Demo image Demo image Demo image Demo image Demo image Demo image Demo image Demo image

10x8 ಕೋಣೆ

  • ಮಂಗಳವಾರ, ಅಕ್ಟೋಬರ್ 15, 2013
  • ಬಿಸಿಲ ಹನಿ

  • ಇಲ್ಲಿ 10x8 ಕೋಣೆಬರಲಿ” ಹಾಗಂತ ಮಿಸೆಸ್ ಮಲೀಕ್ ತನ್ನ ಮುಂದಿರುವ ಟೇಬಲ್ ಮೇಲೆ ಈಗಾಗಲೇ ಮನೆ ಕಟ್ಟಿಸಲು ತಯಾರಿಸಿಟ್ಟಿದ್ದ ನಕಾಸೆಪಟದಲ್ಲಿನ ಚೌಕವೊಂದನ್ನು ತೋರಿಸುತ್ತಾ ಹೇಳಿದಳು. ಆಕೆ ಈ ಸಲಹೆಯನ್ನು ಕೊಟ್ಟಿದ್ದು ಮೂರನೇ ಬಾರಿಯಾಗಿತ್ತೇನೋ! ಆದರೆ ಆಕೆಯ ಮಾತನ್ನು ಅವಳ ಗಂಡನಾಗಲಿ, ವಾಸ್ತುಶಿಲ್ಪಿಯಾಗಲಿ ತಮ್ಮ ಕಿವಿಯ ಮೇಲೆ ಹಾಕಿಕೊಂಡಂತೆ ಕಾಣಲಿಲ್ಲ.  
    ಈ ಹಿಂದೆ ಮಲೀಕ್‍ರು ದೆಹಲಿಯ ಅತ್ಯಾಕರ್ಷಕ ಬಡಾವಣೆಯೊಂದರಲ್ಲಿ ಪ್ಲಾಟೊಂದನ್ನು ತೆಗೆದುಬಿಟ್ಟಿದ್ದರು. ಆದರೆ ಅವರಿಗೆ ಮೇಲಿಂದ ಮೇಲೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುತ್ತಿದ್ದರಿಂದ ಅಲ್ಲಿ ಮನೆ ಕಟ್ಟಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೆ ಅದೇ ಊರಿಗೆ ವರ್ಗವಾಗಿ ಬಂದಿದ್ದರಿಂದ ಅಲ್ಲಿ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಸಲು ಮುಂದಾಗಿದ್ದರು.
    ಒಂದು ಸಾರಿ ಮನೆ ಕಟ್ಟಿಯಾದ ಮೇಲೆ ತನ್ನ ಗಂಡನಿಗೆ ದೆಹಲಿಯಿಂದ ಬೇರೆ ಕಡೆ ವರ್ಗವಾದರೂ ಸರಿ ತಾನು ಮಾತ್ರ ಅದೇ ಊರಿನಲ್ಲಿದ್ದುಕೊಂಡು ಹೊಸಮನೆಯಲ್ಲೇ ವಾಸಿಸಬೇಕೆಂದು ಅದಾಗಲೇ ಮಿಸೆಸ್ ಮಲೀಕ್ ತನ್ನ ಹೃದಯದ ಹೃದಯದಲ್ಲಿ ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದಳು. ಆಕೆಗೆ ತಾವು ಮೇಲಿಂದ ಮೇಲೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುವದರ ಬಗ್ಗೆ ರೋಸಿಹೋಗಿತ್ತು. ಅಲ್ಲದೇ ಪ್ರತಿ ಎರಡು ವರ್ಷಕ್ಕೊಂದು ಸಾರಿ ಹೊಸ ಜಾಗಕ್ಕೆ ಹೋಗಿ, ಅಲ್ಲಿ ಮನೆ ಮಾಡಿ, ಎಲ್ಲವನ್ನೂ ಸರಿ ಹೊಂದಿಸುವದು ಆಕೆಗೆ ದೊಡ್ಡ ತಲೆನೋವಿನ ಕೆಲಸವಾಗಿತ್ತು. ಮೇಲಾಗಿ ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದರಿಂದ ಅವರ ಸ್ಕೂಲನ್ನು ಹೀಗೆ ಮೇಲಿಂದ ಮೇಲೆ ಬದಲಾಯಿಸುವದು ಆಕೆಗೆ ಒಂಚೂರು ಸರಿ ಕಾಣಲಿಲ್ಲ. ಹೀಗಾಗಿ ಗಂಡನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಳು, “ಮುಂದಿನ ಸಾರಿ ವರ್ಗವಾದರೆ ನೀವು ಮಾತ್ರ ಹೋಗಿ. ನಾನು ಖಾಯಂ ಆಗಿ ದೆಹಲಿಯಲ್ಲಿದ್ದುಕೊಂಡು ಮನೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ. ನನ್ನ ಜೊತೆಗಿರಲು ಹೇಗೂ ಅತ್ತೆ ಇದ್ದಾರಲ್ಲ?” ಮಿಸ್ಟರ್ ಮಲೀಕ್‍ನಿಗೆ ಈ ಏರ್ಪಾಡು ಸರಿ ಕಂಡಿದ್ದರಿಂದ ಅವನು ಯಾವುದೇ ತಕರಾರು ತೆಗೆಯಲಿಲ್ಲ. 
    ಇಲ್ಲಿ 10x8 ಕೋಣೆ ಬರಲಿ. ಮಿಸೆಸ್ ಮಲೀಕ್ ಪುನಃ ಹೇಳಿದಳು. ಆಕೆಯ ಗಂಡ ಪಕ್ಕದ ಕೋಣೆಯಲ್ಲಿ ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.
    “ಆದರೆ ಇದು ಸ್ಟೋರ್-ರೂಮು.” ವಾಸ್ತುಶಿಲ್ಪಿ ಮಿಸೆಸ್ ಮಲೀಕ್‍ಗೆ ಸ್ಪಷ್ಟವಾಗಿ ಹೇಳಿದ.
    “ಗೊತ್ತು, ನಾನು ಏನು ಹೇಳ್ತಾ ಇದ್ದೀನಿ ಅಂದರೆ........ಸಧ್ಯಕ್ಕೆ ಅದು ನಮ್ಮತ್ತೆ ಕೋಣೆಯಾಗಿರುತ್ತೆ.........ಆಕೆ ಹೋದನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ........”
    ವಾಸ್ತುಶಿಲ್ಪಿಗೆ ಆಕೆ ಏನು ಹೇಳುತ್ತಿದ್ದಾಳೆಂದು ಅರ್ಥವಾಗಲಿಲ್ಲ. ಒಂದು ಕ್ಷಣ ತಬ್ಬಿಬ್ಬಾದ.
    ನಾನು ಹೇಳೋದು ನಿಮಗೆ ಅರ್ಥವಾಗ್ತಿದೆ ಅನ್ಕೊಳ್ತಿನಿ........ ಸಧ್ಯಕ್ಕೆ ನಮ್ಮತ್ತೆ ಆ ಕೋಣೆಯಲ್ಲಿ ಇರ್ತಾರೆ.........ನಿಮಗೆ ಗೊತ್ತೇ ಇದೆ.......... ಆಕೆಗೆ ಹೇಗೂ ವಯಸ್ಸಾಗಿದೆ........ ಬಹುಶಃ ಬಹಳ ದಿವಸ ಬದುಕೋ ತರ ಕಾಣ್ತಾ ಇಲ್ಲ.............ಆಕೆ ಹೋದ ನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ...........” ಮಿಸೆಸ್ ಮಲೀಕ್ ತಡೆತಡೆದು ಹೇಳಿದಳು.
    ಫೋನಿನಲ್ಲಿ ಮಾತನಾಡುತ್ತಿದ್ದ ಮಿಸ್ಟರ್ ಮಲೀಕ್ ಇದೀಗ ಅವರನ್ನು ಬಂದು ಸೇರಿಕೊಂಡನು. ಅವನು ಫೋನಿನಲ್ಲಿ ಮಾತನಾಡುವಾಗ ತನ್ನ ಹೆಂಡತಿ ವಾಸ್ತುಶಿಲ್ಪಿಗೆ ಕೊಟ್ಟ ಸಲಹೆಯ ಬಗ್ಗೆ ಚನ್ನಾಗಿ ಯೋಚಿಸಿದಂತಿತ್ತು. ಅವನೂ ಕೂಡಾ ಸ್ಟೋರ್-ರೂಮು ಸ್ವಲ್ಪ ದೊಡ್ಡದಾಗಿದ್ದರೆ ಒಳಿತು ಎಂದು ಭಾವಿಸಿದ್ದ. ಸ್ಟೋರ್-ರೂಮು ದೊಡ್ಡದಾಗಿದ್ದಷ್ಟು ಸಾಮಾನುಗಳನ್ನು ಸರಾಗವಾಗಿ ಆಚೀಚೆ ಸರಿಸಬಹುದು ಹಾಗೂ ಸುಲಭವಾಗಿ ಸ್ವಚ್ಛಗೊಳಿಸಬಹುದು ಎನ್ನುವದು ಅವನ ಅಭಿಪ್ರಾಯವಾಗಿತ್ತು.  
    ಅಂತೂ ಎಲ್ಲರೂ ಸೇರಿ ಅಡಿಗೆ ಮನೆ ಪಕ್ಕಕ್ಕೆ ಬರುವ ಕೋಣೆಯನ್ನು 10x8 ಕೋಣೆಯನ್ನಾಗಿ ಮಾಡಲು ನಿರ್ಧರಿಸಿದರು. ಈ ಕಾರಣಕ್ಕಾಗಿ ಒಳಾಂಗಣದ ವಿಸ್ತೀರ್ಣವನ್ನು ಅವರು ಯೋಜಿಸಿದ್ದಕ್ಕಿಂತ ಸ್ವಲ್ಪ ಕುಗ್ಗಿಸಬೇಕಾಗಿ ಬಂದರೂ ಅದರ ಬಗ್ಗೆ ಅವರು ಬೇಜಾರುಪಟ್ಟುಕೊಂಡಂತೆ ಕಾಣಲಿಲ್ಲ. ಇನ್ನುಳಿದಂತೆ ಎಲ್ಲವನ್ನೂ ಚನ್ನಾಗಿ ಯೋಜಿಸಿ ತಮ್ಮ ಪ್ಲ್ಯಾನ್‍ನ್ನು ಅನುಮತಿಗಾಗಿ ಕಾರ್ಪೊರೇಷನ್‍ ಆಫೀಸಿಗೆ ಒಪ್ಪಿಸಿದರು.  
    ಮಿಸೆಸ್ ಮಲೀಕ್ ಮನೆ ಕಟ್ಟುವ ಕೆಲಸದಲ್ಲಿ ತುಂಬಾ ಆಸಕ್ತಿಯನ್ನು ತೋರಿಸಿದಳಲ್ಲದೆ ಅದರ ಪ್ರತಿಯೊಂದು ಆಗುಹೋಗುಗಳನ್ನು ವಿಶೇಷ ಕಾಳಜಿಯಿಟ್ಟು ಗಮನಿಸಿದಳು. ಇಡಿ ದಿನ ಬಿಸಿಲು, ಮಳೆ ಎನ್ನದೆ ಛತ್ರಿಯೊಂದನ್ನು ಹಿಡಿದುಕೊಂಡು ಕೆಲಸದ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಳು. ಒಂದೊಂದು ಸಾರಿ ಆಳುಗಳು ಬರದೆ ಹೋದಾಗ ತಾನೇ ಸ್ವತಃ ಮೇಸ್ತ್ರಿಗಳಿಗೆ ಹಾಗೂ ಇನ್ನಿತರ ಕೆಲಸಗಾರರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದಳು. ಆ ಸ್ಥಳಕ್ಕೆ ಎಲ್ಲರಿಗಿಂತ ಮುಂಚೆ ಬಂದು ಕೊನೆಯಲ್ಲಿ ಎಲ್ಲರೂ ಹೋದ ಮೇಲೆ ಹೋಗುತ್ತಿದ್ದಳು. ಆ ಮೂಲಕ ಕಟ್ಟಡದ ಯಾವುದೇ ಸಾಮಗ್ರಿಗಳು ಹಾಳಾಗದಂತೆಯೂ ಹಾಗೂ ಆಳುಗಳು ವೃಥಾ ಕಾಲಹರಣ ಮಾಡದಂತೆಯೂ ಎಚ್ಚರ ವಹಿಸಿದಳು.  
    ಸ್ವಲ್ಪ ದಿನಗಳಲ್ಲಿಯೇ ಮನೆ ಕಟ್ಟುವ ಕೆಲಸ ಪೂರ್ಣವಾಯಿತು. ಮಿಸೆಸ್ ಮಲೀಕ್ ಹೊಸ ಮನೆಗೆ ತಕ್ಕ ಹಾಗೆ ಹೊಸ ಪೀಠೋಪಕರಣಗಳೇ ಆಗಬೇಕೆಂದಳು. ತನ್ನ ಹಳೆ ಪೀಠೋಪಕರಣಗಳ ಒಂದು ತುಂಡನ್ನು ಸಹ ಹೊಸ ಮನೆಯೊಳಗೆ ಸೇರಿಸಲಾರಳೆಂದು ಖಡಾಖಂಡಿತವಾಗಿ ಹೇಳಿಬಿಟ್ಟಳು.  
    ಹೀಗೆ ಅವರಿನ್ನೂ ಹೊಸ ಮನೆಗೆ ಹೋಗುವ ಯೋಚನೆಲ್ಲಿರುವಾಗಲೇ ಸರಕಾರ ಅವರ ಮನೆಯನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡ ಸುದ್ದಿಯೊಂದು ಬಂತು. ಇದು ಹೊಸಮನೆಯಲ್ಲಿ ಹೋಗಿರಲು ಎಷ್ಟೆಲ್ಲಾ ತಯಾರಿ ಮಾಡಿಕೊಂಡಿದ್ದ ಮಿಸೆಸ್ ಮಲೀಕ್‍ಳನ್ನು ರೊಚ್ಚಿಗೆಬ್ಬಿಸಿತು. ಆದರೆ ಅವಳು ಅಸಹಾಯಕಳಾಗಿದ್ದಳು. ಸರಕಾರಕ್ಕೆ ಮನಸಾರೆ ಶಾಪ ಹಾಕಿ ತನ್ನ ಹೊಟ್ಟೆಯುರಿಯನ್ನು ಕಡಿಮೆಮಾಡಿಕೊಂಡಳು. ತಾನೇ ನಿಂತು ಕಟ್ಟಿಸಿದ ಮನೆಯಲ್ಲಿ ತಕ್ಷಣಕ್ಕೆ ಬಾಳಿ ಬದುಕಲಾರದಂಗೆ ಆಯ್ತಲ್ಲ ಎಂದು ಕಣ್ಣೀರಿಟ್ಟಳು. ಆದರೆ ಮಿಸ್ಟರ್ ಮಲೀಕ್ ಸರಕಾರದಿಂದ ತಮಗೆ ಎಂಥ ಒಳ್ಳೆ ಬಾಡಿಗೆ ಸಿಗುತ್ತದೆ ಎನ್ನುವದನ್ನು ಹೇಳಿದಾಗ ಅವಳು ಸುಮ್ಮನಾದಳು.
    ಮನೆ ಕಟ್ಟಿಸುವಾಗ ಮಿಸೆಸ್ ಮಲೀಕ್ ಆ ಕಾಲೊನಿಯಲ್ಲಿನ ನೆರೆಹೊರೆಯವರೊಂದಿಗೆ ಸ್ನೇಹವನ್ನು ಬೆಳೆಸಿದ್ದಳಲ್ಲದೆ ಅವರ ಸಲಹೆ ಸಹಕಾರಗಳನ್ನೂ ಪಡೆದಿದ್ದಳು. ಅವರೆಲ್ಲರ ಮುಂದೆ ಆ ಮನೆಯಲ್ಲಿ ಜಂಭದಿಂದ ಬಾಳಿ ಬದುಕಿ ತೋರಿಸಬೇಕೆಂದು ತುದಿಗಾಲಲ್ಲಿ ಕಾಯುತ್ತಿದ್ದಳು. ಆದರೆ ಇದೀಗ ಅವಳ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಗಿತ್ತು.
    ಈ ನಡುವೆ ಅವರಿಗೆ ದೆಹಲಿಯಿಂದ ಮತ್ತೆ ಬೇರೆ ಕಡೆಗೆ ವರ್ಗವಾಯಿತು. ಮಿಸೆಸ್ ಮಲೀಕ್ ಅದೇ ಊರಿನಲ್ಲಿದ್ದುಕೊಂಡು ತನ್ನ ಹೊಸ ಮನೆಯಲ್ಲಿ ವಾಸ ಮಾಡದಿರುವದಕ್ಕೆ ಪಶ್ಚಾತಪ ಪಡುವದಕ್ಕಿಂತ ಬೇರೆ ಊರಿನಲ್ಲಿದ್ದುಕೊಂಡು ತೃಪ್ತಿಪಟ್ಟುಕೊಳ್ಳುವದೇ ಮೇಲು ಎಂದುಕೊಂಡು ಗಂಡನೊಟ್ಟಿಗೆ ಹೊರಟಳು. ಜೊತೆಗೆ ಅದರಿಂದ ಬರುತ್ತಿದ್ದ ಒಳ್ಳೆ ಮೊತ್ತದ ಬಾಡಿಗೆ ಅವಳನ್ನು ಅದ್ಹೇಗೋ ಸಮಾಧಾನಪಡಿಸಿತ್ತು.
    ಅಲ್ಲಿಂದಾಚೆ ಮಲೀಕ್‍ರಿಗೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುತ್ತಲೇ ಹೋಯಿತು. ಮತ್ತೆ ದೆಹಲಿಗೆ ವಾಪಾಸಾಗಲು ಸುಮಾರು ವರ್ಷಗಳೇ ಹಿಡಿದವು. ಈ ಮಧ್ಯ ಅವರ ಮಗಳಿಗೆ ಮದುವೆ ಆಯಿತು ಹಾಗೂಮಿಸೆಸ್ ಮಲೀಕ್‍ಳ ಅತ್ತೆ ತೀರಿಕೊಂಡಳು. ಅವರ ಅದೃಷ್ಟಕ್ಕೆ ಒಂದು ರೀತಿಯಲ್ಲಿ ಸರಕಾರ ಅವರ ಮನೆಯನ್ನು ವಶಪಡಿಸಿಕೊಂಡಿದ್ದು ಒಳ್ಳೆಯದೇ ಆಗಿತ್ತು. ಏಕೆಂದರೆ ಸರಕಾರ ತಿಂಗಳು ತಿಂಗಳು ಸರಿಯಾಗಿ ಬಾಡಿಗೆಯನ್ನು ಕೊಡುತ್ತಿತ್ತು ಮತ್ತು ಅವರಿಂದ ಯಾವುದೇ ತಂಟೆ ತಕರಾರಿರಲಿಲ್ಲ. ಈ ಬಾಡಿಗೆದಾರರೋ ಒಂದು ದೊಡ್ಡ ತಲೆನೋವು! ಅವರದು ಸದಾ ಏನಾದರೊಂದು ದೂರು ಇಲ್ಲವೇ ಬೇಡಿಕೆ ಇದ್ದೇ ಇರುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಕೊಡದೆ ಸತಾಯಿಸುತ್ತಾರೆ. ಈಗ ಬಾಡಿಗೆಯು ಸರಕಾರದಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಿಂಗಳು ತಿಂಗಳು ಸಮಯಕ್ಕೆ ಸರಿಯಾಗಿ ತಪ್ಪದೇ ಜಮೆಯಾಗುತ್ತಿತ್ತು.
    ಈಗ ಮಲೀಕ್‍ರ ಮಗನು ಮದುವೆಯಾಗುವದೊಂದು ಬಾಕಿ ಉಳಿದಿತ್ತು. ಅವನ ಮದುವೆಯೊಂದನ್ನು ಮಾಡಿಮುಗಿಸಿಬಿಟ್ಟರೆ ತಮ್ಮೆಲ್ಲಾ ಜವಾಬ್ದಾರಿಗಳು ಮುಗಿದಂತಾಗುತ್ತವೆ ಎಂದು ಮಲೀಕ್‍ರು ತಮ್ಮ ಮಗನಿಗೆ ತಕ್ಕ ಹುಡುಗಿಯನ್ನು ಹುಡುಕತೊಡಗಿದರು. ಮಿಸ್ಟರ್ ಮಲೀಕ್ ಈ ಕೆಲಸವನ್ನು ತಾನು ನಿವೃತ್ತಿ ಹೊಂದುವದಕ್ಕಿಂತ ಮೊದಲೇ ಮಾಡಿಮುಗಿಸಬೇಕೆಂದುಕೊಂಡನು.
    ಅಂತೂ ತಾನಂದುಕೊಂಡಂತೆ ಮಿಸ್ಟರ್ ಮಲೀಕ್ ತನ್ನ ನಿವೃತ್ತಿಗಿಂತ ಮೊದಲೇ ತನ್ನ ಮಗನ ಮದುವೆಯನ್ನು ಮಾಡಿ ಮುಗಿಸಿದನು. ಆದರೆ ಅವನ ಮನೆಯಿನ್ನೂ ಸರಕಾರದ ಸುಪರ್ದಿಯಿಂದ ಬಿಡುಗಡೆ ಪಡೆದಿರಲಿಲ್ಲ. ಹೀಗಾಗಿ ಮಲೀಕ್‍ರು ವಿಧಿಯಿಲ್ಲದೆ ತಮ್ಮ ಮಗ ಮತ್ತು ಸೊಸೆಯೊಟ್ಟಿಗೆ ಬಾಡಿಗೆ ಮನೆಯಲ್ಲೇ ವಾಸಿಸಬೇಕಾಯಿತು. 
    ಮಿಸ್ಟರ್ ಮಲೀಕ್ ಸರಕಾರದಿಂದ ತನ್ನ ಮನೆಯನ್ನು ಬಿಡಿಸಿಕೊಳ್ಳಲು ಇನ್ನೂ ಹೋರಾಟ ನಡೆಸುತ್ತಲೇ ಇದ್ದ. ಅಷ್ಟರಲ್ಲಿ ಅವನ ಸಾವು ಅವನನ್ನು ಕೊಂಡೊಯ್ಯಿತು. ಕೊನೆಗೂ ಮಿಸ್ಟರ್ ಮಲೀಕ್ ತಾನು ಕಟ್ಟಿಸಿದ ಮನೆಯಲ್ಲಿ ಒಂದು ದಿನವೂ ಸಹ ಬಾಳಿ ಬದುಕದೆ ಹಾಗೆ ಹೊರಟುಹೋಗಿಬಿಟ್ಟ.
    ಅವನು ಹೋಗಿ ಸರಿಯಾಗಿ ಮೂರು ತಿಂಗಳ ನಂತರ ಸರಕಾರ ಅವರ ಮನೆಯನ್ನು ಅವರಿಗೆ ಹಿಂದಿರುಗಿಸಿತು. 
    ಸ್ವಂತಮನೆಗೆ ಹೊಗಲು ಮಿಸೆಸ್ ಮಲೀಕ್‍ಳಿಗಿಂತ ಅವಳ ಸೊಸೆ ಹೆಚ್ಚು ಕಾತರಳಾಗಿದ್ದಳು. ಮನೆಯು ಅವರ ಕೈಗೆ ಬಂದ ದಿನದಿಂದಲೇ ಆಕೆಯೇ ಖುದ್ದಾಗಿ ನಿಂತು ಮನೆಯ ಗೋಡೆಗಳಿಗೆ ಬಣ್ಣ ಕೊಡಿಸುವದು ಹಾಗೂ ಬಾಗಿಲುಗಳಿಗೆ ಪಾಲಿಷ್ ಹಾಕಿಸುವದನ್ನು ಮಾಡಿದಳು. ಪೀಠೋಪಕರಣಗಳ ವಿತರಕನಿಗೆ ಇಂತಿಂಥದೇ ಪೀಠೋಪಕರಣಗಳು ಆಗಬೇಕೆಂದು ಹೇಳಿ ಅಂತಿಂಥವನ್ನೇ ಮಾಡಿಸಿ ತರಿಸಿಕೊಂಡಳು.
    ಬರುವ ಸೋಮವಾರ ಸ್ವಂತಮನೆಗೆ ಶಿಫ್ಟ್ ಆಗುವದೆಂದು ನಿರ್ಧರಿಸಿದರು. ಆದರೆ ಆವತ್ತು ಬೆಳಿಗ್ಗೆ ಎದ್ದಾಗ ಮಳೆ ಒಂದೇ ಸಮನೆ ಹುಯ್ಯುತ್ತಿತ್ತು. ಮಳೆ ನಿಲ್ಲಬಹುದೆಂದು ಅವರೆಲ್ಲಾ ಕಾಯ್ದೇ ಕಾಯ್ದರು. ಊಹೂಂ, ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ಇತ್ತ ಮಿಸೆಸ್ ಮಲೀಕ್‍ಳ ಮಗನಿಗೆ ಕೆಲಸಕ್ಕೆ ಹೋಗಲು ಸಮಯವಾಗಿದ್ದರಿಂದ ಅವನು ಸಾಯಂಕಾಲ ತಾನು ಕೆಲಸದಿಂದ ಬಂದ ಮೇಲೆ ಶಿಫ್ಟ್ ಮಾಡಿದರಾಯಿತೆಂದು ಹೇಳಿಹೋದ.  
    ಮಳೆ ಇಡಿ ದಿನ ಬಿಡದೆ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಸಾಯಂಕಾಲವಾದರೂ ನಿಲ್ಲಲಿಲ್ಲ. ಆದಾಗ್ಯೂ ಮಿಸೆಸ್ ಮಲೀಕ್ ಸೋಮವಾರ ಪ್ರಶಸ್ತ ದಿನವಾಗಿದ್ದರಿಂದ ಆವತ್ತೇ ಶಿಫ್ಟ್ ಆಗಬೇಕೆಂದಳು. ಮಾರನೆಯ ದಿನ ಮಂಗಳವಾರವಾಗಿದ್ದರಿಂದ ಆವತ್ತು ಮನೆ ಬದಲಾಯಿಸುವದು ಆಕೆಗೆ ಅಷ್ಟು ಸೂಕ್ತವೆನಿಸಲಿಲ್ಲ.              
    ಮಿಸೆಸ್ ಮಲೀಕ್‍ಳ ಮಗ ತನ್ನ ತಾಯಿಯ ಮಾತಿಗೆ ಬೆಲೆ ಕೊಟ್ಟು ಅಂದೇ ಸುರಿವ ಮಳೆಯಲ್ಲಿಯೇ ಶಿಫ್ಟ್ ಮಾಡಲು ನಿರ್ಧರಿಸಿದನು. ಒಂದು ಟ್ಯಾಕ್ಷಿ ತರಿಸಿ ಸಧ್ಯಕ್ಕೆ ಅಗತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ಮಾತ್ರ ಅದಕ್ಕೆ ತುಂಬಿದರು. ಮಿಕ್ಕ ಸಾಮಾನಗಳನ್ನು ಬೇರೆ ದಿವಸ ತಂದುಕೊಂಡರಾಯಿತೆಂದುಕೊಂಡು ಮೂರೂ ಜನ ತಮ್ಮ ಸ್ವಂತ ಕಾರಿನಲ್ಲಿ ಹೊಸಮನೆಯತ್ತ ಹೊರಟರು.
    ಮಳೆ ಇನ್ನೂ ಸುರಿಯುತ್ತಲೇ ಇತ್ತು. ಹೊಸಮನೆಯ ಕಡೆ ಹೊರಟಂತೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಿಸೆಸ್ ಮಲೀಕ್‍ ಹಳೆಯ ನೆನಪುಗಳಲ್ಲಿ ಕಳೆದುಹೋದಳು. ಮನೆ ಕಟ್ಟಿಸಲು ಎಷ್ಟೊಂದು ಕಷ್ಟಪಟ್ಟಿದ್ದಳು ಆಕೆ! ಅದೆಷ್ಟು ಸಾರಿ ಕೆಲಸದ ಭರದಲ್ಲಿ ಊಟವನ್ನು ಬಿಟ್ಟಿರಲಿಲ್ಲ? ಅದೆಷ್ಟು ಸಾರಿ ಉರಿವ ಬಿಸಿಲಲ್ಲಿ ನಿಂತು ಕೆಲಸವನ್ನು ನೋಡಿಕೊಂಡಿರಲಿಲ್ಲ? ಅದೆಷ್ಟು ಸಾರಿ ಮಳೆಯಲ್ಲಿ ನೆನೆದಿರಲಿಲ್ಲ? ಮನೆಗಾಗಿ ಅದೆಷ್ಟು ಜೀವವನ್ನು ತೇಯ್ದಿರಲಿಲ್ಲ?
    ವಾಸ್ತುಶಿಲ್ಪಿಯು ಮನೆಯನ್ನು ಕಟ್ಟಿಯಾದ ಮೇಲೆ ಅದ್ಹೇಗೆ ಕಾಣುತ್ತದೆ ಎಂದು ತೋರಿಸಲು ಅದರ ವಿನ್ಯಾಸವನ್ನು ಬಣ್ಣದ ನಕಾಸೆಯಲ್ಲಿ ಬಿಡಿಸಿದ್ದ. ಅದರಲ್ಲಿ ವೆರಾಂಡದಲ್ಲಿ ಮನೆಯೊಡತಿಯ ಶಿಲ್ಪಾಕೃತಿಯೊಂದು ಅಮೃತ ಶಿಲೆಯ ಕಂಬವೊಂದಕ್ಕೆ ಒರಗಿಕೊಂಡು ನಿಂತಿತ್ತು. ಆ ಶಿಲ್ಪಾಕೃತಿಯು ಮರೂನ್ ಬಣ್ಣದ ಸೀರೆಯನ್ನುಟ್ಟುಕೊಂಡು, ಮುಖದ ಮೇಲೆ ಸಂತೃಪ್ತಿಯ ನಗೆಯೊಂದನ್ನು ಅಂಟಿಸಿಕೊಂಡು ಅತ್ಯಂತ ಆಕರ್ಷಕವಾಗಿ ಮನೆಗೆ ಬಂದವರನ್ನು ಸ್ವಾಗತಿಸುವಂತಿತ್ತು. ಮಿಸೆಸ್ ಮಲೀಕ್‍ ಎಂದೂ ಮರೂನ್ ಬಣ್ಣದ ಸಿರೆಯನ್ನು ಉಟ್ಟಿರಲಿಲ್ಲ. ಆದರೂ ವಾಸ್ತುಶಿಲ್ಪಿಯು ತನ್ನ ಚಹರೆಯನ್ನೇ ಹೋಲುವ ಶಿಲ್ಪಾಕೃತಿಯನ್ನು ಬಿಡಿಸಿರುವನೆಂದವಳಿಗೆ ಭಾಸವಾಯಿತು. ಅದು ಥೇಟ್ ಮಿಸೆಸ್ ಮಲೀಕ್‍ಳನ್ನೇ ಹೋಲುತ್ತಿತ್ತು. ಮಿಸೆಸ್ ಮಲೀಕ್‍ಳಷ್ಟೇ ಎತ್ತರವಾಗಿದ್ದು ಅವಳು ನಿಲ್ಲುವ ಭಂಗಿಯಲ್ಲಿಯೇ ನಿಂತಿತ್ತು. ಮಿಸೆಸ್ ಮಲೀಕ್ ಮತ್ತೆ ಮತ್ತೆ ಆ ಆಕೃತಿಯನ್ನು ನೋಡಿ ತನ್ನ ಬಗ್ಗೆ ತಾನೇ ಹೆಮ್ಮೆಪಟ್ಟಳು. ಅಷ್ಟಕ್ಕೆ ಸುಮ್ಮನಿರದೆ ತನ್ನ ಕೋಣೆಯಲ್ಲಿರುವ ಡ್ರೆಸ್ಸಿಂಗ್ ಟೇಬಲ್‍ಗೆ ಹೋಗಿ, ಕನ್ನಡಿಯಲ್ಲಿ ಆ ಶಿಲ್ಪಾಕೃತಿಯು ನಿಂತುಕೊಂಡ ಭಂಗಿಯಲ್ಲೇ ನಿಂತುಕೊಳ್ಳುತ್ತಾ, ಮತ್ತೆ ಮತ್ತೆ ಅದನ್ನೇ ಅನುಕರಿಸುತ್ತಾ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಂಡು ಹೆಮ್ಮೆಯಿಂದ ಬೀಗಿದಳು. ಮಿಸೆಸ್ ಮಲೀಕ್ ಮನೆಗೆ ಹೋದ ತಕ್ಷಣ ಆ ಪ್ರತಿಮೆಯನ್ನು ತನ್ನ ಸೊಸೆಗೆ ತೋರಿಸಬೇಕೆಂದುಕೊಂಡಳು.
    ಅವಳ ಸೊಸೆ ಮುಂದಿನ ಸೀಟಿನಲ್ಲಿ ತನ್ನ ಗಂಡನ ಪಕ್ಕದಲ್ಲಿ ಕುಳಿತಿದ್ದಳು. ಅಲ್ಲಿ ಕಾರಿನ ಹಿಂಭಾಗದ ವಾಹನಗಳನ್ನು ವೀಕ್ಷಿಸಿಸಲಿಟ್ಟಿದ್ದ ಕನ್ನಡಿಯನ್ನು ತನ್ನೆಡೆಗೆ ತಿರುಗಿಸಿಕೊಳ್ಳುತ್ತಾ ಮತ್ತೊಂದು ಕೋಟು ಲಿಪ್‍ಸ್ಟಿಕ್‍ನ್ನು ಹಾಕಿಕೊಂಡಳು. “ಇಷ್ಟೊತ್ತಲ್ಲಿ, ಅದೂ ಸ್ವಂತ ಮನೆಗೆ ಹೋಗುವಾಗ ಲಿಪ್‍ಸ್ಟಿಕ್‍ನ್ನು ಹಾಕಿಕೊಳ್ಳುವ ಅಗತ್ಯವಾದರೂ ಏನಿದೆ? ಮನೆಗೆ ಹೋದ ಮೇಲೆ ಹೆಚ್ಚೆಂದರೆ ಊಟಮಾಡುವದು, ಮಲಗುವದಷ್ಟೇ! ಅಷ್ಟಕ್ಕೆ ಲಿಪ್‍ಸ್ಟಿಕ್‍ ಯಾಕೆ ಬೇಕು? ಏನು ವಿಚಿತ್ರಾನೋ ಈಗಿನ ಕಾಲದ ಹುಡುಗಿಯರ ನಡವಳಿಕೆಗಳು! ಮತ್ತವಳು ಅದ್ಹೇಗೆ ಒಂದೇ ಸಮನೇ ಅದೇನೇನೇನೋ ಇಂಗ್ಲೀಷಿನಲ್ಲಿ ವಟಗುಟ್ಟುತ್ತಲೇ ಇದ್ದಳು! ಸ್ವಂತ ಗಂಡನ ಜೊತೆ ಇಂಗ್ಲೀಷಿನಲ್ಲಿ ಮಾತನಾಡುವ ಅವಶ್ಯಕತೆಯಾದರೂ ಏನಿದೆ?” ಮಿಸೆಸ್ ಮಲೀಕ್ ತನಗೆ ತಾನೇ ಹೇಳಿಕೊಳ್ಳುತ್ತಾ ಅಸಹನೆಯಿಂದ ಕುದಿದಳು.    
    ಮಿಸೆಸ್ ಮಲೀಕ್‍ಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಇದೊಂದರಲ್ಲಿ ಮಾತ್ರ ಆಕೆ ಹಿಂದಿದ್ದಳು. ಆದರೆ ಮಿಕ್ಕೆಲ್ಲ ವಿಷಯಗಳಲ್ಲಿ ಒಂದು ಕೈ ಹೆಚ್ಚೇ ಮುಂದಿದ್ದಳು. ಆಧುನಿಕ ಬದುಕಿನ ರೀತಿ-ನೀತಿಗಳಿಗೆ ತನ್ನನ್ನು ಚನ್ನಾಗಿ ಒಗ್ಗಿಸಿಕೊಂಡಿದ್ದಳು. ಗಂಡನ ಜೊತೆ ಕ್ಲಬ್ಬಿಗೆ ಹೋಗುತ್ತಿದ್ದಳು. ಅಲ್ಲಿ ಕಾರ್ಡ್ಸ್ ಆಡುತ್ತಿದ್ದಳು. ವಿವಧ ಆಟಗಳಲ್ಲಿ ಉತ್ಸಾಹದಿಂದ ಭಾಗವಹಸುತ್ತಿದ್ದಳು. ಸ್ನೇಹಿತರೊಟ್ಟಿಗೆ ವಯ್ಯಾರವಾಗಿ ಬಳುಕುತ್ತಾ ಕುಡಿಯುವದನ್ನು ಕಲಿತುಕೊಂಡಿದ್ದಳು. ಜೊತೆಗೆ ಕುಣಿಯುವದನ್ನು ಸಹ ಕಲಿತುಕೊಂಡಿದ್ದಳು. ಅವಕಾಶ ಸಿಕ್ಕಾಗಲೆಲ್ಲಾ ತನ್ನ ಗಂಡನ ಜೊತೆಗೋ ಇಲ್ಲವೇ ಬೇರೆ ಗಂಡಸರೊಟ್ಟಿಗೋ ಯಾವುದೇ ಹಿಂಜರಿಕೆಯಿಲ್ಲದೆ ವಯ್ಯಾರದಿಂದ ಕುಣಿಯುತ್ತಿದ್ದಳು. 
    ಇದ್ದಕ್ಕಿದ್ದಂತೆ ಮಿಸೆಸ್ ಮಲೀಕ್‍ಳಿಗೆ ವಾಸ್ತುಶಿಲ್ಪಿಯು ನಿರ್ಮಿಸಿದ ಪ್ರತಿಮೆಯ ಚಿತ್ರ ಅವಳ ಕಣ್ಮುಂದೆ ಹಾದು ಹೋಯಿತು. ಒಂದು ಕ್ಷಣ ‘ಅದೇನಾದರೂ ತನ್ನ ಸೊಸೆಯದಾಗಿರಬಹುದೆ?’ ಎಂಬ ಅನುಮಾನ ಅವಳನ್ನು ಕಾಡಿತು. ಅದ್ಹೇಗೆ ಸಾಧ್ಯ? ಮನೆ ಕಟ್ಟಿಸುವಾಗ ಅವಳ ಸೊಸೆ ಇಲ್ಲಿಗಿನ್ನೂ ಬಂದಿರಲೇ ಇಲ್ಲ! ಆದರೆ ಚಿತ್ರದಲ್ಲಿನ ಪ್ರತಿಮೆಯು ಮರೂನ್ ಸೀರೆಯನ್ನು ಉಟ್ಟಂತೆಯೇ ಅವಳ ಸೊಸೆ ಕೂಡಾ ಮರೂನ್ ಸೀರೆಯನ್ನೇ ಉಟ್ಟಿದ್ದಳು. ಹೌದು, ಖಂಡಿತ ಅದು ಮರೂನ್ ಸೀರೆಯೇ! ಆದರೆ ಮಿಸೆಸ್ ಮಲೀಕ್‍ಳಿಗೆ ಅದೇಕೋ ಮರೂನ್ ಬಣ್ಣವನ್ನು ಕಂಡರೆ ಆಗುತ್ತಿರಲಿಲ್ಲ. ಅದು ಕಣ್ಣಿಗೆ ಹೊಡೆಯುತ್ತದೆನ್ನುವದು ಅವಳ ವಾದವಾಗಿತ್ತು. ಅದೇನಿದ್ದರೂ ತನ್ನ ಸೊಸೆಯಂತವರಿಗೆ ಮಾತ್ರ ಸರಿ ಎನ್ನುವದು ಅವಳ ಅಭಿಪ್ರಾಯವಾಗಿತ್ತು!
    “ಅವಳು ತನಗೆ ಬೇಕಾದರೆ ಮರೂನ್ ಸೀರೆಗಳನ್ನೇ ಉಡಲಿ. ಲಿಪ್‍ಸ್ಟಿಕ್‍ ಹಾಕಿಕೊಳ್ಳಲಿ. ನಂಗೇನೂ ಬೇಜಾರಿಲ್ಲ” ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು ಮಿಸೆಸ್ ಮಲೀಕ್. “ಆದರೆ ನನ್ನಷ್ಟೇ ಅವಳೂ ಕಷ್ಟಪಟ್ಟು ದುಡಿಯಬೇಕು. ಮನೆಯ ಪ್ರತಿಯೊಂದು ಇಟ್ಟಿಗೆಯನ್ನು ನಾನೇ ಸ್ವತಃ ನಿಂತು ಇಡಿಸಿದ್ದೇನೆ. ಬಿಸಿಲು, ಮಳೆ ಎನ್ನದೇ ಬೆಳಗಿನ ಜಾವದಿಂದ ಸಂಜೆಗತ್ತಲವರೆಗೂ ನಿಂತು ಕಟ್ಟಡದ ಮೇಲ್ವಿಚಾರಣೆಯನ್ನು ನಡೆಸಿದ್ದೇನೆ. ಪ್ಲಾಸ್ಟರ್ ಗೋಡೆಗಳಿಗೆ ನೀರು ಹಾಕಿದ್ದೇನೆ. ಅಗತ್ಯ ಬಿದ್ದಾಗ ನಾನೇ ಸ್ವತಃ ಗಾರೆ ಹಾಕಿದ್ದೇನೆ. ಮೇಸ್ತ್ರಿಗಳಿಗೆ ಸಹಾಯ ಮಾಡಿದ್ದೇನೆ. ನನ್ನಷ್ಟಲ್ಲವಾದರೂ ನನ್ನ ಅರ್ಧದಷ್ಟಾದರೂ ಮನೆಯ ಏಳ್ಗೆಗಾಗಿ ಆಕೆ ಶ್ರಮಿಸಲೇಬೇಕು.”
    ಅವರು ಮನೆ ತಲುಪಿದರು. ಮಿಸೆಸ್ ಮಲೀಕ್‍ಳ ಮಗ ಕಾರನ್ನು ನೇರವಾಗಿ ಪೋರ್ಟಿಕೋದಲ್ಲಿ ತಂದು ನಿಲ್ಲಿಸಿದ. ತಕ್ಷಣ ಅವಳ ಸೊಸೆ ಕಾರಿನಿಂದ ಜಿಗಿದು ನೇರವಾಗಿ ವೆರಾಂಡಕ್ಕೆ ಓಡಿಹೋದಳು. ಅಲ್ಲಿದ್ದ ಶಿಲ್ಪಾಕೃತಿಯನ್ನು ಆಸಕ್ತಿಯಿಂದ ಗಮನಿಸಿಸುತ್ತಾ ಆ ಶಿಲ್ಪಾಕೃತಿಯು ಯಾವ ಭಂಗಿಯಲ್ಲಿ ನಿಂತಿತ್ತೋ ಅದೇ ಭಂಗಿಯಲ್ಲಿ ಮತ್ತೆ ಮತ್ತೆ ನಿಲ್ಲುವ ಪ್ರಯತ್ನ ಮಾಡಿದಳು. ಮಿಸೆಸ್ ಮಲೀಕ್‍ಳ ಎದೆಗೆ ಚೂರಿ ಹಾಕಿದಂತಾಯಿತು. ಜೊತೆಗೆ ವಾಸ್ತುಶಿಲ್ಪಿಯೂ ಅವಳನ್ನು ನೋಡಿ ಗಹಗಹಿಸಿ ನಕ್ಕಂತೆ ಭಾಸವಾಯಿತು.  
    ವೆರಾಂಡದಲ್ಲಿದ್ದ ಪ್ರತಿಮೆಗೆ ಎದುರಾಗಿ ನಿಂತು ಅದರಂತೆಯೇ ತನ್ನ ನವಿರಾದ ಕೂದಲನ್ನು ತನ್ನ ಮರೂನ್ ಸೀರೆಯ ಸೆರಗಿನಲ್ಲಿ ಅಡಗಿಡಿಸುತ್ತಾ, ಮತ್ತೆ ಮತ್ತೆ ಅದನ್ನೇ ಅನುಕರಿಸುತ್ತಾ ಮಿಸೆಸ್ ಮಲೀಕ್‍ಳ ಸೊಸೆ ಆಳುಗಳಿಗೆ ತಮ್ಮ ಜೊತೆ ಬಾಡಿಗೆ ಕಾರಿನಲ್ಲಿ ತಂದಿದ್ದ ಲಗೇಜ್‍ನ್ನು ತೆಗೆದಿರಿಸಲು ಹೇಳಿದಳು.
    ಕಾರಿನಿಂದ ಲಗೇಜ್‍ನ್ನು ತೆಗಿದಿರಿಸಲಾಯಿತು. ಟ್ಯಾಕ್ಷಿ ಡ್ರೈವರ್ನಿಗೆ ಬಾಡಿಗೆಯನ್ನು ಕೊಟ್ಟು ಕಳಿಸಿದರು. ಮಿಸೆಸ್ ಮಲೀಕ್ ಹಿಂದಿನ ಸೀಟಿನಲ್ಲಿ ಕುಳಿತೇ ಇದ್ದಳು. ಒಂದು ಕ್ಷಣ ಆಕೆಗೆ ತಾನು ಮುಳುಗಿಹೋಗುತ್ತಿರುವೆನೇನೋ ಎನ್ನುವಂತೆ ಭಾಸವಾಯಿತು.
    ಅವಳ ಮಗ ಮನೆಯೊಳಗೆ ಹೋದನು. ಅವಳ ಸೊಸೆ ಅವನನ್ನು ಹಿಂಬಾಲಿಸಿದಳು. ಅವರು ಒಂದಾದ ಮೇಲೊಂದು ಲೈಟ್‍ಗಳನ್ನು ಹಾಕುತ್ತಾ ಬಂದರು. ಎಲ್ಲ ಕೋಣೆಗಳು ವಿದ್ಯುದೀಪಗಳಿಂದ ಬೆಳಗಿ ಇಡಿ ಮನೆ ಝಗಮಗಿಸತೊಡಗಿತು. ಮಿಸೆಸ್ ಮಲೀಕ್ ಮನೆಯ ಸೌಂದರ್ಯವನ್ನು ನೋಡಿ ಆಶ್ಚರ್ಯಪಟ್ಟಳು. ಅವಳಿನ್ನೂ ಕಾರಿನ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದಳು. ಉದ್ವೇಗದಲ್ಲಿದ್ದ ಅವಳ ಮಗನಿಗಾಗಲಿ, ಸೊಸೆಗಾಗಲಿ ಕಾರಿನ ಹಿಂದಿನ ಬಾಗಿಲನ್ನು ತೆಗೆಯುವದು ನೆನಪಾಗಿರಲಿಲ್ಲ. ಮಿಸೆಸ್ ಮಲೀಕ್‍ಳಿಗೆ ತಾನು ಮರೆತು ಹೋದ ಲಗೇಜ್‍ನಂತಾಗಿರುವನೇನೋ ಎಂಬಂತೆ ಭಾಸವಾಯಿತು.
    ಒಂದು ಘಂಟೆ ಸರಿಯಿತು. ಮತ್ತೊಂದು ಘಂಟೆ ಕಳೆಯಿತು. ಇದ್ದಕ್ಕಿದ್ದಂತೆ ಮಿಸೆಸ್ ಮಲೀಕ್‍ಳ ಮಗನಿಗೆ ತನ್ನ ತಾಯಿಯ ನೆನಪಾಯಿತು. ತಕ್ಷಣ ಪೋರ್ಟಿಕೋಕ್ಕೆ ಓಡಿಹೋಗಿ ಕಾರಿನ ಬಾಗಿಲನ್ನು ತೆಗೆದನು.
    “ಸಂಜೆಯ ಪ್ರಯಾಣ ಸಾಮಾನ್ಯವಾಗಿ ನನಗೆ ನಿದ್ರೆ ತರಿಸುತ್ತದೆ.” ಅವನ ತಾಯಿ ನಿದ್ರೆಯಲ್ಲಿರುವಂತೆ ನಟಿಸಿದಳು. ಅಷ್ಟೊತ್ತಿಗಾಗಲೇ ಅವಳ ಸೊಸೆಯೂ ಪೋರ್ಟಿಕೋಕ್ಕೆ ಬಂದಿದ್ದಳು. ಎಲ್ಲರೂ ಖುಷಿಯಿಂದ ನಗುತ್ತಿದ್ದರು. ಮಿಸೆಸ್ ಮಲೀಕ್‍ಳ ಸೊಸೆ ಮತ್ತೊಮ್ಮೆ ವೆರಾಂಡದಲ್ಲಿದ್ದ ಪ್ರತಿಮೆಯ ಎದುರು ನಿಂತು ಅದರಂತೆಯೇ ತನ್ನ ಕೂದಲನ್ನು ತನ್ನ ಮರೂನ್ ಸೀರೆಯ ಸೆರಗಿನಲ್ಲಿ ಅಡಗಿಸಿಡುತ್ತಾ ಅದನ್ನು ಅನುಕರಣೆ ಮಾಡಿದಳು.
    ಒಳಬರುತ್ತಿದ್ದಂತೆ ಆಳುಗಳು ಟೇಬಲ್ ಮೇಲೆ ಊಟವನ್ನು ಸಿದ್ಧಪಡಿಸಿಟ್ಟಿದ್ದರು. “ನಾನು ಊಟ ಮಾಡೊಲ್ಲ. ನಂಗೆ ಹಸಿವಿಲ್ಲ.” ಮಿಸೆಸ್ ಮಲೀಕ್ ಹೇಳಿದಳು. “ನಾನು ಮಲಗಬೇಕು.”
    “ಹಾಗಾದರೆ ನಿಮ್ಮ ಕೋಣೆಗೆ ಹೋಗಿ ಮಲಗಿ” ಮಿಸೆಸ್ ಮಲೀಕ್‍ಳ ಸೊಸೆ 10x8 ಕೋಣೆಯನ್ನು ತೋರಿಸುತ್ತಾ ಹೇಳಿದಳು. ಮಿಸೆಸ್ ಮಲೀಕ್‍ಳ ಮಗ ಆಕೆಯ ಕೈಯನ್ನು ಹಿಡಿದುಕೊಂಡು ಹೋಗಿ ಅವಳ ಕೋಣೆಗೆ ಬಿಟ್ಟುಬಂದ.  
    “.........ಸಧ್ಯಕ್ಕೆ ಅದು ನಮ್ಮತ್ತೆ ಕೋಣೆಯಾಗಿರಲಿ......ಆಕೆ ಹೋದನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ..........” ಮಿಸೆಸ್ ಮಲೀಕ್‍ಳಿಗೆ ಈ ಹಿಂದೆ ತಾನು ವಾಸ್ತುಶಿಲ್ಪಿಯೊಂದಿಗೆ ಆಡಿದ ಮಾತುಗಳು ಹಾಸಿಗೆಯ ಮೇಲೆ ಉರುಳಿದಂತೆ ಅವಳ ಕಿವಿಯಲ್ಲಿ ಪ್ರತಿಧ್ವನಿಸಿದವು.
    ಅಷ್ಟರಲ್ಲಿ ಅವಳ ಸೊಸೆಯ ದನಿ ಕೇಳಿಸಿತು, “ಮನೆಯನ್ನೇನೋ ತುಂಬಾ ಚನ್ನಾಗಿ ಪ್ಲ್ಯಾನ್ ಮಾಡಿ ಕಟ್ಟಲಾಗಿದೆ. ಆದರೆ ಇದಕ್ಕೆ ಸ್ಟೋರ್-ರೂಮೊಂದರ ಕೊರತೆಯಿದೆ. ನಂಗೆ ಸ್ವಲ್ಪ ದೊಡ್ಡದಾಗಿರುವ ಸ್ಟೋರ್-ರೂಮೇ ಬೇಕು. ಈಗ ಪರ್ವಾಗಿಲ್ಲ. ಅದಿಲ್ಲದೆ ಹೇಗೋ ಮ್ಯಾನೇಜ್ ಮಾಡ್ತೀನಿ. ಆದರೆ ಮುಂದಕ್ಕೆ ಹೇಗೂ ಅತ್ತೆಯವರ ಕೋಣೆ ಇದ್ದೇ ಇದೆಯೆಲ್ಲ? ಅದನ್ನೇ ನಾವು  ಸ್ಟೋರ್-ರೂಮಾಗಿ ಉಪಯೋಗಿಸ್ಕೊಂಡರಾಯಿತು.” 
    ಮಿಸೆಸ್ ಮಲೀಕ್‍ಳಿಗೆ ಈ ಮಾತುಗಳನ್ನು ಕೇಳಿ ತಳವಿಲ್ಲದ ಬಾವಿಯಲ್ಲಿ ಆಳಕ್ಕೆ ಇನ್ನೂ ಆಳಕ್ಕೆ ಮುಳುಗಿ ಹೋಗುತ್ತಿರುವಂತೆ ಭಾಸವಾಯಿತು.  

    ಮೂಲ: ಕುನ್ವರ್ ಸಿಂಗ್ ದುಗ್ಗಾಲ್
    ಕನ್ನಡಕ್ಕೆ: ಉದಯ್ ಇಟಗಿ

    ವಿದಾಯ

  • ಮಂಗಳವಾರ, ಅಕ್ಟೋಬರ್ 01, 2013
  • ಬಿಸಿಲ ಹನಿ

  • ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು. ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ರಾತ್ರಿ ಹತ್ತು ಘಂಟೆ ಆಗುವದಕ್ಕೆ ಕೆಲವೇ ಕೆಲವು ನಿಮಿಷಗಳುಮಾತ್ರ ಬಾಕಿಯಿದ್ದವು. ಮೈ ಕೊರೆಯುವಂಥ ಚಳಿ! ಜೊತೆಗೆ ಸಣ್ಣಗೆ ಬೀಸುತ್ತಿದ್ದ ಶೀತಗಾಳಿ ಶೀಘ್ರದಲ್ಲಿಯೇ ತನ್ನೊಟ್ಟಿಗೆ ಮಳೆಯನ್ನೂ ಸಹ ಹೊತ್ತು ತರುವ ಮುನ್ಸೂಚನೆಯನ್ನುನೀಡಿದ್ದರಿಂದ ಅಲ್ಲಿ ಒಂದೇ ಒಂದು ನರಪಿಳ್ಳಿಯೂ ಇರಲಿಲ್ಲ. ಹೆಚ್ಚುಕಮ್ಮಿ ಎಲ್ಲ ರಸ್ತೆಗಳು ನಿರ್ಜನವಾಗಿದ್ದವು.
    ತನ್ನ ದೊಣ್ಣೆಯನ್ನು ಗಾಂಭೀರ್ಯದಿಂದ ಆ ಕಡೆಯಿಂದ-ಈ ಕಡೆಗೆ ಈ ಕಡೆಯಿಂದ-ಆ ಕಡೆಗೆ ಕೌಶಲ್ಯಮಯವಾಗಿ ತಿರುಗಿಸುತ್ತಾ, ಬಾಗಿಲಿನಿಂದ ಬಾಗಿಲಿಗೆ ನಡೆಯುತ್ತಾ, ಆಗೊಮ್ಮೆ ಈಗೊಮ್ಮೆ ತನ್ನ ಎರಡೂ ಕಣ್ಣುಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಯಿಸುತ್ತಾ, ತನ್ನ ಕಟ್ಟುಮಸ್ತಾದ ದೇಹದೊಂದಿಗೆ ಗತ್ತಿನಿಂದ ನಡೆಯುತ್ತಿದ್ದ ಆ ಪೋಲಿಸ್ ಅಧಿಕಾರಿಯು ನಗರದ ಕಳ್ಳಕಾಕರನ್ನು ಸೆದೆಬಡಿದು ಶಾಂತಿಯನ್ನು ಕಾಪಾಡಲು ಬಂದಿರುವ ರಕ್ಷಕನಂತೆ ಕಂಡುಬಂದನು. ಅಷ್ಟೊತ್ತಿಗಾಗಲೇ ಬಹುತೇಕ ಎಲ್ಲ ಅಂಗಡಿ-ಮುಗ್ಗಟ್ಟುಗಳು ಬಾಗಿಲು ಮುಚ್ಚಿದ್ದವು. ಆದರೆ ಅಲ್ಲೊಂದು ಇಲ್ಲೊಂದು ಸಿಗಾರು ಅಂಗಡಿಯೋ ಅಥವಾ ಟೀ ಅಂಗಡಿಯೋ ಮಾತ್ರ ಇನ್ನೂ ಬಾಗಿಲು ತೆರೆದೇ ಇದ್ದವು.
    ಹೀಗೇ ನಡೆಯುತ್ತಾ ನಡೆಯುತ್ತಾ ಆ ಪೋಲಿಸ್ ಅಧಿಕಾರಿಯು ಒಂದು ನಿರ್ಧಿಷ್ಟ ಬೀದಿಗೆಬಂದನು. ಅಲ್ಲಿ ಅರ್ಧ ದಾರಿಯನ್ನು ಕ್ರಮಿಸಿರಲಿಕ್ಕಿಲ್ಲ, ಹಠಾತ್ತಾಗಿ ತನ್ನ ನಡಿಗೆಯನ್ನು ನಿಧಾನಗೊಳಿಸಿದನು. ಅಲ್ಲಿ ರಸ್ತೆಗಂಟಿಕೊಂಡಂತೆ ಹಾರ್ಡ್‍ವೇರ್ ಸ್ಟೋರೊಂದು ಇತ್ತು. ಅದರ ಬಾಗಿಲ ಬಳಿ ವ್ಯಕ್ತಿಯೊಬ್ಬ ತನ್ನ ಬಾಯಲ್ಲಿ ಇನ್ನೂ ಹೊತ್ತಿಸದ ಸಿಗಾರೊಂದನ್ನಿಟ್ಟುಕೊಂಡು ಗೋಡೆಗೊರಗಿಕೊಂಡು ನಿಂತುಕೊಂಡಿದ್ದು ಕಾಣಿಸಿತು. ಆ ಬಾಗಿಲ ಬಳಿ ಕತ್ತಲು ಆವರಿಸಿದ್ದರಿಂದ ಅಲ್ಲಿ ಸರಿಯಾಗಿ ಏನೂ ಕಾಣುತ್ತಿರಲಿಲ್ಲ! ಆದರೂ ಆ ಪೋಲಿಸ್ ಅಧಿಕಾರಿಯು ಅನುಮಾನದಿಂದ ಆ ವ್ಯಕ್ತಿ ಯಾರಿರಬಹುದೆಂದು ತಿಳಿದುಕೊಳ್ಳಲು ಅವನ ಬಳಿ ಬಂದನು. ಅಷ್ಟರಲ್ಲಿ ಆ ವ್ಯಕ್ತಿಯು ತನ್ನ ಸಿಗಾರನ್ನು ಹೊತ್ತಿಸಲು ಕಡ್ಡಿಯೊಂದನ್ನು ಗೀರಿದ. ಹಾಗೆ ಕಡ್ಡಿ ಗೀರಿದಾಗ ಉಂಟಾದ ಮಂದ ಬೆಳಕಲ್ಲಿ ಆ ವ್ಯಕ್ತಿಯ ಪೇಲವ ಮುಖ, ಚೌಕ-ದವಡೆ, ಚೂಪು ಕಂಗಳು ಹಾಗೂ ಅವನ ಹುಬ್ಬಿನ ಮೇಲೆ ಉಂಟಾದ ಗಾಯದ ಗುರುತುಗಳು ಆ ಪೋಲಿಸಿನವನಿಗೆ ಸ್ಪಷ್ಟವಾಗಿ ಕಾಣಿಸಿತು. ಅವನು ಸ್ಕಾರ್ಫಿನ್ನೊಂದನ್ನು ಸುತ್ತಿಕೊಂಡಿದ್ದು ಅದಕ್ಕೆ ದೊಡ್ದದಾದ ವಜ್ರದ ಹರಳೊಂದನ್ನು ಅಡ್ಡಾದಿಡ್ಡಿಯಾಗಿ ಸಿಕ್ಕಿಸಲಾಗಿತ್ತು.    
    ಪೋಲೀಸಿನವನನ್ನು ನೋಡುತ್ತಿದ್ದಂತೆಯೇ ಆ ವ್ಯಕ್ತಿಯೇ “ಇಟ್ಸ್ ಆಲ್ ರೈಟ್ ಆಫಿಸರ್.” ಎಂದು ಆ ಅಧಿಕಾರಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾ ಮಾತನಾಡಿದ “ನಾನಿಲ್ಲಿ ನನ್ನ ಗೆಳೆಯನಿಗಾಗಿ ಕಾಯುತ್ತಿರುವೆ. ಇದು ಇಪ್ಪತ್ತು ವರ್ಷಗಳ ಹಿಂದೆ ನಾವಿಬ್ಬರೂ ಮಾಡಿಕೊಂಡ ಒಪ್ಪಂದ. ನಿಮಗೆ ತಮಾಷೆ ಅನಿಸುತ್ತಿರಬೇಕಲ್ಲವೇ? ಸರಿ, ನಾನೇ ನಿಮಗೆ ಎಲ್ಲವನ್ನು ಬಿಡಿಸಿ ಹೇಳುತ್ತೇನೆ. ಬಹಳ ವರ್ಷಗಳ ಹಿಂದೆ ಈ ಸ್ಟೋರ್ ಇದ್ದ ಜಾಗದಲ್ಲಿಯೇ ಒಂದು ರೆಸ್ಟೋರೆಂಟ್ ಇತ್ತು. ಆ ರೆಸ್ಟೋರೆಂಟ್ ಹೆಸರು ‘ಬಿಗ್ ಜೋ ಬ್ರ್ಯಾಡಿ’ ರೆಸ್ಟೋರೆಂಟ್ ಎಂದು.
    “ಹೌದು, ನಿಜ! ಆದರೆ ಐದು ವರ್ಷಗಳ ಹಿಂದೆಯಷ್ಟೇ ಅದನ್ನು ಕೆಡುವಲಾಯಿತು.” ಪೋಲೀಸಿನವನು ಹೇಳಿದ.
    “ಇವತ್ತಿಗೆ ಸರಿಯಾಗಿ ಇಪ್ಪತ್ತು ವರ್ಷಗಳಾದವು ನಾನು ಮತ್ತು ಜಿಮ್ಮಿ ವೆಲ್ಸ್ ಈ ಜೋ ಬ್ರ್ಯಾಡಿ ರೆಸ್ಟೋರೆಂಟ್‍ನಲ್ಲಿ ಊಟ ಮಾಡಿ” ಆ ವ್ಯಕ್ತಿ ಹೇಳಿದ. ಜಿಮ್ಮಿ ವೆಲ್ಸ್! ಜಿಮ್ಮಿ ವೆಲ್ಸ್ ನನ್ನ ಗೆಳೆಯ!ಜೀವದ ಗೆಳೆಯ!! ಒಳ್ಳೆ ಸಂಗಾತಿ! ಒಳ್ಳೆ ಮನುಷ್ಯ! ನಾವಿಬ್ಬರೂ ಹುಟ್ಟಿ ಬೆಳೆದಿದ್ದು ಇಲ್ಲೇ ನ್ಯೂಯಾರ್ಕಿನಲ್ಲಿ. ಹೆಚ್ಚುಕಮ್ಮಿ ಅಣ್ಣ-ತಮ್ಮಂದಿರಂತೆಯೇ ಬೆಳೆದೆವು. ನನಗಾಗ ಹದಿನೆಂಟು, ಜಿಮ್ಮಿಗೆ ಇಪ್ಪತ್ತು. ಮಾರನೆಯ ದಿನ ನಾನು ನನ್ನ ಅದೃಷ್ಟವನ್ನು ಅರಸಿ ಪಶ್ಚಿಮದ ಕಡೆ ಹೋಗಬೇಕಿತ್ತು. ಆದರೆ ಜಿಮ್ಮಿಯನ್ನು ನ್ಯೂಯಾರ್ಕಿನಿಂದ ಹೊರಗೆಳೆಯಲು ಸಾಧ್ಯವಿರಲಿಲ್ಲ. ಏಕೆಂದರೆ ಅವನ ಪಾಲಿಗೆ ನ್ಯೂಯಾರ್ಕ್‍ವೊಂದೇ ಒಂದು ಈ ಭೂಮಿಯ ಮೇಲಿದ್ದ ಸ್ಥಳವಾಗಿತ್ತು. ವೆಲ್, ಆವತ್ತು ರಾತ್ರಿ ನಾವಿಬ್ಬರು ನಿರ್ಧರಿಸಿದೆವು; ಇವತ್ತಿಗೆ ಸರಿಯಾಗಿ ಇಪ್ಪತ್ತು ವರ್ಷಗಳ ನಂತರ ನಾವಿಬ್ಬರು ಏನೇ ಆಗಿದ್ದರೂ, ಹೇಗೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಪರ್ವಾಗಿಲ್ಲ ಇದೇ ಸಮಯಕ್ಕೆ ಇದೇ ಜಾಗದಲ್ಲಿ ಮತ್ತೆ ಇಬ್ಬರೂ ಬಂದು ಭೇಟಿಯಾಗಬೇಕೆಂದು. ಆ ಇಪ್ಪತ್ತು ವರ್ಷಗಳಲ್ಲಿ ನಾವಿಬ್ಬರು ಮಾಡುವ ಕೆಲಸಗಳು ನಮ್ಮ-ನಮ್ಮ ಹಣೆಬರಹ ಮತ್ತು ಅದೃಷ್ಟವನ್ನು ಖುಲಾಯಿಸಲಿದ್ದವು.”
    “ವೇರಿ ಇಂಟರೆಸ್ಟಿಂಗ್!” ಪೋಲಿಸಿನವನು ಹೇಳಿದ. “ನಿಮ್ಮಿಬ್ಬರ ಭೇಟಿಯಲ್ಲಿ ತುಂಬಾ ದಿನಗಳ ಅಂತರವಿದೆ. ಅಂದಹಾಗೆ, ನೀನು ಇಲ್ಲಿಂದ ಹೋದ ನಂತರ ನಿನ್ನ ಗೆಳೆಯ ಏನಾದ? ಅವನ ಜೊತೆ ನೀನು ಸಂಪರ್ಕದಲ್ಲಿರಲಿಲ್ವೆ?”
    “ವೆಲ್, ಸ್ವಲ್ಪ ಕಾಲ ನಾವು ಒಬ್ಬರಿಗೊಬ್ಬರು ಪತ್ರ ಬರೆಯುವದರ ಮೂಲಕ ಸಂಪರ್ಕದಲ್ಲಿದ್ದೆವು.” ಆ ವ್ಯಕ್ತಿ ಹೇಳುತ್ತಾ ಹೋದ. “ಆದರೆ ಆಮೇಲೇನಾಯ್ತೋ ಗೊತ್ತಿಲ್ಲ ಒಂದೆರೆಡು ವರ್ಷಗಳ ನಂತರ ಇದ್ದಕ್ಕಿದ್ದಂತೆ ನಮ್ಮಿಬ್ಬರ ನಡುವೆ ಸಂಪರ್ಕ ಕಡಿದುಹೋಯಿತು. ಯೂ ಸೀ, ಪಶ್ಚಿಮ ಅನೇಕ ಅವಕಾಶಗಳ ಸಾಗರ! ಹಾಗೆಂದೇ ನಾನು ಅಲ್ಲಿ ಸಿಕ್ಕ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಬಹಳ ಬೇಗನೆ ಮೇಲೆ ಬಂದೆ. ನನ್ನ ಕೆಲಸದಲ್ಲಿ ಬಿಜಿಯಾದೆ. ಆದರೆ ಜಿಮ್ಮಿ ಏನಾದನೋ ಗೊತ್ತಿಲ್ಲ! ಅವನು ಬದುಕಿದ್ದರೆ ಖಂಡಿತ ಇವತ್ತು ನಾನಿರುವಲ್ಲಿಗೆ ಬಂದು ಭೇಟಿ ಮಾಡುತ್ತಾನೆ. ಏಕೆಂದರೆ ಜಿಮ್ಮಿ ತನ್ನ ಸತ್ಯಕ್ಕೆ ಹಾಗೂ ಪ್ರಾಮಾಣಿಕತೆಗೆ ಹೆಸರಾದವನು. ಅವನು ಹಾಗೆಲ್ಲಾ ಮಾತಿಗೆ ತಪ್ಪುವನಲ್ಲ. ಖಂಡಿತ ಈ ದಿನವನ್ನು ಅವನು ಮರೆತಿರುವದಿಲ್ಲ. ನಾನೇನೋ ಸಾವಿರಾರು ಮೈಲಿಗಳಿಂದ ನನ್ನ ಹಳೆ ಗೆಳೆಯನನ್ನು ನೋಡಲು ಇಷ್ಟು ದೂರ ಬಂದಿದ್ದೇನೆ. ಅವನೂ ಬಂದರೆ ಚನ್ನಾಗಿರುತ್ತದೆ. ಅಲ್ವಾ?” 
    ಕಾಯುತ್ತಿದ್ದ ವ್ಯಕ್ತಿ ಸಮಯ ನೋಡಲು ತನ್ನ ವಾಚನ್ನು ಹೊರತೆಗೆದನು. ಅದರ ಡಯಲ್ ಸಣ್ಣಸಣ್ಣ ವಜ್ರದ ಹರಳುಗಳಿಂದ ಅಲಂಕೃತಗೊಂಡಿತ್ತು.
    “ಹತ್ತು ಘಂಟೆಗೆ ಮೂರು ನಿಮಿಷ ಮಾತ್ರ ಬಾಕಿಯಿದೆ.” ಹಾಗಂತಾ ಅವನು ಹೇಳಿದ. “ನಾವಿಬ್ಬರೂ ಈ ರೆಸ್ಟೋರೆಂಟ್‍ನ ಬಾಗಿಲಿನಿಂದ ಒಬ್ಬರೊನ್ನೊಬ್ಬರು ಅಗಲಿದಾಗ ಸಮಯ ಸರಿಯಾಗಿ ರಾತ್ರಿ ಹತ್ತು ಘಂಟೆಯಾಗಿತ್ತು.”
    “ಗುಡ್, ಹಾಗಾದರೆ ಪಶ್ಚಿಮ ದೇಶ ನಿನ್ನನ್ನು ಚನ್ನಾಗಿಯೇ ನೋಡಿಕೊಂಡಿದೆ ಅಂತಾಯಿತು. ಅಲ್ವೇ?” ಪೋಲಿಸ್ ಅಧಿಕಾರಿ ಕೇಳಿದ. 
    “ಯೆಸ್, ಚನ್ನಾಗಿಯೇ ನೋಡಿಕೊಂಡಿದೆ. ಒಳ್ಳೆ ಕೆಲಸ. ಒಳ್ಳೆ ಸಂಬಳ. ಒಳ್ಳೆ ದುಡ್ಡು ಗಳಿಸಿದ್ಡೇನೆ. ಆದರೆ ಜಿಮ್ಮಿ? ಬೇಕಾದರೆ ಬೆಟ್ ಕಟ್ಟುತ್ತೇನೆ, ಜಿಮ್ಮಿ ಖಂಡಿತ ನನ್ನ ಅರ್ಧದಷ್ಟು ಕೂಡಾ ಸಂಪಾದಿಸಿರುವದಿಲ್ಲ. ಏಕೆಂದರೆ ಅವನು ಮುಂಚಿನಿಂದಲೂ ಒಂಥರಾ ಪೆದ್ದು! ಬುದ್ಧಿಯನ್ನು ಒಂಚೂರು ಉಪಯೋಗಿಸುತ್ತಿರಲಿಲ್ಲ! ಒಳ್ಳೆ ಸಂಗಾತಿಯೇನೋ ಹೌದು! ಆದರೆ ಕತ್ತೆ ಚಾಕರಿ ಮಾಡುವಂಥವನು! ಹೀಗಿದ್ದರೆ ಹೇಗೆ ತಾನೇ ಮೇಲೆ ಬರಲು ಸಾಧ್ಯ? ಆದರೆ ನಾನು ಹಾಗಲ್ಲ. ನನ್ನ ಜಾಣತನವನ್ನುಪಯೋಗಿಸಿಕೊಂಡು ಸದಾ ನನ್ನನ್ನು ನಾನು ಸ್ಪರ್ಧೆಗೊಡ್ಡಿಕೊಂಡು ಸವಾಲುಗಳನ್ನು ಎದುರಿಸುತ್ತಾ ಜೀವನದಲ್ಲಿ ಮುಂದೆ ಬಂದೆ. ನ್ಯೂಯಾರ್ಕಿನಲ್ಲಿ ಜನ ಒಂದು ಕೆಲಸಕ್ಕೆ ಅಂಟಿಕೊಂಡುಬಿಟ್ಟರೆ ಅದಕ್ಕೇ ಅಂಟಿಕೊಂಡುಬಿಡುತ್ತಾರೆ. ಆದರೆ ಪಶ್ಚಿಮದಲ್ಲಿ ಹಾಗಲ್ಲ. ಅಲ್ಲಿ ಬದುಕಲು ಕನಿಷ್ಟ ಎರಡು ಕೆಲಸಗಳನ್ನಾದರೂ ಮಾಡಬೇಕು. ಹೆಜ್ಜೆ ಹೆಜ್ಜೆಗೂ ಸ್ಪರ್ಧೆಯಿರುತ್ತದೆ. ದಿನದ ಇಪ್ಪತ್ನಾಲ್ಕು ಘಂಟೆಯೂ ಎಚ್ಚರದಿಂದ ಕೆಲಸ ಮಾಡಬೇಕು. ಪಶ್ಚಿಮದಲ್ಲಿ ಜೀವನ ಮಾಡುವದೆಂದರೆ ಎರಡು ಕತ್ತಿಯ ಅಲುಗಿನ ಮೇಲೆ ನಡೆದಂತೆ!”
    ಪೋಲೀಸಿನವನು ತನ್ನ ದೊಣ್ಣೆಯನ್ನು ತಿರುಗಿಸುತ್ತಾ ಒಂದೆರೆಡು ಹೆಜ್ಜೆ ಮುಂದೆ ಬಂದನು.
    “ಐ ವಿಲ್ ಬಿ ಆನ್ ಮೈ ವೇ. ಹೋಪ್ ಯುವರ್ ಫ್ರೆಂಡ್ ಕಮ್ಸ್ ಆನ್ ಟೈಮ್.”
    ಥ್ಯಾಂಕ್ಯೂ ಆಫಿಸರ್.... ಒಂದು ವೇಳೆ ಹೇಳಿದ ಸಮಯಕ್ಕೆ ಅವನು ಬರದೇ ಹೋದರೆ ಇನ್ನೂ ಒಂದರ್ಧ ಘಂಟೆ ಹೆಚ್ಚೇ ಕಾಯುತ್ತೇನೆ...... ಜಿಮ್ಮಿ ಬದುಕಿದ್ದರೆ ಖಂಡಿತ ನನ್ನನ್ನು ಭೇಟಿ ಮಾಡಲು ಬಂದೇ ಬರುತ್ತಾನೆ........ಕೊಟ್ಟ ಮಾತಿಗೆ ಅವನು ತಪ್ಪುವನಲ್ಲ..... ನೀವಿನ್ನು ಹೊರಡಿ ಆಫಿಸರ್!”
    “ಗುಡ್ ನೈಟ್ ಸರ್,” ಎಂದು ಹೇಳುತ್ತಾ ಪೋಲೀಸಿನವನು ಮತ್ತೆ ಗಸ್ತಿನ ಮೇಲೆ ಹೊರಟನು.
    ಅಲ್ಲೀಗ ಸಣ್ಣದಾಗಿ ತುಂತುರು ಮಳೆ ಬೀಳತೊಡಗಿತ್ತು. ಜೊತೆಗೆ ಅಷ್ಟೊತ್ತಿನಿಂದ ಸಣ್ಣಗೆ ಬೀಸುತ್ತಿದ್ದ ಕುಳಿರ್ಗಾಳಿ ಇದೀಗ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿತ್ತು. ಕುಳಿರ್ಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ತಾವು ಹಾಕಿಕೊಂಡಿದ್ದ ಉದ್ದನೆಯ ಕೋಟುಗಳ ಜೇಬುಗಳಲ್ಲಿ ಕೈಗಳನ್ನಿಟ್ಟುಕೊಂಡು ಅವಸರವಸರವಾಗಿ ಮನೆಯತ್ತ ಹೆಜ್ಜೆಹಾಕುತ್ತಿದ್ದರು. ಆದರೆ ಹಾರ್ಡ್‍ವೇರ್ ಅಂಗಡಿಯ ಬಾಗಿಲ ಬಳಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಸಾವಿರಾರು ಮೈಲಿಗಳ ದೂರದಿಂದ ಬಂದಿದ್ದ ವ್ಯಕ್ತಿ ಮಾತ್ರ ಸಿಗಾರನ್ನು ಸೇದುತ್ತಾ ಅವನಿಗಾಗಿ ಕಾಯುತ್ತಾ ಅಲ್ಲೇ ನಿಂತುಕೊಂಡನು.
    ಅವನು ಹಾಗೆ ಕಾಯುತ್ತಾ ನಿಂತು ಇಪ್ಪತ್ತು ನಿಮಿಷಗಳು ಆಗಿದ್ದವೇನೋ! ರಸ್ತೆಯ ಆ ಬದಿಯಿಂದ ಎತ್ತರದ ವ್ಯಕ್ತಿಯೊಬ್ಬ ತನ್ನ ಎರಡೂ ಕಿವಿಗಳನ್ನು ತನ್ನ ಓವರ್ ಕೋಟಿನ ಕಾಲರಿನಿಂದ ಮುಚ್ಚಿಕೊಂಡು ಈ ಬದಿಗೆ ದಾಟಿ ಬರುತ್ತಿರುವದು ಕಾಣಿಸಿತು. ಅವನು ನೇರವಾಗಿ ಹಾರ್ಡವೇರ್ ಅಂಗಡಿಯ ಬಳಿ ಕಾಯುತ್ತಿದ್ದ ವ್ಯಕ್ತಿಯೆಡೆಗೆ ನಡೆದು ಬಂದನು.  
    “ನೀನು.....ನೀನು....ನೀನು ಬಾಬ್ ಅಲ್ವಾ?”  ಅವನು ಅನುಮಾನಿಸುತ್ತಾ ಕೇಳಿದ.
    “ನೀನು ಜಿಮ್ಮಿ ವೆಲ್ಸ್ ಅಲ್ವಾ?” ಬಾಗಿಲ ಬಳಿಯಿದ್ದ ವ್ಯಕ್ತಿ ಖುಶಿಯಿಂದ ಕಿರುಚಿದ.
    ಬ್ಲೆಸ್ ಮೈ ಹಾರ್ಟ್!” ಎಂದು ಆಗಷ್ಟೇ ಬಂದ ವ್ಯಕ್ತಿಯು ಉದ್ಗರಿಸುತ್ತಾ ತನ್ನ ಎರಡೂ ತೋಳುಗಳಲ್ಲಿ ಅವನನ್ನು ತಬ್ಬಿಕೊಂಡನು.“ಹಾಯ್ ಜಿಮ್ಮಿ. ನನಗೆ ತುಂಬಾ ಖುಶಿಯಾಗುತ್ತಿದೆ. ನನಗೆ ಗೊತ್ತಿತ್ತು ನೀನು ಬದುಕಿದ್ದರೆ ಖಂಡಿತ ಸಿಕ್ಕೇ ಸಿಗುತ್ತೀಯಾ ಅಂತಾ! ವೆಲ್, ವೆಲ್. ವೆಲ್ - ಟ್ವೆಂಟಿ ಇಯರ್ಸ್ ಈಸ್ ಎ ಲಾಂಗ್ ಟೈಮ್! ನಾವಿಬ್ಬರು ಹಳೆ ಗೆಳೆಯರೇನೋ ಸರಿ. ಆದರೆ ನಮ್ಮ ಗೆಳೆತನಕ್ಕಿನ್ನೂ ಹಳೆತನ ಬಂದಿಲ್ಲ. ಬಾ ಇಬ್ಬರೂ ಇಲ್ಲೇ ಎಲ್ಲಾದರು ಒಂದು ಕಡೆ ಕುಳಿತುಕೊಂಡು ಮಾತಾಡೋಣ. ಇಲ್ಲಿದ್ದ ಹಳೆಯ ರೆಸ್ಟೋರೆಂಟ್ ಈಗ ಹೊರಟುಹೋಗಿದೆ. ಅದು ಇರಬೇಕಿತ್ತು, ಬಾಬ್! ಇದ್ದಿದ್ದರೆ ನಾವು ಮತ್ತೊಮ್ಮೆ ಅಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬಹುದಿತ್ತು! ಒಂದಿಷ್ಟು ಗುಂಡು ಹಾಕುತ್ತಾ ಕಾಡುಹರಟೆ ಹೊಡೆಯಬಹುದಿತ್ತು! ಇರಲಿ, ಅಂದಹಾಗೆ ಪಶ್ಚಿಮ ದೇಶ ನಿನ್ನನ್ನು ಹೇಗೆ ನೋಡಿಕೊಂಡಿದೆ?”
    “ಭೇಷ್, ನಾನು ಕೇಳಿದ್ದೆಲ್ಲವನ್ನೂ ನನಗೆ ಕೊಟ್ಟಿದೆ. ಸುಖವಾಗಿದ್ದೇನೆ. ಅಂದಹಾಗೆ, ನೀನು ತುಂಬಾ ಬದಲಾಗಿದ್ದೀಯಾ ಜಿಮ್ಮಿ. ನೀನು ಮೊದಲಿಗಿಂತ ಎರಡು ಇಂಚಿನಷ್ಟು ಹೆಚ್ಚು ಎತ್ತರ ಬೆಳೆದವನ ತರ ಕಾಣುತ್ತಿದ್ದೀಯಾ.ಅಲ್ವಾ?”
    “ಓ, ಅದಾ? ಹೌದು, ನನಗೆ ಇಪ್ಪತ್ತು ತುಂಬಿದ ಮೇಲೆ ನಾನು ಸ್ವಲ್ಪ ಎತ್ತರಕ್ಕೆ ಬೆಳೆದಿದ್ದೇನೆ.”
    “ನ್ಯೂಯಾರ್ಕಿನಲ್ಲಿ ಚನ್ನಾಗಿದ್ದೀಯಾ ಜಿಮ್ಮಿ?”
    “ಪರ್ವಾಗಿಲ್ಲ. ಇಲ್ಲೇ ಸಿಟಿ ಡಿಪಾರ್ಟ್‍ಮೆಂಟೊಂದರಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಒಳ್ಳೆ ಜೀವನಕ್ಕೇನೂ ಮೋಸವಿಲ್ಲ. ಕಮಾನ್ ಬಾಬ್! ಹೀಗೇ ಒಂದಷ್ಟು ಸುತ್ತಾಡಿಕೊಂಡು ಬರೋಣ. ಎಲ್ಲಾದರು ಕುಳಿತುಕೊಂಡು ಮನಸಾರೆ ಒಂದಷ್ಟು ಹರಟೆ ಹೊಡೆಯೋಣ.ನಮ್ಮ ಗೆಳೆತನವನ್ನೊಮ್ಮೆ ಮೆಲುಕು ಹಾಕುತ್ತಾ ಹಳೆಯ ನೆನಪುಗಳಲ್ಲಿ ತೇಲಿ ಹೋಗೋಣ.”
    ಇಬ್ಬರೂ ತೋಳಿನಲ್ಲಿ ತೋಳುಹಾಕಿಕೊಂಡು ರಸ್ತೆಯುದ್ದಕ್ಕೂ ನಡೆಯತೊಡಗಿದರು. ಪಶ್ಚಿಮದಿಂದ ಬಂದವನ ಧಿಮಾಕು ತನ್ನ ಯಶಸ್ಸಿನಿಂದಾಗಿ ಮತ್ತಷ್ಟು ಹೆಚ್ಚಿತ್ತು. ಅವನು ತನ್ನ ವೃತ್ತಿ ಹಾಗೂ ಬದುಕಿನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾಹೋದ. ಇನ್ನೊಬ್ಬ ಆಸಕ್ತಿಯಿಂದ ಕೇಳಿಸಿಕೊಂಡನು.
    ಮಾತಾಡುತ್ತಾ ಇಬ್ಬರೂ ಮೂಲೆಯಲ್ಲಿದ್ದ ಡ್ರಗ್ ಸ್ಟೋರ್ ಹತ್ತಿರ ಬಂದರು. ಅಲ್ಲಿ ವಿದ್ಯುದ್ದೀಪಗಳು ಝಗಮಗಿಸುತ್ತಿದ್ದವು. ಅವುಗಳ ಝಳಪಿನಲ್ಲಿ ಇಬ್ಬರೂ ಏಕಕಾಲಕ್ಕೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಥಟ್ಟನೆ ಪಶ್ಚಿಮದವನು ಒಂದು ಕ್ಷಣ ನಿಂತು ತನ್ನ ತೋಳನ್ನು ಬಿಡಿಸಿಕೊಂಡನು.
    “ನೀನು....ನೀನು ಜಿಮ್ಮಿ ವೆಲ್ಸ್ ಅಲ್ಲ.” ಅವನು ಅನುಮಾನದಿಂದ ಹೇಳಿದನು. “ಇಪ್ಪತ್ತು ವರ್ಷಗಳು ಸುದೀರ್ಘ ಸಮಯವೇನೋ ಹೌದು! ಆದರೆ ಯಾವ ಸುದೀರ್ಘ ಸಮಯವೂ ಒಬ್ಬ ವ್ಯಕ್ತಿಯ ಚೂಪಾದ ಮೂಗನ್ನು ಚಪ್ಪಟೆ ಮೂಗನ್ನಾಗಿ ಬದಲಾಯಿಸಲು ಸಾಧ್ಯವಿಲ್ಲ. ಅದಕ್ಕೆ ಅಂಥ ಶಕ್ತಿಯೂ ಇಲ್ಲ. ಹೇಳು, ನೀನ್ಯಾರು?”
    “ಕೆಲವು ಸಾರಿ ಪರಿಸ್ಥಿತಿಗನುಗುಣವಾಗಿ ಒಳ್ಳೆ ವ್ಯಕ್ತಿ ಕೂಡಾ ಕೆಟ್ಟವನಾಗಬಲ್ಲ.” ಎಂದು ಹೇಳುತ್ತಾ ಎತ್ತರದ ವ್ಯಕ್ತಿಯು ಬೇಡಿಯೊಂದನ್ನು ಹೊರತೆಗೆದನು. ಯೂ ಆರ್ ಅಂಡರ್ ಆರೆಸ್ಟ್, ಬಾಬ್.ನೀನು ಪೋಲೀಸ್‍ರಿಗೆ ಬೇಕಾದ ವ್ಯಕ್ತಿ. ಇಡಿ ಶಿಕ್ಯಾಗೋ ನೀನು ನಮ್ಮ ದಾರಿ ತಪ್ಪಿಸಿದ್ದೀಯಾ ಅಂತಾ ಹೇಳಿತ್ತು. ಆದರೆ ಈಗ ಅದೇ ಶಿಕ್ಯಾಗೋ ನಮಗೆ ತಂತಿಯೊಂದನ್ನು ಕಳಿಸಿ ನೀನು ಇಲ್ಲಿಗೆ ಬಂದಿರುವದರ ಬಗ್ಗೆ ಸುಳಿವು ಕೊಟ್ಟಿತು. ಈಗ ನೀನು ಶಿಕ್ಯಾಗೋ ಪೋಲೀಸ್‍ರ ಅತಿಥಿ. ಸುಮ್ಮನೆ ಕೊಸರಾಡದೆ ನನ್ನ ಜೊತೆ ಬಾ. ಇಲ್ಲವಾದರೆ ಮರ್ಯಾದೆ ಇರುವದಿಲ್ಲ. ಹಾಂ, ಪೋಲಿಸ್ ಠಾಣೆಗೆ ಹೋಗುವ ಮುನ್ನ ನಾನು ನಿನಗೆ ಕೊಡಬೇಕಾಗಿರುವ ಚೀಟಿಯೊಂದು ಇದೆ. ಅದನ್ನು ಇಲ್ಲೇ ಈ ದೀಪಗಳ ಬೆಳಕಲ್ಲಿ ಓದಿ ಬಿಡು. ಅಂದಹಾಗೆ ಅದನ್ನು ಕೊಟ್ಟವರು ಬೇರೆ ಯಾರೂ ಅಲ್ಲ; ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸಿನವನು. ಅವನ ಹೆಸರು ವೆಲ್ಸ್…..ಜಿಮ್ಮಿ ವೆಲ್ಸ್.”

    ಪಶ್ಚಿಮದವನು ಮಡಿಚಿದ್ದ ಆ ಸಣ್ಣ ಚೀಟಿಯನ್ನು ಅವಸರವಸರವಾಗಿ ಬಿಡಿಸಿ ಓದತೊಡಗಿದ. ಓದಲು ಆರಂಭಿಸಿದಾಗ ಸ್ಥಿರವಾಗಿದ್ದ ಆತನ ಕೈಗಳು ಓದಿ ಮುಗಿಸುವಷ್ಟರಲ್ಲಿ ನಡುಗತೊಡಗಿದ್ದವು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು:
    ಬಾಬ್,
    ನಾನು ನಿಗದಿಪಡಿಸಿದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದೆ. ಹಾರ್ಡ್‍ವೇರ್ ಸ್ಟೋರ್ ಬಳಿ ನೀನು ನಿಂತಿದ್ದನ್ನು ನೋಡಿ ನಾನು ನಿನ್ನ ಬಳಿ ಬರುವದಕ್ಕೂ, ನೀನು ನಿನ್ನ ಸಿಗಾರನ್ನು ಹೊತ್ತಿಸಲು ಬೆಂಕಿಕಡ್ಡಿ ಗೀರುವದಕ್ಕೂ ಸರಿಹೋಯಿತು. ಹಾಗೆ ಗೀರಿದಾಗ ಉಂಟಾದ ಮಂದ ಬೆಳಕಿನಲ್ಲಿ ನಿನ್ನ ಮುಖ ನನಗೆ ಸ್ಪಷ್ಟವಾಗಿ ಕಾಣಿಸಿತು. ದುರಾದೃಷ್ಟವಶಾತ್, ಅದು ಶಿಕ್ಯಾಗೋ ಪೋಲೀಸ್‍ರು ಹುಡುಕುತ್ತಿದ್ದ ಕ್ರಿಮಿನಲ್‍ನೊಬ್ಬನ ಮುಖವಾಗಿತ್ತು. ನೀನೊಬ್ಬ ದೊಡ್ಡ ಕ್ರಿಮಿನಲ್‍ ಎಂದು ತಿಳಿದು ನನಗೆ ಬಹಳ ಖೇದವಾಯಿತು. ನಾನು ಆ ಕೂಡಲೇ ನಿನ್ನನ್ನು ಬಂಧಿಸಬೇಕೆಂದುಕೊಂಡೆ. ಆದರೆ ಅದೇಕೋ ಹಾಗೆ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಹಾಗಾಗಿ ನಾನು ಅಲ್ಲಿಂದ ಹೊರಟು ಸಾದಾ ಉಡುಪಿನಲ್ಲಿರುವ ಬೇರೊಬ್ಬನನ್ನು ಈ ಕೆಲಸ ಮಾಡಲು ಕಳಿಸಿಕೊಟ್ಟೆ. ಒಬ್ಬ ಪೋಲಿಸ್ ಅಧಿಕಾರಿಯಾಗಿ ನಾನು ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು. ಗುಡ್ ಬೈ! 
    “ಜಿಮ್ಮಿ” 


    ಮೂಲ ಇಂಗ್ಲೀಷ್: ಓ ಹೆನ್ರಿ
    ಕನ್ನಡಕ್ಕೆ: ಉದಯ್ ಇಟಗಿ


     
    ಜುಲೈ 28. 2013 ರ ‘ಉದಯವಾಣಿ’ಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ.