'ಶೇಕ್ಸ್‌ಪಿಯರನ ಶ್ರೀಮತಿ’- ಆಸಕ್ತಿ ಕೆರಳಿಸಿದ ಸಮರ್ಥ ಪ್ರಯೋಗ. ಇದು ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗವಾಗಿತ್ತು. ಪ್ರಪ್ರಥಮವಾಗಿ ಶೇಕ್ಸ್‌ಪಿಯರನಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.
‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್‌ಪಿಯರನಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ್ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್.
ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಷೇಕ್ಸ್ ಪಿಯರ್ ನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ನೋಡುಗನ ಊಹೆಯನ್ನೂ ಮೀರಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಷೇಕ್ಸ್ ಪಿಯರ್, ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಮನಂಬುಗುವ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ.
ಅವಳಿಗಿಂತ ಎಂಟುವರ್ಷ ಕಿರಿಯನಾದ ಹದಿನೆಂಟರ ಯುವಕ ಷೇಕ್ಸ್ ಪಿಯರ್ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ. ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ. ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು..ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ, ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ.
‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಗಳನ್ನು ಮಾತ್ರ ಹೈಲೈಟ್ ಮಾಡುತ್ತಾರೆಯೇ ವಿನಃ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ.
ಷೇಕ್ಸ್ ಪಿಯರ್ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ – ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಷೇಕ್ಸ್ ಪಿಯರನ್ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದೂ ಆಪ್ತವಾಗದ ಗಂಡ ಎಂದೂ ತನ್ನ ಕನಸಿನಲ್ಲೂ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ.
ನಾಟಕ ನೋಡಿದ ಮೇಲೆ ಜಗ ಮೆಚ್ಚಿದ ಶೇಕ್ಸ್‌ಪಿಯರನಪ್ರತಿಭೆ- ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್‌ಪಿಯರನಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ.
ಶೇಕ್ಸ್‌ಪಿಯರನಹೆಂಡತಿಯಾಗಿ ಹೃದಯಸ್ಪರ್ಶೀ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಪಾಟೀಲರು ಅಭಿನಂದನೀಯರು. ಉತ್ತಮ ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ.ಎನ್) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಒಟ್ಟಾರೆ ನಾಟಕದ ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!!
ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?!!!
-ವೈ.ಕೆ.ಸಂಧ್ಯಾ ಶರ್ಮ