Demo image Demo image Demo image Demo image Demo image Demo image Demo image Demo image

ಮಳೆಯಲ್ಲಿ ಸಿಕ್ಕ ಅವರಿಬ್ಬರು. .........

  • ಶನಿವಾರ, ಜುಲೈ 20, 2013
  • ಬಿಸಿಲ ಹನಿ

  • ಇದು ಬದೂನ್‍(ಬಿರುಗಾಳಿ)ಗಳ ಸಮಯ. ಅಂದರೆ ಇಲ್ಲೀಗ ಚಳಿಗಾಲ ಮುಗಿದು ಬೇಸಿಗೆ ಕಾಲಿಡುತ್ತಿದೆ ಅಂತಾ ಅರ್ಥ. ಚಳಿಗಾಲ ಮುಗಿದು ಬೇಸಿಗೆಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿಹಾಕಿಬಿಡುತ್ತವೆ. ಜೊತೆಗೆ ನಮ್ಮ ಮೂಗಿನೊಳಕ್ಕೆ ಹೊಕ್ಕು ಉಸಿರಾಟಕ್ಕೂ ತೊಂದರೆಯುನ್ನುಂಟು ಮಾಡುತ್ತವೆ. ಆಗೆಲ್ಲಾ ನಾವು ಬೇಗಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವೆ. ಹೊತ್ತು ಗೊತ್ತಿಲ್ಲದೆ ಬರುವ ಈ ಬದೂನ್‍ಗಳು ಮನೆ, ಮನುಷ್ಯರನ್ನೆಲ್ಲಾ ಧೂಳು ಧೂಳಾಗಿಸುತ್ತವೆ. ಒಂದೊಂದು ಸಾರಿ ಮನೆ ಮಾಳಿಗೆಯ ಮೇಲೆ ಸಿಕ್ಕಿಸಿದ ದೊಡ್ಡದೊಡ್ಡ ಟೀವಿ ಡಿಶ್‍ಗಳು ಸಹ ಗಾಳಿಯಲ್ಲಿ ಹಾರಿಕೊಂಡು ಎತ್ತೆತ್ತಲೋ ಹೋಗಿ ಬೀಳುವದುಂಟು. ಈ ಸಮಯದಲ್ಲಿಯೇ ವಿವಿಧ ಆಕಾರ, ಆಕೃತಿಗಳೊಂದಿಗೆ ಬಿದ್ದುಕೊಂಡಿರುವ ಸಹರಾ ಮರಳು ಗುಡ್ಡಗಳು ಗಾಳಿಯ ಹೊಡೆತಕ್ಕೆ ಸಿಕ್ಕಿ ಇನ್ನೆಲ್ಲೋ ಹೋಗಿ ಇನ್ಯಾವುದೋ ಆಕಾರ, ಆಕೃತಿಗಳನ್ನು ತಾಳಿ ನಿಲ್ಲುತ್ತವೆ. ನಾನಾಗ ಅಂದುಕೊಳ್ಳುತ್ತೇನೆ; ಈ ಮರಳು ಗುಡ್ಡಗಳು ಹಾಗೂ ಮನುಷ್ಯರ ನಡುವೆ ಅಂಥ ವ್ಯತ್ಯಾಸವೇನಿಲ್ಲ ಅಂತಾ. ಈ ಮರಳು ಗುಡ್ಡಗಳಂತೆ ಮನುಷ್ಯ ಕೂಡಾ ಬದುಕಿನ ಹೊಡೆತಗಳಿಗೆ ಸಿಕ್ಕಿ ತನ್ನ ಸ್ಥಾನ ಹಾಗೂ ಆಕಾರವನ್ನು ಬದಲಾಯಿಸಿ ಏನೇನೋ ಆಗಿ ನಿಲ್ಲುತ್ತಾನೆ.


    ಈ ಬಿರುಗಾಳಿಗಳ ಬೆನ್ನ ಹಿಂದೆಯೇ ಇಲ್ಲಿ ಮಳೆಗಾಲ ಶುರುವಾಗುತ್ತದೆ. ಮಳೆಗಾಲವೆಂದರೆ ನಮ್ಮಲ್ಲಿ ಧೋ ಧೋ ಎಂದು ಸುರಿದು ರಸ್ತೆಯ ಮೇಲೆಲ್ಲಾ ನೀರು ಹರಿದಾಡುತ್ತದಲ್ಲ? ಅಂಥ ಮಳೆಯಲ್ಲ. ಬರೀ ಐದು ನಿಮಿಷ ಪಟಪಟ ಅಂತಾ ಹನಿದು ನಿಲ್ಲುವ ಜೋರು ಮಳೆ ಇಲ್ಲವೇ ಒಂದೆರೆಡು ನಿಮಿಷ ಜುಮುರು ಜುಮುರಾಗಿ ಸುರಿದು ನಿಲ್ಲುವ ಸಣ್ಣ ಮಳೆ ಮಾತ್ರ. ಲಿಬಿಯಾದ ಈ ಭಾಗ (ದಕ್ಷಿಣ) ಬಹುತೇಕ ಮರಭೂಮಿಯಾಗಿದ್ದರಿಂದ ಇಲ್ಲಿ ಮಳೆ ಬೀಳುವದೇ ಅಪರೂಪ. ಆದರೆ ಲಿಬಿಯಾದ ಉತ್ತರ ಭಾಗದಲ್ಲಿ ಅಂದರೆ ಟ್ರಿಪೋಲಿ, ಬೆಂಗಾಜಿ, ಮಿಶ್ರಟಾ, ಸಬ್ರತಾ ಮುಂತಾದ ಊರುಗಳಲ್ಲಿ ಆಗಾಗ ಹೇಳಿಕೊಳ್ಳುವಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಮಳೆ ಬೀಳುವದುಂಟು. ಮೊನ್ನೆ ಇಲ್ಲೊಂದು (ಘಾಟ್‍ನಲ್ಲಿ) ಜೋರು ಮಳೆ ಬಿತ್ತು. ಜೋರು ಮಳೆಯೆಂದರೆ ಮಾಮೂಲಿಗಿಂತ ಸ್ವಲ್ಪ ದೊಡ್ದದಾಗಿಯೇ ಬಿದ್ದಿದ್ದರಿಂದ ನಮಗೆ ಅದೇ ಜೋರು ಮಳೆಯಾಗಿ ಕಾಣಿಸಿತು. ಏಕೆಂದರೆ ಇಲ್ಲಿ ಜೋರು ಮಳೆ ಬೀಳುವದೇ ಅಪರೂಪ! ಘಾಟ್‍ನ ನನ್ನ ಆರು ವರ್ಷದ ವಾಸದ ಅವಧಿಯಲ್ಲಿ ಈ ರೀತಿ ಜೋರಾಗಿ ಮಳೆ ಬಿದ್ದಿದ್ದು ಎರಡನೇ ಬಾರಿಯೋ, ಮೂರನೇ ಬಾರಿಯೋ? ಅಷ್ಟೆ. ಇಲ್ಲೇನಿದ್ದರೂ ಬರೀ ಜುಮುರು ಮಳೆ ಮಾತ್ರ! ಅದೂ ಕೇವಲ ಐದಾರು ನಿಮಿಷಗಳು! ಈ ಕಾರಣಕ್ಕಾಗಿಯೇನೋ ಇಲ್ಲಿನವರ ಮತ್ತು ಮಳೆಯ ನಡುವಿನ ನೆಂಟಸ್ತಿಕೆ ಅಷ್ಟಕ್ಕಷ್ಟೆ! ಅವರಿಗೆ ಮಳೆಯ ಮಧುರ ನೆನಪುಗಳಾಗಲಿ, ಅದರೊಂದಿಗೆ ಹುಟ್ಟುವ ಬೆಚ್ಚನೆಯ ಕನಸುಗಳಾಗಲಿ ಇಲ್ಲವೇ ಇಲ್ಲ ಎನ್ನಬಹುದು. ಆದರೆ ನಮಗೆ ಮಳೆಯೆಂದರೆ ಏನೆಲ್ಲಾ! ಮಳೆಯೆಂದರೆ ಜಡಗಟ್ಟಿದ ಮನಸ್ಸನ್ನು ಬಡಿದೆಬ್ಬಿಸುವ ಸಂಜೀವಿನಿ, ಮಳೆಯೆಂದರೆ ಮಧುರ ಪ್ರೀತಿಯ ನೆನಪನ್ನು ಮೆಲಕುಹಾಕುವ ಸಮಯ, ಮಳೆಯೆಂದರೆ ಸಂಗಾತಿಯ ಸನಿಹವ ಬಯಸುವ ಹೊಂಗನಸು, ಮಳೆಯೆಂದರೆ...........ಇನ್ನೂ ಏನೇನೋ! ಒಂದೇ, ಎರಡೇ ಅದರ ಆಲಾಪಗಳು? ನಾನು ಮಳೆ ಬಂದಾಗಲೆಲ್ಲಾ ಆ ಮಳೆಯನ್ನು ಮತ್ತು ಅದರೊಟ್ಟಿಗೇಳುವ ಮಣ್ಣಿನ ವಾಸನೆಯನ್ನು ಸವಿಯಲೆಂದೇ ಹೊರಗೆ ಬಂದು ನಿಲ್ಲುತ್ತೇನೆ. ನಿಂತಂತೆ ಮಳೆಯ ನೆನಪಿನ ಆಲಾಪಗಳು ಕಿವಿಯಲ್ಲಿ ಗುಂಯ್ಯಗುಡತೊಡಗುತ್ತವೆ. ಜುಮುರು ಮಳೆಗೆ ಒಂದು ಆಲಾಪವಾದರೆ ಬಿರುಸು ಮಳೆಗೆ ಹತ್ತು ಹಲವು! ಮೊನ್ನೆ ಕೂಡಾ ಹೀಗೆ ಮಳೆಯಲ್ಲಿ ನಿಂತು ಅದನ್ನು ಆಸ್ವಾದಿಸುವಾಗ ಫಕ್ಕನೆ ‘ಅವರಿಬ್ಬರು’ ನೆನಪಾದರು. ಅವರಿಬ್ಬರೆಂದರೆ ಇಂಥದೇ ಒಂದು ಬಿರುಸು ಮಳೆಯಲ್ಲಿ ಒಮ್ಮೆ ಟ್ರಿಪೋಲಿಯಲ್ಲಿ ನಾನು ಅಸಹಾಯಕನಾಗಿ ನಿಂತಾಗ ನನಗೆ ಸಹಾಯವನ್ನು ನೀಡಿದ, ತಮ್ಮ ಮಾನವೀಯತೆಯ ಮೂಲಕ ನನ್ನ ಮನಸ್ಸನ್ನು ತಾಕಿದ ಮನುಷ್ಯರು! ಅವರ ಬಗ್ಗೆ ನಿಮಗೂ ಹೇಳಲೇಬೇಕೆನಿಸಿ ಈ ಸಾರಿ ಅವರ ಬಗ್ಗೆ ಬರೆಯುತ್ತಿದ್ದೇನೆ.

    ಅದು 2010 ರ ಜೂನ್ ಕೊನೆವಾರ ಇರಬೇಕು. ಆ ವರ್ಷ ನನ್ನ ಹೆಂಡತಿ ಮತ್ತು ಮಗಳು ಎರಡನೆಯ ಬಾರಿಗೆ ಲಿಬಿಯಾಕ್ಕೆ ಬಂದಿಳಿದಿದ್ದರು. ಆ ವರ್ಷ ಅವರಿಗೆ ವೀಸಾ ತುಂಬಾ ತಡವಾಗಿ ಸಿಕ್ಕಿತ್ತು. ಜೊತೆಗೆ ಜೂನ್ ಕೊನೆವಾರ ಮುಗಿದು ಜುಲೈ 1 ಕ್ಕೆ ನನ್ನ ಹೆಂಡತಿಯ ಕಾಲೇಜು ಆರಂಭವಾಗುತ್ತಿದ್ದುದರಿಂದ ಆಕೆ ಆ ದಿನ ತಾನು ಖಡ್ಡಯವಾಗಿ ಅಲ್ಲಿರಲೇ ಬೇಕೆಂದು ಹೊರಟೇ ಬಿಟ್ಟಳು. ನನಗಿಲ್ಲಿ ರಜೆ ಆರಂಭವಾಗಲು ಇನ್ನೂ ಒಂದು ತಿಂಗಳ ಬಾಕಿಯಿದ್ದುದರಿಂದ ನಾನು ಅವರೊಟ್ಟಿಗೆ ಹೋಗುವ ಹಾಗಿರಲಿಲ್ಲ. ಹಾಗಾಗಿ ನಾನು ಅವರಿಬ್ಬರನ್ನೇ ಕಳಿಸಲು ನಿರ್ಧರಿಸಿದೆ. ಆ ಪ್ರಕಾರ ಅವರಿಬ್ಬರನ್ನು ಟ್ರಿಪೋಲಿಯವರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನ ಹತ್ತಿಸಿ ಬಂದರಾಯಿತೆಂದುಕೊಂಡು ಹೊರಟೆ.

    ನಿಮಗೆ ಗೊತ್ತಿರಲಿ ಲಿಬಿಯಾದ ಯಾವುದೇ ಭಾಗದಲ್ಲಿ ನೀವು ಪ್ರಯಾಣಿಸಬೇಕಾದರೆ ನಿಮ್ಮ ಬಳಿ ಖಡ್ಡಾಯವಾಗಿ ಪಾಸ್ಪೋರ್ಟ್ ಹಾಗೂ ಹೆಲ್ತ್ ಕಾರ್ಡ್ (HIV ಮತ್ತು ಹೆಪಟೈಟಸ್ ಖಾಯಿಲೆಗಳನ್ನು ಪರೀಕ್ಷೆ ಮಾಡಿಸಿ ತೆಗೆದುಕೊಂಡ ಕಾರ್ಡು) ಇರಲೇ ಬೇಕು. ಈ ಕಾಯಿದೆ ನಮಗೆ ಮಾತ್ರವಲ್ಲ ಲಿಬಿಯನ್‍ರಿಗೂ ಸಹ ಅನ್ವಯಿಸುತ್ತದೆ. ಅವರು ಎಲ್ಲಿಗೆ ಹೋಗಬೇಕಾದರೂ ತಮ್ಮೊಂದಿಗೆ ‘ಪತಾಕಾ’ (ಐಡೆಂಟಿಟಿ ಕಾರ್ಡ್) ಮತ್ತು ಹೆಲ್ತ್ ಕಾರ್ಡನ್ನು ಒಯ್ಯಲೇಬೇಕು. ಒಂದು ವೇಳೆ ಒಯ್ಯದಿದ್ದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ ಇಲ್ಲವೇ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ವಿದೇಶಿಯರಾದರೆ ಇನ್ನೂ ಹೆಚ್ಚಿನ ದಂಡ ಕೊಡಬೇಕಾಗುತ್ತದೆ ಮತ್ತು ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಪ್ರತಿ ನೂರು ಕಿಲೋಮೀಟರಿಗೊಂದು ಚೆಕ್‍ಪೋಸ್ಟ್ ಇರುವದರಿಂದ ಅಲ್ಲಿ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುತ್ತಾರೆ. ಇದಕ್ಕೆ ಕಾರಣವೂ ಇದೆ. ಘಾಟ್‍ನ ಸಹರಾ ಮರಭೂಮಿ ನೈಜರ್, ನೈಜಿರಿಯಾ, ಗನಾ, ಗಾಂಬಿಯಾ ಮುಂತಾದ ವಿದೇಶಿಯರಿಗೆ ಅನೇಕ ಕಳ್ಳದಾರಿಗಳನ್ನು ಕಲ್ಪಿಸಿಕೊಟ್ಟಿದೆ. ಅವರು ಈ ಕಳ್ಳದಾರಿಗಳ ಮೂಲಕ ಲಿಬಿಯಾದೊಳಕ್ಕೆ ನಡೆದುಕೊಂಡು ಬರುತ್ತಾರೆ. ಇಲ್ಲಿ ’ಅಕಾಮಾ’ (ರೆಸಿಡೆನ್ಸ್ ವೀಸಾ) ತೆಗೆದುಕೊಳ್ಳದೆ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಎಂಥದೋ ಒಂದು ಕೆಲಸವನ್ನು ಹುಡುಕಿಕೊಂಡು ಅಕ್ರಮವಾಗಿ ಬದುಕತೊಡಗುತ್ತಾರೆ. ಮತ್ತೆ ಕೆಲವರು ಇಲ್ಲಿಂದ ಅದ್ಹೇಗೋ ಟ್ರಿಪೋಲಿಗೆ ಹೋಗಿ ಅಲ್ಲಿಂದ ತಮ್ಮ ಪಾಸ್ಪೋರ್ಟ್‍ವೊಂದರಿಂದಲೇ ಸಮುದ್ರ ಮಾರ್ಗವಾಗಿ ಇಟಲಿಗೋ, ರೋಮ್‍ಗೋ, ಫ್ರಾನ್ಸಿಗೋ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಅಕ್ರಮವಾಗಿ ಬದುಕುವ ಇಂಥವರಿಂದ ಸಮಾಜ ಘಾತುಕ ಕೆಲಸಗಳು ಜರಗುವ ಸಂಭವನೀಯತೆಯಿರುವದರಿಂದ ಇವರ ಮೇಲೆ ಸದಾ ಒಂದು ಹದ್ದಿನ ಕಣ್ಣಿಟ್ಟಿರುತ್ತಾರೆ ಹಾಗೂ ಇಂಥವರನ್ನು ಮಟ್ಟ ಹಾಕಲೆಂದೇ ಇಷ್ಟೆಲ್ಲಾ ನಿಯಮಗಳು ಜಾರಿಯಲ್ಲಿವೆ ಎಂದು ಇಲ್ಲಿನವರು ಹೇಳುತ್ತಾರೆ.

    ಲಿಬಿಯಾದ ದಕ್ಷಿಣ ಭಾಗದಲ್ಲಿ ನಮಗೆ ಅಂದರೆ ಭಾರತೀಯರಿಗೆ ಪಾಸ್ಪೋರ್ಟ್ ಇರದಿದ್ದರೂ ಪರ್ವಾಗಿಲ್ಲ ನಾವು ಕೆಲಸ ಮಾಡುವ ಸಂಸ್ಥೆಯಿಂದ ನೀಡಿದ ಐಡೆಂಟಿಟಿ ಕಾರ್ಡ್‍ವೊಂದನ್ನು ತೋರಿಸಿದರೆ ಸಾಕು ನಮಗೆ ಚೆಕ್ ಪೋಸ್ಟ್‍ಗಳಲ್ಲಿ ಮತ್ತು ಹೋಟೆಲ್‍ಗಳಲ್ಲಿ ಸುಲಭವಾಗಿ ಎಂಟ್ರಿ ಸಿಗುತ್ತೆ. ಚೆಕ್ ಪೋಸ್ಟ್‍ಗಳಲ್ಲಿ ಒಂದೊಂದು ಸಾರಿ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುವ ಗೋಜಿಗೆ ಹೋಗುವದಿಲ್ಲ. ಭಾರತೀಯರ ಮೇಲೆ ಅವರಿಗೆ ಅಷ್ಟು ನಂಬಿಕೆ ಮತ್ತು ಗೌರವ! ಆದರೆ ಉತ್ತರ ಭಾಗದಲ್ಲಿ ಹಾಗಲ್ಲ. ಖಡ್ಡಯವಾಗಿ ನಾವು ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡ್‍ಗಳನ್ನು ಹೊಂದಿರಲೇಬೇಕಾಗುತ್ತದೆ. ಅಲ್ಲಿ ಸಹ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚು ತಪಾಸಿಸದೆ ಬರೀ ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡುಗಳನ್ನು ನೋಡಿ ಬಿಟ್ಟು ಬಿಡುತ್ತಾರೆ.

    ಈ ಮೊದಲೇ ಹೇಳಿದಂತೆ ನಾನು, ನನ್ನ ಹೆಂಡತಿ ಮತ್ತು ಮಗಳನ್ನು ಇಂಡಿಯಾಕ್ಕೆ ಕಳಿಸಲು ಘಾಟ್‍ನಿಂದ ಟ್ರಿಪೋಲಿಗೆ ವಿಮಾನದಲ್ಲಿ ಹೊರಟುಬಂದೆ. ಘಾಟ್‍ನಿಂದ ಟ್ರಿಪೋಲಿಗೆ ವಿಮಾನ ಪ್ರಯಾಣ ಕೇವಲ ಒಂದೂವರೆ ಘಂಟೆ ಮತ್ತು ಹೆಚ್ಚಿನ ತಪಾಸಣೆಯನ್ನು ಎದುರಿಸುವ ಪ್ರಮೇಯ ಬೀಳುವದಿಲ್ಲ. ಆದರೆ ರಸ್ತೆ ಮಾರ್ಗದ ಪ್ರಯಾಣ ಸುಮಾರು ಹದಿನೆಂಟು ಘಂಟೆಗಳನ್ನು ತೆಗೆದುಕೊಳ್ಳುವದಲ್ಲದೆ ದಾರಿಯುದ್ದಕ್ಕೂ ಸಾಕಷ್ಟು ತಪಾಸಣೆಯನ್ನು ಎದುರಿಸಬೇಕಾಗುತ್ತದೆ. ಬರುವಾಗ ನಾನು ನನ್ನ ಪಾಸ್ಪೋರ್ಟ್ ತೆಗೆದುಕೊಂಡಿರಲಿಲ್ಲ. ಏಕೆಂದರೆ ಮುಂದಿನ ಇಪ್ಪತ್ತು ದಿನಗಳಲ್ಲಿ ಬೇಸಿಗೆ ರಜೆಯ ಮೇಲೆ ನಾವೆಲ್ಲಾ ಲೆಕ್ಚರರ್ಸ್ ನಮ್ಮ ನಮ್ಮ ದೇಶಗಳಿಗೆ ಹೋಗುತ್ತಿದ್ದುದರಿಂದ ನಮ್ಮ ಪಾಸ್ಪೋರ್ಟ್‍ಗಳನ್ನು ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲು ಯೂನಿವರ್ಷಿಟಿಯವರು ತೆಗೆದುಕೊಂಡಿದ್ದರು. ಹೀಗಾಗಿ ನಾನು ಪಾಸ್ಪೋರ್ಟ್ ಇಲ್ಲದೇ ಬರೀ ಐಡಿ ಕಾರ್ಡ್‍ನೊಂದಿಗೆ ಟ್ರಿಪೋಲಿಗೆ ಹೊರಟು ಬಂದೆ. ನಾನು ನಮ್ಮ ಕಾಲೇಜಿನಿಂದ ’ನನ್ನ ಪಾಸ್ಪೋರ್ಟ್‍ನ್ನು ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲು ಯೂನಿವರ್ಷಿಟಿಯವರು ತೆಗೆದುಕೊಂಡಿದ್ದರಿಂದ ಈ ಪತ್ರವನ್ನೇ ಪಾಸ್ಪೋರ್ಟ್ ಎಂದು ಪರಿಗಣಿಸಿ’ ಎಂದು ಒಂದು ಪತ್ರವನ್ನು ತೆಗೆದುಕೊಂಡಿದ್ದರೂ ಸಾಕಿತ್ತು. ಆದರೆ ನಾನು ಅದ್ಯಾವುದನ್ನು ಮಾಡದೆ ಬರೀ ಐಡಿ ಕಾರ್ಡಿನೊಂದಿಗೆ ಹೊರಟು ಬಂದಿದ್ದೆ. ಮೇಲಾಗಿ ನನ್ನ ಪಾಸ್ಪೋರ್ಟ್ ಇರದಿದ್ದರೇನಂತೆ? ಹೇಗೂ ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್‍ನಲ್ಲಿ ನನ್ನ ಹೆಸರು ಇರುತ್ತದಲ್ಲ? ಅಷ್ಟು ಸಾಕು. ಜೊತೆಗೆ ನನ್ನ ಐಡಿ ಕಾರ್ಡು ಬೇರೆ ಇದೆ. ಇವನ್ನು ತೋರಿಸಿದರೆ ನಡೆಯುತ್ತೆ ಎಂಬ ಹುಂಭ ಧೈರ್ಯದಲ್ಲಿ ಟ್ರಿಪೋಲಿಗೆ ಸಾಯಂಕಾಲ ಆರು ಘಂಟೆಗೆ ಬಂದಿಳಿದೆ.
    ನನ್ನ ಹೆಂಡತಿ ಮತ್ತು ಮಗಳು ಹೋಗುವ ಫ್ಲೈಟ್ ಮಾರನೆಯ ದಿನ ಮಧ್ಯಾಹ್ನ ಮೂರು ಘಂಟೆಗ ಇದ್ದುದರಿಂದ ಆ ದಿನ ನಾವು ಟ್ರಿಪೋಲಿಯ ಹೋಟೆಲ್‍ವೊಂದರಲ್ಲಿ ಉಳಿದುಕೊಳ್ಳುವದು ಅನಿವಾರ್ಯವಾಗಿತ್ತು. ಇಲ್ಲಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಸಬ್ರತಾದಲ್ಲಿನ ನನ್ನ ಸ್ನೇಹಿತ ಸುರೆಂದ್ರನ ಮನೆಗೆ ಹೋಗಬಹುದಾಗಿತ್ತು. ಆದರೆ ಇಲ್ಲಿಂದ ಅಷ್ಟುದೂರ ಹೋಗುವದು ಮತ್ತೆ ಮಾರನೆಯ ದಿನ ತರಾತುರಿಯಲ್ಲಿ ಎದ್ದು ಬರುವದು ನಮಗೆ ಬೇಡವಾಗಿತ್ತು. ಹೀಗಾಗಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆವು. ನಾನವನಿಗೆ ಬೇಕಂತಲೇ ಕಾಲ್ ಕೂಡಾ ಮಾಡಲಿಲ್ಲ. ಮಾಡಿದ್ದಿದ್ದರೆ ಅವನು ತನ್ನ ಮನೆಗೇ ಬರಬೇಕೆಂದು ಒತ್ತಾಯಿಸುವದು ಮತ್ತು ನಾನು ಹೊರಟು ನಿಲ್ಲುವದು ಅನಿವಾರ್ಯವಾಗುತ್ತಿತ್ತು. ಇದ್ಯಾವುದು ಬೇಡವೆಂದೇ ನಾವು ಹೋಟೆಲ್‍ನಲ್ಲಿ ಉಳಿಯಲು ನಿರ್ಧರಿಸಿದೆವು. ಆ ಪ್ರಕಾರ ನಾನು ಮಾಮೂಲಾಗಿ ಉಳಿದುಕೊಳ್ಳುತ್ತಿದ್ದ ಹಾಗೂ ಟ್ರಿಪೋಲಿ ಹಡಗು ನಿಲ್ದಾಣದ ಪಕ್ಕದಲ್ಲಿದ್ದ ಹೋಟೆಲ್‍ಗೆ ಟ್ಯಾಕ್ಷಿಯಲ್ಲಿ ಬಂದಿಳಿದೆ. ಆದರೆ ನನ್ನ ಬಳಿ ಪಾಸ್ಪೋರ್ಟ್ ಇರದಿದ್ದ ಕಾರಣ ಹೋಟೆಲ್ ಮಾಲಿಕ ನಮಗೆ ರೂಮನ್ನು ಕೊಡಲು ನಿರಾಕರಿಸಿದ. ನಾನು ನನ್ನ ಐಡಿ ಕಾರ್ಡನ್ನು ತೋರಿಸಿದೆ. ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್‍ನಲ್ಲಿ ನನ್ನ ಹೆಸರು ಇರುವದನ್ನು ತೋರಿಸಿದೆ. ಪರಿ ಪರಿಯಾಗಿ ಬೇಡಿಕೊಂಡೆ. ಬೇಕಾದರೆ ಒಂದಿಪ್ಪತ್ತು ದಿನಾರಗಳನ್ನು ಹೆಚ್ಚಿಗೆ ಕೊಡುತ್ತೇನೆಂದೆ. ನಮ್ಮ ಡೀನ್‍ಗೆ ಕಾಲ್ ಮಾಡಿ ಅವನ ಜೊತೆ ಮಾತಾಡಿ ಅವನಿಗೆ ರೂಮು ಕೊಡಲು ಹೇಳಿ ಎಂದು ಕೇಳಿಕೊಂಡೆ. ಊಹೂಂ, ಅವ ಯಾವುದಕ್ಕೂ ಜಗ್ಗಲಿಲ್ಲ. ಏನು ಮಾಡಿದರೂ ಕೊಡಲಿಲ್ಲ. “ಪಾಸ್ಪೋರ್ಟ್ ಖಡ್ಡಾಯವಾಗಿರಲೇಬೇಕು, ಇದು ಲಿಬಿಯಾದ ರೂಲು. ರೂಲ್ ವಿರುದ್ಧ ನಾವು ಹೊಗಲಾರೆವು. ಏನಾದರು ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕಾಗುತ್ತದೆ. ಸಾರಿ. ಬೇರೆ ಕಡೆ ಟ್ರೈ ಮಾಡಿ. ಸಿಕ್ಕರೂ ಸಿಗಬಹುದು” ಎಂದು ಹೇಳಿದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಹನಿಯತೊಡಗಿತು. ಸಣ್ಣಗೆ ಶುರುವಾದ ಮಳೆ ಕ್ರಮೇಣ ಜೋರಾಗಿ ಸುರಿಯತೊಡಗಿತು. ಸುಮಾರು ಅರ್ಧ ಘಂಟೆಯಾದರೂ ಮಳೆ ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ನಾನು ಇದನ್ನೇ ನೆಪಮಾಡಿಕೊಂಡು “ಈ ಸುರಿವ ಮಳೆಯಲ್ಲಿ ನಾವು ಇನ್ಯಾವ ಹೋಟೆಲ್ ಹುಡುಕಿಕೊಂಡು ಹೋಗೋಣ. ದಯವಿಟ್ಟು ಇಲ್ಲಿಯೇ ಕೊಡಿ” ಎಂದು ಮತ್ತೊಮ್ಮೆ ಕೇಳಿದೆ. ಊಹೂಂ, ಅವ ಏನು ಮಾಡಿದರೂ ಕರಗಲಿಲ್ಲ. ನಾನು ಅಸಹಾಯಕನಾಗಿ ನಿಂತೆ. ನಮ್ಮ ಸಂದಿಗ್ಧ ಪರಿಸ್ಥಿತಿಯನ್ನು ನೋಡಿ ನನ್ನ ಹೆಂಡತಿ ಅಳತೊಡಗಿದಳು. ಆಗಲೂ ಆತ ಕರಗಲಿಲ್ಲ. ಅಷ್ಟರಲ್ಲಿ ಅದೇ ಹೊಟೆಲ್‍ನಲ್ಲಿ ಉಳಿದುಕೊಂಡಿದ್ದ ಮಧ್ಯ ವಯಸ್ಕ ಹೆಂಗಸೊಬ್ಬಳು ಹೊರಗಿನಿಂದ ಬಂದು ತನ್ನ ರೂಮು ಕೀ ಇಸಿದುಕೊಳ್ಳಲು Receptionist ಬಳಿ ನಡೆದು ಬಂದಳು. ಅಲ್ಲಿ ನನ್ನ ಹೆಂಡತಿ ಅಳುತ್ತಾ ನಿಂತಿರುವದನ್ನು ನೋಡಿ ಏನಾಯಿತೆಂದು Receptionistನನ್ನು ಅರೇಬಿಕ್‍ನಲ್ಲಿ ಕೇಳಿದಳು. ಆತ ಎಲ್ಲ ವಿವರಿಸಿಯಾದ ಮೇಲೆ ನಮ್ಮ ಕಡೆ ತಿರುಗಿ “Hello, Excuse me. How can I help you?” ಎಂದು ಕೇಳಿದಳು. ನಾನು ನಡೆದಿದ್ದೆಲ್ಲವನ್ನೂ ಹೇಳಿದೆ. ಆಕೆ ಕೂಡಾ ಅವನ ಮನವೊಲಿಸಲು ಪ್ರಯತ್ನಿಸಿದಳು. ಪ್ರಯೋಜನವಾಗಲಿಲ್ಲ. ಆಗ ನಾನು ಗೆಳೆಯ ಸುರೇಂದ್ರನ ಮನೆಗೆ ಹೋದರಾಯಿತೆಂದುಕೊಂಡು ಅವನಿಗೆ ಫೋನ್ ಮಾಡಿದೆ. ಆದರೆ ಅವ ಫೋನ್ ತೆಗೆಯಲಿಲ್ಲ. ಮತ್ತೆ ಮತ್ತೆ ಮಾಡಿದೆ. ಊಹೂಂ, ನನ್ನ ದುರಾದೃಷ್ಟಕ್ಕೆ ಅವ ಆ ಸಮಯದಲ್ಲಿ ಫೋನ್ ತೆಗೆಯಲಿಲ್ಲ. ನಾನು ಮತ್ತಷ್ಟು ವಿಚಲಿತನಾಗಿ ನಿಂತೆ. ಆಗ ಆ ಹೆಣ್ಣುಮಗಳು “Don’t worry. I’ll take you to some other hotels. Let’s try your luck. But they may be bit costlier than this hotel. Is that ok with you?” ಎಂದು ಕೇಳಿದಳು. ನಾನಾಗ “ದುಡ್ದು ಎಷ್ಟು ಖರ್ಚಾದರು ಪರ್ವಾಗಿಲ್ಲ. ಒಟ್ಟಿನಲ್ಲಿ ರೂಮೊಂದು ಸಿಕ್ಕರೆ ಸಾಕು” ಎಂದು ಹೇಳಿದೆ. ಈ ಮಧ್ಯ ಗೆಳೆಯ ಸುರೇಂದ್ರನಿಗೆ ಫೋನಾಯಿಸುತ್ತಲೇ ಇದ್ದೆ. ಆದರೆ ಅದೇಕೋ ಅವನು ತೆಗೆಯುತ್ತಿರಲೇ ಇಲ್ಲ. ಬೇರೆ ಹೋಟೆಲ್‍ಗೆ ಹೋದರಾಯಿತೆಂದುಕೊಂಡು ನಮ್ಮ ಲಗೇಜ್ ಎತ್ತಿಕೊಂಡು ರಸ್ತೆಗೆ ಬರುತ್ತಿದ್ದಂತೆ ಆಕೆಯೇ ಹೋಗಿ ಟ್ಯಾಕ್ಷಿ ತೆಗೆದುಕೊಂಡುಬಂದಳು. ಮಳೆ ಸುರಿಯುತ್ತಲೇ ಇತ್ತು. ಆ ಮಳೆಯಲ್ಲಿಯೇ ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲ್‍ಗೆ ಹೋದೆವು. ಅಲ್ಲಿ ಆಕೆ “ನೀವು ಟ್ಯಾಕ್ಶಿಯಲ್ಲೇ ಕೂತಿರಿ. ನಾನು ಡ್ರೈವರ‍್ನೊಂದಿಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ.” ಎಂದು ನಮ್ಮನ್ನು ಕೆಳಗೆ ಇಳಿಯಲು ಬಿಡದೇ ಆಕೆಯೇ ಹೋಗಿ ವಿಚಾರಿಕೊಂಡು ಬಂದಳು. ಅಲ್ಲೂ ಅವರು ಪಾಸ್ಪೋರ್ಟ್ ಇಲ್ಲದವರಿಗೆ ರೂಮು ಕೊಡುವದಿಲ್ಲ ಎಂದು ಹೇಳಿದರು. ನನಗೆ ಆತಂಕ ಹೆಚ್ಚಾಯಿತು. ನಾನು ಮತ್ತೆ ಗೆಳೆಯನಿಗೆ ಫೋನಾಯಿಸಿದೆ. ಪುಣ್ಯಾತ್ಮ ತೆಗೆಯಲೇ ಇಲ್ಲ. “ಇನ್ನೂ ಒಂದಿಷ್ಟು ಹೊಟೆಲ್‍ಗಳಲ್ಲಿ ಕೇಳೋಣ ಇರಿ. ಸಿಕ್ಕರೂ ಸಿಗಬಹುದು.” ಎಂದು ನಮಗೆ ಧೈರ್ಯ ತುಂಬುತ್ತಲೇ ಇನ್ನೊಂದಿಷ್ಟು ಹೋಟೆಲ್‍ಗಳಿಗೆ ಕರೆದುಕೊಂಡು ಹೋದಳು. ಎಲ್ಲ ಕಡೆ ಒಂದೇ ಉತ್ತರ ಬಂತು; ಪಾಸ್ಪೋರ್ಟ್ ಇಲ್ಲದವಿರಿಗೆ ರೂಮು ಕೊಡುವದಿಲ್ಲ ಎಂದು. ನಾನು ಅಕ್ಷರಶಃ ಅಸಹಾಯಕನಾಗಿ ನಿಂತೆ. ನನ್ನ ಆತಂಕ ಇಮ್ಮುಡಿಯಾಯಿತು. ನನ್ನ ಹೆಂಡತಿ ಮತ್ತೆ ಅಳತೊಡಗಿದಳು. ಈ ದೇಶದಲ್ಲಿ ಯಾಕಿಂಥ ಸ್ಟ್ರಿಕ್ಟ್ ರೂಲ್ಸು? ಇದೆಂಥಾ ನಿಯಮಗಳು? ಎಂದು ಶಾಪ ಬೇರೆ ಹಾಕಿದಳು. ಆದರೆ ನಾವು ಆ ನಿಯಮಗಳಿಗೆ ತಲೆಬಾಗದೆ ವಿಧಿಯಿರಲಿಲ್ಲ. ನನ್ನ ಹೆಂಡತಿ ಒಂದೇ ಸಮನೆ ಅಳುವದನ್ನು ನೋಡಿ ಆಕೆ “ದಯವಿಟ್ಟು ಅಳಬೇಡಿ. ನಿಮಗೆ ಎಲ್ಲಾದರೂ ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸುತ್ತೇನೆ. ನಾನು ಬೆಂಗಾಜಿಯವಳು. ನಾನು ಕೆಲಸದ ಮೇಲೆ ಟ್ರಿಪೋಲಿಗೆ ಬಂದು ಈ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೇನೆ. ನನಗೆ ಇಲ್ಲಿ ಯಾರೂ ಫ್ರೆಂಡ್ಸ್ ಆಗಲಿ, ರಿಲೆಟಿವ್ಸ್ ಆಗಲಿ ಇಲ್ಲ. ಇದ್ದಿದ್ದರೆ ನಿಮ್ಮನ್ನು ಅಲ್ಲಿಗೆ ಕಳಿಸಿಕೊಡುತ್ತಿದ್ದೆ. ಆದರೂ ಏನೋ ಒಂದು ವ್ಯವಸ್ಥೆ ಮಾಡುತ್ತೇನೆ. Be positive.” ಎಂದು ನಮಗೆ ಸಮಾಧಾನ ಹೇಳುತ್ತಾ ನಮ್ಮ ಟ್ಯಾಕ್ಷಿ ಡ್ರೈವರ‍್ನೊಂದಿಗೆ ಅದೇನೇನೋ ಅರೇಬಿಕ್‍ನಲ್ಲಿ ಮಾತಾಡಿ ಮತ್ತೆ ನಮ್ಮ ಕಡೆ ತಿರುಗಿ “ಈ ಟ್ಯಾಕ್ಷಿ ಡ್ರೈವರ್ ಮನೆಯಲ್ಲಿ ಉಳಿದುಕೊಳ್ತಿರಾ? ಅವನೂ ಒಪ್ಪಿದ್ದಾನೆ. ನಿಮಗೆ ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.” ಎಂದು ಹೇಳಿದಳು. ಆಗ ಟ್ಯಾಕ್ಷಿ ಡ್ರೈವರ್ “ನಮ್ಮ ಮನೆಗೆ ಬನ್ನಿ. ಅಲ್ಲಿ ಎರಡು ರೂಮುಗಳಿವೆ. ಒಂದು ರೂಮಿನಲ್ಲಿ ನೀವಿರಿ. ಬೆಳಿಗ್ಗೆ ನಾನೇ ನಿಮ್ಮನ್ನು ಏರ್ಪೋರ್ಟ್‍ಗೆ ಡ್ರಾಪ್ ಮಾಡುತ್ತೇನೆ. ನನ್ನ ಹೆಂಡತಿಗೂ ಹೇಳುತ್ತೆನೆ. ಆಕೆ ಖಂಡಿತ ಒಪ್ಪುತ್ತಾಳೆ. ನೀವೇನು ಆತಂಕ ಪಡಬೇಕಾಗಿಲ್ಲ.” ಎಂದು ಹೇಳುತ್ತಿದ್ದಂತೆ ಅವನ ಹೃದಯ ವೈಶಾಲ್ಯಕ್ಕೆ ನಮ್ಮಿಬ್ಬರ ಕಣ್ಣುಗಳು ಒದ್ದೆಯಾದವು. ಯಾರೆಂದು ಸರಿಯಾಗಿ ಗೊತ್ತಿರದ ನಮ್ಮಂತ ಅಪರಿಚಿತರನ್ನು ತನ್ನ ಮನೆಗೆ ಬಂದು ಇರಿ ಎಂದು ಹೇಳುತ್ತಿದ್ದಾನಲ್ಲ ಇವನು ಅದೆಂಥ ದೊಡ್ದ ವ್ಯಕ್ತಿಯಾಗಿರಬೇಕು? ಟ್ರಿಪೋಲಿಯಂಥ ಮಹಾನಗರದಲ್ಲಿ ಇನ್ನೂ ಇಂಥ ಜನರಿದ್ದಾರೆಯೇ? ಮಾನವೀಯ ಮೌಲ್ಯಗಳು ಇನ್ನೂ ಉಳಿದುಕೊಂಡಿವೆಯೇ? ಎಂದು ಅಚ್ಚರಿಪಡುತ್ತಿರುವಾಗಲೇ ಆಕೆ ಮತ್ತೆ “Yes, you can stay with him. No doubt, he is a good person. Moreover, you have no other go. Think positively” ಎಂದು ಹೇಳುತ್ತಾ ನಮ್ಮ ಆತಂಕವನ್ನು ದೂರಮಾಡಿದಳು. ನಮಗೂ ಬೆರೆ ದಾರಿ ಇರಲಿಲ್ಲ. ಅವನು ಅಷ್ಟೆಲ್ಲಾ ಭರವಸೆಯನ್ನು ಕೊಟ್ಟ ಮೇಲೂ ಅವನು ಹೇಗೋ ಏನೋ ಎಂದು ಯೋಚಿಸುತ್ತಾ ಕುಳಿತುಕೊಳ್ಳುವದರಲ್ಲಿ ಅರ್ಥವಿಲ್ಲ. ಮೇಲಾಗಿ ಅವನನ್ನು ಬಿಟ್ಟರೆ ಗತಿಯಿರಲಿಲ್ಲ. ಆದದ್ದಾಗಲಿ ಅವನೊಂದಿಗೆ ಹೋಗುವದೇ ಒಳ್ಳೆಯದೆಂದು ನಿರ್ಧರಿಸಿದೆವು. ಆಗ ಘಂಟೆ ರಾತ್ರಿ ಎಂಟನ್ನು ದಾಟಿತ್ತು. ಅಷ್ಟರಲ್ಲಿ ಗೆಳೆಯ ಸುರೇಂದ್ರನ ಫೋನ್ ಬಂತು. ಆತ ತನ್ನ ಫೋನ್‍ನ್ನು ಮನೆಯಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದರಿಂದ ನಮ್ಮ ಫೋನ್‍ನ್ನು ತೆಗೆಯಲಿಲ್ಲ ಎಂದು ಹೇಳಿದ. ಸಧ್ಯ ಸಿಕ್ಕನಲ್ಲ ಎಂದು ಖುಷಿಯಾಯಿಯಿತು. ನಾವು ನಮ್ಮ ಪರಿಸ್ಥಿತಿಯನ್ನು ವಿವರಿಸಿದೆವು. ಅವನು ಈ ಕೂಡಲೇ ಹೊರಟು ಬನ್ನಿ ಎಂದು ಹೇಳಿದ. ನಮಗೆ ಹೋದ ಉಸಿರು ಮರಳಿ ಬಂದಂತಾಯಿತು.


    ಇನ್ನು ನಾವು ಟ್ಯಾಕ್ಷಿ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಸಬ್ರತಾಗೆ ಹೋಗಬೇಕಿತ್ತು. ಆಕೆ ಟ್ಯಾಕ್ಷಿ ನಿಲ್ದಾಣದವರೆಗೆ ನಿಮ್ಮನ್ನು ಬಿಡುತ್ತೇನೆ ಬನ್ನಿ ಎಂದು ನಾವು ಬಂದ ಟ್ಯಾಕ್ಷಿಯಲ್ಲೇ ಕರೆದುಕೊಂಡು ಹೊರಟಳು. ಅಷ್ಟೊತ್ತಿಗಾಗಲೇ ಮಳೆ ನಿಂತಿತ್ತು. ನನ್ನ ಮಗಳು ಹಸಿವೆ ಎನ್ನುತ್ತಿದ್ದಳು. ಟ್ಯಾಕ್ಷಿ ನಿಲ್ದಾಣ ತಲಪುತ್ತಿದ್ದಂತೆ ಆಕೆ ಮೊದಲು ಇಳಿದು ಹೋಗಿ ಸೇಬು ಹಣ್ಣು, ಬಾಳೆಹಣ್ಣು, ಕೇಕ್, ನೀರಿನ ಬಾಟಲ್ ಮತ್ತು ಚಾಕಲೇಟ್‍ನ್ನು ತಂದು ನಮ್ಮ ಕೈಗಿಡುತ್ತಾ “ಮಗು ಹಸಿದಿದೆ. ಮೊದಲು ಅವಳಿಗೆ ತಿನಿಸಿ.” ಎಂದು ಹೇಳಿದಾಗ ನಮ್ಮಿಬ್ಬರ ಹೃದಯಗಳಲ್ಲಿ ಆರ್ದ್ರತೆ ಜಿನುಗದೇ ಇರಲು ಸಾಧ್ಯವಾಗಲಿಲ್ಲ. ನಾವು ಅವರಿಬ್ಬರ ಪ್ರೀತಿಗೆ, ಉಪಕಾರಕ್ಕೆ ಮೂಕವಿಸ್ಮಿತರಾದೆವು. ಆಕೆಯ ಉಪಕಾರವನ್ನು ಹೇಗೆ ತೀರಿಸುವದೆಂದು ಗೊತ್ತಾಗದೆ “ನೀವು ಕೊಂಡುತಂದ ಹಣ್ಣುಗಳಿಗಾದರೂ ದುಡ್ಡನ್ನು ತೆಗೆದುಕೊಳ್ಳಿ” ಎಂದು ನಾನು ದುಡ್ಡನ್ನು ಕೊಡಲು ಮುಂದಾದಾಗ ಏನು ಮಾಡಿದರೂ ತೆಗೆದುಕೊಳ್ಳಲಿಲ್ಲ. ಅಷ್ಟು ಹೊತ್ತು ಟ್ಯಾಕ್ಷಿಯಲ್ಲಿ ಸುತ್ತಾಡಿದ್ದಕ್ಕೆ ಬಾಡಿಗೆ ಕೊಡಲು ಹೋದರೆ ಆಕೆ ಅದನ್ನೂ ಕೊಡಿಸಿಕೊಡಲಿಲ್ಲ. ಆದರೆ ನಾನೇ ಡ್ರೈವರ್ನ ಕೈಯಲ್ಲಿ ಬಲವಂತವಾಗಿ ಹತ್ತು ದಿನಾರಿನ ನೋಟೊಂದನ್ನು ತುರುಕಿದೆ. ಅಲ್ಲಿಂದ ನಮ್ಮನ್ನು ಸಬ್ರತಾಗೆ ಹೋಗುವ ಟ್ಯಾಕ್ಷಿಯಲ್ಲಿ ಕೂರಿಸಿ ನಮಗೆ ಬೈ ಹೇಳಿದರು. ಹೋಗುವ ಮುನ್ನ ಆಕೆ ತನ್ನ ಮೊಬೈಲ್ ನಂಬರ್ ಕೊಟ್ಟು “ಸಬ್ರತಾ ಮುಟ್ಟಿದ ತಕ್ಷಣ ನನಗೊಂದು ಫೋನ್ ಮಾಡಿ. All the best” ಎಂದು ನಸುನಗುತ್ತಾ ನಮ್ಮನ್ನು ಬಿಳ್ಕೊಟ್ಟಳು. ಡ್ರೈವರ್ ಕೂಡಾ “ಒಂದು ವೇಳೆ ನಿಮ್ಮ ಫ್ರೆಂಡ್ ಇರದೇ ಇದ್ದರೆ ನನ್ನ ಮನೆಗೇ ಬನ್ನಿ. ತೊಂದರೆಯಿಲ್ಲ.” ಎಂದು ಹಳಿ ತನ್ನ ಮನೆಯ ಅಡ್ರೆಸ್ ಮತ್ತು ಫೋನ್ ನಂಬರ್ ಕೊಟ್ಟನು. ನಾವು ಅವರಿಬ್ಬರ ಉಪಕಾರವನ್ನು ಮನದ ತುಂಬಾ ತುಂಬಿಕೊಳ್ಳತ್ತಾ ಸಬ್ರತಾದತ್ತ ಹೊರಟೆವು. ದಾರಿಯುದ್ದಕ್ಕೂ ಅವರ ಕಾಳಜಿ, ನಮ್ಮಂಥ ಅಪರಿಚಿತರಿಗೆ ಸ್ಪಂದಿಸಿದ ರೀತಿ ನಮ್ಮನ್ನು ಬೆರಗುಗೊಳಿಸುತ್ತಲೇ ಹೋಯಿತು. ಅವರಿಬ್ಬರ ಹೇಸರೇನೆಂದು ನನಗೀಗ ಸರಿಯಾಗಿ ನೆನಪಿಲ್ಲ. ಆದರೆ ಅವರ ಮುಖಗಳು ಹಾಗೂ ಅವರೊಳಗಿನ ಮನುಷ್ಯತ್ವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಟ್ಟಿವೆ.


    ನಮ್ಮ ಬದುಕಿನ ಸುದೀರ್ಘ ಪ್ರಯಾಣದಲ್ಲಿ ಯಾರ್ಯಾರೋ ನಮಗೆ ಉಪಕಾರ ಮಾಡುತ್ತಾರೆ, ಯಾರ್ಯಾರೋ ನಮ್ಮ ಆಪಾದ್ಭಾಂದವರಾಗುತ್ತಾರೆ, ಯಾರು ಯಾರೋ ನಮಗೆ ಸಹಾಯ ಹಸ್ತ ನೀಡುತ್ತಾರೆ. ಅಂಥವರನ್ನು ಜೀವನಪೂರ್ತಿ ನೆನಪಿಟ್ಟುಕೊಂಡು, ಅವರ ಬಗ್ಗೆ ಜಗತ್ತಿಗೆ ಸಾರಿ ಸಾರಿ ಹೇಳುತ್ತಾ ಈ ಯಾಂತ್ರಿಕ ಜಗತ್ತಿನಲ್ಲಿ ಮಾನವೀಯತೆಯೆನ್ನುವದು ಇನ್ನೂ ಇದೆ ಎಂದು ಮನದಟ್ಟು ಮಾಡಿಸುವ ಕೆಲಸವನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ?


    -ಉದಯ್ ಇಟಗಿ



    ಇರಲೇ? ಇರದಿರಲೇ? ಇದು ಪ್ರಶ್ನೆ

  • ಶುಕ್ರವಾರ, ಜುಲೈ 05, 2013
  • ಬಿಸಿಲ ಹನಿ
  • ಇಲ್ಲಿ ಈಗಾಗಲೇ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆಯ ರಜೆಯ ಮೇರೆಗೆ ನಾವೆಲ್ಲಾ ನಮ್ಮನಮ್ಮ ದೇಶಗಳಿಗೆ ಹೋಗಲು ಕಾತುರರಾಗಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ರಜೆಗೆ ನಮ್ಮನ್ನು ನಮ್ಮನಮ್ಮ ಊರುಗಳಿಗೆ ಕಳಿಸಲು ನಮ್ಮ ಯೂನಿವರ್ಷಿಟಿಯವರು ಟಿಕೇಟ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಬಹುಶಃ, ಈ ತಿಂಗಳು 20 ರಂದು ನಾವು ಇಲ್ಲಿಂದ ಹೊರಡಬಹುದು. ಹೋದ ಮೇಲೆ ಮತ್ತೆ ಇಲ್ಲಿಗೆ ಹಿಂದಿರುಗಿ ಬರುತ್ತೇನೇಯೇ? ಗೊತ್ತಿಲ್ಲ! ಏಕೆಂದರೆ ಈಗ್ಗೆ ಒಂದು ತಿಂಗಳಿನಿಂದ ಮತ್ತೆ ಲಿಬಿಯಾಕ್ಕೆ ವಾಪಾಸಾಗಬೇಕೇ? ಬೇಡವೇ? ಎನ್ನುವ ಸಂದಿಗ್ಧತಯಲ್ಲಿ ಸಿಲುಕಿದ್ದೇನೆ. ಆ ಸಂದಿಗ್ಧತೆ ಅದೆಷ್ಟು ತೀವ್ರವಾಗಿದೆಯೆಂದರೆ ಯೋಚಿಸಿದಷ್ಟೂ ಅದು ನನ್ನನ್ನು ಮತ್ತೊಂದು, ಮಗದೊಂದು ಸಂದಿಗ್ಧತೆಗಳ ಸುಳಿಗೆ ದೂಡಿ ಮತ್ತಷ್ಟು ಕಂಗೆಡಿಸುತ್ತಿದೆ.


    ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಯೂನಿವರ್ಷಿಟಿಯಿಂದ ಬಂದ “ನಿಮ್ಮನ್ನು ಮುಂದಿನ ವರ್ಷಕ್ಕೆ Renew ಮಾಡಲಾಗಿದೆ” ಎನ್ನುವ ಪತ್ರವನ್ನು ನಮ್ಮ ಡೀನ್ ನನ್ನ ಕೈಗಿಟ್ಟಾಗ ನಾನು ಖುಷಿಯಾಗಿದ್ದು ಸುಳ್ಳಲ್ಲ. ಇನ್ನೊಂದೆರೆಡು ವರ್ಷ ಅದ್ಹೇಗೋ ಇಲ್ಲಿ ಕಳೆದುಬಿಟ್ಟರೆ ಬೆಂಗಳೂರಿನಲ್ಲಿ ನನ್ನ ಕನಸಿನ ಮನೆ ಕಟ್ಟಬಹುದು, ಆಮೇಲೆ ಖಾಯಂ ಆಗಿ ಬೆಂಗಳೂರಿಗೆ ವಾಪಾಸಾಗಿ ಅಲ್ಲೇ ಏನಾದರು ಮಾಡಬಹುದು ಎಂದು ಹರ್ಷದಿಂದ ಕುಣಿದಾಡಿದ್ದೆ. ಜೊತೆಗೆ ಮನೆ ಹೇಗೆ ಕಟ್ಟಬೇಕು ಎನ್ನುವದರ ಬಗ್ಗೆ ಪ್ರತಿ ನಿಮಿಷವೂ ಇನ್ನಿಲ್ಲದಂತೆ ಕನಸುಕೊಂಡಿದ್ದೆ.

    ಆದರೆ ಅದೇಕೋ ಗೊತ್ತಿಲ್ಲ ಈಗ್ಗೆ ಒಂದು ತಿಂಗಳಿನಿಂದ ನಾನಿರುವ ಜಾಗ ಘಾಟ್ ಬಗ್ಗೆ ನನ್ನ ಮನಸ್ಸು ಬೋರೆದ್ದು ಹೋಗಿದ್ದೆ. ನಾನಿರುವ ಊರು ಘಾಟ್ ಬಂದು ಸಣ್ಣ ಹಳ್ಳಿಯಾದರೂ ಮೂಲಭೂತ ಸೌಕರ್ಯಗಳಿಗೇನೂ ಕೊರತೆಯಿಲ್ಲ. ಆದರೆ ಬೇಸರ ತರಿಸುವಂಥ ಜಾಗ. ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ಕ್ಲಬ್ಬುಗಳಿಲ್ಲ, ಶಾಪಿಂಗ್ ಮಾಲ್‍ಗಳಿಲ್ಲ, ಹಾಗೆಂದೇ ನಾವು ಇಲ್ಲಿ ಟೀವಿ ಮತ್ತು ಇಂಟರ್ನೆಟ್‍ಗೆ ಅಡಿಕ್ಟ್ ಆಗಿಬಿಟ್ಟೆವು. ಆದರೆ ಘಾಟ್‍ನ ಜನರನ್ನು, ಅವರ ಒಳ್ಳೆಯತನವನ್ನು ಎಂದಾದರೂ ಮರೆಯಲು ಸಾಧ್ಯವೇ? ಅವರು ನಮಗೆ ಕೊಡುವ ಮರ್ಯಾದೆ, ಗೌರವವನ್ನು ಹೇಗೆ ತಾನೇ ಮರೆಯಲು ಸಾಧ್ಯ?

    ಹೀಗಿದ್ದೂ ಈ ಸಹರಾ ಮರಭೂಮಿಯಲ್ಲಿ ನಾನು ಅದ್ಹೇಗೋ ಆರು ವರ್ಷಗಳನ್ನು ಕಳೆದುಬಿಟ್ಟೆ. ನನ್ನ ಆರು ವರ್ಷಗಳಲ್ಲಿ ಈ ಮರಭೂಮಿ ನನಗೆ ಒಂದಿಷ್ಟು ಹಸಿರು ಹಸಿರಾದ ನೆನಪುಗಳನ್ನು ಕೊಟ್ತಿದೆ. ಜೊತೆಗೆ ಹೈಪೋಥೈರಾಡಿಸಂ ಮತ್ತು ಸಕ್ಕರೆ ಕಾಹಿಲೆಗಳನ್ನು ಸಹ ಕೊಟ್ಟಿದೆ. ನಾನಿಲ್ಲಿ ಆರು ವರ್ಷಗಳನ್ನು ಕಳೆದಿದ್ದರಿಂದ ಈ ಊರು ನನಗೆ ತಾಳ್ಮೆಯಿಂದ ಹೇಗಿರಬೇಕೆಂಬುದನ್ನು ಕಲಿಸಿದೆ. ಬೇರೆ ಬೇರೆ ದೇಶದ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ನನ್ನ ವೃತ್ತಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಹೊಸ ಹೊಸ ವಿಷಯಗಳನ್ನು ಕಲಿಸಿದೆ. ಇಲ್ಲಿ ಸಾಕಷ್ಟು ಸಮಯ ಸಿಗುತ್ತಿದುದರಿಂದ ಒಳ್ಳೊಳ್ಳೆ ಪುಸ್ತಕಗಳನ್ನು ಓದಿದ್ದೇನೆ. ಒಳ್ಳೊಳ್ಳೆ (ಬೆಂಗಳೂರಿನಲ್ಲಿ ನೋಡಲು ಸಾಧ್ಯವಾಗದ) ಸಿನಿಮಾಗಳನ್ನು ನೋಡಿದ್ದೇನೆ.

    ಇಲ್ಲಿ ಕೆಲಸ ಮಾಡಿದ್ದರಿಂದಲೇ ನನಗೆ ಬೆಂಗಳರಿನಲ್ಲಿ ಎರಡು ಸೈಟ್‍ಗಳನ್ನು ತೆಗೆಯಲು ಸಾಧ್ಯವಾಯಿತು. ಮನೆಯೊಂದನ್ನು ಕಟ್ಟುವದು ಬಾಕಿಯಿದೆ. ಹಾಗಾಗಿ ಇನ್ನೊಂದೆರೆಡು ವರ್ಷ ಇಲ್ಲಿದ್ದಿದ್ದರೆ ಚನ್ನಾಗಿತ್ತು. ಆದರೆ ಅದೇಕೋ ಇನ್ನುಮುಂದೆ ಸಾಧ್ಯವಾಗುತ್ತಿಲ್ಲ, ಸಾಕಿನ್ನು ಜಾಗ ಬದಲಾಯಿಸೋಣ ಅನಿಸುತ್ತಿದೆ. ಹೋಗಲಿ ಇಲ್ಲಿಂದ ಆರುನೂರು ಕಿಲೋಮೀಟರ್ ದೂರವಿರುವ ಸೆಭಾಗಾದರೂ ಟ್ರಾನ್ಸಫರ್ ತೆಗೆದುಕೊಳ್ಳೋಣವೆಂದರೆ ನನ್ನ ಡೀನ್ ಮತ್ತು HOD “ಇಲ್ಲಿಯೇ ಶಿಕ್ಷಕರ ಕೊರತೆಯಿದೆ, ಇನ್ನು ನಿಮ್ಮನ್ನು ಬೇರೆ ಕಡೆ ಕಳಿಸುವದಾದರೂ ಹೇಗೆ?” ಎಂದು ನನ್ನನ್ನೇ ಕೇಳುತ್ತಾರೆ. ಜೊತೆಗೆ ಮೊದಲಾದರೆ ಇಲ್ಲಿ ತುಂಬಾ ಜನ ಇಂಡಿಯನ್ಸ್ ಇದ್ದರು. ಅದ್ಹೇಗೋ ಸಮಯ ಕಳೆದುಹೋಗುತ್ತಿತ್ತು. ಆದರೀಗ ಅವರ ಸಂಖ್ಯೆ ನನ್ನನ್ನೂ ಸೇರಿ ಎರಡು ಜನಕ್ಕೆ ಬಂದು ನಿಲ್ಲುವದರಲ್ಲಿದೆ. ಮೇಲಾಗಿ ಇತ್ತೀಚಿಗೆ ಇಲ್ಲಿ ದರೋಡೆಗಳು, ಬಾಂಬ್ ಬ್ಲಾಸ್ಟ್‍ಗಳು ಹೆಚ್ಚಾಗುತ್ತಿರುವದರಿಂದ ಅಷ್ಟೊಂದು ಸುರಕ್ಷತೆ ಅನಿಸುತ್ತಿಲ್ಲ.

    ಜೊತೆಗೆ ಪ್ರತಿ ವರ್ಷ ಸೆಮೆಸ್ಟರ್ ಬ್ರೇಕ್‍ನಲ್ಲಿ ಅಂದರೆ ಫೆಬ್ರುವರಿಯಲ್ಲಿ ನಾವು ಹತ್ತು ದಿನದ ಮಟ್ಟಿಗೆ ಇಂಡಿಯಾಕ್ಕೆ ಬರುತ್ತಿದ್ದೆವು. ಆದರೆ ಈ ಸಾರಿ ಹಾಗೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬ ಅವರು ನಿಗದಪಡಿಸಿದ ದಿನಾಂಕದೊಳಗೆ ಬರದೆ ಆತನ ವೀಸಾ ತೀರಿಹೋಗಿ ಆತ ಮತ್ತೆ ಇಲ್ಲಿಗೆ ವೀಸಾ ತೆಗೆದುಕೊಂಡು ಬರಬೇಕಾದರೆ ಸುಮಾರು ಎರಡೂವರೆ ತಿಂಗಳಷ್ಟು ತಡವಾಗಿತ್ತು. ಆ ಸಮಯದಲ್ಲಿ ಆತ ತೆಗೆದುಕೊಳ್ಳಬೇಕಾಗಿದ್ದ ತರಗತಿಗಳೆಲ್ಲಾ ಅತಂತ್ರ ಸ್ಥಿತಿಯನ್ನು ತಲುಪಿದ್ದವು. ಹೀಗಾಗಿ ನಮ್ಮ ಡೀನ್ ಮತ್ತು HOD ಮುಂದಿನ ಸಾರಿ ಸೆಮೆಸ್ಟರ್ ಬ್ರೇಕಿನಲ್ಲಿ ಕಳಿಸುವದಿಲ್ಲ ಎಂದು ಸ್ಟ್ರಿಕ್ಟ್ ಆಗಿ ಹೇಳಿಬಿಟ್ಟಿದ್ದಾರೆ. ಸೆಮೆಸ್ಟರ್ ಮಧ್ಯದಲ್ಲಿ ಹೇಗೋ ಹೋಗಬಹುದಿತ್ತಲ್ಲ ಎಂಬ ಸಣ್ಣ ಆಸೆಯೂ ಕಮರಿಹೋಗಿದೆ. ಜೊತೆಗೆ ನಾನು ನನ್ನ ಹೈಪೋಥೈರಾಡಿಸಂ ಕಾಹಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೂ ಅದರಲ್ಲಿ ಏರುಪೇರಾಗುತ್ತಿರುವದರಿಂದ ಮನಸ್ಸು ಮಂಕು ಬಡಿದಂತಾಗುತ್ತಿದೆ (ಮನಸ್ಸು ಮಂಕು ಬಡಿದಂತಾಗುವದು ಈ ಕಾಹಿಲೆಯ ಮುಖ್ಯ ಲಕ್ಷಣ). ಅದೇನೂ ಭಯಪಡುವ ವಿಚಾರವಲ್ಲ. ಅದಕ್ಕೆ ನಾನು ತೆಗೆದುಕೊಳ್ಳುವ ಮಾತ್ರೆಯ ಡೋಸೆಜ್‍ನ್ನು ಸ್ವಲ್ಪ ಹೆಚ್ಚಿಸಿದರಾಯಿತು. ಆದರೆ ಈಗ ಇಲ್ಲಿಯ ಆಸ್ಪತ್ರೆಗಳಲ್ಲಿ ಇಂಡಿಯನ್ ಡಾಕ್ಟರುಗಳು ಇಲ್ಲ. ಅವರೆಲ್ಲಾ ಹೊರಟುಹೋಗಿ ಅವರ ಜಾಗದಲ್ಲಿ ಸುಡಾನಿ ಡಾಕ್ಟರುಗಳು ಬಂದಿದ್ದಾರೆ. ಆದರೆ ನನಗೆ ಅವರ ಹತ್ತಿರ ತೋರಿಸಲು ಭಯ. ಜೊತೆಗೆ ನನಗೆ ಅವರ ಮೇಲೆ ಅಷ್ಟು ನಂಬಿಕೆಯಿಲ್ಲ.

    ಹೀಗಾಗಿ ಈ ಸಾರಿ ನಾನು ಇಲ್ಲಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಸೌದಿಗೆ ಹೋಗಬೇಕೆಂದುಕೊಂಡಿದ್ದೇನೆ. ಸಾದಿ ಏಕೆಂದರೆ ಅಲ್ಲಿಯ ಪ್ರತಿಯೊಂದು ಜಾಗದಲ್ಲಿ ತುಂಬಾ ಜನ ಇಂಡಿಯನ್ಸ್, ಮತ್ತು ಇಂಡಿಯನ್ ಹೋಟೆಲ್‍ಗಳಿವೆ ಎಂದು ಕೇಳಲ್ಪಟ್ಟಿದ್ದೇನೆ. ಜೊತೆಗೆ ಆ ದೇಶದಲ್ಲಿ ಸಾಕಷ್ಟು ಜನ ಇಂಡಿಯನ್ ಡಾಕ್ಟರುಗಳಿದ್ದುದರಿಂದ ಏನಾದರೂ ಹೆಚ್ಚುಕಮ್ಮಿಯಾದರೆ ನಮ್ಮ ಸಹಾಯಕ್ಕೆ ಅವರಿರುತ್ತಾರೆ ಎನ್ನುವ ಧೈರ್ಯವಿದೆ. ಮೇಲಾಗಿ ಅಲ್ಲಿ ಮಲ್ಟಿಪಲ್ ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಇರುವದರಿಂದ ರಜೆ ಸಿಕ್ಕಾಗಲೆಲ್ಲಾ ಮಧ್ಯದಲ್ಲಿ ನಾವು ಇಂಡಿಯಾಕ್ಕೆ ಆಗಾಗ್ಗೆ ಬರಬಹುದೆಂದು ಹೇಳುತ್ತಾರೆ. ಅಲ್ಲಿಗೆ ಹೋದರೆ ಇನ್ನೂ ಒಂದು ಅನುಕೂಲವಿದೆ. ಅದೇನೆಂದರೆ ನನ್ನ ಹೆಂಡತಿಯೂ ಕಾಲೇಜಿನಲ್ಲಿ ಕೆಲಸ ಮಾಡಬಹುದು ಮತ್ತು ನನ್ನ ಮಗಳನ್ನು ಅಲ್ಲಿರುವ ಯಾವುದಾದರೊಂದು ಇಂಡಿಯನ್ ಸ್ಕೂಲುಗಳಲ್ಲಿ ಓದಿಸಬಹುದೆಂಬ ಭರವಸೆಯಿದೆ. ಅಂತೆಯೇ ಅಲ್ಲಿ ಸಾಕಷ್ಟು ಇಂಡಿಯನ್ ಯೂನಿವರ್ಷಿಟಿಗಳ ಶಾಖೆಗಳಿರುವದರಿಂದ ನಾನ ಯಾವುದಾದರೂ ಕೋರ್ಸ್ ಮಾಡಲು ಸಹಾಯವಾಗುತ್ತದೆ.

    ಆದರೆ ಒಳಮನಸ್ಸು ಮಾತ್ರ “ಇಷ್ಟು ಸಂಬಳ ಮತ್ತೆಲ್ಲಿ ಸಿಗಲಾರದು. ಇನ್ನೊಂದೆರೆಡು ವರ್ಷ ಹೇಗಾದರೂ ಮಾಡಿ ಇದ್ದುಬಿಡು. ಮನೆ ಕಟ್ಟಿಯಾದ ಮೇಲೆ ಎಲ್ಲಿಗೆ ಬೇಕಾದರೂ ಹೋಗು.” ಎಂದು ಹೇಳುತ್ತಿದೆ. ಆದರೆ ಎಲ್ಲವನ್ನೂ ತರ್ಕದಿಂದ ನೋಡುವ ನನ್ನ ಬುದ್ಧಿ ಮಾತ್ರ “ಸೌದಿಗೆ ಹೋದರೆ ನಿನಗೆ ಎಷ್ಟೆಲ್ಲಾ ಅನುಕೂಲಗಳಿವೆ. ಅಲ್ಲಿಗೇ ಹೋಗಿಬಿಡು.” ಎಂದು ಹೇಳುತ್ತಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಒಂದು ವೇಳೆ ಸೌದಿಗೆ ಹೋಗಬೇಕೆಂದರೆ ಬಹುಶಃ, ಸ್ವಲ್ಪ ತಡವಾಗಬಹುದು. ಏಕೆಂದರೆ ನಾನೀಗ ಬಂದರೆ ಸೌದಿಗೆ ನಡೆಯುವ ಇಂಟ್ರ್ಯೂಗಳು ಇಷ್ಟೊತ್ತಿಗಾಗಲೇ ಮುಗಿದುಹೋಗಿರುತ್ತವೆ. ಪರ್ವಾಗಿಲ್ಲ. ಇದೇ ಸಮಯದಲ್ಲಿ ಈ ಸಾರಿ ಒಂದು ಕೋರ್ಸ್ ಮಾಡಿಕೊಳ್ಳಬೇಕೆಂದಿದ್ದೇನೆ. ಅದನ್ನು ಮಾಡಿಕೊಂಡರೆ ಸೌದಿಯಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಸಾಕಷ್ಟು ಅವಕಾಶಗಳು ಸಿಗುವ ಸಾಧ್ಯತೆಯಿದೆ.

    ಅಂದಹಾಗೆ, ಇದೆಲ್ಲಾ ಸಧ್ಯದ ಮಾತು. ಈಗ ಅನಿಸಿದ್ದು ಅಷ್ಟೇ! ಆದರೆ ನನ್ನ ರಜೆ ಮುಗಿಯುವಷ್ಟರಲ್ಲಿ ಮತೇನು ಅನಿಸುತ್ತದೋ? ಗೊತ್ತಿಲ್ಲ. ನಾನು ಮತ್ತೆ ಮನಸ್ಸು ಬದಲಾಯಿಸಿ ಲಿಬಿಯಾಕ್ಕೆ ಹಿಂದಿರುಗಿ ಬರುತ್ತೇನೇಯೇ? ಅಥವಾ ಬದುಕು ಕೊಂಡೊಯ್ದಲ್ಲಿಗೆ ಬೇರೆ ಕಡೆ ಹೋಗುತ್ತೇನೇಯೇ? ಎಲ್ಲವನ್ನೂ ಕಾದುನೋಡಬೇಕಿದೆ.

    -ಉದಯ್ ಇಟಗಿ



    ಲಿಬಿಯನ್‍ರು ಮತ್ತು ಹಿಂದಿ ಸಿನಿಮಾಗಳು

  • ಮಂಗಳವಾರ, ಜೂನ್ 25, 2013
  • ಬಿಸಿಲ ಹನಿ
  • ನಾವು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನಮಗಿನ್ನೂ ಇಲ್ಲಿ ಪ್ರಸಾರವಾಗುವ ಟೀವಿ ಚಾನಲ್‍ಗಳ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನಮಗೆ ಹೊಸದಾಗಿ ಸಿಗುವ ಯಾವುದೇ ಲಿಬಿಯನ್ ನಮ್ಮನ್ನು ನೋಡಿ “ಓ. ಹಿಂದ್ ಹಿಂದ್! (ಓ, ಇಂಡಿಯನ್!)” ಎಂದು ಉದ್ಗಾರ ತೆಗೆಯುತ್ತಾ ಹತ್ತಿರ ಬಂದು “ಕೆಫೆಹಲಾಲ್? (ಹೇಗಿದ್ದೀರಿ?) ಎಂದು ಉಭಯಕುಶಲೋಪಾರಿಯನ್ನು ವಿಚಾರಿಸುತ್ತಾ ನಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬೆನ್ನಹಿಂದೆಯೇ ನೇರವಾಗಿ ನಮ್ಮನ್ನು ಹಿಂದಿ ಸಿನಿಮಾಕ್ಕೆ ಸಂಬಂಧಪಟ್ಟಹಾಗೆ “ನಿಮಗೆ ಅಮಿತಾಬ್ ಬಚ್ಚನ್ ಗೊತ್ತೆ? ಶಾರುಖ್ ಖಾನ್ ನಿಮ್ಮ ಮನೆಯ ಪಕ್ಕದಲ್ಲಿಯೇ ಇರುವನೆ? ಐಶ್ಚರ್ಯಾ ರೈ ಅಮಿತಾಬ್ ಬಚ್ಚನ್ ಸೊಸೆಯಂತೆ, ಹೌದೆ? ಕತ್ರಿನಾ ಕೈಫ್ ಅದೆಷ್ಟು ಸುಂದರವಾಗಿದ್ದಾಳೆ? ಧರ್ಮೇಂದರ್ ಈಗಲೂ ನಟಿಸುತ್ತಾನೆಯೇ? ಹೇಮಾ ಮಾಲಿನಿ ಹೇಗಿದ್ದಾಳೆ? ಸಲ್ಮಾನ್ ಖಾನ್ ಯಾಕಿನ್ನೂ ಮದುವೆಯಾಗಿಲ್ಲ? ನಿಮ್ಮ ಬಳಿ ಹಿಂದಿ ಸಿನಿಮಾ ಹಾಡುಗಳಿದ್ದರೆ ನಮ್ಮ ಫ್ಲ್ಯಾಶ್‍ (ಪೆನ್‍ ಡ್ರೈವ್) ನಲ್ಲಿ ಹಾಕಿಕೊಡುತ್ತೀರಾ?” ಹೀಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಂತಾದವರೆಲ್ಲಾ ನಮ್ಮ ಮನೆಯ ಪಕ್ಕದಲ್ಲಿರುವರೇನೋ, ಅಥವಾ ಅವರೆಲ್ಲಾ ನಮ್ಮ ಸ್ನೇಹಿತರೋ, ನೆಂಟರೇನೋ ಎಂಬಂತೆ ಕೇಳುತ್ತಿದ್ದರೆ ನಾವೆಲ್ಲಾ ಆಶ್ಚರ್ಯ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದೆವು. ಮಾತ್ರವಲ್ಲ ಅವರಿಗೆ ರೇಖಾ ಗೊತ್ತು, ಜಿತೆಂದ್ರ್ ಗೊತ್ತು, ಕರೀನಾ ಕಪೂರ್ ಗೊತ್ತು, ಸೈಫ್‍ಅಲಿ ಖಾನ್ ಗೊತ್ತು, ಪ್ರಿಯಾಂಕಾ ಚೋಪ್ರಾ ಗೊತ್ತು...........ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.


    ನನಗೋ ಭಾರೀ ಕುತೂಹಲ ನಮ್ಮ ಹಿಂದಿ ಸಿನಿಮಾ ನಟ ನಟಿಯರೆಲ್ಲಾ ಇವರಿಗೆ ಹೇಗೆ ಗೊತ್ತೆಂದು? ಈ ಹಿನ್ನೆಲೆಯಲ್ಲಿ ನಾನು ಕುತೂಹಲ ತಡೆಯಲಾರದೆ ಒಂದು ಸಾರಿ ಅವರನ್ನು ಕೇಳಿಯೇ ಬಿಟ್ಟೆ, “ನಿಮಗೆ ಇವರೆಲ್ಲಾ ಹೇಗೆ ಗೊತ್ತು? ಇವರೆಲ್ಲಾ ನಿಮಗೆ ತುಂಬಾ ವರ್ಷದಿಂದ ಪರಿಚಯವಿರೋ ತರ ಕೇಳುತ್ತೀರಲ್ಲ?“ ಅದಕ್ಕವರು “ಅವರೆಲ್ಲಾ ಇಲ್ಲಿ ಪ್ರಸಾರವಾಗುವ Zee Aflam, ಮತ್ತು B4U Aflam ಎನ್ನುವ ಹಿಂದಿ ಸಿನಿಮಾ ಚಾನಲ್‍ಗಳ ಮೂಲಕ ಪರಿಚಯ.” ಎಂದು ಹೇಳಿದ್ದರು. ಮುಂದುವರಿದು “ಹಿಂದ್ (ಇಂಡಿಯನ್) ಫಿಲ್ಮ್ಸ್ ಕೋಯಿಸ್ (ಚನ್ನಾಗಿದೆ), ಮಿಯ್ಯಾ ಮಿಯ್ಯಾ (ಅತ್ಯುತ್ತಮ)” ಎಂದು ಹೇಳುತ್ತಾ ಹಿಂದಿ ಸಿನಿಮಾಗಳನ್ನು ಬಾಯಿತುಂಬಾ ಹೊಗಳಿದ್ದರು. ಪರ್ವಾಗಿಲ್ಲ ನಮ್ಮ ಬಾಲಿವುಡ್ ನಟ-ನಟಿಯರು ಇಲ್ಲಿಯವರಿಗೂ ತಮ್ಮ ಜನಪ್ರೀಯತೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಖುಷಿಯಾಗಿತ್ತು. ನನಗಿಂತ ಮೊದಲೇ ಇಲ್ಲಿ ಸುಮಾರು ವರ್ಷಗಳಿಂದ ಇದ್ದ ಭಾರತೀಯರನ್ನು ನಾನು ಒಮ್ಮೆ ಹೀಗೆ ಕೇಳಿದ್ದೆ “ನೀವು ಇಲ್ಲಿಗೆ ಬಂದ ಹೊಸತರಲ್ಲಿ ಅವರು ನಿಮ್ಮನ್ನೂ ಇದೇ ರೀತಿ ಹಿಂದಿ ಸಿನಿಮಾಗಳ ಕುರಿತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ?” ಅವರು ಹೌದೆಂದು ತಲೆಯಲ್ಲಾಡಿಸುತ್ತಾ “ಇಲ್ಲಿಯವರಿಗೆ ಹಿಂದಿ ಸಿನಿಮಾಗಳೆಂದರೆ ಅದೇನೋ ಒಂಥರಾ ಹುಚ್ಚು” ಎಂದು ಹೇಳಿದ್ದರು. ಇವರಿಗೇಕೆ ಇಷ್ಟೊಂದು ಹಿಂದಿ ಸಿನಿಮಾಗಳ ಹುಚ್ಚು? ಇವರ (ಅರೇಬಿಕ್) ಭಾಷೆಯಲ್ಲಿ ಸಿನಿಮಾಗಳು ಬರುವದಿಲ್ಲವೆ? ಬಂದರೂ ಅವು ಅಷ್ಟೊಂದು ಚನ್ನಾಗಿರುವದಿಲ್ಲವೆ? ಯಾಕೆ? ಏನು? ಹೇಗೆ? ಅಂತೆಲ್ಲಾ ಬೆನ್ಹತ್ತಿ ಹೋದಾಗ ಗೊತ್ತಾಗಿದ್ದು ಈ ದೇಶದಲ್ಲಿ ಸಿನಿಮಾಗಳೇ ತಯಾರಾಗುವದಿಲ್ಲ ಎನ್ನುವ ಸಂಗತಿ. ಇಲ್ಲಿ ಮಾತ್ರವಲ್ಲ ಈಜಿಪ್ಟ್ ವೊಂದನ್ನು ಬಿಟ್ಟರೆ ಬಹಳಷ್ಟು ಅರೇಬಿಕ್ ದೇಶಗಳಲ್ಲಿ ಸಿನಿಮಾಗಳು ತಯಾರಾಗುವದಿಲ್ಲವೆಂದರೆ ನೀವು ನಂಬಲೇಬೇಕು. ತಯಾರಾದರೂ ಎರಡ್ಮೂರು ವರ್ಷಕ್ಕೊಮ್ಮೆ ಒಂದೋ ಅಥವಾ ಎರಡು ಸಿನಿಮಾಗಳು ತಯಾರಾಗುತ್ತವೆ. ಆದರೆ ಅವು ನಮ್ಮ ಹಿಂದಿ ಚಲನಚಿತ್ರಗಳಿಗೆ ಯಾವ ರೀತಿಯಲ್ಲೂ ಸಾಟಿಯಾಗುವದಿಲ್ಲ. ಹಾಗೆಂದೇ ನಮ್ಮ ಸಿನಿಮಾಗಳಿಗಿಲ್ಲಿ ಅಧಿಕ ಜನಪ್ರಿಯತೆಯಿದೆ.

    ಹಾಗೆ ನೋಡಿದರೆ ಅರಬ್ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದ್ದೇ ತೀರಾ ಇತ್ತೀಚಿಗೆ. ಅದೂ ಅಲ್ಜಿರಿಯಾ, ಲೆಬನಾನ್, ಪ್ಯಾಲೆಸ್ತಿನಿಯಾ, ತುನಿಶಿಯಾ, ಹಾಗೂ ಸಿರಿಯಾಗಳಲ್ಲಿ ಮಾತ್ರ. ಅತಿ ಹೆಚ್ಚು ಅರಬ್ ಸಿನಿಮಾಗಳ ನಿರ್ಮಾಣದ ಕೀರ್ತಿ ಈಜಿಪ್ಟ್ ದೇಶಕ್ಕೆ ಸಲ್ಲುತ್ತದೆ. ಏಕೆಂದರೆ ಮುಕ್ಕಾಲು ಪಾಲು ಅರಬ್ ಸಿನಿಮಾಗಳು ತಯಾರಾಗುವದು ಈಜಿಪ್ಟ್ ದೇಶದ ರಾಜಧಾನಿ ಕೈರೋದಲ್ಲಿಯೇ. ಲಿಬಿಯಾ ಸೇರಿದಂತೆ ಬಹುತೇಕ ಅರೇಬಿಕ್ ದೆಶಗಳಲ್ಲಿ ಸಿನಿಮಾಗಳ ನಿರ್ಮಾಣ ಬಹುತೇಕ ಕಿರುಚಿತ್ರಗಳಿಗೆ ಮತ್ತು ಟೀವಿ ಚಿತ್ರಗಳಿಗೆ ಮಾತ್ರ ಸೀಮಿತವಾಗಿದೆ. ಜೋರ್ಡಾನ್, ಲೆಬನಾನ್, ಇರಾಕ್ ದೇಶಗಳು ಸಿನಿಮಾಗಳನ್ನು ನಿರ್ಮಿಸಿವೆಯಾದರೂ ಅವು ಕೇವಲ ಬೆರಳಣಿಕೆಯಷ್ಟಾಗಿವೆ. 19ನೇ ಶತಮಾನದಲ್ಲಿ ಅಂದರೆ ಸಿನಿಮಾ ಆಗಷ್ಟೆ ಆವಿಷ್ಕಾರಗೊಂಡ ಸಂದರ್ಭದಲ್ಲಿ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಬ್ರಿಟಿಷ್ ಮತ್ತು ಫ್ರೆಂಚ್‍ರ ಅಧೀನಕ್ಕೆ ಒಳಪಟ್ಟಿದ್ದವು. ಸಿನಿಮಾ ಆವಿಷ್ಕಾರಗೊಂಡು ಎರಡು ದಶಕಗಳ ನಂತರ ಈ ಎರಡು ಬಲಾಢ್ಯ ದೇಶಗಳು ‘ಸೈಕ್ಸ್-ಪೈಕಾಟ್’ ಒಪ್ಪಂದದ ಮೂಲಕ ಅರಬ್ ರಾಷ್ಟ್ರಗಳನ್ನು ಎರಡು ಭಾಗ ಮಾಡಿಕೊಂಡು ಆಳತೊಡಗಿದವು. ಪರಿಣಾಮವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇನ್ನೂ ಸ್ವತಂತ್ರವಾಗಿರದ ಅರಬ್ ರಾಷ್ಟ್ರಗಳಿಗೆ ಸಿನಿಮಾಗಳ ತಯಾರಿಕೆಯಲ್ಲಿ ಅಡಚಣೆಯುಂಟಾಯಿತು. ಆದರೆ ಈಜಿಪ್ಟ್ ಮಾತ್ರ ಇದಕ್ಕೆ ಹೊರತಾಗಿತ್ತು. ಆ ಸಮಯದಲ್ಲಿಯೇ ಅರಬ್ ಮಾರುಕಟ್ಟೆ ಯೂರೋಪಿನ ವ್ಯಾಪಾರ ಸಗಟುಗಳಿಂದ ತುಂಬಿಹೋಗಿದ್ದರಿಂದ ಸಹಜವಾಗಿ ಯೂರೋಪಿಯನ್ನರು ಬಂಡವಾಳ ಹೂಡಿಕೆದಾರರಾದರು ಹಾಗೂ ಸ್ಥಳೀಯ ಉದ್ದಿಮೆದಾರರು ಹಿಂದೆ ಸರಿದರು. ಅರಬ್‍ರ ಮೇಲೆ ರಾಜಕೀಯ ದಬ್ಬಾಳಿಕೆ ನಡೆದುದಷ್ಟೇ ಅಲ್ಲದೆ ಸಾಂಸ್ಕೃತಿಕ ದಬ್ಬಾಳಿಕೆಯೂ ನಡೆಯಿತು. ಮೊದಲಿಗೆ ಇಲ್ಲಿನ ಸಿನಿಮಾ ಥೇಟರ್ ಗಳು ವಿದೇಶಿಯರ ಒಡೆತನದಲ್ಲಿದ್ದುದರಿಂದ ಅವರು ತಮ್ಮ ಭಾಷೆಯ ಚಿತ್ರಗಳನ್ನು ಮಾತ್ರ ತಯಾರಿಸಿದರು. ಆದರೆ ಅವು ಸ್ಥಳೀಯರನ್ನು ತಲುಪವಲ್ಲಿ ವಿಫಲವಾದ್ದರಿಂದ ಸಿನಿಮಾ ತಯಾರಿಕೆಯಿಂದ ಅವರಿಗೆ ಅಪಾರ ನಷ್ಟವುಂಟಾಯಿತು. ಆದರೆ ವಸಾಹತುಕಾಲದಲ್ಲಿ ತಕ್ಕಮಟ್ಟಿಗೆ ಸ್ವತಂತ್ರವಾಗಿದ್ದ ಈಜಿಪ್ಟ್ ನ್ಯಾಷನಲ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಹಂತದವರೆಗೂ ತಲುಪಿತು. 1909 ರಲ್ಲಿ ತಮ್ಮ ನಾಯಕನ ಅಂತ್ಯಕ್ರಿಯೆಯ ಮೆರವಣಿಗಿಯನ್ನು ಚಿತ್ರಿಕರಿಸುವದರ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣ 1934 ರಲ್ಲಿ ಈಜಿಪ್ಸಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಮಟ್ಟಕ್ಕೂ ಬೆಳೆಯಿತು. ಅಲ್ಲಿಂದಾಚೆ ಅನೇಕ ಅರೇಬಿಕ್ ಸಿನಿಮಾಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

    ವಿವಿಧ ಅರೇಬಿಕ್ ದೇಶಗಳಿಂದ ಪ್ರಸಾರವಾಗುವ ಅರೇಬಿಕ್ ಟೀವಿ ಚಾನಲ್‍ಗಳು ಹೆಚ್ಚಾಗಿ ಕೈರೋದಲ್ಲಿ ತಯಾರಾಗುವ ಸಿನಿಮಾಗಳನ್ನೇ ಪ್ರಸಾರ ಮಾಡುತ್ತವೆ. ಅದು ಬಿಟ್ಟರೆ ಅರೇಬಿಕ್ ಮೆಗಾ ಧಾರಾವಾಹಿಗಳನ್ನು ಹಾಗೂ ಡಾಕುಮೆಂಟರಿಗಳನ್ನು ಪ್ರಸಾರಮಾಡುತ್ತವೆ. ಹೀಗಾಗಿ Zee Aflam ಮತ್ತು B4U Aflam ಎನ್ನುವ ಎರಡು ಚಾನಲ್‍ಗಳು ಇಲ್ಲಿಯವರಿಗೆ ಹುಚ್ಚು ಹಿಡಿಸಿವೆ. ನಾನು ಮೊದಮೊದಲು ಲಿಬಿಯನ್‍ರಿಗೆ ಮಾತ್ರ ನಮ್ಮ ಹಿಂದಿ ಚಿತ್ರಗಳ ಬಗ್ಗೆ ಕ್ರೇಜ್ ಇರಬಹುದೆಂದುಕೊಂಡಿದ್ದೆ. ಆದರೆ ಯಾವಾಗ ನನ್ನ ಜೋರ್ಡಾನಿ, ಸಿರಿಯನ್, ಸುಡಾನಿ ಸಹೋದ್ಯೋಗಿಗಳು ಸಹ ಹಿಂದಿ ಫಿಲ್ಮ್ಸ್ ಬಗ್ಗೆ ಮಾತನಾಡತೊಡಗಿದರೋ ಆಗ ನನಗೆ ಗೊತ್ತಾಯಿತು ಈ ಅರಬ್‍ರಿಗೆ ನಮ್ಮ ಚಿತ್ರಗಳೆಂದರೆ ತುಂಬಾ ಇಷ್ಟ ಎಂದು. ಆದರೆ ನಾ ಕಂಡಂತೆ ಈಜಿಪ್ಸಿಯನ್ನರು ಮಾತ್ರ ಅಷ್ಟಾಗಿ ನಮ್ಮ ಹಿಂದಿ ಚಿತ್ರಗಳತ್ತ ಒಲವು ಬೆಳೆಸಿಕೊಂಡಿಲ್ಲ. ಬಹುಶಃ, ನಮ್ಮಲ್ಲಿ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿ ಇದ್ದಂತೆ ಅವರಲ್ಲೂ ಸಹ ಅವರದೇ ಆದ ಅರೇಬಿಕ್ ಫಿಲ್ಮ್ ಇಂಡಸ್ಟ್ರಿ ಇರುವದೇ ಅದಕ್ಕೆ ಕಾರಣವಿರಬಹುದು.

    ಅಂದಹಾಗೆ ಇಲ್ಲಿಯವರಿಗೆ ನಮ್ಮ ಹಿಂದಿ ಸಿನಿಮಾಗಳ ಹುಚ್ಚು ಹಿಡಿಸಿದ ಎರದು ಚಾನಲ್‍ಗಳೆಂದರೆ ಒಂದು Zee Aflam, ಇನ್ನೊಂದು B4U Aflam. Zee Aflam ಎನ್ನುವದು ಇಂಡಿಯಾ-ಬೇಸ್ಡ್ ಚಾನಲ್ ಆಗಿದ್ದು Zee Entertainment Enterprises ಒಡೆತನದಲ್ಲಿ ದುಬೈನಲ್ಲಿ ಆರಂಭವಾದ ಚಾನಲ್. ಸೌದಿ ಅರೇಬಿಯಾವನ್ನು ಒಳಗೊಂಡಂತೆ ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಂಡ ಚಾನಲ್ ಇದು. ನೈಲ್ ಸ್ಯಾಟ್‍ನಿಂದ ದಿನದ ಇಪ್ಪತ್ನಾಲ್ಕು ಘಂಟೆ ಬರೀ ಹಿಂದಿ ಸಿನಿಮಾಗಳನ್ನು ಮಾತ್ರ ಪ್ರಸಾರ ಮಾಡುವ ಚಾನಲ್ ಇದು. ಇದು ಮೊದಮೊದಲು ಹಿಂದಿ ಸಿನಿಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಿತ್ತು. ಆದರೆ ಇದೀಗ ಬಹುತೇಕ ಹಿಂದಿ ಸಿನಿಮಾಗಳನ್ನು ಅರೇಬಿಕ್ ಭಾಷೆಗೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಹೀಗಾಗಿ ಅವು ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರ ಜೊತೆಗೆ ಅದೇ ನೈಲ್ ಸ್ಯಾಟ್‍ನಲ್ಲಿ ಅರೇಬಿಕ್ ಸಬ್‍ಟೈಟಲ್‍ಗಳೊಂದಿಗೆ ಹಿಂದಿ ಸಿನಿಮಾಗಳನ್ನು ಪ್ರಸಾರ ಮಾಡುವ ಮತ್ತೊಂದು ಚಾನೆಲ್ ಎಂದರೆ B4U Aflam. ಇದರಲ್ಲೂ ದಿನದ ಇಪ್ಪತ್ನಾಲ್ಕು ಘಂಟೆ ಹಿಂದಿ ಸಿನೆಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಾರೆ.

    ಇಲ್ಲಿನವರು ಅದೆಷ್ಟು ತಮ್ಮ ಸಿನಿಮಾಗಳನ್ನು ನೋಡುತ್ತಾರೋ ಗೊತ್ತಿಲ್ಲ! ಆದರೆ ಅದಕ್ಕಿಂತ ಹೆಚ್ಚಾಗಿ ಈ ಎರಡು ಚಾನಲ್‍ಗಳಲ್ಲಿ ಪ್ರಸಾರವಾಗುವ ಹಿಂದಿ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹಾಗೆಂದೇ ಇಲ್ಲಿನವರಿಗೆ ನಮ್ಮ ಹಿಂದಿ ಚಲನಚಿತ್ರಗಳ ನಟ-ನಟಿಯರೆಲ್ಲಾ ಗೊತ್ತು. ನಮ್ಮ ಅನೇಕ ಹಿಂದಿ ಚಿತ್ರಗೀತೆಗಳು ಗೊತ್ತು. ನನ್ನ ಬಹಳಷ್ಟು ವಿದ್ಯಾರ್ಥಿಗಳು ಹಿಂದಿ ಸಿನಿಮಾಗಳ ಹಾಡುಗಳನ್ನು ತಮ್ಮ ಮೊಬೈಲ್‍ನಲ್ಲಿ ಹಾಕಿಕೊಂಡು ಆಗಾಗ್ಗ ಕೇಳುತ್ತಿರುತ್ತಾರೆ. ಇನ್ನು ನನ್ನ ವಿದ್ಯಾರ್ಥಿನಿಯರಂತೂ ಐಶ್ಚರ್ಯ್ ರೈ ಫ್ಯಾನ್ ಮಾತ್ರವಲ್ಲ ಆಕೆ ಹಾಕಿಕೊಳ್ಳುವ ಬಳೆ, ಡ್ರೆಸ್‍ಗಳ ಫ್ಯಾನ್ ಕೂಡ ಆಗಿದ್ದಾರೆ. ಆಕೆ ಅಭಿನಯಿಸಿದ “ಹಮ್ ದಿಲ್ ದೇ ಚುಕೆ ಸನಮ್” ಚಿತ್ರದ “ಆಖೋ ಕಿ.......” ಹಾಡೆಂದರೆ ಅವರಿಗೆ ಪಂಚಪ್ರಾಣ. “ಆ ಹಾಡಿನಲ್ಲಿ ಅದೆಷ್ಟು ಚನ್ನಾಗಿ ಕಾಣುತ್ತಾಳೆ? ಆ ಹಾಡಿನಲ್ಲಿ ಆಕೆ ಹಾಕಿಕೊಂಡಿರುವ ಡ್ರೆಸ್ಸ್‍ಗೆ ನಿಮ್ಮಲ್ಲಿ ಏನನ್ನುತ್ತಾರೆ? ಅಂಥದೊಂದು ಡ್ರೆಸ್ ನಮಗೂ ಒಂದು ತಂದುಕೊಡುತ್ತೀರಾ? How beautiful she is! We wish we were like Aishwarya Rai.” ಎಂದು ಆಕೆಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಅಂದಮೇಲೆ ಅವರಿಗೆ ಹಿಂದಿ ಸಿನಿಮಾಗಳ ಹುಚ್ಚು ಅದೆಷ್ಟಿರಬಹುದೆನ್ನುವದನ್ನು ನೀವೇ ಲೆಕ್ಕ ಹಾಕಿ! ನಾನು ಒಮ್ಮೆ ಅವರನ್ನು “ನಿಮಗೇಕೆ ಹಿಂದಿ ಸಿನಿಮಾಗಳೆಂದರೆ ಅಷ್ಟು ಇಷ್ಟ? ಅದರಲ್ಲಿ ಯಾವ ಅಂಶವನ್ನು ಇಷ್ಟಪಡುತ್ತೀರಿ?” ಎಂದು ಕೇಳಿದ್ದೆ. ಮುಖ್ಯವಾಗಿ ಹಾಡುಗಳು, ಡ್ಯಾನ್ಸ್, ಸೆಟ್ಟಿಂಗ್ಸ್, ಕಥೆ, ಮತ್ತು ಅವುಗಳಲ್ಲಿ ನವಿರು ನವಿರಾಗಿ ನಿರೂಪಿತವಾಗುವ ಪ್ರೀತಿ ಎಂದು ಮೈ ಕುಣಿಸುತ್ತಾ ಹುಬ್ಬು ಹಾರಿಸುತ್ತಾ ಹೇಳಿದ್ದರು. ಅಷ್ಟೇ ಅಲ್ಲ ನಮ್ಮ ಎಷ್ಟೋ ಹಿಂದಿ ಸಿನಿಮಾಗಳ ಲವ್ ಸೀನ್‍ಗಳು ಅವರ ಪ್ರೀತಿಗೂ ಪ್ರೇರಣೆಯಾಗಿವೆ ಎಂದು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

    ಇದರಿಂದಲೇ ಗೊತ್ತಾಗುತ್ತದಲ್ಲವೇ ಅವರಿಗೆ ನಮ್ಮ ಹಿಂದಿ ಸಿನಿಮಾಗಳೆಂದರೆ ಅದೆಷ್ಟು ಹುಚ್ಚು ಅಂತಾ? ಎತ್ತಣ ಹಿಂದಿ ಸಿನಿಮಾಗಳು, ಎತ್ತಣ ಲಿಬಿಯನ್‍ರು? ಎತ್ತಣದಿಂದೆತ್ತ ಸಂಬಂಧವಯ್ಯಾ?

    -ಉದಯ್ ಇಟಗಿ

    ಅಪ್ಪಾ, ನನ್ನ ನೆನಪುಗಳಲ್ಲಿ ನೀನೆಲ್ಲಿ?

  • ಬಿಸಿಲ ಹನಿ

  • ಅಪ್ಪನೇ,


    ನಾನು ನಿನ್ನನ್ನು ಹೀಗೆ ನೇರಾನೇರ ಬರೀ “ಅಪ್ಪನೇ” ಎಂದು ಕರೆದಿದ್ದು ನಿನಗೆ ಕಸಿವಿಸಿಯೆನಿಸುತ್ತಿರಬಹುದು. ಅಥವಾ ಅನ್ನಿಸದೆಯೂ ಇರಬಹುದು! ಕಸಿವಿಸಿ ಯಾಕೆಂದರೆ ಸೌಜನ್ಯಕ್ಕಾದರೂ ನನ್ನ ಮಗ ನನ್ನನ್ನು “ಪ್ರೀತಿಯ ಅಪ್ಪನೇ” ಎಂದು ಸಂಬೋಧಿಸಬಹುದಿತ್ತಲ್ಲ ಎಂದು! ಕ್ಷಮಿಸು! ನಾನು ನಿನನ್ನು ಹಾಗೆ ಕರೆಯಲಾರೆ! ಏಕೆಂದರೆ ನೀನು ಬರೀ ಅಪ್ಪನಾಗಿಯೇ ಉಳಿದೇ ಹೊರತು ನಮಗ್ಯಾರಿಗೂ ಪ್ರೀತಿಯ ಅಪ್ಪನಾಗುವ ಪ್ರಯತ್ನವನ್ನು ನೀನು ಯಾವತ್ತೂ ಮಾಡಲಿಲ್ಲ! ಪ್ರೀತಿಗೆ ಪಾತ್ರರಾಗದವರನ್ನು “ಪ್ರಿತಿಯ” ಎಂದು ಕರೆಯುವದಾದರೂ ಹೇಗೆ?

    ಹಾಗಂತ ನನಗೆ ಸೌಜನ್ಯವಾಗಲಿ, ಪ್ರೀತಿಸುವದಾಗಲಿ ಗೊತ್ತಿಲ್ಲ ಅಂತಾ ಅಲ್ಲಾ! ಖಂಡಿತ ಇದೆ! ನಿನ್ನ ಹೊಟ್ಟೆಯಲ್ಲಿ ಹುಟ್ಟಿಯೂ ನಿನ್ನಂತಾಗದೆ ಅದ್ಭುತವಾಗಿ ಪ್ರಿತಿಸುವದನ್ನು ಕಲಿತಿದ್ದೇನೆ, ಜವಾಬ್ದಾರಿಗಳನ್ನು ನಿರ್ವಹಿಸುವದನ್ನು ಕಲಿತಿದ್ದೇನೆ, ಕರ್ತವ್ಯಗಳನ್ನು ನಿಭಾಯಿಸುವದನ್ನು ಕಲಿತಿದ್ದೇನೆ. ಹೆಂಡತಿ-ಮಗಳ ಬೇಕು-ಬೇಡಗಳನ್ನು ಗಮನಿಸುವದನ್ನು ಕಲಿತಿದ್ದೇನೆ. ನಿನ್ನಂತೆ ಉಂಡಾಡಿ ಗುಂಡನಾಗದೆ ಘನತೆಯ ಬದುಕನ್ನು ಬದುಕುವದನ್ನು ಕಲಿತಿದ್ದೇನೆ!

    ನಿನಗೀಗ ಎಪ್ಪತ್ತೈದೋ ಎಪ್ಪತ್ತಾರೋ? ನನಗೆ ಮೂವತ್ತೆಂಟು! ಇವತ್ತು ಕುಳಿತುಕೊಂಡು ಈ ಮೂವತ್ತೆಂಟು ವರ್ಷಗಳಲ್ಲಿನ ನನ್ನ ನೆನಪುಗಳಲ್ಲಿ ನೀನೆಲ್ಲಿ? ಎಂದು ಹುಡುಕುತ್ತಿದ್ದೇನೆ. ಊಹೂಂ, ಎಲ್ಲೂ ನಿನ್ನ ಸುಳಿವೇ ಇಲ್ಲ! ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಇನ್ನೂ ಏನೇನೋ ನೆನಪುಗಳು ಅಂತಾ ಹೇಳುತ್ತಾರಲ್ಲ? ಇದ್ಯಾವ ನೆನಪುಗಳನ್ನು ನೀನು ನನಗೆ ಕೊಡದೆ ನನ್ನನ್ನು ವಂಚಿಸಿಬಿಟ್ಟಿ!

    ಯಾವತ್ತಾದರೂ ನೀನು ನನ್ನನ್ನು ನಿನ್ನ ಹೆಗಲ ಮೇಲೆ ಹೊತ್ತು ತಿರುಗಾಡಿದ್ದು, ನಿನ್ನ ನೋಡಿದ ಕೂಡಲೇ ನಾನು ನನ್ನ ಎರಡೂ ಕೈ ಚಾಚಿ ನಕ್ಕಿದ್ದು, ಒಂದು ದಿನವಾದರೂ ನನ್ನ ಕೈ ಹಿಡಿದು ನಡೆಸಿದ್ದು, ಒಂದು ನಾಲ್ಕು ರಸ್ತೆ ಸುತ್ತಿಸಿದ್ದು, ಹತ್ತಿರ ಕೂತು ಮಾತನಾಡಿದ್ದು, ಪ್ರೀತಿಯಿಂದ ನನ್ನ ಕರೆದಿದ್ದು, ಯಾವ ಸ್ಕೂಲು? ಏನು? ಎಂದು ವಿಚಾರಿಸಿದ್ದು. ಊಹೂಂ, ಒಂದೂ ನನ್ನ ನೆನಪಲ್ಲಿಲ್ಲ! ನಿನ್ನ ನೆನಪಲ್ಲೇನಾದರೂ ಇದೆಯಾ? ಹೋಗಲಿ, ನಾನು ಅಪ್ಪ ಎಂಬ ಸಲಿಗೆಯಿಂದ ನಿನ್ನ ಹತ್ತಿರ ಯಾವತ್ತಾದರೂ ಹಟ, ರಚ್ಚೆ ಹಿಡಿದಿದ್ದು, ಅದಕ್ಕೆ ಪ್ರತಿಯಾಗಿ ನೀನು ಗದರಿದ್ದು ನೆನಪಿದಿಯಾ? ಬಹುಶಃ, ಇರಲಿಕ್ಕಿಲ್ಲ! ಪ್ರೀತಿಸಿದರೆ ತಾನೆ? ದಂಡಿಸುವ ಹಕ್ಕು ಬರೋದು?

    ಇನ್ನು ಕಸಿವಿಸಿ ಅನಿಸದಿರಬಹುದು ಎಂದು ಹೇಳಿದ್ದು ಇಷ್ಟು ದಿನ ಯಾವೊಂದೂ ವಿಷಯಕ್ಕೆ ಕಸಿವಿಸಿಗೊಳ್ಳದವ ‘ಪ್ರೀತಿಯ’ ಎನ್ನುವ ಒಂದೇ ಒಂದು ಪದವನ್ನು ಪ್ರಯೋಗಿಸದಿದ್ದಕ್ಕೆ ಕಸಿವಿಸಿಗೊಳ್ಳುತ್ತೀಯಾ ಎಂದು ನನಗೆ ಅನಿಸುವದಿಲ್ಲ. ಏಕೆಂದರೆ ಏನು ತಿವಿದರೂ ಏನು ಅಂದರೂ ಏನೂ ಆಗದವ ನೀನು! ಏನೊಂದೂ ಆಗದವರ ಹತ್ತಿರ ಪ್ರೀತಿಯ ಅಗಾಧತೆ ಮತ್ತು ಅದಕ್ಕಂಟಿ ಬರುವ ಜವಾಬ್ದಾರಿಗಳ ಕುರಿತು ಮಾತನಾಡುವದರಲ್ಲಿ ಏನು ಅರ್ಥವಿದೆ?

    ನನಗೆ ಗೊತ್ತು ನನ್ನ ಈ ಪತ್ರ ನಿನ್ನ ಮನಸ್ಸನ್ನಾಗಲಿ, ಮಿದುಳನ್ನಾಗಲಿ ತಟ್ಟಲಾರದೆಂದು. ಆದರೂ ಇದನ್ನು ಬರೆಯುತ್ತಿದ್ದೇನೆ! ಏಕೆ ಗೊತ್ತಾ? ನನ್ನೊಳಗಿನ ಸಿಟ್ಟನ್ನು, ಕೇವಲ ನನ್ನೊಳಗಿನ ಸಿಟ್ಟನ್ನು ಹೊರಹಾಕುವದಕ್ಕೆ ಮಾತ್ರ! ಅದಾಗಲೇ ನಿನ್ನ ಬಗ್ಗೆ ಆಗಾಗ ಅಲ್ಲಲ್ಲಿ ಅಷ್ಟಿಷ್ಟು ಬರೆದು ನನ್ನ ಸಿಟ್ಟನ್ನು, ಆಕ್ರೋಶವನ್ನು ಹೊರಹಾಕಿದ್ದೇನೆ. ಆದರೂ ಕಮ್ಮಿಯಾಗಿಲ್ಲ ನೋಡು! ಹೊರಹಾಕಿದಷ್ಟೂ ಮತ್ತೆ ಮತ್ತೆ ಉಕ್ಕಿ ಬರುತ್ತಲೇ ಇರುತ್ತದೆ!

    ಅಪ್ಪ ನನಗೆ ಬರೀ ನೆನಪು! ಎದುರಿಗೆ ಅಲೆದಾಡೋ ನೀನು ಅವನ ಭೂತ! ಜೀವಂತವಾಗಿದ್ದು ಇಲ್ಲದೆ ಛಾಯೆಯಾಗಿ ಬದುಕುವ ಸ್ಥಿತಿ ತಲುಪಿ ಬಿಟ್ಟಿದ್ದೀಯಾ. ಏಕೆಂದರೆ ನಾನು ಬುದ್ಧಿ ಬಂದಾಗಿಂದ ನಿನ್ನೊಟ್ಟಿಗಿನ ನನ್ನ ತಂತುಗಳನ್ನು ಕಡಿದುಕೊಂಡು ಬಂದಿದ್ದೇನೆ. ಒಂದು ವೇಳೆ ನೀನು ಇಲ್ಲದೇ ಇದ್ದಿದ್ದರೆ ನಿನ್ನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುತಿದ್ದೆ. ಎದುರಿಗಿದ್ದು ಇಲ್ಲದ ಹಾಗೆ ಆದೆಲ್ಲ! ನನಪಿನಲ್ಲಿ ಎದುರುಗಡೆ ಕೂತು ಕೈಗೆ ಸಿಗದೆ, ಕನಸಿನಲ್ಲೂ ತಂದೆ ಸುಖ ಇಲ್ಲದ ಹಾಗೆ ಮಾಡಿದೆಯೆಲ್ಲ? ನಾನಿವತ್ತು ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ ನಿನ್ನಂತ ಅಪ್ಪನಿಗೆ ಮಗನಾಗಿ ಹುಟ್ಟಿಯೂ ನಾನು ನಿನ್ನಂತಾಗದೆ ನನ್ನ ಬುದ್ಧಿ ಮತ್ತು ಚೈತನ್ಯದ ಮೇಲೆ ಮೇಲೆ ಬಂದಿದ್ದೇನೆಂದು ಹೇಳಲು! ಅದಕ್ಕೆ ನಿನ್ನ ಜೀನ್ಸ್ ಗಳು ಸಹಕಾರಿಯಾಗಿರಬಹುದು ಎಂದು ನೀನು ಒಳಗೊಳಗೆ ಎಣಿಸಿ ಹೆಮ್ಮಪಡುತ್ತಿದ್ದರೆ ಅದು ನಿನ್ನ ತಪ್ಪು! ಏಕೆಂದರೆ ನಿನ್ನ ಜೀನ್ಸ್‍ ಗಳೇನಿದ್ದರೂ ನನ್ನನ್ನು ನಿನ್ನಂತೆ ಕಾಣಿಸಿಕೊಳ್ಳುವದರಲ್ಲಿ ಮಾತ್ರ ಸಹಕಾರಿಯಾದವೇ ಹೊರತು ನಿನ್ನ ಬುದ್ಧಿ ಮತ್ತು ಗುಣವನ್ನು ರೂಪಿಸುವಲ್ಲಿ ಅಲ್ಲ! ಹಾಗೆಂದೇ ನಾನಿವತ್ತು ಎಲ್ಲ ಸ್ತರಗಳಲ್ಲಿ ನಿನಗಿಂತ ಎಷ್ಟೋ ಭಿನ್ನವಾಗಿ ನಿಂತಿದ್ದೇನೆ!

    ಅಂದಹಾಗೆ ನೀನು ನನಗೆ ನಿನ್ನ ಜೀನ್ಸ್ ಗಳನ್ನು ಕೊಡುವದರ ಜೊತೆಗೆ ಒಂದಿಷ್ಟು ಪ್ರಿತಿಯನ್ನೂ ಕೊಟ್ಟಿದ್ದಿದ್ದರೆ ಬಹುಶಃ, ಇವತ್ತು ಯಾವ ಮಕ್ಕಳೂ ಬರೆಯಲಾರದಂಥ ಅದ್ಭುತವಾದಂಥ ಒಲುಮೆಯ ಪತ್ರವೊಂದನ್ನು ನಿನಗೆ ಬರೆದು ನಿನ್ನನ್ನು ಈ ಜಗತ್ತು ಹಾಡಿ ಹೊಗಳುವಂತೆ ಮಾಡುತ್ತಿದ್ದೆನೇನೋ!

    ಕ್ಷಮಿಸು, ಆ ಅದೃಷ್ಟಕ್ಕೆ ನೀನು ಪಾತ್ರನಾಗಲಿಲ್ಲ!

    ಇತಿ ನಿನ್ನ ಮಗ

    ಉದಯ್ ಇಟಗಿ



    ಮರಭೂಮಿಯೆಂದರೆ ಬರೀ ಮರಳಲ್ಲ..........

  • ಶನಿವಾರ, ಜೂನ್ 08, 2013
  • ಬಿಸಿಲ ಹನಿ
  • ನಾನು ಸೆಭಾಕ್ಕೆ ಬಂದ ಮಾರನೆಯ ದಿನವೇ ನಮ್ಮ ಯೂನಿವರ್ಷಿಟಿಯವರು ನನಗೆ ಅಲ್ಲಿಂದ 660K.M ದೂರವಿರುವ ಘಾಟ್ Arts & Science ಕಾಲೇಜಿಗೆ ಪೋಸ್ಟಿಂಗ್ ಆಗಿದೆಯೆಂದೂ ಹಾಗೂ ಅದಾಗಲೇ ಕ್ಲಾಸುಗಳು ಆರಂಭವಾಗಿರುವದರಿಂದ ನಾನು ಘಾಟ್‍ಗೆ ತಕ್ಷಣ ಹೋಗಬೇಕೆಂದೂ ಹೇಳಿದರು. ಆ ಪ್ರಕಾರ ಮಾರನೆಯ ದಿನ ಟ್ಯಾಕ್ಸಿಯೊಂದನ್ನು ನಾನುಳಿದುಕೊಂಡಿರುವ ಹೋಟೆಲ್‍ಗೆ ನನ್ನನ್ನು ಪಿಕ್ ಮಾಡಲು ಕಳಿಸಿದ್ದರು. ಆ ಟ್ಯಾಕ್ಸಿ ಡ್ರೈವರ್ ಬೆಳಿಗ್ಗೆ 11.30ಕ್ಕೆ ನನ್ನನ್ನು ಕರೆದುಕೊಂಡು ಘಾಟ್‍ನತ್ತ ಹೊರಟ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ‘ಸಹರಾ’ ಅಡ್ದಲಾಗಿ ಮಲಗಿತ್ತು. ಎಲ್ಲಿ ನೋಡಿದರಲ್ಲಿ ಮರಳು, ಮರಳು, ಬರೀ ಮರಳು! ನಾನು ಮೊಟ್ಟ ಮೊದಲಬಾರಿಗೆ ನನ್ನ ಜೀವನದಲ್ಲಿ ಮರಭೂಮಿಯೊಂದನ್ನು ನೋಡಿದ್ದೆ; ಅದೂ ಜಗತ್ತಿನ ಅತಿ ದೊಡ್ದ ಮರಭೂಮಿಯನ್ನು! ನೋಡುವ ಮೊದಲು ಮರಭೂಮಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೆ: ಮರಭೂಮಿಯೆಂದರೆ ಬರೀ ಮರಳು ಮತ್ತು ಬಿಸಿಲು ಮಾತ್ರ ಎಂದಕೊಂಡಿದ್ದೆ. ಆದರೆ ಇಲ್ಲಿಯೂ ಒಂದು ಭಯಂಕರ ಚಳಿಗಾಲ ಇರುತ್ತದೆ ಎನ್ನುವದು ನನ್ನ ಗಮನಕ್ಕೆ ಬಂದಿದ್ದು ನಾನಿಲ್ಲಿ ವಾಸಿಸಲು ಆರಂಭಿಸಿದಾಗಲೇ! ಮರಭೂಮಿಯೆಂದರೆ ಬರಡಾಗಿರುತ್ತದೆ, ಅಲ್ಲಿ ಏನೂ ಬೆಳೆಯುವದಿಲ್ಲ, ನೀರು ಸಿಗುವದಿಲ್ಲ, ನೀರನ್ನು ಹುಡುಕಿಕೊಂಡು ಜನ ಮೈಲಿಗಟ್ಟಲೆ ಹೋಗುತ್ತಾರೆ ಹಾಗೆ ಹೀಗೆ ಇನ್ನೂ ಏನೇನೋ........ ಇದೀಗ ಅದನ್ನೆಲ್ಲಾ ಕಣ್ಣಾರೆ ಕಂಡು ಅನುಭವಿಸುವ ಪರಿ ನನ್ನದಾಗಿತ್ತು. ವಿಪರ್ಯಾಸವೆಂದರೆ ಇಂಥ ಮರಭೂಮಿಯಲ್ಲಿ ನನ್ನ ಬದುಕಿನ ಹಸಿರನ್ನು ಹುಡುಕಿ ಬಂದಿದ್ದೆ. ನಾನು ಘಾಟ್‍ಗೆ ಬಂದ ಹೊಸತರಲ್ಲಿಯೇ ನನ್ನ ಇಂಡಿಯನ್ ಸಹೋದ್ಯೋಗಿಗಳು ಹಾಗೂ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಹಲ್ಲಿನ ಡಾಕ್ಟರ್ ಆಗಿದ್ದ ನಮ್ಮ ಇಂಡಿಯನ್ ಡಾಕ್ಟರ್ ಸುನೀಲ್ ಅವರನ್ನು ಕರೆದುಕೊಂಡು ಸಹರಾ ಮರಭೂಮಿಯನ್ನು ನೋಡಲು ಹೊರಟೆ. ಅದೇನೋ ಗೊತ್ತಿಲ್ಲ! ನನಗೆ ಒಮ್ಮೆ ಮರಭೂಮಿಯ ಒಳಗೆ ಹೋಗಿ ಬರಬೇಕು, ಅದರ ಒಡಲಾಳವನ್ನು ಬಗೆದು ನೋಡಬೇಕು ಎನ್ನುವ ಅದಮ್ಯ ಬಯಕೆ ಹೆಚ್ಚಾಗಿಬಿಟ್ಟಿತ್ತು.
    ಜಗತ್ತಿನ ಅತಿ ದೊಡ್ಡ ಮರಭೂಮಿಯಾದ ಸಹರಾ ಸುಮಾರು ಒಂಬತ್ತು ಮಿಲಿಯನ್ ಚ.ಕಿ.ಮಿ.ನಷ್ಟು ದೊಡ್ಡದಾಗಿದ್ದು ಸಹರಾ ಆಫ್ರಿಕಾ ಖಂಡದ 1/3 ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇದು ಆದಿ, ಮಧ್ಯ, ಹಾಗೂ ಅಂತ್ಯ ಸಹರಾ ಮರಭೂಮಿಗಳಾಗಿ ವಿಭಜನೆ ಹೊಂದಿದ್ದು ಮಧ್ಯದ ಭಾಗವು ಲಿಬಿಯಾ ಮತ್ತು ಅಲ್ಜಿರೀಯಾದಲ್ಲಿದೆ. ನಾವಿರುವ ಊರು ಘಾಟ್ ಸಹರಾ ಮರಭೂಮಿಯ ಮಧ್ಯಯೇ ಇದೆ! ಸುತ್ತಲೂ ಮರಭೂಮಿ. ನಡುವೆ ಈ ಊರು. ಈ ಊರಿಂದಾಚೆ ನಾವು ಯಾವ ದಿಕ್ಕಿನೆಡೆಗಾದರೂ ಸರಿ ಸ್ವಲ್ಪ ದೂರಕ್ಕೆ ನಡೆದುಕೊಂಡು ಬಂದರೆ ಸಾಕು ತಟ್ಟನೆ ನಮ್ಮ ಕಣ್ಣಿಗೆ ಕಾಣಿಸುವದು ಬರೀ ಮರಳು, ಮರಳು ಮತ್ತು ಮರಳು! ಇಲ್ಲಿ ಮರಳು ಬಿಟ್ಟರೆ ಬೆರೇನೂ ಇಲ್ಲ! ಹಾಗಂತಾ ಇತರರಂತೆ ನಾನೂ ನಂಬಿದ್ದೆ. ಆದರೆ ಯಾವಾಗ ಒಮ್ಮೆ ಸಹರಾ ಮರಭೂಮಿಯ ಒಳಹೊಕ್ಕು ಬಂದೆನೋ ಆಗ ನನ್ನ ನಂಬಿಕೆಗಳೆಲ್ಲಾ ತಲೆಕೆಳಗಾಗಿದ್ದವು. ಅಲ್ಲಲ್ಲಿ ಚಿತ್ತಚಿತ್ತಾರವಾಗಿ ಬಿದ್ದುಕೊಂಡ ಒಂದಷ್ಟು ಮರಳು ಗುಡ್ಡಗಳು, ಆ ಗುಡ್ದಗಳ ಅಕ್ಕಪಕ್ಕದಲ್ಲಿ ಬೆಳೆದ ಒಂದಿಷ್ಟು ಹಸಿರು ಪೊದೆಗಳು. ಪೊದೆಗಳಿಗೆ ಸ್ವಲ್ಪ ದೂರದಲ್ಲಿಯೇ ಎತ್ತರಕ್ಕೆ ಬೆಳೆದು ನಿಂತ ಮರಗಳು, ಅಲ್ಲಲ್ಲಿ ಸಿಗುವ ಒಂದಷ್ಟು ಸಿಹಿನೀರ ಒರತೆಗಳು. ಚಿಕ್ಕ ಚಿಕ್ಕ ಝರಿಗಳು, ಬಿಸಿನೀರ ಬುಗ್ಗೆಗಳು, ಇವುಗಳ ಮಧ್ಯ ವ್ಯವಸಾಯಕ್ಕಾಗಿ ಉಪಯೋಗಿಸಲ್ಪಡುವ ಒಂದಷ್ಟು ಫಲವತ್ತಾದ ನೆಲ, ಈ ನೆಲದೊಳಗೆ ಹುದುಗಿರುವ ಅಪಾರ ಅಂತರ್ಜಲ, ವರ್ಷದಲ್ಲಿ ಒಂದೋ ಎರಡೋ ಸಾರಿ ಬೀಳುವ ಮಳೆ, ಅಬ್ಬಾ, ಒಂದೇ? ಎರಡೇ? ಈ ಬೃಹತ್ ಮರಭೂಮಿಯಲ್ಲಿ ಏನೇನೆಲ್ಲಾ ಇದೆ! ಅದನ್ನೆಲ್ಲಾ ಕಂಡುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ನಮಗಿರಬೇಕಷ್ಟೇ ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ.
    ಇಲ್ಲಿನ ಸಹರಾ ಮರಭೂಮಿಯಲ್ಲಿ ಸುಮಾರು 200 ಕಿ.ಮಿ. ಉದ್ದದಷ್ಟು ಬೃಹದಾಕಾರವಾಗಿ ಬೆಳೆದುನಿಂತ ಪರ್ವತವೊಂದಿದೆ. ಅದೇ ‘ಅಕಾಕುಸ್’ ಪರ್ವತ. ಈ ಪರ್ವತ ಘಾಟ್‍ನಿಂದ ಸುಮಾರು 200 ಕಿ.ಮಿ. ದೂರವಿರುವ ಅವಿನಾತ್ ಎಂಬ ಹಳ್ಳಿಯಿಂದ ಆರಂಭವಾಗಿ ಘಾಟ್ ಮೂಲಕ ಹಾಯ್ದು ಇಲ್ಲಿಂದ ಎಂಟು ಕಿ.ಮಿ. ದೂರವಿರುವ ಆಲ್ ಬರ್ಕತ್ ಎಂಬ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಸಾಗಿ ಕೊನೆಗೊಳ್ಳುತ್ತದೆ. ಈ ಮರಭೂಮಿಯ ನಡುವೆ ಈ ಪರ್ವತ ಹೇಗೆ ಸೃಷ್ಟಿಯಾಯಿತು ಎಂದು ಸ್ಥಳಿಯರನ್ನು ಕೇಳಿದರೆ ಇಲ್ಲಿ ಹಿಂದೆ ಸಮುದ್ರವಿತ್ತಂತೆ, ಆ ಸಮುದ್ರದಲ್ಲಿ ದೊಡ್ದ ದೊಡ್ದ ಕಲ್ಲಿನ ಬಂಡೆಗಳು, ಬೆಟ್ಟಗುಡ್ಡಗಳು ಇದ್ದು ಸಮುದ್ರ ಕರಗಿಹೋದ ಮೇಲೆ ಬರೀ ಮರಳು ಮತ್ತು ಈ ಕಲ್ಲು ಪರ್ವತ ಮಾತ್ರ ಉಳಿದುಕೊಂಡಿವೆ ಎಂದು ಹೇಳುತ್ತಾರೆ. ‘ಅಕಾಕುಸ್’ ಪರ್ವತ ಅತ್ಯಂತ ಪುರಾತನವಾಗಿದ್ದು ಇಲ್ಲಿ ಈಜಿಪ್ಟ್ ನಾಗರಿಕತೆ ಹುಟ್ಟುವದಕ್ಕಿಂತ ಮುಂಚೆಯೇ ನಮಗೆ ಗೊತ್ತೇ ಇರದ ಪುರಾತನ ನಾಗರಿಕತೆಗಳು ಹುಟ್ಟಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಏಕೆಂದರೆ ಈ ಪರ್ವತದೊಳಗೆ ಹನ್ನೆರೆಡು ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು ಇದ್ದು ಅಲ್ಲಿ ಮಾನವರು ವಾಸಿಸಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಹಾಗೂ ಇಲ್ಲಿ ಸಿಕ್ಕ ಕೆಲವು ಆಯುಧಗಳು ಮತ್ತು ಚಿತ್ರಗಳು ಆ ಜನರವೇ ಎಂದು ಹೇಳಲಾಗುತ್ತದೆ. ಏನೇ ಆಗಲಿ ಈ ಅಕಾಕುಸ್ ಪರ್ವತ ಸಹರಾ ಮರಭೂಮಿಗೆ ಒಂದು ಕಳಶವಿದ್ದಂತಿದ್ದು ಇಲ್ಲಿನ ಮರಭೂಮಿಗೆ ಒಂದು ವಿಶೇಷ ಸೌಂದರ್ಯವನ್ನು ತಂದುಕೊಟ್ಟಿದೆ. ಹಾಗೆಂದೇ ಸಹರಾ ಮರಭೂಮಿಯನ್ನು ನೋಡಲು ಬಂದ ಪ್ರವಾಸಿಗರ್ಯಾರು ಇದನ್ನು ನೋಡದೆ ಹಾಗೆ ಹೋಗುವದಿಲ್ಲ. ಇಲ್ಲಿಗೆ ಸಾಕಷ್ಟು ಜನ ಯೂರೋಪಿಯನ್ನರು ಪ್ರವಾಸಕ್ಕೆಂದು ಬಂದು ಮರಭೂಮಿಯ ಮಧ್ಯ ಟೆಂಟ್‍ಗಳನ್ನು ಹಾಕಿಕೊಂಡು ಎರಡ್ಮೂರು ದಿನವಿದ್ದು ಹೋಗುತ್ತಾರೆ. ಘಾಟ್‍ನಿಂದ ಹನ್ನೆರೆಡು ಕಿ.ಮಿ. ದೂರದಲ್ಲಿ ಅಂದರೆ ಸಹರಾ ಮರಭೂಮಿಯ ಅಂತರಾಳದಲ್ಲಿ ಬಿಸಿನೀರಿನ ಬುಗ್ಗೆಯೊಂದು ಇದೆ. ಆ ಬಿಸಿನೀರಿನ ಬುಗ್ಗೆ ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು ಕೀಲುನೋವು. ಮಂಡಿನೋವು, ಹಾಗೂ ಚರ್ಮರೋಗವನ್ನು ಬಹುಬೇಗನೆ ಗುಣಪಡಿಸುತ್ತದೆ ಎಂದು ಇಲ್ಲಿನವರು ಹೇಳುತ್ತಾರೆ. ಈ ಬಿಸಿನೀರಿನ ಬುಗ್ಗೆಗೆ ಎರಡು ಪ್ರತ್ಯೇಕ ಪೈಪ್‍ಗಳನ್ನು ಜೋಡಿಸಿದ್ದು ಅವು ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಕಟ್ಟಿಸಲಾದ ಸ್ನಾನಗೃಹದ ಎರಡು ದೊಡ್ಡ ಟಬ್‍ಗಳಿಗೆ ಬೀಳುವಂತೆ ಮಾಡಿದ್ದಾರೆ. ಆ ಟಬ್‍ನಲ್ಲಿ ಸುಮಾರು ಎಂಟತ್ತು ಜನ ಒಟ್ಟಿಗೆ ಸ್ನಾನಮಾಡಬಹುದು. ಕೀಲುನೋವು, ಮಂಡಿನೋವು, ಹಾಗೂ ಚರ್ಮರೋಗದ ಖಾಯಿಲೆಯಿರುವವರು ಚಿಕಿತ್ಸೆ ಪಡೆಯಲು ಗಂಟೆಗಟ್ಟಲೆ ಈ ಟಬ್‍ನಲ್ಲಿ ಬಿದ್ದುಕೊಂಡಿರುತ್ತಾರೆ. ಎಷ್ಟೋ ಜನ ದೂರದ ಊರುಗಳಿಂದ ಬಂದು ಇಲ್ಲಿ ಟೆಂಟ್ ಹಾಕಿಕೊಂಡು ತಿಂಗಳಾನುಗಟ್ಟಲೆ ವಾಸಮಾಡಿ ಚಿಕಿತ್ಸೆ ಪಡೆದು ಹಿಂದಿರುಗುತ್ತಾರೆ.
    ನಾನಿರುವ ಊರು ಘಾಟ್‍ನಿಂದ 100 ಕಿ.ಮಿ. ದೂರದಲ್ಲಿರುವ ಅವಿನಾತ್ ಎಂಬ ಊರಿದೆ. ಅಲ್ಲಿನ ಸಹರಾ ಮರಭೂಮಿಯಲ್ಲಿ ನೈಸರ್ಗಿಕವಾಗಿ ಉದ್ಭವಿಸಿದ ಅಪರೂಪದ ಶಿಲಾಕೃತಿಗಳಿವೆ. ಅವು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಲ್ಲಿಂದ 350 ಕಿ.ಮಿ. ದೂರದಲ್ಲಿರುವ ಒಬಾರಿ ಎಂಬ ಪಟ್ಟಣಕ್ಕೆ ಹತ್ತಿರದಲ್ಲಿ “ಗೆಬ್ರಾನ್” ಎಂಬ ಒಂದು ಸರೋವರವಿದೆ. ಇದು ನಯನಮನೋಹರವಾಗಿದ್ದು ಲಿಬಿಯಾದಲ್ಲಿ ಅತ್ಯಂತ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ಮರಳು ದಿನ್ನೆಗಳ ಮಧ್ಯ ಇದ್ದು ಸುತ್ತಲೂ ತಾಳೆಮರಗಳಿಂದ ಆವರಿಸಲ್ಪಟ್ಟಿದೆ. “ಗೆಬ್ರಾನ್” ಎನ್ನುವದು ಗೆಬರ್ (ಸಮಾಧಿ) ಮತ್ತು ಆನ್ (ಒಂದು ಹೆಸರು) ಎಂಬ ಎರಡು ಪದಗಳಿಂದ ಉಂಟಾಗಿದ್ದು ಪುರಾತನ ಕಾಲದ ವಲಸೆಗರ ಗುಂಪೊಂದು ಇಲ್ಲಿ ಸ್ವಲ್ಪ ದಿವಸ ತಂಗಿ ಮುಂದೆ ಹೋಗಿರಬಹುದು ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮರಳಲ್ಲಿ ಹೂತು ಹೋದ ಅವರ ಸಮಾಧಿಗಳು ಈಗಲೂ ಕಾಣಿಸುತ್ತವೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಫೆಜಾನ್ ಎಂಬ ಹಳ್ಳಿಯಿದೆ. ಇಲ್ಲಿ ಪೆಲಿಯೋಲಿಥಿಕ್ ಮತ್ತು ನಿಯೋಲಿಥಿಕ್ ಕಾಲದ ಜನರು ಬಳಸುತ್ತಿದ್ದ ಕೊಡ್ಲಿ ಹಾಗೂ ಮತ್ತಿತರ ಆಯುಧಗಳು ದೊರಕಿವೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳುತ್ತಾರೆ.
     ಮರುಭೂಮಿಯಲ್ಲಿ ನೀರು ಸಿಗುವದೆಂದರೆ ಕೇವಲ ಓಯಾಸಿಸ್ನಲ್ಲಿ ಮಾತ್ರ ಎಂದುಕೊಂಡಿರುವ ಜನರಿಗೆ ಇಲ್ಲೂ ಅಂತರ್ಜಲ ಅಪಾರವಾಗಿದ್ದು ನೆಲದಲ್ಲಿ ನೀರು ಹೇರಳವಾಗಿ ಓಡಾಡುತ್ತಿದೆ ಎಂಬುದು ಗೊತ್ತಿರುವುದಿಲ್ಲ. ಅದೂ ಇಲ್ಲಿನ (ಬೇರೆ ಕಡೆ ಹೇಗೋ ಗೊತ್ತಿಲ್ಲ) ಸಹರಾ ಮರಭೂಮಿಯಲ್ಲಿ ಅಂತರ್ಜಲ ಸಮೃದ್ಧವಾಗಿದ್ದು ಸುಮಾರು ನಲವತ್ತು ಐವತ್ತು ಅಡಿಗೆಲ್ಲಾ ನೀರು ಸಿಕ್ಕುಬಿಡುತ್ತದೆ. ಇತ್ತೀಚಿಗೆ ಇಲ್ಲಿ ಭೂವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಬೇರೆ ಜಾಗಕ್ಕಿಂತ ಇಲ್ಲಿ ಅಂತರ್ಜಲ ಹತ್ತುಪಟ್ಟು ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಹಾಗೆಂದೇ ಇಲ್ಲಿ ಯಾವ ಜಾಗದಲ್ಲಿ ಬೇಕಾದರೂ ಬೋರ್ ಹಾಕಿದರೆ ಬಹಳ ಬೇಗನೆ ನೀರು ಸಿಕ್ಕುಬಿಡುತ್ತದೆ ಮತ್ತು ಅದು ಹೆಚ್ಚುಕಮ್ಮಿ ಸಿಹಿಯಾಗಿರುತ್ತದೆ. ನೀವು ನಂಬುತ್ತಿರೋ ಇಲ್ವೋ ಘಾಟ್‍ನಲ್ಲಿ ನಮ್ಮ ಕಾಲೇಜು ಹತ್ತಿರದಲ್ಲಿ ಬೋರ್ವೆಲ್‍ವೊಂದನ್ನು ಹಾಕಿದ್ದು ಅದು ಸುಮಾರು 35 ವರ್ಷಗಳಿಂದ ಅರ್ಧ ಘಾಟ್‍ಗಾಗುವಷ್ಟು ನೀರನ್ನು ಒದಗಿಸುತ್ತಿದೆಯೆಂದೂ ಇಷ್ಟಾದರೂ ಅದರ ಅಂತರ್ಜಲ ಮಾತ್ರ ಕುಸಿದಿಲ್ಲವೆಂದೂ ಇಲ್ಲಿಯ ಜನ ಹೇಳುತ್ತಾರೆ. ಆರು ವರ್ಷದ ನನ್ನ ಘಾಟ್ ಜೀವನದಲ್ಲಿ ಒಂದು ವರ್ಷವೂ ಇಲ್ಲಿನ ಜನ ನೀರಿಗಾಗಿ ತಹತಹಿಸಿದ್ದನ್ನು ನಾನು ನೋಡಿಲ್ಲ. ಮಳೆಯೇ ಬೀಳದ ಈ ಪ್ರದೇಶದಲ್ಲಿ ಅದ್ಹೇಗೆ ನೀರು ಶೇಖರಣೆಗೊಂಡಿದೆ ಹಾಗೂ ವರ್ಷದಿಂದ ವರ್ಷಕ್ಕೆ ಅದ್ಹೇಗೆ ಹೆಚ್ಚುತ್ತಾ ಹೋಗುತ್ತದೆ ಎನ್ನುವ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ.
    1953ರಲ್ಲಿ ತೈಲ ಹುಡುಕಾಟಕ್ಕಾಗಿ ಇಲ್ಲಿನ ಭೂಮಿಯನ್ನು ಕೊರಯುತ್ತಿರಬೇಕಾದರೆ ಅಪಾರ ಪ್ರಮಾಣದ ಸಿಹಿನೀರು ಚಿಮ್ಮಿ ಇಲ್ಲಿನ ನೆಲದೊಳಗೆ ಅಡಗಿರುವ ಅಪಾರ ಪ್ರಮಾಣದ ಜಲಸಂಪತ್ತನ್ನು ಪರಿಚಯಿಸತಂತೆ. ಮುಂದೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ಇದರ ಸದ್ಬಳಕೆ ಮಾಡಿಕೊಳ್ಳಲು ಮಾನವ ನಿರ್ಮಿತ ನೀರಾವರಿ ಯೋಜನೆಯೊಂದಕ್ಕೆ ಕೈಹಾಕಿದನಂತೆ. ಅದು 1984ರಲ್ಲಿ ಪೂರ್ಣಗೊಂಡು ಜಗತ್ತಿನ ಅತಿ ದೊಡ್ದ ಮಾನವ ನಿರ್ಮಿತ ನದಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತಂತೆ. ಇಡಿ ಲಿಬಿಯಾದ ತುಂಬಾ ಸುಮಾರು 1,300 ಬಾವಿಗಳಿದ್ದು ದಿನವೊಂದಕ್ಕೆ 7,100,000 ಕ್ಯೂಬಿಕ್ ಮೀಟರ್ ಗಳಷ್ಟು ಟ್ರಪೋಲಿ, ಬೆಂಗಾಜಿ, ಸಿರ್ತ್ ಮುಂತಾದ ನಗರಗಳಿಗೆ ನೀರು ಸರಬರಜಾಗುತ್ತದೆ ಹಾಗೂ ಇದೇ ನೀರನ್ನು ಉಪಯೋಗಿಸಿಕೊಂಡು ಮರಭೂಮಿಯಲ್ಲಿ ಅಲ್ಲಲ್ಲಿ ಬೇಸಾಯ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವವರಿದ್ದಾರೆ. ಹಾಗೆ ನೋಡಿದರೆ ಲಿಬಿಯಾದ ಕೃಷಿ ಚಟುವಟಿಕೆಗಳು ಹೆಚ್ಚು ನಡೆಯುವದು ಸಮುದ್ರ ತೀರದ ಪ್ರದೇಶಗಳಲ್ಲಿ. ಅಲ್ಲಿ ಮುಖ್ಯವಾಗಿ ಬಾರ್ಲಿ, ಗೋದಿ, ಟೊಮ್ಯಾಟೋ, ಕಿತ್ತಳೆ, ಸೇಬು, ಕಲ್ಲಂಗಡಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೆಂದೇ ಹೆಚ್ಚಿನ ತರಕಾರಿಗಳು ಟ್ರಿಪೋಲಿ, ಬೆಂಗಾಜಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಆದರೆ ಇಲ್ಲಿ ಮರಭೂಮಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋದಿ, ಬಾರ್ಲಿ, ಕಲ್ಲಂಗಡಿ, ಟೊಮ್ಯಾಟೋ ಮತ್ತು ಮುಖ್ಯವಾಗಿ ಖರ್ಜೂರಗಳನ್ನು ಬೆಳೆಯುತ್ತಾರೆ. ಲಿಬಿಯಾದ ದಕ್ಷಿಣ ಭಾಗದಲ್ಲಿ ಹೆಚ್ಚು ಹಳ್ಳಿಗಳೇ ಇದ್ದು ಇಲ್ಲಿನ ಜನರು ಆಡುಕುರಿಗಳನ್ನು ಸಾಕುವದರಿಂದ ಅವಕ್ಕೆ ಬೇಕಾದ ಹುಲ್ಲನ್ನು ಸಹ ಬೆಳೆದು ಮಾರುತ್ತಾರೆ. ಆದರೆ ಹಾಲು ಮತ್ತು ಮೊಸರಿನ ಪ್ಯಾಕ್ಗಳು ಇಲ್ಲಿಂದ 1500 ಕಿ.ಮಿ. ದೂರದಲ್ಲಿರುವ ಮಿಸ್ರತಾ ಎಂಬ ಊರಿನಿಂದ ಇಲ್ಲಿಗೆ ಬರುತ್ತವೆ. ಮತ್ತು ಬಹಳಷ್ಟು ತರಕಾರಿಗಳು ಸೆಭಾ ಮತ್ತು ಒಬಾರಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಅಂದಹಾಗೆ ಇಲ್ಲಿನವರು ಆಡುಕರಿಗಳನ್ನು ಸಾಕುವದು ಹಬ್ಬಹರಿದಿನಗಳಲ್ಲಿ ಅವುಗಳನ್ನು ಮಾರಿ ಲಾಭಮಾಡಿಕೊಳ್ಳುವದಕ್ಕೆ. ಅಂದರೆ ಅವು ಚಿಕ್ಕವಾಗಿದ್ದಾಗ ಸಣ್ಣ ಬೆಲೆಗೆ ತಂದು ತಮ್ಮ ಫಾರ್ಮ್ ಹೌಸ್‍ಗಳಲ್ಲಿ ಸಾಕಿ ಅವಕ್ಕೆ ಚನ್ನಾಗಿ ತಿನಿಸಿ ದೊಡ್ದದಾದ ಮೇಲೆ ರಮದಾನ್ ಮತ್ತು ಈದ್ ಹಬ್ಬಗಳಿಗೆ ಇತರರಿಗೆ ಒಳ್ಳೆ ಬೆಲೆಗೆ ಮಾರಿ ಲಾಭಮಾಡಿಕೊಳ್ಳುತ್ತಾರೆ.

    ಈಗ ಹೇಳಿ ಮರಭೂಮಿಯೆಂದರೆ ಬರೀ ಬಿಸಿಲು ಮತ್ತು ಮರಳು ಮಾತ್ರವೇ?



    -ಉದಯ್ ಇಟಗಿ



    ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ

  • ಸೋಮವಾರ, ಫೆಬ್ರವರಿ 18, 2013
  • ಬಿಸಿಲ ಹನಿ
  • ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಹುಲಿಯಂತೆ ಮೆರೆದು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾದ ಮೌಮರ್ ಗಡಾಫಿ ತನ್ನ ದಕ್ಷ ಆಡಳಿತಕ್ಕೆ ಹೆಸರುವಾಸಿಯದಂತೆ ತನ್ನ ವಿಚಿತ್ರ ಪೋಷಾಕುಗಳಿಗೆ, ದುಡುಕುತನಕ್ಕೆ, ಹಟಮಾರಿತನಕ್ಕೆ, ಹಾಗೂ ಹರಕುಬಾಯಿಗೆ ಕೂಡ ಅಷ್ಟೇ ಹೆಸರುವಾಸಿಯಾಗಿದ್ದ. ಗಡಾಫಿ ಎಷ್ಟರಮಟ್ಟಿನ ಹರಕುಬಾಯಿಯವನಾಗಿದ್ದನೆಂದರೆ ಮುಂಚಿನಿಂದಲೂ ಅಮೆರಿಕನ್ನರ ಬದ್ಧ ವೈರಿಯಾಗಿದ್ದ ಆತ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಯಾವುದೇ ಮುಲಾಜಿಲ್ಲದೆ, ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಟೀಕಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ. ಈ ವಿಷಯದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರು ಗಡಾಫಿಯನ್ನು ‘ಹಾಗೆಲ್ಲಾ ಅಮೆರಿಕನ್ನರನ್ನು ಬಹಿರಂಗವಾಗಿ ಟೀಕಿಸಬೇಡ’ ಎಂದು ಎಚ್ಚರಿಸಿದ್ದರೂ ಅವ ಅದನ್ನು ಲೆಕ್ಕಿಸದೆ ಪುಂಖಾನುಪುಂಖವಾಗಿ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರೋಧ ಕಟ್ಟಿಕೊಳ್ಳುತ್ತಿದ್ದನಲ್ಲದೇ ಇದೇ ಕಾರಣಕ್ಕಾಗಿ ಇನ್ನಿಲ್ಲದಂತೆ ನಾಶವಾಗಿ ಹೋದ.


    ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿ ಒಬ್ಬ ದಕ್ಷ ಆಡಳಿತಗಾರನಾಗಿದ್ದ. ಆತನ ಆಡಳಿತಾವಧಿಯಲ್ಲಿ ಲಿಬಿಯಾ ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಮೊದಲ ಸ್ಥಾನ ಪಡೆದುಕೊಂಡಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು. ಹೀಗಾಗಿ ಗಡಾಫಿ ಸಹಜವಾಗಿ ಲಿಬಿಯಾದ ಜನತೆಗೆ ಒಬ್ಬ ಭರವಸೆಯ ನಾಯಕನಾಗಿ ಕಾಣಿಸಿದ. ಆದರೆ ಅವನು ಅನೇಕ ತಿಕ್ಕಲುತನಗಳಿಂದ ಕೂಡಿದ ಮನುಷ್ಯನಾಗಿದ್ದ. ಆತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶೀಲನಾಗಿದ್ದನೋ ಅಷ್ಟೇ ತಿಕ್ಕಲುನಾಗಿದ್ದ. ಆತನ ತಿಕ್ಕಲುತನಗಳಿಗೆ ಲೆಕ್ಕವಿರಲಿಲ್ಲ! ಆದರೆ ಅವು ಸಾಧ್ಯವಾದಷ್ಟು ವ್ಯಯಕ್ತಿಕವಾಗಿರುತ್ತಿದ್ದವೇ ಹೊರತು ಸಾರ್ವಜನಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.

    ಆದರೆ ಒಮ್ಮೆಯಂತೂ ಆತ ದುಡುಕಿ ತೆಗೆದುಕೊಂಡ ನಿರ್ಧಾರ ಇಡೀ ಲಿಬಿಯಾದ ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರಿತು. ಮಾತ್ರವಲ್ಲ ಅವನ ಆಡಳಿತಾವಧಿಯಲ್ಲಿ ಅದೊಂದು ಕಪ್ಪುಚುಕ್ಕೆಯಾಗಿ ಉಳಿಯಿತು. ಅದೇನೆಂದರೆ ಅಮೆರಿಕನ್ನರ ಬದ್ಧವೈರಿಯಾಗಿದ್ದ ಗಡಾಫಿ ಅವರನ್ನು ದ್ವೇಷಿಸಿದ್ದಷ್ಟೇ ಅಲ್ಲದೇ ಅವರ ಮಾತೃಭಾಷೆಯಾದ ಇಂಗ್ಲೀಷನ್ನು ಕೂಡ ತೀವ್ರವಾಗಿ ದ್ವೇಷಿಸುತ್ತಿದ್ದ. ಆ ಕಾರಣಕ್ಕಾಗಿ ತನ್ನ ದೇಶದ ಜನತೆ ಸಹ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕಲಿಯಕೂಡದೆಂದು ತಾಕೀತು ಮಾಡಿಬಿಟ್ಟ. ಆ ಮೂಲಕ ತನ್ನ ದೇಶದಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ನಿಷೇಧಿಸುವದರ ಮೂಲಕ ಅಲ್ಲಿಯ ಒಂದು ತಲೆಮಾರನ್ನು ಸುಮಾರು ಹತ್ತು ವರ್ಷಗಳ ಕಾಲ ವಂಚಿಸಿಬಿಟ್ಟ.

    ಈ ನಿರ್ಧಾರದಿಂದಾಗಿ ಇಡೀ ಲಿಬಿಯಾ ಒಂದು ದಶಕದ ಕಾಲ ಕತ್ತಲ ಕೂಪದಲ್ಲಿ ಮುಳುಗಿತು. ಇಪ್ಪತ್ತನೇ ಶತಮಾನದ ಅಂಚಿನಲ್ಲಿದ್ದ ಇಡಿ ಜಗತ್ತು ಇಂಗ್ಲೀಷ್ ಭಾಷೆಯನ್ನು ಕಲಿಯಲು ಏನೆಲ್ಲ ಸಾಹಸಗಳನ್ನು ಮಾಡುತ್ತಿರಬೇಕಾದರೆ ಒಂದು ದೇಶ ಕ್ಷುಲ್ಲಕ ಕಾರಣಕ್ಕಾಗಿ ಆ ಭಾಷೆ ನಮಗೆ ಬೇಡವೇ ಬೇಡ ಎಂದು ನಿಷೇಧಿಸಿದರೆ ಅಲ್ಲಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿಕೊಳ್ಳಿ. ಪರಿಣಾಮವಾಗಿ ಇಂಗ್ಲೀಷ್ ಭಾಷೆಯ ಕಲಿಕೆ ಮತ್ತು ಕಲಿಸುವಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಕೈ ಬಿಡಲಾಯಿತು. ಇಂಗ್ಲೀಷ್ ಭಾಷೆಗೆ ಸಂಬಂಧಪಟ್ಟ ಹಾಗೆ ಅಷ್ಟೂ ಪುಸ್ತಕಗಳನ್ನು ಅಂದಿನ ಶಿಕ್ಷಣ ಮಂತ್ರಿಯ ಸಮ್ಮುಖದಲ್ಲಿ ಸಾರ್ವಜನಿಕವಾಗಿ ಸುಟ್ಟುಹಾಕಲಾಯಿತು. ಅತ್ತ ಲಿಬಿಯಾ ನಿಧಾನವಾಗಿ ಇಂಗ್ಲೀಷ್ ಭಾಷೆಯ ಸಂಪರ್ಕವಿಲ್ಲದೇ ಹೊರಜಗತ್ತಿನಿಂದ ದೂರ ಸರಿಯುತ್ತಿದ್ದಂತೆ ಇತ್ತ ಜನರು ಇಂಗ್ಲೀಷ್ ಭಾಷೆಯತ್ತ ನಿರ್ಭಾವುಕತೆಯನ್ನು ಬೆಳೆಸಿಕೊಳ್ಳತೊಡಗಿದರು. ಅದೊಂದು ಶತೃ ಭಾಷೆ, ಆ ಭಾಷೆಯನ್ನು ನಾವು ಕಲಿಯಕೂಡದು ಎನ್ನುವ ನಿರ್ಧಾರವನ್ನು ತಳೆದರು. ಈಗಲೂ ಆ ಭಾಷೆಯ ಬಗ್ಗೆ ಇಲ್ಲಿಯ ಜನರಲ್ಲಿ ಒಂದು ತೆರನಾದ ಫೋಬಿಯಾ ಇದೆ. ಆದರೆ ಕೆಲವು ಪ್ರಜ್ಞಾವಂತ ಶ್ರೀಮಂತ ಜನರು ಪಕ್ಕದ ರಾಷ್ಟ್ರಗಳಾದ ಈಜಿಪ್ಟ್, ನೈಜರ್, ನೈಜೇರಿಯಾ, ಗನಾ ದೇಶಗಳಿಗೆ ಹೋಗಿ ಇಂಗ್ಲೀಷ್ ಭಾಷೆಯನ್ನು ಕಲಿತು ಬಂದರು. ಆದರೆ ಮಧ್ಯಮವರ್ಗ ಮತ್ತು ಬಡ ಜನರು ಎ, ಬಿ, ಸಿ, ಡಿ ಕೂಡಾ ಕಲಿಯದೇ ಹಾಗೆ ಉಳಿದುಬಿಟ್ಟರು. ಹೀಗಾಗಿ ಇಲ್ಲಿಯ ಜನ ಗಡಾಫಿಯನ್ನು ಅವನ ಬೇರೆಲ್ಲ ಕೆಲಸಗಳಿಗೆ ಹೊಗಳಿದರೂ ಈ ಒಂದು ನಿರ್ಧಾರಕ್ಕೆ ಮಾತ್ರ ಇವತ್ತಿಗೂ ಹಿಡಿಹಿಡಿ ಶಾಪ ಹಾಕುತ್ತಾರೆ.

    ಅಷ್ಟಕ್ಕೂ ಗಡಾಫಿ ಲಿಬಿಯಾದಲ್ಲಿ ಇಂಗ್ಲೀಷ್ ಭಾಷೆಯನ್ನು ಹತ್ತು ವರ್ಷಗಳ ಕಾಲ ಅಂದರೆ 1986 ರಿಂದ 1996 ರ ವರೆಗೆ ನಿಷೇಧಿಸಿದ್ದಾದರೂ ಏಕೆ? ಅಂಥ ಬಲವಾದ ಕಾರಣವೇನಿತ್ತು? ಎಂದು ಇಲ್ಲಿಯವರನ್ನು ಕೇಳಿದರೆ ಬಹಳಷ್ಟು ಜನ ಅದೆಲ್ಲದಕ್ಕೂ ಗಡಾಫಿಯ ತಿಕ್ಕಲುತನ ಮತ್ತು ಅಮೆರಿಕನ್ನರ ಮೇಲಿನ ವ್ಯಯಕ್ತಿಕ ದ್ವೇಷವೇ ಕಾರಣವೆಂದು ಹೇಳುತ್ತಾರೆ. ಐರ್ಲಂಡ್‍ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ‘ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತು. ಆದರೆ 1986ರಲ್ಲಿ ಬರ್ಲಿನ್‍ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಾಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಕೂಡಾ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತಲ್ಲದೇ ಪ್ರತಿಕಾರವಾಗಿ ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ತಾತ್ಕಾಲಿಕ ದಿಗ್ಬಂಧವನ್ನು ಹೇರಿತು ಕೂಡಾ. ಮುಂದೆ ಅಂದರೆ 1988ರಲ್ಲಿ ಸ್ಕಾಟ್ಲೆಂಡ್‍ನ ಲಾಕರ್-ಬಿ ಎನ್ನುವ ಪಟ್ಟಣದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಪಾನ್ ಅಮ್ 103 ಎನ್ನುವ ವಿಮಾನವೊಂದನ್ನು ಸ್ಫೋಟಿಸಿದ ಆರೋಪವೂ ಲಿಬಿಯಾದ ಮೇಲೆ ಬಂತು. ಬಹುಕಾಲ ಗಡಾಫಿ ಇದನ್ನು ನಿರಾಕರಸುತ್ತಲೇ ಬಂದ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಲಿಬಿಯಾವನ್ನು ಮತ್ತೆ ನಿಷೇಧಕ್ಕೆ ಗುರಿಪಡಿಸಿತು. ಇದು ಗಡಾಫಿಯನ್ನು ರೊಚ್ಚಿಗೆಬ್ಬಿಸಿತಲ್ಲದೆ ಅಮೆರಿಕನ್ನರ ಮೇಲಿನ ಕೋಪಕ್ಕಾಗಿ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ನಾವೇಕೆ ಓದಬೇಕು? ಬರೆಯಬೇಕು? ಮಾತನಾಡಬೇಕು? ಎಂದು ದುಡುಕಿ ಅದನ್ನು ತನ್ನ ದೇಶದಿಂದ ನಿಷೇಧಗೊಳಿಸಿಬಿಟ್ಟ.

    ಆದರೆ Amazigh International Council ನ (Amazigh ಎನ್ನುವದು ಲಿಬಿಯಾದಲ್ಲಿ ಮುಂಚಿನಿಂದಲೂ ಕಡೆಗಣಿಸಲ್ಪಟ್ಟ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ) ನಿರ್ದೇಶಕರಾದ ಹಫೀದ್ ಫಿಸ್ ಹೀಗೆ ಹೇಳುತ್ತಾರೆ, “ಗಡಾಫಿ ಸುಮಾರು ಹತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕನ್ನರ ಮೇಲಿನ ಕೋಪ ಎನ್ನುವದು ಒಂದು ನೆಪವಷ್ಟೆ. ಆದರೆ ನಿಜದ ಸಂಗತಿ ಬೇರೆಯೇ ಇದೆ. ಗಡಾಫಿಗೆ ಲಿಬಿಯನ್ನರ ಬಗ್ಗೆ ಭಯವಿತ್ತು. ತಾನು ಅಧಿಕಾರಕ್ಕೆ ಬಂದಂದಿನಿಂದ ಗಡಾಫಿ ನಿಧಾನವಾಗಿ ಲಿಬಿಯನ್ನರ ಮೆಲೆ ತನ್ನ ಹತೋಟಿಯನ್ನು ಸಾಧಿಸಿ ಮೆಲ್ಲನೆ ಅವರ ಮೆಲೆ ದಬ್ಬಾಳಿಕೆ ನಡೆಸತೊಡಗಿದ. ಅವರು ಇಂಗ್ಲೀಷ್ ಭಾಷೆಯನ್ನು ಕಲಿತರೆ ಎಲ್ಲಿ ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳಿಬಿಡುತ್ತಾರೋ ಎನ್ನುವ ಭಯವಿತ್ತು ಅವನಿಗೆ. ಹೀಗಾಗಿ ಅವನು ಉದ್ದೇಶಪೂರ್ವಕವಾಗಿ ಇಂಗ್ಲೀಷ್ ಭಾಷೆಯನ್ನು ತನ್ನ ದೇಶದಿಂದ ನಿಷೇಧಿಸಿನಲ್ಲದೆ ಆ ಮೂಲಕ ತನ್ನ ದೇಶದ ಜನರು ಆ ಭಾಷೆಯನ್ನು ಕಲಿಯದಂತೆ ಮಾಡಿಬಿಟ್ಟ. ಹಾಗೆ ನೋಡಿದರೆ ಗಡಾಫಿ ತನ್ನ ಬದ್ಧ ವೈರಿ ದೇಶವಾದ ಅಮೆರಿಕವೂ ಸೆರಿದಂತೆ ಬಹಳಷ್ಟು ಇಂಗ್ಲೀಷ್ ಮಾತನಾಡುವ ದೇಶಗಳ ಜೊತೆ ತನ್ನ ಸಂಬಂಧವನ್ನು ಚನ್ನಾಗಿಯೇ ಇಟ್ಟುಕೊಂಡಿದ್ದ. ತನ್ನ ಈ ನೀತಿಯನ್ನು ಲಿಬಿಯಾದ ಜನತೆ ಹೊರಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಒಂದು ಅಸ್ತ್ರದಂತೆ ಬಳಸಿದ.” ಇವರ ಹೇಳಿಕೆಯನ್ನು ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಗೊಳಿಸುವ ಮುಂಚಿನ ದಿನಗಳಿಗೂ ಹಾಗೂ ನಂತರದ ದಿನಗಳಿಗೂ ಹೋಲಿಸಿ ಕೂಲಂಕುಷವಾಗಿ ಪರಿಶೀಲಿಸಿದರೆ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಅನಿಸುತ್ತದೆ. ಯಾಕೆಂದರೆ ಗಡಾಫಿ ತಾನು ಅಧಿಕಾರಕ್ಕೆ ಬಂದ ವರ್ಷದಿಂದಲೇ ಇಂಗ್ಲೀಷ್ ಭಾಷೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಲು ತನ್ನ ಪ್ರಜೆಗಳನ್ನು ಸ್ಕಾಲರ್ಶಿಪ್ ಕೊಟ್ಟು ಅಮೆರಿಕಾ, ಬ್ರಿಟನ್ ಮುಂತಾದ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಕಳಿಸುತ್ತಿದ್ದ. ಒಂದು ವೇಳೆ ಅವನಿಗೆ ಲಿಬಿಯನ್ನರ ಬಗ್ಗೆ ಭಯವಿದ್ದಿದ್ದರೆ ಅವನ್ಯಾಕೆ ಹಾಗೆ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಅವರನ್ನು ಕಳಿಸುತ್ತಿದ್ದ? ಅಥವಾ ಗಡಾಫಿಯ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳುವವರಿದ್ದರೆ 1986ರಗಿಂತ ಮೊದಲೇ ಇಂಗ್ಲೀಷ್ ಕಲಿತ ಲಿಬಿಯನ್ನರು ಇದ್ದಿರಲಿಲ್ಲವೆ? ಅವರೆಲ್ಲಾ ಆತನ ಬಗ್ಗೆ ಹೇಳಬಹುದಿತ್ತಲ್ಲ? ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಜನ ಇಂಗ್ಲೀಷ್ ಕಲಿತು ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ತಿಳಿಸಬಹುದು ಎಂಬ ಭಯ ಅವನಿಗಿದ್ದರಲಿಲ್ಲವೆ? ಹಾಗಿದ್ದೂ ಅವನು ಯಾಕೆ ಇಂಗ್ಲೀಷ್ ಕಲಿಕೆಗೆ ಉತ್ತೇಜನ ಕೊಟ್ಟ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕಾದವಾರ ಮೇಲಿನ ಕೋಪಕ್ಕಾಗಿಯೇ ಹೊರತು ಖಂಡಿತ ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

    ಇದನ್ನು ಆಲ್ ಮೊಘಾನಿ ಹಸನ್ ಮೊಹಮ್‍ದ ಎನ್ನುವ ಪಿ.ಎಚ್‍ಡಿ. ವಿದ್ಯಾರ್ಥಿಯೊಬ್ಬ ಹೀಗೆ ಪುಷ್ಟಿಕರಿಸುತ್ತಾನೆ. ಆತ “Students’ Perceptions of Motivation in English Language Learning in Libya” ಎನ್ನುವ ತನ್ನ ಇಂಗ್ಲೀಷ್ ಪ್ರೌಡಪ್ರಬಂಧದಲ್ಲಿ ಗಡಾಫಿಗೆ ಇಂಗ್ಲೀಷ್ ಭಾಷೆ ಮತ್ತು ಅಮೆರಿಕನ್ನರ ಮೇಲಿದ್ದ ಹಗೆತನ ಹೇಗೆ ಲಿಬಿಯನ್ನರ ಇಂಗ್ಲೀಷ್ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿತು ಮತ್ತು ಈ ವಿಷಯದಲ್ಲಿ ಪ್ರಜೆಗಳು ಕೂಡಾ ಹೇಗೆ ತಮ್ಮ ರಾಜನನ್ನೇ ಅನುಸರಿಸಿದರು ಎನ್ನುವದನ್ನು ಹೇಳುತ್ತಾನೆ. ಮುಂದುವರಿದು ಮತ್ತೆ ಹೀಗೆ ಹೇಳುತ್ತಾನೆ. ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ; “ಜಮ್ಹಾರಿಯಾ(Socialist People's Libyan Arab Jamahiriya)ದ ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು ಮತ್ತು ಇಂಗ್ಲೀಷ್ ಭಾಷೆಯನ್ನು ದ್ವೇಷಿಸತೊಡಗಿದರು.

    ಕ್ರಮೇಣ ಅಮೆರಿಕಾದ ಜೊತೆ ಲಿಬಿಯಾದ ಸಂಬಂಧ ಸರಿಹೋಗುತ್ತಿದ್ದಂತೆ ಗಡಾಫಿಗೆ ಇಂಗ್ಲೀಷ್ ಭಾಷೆಯ ಮಹತ್ವದ ಅರಿವಾಗತೊಡಗಿತು. ಮಾತ್ರವಲ್ಲ ಇಂಗ್ಲೀಷ್‍ನ್ನು ಕಲಿಯದೇ ಹೋದರೆ ಅಮೆರಿಕನ್ನರು ನಡೆಸುವ ಕಾರುಬಾರುಗಳು ನಮಗೆ ಗೊತ್ತೇ ಆಗುವದಿಲ್ಲ ಹಾಗೂ ಲಿಬಿಯಾಕ್ಕೆ ಒಳ್ಳೆಯ ಭವಿಷ್ಯವಿರುವದಿಲ್ಲ ಎಂಬ ಸತ್ಯವನ್ನು ಮನಗಂಡ. ಹೀಗಾಗಿ ಆತ ಮತ್ತೆ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಆರಂಭಿಸಿದ. ಕೆಲವರು ಆತ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿ ಆರು ವರ್ಷಗಳ ನಂತರ ಅಂದರೆ 1992ರಲ್ಲಿ ಅದರ ಕಲಿಕೆಯನ್ನು ಮತ್ತೆ ಆರಂಭಿಸಿದನೆಂದೂ ಆದರೆ ಅದು ಇಡಿ ದೇಶದ ತುಂಬಾ ವಿಸ್ತರಣೆಯಾದದ್ದು 1996ರಲ್ಲಿ ಮಾತ್ರ ಎಂದು ಹೇಳುತ್ತಾರೆ. ಇನ್ನು ಕೆಲವರು ಸರಿ ಸುಮಾರು ಹತ್ತು ವರ್ಷಗಳ ಕಾಲ ಅಂದರೆ 1986ರಿಂದ 1996ರವರೆಗೆ ಲಿಬಿಯಾ ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣಲಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಏನೇ ಆಗಲಿ 1996 ರಿಂದಾಚೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿಕ್ಕೆ ಏನೆಲ್ಲ ಸೌಕರ್ಯಗಳು ಬೇಕೋ ಅವನ್ನೆಲ್ಲಾ ಗಡಾಫಿ ಕಲ್ಪಿಸಿಕೊಟ್ಟ. ಪಕ್ಕದ ದೇಶಗಳಾದ ಗನಾ, ನೈಜೇರಿಯಾ, ಕೀನ್ಯಾ, ಈಜಿಪ್ಟ್ ಗಳಿಂದ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿಕೊಂಡು ಮತ್ತೆ ಇಂಗ್ಲೀಷ್ ಕಲಿಸತೊಡಗಿದ. ಇಲ್ಲಿಯ ಪ್ರೈಮರಿ, ಪ್ರಿಪರೇಟರಿ, ಹಾಗೂ ಸೆಕೆಂಡರಿ ಶಾಲೆಯ ಇಂಗ್ಲೀಷ್ ಪಠ್ಯಪುಸ್ತಕಗಳನ್ನು ರಚಿಸಲು ಇಂಗ್ಲೀಷ್‍ರ ಸಹಾಯ ತೆಗೆದುಕೊಂಡನು. ಆ ಕಾರಣಕ್ಕಾಗಿಯೇ ಇಲ್ಲಿಯ ಇಂಗ್ಲೀಷ್ ಪಠ್ಯಪುಸ್ತಕಗಳು ತುಂಬಾ ಉತ್ಕೃಷ್ಟ ಮಟ್ಟದಲ್ಲಿವೆ. ದುರಂತವೆಂದರೆ ಅವನ್ನು ಸರಿಯಾಗಿ ಕಲಿಸಲು ಒಳ್ಳೆಯ ಶಿಕ್ಷಕರೇ ಇಲ್ಲ. ಈ ಮಧ್ಯ ಸಮೀಕ್ಷೆಯೊಂದನ್ನು ನಡೆಸಿ ಭಾರತೀಯರು ಕೂಡಾ ಇಂಗ್ಲೀಷಿನಲ್ಲಿ ಬ್ರಿಟಿಷ್‍ರಿಗಿಂತ ಏನೂ ಕಮ್ಮಿಯಿಲ್ಲ ಎಂಬ ಸತ್ಯವನ್ನು ಕಂಡುಕೊಂಡನು. ಆ ಪ್ರಕಾರ 2000 ದಿಂದಾಚೆ ಲಿಬಿಯಾದ ಕಾಲೇಜುಗಳಲ್ಲಿ ಭಾರತೀಯ ಇಂಗ್ಲೀಷ್ ಉಪನ್ಯಾಸಕರನ್ನು ನೇಮಿಸಿಕೊಂಡು ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಟ್ಟನು.

    ಅದೆಲ್ಲಾ ಇರಲಿ. ಇಷ್ಟೆಲ್ಲಾ ಹೇಳುತ್ತಿದ್ದ ಗಡಾಫಿ ಇಂಗ್ಲೀಷ್ ಭಾಷೆಯನ್ನು ಕಲಿತಿದ್ದನೆ? ಅವನಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುತ್ತಿತ್ತೆ? ಎಂದು ಕೇಳಿದರೆ ಉತ್ತರ ಹೌದು ಅಥವಾ ಇಲ್ಲ ಎಂದು ಬರುತ್ತದೆ. ಏಕೆಂದರೆ ಗಡಾಫಿ ಇಂಗ್ಲೀಷ್ ಕಲಿತಿದ್ದು ತನ್ನ ಸೆಕೆಂಡರಿ ಶಾಲೆಯಲ್ಲಿ ಮತ್ತು ಬಿ.ಎ. ಓದುತ್ತಿರಬೇಕಾದರೆ ಮಾತ್ರ. ಮುಂದೆ ಆತ ತನ್ನ ಓದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಲಿಬಿಯಾದ ಗದ್ದುಗೆಯನ್ನೆರಿದ್ದರಿಂದ ತನ್ನ ಶಿಕ್ಷಣಕ್ಕೆ ತಿಲಾಂಜಲಿಯನ್ನು ಇಡಬೇಕಾಯಿತು. ಹೀಗಾಗಿ ಆತ ಇಂಗ್ಲೀಷ್ ಕಲಿತಿದ್ದೇನಿದ್ದರೂ ಅಲ್ಪ ಸ್ವಲ್ಪ ಮಾತ್ರ. ಅವನಿಗೆ ಇಂಗ್ಲೀಷ್‍ನಲ್ಲಿ ಮಾತನಾಡಲು ಬರುತ್ತಿತ್ತೆಂದರೆ ಬರುತ್ತಿತ್ತು. ಇಲ್ಲವೆಂದರೆ ಇಲ್ಲ. ಒಂದು ವೇಳೆ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದ ಪ್ರಸಂಗ ಬಂದರೆ ಹರಕು ಮುರುಕು ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದ. ಅಥವಾ ತುಂಬಾ ತಯಾರಿಯನ್ನು ಮಾಡಿಕೊಂಡು ಮಾತನಾಡುತ್ತಿದ್ದ. ಇಂಗ್ಲೀಷ್ ಚಾನಲ್‍ಗಳಿಗೆ ಸಂದರ್ಶನ ಕೊಡಬೇಕಾದಾಗ ಅಥವಾ ಬೇರೆ ಬೇರೆ ರಾಷ್ಟ್ರದ ನಾಯಕರೊಂದಿಗೆ ಮಾತನಾಡುವಾಗ ಅವನ ಪಕ್ಕದಲ್ಲಿ ಸದಾ ಅರೇಬಿಕ್ ಮತ್ತು ಇಂಗ್ಲೀಷ್ ಭಾಷೆಗಳೆರೆಡನ್ನೂ ಬಲ್ಲ ಒಬ್ಬ ನುರಿತ ಅನುವಾದಕನಿರುತ್ತಿದ್ದ. ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಆತ ಅರೇಬಿಕ್ ಭಾಷೆಗೆ ಅನುವಾದಿಸಿ ಗಡಾಫಿಗೆ ಹೇಳುತ್ತಿದ್ದ ಹಾಗೂ ಗಡಾಫಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಇತರರಿಗೆ ರವಾನಿಸುತ್ತಿದ್ದ.

    ಒಮ್ಮೆ ಅಂದರೆ 1999 ರಲ್ಲಿ ಸುಪ್ರಸಿದ್ಧ ಸಂದರ್ಶಕಿ ಡ್ಯಾಫ್ನಿ ಗಡಾಫಿಯನ್ನು B.B.C. ಚಾನಲ್‍ಗೆ ಸಂದರ್ಶಿಸುತ್ತಾ ಹೀಗೆ ಕೇಳಿದ್ದಳು. “So… when are you going to quit and leave the stage for someone else?” ಈ ಪ್ರಶ್ನೆಗೆ ಗಡಾಫಿಯ ಅನುವಾದಕ ಭಯಕ್ಕೋ, ಮುಜುಗರಕ್ಕೋ, ಅಥವಾ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದ್ದಕ್ಕೋ ಸುಮ್ಮನೆ ಕುಳಿತಿದ್ದ. ಡ್ಯಾಫ್ನಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಳು. ಅನುವಾದಕ ಆಗಲೂ ಸುಮ್ಮನಿದ್ದ. ಆಗ ಡ್ಯಾಫ್ನಿ ಈ ಪ್ರಶ್ನೆಯನ್ನು ಅರೇಬಿಕ್‍ನಲ್ಲಿ ಕೇಳೋಣ ಎಂದುಕೊಳ್ಳುತ್ತಿರುವಾಗಲೇ ತಕ್ಷಣ ಇಂಗ್ಲೀಷ್ ಸರಿಯಾಗಿ ಮಾತನಾಡಲು ಬಾರದ ಗಡಾಫಿ ಯಾವುದೇ ಅನುವಾದದ ಸಹಾಯವಿಲ್ಲದೆ ಹೀಗೆ ಹೇಳಿದ್ದ; "It is not about me quitting, after all – I am the head of a revolution…”

                                                      
                             ಬಿಬಿಸಿ ಸಂದರ್ಶನಕ್ಕಾಗಿ ಸ್ಟುಡಿಯೋಕ್ಕೆ ಕರೆದೊಯ್ಯುವ ಮುನ್ನ ಗಡಾಫಿ ಡ್ಯಾಫ್ನಿ ಜೊತೆ
    ಹೀಗಿದ್ದೂ ಗಡಾಫಿ ಸಪ್ಟಂಬರ್ 23, 2009 ರಂದು ವಿಶ್ವಸಂಸ್ಥೆಯಲ್ಲಿ ತನ್ನ ಅನುವಾದಕನಿಗೆ ಹೆಚ್ಚು ತೊಂದರೆ ಕೊಡದೆ ಸಾಕಷ್ಟು ತಯಾರಿ ಮಾಡಿಕೊಂಡು ತಾನು ಹೇಳಬೇಕಾದ್ದೆಲ್ಲವನ್ನೂ ಸುಮಾರು 90 ನಿಮಿಷಗಳ (ಅಂದರೆ ಕೊಟ್ಟ ಅವಧಿಗಿಂತ 15 ನಿಮಿಷ ಹೆಚ್ಚಿಗೆ ತೆಗೆದುಕೊಂಡು) ಕಾಲ ಇಂಗ್ಲೀಷಿನಲ್ಲಿ ಹೇಳಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದ. ಇದು ಆತ ವಿಶ್ವಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾಡಿದ ಭಾಷಣವಾಗಿತ್ತು. ಆದರೆ ಅಲ್ಲಿ ಅಮೆರಿಕಾವೂ ಸೇರಿದಂತೆ ಇತರೆ ಇಂಗ್ಲೀಷ್ ದೇಶಗಳ ನಾಯಕರುಗಳು ಆತನನ್ನು ಕೀಳಾಗಿ ಕಂಡರು. ಆತನ ಭಾಷಣಕ್ಕೆ ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ಗೋರ್ಡನ್ ಬ್ರೌನ್ ಸೇರಿದಂತೆ ಬೇರೆ ದೇಶದ ಗಣ್ಯವ್ಯಕ್ತಿಗಳ್ಯಾರೂ ಹಾಜರಾಗಲೇ ಇಲ್ಲ. ಅಷ್ಟೇ ಏಕೆ US ಸೆಕ್ರೇಟರಿಯಾಗಿದ್ದ ಹಿಲೇರಿ ಕ್ಲಿಂಟನ್ ಮತ್ತು ಅಮೇರಿಕಾದ ರಾಯಭಾರಿಗಳು ಸಹ ಅವನು ಭಾಷಣ ಆರಂಭಿಸುವ ಮೊದಲೇ ಅಲ್ಲಿಂದ ಎದ್ದು ಹೋದರು.

    ಆದರೂ ಗಡಾಫಿ ಪಟ್ಟು ಬಿಡದೆ ತಾನು ಹೇಳಬೇಕಾದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಇಂಗ್ಲೀಷಿನಲ್ಲಿ ಹೇಳುತ್ತಾ ಹೋದ. ಮೊದಲಿಗೆ ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸಬೇಕು ಎನ್ನುವದನ್ನು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ನೋಡಿ ಕಲಿಯಿರಿ ಎಂದು ಸೂಚ್ಯವಾಗಿ ಅಮೆರಿಕಾಕ್ಕೆ ಹೇಳುತ್ತಾ ವಿಶ್ವಸಂಸ್ಥೆ ತನ್ನ ಕಲಮು 2 ರ ಪ್ರಕಾರ ತನ್ನ ಎಲ್ಲ ಸದಸ್ಯರನ್ನು ಸಮನಾಗಿ ಕಾಣಬೇಕು. ಆದರೆ ವಾಸ್ತವದಲ್ಲಿ ಇದು ರೂಢಿಯಾಗೇ ಇಲ್ಲ ಎಂದು ಹೇಳುವದರ ಮೂಲಕ ತನಗಾದ ತಾರತಮ್ಯವನ್ನು ಎತ್ತಿ ತೋರಿಸಿದ್ದ. ಮುಂದುವರಿಯುತ್ತಾ ವಿಶ್ವಸಂಸ್ಥೆ ಹುಟ್ಟಿರುವದೇ ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧಗಳಾಗದಂತೆ ನೋಡಿಕೊಳ್ಳುವದಕ್ಕೆ ಅಂದರೆ ವಿಶ್ವಶಾಂತಿ ಕಾಪಾಡುವದಕ್ಕೆ. ಆದರೆ ಅದು ಹುಟ್ಟಿದಾಗಿನಿಂದ ಅಂದರೆ 1945ರಿಂದ ಜಗತ್ತಿನ ನಾನಾ ಕಡೆ 65 ಯುದ್ಧಗಳು ನಡೆದಿವೆ. ಅವನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆ ವಿಪಲವಾಗಿದೆ. ಹೀಗಿದ್ದ ಮೇಲೆ ವಿಶ್ವಸಂಸ್ಥೆ ಯಾಕಿರಬೇಕು ಎಂದು ಕಿಡಿಕಾರಿದ್ದ. ಮತ್ತೆ ಮುಂದುವರಿದು ಬೇರೆ ರಾಷ್ಟ್ರಗಳ ವಿಷಯದಲ್ಲಿ ಅಮೆರಿಕಾ ಮೂಗು ತೂರಿಸುವದನ್ನು ಮೊದಲು ನಿಲ್ಲಿಸಲಿ ಎಂದು ಹೇಳುತ್ತಾ ಇರಾಕ್ ಯುದ್ಧವನ್ನು ಅಮೆರಿಕಾದ “ಕೇಡಿನ ಪರಮಾವಧಿ” ಎಂದು ಕಟುಕಿದ್ದ. ಪ್ಯಾಲೈಸ್ತೀನಾದ ಬಿಕ್ಕಟ್ಟಿನ ಕುರಿತಂತೆ ಪ್ಯಾಲೈಸ್ತೀನಿಯನ್ನರು ಮತ್ತು ಇಸ್ರೇಲಿಯರು ಒಟ್ಟಿಗೆ ಒಂದೇ ದೇಶದಲ್ಲಿ ಸಹಬಾಳ್ವೆಯನ್ನು ನಡೆಸುವಂತಾಗಬೇಕು ಎಂದು ಕರೆಕೊಟ್ಟಿದ್ದ. ಆದರೆ ಅವನ ಭಾಷಣವನ್ನು ಕೇಳಿದವರೆಲ್ಲಾ ಅವನೇನು ಮಾತನಾಡಿದನೆಂದು ನಮಗೆ ಸರಿಯಾಗಿ ಅರ್ಥವಾಗಲೇ ಇಲ್ಲ. ಅಲ್ಲದೇ ಅವನ ಭಾಷಣ ಒಂದಕ್ಕೊಂದು ಸರಿಯಾದ ಜೋಡಣೆಯಿಲ್ಲದೆ ಅಸಂಬದ್ಧವಾಗಿತ್ತು ಎಂದು ಟೀಕಿಸುವದರ ಮೂಲಕ ಮತ್ತೆ ಅವನನ್ನು ಕಡೆಗಣಿಸಿದ್ದರು.

    -ಉದಯ್ ಇಟಗಿ

    ಬಿಟ್ಟೆನೆಂದರೂ ಬಿಡದೀ ಮಾಯೆ..........

  • ಶನಿವಾರ, ಫೆಬ್ರವರಿ 02, 2013
  • ಬಿಸಿಲ ಹನಿ
  • ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ! ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು ಮರಗಟ್ಟಿಸಿಬಿಡುತ್ತದೆ. ಎಲ್ಲಿ ಹೋದರೂ ಬಿಡದ ಈ ಚಳಿ ನಮ್ಮನ್ನು ಬಲವಂತವಾಗಿ ಹೀಟರ್ ಗಳ ಮುಂದೆ ಎಳೆದು ತಂದು ಕೂರಿಸಿಸಿಬಿಡುತ್ತದೆ. ಹೀಗೆ ಹೀಟರ್ ಮುಂದೆ ಕುಳಿತುಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದಂತೆ ಮರಗಟ್ಟಿದ ಮೈ ನಿಧಾನವಾಗಿ ಸಡಿಲವಾಗತೊಡಗುತ್ತದೆ. ಮೈ ಬೆಚ್ಚಗಾಗುತ್ತಿದ್ದಂತೆ ಮನಸ್ಸು ಕೂಡಾ ತಾನೇ ತಾನಾಗಿ ಅದೆಂಥದೋ ಬೆಚ್ಚಗಿನ ಭಾವಕ್ಕೆ ಒಳಗಾಗಿ ಬಿಡುತ್ತದೆ. ಸ್ವಲ್ಪ ಹೊತ್ತು ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಹೀಗೆ ಸಾಗುತ್ತಲೇ ಇರುತ್ತದೆ. ಹೀಟರ್ ಮುಂದೆ ಮೈ ಕಾಯಿಸುತ್ತಾ ಕುಳಿತಂತೆ ಅದೆಂಥದೋ ಸುಖ ನಮ್ಮನ್ನು ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ಹೀಟರ್ ಬಿಟ್ಟೇಳಬೇಕು. ಆದರೆ ಬಿಟ್ಟೇಳದಂತೆ ಮಾಡಿಬಿಡುತ್ತದೆ. ಬಿಟ್ಟೆನೆಂದರೂ ಬಿಡದೀ ಮಾಯೆ!
    ಅಂದಹಾಗೆ ಈ ಸಾರಿ ಚಳಿಗಾಲಕ್ಕೆ ಲಿಬಿಯಾದ ಎಲ್ಲ ಕಛೇರಿಗಳ ಕೆಲಸದ ಸಮಯವನ್ನು ಬದಲು ಮಾಡಿದ್ದಾರೆ. ಅಲ್ಲಲ್ಲ ದಿನದ ಸಮಯವನ್ನೇ ಒಂದು ಘಂಟೆಯಷ್ಟು ಹಿಂದೆ ತಳ್ಳಿದ್ದಾರೆ. ಅಂದರೆ ಈ ಹಿಂದೆ ದಿನದ ಅವಧಿಯ ಪ್ರಕಾರ ಎಂಟು ಘಂಟೆಗೆ ಆರಂಭವಾಗಬೇಕಿದ್ದ ನಮ್ಮ ಕಾಲೇಜು ಈಗ ಒಂಬತ್ತು ಘಂಟೆಗೆ ಆರಂಭವಾಗುತ್ತದೆ. ಆದರೆ ಅವರು ಅದನ್ನೇ ಎಂಟು ಘಂಟೆ ಎಂದು ಕರೆಯುತ್ತಾರೆ. ಹಿಂದಿನ ಅವಧಿಯ ಪ್ರಕಾರ ಇಲ್ಲಿ ಬೆಳಗಿನ ಎಂಟು ಘಂಟೆಗೆ ಇನ್ನೂ ಸ್ವಲ್ಪ ಕತ್ತಲಿರುವದರಿಂದ ಕಛೇರಿಗಳಿಗೆ ಹೋಗಲು ತೊಂದರೆಯಾಗುತ್ತದೆಂದು ಈಗ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸಿದ್ದಾರೆಂದೂ ಹಾಗೂ ಹಿಂದಿನ ಒಂಬತ್ತು ಘಂಟೆಯನ್ನೇ ಈಗ ಅವರು ಎಂಟು ಘಂಟೆಯೆಂದು ಹೇಳಲು ಸರಕಾರವೇ ಆದೇಶ ಹೊರಡಿಸಿದೆಯೆಂದೂ ಹೇಳಿದರು. ಅಂದರೆ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ಸರಿಸಿದ್ದಾರೆ. ಈ ನಿಯಮವನ್ನು ಗಡಾಫಿ ಇರಬೇಕಾದರೆ ಒಂದೆರೆಡು ವರ್ಷ ಜಾರಿಗೆ ತಂದು ಆಮೇಲೆ ನಿಲ್ಲಿಸಿಬಿಟ್ಟನಂತೆ. ಆದರೆ ಈಗ ಹೊಸ ಸರಕಾರ ಮತ್ತೆ ಅದನ್ನೇ ಜಾರಿಗೆ ತಂದಿದೆ. ಅಂದಹಾಗೆ ಈ ತರ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ತಳ್ಳುವದು ಯಾಕೆ? ಬದಲಾಗಿ ಎಂಟು ಘಂಟೆಗೆ ಆರಂಭಿಸಿ ಎರಡು ಘಂಟೆಗೆ ಮುಗಿಸುವ ಬದಲು ಒಂಬತ್ತು ಘಂಟೆಗೆ ಆರಂಭಿಸಿ ಮೂರು ಘಂಟೆಗೆ ಮುಗಿಸಬಹುದಲ್ಲ? ಅದ್ಯಾಕೆ ಸುಖಾಸುಮ್ಮನೆ ಸಮಯವನ್ನು ಬದಲಾಯಿಸುತ್ತಿರಿ? ಎಂದು ನಾನು ನನ್ನದೇ ತಾರ್ಕಿಕ ನೆಲೆಗಟ್ಟಿನಲ್ಲಿ ಇಲ್ಲಿಯವರನ್ನು ಕೇಳಿದ್ದೆ. ಅವರು ಮೊದಲು ನನ್ನ ತರ್ಕವನ್ನು ಅರ್ಥಮಾಡಿಕೊಳ್ಳದೇ ಪಿಳಿಪಿಳಿ ಕಣ್ಣು ಬಿಟ್ಟರೆ ನಂತರ ಎಲ್ಲವೂ ಒಂದೇ ಎಂದು ನಕ್ಕಿದ್ದರು. ಸಮಯವನ್ನೇ ಬದಲಾಯಿಸುವ ಇವರು ಇನ್ನೇನನ್ನು ಬದಲಾಯಿಸಬಲ್ಲರು? ಎಂದು ಸುಮ್ಮನೆ ನನ್ನಷ್ಟಕ್ಕೆ ನಾನೇ ಏನೇನೋ ಕಲ್ಪಿಸಿಕೊಂಡು ನಗುತ್ತಿರಬೇಕಾದರೆ ನನ್ನ ಜೋರ್ಡಾನಿ ಸಹೋದ್ಯೋಗಿಯೊಬ್ಬ ತಮ್ಮ ದೇಶದಲ್ಲೂ ಚಳಿಗಾಲದಲ್ಲಿ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸುತ್ತಾರೆಂದೂ ಅದರಲ್ಲಿ ನಗುವಂಥದ್ದೇನಿದೆಯೆಂದೂ ನನ್ನ ಹುಸಿಮುನಿಸಿನಿಂದ ನೋಡಿದ್ದ. ನಾನು ಎಷ್ಟೇ ಆಗಲಿ ನೀವು ಅರಬ್‍ರೆಲ್ಲಾ ಒಂದೇ ತಳಿ ಅಲ್ವಾ ಎಂದು ಅವನೆದುರಿಗೇ ಮತ್ತಷ್ಟು ಜೋರಾಗಿ ನಕ್ಕಿದ್ದೆ.

    ನಾವು ಲಿಬಿಯಾಕ್ಕೆ ಬರುವ ಮುನ್ನ ನಮ್ಮ ಕನ್ಸಲ್ಟಂಟ್ ಇಲ್ಲಿಯ ಚಳಿಯ ಬಗ್ಗೆ ಸಾಕಷ್ಟು ಹೇಳಿದ್ದರೂ ಅಷ್ಟೇನೂ ಇರಲಿಕ್ಕಿಲ್ಲ ಎಂದು ಉದಾಸೀನ ಮಾಡಿದ್ದೆವು. ಆದರೆ ಇಲ್ಲಿ ಯಾವಾಗ ಚಳಿಗಾಲ ಶುರುವಾಯಿತೋ ನಮ್ಮ ಕನ್ಸಲ್ಟಂಟ್ ಹೇಳಿದ್ದು ವಾಸ್ತವದಲ್ಲಿ ಅರಿವಾಗತೊಡಗಿತ್ತು. ಇಂಡಿಯಾದಿಂದ ತಂದ ಉಣ್ಣೆ ಬಟ್ಟೆಗಳು ಸಾಕಾಗದೆ ಇಲ್ಲಿಯ ಸೂಕಿ(ಸಂತೆ)ನಲ್ಲಿ ವಿಶೇಷವಾಗಿ ಚಳಿಗಾಲಕ್ಕೆಂದೇ ತಯಾರಿಸಿದ ಮತ್ತಷ್ಟು ಬಟ್ಟೆಗಳನ್ನು ಖರೀದಿಸಿದ್ದೆವು. ಬಂದ ಹೊಸತರಲ್ಲಿ ಇಲ್ಲಿಯ ಚಳಿಗೆ ನಮ್ಮ ದೇಹ ಹೊಂದಿಕೊಳ್ಳದೆ ಸಾಕಷ್ಟು ಪಾಡು ಪಡಬೇಕಾಯಿತು. ನಿಧಾನವಾಗಿ ನಮ್ಮ ದೇಹ ಇಲ್ಲಿಯ ಚಳಿಗೆ ಅಲರ್ಜಿಕ್ ಆಗಿ ನವೆ ಶುರುವಾಯಿತು. ಯಾವಾಗೆಂದರೆ ಅವಾಗ ಎಲ್ಲೆಂದರಲ್ಲಿ ನಮ್ಮ ಮೈಯನ್ನು ಕೆರೆದು ಕೆರೆದು ಸಾಕಾಗಿಹೋಯಿತು. ನಿದ್ರೆಯಿಲ್ಲದೆ ಹೊರಳಾಡಿದೆವು. ಎಷ್ಟೋ ಸಾರಿ ಈ ಪರಿಯ ನವೆಯನ್ನು ತಡೆದುಕೊಳ್ಳಲಾಗದೆ ನಮ್ಮ ಕೆಲಸದ ಕಾಂಟ್ರ್ಯಾಕ್ಟ್‍ನ್ನು ಅರ್ಧದಲ್ಲಿ ಮೊಟಕುಗೊಳಸಿ ಹೋಗಿಬಿಡೋಣ ಎನಿಸಿದ್ದಿದೆ. ಆದರೆ ನಮಗೆ ಸಿಗುತ್ತಿದ್ದ ದೊಡ್ಡ ಮೊತ್ತದ ಸಂಬಳ ‘ಇವತ್ತಲ್ಲ ನಾಳೆ ಸರಿಹೋಗಬಹುದು, ಇರು’ ಎಂದು ಹಿಡಿದು ನಿಲ್ಲಿಸಿತ್ತು. ತದನಂತರದಲ್ಲಿ ಇಲ್ಲಿಯ ಆಸ್ಪತ್ರೆಗಳಲ್ಲಿ ನಮ್ಮ ಇಂಡಿಯನ್ ಡಾಕ್ಟರುಗಳು ಇಂಟ್ರ‍ಾ ಮ್ಯಾಸ್ಕುಲರ್ ಇಂಜೆಕ್ಷನ್ ಕೊಟ್ಟು ಕಡಿಮೆ ಮಾಡಿದ್ದರು. ಕ್ರಮೇಣ ನಮ್ಮ ದೇಹ ಇಲ್ಲಿಯ ಚಳಿಗೆ ಹೊಂದಿಕೊಳ್ಳತೊಡಗಿತು.
    ಒಂದೊಂದು ಸಾರಿ ಇಷ್ಟೊಂದು ಚಳಿ ಅಭ್ಯಾಸವಿರದ ನಮಗೆ ಈ ಬದುಕು ಬೇಕಾ? ಸಾಕಿನ್ನು ಹೊರಟುಬಿಡೋಣ ಅಂತೆಲ್ಲಾ ಅನಿಸುತ್ತದೆ. ಆದರೆ ಒಂದಾದ ಮೇಲೊಂದರಂತೆ ಉದ್ಭವಿಸುವ ನಮ್ಮ ಬದುಕಿನ ಕಮಿಟ್‍ಮೆಂಟ್‍ಗಳು ಮತ್ತು ನಮ್ಮ ಒಂದಷ್ಟು ಆಸೆಗಳು ನಮ್ಮನ್ನು ಇಲ್ಲಿಯೇ ಜೋತು ಬೀಳುವಂತೆ ಮಾಡುತ್ತವೆ. ಜೊತೆಗೆ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಸಣ್ಣ ಪುಟ್ಟ ಕಮಿಟ್‍ಮೆಂಟಗಳು ಕೂಡ ನಮ್ಮ ಹೆಗಲೇರಿ ನಮ್ಮನ್ನು ಹೋಗದಂತೆ ತಡೇಹಿಡಿಯುತ್ತವೆ. ಹಾಗೆ ನೋಡಿದರೆ ಹೊರದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರು ಇಲ್ಲಿಗೆ ಬರುವ ಮುನ್ನ ಈ ದುಡಿಮೆಯಿಂದ ಇದ್ದ ಬಿದ್ದ ಒಂದಷ್ಟು ಸಾಲಗಳನ್ನು ತೀರಿಸಿ ಮತ್ತೆ ಇಂಡಿಯಾಕ್ಕೆ ವಾಪಾಸಾಗಿ ನಮ್ಮ ಎಂದಿನ ಕೆಲಸವನ್ನು ಮುಂದುವರಿಸದರಾಯಿತು ಎಂದುಕೊಂಡು ಬರುತ್ತೇವೆ. ಆದರೆ ಕ್ರಮೇಣ ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಹಣ ಬೇಕು. ಅದಕ್ಕೆ ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಇನ್ನೊಂದು ವರ್ಷ ಮುಂದುವರೆಸುತ್ತೇವೆ. ಅದು ಮುಗಿಯುತ್ತಿದ್ದಂತೆ ವಾರಿಗೆಯವರು, ಸ್ನೇಹಿತರು ಒಂದು ಸೈಟ್ ತೆಗೆದುಕೊಂಡಿದ್ದಾರೆ. ನಾನೂ ಒಂದು ತೆಗೆದುಕೊಳ್ಳಬೇಕು. ಮತ್ತೆ ಅದಕ್ಕೋಸ್ಕರ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದರ ಕಮಿಟ್‍ಮೆಂಟ್ ಮುಗಿಯುತ್ತಿದ್ದಂತೆ ಇನ್ನೊಂದು ಸೈಟ್ ತೆಗೆದುಬಿಡೋಣ ಕಷ್ಟಕಾಲಕ್ಕೆ ಆಗಬಹುದು ಎನ್ನುವ ದೂರದ ಆಸೆ. ಅದಕ್ಕೋಸ್ಕರ ಮತ್ತೊಂದೆರೆಡು ವರ್ಷ. ಅದರ ಸಾಲ ಎಲ್ಲಾ ತೀರುತ್ತಿದ್ದಂತೆ ಹೇಗೂ ಒಳ್ಳೆ ಸಂಬಳ ಇದೆ. ನಮ್ಮದೇ ಒಂದು ಸೂರನ್ನು ಯಾಕೆ ಮಾಡಿಕೊಳ್ಳಬಾರದು ಎನಿಸಿ ಮತ್ತೆ ಅದಕ್ಕಾಗಿ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದೆಲ್ಲಾ ಮುಗಿಯುತ್ತಿದ್ದಂತೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸಮಾಡಿ ಒಗ್ಗಿಹೋದ ಮನಸ್ಸು ಇಂಡಿಯಾದಲ್ಲಿ ಸಿಗುವ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸಮಾಡಲು ಅಣಿಯಾಗುತ್ತದೆಯೇ? ಹೀಗಾಗಿ ಮತ್ತೆ ಇನ್ನೊಂದೆರೆಡು ವರ್ಷ ದುಡಿದುಕೊಂಡು ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸದರಾಯಿತು ಎಂದುಕೊಂಡು ಮತ್ತೆ ಒಂದೆರೆಡು ವರ್ಷ ಮುಂದೂಡುತ್ತೇವೆ. ಹೀಗೆ ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು ..... ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು .....ನಡೆಯುತ್ತಲೇ ಇರುತ್ತದೆ. ಮನುಷ್ಯನ ಆಸೆಗಳಿಗೆ ಕೊನೆ ಎಲ್ಲಿ? ಹೀಗೆ ಒಂದಾದ ಮೇಲೊಂದು ಆಸೆಗಳನ್ನು ತೀರಿಸಿಕೊಳ್ಳುವಷ್ಟೊತ್ತಿಗೆ ನಮ್ಮ ಬದುಕಿನ ಎಂಟತ್ತು ವರ್ಷಗಳನ್ನು ನಿಜವಾದ ಆಪ್ಯಾಯನಗಳಿಲ್ಲದೆ ಕಳೆದುಬಿಟ್ಟಿರುತ್ತೇವೆ.

    ಎಷ್ಟೋ ಸಾರಿ ಇರುವಲ್ಲೇ, ಇದ್ದಿದ್ದರಲ್ಲೇ, ಇರುವಂತೆಯೇ ಬದುಕೋಣ. ಇಲ್ಲಿ ಸುಖಾಸುಮ್ಮನೆ ಸತ್ತು ಬದುಕುವದೇಕೆ? ಎಂದುಕೊಳ್ಳುತ್ತೇವೆ. ಊಹೂಂ ಮನಸ್ಸು ಕೇಳುವದೇ ಇಲ್ಲ. ನಮಗೆ ದಿನಾರಿನಲ್ಲಿ ಬರುವ ಸಂಬಳವನ್ನು ಪ್ರತಿ ತಿಂಗಳು ಖರ್ಚು ಕಳೆದು ಎಷ್ಟು ಉಳಿಯಿತು ಎನ್ನುವದನ್ನು ಡಾಲರ್ ನಿಂದ (ಅಂದರೆ ಡಾಲರ್ ನಿಂದ ದಿನಾರಿಗೆ ಇರುವ ಎಕ್ಸ್ಚೆಂಚ್ ರೇಟ್‍ನಿಂದ) ದಿನಾರಿಗೆ ಭಾಗಿಸುತ್ತಾ ಮತ್ತೆ ಅದನ್ನು ಐವತೈದರಿಂದ ರೂಪಾಯಿಗಳಿಗೆ ಗುಣಿಸಿ, ಈ ತಿಂಗಳು ಇಷ್ಟು ಉಳಿಸಿದ್ದೇವೆ ಎಂದು ಹೆಮ್ಮೆಯಿಂದ ಬೀಗುತ್ತೇವೆ. ವರ್ಷದ ಕೊನೆಯಲ್ಲಿ ಅಬ್ಬಾ ಈ ಸಾರಿಯ ಗಳಿಕೆ ಇಷ್ಟು ಆಯ್ತಲ್ಲ ಎಂದು ಖುಷಿಯಿಂದ ಮುಖವರಳಿದರೆ ಮನಸ್ಸು ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಲೆಕ್ಕ ಹಾಕುತ್ತದೆ. ಅದು ಕಳೆಯುತ್ತಿದ್ದಂತೆ ಮತ್ತೆ ಮುಂದಿನ ವರ್ಷಕ್ಕೆ ಮುಂದೂಡಿರುತ್ತೇವೆ. ಹೀಗೆ ಭಾಗಾಕಾರ, ಗುಣಾಕಾರ, ಸಂಕಲನದಲ್ಲಿಯೇ ಲೆಕ್ಕ ಹಾಕುವ ನಾವು ನಮ್ಮ ಬದುಕಿನಲ್ಲಿ ಕಳೆದುಕೊಂಡಿದ್ದೇನು ಎನ್ನುವದನ್ನು ನಾವು ಲೆಕ್ಕ ಹಾಕುವದೇ ಇಲ್ಲ. ನಾವು ಹೋಗಲಿ ಹೊರಜಗತ್ತು ಕೂಡಾ ಲೆಕ್ಕಹಾಕುವದಿಲ್ಲ.

    ಹಾಗೆ ನೋಡಿದರೆ ಹೊರಜಗತ್ತು ನಮ್ಮಂಥ ಎನ್‍ಆರ್‍ಐಗಳ ಬಗ್ಗೆ ಮತ್ತು ನಮ್ಮ ಬದುಕಿನ ಬಗ್ಗೆ ಅನೇಕ ಫ್ಯಾಂಟಸಿಗಳನ್ನು ಕಟ್ಟಿಕೊಂಡಿರುತ್ತದೆ. ದೊಡ್ದ ಮೊತ್ತದ ಸಂಬಳ ತರುವ ನಾವು ಅವರ ಕಣ್ಣಲ್ಲಿ ಸ್ವರ್ಗ-ಸುಖಿಗಳಾಗಿ ಕಾಣುತ್ತೇವೆ. ಅಸಲಿಗೆ ನಾವು ಎಂತೆಂಥ ಸ್ವರ್ಗ-ಸುಖಗಳಿಂದ ವಂಚಿತರಾಗಿದ್ದೇವೆ ಎನ್ನುವದು ಅವರ ಗಮನಕ್ಕೆ ಬರುವದೇ ಇಲ್ಲ. ನಮ್ಮ ನೋವುಗಳು, ನಮ್ಮ ಬಾಧೆಗಳು, ನಮ್ಮ ತಳಮಳಗಳು, ತವಕ-ತಲ್ಲಣಗಳು ಯಾರಿಗೂ ಅರ್ಥವಾಗುವದೇ ಇಲ್ಲ. ಹೊರಗಿನವರು ಹೋಗಲಿ ನಮ್ಮ ಹತ್ತಿರದವರಾದ ನಮ್ಮ ನೆಂಟರು, ಸ್ನೇಹಿತರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಯಾರೂ ಅರ್ಥಮಾಡಿಕೊಳ್ಳುವದಿಲ್ಲ. ಅವರೇನಪ್ಪಾ ಎನ್‍ಆರ್‍ಐಗಳು. ಅಷ್ಟು ಸಂಬಳ ತರುತ್ತಾರೆ, ಅವರಿಗೇನು ಕಮ್ಮಿ, ಸುಖವಾಗಿದ್ದಾರೆ ಎಂಬ ಭಾವದಲ್ಲೇ ನಮ್ಮನ್ನು ನೋಡುತ್ತಾರೆ. ಆದರೆ ಬದುಕನ್ನು ಕಟ್ಟಿಕೊಳ್ಳಲು ಸಾವಿರ ಸಾವಿರ ಮೈಲಿ ದೂರದಲ್ಲಿ ಬಂದು ಕುಳಿತ ನಮ್ಮಂಥವರ ನೋವುಗಳು, ಸಂಕಷ್ಟಗಳು, ತಳಮಳಗಳು, ವ್ಯಥೆಗಳು. ನಮಗಷ್ಟೇ ಗೊತ್ತಿರುತ್ತೇವೆ.

    ಹೀಗೆ ಕೆಲಸ ಅರಸಿಕೊಂಡು ದೂರದ ದೇಶದಲ್ಲಿ ಬಂದು ಕುಳಿತಿರುವ ನಾವು ಮೊದಲಿಗೆ ಒಂದು ಸಾಮಾಜಿಕ ಬದುಕಿಗಾಗಿ ತಡಕಾಡುತ್ತೇವೆ. ಅದೇನೂ ಕಷ್ಟವಾಗುವದಿಲ್ಲ. ಎಲ್ಲೆಲ್ಲೂ ಮನುಷ್ಯರೇ ಇರುವದರಿಂದ ಮನುಷ್ಯ ಇತರ ಮನುಷ್ಯರೊಟ್ಟಿಗೆ ಬಹಳ ಬೇಗನೆ ಸಂಪರ್ಕ ಬೆಳೆಸುತ್ತಾನೆ. ಬಣ್ಣ ಬೇರೆ ಇರಬಹುದು, ಭಾಷೆ ಬೇರೆ ಇರಬಹುದು, ನಡಾವಳಿಗಳು ಬೇರೆ ಇರಬಹುದು. ಆದರೆ ಭಾವನೆಗಳು ಒಂದೇ ಅಲ್ವೇ? ನಿಧಾನಕ್ಕೆ ನಮ್ಮ ಭಾವನೆಗಳಿಗೆ ಸರಿಹೊಂದುವವರನ್ನು ಆರಿಸಿ ಅವರೊಟ್ಟಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತೇವೆ. ಹೊಸ ಹೊಸ ನೆನಪುಗಳನ್ನು ಕಟ್ಟಿಕೊಳ್ಳತೊಡಗುತ್ತೆವೆ. ಆದರೆ ಇದರ ಜೊತೆಗೆ ದೂರದ ಇಂಡಿಯಾದಲ್ಲಿರುವ ನಮ್ಮ ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ, ಸ್ನೇಹಿತರ, ಹಾಗೂ ಬಂಧುಗಳ ನೆನಪುಗಳು ಇನ್ನಿಲ್ಲದಂತೆ ಕಾಡುತ್ತವೆ. ಜೊತೆಗೆ ನಾವಿಲ್ಲಿರುವಾಗ ಅಲ್ಲಿ ನಡೆಯುವ ನಮ್ಮ ಹತ್ತಿರದ ಬಂಧು-ಬಳಗದವರ ಮದುವೆ-ಮುಂಜಿಯಂಥ ಸಭೆ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವದು ಮನಸ್ಸಿಗೆ ಖೇದವೆನಿಸುತ್ತದೆ. ಮಾತ್ರವಲ್ಲ ನಮ್ಮ ಮೆಚ್ಚಿನ ಬರಹಗಾರರ ಬಿಡುಗಡೆಗೊಂಡ ಪುಸ್ತಕಗಳನ್ನು ತಕ್ಷಣ ಓದಲಾರದ್ದಕ್ಕೆ ಒದ್ದಾಡುತ್ತೇವೆ. ಜೊತೆಗೆ ಹೊಸ ಹೊಸ ನಾಟಕ, ಸಿನಿಮಾಗಳನ್ನು ತಕ್ಷಣ ನೋಡದ್ದಕ್ಕಾಗಿ ಹಪಹಪಿಸುತ್ತೇವೆ. ನಮಗಿಷ್ಟವಾದ ಪಾನಿಪೂರಿ........ ಎಮ್.ಟಿ.ಆರ್ ಮಸಾಲೆ ದೋಸೆ....... ಮೈಯಾಸ್‍ನ ಊಟ........ ಗಾಂಧಿ ಬಜಾರಿನ ಒಬ್ಬಟ್ಟು,...... ಫೋರ್ತ್ ಬ್ಲಾಕಿನಲ್ಲಿ ಸಣ್ಣದೊಂದು ಶಾಪಿಂಗ್.......ಎಂ.ಜಿ. ರೋಡಿನಲ್ಲಿ ಸುಮ್ಮನೆ ಒಂದು ಸುತ್ತಾಟ........ ಸ್ನೇಹಿತರೊಟ್ಟಿಗೆ ಗುಂಡು ಪಾರ್ಟಿ........ಸಿಗ್ನಲ್‍ನಲ್ಲಿ ಮೈ ಮನಗಳನ್ನು ಪುಳಕಗೊಳಿಸುವ ಸ್ಕೂಟಿ ಹುಡುಗಿಯರ ಕುಡಿನೋಟಗಳು.........ಅಬಬ್ಬಾ ಒಂದೇ.... ಎರಡೇ......ಎಷ್ಟೊಂದು ಆಪ್ಯಾಯಮಾನವೆನಿಸುವಂಥ ಸಂಗತಿಗಳಿಂದ ವಂಚಿತರಾಗುತ್ತೇವೆ.

    ಇಲ್ಲಿ ಲಿಬಿಯಾದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳಿಲ್ಲ. ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳವು. ಹೀಗಿರುವಾಗ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಇಲ್ಲಿ ಓದಿಸಲು ಮುಂದಾಗುತ್ತೇವಿ? ಹೀಗಾಗಿ ನಮಗೆ ದೂರದ ಭಾರತದಲ್ಲಿ ನಮ್ಮ ಕುಟುಂಬ ಬಿಟ್ಟಿರುವದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭಗಳಲ್ಲಿಯೇ ನಾವು ಕೆಲಸದ ಮೇಲೆ ಇಂಡಿಯಾದಿಂದ ಇಷ್ಟು ದೂರವಿದ್ದರೂ ನಮ್ಮ ಬಗ್ಗೆ ಅಲ್ಲಿ ಏನೇನೋ ಸುದ್ಧಿಗಳು ಹರಡುವದಲ್ಲೆದೇ ನಮ್ಮ ಕುಟುಂಬದವರ ಬಗ್ಗೆಯೂ ಸಹ ಇಲ್ಲ ಸಲ್ಲದ ಕಥೆಗಳು ಹುಟ್ಟಿ ಇಲ್ಲಿಯವರೆಗೂ ರವಾನೆಯಾಗಿಬಿಡುತ್ತವೆ. ಕೆಟ್ಟವರ ಬಗೆಗಿನ ಒಳ್ಳೆ ಸುದ್ದಿ ಕೇಳುವದಕ್ಕಿಂತ ಒಳ್ಳೆಯವರ ಬಗೆಗಿನ ಕೆಟ್ಟ ಸುದ್ಧಿಗಳನ್ನು ಕೇಳಲು ಜಗತ್ತು ಹೆಚ್ಚು ಕಾತರಿಸುತ್ತಿರುತ್ತದೆ. ಅದೇನೇ ಬಂದರೂ ನಮ್ಮ ಮತ್ತು ನಮ್ಮ ಕುಟುಂಬದವರ ಮಧ್ಯ ಇರುವ ಅಪಾರ ನಂಬಿಕೆ ನಮ್ಮನ್ನು ಇಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡುತ್ತದೆ ಮತ್ತು ಒಮ್ಮೊಮ್ಮೆ ನಾವವನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾ ಸಾಕಷ್ಟು ಎಂಜಾಯ್ ಮಾಡುತ್ತೇವೆ. ಆದರೆ ಹೀಗೆ ಹರಡುವ ಸುದ್ದಿಗಳು ಒಮ್ಮೊಮ್ಮೆ ನಿಜವಿದ್ದರೂ ಇರಬಹುದೇ ಎನ್ನುವ ಗುಮಾನಿಯನ್ನು ಹುಟ್ಟು ಹಾಕಿ ಮನಸ್ಸನ್ನು ಕಲಕಿಬಿಡುತ್ತವೆ.

    ಮೊನ್ನೆ ಏನಾಯಿತೆಂದರೆ ಇಲ್ಲಿ ಕೆಲಸ ಮಾಡುವ ನಮ್ಮ ಉತ್ತರ ಪ್ರದೇಶದ ಡಾಕ್ಟರೊಬ್ಬರ ಹೆಂಡತಿಯ ಹಳೆ ಗೆಳತಿಯೊಬ್ಬಳು ಇಂಡಿಯಾದಲ್ಲಿ ಬಹಳ ದಿನಗಳ ನಂತರ ಆಕೆಯನ್ನು ನೋಡಲು ಅವರ ಮನೆಗೆ ಹೋದಾಗ “ಏನೇ, ನಿನ್ನ ಗಂಡ ಅಲ್ಲಿ ಬೇರೆ ಯಾರನ್ನೋ ಮದುವೆಯಾಗಿದ್ದಾನಂತೆ. ನೀನು ನೋಡಿದರೆ ಹಾಗೇ ಇದ್ದೀಯಾ. ನೀನು ಯಾಕೆ ಇನ್ನೊಂದು ಮದುವೆ ಆಗಬಾರದು?” ಎಂದು ಎರಡು ಮಕ್ಕಳ ತಾಯಿಯಾಗಿರುವ ಆಕೆಗೆ ಬಿಟ್ಟಿ ಉಪದೇಶ ಕೊಟ್ಟು ಹೋಗಿದ್ದಲ್ಲದೆ ಅವರಿಬ್ಬರ ಮಧ್ಯ ತಂದಿಟ್ಟಿದ್ದಳು. ಆಕೆ ಮೊದಲು ಇದನ್ನು ನಂಬಿರಲಿಲ್ಲವಾದರೂ “ಯಾವುದಕ್ಕೂ ಈ ಗಂಡಸರನ್ನು ನಂಬೋದಿಕ್ಕಾಗುವದಿಲ್ಲ” ಎಂದು ಆಕೆ ಮೊದಲು ಗಂಡನಿಗೆ ಫೋನ್ ಮಾಡಿ ಆತ ಇನ್ನೊಂದು ಮದುವೆಯಾಗಿಲ್ಲ ಎನ್ನುವದನ್ನು ಖಾತ್ರಿಪಡಿಸಿಕೊಂಡಿದ್ದಳು. ಸಾಲದ್ದಕ್ಕೆ ಇಲ್ಲಿರುವ ಆತನ ಸಹೋದ್ಯೋಗಿಗಳಿಗೆ ಮತ್ತೆ ಮತ್ತೆ ಫೋನ್ ಮಾಡಿ “ನನ್ನ ಗಂಡ ಇನ್ನೊಂದು ಮದುವೆಯಾಗಿಲ್ಲ ತಾನೆ?” ಎಂದು ಮತ್ತೆ ಮತ್ತೆ ಕೇಳಿ ಖಾತ್ರಿಪಡಿಸಿಕೊಂಡಿದ್ದಳು.

    ಇನ್ನೊಂದು ಸಾರಿ ಇಲ್ಲಿ ನನ್ನೊಟ್ಟಿಗೆ ಕೆಲಸ ಮಾಡುವ ಲೆಕ್ಚರರೊಬ್ಬರ ಹೆಂಡತಿಯ ಬಗ್ಗೆ ಏನೇನೋ ಸುದ್ದಿ ಹಬ್ಬಿಸಿ ಅದು ಆಕೆಯ ಗಂಡನ ಮನೆಯವರ ಕಿವಿಯನ್ನು ತಲುಪವಂತೆ ಮಾಡಿಬಿಟ್ಟಿದ್ದರು. ಆಕೆ ದೂರದ ವಿಜಯವಾಡದಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಕ್ಯಾಷಿಯರ್ ಆಗಿದ್ದರು. ಈಗ ಅವರನ್ನು ಹೌಸಿಂಗ್ ಲೋನ್ ಸೆಕ್ಷನ್‍ಗೆ ಹಾಕಲಾಗಿದೆ. ಲೋನ್ ಸ್ಯಾಂಕ್ಷನ್ ಮಾಡುವ ಮೊದಲು ಆಕೆ ತನ್ನ ಒಬ್ಬ ಪುರುಷ ಸಹೋದ್ಯೋಗಿಯೊಂದಿಗೆ ಇಲ್ಲವೇ ತನ್ನ ಮ್ಯಾನೇಜರ‍್ ನೊಂದಿಗೆ ಸೈಟ್ ಹತ್ತಿರ ಹೋಗಿ ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ. ಹೀಗೆ ಒಂದೆರೆಡು ಸಾರಿ ಆಕೆ ತನ್ನ ಸಹದ್ಯೋಗಿಯೊಂದಿಗೆ ಸ್ಕೂಟರ್‍ನಲ್ಲೋ, ಆಟೋದಲ್ಲೋ ಹೋಗುವದನ್ನು ಆಕೆಯ ಮನೆಯ ಪಕ್ಕದವನೊಬ್ಬ ನೋಡಿ ಹತ್ತಿರದಲ್ಲಿರುವ ಆಕೆಯ ಗಂಡನ (ಅಂದರೆ ನನ್ನ ಸಹೋದ್ಯೋಗಿಯ) ಊರಿನವರಿಗೆ “ನಿಮ್ಮ ಸೊಸೆ ಯಾರ್ಯಾರದೋ ಜೊತೆ ಓಡಾಡುತ್ತಿದ್ದಾಳೆ” ಎಂದೆಲ್ಲಾ ಏನೇನೋ ಕಥೆ ಕಟ್ಟಿ ಹೇಳಿ ಅವರ ಮನಸ್ಸನ್ನು ಕೆಡಿಸಿದ್ದ. ಅವರು ನೇರವಾಗಿ ನನ್ನ ಸಹೋದ್ಯೋಗಿಗೆ ವಿಷಯ ಹೀಗೀಗೆ ಅಂತಾ ಫೋನ್ ಮಾಡಿ ಹೇಳಿದಾಗ ಅವನು ಬಿದ್ದು ಬಿದ್ದು ನಕ್ಕಿದ್ದಲ್ಲದೆ ಅವನ ಮನೆಯವರಿಗೆ ತನ್ನ ಹೆಂಡತಿಯ ಕೆಲಸದ ವೈಖರಿಯ ಬಗ್ಗೆ ಮತ್ತು ಹಾಗೆ ಆಕೆ ತನ್ನ ಕೆಲಸದ ಮೇಲೆ ತನ್ನ ಪುರುಷ ಸಹೋದ್ಯೋಗಿಗಳೊಟ್ಟಿಗೆ ಹೋಗುವದು ಅನಿವಾರ್ಯವಾಗಿರುತ್ತದೆಂದು ಸಮಜಾಯಿಸಿ ನೀಡುವದರಲ್ಲಿ ಸಾಕುಸಾಕಾಗಿ ಹೋಗಿದ್ದ. ಇನ್ನೊಂದು ಸಾರಿ ಲಕ್ನೋದ ನನ್ನ ಸಹೋದ್ಯೋಗಿಯ ಹೆಂಡತಿ ಒಮ್ಮೆ ತನ್ನ ಗಂಡನ ಗೆಳೆಯನೊಟ್ಟಿಗೆ ಸಿನಿಮಾಕ್ಕೆ ಹೋಗಿದ್ದನ್ನೇ ದೊಡ್ಡ ಗುಲ್ಲು ಮಾಡಿದ್ದರು. ನಾವು ಇಂಥ ವಿಷಯಗಳನ್ನು ತುಂಬಾ ತಮಾಷೆಯಾಗಿ ತೆಗೆದುಕೊಂಡು ಆಗಾಗ ಲೇವಡಿ ಮಾಡುತ್ತಾ ನಗುತ್ತಿರುತ್ತೇವೆ.

    ಇನ್ನು ಇಲ್ಲಿಯ ಅನಿವಾಸಿ ಭಾರತೀಯರ ಸೆಕ್ಸ್ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಾನು ನಿಮಗೆ ಹೇಳಲೇಬೇಕು. ತಂತಮ್ಮ ಕುಟುಂಬದಿಂದ ದೂರವಿರುವ ಎಷ್ಟೋ ಎನ್.ಆರ್.ಐಗಳು ಸ್ಪರ್ಷಸುಖವೇನುಂಬುದನ್ನೇ ಮರೆತಿರುತ್ತಾರೆ. ನಾವು ಬಿಡಿ ದೊಡ್ಡ ಕೆಲಸದಲ್ಲಿರುವವರು ವರ್ಷಕ್ಕೆ ಎರಡೊ ಮೂರೋ ಸಾರಿ ನಮ್ಮನಮ್ಮ ಊರಿಗೆ ಹೋಗಿ ಎರಡೆರೆಡು ತಿಂಗಳು ಇದ್ದು ಬರುತ್ತೇವೆ. ಈ ಮಧ್ಯ ನಮ್ಮ ಹೆಂಡಿರು ಮತ್ತು ಮಕ್ಕಳು ರಜೆಯಿದ್ದಾಗ ಬಂದು ಇಲ್ಲಿ ಎರಡು ತಿಂಗಳಮಟ್ಟಿಗೆ ಇದ್ದು ಹೋಗುತ್ತಾರೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಇವರು ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ತಮ್ಮ ಊರಿಗೆ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್‍ಗಳನ್ನು ತೆಗೆದುಕೊಟ್ಟರೆ ಮಾತ್ರ. ಹೀಗಾಗಿ ಅವರ ಮೈ ರತಿಸುಖವನ್ನು ಅನುಭವಿಸುವ ರೋಮಾಂಚನವನ್ನೇ ಕಳೆದುಕೊಂಡಿರುತ್ತದೆ. ಹಾಗೆ ಬಿಟ್ಟರೆ ಮರೆತೇಹೋಗಬಹುದೆಂದು ಇಲ್ಲಿಯ ವಿವಿಧ ಸ್ಯಾಟ್ಲೈಟ್‍ಗಳಲ್ಲಿ ಬರುವ ಹಾಟ್ ಮೂವಿಗಳನ್ನು ನೋಡುತ್ತಾ ತಮ್ಮಷ್ಟಕ್ಕೆ ತಾವೇ ರತಿಸುಖ ಅನುಭವಿಸುತ್ತಾರೆ ಹಾಗೂ ಅವನ್ನು ರೆಕಾರ್ಡ (ಕಾಪಿ) ಮಾಡಿಕೊಳ್ಳುತ್ತಾರೆ. ಇಲ್ಲಿಂದ ಎರಡು ವರ್ಷಗಳ ನಂತರವೋ, ಮೂರುವರ್ಷಗಳ ನಂತರವೋ ಭಾರತಕ್ಕೆ ಹೋಗುವಾಗ ಇಲ್ಲಿ ಯಥೇಚ್ಛವಾಗಿ ದೊರೆಯುವ ರತಿಸುಖವನ್ನು ಕೆರಳಿಸುವಂಥ ವಿವಿಧ ಮಾತ್ರೆಗಳನ್ನು ಹಾಗೂ ಜೆಲ್‍ಗಳನ್ನು ಹೊತ್ತೊಯ್ಯುತ್ತಾರೆ. ಮಾತ್ರವಲ್ಲ ಇಂಥವರು ಯಾವಾಗಲೋ ಒಮ್ಮೆ ತಮ್ಮ ಊರಿಗೆ ಹೋಗುವದರಿಂದ ಮಕ್ಕಳಿಗೆ ತಂದೆ ಅಂದರೆ ಯಾರು ಅಂತಾನೆ ಗೊತ್ತಿರುವದಿಲ್ಲ. ಇವರು ಪ್ರೀತಿಯಿಂದ ಅವನ್ನು ಅಪ್ಪಿಕೊಳ್ಳಲು ಹೋದರೆ ಅವು ಅಮ್ಮಂದಿರ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುತ್ತವೆ ಇಲ್ಲವೇ ಇವರನ್ನು ನೋಡಿ ಅಳುತ್ತವೆ. ಹಾಗಂತ ಅವರು ಬಂದು ನಮ್ಮ ಮುಂದೆ ಹೇಳುವಾಗ ಕಣ್ಣೀರಾಗುತ್ತಾರೆ. ಅವರ ಕಣ್ಣೀರು ನೋಡಿ ಒಂದು ಲ್ಯಾಪ್‍ಟಾಪ್ ಹಾಗೂ ಇಂಟರ್ನೆಟ್ ತೆಗೆದುಕೊಂಡು ನಿಮ್ಮ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರೆ ನಿಮ್ಮ ಮಕ್ಕಳು ಭಾವನಾತ್ಮಾಕವಾಗಿ ಹತ್ತಿರವಾಗಬಹುದು ಎಂದೇನೋ ಹೇಳೋಣ ಅಂತಾ ನಾಲಗೆ ತುದಿಯ ಮೇಲೆ ಬರುತ್ತದೆ. ಆದರೆ ತಕ್ಷಣ ಅವರ ಸಣ್ಣಮೊತ್ತದ ಸಂಬಳಕ್ಕೆ ಅವನ್ನೆಲ್ಲಾ ಭರಿಸಲಾಗದು ಎಂದು ಯೋಚಿಸಿ ಸುಮ್ಮನಾಗಿಬಿಡುತ್ತೇವೆ. ಆದರೆ ಅವರ ಬದುಕು ಎಂದಿನಂತೆ ಮತ್ತದೇ ಮೋಹನ ಮುರುಳಿಯ ನಿನಾದವನ್ನು ಬೆನ್ಹತ್ತಿ ಹೋಗುತ್ತದೆ.

    ಹೀಗಿದ್ದೂ ಇಲ್ಲಿ ಕೆಲವರು ಇಪ್ಪತೈದು, ಮೂವತ್ತು ವರ್ಷಗಳನ್ನು ಕಳೆದಿದ್ದಾರೆ. ಇಲ್ಲಿದ್ದುಕೊಂಡೇ ಮಕ್ಕಳನ್ನು ಚನ್ನಾಗಿ ಓದಿಸಿ ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಸ್ವಂತಕ್ಕೆ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ. ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್, ಎಫ್.ಡಿಗಳನ್ನು ಮಾಡಿಟ್ಟಿದ್ದಾರೆ. ಹೆಂಡತಿ-ಮಕ್ಕಳಿಗೆ ಚಿನ್ನ ತೆಗೆದಿಟ್ಟಿದ್ದಾರೆ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಮಾಡಬೇಕಾದ ಕರ್ತವ್ಯಗಳನ್ನೆಲ್ಲಾ ಮಾಡಿ ಮುಗಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಇಳಿಗಾಲದಲ್ಲೂ ಮನೆ ಕಟ್ಟಿಸಿದ ಸಾಲವನ್ನು ತೀರಿಸಲೋ, ಅಥವಾ ಮಕ್ಕಳ ಮದುವೆಯನ್ನು ಮಾಡಲೋ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ತಮ್ಮ ಐವತ್ತೇಳನೇ ವಯಸ್ಸಿಗೆ ಇಲ್ಲಿಗೆ ಬಂದ ನನ್ನ ಸಹೋದ್ಯೋಗಿ ಡಾ. ಬಾಸ್ಕರ‍್ ಅವರು ಇದೀಗ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಡಾ. ಶಂಕರ್ ಅವರು ಇಲ್ಲಿ ಮೂವತ್ತು ವರ್ಷಗಳಷ್ಟು ಕೆಲಸ ಮಾಡಿ ಮಕ್ಕಳನ್ನು ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಅವರು ಈಗ್ಗೆ ಎರಡು ವರ್ಷಗಳ ಹಿಂದೆಯಷ್ಟೇ ಇಂಡಿಯಾಕ್ಕೆ ವಾಪಾಸಾಗಿದ್ದಾರೆ. ಡಾಕ್ಟರ್ ಸಾಹು ಇಲ್ಲಿ ಹದಿನಾರು ವರ್ಷಗಳನ್ನು ಕಳೆದು ಮೊನ್ನೆಯಷ್ಟೇ ಇಂಡಿಯಾಕ್ಕೆ ಹಿಂದಿರುಗಿದ್ದಾರೆ. ಒಮ್ಮೆ ನಾನವರನ್ನು “ನೀವು ಪಡೆದುಕೊಂಡಿದ್ದಕ್ಕಿಂತ ಕಳಕೊಂಡಿದ್ದೇ ಹೆಚ್ಚು ಅಲ್ಲವೇ?” ಎಂದು ಕೇಳಿದ್ದೆ. ಅದಕ್ಕೆ ಅವರೆಲ್ಲಾ ಹೇಳಿದ್ದೊಂದೇ “ನಾವು ಕೆಲಸದ ನಿಮಿತ್ತ ಹೊರದೇಶಗಳಲ್ಲಿ ಉಳಿದಾಗ ಪಡೆದುಕೊಂಡಷ್ಟೇ ಕಳೆದುಕೊಂಡಿದ್ದೂ ಇದೆ. ಆದರೆ ನಮಗೆ ಈ ಬಗ್ಗೆ ಬೇಜಾರಿಲ್ಲ. ಏಕೆಂದರೆ ನಾವು ನಮಗಾಗಿ ಮಾತ್ರ ಬದುಕಲಿಲ್ಲ. ಇತರರಿಗಾಗಿಯೂ ಬದುಕಿದ್ದೇವೆ. ಮಾಡಬೇಕಾದ ಕರ್ತವ್ಯಗಳನ್ನು ಮಾಡಿ ಮುಗಿಸಿದ ತೃಪ್ತಿ ಇದೆ. ಇಷ್ಟಕ್ಕೂ ಜೀವನದಲ್ಲಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅದು ಬದುಕಿನ ನಿಯಮ. ಅದನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ.”

    ಬದುಕು ಎಷ್ಟೊಂದು ವಿಚಿತ್ರ? ಎಲ್ಲೋ ಹುಟ್ಟುತ್ತೇವೆ, ಎಲ್ಲೋ ಬೆಳೆಯುತ್ತೇವೆ, ಇನ್ನೆಲ್ಲೋ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಹಾಗೆಯೇ ಬದುಕು ಎಷ್ಟೊಂದು ನಿಷ್ಠುರ ಅಸಹನೀಯ! ಎಲ್ಲೋ ಏನೋ ಮಾಡಿಕೊಂಡಿರುತ್ತೇವೆ. ಇದ್ದಕ್ಕಿದ್ದಂತೆ ಇನ್ನೆಲ್ಲಿಗೋ ಎಳೆದು ತಂದುಬಿಡುತ್ತದೆ. ನಾವು ಹೋಗಲು ತಯಾರಿರದಿದ್ದರೂ ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ನಮ್ಮ ಮುಂದೆ ಹರಡಿ ಮುಂದೇನು ಮಾಡುವೆ? ಎಂದು ಕೇಳಿ ನಮ್ಮ ಉತ್ತರಕ್ಕೂ ಕಾಯದೆ ಅಲ್ಲಿಗೆ ನೊಗ ಕಟ್ಟಿಕೊಂಡು ಹೋಗುವಂತೆ ಮಾಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲು ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಇಲ್ಲಿಗೆ ಬರುವ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನನ್ನ ಕೆಲಸ ಮತ್ತು ಅದರ ಹಿಂದಿನ ದೊಡ್ಡ ಮೊತ್ತದ ಸಂಬಳಗಳ ಮುಂದೆ ಈ ಎಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು. ಆದರೆ ಅನಿಸಿಬಿಡುತ್ತದೆ.

    ಈ ಸಂದರ್ಭದಲ್ಲಿ ಕವಿ ಶಿಕಾರಿಪುರ ಹರಿಹರೇಶ್ವರರ ಸಾಲುಗಳು ನೆನಪಾಗುತ್ತವೆ.

    ತಾವು ಕಾಣದ ತಾಣ

    ಕೇಳಿ ತಿಳಿಯದ ದೇಶ

    ಇತ್ತ ಬಂದದ್ದೇ ಅರಾಮವಾಗಿರಲಿಕ್ಕೆ;

    ರೆಕ್ಕೆ ಸುಡದೆ ಸಾಧ್ಯವಾದಷ್ಟು

    ಗಳಿಸಿ ಉಳಿಸಲಿಕ್ಕೆ.

    ಇನ್ನು ಊರಿಗೆ ಹಿಂದಿರುಗುವದೇನಿದ್ದರೂ

    ಮಳೆಗಾಲಕ್ಕೆ ಮಾತ್ರ.



    -ಉದಯ್ ಇಟಗಿ




    “ಇಂಗ್ಲೀಷ್ ವಿಂಗ್ಲೀಷ್” ಗೃಹಿಣಿಯೊಬ್ಬಳು ಇಂಗ್ಲೀಷ್ ಕಲಿಯುವ ಕಥೆಯಷ್ಟೇ ಅಲ್ಲ

  • ಶನಿವಾರ, ಡಿಸೆಂಬರ್ 08, 2012
  • ಬಿಸಿಲ ಹನಿ


  • “ಇಂಗ್ಲಿಷ್ ವಿಂಗ್ಲಿಷ್” ಗೃಹಿಣಿಯೊಬ್ಬಳು ಇಂಗ್ಲಿಷ್ ಬಾರದೇ ಪೇಚಾಡುವ, ಅವಮಾನಕ್ಕೊಳಗಾಗುವ ಮತ್ತದನ್ನು ಜಯಿಸಿ ಬರುವ ಕಥೆ ಮಾತ್ರವಲ್ಲ ಹೆಣ್ಣೊಬ್ಬಳ ಛಲ, ಆತ್ಮವಿಶ್ವಾಸ, ಮತ್ತವಳ ಜೀವನ ಪ್ರೀತಿಯ ಪ್ರತೀಕದ ಕಥೆಯೂ ಹೌದು ಹಾಗೂ ಎಲ್ಲಿಯೂ ತನ್ನ ಸಂಯದ ಎಲ್ಲೆಯನ್ನು ಮೀರದೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲುವ ಒಬ್ಬ ಪರಿಪೂರ್ಣ ಮಹಿಳೆಯೊಬ್ಬಳ ಕಥೆಯೂ ಹೌದು. ನಿರ್ದೇಶಕಿ ಗೌರಿ ಶಿಂಧೆ ತೀರಾ ಸಾಮಾನ್ಯವೆನಿಸುವಂಥ ಮತ್ತು ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದಂಥ ಅನಿವಾರ್ಯತೆಯ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಡುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ ಅಲ್ಲವೇನೋ ಅನಿಸುವಷ್ಟರಮಟ್ಟಿಗೆ ಚಿತ್ರದುದ್ದಕ್ಕೂ ಗೌರಿ ಶಿಂಧೆ ಬಿಗುವಾದ ನಿರೂಪಣೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎಲ್ಲೂ ಅನವಶ್ಯಕ ದೃಶ್ಯಗಳನ್ನು ತುರುಕದೆ, ಅನವಶ್ಯಕ ಸಂಭಾಷಣೆಗಳನ್ನು ಹೆಣೆಯದೆ ಹೇಳಬೇಕಾದ್ದನ್ನು ಚಿಕ್ಕ ಚಿಕ್ಕ ದೃಶ್ಯಗಳ ಮೂಲಕ ಮನಮುಟ್ಟುವಂತೆ ಹೇಳುತ್ತಾರೆ. ಹ್ಯಾಟ್ಸಾಫ್ ಟು ಗೌರಿ ಶಿಂಧೆ!


    ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷ್ ಎಷ್ಟೊಂದು ಅವಶ್ಯಕ ಮತ್ತು ಅನಿವಾರ್ಯವಾಗಿದೆಯೆಂದರೆ ಇಂಗ್ಲೀಷ್ ಬಾರದವರನ್ನು ಅವಮಾನಿಸುವ, ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಯಾರೇ ಆಗಿರಲಿ (ಹೆಣ್ಣು ಅಥವಾ ಗಂಡು), ಎಷ್ಟೇ ಓದಿರಲಿ, ಎಷ್ಟೇ ಸ್ಮಾರ್ಟ್ ಆಗಿರಲಿ, ಅಥವಾ ಏನೆಲ್ಲ ಸ್ಕಿಲ್‍ಗಳನ್ನು ಹೊಂದಿರಲಿ ಆದರೆ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಇಲ್ಲದೇ ಹೋದರೆ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವದನ್ನು ಎಷ್ಟು ಜಾಗೂರುಕತೆಯಿಂದ ನಿರ್ದೇಶಕಿ ನಿರೂಪಿಸುತ್ತಾರೋ ಅಷ್ಟೇ ಜಾಗೂರುಕತೆಯಿಂದ ಅದನ್ನು ಕಲಿತರೆ ಎಷ್ಟೆಲ್ಲ ಪಡೆಯಬಹುದೆನ್ನುವದನ್ನು ಸಹ ಹೇಳುತ್ತಾರೆ. ಇಲ್ಲಿ ನಿರ್ದೇಶಕಿ ಇಂಗ್ಲೀಷ್ ಭಾಷೆ ಅನ್ಯ ಭಾಷೆಗಳ ಮೇಲೆ ದಾಳಿ ಮಾಡುತ್ತಿದೆ ಎನ್ನುವ ಒಣ ಹಾರಾಟಕ್ಕೆ ಇಂಬು ಕೊಡದೆ, ಆ ಭಾಷೆ ಹೇಗೆ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತದನ್ನು (ಎಷ್ಟು ಬೇಕೋ ಅಷ್ಟನ್ನು) ಅಪ್ಪಿಕೊಳ್ಳುವದು ಎಷ್ಟೊಂದು ಅನಿವಾರ್ಯವಾಗಿದೆ ಎನ್ನುವದನ್ನು ಯಾವೊಂದೂ ಹಿಜರಿತವಿಲ್ಲದೆ ಅತ್ಯಂತ ಸಲೀಸಾಗಿ ಹೇಳಿಬಿಡುತ್ತಾರೆ.

    ಕಥಾನಾಯಕಿ ಶಶಿ ಒಬ್ಬ ಸಾಮಾನ್ಯ ಮಧ್ಯಮವರ್ಗದ ಮಹಿಳೆ. ಎಲ್ಲ “ಹೌಸ್ ವೈಪ್” ಮಹಿಳೆಯರಂತೆ ಶಶಿ ಕೂಡ ದಿನಾ ಬೆಳಿಗ್ಗೆ ಎದ್ದು ಅತ್ತೆ, ಗಂಡ, ಮತ್ತು ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸುವ ಒಬ್ಬ ಸಾಮಾನ್ಯ ಗೃಹಿಣಿ ಮತ್ತು ಆಕೆ ತನ್ನ ಬಿಡುವಿನ ವೇಳೆಯಲ್ಲಿ ಲಡ್ಡುಗಳನ್ನು ಮಾಡುತ್ತಾ ಅವುಗಳನ್ನು ಮನೆಮನೆಗೆ ಹೋಗಿ ಮಾರುತ್ತಾ ಒಂದಷ್ಟು ಪುಡಿಗಾಸನ್ನು ಸಂಪಾದಿಸುವವಳು. ಸಿನಿಮಾ ಆರಂಭವಾಗುವದೇ ಅವಳ ದಿನಚರಿಯೊಂದಿಗೆ. ಬೆಳಿಗ್ಗೆ ಎದ್ದು ಕಾಫಿ ಮಾಡಿಕೊಂಡು ಕುಡಿಯುತ್ತಾ ಆಗಷ್ಟೇ ಬಂದ ದಿನಪತ್ರಿಕೆಯ ಪುಟವನ್ನು ತಿರುವಿ ಹಾಕಬೇಕು ಅನ್ನುವಷ್ಟರಲ್ಲಿ ಅವಳ ಅತ್ತೆ ಕಾಫಿ ಬೇಕು ಎಂದು ಕೇಳುತ್ತಾಳೆ. ಶಶಿ ಆಕೆಗೆ ಕಾಫಿ ಹಾಕಿಕೊಟ್ಟು ಮತ್ತೆ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದಂತೆ ಗಂಡ ಚಹಾ ಬೇಕೆಂದು ಕೇಳುತ್ತಾನೆ. ಅದಾದ ಮೇಲೆ ಮನೆಯವರೆಲ್ಲರಿಗೂ ತಿಂಡಿ ತಯಾರಿಸುವ ಕೆಲಸ. ಹೀಗೆ ಒಂದಾದ ಮೇಲೊಂದು ಬೆಳಗಿನ ಕೆಲಸ ಮಾಡುವದರಲ್ಲಿ ತೊಡಗುವದರಿಂದ ಆಕೆಗೆ ದಿನಪತ್ರಿಕೆಯನ್ನು ಓದಲಾಗುವದೇ ಇಲ್ಲ. ಆದರೆ ಆಕೆ ಈ ಬಗ್ಗೆ ಒಂಚೂರು ಬೇಸರವನ್ನು ವ್ಯಕ್ತಪಡಿಸದೆ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ.

    ಮುಂದಿನ ದೃಶ್ಯದಲ್ಲಿ ನಿರ್ದೇಶಕಿ ಚಿತ್ರದ ಆಶಯದ ಬಗ್ಗೆ ಸುಳಿವು ಕೊಟ್ಟುಬಿಡುತ್ತಾರೆ. ತಿಂಡಿ ತಯಾರಿಸಿದ ಮೇಲೆ ಎಲ್ಲರಿಗೂ ಬಡಿಸಬೇಕಾದರೆ ಶಶಿಯ ಮಗಳು ಸಪ್ನಾ ಬ್ರೌನ್ ಬ್ರೆಡ್ಡೇ ಬೇಕೆಂದು ಗೋಗರೆಯುತ್ತಾಳೆ. ಮಗನೂ ಅದನ್ನೇ ಕೇಳುತ್ತಾನೆ. ಆದರೂ ಅವಳು ಒಂದಿಷ್ಟು ಬೇಸರ ಮಾಡಿಕೊಳ್ಳದೆ ಮಾಡಿಕೊಡುತ್ತಾಳೆ. “ಸಪ್ನಾ, ನೀನು ಈ ರೀತಿ ಬ್ರೌನ್ ಬ್ರೆಡ್, ವೈಟ್ ಎಗ್ಸ್ ಕೇಳೋದೆಲ್ಲಾ ನೀನು ಆ ಝಾಸ್ ಡ್ಯಾನ್ಸ್ ಕ್ಲಾಸು ಸೇರಿದಾಗಿನಿಂದ ಶುರುವಾಗಿದೆ.” ಎಂದು ಮಗಳ ಮೇಲೆ ಹುಸಿ ಮುನಿಸು ತೋರಿಸುತ್ತಾಳೆ. ತಕ್ಷಣ ಆಕೆಯ ಮಗಳು ಮತ್ತು ಗಂಡ ಅವಳ ತಪ್ಪು ಉಚ್ಛಾರಣೆಯನ್ನು ಪರಿಹಾಸ್ಯ ಮಾಡುತ್ತಾ ಬಿದ್ದು ಬಿದ್ದು ನಗುತ್ತಾರೆ. ಶಶಿಗೆ ಅವಮಾನವಾಗುತ್ತದೆ. ಪಕ್ಕದಲ್ಲಿಯೇ ಇರುವ ಮಗ “ಮಾ, ಅದು ಝಾಸ್ ಡ್ಯಾನ್ಸ್ ಅಲ್ಲ. ಝೇಸ್ ಡ್ಯಾನ್ಸ್.” ಎಂದು ಹೇಳಿದಾಗ ಅವಳು ಪೆಚ್ಚಾಗುತ್ತಾಳೆ. ಅಲ್ಲಿಂದಾಚೆ ಅವಳು ಆ ಪದವನ್ನೆ ಮತ್ತೆ ಮತ್ತೆ ಮನನ ಮಾಡುವದರ ಮೂಲಕ ಅವಳ ಇಂಗ್ಲೀಷ್ ಕಲಿಯುವ ತುಡಿತ ಸಣ್ಣದಾಗಿ ಶುರುವಾಗುತ್ತದೆ.

    ಇಂಗ್ಲೀಷ್ ಬರದೆ ಇರುವ ಶಶಿ ತನ್ನ ಮಗಳಿಂದಲೇ ಕೀಳಾಗಿ ಕಾಣಲ್ಪಡುತ್ತಾಳೆ. ಒಂದು ಸಾರಿ ಶಶಿಯ ಮಗಳು ಸಪ್ನಾ ತನ್ನ ಗೆಳತಿ ರೂಪಲ್‍ಳ ಮನೆಯಲ್ಲಿ ಓದು ಮುಗಿಸಿ ವಾಪಾಸಾದಾಗ ಶಶಿ ಅವಳನ್ನು “ಎಲ್ಲಿಗೆ ಹೋಗಿದ್ದೆ? ಇಲ್ಲೇ ಮನೆಯಲ್ಲೇ ಓದ್ಕೋಬಹುದಿತ್ತಲ್ವ?” ಎಂದು ಕೇಳುತ್ತಾಳೆ. ಅದಕ್ಕೆ ಮಗಳು “ಇಂಗ್ಲೀಷ್ ಲಿಟರೇಚರ್ ನೀನು ಹೇಳಿಕೊಡುತಿದ್ಯಾ?” ಎಂದು ವ್ಯಂಗ್ಯವಾಗಿ ಹೇಳಿ ಅವಳನ್ನು ನೋಯಿಸುತ್ತಾಳೆ. ಇನ್ನೊಂದು ಸಾರಿ ಅವಳ ಸ್ಕೂಲಿನಲ್ಲಿ ಪೇರೆಂಟ್ಸ್ ಟೀಚರ್ ಮೀಟಿಂಗ್ ದಿನ ಶಶಿಯ ಗಂಡನಿಗೆ ಹೋಗಲಾಗದಿರುವದರಿಂದ ಅನಿವಾರ್ಯವಾಗಿ ಆಕೆ ಹೋಗಬೇಕಾಗುತ್ತದೆ. ಆದರೆ ಮಗಳಿಗೆ ಅವಳನ್ನು ತನ್ನ ಸ್ಕೂಲಿಗೆ ಕರೆದೊಯ್ಯಲು ಇಷ್ಟವಿಲ್ಲ. ಏಕೆಂದರೆ ಶಶಿಗೆ ಇಂಗ್ಲೀಷ್ ಮಾತನಾಡಲು ಬರುವದಿಲ್ಲ. ಆದರೆ ಶಶಿ ಹೋಗೇ ಹೋಗುತ್ತಾಳೆ. ಅಲ್ಲಿ ಮಗಳ ಗೆಳತಿಯ ಅಮ್ಮನೊಂದಿಗೆ ಶಶಿ ಮಾತನಾಡುವಾಗ ಅವಳ ಮಗಳೇ ಎಲ್ಲದಕ್ಕೂ ಇಂಗ್ಲೀಷಿನಲ್ಲಿ ಉತ್ತರ ಕೊಡುತ್ತಾಳೆ ಹಾಗೂ ಅಲ್ಲಿ ಬಹಳ ಹೊತ್ತು ನಿಂತರೆ ಎಲ್ಲಿ ತನ್ನ ಅಮ್ಮನಿಗೆ ಇಂಗ್ಲೀಷ್ ಬರುವದಿಲ್ಲ ಅನ್ನುವ ಸತ್ಯ ತನ್ನ ಗೆಳತಿಯ ಅಮ್ಮನಿಗೆ ಗೊತ್ತಾಗಿಬಿಡುತ್ತದೋ ಎಂದು ಅವಳನ್ನು ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾಳೆ. ಮುಂದೆ ಮಗಳ ಕ್ಲಾಸ್ ಟೀಚರ‍್ ನ್ನು ಭೇಟಿಯಾದಾಗ ಆತ ಅವಳ performance ಬಗ್ಗೆ ಇಂಗ್ಲೀಷ್‍ನಲ್ಲಿ ಹೇಳುವಾಗ ಶಶಿ ಅವರನ್ನು ತಡೆದು “Father, my English is not good. ನಿಮಗೆ ತೊಂದರೆ ಇಲ್ಲದಿದ್ದರೆ ಹಿಂದಿಯಲ್ಲೇ ಹೇಳುತ್ತೀರಾ?” ಎಂದು ಕೇಳುತ್ತಾಳೆ. ಹೀಗೆ ಆಕೆ ಹಿಂದಿಯಲ್ಲಿ ಮಾತನಾಡುವಾಗ ಮಗಳು ಸಪ್ನಾ ತನ್ನ ಟೀಚರ್ ಮುಂದೆ ಮುಜುಗರಕ್ಕೀಡಾಗುತ್ತಾಳೆ ಮತ್ತು ತನ್ನ ಅಮ್ಮ ಹಿಂದಿಯಲ್ಲಿ ಮಾತನಾಡಿದ್ದು ತನ್ನ ಪ್ರತಿಷ್ಟೆಗೆ ಕುಂದು ಎಂದು ಭಾವಿಸುತ್ತಾಳೆ. ಈ ಸನ್ನಿವೇಶದ ಮೂಲಕ ನಿರ್ದೇಶಕಿ ಇವತ್ತಿನ ‘ಇಂಗ್ಲೀಷ್ ಮೀಡಿಯಂ’ ಮಕ್ಕಳ ಈ ತೆರನಾದ ಮನೋಸ್ಥಿತಿಯು ಅತ್ಯಂತ ಸಹಜವೆಂಬಂತೆ ನಿರೂಪಿಸುತ್ತಾರೆ.

    ಮುಂದೆ ತನ್ನ ಅಕ್ಕನ ಮಗಳ ಮದುವೆ ತಯಾರಿ ಸಲುವಾಗಿ ಒಬ್ಬಳೇ ಅಮೆರಿಕಾಕ್ಕೆ ಹೋಗಬೇಕಾಗಿ ಬಂದಾಗ ವಿಮಾನ ನಿಲ್ದಾಣದಲ್ಲಿ ಇಂಗ್ಲೀಷ್ ಬರದ ಶಶಿ ಅನುಭವಿಸುವ ಆತಂಕ, ಕಳವಳಗಳು ನಮ್ಮ ಮನಸ್ಸನ್ನು ಕಲಕಿಬಿಡುತ್ತವೆ. ಹೀಗೆ ಧುತ್ತೆಂದು ಬರೀ ಇಂಗ್ಲೀಷ್ ಮಾತನಾಡುವ ದೇಶಕ್ಕೆ ಬಂದಿಳಿದಾಗ ಅಲ್ಲಿ ಶಶಿ ಹೇಗೆ ನಿಭಾಯಿಸುತ್ತಾಳೆ ಎನ್ನುವದೇ ಚಿತ್ರದ ಕುತೂಹಲಕಾರಿ ಘಟ್ಟ. ಇಲ್ಲಿಂದ ಮುಂದೆ ಬರೀ ಇಂಗ್ಲೀಷ್ ಮಾತನಾಡುವ ಅಮೆರಿಕದಂಥ ಅಪರಿಚಿತ ಪರಿಸರದಲ್ಲಿ ಇಂಗ್ಲಿಷ್‍ನಲ್ಲಿ ವ್ಯವಹರಿಸಲಾಗದೆ ಶಶಿ ಕೀಳರಿಮೆಯಿಂದ ನರಳುತ್ತಾಳೆ, ಒಂದು ಸಾರಿ ಶಶಿಯ ಅಕ್ಕನ ಮಗಳ ಭಾವಿಪತಿ ಮನೆಗೆ ಭೇಟಿ ಕೊಟ್ಟಾಗ ಎಲ್ಲರೂ ಅವನೊಂದಿಗೆ ಇಂಗ್ಲೀಷ್‍ನಲ್ಲಿ ವ್ಯವಹರಿಸುವದನ್ನು ನೋಡಿ ಶಶಿಗೆ ತಾನು ಪರಕೀಯಳು ಎಂಬ ಭಾವ ಮೂಡುತ್ತದೆ. ಮುಂದೆ ಮನ್‍ಹತ್ತನ್ ಕಾಫಿ ಶಾಪೊಂದರಲ್ಲಿ ಸ್ಯಾಂಡ್‍ವಿಚ್ ಮತ್ತು ಕಾಫಿ ಆರ್ಡರ್ ಮಾಡಲು ಹೋಗಿ ಅಲ್ಲಿಯ ಜನರ ಗೇಲಿಗೊಳಗಾಗುತ್ತಾಳೆ. ಈ ಘಟನೆ ಅವಳ ಆತ್ಮಗೌರವಕ್ಕೆ ಧಕ್ಕೆ ತರುವದಲ್ಲದೆ ಅಲ್ಲಿ ಅವಳನ್ನು ನಾಲ್ಕು ವಾರಗಳ ಇಂಗ್ಲಿಷ್ ಕ್ರ್ಯಾಸ್ ಕೋರ್ಸಿಗೆ ಸೇರಿಕೊಳ್ಳುವಂತೆ ಪ್ರೇರಿಪಿಸುತ್ತದೆ.

    ಇಂಗ್ಲೀಷ್ ಕ್ಲಾಸಿನಲ್ಲಿ ಮೆಕ್ಸಿಕನ್ ನ್ಯಾನಿ, ಪಾಕಿಸ್ತಾನಿ ಡ್ರೈವರ್, ಚೈನೀಸ್ ಹೇರ್ ಸ್ಟೈಲಿಸ್ಟ್, ಸೌಥ್ ಇಂಡಿಯನ್ ಸಾಫ್ಟ್ವೇರ್ ಇಂಜಿನೀಯರ್, ಮತ್ತು ಫ್ರೆಂಚ್ ಚೆಫ್ ನನ್ನು ಭೇಟಿಯಾಗುತ್ತಾಳೆ. ಅವರೆಲ್ಲರೂ ಪ್ರಪಂಚದ ಮೂಲೆ ಮೂಲೆಯಿಂದ ಕೆಲಸ ಹುಡುಕಿಕೊಂಡು ಅಮೆರಿಕಾಕ್ಕೆ ಬಂದವರು. ಆದರೆ ಇಂಗ್ಲೀಷ್ ಬರದೆ ಇರುವವರು. ಅವರನ್ನು ನೋಡಿ ಶಶಿಗೆ ತಾನೊಬ್ಬಳೇ ಈ ಕೀಳರಿಮೆಯಿಂದ ಬಳಲುತ್ತಿಲ್ಲ, ಇನ್ನೂ ಎಷ್ಟೋ ಜನ ಇದ್ದಾರೆ ಎಂದು ಕೊಂಚ ಸಮಾಧಾನವಾಗುತ್ತದೆ. ಅಲ್ಲಿ ಅವರೊಟ್ಟಿಗಿನ ಸ್ನೇಹ ಮತ್ತು ಅವಳ ಟೀಚರ್ ನೀಡುವ ಪ್ರೋತ್ಸಾಹ ಅವಳಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಅಲ್ಲಿ ಇಂಗ್ಲೀಷ್ ಕಲಿಯಲು ಬಂದ ಅವರೆಲ್ಲರೂ ಎಷ್ಟೋ ಪ್ರಸಂಗಗಳಲ್ಲಿ ಹೇಳಬೇಕಾದ್ದನ್ನು ಇಂಗ್ಲೀಷಿನಲ್ಲಿ ಹೇಳಲಾಗದೆ, ಪದಗಳಿಗೆ ತಡಕಾಡುವಾಗ ಧೀಡಿರ್ ಅಂತ ಮಾತೃಭಾಷೆಗೆ ಹಿಂದಿರುಗುತ್ತಾರೆ. ಅವರೆಲ್ಲರೂ ಇಂಗ್ಲೀಷ್ ಕಲಿಯುವ ಪರಿ ಮತ್ತು ಅದರ ಹಿಂದಿನ ಅವಶ್ಯಕತೆಯನ್ನು ನಿರ್ದೇಶಕಿ ತುಂಬಾ ರಿಯಲಿಸ್ಟಿಕ್ ಆಗಿ ಕಟ್ಟಿಕೊಡುತ್ತಾರೆ.

    ಹೀಗೆ ನಿಧಾನವಾಗಿ ಶಶಿ ಎಡುವತ್ತಾ, ತಡವರಿಸುತ್ತಾ ಕೊನೆಗೂ ಇಂಗ್ಲೀಷ್ ಕಲಿಯುತ್ತಾಳೆ. ಕೊನೆಯಲ್ಲಿ ಶಶಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡನ್ನು ಉದ್ದೇಶಿಸಿ ಒಂದೊಂದೇ ವಾಕ್ಯವನ್ನು ಪೋಣಿಸುತ್ತಾ ಇಂಗ್ಲೀಷಿನಲ್ಲಿ ಮಾತನಾಡುದು ನಮ್ಮ ಮೆಚ್ಚುಗೆಯನ್ನು ಗಳಿಸುವದಲ್ಲದೆ ನಮ್ಮ ಮನಸ್ಸನ್ನು ತಾಕಿಬಿಡುತ್ತದೆ. ಹೀಗೆ ಸ್ವಂತ ಆಸಕ್ತಿ ಹಾಗು ಪರಿಶ್ರಮದಿಂದ ಶಶಿ ಇಂಗ್ಲಿಷ್ ಕಲಿತು ಇಡಿ ಪ್ರಪಂಚವನ್ನೇ ಗೆದ್ದ ಭಾವದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಸ್ವದೇಶಕ್ಕೆ ಮರಳುತ್ತಾಳೆ. ಇಂಗ್ಲೀಷ್ ಕಲಿತ ಮೇಲೆ ಶಶಿ ಅದನ್ನು ಅವಶ್ಯಕತೆ ಬಿದ್ದಾಗ ಮಾತ್ರ ಬಳಸುತ್ತಾಳೆ. ಅಥವಾ ಅದರ ಮೇಲೆ ಅನವಶ್ಯಕ ವ್ಯಾಮೋಹವನ್ನು ಬೆಳೆಸಿಕೊಳ್ಳುವದಿಲ್ಲ. ಆಕೆ ಸ್ವದೇಶಕ್ಕೆ ಮರಳುವಾಗ ವಿಮಾನದಲ್ಲಿ ಗಗನಸಖಿ ಇಂಗ್ಲೀಷ್ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ವಿತರಿಸುತ್ತಾ ಬರುವಾಗ ಶಶಿಯ ಗಂಡ ಇಂಗ್ಲೀಷ್ ಪತ್ರಿಕೆ ತೆಗೆದುಕೊಳ್ಳುತ್ತಾನೆ. ಆದರೆ ಶಶಿ ಹಿಂದಿ ಪತ್ರಿಕೆ ಬೇಕೆಂದು ಕೇಳುತ್ತಾಳೆ. ಆ ಮೂಲಕ ಶಶಿ ಇಂಗ್ಲೀಷ್ ಕಲಿತರೂ ತನ್ನ ಮಾತೃಭಾಷೆಯ ಮೇಲಿನ ಪ್ರೀತಿಯನ್ನು, ಗೌರವವನ್ನು ಕಳೆದುಕೊಳ್ಳುವದಿಲ್ಲವೆಂದು ಗೊತ್ತಾಗುತ್ತದೆ.

    ಶಶಿ ಒಬ್ಬ ಸಾಮಾನ್ಯ ಗೃಹಿಣಿಯಾದರೂ ಆಧುನಿಕ ಸಮಾಜದ ಬದಲಾವಣೆಗಳನ್ನು ಎಗ್ಗಿಲ್ಲದೆ ಒಪ್ಪಿಕೊಳ್ಳುವಂಥವಳು. ತಮ್ಮ ಟೀಚರ್ ಒಬ್ಬ ಗೇ ಅಂತಾ ಗೊತ್ತಾದಾಗ ಅವನ ವಿದ್ಯಾರ್ಥಿಗಳು ಅವನನ್ನು ಆಡಿಕೊಂಡು ನಗುತ್ತಾರೆ. ಆದರೆ ಶಶಿ ಅವರನ್ನು ಖಂಡಿಸುತ್ತಾ ‘ಅವರು ಮನುಷ್ಯರಲ್ಲವೇ?’ ಎಂದು ಅದೊಂದು ಸಾಮಾನ್ಯ ವಿಷಯವೆಂಬಂತೆ ಸ್ವೀಕರಿಸುತ್ತಾಳೆ. ಇನ್ನು ತನ್ನ ಟೀನೇಜ್ ಮಗಳು ತುಂಡುಲಂಗವನ್ನು ಹಾಕಿಕೊಂಡು ಕಾಫಿ ಡೇಗೆ ಹೋಗುವದನ್ನು ಮತ್ತು ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ನಿರಾಳವಾಗಿ ಒಪ್ಪಿಕೊಳ್ಳುತ್ತಾಳೆ.

    ಸಿನಿಮಾದ ಮುಖ್ಯ ಆಕರ್ಷಣೆ ಶಶಿಯ ಫ್ರೆಂಚ್ ಸಹಪಾಠಿ ಮತ್ತು ಶಶಿಯ ಅಕ್ಕನ ಮಗಳು. ಅವರಿಬ್ಬರೂ ಶಶಿಗೆ ಇಂಗ್ಲೀಷ್ ಕಲಿಯುವದರಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವಳ ಫ್ರೆಂಚ್ ಸಹಪಾಠಿ ಕೂಡ ಶಶಿಯಂತೆ ಅಡಿಗೆಯನ್ನೇ ಕೆಲಸವನ್ನಾಗಿ ಮಾಡಿಕೊಂಡವ. ಇದೇ ಕಾರಣಕ್ಕಾಗಿ ಅವರಿಬ್ಬರೂ ಹತ್ತಿರವಾಗುತ್ತಾರೆ. ಆತ ಶಶಿಯ ಲಡ್ಡು ಬಗ್ಗೆ, ಅವಳ ಅಡಿಗೆ ಕಲೆಯ ಬಗ್ಗೆ, ಮತ್ತು ಅವಳ ಸ್ಪೋಕನ್ ಇಂಗ್ಲೀಷ್ ಬಗ್ಗೆ ಇಂಗ್ಲೀಷಿನಲ್ಲಿ ಒಂದೊಂದೇ ಪದವನ್ನು ಪೋಣಿಸುತ್ತಾ ಅವಳನ್ನು ಹುರಿದುಂಬಿಸುತ್ತಾನೆ. ಹೀಗೆ ಶಶಿಯನ್ನು ಹುರಿದುಂಬಿಸುತ್ತಲೇ ನಿಧಾನವಾಗಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಆದರೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ಶಶಿ ಅವನ ಪ್ರೀತಿಯನ್ನು ನಯವಾಗಿ ತಿರಸ್ಕರಿಸುತ್ತಾಳೆ. ಆದರೂ ಅವರಿಬ್ಬರ ನಡುವೆ ನಡೆಯುವ ಮಧುರ ಮಾತುಕತೆ ನಮಗೆ ಇಷ್ಟವಾಗುದೆ ಹೋದರೆ ಕೇಳಿ. ಆತ ಎಷ್ಟೋ ಸಾರಿ ಹೇಳಬೇಕಾದ್ದನ್ನು ತನ್ನ ಮುಗುಳುನಗೆಯೊಂದರಲ್ಲೇ ಎಲ್ಲವನ್ನು ಹೇಳುತ್ತಾನೆ. ಇನ್ನು ಇಡಿ ಚಿತ್ರದಲ್ಲಿ ಶಶಿಯ ಅತ್ತೆಯನ್ನು ಬಿಟ್ಟರೆ ಅವಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವಳೆಂದರೆ ಶಶಿಯ ಅಕ್ಕನ ಮಗಳು. ಆಕೆ ಹೆಜ್ಜೆಹೆಜ್ಜೆಗೂ ಶಶಿಗೆ ಇಂಗ್ಲೀಷ್ ಕಲಿಯಲು ಪ್ರೋತ್ಸಾಹ ನೀಡುವದರ ಮೂಲಕ ಶಶಿಗೆ ಆಸರೆಯಾಗಿ ನಿಲ್ಲುತ್ತಾಳೆ.

    ಇನ್ನು ಶಶಿಯ ಪಾತ್ರಕ್ಕೆ ಶ್ರೀದೇವಿ ಪ್ರತಿಯೊಂದು ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸುವದರ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಲ್ಲೂ ಆಕೆಯ ಅಭಿನಯ ನಾಟಕೀಯ ಅನಿಸುವದೇ ಇಲ್ಲ. ಆಕೆಯನ್ನು ಬಿಟ್ಟರೆ ಮತ್ಯಾರು ಸರಿಹೊಂದುತ್ತಿರಲಿಲ್ಲವೇನೋ ಅನ್ನುವಷ್ಟರಮಟ್ಟಿಗೆ ಶ್ರೀದೇವಿ ಪಾತ್ರದೊಳಕ್ಕೆ ಇಳಿದು ನಟಿಸಿದ್ದಾರೆ. ಬಹುಶಃ ಆಕೆಗೆ ಈ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಕ್ಕರೂ ಸಿಗಬಹುದು. ಶಶಿಯನ್ನು “ನೀನು ಲಡ್ಡು ಮಾಡುವದಕ್ಕಾಗಿಯೇ ಹುಟ್ಟಿರುವದು” ಎಂದು ಅವಳನ್ನು ಛೇಡಿಸಿದರೂ ಮನಃಪೂರ್ವಕವಾಗಿ ಪ್ರೀತಿಸುವ ಅವಳ ಗಂಡನಾಗಿ ಅಭಿನಯಿಸಿದ ಆದಿಲ್ ಹುಸೇನ್ ಗಮನ ಸೆಳೆಯುತ್ತಾರೆ. ಇನ್ನು ಶಶಿಯ ಅಕ್ಕನಾಗಿ ಸುಜಾತ ಕುಮಾರ್, ಅವಳ ಪ್ರೀತಿಯ ಅತ್ತೆಯಾಗಿ ಸುಲಭಾ ದೇಶಪಾಂಡೆ, ಅಮೆರಿಕನ್ನರಿಗೇ ನಿಮ್ಮ ಎಕಾನಮಿಯನ್ನು ಇಂಪ್ರೂವ್ ಮಾಡಲು ಬಂದಿದ್ದೇನೆ ಎಂದು ಹೇಳುವ ಅಮಿತಾಬಚ್ಚನ್, ಹಾಗೂ ಶಶಿಯ ಮಕ್ಕಳಾಗಿ ಅಭಿನಯಿಸಿದ ಮಕ್ಕಳಿಬ್ಬರೂ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಾರೆ.

    -ಉದಯ್ ಇಟಗಿ



    ಗುರುತು ಪತ್ರ

  • ಶನಿವಾರ, ಡಿಸೆಂಬರ್ 01, 2012
  • ಬಿಸಿಲ ಹನಿ
  • ಕವನದ ಹಿನ್ನೆಲೆ: ಮೊಹಮ್‍ದ ಡರ್ವಿಸ್ ಪ್ಯಾಲೈಸ್ತೀನಾದ ಪ್ರಸಿದ್ಧ ಕವಿ. ಹುಟ್ಟಿದ್ದು 1941ರಲ್ಲಿ ಪ್ಯಾಲೈಸ್ತೀನಾದ ಆಲ್-ಬಿರ್ವಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ. 1948ರಲ್ಲಿ ಇಸ್ರೇಲಿಯರು ಈತನ ಊರಾದ ಆಲ್-ಬಿರ್ವಿಯನ್ನು ಆಕ್ರಮಿಸಿಕೊಂಡಿದ್ದರಿಂದ ಅವರಿಗೆ ಹೆದರಿ ಈತನ ಕುಟುಂಬ ಲೆಬನಾನ್‍ಗೆ ಓಡಿಹೋಗುತ್ತದೆ. ಒಂದು ವರ್ಷ ಬಿಟ್ಟು ಮತ್ತೆ ಅವರು ತಮ್ಮ ಊರಿಗೆ ವಾಪಾಸಾದಾಗ ಈತನ ಊರು ಸೇರಿದಂತೆ ಹಲವು ಊರುಗಳು ಇಸ್ರೇಲಿಯರ ದಾಳಿಗೆ ನಾಶವಾಗಿ ಅವರ ಹಿಡಿತದಲ್ಲಿ ಸಿಕ್ಕಿಕೊಳ್ಳುತ್ತವೆ. ಹೀಗಾಗಿ ಡರ್ವಿಸ್ ಕುಟುಂಬ ಬೇರೊಂದು ಹಳ್ಳಿಯಲ್ಲಿ ನೆಲೆಸಬೇಕಾಗುತ್ತದೆ. ಆ ಮೂಲಕ ಅವರು ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ತಮ್ಮದೇ ನೆಲದಲ್ಲಿ ತಮಗೆ ಸ್ಥಾನಪಲ್ಲಟವಾಗಿದ್ದನ್ನು ಹಾಗೂ ತಮ್ಮ ಗುರುತು ಅಳಿಸಿಹೋಗುವದನ್ನು ಕವಿ ಇನ್ನಿಲ್ಲದಂತೆ ಅನುಭವಿಸುತ್ತಾನೆ. ಹಾಗೆಂದೇ ಅವನ ಕವನಗಳು 1948ರಲ್ಲಿ ಉಂಟಾದ ಆಪತ್ತಿನಿಂದ ಪ್ಯಾಲೈಸ್ತೀನಿಯನ್ನರು ಅನುಭವಿಸಿದ ನಷ್ಟಗಳನ್ನು ಹಾಗೂ ಅವರ ಮೇಲೆ ಇಸ್ರೇಲಿಯರು ನಡೆಸಿದ ಸಾಂಸ್ಕೃತಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಪ್ರಸ್ತುತ ಕವನದಲ್ಲಿ ಕವಿಯು ಇಸ್ರೇಲಿಯರು ಪ್ಯಾಲೈಸ್ತೀನಿಯನ್ನರ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳಿಗೆ ತೀವ್ರ ವಿರೋಧವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ.



    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ

    ನನಗೆ ಎಂಟು ಜನ ಮಕ್ಕಳು

    ಒಂಬತ್ತನೆಯದು ಈ ಬೇಸಿಗೆಯ ನಂತರ ಬರುತ್ತದೆ.

    ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನಾನು ನನ್ನ ಗೆಳೆಯರೊಟ್ಟಿಗೆ

    ಕಲ್ಲುಗಣಿಯಲ್ಲಿ ಕೆಲಸ ಮಾಡುವವ

    ನನಗೆ ಎಂಟು ಜನ ಮಕ್ಕಳು

    ಅವರೆಲ್ಲರ ಊಟ, ವಸತಿ,

    ಓದು, ಬಟ್ಟೆಬರೆಯೆಲ್ಲವನ್ನೂ

    ಈ ಕಲ್ಲುಗಣಿ ದುಡಿಮೆಯಲ್ಲಿಯೇ

    ತೂಗಿಸುತ್ತೇನೆ.

    ನಿಮಗೆ ಕೋಪವೇ?


    ನಾನು ನಿಮ್ಮ ಮನೆಯ

    ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.

    ಅಥವಾ ನಿಮ್ಮ ಕಾಲಿಗೆ ಬಿದ್ದು

    ಕರುಣೆ ತೋರಿಸೆಂದು ಬೇಡಿ

    ಸಣ್ಣವನಾಗುವದಿಲ್ಲ.

    ಅದಕ್ಕೇ ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ಬಿರುದು ಬಾವಲಿಗಳಿಲ್ಲದ

    ಸಾಧಾರಣ ಮನುಷ್ಯ.

    ರೊಚ್ಚಿಗೆದ್ದ ಜನರ ನಾಡಿನಲ್ಲಿ

    ತಾಳ್ಮೆಯಿಂದ ಕಾಯುತ್ತಿದ್ದೇನೆ.

    ನನ್ನ ಹುಟ್ಟಿಗಿಂತ ಮೊದಲೇ

    ನಾನಿಲ್ಲಿ ಬೇರು ಬಿಟ್ಟಿದ್ದೇನೆ

    ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,

    ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆ

    ಹಾಗೂ ಹುಲ್ಲು ಹುಟ್ಟುವ ಮೊದಲೇ

    ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

    ನನ್ನ ಅಪ್ಪ ಸಾಧಾರಣ

    ರೈತಾಪಿ ಕುಟುಂಬದಿಂದ ಬಂದವನು

    ನನ್ನ ಅಜ್ಜನೂ ಸಹ ರೈತನೇ!

    ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ

    ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.

    ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು

    ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.

    ನನ್ನ ಮನೆ ಹುಲ್ಲು ಕಡ್ಡಿಗಳಿಂದ

    ಮಾಡಿದ ಕಾವಲುಗಾರನ ಗುಡಿಸಲಿನಂತಿದೆ.

    ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನೀವು ನನ್ನ ಪೂರ್ವಿಕರ

    ಹಣ್ಣುತೋಟ ಮತ್ತು ನಾನು ನನ್ನ ಮಕ್ಕಳೊಟ್ಟಿಗೆ

    ಉಳುಮೆ ಮಾಡುತ್ತಿದ್ದ ಭೂಮಿಯನ್ನು

    ಕಿತ್ತುಕೊಂಡವರು.

    ನೀವು ನಮಗೆ

    ಈ ಕಲ್ಲುಬಂಡೆಗಳನ್ನು ಬಿಟ್ಟು

    ಬೇರೇನೇನನ್ನೂ ಬಿಡಲಿಲ್ಲ.

    ಆದರೂ ನಿಮಗೆ ಕೋಪವೇ!


    ಆದ್ದರಿಂದ

    ಬರೆದುಕೊಳ್ಳಿ

    ಮೊದಲ ಪುಟದ ಮೊದಲ ಸಾಲಿನಲ್ಲಿ.

    ನಾನು ಜನರನ್ನು ದ್ವೇಷಿಸುವದಿಲ್ಲ

    ಅಥವಾ ಆಕ್ರಮಿಸುವದಿಲ್ಲ.

    ಆದರೆ ನಾನು ಹಸಿದರೆ,

    ರೊಚ್ಚಿಗೆದ್ದರೆ

    ದುರಾಕ್ರಮಣಕಾರರ ಮಾಂಸವೇ

    ನನ್ನ ಆಹಾರವಾಗುತ್ತದೆ.

    ಎಚ್ಚರ.........

    ಎಚ್ಚರ.........

    ನನ್ನ ಹಸಿವಿನ ಬಗ್ಗೆ

    ಮತ್ತು ನನ್ನ ರೊಚ್ಚಿನ ಬಗ್ಗೆ!



    ಮೂಲ ಅರೇಬಿ: ಮೊಹಮ್‍ದ ಡರ್ವಿಸ್

    ಕನ್ನಡಕ್ಕೆ: ಉದಯ್ ಇಟಗಿ