ಮೊನ್ನೆ ಉತ್ತರ ಕರ್ನಾಟಕದಲ್ಲಿ ನೆರೆ ಸಂಭವಿಸಿ ಒಂದು ವಾರವಾಗುತ್ತಾ ಬಂದರೂ ಯಾವ ಬ್ಲಾಗರೂ ನೆರೆ ಸಂತ್ರಸ್ತರಿಗೆ ನಮ್ಮ ಬ್ಲಾಗರ್ಸ್ ಸಂಘದಿಂದ ಪರಿಹಾರ ನಿಧಿಯೊಂದನ್ನು ನೀಡಿದರೆ ಹೇಗೆ ಎಂದು ಯೋಚಿಸದೇ ಇದ್ದುದಕ್ಕೆ ಬೇಸತ್ತು ಬರಹಗಾರರೇ ಹೀಗಾದರೆ ಹೇಗೆಂದು ಅವರಿಗೆ ಅದೇ ಬ್ಲಾಗರ್ಸ್ ಜಾಲತಾಣದ ಮೂಲಕ ಇದರ ಬಗ್ಗೆ ಯೋಚಿಸಿ ಎಂದು ನನ್ನ ಲೇಖನವೊಂದರ ಮೂಲಕ ಸ್ವಲ್ಪ ಖಾರವಾಗಿ ಆಗ್ರಹಿಸಿದ್ದೆ. ಇದನ್ನು ಓದಿದ ಗಂಭೀರ ಬರಹಗಾರರೊಬ್ಬರು ನನ್ನ ಇಂಥ ಮಾತುಗಳಿಂದ ಅವರಿಗೆ (ಬರಹಗಾರರಿಗೆಲ್ಲರಿಗೂ) ಇರುಸುಮುರುಸಾಗಿದೆಯೆಂದು ಹಾಗೂ ಈ ಮೂಲಕ ಬರಹಗಾರರನ್ನು ಚುಚ್ಚಿದ್ದೇನೆಂದು ನೊಂದುಕೊಂಡು ಬರಹಗಾರರದು ಬರಿ ಬರೆಯುವದಷ್ಟೆ ಕೆಲಸ ಮಿಕ್ಕೆಲ್ಲವೂ ಬೇರೆಯವರದು ಎನ್ನುವಂತೆ ಬರಹಗಾರರನ್ನು ವಹಿಸಿಕೊಂಡು ಬರೆದ ತಮ್ಮ ಲೇಖನವೊಂದರ ಮೂಲಕ ಗಂಭೀರವಾಗಿ ಆರೋಪಿಸಿದ್ದಾರೆ. ಮೊದಲಿಗೆ ನನ್ನ ಮಾತಿನಿಂದ ಅವರಿಗೆ ಇರುಸುಮುರುಸಾಗಿದ್ದರೆ ಮುಜುಗರವಾಗಿದ್ದರೆ ಅದಕ್ಕೆ ನನ್ನ ವಿಷಾದವಿದೆ ಎಂದು ಹೇಳುತ್ತಾ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಮೊದಲಿಗೆ ಇಡಿ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿಹೋಗಿರುವ ಇಂಥ ಸಂದರ್ಭದಲ್ಲೂ ಸಂತ್ರಸ್ತರಿಗೆ ಈಗಾಗಲೆ ತಮ ತಮ್ಮ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ ಮೇಲೂ ಮತ್ತೆ ಬ್ಲಾಗರ್ಸ್ ಸಂಘದಿಂದ ಮಾಡಬೇಕೋ ಬೇಡವೋ? ಮಾಡಿದರೆ ಅದು ಸಂತ್ರಸ್ತರನ್ನು ತಲುಪುತ್ತದೋ ಇಲ್ಲವೋ ಎಂಬ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕೂಡುವಂಥ ಸಮಯವೇ ಇದು? ಇಂಥ ಮೂರ್ಖತನಕ್ಕೆ ಏನು ಹೇಳಬೇಕು? ಇಂಥ ಕ್ಷುಲ್ಲಕ ವಿಷಯಗಳಿಗೇ ನಾನು ಬರಹಗಾರರನ್ನು hate ಮಾಡುವದು. ಒಂದು ವೇಳೆ ಎಲ್ಲರೂ ನಮ್ಮ ತರಾನೆ ಯೋಚಿಸಿದ್ದರೆ ಮೊನ್ನೆ ಮುಖ್ಯಮಂತ್ರಿಗಳು ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲು ಹೊರಟಾಗ ಸಾರ್ವಜನಿಕರಿಂದ ಬರಿ ಬೆಂಗಳೂರೊಂದರಲ್ಲಿಯೇ ೩ ಕೋಟಿಯಷ್ಟು ಹಣ ಹೇಗೆ ಸಂಗ್ರಹವಾಗುತ್ತಿತ್ತು? ಸಂತ್ರಸ್ತರಿಗೆ ಸಹಾಯವಾದರೆ ಸಾಕೆಂದು ಎರೆಡೆರಡು ಬಾರಿ ಸಹಾಯ ಮಾಡಿದ ಎಷ್ಟೊ ಜನರಿದ್ದಾರೆ. ನಮ್ಮ ಬ್ಲಾಗರ್ ಶಿವು ಅವರ ಕೆಳಗೆ ಕೆಲಸ ಮಾಡುವ ಪೇಪರ್ ಬೀಟ್ ಹುಡುಗರು ಸಹ ಐದೋ ಹತ್ತೋ ರೂಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಅಂಥದುರಲ್ಲಿ ನಾವು ಬರಹಗಾರರು ಈಗಾಗಲೆ ಸಹಾಯ ಮಾಡಿದಮೇಲೂ ಐವತ್ತೋ ಅರವತ್ತೋ ನೀಡದಿರುವಷ್ಟು ಕಡುಬಡವರೆ? ಸದರಿ ಲೇಖಕರು ಒಂದೇ ಉದ್ದೇಶಕ್ಕೆ ಎರಡೆರೆಡು ಬಾರಿ ಸಹಾಯ ಮಾಡದಿರುವಷ್ಟು ಬರಹಗಾರರು ಬಡವರಿದ್ದಾರೆ ಎಂದು ಹೇಳಿದ್ದಾರೆ. ಏನ್ ಸ್ವಾಮಿ? ಇವತ್ತಿನ ಕಾಲದಲ್ಲಿ ಯಾವ ಬರಹಗಾರ ಬರಿ ಬರವಣಿಗೆಯೊಂದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾನೆ? ಎಲ್ಲ ಬರಹಗಾರರಿಗೆ ಒಂದಲ್ಲ ಒಂದು ಉದ್ಯೋಗವಿದೆ. ಅದೂ ನಮ್ಮ ಬಹಳಷ್ಟು ಬ್ಲಾಗರ್ಸ್ ಒಳ್ಳೆ ಉದ್ಯೋಗದಲ್ಲಿದ್ದುಕೊಂಡೇ ಬರವಣಿಗೆಯನ್ನು ಮುಂದುವರಿಸುತ್ತಿದ್ದಾರೆ. ಅಂಥವರಿಂದ ಇನ್ನೊಂದು ಅತಿ ಸಣ್ಣ ಸಹಾಯವನ್ನು ನಿರೀಕ್ಷಿಸುವದು ತಪ್ಪೆ? ಏಕೆಂದರೆ ಸಹಾಯ ಮಾಡುವಾಗ ಇಂತಿಷ್ಟೆ ಮಾಡಬೇಕೆಂಬ ನಿಯಮವೇನೂ ಇಲ್ಲವಲ್ಲ? ಎಲ್ಲರೂ ಅವರವರ ಶಕ್ತಾನುಸಾರ ಮಾಡುತ್ತಾರೆ. ಆದರೆ ಕಡಿಮೆಕೊಟ್ಟರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತದೋ ಎಂದು ಹಿಂದೆ ಮುಂದೆ ನೋಡುವವರನ್ನು ಹಿಂದೆ ತಳ್ಳಿ. ಇಂಥ ಸಮಯದಲ್ಲೂ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕಾಲ ಕಳೆಯುವದು ಬಿಟ್ಟು ತಕ್ಷಣ ನಾವು ಅಂದರೆ so called ಬರಹಗಾರರು ಕಾರ್ಯೋನ್ಮುಖರಾಗಬೇಕಿದೆ.
ನಾನು ನನ್ನ ಲೇಖನದಲ್ಲಿ ನಾವು ಬರಹಗಾರರು ನಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ, ಮೇಲಾಗಿ ನಮ್ಮದೇ ಆದಂತ ಸಂಘಟನೆಯಿರುವದರಿಂದ ಆ ಮೂಲಕ ಸದಸ್ಯರೆಲ್ಲಾ ಒಟ್ಟಾಗಿ ಒಂದು ಸಣ್ಣ ಪರಿಹಾರ ನಿಧಿಯೊಂದನ್ನು ನೀಡಿದ್ದರೆ ಒಳಿತಿತ್ತು ಎಂದು ನೇರವಾಗಿ ಅಲ್ಲದಿದ್ದರೂ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ಹೇಳಿದ್ದೆ. ಹಾಗಂತ ನನಗೆ ಸಂಘಟನೆಗಳ ಮೂಲಕವೇ ಸಹಾಯ ಮಾಡಬೇಕೆನ್ನುವ ಖಯಾಲಿಯಿದೆಂದಲ್ಲ. ಏಕೆಂದರೆ ಈಗಾಗಲೆ ನಾನೂ ಸಹ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ್ದೇನೆ. ಅದು ಇಲ್ಲಿ ಅಪ್ರಸ್ತುತ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎಲ್ಲರೂ ಬರಹಗಾರರು ಹೇಗೆ ಸ್ಪಂದಿಸಬಹುದು? ಎಂದು ಕಾಯುತ್ತಿರುತ್ತಾರೆ ಹಾಗೂ ನಮ್ಮದೇ ಆದಂಥ ಒಂದು ಸಂಘಟನೆಯಿರುವದರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಹೇಗೆ ನೀವು ವ್ಯಯಕ್ತಿಕ ನೆಲೆಯಿಂದ ನಿಮ್ಮ ಕಛೇರಿಗಳಿಂದ, ಸಂಸ್ಥೆಗಳಿಂದ ದಾನ ಮಾಡುತ್ತೀರೋ ಹಾಗೆಯೇ ನಮ್ಮ ಬ್ಲಾಗರ್ಸ್ ಸಂಸ್ಥೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದರೆ ಒಳಿತಿತ್ತೆಂದೂ ಮೇಲಾಗಿ ಒಂದು ಸಂಘಟನೆಯಿಂದ ಅದೂ ಬರಹಗಾರರಂಥ ಸಂಘಟನೆಯಿಂದ ಮಾಡಿದ್ದರೆ ಅದಕ್ಕೆ ಒಂದು ಸಾತ್ವಿಕತೆಯಿರುವದರಿಂದ ಅದನ್ನು ಸಾಮಾನ್ಯವಾಗಿ ಯಾರೂ ದುರುಪಯೋಗ ಮಾಡಿಕೊಳ್ಳಲಾರರು ಒಂದು ವೇಳೆ ದುರುಪಯೋಗವಾದರು ಬರಹಗಾರರು ಕತ್ತಿನ ಪಟ್ಟಿ ಹಿಡಿದು ಕೇಳುತ್ತಾರೆ ಎಂಬ ಹೆದರಿಕೆಯಿಂದಾದರೂ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುತ್ತಾರೆ ಎಂಬ ಕಳಕಳಿಯಿಂದ ಹೇಳಿದ್ದೆ. ಆದರೆ ನನ್ನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂಥ ಒಂದು ಆಗ್ರಹದ ಮೂಲಕ ನಾನು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತೇದ್ದೇನೆಂದೂ ಅಥವಾ ನಾನೊಬ್ಬ ದೊಡ್ದ ಸಮಾಜ ಸುಧಾರಕ ಎಂಬಂತೆ ಪೋಸ್ ಕೊಡುತ್ತಿದ್ದೇನೆಂದೂ ಕೆಲವು ಜನ ತಿಳಿದುಕೊಂಡಿದ್ದಾರೆ. ಅಂಥವರಿಗೆ ನಾನೇನೂ ಮಾಡಲಾಗುವದಿಲ್ಲ.
ಅಸಲಿಗೆ ನಾನು ನನ್ನ ಲೇಖನದಲ್ಲಿ ಬ್ಲಾಗರ್ಸ್ ಸಂಘದ ಎಲ್ಲ ಸದಸ್ಯರಿಂದ ಒಂದಿಷ್ಟು ಪರಿಹಾರ ನಿಧಿ ನೀಡಿದರೆ ಸಾಕಿತ್ತು ಎಂದಷ್ಟೆ ಹೇಳಿದ್ದೆನೆ ಹೊರತು ಅವರು ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕೆಂದಲ್ಲ. ಆದರೆ ಸದರಿ ಆ ಬರಹಗಾರರು ತಪ್ಪಾಗಿ ಅರ್ಥ ಮಾಡಿಕೊಂಡು ಒಬ್ಬ ಲೇಖಕನದು ಬರಿ ಬರೆಯುವದಷ್ಟೆ ಕೆಲಸ ಆತ ಎಲ್ಲ ಕೆಲಸವನ್ನು ಮಾಡಲಾರ ಹಾಗೆ ಹೀಗೆ ಎಂದೆಲ್ಲಾ ಹೇಳಿದ್ದಾರೆ. ನಾನೂ ಅವರ ಈ ಮಾತನ್ನು ಒಂದು ಹಂತದವರೆಗೆ ಒಪ್ಪುತ್ತೇನೆ. ಆದರೆ ನಾವು ಬರೆಯುವದಕ್ಕೂ ಹಾಗೂ ನಾವು ನಡೆಸುವ ಬದುಕಿಗೂ ಗಾಢ ಸಂಬಂಧವಿರುವದರಿಂದ ಬರೆದಂತೆ ಬದುಕುವದು ಗೌರವಯುತವಾಗಿರುತ್ತದೆ. ಏಕೆಂದರೆ ಎಷ್ಟೋ ಬರಹಗಾರರಲ್ಲಿ ಕೊಳಕುತನ ಮನೆ ಮಾಡಿರುವದನ್ನು ನಾನು ತುಂಬಾ ಹತ್ತಿರದಿಂದ ನೋಡಿ ಬೇಸತ್ತಿದ್ದೇನೆ ಹಾಗೂ ಅವರ ಮೇಲಿನ ಗೌರವ ಕ್ಷಣಾರ್ಧದಲ್ಲಿ ಕರಗಿಹೋಗಿದೆ. ಬರಿ ಪುಸ್ತಕ ಬರೆಯುತ್ತಾ ಹೊಲಸು ರಾಜಕಾರಣ ಮಾಡುತ್ತಾ ಒಂದು ತರಗತಿಯನ್ನೂ ಸಹ ತೆಗೆದುಕೊಳ್ಳದೆ ಸದಾ ಕಾಲೇಜಿನಿಂದ ಹೊರಗುಳಿಯುವ ಬರಹಗಾರ ಅಧ್ಯಾಪಕ ಮಿತ್ರರನ್ನು ನಾನು ನೋಡಿದ್ದೇನೆ. ಎಲ್ಲೋ ಯಾರಿಗೋ ಪ್ರಶಸ್ತಿ ಬಂದರೆ ಅವರನ್ನು ಹೀಯಾಳಿಸಿ ಮಾತನಾಡುವ ಲೇಖಕಿಯರೊಬ್ಬರೊಟ್ಟಿಗೆ ಕೆಲಸ ಮಾಡಿದ್ದೇನೆ. ಕನ್ನಡ ಕನ್ನಡ ಎಂದು ಸಾರುವ ಕನ್ನಡದ ಖ್ಯಾತ ಕವಿಯೊಬ್ಬರ ಮಗಳು ನನ್ನ ವಿದ್ಯಾರ್ಥಿನಿಯಾಗಿದ್ದು ದ್ವಿತಿಯ ಪಿ.ಯು.ಸಿ ಯಲ್ಲಿ ನಾಲ್ಕೈದು ಬಾರಿ ಕನ್ನಡ ವಿಷಯದಲ್ಲಿಯೇ ಫೇಲ್ ಆಗಿದ್ದಳಲ್ಲದೆ ಕನ್ನಡ ಅಧ್ಯಾಪಕರ ಜೊತೆಯೂ ಸಹ ಆಕೆ ಇಂಗ್ಲೀಷನಲ್ಲಿಯೇ ಮಾತನಾಡುತ್ತಿದ್ದಳು. ಹೀಗಿರುವಾಗ ಲೇಖಕರಿಗೆ, ಬರಹಗಾರರಿಗೆ ನೈತಿಕ ಬಲವಾಗಲಿ, ಹೊಣೆಯಾಗಲಿ ಇರುವದಿಲ್ಲ. ಈ ಕಾರಣಕ್ಕಾಗಿಯೇ ನಾನು ನನ್ನ ಲೇಖನದಲ್ಲಿ ಇದೇ ವಿಷಯವನ್ನು ಒತ್ತಿ ಹೇಳಿದ್ದು.
ಯಾರು ಏನೇ ಹೇಳಲಿ ತಡವಾಗಿದೆಯಾದರೂ ಈ ಕೂಡಲೆ ಬ್ಲಾಗರ್ಸ್ ಸಂಘದಿಂದ ಸಂತ್ರಸ್ತರಿಗೆ ಒಂದಿಷ್ಟು ಸಹಾಯವಾಗಲೇಬೇಕಿದೆ ಎಂದು ನಮ್ಮ ಬ್ಲಾಗರ್ಸ್ ತಾಣದ ಸದಸ್ಯರಾದ ಮನಸ್ಸು, ಜಯಲಕ್ಷ್ಮಿ ಪಾಟೀಲ್, ದಿನಕರ, ಮುಂತಾದವರು ನನ್ನ ಬ್ಲಾಗಲ್ಲಿ ಪ್ರತಿಕ್ರಿಯಿಸುವದರ ಮೂಲಕ ನಮ್ಮ ಸಂಘದ ಅಧ್ಯಕ್ಷರಾದ ಜಿ. ಮೋಹನ್ ಅವರನ್ನು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಯೋಚಿಸುತ್ತಾರೆಂದು ಆಶಿಸುತ್ತಾ ಈ ಚರ್ಚೆಗೆ ತೆರೆ ಎಳೆಯುತ್ತಿದ್ದೇನೆ.
-ಉದಯ್ ಇಟಗಿ
ಕಥನ ಮಥನ
1 ವಾರದ ಹಿಂದೆ
3 ಕಾಮೆಂಟ್(ಗಳು):
ಉತ್ತಮ ವಿಚಾರ ಸರ್...
ಎಲ್ಲರೂ ಸೇರಿ ಹನಿ ಹನಿಯಾದರೂ ಸೇರಿಸಿ ಕೊಡೋಣ.....
ದಿನಕರ್,
ನಿಮ್ಮ ಸಹಮತಕ್ಕೆ ವಂದನೆಗಳು.
ಉದಯ್ ಸಾರ್,
ನೀವು ಹೇಳಿದ್ದು ಖರೆ... ನಾವೂ ಸಹಾಯ ಮಾಡೋಣ...ಆದರೆ...
ಈಗಾಗಲೇ ಹೆಚ್ಚಿನ ಮಂದಿ ನೆರೆ ಸಂತ್ರಸ್ತರಿಗೆ ಉದಾರ ದೇಣಿಗೆ ನೀಡಿದ್ದಾರೆ.. ಈಗ ಮತ್ತೊಮ್ಮೆ ಕೇಳಿದರೆ ಬಹುಶ ಕೆಲವರಿಗೆ ಕಹಿಯಾಗಬಹುದು... ಹಾಗಂತ ನಾವು ದುಡ್ಡು ಕೊಟ್ಟ ಕೂಡಲೇ ನಮ್ಮ ಜವಾಬ್ದಾರಿ ಮುಗಿಯಿತು , ನಾನು ಸಹಾಯ ಮಾಡಿದೆ ಅಂತ ಬೀಗುವುದರಲ್ಲಿ ಹುರುಳಿಲ್ಲ... ಹಾಗಾದರೆ ನಾವೇನು ಮಾಡಬಹುದು..?? ಈಗಾಗಲೇ ಕೇಂದ್ರ ಸರಕಾರ ೧೦೦೦ ಕೋಟಿ, ರಾಜ್ಯ ಸರಕಾರ ಹತ್ತಿರ ಹತ್ತಿರ ೫೦೦ ಕೋಟಿ , ಹೀಗೆ ಬೇರೆ ಬೇರೆ ಕಡೆಯಿಂದ ಕಡಿಮೆಯೆಂದರೂ ೨೦೦೦ ಕೋಟಿಯಷ್ಟು ದುಡ್ಡು ನೆರೆ ಸಂತ್ರಸ್ತರಿಗೆ ಒಟ್ಟಾಗಿದೆ ... ಈ ಎಲ್ಲಾ ದುಡ್ಡು ಅವರಿಗೆ ಸೇರುತ್ತದೆಯೇ??? ಇದರಲ್ಲಿ ಅಧಿಕಾರಿಗಳು ತಿನ್ನುವ ಪಾಲೆಷ್ಟು? ಲಂಚ ಎಷ್ಟು ಕೊಡಬೇಕು??
ಹಾಗಂತ ಆಲೋಚಿಸಿದವನೇ ಮೊನ್ನೆಯಷ್ಟೇ ಭಾರಿ ಮಳೆಯಿಂದ ಕಂಗಾಲಾದ ಮಂಗಳೂರಿನ ಒಂದು ಗ್ರಾಮದತ್ತ ಸಾಗಿದ್ದೆ.. ನೆರೆ ಪರಿಹಾರಕ್ಕಾಗಿ ಜನರು ಅರ್ಜಿ ಸಲ್ಲಿಸಬೇಕಾಗಿದೆ.. ಆದರೆ ಅರ್ಜಿ ಪಡೆಯುವುದಕ್ಕೂ ಲಂಚ ಕೇಳುವ, ಸಿಗುವ ಪರಿಹಾರದಲ್ಲಿ ಇಂತಿಷ್ಟು ತಮಗೆ ಕೊಡಿ ಅಂತ ಬೇಡುವ ಹಡಬೆ ಅಧಿಕಾರಿಗಳನ್ನು ಕಣ್ಣಾರೆ ಕಂಡು ಸಂಕಟ ಪಟ್ಟೆ.. ಅಂಥ ಇಬ್ಬರು ಅಧಿಕಾರಿಗಳನ್ನು ನಟ್ಟ ನಡು ರಸ್ತೆಯಲ್ಲಿ ಬೆತ್ತಲೆ ನಿಲ್ಲಿಸುವವರೆಗೂ ನನ್ನ ಸಿಟ್ಟು ಕಮ್ಮಿಯಾಗಿರಲಿಲ್ಲ....
ಇದಿಷ್ಟೂ ಯಾಕೆ ಹೇಳಿದೆ ಅಂದರೆ, ಕೇವಲ ದುಡ್ಡು ಕೊಡುವುದರಲ್ಲಿ ಅದೇನೂ ದೊಡ್ದಸ್ಥಿಕೆಯಿಲ್ಲ, ಬದಲಿಗೆ ರೈತರಿಗೆ, ನೆರೆಯಿಂದ ತೊಂದರೆಗೊಳಗಾದವರಿಗೆ ಅವರ ಪರಿಹಾರ ಸರಿಯಾಗಿ ಸಿಗುವಂತೆ ಮಾಡುವುದು ಹೇಗೆ ?? ಸರಕಾರೀ ಹೆಗ್ಗಣಗಳನ್ನು ಕಟ್ಟಿ ಹಾಕಿ ಸಾಮಾನ್ಯನಿಗೆ ನ್ಯಾಯ ದೊರಕಿಸೋದು ಹೇಗೆ? ಅನ್ನೋದು ಸಹ ಅಷ್ಟೆ ಮುಕ್ಖ್ಯವಾದದ್ದು.. ನಾವು ಸ್ವಲ್ಪ ಅದರ ಬಗ್ಗೆಯೂ ಯೋಚಿಸಬೇಕು ಅಲ್ಲವೇ...?
ಅಂದ ಹಾಗೆ ಬ್ಲಾಗ್ ಗೆಳೆಯರವತಿಯಿಂದ ಪರಿಹಾರ ನೀಡಲು ನಾನು ಸಿದ್ಧ.. ಎಲ್ಲರಿಗೂ ಒಳ್ಳೆಯದಾಗಲಿ...
ಕಾಮೆಂಟ್ ಪೋಸ್ಟ್ ಮಾಡಿ