ಕಳೆದ ಮೇ ತಿಂಗಳಲ್ಲಿ ನಾನು ಇಂಟ್ರ್ಯೂವೊಂದನ್ನು ಅಟೆಂಡ್ ಮಾಡಲು ದೆಹಲಿಗೆ ಹೋಗಬೇಕಾಗಿ ಬಂತು. ಅದೇನೋ ನನಗೆ ದುರಾಸೆಯೋ? ವಿದೇಶಗಳ ಹುಚ್ಚೋ? ಹಣದ ಮೇಲಿನ ವ್ಯಾಮೋಹವೋ? ಅಥವಾ ಬದುಕಿನ ಅನಿವಾರ್ಯತೆಯೋ? ಅಥವಾ ನನ್ನ ಅಸಂಖ್ಯ ಕನಸುಗಳ ಒತ್ತಡವೋ? ಒಂದೂ ತಿಳಿಯದು. ಅಂತೂ ನಾನು ಮತ್ತೆ ವಿದೇಶವೊಂದಕ್ಕೆ ಹಾರಿ, ಅಲ್ಲಿ ಕೆಲಸ ಮಾಡಿ, ಒಂದಷ್ಟು ದುಡ್ದನ್ನು ದುಡಿದುಕೊಂಡು, ಬೆಂಗಳೂರಿಗೆ ವಾಪಾಸಾಗಿ ನೆಮ್ಮದಿಯ ಜೀವನ ನಡೆಸಬೇಕೆಂಬುದು ನನಗೆ ಮೊದಲಿನಿಂದಲೂ ಇದ್ದ ಇರಾದೆ. ಲಿಬಿಯಾದಲ್ಲಿ ಎದ್ದ ಕ್ರಾಂತಿಯಿಂದಾಗಿ ಬೆಂಗಳೂರಿಗೆ ಬಂದ ಮೇಲೆ ಆ ಆಸೆ ಇನ್ನೂ ದಟ್ಟವಾಗಿತ್ತು. ಹಾಗೆಂದೇ ನಾನು ಮತ್ತೆ ವಿದೇಶವೊಂದಕ್ಕೆ ಹೋಗಬೇಕಿತ್ತು-ಮೋಹನ ಮುರಳಿಯ ನಿನಾದವೊಂದವನ್ನು ಹುಡುಕಿಕೊಂಡು. ಹೋಗುವಾಗ ದೂರದ ದೆಹಲಿಗೆ ಫ್ಲೈಟಿನಲ್ಲಿ ಹೋಗುವದೋ, ಟ್ರೈನಿನಲ್ಲಿ ಹೋಗುವದೋ ಎಂಬ ಸಂದಿಗ್ದತೆಯಲ್ಲೇ ಹೆಚ್ಚು ಕಾಲ ಕಳೆದೆ. ಫ್ಲೈಟಿನಲ್ಲಿ ಹೋಗುವಷ್ಟು ದುಡ್ಡು ಇರಲಿಲ್ಲವೆಂದಲ್ಲ. ಆದರೆ ಅದೇಕೋ ದುಡ್ಡು ಬಂದರೂ ನನ್ನ ಮನಸ್ಸು ಅಷ್ಟೊಂದು ಐಷಾರಾಮಿ ಜೀವನಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಬಹುಶಃ, ಅದಿನ್ನೂ ಮಿಡಲ್ ಕ್ಲಾಸ್ ಜಿವನದ ಇತಿಮಿತಿಗಳ ಪರಿಧಿಯಲ್ಲೇ ಒದ್ದಾಡುತ್ತಿದೆ ಅಂತಾ ಕಾಣುತ್ತದೆ. ಮೇಲಾಗಿ ನನಗೆ ವಿನಾಕಾರಣ ಹಣ ಖರ್ಚು ಮಾಡುವದು ಮನಸ್ಸಿಗೆ ಒಂಥರಾ ಹಿಂಸೆ ಎನಿಸುತ್ತದೆ. ಹೀಗಾಗಿ ಟ್ರೈನಿನಲ್ಲೇ ಹೊರಟೆ. ಎರಡು ದಿನಗಳ ರೈಲು ಪ್ರಯಾಣ ನನ್ನನ್ನು ಬದುಕಿನ ಬೇರೆ ಬೇರೆ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡಿತ್ತು. ಮಾತ್ರವಲ್ಲ ಬರೆಯಲು ಒಂದಷ್ಟು ಸರಕನ್ನು ಸಹ ಒದಗಿಸಿತ್ತು.
ಇಂಟ್ರ್ಯೂ ಮುಗಿದ ಮೇಲೆ ನನಗೆ ಬೆಂಗಳೂರಿಗೆ ವಾಪಸಾಗಲು ಇನ್ನೂ ಎರಡು ದಿನ ಬಾಕಿಯಿತ್ತು. ಮೊದಲ ದಿನ ದೆಹಲಿಯೆಲ್ಲಾ ಸುತ್ತಾಡಿ ಲಜಪತ್ ನಗರದಲ್ಲಿ ಒಂದಷ್ಟು ಶಾಪಿಂಗ್ ಮಾಡಿದೆ. ಮಾರನೆಯ ದಿನ ಇಡಿ ಉತ್ತರ ಭಾರತದ ಮುಖ್ಯ ಆಕರ್ಷಣೆ ಎನಿಸಿದ ಹಾಗೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲನ್ನು ನೋಡಲು ಹೊರಟೆ.
ತಾಜ್ ಮಹಲನ್ನು ಮೊಟ್ಟ ಮೊದಲ ಸಾರಿ ನೋಡುವವರು ಯಾರೂ‘ವಾ! ವಾರೆ ವಾ!’ ಎಂದು ಉದ್ಗರಿಸದೇ ಇರಲಾರರು. ಅಂಥ ಅಪ್ರತಿಮ ಸೌಂದರ್ಯ, ಕಲಾತ್ಮಕತೆ ಹಾಗೂ ಅಚ್ಚರಿಯನ್ನು ಅದು ಒಳಗೊಂಡಿರುವದು ಖಂಡಿತ ಸತ್ಯ. ತಾಜ್ ಮಹಲನ್ನು ನೋಡಲು ಹೋಗುವವರಿಗೆ ಸಾಮಾನ್ಯವಾಗಿ ಅದರ ಹಿಂದಿನ ಕಥೆ ಗೊತ್ತಿದ್ದೇ ಇರುತ್ತದೆ. ಆದರೂ ಈ ಗೈಡ್‍ಗಳು ಬಿಡದೆ ಷಹಜಾನ್ ಮತ್ತು ಮಮ್ತಾಜ್ ಮಹಲ್‍ರ ಅಮರ ಪ್ರೇಮಕಥೆಯನ್ನು ಹೇಳತೊಡಗುತ್ತಾರೆ. ಅವರದು ನಿಜಕ್ಕೂ ‘ಅಮರ’ ಪ್ರೇಮಕಥೆಯಾಗಿತ್ತೋ ಗೊತ್ತಿಲ್ಲ. ಆದರೆ ಇವರಂತೂ ಅದನ್ನು ಕಟ್ಟಿದಾಗಿನಿಂದ ಹೇಳಿದ್ದನ್ನೇ ಹೇಳಿ ಹೇಳಿ ಅದನ್ನೊಂದು ಅಮರ ಕಥೆಯನ್ನಾಗಿಸಿದ್ದಾರೆ. ನಮ್ಮ ಗೈಡ್ ಕೂಡ ಒಂದೇ ಸಮನೆ ಬಾಯಿಪಾಠ ಮಾಡಿದವನಂತೆ ಅವರ ಪ್ರೇಮಕಥೆಯ ಬಗ್ಗೆ ಹೇಳುತ್ತಲೇ ಇದ್ದ. ನನಗೇಕೋ ಅವನನ್ನು ಒಂದು ನಿಮಿಷ ರೇಗಿಸಬೇಕೆನ್ನಿಸಿತು. ಕೇಳಿದೆ “ಷಹಜಾನ್ ಈ ತಾಜ್ ಮಹಲ್‍ನ್ನು ನಿಜಕ್ಕೂ ಮಮ್ತಾಜ್‍ಳ ಮೇಲಿನ ಪ್ರೀತಿಯಿಂದ ಕಟ್ಟಿಸಿದನೋ ಅಥವಾ ಅವಳು ಸತ್ತ ಖುಶಿಗಾಗಿ ಕಟ್ಟಿಸಿದನೋ?” ಎಂದು. ಅವನು ನನ್ನ ಮಾತಿನಿಂದ ಮೊದಲು ಕಕ್ಕಾಬಿಕ್ಕಿಯಾದ. ಮರುಕ್ಷಣ ಸಾವರಿಸಿಕೊಂಡು “ಇದ್ದರೂ ಇರಬಹುದು” ಎಂದು ಹೇಳಿ ನನ್ನೊಂದಿಗೆ ಬಿದ್ದು ಬಿದ್ದು ನಕ್ಕ. ಜೊತೆಗೆ “ಇತಿಹಾಸದಲ್ಲಿ ಇದೆಲ್ಲಾ ರೆಕಾರ್ಡ್ ಆಗಿಲ್ಲ.” ಎಂದೂ ಸೇರಿಸಿದ. ನಾನು “ಇತಿಹಾಸದಲ್ಲಿ ಬಹಳಷ್ಟು ವಿಷಯಗಳು ರೆಕಾರ್ಡ್ ಆಗೇ ಇಲ್ಲ” ಎಂದೆ. ಅವ ಮತ್ತೆ ನಕ್ಕ.
ಈ ಮುಸ್ಲಿಂ ಅರಸರಿಗೆ ತಾವು ಸಾಯುವ ಮುನ್ನವೇ ತಮ್ಮ ಗೋರಿಗಳನ್ನು ಕಟ್ಟಿಕೊಂಡು ಖುಶಿಪಡುವ ಒಂದು ವಿಲಕ್ಷಣ ಖಯಾಲಿ ಇತ್ತು. ಅದರಲ್ಲೂ ದೆಹಲಿಯನ್ನು ಆಳಿದ ಮುಸ್ಲಿಂ ಅರಸರಿಗೆ ಆ ಖಯಾಲಿ ಸ್ವಲ್ಪ ಜಾಸ್ತಿಯೇ ಇತ್ತು. ಇವರುಗಳಿಗೆ ಜೀವನದ ಮೇಲಿನ ಪ್ರೀತಿಗಿಂತ ಸಾವಿನ ಮೇಲಿನ ಮೋಹವೇ ಹೆಚ್ಚಾಗಿತ್ತೆಂದು ಕಾಣುತ್ತದೆ. ಆ ಕಾರಣಕ್ಕೇನೋ ಇವರುಗಳು ಜೀವನದಲ್ಲಿ ಬೇರೇನನ್ನೂ ಬಿಟ್ಟುಹೋಗದಿದ್ದರೂ ತಮ್ಮ ಗೋರಿಗಳನ್ನು ಮಾತ್ರ ಶಾಶ್ವತವಾಗಿ ಬಿಟ್ಟುಹೋಗಿದ್ದಾರೆ. ದೆಹಲಿಯಲ್ಲಿ ಅಂಥವರ ಗೋರಿಗಳು ಸಾಲು ಸಾಲಾಗಿ ಸಿಗುತ್ತವೆ; ಬಾಬರ್, ಹುಮಾಯನ್, ಇಲ್ತಮಿಷ್, ತೈಮೂರ್, ಐಬಕ್, ಅಲ್ಲಾ-ಉದ್ದಿನ್-ಖಿಲ್ಜಿ ಇನ್ನೂ ಮುಂತಾದವರವು.
ಅದೆಲ್ಲಾ ಇರಲಿ. ಮತ್ತೆ ಈ ತಾಜ್ ಮಹಲ್ ವಿಷಯಕ್ಕೆ ಬರುವದಾದರೆ, ಈ ತಾಜ್ ಮಹಲ್ ಕೂಡ ಒಂದು ಸಮಾಧಿಯೇ! ತನ್ನ ಪ್ರೀತಿಯ ಮಡದಿ ಸತ್ತಮೇಲೆ ಅವಳ ನೆನಪಿಗಾಗಿ ಇರಲಿ ಎಂದು ಷಹಜಾನ್ ಇದನ್ನು ಕಟ್ಟಿಸಿದನಂತೆ! ಅವನಿಗೆ ಅಷ್ಟೊಂದು ಪ್ರೀತಿ ಅವಳ ಮೇಲೆ! ಷಹಜಾನ್ ಅವಳನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ ಅವನು ತಾನು ಹೋದಲ್ಲೆಲ್ಲಾ ಅವಳನ್ನು ಕರೆದೊಯ್ಯುತ್ತಿದ್ದನಂತೆ! ಮಮ್ತಾಜ್‍ಳು ಸತ್ತಾಗ ಷಹಜಾನ್ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ ಎರಡು ವರ್ಷಗಳ ಕಾಲ ದಂಗುಬಡಿದವನ ತರ ಇದ್ದನಂತೆ. ಇದು ನಮಗೆ ಅವರಿಬ್ಬರ ಬಗ್ಗೆ ಗೊತ್ತಿರುವ ಕಥೆ. ಆದರೆ ಸುಮ್ಮನೆ ಒಮ್ಮೆ ಈ ಧಾಟಿಯಲ್ಲಿ ಯೋಚಿಸಿ ನೋಡಿ........ ಷಹಜಾನ್ ನಿಜಕ್ಕೂ ತನ್ನ ಹೆಂಡತಿಯನ್ನು ಅಷ್ಟೊಂದು ಪ್ರೀತಿಸುತ್ತಿದ್ದನೆ? ಒಂದುವೇಳೆ ಅಷ್ಟೊಂದು ಪ್ರೀತಿಸಿದವನಾಗಿದ್ದರೆ ಅವಳಿರುವಾಗಲೇ ಅವಳಿಗೋಸ್ಕರ ಒಂದು ಅರಮನೆಯನ್ನು ಕಟ್ಟಿಸುವ ಬದಲು ಅವಳು ಸತ್ತ ಮೇಲೆ ಗೋರಿಯನ್ನೇಕೆ ಕಟ್ಟಿಸಿದ? ನಿಜಕ್ಕೂ ಅವರಿಬ್ಬರೂ ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದರೆ? ಅವರು ಯಾವತ್ತೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲವೆ? ಅವರ ಪ್ರೀತಿ ಆ ಮಟ್ಟದ ಪರಾಕಾಷ್ಠತೆಯನ್ನು ಮುಟ್ಟಿತ್ತೆ? ಷಹಜಾನ್‍ನಿಗೆ ಅವಳ ಉತ್ಕಟ ಪ್ರೀತಿ ಯಾವುತ್ತೂ ಕಿರಿಕಿರಿಯೆನಿಸಲಿಲ್ಲವೆ? ಅವನ ಪ್ರೇಮ ಕಾಮಗಳು ಅವಳೊಬ್ಬಳಿಗೆ ಮಾತ್ರ ಮೀಸಲಾಗಿದ್ದವೆ? ಇವಳನ್ನು ಬಿಟ್ಟು ಆತ ಬೇರೆ ಯಾರೊಂದಿಗೂ ದೈಹಿಕ ಸಂಪರ್ಕ ಬೆಳೆಸಲಿಲ್ಲವೆ? ಹೀಗೆ ನಮ್ಮಷ್ಟಕ್ಕೆ ನಾವೇ ಕೇಳುತ್ತಾ ಹೋದರೆ ನಮಗೆ ತಾಜ್ ಮಹಲ್ ಬಗ್ಗೆ ಇರುವ ಒಂದು ಸುಂದರ ಇಮೇಜ್ ಹಾಳಾಗುತ್ತದೆ. ಅದರ ಹಿಂದಿನ ಕಥೆಗೆ ಧಕ್ಕೆ ಬರುತ್ತದೆ. ತಾಜ್ ಮಹಲ್‍ನ ಬುಡಕ್ಕೆ ಕೈ ಹಾಕಿ ಅಲ್ಲಾಡಿಸದಂತೆ ಭಾಸವಾಗುತ್ತದೆ. ಹೀಗೆ ನಾವು ಯೋಚಿಸಲೂ ಬಾರದು, ಕೇಳಲೂ ಬಾರದು. ಏಕೆಂದರೆ ತಾಜ್ ಮಹಲ್‍ನ ಅಸ್ಥಿತ್ವ ನಿಂತಿರುವದೇ ಷಹಜಾನ್ ಮತ್ತು ಮಮ್ತಾಜ್‍ರ ಪ್ರೇಮಕಥೆಯ ಮೇಲೆ! ಆ ಕಥೆಯೇ ಇಲ್ಲವಾದ ಮೇಲೆ ತಾಜ್ ಮಹಲ್ ಹುಟ್ಟುತ್ತಿತ್ತಾದರೂ ಹೇಗೆ? ಮತ್ತದು ಜಗತ್ತಿನ ಅದ್ಭುತ ಸ್ಮಾರಕಗಳಲ್ಲಿ ಒಂದಾಗುತ್ತಿತ್ತಾದರೂ ಹೇಗೆ? ಕೆಲವು ವಿಷಯಗಳನ್ನು ಅವು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಹೋಗದೆ ಅವಿರುವಂತೆ ಅವನ್ನು ಸ್ವೀಕರಿಸಬೇಕು. ಅದುಬಿಟ್ಟು ಅದರ ಆಚೆ ಈಚೆ ಇಣುಕಲು ಹೋದರೆ ಎಲ್ಲವೂ ರಾಡಿಯಾಗಿಬಿಡುತ್ತದೆ!
ಈ ಹಿಂದೆ ಅಂದರೆ ಎಂಬತ್ತರ ದಶಕದ ಆರಂಭದಲ್ಲಿ ಪ್ರೋಫೆಸರ್ ಓಕ್ ಎನ್ನುವವರು “ತಾಜ್ ಮಹಲ್” ಎನ್ನುವ ಹೆಸರು “ತೇಜೋ ಮಹಾಲಯ” ಎಂಬ ಶಿವನ ದೇವಸ್ಥಾನದಿಂದ ಬಂದಿದ್ದು ಎಂದು ವಾದಿಸಿದ್ದರು. ಒಂದು ವೇಳೆ ಷಹಜಾನ್ ಮಮ್ತಾಜ್‍ಗೋಸ್ಕರ ಈ ಕಟ್ಟಡವನ್ನು ಕಟ್ಟಿಸಿದ್ದರೆ ಅದು “ಮಮ್ತಾಜ್ ಮಹಲ್” ಎಂದಾಗಬೇಕಿತ್ತು, ಅದುಬಿಟ್ಟು ಬರೀ “ತಾಜ್ ಮಹಲ್” ಆಗಿ ಉಳಿದಿದ್ದೇಕೆ? ಒಂದುವೇಳೆ “ಮಮ್ತಾಜ್ ಮಹಲ್” ಎಂದು ಇಟ್ಟಿದ್ದರೂ ತದನಂತರದಲ್ಲಿ ಅದರಲ್ಲಿನ “ಮಮ್” ಬಿಟ್ಟು ಹೋಗಿದ್ದೇಕೆ? ಎಂದು ಪ್ರಶ್ನೆಸಿಸುತ್ತಾರೆ. ಇದು ನಿಜವಿದ್ದರೂ ಇರಬಹುದೇನೋ! ಆ ಜಾಗದಲ್ಲಿ ಹಿಂದೆ ಹಿಂದು ದೇವಾಲಯವಿತ್ತೇನೋ! ಆದರೆ ಅಮೃತ ಶಿಲೆಯ ಆ ಶುಭ್ರ ಬಿಳಿಯ ಕಟ್ಟಡದ ಮುಂದೆ ನಿಂತಾಗ ಷಹಜಾನ್ ಯಾವ ಧರ್ಮದ ಯಾವ ಜಾತಿಯ ಪ್ರತಿನಿಧಿಯಾಗಿಯೂ ನೆನಪಿಗೆ ಬರುವದಿಲ್ಲ. ಆತನೊಬ್ಬ ಪ್ರೇಮಿ ಮಾತ್ರ ಎನ್ನುವದು ಪದೆ ಪದೆ ಮನಸ್ಸಿನಲ್ಲಿ ಅನುರಣಿಸುತ್ತದೆ. ಅವನೊಬ್ಬ ಪ್ರೀತಿಯ ಸಹಜ ಪ್ರತಿನಿಧಿಯಾಗಿ ಕಾಣಿಸುತ್ತಾನೆ. ಆದರೆ ಕೊನೆಗಾಲದಲ್ಲಿ ಆತನ ಮಗ ಔರಂಗಜೇಬ್‍ನಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುತ್ತಾನೆ. ಅಲ್ಲಾ, ಅಷ್ಟೊಂದು ಪ್ರಿತಿಸುವ ಷಹಜಾನ್-ಮಮ್ತಾಜ್‍ರ ಹೊಟ್ಟೆಯಲ್ಲಿ ಅಂಥ ಕ್ರೂರ ಮಗ ಹುಟ್ಟಿದನೆ? ಪ್ರೀತಿಸುವವರ ಹೊಟ್ಟೆಯಲ್ಲಿ ಪ್ರೀತಿಸುವವನೇ ಹುಟ್ಟಬೇಕಿತ್ತಲ್ಲ? ಅದು ಬಿಟ್ಟು ಇಂಥ ಕ್ರೂರಿ ಮಗ ಹೇಗೆ ಹುಟ್ಟಿದ? ಅಥವಾ ಅಧಿಕಾರ ಸಿಗುವವರೆಗೂ ಆತ ತನ್ನ ಅಪ್ಪ- ಅಮ್ಮಂದಿರಿಗೆ ಪ್ರೀತಿಸುವ ಮಗನಾಗಿಯೇ ಇದ್ದು ಅಧಿಕಾರ ಸಿಕ್ಕ ಮೇಲೆ ಬದಲಾದನೆ? ಹಣ ಮತ್ತು ಅಧಿಕಾರದ ಮುಂದೆ ಯಾವ ಪ್ರೀತಿಯೂ ಶಾಶ್ವತವಲ್ಲ ಎಂದು ಅವರಪ್ಪನಿಗೆ ಸಾಬೀತು ಪಡಿಸಲು ಹೊರಟನೆ? ಇವೆಲ್ಲಾ ತರ್ಕಕ್ಕೆ ಸಿಗದ ಪ್ರಶ್ನೆಗಳು.
ಅಂದಹಾಗೆ ಷಹಜಾನ್ ತಾಜ್ ಮಹಲ್‍ನ್ನು ಕಟ್ಟಿಸಿದ ಮೇಲೆ ಅದರ ಅಷ್ಟೂ ಕೆಲಸಗಾರರ ಕೈಗಳನ್ನು ಕತ್ತರಿಸಿಹಾಕಿದನಂತೆ. ಕಾರಣ ಇಂಥದೇ ಇನ್ನೊಂದು ಸ್ಮಾರಕವನ್ನು ಅವರು ಬೇರೆಲ್ಲೂ ನಿರ್ಮಿಸಬಾರದೆಂಬುದು ಅವನ ಉದ್ದೇಶವಾಗಿತ್ತು. ಅಬ್ಬಾ, ಅವನ ಪ್ರೀತಿಯ ಹಿಂದೆ ಅಂಥದೊಂದು ಕ್ರೌರ್ಯವಿತ್ತು ಎಂದು ನಂಬುವದಾದರೂ ಹೇಗೆ?
ಪ್ರೀತಿ ಒಮ್ಮೊಮ್ಮೆ ನೀನು ಇಷ್ಟೊಂದು ಕ್ರೂರಿಯಾಗಬಲ್ಲೆಯಾ?
-ಉದಯ್ ಇಟಗಿ
ಇಂದು ಸಂಜೆ ಅಷ್ಟಾವಧಾನ
2 ದಿನಗಳ ಹಿಂದೆ