Demo image Demo image Demo image Demo image Demo image Demo image Demo image Demo image

ಕರ್ನಲ್ ಗಡಾಫಿ ಹಾಗೂ ಸಣ್ಣಪ್ಪನವರು

  • ಮಂಗಳವಾರ, ನವೆಂಬರ್ 02, 2021
  • ಬಿಸಿಲ ಹನಿ
  • ಮೊನ್ನೆಯಷ್ಟೇ ರಹಮತ್ ತರೀಕೆರೆ ಸರ್ ಅವರು ನನ್ನ ಪುಸ್ತಕ 'ಲಿಬಿಯಾ ಡೈರಿ" ಕುರಿತು 'ನ್ಯಾಯ ಪಥ' ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಬರದಿದ್ದರು. ಇದೀಗ ಸವಿವರವಾಗಿ ವಿಮರ್ಶಿಸಿದ್ದಾರೆ. ಅವರಿಗೆ ತುಂಬು ಹೃದಯದ ಪ್ರೀತಿ ಮತ್ತು ಧನ್ಯವಾದಗಳು . ಓದಿ ತಮ್ಮ ಅಭಿಪ್ರಾಯ ತಿಳಿಸಿ. 


    https://m.facebook.com/story.php?story_fbid=4416822685074832&id=100002414310539

    ನಮ್ಮ ಮನೆಯ ಬಳಿ ಒಂದು  ತೋಟವಿದೆ. ಅಲ್ಲಿಗೆ ಆಗಾಗ್ಗೆ ಬರುವ ಹಂಪಿಯ ಫೊಟೊಗ್ರಾಫರ್ ಮಿತ್ರರಾದ ಶಿವಶಂಕರ ಬಣಗಾರ ಅವರು, ಒಮ್ಮೆ  ಮನೆಗೂ ಬಂದರು. `ಸಾರ್! ಕಲಾವಿದರನ್ನು ಹುಡುಕಿಕೊಂಡು ದೇಶಾಂತರ ಹೋಗುತ್ತೀರಿ. ಒಬ್ಬ ವಿಶಿಷ್ಟ ವ್ಯಕ್ತಿ ನಿಮ್ಮ ಸಮೀಪವೇ ಇದ್ದಾರೆ. ಸಣ್ಣಪ್ಪ ಅಂತ. ಲಿಬಿಯಾದಲ್ಲಿದ್ದು ಬಂದವರು. ಅರಬ್ಬಿ ಮಾತಾಡುತ್ತಾರೆ. ನೀವೊಮ್ಮೆ ಭೇಟಿಯಾಗಬೇಕು’ ಎಂದರು. `ತಡವೇಕೆ? ನಡೀರಿ ಹೋಗೋಣ’ ಎಂದು ಇಬ್ಬರೂ ಸಣ್ಣಪ್ಪನವರ ತೋಟಕ್ಕೆ ಹೋದೆವು. ಊರ ನಡುವಿರುವ ಪಿತ್ರಾರ್ಜಿತ ಜಮೀನಿನಲ್ಲಿ ಸಣ್ಣಪ್ಪನವರು  ಕಾಯಿಪಲ್ಲೆ ಬೆಳೆದಿದ್ದರು. ಅವರಲ್ಲೊಂದು  ಜಂಬೂನೇರಳೆಯ ಗಿಡವಿತ್ತು.  ಅವರು  ದ್ರಾಕ್ಷಿಯಂತಹ ನೇರಳೆಯ ಗೊಂಚಲನ್ನು ಕಿತ್ತು ಕೊಟ್ಟರು. ಅದನ್ನು ತಿನ್ನುತ್ತ ಅವರ ಜತೆ ಹರಟೆ ಹೊಡೆಯುತ್ತ, ಆಲ್ಬಂನಲ್ಲಿದ್ದ ಚಿತ್ರಗಳನ್ನು ನೋಡಿದೆವು. 

    ಹೊಸಪೇಟೆಯವರಾದ ಸಣ್ಣಪ್ಪನವರು ವರ್ಷಗಳ ಹಿಂದೆ ಕೆಲಸ ಹುಡುಕಿ  ಮುಂಬೈಗೆ ವಲಸೆ ಹೋದವರು. ಅಲ್ಲಿಂದ ಆಫ್ರಿಕಾದ ಸಹರಾ ಮರುಭೂಮಿಯ ದೇಶವಾದ ಲಿಬಿಯಾಕ್ಕೆ ದಾಟಿಕೊಂಡವರು. ಲಿಬಿಯಾದ ತೈಲನಿಕ್ಷೇಪ ತಾಣಗಳಲ್ಲಿ ಕೆಲಸ ಮಾಡುತ್ತಿದ್ದ  ಇಂಜಿನಿಯರುಗಳ ತಂಡದಲ್ಲಿ ಟ್ರಕ್ ಡ್ರೈವರಾಗಿದ್ದವರು. ಅವರು ನಮ್ಮೊಟ್ಟಿಗೆ ಹೇಳಿದ ಕಥೆಗಳಲ್ಲಿ ನಾಲ್ಕು ಮುಖ್ಯ ಸಂಗತಿಗಳಿದ್ದವು.  1. ಸಹರಾದ ಮರಳುಗಾಳಿನ ಭೀಕರತೆ. 2. ಗಡಾಫಿಯ ಜನಪ್ರಿಯತೆ. 3. ಲಿಬಿಯನ್ ಮಹಿಳೆಯರ ಸಾರ್ವಜನಿಕ ಭಾಗವಹಿಸುವಿಕೆ. ಅದರಲ್ಲೂ ಅವರು ಮಿಲಿಟರಿ ತರಬೇತಿ ಪಡೆದು, ಗಡಾಫಿಯ ಕಮಾಂಡೊಗಳಾಗಿರುವುದು. 4. ಅಮೆರಿಕವು  ಸುಡಾನಿನ ಎಣ್ಣೆಯ ದರೋಡೆಗಾಗಿ ಗಡಾಫಿಯನ್ನು ಫಿತೂರಿಯಿಂದ ಕೊಂದಿದ್ದು. ಸಣ್ಣಪ್ಪನವರಲ್ಲಿ ಗಡಾಫಿಯ ಬಗ್ಗೆ ಅಭಿಮಾನ ತುಂಬಿಕೊಂಡಿತ್ತು. ಅವರಿಗೆ ಗಡಾಫಿಯನ್ನು ನೋಡುವ ಆಸೆಯಿತ್ತಂತೆ. ಆತ ಒಮ್ಮೆ ಎಣ್ಣೆಹೊಲಗಳ ಪರಿಶೀಲನೆಗೆ ಬಂದಾಗ ನೋಡಲು ಬಯಸಿದರಂತೆ. ಆಗ ಅವರ ಸಹೋದ್ಯೋಗಿಗಳು `ನೀವು ವಿದೇಶದವರು. ಸೆಕ್ಯುರಿಟಿಯವರು ತಡೆಯುತ್ತಾರೆ’ ಎಂದರಂತೆ. `ಅದ್ಯಾಕೆ ತಡೆಯುತ್ತಾರೆ? ನಾನವರ ಅಭಿಮಾನಿ’ ಎಂದು ಅರಬರ ಡ್ರೆಸ್ ಹಾಕಿಕೊಂಡು ಹೋಗಿ ನಿಂತು ನೋಡಿದರಂತೆ. ಇದಾದ ಬಳಿಕ ಲಿಬಿಯಾದ ಕಥೆ ಕೇಳಲು ಕೊವಿಡ್ ಗಲಾಟೆಯಲ್ಲಿ ನನಗೆ ಸಣ್ಣಪ್ಪನವರ ತೋಟಕ್ಕೆ ಸಾಧ್ಯವಾಗಲಿಲ್ಲ. 
    ಇದಾಗಿ ಮೂರು ವರ್ಷದ ಬಳಿಕ, ನಮ್ಮ ಜಿಲ್ಲೆಯವರಾದ ಉದಯ್ ಇಟಗಿಯವರು `ಲಿಬಿಯಾ ಡೈರಿ’ ಪುಸ್ತಕ ಕಳಿಸಿಕೊಟ್ಟರು. ಅದನ್ನು ಓದುವಾಗ  ಕಾರ್ಮಿಕ ಸಣ್ಣಪ್ಪನವರು ಹೇಳಿದ್ದನ್ನೇ ಉದಯ್ ಒಬ್ಬ ಪ್ರಜ್ಞಾವಂತ ಲೇಖಕನಾಗಿ ಬರೆದಿದ್ದಾರೆ ಅನಿಸಿತು. ಉದಯ್ ಲಿಬಿಯಾದಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದವರು. ಸಣ್ಣಪ್ಪನವರ ಮಾತುಕತೆ ಕೇಳಿದ ಮತ್ತು ಉದಯ್ ಪುಸ್ತಕ ಓದಿದ ತರುವಾಯ, ಆಫ್ರಿಕಾ ಚೀನಾ ಮತ್ತು ಮಧ್ಯ ಏಶಿಯಾದ `ಮುಸ್ಲಿಂ’ ದೇಶಗಳನ್ನು ಒಳಗೊಂಡು ವಿಶ್ವವನ್ನು ಕುರಿತಂತೆ ನಮ್ಮ `ಜ್ಞಾನ’ದ ಮೂಲಗಳು ಯಾವುವು; ಅದು ನಮಗೆ ಯಾರಿಂದ ಯಾವಾಗ ಯಾಕಾಗಿ ಬಂದಿತು ಎಂಬ ಪ್ರಶ್ನೆ ಹುಟ್ಟಿತು.  ಜಗತ್ತಿನ ಬೇರೆಬೇರೆ ದೇಶಗಳ ಬಗ್ಗೆ ಭಾರತೀಯರಿಗೆ ಮೂರು ಮೂಲಗಳಿಂದ ತಿಳುವಳಿಕೆ ಬಂದಿದೆ. 1. ಆಧುನಿಕ ಪೂರ್ವ ಕಾಲದಲ್ಲಿ ಈ ದೇಶಗಳಿಂದ ಬಂದ ಸೈನಿಕರು ರಾಜರು ವ್ಯಾಪಾರಿಗಳು ಹಾಗೂ ಸಂತರಿಂದ. 2. ಪ್ರವಾಸಕ್ಕೆಂದೊ ಉದ್ಯೋಗಕ್ಕಾಗಿಯೊ ವಿದೇಶಗಳಿಗೆ ಹೋಗಿಬಂದವರು ಬರೆದ ಕಥನಗಳಿಂದ. 3. ಯೂರೋಪು ಇಲ್ಲವೇ ಅಮೆರಿಕಗಳ (ಹಿಂದೆ ವಸಾಹತುಶಾಹಿ ಈಗ ಸಾಮ್ರಾಜ್ಯಶಾಹಿ) ಹಿತಾಸಕ್ತಿಯ ಲೇಖಕರು ಮತ್ತು ಮಾಧ್ಯಮಗಳಿಂದ. ಇವುಗಳಲ್ಲಿ, ಸಮಸ್ಯೆ ಇರುವುದು ಮೂರನೆಯ ಮೂಲದಲ್ಲಿ.  ಕಾರಣ, ಇದು ಜಗತ್ತಿನ ಬಗ್ಗೆ ತನ್ನ ಧಾರ್ಮಿಕ ಪೂರ್ವಗ್ರಹ, ಜನಾಂಗೀಯ ದ್ವೇಷ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ಸಮೇತ ಮಾಹಿತಿ ಒದಗಿಸುತ್ತದೆ. ಬೇರೆಬೇರೆ ದೇಶಗಳ ನೈಸರ್ಗಿಕ ಸಂಪತ್ತನ್ನು ಕಬಳಿಸುವ, ಅವನ್ನು ತಮ್ಮ ಕಂಪನಿ ಸ್ಥಾಪಿಸುವ ಮತ್ತು ಸರಕು ಸುರಿವ ಮಾರುಕಟ್ಟೆಯಾಗಿಸುವ ಹಾಗೂ ಅಲ್ಲಿನ ಮಾನವ ಸಂಪನ್ಮೂಲವನ್ನು ಅಗ್ಗದ ಸಂಬಳದಲ್ಲಿ ದುಡಿಸಿಕೊಳ್ಳುವ ಸ್ವಹಿತಾಸಕ್ತಿಗಳಿಂದ  ಜಗತ್ತನ್ನು ವ್ಯಾಖ್ಯಾನಿಸುತ್ತ `ಜ್ಞಾನ’ವನ್ನು ಸೃಷ್ಟಿಸುತ್ತದೆ. ತಮಗೆ ಪ್ರತಿಕೂಲವಾಗಿರುವ ರಾಷ್ಟ್ರನಾಯಕರನ್ನು ಅಥವಾ ಪ್ರಭುತ್ವಗಳನ್ನು ಸರ್ವಾಧಿಕಾರಿ ಕ್ರೂರಿ ಎಂದು ದುರುಳೀಕರಿಸುತ್ತದೆ. ಈ ದುರುಳೀಕರಣವು  ಯುದ್ಧ ಮತ್ತು ಹಿಂಸೆಗಳಲ್ಲಿ ಪರ್ಯವಸಾನವಾಗುತ್ತದೆ. ಕರ್ನಲ್ ಗಡಾಫಿ ಮತ್ತು ಇರಾಕಿನ ಸದ್ದಾಂ ಹುಸೇನ್ ಕೊಲ್ಲಲ್ಪಟ್ಟಿದ್ದು ಇದೇ ಪ್ರಕ್ರಿಯೆಯಲ್ಲಿ. ಕ್ಯೂಬಾದ ಫಿಡೆಲ್ ಕಾಸ್ಟ್ರೊ ಬಗ್ಗೆ ಕೂಡ ಇಂತಹುದೇ ದುರುಳೀಕರಣ ಮಾಡಲಾಗಿತ್ತು. ಭಾರತದ ಬಹುತೇಕ ಮಾಧ್ಯಮ ಮತ್ತು ಶೈಕ್ಷಣಿಕ ಪಠ್ಯಗಳು, ಇಂತಹ ವ್ಯಾಖ್ಯಾನಗಳನ್ನು ಪರಮಸತ್ಯವೆಂದು ನಮಗೆ  ದಾಟಿಸುತ್ತ ಬಂದಿವೆ. ಭಾರತವನ್ನು ಕೊಳಕುದೇಶವೆಂದು ಹೀಯಾಳಿಸಿದ ಟ್ರಂಪನನ್ನು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ನಮ್ಮ  ಭಾಗ್ಯವಿಧಾತನೆಂದು ಬಿಂಬಿಸಿದ್ದಂತೂ ನಮ್ಮೆದುರಿಗೇ ಇದೆ.

    ಆದರೆ ಇಂತಹ ಪೂರ್ವಗ್ರಹೀತ ಸ್ಟಿರಿಯೊಟೈಪ್ ಚಿತ್ರಗಳನ್ನು ಮುರಿಯುವ ಯತ್ನಗಳೂ ನಡೆಯುತ್ತಿವೆ. ಇವು ಸಾಧ್ಯವಾಗಿರುವುದು, ಪಾಶ್ಚಿಮಾತ್ಯ ದೇಶಗಳಲ್ಲಿರುವ ಎಡ್ವರ್ಡ್ ಸೈಯದ್ ಅಥವಾ ನೋಮ್ ಚೋಂಸ್ಕಿಯವರಂತಹ ಬಂಡುಕೋರ ವಿದ್ವಾಂಸರಿಂದ. ಇಲ್ಲವೇ ಈ ದೇಶಗಳಲ್ಲಿ ಬದುಕಿ ಅನುಭವವನ್ನು ದಾಖಲಿಸಿರುವ ಸಣ್ಣಪ್ಪ ಅಥವಾ ಉದಯ್ ತರಹದವರಿಂದ.  ಈ ಹಿನ್ನೆಲೆಯಲ್ಲಿ ಕನಕರಾಜು ಮುಂತಾದ ಕನ್ನಡ ಲೇಖಕರು ಅವರು ಅರಬ್ ದೇಶಗಳ ಮೇಲೆ ಬರೆಯುತ್ತಿರುವ ಬರೆಹಗಳನ್ನೂ   ಸ್ಮರಿಸಬೇಕು.
     
    ಪ್ರಜ್ಞಾವಂತ ವ್ಯಕ್ತಿಯೊಬ್ಬ ದೇಶಗಳ ಮೇಲೆ ಹೇರಲಾಗಿರುವ ಪೂರ್ವಗ್ರಹಗಳ ಪರದೆಯನ್ನು ಒಡೆಯುವಂತೆ ಬರೆದಿರುವ ಉದಯ್ ಅವರ `ಲಿಬಿಯಾ ಡೈರಿ’ (2020)ಯ ವಿಶೇಷತೆಯೆಂದರೆ, ಇದು ಗಡಾಫಿಯ ಸರ್ವಾಧಿಕಾರಿತನವನ್ನು  ಮರೆಮಾಚುವುದಿಲ್ಲ; ಪಶ್ಚಿಮದ ದೇಶಗಳ ಆಕ್ರಮಣಕಾರಿ ಹುನ್ನಾರಗಳನ್ನು ತಪ್ಪಿಸಲು ಆತ ಶಿಕ್ಷಣ ವ್ಯವಸ್ಥೆಯಿಂದ ಇಂಗ್ಲೀಶನ್ನು ನಿಷೇಧಿಸಿದಂತಹ  ನಿರ್ಣಯವು ಹೇಗೆ ಪ್ರಮಾದವಾಗಿತ್ತು ಎಂಬುದನ್ನು ಅವರು  ಟೀಕಿಸುತ್ತಾರೆ.  ಆದರೆ ಆತ ಹೇಗೆ ಒಬ್ಬ ದೇಶಪ್ರೇಮಿಯಾಗಿ ನಾಡಿನ ಸಂಪತ್ತನ್ನು ಬಿಳಿಯ ದೇಶಗಳು ಲೂಟಿಮಾಡುವುದನ್ನು  ತಡೆದನು. ಪ್ರಜೆಗಳಿಗೆ ಹೇಗೆ ಸುಖ ಮತ್ತು ನೆಮ್ಮದಿಯಿಂದ ಇಟ್ಟಿದ್ದನು ಎಂಬ ಸತ್ಯವನ್ನು ಅಂಕಿಅಂಶಗಳಿಂದಲೂ ಸ್ವಾನುಭವದಿಂದಲೂ ಕೊಡುತ್ತಾ ಹೋಗುತ್ತಾರೆ. ಹೀಗಾಗಿ ಈ ಪುಸ್ತಕವು ಕೇವಲ ಗಡಾಫಿಯ ವ್ಯಕ್ತಿಚಿತ್ರಣವಾಗದೆ, ಅಮೆರಿಕಾದ ಆರ್ಥಿಕ ರಾಜಕೀಯ ಹಿತಾಸಕ್ತಿ ಮತ್ತು ಯುದ್ಧನಿತಿಗಳ ವಿಮರ್ಶೆಯೂ ಆಗಿದೆ:  (ಕೃತಿಯ ವಿವರಣಾತ್ಮಕ ಉಪಶೀರ್ಷಿಕೆ: `ಮೊಹಮದ್ ಗಡಾಫಿಯ ಹತ್ಯೆಯ ಹಿಂದಿನ ರಹಸ್ಯ’). 

    ಇಲ್ಲೇ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಬಳಿಕ ನೆಲ್ಸನ್ ಮಂಡೇಲಾ ಅವರು ಪ್ರಥಮ ಬಾರಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಅಮೆರಿಕಕ್ಕೆ ಹೋದಾಗ, ನಡೆದ ಪತ್ರಿಕಾಗೋಷ್ಠಿಯನ್ನು ಉಲ್ಲೇಖಿಸಬೇಕು. ಅವರಿಗೆ ಒಬ್ಬ ಅಮೆರಿಕನ್ ಕೇಳುತ್ತಾನೆ: ``ನೀವು ಜನಾಂಗವಾದದ ವಿರುದ್ಧ ಕಪ್ಪು ಜನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಮಾನವ ಹಕ್ಕುಗಳ ವಿಷಯದಲ್ಲಿ ಕೆಟ್ಟದಾಖಲೆ ಹೊಂದಿರುವವರ  ಅರಾಫತ್-ಗಡಾಫಿ-ಕಾಸ್ಟ್ರೊ ಮುಂತಾದವರ ಜತೆ ಸಖ್ಯ ಹೊಂದಿದ್ದೀರಿ. ಇದು ವೈರುಧ್ಯವಲ್ಲವೇ?". ಆಗ ಮಂಡೆಲಾ ಕೊಟ್ಟ ಉತ್ತರ: ``ಕೆಲವರು ತಮ್ಮ ಶತ್ರುಗಳು ಇಡೀ ಜಗತ್ತಿನ ಶತ್ರುಗಳಾಗಿದ್ದಾರೆಂದೂ ತಮ್ಮ ಮಿತ್ರರು ಎಲ್ಲರ ಮಿತ್ರರೂ ಆಗಬೇಕೆಂದು ಅಪೇಕ್ಷಿಸುತ್ತಾರೆ.  ಪ್ರತಿ ದೇಶಕ್ಕೂ ತನ್ನ ಸ್ನೇಹಿತರಾಷ್ಟ್ರಗಳನ್ನು ತನ್ನ ಹಿತಾಸಕ್ತಿಯ ಆಧಾರದಲ್ಲಿ ಆರಿಸಿಕೊಳ್ಳುವ ಹಕ್ಕಿದೆಯೆಂದು ಮರೆತುಬಿಡುತ್ತಾರೆ. ನಾವು ಬಿಳಿಯರ ವರ್ಣಭೇದನೀತಿ ಮತ್ತು ವಸಾಹತುಶಾಹಿ ಆಳ್ವಿಕೆಗಳ ವಿರುದ್ಧ ಹೋರಾಡುವಾಗ, ನೀವು ದುಷ್ಟರೆಂದು ಹೇಳುವ ದೇಶಗಳೆಲ್ಲ ನಮಗೆ ನೈತಿಕ ಬೆಂಬಲ ಕೊಟ್ಟಿದ್ದವು.’’

    ಸರಳವೂ  ಸ್ವಾರಸ್ಯಕರವೂ ಆದ ನಿರೂಪಣೆಯಿರುವ ಉದಯ್  ಕೃತಿಯಲ್ಲಿ, ಬರವಣಿಗೆಯ ಕಸುಬಿಗೆ ಸಂಬಂಧಪಟ್ಟಂತೆ, ಪುನರುಕ್ತಿ ಮುಂತಾದ ಸಣ್ಣಪುಟ್ಟ ದೋಷಗಳಿವೆ. ಆದರೆ ಜಗತ್ತಿನ ವಿದ್ಯಮಾನಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡುವ ರಾಜಕೀಯ ಪ್ರಜ್ಞೆಯಿದೆ. ಇದು ಪ್ರವಾಸಕಥನವೂ ಅನುಭವ ನಿರೂಪಣೆಯೂ ಚರಿತ್ರೆಯ ಪುಸ್ತಕವೂ ಆಗಿದೆ.ಇದರಲ್ಲಿರುವ ಮರುಭೂಮಿಯ ಸಿಂಹವೆಂದು ಖ್ಯಾತಿವೆತ್ತಿದ್ದ ಉಮರ್ ಮುಖ್ತಿಯಾರ್ ಕುರಿತ ಅಧ್ಯಾಯವಂತೂ ಅಪೂರ್ವವಾಗಿದೆ. ದುಡಿಮೆಗೆಂದು ಹೊರಹೋದ ಭಾರತೀಯರು ಕುಟುಂಬವನ್ನು ಬಿಟ್ಟು ಪಡುವ ಪಾಡು ಮತ್ತು ಅವರ ಜೀವನದ ಅರ್ಥಗಳನ್ನು ಕೃತಿ ಆರ್ತವಾಗಿ ವಿಶ್ಲೇಷಿಸುತ್ತದೆ. ಭಾಷೆ ಧರ್ಮ ಸಂಸ್ಕೃತಿ ಚರಿತ್ರೆ ದೃಷ್ಟಿಯಿಂದ 'ಅನ್ಯ'ವೆನಿಸಿಕೊಂಡ ಯಾವುದೇ ದೇಶ-ಸಮಾಜವಿರಲಿ, ಮನುಷ್ಯರ ನೋವಿಗೆ ಮಿಡಿವ ಜೀವಗಳು ಎಲ್ಲೆಡೆ ಇರುತ್ತವೆ, ಅವೇ ನಿಜವಾದ ಮರುಭೂಮಿಯ ಓಯಸಿಸ್‍ಗಳು ಎಂಬುದನ್ನು ಕಾಣಿಸುತ್ತದೆ. ಈ ಕಾರಣದಿಂದ ಇದು ಲಿಬಿಯನ್ ಜನಜೀವನದ ಚಿತ್ರವೂ ಆಗಿದೆ. 

    ಭಾರತೀಯರಾದ ನಾವು ನಮ್ಮ ಆಸುಪಾಸು ವಾಸಿಸುತ್ತಿರುವ ಅನೇಕರ ಧರ್ಮ ಆಹಾರಪದ್ಧತಿ ಆಚರಣೆಗಳ ಬಗ್ಗೆ ತಿಳುವಳಿಕೆಯನ್ನು ಬಂಡವಾಳಿಗರಿಗೂ ಮತೀಯವಾದಕ್ಕೂ ತೆತ್ತುಕೊಂಡ ಮಾಧ್ಯಮಗಳಿಂದ ಪಡೆದುಕೊಳ್ಳುವ ದುರವಸ್ಥೆಗೆ ಇಳಿದಿದ್ದೇವೆ. ಇದು ಶಿಕ್ಷಣದಲ್ಲಿ ಐರೋಪ್ಯ ಮತ್ತು ಅಮೆರಿಕನ್ ದೃಷ್ಟಿಕೋನದಿಂದ ಜಗತ್ತನ್ನು ಅರ್ಥಮಾಡಿಕೊಳ್ಳುವ ಪದ್ಧತಿಯ  ದಾರುಣ  ವಿಸ್ತರಣೆಯೇ. ಇಂತಹ ಹೊತ್ತಲ್ಲಿ ಉದಯ್ ಅವರ ಅನುಭವಕೇಂದ್ರಿತ ಕೃತಿ ಕಣ್ತೆರೆಸುವ ಮತ್ತು ಪೂರ್ವಗ್ರಹ ತೊಡೆವ ಕೆಲಸ ಮಾಡುತ್ತದೆ. ಇದನ್ನು ಓದಿ ಮುಗಿಸಿದಾಗ ಉದಯ್ ಅವರಂತೆ ಸಣ್ಣಪ್ಪನವರೂ ಪುಸ್ತಕ ಬರೆಯುವಂತಿದ್ದರೆ ಹೇಗಿರುತ್ತಿತ್ತು ಎಂಬ ಭಾವವೂ ಒಮ್ಮೆ ಮೂಡಿ ಹೋಗುತ್ತದೆ.
    -ರಹಮತ್ ತರೀಕೆರೆ