Demo image Demo image Demo image Demo image Demo image Demo image Demo image Demo image

ವಿದಾಯ

  • ಮಂಗಳವಾರ, ಅಕ್ಟೋಬರ್ 01, 2013
  • ಬಿಸಿಲ ಹನಿ

  • ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು. ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ರಾತ್ರಿ ಹತ್ತು ಘಂಟೆ ಆಗುವದಕ್ಕೆ ಕೆಲವೇ ಕೆಲವು ನಿಮಿಷಗಳುಮಾತ್ರ ಬಾಕಿಯಿದ್ದವು. ಮೈ ಕೊರೆಯುವಂಥ ಚಳಿ! ಜೊತೆಗೆ ಸಣ್ಣಗೆ ಬೀಸುತ್ತಿದ್ದ ಶೀತಗಾಳಿ ಶೀಘ್ರದಲ್ಲಿಯೇ ತನ್ನೊಟ್ಟಿಗೆ ಮಳೆಯನ್ನೂ ಸಹ ಹೊತ್ತು ತರುವ ಮುನ್ಸೂಚನೆಯನ್ನುನೀಡಿದ್ದರಿಂದ ಅಲ್ಲಿ ಒಂದೇ ಒಂದು ನರಪಿಳ್ಳಿಯೂ ಇರಲಿಲ್ಲ. ಹೆಚ್ಚುಕಮ್ಮಿ ಎಲ್ಲ ರಸ್ತೆಗಳು ನಿರ್ಜನವಾಗಿದ್ದವು.
    ತನ್ನ ದೊಣ್ಣೆಯನ್ನು ಗಾಂಭೀರ್ಯದಿಂದ ಆ ಕಡೆಯಿಂದ-ಈ ಕಡೆಗೆ ಈ ಕಡೆಯಿಂದ-ಆ ಕಡೆಗೆ ಕೌಶಲ್ಯಮಯವಾಗಿ ತಿರುಗಿಸುತ್ತಾ, ಬಾಗಿಲಿನಿಂದ ಬಾಗಿಲಿಗೆ ನಡೆಯುತ್ತಾ, ಆಗೊಮ್ಮೆ ಈಗೊಮ್ಮೆ ತನ್ನ ಎರಡೂ ಕಣ್ಣುಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಯಿಸುತ್ತಾ, ತನ್ನ ಕಟ್ಟುಮಸ್ತಾದ ದೇಹದೊಂದಿಗೆ ಗತ್ತಿನಿಂದ ನಡೆಯುತ್ತಿದ್ದ ಆ ಪೋಲಿಸ್ ಅಧಿಕಾರಿಯು ನಗರದ ಕಳ್ಳಕಾಕರನ್ನು ಸೆದೆಬಡಿದು ಶಾಂತಿಯನ್ನು ಕಾಪಾಡಲು ಬಂದಿರುವ ರಕ್ಷಕನಂತೆ ಕಂಡುಬಂದನು. ಅಷ್ಟೊತ್ತಿಗಾಗಲೇ ಬಹುತೇಕ ಎಲ್ಲ ಅಂಗಡಿ-ಮುಗ್ಗಟ್ಟುಗಳು ಬಾಗಿಲು ಮುಚ್ಚಿದ್ದವು. ಆದರೆ ಅಲ್ಲೊಂದು ಇಲ್ಲೊಂದು ಸಿಗಾರು ಅಂಗಡಿಯೋ ಅಥವಾ ಟೀ ಅಂಗಡಿಯೋ ಮಾತ್ರ ಇನ್ನೂ ಬಾಗಿಲು ತೆರೆದೇ ಇದ್ದವು.
    ಹೀಗೇ ನಡೆಯುತ್ತಾ ನಡೆಯುತ್ತಾ ಆ ಪೋಲಿಸ್ ಅಧಿಕಾರಿಯು ಒಂದು ನಿರ್ಧಿಷ್ಟ ಬೀದಿಗೆಬಂದನು. ಅಲ್ಲಿ ಅರ್ಧ ದಾರಿಯನ್ನು ಕ್ರಮಿಸಿರಲಿಕ್ಕಿಲ್ಲ, ಹಠಾತ್ತಾಗಿ ತನ್ನ ನಡಿಗೆಯನ್ನು ನಿಧಾನಗೊಳಿಸಿದನು. ಅಲ್ಲಿ ರಸ್ತೆಗಂಟಿಕೊಂಡಂತೆ ಹಾರ್ಡ್‍ವೇರ್ ಸ್ಟೋರೊಂದು ಇತ್ತು. ಅದರ ಬಾಗಿಲ ಬಳಿ ವ್ಯಕ್ತಿಯೊಬ್ಬ ತನ್ನ ಬಾಯಲ್ಲಿ ಇನ್ನೂ ಹೊತ್ತಿಸದ ಸಿಗಾರೊಂದನ್ನಿಟ್ಟುಕೊಂಡು ಗೋಡೆಗೊರಗಿಕೊಂಡು ನಿಂತುಕೊಂಡಿದ್ದು ಕಾಣಿಸಿತು. ಆ ಬಾಗಿಲ ಬಳಿ ಕತ್ತಲು ಆವರಿಸಿದ್ದರಿಂದ ಅಲ್ಲಿ ಸರಿಯಾಗಿ ಏನೂ ಕಾಣುತ್ತಿರಲಿಲ್ಲ! ಆದರೂ ಆ ಪೋಲಿಸ್ ಅಧಿಕಾರಿಯು ಅನುಮಾನದಿಂದ ಆ ವ್ಯಕ್ತಿ ಯಾರಿರಬಹುದೆಂದು ತಿಳಿದುಕೊಳ್ಳಲು ಅವನ ಬಳಿ ಬಂದನು. ಅಷ್ಟರಲ್ಲಿ ಆ ವ್ಯಕ್ತಿಯು ತನ್ನ ಸಿಗಾರನ್ನು ಹೊತ್ತಿಸಲು ಕಡ್ಡಿಯೊಂದನ್ನು ಗೀರಿದ. ಹಾಗೆ ಕಡ್ಡಿ ಗೀರಿದಾಗ ಉಂಟಾದ ಮಂದ ಬೆಳಕಲ್ಲಿ ಆ ವ್ಯಕ್ತಿಯ ಪೇಲವ ಮುಖ, ಚೌಕ-ದವಡೆ, ಚೂಪು ಕಂಗಳು ಹಾಗೂ ಅವನ ಹುಬ್ಬಿನ ಮೇಲೆ ಉಂಟಾದ ಗಾಯದ ಗುರುತುಗಳು ಆ ಪೋಲಿಸಿನವನಿಗೆ ಸ್ಪಷ್ಟವಾಗಿ ಕಾಣಿಸಿತು. ಅವನು ಸ್ಕಾರ್ಫಿನ್ನೊಂದನ್ನು ಸುತ್ತಿಕೊಂಡಿದ್ದು ಅದಕ್ಕೆ ದೊಡ್ದದಾದ ವಜ್ರದ ಹರಳೊಂದನ್ನು ಅಡ್ಡಾದಿಡ್ಡಿಯಾಗಿ ಸಿಕ್ಕಿಸಲಾಗಿತ್ತು.    
    ಪೋಲೀಸಿನವನನ್ನು ನೋಡುತ್ತಿದ್ದಂತೆಯೇ ಆ ವ್ಯಕ್ತಿಯೇ “ಇಟ್ಸ್ ಆಲ್ ರೈಟ್ ಆಫಿಸರ್.” ಎಂದು ಆ ಅಧಿಕಾರಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾ ಮಾತನಾಡಿದ “ನಾನಿಲ್ಲಿ ನನ್ನ ಗೆಳೆಯನಿಗಾಗಿ ಕಾಯುತ್ತಿರುವೆ. ಇದು ಇಪ್ಪತ್ತು ವರ್ಷಗಳ ಹಿಂದೆ ನಾವಿಬ್ಬರೂ ಮಾಡಿಕೊಂಡ ಒಪ್ಪಂದ. ನಿಮಗೆ ತಮಾಷೆ ಅನಿಸುತ್ತಿರಬೇಕಲ್ಲವೇ? ಸರಿ, ನಾನೇ ನಿಮಗೆ ಎಲ್ಲವನ್ನು ಬಿಡಿಸಿ ಹೇಳುತ್ತೇನೆ. ಬಹಳ ವರ್ಷಗಳ ಹಿಂದೆ ಈ ಸ್ಟೋರ್ ಇದ್ದ ಜಾಗದಲ್ಲಿಯೇ ಒಂದು ರೆಸ್ಟೋರೆಂಟ್ ಇತ್ತು. ಆ ರೆಸ್ಟೋರೆಂಟ್ ಹೆಸರು ‘ಬಿಗ್ ಜೋ ಬ್ರ್ಯಾಡಿ’ ರೆಸ್ಟೋರೆಂಟ್ ಎಂದು.
    “ಹೌದು, ನಿಜ! ಆದರೆ ಐದು ವರ್ಷಗಳ ಹಿಂದೆಯಷ್ಟೇ ಅದನ್ನು ಕೆಡುವಲಾಯಿತು.” ಪೋಲೀಸಿನವನು ಹೇಳಿದ.
    “ಇವತ್ತಿಗೆ ಸರಿಯಾಗಿ ಇಪ್ಪತ್ತು ವರ್ಷಗಳಾದವು ನಾನು ಮತ್ತು ಜಿಮ್ಮಿ ವೆಲ್ಸ್ ಈ ಜೋ ಬ್ರ್ಯಾಡಿ ರೆಸ್ಟೋರೆಂಟ್‍ನಲ್ಲಿ ಊಟ ಮಾಡಿ” ಆ ವ್ಯಕ್ತಿ ಹೇಳಿದ. “ಜಿಮ್ಮಿ ವೆಲ್ಸ್! ಜಿಮ್ಮಿ ವೆಲ್ಸ್ ನನ್ನ ಗೆಳೆಯ!ಜೀವದ ಗೆಳೆಯ!! ಒಳ್ಳೆ ಸಂಗಾತಿ! ಒಳ್ಳೆ ಮನುಷ್ಯ! ನಾವಿಬ್ಬರೂ ಹುಟ್ಟಿ ಬೆಳೆದಿದ್ದು ಇಲ್ಲೇ ನ್ಯೂಯಾರ್ಕಿನಲ್ಲಿ. ಹೆಚ್ಚುಕಮ್ಮಿ ಅಣ್ಣ-ತಮ್ಮಂದಿರಂತೆಯೇ ಬೆಳೆದೆವು. ನನಗಾಗ ಹದಿನೆಂಟು, ಜಿಮ್ಮಿಗೆ ಇಪ್ಪತ್ತು. ಮಾರನೆಯ ದಿನ ನಾನು ನನ್ನ ಅದೃಷ್ಟವನ್ನು ಅರಸಿ ಪಶ್ಚಿಮದ ಕಡೆ ಹೋಗಬೇಕಿತ್ತು. ಆದರೆ ಜಿಮ್ಮಿಯನ್ನು ನ್ಯೂಯಾರ್ಕಿನಿಂದ ಹೊರಗೆಳೆಯಲು ಸಾಧ್ಯವಿರಲಿಲ್ಲ. ಏಕೆಂದರೆ ಅವನ ಪಾಲಿಗೆ ನ್ಯೂಯಾರ್ಕ್‍ವೊಂದೇ ಒಂದು ಈ ಭೂಮಿಯ ಮೇಲಿದ್ದ ಸ್ಥಳವಾಗಿತ್ತು. ವೆಲ್, ಆವತ್ತು ರಾತ್ರಿ ನಾವಿಬ್ಬರು ನಿರ್ಧರಿಸಿದೆವು; ಇವತ್ತಿಗೆ ಸರಿಯಾಗಿ ಇಪ್ಪತ್ತು ವರ್ಷಗಳ ನಂತರ ನಾವಿಬ್ಬರು ಏನೇ ಆಗಿದ್ದರೂ, ಹೇಗೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಪರ್ವಾಗಿಲ್ಲ ಇದೇ ಸಮಯಕ್ಕೆ ಇದೇ ಜಾಗದಲ್ಲಿ ಮತ್ತೆ ಇಬ್ಬರೂ ಬಂದು ಭೇಟಿಯಾಗಬೇಕೆಂದು. ಆ ಇಪ್ಪತ್ತು ವರ್ಷಗಳಲ್ಲಿ ನಾವಿಬ್ಬರು ಮಾಡುವ ಕೆಲಸಗಳು ನಮ್ಮ-ನಮ್ಮ ಹಣೆಬರಹ ಮತ್ತು ಅದೃಷ್ಟವನ್ನು ಖುಲಾಯಿಸಲಿದ್ದವು.”
    “ವೇರಿ ಇಂಟರೆಸ್ಟಿಂಗ್!” ಪೋಲಿಸಿನವನು ಹೇಳಿದ. “ನಿಮ್ಮಿಬ್ಬರ ಭೇಟಿಯಲ್ಲಿ ತುಂಬಾ ದಿನಗಳ ಅಂತರವಿದೆ. ಅಂದಹಾಗೆ, ನೀನು ಇಲ್ಲಿಂದ ಹೋದ ನಂತರ ನಿನ್ನ ಗೆಳೆಯ ಏನಾದ? ಅವನ ಜೊತೆ ನೀನು ಸಂಪರ್ಕದಲ್ಲಿರಲಿಲ್ವೆ?”
    “ವೆಲ್, ಸ್ವಲ್ಪ ಕಾಲ ನಾವು ಒಬ್ಬರಿಗೊಬ್ಬರು ಪತ್ರ ಬರೆಯುವದರ ಮೂಲಕ ಸಂಪರ್ಕದಲ್ಲಿದ್ದೆವು.” ಆ ವ್ಯಕ್ತಿ ಹೇಳುತ್ತಾ ಹೋದ. “ಆದರೆ ಆಮೇಲೇನಾಯ್ತೋ ಗೊತ್ತಿಲ್ಲ ಒಂದೆರೆಡು ವರ್ಷಗಳ ನಂತರ ಇದ್ದಕ್ಕಿದ್ದಂತೆ ನಮ್ಮಿಬ್ಬರ ನಡುವೆ ಸಂಪರ್ಕ ಕಡಿದುಹೋಯಿತು. ಯೂ ಸೀ, ಪಶ್ಚಿಮ ಅನೇಕ ಅವಕಾಶಗಳ ಸಾಗರ! ಹಾಗೆಂದೇ ನಾನು ಅಲ್ಲಿ ಸಿಕ್ಕ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಬಹಳ ಬೇಗನೆ ಮೇಲೆ ಬಂದೆ. ನನ್ನ ಕೆಲಸದಲ್ಲಿ ಬಿಜಿಯಾದೆ. ಆದರೆ ಜಿಮ್ಮಿ ಏನಾದನೋ ಗೊತ್ತಿಲ್ಲ! ಅವನು ಬದುಕಿದ್ದರೆ ಖಂಡಿತ ಇವತ್ತು ನಾನಿರುವಲ್ಲಿಗೆ ಬಂದು ಭೇಟಿ ಮಾಡುತ್ತಾನೆ. ಏಕೆಂದರೆ ಜಿಮ್ಮಿ ತನ್ನ ಸತ್ಯಕ್ಕೆ ಹಾಗೂ ಪ್ರಾಮಾಣಿಕತೆಗೆ ಹೆಸರಾದವನು. ಅವನು ಹಾಗೆಲ್ಲಾ ಮಾತಿಗೆ ತಪ್ಪುವನಲ್ಲ. ಖಂಡಿತ ಈ ದಿನವನ್ನು ಅವನು ಮರೆತಿರುವದಿಲ್ಲ. ನಾನೇನೋ ಸಾವಿರಾರು ಮೈಲಿಗಳಿಂದ ನನ್ನ ಹಳೆ ಗೆಳೆಯನನ್ನು ನೋಡಲು ಇಷ್ಟು ದೂರ ಬಂದಿದ್ದೇನೆ. ಅವನೂ ಬಂದರೆ ಚನ್ನಾಗಿರುತ್ತದೆ. ಅಲ್ವಾ?” 
    ಕಾಯುತ್ತಿದ್ದ ವ್ಯಕ್ತಿ ಸಮಯ ನೋಡಲು ತನ್ನ ವಾಚನ್ನು ಹೊರತೆಗೆದನು. ಅದರ ಡಯಲ್ ಸಣ್ಣಸಣ್ಣ ವಜ್ರದ ಹರಳುಗಳಿಂದ ಅಲಂಕೃತಗೊಂಡಿತ್ತು.
    “ಹತ್ತು ಘಂಟೆಗೆ ಮೂರು ನಿಮಿಷ ಮಾತ್ರ ಬಾಕಿಯಿದೆ.” ಹಾಗಂತಾ ಅವನು ಹೇಳಿದ. “ನಾವಿಬ್ಬರೂ ಈ ರೆಸ್ಟೋರೆಂಟ್‍ನ ಬಾಗಿಲಿನಿಂದ ಒಬ್ಬರೊನ್ನೊಬ್ಬರು ಅಗಲಿದಾಗ ಸಮಯ ಸರಿಯಾಗಿ ರಾತ್ರಿ ಹತ್ತು ಘಂಟೆಯಾಗಿತ್ತು.”
    “ಗುಡ್, ಹಾಗಾದರೆ ಪಶ್ಚಿಮ ದೇಶ ನಿನ್ನನ್ನು ಚನ್ನಾಗಿಯೇ ನೋಡಿಕೊಂಡಿದೆ ಅಂತಾಯಿತು. ಅಲ್ವೇ?” ಪೋಲಿಸ್ ಅಧಿಕಾರಿ ಕೇಳಿದ. 
    “ಯೆಸ್, ಚನ್ನಾಗಿಯೇ ನೋಡಿಕೊಂಡಿದೆ. ಒಳ್ಳೆ ಕೆಲಸ. ಒಳ್ಳೆ ಸಂಬಳ. ಒಳ್ಳೆ ದುಡ್ಡು ಗಳಿಸಿದ್ಡೇನೆ. ಆದರೆ ಜಿಮ್ಮಿ? ಬೇಕಾದರೆ ಬೆಟ್ ಕಟ್ಟುತ್ತೇನೆ, ಜಿಮ್ಮಿ ಖಂಡಿತ ನನ್ನ ಅರ್ಧದಷ್ಟು ಕೂಡಾ ಸಂಪಾದಿಸಿರುವದಿಲ್ಲ. ಏಕೆಂದರೆ ಅವನು ಮುಂಚಿನಿಂದಲೂ ಒಂಥರಾ ಪೆದ್ದು! ಬುದ್ಧಿಯನ್ನು ಒಂಚೂರು ಉಪಯೋಗಿಸುತ್ತಿರಲಿಲ್ಲ! ಒಳ್ಳೆ ಸಂಗಾತಿಯೇನೋ ಹೌದು! ಆದರೆ ಕತ್ತೆ ಚಾಕರಿ ಮಾಡುವಂಥವನು! ಹೀಗಿದ್ದರೆ ಹೇಗೆ ತಾನೇ ಮೇಲೆ ಬರಲು ಸಾಧ್ಯ? ಆದರೆ ನಾನು ಹಾಗಲ್ಲ. ನನ್ನ ಜಾಣತನವನ್ನುಪಯೋಗಿಸಿಕೊಂಡು ಸದಾ ನನ್ನನ್ನು ನಾನು ಸ್ಪರ್ಧೆಗೊಡ್ಡಿಕೊಂಡು ಸವಾಲುಗಳನ್ನು ಎದುರಿಸುತ್ತಾ ಜೀವನದಲ್ಲಿ ಮುಂದೆ ಬಂದೆ. ನ್ಯೂಯಾರ್ಕಿನಲ್ಲಿ ಜನ ಒಂದು ಕೆಲಸಕ್ಕೆ ಅಂಟಿಕೊಂಡುಬಿಟ್ಟರೆ ಅದಕ್ಕೇ ಅಂಟಿಕೊಂಡುಬಿಡುತ್ತಾರೆ. ಆದರೆ ಪಶ್ಚಿಮದಲ್ಲಿ ಹಾಗಲ್ಲ. ಅಲ್ಲಿ ಬದುಕಲು ಕನಿಷ್ಟ ಎರಡು ಕೆಲಸಗಳನ್ನಾದರೂ ಮಾಡಬೇಕು. ಹೆಜ್ಜೆ ಹೆಜ್ಜೆಗೂ ಸ್ಪರ್ಧೆಯಿರುತ್ತದೆ. ದಿನದ ಇಪ್ಪತ್ನಾಲ್ಕು ಘಂಟೆಯೂ ಎಚ್ಚರದಿಂದ ಕೆಲಸ ಮಾಡಬೇಕು. ಪಶ್ಚಿಮದಲ್ಲಿ ಜೀವನ ಮಾಡುವದೆಂದರೆ ಎರಡು ಕತ್ತಿಯ ಅಲುಗಿನ ಮೇಲೆ ನಡೆದಂತೆ!”
    ಪೋಲೀಸಿನವನು ತನ್ನ ದೊಣ್ಣೆಯನ್ನು ತಿರುಗಿಸುತ್ತಾ ಒಂದೆರೆಡು ಹೆಜ್ಜೆ ಮುಂದೆ ಬಂದನು.
    “ಐ ವಿಲ್ ಬಿ ಆನ್ ಮೈ ವೇ. ಹೋಪ್ ಯುವರ್ ಫ್ರೆಂಡ್ ಕಮ್ಸ್ ಆನ್ ಟೈಮ್.”
    “ಥ್ಯಾಂಕ್ಯೂ ಆಫಿಸರ್.... ಒಂದು ವೇಳೆ ಹೇಳಿದ ಸಮಯಕ್ಕೆ ಅವನು ಬರದೇ ಹೋದರೆ ಇನ್ನೂ ಒಂದರ್ಧ ಘಂಟೆ ಹೆಚ್ಚೇ ಕಾಯುತ್ತೇನೆ...... ಜಿಮ್ಮಿ ಬದುಕಿದ್ದರೆ ಖಂಡಿತ ನನ್ನನ್ನು ಭೇಟಿ ಮಾಡಲು ಬಂದೇ ಬರುತ್ತಾನೆ........ಕೊಟ್ಟ ಮಾತಿಗೆ ಅವನು ತಪ್ಪುವನಲ್ಲ..... ನೀವಿನ್ನು ಹೊರಡಿ ಆಫಿಸರ್!”
    “ಗುಡ್ ನೈಟ್ ಸರ್,” ಎಂದು ಹೇಳುತ್ತಾ ಪೋಲೀಸಿನವನು ಮತ್ತೆ ಗಸ್ತಿನ ಮೇಲೆ ಹೊರಟನು.
    ಅಲ್ಲೀಗ ಸಣ್ಣದಾಗಿ ತುಂತುರು ಮಳೆ ಬೀಳತೊಡಗಿತ್ತು. ಜೊತೆಗೆ ಅಷ್ಟೊತ್ತಿನಿಂದ ಸಣ್ಣಗೆ ಬೀಸುತ್ತಿದ್ದ ಕುಳಿರ್ಗಾಳಿ ಇದೀಗ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿತ್ತು. ಕುಳಿರ್ಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ತಾವು ಹಾಕಿಕೊಂಡಿದ್ದ ಉದ್ದನೆಯ ಕೋಟುಗಳ ಜೇಬುಗಳಲ್ಲಿ ಕೈಗಳನ್ನಿಟ್ಟುಕೊಂಡು ಅವಸರವಸರವಾಗಿ ಮನೆಯತ್ತ ಹೆಜ್ಜೆಹಾಕುತ್ತಿದ್ದರು. ಆದರೆ ಹಾರ್ಡ್‍ವೇರ್ ಅಂಗಡಿಯ ಬಾಗಿಲ ಬಳಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಸಾವಿರಾರು ಮೈಲಿಗಳ ದೂರದಿಂದ ಬಂದಿದ್ದ ವ್ಯಕ್ತಿ ಮಾತ್ರ ಸಿಗಾರನ್ನು ಸೇದುತ್ತಾ ಅವನಿಗಾಗಿ ಕಾಯುತ್ತಾ ಅಲ್ಲೇ ನಿಂತುಕೊಂಡನು.
    ಅವನು ಹಾಗೆ ಕಾಯುತ್ತಾ ನಿಂತು ಇಪ್ಪತ್ತು ನಿಮಿಷಗಳು ಆಗಿದ್ದವೇನೋ! ರಸ್ತೆಯ ಆ ಬದಿಯಿಂದ ಎತ್ತರದ ವ್ಯಕ್ತಿಯೊಬ್ಬ ತನ್ನ ಎರಡೂ ಕಿವಿಗಳನ್ನು ತನ್ನ ಓವರ್ ಕೋಟಿನ ಕಾಲರಿನಿಂದ ಮುಚ್ಚಿಕೊಂಡು ಈ ಬದಿಗೆ ದಾಟಿ ಬರುತ್ತಿರುವದು ಕಾಣಿಸಿತು. ಅವನು ನೇರವಾಗಿ ಹಾರ್ಡವೇರ್ ಅಂಗಡಿಯ ಬಳಿ ಕಾಯುತ್ತಿದ್ದ ವ್ಯಕ್ತಿಯೆಡೆಗೆ ನಡೆದು ಬಂದನು.  
    “ನೀನು.....ನೀನು....ನೀನು ಬಾಬ್ ಅಲ್ವಾ?”  ಅವನು ಅನುಮಾನಿಸುತ್ತಾ ಕೇಳಿದ.
    “ನೀನು ಜಿಮ್ಮಿ ವೆಲ್ಸ್ ಅಲ್ವಾ?” ಬಾಗಿಲ ಬಳಿಯಿದ್ದ ವ್ಯಕ್ತಿ ಖುಶಿಯಿಂದ ಕಿರುಚಿದ.
    “ಬ್ಲೆಸ್ ಮೈ ಹಾರ್ಟ್!” ಎಂದು ಆಗಷ್ಟೇ ಬಂದ ವ್ಯಕ್ತಿಯು ಉದ್ಗರಿಸುತ್ತಾ ತನ್ನ ಎರಡೂ ತೋಳುಗಳಲ್ಲಿ ಅವನನ್ನು ತಬ್ಬಿಕೊಂಡನು.“ಹಾಯ್ ಜಿಮ್ಮಿ. ನನಗೆ ತುಂಬಾ ಖುಶಿಯಾಗುತ್ತಿದೆ. ನನಗೆ ಗೊತ್ತಿತ್ತು ನೀನು ಬದುಕಿದ್ದರೆ ಖಂಡಿತ ಸಿಕ್ಕೇ ಸಿಗುತ್ತೀಯಾ ಅಂತಾ! ವೆಲ್, ವೆಲ್. ವೆಲ್ - ಟ್ವೆಂಟಿ ಇಯರ್ಸ್ ಈಸ್ ಎ ಲಾಂಗ್ ಟೈಮ್! ನಾವಿಬ್ಬರು ಹಳೆ ಗೆಳೆಯರೇನೋ ಸರಿ. ಆದರೆ ನಮ್ಮ ಗೆಳೆತನಕ್ಕಿನ್ನೂ ಹಳೆತನ ಬಂದಿಲ್ಲ. ಬಾ ಇಬ್ಬರೂ ಇಲ್ಲೇ ಎಲ್ಲಾದರು ಒಂದು ಕಡೆ ಕುಳಿತುಕೊಂಡು ಮಾತಾಡೋಣ. ಇಲ್ಲಿದ್ದ ಹಳೆಯ ರೆಸ್ಟೋರೆಂಟ್ ಈಗ ಹೊರಟುಹೋಗಿದೆ. ಅದು ಇರಬೇಕಿತ್ತು, ಬಾಬ್! ಇದ್ದಿದ್ದರೆ ನಾವು ಮತ್ತೊಮ್ಮೆ ಅಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬಹುದಿತ್ತು! ಒಂದಿಷ್ಟು ಗುಂಡು ಹಾಕುತ್ತಾ ಕಾಡುಹರಟೆ ಹೊಡೆಯಬಹುದಿತ್ತು! ಇರಲಿ, ಅಂದಹಾಗೆ ಪಶ್ಚಿಮ ದೇಶ ನಿನ್ನನ್ನು ಹೇಗೆ ನೋಡಿಕೊಂಡಿದೆ?”
    “ಭೇಷ್, ನಾನು ಕೇಳಿದ್ದೆಲ್ಲವನ್ನೂ ನನಗೆ ಕೊಟ್ಟಿದೆ. ಸುಖವಾಗಿದ್ದೇನೆ. ಅಂದಹಾಗೆ, ನೀನು ತುಂಬಾ ಬದಲಾಗಿದ್ದೀಯಾ ಜಿಮ್ಮಿ. ನೀನು ಮೊದಲಿಗಿಂತ ಎರಡು ಇಂಚಿನಷ್ಟು ಹೆಚ್ಚು ಎತ್ತರ ಬೆಳೆದವನ ತರ ಕಾಣುತ್ತಿದ್ದೀಯಾ.ಅಲ್ವಾ?”
    “ಓ, ಅದಾ? ಹೌದು, ನನಗೆ ಇಪ್ಪತ್ತು ತುಂಬಿದ ಮೇಲೆ ನಾನು ಸ್ವಲ್ಪ ಎತ್ತರಕ್ಕೆ ಬೆಳೆದಿದ್ದೇನೆ.”
    “ನ್ಯೂಯಾರ್ಕಿನಲ್ಲಿ ಚನ್ನಾಗಿದ್ದೀಯಾ ಜಿಮ್ಮಿ?”
    “ಪರ್ವಾಗಿಲ್ಲ. ಇಲ್ಲೇ ಸಿಟಿ ಡಿಪಾರ್ಟ್‍ಮೆಂಟೊಂದರಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಒಳ್ಳೆ ಜೀವನಕ್ಕೇನೂ ಮೋಸವಿಲ್ಲ. ಕಮಾನ್ ಬಾಬ್! ಹೀಗೇ ಒಂದಷ್ಟು ಸುತ್ತಾಡಿಕೊಂಡು ಬರೋಣ. ಎಲ್ಲಾದರು ಕುಳಿತುಕೊಂಡು ಮನಸಾರೆ ಒಂದಷ್ಟು ಹರಟೆ ಹೊಡೆಯೋಣ.ನಮ್ಮ ಗೆಳೆತನವನ್ನೊಮ್ಮೆ ಮೆಲುಕು ಹಾಕುತ್ತಾ ಹಳೆಯ ನೆನಪುಗಳಲ್ಲಿ ತೇಲಿ ಹೋಗೋಣ.”
    ಇಬ್ಬರೂ ತೋಳಿನಲ್ಲಿ ತೋಳುಹಾಕಿಕೊಂಡು ರಸ್ತೆಯುದ್ದಕ್ಕೂ ನಡೆಯತೊಡಗಿದರು. ಪಶ್ಚಿಮದಿಂದ ಬಂದವನ ಧಿಮಾಕು ತನ್ನ ಯಶಸ್ಸಿನಿಂದಾಗಿ ಮತ್ತಷ್ಟು ಹೆಚ್ಚಿತ್ತು. ಅವನು ತನ್ನ ವೃತ್ತಿ ಹಾಗೂ ಬದುಕಿನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾಹೋದ. ಇನ್ನೊಬ್ಬ ಆಸಕ್ತಿಯಿಂದ ಕೇಳಿಸಿಕೊಂಡನು.
    ಮಾತಾಡುತ್ತಾ ಇಬ್ಬರೂ ಮೂಲೆಯಲ್ಲಿದ್ದ ಡ್ರಗ್ ಸ್ಟೋರ್ ಹತ್ತಿರ ಬಂದರು. ಅಲ್ಲಿ ವಿದ್ಯುದ್ದೀಪಗಳು ಝಗಮಗಿಸುತ್ತಿದ್ದವು. ಅವುಗಳ ಝಳಪಿನಲ್ಲಿ ಇಬ್ಬರೂ ಏಕಕಾಲಕ್ಕೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಥಟ್ಟನೆ ಪಶ್ಚಿಮದವನು ಒಂದು ಕ್ಷಣ ನಿಂತು ತನ್ನ ತೋಳನ್ನು ಬಿಡಿಸಿಕೊಂಡನು.
    “ನೀನು....ನೀನು ಜಿಮ್ಮಿ ವೆಲ್ಸ್ ಅಲ್ಲ.” ಅವನು ಅನುಮಾನದಿಂದ ಹೇಳಿದನು. “ಇಪ್ಪತ್ತು ವರ್ಷಗಳು ಸುದೀರ್ಘ ಸಮಯವೇನೋ ಹೌದು! ಆದರೆ ಯಾವ ಸುದೀರ್ಘ ಸಮಯವೂ ಒಬ್ಬ ವ್ಯಕ್ತಿಯ ಚೂಪಾದ ಮೂಗನ್ನು ಚಪ್ಪಟೆ ಮೂಗನ್ನಾಗಿ ಬದಲಾಯಿಸಲು ಸಾಧ್ಯವಿಲ್ಲ. ಅದಕ್ಕೆ ಅಂಥ ಶಕ್ತಿಯೂ ಇಲ್ಲ. ಹೇಳು, ನೀನ್ಯಾರು?”
    “ಕೆಲವು ಸಾರಿ ಪರಿಸ್ಥಿತಿಗನುಗುಣವಾಗಿ ಒಳ್ಳೆ ವ್ಯಕ್ತಿ ಕೂಡಾ ಕೆಟ್ಟವನಾಗಬಲ್ಲ.” ಎಂದು ಹೇಳುತ್ತಾ ಎತ್ತರದ ವ್ಯಕ್ತಿಯು ಬೇಡಿಯೊಂದನ್ನು ಹೊರತೆಗೆದನು. “ಯೂ ಆರ್ ಅಂಡರ್ ಆರೆಸ್ಟ್, ಬಾಬ್.ನೀನು ಪೋಲೀಸ್‍ರಿಗೆ ಬೇಕಾದ ವ್ಯಕ್ತಿ. ಇಡಿ ಶಿಕ್ಯಾಗೋ ನೀನು ನಮ್ಮ ದಾರಿ ತಪ್ಪಿಸಿದ್ದೀಯಾ ಅಂತಾ ಹೇಳಿತ್ತು. ಆದರೆ ಈಗ ಅದೇ ಶಿಕ್ಯಾಗೋ ನಮಗೆ ತಂತಿಯೊಂದನ್ನು ಕಳಿಸಿ ನೀನು ಇಲ್ಲಿಗೆ ಬಂದಿರುವದರ ಬಗ್ಗೆ ಸುಳಿವು ಕೊಟ್ಟಿತು. ಈಗ ನೀನು ಶಿಕ್ಯಾಗೋ ಪೋಲೀಸ್‍ರ ಅತಿಥಿ. ಸುಮ್ಮನೆ ಕೊಸರಾಡದೆ ನನ್ನ ಜೊತೆ ಬಾ. ಇಲ್ಲವಾದರೆ ಮರ್ಯಾದೆ ಇರುವದಿಲ್ಲ. ಹಾಂ, ಪೋಲಿಸ್ ಠಾಣೆಗೆ ಹೋಗುವ ಮುನ್ನ ನಾನು ನಿನಗೆ ಕೊಡಬೇಕಾಗಿರುವ ಚೀಟಿಯೊಂದು ಇದೆ. ಅದನ್ನು ಇಲ್ಲೇ ಈ ದೀಪಗಳ ಬೆಳಕಲ್ಲಿ ಓದಿ ಬಿಡು. ಅಂದಹಾಗೆ ಅದನ್ನು ಕೊಟ್ಟವರು ಬೇರೆ ಯಾರೂ ಅಲ್ಲ; ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸಿನವನು. ಅವನ ಹೆಸರು ವೆಲ್ಸ್…..ಜಿಮ್ಮಿ ವೆಲ್ಸ್.”

    ಪಶ್ಚಿಮದವನು ಮಡಿಚಿದ್ದ ಆ ಸಣ್ಣ ಚೀಟಿಯನ್ನು ಅವಸರವಸರವಾಗಿ ಬಿಡಿಸಿ ಓದತೊಡಗಿದ. ಓದಲು ಆರಂಭಿಸಿದಾಗ ಸ್ಥಿರವಾಗಿದ್ದ ಆತನ ಕೈಗಳು ಓದಿ ಮುಗಿಸುವಷ್ಟರಲ್ಲಿ ನಡುಗತೊಡಗಿದ್ದವು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು:
    ಬಾಬ್,
    ನಾನು ನಿಗದಿಪಡಿಸಿದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದೆ. ಹಾರ್ಡ್‍ವೇರ್ ಸ್ಟೋರ್ ಬಳಿ ನೀನು ನಿಂತಿದ್ದನ್ನು ನೋಡಿ ನಾನು ನಿನ್ನ ಬಳಿ ಬರುವದಕ್ಕೂ, ನೀನು ನಿನ್ನ ಸಿಗಾರನ್ನು ಹೊತ್ತಿಸಲು ಬೆಂಕಿಕಡ್ಡಿ ಗೀರುವದಕ್ಕೂ ಸರಿಹೋಯಿತು. ಹಾಗೆ ಗೀರಿದಾಗ ಉಂಟಾದ ಮಂದ ಬೆಳಕಿನಲ್ಲಿ ನಿನ್ನ ಮುಖ ನನಗೆ ಸ್ಪಷ್ಟವಾಗಿ ಕಾಣಿಸಿತು. ದುರಾದೃಷ್ಟವಶಾತ್, ಅದು ಶಿಕ್ಯಾಗೋ ಪೋಲೀಸ್‍ರು ಹುಡುಕುತ್ತಿದ್ದ ಕ್ರಿಮಿನಲ್‍ನೊಬ್ಬನ ಮುಖವಾಗಿತ್ತು. ನೀನೊಬ್ಬ ದೊಡ್ಡ ಕ್ರಿಮಿನಲ್‍ ಎಂದು ತಿಳಿದು ನನಗೆ ಬಹಳ ಖೇದವಾಯಿತು. ನಾನು ಆ ಕೂಡಲೇ ನಿನ್ನನ್ನು ಬಂಧಿಸಬೇಕೆಂದುಕೊಂಡೆ. ಆದರೆ ಅದೇಕೋ ಹಾಗೆ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಹಾಗಾಗಿ ನಾನು ಅಲ್ಲಿಂದ ಹೊರಟು ಸಾದಾ ಉಡುಪಿನಲ್ಲಿರುವ ಬೇರೊಬ್ಬನನ್ನು ಈ ಕೆಲಸ ಮಾಡಲು ಕಳಿಸಿಕೊಟ್ಟೆ. ಒಬ್ಬ ಪೋಲಿಸ್ ಅಧಿಕಾರಿಯಾಗಿ ನಾನು ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು. ಗುಡ್ ಬೈ! 
    “ಜಿಮ್ಮಿ” 


    ಮೂಲ ಇಂಗ್ಲೀಷ್: ಓ ಹೆನ್ರಿ
    ಕನ್ನಡಕ್ಕೆ: ಉದಯ್ ಇಟಗಿ


     
    ಜುಲೈ 28. 2013 ರ ‘ಉದಯವಾಣಿ’ಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ.



    ಲಯನ್ ಆಫ್ ದ ಡಿಸರ್ಟ್

  • ಶುಕ್ರವಾರ, ಸೆಪ್ಟೆಂಬರ್ 27, 2013
  • ಬಿಸಿಲ ಹನಿ

  • ಅದು 2008ರಲ್ಲಿ ಅಂತಾ ಅನಿಸುತ್ತೆ. ನಾನು ಬೇಸಿಗೆಯ ರಜೆಯನ್ನು ಮುಗಿಸಿ ಭಾರತದಿಂದ ಟ್ರಿಪೋಲಿಗೆ ವಾಪಾಸಾಗಿ ಅಲ್ಲಿಂದ ಮುಂದೆ ನನ್ನ ಕೆಲಸದ ಸ್ಥಳ ಘಾಟ್‍ಗೆ ಪ್ರಯಾಣ ಬೆಳೆಸುವ ಮುನ್ನ ಗೆಳೆಯ ಸುರೇಂದ್ರನ ಒತ್ತಾಯದ ಮೇರೆಗೆ ಸಬ್ರತಾದಲ್ಲಿ ಅವನ ಮನೆಯಲ್ಲಿ ಒಂದೆರೆಡು ದಿವಸ ಉಳಿದಿದ್ದೆ. ಅಲ್ಲಿ ಒಂದು ದಿನ ಹೀಗೆ ಸುಮ್ಮನೆ ಟೀವಿ ಚಾನಲ್ ಬದಲಾಯಿಸುತ್ತಿರಬೇಕಾದರೆ ಸ್ಟಾರ್ ಮೂವೀಸ್ ಚಾನಲ್‍ನಲ್ಲಿ ಅಂತಾ ಕಾಣುತ್ತದೆ, ನಾನು ಆ ಚಾನಲ್‍ಗೆ ಬರುವದಕ್ಕೂ ಟೀವಿ ಪರದೆಯ ಮೇಲೆ “Lion of the Desert” ಎಂದು ತೋರಿಸುವದಕ್ಕೂ ಸರಿಹೋಯಿತು. ಅದು ಇಂಗ್ಲೀಷ್ ಸಿನಿಮಾ! ಇದೇನಿದು? ಯಾರಿದು Lion of the Desert? ಯಾವ ಮರಭೂಮಿ? ಯಾವ lion? ಏನು? ಎತ್ತ? ಅಂತೆಲ್ಲಾ ನನ್ನ ಕುತೂಹಲ ಕೆರಳಿಸಿತು. ನಾನು ನೋಡಿಯೇಬಿಡೋಣ ಎಂದು ದೃಢ ನಿರ್ಧಾರ ತಳೆದು ಚಕ್ಕಳಮಕ್ಕಳ ಹಾಕಿಕೊಂಡು ಟೀವಿ ಮುಂದೆ ಕುಳಿತುಕೊಂಡು ಸಂಪೂರ್ಣ ಸಿನಿಮಾ ನೋಡಿದ ಮೇಲೆ ಗೊತ್ತಾಯಿತು ಅದು ಲಿಬಿಯಾ ಮರಭೂಮಿಯ ದಿಟ್ಟ ಹೋರಾಟಗಾರನೊಬ್ಬನ ಜೀವನ ಕಥೆಯನ್ನಾಧರಿಸಿ ತೆಗೆದ ಚಿತ್ರವೆಂದು. ಆ Lion of the Desert ಬೇರೆ ಯಾರೂ ಅಲ್ಲ; ಮೊಟ್ಟಮೊದಲಿಗೆ ಇಟ್ಯಾಲಿಯನ್‍ರ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದುವದರ ಮೂಲಕ ಲಿಬಿಯನ್‍ರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಈ ದೇಶದ ಮಹಾತ್ಮನೆನಿಸಿಕೊಂಡವ. ಸುಮಾರು ಇಪ್ಪತ್ತು ವರ್ಷಗಳ ಕಾಲ ಇಟ್ಯಾಲಿಯನ್‍ರಿಗೆ ಸಿಂಹಸ್ವಪ್ನವಾಗಿ ಕಾಡಿದವ. ಅವನೇ ಒಮರ್ ಮುಕ್ತಾರ್! ನಾನು ಆ ಸಿನಿಮಾ ನೋಡುವವರೆಗೂ ಒಮರ್ ಮುಕ್ತಾರ್ ಎಂದರೆ ಯಾರು? ಲಿಬಿಯಾದಲ್ಲಿ ಅವನಿಗಿರುವ ಮಹತ್ವವೇನು? ಎಂಬುದನ್ನು ನಾನು ತಿಳಿದುಕೊಂಡಿರಲಿಲ್ಲ. 
    ಒಮರ್ ಮುಕ್ತಾರ್ ಹುಟ್ಟಿದ್ದು ಅಗಸ್ಟ್ 20, 1858 ರಂದು ಸರನೈಕಾ ಪ್ರಾಂತ್ಯದ ಜನ್‍ಝೊರ್ ಎಂಬ ಹಳ್ಳಿಯಲ್ಲಿ. ತನ್ನ ಊರಿನ ಮಸೀದಿಯೊಂದರಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದೆ ಸೆನುಸ್ಸೀ ಎಂಬ ವಿಶ್ವವಿದ್ಯಾನಿಲಯದಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಪವಿತ್ರ ಕುರಾನ್‍ನ್ನು ಕಲಿಸುವ ಶಿಕ್ಷಕನಾದ. ಆತ ಬರೀ ಶಿಕ್ಷಕನಾಗಿರದೆ ಮರಭೂಮಿಯಲ್ಲಿ ಯುದ್ಧ ಮಾಡುವ ತಂತ್ರಗಳನ್ನು ಸಹ ಚನ್ನಾಗಿ ಅರೆದು ಕುಡಿದಿದ್ದ. ಜೊತೆಗೆ ಸಹರಾ ಮರಭೂಮಿಯ ಒಳಹರಿವುಗಳು ಅವನಿಗೆ ಚನ್ನಾಗಿ ಗೊತ್ತಿದ್ದರಿಂದ ಅದರ ಪ್ರತಿಯೊಂದು ಮೂಲೆ ಮೂಲೆಯೂ ಮತ್ತು ಅದು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡ ರಹಸ್ಯ ದಾರಿಗಳನ್ನು ಸಹ ಚನ್ನಾಗಿ ತಿಳಿದುಕೊಂಡಿದ್ದ. ತನ್ನ ಈ ಜಾಣತನ ಮತ್ತು ಚಾಣಾಕ್ಷತನವನ್ನು ಲಿಬಿಯಾದ ಮರಭೂಮಿಯಲ್ಲಿ ಬೀಡು ಬಿಟ್ಟಿದ್ದ ಇಟ್ಯಾಲಿಯನ್‍ರ ಮಿಲ್ಟ್ರಿ ಪಡೆಗಳನ್ನು ಸೆದೆಬಡಿಯಲು ಉಪಯೋಗಿಸಿದ. 
     
    ಇಪ್ಪತ್ತನೇ ಶತಮಾನದ ಆರಂಭದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಒಂದಲ್ಲಾ ಒಂದು ಕಾರಣಕ್ಕಾಗಿ ತೊಂದರೆಯಲ್ಲಿದ್ದವು. ಈ ಸಂದರ್ಭದಲ್ಲಿಯೇ ಜಗತ್ತಿನ ಬಹುಪಾಲು ರಾಷ್ಟ್ರಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ತಮ್ಮ ಅಧಿಕಾರ ಹಾಗೂ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಅನೇಕ ದಾರಿಗಳನ್ನು ಹುಡುಕುತ್ತಿದ್ದವು. ಆ ಪ್ರಕಾರ ಆಗಷ್ಟೇ ರೋಮ್ ನಗರವನ್ನು ಪುನರ್ವಶ ಮಾಡಿಕೊಂಡ ಇಟಲಿ ಮುಂದೆ ತನಗೆ ಸಮೀಪದಲ್ಲಿದ್ದ ಲಿಬಿಯಾದ ಮೇಲೆ ಗುರಿಯಿಟ್ಟಿತು. ಅದರಂತೆ 1911ರಲ್ಲಿ ಇಟ್ಯಾಲಿಯನ್‍ರು ತಮ್ಮ ಯುದ್ಧ ನೌಕೆಗಳೊಂದಿಗೆ ಟ್ರಿಪೋಲಿಯ ಸಮುದ್ರ ದಂಡೆಗೆ ಬಂದಿಳಿದು ಮನ ಬಂದಂತೆ ಗುಂಡು ಹಾರಿಸುತ್ತಾ ಟ್ರಿಪೋಲಿಯನ್‍ರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮುಂದೆ ಬೆಂಗಾಜಿ, ಮಿಸ್ರಟಾ ಮತ್ತು ಡೆರ್ನಾವನ್ನು ಸಹ ವಶಪಡಿಸಿಕೊಂಡರು. ಆದರೆ ಬೇರೆ ನಗರಗಳ ಜನ ಇವರನ್ನು ಅಷ್ಟು ಸುಲಭವಾಗಿ ಒಪ್ಪದ ಕಾರಣ ಇಟ್ಯಾಲಿಯನ್‍ರು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬಂತು. ಹೀಗಾಗಿ ಅವರು ಅನಿವಾರ್ಯವಾಗಿ ಲಿಬಿಯನ್‍ರನ್ನು ಸದೆಬಡೆಯಲು ಅನೇಕ ಯುದ್ಧಗಳನ್ನು ರೂಪಿಸಿದರು. ಒಂದಾದ ಮೇಲೊಂದು ಯುದ್ಧಗಳನ್ನು ಮಾಡುತ್ತಾ ಬಂದರೂ ಅವರು ಇಡಿ ದೇಶವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳದಾದರು. ಏಕೆಂದರೆ ಸಾಕಷ್ಟು ಬಂಡುಕೋರರು ತಮ್ಮ ಮನೆ-ಮಠ ಬಿಟ್ಟು ಮರಭೂಮಿಯಲ್ಲಿನ ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ಅಲ್ಲಿಂದಲೇ ಇಟ್ಯಾಲಿಯನ್‍ರ ವಿರುದ್ಧ ಹೋರಾಟ ಮಾಡಲು ಒಮರ್ ಆಲ್-ಮುಕ್ತಾರನ ನಾಯಕತ್ವದಲ್ಲಿ ಯೋಜನೆಯೊಂದನ್ನು ರೂಪಿಸಿದರು. ಆ ಗುಂಪಿನಲ್ಲಿದ್ದ ಇನ್ನುಳಿದ ಪ್ರಮುಖ ಹೋರಾಟಗಾರರೆಂದರೆ ರಮಝಾನ್ ಅಲ್-ಸ್ವಹಿಲಿ, ಮೊಹಮ್‍ದ್ ಫರ್ಹಾತ್, ಆಲ್-ಫದೀಲ್ ಬೋ-ಒಮರ್, ಸುಲೈಮಾನ್ ಅಲ್-ಬರೌನಿ ಇನ್ನೂ ಮುಂತಾದವರು. ಅಲ್ಲಿಂದಾಚೆ ಒಮರ್ ಮುಕ್ತಾರ ಮತ್ತವನ ಸಹಚರರು ತಂತ್ರಕ್ಕೆ-ಪ್ರತಿತಂತ್ರ, ಯೋಜನೆಗೆ-ಪ್ರತಿಯೋಜನೆಯನ್ನು ರೂಪಿಸುತ್ತಾ ಇಟ್ಯಾಲಿಯನ್‍‍ರಿಗೆ ಚಳ್ಳೆಹಣ್ಣನ್ನು ತಿನ್ನಿಸುತ್ತಾ, ಅವರ ವಿರುದ್ಧ ಅನೇಕ ಯುದ್ಧಗಳನ್ನು ಗೆದ್ದರು. ಲೆಕ್ಕವಿಲ್ಲದಷ್ಟು ಸೈನಿಕರನ್ನು ಕೊಂದುಹಾಕಿದರು. ಅವರ  ಕೈಗೆ ಸಿಗದೆ ಅವರಿಗೆ ದುಸ್ಸಪ್ನವಾಗಿ ಕಾಡಿದರು.  ಇದು ಹೆಚ್ಚು ಕಮ್ಮಿ ಇಪ್ಪತ್ತು ವರ್ಷಗಳ ಕಾಲ ಹೀಗೆ ನಡೆಯಿತು.
    ಇದೇ ಸಂದರ್ಭದಲ್ಲಿ ಇಟ್ಯಾಲಿಯನ್‍ರ ಸೇನೆ ಸೆರೆಶಿಬಿರ(Concentration Camp)ಗಳನ್ನು ನಿರ್ಮಿಸಿ ಅಲ್ಲಿಗೆ ತಮ್ಮ ವಿರುದ್ಧ ಪ್ರತಿಭಟಿಸಿದವರನ್ನು ಹಾಗೂ ಹೋರಾಟಗಾರರ ಹೆಂಡತಿ-ಮಕ್ಕಳು, ಅಣ್ಣ-ತಮ್ಮಂದಿರು, ತಂದೆ-ತಾಯಿಯರು ಹಾಗೂ ಅಕ್ಕ-ತಂಗಿಯರನ್ನು ಬಲವಂತವಾಗಿ ಎಳೆದು ತಂದರು. ಮೇ 1930 ರಿಂದ ಸಪ್ಟಂಬರ್ 1930ರೊಳಗೆ ಸುಮಾರು 80,000 ಲಿಬಿಯನ್‍ರನ್ನು ಹದ್ದುಗಣ್ಣಿನ ಸೈನಿಕರ ಸುಪರ್ದಿಯಲ್ಲಿ ಸೆರೆಶಿಬಿರಗಳಿಗೆ ಎಳೆದು ತರಲಾಯಿತು ಎಂದು ಇಲ್ಲಿನವರು ಹೇಳುತ್ತಾರೆ. ಸೆರೆಶಿಬಿರಗಳಲ್ಲಿ ಪರಿಸ್ಥಿತಿ ಗಂಭಿರವಾಗಿತ್ತು. ಅನೇಕ ಲಿಬಿಯನ್‍ರು ಹಸಿವೆಯಿಂದ, ರೋಗರುಜಿನಗಳಿಂದಾಗಿ ಪ್ರಾಣಬಿಟ್ಟರು. ಲಿಬಿಯಾದ ಇತಿಹಾಸಕಾರ ಮೌಹಮ್‍ದ ಆಲಿಅತೈಬ್ ಪ್ರಕಾರ ನವೆಂಬರ್ 1930 ರ ವೇಳೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ಹದಿನೇಳು ಶವಸಂಸ್ಕಾರಗಳನ್ನು ಮಾಡಲಾಗುತ್ತಿತ್ತು. ಆದರೆ ವಿಶ್ವದ ಕೆಲವು ಪ್ರಮುಖ ಪತ್ರಿಕೆಗಳು ಇಲ್ಲಿನ ಅಮಾನುಷ ಕೃತ್ಯದ ಬಗ್ಗೆ ವರದಿಮಾಡಿ ಮಾನವ ಹಕ್ಕುಗಳ ಸಮಿತಿಯ ಗಮನ ಸೆಳೆದವು. ಆಗ ಇಟ್ಯಾಲಿಯನ್ ಸೇನೆ ತಾನು ವಿಧಿಸಿದ್ದ ಕಟ್ಟಳೆಗಳನ್ನು ಕೊಂಚ ಸಡಿಲಿಸಿ ಲಿಬಿಯನ್‍ರಿಗೆ ತಿಂಗಳಿಗೆ ತಲಾ 22ಕೇಜಿಯಷ್ಟು ಬಾರ್ಲಿಯನ್ನು ಪ್ರತಿಯೊಬ್ಬರಿಗೂ ಕೊಡತೊಡಗಿದರು. ಆದರೆ ಅದು ಏನೇನು ಸಾಕಾಗದೆ ಹಸಿವೆಯಿಂದಾಗಿ ಅನೇಕ ಲಿಬಿಯನ್‍ರು ಸೆರೆಶಿಬಿರಗಳಲ್ಲಿ ಸತ್ತುಹೋದರು.
    ಇತ್ತ ಗುಡ್ಡಗಾಡು ಪ್ರದೇಶದಲ್ಲಿ ಒಮರ್ ಮುಕ್ತಾರ್ ಮತ್ತವನ ಸಹಚರರು ಇಟ್ಯಾಲಿಯನ್‍ರ ಆಕ್ರಮಣವನ್ನು ಪ್ರತಿಭಟಿಸಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಆದರೆ 1931ರಷ್ಟೊತ್ತಿಗೆ ಹೋರಾಟಗಾರರಲ್ಲಿ ಸಾಕಷ್ಟು ಆಹಾರ ಮತ್ತು ಶಸ್ತ್ರಾಸ್ತ್ರಗಳ ಕೊರತೆಯುಂಟಾಯಿತು. ಅಷ್ಟೊತ್ತಿಗಾಗಲೇ ಒಮರ್ ಮುಕ್ತಾರನಿಗೆ 83 ವರ್ಷ ವಯಸ್ಸಾಗಿತ್ತು. ಅವನ ಅನೇಕ ಗೆಳೆಯರು  ಅವನಿಗೆ ಈ ಹೋರಾಟದಿಂದ ನಿವೃತ್ತಿಯನ್ನು ಪಡೆದು ದೇಶವನ್ನು ಬಿಟ್ಟು ಹೋಗು ಎಂದು ಉಪದೇಶಿಸಿದರು. ಆದರೆ ಒಮರ್ ಮುಕ್ತಾರ್ ಅವರ ಉಪದೇಶವನ್ನು ನಿರಾಕರಿಸಿ ಎಂದಿನಂತೆ ತನ್ನ ಹೋರಾಟವನ್ನು ಮುಂದುವರಿಸಿದ. 
    ಹೀಗೆ ಒಂದು ದಿನ ಇಟ್ಯಾಲಿಯನ್‍ರ ವಿರುದ್ಧ ಯುದ್ಧ ಮಾಡುತ್ತಿರಬೇಕಾದರೆ ತೀವ್ರವಾಗಿ ಗಾಯಗೊಂಡು ಅವರ ಸೆರೆಯಾಳಾಗುವದರ ಮೂಲಕ ಇಪ್ಪತ್ತು ವರ್ಷಗಳ ಅವನ ಹೋರಾಟ ಕೊನೆಗೊಂಡಿತು. ಅವನನ್ನು ಜೈಲಿನಲ್ಲಿಟ್ಟರೂ ಅವನ ಕೈ ಕಾಲುಗಳಿಗೆ ಬೇಡಿ ಹಾಕಿಡಲಾಯಿತು. ಏಕೆಂದರೆ ಇಟ್ಯಾಲಿಯನ್‍ರ ಸೇನೆಗೆ ಅವನು ಯಾವಾಗಬೇಕಾದರು ತಪ್ಪಿಸಿಕೊಂಡುಹೊಗಬಹುದು ಎನ್ನುವ ಭಯವಿತ್ತು. ಸಪ್ಟಂಬರ್ 16, 1931ರಂದು ಮುಕ್ತಾರನನ್ನು ಅವನ ಸಹಚರರೆದುರಿಗೆ ಹಾಗೂ ಸಾರ್ವಜನಿಕರಮುಂದೆ ಗಲ್ಲಿಗೇರಿಸಲಾಯಿತು. ಆ ಮೂಲಕ ಅವನ ಇಪ್ಪತ್ತು ವರ್ಷಗಳ ಹೋರಾಟಕ್ಕೆ ತೆರೆ ಬಿದ್ದಂತಾಯಿತು. ಗಲ್ಲಿಗೇರಿಸುವ ಮುನ್ನ ಕೊನೆಯದಾಗಿ ಆತ ಪವಿತ್ರ ಕುರಾನಿನಲ್ಲಿ ಹೇಳಲಾದ ಪ್ರಸಿದ್ಧ ಉಕ್ತಿಗಳನ್ನು ಉದ್ಘರಿಸಿದ: ಅಲ್ಲಾಹುವಿನಿಂದ ಬಂದಿದ್ದೇನೆ, ಅಲ್ಲಾಹುನೆಡೆಗೆ ವಾಪಾಸಾಗುತ್ತೇನೆ.  
    ಒಮರ್ ಮುಕ್ತಾರನ ಸಾವಿನಿಂದಾಗಿ ಇಟ್ಯಾಲಿಯನ್‍ರು ನಿಟ್ಟುಸಿರು ಬಿಟ್ಟು ನೆಮ್ಮದಿಯ ನಿದ್ರೆ ಮಾಡತೊಡಗಿದರು. ಮಾತ್ರವಲ್ಲ ಇಡಿ ಲಿಬಿಯಾವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಸುಲಭವಾಯಿತು. ಅಲ್ಲಿಂದಾಚೆ 1943 ರವರೆಗೆ ಲಿಬಿಯಾ ಇಟ್ಯಾಲಿಯನ್‍ರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೆ ಮಹಾಯುದ್ಧದಲ್ಲಿ ಯಾವಾಗ ಇಟಲಿ ಸೋತಿತೋ ಅಂದಿನಿಂದ ಲಿಬಿಯಾ ಒಕ್ಕೂಟ ರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾ ಈ ಎಲ್ಲ ದಾಸ್ಯದಿಂದ ಬಿಡುಗಡೆಹೊಂದಿ ತನ್ನನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಲ್ಲಿಂದ 1969ರ ತನಕ ಅಲ್ಲಿಯ ಪ್ರಜೆ ಇದ್ರಿಸ್ ಎಂಬವ ಲಿಬಿಯಾದ ಚುಕ್ಕಾಣಿಯನ್ನು ಹಿಡಿಯುವದರ ಮೂಲಕ ಲಿಬಿಯಾದ ಮೊಟ್ಟಮೊದಲ ರಾಜನೆನಿಸಿಕೊಂಡನು. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ತನ್ನ ಸೇನೆಯ ಕಿರಿಯ ಅಧಿಕಾರಿಗಳೊಂದಿಗೆ ಲಿಬಿಯಾವನ್ನು ತನ್ನ ಕೈವಶ ಮಾಡಿಕೊಂಡು 2011 ರ ತನಕ ಸಮರ್ಥವಾಗಿ ಆಳಿದ. 2011ರಲ್ಲಿ ಕೆಲವು ಬಂಡುಕೋರರು ಗಡಾಫಿಯ ವಿರುದ್ಧ ಬಂಡೆದ್ದು ಅವನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. 2012 ಜೂನ್ ತಿಂಗಳಲ್ಲಿ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವ ಸರಕಾರವನ್ನು ಅಸ್ಥಿತ್ವಕ್ಕೆ ತಂದು ಲಿಬಿಯಾಕ್ಕೆ ಹೊಸ ಭಾಷ್ಯವನ್ನು ಬರೆದಿದ್ದು ಈಗ ಇತಿಹಾಸ.
    ಹಾಗೆಂದೇ ಒಮರ್ ಮುಕ್ತಾರನೆಂದರೆ ಇಲ್ಲಿಯವರಿಗೆ ಅಪಾರ ಗೌರವ ಮತ್ತು ಸ್ಪೂರ್ತಿ. ಇಂಥ ಒಬ್ಬ ದಿಟ್ಟ ಹೋರಾಟಗಾರನ ಸಾಹಸಗಳನ್ನು ಇನ್ನಿಲ್ಲದಂತೆ ಇಲ್ಲಿಯ ಜನ ಸ್ಮರಿಸುತ್ತಾರೆ. ಗಡಾಫಿ ಸರಕಾರ ಆತನ ಭಾವಚಿತ್ರವನ್ನು ಇಲ್ಲಿಯ 10 ದಿನಾರಿನ ನೋಟಿನ ಮೇಲೆ ಮುದ್ರಿಸುವದರ ಮೂಲಕ ಆತನಿಗೆ ವಿಶೇಷ ಗೌರವ ಸಲ್ಲಿಸಿತ್ತು. ಹೊಸ ಸರಕಾರ ಕೂಡಾ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಲಿಬಿಯಾದ ಎಲ್ಲ ಸರಕಾರಿ ಕಛೇರಿಗಳಲ್ಲೂ ಹಾಗೂ ಬೀದಿಗಳಲ್ಲಿ ಮುಕ್ತಾರನ ಭಾವಚಿತ್ರಗಳನ್ನೊಳಗೊಂಡ ಬೋರ್ಡುಗಳನ್ನು ಹಾಗೂ ತೂಗುಪಟಗಳನ್ನು ನೇತುಹಾಕಿದ್ದಾರೆ. ಮಾತ್ರವಲ್ಲ ಆತನ ಹೆಸರನ್ನು ಇಲ್ಲಿಯ ಅನೇಕ ಬೀದಿಗಳಿಗಲ್ಲದೆ ಇತರೆ ಅರೇಬಿಕ್ ದೇಶಗಳಲ್ಲಿಯೂ ಸಹ ಇಡಲಾಗಿದೆ. ಇಲ್ಲಿಯ ಅನೇಕ ಹೋರಾಟಗಾರರಿಗೆ ಅವನೇ ಸ್ಪೂರ್ತಿಯಾಗಿದ್ದು ಮೊನ್ನೆ ನಡೆದ ಲಿಬಿಯಾದ ಕ್ರಾಂತಿಗೂ ಸಹ ವನೇ ಪ್ರೇರಣೆಯಾಗಿದ್ದಾನೆ ಎಂದು ಇಲ್ಲಿನವರು ಹೇಳುತ್ತಾರೆ.

     -ಉದಯ್ ಇಟಗಿ

    ಮನಸ್ಸು ಕೆಡಿಸುವ ಮತ್ಸ್ಯಗಂಧಿಯರು

  • ಶನಿವಾರ, ಜುಲೈ 20, 2013
  • ಬಿಸಿಲ ಹನಿ

  • ನೀವೇನೆ ಹೇಳಿ ನಮ್ಮ ಭಾರತೀಯ ಹೆಣ್ಣುಮಕ್ಕಳಷ್ಟು ಲಕ್ಷಣ ಬೇರೆ ಯಾವ ಹೆಣ್ಣುಮಕ್ಕಳು ಇಲ್ಲಾರಿ. ಹಾಗಂತಾ ಒಮ್ಮೆ ನನ್ನ ಸಹೋದ್ಯೋಗಿ ಇಲ್ಲಿನ ಹೆಣ್ಣುಮಕ್ಕಳನ್ನು ಕುರಿತು ಹೇಳಿದಾಗ ನನಗೂ ಹಾಗೆ ಅನಿಸಿತ್ತು ನಾನು ಜೋರ್ಡಾನಿಯನ್, ಮೊರೆಟ್ಯಾನಿಯನ್, ಸಿರಿಯನ್, ತುನಿಶಿಯನ್ ಹುಡುಗಿಯರನ್ನು ನೋಡುವವರೆಗೂ. ಆದರೆ ಇವರನ್ನು ನೋಡಿದ ಮೇಲೆ ನಮ್ಮ ಭಾರತೀಯ ಹೆಣ್ನುಮಕ್ಕಳಷ್ಟೇ ಚೆಂದವಾಗಿ ಇನ್ನೂ ಅನೇಕರಿದ್ದಾರೆ ಅನಿಸಿದ್ದು ಸುಳ್ಲಲ್ಲ. ಆದರೆ ಇಲ್ಲಿಯ ಹುಡುಗಿಯರು ನೋಡಲು ಅಷ್ಟಕ್ಕಷ್ಟೆ. ಅಂದರೆ ಅದರರ್ಥ ಇಡಿ ಲಿಬಿಯಾದ ಹುಡುಗಿಯರು ಎಂದಲ್ಲ. ನಾನು ಹೇಳಿದ್ದು ನಾನಿರುವ ದಕ್ಷಿಣ ಭಾಗದ ಹುಡುಗಿಯರ ಬಗ್ಗೆ ಮಾತ್ರ. ಏಕೆಂದರೆ ಈ ಭಾಗದ ಬಹುತೇಕ ಜನರು ಕಪ್ಪು. ಇಲ್ಲಿ ಹೆಚ್ಚಾನು ಹೆಚ್ಚು ಬ್ಲ್ಯಾಕ್ ರೇಸ್ ಇರುವದರಿಂದ ನೂರಕ್ಕೆ ತೊಂಬತೈದರಷ್ಟು ಜನ ಕಪ್ಪಾಗಿದ್ದಾರೆ. ಹಾಗಂತ ಕಪ್ಪಗಿರುವವರೆಲ್ಲಾ ಕುರೂಪಿಗಳೆಂದು ನಾನು ಹೇಳುತ್ತಿಲ್ಲ. ಆದರೆ ಅದೇಕೋ ‘ಈ ಕಪ್ಪು ಸುಂದರಿಯರು’ ಮಾತ್ರ ನಮ್ಮ ಸೌಂದರ್ಯದ ಪರಿಕಲ್ಪನೆಗಳಿಗೆ ಫಿಟ್ ಆಗುವದಿಲ್ಲ. ಆದರೆ ಉತ್ತರ ಮತ್ತು ಪೂರ್ವ ಭಾಗದಲ್ಲಿ ಅಂದರೆ ಟ್ರಿಪೋಲಿ, ಬೆಂಗಾಜಿ, ಮಿಸ್ರಟಾ, ಜಾವಿಯಾ, ಸಬ್ರತಾ, ಜ್ವಾರಾ, ಆಲ್ಕೂಮ್ಸ್ ಮುಂತಾದ ಊರುಗಳಲ್ಲಿನ ಹುಡುಗಿಯರೆಲ್ಲರೂ ಬಿಳಿಯರಾಗಿದ್ದು ನೋಡಲು ಆಕರ್ಷಕವಾಗಿ ಕಾಣುತ್ತಾರೆ. ಹುಡುಗಿಯರು ಮಾತ್ರವಲ್ಲ ಅಲ್ಲಿಯ ಹುಡುಗರು ಸಹ ಬಿಳಿಯರಾಗಿದ್ದು ನೋಡಲು ಅಷ್ಟೇ ಚನ್ನಾಗಿದ್ದಾರೆ. ಅಲ್ಲಿರುವದು ಬರೀ ವೈಟ್ ರೇಸ್! ಒಬ್ಬೇ ಒಬ್ಬ ಕಪ್ಪು ಮನುಷ್ಯನನ್ನು ನೋಡಲಾರರಿ. ಆದರೆ ಇಲ್ಲಿ ಬ್ಲ್ಯಾಕ್ ರೇಸ್ ಹೆಚ್ಚು. ಬಿಳಿಯರ ಸಂಖ್ಯೆ ತುಂಬಾ ವಿರಳ. ಕರಿಯರನ್ನು ಕಂಡರೆ ಬಿಳಿಯರಿಗೆ ಏನೋ ಒಂಥರಾ ತಾತ್ಸಾರ! ಅವಕಾಶ ಸಿಕ್ಕಾಗಲೆಲ್ಲಾ ಬಿಳಿಯರು ಕರಿಯರನ್ನು ಶೋಷಿಸುವದುಂಟು. ಅದಕ್ಕೊಂದು ಉದಾಹರಣೆ ಎಂದರೆ ಒಮ್ಮೆ ನಾವು ಸೆಭಾದಿಂದ ಟ್ರಿಪೊಲಿಗೆ ಬಸ್ಸ್‍ಲ್ಲಿ ಹೋಗುತ್ತಿರಬೇಕಾದರೆ ನಮ್ಮ ಜೊತೆ ಒಂದಿಬ್ಬರು ಕಪ್ಪು ಲಿಬಿಯನ್‍ರು ಪ್ರಯಾಣಿಸುತ್ತಿದ್ದರು. ಅಲ್ಲಿಯ ಚೆಕ್‍ಪೋಸ್ಟ್‍ಗಳಲ್ಲಿದ್ದ ಬಿಳಿ ಪೋಲಿಷ್‍ರು ಇವರನ್ನು ನೋಡಿ ಬೇಕಂತಲೇ ಅವರಿಗೆ ಆ ಪತ್ರ ಈ ಪತ್ರ ಎಂದೆಲ್ಲಾ ಕೇಳಿ ಅವರಿಗೆ ಕಿರುಕುಳ ನೀಡಿದ್ದನ್ನು ನಾನು ಗಮನಿಸಿದ್ದೆ. ಹೀಗಾಗಿ ಇವರಿಬ್ಬರ ಮಧ್ಯ ಆಗಾಗ್ಗೆ ಒಂದಲ್ಲಾ ಒಂದು ಕಾರಣಕ್ಕಾಗಿ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ ಮತ್ತು ಅದು ಗಡಾಫಿ ಸತ್ತ ಮೇಲೆ ಇನ್ನೂ ಹೆಚ್ಚಾಗಿದೆ ಎಂದು ಹೇಳಬಹುದು.
    ನಾನಿರುವ ಸ್ಥಳ ಘಾಟ್‍ನಲ್ಲಿ ಅಷ್ಟಾಗಿ ಈ ಬೇಧ-ಭಾವ ಇಲ್ಲ. ಕಾರಣ ಇಲ್ಲಿ ಹೆಚ್ಚಾನು ಹೆಚ್ಚು ಕಪ್ಪು ಜನರೇ ಇರುವದು. ಆದರೆ ಇಲ್ಲಿಂದ 650 ಕಿ.ಮೀ. ದೂರದಲ್ಲಿರುವ ಸೆಭಾದಲ್ಲಿ ಅರ್ಧ ಬಿಳಿಯರು ಅರ್ಧ ಕರಿಯರು ಇರುವದರಿಂದ ಅಲ್ಲಿ ಆಗಾಗ ಏನಾದರೊಂದು ತಿಕ್ಕಾಟಗಳು ನಡೆದು ಅದು ದೊಡ್ದದೊಡ್ದ ಗಲಾಟೆಗಳಲ್ಲಿ ಕೊನೆಯಾಗುವದುಂಟು. ಆದರೆ ನನ್ನ ಆರು ವರ್ಷದ ಅವಧಿಯಲ್ಲಿ ಯಾವತ್ತೂ ಕರಿಯರು ತಮ್ಮ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಂಡಿದ್ದನ್ನು ನಾನು ನೋಡಿಲ್ಲ. ಬದಲಾಗಿ ಅವರು ಕಪ್ಪಾಗಿರುವದಕ್ಕೆ ಹೆಮ್ಮೆ ಪಡುತ್ತಾರೆ. ಅಂದಹಾಗೆ ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಆಫ್ರಿಕಾದವರೆಂದರೆ ಬರೀ ಕಪ್ಪು ವರ್ಣದವರು, ಕರಿಯರು ಎಂದುಕೊಳ್ಳುತ್ತೇವೆ. ನಾನು ಕೂಡಾ ಹಾಗೆ ಎಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಇಲ್ಲಿ ಅನೇಕ ಬಿಳಿಯರನ್ನು ನೋಡಿದ ಮೇಲೆ ನನ್ನ ನಂಬಿಕೆ ಹುಸಿಯಾಯಿತು. ಏಕೆಂದರೆ ಆಫ್ರಿಕಾದ ಕೆಲವು ದೇಶಗಳು ಅಂದರೆ  ಈಜಿಪ್ಟ್, ಜೋರ್ಡಾನ್, ಸಿರಿಯಾ, ತುನಿಶಿಯಾ, ಮಾಲಿ, ಮೊರೆಟ್ಯಾನ್. ಮೊರ್ಯಾಕೋ ಇನ್ನೂ ಮುಂತಾದ ದೇಶಗಳಲ್ಲಿ ನಿಮಗೆ ಬರೀ ಬಿಳಿಯರೇ ಕಾಣಿಸುತ್ತಾರೆ. ಅವರು ಹೆಚ್ಚುಕಮ್ಮಿ ಯೂರೋಪಿಯನ್ನರಂತೆ ಕಾಣುತ್ತಾರೆ.  ಆ ಕಾರಣಕ್ಕಾಗಿಯೇ ಅವರಿಗೆ ಅದೇನೋ ಒಂಥರಾ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದ್ದು ಕರಿಯರನ್ನು ಅಸಡ್ಡೆಯಿಂದ ಕಾಣುತ್ತಾರೆ. ಅವರು ಕರಿಯರನ್ನು ಬಾಹ್ಯವಾಗಿ ಚನ್ನಾಗಿ ಮಾತನಾಡಿಸಿದರೂ ಅಂತರಂಗದಲ್ಲಿ ಯಾವತ್ತೂ ಪ್ರೀತಿಸಲಾರರು. ಈ ರೀತಿಯ ವರ್ಣ ಬೇಧ-ಭಾವ ಜಗತ್ತಿನ ಯಾವ ಭಾಗದಲ್ಲಿ ಇಲ್ಲ ಹೇಳಿ? ನಾವು ಏನೇ ಕಾನೂನು ರೂಪಿಸಿದ್ದರೂ ಶತಶತಮಾನಗಳಿಂದ ಬಂದ ಕರಿಯರೆಡೆಗಿನ ನಮ್ಮ ಅಸಡ್ಡೆ ಅಷ್ಟು ಸುಲಭವಾಗಿ ಹೋಗಲಾರದು ಎಂದು ಕಾಣುತ್ತದೆ.  
    ಅದೆಲ್ಲಾ ಇರಲಿ. ನಾನೀಗ ಹೇಳಹೊರಟಿದ್ದು ಇಲ್ಲಿನ ಮತ್ಶ್ಯಗಂಧಿಯರ ಬಗ್ಗೆ. ಮತ್ಸ್ಯಗಂಧಿಯರೆಂದರೆ ಮೊರೆಟ್ಯಾನಿಯನ್ ಚೆಲುವೆಯರ ಬಗ್ಗೆ. ಇವರು ಮೂಲತಃ ಮೊರ್ಯಾಟೋ ದೇಶದವರಾಗಿದ್ದು ಕೆಲಸವನ್ನು ಹುಡುಕಿಕೊಂಡೋ, ವ್ಯಾಪಾರದ ಉದ್ದೇಶದಿಂದಲೋ ಲಿಬಿಯಾಕ್ಕೆ ವಲಸೆ ಬರುತ್ತಾರೆ. ಹಾಗೆ ನೋಡಿದರೆ ಲಿಬಿಯಾ ಅರ್ಧಕ್ಕರ್ದ ಬರೀ ವಿದೇಶಿಯರಿಂದಲೇ ತುಂಬಿಹೋಗಿದೆ. ಏಕೆಂದರೆ ಇಲ್ಲಿಯವರು ವಿದೇಶಿಯರ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆಂದರೆ ಅವರಿಲ್ಲದೆ ಯಾವ ಕೆಲಸವೂ ನಡೆಯುವದಿಲ್ಲ. ಇದಕ್ಕೆ ಕಾರಣವೂ ಇದೆ. ಗಡಾಫಿ ಇರಬೇಕಾದಾಗ ಇವರು ಕೇಳಿದಾಗಲೆಲ್ಲಾ ಸಾಲ, ಊಟ, ವಸತಿ, ಶಿಕ್ಷಣ, ನೀರು, ವಿದ್ಯುತ್, ಮುಂತಾದವಗಳನ್ನು ಪುಕ್ಕಟೆಯಾಗಿ ಕೊಡುತ್ತಿದ್ದರಿಂದ ಇಲ್ಲಿನವರಿಗೆ ಕಷ್ಟಪಟ್ಟು ದುಡಿಯಬೇಕು ಅನಿಸಲೇ ಇಲ್ಲ. ದುಡಿಯಲು ಗೊತ್ತಿಲ್ಲದ ಇವರು ಸಹಜವಾಗಿ ಇತರರ ಮೇಲೆ ಅವಲಂಬಿತರಾದರು. ಹಾಗೆಂದೇ ಇಲ್ಲಿ ಈಜಿಪ್ಸಿಯನ್ನರು (ಮಶರಾತಿಗಳು), ಫಿಲಿಫೈನ್‍ಗಳು, ಜೋರ್ಡಾನಿಗಳು, ಸುಡಾನಿಗಳು, ಇರಾಕಿಗಳು, ಪಾಕಿಸ್ತಾನಿಗಳು, ಪ್ಯಾಲೆಸ್ತಿಯನ್‍ರು, ಇಂಡಿಯನ್‍ರು, ಗನಾಗಳು (ಗನಾ ದೇಶದವರು), ಗಾಂಬಿಯನ್‍ರು (ಗಾಂಬಿಯಾ ದೇಶದವರು), ನೈಜರ್ಗಳು (ನೈಜರ್ ದೇಶದವರು), ನೈಜಿರಿಯನ್‍ರು (ನೈಜಿರಿಯಾದವರು) ಇದ್ದಾರೆ. ಅವರೆಲ್ಲಾ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ಇವರಲ್ಲಿ ಇಂಡಿಯನ್‍ರು, ಜೋರ್ಡಾನಿಗಳು, ಸುಡಾನಿಗಳು, ಫಿಲಿಫೈನ್‍ಗಳು, ಇರಾಕಿಗಳು, ಹೆಚ್ಚು ಕಮ್ಮಿ ಉಪನ್ಯಾಸಕರಾಗಿಯೋ, ಡಾಕ್ಟರ್ ಆಗಿಯೋ, ಇಂಜಿನೀಯರ್ ಆಗಿಯೋ, ನರ್ಸ್‍ಗಳಾಗಿಯೋ ಕೆಲಸ ಮಾಡುತ್ತಾರೆ. ಈಜಿಪ್ಸಿಯನ್ನರು ಪಕ್ಕಾ ವ್ಯಾಪಾರಿಗಳಾಗಿದ್ದು ಇಲ್ಲಿನ ಮುಕ್ಕಾಲುಪಾಲು ಮಾರುಕಟ್ಟೆಯನ್ನು ಅವರೇ ಆಕ್ರಮಿಸಿಕೊಂಡಿದ್ದಾರೆ. ಪಾಕಿಸ್ತಾನಿಗಳು ಅಕ್ಕಸಾಲಿಗರಾಗಿಯೋ, ಇಲ್ಲವೇ ಫೋಟೋಗ್ರಾಫರ್ ಆಗಿಯೋ ಜೀವನ ನಡೆಸುತ್ತಾರೆ. ಇನ್ನು ಗನಾ, ಗಾಂಬಿಯಾ, ನೈಜರ್, ನೈಜೀರಿಯಾ ಮುಂತಾದ ಬಡ ರಾಷ್ಟ್ರಗಳಿಂದ ಬಂದವರು ಅತ್ಯಂತ ಕೆಳದರ್ಜೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇವರಲ್ಲಿ ಬಹುತೇಕರು ಸ್ವೀಪರ್ ಆಗಿಯೋ, ಪ್ಲಂಬರ್ ಆಗಿಯೋ, ಪೇಂಟರ್ ಆಗಿಯೋ, ಇಲ್ಲವೇ ಕಾಬ್ಲರ್ ಆಗಿಯೋ ಕೆಲಸ ಮಾಡುತ್ತಾರೆ. 

    ರಸ್ತೆ ಬದಿಯಲ್ಲಿ ತಮ್ಮ ಸಲಕರಣೆಗಳನ್ನಿಟ್ಟುಕೊಂಡು ಕೆಲಸಕ್ಕಾಗಿ ಕಾಯುತ್ತಿರುವ ನೈಜರ್, ನೈಜಿರಿಯಾ, ಗಾಂಬಿಯಾ, ಗನಾ ದೇಶದ ಯುವಕರು. 

    ಆದರೆ ಟ್ರಿಪೋಲಿ, ಬೆಂಗಾಜಿ, ಮಿಸ್ರಟಾ ಮುಂತಾದ ದೊಡ್ಡ ದೊಡ್ದ ನಗರಗಳಲ್ಲಿ ಕಷ್ಟಪಟ್ಟು ದುಡಿಯವ ಲಿಬಿಯನ್‍ರಿದ್ದಾರೆ. ಅಲ್ಲಿ ಜೀವನವೆಚ್ಚ ದುಬಾರಿಯಾಗಿರುವದರಿಂದ ಬಹುತೇಕರು ಎರೆಡೆರೆಡು ಕೆಲಸ ಮಾಡಿ ತಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಾನು ಟ್ರಿಪೋಲಿಯಲ್ಲಿ ಭೇಟಿ ಮಾಡಿದ ಅನೇಕ ಟ್ಯಾಕ್ಷಿ ಡ್ರೈವರ್ ಗಳು ಬೆಳಿಗ್ಗೆ ಲೆಕ್ಚರರ್ ಆಗಿಯೋ, ಟೀಚರ್ ಆಗಿಯೋ ಇಲ್ಲ ಲಾಯರ್ ಆಗಿಯೋ ಕೆಲಸ ಮಾಡುತ್ತಿದ್ದವರು. ಆ ನಿಟ್ಟಿನಲ್ಲಿ ಇಲ್ಲಿಯವರಿಗೆ ಉನ್ನತ ಹುದ್ದೆಯಲ್ಲಿದ್ದರೂ ಕೆಳದರ್ಜೆಯ ಕೆಲಸ ಮಾಡಲು ಯಾವುದೇ ಅಹಂ ಆಗಲಿ ಅಥವಾ Dignity of Labor  ಆಗಲಿ ಇಲ್ಲ.  
    ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವ ನೈಜರ್ ಯುವಕ.

    ಅಂದಹಾಗೆ ನಾನು ಮೊರೆಟ್ಯಾನಿಯನ್ ಚೆಲುವೆಯರ ಬಗ್ಗೆ ಹೇಳುತ್ತಿದ್ದೆ. ಬೇರೆ ವಿದೇಶಿಯರಂತೆ ಮೊರೆಟ್ಯಾನಿಯನ್ ಹೆಣ್ಣುಮಕ್ಕಳು ಸಹ ತಮ್ಮ ಸುಯೋಗ ಹುಡುಕಿಕೊಂಡು ಲಿಬಿಯಾಕ್ಕೆ ಬರುತ್ತಾರೆ. ಇಲ್ಲಿ ಚನ್ನಾಗಿ ದುಡಿದುಕೊಂಡು ಸ್ವಲ್ಪ ವರ್ಷಗಳ ನಂತರ  ಮತ್ತೆ ತಮ್ಮ ದೇಶಕ್ಕೆ ವಾಪಾಸಾಗುತ್ತಾರೆ. ಇನ್ನು ಕೆಲವರು ಇಲ್ಲಿಯೇ ಸೆಟಲ್ ಆಗುತ್ತಾರೆ. ಹೀಗೆ ಕೆಲಸ ಹುಡುಕಿಕೊಂಡು ಬಂದ ಇವರಲ್ಲಿ ಕೆಲವರು ಇಲ್ಲಿಯ ಹೋಟೆಲ್‍ಗಳಲ್ಲಿ ವೇಟರೆಸ್ ಆಗಿ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಅಂದರೆ ಆರ್ಥಿಕವಾಗಿ ಸಬಲವಾಗಿರುವವರು ತಾವೇ ಒಂದು ಸ್ವಂತ ಹೋಟೆಲ್ ಆರಂಭಿಸುತ್ತಾರೆ. ಮೊದಮೊದಲು ಸಣ್ಣದಾಗಿ ಆರಂಭಿಸಿ ನಿಧಾನವಾಗಿ ದೊಡ್ಡಮಟ್ಟವನ್ನು ತಲುಪುತ್ತಾರೆ. ಮತ್ತೆ ಕೆಲವರು ಈಗಾಗಲೇ ಸ್ಥಳೀಯರ ಒಡೆತನದಲ್ಲಿರುವ ದೊಡ್ಡ ದೊಡ್ದ ಹೋಟೆಲ್‍ಗಳಲ್ಲಿ ಊಟ, ತಿಂಡಿ, ಚಹಾ, ಕಾಫಿಯ ಕಾಂಟ್ರ‍್ಯಾಕ್ಟನ್ನು ತೆಗೆದುಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ. ಈ ಮೊರೆಟ್ಯಾನಿಯನ್‍ರ ಹೋಟೆಲ್‍ಗಳಲ್ಲಿ ಹೆಚ್ಚು ಕಮ್ಮಿ ಅವರ ಹೆಣ್ಣುಮಕ್ಕಳೇ ತುಂಬಿರುತ್ತಾರೆ. ಅಂದರೆ ಹೋಟೆಲ್ ಮಾಲಿಕರಿಂದ ಹಿಡಿದು, ಅಡಿಗೆ ಮಾಡುವವರು, ಲಾಂಡ್ರಿಯವರು, ಕ್ಲೀನ್ ಮಾಡುವವರು, ವೇಟರ‍್‍ಗಳು ಎಲ್ಲವನ್ನೂ ಅವರೇ ಮಾಡುತ್ತಾರೆ. ವ್ಯಾಪಾರದ ದೃಷ್ಟಿಯಿಂದ ಗಂಡಸರನ್ನು ಆಕರ್ಷಿಸಲು ಇದು ಅವರಿಗೆ ತುಂಬಾ ಅನುಕೂಲಕರವಾಗಿದೆ. ನೋಡಲು ಹೆಚ್ಚುಕಮ್ಮಿ ಯೂರೋಪಿಯನ್ನರಂತಿದ್ದು ಮೈಕೈ ತುಂಬಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸದಾ ಸ್ವಚ್ಛ ಸ್ವಚ್ಛ! ಇವರು ಹತ್ತಿರ ಬಂದರೆ ಅದೆಂಥದೋ ಮೀನಿನ ವಾಸನೆ ಬರುವದರಿಂದ ನಾವು ಅವರನ್ನು ‘ಮತ್ಸ್ಯಗಂಧಿಯರು’ ಎಂದು ಕರೆಯುತ್ತೇವೆ. ಒಮ್ಮೆ ನನ್ನ ಲಿಬಿಯನ್ ಫ್ರೆಂಡ್ ಇವರನ್ನು ಕುರಿತು ಹೀಗೆ ಹೇಳಿದ್ದ “ಇವರು ವೇಟರ್ ಕೆಲಸದ ಜೊತೆಗೆ ಅವಕಾಶ ಸಿಕ್ಕರೆ ಮೈ ಮಾರಿಕೊಳ್ಳಲೂ ತಯಾರಿರುತ್ತಾರೆ. ಹಾಗೆಂದೇ ಇವರ ಹೋಟೆಲ್‍ಗಳು ಸದಾ ಗಂಡಸರಿಂದ ಕಿಕ್ಕಿರಿದು ತುಂಬಿರುತ್ತವೆ.  ಹಾಗಂತಾ ಅವರು ತಮ್ಮ ಹೋಟೆಲ್‍ನಲ್ಲಿ ಸೂಳೆಗಾರಿಕೆಯನ್ನು ನಡೆಸುತ್ತಾರೆ ಅಂತಾ ಅರ್ಥವಲ್ಲ. ಏಕೆಂದರೆ ಲಿಬಿಯಾದಲ್ಲಿ ಸೂಳೆಗಾರಿಕೆಗೆ ಅವಕಾಶವಿಲ್ಲ. ಅದು ಕಾನೂನು ಬಾಹಿರವಾಗಿದ್ದು ಸಿಕ್ಕಿಹಾಕಿಕೊಂಡರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಅವರು ತಾವು ತಾವೇ ಈ ಕಾರ್ಯಕ್ಕೆ ಮುಂದಾಗುವದಿಲ್ಲ ಮತ್ತು ಹಾಗೆಲ್ಲಾ ಇವರು ಗಂಡಸರು ಕರೆದ ತಕ್ಷಣ ಬರುವವರಲ್ಲ! ಮೊದಲು ಗಂಡಸರು ಇವರ ಹೋಟೆಲ್‍ಗಳಿಗೆ ಮೇಲಿಂದ ಮೇಲೆ ಭೇಟಿ ಕೊಟ್ಟು ಅವರಿಗೆ ಹತ್ತಿರವಾಗಬೇಕು. ನಿಧಾನಕ್ಕೆ ಅವರನ್ನು ಆಕರ್ಷಿಸಬೇಕು. ಕಣ್ಣಲ್ಲೇ ಕಾಮ ಸಂದೇಶಗಳನ್ನು ಕಳಿಸಬೇಕು. ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಹತ್ತಿರವಾಗಬೇಕು, ಒಂದೆರೆಡು ಫ್ಲರ್ಟ್ ಮಾಡಬೇಕು. ಸುಳ್ಳೇಸುಳ್ಳು ಒಂದು ಲವ್ ಹುಟ್ಟಿಸಬೇಕು. ವ್ಯವಹಾರ ಕುದುರಿಸಬೇಕು. ಆಮೇಲಿನಿದ್ದರೂ ಮುಂದಿನದೆಲ್ಲಾ; ಅದೂ ಅವರು ಆ ಗಂಡಸರನ್ನು ಇಷ್ಟಪಟ್ಟರೆ ಮಾತ್ರ. ನಂತರ ಕದ್ದು ಮುಚ್ಚಿ  ಅವರು ಸೂಚಿಸಿದ ಒಂದು ರಹಸ್ಯ ಸ್ಥಳಕ್ಕೆ ಹೋಗಿ ಮುಗಿಸಿಕೊಳ್ಳಬೇಕು. ಹಾಗೆಂದೇ ಅವರೊಟ್ಟಿಗೆ ವ್ಯವಹರಿಸುವಾಗ ತುಂಬಾ ಹುಶಾರಾಗಿರಬೇಕಾಗುತ್ತದೆ. ಹಾಗಂತಾ ಬರೀ ಇವರು ಮಾತ್ರ ಸೂಳೆಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಾ ಅಲ್ಲ. ಪಕ್ಕದ ನೈಜರ್, ನೈಜಿರಿಯಾ, ಗನಾ ಮುಂತಾದ ಬಡ ರಾಷ್ಟ್ರಗಳ ಹೆಣ್ಣುಮಕ್ಕಳು ತಮ್ಮ ಹೊಟ್ಟೆ ಹೊರೆದುಕೊಳ್ಳಲು ಇಲ್ಲಿಗೆ ಬಂದು ಸೂಳೆಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಸಹ ಹೇಳಿದ್ದ. ಗಡಾಫಿ ಇರಬೇಕಾದರೆ ಸೂಳೆಗಾರಿಕೆ ಅಷ್ಟಾಗಿ ನಡೆಯುತ್ತಿರಲಿಲ್ಲವೆಂದೂ ಈಗ ಧಾರಾಳವಾಗಿ ನಡೆಯುತ್ತಿದೆ ಎಂದು ಇಲ್ಲಿನವರು ಹೇಳುತ್ತಾರೆ. ಆದರೆ ಬಹಳಷ್ಟು ಲಿಬಿಯನ್‍ರು ಈ ಕಪ್ಪು ಸುಂದರಿಯರನ್ನು ಇಷ್ಟಪಡದೆ ಟ್ರಿಪೋಲಿಗೆ ಹತ್ತಿರವಿರುವ ತುನಿಸಿಯಾಕ್ಕೆ ಅಲ್ಲಿಯ ವೇಶ್ಯೆಯರನ್ನು ಅನುಭವಿಸಲು ಆಗಾಗ್ಗೆ ಹೋಗುತ್ತಿರುತ್ತಾರೆಂದು ಹೇಳುತ್ತಾರೆ.    
    ಅದೇನೆ ಇರಲಿ. ನಾನಾ ಕಾರಣಗಳಿಗಾಗಿ ತಮ್ಮ ಕುಟುಂಬಗಳನ್ನು ತಮ್ಮ ದೇಶದಲ್ಲಿಯೇ ಬಿಟ್ಟು ಇಲ್ಲಿ ನೆಲೆಸಿರುವ ಅನೇಕ ವಿದೇಶಿಯರು ಈ ಮೊರೆಟ್ಯಾನಿಯನ್ ಚೆಲುವೆಯರ ಬೆನ್ನು ಹತ್ತುವದುಂಟು. ಅವರನ್ನು ಪಡೆಯುವದು ಅಷ್ಟು ಸುಲಭವಲ್ಲವೆಂದು ಗೊತ್ತಾದ ಮೇಲೂ ಅವರ ಮೇಲೆ ಸುಖಾಸುಮ್ಮನೆ ಆಸೆಯನ್ನು ಬೆಳೆಸಿಕೊಳ್ಳುವದುಂಟು. ಎಷ್ಟೋ ಸಾರಿ ಈ ಗಂಡಸರು ತಮ್ಮ ಹತ್ತಿಟ್ಟ ಕಾಮನೆಗಳನ್ನು ಒಮ್ಮೆ ಹೊರಗೆಡವಿ ಸುಖದಸುಪ್ಪತಿಗೆಯಲ್ಲಿ ತೇಲೊಣ, ದೇಹದ ವಾಂಛೆಗಳನ್ನು ಒಮ್ಮೆ ತೀರಿಸಿಕೊಂಡುಬಿಡೋಣ ಎಂದುಕೊಂಡು ಹೋಗುತ್ತಾರೆ. ಆದರೆ ಅವರನ್ನು ಅಷ್ಟು ಸುಲಭವಾಗಿ ಆಕರ್ಷಿಸಲಾಗದೆ ಸೋತು ಬಂದ ದಾರಿಗೆ ಸುಂಖವಿಲ್ಲದೆ ಹಿಂದಿರುಗುತ್ತಾರೆ. ಮೇಲಾಗಿ ಅವರು ಇಲ್ಲಿಯ ರೀತಿರಿವಾಜುಗಳಿಗೆ ಹೆದರಿ ಸುಮ್ಮನಾಗಿಬಿಡುತ್ತಾರೆ. ಹಾಗೆಂದೇ ನಾನು ಈ ಮೊರೆಟ್ಯಾನಿಯನ್ ಚಲುವೆಯರನ್ನು ಬರೀ ಮನಸ್ಸನ್ನು ಕೆಡಿಸವ ಮತ್ಸ್ಯಗಂಧಿಯರೆಂದು ಮಾತ್ರ ಕರೆದಿದ್ದು!

    -ಉದಯ್ ಇಟಗಿ