ಶೇಕ್ಷಪೀಯರನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆತ ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ, ಕವಿ, ಹಾಗೂ ಮನಃಶಾಸ್ತ್ರಜ್ಞ! ನಾನಿಲ್ಲಿ ಉದ್ದೇಶಪೂರ್ವಕವಾಗಿ ಅವನನ್ನು ಮನಃಶಾಸ್ತ್ರಜ್ಞ ಎಂದು ಕರೆದಿದ್ದೇನೆ. ಏಕೆಂದರೆ ಆತ ಯಾವುದೇ ಮನಃಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದೇಹೋದರೂ ತನ್ನ ಪಾತ್ರಗಳ ಮೂಲಕ ಅವನಷ್ಟು ಸೊಗಸಾಗಿ ಮನುಷ್ಯರ ಮನಸ್ಸಿನ ಚಿತ್ರಣವನ್ನು ಕಟ್ಟಿಕೊಟ್ಟಷ್ಟು ಬಹುಶಃ ಜಗತ್ತಿನ ಬೇರಾವ ಲೇಖಕನಾಗಲಿ, ಮನಃಶಾಸ್ತ್ರಜ್ಞನಾಗಲಿ ಇದುವರೆಗೂ ಕಟ್ಟಿಕೊಟ್ಟಿಲ್ಲ. ಪಾತ್ರಗಳ ಮನಸ್ಸಿನಾಳಕ್ಕೆ ಇಳಿದು ಅಲ್ಲಿ ನಡೆಯುವ ತುಮುಲವನ್ನು, ವೈಚಿತ್ರ್ಯವನ್ನು ಬಗೆಯುತ್ತಾ, ಶೋಧಿಸುತ್ತಾ ಮನುಷ್ಯ ಸ್ವಭಾವವನ್ನು ಇದ್ದಕ್ಕಿದ್ದಂತೆ ಅನಾವರಣಗೊಳಿಸುವ ಅವನ ಪರಿ ಅತ್ಯದ್ಭುತವಾದದ್ದು! ಹಾಗೆಂದೇ ಆತ ಪಾತ್ರಗಳ ಸೃಷ್ಟಿಗೆ, ಬಳಸುವ ಭಾಷೆಗೆ, ಪದಗಳ ಲಾಲಿತ್ಯಕ್ಕೆ, ಹಾಗೂ ಅವನ ಕಂಡಿಕೆಗಳಿ(Quotations)ಗೆ ಹೆಸರುವಾಸಿಯಾಗಿದ್ದಾನೆ. ಇದುವರೆಗೂ ಅವನನ್ನು ಸರಿಗಟ್ಟುವ ಮತ್ತೊಬ್ಬ ಲೇಖಕ ಬಂದಿಲ್ಲವೆಂಬುದೇ ವಿಮರ್ಶಕರ ಅಭಿಪ್ರಾಯವಾಗಿದೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎನ್ನುವಂತೆ ಬೇರೆಲ್ಲ ಲೇಖಕರ ಬಗ್ಗೆ, ಗಣ್ಯವ್ಯಕ್ತಿಗಳ ಬಗ್ಗೆ ಅನೇಕ ಊಹಾಪೋಹಗಳಿರುವಂತೆ ಆತನ ಬಗ್ಗೆಯೂ ಸಹ ಕೆಲವು ಊಹಾಪೋಹಗಳಿದ್ದವು. ಅವುಗಳಲ್ಲಿ ಕೆಲವು ನಿಜವೂ ಕೆಲವು ಸುಳ್ಳುಗಳಾಗಿದ್ದವು. ಅಂಥ ಒಂದಿಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದೇ ಈ ಲೇಖನ ಬರೆಯುತ್ತಿದ್ದೇನೆ.
1) ಶೇಕ್ಷಪೀಯರನ ಹುಟ್ಟಿನ ದಿನದ ಬಗ್ಗೆ ಇದುವರೆಗೂ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲವಾದ್ದರಿಂದ ಆತ ಎಂದು ಹುಟ್ಟಿದ ಎಂದು ಸರಿಯಾಗಿ ಹೇಳುವದು ಸಾಧ್ಯವಾಗಿಲ್ಲ. ಆದರೆ ಸಿಕ್ಕ ಕೆಲವೇ ಕೆಲವು ಆಧಾರಗಳ ಮೇಲೆ ಆತ ಏಪ್ರಿಲ್ ೨೩, ೧೫೬೪ ರಲ್ಲಿ ಸ್ಟ್ರ್ಯಾಟ್ ಪೋರ್ಡ್ ಎವಾನ್ ಎಂಬಲ್ಲಿ ಹುಟ್ಟಿದನೆಂದು ನಂಬಲಾಗಿದೆ. ಹುಟ್ಟಿ ಸರಿಯಾಗಿ ೫೨ ವರ್ಷಗಳ ನಂತರ ಅಂದರೆ ಏಪ್ರಿಲ್ ೨೩, ೧೬೧೬ ರಂದು ಸತ್ತನೆಂದು ಊಹಿಸಲಾಗಿದೆ. ಅವನ ಹುಟ್ಟು ಹಬ್ಬದ ದಿನವೇ ಅವನ ಮರಣದ ದಿನವೂ ಸಹ ಆಗಿತ್ತು ಎಂಬುದು ವಿಶೇಷ ಮತ್ತು ದುರಂತ.
2) ಶೇಕ್ಷಪೀಯರನ ಅಪ್ಪ ಪ್ರಸಿದ್ಧ ಉಣ್ಣೆ ವ್ಯಾಪಾರಿಯಾಗಿದ್ದು ಬಡ್ಡಿ ವ್ಯಾಪಾರವನ್ನು ಸಹ ಮಾಡುತ್ತಿದ್ದನೆಂದು ನಂಬಲಾಗಿದೆ. ಆದರೆ ಶೇಕ್ಷಪೀಯರ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಅವರಪ್ಪನಿಗೆ ವ್ಯಾಪಾರದಲ್ಲಿ ಭಾರಿ ನಷ್ಟವುಂಟಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅದನ್ನು ಸುಧಾರಿಸಲು ಆತ ಉದ್ಯೋಗವನ್ನರಸಿ ಹುಟ್ಟೂರನ್ನು ಬಿಟ್ಟು ಲಂಡನ್‍ಗೆ ವಲಸೆಹೋದನೆಂದು ಹೇಳಲಾಗಿದೆ. ಆದರೆ ಇನ್ನು ಕೆಲವು ಮೂಲಗಳು ಆತ ತನ್ನ ಹುಟ್ಟೂರಿನಲ್ಲಿ ಚಮರಿಮೃಗವನ್ನು ಬೇಟೆಯಾಡಿದ್ದರ ಆಪಾದನೆಯ ಮೇಲೆ ಅವನನ್ನು ಗಡಿಪಾರು ಮಾಡಲಾಯಿತೆಂದು ಹೇಳುತ್ತವೆ.
3) ಹೀಗೆ ಲಂಡನ್‍ಗೆ ಕೆಲಸ ಹುಡುಕಿಕೊಂಡು ಬಂದ ಅವನು ನಾಟಕ ಕಂಪನಿಯೊಂದರಲ್ಲಿ ಮೊಟ್ಟ ಮೊದಲಿಗೆ ಮಾಡಿದ ಕೆಲಸ ‘ಕುದರೆ ಚಾಕರಿ’ ಕೆಲಸ. ಆಗಿನ ಕಾಲದಲ್ಲಿ ಶ್ರೀಮಂತರು ನಾಟಕ ನೋಡಲು ಕುದರೆಯ ಮೇಲೆ ಬರುತ್ತಿದ್ದುದರಿಂದ ಅವರು ನಾಟಕ ನೋಡವಷ್ಟು ಹೊತ್ತು ಅವರ ಕುದರೆಗಳನ್ನು ನೋಡಿಕೊಳ್ಳುತ್ತಿದ್ದ. ಕ್ರಮೇಣ ಆತ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದು ಜಗತ್ತಿನ ತುಂಬ ಹೆಸರುವಾಸಿಯಾದ.
4) ಶೇಕ್ಷಪೀಯರ್ ಮಹಾನ್ ಸಾಹಸಿ, ತುಂಟ ಹಾಗು ರಸಿಕನಾಗಿದ್ದ. ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ಪಕ್ಕದೂರಿನ ಹುಡುಗಿಯನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದರಿಂದ ವಿಧಿಯಲ್ಲದೆ ಅವಳನ್ನೇ ಮದುವೆಯಾಗಬೇಕಾಗಿಬಂತು. ಅವಳ ಹೆಸರು ಯ್ಯಾನ್ ಹ್ಯಾಥ್ ವೇ. ಅವಳು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ದವಳಾಗಿದ್ದು ಮದುವೆಯಾದಾಗ ಅವಳು ಮೂರು ತಿಂಗಳು ಗರ್ಬಿಣಿಯಾಗಿದ್ದಳು. ಇದಲ್ಲದೆ ಶೇಕ್ಷಪೀಯರನಿಗೆ ಅವನ ಹಾದರಕ್ಕೆ ಹುಟ್ಟಿದ ಮಗನೊಬ್ಬನಿದ್ದ ಎಂದು ನಂಬಲಾಗಿದೆ. ಅವನ ಹೆಸರು ವಿಲಿಯಂ ಡೆವಿನಾಂಟ್.
5) ಬಹಳಷ್ಟು ಲೇಖಕರು ಹಾಗೂ ರಾಜಕೀಯ ಧುರಿಣರು ಶೇಕ್ಷಪೀಯರ್ ಯಾವತ್ತೂ ಯಾವುದೇ ನಾಟಕವಾಗಲಿ, ಕವನವಾಗಲಿ ಬರೆಯಲೇ ಇಲ್ಲ, ಅವನಿಗೇನಿದ್ದರೂ ಸಾಹಸಿ ಕೆಲಸಗಳಲ್ಲಿ ಮಾತ್ರ ಆಸಕ್ತಿಯಿತ್ತೇ ಹೊರತು ಬರೆಯುವದರಲ್ಲಿರಲಿಲ್ಲವೆಂದು ಹೇಳುತ್ತಾರೆ. ಯಾರೋ ಬರೆದಿದ್ದನ್ನು ಕದ್ದು ತನ್ನ ಹೆಸರನ್ನು ಹಾಕಿಕೊಂಡು ತಾನೇ ಬರಿದಿದ್ದು ಎಂದು ಹೇಳಿಕೊಂಡು ಹಣ ಮತ್ತು ಹೆಸರುಗಳೆರಡನ್ನು ಗಳಿಸಿದನೆಂದು ಹೇಳಲಾಗುತ್ತದೆ.
6) ಶೇಕ್ಷಪೀಯರ್ ತಾನು ಬರೆದ ೩೭ ನಾಟಕಗಳನ್ನು ಯಾವತ್ತೂ ಪ್ರಕಟಪಡಿಸುವ ಸಾಹಸಕ್ಕೆ ಕೈಹಾಕಲೇ ಇಲ್ಲ. ಅವೇನಿದ್ದರೂ ಅವನು ಸತ್ತು ಏಳು ವರ್ಷಗಳ ನಂತರ ಪ್ರಕಟಗೊಂಡವು. ಆದರೆ ಅವನ ‘Venus’ ಹಾಗು ‘Adonis’ ಎಂಬೆರಡು ನೀಳ್ಗವನಗಳು ಬಹಳ ಜನಪ್ರಿಯಗೊಂಡು ಅವನ ಶ್ರೀಮಂತ ಸ್ನೇಹಿತ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನಿಂದ ಸಾಕಷ್ಟು ಹಣವು ಉಡುಗೊರೆಯ ರೂಪದಲ್ಲಿ ಹರಿದು ಬಂದು ಕೊನೆಗಾಲದಲ್ಲಿ ಅವನು ನೆಮ್ಮದಿಯ ಮೇಲ್ದರ್ಜೆಯ ಬದಕನ್ನು ನಡೆಸಲು ಸಹಾಯ ಮಾಡಿದವು.
7) ಶೇಕ್ಷಪೀಯರನಿಗೆ ಜುಡಿತ್ ಎಂಬ ತಂಗಿಯೊಬ್ಬಳಿದ್ದಳು. ಅವಳು ಅವನಷ್ಟೇ ಸಮರ್ಥವಾಗಿ ಬರೆಯುಬಲ್ಲವಳಾಗಿದ್ದು ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವಳಿಗಿರುವ ಪದಗಳ ಚಾಕಚಕ್ಯತೆ, ಲಾಲಿತ್ಯ, ಅವುಗಳ ಜೋಡಣೆ ಶೇಕ್ಷಪೀಯರಿನಿಗೂ ಸಹ ಇರಲಿಲ್ಲ. ಆದರೆ ಅವಳು ‘ಹೆಣ್ಣು’ ಎಂಬ ಕಾರಣಕ್ಕೆ ಪುರುಷ ಪ್ರಧಾನ ಸಮಾಜದಲ್ಲಿ ಅವಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವದರ ಮೂಲಕ ಸ್ತ್ರೀ ಪ್ರತಿಭೆಯೊಂದು ಕಮುರಿಹೋಯಿತು. ಇವಳ ಬಗ್ಗೆ ಹೆಚ್ಚಿಗೆ ತಿಳಿಯಲು ನಾನೇ ಬರೆದಿರುವ ಈ ಲೇಖನದ ಕೊಂಡಿಯ ಮೇಲೆ ಕ್ಲಿಕ್ಕಿಸಿ. http://bisilahani.blogspot.com/2008/12/blog-post_5795.html
8) ಶೇಕ್ಷಪೀಯರನ ಕೃತಿಗಳಲ್ಲಿ ಸುಮಾರು ಆರನೂರು ವಿವಿಧ ಜಾತಿಯ ಪಕ್ಷಿಗಳ ಉಲ್ಲೇಖವಿದೆ. ಅವುಗಳಲ್ಲಿ ತುಂಬಾ ಜನಪ್ರಿಯವಾಗಿರುವ, ನಮಗೆ ಈಗಾಗಲೇ ಗೊತ್ತಿರುವ ಪಕ್ಷಿಗಳಾದ ಬಾತುಕೋಳಿ. ಹುಂಜ, ಪಾರಿವಾಳ, ಗುಬ್ಬಿ ಮೊದಲಾದವುಗಳನ್ನು ಹೆಸರಿಸಬಹುದಾಗಿದೆ.
9) ಶೇಕ್ಷಪೀಯರ್ `dog’ ಅಥವಾ `dogs’ ಎನ್ನುವ ಪದವನ್ನು ಸುಮಾರು ೨೦೦ ಬಾರಿ ಬಳಸಿದ್ದಾನೆ. ಇದಲ್ಲದೆ ‘watchdog’ ಎನ್ನುವ ಸಂಕೀರ್ಣ ಪದವೊಂದನ್ನು ಮೊಟ್ಟಮೊದಲಿಗೆ ಬಳಸಿದವನೇ ಇವನು.
10) ಶೇಕ್ಷಪೀಯರನಿಗೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನೆಂಬ ಅತ್ಯಂತ ಸ್ಪುರದ್ರೂಪಿ ಸಲಿಂಗಕಾಮಿ ಗೆಳೆಯನಿದ್ದ. ಅವನು ಆಗರ್ಭ ಶ್ರೀಮಂತನಾಗಿದ್ದು ಶೇಕ್ಷಪೀಯರನ ಜೀವದ ಗೆಳೆಯನು ಸಹ ಆಗಿದ್ದ. ಅವರಿಬ್ಬರ ಸ್ನೇಹದ ಗಾಢತೆ ಎಷ್ಟಿತ್ತೆಂದರೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟನ್ನನು ಶೇಕ್ಷಪೀಯರನನ್ನು ಬಿಟ್ಟಿರಲಾರದೆ ಅವನನ್ನು ತನ್ನ ಅರಮನೆಯಲ್ಲಿಯೇ ಇರಿಸಿಕೊಂಡಿದ್ದನು. ಆದರೆ ಮುಂದೆ ಹುಡುಗಿಯೊಬ್ಬಳ ವಿಷಯಕ್ಕೆ ಅವರಿಬ್ಬರ ಸ್ನೇಹ ಮುರಿದುಬಿತ್ತು (ಈ ಬಗ್ಗೆ ಮುಂದೆ ಯಾವತ್ತಾದರು ಬರೆಯುವೆ). ಆದರೂ ಶೇಕ್ಷಪೀಯರ ಅವನನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ ೧೫೪ ಸುನಿತ(sonnet)ಗಳಲ್ಲಿ ೧೨೬ ಸುನಿತಗಳು ಗೆಳೆತನಕ್ಕೂ ೨೮ ಸುನಿತಗಳು ಪ್ರೀತಿಗೂ ಮೀಸಲಾಗಿರುವದೇ ಸಾಕ್ಷಿ. ಆ ೧೨೬ ಸುನಿತಗಳ ಕೆಲವು ಸುನಿತಗಳಲ್ಲಿ ಅಲ್ಲಲ್ಲಿ ಅವನ ಸ್ನೇಹಿತನ ಅಪೂರ್ವ ಸೌಂದರ್ಯದ ಚಿತ್ರಣ ಸಿಗುತ್ತದೆ. ಈ ಎಲ್ಲ ಆಧಾರಗಳ ಮೇಲೆ ಕೆಲವು ವಿಮರ್ಶಕರು ಅವರಿಬ್ಬರು ಸಲಿಂಗಕಾಮಿಗಳಾಗಿದ್ದರೆಂದು ಊಹಿಸಿದರೂ ಅದನ್ನು ಬಹಿರಂಗಪಡಿಸುವ ಧೈರ್ಯವನ್ನು ಮಾಡಿರಲಿಲ್ಲ. ಆದರೆ ತಿರ ಇತ್ತಿಚಿಗಷ್ಟೆ ಅಂದರೆ ೧೯೯೮ರಲ್ಲಿ ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳು (ಹೆಸರು ನೆನಪಿಲ್ಲ) ಸಾಕಷ್ಟು ಪುರಾವೆಗಳ ಮೂಲಕ ಈ ವಿಷಯವನ್ನು ಹೊರಗೆಡವಿ ಭಾರಿ ವಿವಾದಕ್ಕೊಳಗಾಗಿದ್ದಳು.
ಶೇಕ್ಷಪೀಯರ್ ಹೇಗೆ ಇರಲಿ ಅವನನ್ನು ಅವನೆಲ್ಲ ಬಲಹೀನತೆಗಳ ಸಮೇತ ಒಪ್ಪಿಕೊಂಡಾಗಲೇ ಆತ ನಮಗೆ ಇಷ್ಟವಾಗುವದು, ಆತನ ಬಗ್ಗೆ ಒಂದು ಸಹಜ ಗೌರವ ಮೂಡುವದು. ಈ ಮಾತು ಶೇಕ್ಷಪೀಯರನ ವಿಷಯದಲ್ಲಿ ಮಾತ್ರವಲ್ಲ ನಮ್ಮಗಳ ವಿಷಯದಲ್ಲೂ ಅಷ್ಟೇ ಸತ್ಯ ಅಲ್ಲವೆ?
-ಉದಯ ಇಟಗಿ
ಕೃಪೆ:
1) http://www.nosweatshakespeare.com/
2) http://shakespeare.about.com/
ಯಕ್ಷಾಲಾಪ ಹಾಗೂ ಮಿನುಗುತಾರೆ
1 ದಿನದ ಹಿಂದೆ