Demo image Demo image Demo image Demo image Demo image Demo image Demo image Demo image

ಮಂಜು ಮುಸುಕಿದ ಒಂದು ಶಾಮಲ ಸಂಜೆ

  • ಸೋಮವಾರ, ಮೇ 18, 2009
  • ಬಿಸಿಲ ಹನಿ
  • ಆತ್ಮೀಯರೆ,
    ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ ತುಂಬಾ ಮನೆಮಾತಾಗಿಬಿಟ್ಟ. ಈತ ನಾಲ್ಕು ಸಾರಿ ಕವನ ರಚನೆಗಾಗಿ ಪ್ರತಿಷ್ಟಿತ ಪುಲ್ಟಿಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಅದರಲ್ಲಿ ಮೊಟ್ಟ ಮೊದಲಬಾರಿಗೆ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡ “New Hampshire” ಎನ್ನುವ ಕವನ ಸಂಕಲನದಿಂದ ಈ ಕವನವನ್ನು ಆಯ್ದು ಕೊಳ್ಳಲಾಗಿದೆ. ವಿಮರ್ಶಕರು ಇದನ್ನು ಇಂಗ್ಲೀಷ ಸಾಹಿತ್ಯದ “masterpiece” ಎಂದು ಗುರುತಿಸುತ್ತಾರಲ್ಲದೆ ಸ್ವತಃ ಕವಿಯು ಸಹ ತಾನು ಬರೆದ ಕವನಗಳಲ್ಲಿ ಅತ್ಯಂತ ಹೆಚ್ಚು ತೃಪ್ತಿ ತಂದುಕೊಟ್ಟ ಕವನವಿದಾಗಿದೆಯೆಂದು ಭಾವಿಸಿದ್ದಾನೆ.

    ಈ ಕವನ ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಇವೆರಡರ ನಡುವೆ ನಡೆವ ತುಮುಲಕ್ಕೆ ಹೆಸರಾಗಿದೆ. ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗಳ ನಡುವಿನ ಹೋರಾಟದಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿದಾಗ ಕೊನೆಗೆ ಸೌಂದರ್ಯ ಪ್ರಜ್ಞೆಗಿಂತ ಕರ್ತವ್ಯ ಪ್ರಜ್ಞೆಯೇ ಜೀವನದಲ್ಲಿ ಮುಖ್ಯವಾಗುತ್ತದೆ ಎನ್ನುವದನ್ನು ಕವನ ಒತ್ತಿ ಹೇಳುತ್ತದೆ. ಅದು ಕವನದ ಕೊನೆಯ ಸಾಲುಗಳಲ್ಲಿ ವ್ಯಕ್ತವಾಗಿದೆ. ಸಾಂಕೇತಿಕವಾಗಿ ಬರುವ ಕವನದ ಕೊನೆಯ ಸಾಲುಗಳೇ ಅದರ ಜೀವಾಳ. ಇಲ್ಲಿ “sleep” ಎನ್ನುವದು ಸಾವನ್ನು ಸಂಕೇತಿಸುತ್ತದೆ. ಅಂದರೆ ನಾವು ಸಾಯುವದಕ್ಕಿಂತ ಮುಂಚೆ ಮುಗಿಸಬೇಕಾದ ಕರ್ತ್ಯವ್ಯಗಳು ಬಹಳಷ್ಟಿರುತ್ತವೆ; ಅವುಗಳನ್ನು ಮಾಡಿ ಮುಗಿಸಲೇಬೇಕು ಎನ್ನುವದನ್ನು ಹೇಳುತ್ತದೆ. ಜೀವನದಲ್ಲಿ ಕವಿಗೆ ಸುಂದರ ಕಾಡಿನ ಆಕರ್ಷಣೆಯಿದ್ದಂತೆ ನಮ್ಮೆಲ್ಲರಿಗೂ ಬೇರೆ ಬೇರೆ ಆಕರ್ಷಣೆಗಳಿರುತ್ತವೆ ಅವುಗಳನ್ನು ಮೀರಿ ಕರ್ತ್ಯವ್ಯ ಪ್ರಜ್ಞೆಯೆಡೆಗೆ ಗಮನ ಕೊಡಬೇಕೆಂದು ಕವಿ ಹೇಳುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿ http://www.enotes.com/poetry-criticism/stopping-by-woods-snowy-evening-robert-frost

    ವಿಮರ್ಶಕರಷ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ಗಣ್ಯ ವ್ಯಕ್ತಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅಂಥವರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಲ್ಲೊಬ್ಬರಾದ ಜಾನ್. ಎಫ್. ಕೆನಡಿ ಹಾಗೂ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂವರು ಸೇರಿದ್ದಾರೆ. ಸದಾ ಕರ್ತವ್ಯ ಪ್ರಜ್ಞೆಯನ್ನೇ ಜ್ಞಾಪಿಸುವ ಕೊನೆಯ ಸಾಲುಗಳನ್ನು ಈ ಇಬ್ಬರು ಗಣ್ಯರು ತಮ್ಮ ಟೇಬಲ್ ಮೇಲೆ ಬರಿಸಿಟ್ಟಿಕೊಂಡಿದ್ದರು.
    “The woods are lovely, dark, and deep,
    But I have promises to keep,
    And miles to go before I sleep,
    And miles to go before I sleep.”

    ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಇದನ್ನು ಬೇರೆ ಬೇರೆ ತರಗತಿಗಳಿಗೆ ಬೇರೆ ಬೇರೆ ಸ್ತರಗಳಲ್ಲಿ ಪಾಠ ಮಾಡಿದ್ದೇನೆ. ನಿಮ್ಮಲ್ಲೂ ಯಾರಾದರೊಬ್ಬರು ಇದನ್ನು ಈಗಾಗಲೇ ಯಾವುದೇ ತರಗತಿಯಲ್ಲಾದರು ಓದಿರಬಹುದು. ಇದು ನನ್ನ ಮೆಚ್ಚಿನ ಕವನಗಳಲ್ಲಿ ಒಂದು. ಅದರ ಭಾವಾನುವಾದ ಇಲ್ಲಿದೆ. ಓದಿ ಅಭಿಪ್ರಾಯ ತಿಳಿಸಿ. Happy Reading!

    ಯಾರ ವನವಿದು ಯಾರ ಕಾಡಿದೆಂದು ನಾನೆಣಿಸಿ ಹೇಳಬಲ್ಲೆ
    ಅವನ ಮನೆ ಇಲ್ಲೋ ಎಲ್ಲೋ ಹತ್ತಿರದ ಹಳ್ಳಿಯಲ್ಲಿದೆ
    ಕಾಣಲಾರದವನಿಗೆ ನಾನಿಲ್ಲಿ ಕ್ಷಣಹೊತ್ತು ತಂಗಿ
    ಮಂಜು ಮುಸುಕಿದವನ ಕಾಡನ್ನು ಮನದಣಿಯುವದು

    ನನ್ನ ಕಿರುಗುದರೆಗದೋ ಅನಿಸಿರಬಹುದು ಕೆಲಸ ಕೆಟ್ಟಿತೆಂದು
    ಹತ್ತಿರದೆಲ್ಲೆಲ್ಲೂ ತೋಟದ ಮನೆಯಿರದುದೆಡೆ ತಂಗಿರುವದು ಕಂಡು
    ಅತ್ತ ಅಂದದ ಕಾಡು ಇತ್ತ ಚೆಂದದ ಹಿಮಗೆರೆ
    ನಡುವೆ ನಿಂತಿರುವೆ ನಾ ಮೈಮರೆತು ಇಳಿಸಂಜೆ ಹೊತ್ತು

    ಬಾರಿಸುವನವನು ಕಟ್ಟಿನ ಗಂಟೆಯನು ಕತ್ತು ಕುಣಿಸಿ
    ಹೊತ್ತಲ್ಲದ ಹೊತ್ತಿನಲ್ಲಿ ತೊಂದರೆಯೇನಾದರಾಗಿದೆಯೆಂದರಿಯಲು
    ಇತ್ತ ಎಚ್ಚರಿಕೆಯ ಗಂಟೆ ಅತ್ತ ಹಿತವಾದ ತಂಗಾಳಿ
    ನಡುವೆ ನಿಂತಿರುವೆ ನಾ ಹಿಮದ ರಾಶಿಯ ಮೇಲೆ

    ಹಸಿರ ಕಾಡು ಬಸಿರ ಕತ್ತಲು ಗೂಢ ನಿಗೂಢವಾಗಿದೆ
    ಆದರೆ ನಾನಿತ್ತ ವಚನಗಳನು ಪೂರೈಸಲೇಬೇಕಿದೆ
    ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ
    ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ

    ಇಂಗ್ಲೀಷ ಮೂಲ: ರಾಬರ್ಟ್ ಫ್ರಾಸ್ಟ್
    ಭಾವಾನುವಾದ: ಉದಯ ಇಟಗಿ
    ಚಿತ್ರಕೃಪೆ: www.flickr.com/Sunset by Romeo Koitmae

    17 ಕಾಮೆಂಟ್‌(ಗಳು):

    sunaath ಹೇಳಿದರು...

    ಉದಯ,
    ಈ ಕವನದ ಜನಪ್ರಿಯ ಕೊನೆಯ ನುಡಿಯನ್ನು ಮಾತ್ರ ಓದಿದ್ದ ನನಗೆ, ಪೂರ್ಣ ಕವನದ ಅನುವಾದವನ್ನು ಓದಿ ಖುಶಿಯಾಯಿತು. ಅಲ್ಲದೆ, ಕವನದ ಪೂರಕ ಮಾಹಿತಿಯನ್ನೂ ಸಹ ನೀವು ಕೊಟ್ಟಿರುವದು ಚೆನ್ನಾಗಿದೆ.
    ಸಮರ್ಥ ಅನುವಾದಕ್ಕೆ ಅಭಿನಂದನೆಗಳು.

    Unknown ಹೇಳಿದರು...

    ಚೆನ್ನಾಗಿದೆ... ಇಂಗ್ಲಿಷ್ ಸಾಹಿತ್ಯವನ್ನು ಕನ್ನಡಕ್ಕೆ ತಂದು ನಮ್ಮೊಡನೆ ಹಂಚಿಕೊಳ್ಳುತ್ತಿರುವುದಕ್ಕೆನಿಮಗೆ ಧನ್ಯವಾದಗಳು... ನನಗೆ ಈ ಸಾಲು ಯಾಕೋ ಗೊಜಲಾಗಿದ್ದಂತೆ ಅನ್ನಿಸಿತು.."ಮಂಜು ಮುಸುಕಿದವನ ಕಾಡನ್ನು ಮನದಣಿಯುವದು".. ತಪ್ಪು ತಿಳಿಯಬೇಡಿ..ಈ ಸಾಲು ನನಗೆ ಅರ್ಥವಾಗಲಿಲ್ಲ...

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ಕವನದ ಪೂರಕ ಮಾಹಿತಿಯಲ್ಲದೆ ಬರಿ ಕವನವನ್ನು ಓದುವದರಿಂದ ಬಹಳಷ್ಟು ಜನಕ್ಕೆ ಅರ್ಥವಾಗಲಾರದು ಎಂದುಕೊಂಡು ಆ ಮಾಹಿತಿಯನ್ನು ಕೊಟ್ಟೆ.Anyway, thanks for your nice comment.

    ಬಿಸಿಲ ಹನಿ ಹೇಳಿದರು...

    ರವಿಕಾಂತವರೆ,
    ನಿಮ್ಮ ಗೋಜಲು ಸಾಲಿನ ಅರ್ಥವಿಷ್ಟೆ- ಮಂಜಿನಿಂದ ತುಂಬಿ ಹೋಗಿರುವ ಆ ಒಡೆಯನ ಕಾಡನ್ನು ನೋಡಿ ಆಸ್ವಾದಿಸುವದು ಅಂದರೆ ಖುಶಿಪಡುವದು ಎಂದರ್ಥ. Thanks for your nice comment.

    Godavari ಹೇಳಿದರು...

    ಉದಯ್ ಅವರೇ,

    ರಾಬರ್ಟ್ ಫ್ರಾಸ್ಟ್ ನನ್ನ ಮೆಚ್ಚಿನ ಕವಿಗಳಲ್ಲಿ ಒಬ್ಬರು.. ಅವರ 'Road not taken' ಮತ್ತು 'Fire and Ice' ಕವನಗಳು ತುಂಬಾ ಇಷ್ಟವಾಗುತ್ತವೆ.. ಅವರ ಈ ಸುಂದರ ಕವನದ ಅನುವಾದ ನೋಡಿ ತುಂಬಾ ಸಂತೋಷವಾಯಿತು.. ಅನುವಾದವನ್ನು ಅಷ್ಟೇ ಸುಂದರವಾಗಿ ಮಾಡಿದ್ದಿರಿ... ಅಭಿನಂದನೆಗಳು..

    ನೀವು ಹಿಂದೆ ಪೋಸ್ಟ್ ಮಾಡಿದ್ದ ಉಳಿದ ಕವನಗಳನ್ನೂ ಮತ್ತು ಕೆಲವು ಅನುವಾದಗಳನ್ನೂ ಓದಿದೆ.. ಎಲ್ಲವೂ ಇಷ್ಟವಾದು..

    -ಗೋದಾವರಿ.

    Godavari ಹೇಳಿದರು...

    ಉದಯ್ ಅವರೇ,

    ರಾಬರ್ಟ್ ಫ್ರಾಸ್ಟ್ ನಾನು ತುಂಬಾ ಮೆಚ್ಚಿದ ಕವಿ. ಅವರ 'Road not taken' ಮತ್ತು 'Fire and Ice' ಕವನಗಳು ಬಹುದಿನಗಳವರೆಗೆ ಕಾಡಿದ್ದವು. ಅವರ ಈ ಕವನದ ಅನುವಾದ ನೋಡಿ ತುಂಬಾ ಆನಂದವಾಯಿತು. ಅನುವಾದವೂ ಮೂಲ ಕವನದಂತೆ ಸುಂದರವಾಗಿ ಮೂಡಿಬಂದಿದೆ.. ಅಭಿನಂದನೆಗಳು..

    ನೀವು ಹಿಂದೆ ಪೋಸ್ಟ್ ಮಾಡಿದ ಅನೇಕ ಅನುವಾದಿತ ಕವನಗಳನ್ನು ಓದಿದೆ.. ಇಷ್ಟವಾದವು..

    -ಗೋದಾವರಿ

    ಶಿವಪ್ರಕಾಶ್ ಹೇಳಿದರು...

    nice one uday.

    ಬಿಸಿಲ ಹನಿ ಹೇಳಿದರು...

    ಗೋದಾವರಿಯವರೆ,
    ಮೊಟ್ಟಮೊದಲಬಾರಿಗೆ ನನ್ನ ಬ್ಲಾಗಿಗೆ ಭೇಟಿ ಕೊಟ್ಟಿರುವಿರಿ. ನಿಮಗೆ ಸ್ವಾಗತ. ರಾಬರ್ಟ್ ಫ್ರಾಸ್ಟ್ ನಿಮಗೆ ನನಗೆ ಮಾತ್ರವಲ್ಲ ಬಹಳ ಜನರ ಮೆಚ್ಚಿನ ಕವಿಯೂ ಆಗಿದ್ದಾನೆ. ಅವನ 'Road not taken' ಮತ್ತು 'Fire and Ice' ಜೊತೆಗೆ "Mending Wall", "Silken Tent" ಇನ್ನೂ ಅನೇಕ ಕವನಗಳು ನಮ್ಮನ್ನು ಕಾಡುವದು ಸಹಜ. ಶೀಘ್ರದಲ್ಲಿಯೇ 'Road not taken' ಪದ್ಯವನ್ನು ಅನುವಾದಿಸಿ ಪ್ರಕಟಿಸುತ್ತೇನೆ. ಕಾಯುತ್ತಿರಿ.
    ನನ್ನ ಈ ಪದ್ಯದ ಜೊತೆಗೆ ಬೇರೆ ಅನುವಾದಗಳು ಇಷ್ಟವಾಗಿದ್ದು ಖುಶಿಯಾಯಿತು.
    ಆಗಾಗ ಭೇಟಿಕೊಡುತ್ತಿರಿ. ವಂದನೆಗಳು.

    ಬಿಸಿಲ ಹನಿ ಹೇಳಿದರು...

    Thanks Shivaprakash

    shivu.k ಹೇಳಿದರು...

    ಉದಯ್ ಸರ್,

    ರಾಬರ್ಟ್ ಫ್ರಾಸ್ಟ್ ರವರ ಕವನವನ್ನು ಸುಂದರವಾಗಿ ಅನುವಾದಿಸಿದ್ದೀರಿ...ಅವನ್ನು ಓದಿದಾಗ ಮನಸ್ಸಿಗೆ ಖುಷಿಯಾಯಿತು....ಕೊನೆಯ ನಾಲ್ಕು ಸಾಲುಗಳನ್ನು ನಾನು ಸುಂದರವಾದ ಫಾಂಟುಗಳಲ್ಲಿ ಬರೆದು ಅದನ್ನು ಸ್ಕ್ರೀನ್ ಸೇವರ್ ಮಾಡಿಕೊಳ್ಳುತ್ತೇನೆ....ಪ್ರತಿದಿನ ನೋಡುತ್ತಿದ್ದರೆ ನನ್ನ ಜವಾಬ್ದಾರಿಯನ್ನು ಎಚ್ಚರಿಸುವಂತಿದೆ ಅವು...

    ಧನ್ಯವಾದಗಳು.

    Ittigecement ಹೇಳಿದರು...

    ಉದಯ್.....

    ಸುಂದರವಾದ, ಅರ್ಥಗರ್ಭಿತ ಕವನ...!
    ನಿಮ್ಮ ಭಾವಾನುವಾದ ಸಹಜವಾಗಿರುತ್ತದೆ...

    ಇಂಗ್ಲೀಷ್ ಸಾಹಿತ್ಯ ಗೊತ್ತಿರದ ನನಗೆ ..
    ನಿಮ್ಮ ಅನುವಾದಿಂದ ಪರಿಚಯವಾಗುತ್ತಿದೆ..
    ಇನ್ನಷ್ಟು ಪರಿಚಯ ಮಾಡಿಸಿ...

    ಇಷ್ಟವಾಯಿತು...

    ಬಿಸಿಲ ಹನಿ ಹೇಳಿದರು...

    ಶಿವು ಅವರೆ,
    ಕೊನೆಯ ಸಾಲುಗಳನ್ನುನಿಮ್ಮ ಕಂಪ್ಯೂಟರ‍್ನ ಸ್ಕ್ರೀ ಸೇವರ್ ಆಗಿ ಮಾಡಿಕೊಳ್ಳುತ್ತಿರುವದು ಕೇಳಿ ಖುಶಿಯಾಯಿತು. ಸಂಗ್ರಹಯೋಗ್ಯ ಸಾಲುಗಳವು.

    ಬಿಸಿಲ ಹನಿ ಹೇಳಿದರು...

    ಪ್ರಕಾಶ್‍ವರೆ,
    ಖಂಡಿತ ಇನ್ನಷ್ಟು ಪರಿಚಯ ಮಾಡಿಸುತ್ತೇನೆ.

    PARAANJAPE K.N. ಹೇಳಿದರು...

    ತಡವಾಗಿ ಬ೦ದೆ,ಆ೦ಗ್ಲ ಕವಿತೆಯ ಕನ್ನಡ ಭಾವಾನುವಾದ ಅತ್ಯಪೂರ್ವವಾಗಿದೆ.

    ಬಿಸಿಲ ಹನಿ ಹೇಳಿದರು...

    Thank you sir.

    ಧರಿತ್ರಿ ಹೇಳಿದರು...

    ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು..ಇಂಗ್ಲೀಷ್ ಸಾಹಿತ್ಯದ ಗಂಧ-ಗಾಳಿಯಿಲ್ಲದ ನನ್ನಂಥೋಳಿಗೆ ನಿಮ್ಮ ಬ್ಲಾಗ್ ತುಂಬಾ ತಿಳಿಸಿಕೊಟ್ಟಿದೆ ಸರ್.
    -ಧರಿತ್ರಿ

    ಬಿಸಿಲ ಹನಿ ಹೇಳಿದರು...

    Thank you Dharitri.