Demo image Demo image Demo image Demo image Demo image Demo image Demo image Demo image

ಹೊರನಾಡ ಕನ್ನಡಿಗನ ಸಧ್ಯದ ಮನಸ್ಸು

  • ಶನಿವಾರ, ಅಕ್ಟೋಬರ್ 31, 2009
  • ಬಿಸಿಲ ಹನಿ
  • ಆತ್ಮೀಯರೆ,
    ಮೊನ್ನೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಸಾಪ್ತಾಹಿಕ ವಿಜಯ’ಕ್ಕಾಗಿ ‘ಹೊರನಾಡ ಕನ್ನಡಿಗರ ಸದ್ಯದ ಮನಸ್ಸನ್ನು’ ದಾಖಲಿಸಲು ಹೊರನಾಡ ಕನ್ನಡಿಗನಾದ ನನಗೆ ಕೆಲವು ಪ್ರಶ್ನೆಗಳನ್ನು ಕಳಿಸಿ ಅದಕ್ಕೆ ನನ್ನ ಉತ್ತರವನ್ನು ಕೇಳಿತ್ತು. ಇಲ್ಲಿರುವ ಪ್ರಶ್ನೆಗಳಿಗೆ ಸುಮಾರು ೧೦೦-೧೫೦ ಪದಗಳಿಗೆ ಮೀರದಂತೆ ಉತ್ತರಿಸಿದರೂ ಆಯಿತು ಅಥವಾ ಈ ಪ್ರಶ್ನೆಗಳ ಹೊರತಾಗಿ ನಿಮಗೆ ಹೇಳಬೇಕಾದ್ದನ್ನು ಚುರುಕಾಗಿ ಚುಟುಕಾಗಿ ಬರೆದರೂ ಆದೀತು ಎನ್ನುವ ಶರತ್‍ನ್ನು ವಿಧಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ನನ್ನ ಜ್ಞಾನದ ಮಿತಿಯಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ನಾ ಕಂಡಂತೆ, ಕೇಳಿದಂತೆ, ಅನುಭವಿಸಿದಂತೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ಉತ್ತರಿಸಿದ್ದೇನೆ. ಅದನ್ನೇ ಇಲ್ಲಿ ಮತ್ತೊಮ್ಮೆ ದಾಖಲಿಸಿ ಕೊಡುತ್ತಿದ್ದೇನೆ. ಅದು ಪ್ರಕಟವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಏನೇ ಇರಲಿ ಹೊರನಾಡ ಕನ್ನಡಿಗನಾದ ನನ್ನನ್ನು ಗುರುತಿಸಿ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ‘ವಿಜಯ ಕರ್ನಾಟಕ’ದ ಸಂಪಾದಕರಿಗೆ ಹಾಗೂ ಅದರ ಸಮಸ್ತ ಸಿಬ್ಬಂದಿ ವರ್ಗಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಪ್ರೀತಿಗೆ ನಾನು ಯಾವತ್ತೂ ಆಭಾರಿಯಾಗಿದ್ದೇನೆ. ಆ ಪ್ರಶ್ನೋತ್ತರ ಮಾಲಿಕೆಯನ್ನು ನಿಮ್ಮೊಂದಿಗೂ ಯಾಕೆ ಹಂಚಿಕೊಳ್ಳಬಾರದೆಂದೆನಿಸಿ ನಿಮ್ಮ ಮುಂದೆ ಸಾದರಪಡಿಸುತ್ತೇದ್ದೇನೆ. ಈ ನಿಟ್ಟಿನಲ್ಲಿ ನಿಮ್ಮನ್ನೂ ಆರೋಗ್ಯ ಪೂರ್ಣ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ. ನಿಮಗೂ ಹಾಗು ಉಳಿದ ಬ್ಲಾಗಿಗರಿಗೂ ರಾಜ್ಯೋತ್ಸವದ ಶುಭಾಶಯಗಳು.
    * ಕನ್ನಡ-ಕರ್ನಾಟಕಕ್ಕಾಗಿ ನೀವು ಮಾಡಿದ ಅಥವಾ ಮಾಡುತ್ತಿರುವ ಒಂದು ಅತ್ಯುತ್ತಮ ಕೆಲಸ ಯಾವುದು?
    ನಾನು ಯಾವತ್ತೂ ನನ್ನ ಕೆಲಸವನ್ನು ಅತ್ಯುತ್ತಮ ಎಂದು ಭಾವಿಸುವದಿಲ್ಲ. ಅದಕ್ಕೆ ಎರಡು ಕಾರಣಗಳಿವೆ.
    ೧) ಒಂದು ಸಾರಿ ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ನಮ್ಮ ಮನಸ್ಸಿಗೆ ಬಂದುಬಿಟ್ಟರೆ ಇನ್ನೂ ಮಾಡಬೇಕಾದ ಅತ್ಯುತ್ತಮಕ್ಕಿಂತ ಅತ್ಯುತ್ತಮವಾದ ಎಷ್ಟೋ ಕೆಲಸಗಳು ಹಾಗೆ ಉಳಿದು ಬಿಡುತ್ತವೆ. ಇದರ ಜೊತೆಗೆ ಅತ್ಯುತ್ತಮವಾದ ಕೆಲಸ ಮಾಡಲು ಬೇಕಾಗುವ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳೆರೆಡೂ ಸತ್ತುಹೋಗುತ್ತವೆ. ನಮ್ಮೊಳಗಿನ ಈ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳು ಉಳಿದು ಬೆಳೆಯಬೇಕೆಂದರೆ ನಾವು ಮಾಡುವ ಕೆಲಸವನ್ನು ಯಾವತ್ತೂ ಅತ್ಯುತ್ತಮ ಎಂದು ಭಾವಿಸಿಕೊಳ್ಳಬಾರದು. ಇಲ್ಲವಾದರೆ ನಾವು ನಿಂತ ನೀರಾಗಿ ಬಿಡುತ್ತೇವೆ. ಕೆಲಸ ಮಾಡುವವರು ಯಾವಾಗಲೂ ಹರಿಯುವ ನದಿಯಂತಿರಬೇಕೇ ಹೊರತು ನಿಂತ ನೀರಂತಲ್ಲ.
    ೨) ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ಅನ್ನುಕೊಳ್ಳುತ್ತಿರುವಾಗಲೇ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲೋ ಒಂದು ಕಡೆ ಅಧಮವಾಗಿಬಿಟ್ಟಿರುತ್ತದೆ. ನಿಧಾನಕ್ಕೆ ಕುಳಿತು ಅದನ್ನು ಮತ್ತೊಮ್ಮೆ ಪರಿಶೀಲಿಸಿದಾಗಲೆ ನಮಗೆ ಅದರೊಳಗಿನ ತಪ್ಪುಗಳು ಎದ್ದು ಕಾಣುವವು. ತಪ್ಪುಗಳು ಕಂಡ ಮೇಲೆ ಇನ್ನು ‘ಅತ್ಯುತ್ತಮ’ ಕೆಲಸದ ಪ್ರಶ್ನೆ ಎಲ್ಲಿಂದ ಬಂತು?
    ಆ ನಿಟ್ಟಿನಲ್ಲಿ ಕನ್ನಡ-ಕರ್ನಾಟಕಕ್ಕಾಗಿ ಬರೆಯುವದೊಂದನ್ನು ಬಿಟ್ಟು ನಾನು ಇನ್ನೂ ಏನೇನೂ ಮಾಡಿಲ್ಲವೆಂದೇ ಹೇಳಬಹುದು. ಮುಂದೆ ನನ್ನದೇ ಆದ ಕೆಲವು ಯೋಜನೆಗಳಿವೆ. ನೋಡೋಣ.
    * ಕನ್ನಡ-ಕರ್ನಾಟಕದಲ್ಲಿ ನಿಮಗೆ ಅತ್ಯಂತ ಪ್ರಿಯ ಮತ್ತು ಅಪ್ರಿಯ ಸಂಗತಿ ಯಾವುದು?
    ಕರ್ನಾಟಕದ ಪ್ರಾಂತೀಯ ಭಾಷೆಗಳು ಜಾಗತಿಕರಣದ ಹೊಡೆತಕ್ಕೆ ಸಿಕ್ಕು ನಲುಗದೆ ಇನ್ನೂ ಹಾಗೆ ತಮ್ಮ ಸೊಗಡನ್ನು ಉಳಿಸಿಕೊಂಡಿರುವದು ಹಾಗೂ ಅವು ಅದೇ ಸೊಗಡಿನೊಂದಿಗೆ T. V ಮತ್ತು ಸಿನಿಮಾ ಮಾಧ್ಯಮಗಳನ್ನು ಪ್ರವೇಶಿಸಿ ಜನಪ್ರಿಯವಾಗುತ್ತಿರುವದು ಅತ್ಯಂತ ಖುಶಿಯ ವಿಚಾರ. ಇವತ್ತು ಬಹಳಷ್ಟು ನಿರ್ದೇಶಕರು ಪ್ರಾಂತೀಯ ಭಾಷೆಗಳನ್ನು ತಿದ್ದದೆ ತೀಡದೆ ವಿಶೇಷ ಒತ್ತು ಕೊಟ್ಟು ಹಾಗ್ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಈ ಹಿಂದೆ ಈ ಟೀವಿ ಕನ್ನಡದಲ್ಲಿ ಬರುತ್ತಿದ್ದ “ಮೂಡಲ ಮನೆ” ಧಾರಾವಾಹಿ ಭಾಷಾ ದೃಷ್ಟಿಯಿಂದ ಇಡಿ ಉತ್ತರ ಕರ್ನಾಟಕದ ಪ್ರಾದೇಶಿಕತೆಯನ್ನು ಕಟ್ಟಿಕೊಡುವದರ ಮೂಲಕ ಜನಮನ ಸೂರೆಗೊಂಡಿತ್ತು. ಈಗ ಬರುತ್ತಿರುವ “ಪಾರ್ವತಿ-ಪರಮೇಶ್ವರ” ಹಾಸ್ಯ ಧಾರಾವಾಹಿಯಲ್ಲಿ ಪಾತ್ರವೊಂದು (ಯಾವ ಪಾತ್ರವೆಂದು ಸರಿಯಾಗಿ ನೆನಪಿಲ್ಲ) ಮಾತನಾಡುವದು ಉತ್ತರ ಕರ್ನಾಟಕದ ಭಾಷೆಯಲ್ಲೇ. ಇತ್ತೀಚಿಗೆ ತಯಾರಾಗಿರುವ “ಮನಸಾರೆ” ಚಿತ್ರದಲ್ಲಿಯೂ ಸಹ ಉತ್ತರ ಕರ್ನಾಟಕದ ರಾಜು ತಾಳಿಕೋಟಿಯವರು ತಮ್ಮ ಟಿಪಿಕಲ್ ಶೈಲಿಯಲ್ಲಿ ಆ ಭಾಷೆಯನ್ನು ಮಾತನಾಡುವದರ ಮೂಲಕ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಅಲ್ಲದೆ ಗಿರೀಶ್ ಕಾಸರವಳ್ಳಿಯವರು ಸಹ ತಮ್ಮ ಇತ್ತೀಚಿನ ಸಿನಿಮಾ “ಗುಲಾಬಿ ಟಾಕೀಸ್”ನಲ್ಲಿ ಮಂಗಳೂರಿನ ಬ್ಯಾರೆ ಭಾಷೆಯನ್ನು ಅದಿರುವಂತೆಯೇ ಅಳವಡಿಸಿಕೊಂಡಿರುವದು ಶ್ಲಾಘನೀಯ.
    ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವಂಥ ಪರಿಸ್ಥಿತಿ ನಿರ್ಮಾಣವಾಗಿರೋದು ಹಾಗೂ ಬಹಳಷ್ಟು ಬೆಂಗಳೂರಿನ ಕನ್ನಡಿಗರು ತಮ್ಮದೇ ನಾಡಿನ ಬೇರೆ ಪ್ರಾಂತ್ಯದವರನ್ನು ಮತ್ತು ಅವರಾಡುವ ಭಾಷೆಯನ್ನು ಕೀಳಾಗಿ ಕಂಡು ನೆರೆರಾಜ್ಯದವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡುತ್ತಾ ಅವರೊಂದಿಗೆ ಅನ್ಯೋನ್ಯವಾಗಿರುವದು ಹೀನಾಯ ಹಾಗೂ ದುರ್ದೈವಕರ ಸಂಗತಿ. ಈ ತಾರತಮ್ಯ ಮೊದಲು ಹೋಗಬೇಕು. ಇಲ್ಲವಾದರೆ ಕರ್ನಾಟಕ ಏಕೀಕರಣಕ್ಕೆ ಏನರ್ಥ?
    * ಕನ್ನಡ-ಕರ್ನಾಟಕದ ಬಗೆಗಿನ ನಿಮ್ಮ ಒಂದು ಕನಸು?
    ಕನ್ನಡ ನಾಡಿನ ಮಕ್ಕಳೆಲ್ಲಾ ಕನ್ನಡ ಕಲಿಯುವದರ ಜೊತೆಗೆ ಇಂಗ್ಲೀಷ ಭಾಷೆಯನ್ನೂ ಕಲಿತು ಅದರ ಮೇಲೆ ಪ್ರಭುತ್ವವನ್ನು ಸಾಧಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹೊರನಾಡಿನಲ್ಲೂ ಹಾರಿಸುವಂತಾಗಬೇಕು. ಇಂಗ್ಲೀಷ ಭಾಷೆ ಅಷ್ಟಾಗಿ ಗೊತ್ತಿರದ ಅರಬ್ ರಾಷ್ಟ್ರಗಳು ಸಹ ಇದೀಗ ಆ ಭಾಷೆಯ ಪ್ರಾಮುಖ್ಯತೆಯನ್ನು ಅರಿತು ಇಂಗ್ಲೀಷನ್ನು ಕಲಿಯಲು ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳನ್ನು ಮಾಡಿಕೊಡುತ್ತಿವೆ. ಉದಾಹರಣೆಗೆ ಈಗ್ಗೆ ಹತ್ತು ವರ್ಷಗಳಿಂದಷ್ಟೆ ಇಂಗ್ಲೀಷ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಕಲಿಸಲು ತಿರ್ಮಾನಿಸಿದ ಲಿಬಿಯಾ ದೇಶ ಜಾಗತಿಕರಣ, ಹೊಸ ಹೊಸ ತಂತಜ್ಞಾನಗಳ ಪ್ರಭಾವದ ಹಿನ್ನೆಲೆಯಲ್ಲಿ ಇಂಗ್ಲೀಷನಲ್ಲಿ ಬಂದಿರುವ ಹೊಸ ಹೊಸ ವಿಷಯಗಳನ್ನು ಎತ್ತಿಕೊಂಡು “Internet English” ಎಂಬ ವಿಷಯವನ್ನು ಸಹ ಕಲಿಸಲು ಮುಂದಾಗಿದೆ. ಅಂದರೆ ಬೇರೆ ರಾಷ್ಟ್ರಗಳು ಇಂಗ್ಲೀಷ್ ಭಾಷಾ ಕಲಿಕೆಯಲ್ಲಿ ಹೊಸತನ್ನು ಅಳವಡಿಸಿಕೊಳ್ಳುತ್ತಿರುವಾಗ ನಾವಿನ್ನೂ “Internet English” ಇರಲಿ, ಇಂಗ್ಲೀಷ್ ಭಾಷೆಯನ್ನು ಕಲಿಸಬೇಕೇ? ಬೇಡವೆ? ಎನ್ನುವ ಚರ್ಚೆ ಜಿಜ್ಞಾಸೆಗಳಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಈ ಮನೋಭಾವನೆ ಹೋಗಿ ಎಲ್ಲರೂ ಇಂಗ್ಲೀಷ್ ಕಲಿಯುವಂತಾಗಬೇಕು. ಅದು ಇಂದಿನ ತಂತ್ರಜ್ಞಾನ ಮತ್ತು ಜಾಗತಿಕರಣ ಪ್ರಭಾವದ ಹಿನ್ನೆಲೆಯಲ್ಲಿ ಅವಶ್ಯ ಮತ್ತು ಅನಿವಾರ್ಯ.
    * ಈಗಿನ ಕನ್ನಡ ಸಾಹಿತ್ಯ-ಸಾಹಿತಿಗಳ ಬಗ್ಗೆ?
    ಈಗಿನ ಕನ್ನಡ ಸಾಹಿತ್ಯ ವಲಯದ ದೊಡ್ದ ದೊಡ್ಡ ಸಾಹಿತಿಗಳೆಲ್ಲ ಬರೆಯಲು ಸರಕಿರದೆಯೋ ಅಥವಾ ಅವರು ಮತ್ತದೇ ಹಳೆಯ ಜಾಡನ್ನು ಹಿಡಿದು ಬರೆದಿದ್ದನ್ನು ಓದುಗರು ಒಪ್ಪಿಕೊಳ್ಳಲಾರದ್ದಕ್ಕೋ ಏನೋ ಮೂಲೆಗುಂಪಾಗಿದ್ದಾರೆ. ಈಗೇನಿದ್ದರೂ ಉದಯೋನ್ಮುಖ ಬರಹಗಾರ ಬರಹಗಾರ್ತಿಯರ ಭರಾಟೆ. ಇವರೆಲ್ಲ ಬೇರೆ ಬೇರೆ ರಂಗಗಳ ಹಿನ್ನೆಲೆಯಿಂದ ಬಂದಿದ್ದರಿಂದ ಸಹಜವಾಗಿ ಇವರ ಕೃತಿಗಳಲ್ಲಿ ಹೊಸತನ ಎದ್ದು ಕಾಣುತ್ತಿದೆ. ಏಕತಾನತೆಯನ್ನು ಹೊಡೆದೋಡಿಸಿ ವೈವಿಧ್ಯತೆಯನ್ನು ಮೆರಿದಿದ್ದಾರೆ ಎಂದು ಹೇಳಬಹುದು. ಈ ನಡುವೆ ಬ್ಲಾಗ್ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ. ಅದರಲ್ಲಿ ಯಾರಿಗೂ ಕಡಿಮೆಯಿಲ್ಲದಂತೆ ಬರೆಯುವ ಒಂದಿಷ್ಟು ಒಳ್ಳೆಯ ಬರಹಗಾರರಿದ್ದಾರೆ. ಅಂಥವರನ್ನು ಹುಡುಕಿ ತೆಗೆದು ಪ್ರೋತ್ಸಾಹಿಸುವ, ಗೌರವಿಸುವ ಕೆಲಸ ಆಗಬೇಕಿದೆ. ಅದಲ್ಲದೇ ಪ್ರತ್ಯೇಕ ಬ್ಲಾಗ್ ಸಮ್ಮೇಳನ, ಬ್ಲಾಗ್ ಅಕ್ಯಾಡೆಮಿಗಳು ಬಂದರೆ ಬ್ಲಾಗಿಗರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮೆರೆಯಲು ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.
    ನಮ್ಮ ಬಹಳಷ್ಟು ಸಾಹಿತಿಗಳು ಗೋಸುಂಬೆ ಜಾತಿಗೆ ಸೇರಿದವರು. ನಿಮಿಷಕ್ಕೊಂದು ಬಣ್ಣ ಬದಲಾಯಿಸುತ್ತಾ ಬರೆಯುವದೇ ಒಂದು ರೀತಿ ಬದುಕುವದೇ ಇನ್ನೊಂದು ರೀತಿಯಾಗಿ ತಮ್ಮ ನೈತಿಕ ಬಲವನ್ನು ಎಂದೋ ಕಳೆದುಕೊಂಡು ಬದುಕಿತ್ತಿದ್ದಾರೆ. ಬೇರೆಯವರಿಗೆ ಕನ್ನಡ ಕನ್ನಡ ಎಂದು ಹೇಳುತ್ತಲೇ ತಮ್ಮ ಮಕ್ಕಳು, ಮೊಮ್ಮೊಕ್ಕಳನ್ನು ಇಂಗ್ಲೀಷ ಶಾಲೆಗಳಿಗೆ ದಬ್ಬುತ್ತಿದ್ದಾರೆ. ಪ್ರಶಸ್ತಿ ಪುರಸ್ಕಾರಗಳಿಗೆ ಜಾತಿವಾದ, ಹೊಲಸು ರಾಜಕೀಯ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇಂಥವರಿಂದ ಆರೋಗ್ಯಪೂರ್ಣ ಸಮಾಜವೊಂದನ್ನು ನಿರೀಕ್ಷಿಸಲು ಸಾಧ್ಯವೇ?
    * ನೀವೀಗ ಕರ್ನಾಟಕದಲ್ಲೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?!
    ಬಹುಶಃ, ಏನೂ ಇಲ್ಲ! ನಾನಾಯಿತು ನನ್ನ ಅಧ್ಯಾಪನ ವೃತ್ತಿಯಾಯಿತೆಂದು ಸುಮ್ಮನಿರುತ್ತಿದ್ದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ನಾನು ಕೇವಲ ನನ್ನ ಆರ್ಥಿಕ ಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ಯೋಚಿಸಿ ಯೋಚಿಸಿ ಕಾಲ ಹರಣ ಮಾಡಿ ಆಗಾಗ ಬರೆಯುತ್ತಿರುವದನ್ನು ಸಹ ಬರೆಯುತ್ತಿರಲಿಲ್ಲವೇನೋ!
    -ಉದಯ ಇಟಗಿ

    1 ಕಾಮೆಂಟ್‌(ಗಳು):

    ಸಾಗರದಾಚೆಯ ಇಂಚರ ಹೇಳಿದರು...

    ನಿಮ್ಮ ಉತ್ತರ ತುಂಬಾ ವಿವೇಚನಾಯುತವಾಗಿದೆ,
    ಎಲ್ಲ ಹೊರನಾಡ ಕನ್ನಡಿಗರ ಮನದಿಂಗಿತ ತಿಳಿಸಿದ್ದಿರಿ