Demo image Demo image Demo image Demo image Demo image Demo image Demo image Demo image

ಲಯನ್ ಆಫ್ ದ ಡಿಸರ್ಟ್

  • ಶುಕ್ರವಾರ, ಸೆಪ್ಟೆಂಬರ್ 27, 2013
  • ಬಿಸಿಲ ಹನಿ

  • ಅದು 2008ರಲ್ಲಿ ಅಂತಾ ಅನಿಸುತ್ತೆ. ನಾನು ಬೇಸಿಗೆಯ ರಜೆಯನ್ನು ಮುಗಿಸಿ ಭಾರತದಿಂದ ಟ್ರಿಪೋಲಿಗೆ ವಾಪಾಸಾಗಿ ಅಲ್ಲಿಂದ ಮುಂದೆ ನನ್ನ ಕೆಲಸದ ಸ್ಥಳ ಘಾಟ್‍ಗೆ ಪ್ರಯಾಣ ಬೆಳೆಸುವ ಮುನ್ನ ಗೆಳೆಯ ಸುರೇಂದ್ರನ ಒತ್ತಾಯದ ಮೇರೆಗೆ ಸಬ್ರತಾದಲ್ಲಿ ಅವನ ಮನೆಯಲ್ಲಿ ಒಂದೆರೆಡು ದಿವಸ ಉಳಿದಿದ್ದೆ. ಅಲ್ಲಿ ಒಂದು ದಿನ ಹೀಗೆ ಸುಮ್ಮನೆ ಟೀವಿ ಚಾನಲ್ ಬದಲಾಯಿಸುತ್ತಿರಬೇಕಾದರೆ ಸ್ಟಾರ್ ಮೂವೀಸ್ ಚಾನಲ್‍ನಲ್ಲಿ ಅಂತಾ ಕಾಣುತ್ತದೆ, ನಾನು ಆ ಚಾನಲ್‍ಗೆ ಬರುವದಕ್ಕೂ ಟೀವಿ ಪರದೆಯ ಮೇಲೆ “Lion of the Desert” ಎಂದು ತೋರಿಸುವದಕ್ಕೂ ಸರಿಹೋಯಿತು. ಅದು ಇಂಗ್ಲೀಷ್ ಸಿನಿಮಾ! ಇದೇನಿದು? ಯಾರಿದು Lion of the Desert? ಯಾವ ಮರಭೂಮಿ? ಯಾವ lion? ಏನು? ಎತ್ತ? ಅಂತೆಲ್ಲಾ ನನ್ನ ಕುತೂಹಲ ಕೆರಳಿಸಿತು. ನಾನು ನೋಡಿಯೇಬಿಡೋಣ ಎಂದು ದೃಢ ನಿರ್ಧಾರ ತಳೆದು ಚಕ್ಕಳಮಕ್ಕಳ ಹಾಕಿಕೊಂಡು ಟೀವಿ ಮುಂದೆ ಕುಳಿತುಕೊಂಡು ಸಂಪೂರ್ಣ ಸಿನಿಮಾ ನೋಡಿದ ಮೇಲೆ ಗೊತ್ತಾಯಿತು ಅದು ಲಿಬಿಯಾ ಮರಭೂಮಿಯ ದಿಟ್ಟ ಹೋರಾಟಗಾರನೊಬ್ಬನ ಜೀವನ ಕಥೆಯನ್ನಾಧರಿಸಿ ತೆಗೆದ ಚಿತ್ರವೆಂದು. ಆ Lion of the Desert ಬೇರೆ ಯಾರೂ ಅಲ್ಲ; ಮೊಟ್ಟಮೊದಲಿಗೆ ಇಟ್ಯಾಲಿಯನ್‍ರ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದುವದರ ಮೂಲಕ ಲಿಬಿಯನ್‍ರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಈ ದೇಶದ ಮಹಾತ್ಮನೆನಿಸಿಕೊಂಡವ. ಸುಮಾರು ಇಪ್ಪತ್ತು ವರ್ಷಗಳ ಕಾಲ ಇಟ್ಯಾಲಿಯನ್‍ರಿಗೆ ಸಿಂಹಸ್ವಪ್ನವಾಗಿ ಕಾಡಿದವ. ಅವನೇ ಒಮರ್ ಮುಕ್ತಾರ್! ನಾನು ಆ ಸಿನಿಮಾ ನೋಡುವವರೆಗೂ ಒಮರ್ ಮುಕ್ತಾರ್ ಎಂದರೆ ಯಾರು? ಲಿಬಿಯಾದಲ್ಲಿ ಅವನಿಗಿರುವ ಮಹತ್ವವೇನು? ಎಂಬುದನ್ನು ನಾನು ತಿಳಿದುಕೊಂಡಿರಲಿಲ್ಲ. 
    ಒಮರ್ ಮುಕ್ತಾರ್ ಹುಟ್ಟಿದ್ದು ಅಗಸ್ಟ್ 20, 1858 ರಂದು ಸರನೈಕಾ ಪ್ರಾಂತ್ಯದ ಜನ್‍ಝೊರ್ ಎಂಬ ಹಳ್ಳಿಯಲ್ಲಿ. ತನ್ನ ಊರಿನ ಮಸೀದಿಯೊಂದರಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದೆ ಸೆನುಸ್ಸೀ ಎಂಬ ವಿಶ್ವವಿದ್ಯಾನಿಲಯದಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಪವಿತ್ರ ಕುರಾನ್‍ನ್ನು ಕಲಿಸುವ ಶಿಕ್ಷಕನಾದ. ಆತ ಬರೀ ಶಿಕ್ಷಕನಾಗಿರದೆ ಮರಭೂಮಿಯಲ್ಲಿ ಯುದ್ಧ ಮಾಡುವ ತಂತ್ರಗಳನ್ನು ಸಹ ಚನ್ನಾಗಿ ಅರೆದು ಕುಡಿದಿದ್ದ. ಜೊತೆಗೆ ಸಹರಾ ಮರಭೂಮಿಯ ಒಳಹರಿವುಗಳು ಅವನಿಗೆ ಚನ್ನಾಗಿ ಗೊತ್ತಿದ್ದರಿಂದ ಅದರ ಪ್ರತಿಯೊಂದು ಮೂಲೆ ಮೂಲೆಯೂ ಮತ್ತು ಅದು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡ ರಹಸ್ಯ ದಾರಿಗಳನ್ನು ಸಹ ಚನ್ನಾಗಿ ತಿಳಿದುಕೊಂಡಿದ್ದ. ತನ್ನ ಈ ಜಾಣತನ ಮತ್ತು ಚಾಣಾಕ್ಷತನವನ್ನು ಲಿಬಿಯಾದ ಮರಭೂಮಿಯಲ್ಲಿ ಬೀಡು ಬಿಟ್ಟಿದ್ದ ಇಟ್ಯಾಲಿಯನ್‍ರ ಮಿಲ್ಟ್ರಿ ಪಡೆಗಳನ್ನು ಸೆದೆಬಡಿಯಲು ಉಪಯೋಗಿಸಿದ. 
     
    ಇಪ್ಪತ್ತನೇ ಶತಮಾನದ ಆರಂಭದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಒಂದಲ್ಲಾ ಒಂದು ಕಾರಣಕ್ಕಾಗಿ ತೊಂದರೆಯಲ್ಲಿದ್ದವು. ಈ ಸಂದರ್ಭದಲ್ಲಿಯೇ ಜಗತ್ತಿನ ಬಹುಪಾಲು ರಾಷ್ಟ್ರಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ತಮ್ಮ ಅಧಿಕಾರ ಹಾಗೂ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಅನೇಕ ದಾರಿಗಳನ್ನು ಹುಡುಕುತ್ತಿದ್ದವು. ಆ ಪ್ರಕಾರ ಆಗಷ್ಟೇ ರೋಮ್ ನಗರವನ್ನು ಪುನರ್ವಶ ಮಾಡಿಕೊಂಡ ಇಟಲಿ ಮುಂದೆ ತನಗೆ ಸಮೀಪದಲ್ಲಿದ್ದ ಲಿಬಿಯಾದ ಮೇಲೆ ಗುರಿಯಿಟ್ಟಿತು. ಅದರಂತೆ 1911ರಲ್ಲಿ ಇಟ್ಯಾಲಿಯನ್‍ರು ತಮ್ಮ ಯುದ್ಧ ನೌಕೆಗಳೊಂದಿಗೆ ಟ್ರಿಪೋಲಿಯ ಸಮುದ್ರ ದಂಡೆಗೆ ಬಂದಿಳಿದು ಮನ ಬಂದಂತೆ ಗುಂಡು ಹಾರಿಸುತ್ತಾ ಟ್ರಿಪೋಲಿಯನ್‍ರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮುಂದೆ ಬೆಂಗಾಜಿ, ಮಿಸ್ರಟಾ ಮತ್ತು ಡೆರ್ನಾವನ್ನು ಸಹ ವಶಪಡಿಸಿಕೊಂಡರು. ಆದರೆ ಬೇರೆ ನಗರಗಳ ಜನ ಇವರನ್ನು ಅಷ್ಟು ಸುಲಭವಾಗಿ ಒಪ್ಪದ ಕಾರಣ ಇಟ್ಯಾಲಿಯನ್‍ರು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬಂತು. ಹೀಗಾಗಿ ಅವರು ಅನಿವಾರ್ಯವಾಗಿ ಲಿಬಿಯನ್‍ರನ್ನು ಸದೆಬಡೆಯಲು ಅನೇಕ ಯುದ್ಧಗಳನ್ನು ರೂಪಿಸಿದರು. ಒಂದಾದ ಮೇಲೊಂದು ಯುದ್ಧಗಳನ್ನು ಮಾಡುತ್ತಾ ಬಂದರೂ ಅವರು ಇಡಿ ದೇಶವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳದಾದರು. ಏಕೆಂದರೆ ಸಾಕಷ್ಟು ಬಂಡುಕೋರರು ತಮ್ಮ ಮನೆ-ಮಠ ಬಿಟ್ಟು ಮರಭೂಮಿಯಲ್ಲಿನ ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ಅಲ್ಲಿಂದಲೇ ಇಟ್ಯಾಲಿಯನ್‍ರ ವಿರುದ್ಧ ಹೋರಾಟ ಮಾಡಲು ಒಮರ್ ಆಲ್-ಮುಕ್ತಾರನ ನಾಯಕತ್ವದಲ್ಲಿ ಯೋಜನೆಯೊಂದನ್ನು ರೂಪಿಸಿದರು. ಆ ಗುಂಪಿನಲ್ಲಿದ್ದ ಇನ್ನುಳಿದ ಪ್ರಮುಖ ಹೋರಾಟಗಾರರೆಂದರೆ ರಮಝಾನ್ ಅಲ್-ಸ್ವಹಿಲಿ, ಮೊಹಮ್‍ದ್ ಫರ್ಹಾತ್, ಆಲ್-ಫದೀಲ್ ಬೋ-ಒಮರ್, ಸುಲೈಮಾನ್ ಅಲ್-ಬರೌನಿ ಇನ್ನೂ ಮುಂತಾದವರು. ಅಲ್ಲಿಂದಾಚೆ ಒಮರ್ ಮುಕ್ತಾರ ಮತ್ತವನ ಸಹಚರರು ತಂತ್ರಕ್ಕೆ-ಪ್ರತಿತಂತ್ರ, ಯೋಜನೆಗೆ-ಪ್ರತಿಯೋಜನೆಯನ್ನು ರೂಪಿಸುತ್ತಾ ಇಟ್ಯಾಲಿಯನ್‍‍ರಿಗೆ ಚಳ್ಳೆಹಣ್ಣನ್ನು ತಿನ್ನಿಸುತ್ತಾ, ಅವರ ವಿರುದ್ಧ ಅನೇಕ ಯುದ್ಧಗಳನ್ನು ಗೆದ್ದರು. ಲೆಕ್ಕವಿಲ್ಲದಷ್ಟು ಸೈನಿಕರನ್ನು ಕೊಂದುಹಾಕಿದರು. ಅವರ  ಕೈಗೆ ಸಿಗದೆ ಅವರಿಗೆ ದುಸ್ಸಪ್ನವಾಗಿ ಕಾಡಿದರು.  ಇದು ಹೆಚ್ಚು ಕಮ್ಮಿ ಇಪ್ಪತ್ತು ವರ್ಷಗಳ ಕಾಲ ಹೀಗೆ ನಡೆಯಿತು.
    ಇದೇ ಸಂದರ್ಭದಲ್ಲಿ ಇಟ್ಯಾಲಿಯನ್‍ರ ಸೇನೆ ಸೆರೆಶಿಬಿರ(Concentration Camp)ಗಳನ್ನು ನಿರ್ಮಿಸಿ ಅಲ್ಲಿಗೆ ತಮ್ಮ ವಿರುದ್ಧ ಪ್ರತಿಭಟಿಸಿದವರನ್ನು ಹಾಗೂ ಹೋರಾಟಗಾರರ ಹೆಂಡತಿ-ಮಕ್ಕಳು, ಅಣ್ಣ-ತಮ್ಮಂದಿರು, ತಂದೆ-ತಾಯಿಯರು ಹಾಗೂ ಅಕ್ಕ-ತಂಗಿಯರನ್ನು ಬಲವಂತವಾಗಿ ಎಳೆದು ತಂದರು. ಮೇ 1930 ರಿಂದ ಸಪ್ಟಂಬರ್ 1930ರೊಳಗೆ ಸುಮಾರು 80,000 ಲಿಬಿಯನ್‍ರನ್ನು ಹದ್ದುಗಣ್ಣಿನ ಸೈನಿಕರ ಸುಪರ್ದಿಯಲ್ಲಿ ಸೆರೆಶಿಬಿರಗಳಿಗೆ ಎಳೆದು ತರಲಾಯಿತು ಎಂದು ಇಲ್ಲಿನವರು ಹೇಳುತ್ತಾರೆ. ಸೆರೆಶಿಬಿರಗಳಲ್ಲಿ ಪರಿಸ್ಥಿತಿ ಗಂಭಿರವಾಗಿತ್ತು. ಅನೇಕ ಲಿಬಿಯನ್‍ರು ಹಸಿವೆಯಿಂದ, ರೋಗರುಜಿನಗಳಿಂದಾಗಿ ಪ್ರಾಣಬಿಟ್ಟರು. ಲಿಬಿಯಾದ ಇತಿಹಾಸಕಾರ ಮೌಹಮ್‍ದ ಆಲಿಅತೈಬ್ ಪ್ರಕಾರ ನವೆಂಬರ್ 1930 ರ ವೇಳೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ಹದಿನೇಳು ಶವಸಂಸ್ಕಾರಗಳನ್ನು ಮಾಡಲಾಗುತ್ತಿತ್ತು. ಆದರೆ ವಿಶ್ವದ ಕೆಲವು ಪ್ರಮುಖ ಪತ್ರಿಕೆಗಳು ಇಲ್ಲಿನ ಅಮಾನುಷ ಕೃತ್ಯದ ಬಗ್ಗೆ ವರದಿಮಾಡಿ ಮಾನವ ಹಕ್ಕುಗಳ ಸಮಿತಿಯ ಗಮನ ಸೆಳೆದವು. ಆಗ ಇಟ್ಯಾಲಿಯನ್ ಸೇನೆ ತಾನು ವಿಧಿಸಿದ್ದ ಕಟ್ಟಳೆಗಳನ್ನು ಕೊಂಚ ಸಡಿಲಿಸಿ ಲಿಬಿಯನ್‍ರಿಗೆ ತಿಂಗಳಿಗೆ ತಲಾ 22ಕೇಜಿಯಷ್ಟು ಬಾರ್ಲಿಯನ್ನು ಪ್ರತಿಯೊಬ್ಬರಿಗೂ ಕೊಡತೊಡಗಿದರು. ಆದರೆ ಅದು ಏನೇನು ಸಾಕಾಗದೆ ಹಸಿವೆಯಿಂದಾಗಿ ಅನೇಕ ಲಿಬಿಯನ್‍ರು ಸೆರೆಶಿಬಿರಗಳಲ್ಲಿ ಸತ್ತುಹೋದರು.
    ಇತ್ತ ಗುಡ್ಡಗಾಡು ಪ್ರದೇಶದಲ್ಲಿ ಒಮರ್ ಮುಕ್ತಾರ್ ಮತ್ತವನ ಸಹಚರರು ಇಟ್ಯಾಲಿಯನ್‍ರ ಆಕ್ರಮಣವನ್ನು ಪ್ರತಿಭಟಿಸಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಆದರೆ 1931ರಷ್ಟೊತ್ತಿಗೆ ಹೋರಾಟಗಾರರಲ್ಲಿ ಸಾಕಷ್ಟು ಆಹಾರ ಮತ್ತು ಶಸ್ತ್ರಾಸ್ತ್ರಗಳ ಕೊರತೆಯುಂಟಾಯಿತು. ಅಷ್ಟೊತ್ತಿಗಾಗಲೇ ಒಮರ್ ಮುಕ್ತಾರನಿಗೆ 83 ವರ್ಷ ವಯಸ್ಸಾಗಿತ್ತು. ಅವನ ಅನೇಕ ಗೆಳೆಯರು  ಅವನಿಗೆ ಈ ಹೋರಾಟದಿಂದ ನಿವೃತ್ತಿಯನ್ನು ಪಡೆದು ದೇಶವನ್ನು ಬಿಟ್ಟು ಹೋಗು ಎಂದು ಉಪದೇಶಿಸಿದರು. ಆದರೆ ಒಮರ್ ಮುಕ್ತಾರ್ ಅವರ ಉಪದೇಶವನ್ನು ನಿರಾಕರಿಸಿ ಎಂದಿನಂತೆ ತನ್ನ ಹೋರಾಟವನ್ನು ಮುಂದುವರಿಸಿದ. 
    ಹೀಗೆ ಒಂದು ದಿನ ಇಟ್ಯಾಲಿಯನ್‍ರ ವಿರುದ್ಧ ಯುದ್ಧ ಮಾಡುತ್ತಿರಬೇಕಾದರೆ ತೀವ್ರವಾಗಿ ಗಾಯಗೊಂಡು ಅವರ ಸೆರೆಯಾಳಾಗುವದರ ಮೂಲಕ ಇಪ್ಪತ್ತು ವರ್ಷಗಳ ಅವನ ಹೋರಾಟ ಕೊನೆಗೊಂಡಿತು. ಅವನನ್ನು ಜೈಲಿನಲ್ಲಿಟ್ಟರೂ ಅವನ ಕೈ ಕಾಲುಗಳಿಗೆ ಬೇಡಿ ಹಾಕಿಡಲಾಯಿತು. ಏಕೆಂದರೆ ಇಟ್ಯಾಲಿಯನ್‍ರ ಸೇನೆಗೆ ಅವನು ಯಾವಾಗಬೇಕಾದರು ತಪ್ಪಿಸಿಕೊಂಡುಹೊಗಬಹುದು ಎನ್ನುವ ಭಯವಿತ್ತು. ಸಪ್ಟಂಬರ್ 16, 1931ರಂದು ಮುಕ್ತಾರನನ್ನು ಅವನ ಸಹಚರರೆದುರಿಗೆ ಹಾಗೂ ಸಾರ್ವಜನಿಕರಮುಂದೆ ಗಲ್ಲಿಗೇರಿಸಲಾಯಿತು. ಆ ಮೂಲಕ ಅವನ ಇಪ್ಪತ್ತು ವರ್ಷಗಳ ಹೋರಾಟಕ್ಕೆ ತೆರೆ ಬಿದ್ದಂತಾಯಿತು. ಗಲ್ಲಿಗೇರಿಸುವ ಮುನ್ನ ಕೊನೆಯದಾಗಿ ಆತ ಪವಿತ್ರ ಕುರಾನಿನಲ್ಲಿ ಹೇಳಲಾದ ಪ್ರಸಿದ್ಧ ಉಕ್ತಿಗಳನ್ನು ಉದ್ಘರಿಸಿದ: ಅಲ್ಲಾಹುವಿನಿಂದ ಬಂದಿದ್ದೇನೆ, ಅಲ್ಲಾಹುನೆಡೆಗೆ ವಾಪಾಸಾಗುತ್ತೇನೆ.  
    ಒಮರ್ ಮುಕ್ತಾರನ ಸಾವಿನಿಂದಾಗಿ ಇಟ್ಯಾಲಿಯನ್‍ರು ನಿಟ್ಟುಸಿರು ಬಿಟ್ಟು ನೆಮ್ಮದಿಯ ನಿದ್ರೆ ಮಾಡತೊಡಗಿದರು. ಮಾತ್ರವಲ್ಲ ಇಡಿ ಲಿಬಿಯಾವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಸುಲಭವಾಯಿತು. ಅಲ್ಲಿಂದಾಚೆ 1943 ರವರೆಗೆ ಲಿಬಿಯಾ ಇಟ್ಯಾಲಿಯನ್‍ರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೆ ಮಹಾಯುದ್ಧದಲ್ಲಿ ಯಾವಾಗ ಇಟಲಿ ಸೋತಿತೋ ಅಂದಿನಿಂದ ಲಿಬಿಯಾ ಒಕ್ಕೂಟ ರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾ ಈ ಎಲ್ಲ ದಾಸ್ಯದಿಂದ ಬಿಡುಗಡೆಹೊಂದಿ ತನ್ನನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಲ್ಲಿಂದ 1969ರ ತನಕ ಅಲ್ಲಿಯ ಪ್ರಜೆ ಇದ್ರಿಸ್ ಎಂಬವ ಲಿಬಿಯಾದ ಚುಕ್ಕಾಣಿಯನ್ನು ಹಿಡಿಯುವದರ ಮೂಲಕ ಲಿಬಿಯಾದ ಮೊಟ್ಟಮೊದಲ ರಾಜನೆನಿಸಿಕೊಂಡನು. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ತನ್ನ ಸೇನೆಯ ಕಿರಿಯ ಅಧಿಕಾರಿಗಳೊಂದಿಗೆ ಲಿಬಿಯಾವನ್ನು ತನ್ನ ಕೈವಶ ಮಾಡಿಕೊಂಡು 2011 ರ ತನಕ ಸಮರ್ಥವಾಗಿ ಆಳಿದ. 2011ರಲ್ಲಿ ಕೆಲವು ಬಂಡುಕೋರರು ಗಡಾಫಿಯ ವಿರುದ್ಧ ಬಂಡೆದ್ದು ಅವನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. 2012 ಜೂನ್ ತಿಂಗಳಲ್ಲಿ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವ ಸರಕಾರವನ್ನು ಅಸ್ಥಿತ್ವಕ್ಕೆ ತಂದು ಲಿಬಿಯಾಕ್ಕೆ ಹೊಸ ಭಾಷ್ಯವನ್ನು ಬರೆದಿದ್ದು ಈಗ ಇತಿಹಾಸ.
    ಹಾಗೆಂದೇ ಒಮರ್ ಮುಕ್ತಾರನೆಂದರೆ ಇಲ್ಲಿಯವರಿಗೆ ಅಪಾರ ಗೌರವ ಮತ್ತು ಸ್ಪೂರ್ತಿ. ಇಂಥ ಒಬ್ಬ ದಿಟ್ಟ ಹೋರಾಟಗಾರನ ಸಾಹಸಗಳನ್ನು ಇನ್ನಿಲ್ಲದಂತೆ ಇಲ್ಲಿಯ ಜನ ಸ್ಮರಿಸುತ್ತಾರೆ. ಗಡಾಫಿ ಸರಕಾರ ಆತನ ಭಾವಚಿತ್ರವನ್ನು ಇಲ್ಲಿಯ 10 ದಿನಾರಿನ ನೋಟಿನ ಮೇಲೆ ಮುದ್ರಿಸುವದರ ಮೂಲಕ ಆತನಿಗೆ ವಿಶೇಷ ಗೌರವ ಸಲ್ಲಿಸಿತ್ತು. ಹೊಸ ಸರಕಾರ ಕೂಡಾ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಲಿಬಿಯಾದ ಎಲ್ಲ ಸರಕಾರಿ ಕಛೇರಿಗಳಲ್ಲೂ ಹಾಗೂ ಬೀದಿಗಳಲ್ಲಿ ಮುಕ್ತಾರನ ಭಾವಚಿತ್ರಗಳನ್ನೊಳಗೊಂಡ ಬೋರ್ಡುಗಳನ್ನು ಹಾಗೂ ತೂಗುಪಟಗಳನ್ನು ನೇತುಹಾಕಿದ್ದಾರೆ. ಮಾತ್ರವಲ್ಲ ಆತನ ಹೆಸರನ್ನು ಇಲ್ಲಿಯ ಅನೇಕ ಬೀದಿಗಳಿಗಲ್ಲದೆ ಇತರೆ ಅರೇಬಿಕ್ ದೇಶಗಳಲ್ಲಿಯೂ ಸಹ ಇಡಲಾಗಿದೆ. ಇಲ್ಲಿಯ ಅನೇಕ ಹೋರಾಟಗಾರರಿಗೆ ಅವನೇ ಸ್ಪೂರ್ತಿಯಾಗಿದ್ದು ಮೊನ್ನೆ ನಡೆದ ಲಿಬಿಯಾದ ಕ್ರಾಂತಿಗೂ ಸಹ ವನೇ ಪ್ರೇರಣೆಯಾಗಿದ್ದಾನೆ ಎಂದು ಇಲ್ಲಿನವರು ಹೇಳುತ್ತಾರೆ.

     -ಉದಯ್ ಇಟಗಿ