿನ ಮೇಲೆ ಮುಂಚಿನಿಂದಲೂ ವಿಶ್ವದ ಸಾಹುಕಾರ ದೇಶಗಳ ಕಣ್ಣು.ಅದಕ್ಕೆ ಅಡ್ಡಿಯಾದವರು ಆ ದೇಶವನ್ನು ಸುಮಾರು ಮೂರು ದಶಕಗಳ ಕಾಲ ಆಳಿದ ಕರ್ನಲ್ ಮೊಹಮ್ಮದ್ ಗಡಾಫಿ ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ ಅವರಂತೆ ಮಾರ್ಕ್ಸ್ವಾದಿ ಅಲ್ಲ. ಆದರೆ ಬಲಪಂಥೀಯ ನೂ ಅಲ್ಲ.ಅಮೆರಿಕದ ಏಕ ಚಕ್ರಾಧಿಪತ್ಯದ ವಿರುದ್ದ ಸಿಡಿದು ನಿಂತ ಸ್ವಾಭಿಮಾನಿ. ಸಾಮ್ರಾಜ್ಯಶಾಹಿಯನ್ನು ಧಾರ್ಮಿಕ ಮೂಲಭೂತವಾದವನ್ನು ಏಕಕಾಲದಲ್ಲಿ ವಿರೊಧಿಸಿದ ದಿಟ್ಟ ಜನ ನಾಯಕ.ಸದ್ದಾಮ ಹುಸೇನ್ ಮತ್ತು ಗಡಾಫಿ ಇವರಿಬ್ಬರು ತಮ್ಮ ದೇಶಗಳಲ್ಲಿ ಮಹಿಳೆಯರ ಉನ್ನತಿಗಾಗಿ ಸಾಕಷ್ಟು ಶ್ರಮಿಸಿದವರು.ತಮ್ಮ ದೇಶದ ಪ್ರಜೆಗಳನ್ನು ಸುಖವಾಗಿಟ್ಟವರು.ಅಪಾರವಾದ ತೈಲ ಸಂಪತ್ತಿನಿಂದ ಬರುವ ಲಾಭವನ್ನು ಜನ ಹಿತಕ್ಕಾಗಿ ವಿನಿಯೋಗಿಸಿದವರು.ಆದರೂ ಅಮೆರಿಕದ ಕಣ್ಣಿಗೆ ಇವರು ಖಳ ನಾಯಕರು.
ಕರ್ನಲ್ ಗಡಾಫಿಯನ್ನು ಕನ್ನಡದ ಮಾಧ್ಯಮಗಳು ಸೇರಿ ಭಾರತದ ಮಾಧ್ಯಮಗಳು ಖಳನಾಯಕನಂತೆ ಚಿತ್ರಿಸುತ್ತ ಬಂದವು.ದೂರದ ಇಂಗ್ಲಿಷ್ ಚಾನಲ್ ಗಳನ್ನು ನೋಡಿ ಅವರು ಹೇಳಿದ್ದೇ ಸತ್ಯ ಎಂದು ನಾವು ನಂಬುತ್ತ ಬಂದಿದ್ದೇವೆ .ಆದರೆ ಲಿಬಿಯಾದ ಜನ ಈ ಚಾನಲ್ ಗಳನ್ನು ಬೊಗಸ್ ,ಬಂಡಲ್ ಎಂದು ಕರೆಯುತ್ತಾರೆ.
ಕಷ್ಟ ಪಟ್ಟು ಓದಿ ಸೇನಾ ಶಿಕ್ಷಣ ಪಡೆದು ಸೇನೆಗೆ ಸೇರಿ ನಂತರ ಲಿಬಿಯಾವನ್ನು ಆಳುತ್ತಿದ್ದ ಐಲು ದೊರೆ ಇದ್ರಿಸ್ ನನ್ನು ಕಿತ್ತೊಗೆದು ದೇಶದ ಅಧಿಕಾರ ಸೂತ್ರ ಹಿಡಿದವರು ಗಡಾಫಿ.ಸಣ್ಣ ವಯಸ್ಸಿಗೆ ಅಧಿಕಾರಕ್ಕೆ ಬಂದ ಗಡಾಫಿಯನ್ನು ಜನ ಆಫ್ರಿಕಾ ಹಾಗೂ ಅರಬ ಜಗತ್ತಿನ ಚೆ ಗುವೇರಾ ಎಂದು ಕರೆಯುತ್ತಿದ್ದರು.ಈತನ ಆಡಳಿತದಲ್ಲಿ ಹಿಂದುಳಿದ ಲಿಬಿಯಾ ಆರೋಗ್ಯ, ಶಿಕ್ಷಣ, ಕೃಷಿ,ಕೈಗಾರಿಕೆ ಗಳಲ್ಲಿ ಅದ್ಬುತ ಪ್ರಗತಿ ಸಾಧಿಸಿತು.ಗಡಾಫಿ ಆಡಳಿತಾವಧಿಯಲ್ಲಿ ಲಿಬಿಯಾ ಯಾರಿಂದಲೂ ಒಂದು ಒಂದೇ ಒಂದು ಪೈಸೆ ಸಾಲವನ್ನು ಪಡೆಯಲಿಲ್ಲ.ಅಲ್ಲಿ ಒಬ್ಬನೇ ಒಬ್ಬ ಭಿಕ್ಷುಕ ಕಾಣುತ್ತಿರಲಿಲ್ಲ.ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ಸಾಧಿಸಿ ತೋರಿಸಿದ.ಸರ್ವಾಧಿಕಾರಿಯಾಗಿದ್ದರೂ ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದ.ಎಲ್ಲರಿಗೂ ಸ್ವಂತದ ಮನೆ ಇರಬೇಕು ಎಂದು ಹೇಳುತ್ತಿದ್ದ ಗಡಾಫಿ ಜನರಿಗೆ ಉಚಿತವಾಗಿ ಶಿಕ್ಷಣ, ವೈದ್ಯಕೀಯ, ಇಂಟರ್ ನೆಟ್ ಹಾಗೂ ವಿದ್ಯುತ್ ಸೌಕರ್ಯಗಳ ನ್ನು ಒದಗಿಸಿದ್ದ.ಗಡಾಫಿ ಅಧಿಕಾರಕ್ಕೆ ಬರುವ ಮುನ್ನ ಲಿಬಿಯಾದ ಶೇಕಡಾ ೨೫ ರಷ್ಟು ಜನ ಮಾತ್ರ ಅಕ್ಷರಸ್ಥರಾಗಿದ್ದರು.ಆತ ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅಕ್ಷರಸ್ಥರ ಸಂಖ್ಯೆ ಶೇಕಡಾ ೮೩ ಕ್ಕೆ ಹೆಚ್ಚಿತು.ಬಹುತೇಕ ಪ್ರಜೆಗಳಿಗೆ ಸರ್ಕಾರಿ ಕೆಲಸ ನೀಡಿದರು.ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದಿದ್ದರೆ ಕೆಲಸ ಸಿಗುವವರೆಗೆ ಅವರಿಗೆ ಆಯಾ ಹುದ್ದೆಗೆ ತಕ್ಕಂತೆ ಸಂಬಳ ನೀಡಲಾಗುತ್ತಿತ್ತು.ಅಲ್ಲಿನ ಅನೇಕ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್ ,ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಕಳಿಸುವ ವ್ಯವಸ್ಥೆಯನ್ನು ಗಡಾಫಿ ಆಡಳಿತ ಮಾಡಿತು.
ಹಾಗಿದ್ದರೆ ಗಡಾಫಿಯನ್ನು ಪಾಶ್ಚಿಮಾತ್ಯ ಮಾಧ್ಯಮ ಗಳು ಖಳ ನಾಯಕನಂತೆ ಏಕೆ ಬಿಂಬಿಸಿದವು. ಏಕೆಂದರೆ ಆತ ಅಮೆರಿಕದ ಸಾಮ್ರಾಜ್ಯಶಾಹಿಯ ಕಡು ವಿರೋಧಿಯಾಗಿದ್ದ.ಕಮ್ಯುನಿಸ್ಟ್ ರಾಷ್ಟ್ರಗಳ ಬಗ್ಗೆ ಒಲವು ಹೊಂದಿದ್ದ.ಅವಕಾಶ ಸಿಕ್ಕಾಗಲೆಲ್ಲ ಸಾಮ್ರಾಜ್ಯಶಾಹಿ ಅಮೆರಿಕವನ್ನು ಟೀಕಿಸುತ್ತಿದ್ದ.ಸಂಯುಕ್ತ ರಾಷ್ಟ್ರ ಸಂಸ್ಥೆಯ ಅಧಿವೇಶನದಲ್ಲೇ ಒಮ್ಮೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡರ ಗಡಾಫಿ " ಈ ಹಿಂದೆ ಕಮ್ಯುನಿಸ್ಟ್ ಚೀನಾ ಮತ್ತು ರಷ್ಯಾದೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಅನೇಕ ಅರಬ್ ರಾಷ್ಟ್ರ ಗಳ ನಾಯಕರನ್ನು ಗಲ್ಲಿಗೇರಿಸಿದ್ದೀರಿ.ನಾಳೆ ನನ್ನ ಗತಿಯೂ ಹಾಗೇ ಆಗಬಹುದು" ಎಂದು ನೇರವಾಗಿ ಹೇಳಿದ್ದ.ದುರಂತವೆಂದರೆ ಕೊನೆಗೂ ಸಾಮ್ರಾಜ್ಯಶಾಹಿ ಶಕ್ತಿಗಳು ಅತ್ಯಂತ ಅಮಾನವೀಯ ವಾಗಿ ಅವರನ್ನು ಮುಗಿಸಿದವು.
ಹಾಗಿದ್ದರೆ ಈ ಗಡಾಫಿ ಅಧಿಕಾರ ಕಳೆದುಕೊಂಡಿದ್ದೇಕೆ?ಇದಕ್ಕೆ ಉತ್ತರ ಸರಳವಾಗಿದೆ.ಗಡಾಫಿ ತನ್ನ ದೇಶದ ತೈಲ ಸಂಪತ್ತಿನ ಲೂಟಿಗೆ ಅವಕಾಶ ನೀಡಲಿಲ್ಲ.ಆತ ಮುಂದೆ ಜಾರಿಗಿಳಿಸಲಿದ್ದ ಕೆಲ ಆರ್ಥಿಕ ಕ್ರಮಗಳಿಂದ ಅಮೆರಿಕ ನ ಮತ್ತು ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆ ಗಳಿಗೆ ಭಾರೀ ನಷ್ಟವನ್ನುಂಟಾಲಿತ್ತು.ಲಿಬಿಯಾ ದಲ್ಲಿ ರೈಲು ಜಾಲ ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದ.ಲಿಬಿಯಾದ ತೈಲ ಸಂಪನ್ಮೂಲಗಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದ.ಇದ್ರಿಸ್ ಕಾಲದಿಂದಲೂ ಇಲ್ಲಿ ತಳವೂರಿದ್ದ ಅಮೆರಿಕದ ಸೇನಾ ನೆಲೆಯನ್ನು ಅಲ್ಲಿಂದ ಹೊರದಬ್ಬಿದ್ದ. ಹೀಗಾಗಿ ಇಂಥ ಗಡಾಫಿಯನ್ನು ಮುಗಿಸಲು ಆಂಗ್ಲೊ ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ಸಂಚು ರೂಪಿಸಿದವು.ಅಲ್ಲಿನ ಕೆಲ ಬಂಡುಕೋರರಿಗೆ ಕುಮ್ಮಕ್ಕು ನೀಡಿ ಹಣಕಾಸಿನ ನೆರವು ಒದಗಿಸಿ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಗೂಂಡಾ ಬಂಡುಕೋರರ ಮೂಲಕ ನಡುರಸ್ತೆಯಲ್ಲಿ ಜೀವರಕ್ಷಣೆಗಾಗಿ ಸಿಮೆಂಟ್ ಪೈಪ್ ನಲ್ಲಿ ಅಡಗಿಕೊಂಡಿದ್ದ ಗಡಾಫಿಯನ್ನು ಹೊರಗೆಳೆದು ಅಟ್ಟಾಡಿಸಿ ಕೊಂದರು.ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಹಿತಾಸಕ್ತಿಗಳನ್ನು ವಿರೋಧಿಸಿದ ಅರ್ಜೆಂಟೈನಾದ ಚೆ ಗುವೆರಾ,ಚಿಲಿಯ ಅಲೆಂಡೆ,ಇಂಡೋನೇಷ್ಯಾ ದ ಸುಕರ್ಣೊ ,ಇರಾಕಿನ ಸದ್ದಾಮ ಹುಸೇನ್ , ಬಾಂಗ್ಲಾದೇಶದ ಮುಜಬುರ ರೆಹಮಾನ್ ಮುಂತಾದವರನ್ನು ಇದೇ ರೀತಿ ಮುಗಿಸುತ್ತ ಬಂದಿದೆ.
ತನ್ನ ದೇಶದ ಸಂಪನ್ಮೂಲಗಳ ಸಾಮ್ರಾಜ್ಯಶಾಹಿ ಲೂಟಿಗೆ ಅವಕಾಶ ಕೊಡದ ಸ್ವಾಭಿಮಾನಿ ನಾಯಕರನ್ನು ಪಾಶ್ಚಿಮಾತ್ಯ ಮಾಧ್ಯಮಗಳು ಮಾತ್ರವಲ್ಲ ಭಾರತದ ಮಾಧ್ಯಮಗಳೂ ಕೂಡ ಕಡೆಗಣಿಸುತ್ತ ಬಂದಿವೆ.ಅಂಥವರನ್ನು ಖಳ ನಾಯಕರನ್ನಾಗಿ ಬಿಂಬಿಸುತ್ತ ಬಂದಿವೆ.ವಿಷಾದದ ಸಂಗತಿಯೆಂದರೆ ಲಿಬಿಯಾದಲ್ಲಿ ಅಮೆರಿಕದ ಕುಮ್ಮಕ್ಕಿನಿಂದು ಕೆಲ ಬಂಡುಖೋರರು ಬುಡಮೇಲು ಚಟುವಟಿಕೆ ನಡೆಸಿದಾಗಿ ಅಲ್ಲಿ ಹೋಗಿ ಬಂಡುಖೋರ ನಾಯಕನನ್ನು ಭೇಟಿಯಾಗಿ ಬಂದ ಬರ್ಖಾ ದತ್ತ ಗಡಾಫಿಯನ್ನು ಭೇಟಿ ಮಾಡಿ ವಾಸ್ತವ ಚಿತ್ರಣ ನೀಡಲು ಪ್ರಯತ್ನಿಸಲಿಲ್ಲ.ಈ ಬಗ್ಗೆ ಎಲ್ಲೂ ನಿಜವಾದ ಮಾಹಿತಿ ಸಿಗುವದಿಲ್ಲ. ಈ ಕೊರತೆಯನ್ನು ಉದಯ ಇಟಗಿ ಸರಳ ಕನ್ನಡ ಭಾಷೆಯಲ್ಲಿ ಪುಸ್ತಕ ಬರೆದು ನಿವಾರಿಸಿದ್ದಾರೆ.ಸಾಮ್ರಾಜ್ಯಶಾಹಿಗೆ ಶರಣಾಗತರಾದವರು ವಿಶ್ವಗುರು ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸುತ್ತಿರುವ ಈ ದಿನಗಳಲ್ಲಿ ಆ ಕರಾಳ ಶಕ್ತಿಗೆ ಸೆಡ್ಡು ಹೊಡೆದು ನಿಂತ ಮೊಹಮ್ಮದ್ ಗಡಾಫಿಯಂಥವರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯುತ್ತಾರೆ.
-ಸನತ್ ಕುಮಾರ ಬೆಳಗಲಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ