Demo image Demo image Demo image Demo image Demo image Demo image Demo image Demo image

ಫಕ್ರುದ್ದೀನ್ ಅವರ ಕೆಲವು ಹೈಕುಗಳು

  • ಮಂಗಳವಾರ, ನವೆಂಬರ್ 17, 2009
  • ಬಿಸಿಲ ಹನಿ
  • ಕಾವ್ಯವೊಂದು ಗುಲಾಬಿ
    ಅಷ್ಟು ಸುಲಭವಾಗಿ ಬೆಳೆಯಲಾರದದು
    ಎಲ್ಲರ ಮನೆಯಂಗಳದಲ್ಲಿ!

    ಬಲಗಳಲ್ಲಿಯೇ ಅತ್ಯಂತ ಕೆಟ್ಟ ಬಲ ಹಣ ಬಲ
    ಅವಕಾಶಕ್ಕೆ ತಕ್ಕಂತೆ ಅದು ಎಲ್ಲರನ್ನೂ
    ಕೊಂಡುಕೊಂಡುಬಿಡಬಲ್ಲದು ದೇವರನ್ನೂ ಸಹ!

    ಲಜ್ಜೆ ಪ್ರೀತಿಯ ಮೊದಲ ಕುರುಹು
    ಹಳೆಯ ಮಧುವಿನಷ್ಟೆ ಮಧುರ
    ಆದರದು ವಿರಳವಾಗಿದೆ ಇಂದಿನ ಪ್ರೀತಿಗಳಲ್ಲಿ!

    ಭೂಮಿ ಮತ್ತು ಸ್ವರ್ಗಗಳೆರಡರಲ್ಲೂ ಸಿಗುವ
    ಜೀವನದ ಒಂದೇ ಒಂದು ಪರಮ ಸುಖ
    ರತಿ ಸುಖ!

    ನಿನಗರಿವಿಲ್ಲದಂತೆ ನಿನ್ನ ಕಂಗಳ
    ಕಾಂತಿಯ ಹೊಂಬೆಳಕೊಂದು ಹುಟ್ಟುಹಾಕಿದೆ
    ನನ್ನೊಳಗೆ ನಿಷ್ಕಾಮ ಪ್ರೇಮವೊಂದನ್ನು!

    ಮನಸೊಂದು ಹೊಳೆಯುವ ವಜ್ರ
    ಹಾಯ್ದು ಹೋದರದರೊಳಗೆ ಪಚ್ಚೆಬೆಳಕೊಂದು
    ಮೂಡುವದಲ್ಲಿ ಕಾಮನಬಿಲ್ಲಿನ ಚಿತ್ತಾರ!

    ಮೂಲ ಇಂಗ್ಲೀಷ್: ಡಾ. ಮೊಹಮ್‍ದ್ ಫಕ್ರುದ್ದೀನ್
    ಕನ್ನಡಕ್ಕೆ: ಉದಯ್ ಇಟಗಿ
    ಚಿತ್ರ ಕೃಪೆ: http://www.avadhi.wordpress.com/

    8 ಕಾಮೆಂಟ್‌(ಗಳು):

    Unknown ಹೇಳಿದರು...

    ಉದಯ್ ಈ ಹೈಕುಗಳ ಬಗ್ಗೆ ಬರೆಯಲು ನನಗೆ ಪದಗಳೇ ಸದ್ಯಕ್ಕೆ ಹೊಳೆಯುತ್ತಿಲ್ಲ. ಅವು ಹೊಮ್ಮಿಸುತ್ತಿರುವ ಅರ್ಥಧ್ವನಿಗಳೇ ನನ್ನ ಮನಸ್ಸನ್ನು ಆವರಿಸಿ ಬಿಟ್ಟಿವೆ. ಮೊದಲ ಮೂರು ಸಾಲುಗಳನ್ನು ಓದುತ್ತಲೇ ನಾನು ಅದರ ಅರ್ಥಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಒಂದೆರಡು ದಿನ ಬಿಟ್ಟು ಮತ್ತೊಮ್ಮೆ ಇವನ್ನೆಲ್ಲಾ ನಿಧಾನವಾಗಿ ಓದಬೇಕು ಅಂದಿಕೊಂಡಿದ್ದೇನೆ.
    ಈ ಹೈಕು ಎಂದರೇನು? ಈ ರೀತಿಯ ಒಂದು ಸಾಹಿತ್ಯ ಪ್ರಕಾರ ಇದೆಯೇ? ಯಾವ ಭಾಷೆಯಲ್ಲಿ? ಈ ಪ್ರಕಾರದ ಲಕ್ಷಣಗಳೇನು? ಬಗ್ಗೆ ಸ್ವಲ್ಪ ವಿವರ ಕೊಡಲು ಸಾಧ್ಯವೇ?

    PARAANJAPE K.N. ಹೇಳಿದರು...

    ಬಹಳ ಚೆನ್ನಾಗಿವೆ ಹಾಯ್ಕುಗಳು. ಮತ್ತೆ ಮತ್ತೆ ಮೆಲುಕು ಹಾಕುವ೦ತಿವೆ

    Unknown ಹೇಳಿದರು...

    Chennaagive...

    ಸಾಗರದಾಚೆಯ ಇಂಚರ ಹೇಳಿದರು...

    ಹೈಕುಗಳು ತುಂಬಾ ಸುಂದರ ಹಾಗೂ ಅರ್ಥಪೂರ್ಣವಾಗಿವೆ,
    ಶಬ್ದ ಶಬ್ದವೂ ಬಹಳಷ್ಟು ಅನುಭವದಿಂದ ಕೂಡಿವೆ

    ತೇಜಸ್ವಿನಿ ಹೆಗಡೆ ಹೇಳಿದರು...

    ಒಂದಕ್ಕಿಂತ ಒಂದು ಅದ್ಭುತ ಹೈಕುಗಳು! ತುಂಬಾ ಚೆನ್ನಾಗಿವೆ. ಸದಾ ನೆನಪಿನಲ್ಲುಳಿಯುವಂತಿವೆ. ತುಂಬಾ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣವರೆ,
    ಸರ್ವಜ್ಞನ ತ್ರಿಪದಿ, ದಿನಕರರ ಚೌಪದಿ, ಚುಟುಕು ಪದ್ಯಗಳಂತೆಯೇ ಹೈಕು ಪ್ರಕಾರವು ಒಂದು ಮತ್ತು ವಿಭಿನ್ನವಾದುದು. ಇದು ಮೂಲತಃ ಜಪಾನಿನ ಕಾವ್ಯದ ಒಂದು ಪ್ರಸಿದ್ಧ ಮಾದರಿ. ಅತ್ಯಂತ ಕಡಿಮೆ ಶಬ್ಧಗಳಲ್ಲಿ ಅರ್ಥಪೂರ್ಣವಾದುದನ್ನು ಹೇಳುತ್ತದೆ. ಈ ಪದ್ಯದಲ್ಲಿ 17 ಸಿಲೆಬಲ್‌ (ಒಂದು ಸಲದ ಉಚ್ಚಾರಣೆಗೆ ಶಕ್ಯವಾಗುವಷ್ಟರ ಪದ ಭಾಗ) ಇರುತ್ತವೆ. ಆದರೆ ಈಗೀಗ ಬರುತ್ತಿರುವ ಹೈಕುಗಳಲ್ಲಿ ಸಿಲೆಬಲ್‌ಗಳ ಬಂಧನವಿಲ್ಲ.
    ಹೈಕುವಿನಲ್ಲೂ ಪ್ರತೀಕ, ಪ್ರತಿಮೆಗಳ ಬಳಕೆ ಇರುತ್ತದೆ. ಋತುಗಳು ಜನನ, ಬಾಲ್ಯ, ಮುಪ್ಪು, ಸಾವುಗಳ ಸಂಕೇತವಾಗುತ್ತವೆ. ನೀರು ಭಾವನಾ ತರಂಗ ಸೂಚಿಸಿದರೆ, ಗಾಳಿ ಅದಮ್ಯ ಚೈತನ್ಯವನ್ನು ಧ್ವನಿಸುತ್ತದೆ.
    ‘ಪೊಯೆಟ್ಸ್‌ ಇಂಟರ್‌ನ್ಯಾಶನಲ್‌’ ಸಂಸ್ಥೆ 1995 ರಲ್ಲಿ ಭಾರತದಾದ್ಯಂತ ‘ಹೈಕು’ ಚಳವಳಿಯನ್ನೇ ಪ್ರಾರಂಭಿಸಿತು. ತನ್ನ ಮಾಸ ಪತ್ರಿಕೆಯಲ್ಲಿ ನಿಯಮಿತವಾಗಿ ಹೈಕು ಪದ್ಯಗಳನ್ನು ಪ್ರಕಟಿಸಿತು. 1997 ರಲ್ಲಿ ‘ಆಲ್‌ ಇಂಡಿಯಾ ಹೈಕು ಕಾನ್ಫರನ್ಸ್‌’ನ್ನು ಬೆಂಗಳೂರಲ್ಲಿ ನಡೆಸಿತು ಮತ್ತು ‘ದಿ ಹೈಕು ಸೊಸೈಟಿ ಆಫ್‌ ಇಂಡಿಯಾ’ ಸ್ಥಾಪಿಸಿತು. ಅಲ್ಲದೆ ಹೈಕು ಕಮ್ಮಟಗಳನ್ನು ಸಹ ಆಯೋಜಿಸಿತು.
    ಹೈಕು ಪ್ರಕಾರ ಭಾರತದಲ್ಲಿ ಇತ್ತಿಚೆಗಷ್ಟೆ ಪ್ರಸಿದ್ಧಿ ಪಡೆಯುತ್ತಿದೆ. ಕನ್ನಡದ ಇಂಗ್ಲೀಷ ಕವಿ ಡಾ. ಫಕರುದ್ದೀನರು ಈ ಪ್ರಕಾರವನ್ನು ಇಂಗ್ಲೀಷನಲ್ಲಿ ಬರೆದು ಹೆಚ್ಚು ಜನಪ್ರಿಯಗೊಳಿಸಿದ್ದಾರೆ.
    ಕನ್ನಡದಲ್ಲಿ ಅಲ್ಲಲ್ಲಿ ಬಿಡಿಯಾದ ಹೈಕು ಕವನಗಳು ಪ್ರಕಟಗೊಂಡಿವೆ. ಆದರೆ ಪೂರ್ತಿ ಕವನ ಸಂಗ್ರಹಗಳಿಲ್ಲ. ಆದರೆ ಇತ್ತೀಚಿಗೆ ವಿಮಲಾ ಶೇಷಾದ್ರಿ (ಡಾ.ಎಮ್.ಶಿವರಾಂ ಅವರ ಮಗಳು) ಅವರು ತಮ್ಮ ‘ಹೈಕು’ ಎಂಬ ಕವನ ಸಂಗ್ರಹ ಕಳೆದ ಮಾರ್ಚ್‌ ತಿಂಗಳಲ್ಲಿ ಪ್ರಕಟಿಸಿದರು. ಡಾ. ಫಕರುದ್ದೀನವರ ಪ್ರಕಾರ ವಿಮಲಾ ಶೇಷಾದ್ರಿ ಪ್ರಥಮ ಕನ್ನಡ ಹೈಕು ಕವಯಿತ್ರಿ.

    ಚಕೋರ ಹೇಳಿದರು...

    ಹೈಕು ಚೆನ್ನಾಗಿದೆ. ಫಕ್ರುದ್ದೀನ್ ಬಗ್ಗೆ ವಿವರಗಳಿದ್ದಿದ್ದರೆ ಚೆನ್ನಾಗಿತ್ತು.

    AntharangadaMaathugalu ಹೇಳಿದರು...

    ಉದಯ್ ಸಾರ್...
    ಹೈಕುಗಳು ಚೆನ್ನಾಗಿದೆ.... ನೀವು ಪ್ರತಿಕ್ರಿಯೆಗುತ್ತರವಾಗಿ ಕೊಟ್ಟ ವಿವರಣೆ ಕೂಡ ಚೆನ್ನಾಗಿದೆ. ನನಗೆ ತಿಳಿದಿರಲಿಲ್ಲ ಅಷ್ಟೊಂದು ವಿವರಗಳು. ಧನ್ಯವಾದಗಳು...

    ಶ್ಯಾಮಲ