Demo image Demo image Demo image Demo image Demo image Demo image Demo image Demo image

ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!

  • ಭಾನುವಾರ, ಮಾರ್ಚ್ 10, 2024
  • ಬಿಸಿಲ ಹನಿ
  • ನನ್ನ ಕೆಂಗುಲಾಬಿಯೇ,
    ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ಆರಂಭವಾಗಿತ್ತು. ಇಂಥ ಚಳಿಗಾಲದಲ್ಲಿಯೇ ಒಟ್ಟಿಗಿರಬೇಕಾದ ನಾವು ಬೇರ್ಪಟ್ಟಿದ್ದೆವು. ಅಲ್ಲಲ್ಲ, ಬದುಕಿನ ಅವಶ್ಯಕತೆಗಳು, ಅನಿವಾರ್ಯತೆಗಳು ನಮ್ಮಿಬ್ಬರನ್ನು ಬೇರ್ಪಡಿಸಿದ್ದವು. ನನಗೆ ವಿದೇಶದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನು ಹೋಗಲೇಬೇಕಿತ್ತು. ಹೋಗದೇ ಬೇರೆ ದಾರಿಯಿರಲಿಲ್ಲ. ಏಕೆಂದರೆ ನಮ್ಮ ಆಗಿನ ಹಣಕಾಸಿನ ಸ್ಥಿತಿ ಹೇಳಿಕೊಳ್ಳುವಷ್ಟಿರಲಿಲ್ಲ. ನಾವಿಬ್ಬರು ತರುವ ಸಂಬಳ ಬೆಂಗಳೂರಂಥಾ ಊರಲ್ಲಿ ಮನೆ ಬಾಡಿಗೆ, ಗಾಡಿ ಲೋನ್, ಮನೆ ಖರ್ಚು, ಅದು ಇದು ಅಂತಾ ಅಲ್ಲಿಗಲ್ಲಿಗೆ ಸರಿಹೋಗಿ ತಿಂಗಳ ಕೊನೆಯಲ್ಲಿ ಕೈಯಲ್ಲಿ ಅಬ್ಬಬ್ಬಾ ಅಂದರೆ ಒಂದು ಸಾವಿರ ಉಳಿದರೆ ಹೆಚ್ಚು. ಹೀಗಾದರೆ ಮುಂದಿನ ಬದುಕು ಹೇಗೇ? ಮಗಳ ಭವಿಷ್ಯದ ಗತಿಯೇನು? ಬೆಂಗಳೂರಿನಲ್ಲಿ ನಾವೂ ಒಂದು ಸ್ವಂತ ಮನೆ ಅಂತಾ ಮಾಡಿಕೊಳ್ಳುವದು ಹೇಗೆ? ಎಲ್ಲರಂತೆ ನಾವು ಕಾರಲ್ಲಿ ಓಡಾಡುವದು ಯಾವಾಗ? ಈ ನಿಟ್ಟಿನಲ್ಲಿ ನಾನು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯಾಯಯುತವಾಗಿ ಹೇಗೆ ಸುಧಾರಿಸುವದು ಎಂದು ಯೋಚಿಸುತ್ತಿರುವಾಗಲೇ ನನಗೆ ಈ ಅವಕಾಶ ಒದಗಿಬಂದಿತ್ತು. ನಾನು ಹೊರಟು ನಿಂತೆ.
    ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ಪ್ರೀತಿಯಲ್ಲಿರುವಾಗ ಏನೆಲ್ಲಾ ಆಣೆ ಪ್ರಮಾಣಗಳನ್ನು ಮಾಡಿದ್ದೆವು! ನಾವಿಬ್ಬರು ಸದಾ ಕಾಲ ಒಟ್ಟಿಗಿರುತ್ತೇವೆ. ಒಬ್ಬರೊನ್ನೊಬ್ಬರು ಒಂದು ಘಳಿಗೆಯೂ ಬಿಟ್ಟಿರುವದಿಲ್ಲ. ಸತ್ತರೆ ಇಬ್ಬರೂ ಒಟ್ಟಿಗೆ ಸಾಯೋಣ. ಪ್ರೀತಿಯ ಲೋಕವೇ ಅಂಥದಲ್ಲವೇ? ಅಲ್ಲಿ ಎಲ್ಲವೂ ಇಂಪು-ತಂಪು, ನಾದ-ನಿನಾದ, ಮಧುರ-ಅಮರ. ಅದೊಂದು ಅದ್ಭುತ ಗಂಧರ್ವ ಲೋಕ. ಅಲ್ಲಿ ಬರೀ ಗಂಧರ್ವ ಕನ್ಯೆ, ಕಿನ್ನರ-ಕಿಂಪುರುಷರಿಗೆ ಮಾತ್ರ ಪ್ರವೇಶ. ಸ್ವರ್ಗಲೋಕದಲ್ಲಿ ಸುಖದಲೋಲಪತೆಗಳೇನು ಕೊರತೆಯೇ? ಈ ಸುಖದಲೋಲುಪತೆಗಳನ್ನು ಶಾಶ್ವತವಾಗಿ ನಮ್ಮದಾಗಿಸಿಕೊಳ್ಳೋಣವೆಂದೇ ನಾವು ಮದುವೆಯಾಗುತ್ತೇವೆ. ಆದರೆ ಮದುವೆಯೆಂಬ ಚೌಕಟ್ಟಿನಲ್ಲಿ ಅವೆಲ್ಲಾ ಬರೀ ಭ್ರಮೆಗಳು ಎಂದು ಗೊತ್ತಾಗಲು ಹೆಚ್ಚು ಕಾಲ ಬೇಕಾಗುವದಿಲ್ಲ. ಪ್ರೀತಿಯಲ್ಲಿನ ಬದುಕೇ ಬೇರೆ. ಮದುವೆ ನಂತರದ ಬದುಕೇ ಬೇರೆ ಎನ್ನುವ ವಾಸ್ತವ ಸತ್ಯದ ಜೊತೆಗೆ ಬದುಕಲು ಬರೀ ಪ್ರೀತಿಯೊಂದೇ ಸಾಲದು ಅದರ ಜೊತೆಗೆ ಹಣವೂ ಬೇಕಾಗುತ್ತದೆ ಎನ್ನುವ ಕಟುಸತ್ಯವೂ ಗೋಚರಿಸುತ್ತಾ ಹೋಗುತ್ತದೆ. ಅದಕ್ಕೇ ಇರಬೇಕು ದೊಡ್ದವರು ಹೇಳಿದ್ದು- ಪ್ರೀತಿ ಕುರುಡು, ಮದುವೆ ಕಣ್ಣು ತೆರೆಸುವ ಆಟ ಎಂದು. 

    ನಾನು ಕೂಡಾ ನಿನ್ನನ್ನು ಪ್ರೀತಿಸುವಾಗ ಒಮ್ಮೆ ನಿನಗೆ ಹೇಳಿದ್ದೆ; ‘ಉದಯ’ಗಳ ಊರೇ ನಾನಾಗಿ ಬೆಳಕಿಡುವೆ ನಿನಗಾಗಿ’ ಎಂದು. ಆದರೆ ದಾಂಪತ್ಯದಲ್ಲಿ ನಿನಗೆ ನಾನು, ನನಗೆ ನೀನು ಬರೀ ಬೆಳಕನ್ನೇ ಇಡುತ್ತಾ ಕೂರಲಾಗುವದಿಲ್ಲವಲ್ಲ? ಹಾಗಾಗಿ ನಾನು ಹೊರಟು ಬಂದೆ. ನಾನು ಹೊರಡುವ ದಿನ ನಿನ್ನ ಕಂಗಳ ತುಂಬಾ ಕಣ್ಣಿರು. ಮನಸ್ಸಿನ ತುಂಬಾ ದುಗುಡ. ನಾನು ಆ ಕ್ಷಣಕ್ಕೆ ಹೆಚ್ಚು-ಕಮ್ಮಿ ಖ್ಯಾತ ಇಂಗ್ಲೀಷ್ ಕವಿ ಜಾನ್ ಡನ್ ನಿಂತ ಜಾಗದಲ್ಲಿ ನಿಂತಿದ್ದೆ. ಜಾನ್ ಡನ್ ಇಂಗ್ಲೀಷಿನ ಅದ್ಭುತ ಪ್ರೇಮಕವಿ ನಿನಗೆ ಗೊತ್ತಲ್ಲ? ಪ್ರಿತಿಯನ್ನು ಲೌಕಿಕ ನೆಲಗಟ್ಟಿನಲ್ಲಿ ನಿಂತು ನೋಡುತ್ತಲೇ ಅಲೌಕಿಕ ಲೋಕದಲ್ಲಿ ಲೀನವಾದವ. ಆತ ವೃತ್ತಿಯಿಂದ ಒಬ್ಬ ವ್ಯಾಪಾರಿ. ಆದರೆ ಪ್ರವೃತ್ತಿಯಿಂದ ಕವಿ. ಅಗಾಧ ಪ್ರೇಮಿ! ಆತನ ಪ್ರೇಮಕಾವ್ಯದ ಕುಂಚ ಸದಾ ಅದ್ಭುತ ಕಲ್ಪನೆಗಳ ಬಣ್ಣಗಳಲ್ಲಿ ಅದ್ದಿ ತೆಗೆದಂತಿರುತ್ತಿತ್ತು. ಆದರವನ ಬದುಕು ವಾಸ್ತವದಲ್ಲಿ ನೆಲೆಯೂರಿರಿತ್ತಿತ್ತು.

    ಆತ ಒಂದು ಸಾರಿ ಈಗಾಗಲೇ ಇದ್ದ ಅಲ್ಪ-ಸ್ವಲ್ಪ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವದಕ್ಕಾಗಿ ತನ್ನ ಪ್ರಿಯತಮೆಯನ್ನು ತನ್ನೂರಿನಲ್ಲಿ ಬಿಟ್ಟು ದೂರದ ದೇಶವೊಂದಕ್ಕೆ ಹೋಗಬೇಕಾಗುತ್ತದೆ. ಹೋಗುವಾಗ ಅವನ ಪ್ರಿಯತಮೆ ನನ್ನೊಬ್ಬಳನ್ನೇ ಬಿಟ್ಟುಹೋಗಬೇಡ ಎಂದು ಕಂಬನಿಗರೆಯುತ್ತಾ ಅಕ್ಷರಶಃ ಆ ಸಮಯವನ್ನು ಸೂತಕದ ಸಮಯವನ್ನಾಗಿ ಮಾಡುತ್ತಾಳೆ. ಆದರೆ ಆತ ಇದ್ಯಾವುದನ್ನು ಲೆಕ್ಕಿಸದೇ ಹೊರಟು ನಿಲ್ಲುತ್ತಾನೆ. ಏಕೆಂದರೆ ಅವನಿಗೆ ಈಗಿನದಕ್ಕಿಂತ ಇನ್ನಷ್ಟು ಸುಂದರವಾದ ಬದುಕನ್ನು ಕಟ್ಟಿಕೊಳ್ಳುತವಕ. ಹೋಗುವಾಗ ಅವನ ಪ್ರಿಯತಮೆ ವಿರಹವೇದನೆಯಿಂದ ಬಳಲುತ್ತಾಳೆ. ಆಗವನು ಅವಳನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ; ಛೀ ಹುಚ್ಚಿ! ನೀನು ಅಳುವದಾದರೂ ಏಕೆ? ಹೀಗೆ ಅಳುತ್ತಾ ಕೂರಲು ನಾವೇನು ಶಾಶ್ವತವಾಗಿ ಅಗಲುತ್ತಿದ್ದೇವೆಯಾ? ಅಷ್ಟಕ್ಕೂ ನಾವಿಬ್ಬರೂ ಯಾವತ್ತೂ ಅಗಲುವದೇ ಇಲ್ಲ. ಏಕೆಂದರೆ ನಾವಿಬ್ಬರೂ ಒಂದು ಕೈವಾರವಿದ್ದಂತೆ. ಅದರ ಒಂದು ಕೈ ಹೇಗೆ ಇನ್ನೊಂದು ಕೈಯಿಲ್ಲದೆ ಚಲಿಸುವದಿಲ್ಲವೋ ಹಾಗೆಯೇ ನಾವು ಕೂಡಾ. ನೀನು ಕೇಂದ್ರಬಿಂದುವಾದರೆ ನಾನು ಅದರ ಸುತ್ತ ಸುತ್ತುವ ಒಂದು ವೃತ್ತ. ಒಂದು ಇಲ್ಲದೇ ಇನ್ನೊಂದಿಲ್ಲ.    
     
    ನಾನು ಹೊರಟು ನಿಂತ ದಿನ ನಿನ್ನ ಕಂಗಳ ತುಂಬಾ ಕಂಬನಿಗಳು. ನನ್ನ ಕಂಗಳ ತುಂಬಾ ಕನಸುಗಳು. ನೀನು ಒಂದೇ ಸಮನೆ ಅಳುತ್ತಲಿದ್ದೆ. ಹಾಗೆ ನೋಡಿದರೆ ನಿನಗಿಂತ ಹೆಚ್ಚಾಗಿ ನನಗೆ ಕಸಿವಿಸಿಯಾಗಿತ್ತು. ಆ ಕಸಿವಿಸಿಯ ಭಾರವನ್ನು ಹೊತ್ತುಕೊಂಡೇ ನಾನಿಲ್ಲಿಗೆ ಹಾರಿ ಬಂದೆ. ಇಲ್ಲಿಗೆ ಬಂದ ಮೇಲೆ ನನಗೆ ನಿನ್ನದೇ ಯೋಚನೆ! ನಾನಿಲ್ಲದೆ ಇಲ್ಲಿ ನೀನೊಬ್ಬಳೇ ಎಲ್ಲವನ್ನೂ ಹೇಗೆ ನಿಭಾಯಿಸುತ್ತಿರುವಿ ಎಂದು.  ಪ್ರತಿಸಾರಿ ನಿನ್ನ ನೆನಪಾದಾಗಲೆಲ್ಲಾ ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿರುವ ನನ್ನನ್ನು ಕಚ್ಚುವ ಸೊಳ್ಳೆಗಳಿಗೆ ಹೇಳಿಕಳಿಸುತ್ತೇನೆ; ಹೋಗಿ ದೂರದ ಇಂಡಿಯಾದಲ್ಲಿರುವ ನನ್ನವಳನ್ನು ಕಚ್ಚಿ ಅವಳ ರಕ್ತದಲ್ಲಿ ನನ್ನ ರಕ್ತವನ್ನು ಬೆರಸಿ ನಮ್ಮಿಬ್ಬರನ್ನು ಒಂದಾಗಿಸೆಂದು. ನನ್ನ ಹೃದಯ ನಿನಗಾಗಿ ಮಿಡಿದಾಗಲೆಲ್ಲಾ ಇಲ್ಲಿನ ನೊಣಗಳಿಗೆ ಹೇಳುತ್ತೇನೆ; ನನ್ನ ಸುತ್ತ ಸುತ್ತುವ ಬದಲು ಹೋಗಿ ನನ್ನವಳ ಕೆನ್ನೆಗೊಂದು ಮುತ್ತು ಕೊಡಿ ಎಂದು. ಸಹರಾ ಮರಳುಗಾಡಿನ ಗುಡ್ಡಗಳ ಹಿಂದೆ ಚಕ್ಕಂದ ಆಡುವ ಚಂದಿರನಿಗೆ ಹೇಳಿ ಕಳಿಸಿದ್ದೇನೆ; ಇಂಡಿಯಾದಲ್ಲಿರುವ ನನ್ನವಳೊಂದಿಗೆ ನನ್ನ ಪರವಾಗಿ ಪ್ರೀತಿಯ ಪಲಕುಗಳನ್ನಾಡಬಹುದೆಂದು. ಆಗಸದ ನಕ್ಷತ್ರಗಳನ್ನು ಬೇಡಿಕೊಂಡಿದ್ದೇನೆ; ಹೋಗಿ, ನನ್ನ ಕೊರಗಿನಲ್ಲಿರುವ ನನ್ನವಳ ಮನದಂಗಳದಲ್ಲಿ ನಿಮ್ಮ ಒಂದಷ್ಟು ಪ್ರಭೆಯನ್ನು ಚೆಲ್ಲಿ ಅವಳ ಮನವನ್ನು ಬೆಳಗಿಯೆಂದು. ಇಲ್ಲಿನ ತಂಗಾಳಿಯ ಕಿವಿಯಲ್ಲಿ ಉಸುರಿ ಕಳಿಸಿದ್ದೇನೆ; ಅವಳಿಗೆ ಲಾಲಿ ಹಾಡುತ್ತಾ ಅವಳನ್ನು ಕನಸಿನರಮನೆಯಲ್ಲಿ ಮಲಗಿಸೆಂದು. ಗಾಳಿಯಲ್ಲಿ ತೇಲಿ ಹೋಗುವ ಮರಳು ಕಣಗಳಿಗೆ ಹೇಳಿದ್ದೇನೆ; ಹಾರಿ ಹೋಗಿ ಇಂಡಿಯಾದಲ್ಲಿರುವ ನನ್ನವಳಿಗೆ ನನ್ನ ಬೆಚ್ಚಗಿನ ನೆನಪುಗಳ ಗೂಡೊಂದನ್ನು ಕಟ್ಟಿಕೊಡೆಂದು.  

    ಕೊರಗದಿರು, ಕರಗದಿರು ಕಳಕೊಂಡ ಪ್ರೀತಿಯ ಬಗ್ಗೆ. ನಾನು ಬಂದು ಬಿಡುವೆ ಬೇಗ. ಹೇಗಿದ್ದರೂ ನಮ್ಮ ಬದುಕು ಆರ್ಥಿಕವಾಗಿ ಭದ್ರವಾಯಿತಲ್ಲ? ಇನ್ನೇನಿದ್ದರೂ ಕಳಕೊಂಡ ಪ್ರೀತಿಯ ಕನಸುಗಳನ್ನು ಮತ್ತೆ ಕೂಡಿಟ್ಟು ನನಸಾಗಿಸಿಕೊಳ್ಳುವದಷ್ಟೇ ಕೆಲಸ. ನಾನಲ್ಲಿಗೆ ಬಂದ ಮೇಲೆ ಸಂಜೆ ಮಲ್ಲಿಗೆಯ ಸವಿಗಂಪಿನಲ್ಲಿ ನಾಳೆಗಳನ್ನು ಕುರಿತು ಹರಟೋಣ. ರಾತ್ರಿ ಆಗಸದ ನಕ್ಷತ್ರಗಳನ್ನು ಬಾಚಿ ತಬ್ಬಿಕೊಳ್ಳೋಣ. ನವಿಲು ಗರಿಯನ್ನು ಹೆಕ್ಕುತ್ತಾ ಸವಿನೆನಪುಗಳನ್ನು ಕಟ್ಟಿಕೊಳ್ಳೋಣ. ಇಬ್ಬರೂ ಸೇರಿ ಒಮ್ಮೆ ತಾಜ್‍ಮಹಲ್‍ಗೆ ಭೇಟಿಕೊಟ್ಟು ಬರೋಣ. ಅಲ್ಲಿ ಗೋರಿಯಲ್ಲಿರುವ ಮಮ್ತಾಜ್ ಮಹಲ್‍ಳಿಗೆ ಒಮ್ಮೆ ಕೂಗಿ ಹೇಳುವಿಯಂತೆ; ನಿನ್ನ ಗಂಡನೇನೋ ರಾಜ. ನಿನಗಾಗಿ ಮಹಲೊಂದನ್ನು ಕಟ್ಟಿಸಿದ. ಆದರೆ ನನ್ನ ಗಂಡ ಬಡಪಾಯಿ. ನನಗಾಗಿ ಒಂದು ಮನೆಯನ್ನೇ ಕಟ್ಟಿಸಿಕೊಟ್ಟ. ನಿಮ್ಮಿಬ್ಬರ ಪ್ರೀತಿಗಿಂತ ನಮ್ಮಬ್ಬಿರ ಪ್ರೀತಿಯೇ ಅಜರಾಮರವೆಂದು. ಆಗ ನಾನು ನಿನ್ನನ್ನು ಪ್ರೀತಿಸಿದ್ದು ಮತ್ತು ಆ ಪ್ರೀತಿಯನ್ನು ಭದ್ರ ಬುನಾದಿಯ ಮೇಲೆ ಕಟ್ಟಿದ್ದು ಸಾರ್ಥಕವೆನಿಸುತ್ತದೆ.

    ಮತ್ತೆ ಹೇಳುತ್ತಿದ್ದೇನೆ; ಇಷ್ಟು ದಿನಗಳನ್ನೇ ಕಾದಿರುವಿಯಂತೆ. ಇನ್ನಾರು ತಿಂಗಳು ಕಾದು ಬಿಡು. ಬೇಗ ಬಂದು ಬಿಡುವೆ. ಅಲ್ಲಿಯವರೆಗೆ ಬೈ….ಬೈ…..ಸ್ವೀಟ್ ಕಿಸ್ಸಸ್ ಡಾರ್ಲಿಂಗ್!
    ಇತಿ
    `ನಿನಗಷ್ಟೇ ಸೀಮಿತನಾದವನು’

    http://avadhimag.com/2015/02/14/%E0%B2%AE%E0%B2%A1%E0%B2%A6%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B3%8D%E0%B2%AF%E0%B2%BE%E0%B2%AA%E0%B2%BF-%E0%B2%B5%E0%B3%8D%E0%B2%AF%E0%B2%BE%E0%B2%B2%E0%B3%86%E0%B2%82/







    3 ಕಾಮೆಂಟ್‌(ಗಳು):

    sunaath ಹೇಳಿದರು...

    ಪ್ರೀತಿ ಎಲ್ಲ ಸಂಪತ್ತಿಗಿಂತ ದೊಡ್ಡದು; ಆದರೆ ಬದುಕಲು ಅಷ್ಟಿಷ್ಟು ಸಂಪತ್ತು ಬೇಕೇ ಬೇಕಲ್ಲ! ಸುಂದರವಾದ ಲೇಖನ.

    Unknown ಹೇಳಿದರು...

    nice one...!!!

    could you please once visit ammanahaadugalu.blogspot.com
    and share your opinion/suggestions.

    usha aland ಹೇಳಿದರು...

    ನಿಮ್ಮ ವಿರಹ ವೇದನೆ ಮನಕ್ಕೆ ತೀವ್ರವಾಗಿ ತಟ್ಟಿತು. ಜೀವನದಲ್ಲಿ ಎಲ್ಲ ಜವಾಬ್ದಾರಿಗಳನ್ನು ಮುಗಿಸಿರುವ ಈ ಒಂದು ಹೊತ್ತಿನಲ್ಲಿ ನಾನು ನಿಮಗೆ ಒಂದು ಸಲಹೆ ಕೊಡಲೇ? ಈ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡದೆಂದರೆ ಪ್ರೀತಿಯೊಂದೇ. ಜೀವನದ ಸಂಜೆಯಲ್ಲಿ ದುಡ್ಡಿಗಿಂತ ಹೆಚ್ಚು ಸಂಗಾತಿಯ ಪ್ರೀತಿಯ ಅಗತ್ಯವಿರುತ್ತದೆ. ಉಳಿದುದೆಲ್ಲವೂ ಗೌಣವಾಗಿ ಬಿಡುತ್ತವೆ. ನಮ್ಮೆಲ್ಲ basic ಅಗತ್ಯಗಳನ್ನು ಪೂರ್ಣಗೊಳಿಸಲು ಬಹಳ ದುಡ್ಡು ಬೇಕಾಗುವದಿಲ್ಲ. ದುರಂತವೆಂದರೆ ಇದು ನಮಗೆ ಅರ್ಥವಾಗಲು ಒಂದು ಆಯುಷ್ಯವೇ ಬೇಕಾಗುತ್ತದೆ. ಅರ್ಥವಾದಾಗ ಸಮಯ ಮೀರಿ ಹೋಗಿರುತ್ತದೆ. ಆದಷ್ಟು ಬೇಗ ನಿಮ್ಮಿಬ್ಬರ ಆಸೆ ಪೂರ್ಣವಾಗಲಿ ಎಂದು ಹಾರೈಸುವೆ.