Demo image Demo image Demo image Demo image Demo image Demo image Demo image Demo image

ನಿನ್ನ ಪ್ರೀತಿಸುವದೇ ಒಂದು ಹಿಂಸೆ!

  • ಶುಕ್ರವಾರ, ಸೆಪ್ಟೆಂಬರ್ 25, 2009
  • ಬಿಸಿಲ ಹನಿ
  • ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿ
    ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ
    ಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!
    ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆ
    ಎಷ್ಟೊಂದನ್ನು ಸಹಿಸಿಕೊಂಡೆ ನಾನು
    ನಿನ್ನ ಈಟಿಯಂಥ ಇರಿತದ ಮಾತುಗಳನ್ನು,
    ಅಹಂಕಾರವನ್ನು, ಕೋಪ ತಾಪಗಳನ್ನು, ಸಿಟ್ಟು ಸೆಡುವುಗಳನ್ನು!
    ನೀನಿತ್ತ ನೋವುಗಳಿಗೆ ಲೆಕ್ಕವುಂಟೇ?
    ಒಮ್ಮೊಮ್ಮೆ ಅದ್ಭುತವಾಗಿ ಪ್ರೀತಿಸುತ್ತೀಯಾ
    ಒಮ್ಮೊಮ್ಮೆ ಸುಕಾಸುಮ್ಮನೆ ಶರಂಪರ ಜಗಳ ಕಾಯುತ್ತೀಯ
    ಒಮ್ಮೊಮ್ಮೆ ನಕ್ಕು ನಗುಸುತ್ತೀಯಾ
    ಒಮ್ಮೊಮ್ಮೆ ಕಾರಣವಿಲ್ಲದೆ ಕೆರಳಿ ಕೆಂಡವಾಗುತ್ತೀಯಾ
    ಒಮ್ಮೊಮ್ಮೆ ಸುಸುಮ್ಮನೆ ಮುಲುಮುಲು ಅತ್ತು
    ಮನೆ ಮನಗಳನ್ನು ಮಸಣವಾಗಿಸುತ್ತೀಯಾ
    ನೀನೊಬ್ಬಳೇ ಹೀಗೇನಾ? ಅಥವಾ ಹುಡುಗಿಯರೆಲ್ಲಾ ಹೀಗೇನಾ?
    ಉತ್ತರ ಹುಡುಕುತ್ತಿದ್ದೇನೆ; ಹೇಳುವರ್ಯಾರು?
    ಎಷ್ಟೆಲ್ಲಾ ಮಾಡಿದೆ ನಾ ನಿನಗೋಸ್ಕರ
    ನನ್ನತನವನ್ನು ಬಿಟ್ಟೆ ನನ್ನವರನ್ನು ಬಿಟ್ಟೆ
    ನನ್ನನ್ನು ನಾನು ಬದಲಾಯಿಸಿಕೊಂಡೆ
    ಕೊನೆಗೆ ನೀ ನಡೆದ ಹಾದಿಯಲ್ಲಿ ನಾನೂ ನಡೆದೆ
    ಆದರೂ ನಿನಗೆ ಕರುಣೆ ಬರಲಿಲ್ಲ!
    ಪ್ರತಿಸಲ ನಾನು ಸೋಲುತ್ತಲೇ ಹೋದೆ
    ನೀನು ಗೆಲ್ಲುತ್ತಲೇ ಬಂದೆ
    ನಿನಗೆ ನಿನ್ನ ಗೆಲುವಿನ ಹಟವೇ ಹೆಚ್ಚಾಯಿತು
    ಈಗೀಗ ನನ್ನ ಗಮನಿಸುವದಿರಲಿ
    ನನ್ನ ಬಗ್ಗೆ ಯೋಚಿಸುವದಿಲ್ಲ ಕೂಡ
    ಯಾಕೆ ಇಷ್ಟೊಂದು ಕೄರಿಯಾದೆ? ಏನು ಕಾರಣ?
    ಹೇಳು ನನ್ನರಗಿಣಿ ಏನಾದರು ಹೇಳು
    ಈಗಲಾದರೂ ಅಂದುಕೊಳ್ಳುತ್ತೇನೆ
    ನನಗೆ ನಿನ್ನ ಪ್ರೀತಿಯಲ್ಲಿ ಮರುಭರವಸೆಯಿದೆಯೆಂದು
    ಇಲ್ಲವಾದರೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು ಬಿಟ್ಟುಹಾಕುತ್ತೇನೆ!

    (ಅರೇಬಿ ಕವನವೊಂದರ ಶೀರ್ಷಿಕೆಯಾಧಾರದ ಮೇಲೆ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ನಾನೇ ಹೊಸೆದಿರುವ ಕವನವಿದು)
    - ಉದಯ ಇಟಗಿ

    11 ಕಾಮೆಂಟ್‌(ಗಳು):

    Unknown ಹೇಳಿದರು...

    ಬಹುಶಃ ಈ ಕವಿತೆಯ ನಿರೂಪಕನನ್ನು ಪ್ರಬುದ್ಧ ಪ್ರೇಮಿ ಎನ್ನಬಹುದೆ? ಏಕೆಂದರೆ ಪ್ರೀತಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಹುಡುಗ/ಹುಡುಗಿಯರ ಹಿಂದೆ ಸುತ್ತುವ ಪ್ರೇಮಿಗಳು 'ಪ್ರೀತಿಸುತ್ತಿದ್ದೇನೆ' ಎಂಬ ಭಾವವನ್ನಷ್ಟೇ ಪ್ರೀತಿಸುತ್ತಾರೆ, ಅದೂ ಅವರಿಗೆ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ. ಆದರೆ ಈ ಪ್ರೇಮಿ ನಿಷ್ಟುರನಾಗಿ ನಿನ್ನ ಪ್ರೀತಿಸುವುದು ಹಿಂಸೆ ಎಂದು ಹೇಳುತ್ತಿದ್ದಾನೆ!
    ನನಗನ್ನಿಸಿದ್ದು: 'ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ' ಈ ಸಾಲಿನಲ್ಲಿ ನಿದ್ರೆಯಿಲ್ಲದೆ ಎನ್ನುವ ಪದ ಇಲ್ಲದೇ ಹೋದರೂ, ನನ್ನ ರಾತ್ರಿಗಳು ಹಿಗ್ಗಿಹೋಗಿವೆ ಎಂಬುದೇ ಅದನ್ನು ಸೂಚಿಸುತ್ತದೆ ಅಲ್ಲವೆ? ಮೂಲದಲ್ಲಿ ಹೇಗಿದೆಯೋ ನನಗೆ ಗೊತ್ತಿಲ್ಲ.
    ಪ್ರತಿಸಲ ನಾನು ಸೋಲುತ್ತಲೇ ಹೋದೆ
    ನೀನು ಗೆಲ್ಲುತ್ತಲೇ ಬಂದೆ
    ಇಲ್ಲಿಯೂ ಮೊದಲ ಸಾಲೇ ಎರಡನೇ ಸಾಲನ್ನೂ ಚೆನ್ನಾಗಿ ಧ್ವನಿಸುತ್ತದೆ.
    ಉದಯ್
    ಅನುವಾದದ ಮೂಲಕವಾದರೂ ಬೇರೆ ಭಾಷೆಯ ಕವಿತೆಗಳನ್ನು, ಅವರ ಸಂಸ್ಕಾರ, ತುಡಿತ, ಪ್ರೇಮ, ವಿರಹಗಳ ಅಭಿವ್ಯಕ್ತಿಯನ್ನು ತಿಳಿದುಕೊಳ್ಳುವುದಕ್ಕೆ ಕಾರಣವಾದ ನಿಮಗೆ ಅಭಿನಂದನೆಗಳು.

    Unknown ಹೇಳಿದರು...

    ಕವನ ಚೆನ್ನಾಗಿದೆ... ಆಕೆ ಬಹುಶ ಮಹಾನ್ ಚೆಲುವೆ ಇರಬೇಕು.. ಪ್ರೀತಿಸಿದವನನ್ನು ತಾನು ಹೇಳಿದಂತೆ ಕುಣಿಸಿದ್ದಾಳೆ... :-)
    "ಎಷ್ಟೆಲ್ಲಾ ಮಾಡಿದೆ ನಾ ನಿನಗೋಸ್ಕರನನ್ನತನವನ್ನು ಬಿಟ್ಟೆ ನನ್ನವರನ್ನು ಬಿಟ್ಟೆನನ್ನನ್ನು ನಾನು ಬದಲಾಯಿಸಿಕೊಂಡೆಕೊನೆಗೆ ನೀ ನಡೆದ ಹಾದಿಯಲ್ಲಿ ನಾನೂ ನಡೆದೆ" ಈ ಸಾಲು ಓದುವಾಗ ಹಾಗನ್ನಿಸಿತು... ಧನ್ಯವಾದ..

    shivu.k ಹೇಳಿದರು...

    ಉದಯ್ ಸರ್,

    ಮೊದಲ ಬಾರಿಗೆ ಸ್ವಲ್ಪ ಭಿನ್ನವೆನಿಸುವ ಪದ್ಯವನ್ನು ಬರೆದಿದ್ದೀರಿ...ಮಾತುಗಳು ನೇರವಾಗಿದ್ದರೂ ಪ್ರೀತಿಯಲ್ಲಿನ ನಿರಾಶೆಯನ್ನು ಚೆನ್ನಾಗಿ ಬಿಂಬಿಸಿದ್ದೀರಿ...

    ಚಕೋರ ಹೇಳಿದರು...

    ನಿಮಗೆ ಬರಹದ ಮೇಲೆ ಅದೆಷ್ಟು ಇಷ್ಟವೆಂಬುದನ್ನು ಬ್ಲಾಗು ತುಂಬಾ ಅಕ್ಷರ ಹಾಕಿ ತೋರಿಸಿದ್ದೀರಿ..:)

    ಬಹುಶಃ ಪರಊರಿನಲ್ಲಿರುವುದರಿಂದಾದ ಕನ್ನಡ ಅಕ್ಷರ ದಾಹವಿರಬಹುದು.

    ಈ ಬ್ಲಾಗಿನ ಬರಹಗಳೆಲ್ಲವೂ ಚೆನಾಗಿದೆ. ಆದರೆ ಈ ಪೋಸ್ಟ್ ನ್ನು ಪೂರ್ಣ ಗದ್ಯದಂತೇ ಬರೆದಿದ್ದರೆ ಚೆನ್ನಿತ್ತು.( ಇದು ಗದ್ಯವೇ ಹೌದಾದರೆ ನಿಜಕ್ಕೂ ಚೆನ್ನಾಗಿದೆ, ಬರಹ ಶೈಲಿ ಪದ್ಯವಿರಬಹುದೇನೋ ಅಂತ ಅನುಮಾನ ಮೂಡಿಸಿತು.)

    ಶಿವಪ್ರಕಾಶ್ ಹೇಳಿದರು...

    Superb... Excellent...
    I Liked it very much...

    sunaath ಹೇಳಿದರು...

    ಉದಯ,
    ಅನುವಾದವೆಂದು ತಿಳಿದೇ ಓದುತ್ತಲಿದ್ದೆ. ಕವನ ತುಂಬ ಚೆನ್ನಾಗಿದೆ ಎಂದುಕೊಳ್ಳುತ್ತಲಿದ್ದೆ. ಕೊನೆಯಲ್ಲಿ ಇದು ನಿಮ್ಮ ಸ್ವಂತ ಕವನವೆಂದು ತಿಳಿದು ಸಂತೋಷವಾಯಿತು. ಕಾವ್ಯಲೋಕದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ.

    PARAANJAPE K.N. ಹೇಳಿದರು...

    ಉತ್ತಮ ಕವನಕ್ಕೆ ಅಭಿನಂದನೆಗಳು.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣವರೆ,
    ನಿಮ್ಮ ನೇರ ಹಾಗೂ ನಿಷ್ಟುರ ವಿಮರ್ಶೆಯನ್ನು ನಾನು ಮೆಚ್ಚಿಕೊಂಡೆ. ಅದಕ್ಕೆ ಉತ್ತರ ಇಲ್ಲಿದೆ.

    ಈ ಕವಿತೆಯ ನಿರೂಪಕ ಎಲ್ಲರಂತೆ ಒಬ್ಬ ಸಾಮಾನ್ಯ ಪ್ರೇಮಿ. ಆದರೆ ಪ್ರೀತಿಯಲ್ಲಿ ಅವನೊಬ್ಬನೇ ಸೋತು ಸೋತು ಸಾಕಾಗಿದ್ದರಿಂದ ಹಾಗು ಅವನ ಅಹಂಗೆ ಧಕ್ಕೆ ಬಂದಿದ್ದರಿಂದ ಅದರ ತಳಮಳವನ್ನು ಈ ರೀತಿ ಹೊರಗೆಡುವುತ್ತಾನೆ. ಮತ್ತು ನೀವು ಹೇಳಿದಂತೆ ಅತ್ಯಂತ ನಿಷ್ಟುರವಾಗಿ ನಿನ್ನ ಪ್ರೀತಿಸುವುದೇ ಹಿಂಸೆ ಎಂದು ಹೇಳುತ್ತಾನೆ.

    'ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ' ಎನ್ನುವ ಸಾಲು ಅದರ ಹಿಂದಿನ ಮತ್ತು ಮುಂದಿನ ಸಾಲುಗಳೊಂದಿಗೆ ಲಿಂಕ್ ಆಗಿದೆ. ಇಲ್ಲಿ ನಿದ್ರೆಯಿಲ್ಲದೆ ಎನ್ನುವ ಸಾಲು ಅವನ ನೆಮ್ಮದಿ ಕಳೆದುಕೊಂಡ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ. ಏಕೆಂದರೆ ಅವನಿಗೆ ಪ್ರೀತಿಯಲ್ಲಿ ಅಷ್ಟೊಂದು ನಿರಾಶೆಯಾಗಿದೆ. ನೆಮ್ಮದಿಯೇ ಇಲ್ಲದ ಮೇಲೆ ನಿದ್ರೆ ಹೇಗೆ ಬಂದೀತು? ನಿದ್ರೆಯಿಲ್ಲ ಎನ್ನುವದು ಅವನ ತಳಮಳ, ನಿರಾಶೆಯನ್ನು ಒತ್ತಿಹೇಳುತ್ತದೆ.

    “ಪ್ರತಿಸಲ ನಾನು ಸೋಲುತ್ತಲೇ ಹೋದೆ
    ನೀನು ಗೆಲ್ಲುತ್ತಲೇ ಬಂದೆ”
    ಎನ್ನುವ ಸಾಲಿನಲ್ಲೂ ಸಹ ಮೇಲಿನ ಭಾವವೇ ವ್ಯಕ್ತವಾಗಿದೆ. ಅದು ಕೂಡ ಮುಂದಿನ ಸಾಲಿನೊಂದಿಗೆ ಲಿಂಕ್ ಆಗಿದೆ. ಕುವೆಂಪುರವರ “ವರ್ಷಧಾರೆ” ಪದ್ಯದಲ್ಲೂ ಸಹ “ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ” ಇಂಥದೆ ಒಂದು ಸಾಲು ಬರುತ್ತದೆ. “ಕದ್ದಿಂಗಳು ಕಗ್ಗತ್ತಲು ಕಾರ್ಗಾಲ” ಎನ್ನುವ ಪದಗಳು ಒಂದೇ ಅರ್ಥವನ್ನು ಕೊಟ್ಟರೂ ಅವೆಲ್ಲ ಒಟ್ಟಾಗಿ ಕತ್ತಲಿನ ತೀವ್ರತೆಯನ್ನು ಸೂಚಿಸುತ್ತದೆ. ಅದೇ ರೀತಿ “ಧುಮ್ಮಿಕ್ಕಿ ಹರಿಯುವ ಜಲಪಾತ” ಎನ್ನುವ ಸಾಲು ‘ಸಾಕ್ಷಾತ್ಕಾರ’ ಚಿತ್ರದಲ್ಲಿ ಬರುತ್ತದೆ. ಇಲ್ಲಿ ಜಲಪಾತ ಯಾವಾಗಲೂ ಧುಮ್ಮಿಕ್ಕಿ ಹರಿಯುತ್ತದಲ್ಲ? ಇನ್ನೂ ಯಾಕೆ ಆ ಪದದ ಬಳಕೆ? ಅಂತ ಕೇಳುವ ಹಾಗಿಲ್ಲ. ಯಾಕೆಂದರೆ ಕಾವ್ಯದ ಭಾಷೆಯೇ ಹಾಗೆ ಹಾಗೂ ಕಾವ್ಯವನ್ನು dissect ಮಾಡಿ ನೋಡಬೇಕಾಗುತ್ತದೆ ಹೊರತು ಕಾವ್ಯದ ಭಾಷೆಯನ್ನಲ್ಲ ಎಂದು ನಿಮ್ಮಂತ ಕನ್ನಡ ಪಂಡಿತರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ನನ್ನ ವಿನಮ್ರ ಭಾವದ ಮಾತು ಹೊರತು ಅಹಂಕಾರದ ಮಾತಲ್ಲ. Anyway ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಚಕೋರವರೆ,
    ನನ್ನ ಬ್ಲಾಗಿನ ಬರಹಗಳನ್ನು ಮೆಚ್ಚಿಕೊಂಡಿರುವಿರಿ. ತುಂಬಾ ಥ್ಯಾಂಕ್ಸ್! ಹೊರದೇಶದಲ್ಲಿದ್ದ ಮಾತ್ರಕ್ಕೆ ನನಗೆ ಅಕ್ಷರದಾಹವುಂಟಾಗಿಲ್ಲ. ಅದು ಮೊದಲಿನಿಂದಲೂ ಗುಪ್ತಗಾಮಿನಿಯಾಗಿ ನನ್ನೊಳಗೆ ಹರಿಯುತ್ತಲೇ ಇತ್ತು. ಬಹುಶಃ ಇಲ್ಲಿಗೆ ಬಂದ ಮೇಲೆ ಅದು ಹೆಚ್ಚಾಗಿರಬಹುದು.
    ಇದು ಗದ್ಯವಲ್ಲ. ಗದ್ಯದಂತಿರುವ ಪದ್ಯ. ಆಧುನಿಕ ಕಾವ್ಯಪ್ರಾಕಾರಕ್ಕೆ ಪ್ರಾಸ, ರಾಗ, ಹಾಗು ಲಯದ ಹಂಗಿಲ್ಲ.
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್!

    ಬಿಸಿಲ ಹನಿ ಹೇಳಿದರು...

    ಶಿವು, ಸುನಾಥ್ ಸರ್, ಪರಾಂಜಪೆ ಸರ್, ರವಿಕಾಂತ ಗೋರೆ, ಹಾಗೂ ಶಿವಪ್ರಕಾಶ್ ಎಲ್ಲರಿಗೂ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.

    ಸುಧೇಶ್ ಶೆಟ್ಟಿ ಹೇಳಿದರು...

    ಏನೋ ಒ೦ಥರಾ ಚೆನ್ನಾಗಿತ್ತು... ಕೆಲವು ಸಾಲುಗಳು ಮನಸೆಳೆಯುತ್ತವೆ... ಉದಾ: ನನ್ನ ರಾತ್ರಿಗಳು ಹಿಗ್ಗಿ ಹೋಗಿವೆ.....