Demo image Demo image Demo image Demo image Demo image Demo image Demo image Demo image

ಗಟ್ಟಿಕಾಳಿನ ಕಥೆಗಳು ಈ ಹುಡುಗನವು!

  • ಭಾನುವಾರ, ಜನವರಿ 03, 2021
  • ಬಿಸಿಲ ಹನಿ


  • ರಾಯಚೂರು ಸೀಮೆಯಿಂದ ಜಿದ್ದಿಗೆ ಬಿದ್ದವರ ತರ ಕಥೆ ಬರೆಯುವವರಲ್ಲಿ ಮುದಿರಾಜ ಬಾಣದ, ಅಮರೇಶ ಗಿಣಿವಾರ ಮತ್ತು ಶರಣಬಸವ ಗುಡದಿನ್ನಿ ಪ್ರಮುಖರು. ನಾನಿಲ್ಲಿ ಉದ್ದೇಶಪೂರ್ವಕವಾಗಿ ’ಜಿದ್ದಿಗೆ ಬಿದ್ದವರ ತರ’ ಎನ್ನುವ ಪದವನ್ನು ಬಳಸಿದ್ದೇನೆ. ಏಕೆಂದರೆ ಈ ಮೂವರು ಒಬ್ಬರಿಗಿಂತ ಒಬ್ಬರು ಚನ್ನಾಗಿ ಕಥೆಗಳನ್ನು ಬರೆಯುವ ಮೂರನೇಯ ತಲೆಮಾರಿನ ಕಥೆಗಾರರಾಗಿದ್ದಾರೆ. ಈ ಮೂವರನ್ನು ನಾನೇಕೆ ಇಷ್ಟಪಡುತ್ತೇನೆಂದರೆ ಇವರಲ್ಲಿ ಒಂದು ವಿಶೇಷವಾದ ಸಾಮಾನ್ಯ ಗುಣವಿದೆ. ಅದೇನೆಂದರೆ ಮೂವರೂ ರಾಯಚೂರು ಸೀಮೆಯ ಭಾಷೆಯನ್ನು ತಮ್ಮ ಕಥೆಗಳಲ್ಲಿ ಸಮರ್ಥವಾಗಿ ಬಳಸುತ್ತಿದ್ದಾರೆ ಮತ್ತು ಆ ಮೂಲಕ ಓದುಗ ವಲಯಕ್ಕೆ ತುಂಬಾ ಹತ್ತಿರವಾಗುತ್ತಿದ್ದಾರೆ. ಹೀಗೆ ಒಂದು ಪ್ರಾದೇಶಿಕ ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಅದಿರುವಂತೆ ಹಿಡಿದಿಡುವವರು ತುಂಬಾ ವಿರಳ. ಆದರೆ ಆ ವಿರಳತೆಯನ್ನು ಹೋಗಲಾಡಿಸುತ್ತಿರುವವರು ಈ ಮೂವರು ಕಥೆಗಾರರು ಎಂದು ಹೇಳಬಹುದು.

    ನಾನು ಮೊನ್ನೆಯಷ್ಟೆ ಬಿಸಿಲೂರಿನ ಮುದಿರಾಜ ಬಾಣದ ಅವರ “ಚಾನ್ನೆ” ಕಥಾ ಸಂಕಲನವನ್ನು ಓದಿ ಮುಗಿಸಿ ಅದರ ಗುಂಗಿನಿಂದ ಹೊರಬರುವ ಮೊದಲೇ ಅದೇ ಊರಿನ ಮತ್ತೋರ್ವ ಕಥೆಗಾರ ಅಮರೇಶ ಗಿಣಿವಾರ ಅವರ “ಹಿಂಡೆಕುಳ್ಳು” ನನಗೆ ಇನ್ನೊಂದು ಗುಂಗು ಹಿಡಿಸಿದೆ. ಗುಂಗು ಹಿಡಿಸುವದು ಎಂದರೆ ಕಾಡುವದು ಎಂದರ್ಥ. ಅಂದರೆ ಇಲ್ಲಿ ಕಾಡುವ ಕಥೆಗಳಿವೆ ಎಂದರ್ಥ. ಕಥೆಗಳು ನಮ್ಮನ್ನು ಯಾಕೆ ಕಾಡುತ್ತವೆ? ಎಂದು ಸ್ಪಷ್ಟವಾಗಿ ಹೇಳುವದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕಾಗಿ ಕಥೆಗಳು ಕಾಡಬಹುದು. ಇದೇ ಕಾರಣಕ್ಕಾಗಿ ನನಗೂ ಈ ಕಥೆಗಳು ಕಾಡಿದ್ದಿದೆ.

    ನಾನು ಮೊಟ್ಟ ಮೊದಲು ಓದಿದ್ದು “ಹಿಂಡೆಕುಳ್ಳು” ಕಥೆಯನ್ನು. (ಬಹುಮಾನ ಪಡೆದ ಕಥೆ ಎನ್ನುವ ಕಾರಣಕ್ಕಾಗಿ) ಗ್ರಾಮೀಣ ಹೆಣ್ಣಿನ ಮೇಲಾಗುವ ಶೋಷಣೆಯನ್ನು ಇದು ತೆರೆದಿಡುತ್ತದೆ. ಅದು ಎಷ್ಟರಮಟ್ಟಿಗೆದೆಯೆಂದರೆ ಅಪ್ಪನ ಕ್ರೌರ್ಯವನ್ನು ಕಂಡು ಮಕ್ಕಳು ಭಯಬೀತರಾಗುವಷ್ಟು ಇದೆ. ಕಥೆಯ ಕೊನೆಯಲ್ಲಿ ಸಣ್ಮಗಳು ಅಂಬಿಕಾ “ಅಪ್ಪ ಸತ್ತಿದ್ದು ಬೇಸಾಯ್ತಲ್ಲಮಾ?” ಎಂದು ಹೇಳುವದರ ಮೂಲಕ ಅಪ್ಪನ ಪರ್ಲನ್ನು ಹರಿದುಕೊಂಡು ಬೇರೆಯವರಿಗೂ “ಕ್ರೌರ್ಯ”ದಿಂದ ಬಿಡುಗಡೆಯ ಭಾವವನ್ನು ಕೊಡಿಸುವಾಗ ಅವಳು ಹಳ್ಳಿಗಾಡಿನ ಸ್ತ್ರಿವಾದಿಯಂತೆ  ಕಾಣಿಸುತ್ತಾಳೆ. ಮನೆ ನಂ. ೮೪ ಮತ್ತು ಹಳ್ಳ ತೋರಿಸಿದರುಎನ್ನುವ ಅವರ ಕಥೆಗಳು ಸಹ ಹೆಣ್ಣಿನ ಶೋಷಣೆಯ ಬಗ್ಗೆಯೇ ಮಾತನಾಡುತ್ತವೆ.

    ವಾಪಸ್ಸು ಬಂದ ಪತ್ರಕಥೆಯು ಜಾಗತೀಕರಣದ ಪ್ರಭಾವಕ್ಕೆ ಹಳ್ಳಿಗಳೂ ಸಹ ಸಿಕ್ಕಿ ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತಿವೆ ಎನ್ನುವದನ್ನು ಚನ್ನಾಗಿ ಹೇಳುತ್ತದೆ. ನರಿಮಳೆಕಥೆಯ ಕೊನೆಯಲ್ಲಿನ ವಿಷಾದ ನಮ್ಮನ್ನು ಕಲಕಿದರೆ ನಶಿಪುಡಿಕಥೆಯೊಳಗಿನ ಬಂಡಾಯ ನಮ್ಮನ್ನು ಕಾಡುತ್ತದೆ.  

    “ಶಿವನ ಕುದರೆ” ಕಥೆಯು ಅಪ್ಪ ಮತ್ತು ಮಗನ ನಡುವಿನ ಸಂಬಂಧವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹರೆಯಕ್ಕೆ ಬಂದ ಎಲ್ಲ ಮಕ್ಕಳೂ ಅಪ್ಪನನ್ನು ದ್ವೇಷಿಸುವದು ಸಹಜ. ಅಂತೆಯೇ ಇಲ್ಲಿನ ಕಥಾನಾಯಕನೂ ಸಹ ಅಪ್ಪನನ್ನು ದ್ವೇಷಿಸುತ್ತಾನೆ. ದ್ವೇಷಿಸುತ್ತಲೇ ಅವನಿಂದ ಬಿಡುಗಡೆ ಪಡೆಯಲು ನೋಡುತ್ತಾನೆ. ಆದರೆ ಅವನಿಗದು ಸಾಧ್ಯವಾಗುವದಿಲ್ಲ. ಬಿಡುಗಡೆ ಪಡೆಯಲು ನೋಡಿದಷ್ಟೂ ಅಪ್ಪ ಅವನನ್ನು ಮತ್ತೆ ಮತ್ತೆ ತೀವ್ರವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತಾನೆ. ಆ ಮೂಲಕ ಅಪ್ಪ ಏನೇ ಆಗಿದ್ದರೂ ಅವನನ್ನು ಬಿಟ್ಟುಕೊಡಲಾಗದು ಎನ್ನುವ ಸತ್ಯವನ್ನು ತೆರೆದಿಡುತ್ತದೆ.  

    ಒಟ್ಟಿನಲ್ಲಿ ಅಮರೇಶ ಗಿಣಿವಾರರ ಕಥೆಗಳು ವಸ್ತುವಿನ ದೃಷ್ಟಿಯಿಂದ ಹಳೆಯವೆನಿಸಿದರೂ ನಿರೂಪಣಾ ಶೈಲಿ ಮತ್ತು ತಂತ್ರಗಾರಿಕೆಯಿಂದಾಗಿ ನಮ್ಮಲ್ಲೆರ ಗಮನ ಸೆಳೆಯುತ್ತವೆ. ಈ ಕಾರಣಕ್ಕಾಗಿ “ಹಿಂಡೆಕುಳ್ಳು” ಮಹತ್ವದ ಸಂಕಲನವೆನಿಸುತ್ತದೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತಾ ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

    -ಉದಯ ಇಟಗಿ