ಥೂ, ನಮ್ಮ ಜನ್ಮಕ್ಕೊಂದಿಷ್ಟು ಬೆಂಕಿ ಹಾಕ! ನಾವು ಬರಹಗಾರರೇ ಹೀಗೆ! ಬರಿ ಬರಹದಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರದ ಬಗ್ಗೆ ಅಗಾಧವಾದದನ್ನು ಬರೆದು ಶಹಭಾಸ್ಗಿರಿ ಪಡೆಯುವ ನಾವು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತು ಬಿಡುತ್ತೇವೆ. ಇದಕ್ಕೆ ಜ್ವಲಂತ ಸಾಕ್ಷಿ ಈಗಷ್ಟೆ ನಮ್ಮ ನಾಡಿನ ಉತ್ತರ ಕರ್ನಾಟಕದ ಭಾಗದಲ್ಲಿ ನಡೆದ ಪ್ರವಾಹದ ದುರಂತ! ಈ ದುರಂತ ಸಂಭವಿಸಿ ಒಂದು ವಾರವಾಗುತ್ತ ಬಂದರೂ ನಾವು ಬ್ಲಾಗಿಗರು ಬರಿ ನಮ್ಮ ನಮ್ಮ ಬ್ಲಾಗಗಳಲ್ಲಿ ಹೊಸ ಹೊಸ ಪೋಸ್ಟಿಂಗ್ಗಳನ್ನು ಪ್ರಕಟಿಸುವದರಲ್ಲಿ, ಅದನ್ನು ಸಿಂಗರಿಸುವದರಲ್ಲಿ ಮಾತ್ರ ಬಿಜಿಯಾಗಿದ್ದೇವೆ ಹೊರತು ನಮ್ಮಲ್ಲಿ ಯಾರೊಬ್ಬರೂ ನಮ್ಮದೇ ಬ್ಲಾಗರ್ಸ್ ಟೀಮ್ನಿಂದ ನೆರೆಯಲ್ಲಿ ಸಿಲುಕಿದ ಸಂತ್ರಸ್ತರ ನೋವಿಗೆ ಮಿಡಿಯುವದಾಗಲಿ, ಅಥವಾ ಅವರಿಗೆ ಹೇಗೆ ಸಹಾಯ ಮಾಡಬಹುದೆಂಬುದರ ಬಗ್ಗೆಯಾಗಲಿ ನಾವು ಯಾರೂ ಯೋಚಿಸುತ್ತಿಲ್ಲ. ಇಡಿ ಉತ್ತರ ಕರ್ನಾಟಕ ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿಹೋಗಿದೆ. ಆದರೆ ನಾವು ಮಾತ್ರ ಯಾವ ರೀತಿಯೂ ಸ್ಪಂದಿಸುತ್ತಿಲ್ಲ. (ಈಗಾಗಲೇ ನೀವು ಸ್ಪಂದಿಸಿದ್ದರೆ ಸಹಾಯವನ್ನು ನೀಡಿದ್ದರೆ ನನ್ನ ಖಾರದ ಮಾತುಗಳಿಗೆ ಕ್ಷಮೆಯಿರಲಿ) ದುರಂತ ಸಂಭವಿಸಿದ ಮೇಲೆ ನಾವು ಅದರ ಮೇಲೆ ಬರಿ ಕಥೆ, ಕವನ, ಲೇಖನಗಳನ್ನು ಬರೆದುಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತೆ? ನಾವು ಅವರಿಗೆ ಸಹಾಯ ಮಾಡಬಾರದೆ?
ನಾನು ಕಾಯುತ್ತಲೇ ಇದ್ದೆ ಈ ಬಗ್ಗೆ ಒಬ್ಬರಾದರೂ ಮಾತನಾಡುತ್ತಾರಾ? ಎಂದು. ಕೊನೆಗೆ ಬೇಸತ್ತು ನಾನಿಲ್ಲಿ ಬರೆಯಬೇಕಾಗಿಬಂದಿದ್ದು ಅನಿವಾರ್ಯವಾಯಿತು. ಈ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯಿಂದಿರುವ ವ್ಯಕ್ತಿಗಳೆಂದರೆ ಲೇಖಕರು ಹಾಗೂ ಬರಹಗಾರರು. ಇದೀಗ ನಾವೇ ಹೀಗೆ ಸುಮ್ಮನೆ ಕುಳಿತುಬಿಟ್ಟರೆ ಹೇಗೆ? ಇಲ್ಲಿ ದೊಡ್ದ ದೊಡ್ದ ಬರಹಗಾರರಿದ್ದಾರೆ, ಲೇಖಕರಿದ್ದಾರೆ, ಬುದ್ಧಿಜೀವಿಗಳಿದ್ದಾರೆ ಇವರೆಲ್ಲ ಇತ್ತ ಗಮನಹರಿಸಲಾರರೆ? ಎಲ್ಲಕ್ಕಿಂತ ಹೆಚ್ಚಾಗಿ ಈಗಾಗಲೇ ನಮ್ಮದೇ ಆದಂಥ ಬ್ಲಾಗರ್ಸ್ ಟೀಮಿದೆ. ಎಲ್ಲ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಕೊಟ್ಟರಾಯಿತು. ನಮ್ಮ ಟೀಮಿನಲ್ಲಿಯೇ ಯಾರಾದರೊಬ್ಬರು ಈ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮ ಟೀಮಿನ ಅಧ್ಯಕ್ಷರಾದ ಜಿ.ಎನ್.ಮೋಹನ್ ಅವರ ಮುಂದಾಳತ್ವದಲ್ಲಿ ಎಲ್ಲ ಸದಸ್ಯರಿಂದ ಯಾಕೆ ದುಡ್ಡು ಸಂಗ್ರಹಿಸಿ ಕೊಡಬಾರದು? ನಮ್ಮ ಟೀಮಿನಲ್ಲಿ ಒಟ್ಟು ೧೭೦೦ ಸದಸ್ಯರಿದ್ದಾರೆ. ಒಬ್ಬೊಬ್ಬರೂ ೧೦೦ ರೂಪಾಯಿ ನೀಡಿದರೂ ಒಟ್ಟು ರೂ ೧,೭೦,೦೦೦ ಸಂಗ್ರಹಿಸಬಹುದು. ಅನಿವಾಸಿ ಕನ್ನಡಿಗರು, ದೊಡ್ದ ದೊಡ್ದ ಹುದ್ದೆಯಲ್ಲಿರುವವರು ಇನ್ನೂ ಹೆಚ್ಚಿಗೆ ನೀಡಬಹುದು. ಇದನ್ನು ಅವರಿವರ ಮೂಲಕ ಕೊಡುವ ಬದಲು ನಾವೇ ಒಟ್ಟಾಗಿ ಸಂಗ್ರಹಿಸಿ ನಮ್ಮ ಬ್ಲಾಗರ್ಸ್ ಟೀಮಿನಿಂದಲೇ ಕೊಟ್ಟರೆ ಒಳ್ಳೆಯದಲ್ಲವೆ? ಈಗಲೂ ತಡವಾಗಿಲ್ಲ. ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಲ್ಲೆವು. ಈ ಕೂಡಲೇ ಬೆಂಗಳೂರಿನಲ್ಲಿರುವ ಬ್ಲಾಗಿಗರಲ್ಲಿ ಯಾರಾದರೊಬ್ಬರು ಕಾರ್ಯಪ್ರವರ್ತರಾಗಿ ಈ ಕೆಲಸಕ್ಕೆ ಚಾಲನೆ ನೀಡಬಾರದೆ? ಅಥವಾ ಮೋಹನ್ ಅವರೇ ಎಲ್ಲರಲ್ಲಿ ಒಂದು ಮನವಿಯನ್ನು ಮಾಡಿ ದುಡ್ದು ಸಂಗ್ರಹಿಸಿ ಕೊಟ್ಟರೆ ಹೇಗೆ? ನಾವೆಲ್ಲ ಸಹೃದಯರು. ಬನ್ನಿ ನಮ್ಮ ಸಹಾಯ ಹಸ್ತವನ್ನು ನೀಡೋಣ, ಕುಸಿದ ಬದುಕನ್ನು ಮತ್ತೆ ಕಟ್ಟೋಣ. ಅವರ ಕಳೆದು ಕನಸುಗಳನ್ನು ಅವರಿಗೆ ಮತ್ತೆ ಹುಡುಕಿಕೊಡೋಣ. ಇದಕ್ಕೆ ನೀವೇನಂತೀರಿ?
-ಉದಯ ಇಟಗಿ
ಕಥನ ಮಥನ
1 ವಾರದ ಹಿಂದೆ
12 ಕಾಮೆಂಟ್(ಗಳು):
ಹೌದು ಸರ್,
ಕಳೆದು ಹೋದ ಕನಸು ಹುಡುಕಿಕೊಡಲು ಸಾಧ್ಯವಾಗದಿದ್ದರೊ, ಕನಸ ಕಟ್ಟವ ಆಸೆ, ಧೈರ್ಯ, ಹುಮ್ಮಸ್ಸು ಎಂಬ ಮನೋಬಲವನ್ನು ಮೊದಲು ಕಟ್ಟೋಣ...
ನಿಮ್ಮ ಲೇಖನದಿಂದಾದರು ಮಲಗಿದ ಜನ ಎದ್ದೇಳಬೇಕಿದೆ...
ನಮ್ಮ ಸಹಾಯ ಹಸ್ತವನ್ನು ನಾವು ಪ್ರಾರಂಭಿಸಿಬಿಟ್ಟಿದ್ದೇವೆ ಉಳಿದವರು ಹಾಗೆಯೇ ಮುನ್ನುಗ್ಗಿದ್ದಾರೆಂದು ಕೊಳ್ಳುತ್ತೆವೆ.
ಧನ್ಯವಾದಗಳು ಸಮಯಕ್ಕೆ ತಕ್ಕ ಬರಹ...ನೊಂದ ಜನಕೆ ಸಹಾಯ ಹಸ್ತಗಳು ಮುಂದೆ ಬರಲಿ, ಬಂದ ಸಹಾಯವನ್ನು ಮಧ್ಯಸ್ಥಿಕೆಯ ಜನ ನುಂಗಿನೀರು ಕುಡಿಯದಿರಲೆಂದು ಆಶಿಸುತ್ತೆನೆ.
ವಂದನೆಗಳು
ಉದಯ್ ಅವರೆ,
ನಿಮ್ಮ ಕಾಳಜಿಗೆ ಮೆಚ್ಚುಗೆ ಇದೆ. ಈಗಾಗಲೇ ನಾವೂ ಈ ನಿಟ್ಟಿನಲ್ಲಿ ಯೋಚಿಸಿ, ಸಹಾಯಧನ್ ಕಳುಹಿಸಿದ್ದೇವೆ. ಸಂಘಟನೆಗಳ ಮೂಲಕವೇ ಸಹಾಯ ಮಾಡಬೇಕೆಂದೇನಿಲ್ಲವಲ್ಲ? ಅವರವರ ವೈಯಕ್ತಿಕ ನೆಲೆಯಲ್ಲೂ ಮಾಡಬಹುದು. ಹಾಗೆ ಸಹಾಯ ಮಾಡಿ ಮಾಡಿದ್ದೇವೆ ಎಂದು ಸಾರುವುದೂ ಸಲ್ಲ. ಹಾಗಾಗಿಯೇ ಎಲ್ಲೂ ನಾನು ಹಾಕಿರಲಿಲ್ಲ. ಬ್ಲಾಗ್ನಲ್ಲಿ ಕವನ, ಕಥೆ ಹಾಕುತ್ತಾ, ಸಿಂಗರಿಸುತ್ತಾ ಇದ್ದವರೆಲ್ಲಾ ಇದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ ಎಂದೆಣಿಸದಿರಿ..:) ನಿಮ್ಮ ಈ ಲೇಖನದಿಂದ ಪ್ರೇರಿತರಾಗಿ ಹಲವರು ಮುಂದೆ ಬಂದು ಸಹಾಯನೀಡಲೆಂದು ಹಾರೈಸುವೆ. ವಂದನೆಗಳು.
ಹಾಂ. ... ಅಂತೆಯೇ ಬ್ಲಾಗ್ ಜಗತ್ತಿನೊಳಗಿನ ಕಲ್ಮಶತೆಯ ಕುರಿತು ಒಂದು ಲೇಖನ ಹಾಕಿರುವೆ. ಬಿಡುವಾದಾಗ ನೋಡಿ.
We have already made our donation through our company (All 800 the employees have contributed a day's towards the flood relief.
ಮನಸು ಮೇಡಂ,
ನನ್ನ ಲೇಖನದ ಧಾಟಿಯನ್ನು ಚನ್ನಾಗಿ ಅರ್ಥ ಮಾಡಿಕೊಂಡು ಪ್ರೋತ್ಸಾಹದ ಮಾತುಗಳನ್ನಾಡಿದ್ದೀರಿ ಅದಕ್ಕೆ ಧನ್ಯವಾದಗಳು. ಹೀಗೆ ನನ್ನ ಬ್ಲಾಗಿಗೆ ಭೇಟಿ ಕೊಡುತ್ತಿರಿ.
ಪ್ರೀತಿಯ ತೇಜಸ್ವಿನಿಯವರೆ,
ನಾವು ಸಹಾಯ ಮಾದಬೇಕಾದರೆ ಸಂಘಟನೆಯ ಮೂಲಕವೇ ಮಾಡಬೇಕೆಂದೇನಿಲ್ಲ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆದರೆ ನಾವು ಪ್ರತ್ಯೇಕವಾಗಿ ಕಳಿಸುವ ಬಹಳಷ್ಟು ಹಣ ಮಧ್ಯವರ್ತಿಗಳ ಪಾಲಾಗುವದರಿಂದಲೇ ಒಂದು ಸಂಘಟನೆಯ ಮೂಲಕ ಅದು ಬರಹಗಾರರಂಥ ಸಂಘಟನೆಯ ಮೂಲಕ ಕಳಿಸುವದರಿಂದ ಅದಕ್ಕೊಂದು ಹೆಚ್ಚು ತೂಕ, ಮೌಲ್ಯವಿರುತ್ತದೆ ಮತ್ತು ಇದು ಬರಹಗಾರರ ಸಂಘಟನೆಯಿಂದ ಬಂದಿದೆ ಎನ್ನುವ ಕಾರಣಕ್ಕೇನೆ ತಪ್ಪಿಸದೆ ತಲುಪಿಸಬೇಕಾದ ಜಾಗಕ್ಕೆ ತಲುಪಿಸಲಾಗುತ್ತದೆ. ಹಾಗು ಏನಾದರು ಹೆಚ್ಚುಕಮ್ಮಿಯಾದರೆ ನಾವು ಸಂಘಟನೆಯ ಮೂಲಕ ಕೇಳಬಹುದೆಂಬ ಉದ್ದೇಶದಿಂದ ನಮ್ಮ ಟೀಮಿನಿಂದ ಕಳಿಸಿದರೆ ಒಳಿತು ಎಂಬ ಅರ್ಥದಲ್ಲಿ ಹೇಳಿದ್ದೇನೆ ಹೊರತು ಅವರು ಕೊಟ್ಟಿದ್ದನ್ನು ಜಗಜ್ಜಾಹಿರುಗೊಳಿಸಬೇಕೆಂಬ ಉದ್ದೇಶದಿಂದಲ್ಲ. ಸಹಾಯವನ್ನು ಹೇಗೆ ಬೇಕಾದರು ಮಾದಬಹುದು ಮಾಡಿದ್ದನ್ನು ಹೇಳಿಕೊಳ್ಳಬಾರದು ಎನ್ನುವ ನಿಮ್ಮ ಈ ಮಾತನ್ನು ಸಹ ಒಪ್ಪುತ್ತೇನೆ. ಆದರೆ ಒಂದು ಸಂಘಟನೆಯಿರಬೇಕಾದರೆ ಅದರಿಂದ ಚಾಲನೆ ನೀಡಿದರೆ ಒಳಿತಾಗಿತ್ತು ಎನ್ನುವದಷ್ಟೆ ನನ್ನ ಅಭಿಪ್ರಾಯವಾಗಿತ್ತು. ಮೇಲಾಗಿ ನೀವೇ ಹೇಳಿದಂತೆ ನನ್ನೀ ಲೇಖನದಿಂದ ಪ್ರೇರಿತರಾಗಿ ಹಲವರು ಮುಂದೆ ಬಂದು ಸಹಾಯನೀಡಲೆಂಬುದಷ್ಟೆ ನನ್ನ ಉದ್ದೇಶವಾಗಿತ್ತು. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ.
ಅಂದಹಾಗೆ ನಿಮ್ಮ ಲೇಖನವನ್ನು ಓದಿ ಅಲ್ಲಿಯೇ ಕಾಮೆಂಟಿಸುವೆ!
ಜಯಲಕ್ಷ್ಮಿ ಮೇಡಂ,
ಮೊಟ್ಟ ಮೊದಲಿಗೆ ಪರಿಹಾರ ಧನ ನೀಡಿದ್ದಕ್ಕಾಗಿ ಅಭಿನಂದನೆ ಹಾಗು ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಗಾಗ ನನ್ನ ಬ್ಲಾಗಿಗೆ ಭೇಟಿ ಕೊಡುತ್ತಿರಿ.
ಉತ್ತಮ ಯೋಚನೆ ಸರ್,
ಸರಿಯಾದ ಜನರಿಗೆ ಮುಟ್ಟುತ್ತೆಯಾದರೆ ಎಲ್ಲರು ಕೊಡುತ್ತಾರೆ, ಅದರ ಬರವಸೆಯೇ ಇಲ್ಲವಲ್ಲ..... ದೇಣಿಗೆಗಾಗಿ ಬಂದ ಎಲ್ಲರಿಗೂ ನಾನು ಕೊಟ್ಟಿದ್ದೇನೆ, ತೊಂದರೆಯಾದ ಜನರಿಗೆ ಉಪಯೋಗವಾಗತ್ತೆ ಎಂಬ ನಂಬಿಕೆ ಬಿಟ್ಟು.....
ಉದಯ್ ಸರ್,
ನಿಮ್ಮ ಅಭಿಪ್ರಾಯ ಸರಿ. ಬ್ಲಾಗಿಗರಾಗಿ ನಾವು ಈ ವಿಚಾರದಲ್ಲಿ ಹಿಂದೆ ಬಿದ್ದರೂ, ನಾವು ದಿನಪತ್ರಿಕೆ ವಿತರಕರು ಈ ನಿಟ್ಟಿನಲ್ಲಿ ಆಗಲೇ ತೊಡಗಿಕೊಂಡಿದ್ದೇವೆ. ಪುಟ್ಟ ಪುಟ್ಟ ಬೀಟ್ ಹುಡುಗರೂ ಕೂಡ ಐದು ಹತ್ತು ಕೊಡುತ್ತಿದ್ದಾರೆ. ಸದ್ಯದಲ್ಲೇ ಡಿ.ಡಿ ತೆಗೆದು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳಿಸುವವರಿದ್ದೇವೆ...
ದಿನಕರ್,
ಕೇಳಿಕೊಂಡು ಬಂದವರಿಗೆಲ್ಲಾ ಮತ್ತೆ ಮತ್ತೆ ಕೊಟ್ಟ ನಿಮ್ಮ ಧಾರಾಳತನಕ್ಕೆ ಹ್ಯಾಟ್ಶಾಫ್! ಅದು ತಲುಪಬೇಕಾದವರನ್ನು ತಲುಪುತ್ತದೋ ಇಲ್ಲವೋ ಎನ್ನುವ ನಿರಾಶವಾದ ಹಾಗೂ ಜಿಜ್ಞಾಸೆ ಬೇಡ. ಕೊಡುವ ಮನಸ್ಸೊಂದಿದ್ದರೆ ಸಾಕು. ಅದು ತಲುಪತ್ತದೆ ಮತ್ತು ತಲುಪಲಿ ಎಂದು ಹಾರೈಸುತ್ತೇನೆ.
ಶಿವು,
ನೀವು ಈಗಾಗಲೆ ದಿನಪತ್ರಿಕೆ ವಿತರಕರು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದು ಕೇಳಿ ಖುಶಿಯಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟ ಪುಟ್ಟ ಬೀಟ್ ಹುಡುಗರೂ ಕೂಡ ಯಾವುದೇ ಜಿಜ್ಞಾಸೆಕ್ಕೊಳಗಾಗದೆ ಐದು ಹತ್ತು ಕೊಡುತ್ತಿದ್ದಾರೆ ಎನ್ನುವದು ಹೆಚ್ಚಿನ ಖುಶಿಯ ವಿಚಾರ. keep it up.
ನಿಜ ಬ್ಲಾಗಿಗರಿಂದ ಸಾಧ್ಯವಾದಷ್ಟು ಸಹಾಯ ಆಗಲೇಬೇಕು. ಜಿ ಎನ್ ಮೋಹನ್ ಸರ್ ದಯವಿಟ್ಟು ಮುಂದಾಳತ್ವವಹಿಸಿಕೊಳ್ಳಿ, ತಡವಾಗುವುದು ಬೇಡ.
ಜಯಲಕ್ಶ್ಮಿ ಮೇಡಂ,
ನಿಮ್ಮ ಸಹಮತಕ್ಕೆ ವಂದನೆಗಳು. ಆದರೆ ಇದೆ ಕಾಮೆಂಟನ್ನು ಬ್ಲಾಗರ್ಸ್ ತಾಣದಲ್ಲಿ ಆರಂಭವಾದ ನನ್ನ ಚರ್ಚೆಯ ಫೋರಂನಲ್ಲಿ ಹಾಕಿ. ಆಗ ಎಲ್ಲರೂ ಓದಿಯಾದರು ಎಚ್ಚೆತ್ತುಕೊಳ್ಳಲಿ. ಹಾಗೂ ಮೋಹನ್ ಅವರು ಮುಂದಾಳತ್ವವನ್ನು ವಹಿಸಿಕೊಂಡಾರು.
ಕಾಮೆಂಟ್ ಪೋಸ್ಟ್ ಮಾಡಿ