Demo image Demo image Demo image Demo image Demo image Demo image Demo image Demo image

ಓ ಗುಲಾಬಿಯೇ, ನೀನೆಷ್ಟು ಚೆಂದ ಸಾಕವ್ವ, ಪರವ್ವರ ಮುಂದೆ?

  • ಬುಧವಾರ, ನವೆಂಬರ್ 11, 2009
  • ಬಿಸಿಲ ಹನಿ
  • ನಾನು ಮೊನ್ನೆ ಬೆಂಗಳೂರಿನಿಂದ ಇಲ್ಲಿಗೆ ಬರುವಾಗ ಈಗಾಗಲೆ ನೋಡಿದ, ನೋಡಿರದ ಒಂದಷ್ಟು ವಿಸಿಡಿಗಳನ್ನು ಹೊತ್ತುಕೊಂಡು ಬಂದೆ. ಅದರಲ್ಲಿ ಬಹುಪಾಲು ವಿಸಿಡಿಗಳು ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳವು. ಅವುಗಳಲ್ಲಿ ಇತ್ತೀಚಿಗೆ ಉಮಾಶ್ರಿ ತಮ್ಮ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ‘ಗುಲಾಬಿ’ಯೂ ಒಂದು. ಗುಲಾಬಿಯನ್ನು ನೋಡುವಾಗ ನನಗೇಕೋ ಗುಲಾಬಿ, ಸಾಕವ್ವ ಮತ್ತು ಪರವ್ವರ ಮುಂದೆ ಸಪ್ಪೆ ಸಪ್ಪೆ ಎನಿಸಿದಳು. ಸಾಕವ್ವ ಮತ್ತು ಪರವ್ವರು ಕಾಡಿದಂತೆ ಗುಲಾಬಿ ನನ್ನನ್ನು ಅಷ್ಟಾಗಿ ಕಾಡಲಿಲ್ಲ. ಬಹುಶಃ ಗುಲಾಬಿಯ ಪಾತ್ರಕ್ಕಿಂತ ಅವಳ ಕತೆ ಹಾಗಿರುವದರಿಂದ ಹಾಗೆ ಅನಿಸಿತೋ ಏನೋ ಗೊತ್ತಿಲ್ಲ. ಒಮ್ಮೊಮ್ಮೆ ಪಾತ್ರಗಳ ಗಟ್ಟಿತನ ಮತ್ತು ಅವುಗಳ ಬಲಾಬಲ ಹೆಚ್ಚಾಗಿ ಕಥೆಯನ್ನು ಅವಲಂಬಿಸಿರುವದರಿಂದ ಹಾಗೆ ಅನಿಸುತ್ತದೆ. ಜಗತ್ತಿನ ಯಾವುದೇ ಸಾಹಿತ್ಯ ತೆಗೆದುಕೊಳ್ಳಿ, ಸ್ತ್ರೀ ಪಾತ್ರಗಳು ನಮ್ಮನ್ನು ಕಾಡಿದಷ್ಟು ಪುರುಷ ಪಾತ್ರಗಳು ಅಷ್ಟಾಗಿ ಕಾಡಲಾರವು. ಇದಕ್ಕೆ ಸ್ತ್ರೀಯರ ಮನೋಲೋಕ ಪುರುಷರ ಮನೋಲೋಕಕ್ಕಿಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿರುವದೇ ಕಾರಣ.

    ವೈದೇಹಿಯವರು ಕನ್ನಡದ ಕರಾವಳಿ ಭಾಗದ ಸೂಕ್ಷ್ಮ ಮನಸ್ಸಿನ ಕತೆಗಾರ್ತಿ. ನಾನು ಅವರ ‘ಅಕ್ಕು’, ‘ಅಮ್ಮಚ್ಚಿ ನೆನೆಪು’ ‘ಶಾಕುಂತಳೆಯೊಡನೆ ಒಂದು ಅಪರಾಹ್ನ’ ಇನ್ನೂ ಮುಂತಾದ ಕತೆಗಳನ್ನು ಓದಿದ್ದೇನೆ. ಆದರೆ ಈ ಕತೆಯನ್ನು ಇನ್ನೂ ಓದಲಾಗಿಲ್ಲ. ಸಾಮಾನ್ಯವಾಗಿ ಸ್ತ್ರೀ ಸಂವೇದನೆಗಳ ಸುತ್ತ ಗಿರಕಿ ಹೊಡೆಯುವ ವೈದೇಹಿಯವರ ‘ಗುಲಾಬಿ’ಯ ಈ ಕತೆಯೂ ಇದಕ್ಕೆ ಹೊರತಾಗಿಲ್ಲ. ಆದರೆ ವೈದೇಹಿಯವರ ಕತೆಗೂ ಗಿರೀಶ್ ಅವರ ಕತೆಗೂ ಎಷ್ಟು ಸಾಮ್ಯವಿದೆಯೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಚಲನಚಿತ್ರದಲ್ಲಿ ಮೂಡಿರುವ ಗುಲಾಬಿಯ ಕತೆಯನ್ನು ನಿಮ್ಮ ಮುಂದಿಡುತ್ತಾ ಸಾಕವ್ವ ಮತ್ತು ಪರವ್ವರ ಮುಂದೆ ಗುಲಾಬಿ ನನಗೇಕೆ ಅಷ್ಟಾಗಿ ಕಾಡಲಿಲ್ಲ ಎಂಬುದನ್ನು ಹೇಳುತ್ತೇನೆ.

    ‘ಉಮಾಶ್ರಿ ಎಂದರೆ ಸಾಕವ್ವ, ಸಾಕವ್ವ ಎಂದರೆ ಉಮಾಶ್ರಿ ಎನ್ನುವಷ್ಟರಮಟ್ಟಿಗೆ ಆ ಪಾತ್ರದೊಂದಿಗೆ ನನ್ನನ್ನು ನಾನು ಗುರುತಿಸಿಕೊಂಡಿದ್ದೇನೆ’ ಎಂದು ಸ್ವತಃ ಉಮಾಶ್ರಿಯವರೆ ಹೇಳುತ್ತಾರೆ. ಹೌದು, ಅವರ ಮಾತು ನಿಜ! ಎಂಬತ್ತರ ದಶಕದ ಆದಿಭಾಗದಲ್ಲಿ ಬಂದ ‘ಒಡಲಾಳ’ದ ಸಾಕವ್ವ ಉಮಾಶ್ರಿಯವರಿಗೆ ಕನ್ನಡ ರಂಗಭೂಮಿಯಲ್ಲೊಂದು ವಿಶಿಷ್ಟ ಸ್ಥಾನವೊಂದನ್ನು ಕಲ್ಪಿಸಿಕೊಟ್ಟಿತು. ಉಮಾಶ್ರೀ ಅವರೇ ಹೇಳುವಂತೆ, “ಅದು ಜೀವಮಾನದ ಶ್ರೇಷ್ಟ ಪಾತ್ರ ಮತ್ತು ಯಾವುದೇ ಕಲಾವಿದೆಗೆ ಎದುರಾಗುವ ದೊಡ್ಡ ಸವಾಲು”. “ಇವತ್ತು ನಾಟಕ ರಂಗದಲ್ಲಿ ‘ಆಸ್ಕರ್’ ಪ್ರಶಸ್ತಿ ಅಂತ ಏನಾದರು ಇದ್ದಿದ್ದರೆ ಅದು ಖಂಡಿತವಾಗಿ ಸಾಕವ್ವಳ ಅಭಿನಯದ ಉಮಾಶ್ರಿಯವರಿಗೆ ಸಲ್ಲುತ್ತಿತ್ತು” ಎಂದು ಬಹಳಷ್ಟು ಜನ ಇಂದಿಗೂ ಮಾತಾಡಿಕೊಳ್ಳುತ್ತಾರೆ. ಅಂಥ ಗಟ್ಟಿತನದ ಪಾತ್ರವದು. ನಾನು ಈ ನಾಟಕವನ್ನು ಈಗ್ಗೆ ನಾಲ್ಕು ವರ್ಷಗಳ ಹಿಂದೆ ರಂಗಶಂಕರದಲ್ಲಿ ನೋಡಿದಾಗ ಹಿಂದೆ ಸಾಕವ್ವಳ ಅಭಿನಯದ ಬಗ್ಗೆ ಅಲ್ಲಲ್ಲಿ ಓದಿ ಕಲ್ಪಿಸಿಕೊಂಡ ಉಮಾಶ್ರಿ ಇಲ್ಲಿಯೂ ಸಹ ಏನೂ ಬದಲಾಗದೆ ಕಾಣಿಸಿಕೊಂಡಾಗ ನಿಜಕ್ಕೂ ಅಚ್ಚರಿಯೆನಿಸಿತ್ತು. ದೇವನೂರರ ಸಾಕವ್ವಳಿಗೆ ಜೀವ ತುಂಬಿ ರಂಗದ ಮೇಲೆ ತರುವದು ನಿಜಕ್ಕೂ ಅದು ಯಾವುದೇ ಕಲಾವಿದೆಗೆ ಎದುರಾಗುವ ಒಂದು ದೊಡ್ಡ ಸವಾಲು. ಅದನ್ನು ಉಮಾಶ್ರಿಯವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು. ನಾಟಕದಲ್ಲಿ ಸಾಕವ್ವ ತನ್ಮೂಲಕ ಇಡಿ ದಲಿತ ಲೋಕವನ್ನೇ ಬಿಚ್ಚಿಡುತ್ತಾ ತನ್ನ ಒಡಲಾಳದ ಸಂಕಟ, ತಲ್ಲಣಗಳನ್ನು ನಮ್ಮ ಮುಂದೆ ಹರಡುತ್ತಲೆ ನಮ್ಮನ್ನು ಅವಳ ತೆಕ್ಕೆಗೆ ತೆಗೆದುಕೊಳ್ಳುತ್ತಾಳೆ. ಅವಳು ಓರ್ವ ಮುಗ್ಧ ಹಾಗೂ ಗಟ್ಟಿತನದ ಮಹಿಳೆ. ಸ್ವಾವಲಂಬಿಯಾಗಿ ಬದುಕಲಿಚ್ಛಿಸುವವಳು. ಆಕೆ ಅಬಲೆಯಲ್ಲ. ಬಡತನದ ದಾರಿದ್ರ್ಯದ ನಡುವೆಯೂ ಸಂಸಾರವನ್ನು ಸರಿದೂಗಿಸಬೇಕೆಂಬ ಹಂಬಲ ಅವಳಲ್ಲಿದೆ. ಈ ಕಾರಣಕ್ಕೆ ಸಾಕವ್ವನ ಕಿರುಚಾಟ, ತಳಮಳ. ಸಂಕಟಗಳು ಮತ್ತು ಅಲ್ಲಿರುವ ಎಲ್ಲಾ ಗಂಡು ಪಾತ್ರಗಳಿಗಿಂತ ಗಟ್ಟಿ ನಿಲುವನ್ನುಳ್ಳ ಅವಳ ಮನಸ್ಸು ನಮ್ಮನ್ನು ತಾಗಿಬಿಡುವದರ ಮೂಲಕ ಸಾಕವ್ವ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತಾಳೆ.

    ಉತ್ತರ ಕರ್ನಾಟಕದ ಜಾನಪದ ಕತೆಯೊಂದರ ಆಧಾರಿತ ’ಸಂಗ್ಯಾ ಬಾಳ್ಯಾ’ ಚಲನಚಿತ್ರದಲ್ಲಿನ ಪರವ್ವಳ ಪಾತ್ರ ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ. ಆ ಚಿತ್ರವು ಅವರಿಗೆ ಪನೋರಮಾ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಉತ್ತರ ಕರ್ನಾಟಕದ ಹೆಂಗಸೊಬ್ಬಳ ಬಾಡಿ ಲಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿಯನ್ನೆಲ್ಲಾ ಚನ್ನಾಗಿ ಸ್ಟಡಿ ಮಾಡಿ ಕರಗತ ಮಾಡಿಕೊಂಡು ಅಭಿನಯಿಸುವದರ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅದು ಉಮಾಶ್ರೀಯ ವಿಶೇಷತೆ. ಸಂಗ್ಯಾನ ಅತ್ತೆ ಪಾರವ್ವ. ಅತ್ತೆ-ಅಳಿಯರದು ಅವಿನಾಭಾವ ಸಂಬಂಧ. ಅವನು ಏನು ಕೇಳಿದರೂ ಅದನ್ನು ನಡೆಸಿಕೊಡುವಂಥವಳು. ಸಂಗ್ಯಾ ಒಂದು ಸಾರಿ ಜಾತ್ರೆಯಲ್ಲಿ ಆ ಊರಿನ ಭಾರಿ ಶ್ರೀಮಂತ ಶೆಟ್ಟರ ರೂಪವಂತ ಹೆಂಡತಿಯನ್ನು ನೋಡಿ ಮೋಹಕ್ಕೊಳಗಾಗುತ್ತಾನೆ ಮತ್ತು ಅವಳೊಂದಿಗೆ ಒಂದು ರಾತ್ರಿಯನ್ನು ಕಳೆಯಬೇಕೆಂದುಕೊಳ್ಳುತ್ತಾನೆ. ಆಗ ಅದೇ ಜಾತ್ರೆಯಲ್ಲಿ ಅವಳಿಗೆ ಗೊತ್ತಿರಲಾರದೆ ಅವಳ ಚಿನ್ನದ ಸರಿಗೆಯನ್ನು ಕದಿಯುತ್ತಾನೆ. ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತನ್ನ ಅತ್ತೆ ಪರವ್ವಳ ಸಹಾಯ ತೆಗೆದುಕೊಳ್ಳುತ್ತಾನೆ. ಅವಳು ಮೊದಲು ಹಿಂದೆ ಮುಂದೆ ನೋಡಿದರೂ ಕೊನೆಗೆ ಹೇಗೋ ಅವಳ ಒಡತಿಯ ಮನವೊಲಿಸುತ್ತಾಳೆ. ಮುಂದೆ ಸಂಗ್ಯಾ ಮತ್ತು ಅವಳ ಒಡತಿ ಗಂಗಾಳ ಹಾದರ ಬಯಲಾಗಿ ಅವಳೂ ಅದರಲ್ಲಿ ಭಾಗಿಯಾಗಿದ್ದರಿಂದ ಹೆದರಿ ಊರು ಬಿಡುವ ಪ್ರಸಂಗ ಬರುತ್ತದೆ. ಅದೇ ಸಂದರ್ಭದಲ್ಲಿ ಅವಳ ಅಳಿಯ ಸಂಗ್ಯಾನಿಗೆ ಜೀವ ಬೆದರಿಕೆಯಿರುವದು ಗೊತ್ತಾಗಿ ತತ್ತರಿಸುತ್ತಾಳೆ. ತನ್ನ ಜೀವ ಉಳಿಸಿಕೊಳ್ಳಲು ಅವನನ್ನು ಊರು ಬಿಟ್ಟು ಹೋಗೆಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾಳೆ. ಆದರೆ ಹಟವಾದಿ ಸಂಗ್ಯಾ ಅವಳ ಮಾತನ್ನು ಕೇಳುವದಿಲ್ಲ. ಕೊನೆಯ ಪ್ರಯತ್ನವೆಂಬಂತೆ ಈಗಾಗಲೇ ಕೆಟ್ಟು ತವರು ಮನೆ ಸೇರಿರುವ ಅವಳ ಒಡತಿ ಗಂಗಿ ಹತ್ತಿರ ಹೋಗಿ “ಸಂಗ್ಯಾನಿಗೆ ನೀನಾದರು ಊರು ಬಿಟ್ಟು ಹೋಗಲು ಹೇಳು” ಎಂದು ಬೇಡಿಕೊಳ್ಳುತ್ತಾಳೆ. ಅದಕ್ಕೆ ಅವಳ ಒಡತಿ ಆಯ್ತು ಎನ್ನುತ್ತಾಳೆ. ಪರವ್ವ ಅಷ್ಟಕ್ಕೆ ಸಮಾಧಾನಪಟ್ಟುಕೊಂಡು ಹೋಗುತ್ತಾಳೆ. ಮುಂದೆ ತಾನು ಮಾಡಿದ್ದರ ತಪ್ಪಿನ ಅರಿವಾಗಿ ಪರವ್ವ ಊರು ಬಿಟ್ಟು ಹೋಗುತ್ತಾಳೆ. ಇಲ್ಲಿ ಪರವ್ವ ಗಟ್ಟಿ ಹೆಂಗಸಾಗಿದ್ದರೂ ಅಳಿಯನ ಆಸೆಗೆ ಕಟ್ಟುಬಿದ್ದು ತನ್ನ ಒಡತಿಯ ಮನಸ್ಸನ್ನು ಬದಲಾಯಿಸುವದರ ಮೂಲಕ ತನಗಷ್ಟೆ ಅಲ್ಲದೆ ತನ್ನ ಅಳಿಯ ಮತ್ತು ತನ್ನ ಒಡತಿಗೂ ಸಹ ದುರಂತವನ್ನು ತಂದಿಡುತ್ತಾಳೆ. ಅವಳು ಮಾಡಿದ ಇಂಥ ತಪ್ಪಿನಿಂದ ಮೊದಮೊದಲು ಪ್ರೇಕ್ಷಕರ ನಿರಾಕರಣೆಗೆ ಗುರಿಯಾದರೂ ಕೊನೆಯಲ್ಲಿ ಅವಳು ಪಶ್ಛಾತಾಪ ಪಡುವ ರೀತಿಗೆ ಹಾಗೂ ಸಂಗ್ಯಾನನ್ನು ಉಳಿಸಿಕೊಳ್ಳುವಲ್ಲಿನ ಅವಳ ಮಾತೃತ್ವ ನಮ್ಮನ್ನು ಕಾಡಿಬಿಡುತ್ತದೆ.

    ಗುಲಾಬಿ ಒಬ್ಬ ಸೂಲಗಿತ್ತಿ. ತಾನಿರುವ ಊರಿನ ಹೆಂಗಸರ ಹೆರಿಗೆಯನ್ನು ಮಾಡಿಸುವದರಿಂದ ಅವಳು ಆ ಊರಿನವರಿಗೆಲ್ಲಾ ಬೇಕಾಗಿದ್ದಾಳೆ. ಆದರೆ ಅವಳ ಗಂಡನಿಗೆ ಮಾತ್ರ ಬೇಡವಾಗಿದ್ದಾಳೆ. ಅವಳ ಗಂಡ ಅವಳಿಗೆ ತಲಾಖ್ ಕೊಡದೆ ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಗುಲಾಬಿಗೆ ಮಕ್ಕಳಿಲ್ಲ. ಆದರೆ ಅವಳ ಸವತಿಗೆ ಒಂದು ಮಗುವಿದೆ. ಗುಲಾಬಿಗೆ ಹೇಗಾದರೂ ಆ ಮಗುವಿನ ಪ್ರೀತಿ ಸಂಪಾದಿಸಬೇಕೆಂಬ ಬಯಕೆ. ಆದರೆ ಅದು ಸವತಿ ಮತ್ಸರದಿಂದಾಗಿ ಆಗುತ್ತಿಲ್ಲ. ಹೀಗಾಗಿ ಅವಳು ಹತ್ತಿರದ ಊರಲ್ಲಿ ಇರುವ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಾ ತನ್ನ ಹೊಸ ಕನಸುಗಳನ್ನು ಹೆಣೆಯುತ್ತಾಳೆ. ಈ ಮಧ್ಯೆ ಯಾವುದೋ ಶ್ರೀಮಂತರ ಮನೆಯಲ್ಲಿ ಸೂಲಗಿತ್ತಿಯ ಕೆಲಸ ಮಾಡಿದ್ದಕ್ಕೆ ಅವಳಿಗೆ ಊಡುಗೊರೆಯಾಗಿ ಬಣ್ಣದ ಟೆಲಿವಿಷನ್ ಸಿಗುತ್ತದೆ. ಅಲ್ಲಿಂದ ಗುಲಾಬಿಯ ಬದುಕು ಅನೇಕ ಕನಸುಗಳನ್ನ ಕಟ್ಟಿಕೊಳ್ಳುತ್ತಾ ಸಾಗುತ್ತದೆ. ಅವಳ ಮನೆಯಲ್ಲಿರುವ ಟೆಲಿವಿಷನ್ ಮತ್ತು ಧಾರಾವಾಹಿಗಳನ್ನು ನೋಡಲು ಬರುವ ಆಸುಪಾಸಿನವರಿಂದಾಗಿ ಅವಳ ಮನೆಯೇ ಅವಳದ್ದಲ್ಲ ಎನ್ನುವಂತೆ ಅಲ್ಲಿ ಹೆಂಗಸರು ಸೇರುತ್ತಾರೆ. ಟಿವಿ ನೋಡುತ್ತಾ ಅವರೆಲ್ಲ ಕಣ್ಣೀರು ಹಾಕುತ್ತಾರೆ. ನಗುತ್ತಾರೆ. ತಮ್ಮ ನಿತ್ಯ ಕಾಯಕದ ನಡುವೆಯೂ ತಾವು ನೋಡಿದ ಸೀರಿಯಲ್ ಕುರಿತು ಮಾತಾಡುತ್ತಾರೆ. ಸೀರಿಯಲ್ಲಿನ ಕತೆಯನ್ನ ತಮ್ಮ ಜೀವನಕ್ಕೆ ಆರೋಪಿಸಿಕೊಂಡು ಬದುಕಲು ಪ್ರಯತ್ನಿಸುತ್ತಾರೆ. ಅದೇ ಊರಿನ ಮೀನುಗಾರರಿಗೆ ಯಂತ್ರ ಚಾಲಿತ ದೋಣಿಗಳಿಂದ ಇರುವ ಸಂಕಷ್ಟಗಳನ್ನು ಮರೆಸಲು ಸಹ ಟೆಲಿವಿಷನ್ ಕಾರಣವಾಗುತ್ತದೆ. ಇದೇ ಸಮಯದಲ್ಲಿ ಎಲ್ಲೋ ನಡೆವ ಯುದ್ಧ ಊರಿನವರಲ್ಲಿ ದೇಶ ಪ್ರೇಮ ಮೂಡಿಸುತ್ತದೆ. ಈ ಸಮಯದಲ್ಲಿ ಹುಟ್ಟುವ ಕೋಮು ಗಲಭೆಗಳಿಂದ ಆ ಊರಿನಲ್ಲಿದ್ದ ಮುಸಲ್ಮಾನರೆಲ್ಲಾ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಅಲ್ಲೇ ಉಳಿಯುವ ಗುಲಾಬಿಯನ್ನ ಮತೀಯವಾದಿಗಳು ಮನೆಯಿಂದ ಆಚೆಗೆ ಹಾಕುತ್ತಾರೆ. ಇಲ್ಲಿ ಚಿತ್ರದುದ್ದಕ್ಕೂ ಅಲ್ಲಲ್ಲಿ ತಣ್ಣನೆಯ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾ ಬರುವ ಗುಲಾಬಿ ಕೊನೆಯಲ್ಲಿ ಅವಳನ್ನು ಮನೆಯಿಂದ ಹೊರಹಾಕಿ ದೋಣಿಯಲ್ಲಿ ಕೂಡಿಸುವಾಗ ಯಾವುದೇ ಪ್ರತಿಭಟನೆಯನ್ನು ಮಾಡದೆ ಸೋಲೊಪ್ಪಿಕೊಂಡುಬಿಡುತ್ತಾಳೆ. ಇದು ಅವಳು ಬದುಕಿದ ಕ್ರಮಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. ಒಂದು ಪಾತ್ರವನ್ನು ಚಿತ್ರದುದ್ದಕ್ಕೂ ಸಮರ್ಥವಾಗಿ ಹಿಡಿದು, ಒಂದು ದನಿಯನ್ನು ಹೊರಡಿಸಿ, ಅದು ಗಿರಿಗೆ ಮುಟ್ಟಬಹುದು ಎನ್ನುವಂಥ ವಿಶ್ವಾಸವನ್ನು ಮೂಡಿಸುವ ಸಂದರ್ಭದಲ್ಲಿ ಆ ದನಿಯನ್ನು ಕ್ಷೀಣಗೊಳಿಸುವ ಅಥವಾ ಹಾಗೆ ಕಾಣಿಸುವಂತೆ ಬಿಂಬಿಸುವ ಪ್ರಯತ್ನ ಗುಲಾಬಿ ಪಾತ್ರವನ್ನು ಸಪ್ಪೆ ಸಪ್ಪೆಯನ್ನಾಗಿ ಮಾಡುತ್ತದೆ.

    ಗುಲಾಬಿ ಪ್ರತಿಭಟಿಸುತ್ತಲೇ ಸೋಲನ್ನೊಪ್ಪಿಕೊಳ್ಳುವದರಿಂದ ನಮ್ಮಲ್ಲಿ ನಿರಾಸೆ ಮೂಡಿಸುತ್ತಾಳೆ. ಸಾಕವ್ವ ಬಡತನದ ಮಧ್ಯೆಯೂ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲದಿಂದ ನಮ್ಮನ್ನು ಬೆರಗುಗೊಳಿಸುತ್ತಾಳೆ. ಪರವ್ವ ತಾನು ಮಾಡಿರುವ ಹೇಯ ಕೆಲಸಕ್ಕೆ ಪಶ್ಚಾತಾಪ ಪಡುತ್ತಲೇ ತನ್ನ ಕಣ್ಣಿರಿನಲ್ಲಿ ನಮ್ಮನ್ನು ತೊಯ್ಯಿಸಿಬಿಡುತ್ತಾಳೆ. ಈ ಕಾರಣದಿಂದ ಗುಲಾಬಿ ಸಾಕವ್ವ, ಪರವ್ವರಂತೆ ಮನದಲ್ಲಿ ನಿಲ್ಲುವದೇ ಇಲ್ಲ.

    -ಉದಯ ಇಟಗಿ
    ಕೃಪೆ: ಬಿ. ಸುರೇಶ್ ಅವರ ಬ್ಲಾಗ್ http://bsuresha.wordpress.com/

    5 ಕಾಮೆಂಟ್‌(ಗಳು):

    Unknown ಹೇಳಿದರು...

    ಅಂದು ನಾನು ಗದ್ಯಲೇಖಕರಾಗಿಯೂ ಗಮನ ಸೆಳೆಯುತ್ತಾರೆ ಎಂದು ನಿಮ್ಮನ್ನು ಹೊಗಳಲಿಕ್ಕೆ ಬರೆದದ್ದಲ್ಲ ಎಂಬುದನ್ನು ಈ ನಿಮ್ಮ ಲೇಖನ ಮತ್ತೊಮ್ಮೆ ಸಾಬೀತು ಮಾಡಿದೆ. " ಸ್ತ್ರೀ ಪಾತ್ರಗಳು ನಮ್ಮನ್ನು ಕಾಡಿದಷ್ಟು ಪುರುಷ ಪಾತ್ರಗಳು ಅಷ್ಟಾಗಿ ಕಾಡಲಾರವು. ಇದಕ್ಕೆ ಸ್ತ್ರೀಯರ ಮನೋಲೋಕ ಪುರುಷರ ಮನೋಲೋಕಕ್ಕಿಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿರುವದೇ ಕಾರಣ." ಇಂತಹ ಸಾಲುಗಳು ಸುಖಾಸುಮ್ಮನೆ ಮೂಡುವುದಿಲ್ಲ. ಇದರ ಹಿಂದೆ ಓದು ಪ್ರತಿಭೆ ಪರಿಶ್ರಮ ಎಲ್ಲವೂ ಕೆಲಸ ಮಾಡಬೇಕಾಗುತ್ತದೆ. ಇಡೀ ಲೇಖನ ಅದಕ್ಕೆ ಉದಾಹರಣೆಯಾಗಬಲ್ಲದು.

    ವೈದೇಹಿಯವರ ಕಥೆಗೂ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವೈದೇಹಿಯವರ ಕಥೆಯಾಧಾರಿತ ಚಿತ್ರ ೆನ್ನುವುದಕ್ಕಿಂತ ಅದರ ಪ್ರೇರಣೆಯಿಂದ ಸಿದ್ಧವಾದ ಸಿನಿಮಾ ಎಂದು ಕರೆಯಬಹುದು.
    '

    ದಿನಕರ ಮೊಗೇರ ಹೇಳಿದರು...

    ಉದಯ್ ಸರ್,
    ಉತ್ತಮ ಲೇಖನ..... ಅಭಿನಂದನೆಗಳು ಸರ್....... ತುಂಬಾ ವಿಷಯಗಳನ್ನು ತಿಳಿಸಿದ್ದಿರಿ...

    ಸಾಗರದಾಚೆಯ ಇಂಚರ ಹೇಳಿದರು...

    ಗುಲಾಬಿ ಚಿತ್ರ ನಾನು ನೋಡಲಿಲ್ಲ,
    ನಿಮ್ಮ ಲೇಖನ ಓದಿದ ಮೇಲೆ ಅದರ ಬಹಳಷ್ಟು ತಿಳುವಳಿಕೆ ಸಿಕ್ಕಿತು
    ನಿಮ್ಮ ಲೇಖನ ದಲ್ಲಿ ಒಂದು ಹಿಡಿತವಿದೆ
    ಉಪಯುಕ್ತ ಮಾಹಿತಿ ಸಿಗುತ್ತದೆ

    shivu.k ಹೇಳಿದರು...

    ಉದಯ ಸರ್,

    ಗುಲಾಬಿ ಚಿತ್ರವನ್ನು ನಾನು ನೋಡಿದ್ದೇನೆ. ನೀವು ಅದನ್ನು ಅರ್ಥೈಸಿಕೊಂಡು ಬರೆದ ಈ ಲೇಖನ ತುಂಬಾ ಇಷ್ಟವಾಯಿತು. ಅನೇಕ ವಿಚಾರಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದೀರಿ...ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಥ್ಯಾಂಕ್ಸ್ ಸತ್ಯನಾರಾಯಣವರೆ ನಿಮ್ಮ ಪ್ರೋತ್ಸಾಯದಾಯಕ ಮಾತುಗಳಿಗೆ.