Demo image Demo image Demo image Demo image Demo image Demo image Demo image Demo image

ಬೆಳಗಿನ ಹತ್ತು ಘಂಟೆ

  • ಬುಧವಾರ, ಜುಲೈ 25, 2012
  • ಬಿಸಿಲ ಹನಿ
  • ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
    ಅವವೇ ಸಂಗತಿಗಳು ಅವವೇ ವಿಷ್ಯಗಳು
    ಎಲ್ಲಕಡೆ ನಡೆಯುತ್ತಿರುತ್ತವೆ
    ಅದೇ ಜನ ಅದೇ ಕೆಲಸ
    ಅದೇ ರಸ್ತೆ ಅದೇ ನಿಲ್ದಾಣ
    ಅದೇ ಓಟ ಅದೇ ಟ್ರ‍ಾಫಿಕ್ ಜಾಮ್
    ಅದೇ ಗದ್ದಲ ಅದೇ ನೂಕುನುಗ್ಗಲು
    ಅದೇ ದಾವಂತ ಅದೇ ನಿಟ್ಟುಸಿರು!

    ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
    ತಮ್ಮ ಹೆಂಡತಿ-ಮಕ್ಕಳನ್ನು ಮನೆಯಲ್ಲಿ ಬಿಟ್ಟು
    ಕೆಲಸಕ್ಕೆ ಹೊರಹೋಗುವ ಗಂಡಸರು
    ಸಾಯಂಕಾಲದಷ್ಟೊತ್ತಿಗೆ ಸೋತು ಸುಣ್ಣವಾಗಿ
    ಬಾಡಿದ ಮುಖವನ್ಹೊತ್ತು ಮನೆಗೆ ಹಿಂದಿರುಗುತ್ತಾರೆ.
    ಆದರೂ ಅವರು ಹೇಳುತ್ತಾರೆ
    ಈ ಬದುಕೊಂದು ಕಲೆ
    ಇಲ್ಲಿ ಪ್ರತಿಯೊಬ್ಬ ಮನುಷ್ಯನೂ ಕಲೆಗಾರೆನೇ!
    ಆದರೆ ಅವರು ಬದುಕನ್ನು ಕಲೆಯಾಗಿಸಿ ಬದುಕುವದಿಲ್ಲ
    ಬದಲಿಗೆ ತಮಗೆ ತಿಳಿದಂತೆ ಬದುಕುತ್ತಾರೆ
    ಮತ್ತು ತಾವು ಬದುಕುವ ರೀತಿಗೆ
    ತಂತಮ್ಮದೇ ವ್ಯಾಖ್ಯಾನವನ್ನು ನೀಡುತ್ತಾರೆ.

    ಒಮ್ಮೊಮ್ಮೆ ಸಂಜೆಹೊತ್ತು
    ನಾನು ಮನೆಗೆ ಮರಳಿದಾಗ
    ಅಕರಾಳವಿಕರಾಳವಾಗಿ
    ಮಿಂಚುಗುಡುಗುಗಳಂತೆ ಆರ್ಭಟಿಸುತ್ತಾ
    ನನ್ನ ಹೃದಯವನ್ನು ನಾನೇ ಹಿಂಡಿಕೊಳ್ಳುತ್ತೇನೆ.
    ತಕ್ಷಣ ಕೆಲವು ಮನುಷ್ಯಾಕೃತಿಗಳು ನೆಲದಿಂದೆದ್ದು
    ತಮ್ಮಷ್ಟಕ್ಕೆ ತಾವೇ ಕೇಕೆಹಾಕಿ ಕುಣಿಯತೊಡಗುತ್ತವೆ.

    ಮೂಲ ಇಂಗ್ಲೀಷ್: ಕುನ್ವರ್ ನಾರಾಯಣ್
    ಭಾವಾನುವಾದ: ಉದಯ್ ಇಟಗಿ

    ಲಿಬಿಯಾದ ಚುನಾವಣೆಗಳೂ..........ನೇಪಥ್ಯಕ್ಕೆ ಸರಿದುಹೋದ ಗಡಾಫಿಯೂ.........

  • ಸೋಮವಾರ, ಜುಲೈ 16, 2012
  • ಬಿಸಿಲ ಹನಿ
  • ಲಿಬಿಯಾದಲ್ಲಿ ಕ್ರಾಂತಿಯೆದ್ದ ದಿನದಿಂದ ಹಿಡಿದು ಅದು ಮುಗಿದಾದ ಮೇಲೂ ನಾನು ಆಗಾಗ ನನ್ನ ಬ್ಲಾಗಿನಲ್ಲಿ ಗಡಾಫಿ ಬಗ್ಗೆ, ಆತ ಇಲ್ಲಿಯ ಜನಕ್ಕೆ ಕೊಟ್ಟ ಸೌಲತ್ತುಗಳ ಬಗ್ಗೆ, ಇಲ್ಲಿಯ ಕ್ರಾಂತಿಯ ಹಿಂದಿನ ಕೈವಾಡದ ಬಗ್ಗೆ, ಆತನ ದುರಂತ ಸಾವಿನ ಬಗ್ಗೆ, ಇಲ್ಲಿಯವರು ಆತನನ್ನು ಮಿಸ್ ಮಾಡಿಕೊಂಡಿರುವದರ ಬಗ್ಗೆ, ಆತನಿಲ್ಲದ ಲಿಬಿಯಾದ ಬಗ್ಗೆ ಹಾಗೂ ಇಲ್ಲಿನ ಸಣ್ಣಪುಟ್ಟ ಗಲಭೆಗಳ ಬಗ್ಗೆ ಕಾಲಕಾಲಕ್ಕೆ ನಾ ಪ್ರತ್ಯಕ್ಷ ಕಂಡಂತೆ ನಿಮಗೆ ವರದಿ ಮಾಡಿದ್ದೇನೆ. ಈಗ ಅಂಥದೇ ಮತ್ತೊಂದು ವಿಷಯವನ್ನು ಆದರೆ ಈ ಮೇಲಿನ ವಿಷಯಗಳಿಗೆ ತದ್ವಿರುದ್ಧವಾದ ಸುದ್ದಿಯೊಂದನ್ನು ವರದಿ ಮಾಡಲು ಹೊರಟಿದ್ದೇನೆ. ಹೊಸನೀರು ಹರಿದು ಬಂದಂತೆ ಹಳೆನೀರು ಕೊಚ್ಚಿಹೋಗುವದು ಸಹಜ. ಅಂತೆಯೇ ಹಂಗಾಮಿ ಸರಕಾರದ “ದೈತ್ಯ ಶಕ್ತಿ”ಯ ಮುಂದೆ ಹಳೆ ಸರಕಾರದ ರೀತಿ ರಿವಾಜುಗಳು ಮತ್ತು ಬೆಂಬಲಿಗರು ಹೇಗೆ ತೆರೆಮರೆಯ ಹಿಂದೆ ಸರಿಯುತ್ತಿದ್ದಾರೆ ಹಾಗೂ ಮೊನ್ನೆ ಮೊನ್ನೆಯವರೆಗೂ ಗಡಾಫಿಯನ್ನು ಕೊಂಡಾಡುತ್ತಿದ್ದ ಜನ ಈಗ ಹೇಗೆ ಕ್ರಮೇಣ ಅವನನ್ನು ಮರೆತು ಹೊಸ ಬದುಕಿನತ್ತ ಮುಖ ಮಾಡುತ್ತಿದ್ದಾರೆ ಎನ್ನುವದನ್ನು ಹೇಳಲು ಹೊರಟಿದ್ದೇನೆ.

    ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಅಂದರೆ ಜುಲೈ ೭ ರಂದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ರಾಜ್ಯ ಸ್ಥಾಪನೆಗಾಗಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆದು ಹೊಸ ಇತಿಹಾಸ ಸೃಷ್ಟಿಸಿದವು. ಮಾತ್ರವಲ್ಲ ಸುಮಾರು ಐವತ್ತು ವರ್ಷಗಳ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆಗೂ ಪಾತ್ರವಾದವು. ಹಾಗೆ ನೋಡಿದರೆ ಇದು ಲಿಬಿಯಾದ ಎರಡನೆ ಚುನಾವಣೆ. ಮೊಟ್ಟ ಮೊದಲನೆಯ ಚುನಾವಣೆ ನಡೆದಿದ್ದು ಫ಼ೆಬ್ರುವರಿ ೧೯, ೧೯೫೨ರಂದು. ಲಿಬಿಯಾ ಆಗಷ್ಟೆ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆಹೊಂದಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಯೂರೋಪಿಯನ್ನರ ದಾಸ್ಯದಿಂದ ಮುಕ್ತಿಹೊಂದಿದ ಆಫ್ರಿಕಾ ಖಂಡದ ಮೊಟ್ಟಮೊದಲ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಗಿನ ದೊರೆ ಮೊದಲನೇ ಇದ್ರಿಸ್ ವಿಶ್ವಸಂಸ್ಥೆಯ ಜೊತೆ ಲಿಬಿಯಾದ ಸಂಧಾನುಕಾರನಾಗಿದ್ದುಕೊಂಡು ಆ ದೇಶಕ್ಕೆ ಸ್ವಾತಂತ್ರ್ಯವನ್ನು (ಡಿಸೆಂಬರ್ ೨೪, ೧೯೫೧ರಂದು) ದಕ್ಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ. ಹೀಗೆ ಪರಕೀಯರಿಂದ ಬಿಡುಗಡೆ ಹೊಂದಿದ ದೇಶಕ್ಕೆ ಹೊಸ ಸರಕಾರವೊಂದನ್ನು ಸ್ಥಾಪಿಸುವ ಹುಕಿಯಿತ್ತು. ಅದು ಪ್ರಜಾಪ್ರಭುತ್ವದ ರೀತಿಯಲ್ಲಿದ್ದರೆ ಸರಿಯೆಂದುಕೊಂಡು ಎಲ್ಲ ಸೇರಿ ದೇಶದ ತುಂಬಾ ಫೆಬ್ರುವರಿ ೧೯, ೧೯೫೨ರಂದು ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದರು. ಇಪ್ಪತ್ತೊಂದರ ಮೇಲ್ಪಟ್ಟ ಎಲ್ಲ ನಾಗರಿಕರಿಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಕೆಲವು ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ರಹಸ್ಯ ಮತದಾನ ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಮತಪೆಟ್ಟಿಗೆಯಲ್ಲಿ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಮತದಾರರು ಯಾರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ ಎನ್ನುವ ಹೇಳಿಕೆಯನ್ನು ಕಮಿಟಿಯ ಮುಂದೆ ಧ್ವನಿಮುದ್ರಿಸಲಾಯಿತು.

    ೧೯೫೨ರಲ್ಲಿ ನಡೆದ ಚುನಾವಣೆಯ ಒಂದು ಚಿತ್ರ
    ಆಗ ಅಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ನನ್ನು ಬೆಂಬಲಿಸುವ ಗುಂಪು. ಇನ್ನೊಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಶಿರ್ ಬೇ ಸಾದವಿಯನ್ನು ಬೆಂಬಲಿಸುವ ಗುಂಪು. ಚುನಾವಣೆಯಲ್ಲಿ ಒಟ್ಟು ೧೪೧ ಅಬ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಹೆಚ್ಚಿನವರು ಸ್ವತಂತ್ರ ಅಬ್ಯರ್ಥಿಗಳು. ಫಲಿತಾಂಶ ಹೊರಬಂದಾಗ ಕಾಗ್ರೆಸ್ ಪಕ್ಷ ಟ್ರಿಪೋಲಿಯಲ್ಲಿ ಗೆದ್ದಿತ್ತು. ಆದರೆ ಬಹಳಷ್ಟು ಸೀಟುಗಳನ್ನು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ಬಾಚಿಕೊಂಡಿದ್ದ. ಅಲ್ಲಿಗೆ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿ ವಿರೋಧ ಪಕ್ಷದ ಪಡೆ ಹೋರಾಟಕ್ಕೆ ಇಳಿಯಿತು. ನೋಡನೋಡುತ್ತಿದ್ದಂತೆ ಹೋರಾಟ ಹಿಂಸೆಗೆ ತಿರುಗಿ ಘಟನೆಯಲ್ಲಿ ಒಂದಿಬ್ಬರು ಸತ್ತು ಸಾಕಷ್ಟು ಜನ ಗಾಯಗೊಂಡರು. ಈ ಘಟನೆ ಇಡಿ ಚುನಾವಣೆ ಪ್ರಕ್ರಿಯೆಯ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿ ಆಗಷ್ಟೆ ಮುಗಿದ ಚುನಾವಣೆಯನ್ನು ರದ್ದುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮುಂದೆ ಲಿಬಿಯಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಒಂದನೇಯ ಇದ್ರಿಸ್‍ನಿಗೆ ಅಧಿಕಾರವನ್ನು ವಹಿಸುವದರ ಮೂಲಕ ಅವನನ್ನು ಸ್ವತಂತ್ರ ಲಿಬಿಯಾದ ಮೊಟ್ಟಮೊದಲ ಅರಸನನ್ನಾಗಿ ಮಾಡಿದರು. ಆದರೆ 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ಈ ರಾಜಕುಮಾರನನ್ನು ಅರಸೊತ್ತಿಗೆಯಿಂದ ಕಿತ್ತೆಸೆದು ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಒಂದು ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಸಪ್ಟೆಂಬರ್ ೧, ೧೯೬೯ರಂದು ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸ ಮೌಮರ್ ಗಡಾಫಿಯ ಕೈವಶವಾಯಿತು. ಆತ ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕೊನೆಗೆ ಹೇಳಹೆಸರಿಲ್ಲದಂತೆ ನಾಶವಾಗಿಹೋಗಿದ್ದು ಈಗ ಇತಿಹಾಸ.

    ಚುನಾವಣೆ ಅಂದ ಮೇಲೆ ಗದ್ದಲ, ಗಲಾಟೆಗಳಿರುವದು ಸರ್ವೇ ಸಾಮಾನ್ಯ. ಇನ್ನು ಲಿಬಿಯಾದ ಚುನುವಾಣೆಯ ಬಗ್ಗೆ ಕೇಳಬೇಕೆ? ಅಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆಯಲ್ಲಿ ಕೊನೆಯಾಗಿ ಎಲ್ಲ ತಣ್ಣಗಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಇಲ್ಲಿ ಗಡಾಫಿಗೆ ಸಾಕಷ್ಟುಜನ ಬೆಂಬಲಿಗರಿರುವದರಿಂದ ಅವರ ಮಧ್ಯ ಮತ್ತು ಹಂಗಾಮಿ ಸರಕಾರ NTC ಯ ಮಧ್ಯ ಆಗಾಗ ಘರ್ಷಣೆಗಳೇರ್ಪಡುತ್ತಿದ್ದವು. ಅವರನ್ನು ಹತ್ತಿಕ್ಕಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಚುನಾವಣೆಯ ಹಿಂದಿನ ದಿನದವರೆಗೂ ಆಗಾಗ ಅಲ್ಲಲ್ಲಿ ಏನಾದರೊಂದು ಕೆಟ್ಟಘಟನೆ ಜರಗುತ್ತಲಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿದ್ದರೂ ಚುನಾವಣೆಗೆ ಸಂಬಂಧಪಟ್ಟಹಾಗೆ ಹೇಳಬೇಕೆಂದರೆ ಗಡಾಫಿ ಬೆಂಬಲಿಗರಿಗೆ ಮತ್ತು ಆತನ ಅಧಿಕಾರದ ಅವಧಿಯಲ್ಲಿದ್ದ ಅಧಿಕಾರಿಗಳಿಗೆ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ ಇದ್ದುದಕ್ಕಾಗಿ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ಇನ್ನು ಬೆಂಗಾಜಿಯ ಪೂರ್ವಭಾಗದ ಜನ ನಮ್ಮದು ದೊಡ್ಡ ಕ್ಷೇತ್ರವಾಗಿದ್ದರಿಂದ ಹೆಚ್ಚು ಟಿಕೇಟುಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದರು. ಅವರು ಕೇಳಿದಷ್ಟು ಟಿಕೇಟುಗಳು ಸಿಗದೆ ಹೋದಾಗ ನೇರವಾಗಿ ಚುನಾವಣಾ ಕಮಿಷನರ್ ಕಛೇರಿಗೆ ದಾಳಿಯಿಟ್ಟು ಅಲ್ಲಿಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಇನ್ನು ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಚುನಾವಣೆ ನಡೆಯಲಿ. ಸಂವಿಧಾನವೇ ಇಲ್ಲದ ಮೆಲೆ ಅದ್ಹೇಗೆ ಚುನಾವಣೆಗಳನ್ನು ನಡೆಸುತ್ತೀರಿ? ಎಂದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಚುನಾವಣೆಯ ಹಿಂದಿನ ದಿವಸ ಪೂರ್ವ ಬೆಂಗಾಜಿಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಇದಲ್ಲದೆ ಬೆಂಗಾಜಿಯ ಮೆಡಿಕಲ್ ಕಾಲೇಜಿನ ಮೇಲೆಯೂ ಸಹ ದಾಳಿ ನಡೆದಿದೆ. ಈ ಎಲ್ಲದರ ಮಧ್ಯ ಸಾಕಷ್ಟು ಬಿಗಿಭದ್ರತೆಗಳ ನಡುವೆ ಹಂಗಾಮಿ ಸರಕಾರ ಚುನಾವಣೆಗಳನ್ನು ಜುಲೈ ೭, ೨೦೧೨ರಂದು ಒಟ್ಟು ೭೨ ಕ್ಷೇತ್ರಗಳಲ್ಲಿ ನಡಿಸಿತು. ಆ ಪೈಕಿ ೧೨೦ ಸ್ವತಂತ್ರ ಅಬ್ಯರ್ಥಿಗಳು ಹಾಗೂ ೮೦ ಬೇರೆಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರು. ಮತದಾನ ನಡೆದಿದ್ದು ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ. ಇದಲ್ಲದೆ ಬಹಳಷ್ಟು ಲಿಬಿಯನ್ ನಾಗರಿಕರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜೋರ್ಡಾನ್, ಬ್ರಿಟನ್‍ನಲ್ಲಿ ನೆಲಿಸಿದ್ದರಿಂದ ಅಲ್ಲೆಲ್ಲಾ ಮತಗಟ್ಟೆಗಳನ್ನು ಆರಂಭಿಸಿದ್ದರು. ಅವರಿಗೆಲ್ಲಾ ಒಂದು ವಾರದಷ್ಟು ಕಾಲದ ಗಡುವನ್ನು ಕೊಟ್ಟು ಬೆಳಿಗ್ಗೆ ೯ರಿಂದ ಸಂಜೆ ೫ರ ಒಳಗೆ ಒಂದು ವಾರದ ಅವಧಿಯಲ್ಲಿ ಯಾವಾಗಬೇಕಾದರು ಬಂದು ಮತಹಾಕಲು ಅನುಕೂಲಮಾಡಿಕೊಟ್ಟಿದ್ದರು.

    ಚುನಾವಣೆ ಸಿದ್ಧತೆಯ ಮುಂಚೆ ತೆಗೆದ ಮತಪೆಟ್ಟಿಗೆಯ ಚಿತ್ರ
    ಅಂದು ಸುಮಾರು ಅರ್ಧ ಶತಮಾನದ ನಂತರ ಲಿಬಿಯಾ ಚುನಾವಣೆಯನ್ನು ನಡೆಸಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಬಹಳಷ್ಟು ಜನಕ್ಕೆ ಇದೇ ಮೊದಲ ಚುನಾವಣೆಯಾಗಿತ್ತು. ಮತಗಟ್ಟೆಯ ಒಳಕ್ಕೆ ಹೋಗುವ ಮುನ್ನ ಮತದಾರರನ್ನು ಸಾಕಷ್ಟು ಸೆಕ್ಯೂರಿಟಿ ತಪಾಸಣೆಗೆ ಒಳಪಡಿಸಿ ಒಳಗೆ ಕಳಿಸಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿ ಮತಗಟ್ಟೆಯಲ್ಲಿ ಸಾಕಷ್ಟು ಜನ ಪೋಲಿಷರನ್ನು ನೇಮಿಸಲಾಗಿತ್ತು. ಹೀಗಿದ್ದೂ ಮತದಾನ ಭಯ, ಆತಂಕಗಳ ನಡುವೆಯೇ ಆರಂಭವಾಯಿತು. ಕೆಲವರು ಉತ್ಸಾಹದಿಂದ ಭಾಗವಹಿಸಿದರೆ, ಇನ್ನು ಕೆಲವರು ಅರೆಮನಸ್ಸಿನಿಂದ ಭಾಗವಹಿಸಿದರು. ಮತ್ತೆ ಕೆಲವರು ಮೊಟ್ಟಮೊದಲಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವದಕ್ಕೋಸ್ಕರ ಭಾಗವಹಿಸಿದರು. ಇದೀಗ ಎಣಿಕೆಯೆಲ್ಲಾ ಮುಗಿದು ಫಲಿತಾಂಶ ಹೊರಬಂದಿದ್ದು National Forces Alliance (NFA) ಬಹುಮತಗಳಿಸಿರುವದು ಬಹುತೇಕ ಖಚಿತವಾಗಿದೆ. ಲಿಬಿಯಾ ಪ್ರಜಾಪ್ರಭುತ್ವ ಸರಕಾರ ರಚನೆಗಾಗಿ ಉತ್ಸಾಹದಿಂದ ಮುನ್ನುಗ್ಗುತ್ತಿದೆ.

    ಲಿಬಿಯಾದಲ್ಲಿ ಎದ್ದ ಕ್ರಾಂತಿ ತಣ್ಣಗಾದ ಮೇಲೆ ಈಗ್ಗೆ ಆರು ತಿಂಗಳ ಹಿಂದೆ ನಾನು ಮತ್ತೆ ನಮ್ಮ ವಿಶ್ವವಿದ್ಯಾನಿಲಯದ ಕರೆಯ ಮೇರೆಗೆ ನನ್ನ ಕೆಲಸಕ್ಕೆ ಬಂದು ಹಾಜರಾಗಿದ್ದೆ. ಆ ಪ್ರಕಾರ ನಾನಿಲ್ಲಿಗೆ ಬಂದಿಳಿದಾಗ ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ ಹೆಮ್ಮೆ ಈ ಜನರಲ್ಲಿರುತ್ತದೆ, ಹೊಸ ಗಾಳಿ ಬೀಸುತ್ತಿರುತ್ತದೆ. ಹೊಸ ಕನಸುಗಳು, ಹೊಸ ಚಿಂತನೆಗಳಿಗಾಗಿ ಜನರು ತುಡಿಯುತ್ತಿರುತ್ತಾರೆಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಈ ವಿಷಯದ ಕುರಿತಂತೆ ನಾನು ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸುತ್ತಾ ಹೋದೆ. ಆಗ ನನಗೆ ಸಿಕ್ಕ ಚಿತ್ರಣ ಅಚ್ಚರಿಯನ್ನು ಮೂಡಿಸಿತ್ತು. ಅವರು ಹೇಳಿದ್ದು ಹೀಗಿತ್ತು: “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ತಮಗೇ ಸೆಡ್ದು ಹೊಡೆದು ನಿಲ್ಲುತ್ತಾನೆ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರವಾದ ದ್ವೇಷವಿತ್ತು ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಹೀಗಾಗಿ ಅವನನ್ನು ಮುಗಿಸಿದರು. ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಮೇಲಾಗಿ ಗಡಾಫಿ ಇಡಿ ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಒಗ್ಗೂಡಿಸಿ “ಯುನೈಟೆಡ್ ನೇಶನ್ಸ್ ಆಫ್ ಆಫ್ರಿಕಾ” ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದ. ಒಂದುವೇಳೆ ಆಫ್ರಿಕಾ ಖಂಡದ ಎಲ್ಲ ರಾಷ್ಟ್ರಗಳು ಒಗ್ಗೂಡಿದ್ದರೆ ಎಲ್ಲ ರೀತಿಯಿಂದ ಅಮೆರಿಕಾಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ನು ಯಾವ ಭಯವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಟ್ಟಿದ್ದರು. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದ್ದೆ. ಅದಕ್ಕವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್‍ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್‍ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ ಮತ್ತು ಮಿತ್ರರಾಷ್ಟ್ರಗಳ ಪಾಲಾಗುತ್ತಿದೆ.” ಎಂದು ಕಣ್ಣೀರಿಟ್ಟಿದ್ದರು. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸಿದ್ದರು. ಅದೇನೆಂದರೆ ಈ ಅಮೆರಿಕನ್ನರಿಗೆ ಮತ್ತು ಮಿತ್ರರಾಷ್ಟ್ರಗಳಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಎಲ್ಲ ರೀತಿಯಿಂದ ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತ್ತಿರಲಿಲ್ಲ ಹಾಗೂ ಅವರ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಅಭಿವೃದ್ಧಿಗೆ ಭಾರಿ ಹಿನ್ನೆಡೆಯುನ್ನುಂಟು ಮಾಡಲಿದ್ದವು. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಟ್ಟಿದ್ದರು.

    ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಸ್ವತಂತ್ರ ಅಬ್ಯರ್ಥಿ
    ಈಗ ಅದೇ ಜನ ಬೇರೆ ದಾಟಯಲ್ಲಿ ಮಾತನಾಡುತ್ತಿದ್ದಾರೆ. ಹೋದವನು ಹೋದ ಇನ್ನು ಮುಂದಿನ ಬದುಕನ್ನು ನಾವು ಬದುಕಬೆಕಲ್ಲ. ಏನು ಮಾಡುವದು? ಸತ್ತವರಿಗಾಗಿ ಎಷ್ಟು ದಿನ ಅಂತಾ ಅಳುತ್ತಾ ಕೂರೋಕಾಗುತ್ತೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ವ್ಯಕ್ತಿಗಿಂತ ಬದುಕು ಮುಖ್ಯವಾಗುತ್ತದೆ ಎನ್ನುವದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಕೆಲವರು ಗಡಾಫಿಯ ಆಡಳಿತವನ್ನು ನೆನೆಯುತ್ತಾ ಅಂಥದೇ ಇನ್ನೊಂದು ಬರಲಿ ಎಂದು ಆಶಿಸುತ್ತಿದ್ದಾರೆ. ಇನ್ನು ಕೆಲವರು “Shit ಗಡಾಫಿ! ಅವನ ಕಾಲ ಮುಗಿಯಿತು. ಈಗೇನಿದ್ದರೂ ಹೊಸ ಸರಕಾರ, ಹೊಸ ಆಡಳಿತ, ಎಲ್ಲವೂ ಹೊಸತು” ಎಂದು ಹೇಳುತ್ತಾ ಹೊಸತನಕ್ಕೆ ಮುಖಮಾಡುತ್ತಿದ್ದಾರೆ. ನಾನು ಕ್ರಾಂತಿಯೆಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೆ ಬಂದಿಳಿದ ಹೊಸತರಲ್ಲಿ ಇಲ್ಲಿಯ ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರಾಗಿದ್ದರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. ಸರಕಾರ ಜನರ ಮೆಲೆ ಒತ್ತಡದ ತಂತ್ರವನ್ನು ಹೇರುವದರ ಮೂಲಕ ಅವರನ್ನು ತನ್ನತ್ತ ಬಗ್ಗಿಸಿಕೊಂಡಿತ್ತು. ಮೊನ್ನೆ ಕೂಡ ಗಡಾಫಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿರುವ ಇಲ್ಲಿನ (ಘಾಟ್‍ನ) ಕಾಲೊನಿಯೊಂದಕ್ಕೆ ಎರಡ ತಿಂಗಳ ಕಾಲ ನೀರು ಪೂರೈಸದೆ ಇದ್ದುದರಿಂದ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಂಗಾಮಿ ಸರಕಾರ ಅವರನ್ನು ಹತ್ತಿಕ್ಕಿ ನೀರು ಬಿಡುತ್ತೇವೆ, ನಮ್ಮನ್ನು ಒಪ್ಪಿಕೊಳ್ಳಿ ಎಂದು ಹೆದರಿಸಿತ್ತು. ಇದೀಗ ಅವರು ಹಂಗಾಮಿ ಸರಕಾರಕ್ಕೆ ಜೈ ಹೇಳಿ ಎಲ್ಲವನ್ನೂ ಸುಲಭವಾಗಿಸಿಕೊಂಡಿದ್ದಾರೆ. ಮೊನ್ನೆ ಹಂಗಾಮಿ ಸರಕಾರ ದಕ್ಷಿಣ ಭಾಗದ ಎಲ್ಲ ಸರಕಾರಿ ಕಛೇರಿಗಳಿಗೆ ಗಡಾಫಿಯ ಹೆಸರನ್ನು ಎಲ್ಲೂ ಎತ್ತಕೂಡದು ಹಾಗೆ ಒಂದುವೇಳೆ ಉಪಯೋಗಿಸಿದರೆ ಅಂಥವರನ್ನು ಉಗ್ರವಾಗಿ ಶಿಕ್ಷಿಸಲಾಗುವದು ಎನ್ನುವ ಸುತ್ತೋಲೆಯನ್ನು ಹೊರಡಿಸುವದರ ಮೂಲಕ ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಿದ್ದರು. ಜೊತೆಗೆ ಚುನಾವಣೆಯ ನಂತರ ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನುವ ಭರವಸೆಯನ್ನೂ ನೀಡೀದ್ದಾರೆ.

    ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಮತ್ತೊಬ್ಬ ಸ್ವತಂತ್ರ ಅಬ್ಯರ್ಥಿ
    ಈಗ ಜನ ಯಾವ ಸರಕಾರ ಬಂದರೇನಂತೆ ನಮಗೆ ಒಳ್ಳೆಯದು ಮಾಡಿದರೆ ಸಾಕು ಎಂದು ನಿಟ್ಟುಸಿರಿಡುತ್ತಿದ್ದಾರೆ. ಅದು ಅವರ ಭಯವೋ? ಪ್ರೀತಿಯೋ? ಅಥವಾ ಬದಲಾವಣೆಯತ್ತ ಹೊಸಹೆಜ್ಜೆಯೋ? ಅಂತೂ ಲಿಬಿಯಾದ ಜನತೆ ಹೊಸತನವನ್ನು ಒಪ್ಪಿಕೊಳ್ಳುತ್ತಾ ಹೊಸದಿಕ್ಕಿನತ್ತ ಹೆಜ್ಜೆಹಾಕುತ್ತಿದ್ದಾರೆ. ಎಲ್ಲರೀತಿಯಿಂದ ಲಿಬಿಯಾಕ್ಕೆ ಹೊಸ ಭವಿಷ್ಯ ಸಿಗುವ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತಿವೆ. ಕಾಲಾಯ ತಸ್ಮೇ ನಮಃ!

    -ಉದಯ್ ಇಟಗಿ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು- A hypocrite is a person who-but who isn't?

  • ಭಾನುವಾರ, ಜುಲೈ 01, 2012
  • ಬಿಸಿಲ ಹನಿ
  • “A hypocrite is a person who--but who isn't?” ಹಾಗಂತ ಖ್ಯಾತ ಇಂಗ್ಲೀಷ್ ಲೇಖಕ ಡಾನ್ ಮಾರ್ಕ್ವಿಜ್ ಒಂದು ಕಡೆ ಹೇಳುತ್ತಾನೆ. ಈ ಮಾತು ಪ್ರತಿಯೊಬ್ಬ ಮನುಷ್ಯನ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅಂದರೆ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಆಷಾಡಭೂತಿಗಳೇ! ಸದಾ ನಮ್ಮ ಅನುಕೂಲಕ್ಕೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಒಳಗೊಂದು ಹೊರಗೊಂದರಂತೆ ಬದುಕುವವರು! ಹೀಗಿದ್ದೂ ನಾವು ಆಗಾಗ ಸಭ್ಯರಂತೆ, ಪ್ರಾಮಾಣಿಕರಂತೆ, ಯೋಗ್ಯರಂತೆ ಮುಖವಾಡ ಹಾಕಿಕೊಳ್ಳಲು ಪ್ರಯತ್ನಿಸುತ್ತೆವೆ. ಆದರೆ ಬೇರೆಯವರನ್ನು ಮಾತ್ರ hypocrite ಅಂತ ಕರೆಯುತ್ತಲೇ ಇರುತ್ತೇವೆ.

    ಮೊನ್ನೆ ಏನಾಯಿತೆಂದರೆ ಸ್ನೇಹಿತನೊಬ್ಬ ನನ್ನ ಮನೆಗೆ ಬಂದಿದ್ದ. ಬರುವಾಗ ಆತ ಅರೆಬೆತ್ತಲೆ ಮಾಡೆಲ್‍ಗಳು ಇರುವ ಮಾಡೆಲಿಂಗ್ ಕ್ಯಾಲೆಂಡೆರೊಂದನ್ನು ನನಗೆ ತಂದುಕೊಟ್ಟ. ನಾವಿಬ್ಬರೂ ಕುಳಿತು ಬಿಕನಿ ತೊಟ್ಟ ಆ ಮಾಡೆಲ್‍ಗಳ ಫೋಟೋಗಳನ್ನೇ ಮತ್ತೆ ಮತ್ತೆ ನೋಡಿ ಖುಶಿಪಟ್ಟೆವು. ಅವರ ವಿವರಗಳನ್ನು ಕುರಿತು ಚರ್ಚಿಸಿದೆವು. ಅವರ ಜೊತೆ ವಿವಿಧ ಭಂಗಿಗಳಲ್ಲಿ ನಿಂತು ಪೋಸು ಕೊಟ್ಟ ಗಂಡು ಮಾಡೆಲ್‍ಗಳು ಕೂಡ ಇದ್ದರು. ಆಹಾ, ಎಂಥ ಅದೃಷ್ಟವಂತರು ಅವರು! ಎಂತೆಂಥ ಒಳ್ಳೊಳ್ಳೆ ಮಾಡೆಲ್‍ಗಳ ಜೊತೆ ನಿಂತೊ ಫೋಟೋ ತೆಗೆಸಿಕೊಳ್ಳುವ ಅವಕಾಶ ಲಭಿಸಿದೆ ಅವರಿಗೆಲ್ಲ! ಒಂದು ಕ್ಷಣ ಅವರ ಬಗ್ಗೆ ಈರ್ಷೆ ಕಾಡಿತು.

    ಮರುಕ್ಷಣ ಅನಿಸಿತು ನಾವಿಬ್ಬರೂ ಟ್ರೆಡಿಷನಲ್ ಕುಟುಂಬದಿಂದ ಬಂದವರು. ಈ ವಿಷಯದಲ್ಲಿ ಕನ್ಸರ್ವೇಟಿವ್ ಆಗಿ ಥಿಂಕ್ ಮಾಡುವವರು. ಈ ವೃತ್ತಿಯ ಬಗ್ಗೆ ಕಸಿವಿಸಿ ಬೆಳೆಸಿಕೊಂಡವರು. ನಮ್ಮ ಮನೆಯ ಹೆಣ್ಣುಮಕ್ಕಳೇನಾದರು ಈ ಮಾಡೆಲಿಂಗ್ ವೃತ್ತಿಗೆ ಹೋಗುತ್ತೇನೆಂದರೆ ವಿರೋಧಿಸುವವರು. ಕಮ್ಮಿ ಬಟ್ಟೆ ತೊಟ್ಟು ಮೈ ಪ್ರದರ್ಶಿಸುವದು ಎಷ್ಟೊಂದು ಅಸಹ್ಯ? ಎಂದು ಮೂಗು ಮುರಿಯುವವರು. ಆದರೆ ನಾವೀಗ ಇಲ್ಲಿ ಮಾಡುತ್ತಿರುವದೇನು? ಆ ಮಾಡೆಲ್‍ಗಳ ಫೋಟೋ ನೋಡುತ್ತಾ ಅವರ ವಿಷಯವನ್ನು ಚರ್ಚಿಸುತ್ತಾ ಅದನ್ನು ಪರೋಕ್ಷವಾಗಿ ಪ್ರೋತ್ಶಾಹಿಸುತ್ತಿಲ್ಲವೆ? ಅಂದರೆ ಏನು? ಯಾರದೋ ಮನೆಯ ಹೆಣ್ಣುಮಕ್ಕಳು ಹೇಗಾದರು ಕಾಣಿಸಲಿ; ನಮಗೇನೂ ಅನಿಸುವದಿಲ್ಲ. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಹಾಗೆ ಅಗಬಾರದು. ಇದು ಹಿಪೊಕ್ರಸಿ ಅಲ್ಲದೆ ಮತ್ತೇನು?

    ಡಾನ್ ಮಾರ್ಕ್ವಿಜ್ ಹೇಳಿದ್ದು ಸರಿ: A hypocrite is a person who-but who isn't?

    ಬಿಡುಗಡೆ

  • ಭಾನುವಾರ, ಜೂನ್ 17, 2012
  • ಬಿಸಿಲ ಹನಿ

  • ನಾ ಕೇಳಿದ್ದು ಹಿಡಿ ಪ್ರೀತಿಯನ್ನಷ್ಟೆ
    ಆದರೆ ನೀ ಬೊಗಸೆ ತುಂಬಾ ತುಂಬಿ ಕೊಡಬೇಕೆಂದಿ.
    ಅದೇ ನಮ್ಮಿಬ್ಬರ ಬಿಡುಗಡೆಗೆ ಕಾರಣವಾಯಿತು!

    -ಉದಯ್ ಇಟಗಿ
    ಚಿತ್ರ ಕೃಪೆ: ಅಂತರ್ಜಾಲ

    ಸಹರಾ ಮರಭೂಮಿಯಲ್ಲೊಂದು ಬಹುಭಾಷಾ ಕವಿಗೋಷ್ಠಿ

  • ಶನಿವಾರ, ಜೂನ್ 09, 2012
  • ಬಿಸಿಲ ಹನಿ
  • ಮೊನ್ನೆ ನಮ್ಮ ಕಾಲೇಜಿನಲ್ಲೊಂದು ಬಹುಭಾಷಾ ಕವಿಗೋಷ್ಠಿ ನಡೆಯಿತು. ಹೆಸರಿಗಷ್ಟೇ ವಿವಿಧ ಭಾಷಾ ಕವಿಗೋಷ್ಠಿ. ಆದರೆ ಆ ಗೋಷ್ಠಿಯಲ್ಲಿ ಬಹಳಷ್ಟು ಜನ ಅರೇಬಿ ಭಾಷೆಯ ಕವಿಗಳೇ ತುಂಬಿಕೊಂಡಿದ್ದರು. ಇನ್ನುಳಿದಂತೆ ಆಫ್ರಿಕಾ ಖಂಡದ ಇತರೆ ಭಾಷೆಗಳಾದ ಹೌಸಾ, ಟರ್ಗಿ, ಫ್ರಾನ್ಸಾ (ಫ್ರೆಂಚ್), ತಿಗರಿ, ಯುರೊಬು, ಇಗ್ಬೊ, ಇಬಿಬೋ, ಭಾಷೆಯ ಕವಿಗಳು ಅಲ್ಲಿದ್ದರು. ಇವರೆಲ್ಲರ ಜೊತೆಗೆ ಇಟಲಿಯಿಂದ ಕವಯಿತ್ರಿಯೊಬ್ಬಳು ಇಟ್ಯಾಲಿಯನ್ ಭಾಷೆಯನ್ನು ಪ್ರತಿನಿಧಿಸಿ ಬಂದಿದ್ದಳು. ಆಕೆ ಇಡಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದಳು. ಮುಖ್ಯ ಆಕರ್ಷಣೆ ಯಾಕೆಂದರೆ ಅಲ್ಲಿದ್ದ ಬಹಳಷ್ಟು ಕಪ್ಪು ಜನರ ಮಧ್ಯ ಇವಳೊಬ್ಬಳು ಬಿಳಿ ಚರ್ಮದವಳಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಾಣುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಮೊಣಕಾಲಿನವರೆಗಷ್ಟೇ ಇರುವ ಮಿನಿ ಸ್ಕರ್ಟೊಂದನ್ನು ಧರಿಸಿ ಕಾಲು ಮೇಲೆ ಕಾಲು ಹಾಕಿಕೊಂಡು ಎಲ್ಲರ ಮುಂದೆ ಬಿಡುಬೀಸಾಗಿ ಕುಳಿತಿದ್ದಳು. ಒಂದರ್ಥದಲ್ಲಿ ಅಲ್ಲಿರುವ ಎಲ್ಲ ’ಮುಚ್ಚಮ್ಮ’ಗಳ ಮಧ್ಯ ಇವಳೊಬ್ಬಳು ಮಾತ್ರ ‘ಅರ್ಧ ಬಿಚ್ಚಮ್ಮ’ಳಾಗಿ ಕಾಣಿಸುತ್ತಿದ್ದಳು. ಹಾಗಾಗಿಯೋ ಏನೋ ಎಲ್ಲರ ಗಮನ ಅವಳ ಮೇಲೆಯೇ ಇತ್ತು. ಅಷ್ಟೇ ಅಲ್ಲ ತೆಳ್ಳಗೆ, ಬೆಳ್ಳಗೆ ಇರುವ ತನ್ನ ಆಕರ್ಷಕ ಮೈಮಾಟದಿಂದ ತುಸು ಹೆಚ್ಚೇ ಎನಿಸುವಷ್ಟು ‘ಸೆಕ್ಷಿ’ಯಾಗಿ ಕಾಣುತ್ತಿದ್ದಳು. ಎಲ್ಲರೂ ಅವಳನ್ನೇ ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದರು. ತನ್ನ ಸರದಿ ಬಂದಾಗ ಎಲ್ಲರ ಮುಂದೆ ಬಿಡುಬೀಸಾಗಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತೇ ತನ್ನ ಇಟ್ಯಾಲಿಯನ್ ಕವನವನ್ನು ಓದಿದಳು. ಓದಿಯಾದ ಮೇಲೆ ವೇದಿಕೆಯ ಪಕ್ಕಕ್ಕೆ ಹೋಗಿ ಎಲ್ಲರಿಗೂ ಕಾಣುವಂತೆ ಸಿಗರೇಟೊಂದನ್ನು ಸೇದಿ ಮತ್ತೆ ವಾಪಾಸ್ ಬಂದು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಳು. ಅಲ್ಲಿದ್ದ ಕೆಲವು ಗಂಡಸರು ಅವಳ ಈ ನಿರ್ಭಿಡೆಯ ವರ್ತನೆಯನ್ನು ಕಂಡು ಇದೇನಿದು ಅರಬ್ಬರ ನಾಡಿನಲ್ಲಿ ಈ ರೀತಿಯ ಬಿಚ್ಚು ಪ್ರದರ್ಶನ? ಎಂದು ಮೂಗು ಮುರಿದರು. ಆದರೆ ಅದನ್ನು ಆಕೆಗೆ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ. ತಮಾಷೆಯೆಂದರೆ ಮೊದಲು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ ಜನರೇ ಆಮೇಲಾಮೇಲೆ ಅವಳ ಮೊಣಕಾಲುಗಳನ್ನೇ ನೋಡುತ್ತಾ ಅವಳೊಟ್ಟಿಗೆ ರತಿಸುಖ ಅನುಭವಿಸಿದಷ್ಟೇ ಆನಂದಪಡುತ್ತಾ ಕುಳಿತುಬಿಟ್ಟರು. ಕೆಲವು ಪಡ್ಡೆ ಹುಡುಗರಂತೂ ಅವರವರೇ ಕಣ್ಣಲ್ಲಿ ಅದೇನೇನೇನೋ ಪೋಲಿಪೋಲಿಯಾಗಿ ಹೇಳಿಕೊಂಡು ಕಿಸಿಕಿಸಿಯೆಂದು ನಕ್ಕರು. ಇನ್ನು ಹುಡುಗಿಯರಂತೂ ತಾವು ಕನಸಿನಲ್ಲಿ ಕೂಡ ಈ ರೀತಿಯ ದಿರಿಸನ್ನು ಧರಿಸುವದು ಅಪರಾಧ ಎಂಬಂತೆ ಕುಳಿತಿದ್ದರು. ಮತ್ತೆ ಕೆಲ ಹುಡುಗಿಯರು ಅವಳಿಗಿರುವ ಸ್ವಾತಂತ್ರ್ಯದ ಕಾಲುಭಾಗದಷ್ಟಾದರೂ ನಮಗೆ ಸಿಕ್ಕಿದ್ದರೆ? ಎಂದು ಅವಳ ಜಾಗದಲ್ಲಿ ತಮ್ಮನ್ನು ಊಹಿಸಿಕೊಳ್ಳುತ್ತಾ ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿದ್ದರು.

    ಸರಿ. ಅಪರೂಪಕ್ಕೆಂಬಂತೆ ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆ ಕಾರ್ಯಕ್ರಮ ನಡೆದಿದೆ, ನೆನಪಿಗಿರಲಿ ಎಂದುಕೊಂಡು ನಾವೆಲ್ಲಾ ಈ ಕಾರ್ಯಕ್ರಮದ ಫೋಟೊವೊಂದನ್ನು ತೆಗೆದುಕೊಳ್ಳಲು ಕ್ಯಾಮರಾ ಹಿಡಿದು ಹೋದರೆ ಅಲ್ಲಿದ್ದ ಕೆಲವು ಮಡಿವಂತ ಜನ ನಮ್ಮನ್ನು ತಡೆದರು. ಫೋಟೊ ತೆಗೆಯುವದು ಬೇಡ ಎಂದರು. ಕಾರಣ ಕೇಳಿದರೆ ವೇದಿಕೆಯ ಮೇಲೆ ಏಳೆಂಟು ಜನ ಅರೇಬಿ ಹೆಂಗಸರು ಕುಳಿತಿದ್ದಾರೆ ಹಾಗೆಲ್ಲಾ ಅವರ ಫೋಟೊ ತೆಗೆಯುವದು ಚನ್ನಾಗಿರಲ್ಲ ಎಂದು ಹೇಳಿದರು. ಹೋಗಲಿ ಇಟ್ಯಾಲಿಯನ್ ಕವಯತ್ರಿಯದಾದರೂ ಒಂದು ಫೋಟೋ ತೆಗೆದುಕೊಳ್ಳುತ್ತೇವೆ. ಅದಕ್ಕಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದೆವು. ಊಹೂಂ, ಅದಕ್ಕೂ ಅಸ್ತು ಎನ್ನಲಿಲ್ಲ. ಅ ಅವಕಾಶ ಇದ್ದಿದ್ದು ಕಾರ್ಯಕ್ರಮದ ಸಂಘಟಿಕರು ಆಯೋಜಿಸಿದ್ದ ಕ್ಯಾಮರಾಮನ್ ಒಬ್ಬನಿಗೆ ಮಾತ್ರ. ಅವ ಮಾತ್ರ ತನಗೆ ಸಿಕ್ಕ ಈ ಅವಕಾಶ ಮತ್ತು ಸ್ವಾತಂತ್ರ್ಯಗಳೆರೆಡನ್ನು ತುಸು ಹೆಚ್ಚೇ ಬಳಸಿಕೊಂಡ. ಅದೇನು? ಹಿಂದೆಯೆಲ್ಲಾ ನಾವು ನಮ್ಮ ಕಾಲೇಜಿನ ಓಪನ್ ವೀಕ್ ಸೆಲೆಬ್ರೇಶನ್ ಸಮಯದಲ್ಲಿ ಹುಡುಗಿಯರು ಹಾಡು ಹಾಡುತ್ತಿರಬೇಕಾದರೆ, ಇಲ್ಲವೇ ಬೇರೆ ಮನರಂಜನಾ (ನೃತ್ಯವೊಂದನ್ನು ಹೊರತುಪಡಿಸಿ) ಕಾರ್ಯಕ್ರಮ ನೀಡುತ್ತಿರಬೇಕಾದರೆ ಧಾರಾಳವಾಗಿ ಫೋಟೊ ತೆಗೆಯುತ್ತಿದ್ದೆವು. ಆಗ ಯಾರೂ ಏನೂ ಅನ್ನದವರು ಈಗೇನು ಇಷ್ಟೊಂದು ವಿರೋಧ ನಿಮ್ಮದು? ಎಂದು ಕೇಳಿದರೆ ಕಾರ್ಯಕ್ರಮದ ಸಂಘಟಿಕರು ಹೊರಗಿನವರು ಯಾರೋ ಆಗಿದ್ದು ಅಲ್ಲಿ ನಮ್ಮ ಕಾಲೇಜಿನವರು ಕಾರ್ಯಕ್ರಮ ನಡೆಸಲು ಸ್ಥಳ ಮಾತ್ರ ಕೊಟ್ಟಿದ್ದರಿಂದ ಅವರಿಗೆ ಈ ವಿಷಯದಲ್ಲಿ ತಲೆಹಾಕಲು ಹೆಚ್ಚು ಸ್ವಾತಂತ್ರ್ಯವಿರಲಿಲ್ಲ ಎನ್ನುವ ಉತ್ತರ ಬಂತು.

    ಸರಿ. ಕವಿಗೋಷ್ಠಿ ಮುಗಿಯಿತು. ಮುಗಿದಾದ ಮೇಲೆ ಎಲ್ಲರೂ ಕವಿಗಳ ಮತ್ತು ಕವಯಿತ್ರಿಯರ ಕೈ ಕುಲುಕಿದ್ದೇ ಕುಲುಕಿದ್ದು. ಅದರಲ್ಲೂ ಆ ಇಟ್ಯಾಲಿಯನ್ ಕವಯಿತ್ರಿಯ ಕೈನ್ನು “ಮಜಬೂತ್, ಮಜಬೂತ್” ಎಂದು ಹೇಳುತ್ತಾ ತುಸು ಹೆಚ್ಚೇ ಕುಲಕಿದರು. ಅವರು ಹಾಗೆ ಕೈ ಕುಲುಕಿ “ಮಜಬೂತ್” (ಚನ್ನಾಗಿತ್ತು) ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದು ಅವಳ ಸೌಂದರ್ಯಕ್ಕೋ? ಅಥವಾ ಕವನಕ್ಕೋ? ಗೊತ್ತಾಗಲಿಲ್ಲ. ಬಹುಶಃ, ಅದು ಅವಳ ಸೌಂದರ್ಯದ ಬಗ್ಗೆಯೇ ಇರಬೇಕು. ಯಾಕೆಂದರೆ ಈ ಲಿಬಿಯನ್ನರಿಗೆ ಅದೂ ಘಾತ್ ಪ್ರಾಂತ್ಯದಲ್ಲಿರುವ ಜನರಿಗೆ ಇಂಗ್ಲೀಷ್, ಅರೇಬಿ, ಫ್ರಾನ್ಸಾ, ಹೌಸಾ, ಟರ್ಗಿ ಬಿಟ್ಟರೆ ಇಟ್ಯಾಲಿಯನ್ ಭಾಷೆ ಬರುವದು ನಾ ಕಾಣೆ. ಆಕೆ ಹೊರಡೋಣವೇಂದು ಸಭಾಂಗಣವನ್ನು ಬಿಟ್ಟು ಹೊರಗೆ ಬರುತ್ತಿದ್ದಂತೆ ಅವಳೊಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದ ಕೆಲವು ಗಂಡಸರು ಹಲ್ಲು ಗಿಂಜುತ್ತಾ “ನಿಮ್ಮೊಂದಿಗೆ ಒಂದು ಫೋಟೋ ಪ್ಲೀಸ್!” ಎಂದು ಆಕೆಯನ್ನು ಮುತ್ತಿದರು. ಆಕೆ ತಕ್ಷಣ “ಅದೇನು, ನಿಮ್ಮ ಹೆಣ್ಣುಮಕ್ಕಳ ಫೋಟೋವನ್ನು ಮಾತ್ರ ಯಾರೂ ತೆಗೆದುಕೊಳ್ಳಬಾರದು? ನೀವು ಮಾತ್ರ ಬೇರೆ ಹೆಣ್ಣುಮಕ್ಕಳ ಫೋಟೋವನ್ನು ತೆಗೆದುಕೊಳ್ಳಬಹುದೇ? ಇದ್ಯಾವ ನ್ಯಾಯ?” ಎಂದು ಇಂಗ್ಲೀಷಿನಲ್ಲಿ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಡಬಡನೆ ಕಾರು ಹತ್ತಿ ಹೋಗಿಯೇಬಿಟ್ಟಳು. ಆಕೆ ಕೇಳಿದ ಧಾಟಿ ಹೇಗಿತ್ತೆಂದರೆ ನೀವು ಮಾತ್ರ ಬೇರೆ ಮನೆಯವರ ಹೆಣ್ಣುಮಕ್ಕಳನ್ನು ಹಾಳುಮಾಡಬಹುದು. ಆದರೆ ನಿಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಸುರಕ್ಷಿತವಾಗಿರಬೇಕಾ? ಇದ್ಯಾವ ಸೀಮೆಯ ನ್ಯಾಯ? ಎಂದು ಕೇಳಿದಂತಿತ್ತು.

    ಅಂದಹಾಗೆ ಕವಿಗೋಷ್ಠಿಯ ವಿಷಯ “ಸ್ವಾತಂತ್ರ್ಯ”. ಲಿಬಿಯಾ ಈಗ ‘ಫ್ರೀ ಲಿಬಿಯಾ’ ಆದ ಹಿನ್ನೆಲೆಯಲ್ಲಿ ಈ ಕವಿಗೋಷ್ಠಿಯನ್ನು ಅಳವಾಡಿಸಲಾಗಿತ್ತೆಂದು ನಮಗೆ ಆಮೇಲೆ ಗೊತ್ತಾಯಿತು. ಅದೇನೆ ಇರಲಿ. ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಹಾಗೆ ಅಲ್ಲಿಯ ಕವಿಗಳು ತಂತಮ್ಮ ಭಾಷೆಯಲ್ಲಿ ಕವಿತೆಗಳನ್ನು ಓದಿದರು. ನಾನಂತೂ ಹೌಸಾ, ಟರ್ಗಿ, ಫ್ರಾನ್ಸಾ, ಅರೇಬಿ ಭಾಷೆಗಳು ಬರುವ ನನ್ನ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೇ ಕುಳಿಸಿಕೊಂಡಿದ್ದೆ ಅನುವಾದದ ಸಹಾಯಕ್ಕಾಗಿ. ಅವರು ಕವನ ಓದಿ ಮುಗಿಸಿದ ತಕ್ಷಣ ಅವ ನನಗೆ ಅದರ ಸಾರಾಂಶವನ್ನಷ್ಟೇ ಬಡಬಡನೆ ಇಂಗ್ಲೀಷಿಗೆ ಅನುವಾದಿಸಿ ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದ. ಒಬ್ಬ ಅರೇಬಿ ಕವಿ “ನಾವು ಸ್ವಾತಂತ್ರ್ಯ ಬಂದಿದೆ ಎಂದು ಹೆಳುತ್ತಿದ್ದೇವಲ್ಲವೆ? ಆದರೆ ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವೆಯೇ?” ಎಂದು ಕೇಳಿದ. ಇನ್ನೊಬ್ಬ ಕವಿ “ಸ್ವಾತಂತ್ರ್ಯ ಸಿಕ್ಕಿತೆಂದು ನಾವು ಸಂಭ್ರಮಪಡುವ ಖುಷಿಯಲ್ಲಿ ನಿಧಾನವಾಗಿ ನಮಗೆ ಗೊತ್ತಿಲ್ಲದಂತೆ ಬೇರೆ ಇನ್ಯಾರಿಗೋ ಗುಲಾಮರಾಗಿ ಕೆಲಸ ಮಾಡುವಂತಾಗಬಾರದು” ಎಂದು ಕರೆ ಕೊಟ್ಟ. ಮತ್ತೊಬ್ಬ ಕವಿ “ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸ್ವಾತಂತ್ರ್ಯ ಅನ್ನುವದು ಇದೆಯಾ? ಅದೇನಿದ್ದರೂ ಭ್ರಮೆ ಅಷ್ಟೆ. ಯಾಕೆಂದರೆ ಹುಟ್ಟುವಾಗಷ್ಟೆ ಅವನು ಸ್ವತಂತ್ರ. ಆಮೇಲೇನಿದ್ದರೂ ಅವನು ಒಂದಲ್ಲ ಒಂದು ಕಡೆ ಬಂಧಿಯಾಗಿರುತ್ತಾನೆ” ಎಂದು ಹೇಳಿದ. ಇದು ನನಗೆ ಪ್ರಖ್ಯಾತ ಫ್ರೆಂಚ್ ರಾಜಕೀಯ ತಜ್ಞ ರೂಸೋ ಹೇಳಿದ “A man is born to free. But everywhere else he is in chains” ಎನ್ನುವ ಮಾತನ್ನು ನೆನಪಿಸಿತು. ಟರ್ಗಿ ಕವಿಯೊಬ್ಬ “ಪ್ರಕೃತಿಯಲ್ಲಿನ ಹೂ, ಹಕ್ಕಿಗಳಿರುವಷ್ಟು ಸ್ವಾತಂತ್ರ್ಯ ನಮಗೇಕಿಲ್ಲ?” ಎಂದು ಪ್ರಶ್ನೆಸಿದ. ಫ್ರೆಂಚ್ ಭಾಷೆಯಲ್ಲಿ ಕವನ ಓದಿದ ಸ್ಥಳೀಯ ಕವಿಯೊಬ್ಬ “ನಮ್ಮೊಳಗೆ ನಾವೇ ಗುಲಾಮರಾಗಿರುವಾಗ ಹೊರಗಿನ ಸ್ವಾತಂತ್ರ್ಯ ತಗೊಂಡು ಏನ್ಮಾಡೋದು?” ಎಂದು ಪ್ರಶ್ನಿಸಿದ. ನಾನು ಮೊದಲು “ನಮ್ಮೊಳಗೆ ನಾವೇ ಗುಲಾಮರಾಗಿರುವದು” ಎಂದರೇನೆಂದು ಅರ್ಥವಾಗದೆ ತಲೆಕೆರೆದುಕೊಂಡೆ. ಆಮೇಲೆ ಓ, ಬಹುಶ: ಅದರ ಅರ್ಥ ಹೀಗಿರಬಹುದು, ಹಾಗಿರಬಹುದು ಎಂದು ನನ್ನಷ್ಟಕ್ಕೆ ನಾನೇ ಏನೇನೋ ಅರ್ಥೈಸಿಕೊಂಡು ಸಮಾಧಾನಪಟ್ಟೆ. ಇವರೆಲ್ಲರಿಗಿಂತ “ಹೌಸಾ” ಭಾಷೆಯಲ್ಲಿ ಓದಿದ ಕವಯಿತ್ರಿಯ ಕವನವೊಂದು ಮಾತ್ರ ಅಲ್ಲಿದ್ದ ಎಲ್ಲರ ಗಮನವನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಆಕೆ “ಇವತ್ತು ನಾವು ಹೆಣ್ಣುಮಕ್ಕಳು ಸ್ವಾಂತಂತ್ರ್ಯದ ಹೆಸರಿನಲ್ಲಿ ಕುಟಂಬವನ್ನು ಕಡೆಗಣಿಸುತ್ತಾ ವಿಚ್ಛೇಧನಕ್ಕೆ ಮೊರೆಹೋಗುತ್ತಿದ್ದೇವೆ. ಗಂಡನನ್ನು ಬಿಟ್ಟರೆ ಸ್ವಾತಂತ್ರ್ಯ ಎಂದುಕೊಂಡಿದ್ದೇವೆ. ಆದರೆ ಗಂಡ ಇರುವದರಿಂದಲೇ ನಮಗೆ ಸಮಾಜದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ, ಗೌರವವಿದೆ ಎನ್ನುವ ಸತ್ಯವನ್ನು ಅರಿಯುವಲ್ಲಿ ಸೋಲುತ್ತಿದ್ದೇವೆ.” ಎಂದು ಇವತ್ತು ಆಫ್ರಿಕಾದ ದೇಶಗಳಲ್ಲಿ ಸಹ ಹೆಚ್ಚುತ್ತಿರುವ ವಿಚ್ಛೇಧನಗಳ ಹಿನ್ನೆಲೆಯಲ್ಲಿ ಅಲ್ಲಿರುವ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳಿದ್ದಳು. ಈ ಮಾತಿಗೆ (ಕವನಕ್ಕೆ) ಅಲ್ಲಿದ್ದ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರೇ ಚಪ್ಪಾಳೆ ಹೊಡೆದಿದ್ದು ಮಾತ್ರ ವಿಶೇಷವಾಗಿ ಕಾಣಿಸಿತು.

    ಇನ್ನುಳಿದವರು ಅದೇನು ಹೇಳಿದರೆಂದು ನನಗೆ ಮಾತ್ರ ಅಲ್ಲ ಅಲ್ಲಿದ್ದ ಬೇರೆಯವರಿಗೂ ಅರ್ಥವಾಗಲಿಲ್ಲ. ಏಕೆಂದರೆ ಅವರಿಗೆ ಆ ಭಾಷೆಗಳು ಅರ್ಥವಾದರೆ ತಾನೆ ಏನು ಹೇಳಿದರೆಂದು ಗೊತ್ತಾಗುವದು? ಈ ತೆರದ ವಿವಿಧ ಭಾಷಾ ಕವಿಗೋಷ್ಠಿಯನ್ನು ಯಾಕಾದರು ಹಮ್ಮಿಕೊಳ್ಳುತ್ತಾರೋ? ಹಮ್ಮಿಕೊಂಡರೂ ಅಲ್ಲಿ ಓದುವ ವಿವಿಧ ಭಾಷೆಯ ಕವನಗಳನ್ನು ಮೊದಲೇ ಇಂಗ್ಲೀಷಿಗೋ ಅಥವಾ ಸ್ಥಳೀಯ ಭಾಷೆಗೋ ಅನುವಾದಿಸಿ ಮೂಲ ಭಾಷೆಯ ಕವಿಗಳು ಓದಿದ ನಂತರ ಅದರ ಅನುವಾದವನ್ನು ಸ್ಥಳೀಯ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲಿ ಓದಿದರೆ ಆ ಕಾರ್ಯಕ್ರಮಕ್ಕೊಂದು ಅರ್ಥವಾದರೂ ಬರುತ್ತದೆ, ಅದರ ಮೂಲ ಉದ್ದೇಶವಾದರೂ ಈಡೇರುತ್ತದೆ. ಅದು ಬಿಟ್ಟು ಬರೀ ಅವರವರದೇ ಭಾಷೆಯಲ್ಲಿ ಓದಿಸಿದರೆ ಅವು ಬೇರೆಯವರಿಗೆ ಅರ್ಥವಾಗುವದಾದರೂ ಹೇಗೆ ಮತ್ತು ಅದರ ಉದ್ದೇಶ ಈಡೇರುವದಾದರೂ ಹೇಗೆ?

    ಅಂದಹಾಗೆ ಈ ಕವಿಗೋಷ್ಠಿಯನ್ನು ಹೋಗಿ ಹೋಗಿ ಇಂಥ ಸಣ್ಣ ಹಳ್ಳಿಯಲ್ಲಿ ಯಾಕಿಟ್ಟರು? ಟ್ರಿಪೋಲಿಯಲ್ಲೋ, ಬೆಂಗಾಜಿಯಲ್ಲೋ, ಸೆಭಾದಲ್ಲೋ ಏರ್ಪಡಿಸಿದ್ದರೆ ಚನ್ನಾಗಿತ್ತು ಎಂದು ಕೆಲವರು ಲೊಚಗುಟ್ಟಿದರು. ಇನ್ನು ಕೆಲವರು ಇವತ್ತು ಸಾಹಿತ್ಯ ಪ್ರಜ್ಞೆ ಎನ್ನುವದು ಏನಾದರು ಉಳಿದಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ. ಹೀಗಾಗಿ ಇಲ್ಲಿ ನಡೆಸಿದ್ದೇ ಚೆನ್ನ ಆಯ್ತು ಎಂದರು.

    -ಉದಯ್ ಇಟಗಿ

    ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು

  • ಸೋಮವಾರ, ಮೇ 21, 2012
  • ಬಿಸಿಲ ಹನಿ
  • ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್‍ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಇಲ್ಲಿ ಯುದ್ಧ ನಿಂತರೂ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇನ್ನೂ ಆಗಾಗ ಅಲ್ಲಲ್ಲಿ ಸಣ್ಣ ಪುಟ್ಟ ಗಲಭೆಗಳು, ಗುಂಪು ಘರ್ಷಣೆಗಳು ಸಂಭವಿಸುತ್ತಲೇ ಇವೆ. ಮೊನ್ನೆಯಷ್ಟೆ ಘಾಟ್‍ನಲ್ಲಿರುವ ಗಡಾಫಿಯ ಮಾಜಿ ಅಂಗರಕ್ಷಕಿಯನ್ನು ಬಂಧಿಸಲು ಬಂದ ‘ಜಿಂತಾನ್’ ಮಿಲ್ಟ್ರಿ ಪಡೆಗಳು ಹಾಗೂ ಘಾಟ್‍ನ ಜನರ ನಡುವೆ ಗುಂಡಿನ ಚಕಮಕಿ ನಡೆದು ದೊಡ್ಡ ಗಲಾಟೆಯೇ ನಡೆದುಹೋಯಿತು. ಸಧ್ಯ, ಗಲಾಟೆಯಲ್ಲಿ ಯಾರಿಗೂ ಏನೂ ಆಗಲಿಲ್ಲ! ಈ ಘಟನೆಯ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ ಇನ್ನೊಂದು ಕೆಟ್ಟ ಸುದ್ಧಿ ಬಂದಿದೆ. ಇಲ್ಲಿಂದ ಆರನೂರು ಕಿಲೋಮೀಟರಿನಷ್ಟು ದೂರವಿರುವ ಸೆಭಾದಲ್ಲಿ ಎರಡು ಬೇರೆ ಬೇರೆ ಬುಡಕಟ್ಟು ಜನಾಂಗಗಳ ನಡುವೆ ತೀವ್ರ ಘರ್ಷಣೆ ನಡೆದು ಆ ಘಟನೆಯಲ್ಲಿ ಸುಮಾರು ಇನ್ನೂರು ಜನ ಸತ್ತು ಅನೇಕರು ಗಾಯಗೊಂಡಿದ್ದಾರೆ. ಈಗ ಅಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆಯಾದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.



    ಈ ಎಲ್ಲದರ ಮಧ್ಯ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಋತುಮಾನ ಬದಲಾವಣೆಗನುಗುಣವಾಗಿ ಒಂದೆರೆಡು ಬಿರುಗಾಳಿಗಳು ಬಂದುಹೋಗಿವೆ. ಈ ಸಾರಿ ಅವು ಹೇಳಿಕೊಳ್ಳುವಷ್ಟು ದೊಡ್ಡವಾಗಿರದಿದ್ದರೂ ಎಂದಿನಂತೆ ಸಹರಾದ ಉಸುಕಿನ ಕಣಗಳನ್ನೆಲ್ಲಾ ಬಾಚಿಕೊಂಡು ಬಂದು ಮನೆಯೊಳಗೆ ತಂದುಹಾಕಿದವು. ನಾವು ಈ ಬಿರುಗಾಳಿಯನ್ನು ಶಪಿಸುತ್ತಾ ಹಾಗೂ ನಾವಿರುವ ಪರಿಸ್ಥಿತಿಗೆ ನಾವೇ ಮರುಕಪಡುತ್ತಾ ಮೂಗು ಮುಚ್ಚಿಕೊಂಡು ಅವನ್ನೆಲ್ಲಾ ಎತ್ತಿ ಆಚೆ ಹಾಕಿದೆವು. ಚಳಿಗಾಲ ಮುಗಿದು ಬೇಸಿಗೆಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿಹಾಕಿಬಿಡುತ್ತವೆ. ಜೊತೆಗೆ ನಮ್ಮ ಮೂಗಿನೊಳಕ್ಕೆ ಹೊಕ್ಕು ಉಸಿರಾಟಕ್ಕೂ ತೊಂದರೆಯುನ್ನುಂಟು ಮಾಡುತ್ತವೆ. ಆಗೆಲ್ಲಾ ನಾವು ಬೇಗಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವ.



    ಈ ಬೇಸಿಗೆ ಯಾಕಾದರೂ ಬರುತ್ತದೋ? ಬರೀ ಬಿರುಗಾಳಿಗಳನ್ನೇ ಹೊತ್ತುತರುತ್ತದೆ! ಜೊತೆಗೆ ಉರಿ ಉರಿವ ಬಿಸಿಲು ಬೇರೆ! ಬೇಸಿಗೆಯನ್ನು ಜಗತ್ತಿನ ಯಾವ ಜನ ತಾನೇ ಇಷ್ಟಪಟ್ಟಾರು ಇಂಗ್ಲೆಂಡಿನವರನ್ನು ಹೊರತುಪಡಿಸಿ? ಅವರಿಗೋ ವರ್ಷಪೂರ್ತಿ ಚಳಿ! ಸುರಿವ ಹಿಮದ ನಡುವೆ ದಪ್ಪದಪ್ಪನೆಯ ಉಣ್ಣೆ ಸ್ವೆಟರ್ ಗಳನ್ನು ಹಾಕಿಕೊಂಡು, ತಲೆಗೆ ತರಾವರಿ ಟೋಪಿ ಧರಿಸಿ ಚಳಿಗೆ ನಡುಗುತ್ತಾ ಓಡಾಡುವದೆಂದರೆ ಅವರಿಗೆ ಎಲ್ಲಿಲ್ಲದ ಕಿರಿಕಿರಿ! ಜೊತೆಗೆ ಪ್ರಕೃತಿಯೆಲ್ಲಾ ಹಿಮದಿಂದ ಮುಚ್ಚಿಹೋಗಿ ಇಡಿ ವಾತಾವರಣ ಒಂಥರಾ ಖಿನ್ನತೆಗೊಳಗಾದದಂತೆ ಕಾಣುತ್ತಿರುತ್ತದೆ. ಹೀಗಾಗಿ ಅವರು ಬೇಸಿಗೆ ಬರುವದನ್ನೇ ಕಾಯುತ್ತಿರಿತ್ತಾರೆ. ಅದಕ್ಕಾಗಿ ಹಂಬಲಿಸುತ್ತಿರುತ್ತಾರೆ! ಬೇಸಿಗೆಯ ಬಿಸಿಲಿಗೆ ಹೆಪ್ಪುಗಟ್ಟಿದ ಹಿಮವೆಲ್ಲಾ ಕರಗಿಹೋಗಿ ಗಿಡಮರಗಳೆಲ್ಲಾ ಹಚ್ಚಹಸಿರಾಗಿ ಕಾಣಿಸುತ್ತವೆ. ಸತ್ತ ಪ್ರಕೃತಿಗೆ ಜೀವ ಮರಳಿಬರುತ್ತದೆ. ಇಡಿ ವಾತಾವರಣ ಆಹ್ಲಾದಕರತೆಯಿಂದ ಕಂಗೊಳಿಸತೊಡಗುತ್ತದೆ. ಈ ಸಮಯದಲ್ಲಿ ಜನ ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲೆಡೆ ಹಾಡು, ಕುಣಿತ, ಕೇಕೆ, ಸಂತೋಷಗಳು ತುಂಬಿತುಳುಕುತ್ತವೆ. ನೋಡಲು ಎಲ್ಲವೂ ಆಪ್ಯಾಯಮಾನ. ಬಹುಶಃ, ಈ ಬೇಸಿಗೆಯೊಂದನ್ನು ಬಿಟ್ಟರೆ ಅಲ್ಲಿ ಬೇರೇನೂ ನೋಡಲು ಸುಂದರವಾಗಿ ಕಾಣುವದಿಲ್ಲ ಅಂತ ಕಾಣುತ್ತದೆ. ಅದಕ್ಕೇ ಇರಬೇಕು ಶೆಕ್ಷಪೀಯರ‍್ ತನ್ನ ಸ್ಪುರದ್ರೂಪಿ ಗೆಳೆಯ ಸೌಥ್‍ಆಂಪ್ಟನ್‍ನ್ನು ಬೇಸಿಗೆಯ ಒಂದು ದಿನಕ್ಕೆ ಹೋಲಿಸಿದ್ದು. ಬಹುಶಃ, ಅವನಿಗೆ ಇದಕ್ಕಿಂತ ಸುಂದರವಾದ ಬೇರೆ ಉಪಮೆಗಳು ಸಿಗಲಿಲ್ಲವೇನೋ! ಇಂಗ್ಲೆಂಡಿನವರೂ ಸೇರಿದಂತೆ ಜಗತ್ತಿನ ಕೆಲವೇ ಕೆಲವು ಜನ ಬೇಸಿಗೆಯನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಹಾತೊರೆಯುತ್ತಾರೆ. ಇನ್ನುಳಿದವರೆಲ್ಲಾ ಬೇಸಿಗೆಯನ್ನು ಶಪಿಸುವವರೇ! ಭಾರತೀಯರಿಗೂ ಬೇಸಿಗೆಯೆಂದರೆ ಅಷ್ಟಕ್ಕಷ್ಟೆ! ಒಂಥರಾ ಅಲರ್ಜಿ! ಉರಿಉರಿವ ಬಿಸಿಲು, ಕಿರಿಕಿರಿ ಎನಿಸುವ ಸೆಖೆ, ಗಾಳಿಯನ್ನೇ ಬೀಸದ ಮರಗಿಡಗಳು ಯಾರಿಗೆ ತಾನೆ ಇಷ್ಟವಾದೀತು? ಹೀಗಾಗಿ ನಮ್ಮಲ್ಲಿ ಕವಿಗಳು ಬೇಸಿಗೆಯ ಆರಂಭದ ಕಾಲವನ್ನು ಮಾತ್ರ ಸುಂದರ ಕಾವ್ಯವಾಗಿ ಚಿತ್ರಿಸಿದ್ದಾರೆ. ಆಮೇಲಿನಿದನ್ನು ಯಾರೂ ಬರೆಯುವ ಗೋಜಿಗೆ ಹೋಗಿಲ್ಲ. ಒಂದುವೇಳೆ ಬರೆದರೂ ಅದು ಬೆವರಿನ ಕಾಲ, ಸೊಳ್ಳೆಗಳ ಕಾಲ, ಕರೆಂಟು ಹೋಗುವ ಕಾಲ ಎಂದು ಬರೆಯಲ್ಪಡುತ್ತದೇನೋ!



    ಅದೆಲ್ಲಾ ಇರಲಿ. ಈ ಮರುಭೂಮಿಗೆ ಇರುವದು ಎರಡೇ ಎರಡು ಕಾಲ. ಒಂದು ಚಳಿಗಾಲ. ಮತ್ತೊಂದು ಬೇಸಿಗೆ. ಎರಡೂ ಎಕ್ಸ್ಟ್ರೀಮ್! ಇನ್ನು ಮರಭೂಮಿಯಲ್ಲಿ ಮಳೆಯ ಮಾತೆಲ್ಲಿ? ಅಂದಹಾಗೆ ಇಲ್ಲಿಯ ಜನ ಚಳಿಗಾಲ ಮತ್ತು ಬೇಸಿಗೆಕಾಲಗಳೆರೆಡನ್ನೂ ಸರಿ ಸಮನಾಗಿ ಸ್ವೀಕರಿಸುತ್ತಾರೆ. ನಮ್ಮಂತೆ ಚಳಿಗಾಲ ಬಂದಾಗ ಎಷ್ಟು ಚಳಿಯೆಂದು ಗೊಣಗುವದಾಗಲಿ, ಬೇಸಿಗೆ ಬಂದಾಗ ಅಯ್ಯೋ ಯಾಕಾದರು ಬಂತೋ ಈ ಕೆಟ್ಟಬಿಸಿಲು ಎಂದು ಶಪಿಸುವದಾಗಲಿ ಯಾವತ್ತೂ ಮಾಡುವದಿಲ್ಲ. ಯಾವುದಕ್ಕೂ ಹೆದರದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನೋಭಾವನೆಯನ್ನು ಈ ಸಹರಾ ಮರಭೂಮಿ ಅವರಿಗೆ ಕಲಿಸಿಕೊಟ್ಟಿದೆ. ಚಳಿಗಾಲದಲ್ಲಿ ಬಿಸಿಬಿಸಿ ಗ್ರೀನ್ ಟೀ ಕುಡಿಯುತ್ತಾ, ಹುಕ್ಕಾಗಳನ್ನು ಸೇದುತ್ತಾ, ಅಲ್ಲಲ್ಲಿ ಬೆಂಕಿಕಾಯಿಸುತ್ತಾ, ಇಲ್ಲವೇ ಚೆಸ್ ಅಥವಾ ಸ್ನೂಕರ್ ಆಡುತ್ತಾ ಜಗತ್ತಿನ ಪರಿವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಸುಖಿಸುತ್ತಾರೆ. ಹಾಗೇಯೇ ಬೇಸಿಗೆಯಲ್ಲಿ ತಂಪುಪಾನೀಯಗಳನ್ನು ಹೀರುತ್ತಾ ಪಾರ್ಕುಗಳಲ್ಲೋ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲೋ ಸರಿರಾತ್ರಿಯವರೆಗೂ ಕುಳಿತು ಹರಟೆಹೊಡೆಯುತ್ತಾರೆ. ಆದರೆ ನಮಗೆ ಇಲ್ಲಿನ ಸುಡುಸುಡು ಬಿಸಿಲಿಗಿಂತ ಗಡಗಡ ನಡುಗುವ ಚಳಿಯೇ ಚೆಂದ. ಜೊತೆಗೆ ಸಂಸಾರ ಒಟ್ಟಿಗೆ ಇದ್ದರಂತೂ ಮುಗಿದೇಹೋಯಿತು! ಪ್ರತಿವರ್ಷವೂ ಒಂದೊಂದು ಮಗು ಒಂದರ ಹಿಂದೊಂದರಂತೆ ಪುಂಖಾನುಪುಂಖವಾಗಿ ಹೊರಬರುತ್ತವೆ. ಹಾಗಂತ ನಾವು ನಾವೇ ಆಗಾಗ ತಮಾಷೆ ಮಾಡಿಕೊಳ್ಳುತ್ತಿರುತ್ತೇವೆ. ಒಮ್ಮೆ ನಮ್ಮ ಕಾಲೇಜಿನ ‘ಸುಡಾನಿ’ ಸಹದ್ಯೋಗಿಯೊಬ್ಬ ಈ ಚಳಿಗಾಲ ಮುಗಿದು ಮುಂದಿನ ಚಳಿಗಾಲ ಬರುವಷ್ಟೊತ್ತಿಗೆ ಏಕಕಾಲಕ್ಕೆ ಮೂರನ್ನು (Triplet) ಹಡೆದು ಅವನ್ನು ಸಂಬಾಳಿಸಲಾಗದೆ ಗೋಳಾಡುತ್ತಿದ್ದರೆ ನಾವೆಲ್ಲಾ ಬಿದ್ದುಬಿದ್ದು ನಗುತ್ತಿದ್ದೆವು. ಅವನೊಬ್ಬನೇ ಏನು? ಇಲ್ಲಿರುವ ಇತರೆ ಅರಬರು (ಜೋರ್ಡಾನಿಗಳು, ಇರಾಕಿಗಳು, ಈಜಿಪ್ಸಿಯನ್‍ಗಳು) ತಮ್ಮ ಸಂಸಾರದೊಟ್ಟಿಗೆ ನೆಮ್ಮದಿಯಿಂದಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ನಮ್ಮಲ್ಲಿ ಸಣ್ಣದೊಂದು ಹೊಟ್ಟೆಯುರಿ ಏಳುತ್ತದೆ. ಎಷ್ಟೊಂದು ಅದೃಷ್ಟವಂತರು ಇವರು! ಎಷ್ಟು ಸಲೀಸಾಗಿ ತಾವು ಹೋದಲ್ಲೆಲ್ಲಾ ತಮ್ಮ ಸಂಸಾರವನ್ನು ಹೊತ್ತೊಯ್ಯುತ್ತಾರೆ! ಈ ಅರಬರಿಗೆ ತಮ್ಮ ಮಕ್ಕಳ ಬಗ್ಗೆ ಅಂಥಾ ಉದಾತ್ತ ಕನಸುಗಳಾಗಲಿ, ಧ್ಯೇಯಗಳಾಗಲಿ ಇರುವದಿಲ್ಲ. ಅಥವಾ ‘ಇಂಗ್ಲೀಷ್ ಮೀಡಿಯಂ’ ಸ್ಕೂಲಿನಲ್ಲೇ ಓದಿಸಬೇಕೆಂಬ ಕಟ್ಟಾ ಇರಾದೆ ಅವರಿಗಿರುವದಿಲ್ಲ. ಅರೇಬಿ ಭಾಷೆಯೊಂದು ಗೊತ್ತಿದ್ದರೆ ಸಾಕು ಎಲ್ಲಿ ಬೇಕಾದರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಮುಂದಾಗುತ್ತಾರೆ. ಮೇಲಾಗಿ ಅವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಮ್ಮಷ್ಟು ಘನವಾಗಿ ಯೋಚಿಸುವದಿಲ್ಲ. ಹೀಗಾಗಿ ಅವರು ಹೋದಲ್ಲೆಲ್ಲಾ ಸಹಜವಾಗಿ ತಮ್ಮ ಸಂಸಾರವನ್ನು ಕರೆದೊಯ್ಯುತ್ತಾರೆ. ಹೆಂಡತಿಯೊಟ್ಟಿಗೆ ಆ ಕೊರೆವ ಚಳಿಯಲ್ಲೂ ಬಿಸಿಬಿಸಿಯಾಗಿರುತ್ತಾರೆ. ಆದರೆ ನಾವು ಹಾಗಲ್ಲ. ನಮ್ಮ ಮಕ್ಕಳು ಹುಟ್ಟುವ ಮುಂಚೆಯೇ ಅವು ಹೀಗೀಗೇ ಇರಬೇಕು, ಇಂತಿಂಥದೇ ಸ್ಕೂಲಿನಲ್ಲಿ ಓದಬೇಕು, ಇಂತಿಂಥದೇ ಆಗಬೇಕು ಎಂದು ಮೊದಲೇ ತೀರ್ಮಾನಿಸಿ ಅದಕ್ಕೆ ಎಲ್ಲ ತಯಾರಿಯನ್ನು ಮಾಡಿಟ್ಟುಕೊಳ್ಳುತ್ತೇವೆ. ಎಷ್ಟೇ ಆಗಲಿ ನಾವು ಭಾರತೀಯರಲ್ವಾ? ನಮ್ಮ ಸುಖಕ್ಕಿಂತ ನಮ್ಮ ಮಕ್ಕಳ ಸುಖಕ್ಕಾಗಿಯೇ ಹೆಣಗುವವರು! ಹೀಗಿರುವಾಗ ಇಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳೇ ಇಲ್ಲದ, ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳಲ್ಲಿ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಓದಿಸಲು ಮುಂದಾದೇವಿ? ಹೀಗಾಗಿ ಆ ಕೊರೆವ ಚಳಿಯಲ್ಲಿ ಉಕ್ಕುವ ನಮ್ಮ ಕಾಮನೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಾ, ನಮ್ಮ ಬಿಸಿಯುಸುರುಗಳಿಗೆ ನಾವೇ ಸಾಕ್ಷಿಯಾಗುತ್ತಾ ಹೀಟರ್ ಗಳ ಮುಂದೆ ಕುಳಿತುಕೊಂಡು ಮೈ ಬೆಚ್ಚಗಾಗಿಸಿಕೊಳ್ಳುವದರಲ್ಲಷ್ಟೇ ತೃಪ್ತಿ ಕಾಣುತ್ತೇವೆ. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮನಸ್ಥಿತಿಯಲ್ಲಿ ಒಳಗೊಳಗೆ ಒದ್ದಾಡುತ್ತಾ, ಒಂಟಿತನ ಅನುಭವಿಸುತ್ತಾ, ನಮ್ಮ ಊರಿನ ಬಗೆಗೆ ಮೆಲುಕು ಹಾಕುತ್ತಾ ಬದುಕನ್ನು ಕಟ್ಟಿಕೊಳ್ಳಲು ನಾವಿಲ್ಲಿ ತಳವೂರುತ್ತೇವೆ. ಅಲ್ಲಿ ನಮ್ಮ ಹೆಂಡಿರು ನಮ್ಮ ಮಕ್ಕಳ ಭವಿಷ್ಯದ ಬಗೆಗೆ ಬಣ್ಣಬಣ್ಣದ ಕನಸುಗಳನ್ನು ಹೆಣೆಯುತ್ತಾ, ನಮ್ಮ ಗೈರುಹಾಜರಿಯಲ್ಲೂ ಸಂಸಾರವನ್ನು ಸರಿದೂಗಿಸುತ್ತಾ, ನಮ್ಮ ಬರುವಿಕೆಗಾಗಿ ಕಾಯುತ್ತಾ ನಿಟ್ಟುಸಿರುಬಿಡುತ್ತಿರುತ್ತಾರೆ. ಒಂದರ್ಥದಲ್ಲಿ ನಾವು ಲಕ್ಷ್ಮಣರು! ಅವರು ಊರ್ಮಿಳೆಯರು!! ಇಬ್ಬರೂ ಒಬ್ಬರಿಗೊಬ್ಬರು ವಿರಹವೇದನೆಯನ್ನನುಭವಿಸುತ್ತಾ ಬದುಕಿನ ಒಂದಷ್ಟು ವರ್ಷಗಳನ್ನು ವನವಾಸದಲ್ಲಿ ಕಳೆದುಬಿಡುತ್ತೇವೆ! ಹೀಗೆ ಕಳೆಯುವದರ ಬಗ್ಗೆ ನಮಗೆ ಜಿಜ್ಞಾಸೆಯಾಗಲಿ, ಬೇಜಾರಾಗಲಿ ಇರುವದಿಲ್ಲ! ಬದುಕನ್ನು ಕಟ್ಟಿಕೊಳ್ಳುವ ಭರಾಟೆ ಮತ್ತು ಪ್ರಪಂಚಕ್ಕೆ ಸಾಧಿಸಿ ತೋರಿಸುವ ಚಪಲ ನಮಗೆ. ಹೀಗಿರುವಾಗ ನಮಗೆ ಈ ತೆರದ ಬದುಕು ಅನಿವಾರ್ಯವಾಗುತ್ತದೆ.



    ನಾನು ಈ ಮೊದಲೇ ಹೇಳಿದಂತೆ ಇಲ್ಲಿ ಲಿಬಿಯಾದಲ್ಲಿ ಅಸಾಧ್ಯ ಚಳಿ! ಈ ಚಳಿಗೆ ಒಳಗೆ ಥರ್ಮಲ್ ವೇರ್ಸ್, ಮೇಲೊಂದು ದಪ್ಪನೆಯ ಸ್ವೆಟರ್, ಕೈಗಳಿಗೆ ಉಣ್ಣೆಯ ಗ್ಲೌಸುಗಳನ್ನು ಧರಿಸಿ ಹೀಟರ್ ಮುಂದೆ ಕುಳಿತುಕೊಂಡು, ಬಿಸಿಬಿಸಿ ಚಹಾ ಹೀರುವದೇ ಒಂದು ಸ್ವರ್ಗಸುಖ! ಜೊತೆಗೆ ಅವಳು ಇದ್ದಿದ್ದರೆ............? ಅಬ್ಬಾ, ಅದರ ಮಜಾನೇ ಬೇರೆ! ಖೋಡಿ ಮನಸ್ಸು ಮತ್ತೆ ಮತ್ತೆ ಇಲ್ಲದ್ದಕ್ಕಾಗಿ ಹಪಹಪಿಸುತ್ತದೆ! ಇದೇ ಹೊತ್ತಿನಲ್ಲಿ ನಮ್ಮ ಕೆಲಸದವನು ‘ಮೊರೆಟ್ಯಾನಿಯನ್’ ಹುಡುಗಿಯರ ಆಸೆ ತೋರಿಸುತ್ತಾನೆ. ಇವರ ಹೆಸರು ಕೇಳುತ್ತಿದ್ದಂತೆ ಕಿಬ್ಬೊಟ್ಟೆಯೊಳಗಿಂದ ಆಸೆಯೊಂದು ಛಳ್ಳೆಂದು ಸಿಡಿದು ಇಡಿ ಮೈಯನ್ನೆಲ್ಲಾ ವ್ಯಾಪಿಸಿಬಿಡುತ್ತದೆ. ಈ ಹುಡುಗಿಯರು ಲಿಬಿಯಾದ ಬಹಳಷ್ಟು ಹೋಟೆಲ್‍ಗಳಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾರೆ. ಹೆಸರಿಗಷ್ಟೆ ವೇಟರ್ ಕೆಲಸ. ಆದರೆ ಅವಕಾಶ ಸಿಕ್ಕರೆ ಮೈ ಮಾರಿಕೊಳ್ಳಲು ತಯಾರಿರುತ್ತಾರೆ. ನೋಡಲು ಹೆಚ್ಚುಕಮ್ಮಿ ಯೂರೋಪಿಯನ್ನರಂತಿದ್ದು ಮೈಕೈ ತುಂಬಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸದಾ ಸ್ವಚ್ಛ ಸ್ವಚ್ಛ! ಇವರ ಮೈ ಘಮಲು ಮೂಗಿಗೆ ಬಡಿಯುತ್ತಿದ್ದಂತೆ ದೇಹ ತಾನೇ ತಾನಾಗಿ ಕಾವೇರುತ್ತದೆ. ಹೊರಟುಬಿಡೋಣ, ದೇಹದ ವಾಂಛೆಗಳನ್ನು ಒಮ್ಮೆ ತೀರಿಸಿಕೊಂಡುಬಿಡೋಣ. ಹತ್ತಿಟ್ಟ ಕಾಮನೆಗಳನ್ನು ಒಮ್ಮೆ ಹೊರಗೆಡವಿ ಸುಖದಸುಪ್ಪತಿಗೆಯಲ್ಲಿ ತೇಲೊಣ ಅನಿಸುತ್ತೆ. ಆದರೆ ಮರುಕ್ಷಣ ನಮ್ಮ ಹೆಂಡತಿಯರಿಗೆ ಮೋಸಮಾಡುತ್ತಿದ್ದೇವೇನೋ ಎಂಬ ಗಿಲ್ಟ್ ಕಾಡಲು ಶುರುವಾಗುತ್ತದೆ (ಅಂದರೆ ನಾವು ನಿಜವಾಗಿಯೂ ನಮ್ಮ ಹೆಂಡತಿಯರನ್ನು ಪ್ರೀತಿಸುತ್ತಿದ್ದೇವೆಂದರ್ಥ). ಜೊತೆಗೆ ಪರದೇಶದಲ್ಲಿ ಏನೇನು ರೀತಿರಿವಾಜುಗಳಿರುತ್ತವೋ? ಸಿಕ್ಕಿಹಾಕಿಕೊಂಡರೆ ಏನು ಮಾಡುವದು? ದೇಹ ಬೇಕೆನ್ನುತ್ತದೆ. ಆದರೆ ಮನಸ್ಸು ಬೇಡವೆನ್ನುತ್ತದೆ. ಮೇಲಾಗಿ ಇವರು, ನಮ್ಮ ಕೆಲಸದವನು ಹೇಳುವಷ್ಟು ಸುಲಭವಾಗಿ ಸಿಗುವದಿಲ್ಲ! ಬಲು ಚಾಲಾಕಿ ಹೆಂಗಸರು! ಇತ್ತ ಸೂಳೆಯರಿಗೆ ಸೂಳೆಯರೂ ಅಲ್ಲ. ಅತ್ತ ಗರತಿಯರಿಗೆ ಗರತಿಯರೂ ಅಲ್ಲ. ಹಾಗೆಲ್ಲಾ ಕರೆದ ತಕ್ಷಣ ಬರುವವರಲ್ಲ! ಮೊದಲು ಗಂಡಸರು ಇವರನ್ನು ಆಕರ್ಷಿಸಬೇಕು. ಕಣ್ಣಲ್ಲೇ ಕಾಮ ಸಂದೇಶಗಳನ್ನು ಕಳಿಸಬೇಕು. ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಹತ್ತಿರವಾಗಬೇಕು, ಒಂದೆರೆಡು ಫ್ಲರ್ಟ್ ಮಾಡಬೇಕು. ಸುಳ್ಳೇಸುಳ್ಳು ಒಂದು ಲವ್ ಹುಟ್ಟಿಸಬೇಕು. ವ್ಯವಹಾರ ಕುದುರಿಸಬೇಕು. ಆಮೇಲಿನಿದ್ದರೂ ಮುಂದಿನದೆಲ್ಲಾ; ಅದೂ ಅವರು ಆ ಗಂಡಸರನ್ನು ಇಷ್ಟಪಟ್ಟರೆ ಮಾತ್ರ.

    ನಾವು ಮೊದಲು ಅವಕಾಶಕ್ಕಾಗಿ ಹಂಬಲಿಸುತ್ತೇವೆ. ಅದು ಸಿಕ್ಕಮೇಲೆ ಅಪರಾಧಿ ಪ್ರಜ್ಞೆ ಭಾವದಿಂದ ಹಿಂದೇಟು ಹಾಕುತ್ತೇವೆ. ಕೊನೆಗೆ ಇದ್ಯಾವುದೂ ಬೇಡ ಎಂದು ನಾವು ನಾವೇ ಸಾಯಂಕಾಲದ ಹೊತ್ತು ಆ ಚಳಿಯಲ್ಲಿ ಇದ್ದಿಲು ಒಲೆಗಳನ್ನು ಇಟ್ಟುಕೊಂಡು ಸಹರಾ ಮರಭೂಮಿಯತ್ತ ಹೊರಟುಬಿಡುತ್ತೆವೆ. ಅಲ್ಲಿ ಒಂದಷ್ಟು ಒಣಗಿದ ಕುರುಚಲು ಟೊಂಗೆಗಳನ್ನು ಹುಡುಕಿ ತಂದು, ಗುಡ್ಡೆಹಾಕಿ, ಬೆಂಕಿಹಚ್ಚಿ, ಟೀ ಕಾಯಿಸಿಕೊಂಡು ಮೈ ಕಾಯಿಸುತ್ತಾ ಕುಳಿತುಬಿಡುತ್ತೇವೆ. ಸಿಗರೇಟು ಸೇದುವವರು ಸಿಗರೇಟು ಸೆದುತ್ತಾರೆ. ಒಂದಷ್ಟು ಪೋಲಿ ಜೋಕುಗಳನ್ನು ಹೇಳುವವರು ಪೋಲಿ ಜೋಕು ಹೇಳುತ್ತಾರೆ. ರಾಜಕೀಯದ ಬಗ್ಗೆ ಮಾತನಾಡುವವರು ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಇವತ್ತು ಕಾಲೇಜಿನಲ್ಲಿ ಏನಾಯಿತು? ಮೀಟಿಂಗ್‍ನಲ್ಲಿ ಏನು ನಡೆಯಿತು? ಯಾವ ಹುಡುಗಿ ಯಾವ ಹುಡುಗನ ಜೊತೆ ಓಡಾಡುತ್ತಿದ್ದಾಳೆ? ನಿನ್ನೆ ರಾತ್ರಿ ಹಾಟ್ ಬರ್ಡ್ ಚಾನೆಲ್‍ನಲ್ಲಿ ಯಾವ್ಯಾವ ಹಾಟ್ ಮೂವಿಗಳನ್ನು ನೋಡಿದೆವು? ಮುಂದಿನವರ್ಷ ಎಷ್ಟು ಇನ್‍ಕ್ರೀಮೆಂಟು ಕೊಡುತ್ತಾರೆ? ಇತ್ಯಾದಿ ವಿಷಯಗಳ ಬಗ್ಗೆ ಸಣ್ಣದೊಂದು ಗಾಸಿಪ್ ಮಾಡುತ್ತೇವೆ. ಆನಂತರ ನಮ್ಮ ಮಾತು ಅವಳ ಕಡೆ ಹೊರಳುತ್ತದೆ. ಅವಳು ಎಂದರೆ ರೀಮ್; ನನ್ನ ವಿದ್ಯಾರ್ಥಿನಿ. ಇವಳು ಓದುತ್ತಿರುವದು ನಮ್ಮ ಡಿಪಾರ್ಟ್‍ಮೆಂಟಿನಲ್ಲಿ. ನೋಡಲು ತುಂಬಾ ಚನ್ನಾಗಿದ್ದಾಳೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ರೂಪವತಿ. ಅವಳ ಇಂಗ್ಲೀಷು ಅಷ್ಟೇ ಸುಸ್ಪಷ್ಟ ಮತ್ತು ನಿರರ್ಗಳ. ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮಾತನಾಡುತ್ತಾಳೆ; ಅದೂ ಬ್ರಿಟಿಷ್ accentನಲ್ಲಿ! ಜೊತೆಗೆ ಬುದ್ಧಿವಂತೆ. ಪ್ರತಿ ಸಾರಿ ಓದುವದರಲ್ಲಿ ಯಾರಿಗೂ ಮೊದಲ ಸ್ಥಾನವನ್ನು ಬಿಟ್ಟುಕೊಡುವದಿಲ್ಲ. ಈ ಕಾರಣಕ್ಕೇನೋ ಎಲ್ಲರ ಮಚ್ಚುಗೆಗೆ ಪಾತ್ರವಾಗಿದ್ದಾಳೆ. ಇವಳನ್ನು ಕೆಲವರು “Queen Cleopatra of Ghat College” ಎಂತಲೂ ಇನ್ನು ಕೆಲವರು “an apple of everyone’s eyes” ಎಂತಲೂ ಕರೆಯುತ್ತಾರೆ. ಹುಡಗರಂತೂ ಒಂದಲ್ಲ ಒಂದು ಕಾರಣ ಹುಡುಕಿ ಅವಳನ್ನು ಮಾತನಾಡಿಸಲು ಹಾತೊರೆಯುತ್ತಿರುತ್ತಾರೆ.



    ಲೆಕ್ಚರರ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ವಿನಾಕಾರಣ ಇವಳನ್ನು ಹುಡುಕಿಕೊಂಡು ಹೋಗುತ್ತಾರೆ. ಏನಾದರೊಂದು ನೆಪ ಹುಡುಕಿ ಇವಳೊಟ್ಟಿಗೆ ಮಾತನಾಡಲು ನೋಡುತ್ತಾರೆ. ಅವಳಿಗೆ ಏನಾದರು ಫೇವರ್ ಮಾಡಬಹುದಾ ನೋಡುತ್ತಾರೆ. ಹಾಗೆ ನೋಡಿದರೆ ಇವಳು ನಮ್ಮ ಇಡಿ ಡಿಪಾರ್ಟ್‍ಮೆಂಟಿನಲ್ಲಿ ನನ್ನೊಟ್ಟಿಗೆ ಮತ್ತು ನಮ್ಮ ಎಚ್.ಒ.ಡಿ. ಜೊತೆಗಷ್ಟೇ ಚನ್ನಾಗಿ ಮಾತನಾಡುವದು. ಬಾಕಿಯವರ ಜೊತೆ ಅಷ್ಟಕ್ಕಷ್ಟೆ. ಹೀಗಾಗಿ ನನ್ನ ಸಹೋದ್ಯೋಗಿಗಳೆಲ್ಲಾ ನನ್ನನ್ನು ಆಗಾಗ ಅವಳ ಹೆಸರು ಹೇಳಿ ರೇಗಿಸುವದುಂಟು. ಅವರು ಹಾಗೆ ರೇಗಿಸುವಾಗಲೆಲ್ಲಾ ಖುಶಿಯಾಗುತ್ತದೆ. ಇಲ್ಲದ ಆಸೆಗಳು ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಹೀಗೆ ಒಂದು ಸಾರಿ ಅವಳೊಟ್ಟಿಗೆ ಮಾತನಾಡುವಾಗ ಕೇಳಿದ್ದೆ “ರೀಮ್, ಅರೇಬಿಕ್ ಭಾಷೆಯಲ್ಲಿ ನಿನ್ನ ಹೆಸರಿನ ಅರ್ಥವೇನು?” ಅವಳು ಕಿಲಕಿಲ ನಗುತ್ತಾ, ಹುಬ್ಬುಹಾರಿಸುತ್ತಾ “deer (ಜಿಂಕೆ)” ಎಂದು ಹೇಳಿದ್ದಳು. ಜೊತೆಗೆ ನನ್ನ ಹೆಸರಿನರ್ಥ ಚನ್ನಾಗಿದೆ ಅಲ್ವ? ಎಂದು ಹೆಮ್ಮೆಯಿಂದ ಬೀಗಿದ್ದಳು. ನಿಜ, ಅವಳು ನಿಜವಾಗಲೂ ಜಿಂಕೆಯಂತೆ ಇದ್ದಾಳೆ. ನಿಂತಲ್ಲಿ ನಿಲ್ಲಲಾರಳು. ಕುಂತಲ್ಲಿ ಕೂರಲಾರಳು. ಪಾದರಸದಂತೆ ಅತ್ತ ಇತ್ತ ಓಡಾಡುತ್ತಲೇ ಇರುತ್ತಳೆ. ಅವಳದು ತುಂಟ ಕಂಗಳು, ಹರಿವ ತೊರೆಯ ಝುಳುಝುಳು ನಿನಾದದ ದನಿ. ಬಳಕುವ ನಡು! ಅಬ್ಬಾ ಎಂಥವನಾದರು ಅವಳನ್ನು ನೋಡಿ ಹುಚ್ಚನಾಗುತ್ತಾನೆ. ಹೀಗೆ ಒಮ್ಮೆ ನನ್ನ ಭಾರತೀಯ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ಸುಖಾಸುಮ್ಮನೆ ಪ್ರೀತಿಯ ಮಧುರ ಭಾವನೆಯೊಂದು ಬೆಳೆಸಿಕೊಂಡು ಹುಚ್ಚನಾಗಿಬಿಟ್ಟಿದ್ದ. ಎಷ್ಟು ಹುಚ್ಚನೆಂದರೆ ಅವಳಿಗೋಸ್ಕರ ಈಗಾಗಲೇ ಮದುವೆಯಾಗಿ ಇಂಡಿಯಾದಲ್ಲಿ ಬಿಟ್ಟಿರುವ ತನ್ನ ಹೆಂಡತಿಯನ್ನು ಬೇಕಾದರು ಬಿಡಲು ತಯಾರಾಗಿದ್ದ. ಆದರೆ ಅವಳು ಇವನ ಪ್ರೀತಿಯ ಬೇಡಿಕೆಯನ್ನು ಅತ್ಯಂತ ನಾಜೂಕಾಗಿ ನಿರಾಕರಿಸಿ ಅವನನ್ನು ಮತ್ತಷ್ಟು ಹುಚ್ಚಳನ್ನಾಗಿ ಮಾಡಿದ್ದಳು.

    ಒಂದುವೇಳೆ ಅವಳು “ಹೂಂ” ಎಂದಿದ್ದರೆ ಏನಾಗುತ್ತಿತ್ತು? ಅವಳೊಟ್ಟಿಗೆ ಅವನ ಮದುವೆಯಾಗುತ್ತಿತ್ತು. ಅವಳು ಇವನ ಮೇಡಮ್ (ಅರೇಬಿ ಭಾಷೆಯಲ್ಲಿ “ಮೇಡಮ್” ಅಂದರೆ ಹೆಂಡತಿ ಎಂದರ್ಥ) ಆಗುತ್ತಿದ್ದಳು. ಆಮೇಲೆ ಅವನಿಗೆ ಇಲ್ಲಿಯ ಗ್ರೀನ್ ಕಾರ್ಡ್, ಸಿಟಿಜನ್‍ಶಿಪ್ ಸಿಗುತ್ತಿತ್ತು. ಮಾತ್ರವಲ್ಲ ಅಮೆರಿಕದಲ್ಲೋ, ಬ್ರಿಟನ್‍ನಲ್ಲೋ ಹೆಚ್ಚಿನ ವಿಧ್ಯಾಭ್ಯಾಸ ಮಾಡಲು ಸರಕಾರದಿಂದ ಸ್ಕಾಲರ್ಶಿಪ್ ಸಹ ಸಿಗುತ್ತಿತ್ತು, ಇದೆಲ್ಲಾ ಮುಗಿಸಿದ ಬಳಿಕ ಇಲ್ಲಿ ಆತ ಬಹಳ ಬೇಗನೆ ಉನ್ನತ ಹುದ್ದೆಯನ್ನೂ ಅಲಂಕರಿಸಬಹುದಿತ್ತು. ಇದೆಲ್ಲವೂ ಆತನಿಗೆ ಕೇವಲ ಒಂದು ಹುಡುಗಿಯನ್ನು ಮದುವೆಯಾಗುವದರಿಂದ ಸಿಕ್ಕುಬಿಡುತ್ತಿತ್ತು. ಆದರೆ ಆತ ಇಸ್ಲಾಂಗೆ ಮತಾಂತರ ಹೊಂದಬೇಕು, ಮೊದಲೆರೆಡು ವರ್ಷ ಭಾರತಕ್ಕೆ ಹೋಗದೇ ಇರಬೇಕು, ಭಾರತದೊಂದಿಗಿನ ತನ್ನ ತಂತುಗಳನ್ನು ಕ್ರಮೇಣ ಕಡಿದುಕೊಳ್ಳುತ್ತಾ ಬರಬೇಕು. ನಿಧಾನಕ್ಕೆ ಇಲ್ಲಿ ಬೇರಿಳಿಸುತ್ತಾ ಹೊಸ ಬದುಕು, ಹೊಸ ನೆನಪುಗಳನ್ನು ಕಟ್ಟಿಕೊಳ್ಳಬೇಕು. ಒಂದುವೇಳೆ ಅವನು ಭಾರತಕ್ಕೆ ವಾಪಾಸು ಹೋದರೂ ಇಷ್ಟೆಲ್ಲಾ ಗೊತ್ತಿದ್ದ ಅವನನ್ನು ಅವರ ಮನೆಯವರು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆಯೇ? ಒಂದು ರಿತಿಯಲ್ಲಿ ಅವಳು ಅವನನ್ನು ನಿರಾಕರಿಸಿದ್ದು ಒಳ್ಳೆಯದೇ ಆಯಿತು. ಇಲ್ಲವಾದರೆ ಅವನ ಊರಿನಲ್ಲಿ ಅವನನ್ನೇ ನಂಬಿಕೊಂಡು ಬದುಕುತ್ತಿರುವ ಜೀವಗಳ ಕತೆ ಏನಾಗಿರುತ್ತಿತ್ತು? ಆದರೆ ಇಲ್ಲಿ ನಾಲ್ಕೈದು ಜನ ಭಾರತೀಯರು ಭಾರತದೊಟ್ಟಿಗಿನ ತಮ್ಮ ಸಂಬಂಧಗಳನ್ನು, ತಂತುಗಳನ್ನು ಕಡಿದುಕೊಂಡು ಇಲ್ಲಿಯ ಹುಡುಗಿಯರೊಟ್ಟಿಗೆ ಮದುವೆಮಾಡಿಕೊಂಡು ಹಾಯಾಗಿದ್ದಾರೆ. ಅವರಿಗೆ ಈ ಕುರಿತು ಯಾವುದೇ ಗಿಲ್ಟ್ ಆಗಲಿ, ತಪ್ಪಿನ ಅರಿವಾಗಲಿ ಇಲ್ಲ. ಕೇಳಿದರೆ ಅದೆಲ್ಲಾ ‘ಅಲ್ಲಾ’ಹುನ ಇಚ್ಛೆಯಾಗಿತ್ತು ಎಂದು ಹೇಳುತ್ತಾರೆ. ನಾವೆಲ್ಲಾ ಅವರನ್ನು ‘ಖರ್ಜೂರ ಬೆಳೆವ ಹೊಲದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟವರು’ ಎಂದು ತಮಾಷೆ ಮಾಡುತ್ತಿರುತ್ತೇವೆ.

    ಇಲ್ಲಿಯ ಹುಡುಗಿಯರನ್ನು ಪ್ರೀತಿಸಬಾರದು. ಪ್ರೀತಿಸಿದ ಮೇಲೆ ಅದಕ್ಕೆ ಬದ್ಧವಾಗಿರಬೇಕು. ಇಲ್ಲವಾದರೆ ಸುಮ್ಮನೆ ಬಿಟ್ಟಾರೆಯೇ ಈ ಅರಬ್ಬರು? ಈ ಹಿಂದೆ ಈಜಿಪ್ಟ್ ಮೂಲದ ಕ್ರಿಶ್ಚನ್ ಡಾಕ್ಟರನೊಬ್ಬನ ಮನೆಗೆ ಇಲ್ಲಿನ ಕಾಲೇಜು ಹುಡುಗಿಯೊಬ್ಬಳು ದಿನಾಲೂ ಮಧ್ಯಾಹ್ನದ ಹೊತ್ತು ಹೋಗಿ ಬಂದು ಮಾಡುತ್ತಿದ್ದಾಳೆ ಎನ್ನುವದೇ ಭಾರೀ ಸುದ್ಧಿಯಾಗಿ ಅವನನ್ನು ಸಾಯಿಸಲು ಹೋಗಿದ್ದರು. ಕೊನೆಗೆ ಇಸ್ಲಾಂಗೆ ಮತಾಂತರ ಹೊಂದಿ ಅವಳನ್ನು ಮದುವೆಯಾಗು ಇಲ್ಲ ದೇಶ ಬಿಡು ಎಂಬ ಒತ್ತಡ ಹೇರಿದರು. ಅವನು ಸುಮ್ಮನೆ ದೇಶ ಬಿಟ್ಟುಹೋದ. ಇನ್ನೊಂದು ಸಾರಿ ಇನ್ನೊಬ್ಬ ವಿದೇಶಿ ಡಾಕ್ಟರು ತನ್ನ ತಪಾಸಣಾ ಕೋಣೆಯಲ್ಲಿ ನನ್ನ ವಿದ್ಯಾರ್ಥಿಯೊಬ್ಬಳನ್ನು ತಪಾಸಣೆಯ ನೆಪದಲ್ಲಿ ಅನವಶ್ಯಕವಾಗಿ ಅವಳ ಅಂಗಾಂಗಗಳನ್ನು ಮುಟ್ಟಿ ಲೈಂಗಿಕವಾಗಿ ಹಿಂಸಿಸಿದ ಎಂಬ ಕಾರಣಕ್ಕೆ ಅವನನ್ನು ಗಡಿಪಾರು ಮಾಡಲಾಯಿತು. ಈ ಎರಡು ಘಟನೆಗಳು ಬೇರೆಯವರನ್ನು ಎಚ್ಚರದಲ್ಲಿಟ್ಟಿವೆ. ಇವೆರೆಡು ಕಾಮದ ಕಥೆಗಳು. ಆದರೆ ಪ್ರೇಮಕ್ಕೆ ಸಂಬಂಧ ಪಟ್ಟ ಅನೇಕ ಕಥೆಗಳು ಆಗಾಗ ಹುಟ್ಟಿ ಸಾಯುತ್ತಿರುತ್ತವೆ. ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಮ್ಮ ಓರಿಸ್ಸಾದ ಡಾಕ್ಟರೊಬ್ಬರು ತಮ್ಮ ಕೋರಿಯನ್ ನರ್ಸ್ ಒಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದರು. ಅವರ ಪ್ರೀತಿ ಅದ್ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಆ ಪುಣ್ಯಾತ್ಮ ಈಗಾಗಲೇ ಪ್ರೀತಿಸಿ ಮದುವೆಯಾದ ತನ್ನ ಡಾಕ್ಟರ್ ಹೆಂಡತಿಯನ್ನು ಹಾಗೂ ಎದೆಮಟ್ಟ ಬೆಳೆದುನಿಂತ ತನ್ನ ಇಬ್ಬರು ಗಂಡು ಮಕ್ಕಳನ್ನು ಬಿಡಲು ತಯಾರಾಗಿದ್ದ. ಸಾಲದ್ದಕ್ಕೆ ಅವರು ಪ್ರೀತಿಸುವ ಸಮಯದಲ್ಲೇ ಆತ ಭಾರತಕ್ಕೆ ಬಂದಾಗ ಆತನ ಪ್ರೇಯಸಿ ಕೇಳಿದಳೆಂದು ಅಲ್ಲಿಂದ ಎಳೆನೀರನ್ನು ತಂದುಕೊಟ್ಟಿದ್ದರು. ಅದಕ್ಕೋಸ್ಕರ ಚೆಕಿನ್ ಸಮಯದಲ್ಲಿ ಎಕ್ಸೆಸ್ ಲಗೇಜ್ ಫೀಸು ಎಂದು ಸಾವಿರಗಟ್ಟಲೆ ದಂಡ ತೆತ್ತಿದ್ದರು. ಅವಳೋ ಒಂದೇ ಗುಟಿಕಿನಲ್ಲಿ ಅವೆಲ್ಲವನ್ನೂ ಕುಡಿದು ಬೀಸಾಡಿದ್ದಳು. ಇವರೋ ಸೋಮರ್ಸೆಟ್ ಮೌಮ್‍ನ “ದಿ ಲಂಚಾನ್” ಕಥೆಯಲ್ಲಿನ ನಾಯಕ ಹೀಗೆ ಪರಿಚಯವಾದ ಹುಡುಗಿಯೊಬ್ಬಳಿಗೆ ತನ್ನ ಬಳಿ ಇರುವ ಹಣವನ್ನೆಲ್ಲಾ ಖರ್ಚುಮಾಡಿ ಒಂದು ಲಂಚ್ ಕೊಡಿಸಿ ತೃಪ್ತಿಪಡುವಷ್ಟೇ ತೃಪ್ತಿಪಟ್ಟಿದ್ದರು. ಅವರು ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ಅವರ ಕೆಲವು ಸಹೋದ್ಯೋಗಿಗಳು ಅವರಿಗೊಂದಿಷ್ಟು ಬುದ್ಧಿವಾದ ಹೇಳಿ ಈ ಮದುವೆಯನ್ನು ಅದ್ಹೇಗೋ ತಪ್ಪಿಸಿದ್ದರು. ಮುಂದೆ ಸ್ವಲ್ಪ ದಿನದಲ್ಲಿಯೇ ಆ ನರ್ಸ್ ತನ್ನ ದೇಶಕ್ಕೆ ವಾಪಾಸ್ ಹೋದಳು. ಇವರು ಸ್ವಲ್ಪ ದಿವಸ ದೇವದಾಸ್‍ನಂತೆ ಇದ್ದು ಕ್ರಮೇಣ ಸಹಜ ಸ್ಥಿತಿಗೆ ಮರಳಿದ್ದರು.

    ಹೀಗೆ ಸ್ನೇಹಿತರನ್ನು, ಬಂಧುಗಳನ್ನು, ಸಂಸಾರವನ್ನು ಬಿಟ್ಟು ಕೆಲಸ ಹುಡುಕಿ ಬಂದ ನಮ್ಮಂತವರದು ಒಂಥರಾ ಸತ್ತ ಬದುಕು. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮಾನಸಿಕ ಸಂಘರ್ಷಗಳ ನಡುವೆ ಜರ್ಜರಿತರಾಗುತ್ತಾ ನಾವು ಒದೊಂದು ಸಾರಿ ಸಂಪೂರ್ಣವಾಗಿ ಕುಗ್ಗಿಹೋಗುತ್ತೇವೆ. ದೈಹಿಕವಾಗಿ ಮಾತ್ರ ಇಲ್ಲಿರುತ್ತೇವೆ. ಆದರೆ ಮನಸ್ಸೆಲ್ಲಾ ಪೂರ್ತಿ ನಮ್ಮನಮ್ಮ ಊರುಗಳಲ್ಲಿರುತ್ತದೆ. ಆದರೆ ಪ್ರತಿವರ್ಷ ಎರಡು ತಿಂಗಳಗಳ ಕಾಲ ರಜೆಗೆಂದು ಅಲ್ಲಿಗೆ ಹೋದಾಗ ಕಟ್ಟಿಕೊಂಡುಬಂದ ನೆನಪುಗಳು ಹಾಗೂ ಇಲ್ಲಿ ಕುಳಿತು ಭವಿಷ್ಯದ ಬಗೆಗೆ ಹೆಣೆಯುವ ಕನಸುಗಳು ಮಾತ್ರ ನಮ್ಮನ್ನು ಜೀವಂತವಾಗಿಡುತ್ತವೆ. ನಾವೇನೋ ದೊಡ್ಡ ಹುದ್ದೆಯಲ್ಲಿ ಇರುವವರು, ಒಳ್ಳೆ ಸಂಬಳ ಎಣಿಸುವವರು. ನಮ್ಮ ಹತ್ತಿರ ಮತ್ತು ನಮ್ಮ ಕುಟಂಬದವರ ಹತ್ತಿರ ಲ್ಯಾಪ್‍ಟಾಪ್ ಮತ್ತು ಇಂಟರ್ನೆಟ್ ಸೌಲಭ್ಯ ಇದ್ದೇ ಇರುತ್ತದೆ. ಹೀಗಾಗಿ ನಾವು ನಮ್ಮ ಮನೆಯವರ ಜೊತೆ ಬೇಕೆಂದಾಗ ಮಾತಾಡಿ ಒಂದಷ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ. ಅಂತೆಯೇ ತೀರ ಇಂಟರ್ನೆಟ್ ಇಲ್ಲದ ಬಂಧುಗಳನ್ನು ಫೋನಿನ ಮೂಲಕ ಸಂಪರ್ಕಿಸಿ ಖುಶಿಯಾಗಿರುತ್ತೇವೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಅವರಿಗೆ ಲ್ಯಾಪ್‍ಟಾಪ್, ಇಂಟರ್ನೆಟ್ ಕನಸಿನ ಮಾತು. ಹೋಗಲಿ ಫೋನು ಆದರೂ ಮಾಡಿ ಮಾತಾಡೋಣವೆಂದರೆ ಭಾರಿ ಮೊತ್ತವನ್ನು ತೆರಬೇಕಾಗುತ್ತದೆಂದು ಸುಮ್ಮನಿದ್ದುಡುತ್ತಾರೆ. ಮಾಡಿದರೂ ಹತ್ತೋ ಹದಿನೈದು ದಿವಸಗಳಿಗೊಂದು ಸಾರಿ ಮಾಡುತ್ತಾರೆ. ಮಾತನಾಡುವದನ್ನೆಲ್ಲಾ ಒಂದು ಹಾಳೆಯಲ್ಲಿ ಬರೆದುಕೊಂಡು ಬಡಬಡನೆ ಮಾತನಾಡಿ ಮುಗಿಸುತ್ತಾರೆ. ಅದೂ ಕೇವಲ ಐದಾರು ನಿಮಿಷಗಳಷ್ಟು ಮಾತ್ರ. ಇಂಥವರು ತಮ್ಮ ಕಾಮನೆಗಳನ್ನಷ್ಟೇ ಅಲ್ಲ ಭಾವನೆಗಳನ್ನು ಕೂಡ ಹತ್ತಿಕ್ಕಿ ಬದುಕುತ್ತಾರೆ. ನಾವು ವರ್ಷಕ್ಕೆ ಎರಡು ಸಾರಿ ನಮ್ಮ ಊರಿಗೆ ಹೋಗಿಬರುತ್ತೇವೆ. ಅವರೋ ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್‍ಗಳನ್ನು ತೆಗೆದುಕೊಟ್ಟರೆ ಮಾತ್ರ. ಇನ್ನು ಯಾರದಾದರೂ ಸಾವಿನ ಸುದ್ದಿ ಬಂದರೆ ಅವರ ಅಂತ್ಯಸಂಸ್ಕಾರಕ್ಕೆ ಹೋಗಲಾರದೆ ಸತ್ತವರನ್ನು ನನಪುಗಳಲ್ಲಿ ಬದುಕಿಸಿಕೊಂಡು ರೂಮಲ್ಲಿ ಒಬ್ಬರೇ ಕುಳಿತು ಅಳುತ್ತಾರೆ. ಮಾರನೆಯ ದಿನ ಮತ್ತೆ ಎಂದಿನಂತೆ ಕೆಲಸಕ್ಕೆ ಹೋಗುತ್ತಾರೆ. “ಸಾಕು ಇಲ್ಲಿಯ ಪರದೇಶಿ ಬದುಕು. ಮತ್ತೆ ಬರುವದು ಬೇಡ” ಎಂದು ಪ್ರತಿಸಾರಿ ಅಂದುಕೊಂಡು ಹೋಗುತ್ತೇವೆ. ಆದರೆ ನಮಗಾಗಿ ಊರುಗಳಲ್ಲಿ ನಮ್ಮನ್ನು ವಾಪಸ್ ವಿಮಾನ ಹತ್ತಿಸಲು ಹೊಸ ಸಮಸ್ಯೆಗಳು ಕಾಯುತ್ತಿರುತ್ತವೆ. ಮಕ್ಕಳ ವಿದ್ಯಾಭ್ಯಾಸವೊ, ಮನೆಯ ಕಷ್ಟವೊ, ತಂಗಿತಮ್ಮರ ಮದುವೆಯೊ ನಮ್ಮನ್ನು ಹಿಮ್ಮೆಟ್ಟಿಸುತ್ತವೆ. ಹೋಗಲಿ ಇಲ್ಲೇ (ಭಾರತದಲ್ಲಿ) ಇದ್ದುಕೊಂಡು ಕೆಲಸ ಮಾಡೋಣವೆಂದರೆ ಇಲ್ಲಿ ಕೊಡುವ ಸಂಬಳ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ಮೇಲಾಗಿ ನಾವು ದೊಡ್ಡ ಮೊತ್ತದ ಸಂಬಳ ಎಣಿಸಿದವರು ಸಣ್ಣ ಸಂಬಳಕ್ಕೆ ಕೆಲಸಮಾಡಲು ನಮ್ಮ ಮನಸ್ಸು ಒಗ್ಗಿಕೊಳ್ಳುವದಿಲ್ಲ. ಬಹುಶಃ, ನಮ್ಮೆಲ್ಲಾ ಕಮಿಟ್‍ಮೆಂಟ್‍ಗಳು ಮುಗಿದು, ಮನೆಯೊಂದನನ್ನು ಕಟ್ಟಿ, ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಅಂತಾದ ಮೇಲೆಯಷ್ಟೇ ನಾವಿಲ್ಲಿ ಕೆಲಸ ಮಾಡಲು ಅಣಿಯಾಗುತ್ತದೇನೋ? ಈ ಎಲ್ಲ ಕಾರಣಕ್ಕಾಗಿ ನಾವು ಎಂದಿನಂತೆ ಅಲ್ಲಿಯ ನೆನಪುಗಳೊಂದಿಗೆ ಹಾರಿಬಂದು ಇಲ್ಲಿ ಕುಳಿತು ಹೊಸಹೊಸ ಕನಸುಗಳನ್ನು ಹೆಣೆಯುತ್ತಾ ಮತ್ತೆ ನಮ್ಮ ಕೆಲಸದಲ್ಲಿ ಮಗ್ನರಾಗುತ್ತೇವೆ.

    ಖ್ಯಾತ ಇಂಗ್ಲೀಷ್ ಲೇಖಕಿ ಶೋಭಾ ಡೇ ಹೇಳುತ್ತಾರೆ; Money is sexier than sex. ಈ ಮಾತು ಅಪ್ಪಟ ಸತ್ಯ ಅಲ್ಲವೇ?


    -ಉದಯ್ ಇಟಗಿ

    ಈ ಲೇಖನ ‘’ಅವಧಿ”ಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ: http://avadhimag.com/?p=54037

    ಆ ಕಂಗಳು.........

  • ಮಂಗಳವಾರ, ಮೇ 15, 2012
  • ಬಿಸಿಲ ಹನಿ
  • ರೋಹನಾ ತಲುಪುವವರೆಗೂ ಆ ಇಡಿ ಕಂಪಾರ್ಟ್‍ಮೆಂಟು ನನ್ನೊಬ್ಬನದೇ ಆಗಿತ್ತು. ಬಳಿಕ ಹುಡುಗಿಯೊಬ್ಬಳು ನನ್ನನ್ನು ಸೇರಿಕೊಂಡಳು. ಅವಳನ್ನು ಬೀಳ್ಕೊಡಲು ದಂಪತಿಗಳಿಬ್ಬರು ಬಂದಿದ್ದರು. ಬಹುಶಃ, ಅವರು ಆಕೆಯ ತಂದೆ-ತಾಯಂದಿರರಬೇಕು. ಅವಳ ಸುರಕ್ಷತೆಯ ಬಗ್ಗೆ ಅವರು ತುಸು ಹೆಚ್ಚೇ ಕಳವಳಗೊಂಡಂತೆ ಕಾಣುತ್ತಿತ್ತು. ಆ ಹೆಂಗಸು ಸಾಮಾನುಗಳನ್ನು ಎಲ್ಲಿಡಬೇಕು, ಕಿಟಕಿಯಿಂದಾಚೆ ಯಾವಾಗ ತಲೆಹಾಕಬಾರದು, ಹಾಗು ಅಪರಿಚಿತರೊಂದಿಗೆ ಮಾತನಾಡುವದನ್ನು ಹೇಗೆ ತಳ್ಳಿಹಾಕಬೇಕೆಂಬುದರ ಬಗ್ಗೆಯೆಲ್ಲಾ ಸಲಹೆ ಸೂಚನೆಗಳನ್ನು ಕೊಟ್ಟಳು.

    ಅವರು ವಿದಾಯ ಹೇಳಿದರು. ರೈಲು ನಿಲ್ದಾಣದಿಂದ ಹೊರಟಿತು. ನಾನಾಗ ಸಂಪೂರ್ಣ ಕುರುಡನಾಗಿದ್ದೆ. ನನ್ನ ಕಂಗಳು ಕತ್ತಲೆ ಮತ್ತು ಬೆಳಕಿಗೆ ಮಾತ್ರ ಸ್ಪಂದಿಸುತ್ತಿದ್ದವು. ಹೀಗಾಗಿ ಆ ಹುಡುಗಿ ನೋಡಲು ಹೇಗೆ ಕಾಣುತ್ತಿದ್ದಳು ಎಂಬುದನ್ನು ಹೇಳಲು ಅಸಮರ್ಥನಾಗಿದ್ದೆ. ಆದರೆ ಅವಳು ನಡೆಯುವಾಗ ಅವಳ ಹಿಮ್ಮಡಿಗೆ ಬಡಿಯುತ್ತಿದ್ದ ಸಪ್ಪಳದಿಂದ ಆಕೆ ಚಪ್ಪಲಿ ಹಾಕಿದ್ದಳೆಂದು ಗೊತ್ತಾಯಿತು.




    ಅವಳು ನೋಡಲು ಹೇಗಿದ್ದಾಳೆಂದು ತಿಳಿಯಲು ನನಗೆ ಸ್ವಲ್ಪ ಸಮಯ ಹಿಡಿಯಬಹುದು. ಅಥವಾ ಬಹುಶಃ, ಅದು ಸಾಧ್ಯವಾಗದೆಯೂ ಹೋಗಬಹುದು! ಆದರೆ ಅವಳ ಧ್ವನಿ ನಂಗೆ ತುಂಬಾ ಹಿಡಿಸಿತು. ಮಾತ್ರವಲ್ಲ ಅವಳ ಚಪ್ಪಲಿಯ ಸದ್ದು ಕೂಡ ಇಷ್ಟವಾಯಿತು.

    “ನೀವು ಡೆಹರಾಗೆ ಹೋಗುತ್ತಿದ್ದೀರಾ?” ನಾನು ಕೇಳಿದೆ.

    ಬಹುಶಃ, ನಾನು ಕತ್ತಲ ಮೂಲೆಯಲ್ಲಿ ಕುಳಿತಿರಬೇಕು. ಅವಳು ನನ್ನ ದನಿ ಕೇಳಿ ಬೆಚ್ಚಿಬಿದ್ದಳು. ಅವಳು ಸ್ವಲ್ಪ ಆಶ್ಚರ್ಯಚಕಿತಳಾಗಿ “ಓ! ಇಲ್ಲಿ ಯಾರಾದರು ಇದ್ದಾರೆಂದು ನನಗೆ ಗೊತ್ತಾಗಲಿಲ್ಲ” ಎಂದು ಉದ್ಗರಿಸಿದಳು.

    ಕೆಲವೊಮ್ಮೆ ಹಾಗಾಗುತ್ತದೆ. ದೃಷ್ಟಿ ಚನ್ನಾಗಿರುವವರು ಕೂಡ ಒಮ್ಮೊಮ್ಮೆ ತಮ್ಮ ಮುಂದಿರುವದನ್ನು ಸರಿಯಾಗಿ ಗಮನಿಸುವದಿಲ್ಲ. ಅವರಿಗೆ ನೋಡಲು ಬಹಳಷ್ಟಿರುತ್ತದೆ. ಆದರೆ ಸರಿಯಾಗಿ ನೋಡುವದಿಲ್ಲ. ದೃಷ್ಟಿಹೀನರು (ಅಥವಾ ಮಂದ ದೃಷ್ಟಿಯುಳ್ಳವರು) ಹಾಗಲ್ಲ. ತಮ್ಮ ಇತರೆ ಇಂದ್ರಿಯಾನುಭವಗಳ ಮೂಲಕ ಬರೀ ಅಗತ್ಯವಿರುವದನ್ನಷ್ಟೇ ಗಮನಿಸಿದರೆ ಸಾಕು. ಆದರೆ ಅವರು ಅದಕ್ಕಿಂತ ಹೆಚ್ಚಾಗಿ ಗ್ರಹಿಸಿರುತ್ತಾರೆ.

    “ನಾನು ಕೂಡ ನಿಮ್ಮನ್ನು ನೋಡಲಿಲ್ಲ” ನಾನು ಹೇಳಿದೆ, “ಆದರೆ ನೀವು ಒಳಬರುವದು ಕೇಳಿಸಿತು.”

    ನಾನು ಕುರುಡ ಎಂಬುದನ್ನು ಅವಳಿಂದ ಮುಚ್ಚಿಡಲು ಇನ್ನಿಲ್ಲದ ಪ್ರಯತ್ನಮಾಡುತ್ತಿದ್ದೆ. ಅವಳಿಗೆ ಗೊತ್ತಾಗಬಾರದೆಂದು ಸೀಟಿಗೆ ಅಂಟಿಕೊಂಡೇ ಕುಳಿತೆ. ಹಾಗೆ ಕುಳಿತುಕೊಳ್ಳುವದು ನಂಗೇನೂ ಕಷ್ಟವಾಗಲಿಲ್ಲ.

    “ನಾನು ಸಹರಾನಪುರದಲ್ಲಿ ಇಳಿಯುತ್ತೇನೆ. ಅಲ್ಲಿಗೆ ನನ್ನ ಆಂಟಿ ಬರುತ್ತಾರೆ ನನ್ನ ಕರೆದೊಯ್ಯಲು” ಹುಡುಗಿ ಹೇಳಿದಳು.

    “ಹಾಗಿದ್ದರೆ ನಾನು ನಿಮ್ಮೊಂದಿಗೆ ಇಷ್ಟೊಂದು ಸಲಿಗೆಯಿಂದ ಇರಬಾರದಿತ್ತು”, ನಾನು ಹೇಳಿದೆ, “ಸಾಮಾನ್ಯವಾಗಿ ಈ ಆಂಟಿಯರೆಂದರೆ ಒಂಥರಾ ಭಯ ಹುಟ್ಟಿಸುವ ಪ್ರಾಣಿಗಳು.”

    “ನೀವೆಲ್ಲಿಗೆ ಹೋಗುತ್ತಿದ್ದೀರಾ?” ಅವಳು ಕೇಳಿದಳು.

    “ಡೆಹರಾಗೆ, ಅಲ್ಲಿಂದ ಮಸ್ಸೂರಿಗೆ”

    “ಓ, ಹೌ ಲಕ್ಕಿ ಯು ಅರ್! ನಾನೂ ಮಸ್ಸೂರಿಗೆ ಹೋಗಬೇಕಿತ್ತು. ಅಲ್ಲಿಯ ಬೆಟ್ಟಗುಡ್ಡಗಳೆಂದರೆ ನಂಗೆ ತುಂಬಾ ಇಷ್ಟ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ ತಿಂಗಳಿನ ಬೆಟ್ಟಗುಡ್ಡಗಳೆಂದರೆ ಪಂಚಪ್ರಾಣ.”

    “ಹೌದು, ಇದು ಪ್ರಶಸ್ತ ಸಮಯ.” ಎಲ್ಲವನ್ನು ನೆನಪಿಗೆ ತಂದುಕೊಳ್ಳುತ್ತಾ ಹೇಳಿದೆ. “ಈ ಸಮಯದಲ್ಲಿ ಗುಡ್ಡಗಳೆಲ್ಲಾ ಡೇರಾ ಹೂಗಳಿಂದ ಕಂಗೊಳಿಸುತ್ತಿರುತ್ತವೆ, ಸೂರ್ಯ ಆಹ್ಲಾದಕರವಾಗಿರುತ್ತಾನೆ, ಮತ್ತು ರಾತ್ರಿ ಹೊತ್ತು ಬೆಂಕಿಕಾಯಿಸುತ್ತಾ ಸ್ವಲ್ಪ ಬ್ರ್ಯಾಂಡಿ ಬೇಕಾದರೆ ಕುಡಿಬಹುದು. ಈ ಸಮಯದಲ್ಲಿ ಎಲ್ಲ ಪ್ರವಾಸಿಗರು ಹೊರಟುಹೋಗಿರುತ್ತಾರೆ, ರಸ್ತೆಗಳು ನಿರ್ಜನವಾಗಿರುತ್ತವೆ, ಹಾಗು ಇಡಿ ವಾತಾವರಣ ಪ್ರಶಾಂತತೆಯಿಂದ ಕೂಡಿರುತ್ತದೆ. ಹೌದು, ಅಕ್ಟೋಬರ್ ತಿಂಗಳು ಪ್ರಶಸ್ತ ಸಮಯ!”




    ಅವಳು ಸುಮ್ಮನಿದ್ದಳು. ಬಹುಶಃ, ನನ್ನ ಮಾತುಗಳು ಅವಳನ್ನು ತಾಗಿರಬೇಕು. ಅಥವಾ ಅವಳು ನನ್ನನ್ನು ಒಬ್ಬ ‘ರೊಮ್ಯಾಂಟಿಕ್ ಫೂಲ್’ ಎಂದು ಭಾವಿಸಿದಳೇನೋ! ಆಗ ಇದ್ದಕ್ಕಿದ್ದಂತೆ ನಾನೊಂದು ತಪ್ಪು ಮಾಡಿದೆ.

    “ಹೊರಗೆ ಏನು ಕಾಣ್ತಾ ಇದೆ?” ಎಂದು ಕೇಳಿದೆ.

    ಅವಳು ನನ್ನ ಪ್ರಶ್ನೆಯೊಳಗಿನ ಅಸಹಜತೆಯನ್ನು ಗಮನಿಸಿದಂತೆ ಕಾಣಲಿಲ್ಲ. ಹಾಗಾದರೆ ನಾನು ಕುರುಡ ಎಂಬುದು ಅವಳಿಗೆ ಅದಾಗಲೇ ಗೊತ್ತಾಗಿಹೋಗಿದೆಯೇ? ಆದರೆ ಅವಳ ಮುಂದಿನ ಪ್ರಶ್ನೆ ನನ್ನ ಅನುಮಾನವನ್ನು ತೊಡೆದುಹಾಕಿತು.

    “ನೀವೇ ಏಕೆ ಕಿಟಕಿಯಿಂದ ನೋಡಬಾರದು?” ಅವಳು ಕೇಳಿದಳು.

    ನಾನು ಸಲೀಸಾಗಿ ಬರ್ತ್‍ಗುಂಟ ಸರಿಯುತ್ತಾ ಕಿಟಕಿಯ ಪಕ್ಕ ಬಂದು ಕುಳಿತೆ. ಕಿಟಕಿ ತೆರದೇ ಇತ್ತು. ಅದಕ್ಕೆ ಮುಖಮಾಡಿ ಹೊರಗಿನ ದೃಶ್ಯಗಳನ್ನು ನೋಡುತ್ತಿರುವವನಂತೆ ನಟಿಸುತ್ತಾ ಕುಳಿತೆ.

    ಎಂಜಿನ್ ಹೊಗೆ ಉಗುಳುತ್ತಾ ಚುಕುಬುಕು ಎಂದು ಸದ್ದುಮಾಡುತ್ತಾ ರಭಸವಾಗಿ ಸಾಗುತ್ತಿತ್ತು, ಗಾಲಿಗಳು ದಡಲ್ ಬಡಲ್ ಎಂದು ಒಂದೇ ಗತಿಯಲ್ಲಿ ಲಯಬದ್ಧವಾಗಿ ಓಡುತ್ತಿದ್ದವು. ನನ್ನ ಒಳಗಣ್ಣಿಗೆ ಹೊರಗಿನ ಟೆಲಿಗ್ರಾಫ್ ಕಂಬಗಳು ಅತಿವೇಗದಲ್ಲಿ ಒಂದೊಂದಾಗಿ ಸರಿದುಹೋಗುತ್ತಿರುವಂತೆ ಭಾಸವಾಯಿತು.

    “ನೀವು ಗಮನಿಸಿದ್ದೀರಾ” ನಾನು ನನ್ನ ಅಭಿಪ್ರಾಯವನ್ನು ಮುಂದಿಡುತ್ತಾ ಕೇಳಿದೆ, “ನಾವು ನಿಂತಿರುವಂತೆ, ಮರಗಳು ಓಡುತ್ತಿರುವಂತೆ ಕಾಣುತ್ತದಲ್ಲವೆ?”

    “ಹೌದು, ಅದು ಸಾಮಾನ್ಯವಾಗಿ ಹಾಗೆ ಕಾಣುತ್ತೆ.” ಅವಳು ಹೇಳಿದಳು. “ಅಲ್ಲಿ ಯಾವುದಾದ್ರು ಪ್ರಾಣಿಗಳನ್ನು ನೋಡಿದ್ರಾ?”

    “ಇಲ್ಲ” ನಾನು ಅತ್ಯಂತ ಖಚಿತವಾಗಿ ಹೇಳಿದೆ. ಡೆಹರಾದ ಕಾಡುಗಳಲ್ಲೀಗ ಯಾವುದೇ ಪ್ರಾಣಿಗಳಿಲ್ಲ ಎಂಬುದು ನಂಗೆ ಚನ್ನಾಗಿ ಗೊತ್ತಿತ್ತು.

    ಈಗ ನಾನು ಕಿಟಕಿಯಿಂದ ತಿರುಗಿ ಆ ಹುಡುಗಿಗೆ ಮುಖಮಾಡಿ ಕುಳಿತೆ. ನಮ್ಮಿಬ್ಬರ ಮಧ್ಯ ಕ್ಷಣಹೊತ್ತು ಮೌನ ಆವರಿಸಿತು.

    “ನಿಮ್ಮದು ಸುಂದರವಾದ ಮುಖ” ನಾನು ಅವಳ ಗಮನಸೆಳೆಯುತ್ತಾ ಹೇಳಿದೆ. ನಾನು ಕೊಂಚ ಸಲಿಗೆ ತೆಗೆದುಕೊಳ್ಳುತ್ತಾ ಧೈರ್ಯಮಾಡಿ ಹೇಳಿದೆ. ಆದರದು ಅಪಾಯರಹಿತ ಹೇಳಿಕೆಯಾಗಿದ್ದರಿಂದ ಅವಳು ಏನೂ ಅಂದುಕೊಳ್ಳಲಿಲ್ಲ. ಮೇಲಾಗಿ ಹೊಗಳಿಕೆಯನ್ನು ಯಾವ ಹುಡುಗಿ ತಾನೇ ಇಷ್ಟಪಡುವದಿಲ್ಲ?

    ಅವಳು ನಕ್ಕಳು, ಆಪ್ಯಾಯಮಾನವಾಗಿ ನಕ್ಕಳು. ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸುವ ತುಂಬುನಾದದ ನಗು ಅದು.

    “ಥ್ಯಾಂಕ್ಸ್, ಆದರೆ ಇಷ್ಟು ದಿನ ಜನ ನನ್ನದು ಮುದ್ದು ಮುಖವೆಂದು ಹೇಳುತ್ತಿದ್ದುದನ್ನು ಕೇಳಿ ಕೇಳಿ ಸಾಕಾಗಿಹೋಗಿತ್ತು”

    ಓ, ಹಾಗಾದರೆ ನಿನಗೆ ಮುದ್ದು ಮುಖವೂ ಇದೆಯೇ? ಪರ್ವಾಗಿಲ್ಲ ಎಂದು ನನ್ನಷ್ಟಕ್ಕೆ ನಾನೇ ಯೋಚಿಸುತ್ತಾ ಜೋರಾಗಿ ಹೇಳಿದೆ, “ವೆಲ್, ಸುಂದರವಾದ ಮುಖ ಮುದ್ದು ಮುಖವೂ ಆಗಬಲ್ಲದು.”

    “ನೀವು ಭಾರಿ ರಸಿಕರು!” ಅವಳು ನಕ್ಕಳು.

    ಆದರೆ ನಾನು ನಗಲಿಲ್ಲ. ಏನೊಂದು ಪ್ರತಿಕ್ರಿಯೆಯನ್ನು ತೋರದೆ ಸುಮ್ಮನೆ ಕುಳಿತಿದ್ದೆ.

    “ಇಷ್ಟೊಂದು ಗಂಭೀರವಾಗಿ ಯಾಕೆ ಕುಳಿತಿದ್ದೀರಿ?” ಅವಳು ಕೇಳಿದಳು.

    ನನಗಾಗ ಅವಳಿಗೋಸ್ಕರನಾದರೂ ನಗಲೇಬೇಕನಿಸಿತು. ಆದರೆ ಹಾಗೆ ನಗಬೇಕೆಂಬ ವಿಚಾರವೇ ಒಂದುಕ್ಷಣ ನನ್ನ ಮನವನ್ನು ಕಲುಕಿತು, ಒಂಟಿತನ ಕಾಡುವಂತೆ ಮಾಡಿತು.

    “ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ನಿಲ್ದಾಣದಲ್ಲಿರುತ್ತೇವೆ.” ನಾನು ಹೇಳಿದೆ.

    “ಥ್ಯಾಂಕ್ ಗುಡ್‍ನೆಸ್, ಇದು ಅಲ್ಪಾವಧಿಯ ಪ್ರಯಾಣ! ನಾನು ರೈಲಿನಲ್ಲಿ ಎರಡ್ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳಲಾರೆ.”

    ಆದರೆ ನಾನು ಅಲ್ಲಿ ಎಷ್ಟು ಹೊತ್ತು ಬೇಕಾದರು ಕೂರಲು ಸಿದ್ಧನಿದ್ದೆ ಕೇವಲ ಅವಳ ಮಾತುಗಳನ್ನು ಕೇಳಲು. ಅವಳ ಧ್ವನಿ ಅಷ್ಟೊಂದು ಇಂಪಾಗಿತ್ತು. ಹರಿವ ತೊರೆಯ ಝುಳುಝುಳು ನಿನಾದದ ಇಂಪು ಅದು. ಬಹುಶಃ, ಅವಳು ರೈಲಿನಿಂದ ಇಳಿಯುತ್ತಿದ್ದಂತೆ ನಮ್ಮಿಬ್ಬರ ಅಲ್ಪಾವಧಿಯ ಭೇಟಿಯನ್ನು ಮರೆಯಬಹುದು. ಆದರೆ ನಂಗೆ ಅವಳ ನೆನಪು ನನ್ನ ಪ್ರಯಾಣದ ಕಡೆತನಕವೂ ಹಾಗು ಅದರಾಚೆ ಸ್ವಲ್ಪ ದಿನಗಳವರೆಗೆಯಾದರೂ ಕಾಡುತ್ತಿರುತ್ತದೆ.

    ಎಂಜಿನು ಕೀರಲು ದನಿಯಲ್ಲಿ ಸಿಳ್ಳು ಹಾಕಿತು, ಗಾಲಿಗಳು ತಮ್ಮ ವೇಗವನ್ನು ಕಡಿಮೆಗೊಳಿಸುತ್ತಾ ಲಯವನ್ನು ಬದಲಾಯಿಸಿದವು. ಹುಡುಗಿ ಎದ್ದುನಿಂತಳು. ಒಂದೊಂದಾಗಿ ತನ್ನ ಸಾಮಾನುಗಳನ್ನು ತೆಗೆದಿರಿಸಿದಳು. ನನಗೆ ಇದ್ದಕ್ಕಿದ್ದಂತೆ ಆ ಹುಡುಗಿಯ ಕೂದಲಿನ ಬಗ್ಗೆ ಕುತೂಹಲ ಹುಟ್ಟಿತು. ಆಕೆ ತನ್ನ ಕೂದಲನ್ನು ತುರುಬುಹಾಕಿ ಗಂಟುಕಟ್ಟಿದ್ದಾಳೆಯೆ? ಅಥವಾ ಅವನ್ನೆಲ್ಲಾ ಸೇರಿಸಿ ಜಡೆ ಹೆಣೆದಿದ್ದಾಳೆಯೆ? ಅಥವಾ ತನ್ನ ಭುಜದ ಮೇಲೆ ಹಾಗೆ ಇಳಿಬಿಟ್ಟಿದ್ದಾಳೆಯೆ? ಅಥವಾ ಸಣ್ಣದಾಗಿ ಕತ್ತರಿಸಿಕೊಂಡಿದ್ದಾಳೆಯೇ? ತಿಳಿದುಕೊಳ್ಳಬೇಕೆಂಬ ಹಂಬಲವುಂಟಾಯಿತು.

    ರೈಲು ನಿಧಾನವಾಗಿ ನಿಲ್ದಾಣದಲ್ಲಿ ಬಂದುನಿಂತಿತು. ಹೊರಗಡೆ ಕೂಲಿಗಳು ಹಾಗು ಹೊತ್ತುಮಾರುವವರ ಕೂಗುಗಳು ಒಂದೇಸಮನೆ ಕೇಳುತ್ತಿದ್ದವು. ಇವರೆಲ್ಲರ ಮಧ್ಯ ಹೆಂಗಸೊಬ್ಬಳ ಏರುದನಿಯೊಂದು ನಮ್ಮ ಡಬ್ಬಿಯ ಬಾಗಿಲದ ಹತ್ತಿರ ಕೇಳಿಸುತ್ತಿತ್ತು. ಬಹುಶಃ, ಅದು ಆ ಹುಡುಗಿಯ ಆಂಟಿಯ ದನಿಯಾಗಿರಬಹುದು!

    “ಗುಡ್‍ಬೈ” ಆ ಹುಡುಗಿ ವಿದಾಯ ಹೇಳಿದಳು.

    ಅವಳು ನನಗೆ ತುಂಬಾ ಹತ್ತಿರದಲ್ಲಿ ನಿಂತಿದ್ದಳು; ಎಷ್ಟು ಹತ್ತಿರವೆಂದರೆ ಅವಳ ಕೂದಲಿಗೆ ಹಚ್ಚಿದ್ದ ಸುಗಂಧ ತೈಲದ ಘಮಲು ನನ್ನ ಮೂಗಿಗೆ ಬಡಿದು ನನ್ನಲ್ಲಿ ಆಸೆ ಹುಟ್ಟಿಸಿತು. ನನ್ನ ಕೈಯನ್ನೆತ್ತಿ ಒಮ್ಮೆ ಅವಳ ಕೂದಲನ್ನು ಮುಟ್ಟಬೇಕೆನಿಸಿತು. ಅಷ್ಟರಲ್ಲಿ ಅವಳು ಮುಂದೆ ಸರಿದಳು. ಆದರೆ ಅವಳ ಅತ್ತರಿನ ಘಮಲು ಇನ್ನೂ ಅಲ್ಲೇ ಸುಳಿದಾಡುತ್ತಿತ್ತು.

    ಅವಳು ಬಾಗಿಲ ಬಳಿ ಹೋಗುತ್ತಿದ್ದಂತೆ ಅಲ್ಲಿ ಏನೋ ಗೊಂದಲವುಂಟಾಯಿತು. ಬಹುಶಃ, ಯಾತ್ರಿಕನೊಬ್ಬ ಒಳಬರುವ ಆತುರದಲ್ಲಿ ಅವಳಿಗೆ ಡಿಕ್ಕಿ ಹೊಡೆದಿರಬೇಕು. ಅವನು ಅವಳ ಹತ್ತಿರ ಕ್ಷಮೆ ಕೇಳಿದ. ಬಾಗಿಲು ಮುಚ್ಚಿತು. ನಂಗೆ ಜಗತ್ತಿನ ಬಾಗಿಲೇ ಮುಚ್ಚಿದಹಾಗಾಯಿತು. ನಾನು ನನ್ನ ಸೀಟಿಗೆ (ಬರ್ತ್‍ಗೆ) ವಾಪಾಸಾದೆ. ಗಾರ್ಡು ಸೀಟಿ ಊದಿದ. ರೈಲು ಹೊರಟಿತು. ಮತ್ತೊಮ್ಮೆ ನಾನು ಹೊಸ ಯಾತ್ರಿಕನೊಂದಿಗೆ ಆಟವೊಂದನ್ನು ಆಡಬೇಕಿತ್ತು.

    ರೈಲು ನಿಧಾನಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ಗಾಲಿಗಳು ಎಂದಿನಂತೆ ಲಯಬದ್ಧವಾಗಿ ಹಾಡತೊಡಗಿದವು. ನಮ್ಮ ಡಬ್ಬಿ ಕುಲುಕುತ್ತಾ ಮುಲುಗುತ್ತಾ ಮುಂದೆ ಹೊರಟಿತು. ನಾನು ಕಿಟಕಿಯನ್ನು ಹುಡುಕಿ ಅದಕ್ಕೆ ಮುಖಮಾಡಿ ಕುಳಿತುಕೊಂಡು ನನ್ನ ಪಾಲಿಗೆ ಕತ್ತಲಿನಂತಿರುವ ಹೊರಗಿನ ಹಗಲ ಬೆಳಕನ್ನು ದಿಟ್ಟಿಸತೊಡಗಿದೆ.

    ಕಿಟಕಿಯಾಚೆ ಬಹಳಷ್ಟು ಸಂಗತಿಗಳು ಸಂಭವಿಸುತ್ತಿದ್ದವು. ಅವು ಏನಿರಬಹುದೆಂದು ಊಹಿಸಿಕೊಳ್ಳುವದೇ ನಂಗೆ ಒಂದು ಮೋಜಿನ ಆಟವಾಗಿತ್ತು.

    ನನ್ನ ಡಬ್ಬಿಯೊಳಕ್ಕೆ ಬಂದ ಹೊಸ ಪ್ರಯಾಣಿಕ ನನ್ನನ್ನು ವಾಸ್ತವಕ್ಕೆ ಎಳೆದು ತಂದ.

    “ದಯವಿಟ್ಟು ಕ್ಷಮಿಸಿ. ನಿಮಗೆ ನನ್ನಿಂದ ನಿರಾಶೆಯಾಗಿರಬಹುದು,” ಅವನು ಹೇಳಿದ, “ನಾನು, ಈಗಷ್ಟೆ ನಿಮ್ಮನ್ನು ಬಿಟ್ಟುಹೋದ ಆ ಸಹಪ್ರಯಾಣಿಕಳಷ್ಟು ಆಕರ್ಷಕವೆನಿಸದಿರಬಹುದು..........”

    “ಶೀ ವಾಜ್ ಯ್ಯಾನ್ ಇಂಟರೆಸ್ಟಿಂಗ್ ಗರ್ಲ್,” ನಾನು ಹೇಳಿದೆ. “ಅವಳು ತನ್ನ ಕೂದಲನ್ನು ಹೇಗೆ ಬಿಟ್ಟಿದ್ದಳು ಎಂದು ಹೇಳುವಿರಾ, ಪ್ಲೀಸ್? ಉದ್ದವಾಗಿ ಬಿಟ್ಟಿದ್ದಳೆ? ಇಲ್ಲ ಮೋಟಾಗಿ ಕತ್ತರಿಸಿದ್ದಳೆ?”

    “ಕ್ಷಮಿಸಿ.ನಂಗೆ ಸರಿಯಾಗಿ ನೆನಪಿಲ್ಲ,” ಅವನು ತಬ್ಬಿಬ್ಬಾಗಿದ್ದಂತೆ ಕಂಡಿತು. “ನಾನು ಅವಳ ಕಂಗಳನ್ನಷ್ಟೇ ಗಮನಿಸಿದೆ, ಕೂದಲನ್ನಲ್ಲ. ಅವಳಿಗೆ ಸುಂದರವಾದ ಕಂಗಳಿದ್ದವು. ಆದರೆ ಏನು ಪ್ರಯೋಜನ? ಅವಳು ಪೂರಾ ಕುರುಡಿಯಾಗಿದ್ದಳು. ನೀವಿದನ್ನು ಗಮನಿಸಲಿಲ್ಲವೇ?”

    ಮೂಲ ಇಂಗ್ಲೀಷ್: ರಸ್ಕಿನ್ ಬಾಂಡ್
    ಕನ್ನಡಕ್ಕೆ: ಉದಯ್ ಇಟಗಿ


    ದಿನಾಂಕ 20-3-2012 ರಂದು ಉದಯವಾಣಿಯಲ್ಲಿ ಪ್ರಕಟವಾದ ಕಥೆ. ಅದರ ಲಿಂಕ್ ಇಲ್ಲಿದೆ. http://www.udayavani.com/news/148469L15-%E0%B2%86-%E0%B2%95-%E0%B2%97%E0%B2%B3----.html

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ!

  • ಗುರುವಾರ, ಏಪ್ರಿಲ್ 26, 2012
  • ಬಿಸಿಲ ಹನಿ
  • ಹೌದು, ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ! ಹಾಗಂತ ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಹೆಮ್ಮೆ ಯಾಕೆಂದರೆ ನನಗೆ ದುಡ್ಡಿನ ಬೆಲೆ ಚನ್ನಾಗಿ ಅರ್ಥವಾಗಿದೆಯೆಂದರ್ಥ. ಅದಕ್ಕೆ ಹೇಗೆ ಮರ್ಯಾದೆ, ಗೌರವಗಳನ್ನು ಕೊಡಬೇಕೆಂದು ಚನ್ನಾಗಿ ಮನನವಾಗಿದೆಯೆಂದರ್ಥ. ಮೊದಲು ನನಗೆ ದುಡ್ಡಿನ ಬೆಲೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅಷ್ಟಾಗಿ ಗೊತ್ತಿರಲಿಲ್ಲ. ಹೀಗಾಗಿ ಅವರಿವರಿಗೆ ಕೊಟ್ಟು ಕಳೆದುಕೊಂಡೆ. ಅನೇಕ ಕಡೆ ಕೈ ಸುಟ್ಟುಕೊಂಡೆ. ಮೊದಲು ದುಡ್ಡಿನ ವಿಷಯದಲ್ಲಿ ಭಾವುಕನಾಗಿ ಯೋಚನೆ ಮಾಡುತ್ತಿದ್ದೆ. ಆದರೆ ಈಗ ಪಕ್ಕಾ ವ್ಯವಹಾರಸ್ಥನಾಗಿ ಬದಲಾಗಿದ್ದೇನೆ. ಮೊದಲೆಲ್ಲಾ ಸ್ನೇಹಿತರಿಗೆ, ಬಂಧುಗಳಿಗೆ ಸುಲಭವಾಗಿ ಹಣ ಕೊಡುತ್ತಿದ್ದೆ. ಕೊಟ್ಟಮೇಲೆ ಅದನ್ನು ವಾಪಾಸು ಕೇಳಲು ಹಿಂದೆಮುಂದೆ ನೋಡುತ್ತಿದ್ದೆ. ಒಂದುವೇಳೆ ಕೊಡದಿದ್ದರೂ ಸುಮ್ಮನಾಗುತ್ತಿದ್ದೆ. ಆದರೆ ಈಗ ಹಾಗಲ್ಲ. ಇದಕ್ಕೆ ತದ್ವಿರುದ್ಧವಾಗಿ ಬದಲಾಗಿದ್ದೇನೆ. ಬಹಳಷ್ಟು ಬದಲಾಗಿದ್ದೇನೆ.

    ಇದೀಗ ಯಾರಾದರೂ ಹಣ ಕೇಳಲು ಬಂದರೆ ಮೊದಲು “ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತೇನೆ. ನಾನು ಕೊಡದಿದ್ದರೆ ಅವನೇನೆಂದುಕೊಳ್ಳುತ್ತಾನೋ? ಎಲ್ಲಿ ದೂರವಾಗುತ್ತಾನೋ? ಎಂದು ಭಯಪಡುವದಿಲ್ಲ. ಸಂಬಂಧಗಳಲ್ಲಿ, ಹತ್ತಿರದವರಲ್ಲಂತೂ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವದಿಲ್ಲ. ಏಕೆಂದರೆ ಒಂದುವೇಳೆ ಅವರು ವಾಪಾಸು ಕೊಡದೇಹೋದಾಗ ತೀರಾ ನಿಕೃಷ್ಟವಾಗಿ ಕೊಡಿ ಎಂದು ಕೇಳಲಾಗದು. ಹೋಗಲಿ ಅವರ ಸಂಬಂಧವನ್ನಾದರು ಹರಿದುಕೊಳ್ಳೋಣವೆಂದರೆ ಅದೂ ಸಾಧ್ಯವಾಗದು. ಮೇಲಾಗಿ ಆಗಾಗ ಅವರ ಮುಖವನ್ನು ನೋಡಬೇಕಾಗುವದು ಮತ್ತು ನೋಡಿದಾಗಲೆಲ್ಲಾ ಅವರು ಮಾಡಿದ ಮೋಸ ನೆನಪಾಗಿ ಮನಸ್ಸಿಗೆ ಒಂಥರಾ ಹಿಂಸೆ ಅನಿಸುತ್ತದೆ. ಅದೇ ದೂರದವರಾದರೆ ವಾಪಾಸು ಕೊಡದಿದ್ದರೂ ಪರ್ವಾಗಿಲ್ಲ ಪೀಡೆ ಹೋಯ್ತು ಎಂದು ಸುಮ್ಮನಿರಬಹುದು.

    ಹಾಗೆ ಒಂದುವೇಳೆ ಕೊಡಲೇಬೇಕಿನಿಸಿದರೆ ಮೊದಲು ಹಣ ತೆಗೆದುಕೊಳ್ಳುವವನ ಹಿನ್ನೆಲೆ ವಿಚಾರಿಸುತ್ತೇನೆ. ಏನು ಕೆಲಸದಲ್ಲಿದ್ದಾನೆ? ಎಷ್ಟು ಸಂಬಳ ಇದೆ? ಆ ಸಂಬಳದಲ್ಲಿ ಅವನು ತನ್ನ ಮನೆಗೆ ಅಂತಾ ಖರ್ಚುಮಾಡಿ ಅದರಲ್ಲಿ ಎಷ್ಟು ಉಳಿಸುತ್ತಾನೆ? ಉಳಿಸುವ ಹಣದಿಂದ ಅವನಿಗೆ ಹಿಂತಿರುಗಿಸುವ ಸಾಮರ್ಥ್ಯ ಇದೆಯಾ? ಇಲ್ವಾ? ಎಂದೆಲ್ಲಾ ಮುಲಾಜಿಲ್ಲದೆ ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ಹೇಗೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾನು ಸಹ ಕೇಳಿ ತಿಳಿದುಕೊಳ್ಳುತ್ತೇನೆ. ಇಷ್ಟಕ್ಕೂ ಅವನ ಉತ್ತರಗಳಿಂದ ಸಂತೃಪ್ತನಾದರೆ ಮಾತ್ರ ಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿಬಿಡುತ್ತೇನೆ.

    ಹಾಗೇನೆ, ನಾನು ಹಣವಿದೆ ಎಂದು ಸಿಕ್ಕ ಸಿಕ್ಕಹಾಗೆ ಖರ್ಚು ಮಾಡುವದಿಲ್ಲ. ತೀರಾ ಅನಿವಾರ್ಯ, ಅಗತ್ಯ ಮತ್ತು ಅವಶ್ಯಕತೆ ಎನಿಸಿದರೆ ಮಾತ್ರ ಖರ್ಚು ಮಾಡುತ್ತೇನೆ. ನಾನು ಏನಾದರು ಕೊಂಡುಕೊಳ್ಳಬೇಕಾದರೆ ಧಿಡೀರೆಂದು ಸುಮ್ಮನೆ ಹಾಗೆ ಹೋಗಿ ಕೊಳ್ಳುವದಿಲ್ಲ. ಮೊದಲು ಆ ವಸ್ತುಗಳ ಬೆಲೆಯನ್ನು ಇಂಟರ್ನೆಟ್‍ನಲ್ಲಿ ಹುಡುಕಿ ತಿಳಿದುಕೊಳ್ಳುತ್ತೇನೆ. ಆನಂತರ ನಾಲ್ಕೈದು ಕಡೆ ವಿಚಾರಿಸಿ ಎಲ್ಲಿ ಕಡಿಮೆಯಿರುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇನೆ. ಹಾಗೇನೆ, ನಾನು ಐಷಾರಾಮಿ ಹೋಟೆಲ್‍ಗಳಿಗೆ ಹೋಗುವದಾಗಲಿ, ಅಲ್ಲಿ ತಂಗುವದಾಗಲಿ ಯಾವತ್ತೂ ಮಾಡಿಲ್ಲ. ಅಷ್ಟೊಂದು ಐಷಾರಾಮಿ ಮನಸಿಗೆ ಹಿಡಿಸದು ಹಾಗೂ ಒಗ್ಗದು. ಸಾಧ್ಯವಾದಷ್ಟು ಖರ್ಚನ್ನು ಕಡಿಮೆ ಮಾಡಲು ನೋಡುತ್ತೇನೆ. ಈ ವಿಷಯದಲ್ಲಿ ಬೇರೆಯವರು ನನ್ನನ್ನು “ಜುಗ್ಗ” ಎಂದರೂ ಪರ್ವಾಗಿಲ್ಲ. ನಾನದನ್ನು ತಲೆಗೆ ಹಚ್ಚಿಕೊಳ್ಳುವದಿಲ್ಲ.

    ಅಂದಹಾಗೆ ನನ್ನ ಇಷ್ಟು ವರ್ಷದ ಜೀವಿತಾವಧಿಯಲ್ಲಿ ಹಣದ ವಿಷಯದಲ್ಲಿ ನನಗೆ ಎರಡು ಸತ್ಯಗಳು ಗೊತ್ತಾಗಿವೆ:
    1. ನಾವು ಗಳಿಸಿದ ಹಣಕ್ಕಿಂತ ಉಳಿಸಿದ ಹಣ ಹೆಚ್ಚುಕಾಲ ಬರುತ್ತದೆ.
    2. ನಮ್ಮಲ್ಲಿರುವ ಹಣದಿಂದ ನಾವು ಶ್ರೀಮಂತರಾಗುವದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಮರ್ಯಾದೆ ಮತ್ತು ಗೌರವಗಳಿಂದ ಶ್ರೀಮಂತರಾಗುತ್ತೇವೆ.

    ಕಾಡಿಗೆ ಎದುರಾಗಿ ನಿಂತ ಹುಡುಗಿ (ಕೊನೆಯ ಭಾಗ)

  • ಶುಕ್ರವಾರ, ಏಪ್ರಿಲ್ 06, 2012
  • ಬಿಸಿಲ ಹನಿ
  • ಅಲ್ಲಿ ದೋಣಿಯಿದ್ದ ಮೇಲೆ ಹತ್ತಿರದಲ್ಲೆಲ್ಲೋ ಮನುಷ್ಯರು ಇರಲೇಬೇಕೆಂದು ಖಾತ್ರಿಯಾಯಿತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ! ಕುಣಿದು ಕುಪ್ಪಳಿಸಿದೆ!

    ಆ ದೋಣಿಯನ್ನು ನದಿ ದಂಡೆಯ ಮೇಲೆ ಹಗ್ಗದಿಂದ ಕಟ್ಟಲಾಗಿತ್ತು. ಅದರ ಪಕ್ಕದಲ್ಲಿಯೇ ಒಂದು ಸಣ್ಣ ಕಾಲ್ದಾರಿ ಹೋಗಿರುವದು ಕಾಣಿಸಿತು. ನಾನು ಆ ದಾರಿಯಗುಂಟ ಸುಮ್ಮನೆ ಒಮ್ಮೆ ಕಣ್ಣು ಹಾಯಿಸಿದೆ. ಸಮೀಪದಲ್ಲಿ ತಾಳೆ ಗರಿಗಳಿಂದ ಕಟ್ಟಿದ ಗುಡಿಸಲೊಂದು ಇರುವದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಅದನ್ನು ಹೊಸದಾಗಿ ನಿರ್ಮಿಸಿದ್ದಂತೆ ಕಂಡಿತು.ಅದರ ಒಳಗಡೆ ಒಂದು ಪ್ಲಾಸ್ಟಿಕ್ ಹಾಳೆಯಿತ್ತು. ಅದರ ಕೆಳಗಡೆ ಒಂದು ಪೆಟ್ರೋಲ್ ತುಂಬಿದ ಕ್ಯಾನು ಹಾಗೂ ಒಂದು ಔಟ್‍ಬೋರ್ಡ್ ಮೋಟಾರು ಇತ್ತು.

    ಆ ಗುಡಿಲದ ನೆಲ ಒರಟೊರಟಾಗಿತ್ತು. ಕತ್ತಲಾದ ಮೇಲೆ ನಾನು ಅಲ್ಲೇ ಮಲಗಿದೆ. ಈ ಒಂಬತ್ತು ದಿನಗಳಲ್ಲಿ ಮೊಟ್ಟಮೊದಲ ಬಾರಿಗೆ ನನಗೊಂದು ಚಾವಣಿ ಸಿಕ್ಕಿತ್ತು. ಆದರೆ ಅಲ್ಲಿ ತುಂಬಾ ಸೊಳ್ಳೆಗಳಿದ್ದುದರಿಂದ ಸರಿಯಾಗಿ ನಿದ್ರೆ ಹತ್ತಲಿಲ್ಲ. ಮೇಲಾಗಿ ಆ ಕಾಡಿನ ಮಧ್ಯದಿಂದ ಯಾವುದದರೂ ಮಾನವ ದನಿಗಳು ತೇಲಿಬರುತ್ತಾವೇನೋ ಎಂಬ ದೂರದ ಆಸೆಯಿಂದ ರಾತ್ರಿಯೆಲ್ಲಾ ಕಿವಿ ತೆರೆದು ಕುಳಿತೆ. ಹಾಗೆ ಕಾಯುವದು ದಡ್ಡತನವೆಂದು ನನಗೆ ಗೊತ್ತಿತ್ತು. ಆದರೂ ಕಾಯ್ದೆ; ಯಾರಾದರೂ ಬಂದಾರೆಂಬ ನಿರೀಕ್ಷೆಯಲ್ಲಿ! ಅಂಥ ದಟ್ಟ ಕಾಡಿನಲ್ಲಿ ಅದೂ ಅಂಥ ಅಪರಾತ್ರಿಯಲ್ಲಿ ಯಾರು ತಾನೆ ಓಡಾಡಿಯಾರು?

    ಮರುದಿವಸ ಮುಂಜಾನೆ ಯಾರಾದರೂ ದೋಣಿಯನ್ನು ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆಂಬ ಒಂದು ಸಣ್ಣ ಆಸೆಯಿತ್ತು. ಅವರಿಗಾಗಿ ಕಾಯುತ್ತಾ ಕುಳಿತೆ. ಅವರು ಈಗಲೇ ಬರುತ್ತಾರೋ? ಇವತ್ತೇ ಬರುತ್ತಾರೋ? ಇನ್ನೆರೆಡು ದಿನ ಬಿಟ್ಟು ಬರುತ್ತಾರೋ? ಅಥವಾ ವಾರ ಬಿಟ್ಟು ಬರುತ್ತಾರೋ? ಒಂದೂ ಗೊತ್ತಿರಲಿಲ್ಲ. ಅಥವಾ ಬರದೇನೂ ಇರಬಹುದು! ಯಾರಿಗೆ ಗೊತ್ತು? ಕಾಡು ಅವರನ್ನು ನುಂಗಿಹಾಕಿದ್ದರು ಹಾಕಿರಬಹುದು!

    ನನಗೆ ಅವರು ತಕ್ಷಣಕ್ಕೆ ಬರುತ್ತಾರೆಂಬ ನಂಬಿಕೆ ಇರಲಿಲ್ಲ. ಅವರಿಗಾಗಿ ಕಾಯುತ್ತಾ ಕುಳಿತುಕೊಳ್ಳುವದು ಮೂರ್ಖತನ ಎನಿಸಿತು. ನಾನು ನನ್ನ ಪ್ರಯಾಣವನ್ನು ಮುಂದುವರಿಸಲೇಬೇಕಿತ್ತು. ಆ ದೋಣಿಯನ್ನು ತೆಗೆದುಕೊಂಡು ಹೊರಡಲೇ? ಎಂದು ಒಂದು ಕ್ಷಣ ಯೋಚಿಸಿದೆ. ಆದರದನ್ನು ನಡೆಸುವದು ಹೇಗೆಂದು ನನಗೆ ಸರಿಯಾಗಿ ಗೊತ್ತಿರಲಿಲ್ಲವಾದ್ದರಿಂದ ಆ ಯೋಚನೆಯನ್ನು ಕೈ ಬಿಟ್ಟೆ. ಮೇಲಾಗಿ ಕಳ್ಳತನ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಮೊದಲಿನಂತೆ ನಡೆಯುತ್ತಾ ಈಜುತ್ತಾ ಹೋಗುವದೇ ವಾಸಿ ಎನಿಸಿತು!

    ಮಳೆ ಜೋರಾಗಿ ಸುರಿಯತ್ತಿತ್ತು. ನದಿ ಉಕ್ಕೇರುತ್ತಿತ್ತು. ಈ ಜೋರು ಮಳೆ ನನ್ನ ಮೈಗೆ ಅಂಟಿಕೊಂಡಿದ್ದ ಸಣ್ಣ ಸಣ್ಣ ಕ್ರಿಮಿಗಳನ್ನೆಲ್ಲಾ ಸಂಪೂರ್ಣವಾಗಿ ಕೊಚ್ಚಿಹಾಕಿತ್ತು. ಸಧ್ಯ, ನಾನು ಬದುಕಿಕೊಂಡೆ!

    ಆ ಗುಡಿಸಲಲ್ಲಿ ಒಂದು ವ್ಯಾಸಲೀನ್ ಟ್ಯೂಬು ಇತ್ತು. ಅದರಿಂದ ಸೊಳ್ಳೆಗಳನ್ನು ದೂರವಿಡಬಹುದೆಂದು ಯೋಚಿಸಿ ಅದನ್ನು ಮೈಗೆ ಹಚ್ಚಿಕೊಂಡೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮೈಗೆ ಸಾಕಷ್ಟು ಮ್ಯಾಗಟ್‍ಗಳು* ಬೇರೆ ಅಂಟಿಕೊಂಡಿದ್ದವು. ಅಲ್ಲೇ ಇದ್ದ ತಾಳೆ ಗರಿಯೊಂದರಿಂದ ಚೂಪಾದ ಕಡ್ಡಿಯೊಂದನ್ನು ಮಾಡಿ ಮೈಗೆ ಅಂಟಿಕೊಂಡಿದ್ದ ಮ್ಯಾಗಟ್‍ಗಳನ್ನು ಕಿತ್ತುಹಾಕಿದೆ. ಹೀಗೆ ಸುಮಾರು 25 ಮ್ಯಾಗಟ್ಗಳನ್ನು ಕಿತ್ತುಹಾಕಿದೆ. ಇನ್ನು ಕೆಲವನ್ನು ಹಲ್ಲಿನಿಂದ ಕಿತ್ತೆಸೆದೆ.

    ನನ್ನ ಬಲಗೈ ತೋಳಲ್ಲಿ ಸಣ್ಣದಾಗಿ ಆರಂಭವಾಗಿದ್ದ ನೋವು ಇದೀಗ ಹೆಚ್ಚಿತ್ತು. ಅದನ್ನು ಕತ್ತರಿಸಿ ಹಾಕಿಬಿಡಲೋ ಎನ್ನುವಷ್ಟರ ಮಟ್ಟಿಗೆ ನೋವು ಹೆಚ್ಚಾಗಿತ್ತು.

    ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆ ಕಾಡಿನಲ್ಲಿ ಮನುಷ್ಯರು ಮಾತನಾಡುವದು ಕೇಳಿಸಿತು. ಅವರು ನಾನಿರುವ ಗುಡಿಸಲಿನತ್ತಲೇ ಬರುತ್ತಿದ್ದರು. ಅವರು ಒಟ್ಟು ಮೂರು ಜನ. ಚಡ್ಡಿ ಹಾಕಿದ್ದರು, ಬರಿಗಾಲಲ್ಲಿದ್ದರು, ಸ್ಪ್ಯಾನಿಷ್‍ನಲ್ಲಿ ಮಾತಾಡುತ್ತಿದ್ದರು. ಅವರಲ್ಲೊಬ್ಬ ನನ್ನ ನೋಡಿದವನೆ “ಹೇ, ಯಾರಲ್ಲಿ? ಇಲ್ಲೇನು ಮಾಡುತ್ತಿರುವೆ?” ಎಂದು ಕೇಳಿದ. ವಿಮಾನ ಅಪಘಾತಕ್ಕೀಡಾಗಿ ಹತ್ತೂವರೆ ದಿವಸಗಳ ಮೇಲೆ ಮೊಟ್ಟಮೊದಲಬಾರಿಗೆ ಮನುಷ್ಯರ ದನಿಯನ್ನು ಕೇಳಿದ್ದೆ.

    ಅಲ್ಲಿಯವರೆಗೂ ನಾನೊಬ್ಬಳೇ ಕಾಡಿಗೆ ಎದುರಾಗಿ ನಿಂತಿದ್ದೆ ಒಂಟಿಯಾಗಿ. ಆದರೆ ಇದೀಗ ಒಂಟಿ ಎನಿಸಲಿಲ್ಲ. ನನ್ನ ಜೊತೆಗೆ ಈ ಮೂವರಿದ್ದರು ಭರವಸೆಯ ಬೆಳಕಾಗಿ, ಸಹಾಯ ನೀಡುವ ಹಸ್ತವಾಗಿ, ದಾರಿ ತೋರುವ ಕೈಮರವಾಗಿ.

    ನಾನು ಅದೃಷ್ಟ ಮಾಡಿದ್ದೆ; ಒಂದಲ್ಲ, ಎರಡೆರೆಡು ಸಾರಿ! ಮೊದಲನೆಯದಾಗಿ ನಾನು ಈ ಜಾಗದಲ್ಲಿ ದೋಣಿಯನ್ನು ನೋಡಿದ ಮೇಲೂ ಅದರ ಹತ್ತಿರ ಬಾರದೆ ಹಾಗೆ ಹೊರಟು ಹೋಗಿದ್ದರೆ ಅದಕ್ಕಂಟಿಕೊಂಡಿರುವ ಗುಡಿಸಲನ್ನು ಸಹ ನೋಡುವ ಅದೃಷ್ಟ ಸಿಗುತ್ತಿರಲಿಲ್ಲವೇನೋ! ಅಥವಾ ಒಂದುವೇಳೆ ಅಕಸ್ಮಾತ್ ನಾನು ಈಜಿಕೊಂಡು ಹೋಗಿದ್ದರೆ ಆ ಗುಡಿಸಲನ್ನು ನೋಡದೆ ಹಾಗೆ ಹೊರಟು ಹೋಗುತ್ತಿದ್ದನೇನೋ!

    ಎರಡನೆಯದಾಗಿ ಈ ಮೂರು ಜನ ಈ ಗುಡಿಸಲಿಗೆ ವಾರಕ್ಕೊಂದು ಸಾರಿ ಮಾತ್ರ ಬಂದು ಒಂದು ರಾತ್ರಿ ಕಳೆದು ಹೋಗುತ್ತಿದ್ದರು. ಅಕಸ್ಮಾತಾಗಿ ನಾನು ಈ ಸ್ಥಳಕ್ಕೆ ಒಂದು ದಿನ ತಡವಾಗಿ ಬಂದಿದ್ದರೂ ನನಗೆ ಅವರು ಸಿಗುತ್ತಿರಲಿಲ್ಲ. ಏಕೆಂದರೆ ಮಾರನೆಯ ದಿನ ಬೆಳಿಗ್ಗೆ ಅವರು ಇಲ್ಲಿಂದ ಅದಾಗಲೇ ಹೋಗುವವರಿದ್ದರು!

    *ನಮ್ಮಲ್ಲಿನ ಜಿಗಣೆ ತರದ ಒಂದು ಜಾತಿಯ ಕೀಟ.

    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ
    ಭಾಗ-೧ http://bisilahani.blogspot.com/2011/10/1.html
    ಭಾಗ -೨ http://bisilahani.blogspot.com/2011/10/2.html

    ಮುಸ್ಲಿಂ ಅರಸರೂ ಮತ್ತವರ ಗೋರಿಗಳೂ……………. ಷಹಜಾನ್-ಮಮ್ತಾಜ್‍ರೂ ಮತ್ತವರ ತಾಜ್ ಮಹಲೂ............

  • ಶುಕ್ರವಾರ, ಮಾರ್ಚ್ 23, 2012
  • ಬಿಸಿಲ ಹನಿ
  • ಕಳೆದ ಮೇ ತಿಂಗಳಲ್ಲಿ ನಾನು ಇಂಟ್ರ್ಯೂವೊಂದನ್ನು ಅಟೆಂಡ್ ಮಾಡಲು ದೆಹಲಿಗೆ ಹೋಗಬೇಕಾಗಿ ಬಂತು. ಅದೇನೋ ನನಗೆ ದುರಾಸೆಯೋ? ವಿದೇಶಗಳ ಹುಚ್ಚೋ? ಹಣದ ಮೇಲಿನ ವ್ಯಾಮೋಹವೋ? ಅಥವಾ ಬದುಕಿನ ಅನಿವಾರ್ಯತೆಯೋ? ಅಥವಾ ನನ್ನ ಅಸಂಖ್ಯ ಕನಸುಗಳ ಒತ್ತಡವೋ? ಒಂದೂ ತಿಳಿಯದು. ಅಂತೂ ನಾನು ಮತ್ತೆ ವಿದೇಶವೊಂದಕ್ಕೆ ಹಾರಿ, ಅಲ್ಲಿ ಕೆಲಸ ಮಾಡಿ, ಒಂದಷ್ಟು ದುಡ್ದನ್ನು ದುಡಿದುಕೊಂಡು, ಬೆಂಗಳೂರಿಗೆ ವಾಪಾಸಾಗಿ ನೆಮ್ಮದಿಯ ಜೀವನ ನಡೆಸಬೇಕೆಂಬುದು ನನಗೆ ಮೊದಲಿನಿಂದಲೂ ಇದ್ದ ಇರಾದೆ. ಲಿಬಿಯಾದಲ್ಲಿ ಎದ್ದ ಕ್ರಾಂತಿಯಿಂದಾಗಿ ಬೆಂಗಳೂರಿಗೆ ಬಂದ ಮೇಲೆ ಆ ಆಸೆ ಇನ್ನೂ ದಟ್ಟವಾಗಿತ್ತು. ಹಾಗೆಂದೇ ನಾನು ಮತ್ತೆ ವಿದೇಶವೊಂದಕ್ಕೆ ಹೋಗಬೇಕಿತ್ತು-ಮೋಹನ ಮುರಳಿಯ ನಿನಾದವೊಂದವನ್ನು ಹುಡುಕಿಕೊಂಡು. ಹೋಗುವಾಗ ದೂರದ ದೆಹಲಿಗೆ ಫ್ಲೈಟಿನಲ್ಲಿ ಹೋಗುವದೋ, ಟ್ರೈನಿನಲ್ಲಿ ಹೋಗುವದೋ ಎಂಬ ಸಂದಿಗ್ದತೆಯಲ್ಲೇ ಹೆಚ್ಚು ಕಾಲ ಕಳೆದೆ. ಫ್ಲೈಟಿನಲ್ಲಿ ಹೋಗುವಷ್ಟು ದುಡ್ಡು ಇರಲಿಲ್ಲವೆಂದಲ್ಲ. ಆದರೆ ಅದೇಕೋ ದುಡ್ಡು ಬಂದರೂ ನನ್ನ ಮನಸ್ಸು ಅಷ್ಟೊಂದು ಐಷಾರಾಮಿ ಜೀವನಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಬಹುಶಃ, ಅದಿನ್ನೂ ಮಿಡಲ್ ಕ್ಲಾಸ್ ಜಿವನದ ಇತಿಮಿತಿಗಳ ಪರಿಧಿಯಲ್ಲೇ ಒದ್ದಾಡುತ್ತಿದೆ ಅಂತಾ ಕಾಣುತ್ತದೆ. ಮೇಲಾಗಿ ನನಗೆ ವಿನಾಕಾರಣ ಹಣ ಖರ್ಚು ಮಾಡುವದು ಮನಸ್ಸಿಗೆ ಒಂಥರಾ ಹಿಂಸೆ ಎನಿಸುತ್ತದೆ. ಹೀಗಾಗಿ ಟ್ರೈನಿನಲ್ಲೇ ಹೊರಟೆ. ಎರಡು ದಿನಗಳ ರೈಲು ಪ್ರಯಾಣ ನನ್ನನ್ನು ಬದುಕಿನ ಬೇರೆ ಬೇರೆ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡಿತ್ತು. ಮಾತ್ರವಲ್ಲ ಬರೆಯಲು ಒಂದಷ್ಟು ಸರಕನ್ನು ಸಹ ಒದಗಿಸಿತ್ತು.

    ಇಂಟ್ರ್ಯೂ ಮುಗಿದ ಮೇಲೆ ನನಗೆ ಬೆಂಗಳೂರಿಗೆ ವಾಪಸಾಗಲು ಇನ್ನೂ ಎರಡು ದಿನ ಬಾಕಿಯಿತ್ತು. ಮೊದಲ ದಿನ ದೆಹಲಿಯೆಲ್ಲಾ ಸುತ್ತಾಡಿ ಲಜಪತ್ ನಗರದಲ್ಲಿ ಒಂದಷ್ಟು ಶಾಪಿಂಗ್ ಮಾಡಿದೆ. ಮಾರನೆಯ ದಿನ ಇಡಿ ಉತ್ತರ ಭಾರತದ ಮುಖ್ಯ ಆಕರ್ಷಣೆ ಎನಿಸಿದ ಹಾಗೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲನ್ನು ನೋಡಲು ಹೊರಟೆ.

    ತಾಜ್ ಮಹಲನ್ನು ಮೊಟ್ಟ ಮೊದಲ ಸಾರಿ ನೋಡುವವರು ಯಾರೂ‘ವಾ! ವಾರೆ ವಾ!’ ಎಂದು ಉದ್ಗರಿಸದೇ ಇರಲಾರರು. ಅಂಥ ಅಪ್ರತಿಮ ಸೌಂದರ್ಯ, ಕಲಾತ್ಮಕತೆ ಹಾಗೂ ಅಚ್ಚರಿಯನ್ನು ಅದು ಒಳಗೊಂಡಿರುವದು ಖಂಡಿತ ಸತ್ಯ. ತಾಜ್ ಮಹಲನ್ನು ನೋಡಲು ಹೋಗುವವರಿಗೆ ಸಾಮಾನ್ಯವಾಗಿ ಅದರ ಹಿಂದಿನ ಕಥೆ ಗೊತ್ತಿದ್ದೇ ಇರುತ್ತದೆ. ಆದರೂ ಈ ಗೈಡ್‍ಗಳು ಬಿಡದೆ ಷಹಜಾನ್‍ ಮತ್ತು ಮಮ್ತಾಜ್ ಮಹಲ್‍ರ ಅಮರ ಪ್ರೇಮಕಥೆಯನ್ನು ಹೇಳತೊಡಗುತ್ತಾರೆ. ಅವರದು ನಿಜಕ್ಕೂ ‘ಅಮರ’ ಪ್ರೇಮಕಥೆಯಾಗಿತ್ತೋ ಗೊತ್ತಿಲ್ಲ. ಆದರೆ ಇವರಂತೂ ಅದನ್ನು ಕಟ್ಟಿದಾಗಿನಿಂದ ಹೇಳಿದ್ದನ್ನೇ ಹೇಳಿ ಹೇಳಿ ಅದನ್ನೊಂದು ಅಮರ ಕಥೆಯನ್ನಾಗಿಸಿದ್ದಾರೆ. ನಮ್ಮ ಗೈಡ್ ಕೂಡ ಒಂದೇ ಸಮನೆ ಬಾಯಿಪಾಠ ಮಾಡಿದವನಂತೆ ಅವರ ಪ್ರೇಮಕಥೆಯ ಬಗ್ಗೆ ಹೇಳುತ್ತಲೇ ಇದ್ದ. ನನಗೇಕೋ ಅವನನ್ನು ಒಂದು ನಿಮಿಷ ರೇಗಿಸಬೇಕೆನ್ನಿಸಿತು. ಕೇಳಿದೆ “ಷಹಜಾನ್ ಈ ತಾಜ್ ಮಹಲ್‍ನ್ನು ನಿಜಕ್ಕೂ ಮಮ್ತಾಜ್‍ಳ ಮೇಲಿನ ಪ್ರೀತಿಯಿಂದ ಕಟ್ಟಿಸಿದನೋ ಅಥವಾ ಅವಳು ಸತ್ತ ಖುಶಿಗಾಗಿ ಕಟ್ಟಿಸಿದನೋ?” ಎಂದು. ಅವನು ನನ್ನ ಮಾತಿನಿಂದ ಮೊದಲು ಕಕ್ಕಾಬಿಕ್ಕಿಯಾದ. ಮರುಕ್ಷಣ ಸಾವರಿಸಿಕೊಂಡು “ಇದ್ದರೂ ಇರಬಹುದು” ಎಂದು ಹೇಳಿ ನನ್ನೊಂದಿಗೆ ಬಿದ್ದು ಬಿದ್ದು ನಕ್ಕ. ಜೊತೆಗೆ “ಇತಿಹಾಸದಲ್ಲಿ ಇದೆಲ್ಲಾ ರೆಕಾರ್ಡ್ ಆಗಿಲ್ಲ.” ಎಂದೂ ಸೇರಿಸಿದ. ನಾನು “ಇತಿಹಾಸದಲ್ಲಿ ಬಹಳಷ್ಟು ವಿಷಯಗಳು ರೆಕಾರ್ಡ್ ಆಗೇ ಇಲ್ಲ” ಎಂದೆ. ಅವ ಮತ್ತೆ ನಕ್ಕ.

    ಈ ಮುಸ್ಲಿಂ ಅರಸರಿಗೆ ತಾವು ಸಾಯುವ ಮುನ್ನವೇ ತಮ್ಮ ಗೋರಿಗಳನ್ನು ಕಟ್ಟಿಕೊಂಡು ಖುಶಿಪಡುವ ಒಂದು ವಿಲಕ್ಷಣ ಖಯಾಲಿ ಇತ್ತು. ಅದರಲ್ಲೂ ದೆಹಲಿಯನ್ನು ಆಳಿದ ಮುಸ್ಲಿಂ ಅರಸರಿಗೆ ಆ ಖಯಾಲಿ ಸ್ವಲ್ಪ ಜಾಸ್ತಿಯೇ ಇತ್ತು. ಇವರುಗಳಿಗೆ ಜೀವನದ ಮೇಲಿನ ಪ್ರೀತಿಗಿಂತ ಸಾವಿನ ಮೇಲಿನ ಮೋಹವೇ ಹೆಚ್ಚಾಗಿತ್ತೆಂದು ಕಾಣುತ್ತದೆ. ಆ ಕಾರಣಕ್ಕೇನೋ ಇವರುಗಳು ಜೀವನದಲ್ಲಿ ಬೇರೇನನ್ನೂ ಬಿಟ್ಟುಹೋಗದಿದ್ದರೂ ತಮ್ಮ ಗೋರಿಗಳನ್ನು ಮಾತ್ರ ಶಾಶ್ವತವಾಗಿ ಬಿಟ್ಟುಹೋಗಿದ್ದಾರೆ. ದೆಹಲಿಯಲ್ಲಿ ಅಂಥವರ ಗೋರಿಗಳು ಸಾಲು ಸಾಲಾಗಿ ಸಿಗುತ್ತವೆ; ಬಾಬರ್, ಹುಮಾಯನ್, ಇಲ್ತಮಿಷ್, ತೈಮೂರ್, ಐಬಕ್, ಅಲ್ಲಾ-ಉದ್ದಿನ್-ಖಿಲ್ಜಿ ಇನ್ನೂ ಮುಂತಾದವರವು.

    ಅದೆಲ್ಲಾ ಇರಲಿ. ಮತ್ತೆ ಈ ತಾಜ್ ಮಹಲ್ ವಿಷಯಕ್ಕೆ ಬರುವದಾದರೆ, ಈ ತಾಜ್ ಮಹಲ್ ಕೂಡ ಒಂದು ಸಮಾಧಿಯೇ! ತನ್ನ ಪ್ರೀತಿಯ ಮಡದಿ ಸತ್ತಮೇಲೆ ಅವಳ ನೆನಪಿಗಾಗಿ ಇರಲಿ ಎಂದು ಷಹಜಾನ್ ಇದನ್ನು ಕಟ್ಟಿಸಿದನಂತೆ! ಅವನಿಗೆ ಅಷ್ಟೊಂದು ಪ್ರೀತಿ ಅವಳ ಮೇಲೆ! ಷಹಜಾನ್ ಅವಳನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ ಅವನು ತಾನು ಹೋದಲ್ಲೆಲ್ಲಾ ಅವಳನ್ನು ಕರೆದೊಯ್ಯುತ್ತಿದ್ದನಂತೆ! ಮಮ್ತಾಜ್‍ಳು ಸತ್ತಾಗ ಷಹಜಾನ್ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ ಎರಡು ವರ್ಷಗಳ ಕಾಲ ದಂಗುಬಡಿದವನ ತರ ಇದ್ದನಂತೆ. ಇದು ನಮಗೆ ಅವರಿಬ್ಬರ ಬಗ್ಗೆ ಗೊತ್ತಿರುವ ಕಥೆ. ಆದರೆ ಸುಮ್ಮನೆ ಒಮ್ಮೆ ಈ ಧಾಟಿಯಲ್ಲಿ ಯೋಚಿಸಿ ನೋಡಿ........ ಷಹಜಾನ್ ನಿಜಕ್ಕೂ ತನ್ನ ಹೆಂಡತಿಯನ್ನು ಅಷ್ಟೊಂದು ಪ್ರೀತಿಸುತ್ತಿದ್ದನೆ? ಒಂದುವೇಳೆ ಅಷ್ಟೊಂದು ಪ್ರೀತಿಸಿದವನಾಗಿದ್ದರೆ ಅವಳಿರುವಾಗಲೇ ಅವಳಿಗೋಸ್ಕರ ಒಂದು ಅರಮನೆಯನ್ನು ಕಟ್ಟಿಸುವ ಬದಲು ಅವಳು ಸತ್ತ ಮೇಲೆ ಗೋರಿಯನ್ನೇಕೆ ಕಟ್ಟಿಸಿದ? ನಿಜಕ್ಕೂ ಅವರಿಬ್ಬರೂ ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದರೆ? ಅವರು ಯಾವತ್ತೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲವೆ? ಅವರ ಪ್ರೀತಿ ಆ ಮಟ್ಟದ ಪರಾಕಾಷ್ಠತೆಯನ್ನು ಮುಟ್ಟಿತ್ತೆ? ಷಹಜಾನ್‍ನಿಗೆ ಅವಳ ಉತ್ಕಟ ಪ್ರೀತಿ ಯಾವುತ್ತೂ ಕಿರಿಕಿರಿಯೆನಿಸಲಿಲ್ಲವೆ? ಅವನ ಪ್ರೇಮ ಕಾಮಗಳು ಅವಳೊಬ್ಬಳಿಗೆ ಮಾತ್ರ ಮೀಸಲಾಗಿದ್ದವೆ? ಇವಳನ್ನು ಬಿಟ್ಟು ಆತ ಬೇರೆ ಯಾರೊಂದಿಗೂ ದೈಹಿಕ ಸಂಪರ್ಕ ಬೆಳೆಸಲಿಲ್ಲವೆ? ಹೀಗೆ ನಮ್ಮಷ್ಟಕ್ಕೆ ನಾವೇ ಕೇಳುತ್ತಾ ಹೋದರೆ ನಮಗೆ ತಾಜ್ ಮಹಲ್‍ ಬಗ್ಗೆ ಇರುವ ಒಂದು ಸುಂದರ ಇಮೇಜ್ ಹಾಳಾಗುತ್ತದೆ. ಅದರ ಹಿಂದಿನ ಕಥೆಗೆ ಧಕ್ಕೆ ಬರುತ್ತದೆ. ತಾಜ್ ಮಹಲ್‍ನ ಬುಡಕ್ಕೆ ಕೈ ಹಾಕಿ ಅಲ್ಲಾಡಿಸದಂತೆ ಭಾಸವಾಗುತ್ತದೆ. ಹೀಗೆ ನಾವು ಯೋಚಿಸಲೂ ಬಾರದು, ಕೇಳಲೂ ಬಾರದು. ಏಕೆಂದರೆ ತಾಜ್ ಮಹಲ್‍ನ ಅಸ್ಥಿತ್ವ ನಿಂತಿರುವದೇ ಷಹಜಾನ್ ಮತ್ತು ಮಮ್ತಾಜ್‍ರ ಪ್ರೇಮಕಥೆಯ ಮೇಲೆ! ಆ ಕಥೆಯೇ ಇಲ್ಲವಾದ ಮೇಲೆ ತಾಜ್ ಮಹಲ್ ಹುಟ್ಟುತ್ತಿತ್ತಾದರೂ ಹೇಗೆ? ಮತ್ತದು ಜಗತ್ತಿನ ಅದ್ಭುತ ಸ್ಮಾರಕಗಳಲ್ಲಿ ಒಂದಾಗುತ್ತಿತ್ತಾದರೂ ಹೇಗೆ? ಕೆಲವು ವಿಷಯಗಳನ್ನು ಅವು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಹೋಗದೆ ಅವಿರುವಂತೆ ಅವನ್ನು ಸ್ವೀಕರಿಸಬೇಕು. ಅದುಬಿಟ್ಟು ಅದರ ಆಚೆ ಈಚೆ ಇಣುಕಲು ಹೋದರೆ ಎಲ್ಲವೂ ರಾಡಿಯಾಗಿಬಿಡುತ್ತದೆ!

    ಈ ಹಿಂದೆ ಅಂದರೆ ಎಂಬತ್ತರ ದಶಕದ ಆರಂಭದಲ್ಲಿ ಪ್ರೋಫೆಸರ್ ಓಕ್ ಎನ್ನುವವರು “ತಾಜ್ ಮಹಲ್” ಎನ್ನುವ ಹೆಸರು “ತೇಜೋ ಮಹಾಲಯ” ಎಂಬ ಶಿವನ ದೇವಸ್ಥಾನದಿಂದ ಬಂದಿದ್ದು ಎಂದು ವಾದಿಸಿದ್ದರು. ಒಂದು ವೇಳೆ ಷಹಜಾನ್ ಮಮ್ತಾಜ್‍ಗೋಸ್ಕರ ಈ ಕಟ್ಟಡವನ್ನು ಕಟ್ಟಿಸಿದ್ದರೆ ಅದು “ಮಮ್ತಾಜ್ ಮಹಲ್” ಎಂದಾಗಬೇಕಿತ್ತು, ಅದುಬಿಟ್ಟು ಬರೀ “ತಾಜ್ ಮಹಲ್” ಆಗಿ ಉಳಿದಿದ್ದೇಕೆ? ಒಂದುವೇಳೆ “ಮಮ್ತಾಜ್ ಮಹಲ್” ಎಂದು ಇಟ್ಟಿದ್ದರೂ ತದನಂತರದಲ್ಲಿ ಅದರಲ್ಲಿನ “ಮಮ್” ಬಿಟ್ಟು ಹೋಗಿದ್ದೇಕೆ? ಎಂದು ಪ್ರಶ್ನೆಸಿಸುತ್ತಾರೆ. ಇದು ನಿಜವಿದ್ದರೂ ಇರಬಹುದೇನೋ! ಆ ಜಾಗದಲ್ಲಿ ಹಿಂದೆ ಹಿಂದು ದೇವಾಲಯವಿತ್ತೇನೋ! ಆದರೆ ಅಮೃತ ಶಿಲೆಯ ಆ ಶುಭ್ರ ಬಿಳಿಯ ಕಟ್ಟಡದ ಮುಂದೆ ನಿಂತಾಗ ಷಹಜಾನ್ ಯಾವ ಧರ್ಮದ ಯಾವ ಜಾತಿಯ ಪ್ರತಿನಿಧಿಯಾಗಿಯೂ ನೆನಪಿಗೆ ಬರುವದಿಲ್ಲ. ಆತನೊಬ್ಬ ಪ್ರೇಮಿ ಮಾತ್ರ ಎನ್ನುವದು ಪದೆ ಪದೆ ಮನಸ್ಸಿನಲ್ಲಿ ಅನುರಣಿಸುತ್ತದೆ. ಅವನೊಬ್ಬ ಪ್ರೀತಿಯ ಸಹಜ ಪ್ರತಿನಿಧಿಯಾಗಿ ಕಾಣಿಸುತ್ತಾನೆ. ಆದರೆ ಕೊನೆಗಾಲದಲ್ಲಿ ಆತನ ಮಗ ಔರಂಗಜೇಬ್‍ನಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುತ್ತಾನೆ. ಅಲ್ಲಾ, ಅಷ್ಟೊಂದು ಪ್ರಿತಿಸುವ ಷಹಜಾನ್-ಮಮ್ತಾಜ್‍ರ ಹೊಟ್ಟೆಯಲ್ಲಿ ಅಂಥ ಕ್ರೂರ ಮಗ ಹುಟ್ಟಿದನೆ? ಪ್ರೀತಿಸುವವರ ಹೊಟ್ಟೆಯಲ್ಲಿ ಪ್ರೀತಿಸುವವನೇ ಹುಟ್ಟಬೇಕಿತ್ತಲ್ಲ? ಅದು ಬಿಟ್ಟು ಇಂಥ ಕ್ರೂರಿ ಮಗ ಹೇಗೆ ಹುಟ್ಟಿದ? ಅಥವಾ ಅಧಿಕಾರ ಸಿಗುವವರೆಗೂ ಆತ ತನ್ನ ಅಪ್ಪ- ಅಮ್ಮಂದಿರಿಗೆ ಪ್ರೀತಿಸುವ ಮಗನಾಗಿಯೇ ಇದ್ದು ಅಧಿಕಾರ ಸಿಕ್ಕ ಮೇಲೆ ಬದಲಾದನೆ? ಹಣ ಮತ್ತು ಅಧಿಕಾರದ ಮುಂದೆ ಯಾವ ಪ್ರೀತಿಯೂ ಶಾಶ್ವತವಲ್ಲ ಎಂದು ಅವರಪ್ಪನಿಗೆ ಸಾಬೀತು ಪಡಿಸಲು ಹೊರಟನೆ? ಇವೆಲ್ಲಾ ತರ್ಕಕ್ಕೆ ಸಿಗದ ಪ್ರಶ್ನೆಗಳು.

    ಅಂದಹಾಗೆ ಷಹಜಾನ್ ತಾಜ್ ಮಹಲ್‍ನ್ನು ಕಟ್ಟಿಸಿದ ಮೇಲೆ ಅದರ ಅಷ್ಟೂ ಕೆಲಸಗಾರರ ಕೈಗಳನ್ನು ಕತ್ತರಿಸಿಹಾಕಿದನಂತೆ. ಕಾರಣ ಇಂಥದೇ ಇನ್ನೊಂದು ಸ್ಮಾರಕವನ್ನು ಅವರು ಬೇರೆಲ್ಲೂ ನಿರ್ಮಿಸಬಾರದೆಂಬುದು ಅವನ ಉದ್ದೇಶವಾಗಿತ್ತು. ಅಬ್ಬಾ, ಅವನ ಪ್ರೀತಿಯ ಹಿಂದೆ ಅಂಥದೊಂದು ಕ್ರೌರ್ಯವಿತ್ತು ಎಂದು ನಂಬುವದಾದರೂ ಹೇಗೆ?

    ಪ್ರೀತಿ ಒಮ್ಮೊಮ್ಮೆ ನೀನು ಇಷ್ಟೊಂದು ಕ್ರೂರಿಯಾಗಬಲ್ಲೆಯಾ?


    -ಉದಯ್ ಇಟಗಿ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ಮಹಿಳಾ ದಿನಾಚಾರಣೆ, ಲಿಂಗತಾರತಮ್ಯ, ಶೋಷಣೆ ಇತ್ಯಾದಿ ಇತ್ಯಾದಿ.........

  • ಗುರುವಾರ, ಮಾರ್ಚ್ 08, 2012
  • ಬಿಸಿಲ ಹನಿ
  • “ಇಂದು ಮಹಿಳಾ ದಿನಾಚಾರಣೆ. ಹಾಗಂದರೇನು?” ಅಂತಾ ನಮ್ಮ ಪಕ್ಕದ ಮನೆಯ ಆರನೇ ಕ್ಲಾಸಿನ ಹುಡುಗನೊಬ್ಬ ನನ್ನ ಕೇಳುತ್ತಾನೆ. ನಾನು “ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಆಚರಿಸುವ ದಿನಾಚಾರಣೆ” ಎಂದು ಹೇಳುತ್ತೇನೆ. ಅವನು ಇದೇನೋ ಪ್ರಜಾಪ್ರಭುತ್ವದ ಡೆಫಿನೇಶನ್ ಇದ್ದಹಾಗೆ ಇದೆಯಲ್ಲಾ ಎಂದು ಪಿಳಿಪಿಳಿ ಕಣ್ಣುಬಿಡುತ್ತಾ ಜೋರಾಗಿ ನಗುತ್ತಾನೆ. ಅವನೊಟ್ಟಿಗೆ ನಾನೂ ನಗುತ್ತೇನೆ. ತಕ್ಷಣ ನನ್ನ ಹೆಂಡತಿ “ನಿಮಗೆ ಗಂಡಸರಿಗೆ ಎಲ್ಲವೂ ತಮಾಷೆಯಾಗಿಯೇ ಕಾಣಿಸುತ್ತದೆ” ಎಂದು ಸಿಡುಕುತ್ತಾಳೆ. ನಾನು “ತಮಾಷೆ ಅಲ್ವೇ. ಬೇಸರ” ಎನ್ನುತ್ತನೆ. “ಬೇಸರನಾ? ಯಾಕೆ?” ಎಂದು ಕೇಳುತ್ತಾಳೆ. ನಾನು ಮೆಲ್ಲಗೆ ತಕರಾರು ತೆಗೆಯುತ್ತೇನೆ; “ಅಲ್ಲಾ, ನಿಮಗೆ ಹೆಂಗಸರಿಗೆ “ಮಹಿಳಾ ದಿನಾಚಾರಣೆ”ಯಿರುವಂತೆ ನಮಗೆ ಗಂಡಸರಿಗೆ “ಪುರುಷ ದಿನಾಚಾರಣೆ” ಅಂತಾ ಯಾಕಿಲ್ಲ? ಏಕೀ ಲಿಂಗ ತಾರತಮ್ಯ?” ಎಂದು ಸದಾ ಲಿಂಗ ತಾರತಮ್ಯತೆಯ ಬಗ್ಗೆ ಮಾತನಾಡುವ ನನ್ನ ಹೆಂಡತಿಯನ್ನು ಕೇಳುತ್ತೇನೆ. ಅವಳೋ “ಎಲ್ಲಾ ದಿನಗಳು ನಿಮ್ಮ ದಿನಗಳಾಗಿರುವದರಿಂದ ಪ್ರತ್ಯೇಕವಾಗಿ ನಿಮಗೆ ಅಂತಾ ಇನ್ನೊಂದು ‘ಪುರುಷ ದಿನಾಚಾರಣೆ’ಯ ಅವಶ್ಯಕತೆಯಿಲ್ಲ” ಎಂದು ಮಹಿಳೆಯರ ಪರವಾಗಿಯೇ ಉತ್ತರ ಕೊಡುತ್ತಾಳೆ. “ಎಷ್ಟೇ ಆಗಲಿ ನೀವು ಮಹಿಳೆಯರು ಶತ ಶತಮಾನಗಳಿಂದ ನಾವು ಶೋಷಣೆಗೊಳಗಾದವರು ಎಂಬ ಸಿದ್ಧ ಮಾದರಿಯ ಕಲ್ಪನೆಯಲ್ಲೇ ಬಂದರಲ್ಲವೆ? ಎಲ್ಲಿ ಬಿಟ್ಟುಕೊಡುತ್ತಿರಿ ನಿಮ್ಮ ಜಾಯಮಾನವನ್ನು?” ಎಂದು ಕಟುಕುತ್ತೇನೆ. ಅದಕ್ಕವಳು “ಸರಿ ಸರಿ. ಈ ಪುರಾಣ ಎಲ್ಲಾ ಬಿಟ್ಟು ಇವತ್ತು ನೀವು ಅಡಿಗೆ ಮಾಡಿ. ನಾನು ರೆಸ್ಟ್ ತಗೊಳ್ಳತೇನೆ. ಇವತ್ತು ಮಹಿಳಾ ದಿನಾಚಾರಣೆಯಲ್ಲವೆ?” ಎನ್ನುತ್ತಾಳೆ. ನಾನು “ಆಯ್ತು.” ಎಂದು ಅಡಿಗೆ ಮನೆಗೆ ಹೋಗಿ ತರಕಾರಿಯನ್ನು ಸಿದ್ಧಮಾಡಿಕೊಂಡು ಹೆಚ್ಚಲು ಕುಳಿತರೆ ನನ್ನವಳು “ಅಯ್ಯೋ! ಹೀಗಾ ಹೆಚ್ಚೋದು? ಹಿಂಗಾದ್ರೆ ನೀವು ಅಡಿಗೆ ಮಾಡಿದಂಗೆ. ಕೊಡಿಲ್ಲಿ. ನಾನು ಮಾಡುತ್ತೆನೆ. ಎಷ್ಟೇ ಆಗಲಿ. ಹೆಂಗಸರು, ಹೆಂಗಸರೇ! ನಿಮಗೆ ಗಂಡಸರಿಗೆ ಮಾಡಿಹಾಕಿದ್ದನ್ನು ತಿನ್ನುವದೊಂದು ಗೊತ್ತು” ಎಂದು ಗೊಣಗುತ್ತಾ ಅವಳೇ ತರಕಾರಿ ಕತ್ತರಿಸುತ್ತಾಳೆ. ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.

    ಅದೆಲ್ಲಾ ಇರಲಿ. ನಾನು ಮೊನ್ನೆ ಯುವ ಕವಯಿತ್ರಿಯೊಬ್ಬರ ಪುಸ್ತಕ ಬಿಡುಗಡೆಯ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿ ಆಕೆ ಪ್ರಾಸ್ತವಿಕ ನುಡಿಗಳನ್ನಾಡುತ್ತಾ “ನಾನು ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡೆ. ನಿಮಗೆ ಗೊತ್ತಲ್ಲ ಗಂಡನಿಲ್ಲದ ಹೆಂಡತಿಯನ್ನು ಈ ಸಮಾಜ ಹೇಗೆ ಕಾಣುತ್ತದೆ ಎಂದು? ಪುರುಷ ಪ್ರಧಾನ ಸಮಾಜದ ವಿವಿಧ ರೀತಿಯ ಶೋಷಣೆಗಳನ್ನು ಎದುರಿಸಿ ಬರಬೇಕಾದರೆ ಸಾಕುಸಾಕಾಯಿತು ನನಗೆ. ಈ ಶೋಷಣೆಯನ್ನು ನಿಲ್ಲಿಸಬೇಕಿದೆ. ಹೆಣ್ಣು, ಗಂಡಸಿನ ಸರಿಸಮಾನವಾಗಿ ಬದುಕಬೇಕಿದೆ” ಎಂದು ಅಲವತ್ತುಕೊಳ್ಳುತ್ತಿದ್ದರು. ಆದರೆ ಅ ಶೋಷಣೆಯನ್ನು ಹೋಗಲಾಡಿಸುವದಕ್ಕೆ ತಾವು ಏನು ಮಾಡಿದ್ದಾರೆ? ಯಾವ ರೀತಿಯ ಕೊಡುಗೆಯನ್ನು ನೀಡಿದ್ದಾರೆ? ಎಂಬುದರ ಬಗ್ಗೆ ಅವರು ಏನೂ ಹೇಳಲೇ ಇಲ್ಲ. ಇವತ್ತಿನ ಹೆಣ್ಣುಮಕ್ಕಳು ಎಲ್ಲ ರಂಗದಲ್ಲೂ ಮಿಂಚುತ್ತಿದ್ದಾರೆ. ಬಹಳಷ್ಟು ಕಾನೂನುಗಳು ಸಹ ಅವರ ಪರವಾಗಿವೆ. ಅವುಗಳ ದುರ್ಬಳೆಕೆಯೂ ಆಗುತ್ತಿದೆ. ಆದರೂ ಇದ್ಯಾವುದು ತಮಗೆ ಅರಿವೇ ಇಲ್ಲವೆನ್ನುವಂತೆ ಇಪ್ಪತ್ತೊಂದನೆ ಶತಮಾನದ ಈ `ಯುವ ಕವಯಿತ್ರ' ಮಾತ್ರ ಇನ್ನೂ ಶೋಷಣೆ, ಸಮಾನತೆ ಎಂದು ಬಡಬಡಿಸುತ್ತಲೇ ಇದ್ದುದು ಮಾತ್ರ ನನಗೆ ಆಶ್ಚರ್ಯ ತಂದಿತ್ತು.

    ನಾನು ಹಿಂದೊಮ್ಮೆ ನನ್ನ ಸ್ನೇಹಿತನನ್ನು ನೋಡಲು ಆಂಧ್ರಪ್ರದೇಶದ ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನಾವು ಹೊರಗಡೆ ಬೆಂಚಿನ ಮೇಲೆ ವೈದ್ಯರಿಗಾಗಿ ಕಾಯುತ್ತಾ ಕುಳಿತಂತೆ ಒಬ್ಬ ಹೆಣ್ಣುಮಗಳು ತನ್ನ ಗಂಡನನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದದ್ದನ್ನು ನೋಡಿ ನನಗೆ ಅಳುವೇ ಬಂದುಬಿಟ್ಟಿತು. ಆಕೆ ಕ್ಯಾನ್ಸರ್ ಪೀಡಿತ ತನ್ನ ಗಂಡನನ್ನು ಆಸ್ಪತ್ರೆಯೊಳಗೆ ಹೊತ್ತು ತಂದಿದ್ದಳು. ಆಕೆ ಅನಕ್ಷರಸ್ಥೆ. ಹಳ್ಳಿಗಾಡಿನ ಹೆಣ್ಣುಮಗಳು. ಶೋಷಣೆ, ಲಿಂಗತಾರತಮ್ಯ, ಸ್ತ್ರೀವಾದ ಈ ಯಾವ ಪದಗಳನ್ನೂ ಕೇಳದಾಕೆ. ನಾವು ಅವಳನ್ನು ಮಾತನಾಡಿಸಿದಾಗ “ಯಪ್ಪಾ, ಗಂಡಗ ಕ್ಯಾನ್ಸರ್ ಅಂತರೀ. ಅವಂಗ ನಡೆಯಾಕ ಆಗಂಗಿಲ್ಲ. ಅದಕ ಹೊತ್ಗೊಂಡು ಬಂದೆ. ಏನು ಮಾಡೋದು? ಅವಂಗ ನಾನು, ನಾನು ಅವಂಗ ಆಗಬೇಕಲ್ರಿ?” ಎಂದು ಅ ನೋವಿನಲ್ಲೂ ನಗಲು ನೋಡಿದಾಗ ಬಹುಶಃ, ಬದುಕು ಎಂದರೇನು ಎಂದು ಸರಿಯಾಗಿ ಅರ್ಥ ಮಾಡಿಕೊಂಡಾಕಿ ಇರಬೇಕು ಎಂದುಕೊಂಡೆ. ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

    ಗಡಾಫಿಯ ಮಾಜಿ ಅಂಗರಕ್ಷಕಿಯೂ..........ಘಾಟ್‍ನ ಒಂದು ಸಣ್ಣ ಗಲಾಟೆಯೂ............

  • ಮಂಗಳವಾರ, ಮಾರ್ಚ್ 06, 2012
  • ಬಿಸಿಲ ಹನಿ
  • ಇದೀಗ ನೀವು ಲಿಬಿಯಾದ ಯಾವುದೇ ರಸ್ತೆಗಳಲ್ಲಿ ಸುಮ್ಮನೆ ಒಂದು ಸುತ್ತುಹಾಕಿ ಬಂದರೆ ಸಾಕು ನಿಮಗೆ ಅಲ್ಲಲ್ಲಿ ಬುಲೆಟ್‍ಗಳು ಬಿದ್ದಿರುವದು ಕಾಣಿಸುತ್ತದೆ. ಅವು ಯುದ್ಧದ ಸಮಯದಲ್ಲಿ ಬಿದ್ದ ಬುಲೆಟ್‍ಗಳಿರಬೇಕು ಎಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಯುದ್ಧ ನಿಂತರೂ ಇಲ್ಲಿ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇಲ್ಲಿ ಆಗಾಗ ಗುಂಪು ಘರ್ಷಣೆಗಳೂ ಹಾಗೂ ಸಣ್ಣಪುಟ್ಟ ಗಲಭೆಗಳೂ ಇನ್ನೂ ಸಂಭವಿಸುತ್ತಲೇ ಇವೆ. ಅಂಥ ಸಂದರ್ಭಗಳಲ್ಲಿ ಈ ಗುಂಡಿನ ಮೊರೆತದ ಸದ್ದು ಕೇಳಿಸುವದು ಸರ್ವೇಸಾಮಾನ್ಯ. ಆದರೆ ಈ ಸದ್ದು ಬೆಂಗಾಜಿಯಲ್ಲಿ ಕಡಿಮೆಯಾಗಿದ್ದು ಇನ್ನೂ ಟ್ರಿಪೋಲಿ, ಮಿಸ್ರತಾ, ಸಿರ್ತ್, ಸೆಭಾಗಳಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಇದಕ್ಕೆ ನಾನಿರುವ ಸ್ಥಳ ಘಾಟ್ ಕೂಡ ಹೊರತಾಗಿಲ್ಲ.




    ಯುದ್ಧದ ಸಮಯದಲ್ಲಿ ಗಡಾಫಿ, ಸೇನಾ ತರಬೇತಿ ಹೊಂದಿದ ಇಲ್ಲಿನ ಯುವಕರೆಲ್ಲರಿಗೂ ತನ್ನ ಪರವಾಗಿ ಹೋರಾಡಲು ಬುಲಾವ್ ಕಳಿಸಿದ. ಆ ಪ್ರಕಾರ ಈ ಭಾಗದ ಬಹಳಷ್ಟು ಜನ ಗಡಾಫಿ ಬೆಂಬಲಿಗರಾಗಿದ್ದರಿಂದ ಅವರೆಲ್ಲಾ ಯುದ್ಧದಲ್ಲಿ ಭಾಗವಹಿಸಿದರು. (ನಿಮಗೆ ಗೊತ್ತಿರಲಿ. ಗಡಾಫಿ, ಇಲ್ಲಿನ ಯುವಕರಿಗೆ ಸೇನಾ ತರಬೇತಿಯನ್ನು ಖಡ್ಡಾಯಗೊಳಿಸಿದ್ದ. ಅವರು ಕಾಲೇಜು ಓದುವಾಗ ಇಲ್ಲವೇ ಕಾಲೇಜು ಓದು ಮುಗಿದಾದ ಮೇಲೆ ಖಡ್ಡಾಯವಾಗಿ ಆರು ತಿಂಗಳ ಕಾಲ ಸೇನಾ ತರಬೇತಿಗೆ ಹಾಜರಾಗಲೇಬೇಕಿತ್ತು. ಇಲ್ಲವಾದಲ್ಲಿ ವಿದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ನಿಗದಿಪಡಿಸಿದ ಸ್ಕಾಲರ್ಶಿಪ್‍ನ್ನು ಪಡೆಯಲು ಅರ್ಹರಾಗುತ್ತಿರಲಿಲ್ಲ.) ಸರಿ, ಯುದ್ಧ ಮುಗಿಯಿತು. ಗಡಾಫಿಯ ಹತ್ಯೆಯೂ ಆಯಿತು. ಆದರೆ ಯುದ್ಧದಲ್ಲಿ ಗಡಾಫಿ ಸೋತ ಮೇಲೆ ಆತನ ಪರವಾಗಿ ಹೋರಾಡಿದವರು ಬಂದೂಕಗಳನ್ನು ಹಿಂತಿರುಗಿಸುವದಾದರು ಯಾರಿಗೆ? ಹೀಗಾಗಿ ಅವನ್ನು ತಮ್ಮೊಟ್ಟಿಗೆ ಹೊತ್ತು ತಂದರು. ಇನ್ನು ಕೆಲವರಿಗೆ ಅದ್ಹೇಗೋ ಗನ್ನುಗಳು ಸಿಕ್ಕುಬಿಟ್ಟವು. ದುರಂತವೆಂದರೆ ಈಗಿನ ಸರಕಾರ ಈ ಗನ್ನುಗಳನ್ನು ಲೈಸನ್ಸ್ ಇಲ್ಲದೇ ಬಳಸಕೂಡದೆಂದು ಫರ್ಮಾನು ಹೊರಡಿಸಿದ್ದರೂ ಇಲ್ಲಿನವರು ಅವನ್ನು ಹಿಂತಿರುಗಿಸಲು ಹೋಗಿಲ್ಲ. ಅದಕ್ಕೆ ಒಂದು ಬಲವಾದ ಕಾರಣವೂ ಇದೆ. ಅದೇನೆಂದರೆ ಗಡಾಫಿ ಪರವಾಗಿ ಹೋರಾಡಿದ ಸೈನಿಕರಿಗೆ ತಾತ್ಕಾಲಿಕವಾಗಿ ಕೆಲವು ನಿಷೇಧಗಳನ್ನು ಹೇರಲಾಗಿದ್ದು ಅವರು ಮುಂದೆ ಹೇಗೋ ಏನೋ ಎಂದು ಭಯಭೀತರಾಗಿದ್ದಾರೆ. ಆದ ಕಾರಣ ಅವರು ಯಾವುದಕ್ಕೂ ತಮ್ಮ ಆತ್ಮರಕ್ಷಣೆಗೆ ಇರಲಿ ಅಂತಾ ತಮ್ಮೊಂದಿಗೆ ಆ ಗನ್ನುಗಳನ್ನು ಹಾಗೆ ಇಟ್ಟುಕೊಂಡಿದ್ದಾರೆ.

    ಹೀಗಾಗಿ ಇಲ್ಲಿ ಪ್ರತಿ ಮನೆಯಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಗನ್ನುಗಳಿವೆ. ಪರಿಣಾಮವಾಗಿ ಹೊತ್ತುಗೊತ್ತಿಲ್ಲದೇ ಇಲ್ಲಿ ಯಾವಾಗಂದರೆ ಅವಾಗ “ಫಡ್ ಫಡ್” ಎಂದು ಫೈರಿಂಗ್ ಸದ್ದು ಕೇಳಿಸುತ್ತದೆ. ನಾವು ಮೊದಲು ಯಾರೋ ಪಟಾಕಿ ಹೊಡೆಯುತ್ತಿರಬೇಕು ಎಂದುಕೊಳ್ಳುತ್ತಿದ್ದೆವು. ಆದರೆ ಆಮೇಲೆ ಗೊತ್ತಾಯಿತು ಅವರೆಲ್ಲಾ ಮೋಜಿಗಾಗಿಯೋ ಇಲ್ಲವೇ ಖುಶಿಗಾಗಿಯೋ ಆಗಾಗ ಆಕಾಶದತ್ತ ಗುಂಡು ಹಾರಿಸುತ್ತಿರುತ್ತಾರೆಂದು. ನಮಗೆ ಒಂದೊಂದು ಸಾರಿ ಈ ತೆರದ ಗುಂಡಿನ ಸದ್ದು ಕೇಳಿಸಿದಾಗ ನಿಜಕ್ಕೂ ಅಲ್ಲಿ ಗಲಾಟೆ ನಡೆಯುತ್ತಿದೆಯೋ? ಅಥವಾ ಇದು ಕೇವಲ ಮೋಜಿಗಾಗಿಯೋ ಎಂದು ಗೊತ್ತಾಗುವದೇ ಇಲ್ಲ. ಇಲ್ಲಿನ ಪೋಲಿಸರು ಸಹ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮೊದಮೊದಲು ಈ ಫೈರಿಂಗ್ ಸದ್ದಿಗೆ ನಾವು ಬೆಚ್ಚಿಬೀಳುತ್ತಿದ್ದೆವು. ಆದರೀಗ ಅದು ಅಭ್ಯಾಸವಾಗಿಬಿಟ್ಟಿದೆ!

    ಮೊನ್ನೆ ಅಂದರೆ ಈಗ್ಗೆ ಒಂದು ವಾರದ ಹಿಂದೆ ರಾತ್ರಿ ಹತ್ತು ಗಂಟೆಗೆ ಇಂಥದೇ ಗುಂಡಿನ ಸದ್ದು ನಮ್ಮ ಕಾಲೇಜು ಪಕ್ಕದಲ್ಲಿಯೇ ಕೇಳಿಸಿತು. ನಾವು ಇನ್ನೇನು ಊಟಮಾಡಿ ಮಲಗಲಿದ್ದೆವು. ಅಷ್ಟರಲ್ಲಿ ಈ ಸದ್ದು. ನಾವು ಮೊದಲು ಮಾಮೂಲಿನಂತೆ ಯಾರೋ ಮೋಜಿಗಾಗಿ ಗುಂಡು ಹಾರಿಸತ್ತಿರಬಹುದೆಂದುಕೊಂಡೆವು. ಆದರೆ ಅದರ ತೀವ್ರತೆ ಮತ್ತು ರಭಸತೆ ಹೆಚ್ಚುತ್ತಾ ಹೋದಂತೆ ನಮಗೆ ನಮ್ಮ ಕಾಲೇಜು ಕೌಂಪೊಂಡಿನಾಚೆ ಏನೋ ಆಗುತ್ತಿದೆ ಎಂದನಿಸಿತು. ಕಾಲೇಜು ಒಳಗಡೆ ನಮಗೆ ಸಾಕಷ್ಟು ರಕ್ಷಣೆಯಿದ್ದರೂ ಭಯಭೀತರಾಗಿ ನಾವು ನಮ್ಮ ಮನೆಯ ಬಾಗಿಲಗಳನ್ನು ಭದ್ರವಾಗಿ ಹಾಕಿಕೊಂಡು ಮಲಗಿದೆವು. ಗುಂಡಿನ ಸದ್ದು ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಕೇಳಿಸುತ್ತಲೇ ಹೋಯಿತು. ಮಾರನೇ ದಿವಸ ಗೊತ್ತಾದ ವಿಷಯವೇನೆಂದರೆ ಘಾಟ್‍ನಲ್ಲಿ ಗಡಾಫಿಯ ಮಾಜಿ ಅಂಗರಕ್ಷಕಿಯೊಬ್ಬಳಿದ್ದಾಳೆ. ಅವಳನ್ನು ಬಂಧಿಸಲು ಜನ ಬೆಂಗಾಜಿಯಿಂದ ಬಂದಿದ್ದರು. ಹೀಗಾಗಿ ಅವಳನ್ನು ಉಳಿಸಿಕೊಳ್ಳಲು ಇಲ್ಲಿನವರು ಅವರೊಟ್ಟಿಗೆ ಹೋರಾಟ ನಡೆಸಿ ಯಶಸ್ವಿಯಾದರೆಂದು.

    ಗಡಾಫಿ ಮಹಿಳಾಪರ ಧೋರಣೆಯನ್ನು ಹೊಂದಿದವನಾಗಿದ್ದು ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು! ಮತ್ತು ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ. ಅವರ ಸಂಖ್ಯೆ ಸುಮಾರು 300-400 ರಷ್ಟಿತ್ತು. ಆತನ ಅಂಗರಕ್ಷಕರಾಗಲು ಇಲ್ಲಿನ ಹುಡುಗಿಯರು ಅನೇಕ ಸುತ್ತುಗಳ ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಆದರೆ ಕೊನೆಯ ಸುತ್ತಿನ ಆಯ್ಕೆಯನ್ನು ಇವನೇ ಮಾಡುತ್ತಿದ್ದ. ಆದರೆ ಅವರೆಲ್ಲಾ ಕನ್ಯೆಯರೇ ಆಗಿರಬೇಕೆಂದು ಬಯಸುತ್ತಿದ್ದ. ಕನ್ಯೆಯರೇ ಯಾಕೆ? ಎಂದರೆ ವಿಕ್ಷಿಪ್ತ ವ್ಯಕ್ತಿತ್ವದ ಗಡಾಫಿ ಅವರ ಮೀಸಲು ಮುರಿಯುವದರಲ್ಲಿ ಏನೋ ಒಂದು ವಿಲಕ್ಷಣ ತೃಪ್ತಿಯನ್ನು ಕಾಣುತ್ತಿದ್ದನಲ್ಲದೆ ಅವರನ್ನು ಲೈಂಗಿಕವಾಗಿ ಆಗಾಗ ಶೋಷಿಸುತ್ತಿದ್ದ ಎಂದು ಬಿ.ಬಿ.ಸಿ,, ಆಲ್ಜೇಜಿರಾ, ಇನ್ನೂ ಮುಂತಾದ ವಿದೇಶಿ ಟೀವಿ ಚಾನೆಲ್‍ಗಳು ಹೇಳಿವೆ. ಆದರೆ ಸ್ಥಳೀಯರ ಪ್ರಕಾರ ಈ ಮಾಧ್ಯಮಗಳು ಹೇಳುವದೆಲ್ಲಾ ಸುಳ್ಳು. ಗಡಾಫಿ ಕನ್ಯೆಯರನ್ನೇ ಯಾಕೆ ತನ್ನ ಅಂಗರಕ್ಷಕಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದನೆಂದರೆ ಪ್ರಾಚೀನ ಕಾಲದಲ್ಲಿ ಒಂದು ನಂಬಿಕೆಯಿತ್ತು; ಕನ್ಯೆಯರಾದವರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಹಾಗೂ ಗಮನವಿರುತ್ತದೆಂದು. ಇದನ್ನು ಗಡಾಫಿ ಕೂಡ ಬಲವಾಗಿ ಬಲವಾಗಿ ನಂಬಿದ್ದ. ಹೀಗಾಗಿ ಅವರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಂಡಿದ್ದ. ಮಾತ್ರವಲ್ಲ ಆತ ಸದಾ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದು ಅವರ ಸಾಮಾಜಿಕ ಸ್ಥಾನಮಾನಗಳಿಗಾಗಿ ಆತ ಬಹಳಷ್ಟು ಶ್ರಮಿಸಿದ್ದಾನೆ ಎಂದು ಹೇಳುತ್ತಾರೆ. ಇದು ಸುಳ್ಳೋ? ನಿಜವೋ? ಎಂದು ತಿಳಿದುಕೊಳ್ಳಲು ನಾನು ಖುದ್ದಾಗಿ ಘಾಟ್‍ನಲ್ಲಿರುವ ಆತನ ಮಾಜಿ ಅಂಗರಕ್ಷಕಿಯನ್ನು ಭೇಟಿಯಾಗಲು ಅವರ ಮನೆಗೆ ಎರಡು ಮೂರು ಸಾರಿ ಹೋದೆ. ಆದರೆ ಆಕೆ ಬಾಗಿಲನ್ನು ತೆರೆಯದೇ ನಿರಾಶೆಗೊಳಿಸಿದಳು.




    ಅಂದಹಾಗೆ ಗಡಾಫಿಯ ಅಷ್ಟು ಜನ ಅಂಗರಕ್ಷಕಿಯರು ಏನಾದರು? ಕೆಲವರು ಬಂಧಿತರಾದರು, ಕೆಲವರು ನ್ಯಾಟೋ ದಾಳಿಯಲ್ಲಿ ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಲ್ಲಿ ತಲೆತಪ್ಪಿಸಿಕೊಂಡರು. ಯಾವಾಗ ಟ್ರಿಪೋಲಿ ಗಡಾಫಿಯ ಹಿಡಿತದಿಂದ ತಪ್ಪಿಹೋಯಿತೋ ಆಗ ತನ್ನ ಉಳಿದ ಅಷ್ಟು ಜನ ಅಂಗರಕ್ಷಕಿಯರಿಗೆ ಆತ “ಇನ್ನು ನನ್ನನ್ನು ಬಿಟ್ಟುಬಿಡಿ. ನೀವು ಎಲ್ಲಾದರೂ ಪಾರಾಗಿ” ಎಂದು ಹೇಳಿದನಂತೆ. ಆ ಪ್ರಕಾರ ಪಾರಾಗುವ ಸಂದರ್ಭದಲ್ಲಿ ಕೆಲವರು ಸಿಕ್ಕಿಬಿದ್ದರು. ಕೆಲವರು ಸತ್ತುಹೋದರು. ಇನ್ನು ಕೆಲವರು ಬೇರೆ ಬೆರೆ ದೇಶಗಳಿಗೆ ಓಡಿಹೋದರು. ಹಾಗೆ ಓಡಿಹೋದ ಅಂಗರಕ್ಷಕಿಯರಲ್ಲಿ ಘಾಟ್‍ನ ಈ ಹುಡುಗಿಯೂ ಸೇರಿಕೊಂಡಿದ್ದಾಳೆ. ಅವಳು ಇಷ್ಟು ದಿನ ಅಲ್ಜೀರಿಯಾದಲ್ಲಿ ಅಡಗಿಕೊಂಡಿದ್ದಳು. ಆದರೆ ಇಲ್ಲಿ ಈ ಗಲಾಟೆಯೆಲ್ಲಾ ಕಡಿಮೆಯಾದ ಮೇಲೆ ಅವಳು ತನ್ನ ಸ್ವಂತ ಊರು ಘಾಟ್‍ಗೆ ಮೊನ್ನೆಯಷ್ಟೇ ಮರಳಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಪೋಲಿಷ್‍ನೊಬ್ಬ ಈಗಿನ ಸರಕಾರಕ್ಕೆ ಸುದ್ಧಿ ಮುಟ್ಟಿಸಿದ್ದಾನೆ. ಅವರು ಇವಳನ್ನು ಬಂಧಿಸಲು ಬೆಂಗಾಜಿ ಮತ್ತು ಜಿಂದಾನ್‍ನಿಂದ ಹೆಚ್ಚುವರಿ ಪೋಲೀಷ್‍ನವರನ್ನು ಕಳಿಸಿದ್ದಾರೆ. ಆದರೆ ಇಲ್ಲಿ ಇನ್ನೂ ಗಡಾಫಿಯ ಬೆಂಬಲಿಗರೇ ಇರುವದರಿಂದ ಅವರೆಲ್ಲಾ ಒಗ್ಗಟ್ಟಾಗಿ ಇಲ್ಲಿಂದ ಅವರನ್ನೆಲ್ಲಾ ಹೊಡೆದೋಡಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಆ ಹುಡುಗಿಯನ್ನು ಸಧ್ಯದ ಮಟ್ಟಿಗೆ ಬಚಾವ್ ಮಾಡಿದ್ದಾರೆ. ಹೀಗಾಗಿ ಮೊನ್ನೆ ಇಲ್ಲಿ ಈ ಗಲಾಟೆ, ರಾದ್ದಾಂತವೆಲ್ಲಾ ನಡೆದು ಸಾಕಷ್ಟು ಗುಂಡಿನ ಮೊರೆತ ಕೇಳಿಸಿತು.

    ಈಗಿನ ಹೊಸ ಹಂಗಾಮಿ ಸರಕಾರ ಗಡಾಫಿಗೆ ಮತ್ತು ಆತನ ಮಕ್ಕಳಿಗೆ ಏನಾದರು ಮಾಡಲಿ. ಆದರೆ ಈ ಹುಡುಗಿಯರು ಕೇವಲ ಅವನ ಅಂಗರಕ್ಷಕಿಯರಾಗಿದ್ದರೆಂಬ ಕಾರಣಕ್ಕೆ ಅವರನ್ನು ಹಿಡಿದು ಜೈಲಿಗಟ್ಟುವದು ಯಾವ ನ್ಯಾಯ? ಇದು ಕೂಡ ಒಂದು ರೀತಿಯ ಸರ್ವಾಧಿಕಾರದ ಧೋರಣೆಯಾಗಿ ಕಾಣುತ್ತದೆ. ಇನ್ನುಮುಂದೆಯಾದರೂ ಹೊಸ ಸರಕಾರ ಇಂಥ ಅರ್ಥಹೀನ ನಡವಳಿಕೆಗಳನ್ನು ನಿಲ್ಲಿಸಿ ಇಡಿ ಲಿಬಿಯಾದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತವನ್ನು ನಡೆಸುವಂತಾಗಲಿ ಎಂದು ಆಸಿಸುತ್ತೇನೆ.

    ಉದಯ್ ಇಟಗಿ

    ಮೊದಲೆರೆಡು ಚಿತ್ರಗಳು ನನ್ನವು
    ಇನ್ನೆರೆಡು ಚಿತ್ರಗಳು ಅಂತರ್ಜಾಲ ಕೃಪೆ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನು ನಾನಾಗಿರುವದು ಎಷ್ಟೊಂದು ಕಷ್ಟ!

  • ಗುರುವಾರ, ಮಾರ್ಚ್ 01, 2012
  • ಬಿಸಿಲ ಹನಿ
  • ಇತ್ತೀಚಿಗೆ ನಾನು ನಾನಾಗಿರಲು ಸಾಧ್ಯವಾಗುತ್ತಿಲ್ಲ; ಬೇರೆ ಇನ್ನೇನೋ ಆಗುತ್ತಿದ್ದೇನೆ. ಅಥವಾ ನನ್ನ ಸುತ್ತಲಿನ ಸಮಾಜ, ಪರಿಸರ ಹಾಗೂ ಮನುಷ್ಯರು ನನ್ನನ್ನು ನಾನಾಗಿರಲು ಬಿಡುತ್ತಿಲ್ಲ. ಹಾಗಂತ ನನಗೆ ಬಲವಾಗಿ ಅನ್ನಿಸತೊಡಗಿದೆ. ನನಗೆ ಮಾತ್ರವಲ್ಲ. ಬಹುಶಃ, ನಿಮಗೂ ಒಮ್ಮೆಯಾದರೂ ಹಾಗೆ ಅನಿಸಿರುತ್ತೆ. ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಬಹಳಷ್ಟು ಬದಲಾಗಿಬಿಡುತ್ತಾನೆ. ಜೀವನದ ಸಂದರ್ಭಗಳೇ ಹಾಗೆ! ಅವು ಎಂಥವನನ್ನು ಕೂಡ ಬದಲಾಯಿಸಿಬಿಡುತ್ತವೆ. ಆದರೆ ಇಲ್ಲಿ ನನಗೆ ಒಂದೊಂದು ಸಾರಿ ಗೊಂದಲ ಉಂಟಾಗುತ್ತೆ- ಮನುಷ್ಯ ಸಂದರ್ಭಗಳಿಗೆ ತಕ್ಕಂತೆ ಬದಲಾಗುತ್ತಾನೋ? ಅಥವಾ ಸಂದರ್ಭಗಳೇ ನಿಜವಾಗಿ ಮನುಷ್ಯನನ್ನು ಬದಲಾಯಿಸುತ್ತವೆಯೋ? ಎಂದು. ನನ್ನ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬಹುಶಃ, ಸಿಗುವದಿಲ್ಲವೇನೋ?! ಏಕೆಂದರೆ ಕೆಲವು ಗೊಂದಲಗಳಿಗೆ ಪರಿಹಾರವಿಲ್ಲ ಮತ್ತು ಒಂದುವೇಳೆ ಪರಿಹಾವಿದ್ದರೂ ನಾವು ಇಂಥ ಅಸಂಖ್ಯ ಗೊಂದಲಗಳ ನಡುವೆಯೇ ಬದುಕುವದನ್ನು ಅಭ್ಯಾಸ ಮಾಡಿಕೊಂಡಿರುವದರಿಂದ ಅದು ನಮಗೆ ಕಾಣುವದಿಲ್ಲ.

    ಹಾಗಿದ್ದರೆ ನಾನು ನಾನಾಗಿರಲು ಯಾವಾಗ ಸಾಧ್ಯ? ಬಹುಶಃ, ನಾನೊಬ್ಬಂಟಿಯಾಗಿದ್ದಾಗ ಮಾತ್ರ ಅನಿಸುತ್ತೆ. ಆದರೆ ಈ ವಿಶಾಲ ಜಗತ್ತಿನಲ್ಲಿ ಒಬ್ಬಂಟಿಯಿರುವದಾದರೂ ಹೇಗೆ? ನಾವು ಇತರರೊಟ್ಟಿಗೆ ಇರುವಾಗ ಇನ್ನೆಲ್ಲೋ ಕಳೆದುಹೋಗುತ್ತೇವೆ. ಇನ್ನೇನೋ ಆಗುತ್ತೇವೆ. ಯಾರ್ಯಾರದೋ ಪ್ರಭಾವಕ್ಕೊಳಗಾಗುತ್ತೇವೆ. ಯಾರ್ಯಾರನ್ನೋ ಅನುಕರಿಸುತ್ತೇವೆ. ಒಟ್ಟಿನಲ್ಲಿ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪಾತ್ರಗಳಾಗುತ್ತೇವೆ. ಒಮ್ಮೆ ರೋಮಿಯೋ, ಒಮ್ಮೆ ಹ್ಯಾಮ್ಲೆಟ್, ಒಮ್ಮೆ ಒಥೆಲೋ, ಒಮ್ಮೆ ಇಯಾಗೋ, ಒಮ್ಮೆ ಆಂಟನಿ, ಒಮ್ಮೆ ಪ್ರಾಣೇಶಾಚಾರ್ಯ, ಹೀಗೆ ಇನ್ನೂ ಏನೇನೋ ಅಗುತ್ತೆವೆ. ಕೊನೆಗೆ ನಾನು ಏನೂ ಆಗಲಿಲ್ಲ. ನಾನು ನಾನಾಗಿಯೇ ಉಳಿದೆ ಅನಿಸುತ್ತೆ. ಆದರೂ ನಮಗೆ ಗೊತ್ತಿಲ್ಲದಂತೆ ಇನ್ನೇನೋ ಆಗಿಬಿಟ್ಟಿರುತ್ತೇವೆ.

    ಅಬ್ಬಾ, ನಾನು ನಾನಾಗಿರುವದು ಎಷ್ಟೊಂದು ಕಷ್ಟ! ಹಾಗಾದರೆ ನಾನೇಕೆ ಇನ್ನೂ ನಾನು ನಾನಾಗಿಯೇ ಬದುಕಬೇಕೆಂಬ ಹಟವನ್ನಿಟ್ಟುಕೊಂಡಿದ್ದೇನೆ. ಅದನ್ನೇಕೆ ಕೈ ಬಿಡಬಾರದು? ಒಂದೊಂದು ಸಾರಿ ಅನಿಸುತ್ತೆ; ನಾನು ನಾನಾಗದೆ ಬದುಕುವದರಲ್ಲಿಯೇ ಎಷ್ಟೊಂದು ಖುಶಿ, ಎಷ್ಟೊಂದು ನೆಮ್ಮದಿಯಿದೆಯೆಂದು!

    ಗಡಾಫಿ ಇಲ್ಲದ ಲಿಬಿಯಾ

  • ಮಂಗಳವಾರ, ಫೆಬ್ರವರಿ 21, 2012
  • ಬಿಸಿಲ ಹನಿ
  • ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.

    ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. ಈ ನಿಟ್ಟಿನಲ್ಲಿ ಆ ಕ್ರಾಂತಿಯ ಮೊದಲ ಯಶಸ್ಸು, ಕೀರ್ತಿ ಹಾಗೂ ಹೆಮ್ಮೆ ಈ ನೆಲದ ಜನರಿಗೆ ಸಲ್ಲುತ್ತದೆ. ಇದೀಗ ನಾನು ಆ ನೆಲದ ಮೇಲೆ ನಿಂತಿದ್ದೆ. ನಿಂತಂತೆ ಏನೋ ಒಂದು ತೆರದ ಪುಳಕ, ಹೆಮ್ಮೆ ನನ್ನಲ್ಲಿ ಮೂಡಿದವು. ಜೊತೆಗೆ ‘ನಾವು ಎಷ್ಟೇ ಆಗಲಿ ಹೊರಗಿನವರು. ಇಲ್ಲಿ ಕೆಲಸ ಮಾಡಲು ಬಂದವರು. ಗಡಾಫಿಯಿದ್ದರೇನು? ಇನ್ನೊಬ್ಬ ಇದ್ದರೇನು? ನಮಗೆ ಎಲ್ಲರೂ ಅಷ್ಟೆ’ ಎನ್ನುವ ಭಾವವೊಂದು ನನ್ನ ಮನದಲ್ಲಿ ಹಾದು ಹೋಯಿತು. ಆದರೆ ಇದೀಗ ನಾನು ಗಡಾಫಿಯಿದ್ದ ನಾಡಿಗೂ ಮತ್ತು ಗಡಾಫಿಯಿಲ್ಲದ ನಾಡಿಗೂ ಪ್ರತ್ಯಕ್ಷದರ್ಶಿಯಾಗಿ ನಿಂತಿದ್ದೆ. ಗಡಾಫಿಯಿದ್ದಾಗ ಈ ನಾಡು ಹೇಗಿತ್ತೆಂದು ಇಲ್ಲಿ ಮೂರುವರೆ ವರ್ಷಗಳ ಕಾಲ ಇದ್ದು ನೋಡಿದ್ದೆ. ಈಗ ಸಹಜವಾಗಿ ಆತನಿಲ್ಲದ ನಾಡು ಹೇಗಿದೆ ಎಂದು ತಿಳಿಯುವ ಕುತೂಹಲ ನನ್ನಲ್ಲಿತ್ತು. ಹೀಗಾಗಿ ಈ ಒಂದು ತಿಂಗಳ ಕಾಲ ಗಡಾಫಿಯಿಲ್ಲದ ನಾಡಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ಹಾಗೂ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.



    ಲಿಬಿಯನ್ನರ ಹೊಸದೆಂದು ಹೇಳಲಾದ ಹಳೆಯ ರಾಷ್ಟ್ರಧ್ವಜ
    ನಾನು ಬೆಂಗಾಜಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ಹೊರಬರುತ್ತಿದ್ದಂತೆ ನನ್ನನ್ನು ಮೊಟ್ಟಮೊದಲು ಸ್ವಾಗತಿಸಿದ್ದು ಆ ದೇಶದ ಹೊಸ ಭಾವುಟ. ಗಡಾಫಿಯ ಹಸಿರು ಭಾವುಟ ಹೋಗಿ ಅದರ ಜಾಗದಲ್ಲಿ ಮಧ್ಯ ಅರ್ಧ ಚಂದ್ರ ಮತ್ತು ನಕ್ಷತ್ರವೊಂದರ ಚಿಹ್ನೆಯಿರುವ ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳ ತ್ರಿವರ್ಣ ಧ್ವಜ ಬಂದು ಕುಳಿತಿತ್ತು. ನಾನದನ್ನು ಮೊದಲು ಹೊಸ ಭಾವುಟ ಇರಬೇಕೆಂದುಕೊಂಡಿದ್ದೆ. ಆದರೆ ಆಮೇಲೆ ಗೊತ್ತಾಯಿತು ೧೯೫೧ ರಲ್ಲಿ ಲಿಬಿಯಾ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಈ ಭಾವುಟವನ್ನು ಸ್ವತಂತ್ರ ಲಿಬಿಯಾದ ಅಧಿಕೃತ ಭಾವುಟವೆಂದು ಘೋಷಿಸಿದ್ದರೆಂದು. ಜೊತೆಗೆ ಈ ದೇಶದ ನೇತಾರ ಒಮರ್ ಮುಖ್ತಾರನ ಫೋಟೋವೊಂದು ನಿಲ್ದಾಣದ ಹೊರಗೆ ರಾರಾಜಿಸುತ್ತಿರುವದು ಕಾಣಿಸಿತು. ಈ ಒಮರ್ ಮುಖ್ತಾರ ಲಿಬಿಯಾದ ಸಿರನೈಕಾ ಪ್ರಾಂತ್ಯದವನಾಗಿದ್ದು ಇಟೆಲಿಯ ಸಾಮ್ರಾಜ್ಯಶಾಹಿಗಳ ವಿರುದ್ಧ ಮೊಟ್ಟ ಮೊದಲಿಗೆ ಬಂಡೆದ್ದು ಲಿಬಿಯನ್ನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವನಾಗಿದ್ದ. ಈತನನ್ನು “ಲಯನ್ ಆಫ್ ಡೆಸರ್ಟ್” ಎಂದು ಸಹ ಕರೆಯುತ್ತಾರೆ. ನನಗೆ ಈ ಬದಲಾವಣೆಯನ್ನು ನೋಡಿ ಖುಶಿಯಾಯಿತು; ಪರ್ವಾಗಿಲ್ಲ ಹೊಸ ಸರಕಾರ ತನ್ನ ದೇಶಕ್ಕಾಗಿ ಹೋರಾಡಿದ ಮಹಾತ್ಮನನ್ನು ನೆನೆಸಿಕೊಂಡಿದೆ ಎಂದು. ಒಳಗಡೆ ಗಡಾಫಿಯ ಉಳಿದ ಮಕ್ಕಳ ಫೋಟೋಗಳನ್ನು ಹಾಕಿ ಕೆಳಗಡೆ ಇವರ ಸುಳಿವು ಸಿಕ್ಕಲ್ಲಿ ತಕ್ಷಣ ಸಂಪರ್ಕಿಸಬೇಕೆಂದು ಹೇಳಿ ಒಂದು ಫೋನ್ ನಂಬರ‍್ ನ್ನು ಕೊಡಲಾಗಿತ್ತು.


    ಬಂಡುಕೋರರಿಗೆ ಬೇಕಾಗಿರುವ ಗಡಾಫಿಯ ಉಳಿದ ಮಕ್ಕಳು

    ಅದರ ಪಕ್ಕದಲ್ಲಿಯೇ ಗನ್ನಿನ ಚಿತ್ರವೊಂದನ್ನು ಹಾಕಿ ಅದರ ಕೆಳಗೆ ಇವುಗಳನ್ನು ಲೈಸನ್ಸ್ ಇಲ್ಲದೆ ಉಪಯೋಗಿಸುವದು ಶಿಕ್ಷಾರ್ಹ ಎಂದು ಬರೆಯಲಾಗಿತ್ತು. ನನಗೆ ಬೆಂಗಾಜಿಯಿಂದ ಟ್ರಿಪೋಲಿಗೆ ಮುಂದಿನ ಎರಡು ಗಂಟೆಗಳಲ್ಲಿ ವಿಮಾನವಿದ್ದುದರಿಂದ ಅಲ್ಲಿ ಸಾಕಷ್ಟು ಸಮಯ ಕಳೆಯಲಾಗಲಿಲ್ಲ. ಅಲ್ಲಿಂದ ಬೆಳಿಗ್ಗೆ ೧೧.೩೦ಕ್ಕೆ ಟ್ರಿಪೋಲಿಯತ್ತ ಹೊರಟೆ. ಮುಂದೆ ಅಲ್ಲಿಂದ ನಾನು ಮಾರನೆ ದಿನ ಸೆಭಾಕ್ಕೆ ಹೋಗಬೇಕಾಗಿತ್ತು.


    ನಮ್ಮ ವಿಮಾನ ಟ್ರಿಪೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತಿದ್ದಂತೆ ಅದರ ಕೆಲವು ಜಾಗಗಳು ನನಗೆ ವಿಮಾನದ ಒಳಗಿನಿಂದಲೇ ಯುದ್ಧದ ಸಮಯದಲ್ಲಿ ಅಲ್ಲಲ್ಲಿ ಹಾನಿಯಾಗಿರುವದು ಕಾಣಿಸಿತು. ಇಳಿದು ಶೌಚಾಲಯಕ್ಕೆ ಹೋದರೆ “ಅಬ್ಬ, ನಮ್ಮಲ್ಲಿನ ಪಬ್ಲಿಕ್ ಟಾಯ್ಲೆಟ್‍ಗಳು ಎಷ್ಟೋ ವಾಸಿ” ಎನಿಸಿತು. ಬಹುಶಃ, ಈ ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಗಡಾಫಿ ಅರ್ಧ ಕಟ್ಟಿಸಿಬಿಟ್ಟ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುತ್ತಿರಬೇಕು, ಹೀಗಾಗಿ ಇದನ್ನು ನಿರ್ಲಕ್ಷ್ಯಸಿಸಲಾಗಿದೆ ಎಂದುಕೊಂಡು ಸುಮ್ಮನಾದೆ. ಅಲ್ಲಿಂದ ಟ್ಯಾಕ್ಶಿಯೊಂದನ್ನು ತೆಗೆದುಕೊಂಡು ಹೋಟೆಲ್‌ನತ್ತ ಹೊರಟೆ. ಹೋಗುವಾಗ ದಾರಿಯಲ್ಲಿ ಗಡಾಫಿಯ ವಿರುದ್ಧ ಬರೆದ ಆತನ ವ್ಯಂಗ್ಯ ಚಿತ್ರಗಳು ಮತ್ತು ಸ್ಲೋಗನ್‍ ಗಳು ಕಾಣಿಸಿದವು.




    ಗಡಾಫಿಯ ವಿರುದ್ಧ ಬರೆದ ಸ್ಲೋಗನ್ ಗಳು

    ಜೊತೆಗೆ ಸ್ವತಂತ್ರ ಲಿಬಿಯಾದ ಹರ್ಷೋದ್ಗಾರದ ವಾಕ್ಯಗಳು ಕಾಣಿಸಿದವು. ಅವುಗಳ ಫೋಟೊ ತೆಗೆಯುತ್ತಾ ಟ್ಯಾಕ್ಷಿ ಡ್ರೈವರ್ ನನ್ನು “ಈಗ ಲಿಬಿಯಾ ಹೇಗಿದೆ?” ಎಂದು ಕೇಳಿದೆ. ಅವನು ಅರ್ಧ ಇಂಗ್ಲೀಷ್ ಅರ್ಧ ಅರೇಬಿಕ್ ಭಾಷೆಯಲ್ಲಿ “ತವ್ವಾ ಲಿಬಿಯಾ ಮಿಯ್ಯಾ ಮಿಯ್ಯಾ (ಈಗ ಲಿಬಿಯಾ ತುಂಬಾ ಚನ್ನಾಗಿದೆ) Now Libya is free. Gadafi no good. He was killed because he was eating alone” ಎಂದು ತನ್ನದೇ ಭಾಷೆಯಲ್ಲಿ ಹೇಳಿದ. ಗಡಾಫಿಯನ್ನು ಒಂದಷ್ಟು ಬಯ್ಯುತ್ತಾ ಆತನ ಮಕ್ಕಳಿಗೆ ಏನೇನಾಯಿತು? ಅವರಲ್ಲಿ ಎಷ್ಟು ಜನ ಸತ್ತಿದ್ದಾರೆ? ಎಷ್ಟು ಜನ ಎಲ್ಲೆಲ್ಲಿದ್ದಾರೆ? ಎನ್ನುವದನ್ನು ಸಹ ಹೇಳಿದ. ಅಷ್ಟರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೌಮರ್ ಗಡಾಫಿಯ ಅರಮನೆ ‘ಬಾಬ್-ಆಲ್-ಅಜಿಜಾ’ ಬಂತು. ನಾನು ಅವನಿಗೆ ಅಲ್ಲಿ ಸ್ವಲ್ಪ ಹೊತ್ತು ನಿಲ್ಲಿಸುವಂತೆ ಹೇಳಿ ಫೋಟೋ ತೆಗೆಯಲು ಹೊರಟೆ. ಅವನು ಒಳಗೆ ಹೋಗುವಂತಿಲ್ಲ ಎಂದು ಎಚ್ಚರಿಸಿದ. ನಾನು ಹೊರಗಿನಿಂದಲೇ ಸರಸರನೆ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಅಲ್ಲಿ ಗಡಾಫಿಯ ಭವ್ಯ ಅರಮನೆ ಹೇಳಹೆಸರಿಲ್ಲದಂತೆ ಅವಶೇಷಗಳಾಗಿ ಬಿದ್ದಿತ್ತು. ಇಲ್ಲೇ ಅಲ್ಲವೇ ಗಡಾಫಿ ಐಷಾರಾಮಿ ಜೀವನ ನಡೆಸಿದ್ದು? ಐಭೋಗದ ಬದುಕನ್ನು ಬದುಕಿದ್ದು? ಒಂದೊಮ್ಮೆ ಸಕಲ ಸೌಲತ್ತುಗಳನ್ನು ಹೊಂದಿದ್ದ ಈ ಅರಮನೆ ಈಗ ಸಂಪೂರ್ಣವಾಗಿ ನೆಲಸಮವಾಗಿತ್ತು.


    ಒಡೆದು ಹಾಕಿರುವ ಗಡಾಫಿಯ ಅರಮನೆ

    ಗಡಾಫಿ ಅರಮನೆಯ ಅವಶೇಷಗಳು

    ಗಡಾಫಿ ಅರಮನೆಯ ಕೌಂಪೊಂಡು ಗೋಡೆಯ ಮೇಲೆ ಕಾವಲುಗಾರರು ನಿಲ್ಲುತ್ತಿದ್ದ ಎತ್ತರದ ಸ್ಥಳ


    ಈ ಮೊದಲು ಸಾಮಾನ್ಯವಾಗಿ ಇಡಿ ಲಿಬಿಯಾದ ತುಂಬಾ ಬಹಳಷ್ಟು ರಸ್ತೆಗಳಲ್ಲಿ, ಬೀದಿಗಳಲ್ಲಿ, ಕಛೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಡ್ಡಾಯವಾಗಿ ಗಡಾಫಿಯ ವಿವಿಧ ಭಂಗಿಯ ಹಾಗೂ ವಿವಿಧ ಪೋಷಾಕುಗಳನ್ನು ಧರಿಸಿದ ಪೋಸ್ಟರ್ ಅಥವಾ ಫೋಟೋಗಳು ರಾರಾಜಿಸುತ್ತಿದ್ದವು. ಈಗ ಅವನ್ನೆಲ್ಲಾ ತೆಗೆದು ಖಾಲಿಬಿಡಲಾಗಿದೆ.



    ಗಡಾಫಿಯ ಪೋಸ್ಟರನ್ನು ಕಿತ್ತು ಹಾಕಿ ಖಾಲಿ ಬಿಟ್ಟಿರುವ ಫ್ರೇಮುಗಳು

    ಒಂದಷ್ಟು ಕಡೆ ಅವುಗಳ ಜಾಗದಲ್ಲಿ ಆ ದೇಶದ ಮಹಾತ್ಮ ಒಮರ್ ಮುಖ್ತಾರನ ಫೋಟೋಗಳನ್ನು ಹಾಕಲಾಗಿದೆ. ನಾನು ಟ್ರಿಪೋಲಿಯ ಮುಖ್ಯ ಶಾಪಿಂಗ್ ಏರಿಯಾದಲ್ಲಿರುವ ಹೋಟೆಲ್‍ಗೆ ಬಂದ ನಂತರ ಸಂಜೆ ಒಂದಷ್ಟು ಸುತ್ತಾಡಿ ಬರಲೆಂದು ಹೊರಗೆ ಹೋದೆ. ಇಡಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಸ್ವಲ್ಪ ಹೊತ್ತು ಓಡಾಡಿರಲಿಕ್ಕಿಲ್ಲ ರಾತ್ರಿ ಎಂಟು ಗಂಟಗೆಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿಸುವದು ಕಾಣಿಸಿತು. “ಅರೆ, ಇದೇನಿದು? ಮೊದಲೆಲ್ಲಾ ಈ ರಸ್ತೆಗಳಲ್ಲ ರಾತ್ರಿ ಹನ್ನೆರೆಡರ ತನಕ ಅಂಗಡಿಗಳ ಬಾಗಿಲುಗಳನ್ನು ತೆರದಿಡುತ್ತಿದ್ದರು. ಈಗ ಗಲಾಟೆಯೆಲ್ಲಾ ಮುಗಿದು ತಣ್ಣಗಾದ ಮೇಲೂ ಏಕಿಷ್ಟು ಅವಸರ?” ಎಂದು ಅಚ್ಚರಿಗೊಂಡು ಅಂಗಡಿಯ ಮಾಲಿಕನೊಬ್ಬನನ್ನು ಕೇಳಿಯೇಬಿಟ್ಟೆ. ಅದಕ್ಕವನು “ಗಡಾಫಿ ಹೋದ ಮೇಲೆ ಲಿಬಿಯಾದಲ್ಲಿ Law and Order ಪ್ರಾಬ್ಲಂ ಇದೆ. ಇಲ್ಲಿ ಯಾವಾಗಬೇಕಾದರೂ ಏನಾದರೂ ಆಗಬಹುದು. ಕಳ್ಳತನ, ದರೋಡೆಗಳು ಹೆಚ್ಚಾಗಿವೆ. ಇದ್ದಕ್ಕಿದ್ದಂತೆ ಗುಂಡಿನ ಮೊರೆತ ಕೇಳಿಸುತ್ತದೆ. ಏಕೆಂದರೆ ಯುದ್ಧದ ಸಮಯದಲ್ಲಿ ಅದ್ಹೇಗೋ ಎಲ್ಲರ ಕೈಯಲ್ಲಿ ಗನ್‍ಗಳು ಬಂದಿವೆ.” ಎಂದು ಹರಕುಮುರುಕು ಇಂಗ್ಲೀಷಿನಲ್ಲಿ ಹೇಳಿದ. ನಾನು ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಟ್ಯಾಕ್ಷಿ ಹಿಡಿದು ಹೋಟೆಲ್‍ಗೆ ಬಂದೆ. ಬರುವಾಗ ಆ ಟ್ಯಾಕ್ಷಿ ಡ್ರವರ‍್ ನನ್ನು ಬೇಕಂತಲೇ “ಈಗ ಗಡಾಫಿಯಿಲ್ಲ. ಲಿಬಿಯಾ ಸ್ವತಂತ್ರವಾಗಿದೆ. ನಿಮಗೆಲ್ಲಾ ಖುಶಿಯಾಗಿರಬೇಕಲ್ಲವೆ? ಇನ್ನುಮುಂದೆ ಈ ದೇಶ ಬಹಳಬೇಗನೆ ಅಭಿವೃದ್ಧಿ ಹೊಂದುತ್ತದಲ್ಲವೆ?” ಎಂದು ಕೇಳಿದೆ. ಅದಕ್ಕವನು “ಏನು ಅಭಿವೃದ್ಧಿನೋ ಏನೋ! ಗಡಾಫಿಯಿರುವಾಗಲೇ ನಮ್ಮ ದೇಶ ಸುಸ್ಥಿತಿಯಲ್ಲಿತ್ತು. ಏಕೆಂದರೆ ಆತ ಅಮೆರಿಕನ್ನರನ್ನು ದೂರವಿಟ್ಟಿದ್ದ. ಈಗ ಇವರು ಅವರ ಕೈಗೆ ಕೊಟ್ಟು ಕುಳಿತಿದ್ದಾರೆ. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಈ ಅಮೆರಿಕನ್ನರು ಮತ್ತು ಯೂರೋಪಿಯನ್ನರು ಮೂಗು ತೂರಿಸಿದ ಮೇಲೆ ಮುಗಿಯಿತು; ಅಲ್ಲಿ ಶಾಂತಿ ನೆಲೆಸಲು ತುಂಬಾ ದಿನ ಬೇಕಾಗುತ್ತದೆ. ಇಲ್ಲೇ ನೋಡಿ ಟ್ರಿಪೋಲಿಯಲ್ಲಿ ಕ್ರಾಂತಿ ಮುಗಿದು ೪ ತಿಂಗಳಾಗುತ್ತಾ ಬಂದರೂ ಪ್ರತಿನಿತ್ಯ ಒಂದಲ್ಲ ಒಂದು ಗಲಭೆ ನಡೆಯುತ್ತಲೇ ಇರುತ್ತವೆ. ಗಡಾಫಿಯ ಬೆಂಬಲಿಗರು ಇನ್ನೂ ಸಾಕಷ್ಟು ಜನ ಇದ್ದಾರೆ. ಅವರನ್ನು ಹತ್ತಿಕ್ಕಲು ಈಗಿನ ಸರಕಾರ ಹರಸಾಹಸ ಮಾಡುತ್ತಿದೆ” ಎಂದು ವಿಷಾದದಿಂದ ಹೇಳಿದ.


    ಯುದ್ಧದಲ್ಲಿ ಮಡಿದವರು
    “ಗಡಾಫಿಯಿಲ್ಲದ ಲಿಬಿಯಾ ನಿಮಗೆ ಹೇಗೆ ಕಾಣಿಸುತ್ತದೆ?” ಎಂದು ಸೆಭಾಗೆ ಬಂದಿಳಿದ ಮೇಲೆ ಕನ್ನಡದವರೇ ಆದ ನನ್ನ ಸಹೋದ್ಯೋಗಿ ಡಾ. ನವೀನ್ ಅವರನ್ನು ಕೇಳಿದ್ದೆ. ಅವರು ನಸುನಗುತ್ತಾ “ಗಂಡನಿಲ್ಲದ ಹೆಂಡತಿಯಂತೆ” ಎಂದು ಉತ್ತರಿಸಿದ್ದರು. ಆ ನಸುನಗೆಯ ಹಿಂದೆ ಗಡಾಫಿಯಿಲ್ಲದ ಲಿಬಿಯಾದ ಮೇಲೆ ಇನ್ಯಾರ್ಯಾರೋ ಕಣ್ಣು ಹಾಕುತ್ತಿದ್ದಾರೆ ಎನ್ನುವ ಅವ್ಯಕ್ತ ನೋವಿತ್ತು. ಮಾತ್ರವಲ್ಲ ಗಡಾಫಿಯಿಲ್ಲದ ಲಿಬಿಯಾವನ್ನು ಸ್ವೀಕರಿಸುವದು ಕಷ್ಟಸಾಧ್ಯ ಎನ್ನುವ ಭಾವವಿತ್ತು. ಈ ಭಾವ ನಮ್ಮಂಥ ವಿದೇಶಿಯರಿಗಿದ್ದಿದ್ದು ನನಗೆ ಅಚ್ಚರಿ ಎನಿಸಲಿಲ್ಲ. ಆದರೆ ಇಲ್ಲಿನ ಅನೇಕ ಸ್ಥಳೀಯರಲ್ಲೂ ಇದೇ ಭಾವನೆಯಿದ್ದಿದ್ದು ನನಗೆ ಅಚ್ಚರಿಯನ್ನು ತಂದಿತ್ತು. ಆದರೆ ಅವರು ಇದನ್ನು ಬಹಿರಂಗಪಡಿಸದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಮಾತ್ರವಲ್ಲ ಇಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಗಡಾಫಿ ಬೆಂಬಲಿಗರನ್ನು ಬದಲಾಯಿಸಲಾಗಿದೆ. ಈ ದಕ್ಷಿಣದ ಭಾಗದಲ್ಲಿ ಸಾಕಷ್ಟು ಜನ ಗಡಾಫಿ ಬೆಂಬಲಿಗರಿರುವದರಿಂದಲೇ ಸಧ್ಯದ ಸರಕಾರ ಈ ಭಾಗದ ಕಡೆಗೆ ಮೊದಲು ಮೊಬೈಲ್ ಸಿಗ್ನಲ್‍ಗಳು ಸಿಗದಂತೆ ಮಾಡಿದರು. ಆಮೇಲೆ ಇಂಟರ್ನೆಟ್ ಸೌಲಭ್ಯವನ್ನು ಕತ್ತರಿಸಿದರು. ನಂತರ ವಾರಕ್ಕೊಂದು ಸಾರಿ ೧೮ ಗಂಟೆಗಳ ಕಾಲ ವಿದ್ಯುತ್ ಸರಬುರಾಜು ನಿಲ್ಲಿಸಿದರು. ಆ ಮೂಲಕ ಸರಕಾರ ಪರೋಕ್ಷವಾಗಿ ಇಲ್ಲಿಯ ಜನರ ಮೇಲೆ ಒತ್ತಡ ಹೇರುವದರ ಮೂಲಕ ತನ್ನತ್ತ ಬಗ್ಗಿಸಿಕೊಳ್ಳಲು ನೋಡುತ್ತಿದೆ ಎಂದು ಜನ ಮಾತಾಡಿಕೊಂಡರು. ಈಗಲೂ ಇದೇ ಸ್ಥಿತಿ ಇಲ್ಲಿ ಮುಂದುವರಿದಿದೆ.

    ಗಲಭೆಯ ಸಮಯದಲ್ಲಿ ಹಾನಿಗೀಡಾದ ಸೆಭಾ ವಿಶ್ವವಿದ್ಯಾನಿಲಯ

    ಲಿಬಿಯಾ ಈಗ ಸಂಪೂರ್ಣವಾಗಿ ಗಡಾಫಿಯ ದಾಸ್ಯದಿಂದ ಮುಕ್ತವಾಗಿದೆ. ಸ್ವತಂತ್ರವಾಗಿದೆ. ಆದರೆ ಸ್ವಾತಂತ್ರ್ಯದ ಪರಿಕಲ್ಪನೆಯ ಕುರಿತಂತೆ ಅವರವದೇ ಅಭಿಪ್ರಾಯಗಳನ್ನು ಹಾಗೂ ಗೊಂದಲಗಳನ್ನು ಇಲ್ಲಿಯವರು ಮುಂದಿಡುತ್ತಾರೆ. ನಾನು ಘಾಟ್‍ಗೆ ಬಂದ ಮೇಲೆ ನನ್ನ ವಿಭಾಗದ ಮುಖ್ಯಸ್ಥರಾದ ಅಹಮ್‍ದನನ್ನು (ಹೆಸರು ಬದಲಾಯಿಸಲಾಗಿದೆ) “ಈಗ ಲಿಬಿಯಾ ಸ್ವತಂತ್ರವಾಗಿದೆ. ಇನ್ನುಮುಂದೆ ಶೀಘ್ರದಲ್ಲಿಯೇ ನೀವು ಒಂದು ಪ್ರಜಾರಾಜ್ಯವನ್ನು ಹೊಂದಲಿದ್ದೀರಿ. ನಿಮಗೆ ಹೇಗನಿಸುತ್ತೆ?” ಎಂದು ಕೇಳಿದ್ದೆ. ಅದಕ್ಕವರು ಉತ್ತರಿಸುತ್ತಾ “ಈ ಕ್ರಾಂತಿಯೆನ್ನುವದು ಒಂದು ಸಾಮೂಹಿಕ ಸನ್ನಿಯಿದ್ದಂತೆ. ಎಲ್ಲೋ ಯಾರೋ ಒಂದಷ್ಟು ಜನ ದಂಗೆಯೆದ್ದರು. ಅವರನ್ನು ನೋಡಿ ಬೇರೆಯವರೂ ದಂಗೆಯಿದ್ದರು. ಅವರೊಂದಿಗೆ ಈ ನ್ಯಾಟೋ ಕೈಜೋಡಿಸಿತು. ಅಲ್ಲಿಗೆ ಎಲ್ಲ ಮುಗಿಯಿತು. ಈ ರಕ್ತಪಾತ, ಅಪಾರ ಸಾವು, ನೋವು ಎಲ್ಲ ಬೇಕಾಗಿತ್ತ? ಇವರು ಪ್ರಜಾರಾಜ್ಯ ಬೇಕೆನ್ನುತ್ತಿದ್ದಾರೆ. ಪ್ರಜಾರಾಜ್ಯದಲ್ಲಿ ಎಲ್ಲವೂ ಸರಿಯಾಗಿರುತ್ತದಾ? ಅಲ್ಲಿ ಪ್ರತಿಭಟಿಸುವ ಹಕ್ಕೊಂದನ್ನು ಬಿಟ್ಟರೆ ಬೇರೆ ಏನಿರುತ್ತದೆ? ಹೋಗಲಿ ಪ್ರತಿಭಟಿಸುವ ಎಲ್ಲರಿಗೂ ನ್ಯಾಯ ಸಿಗುತ್ತದಾ? Take for example your country India. Do you think that all the principles of democracy are fully implemented over there? Can you go and ask your primeminister directly for what you have not got? Or can you say that so called your ‘democratic’ politicians are not corrupt and have not made any property for themselves? Or you being a part of democracy, against how many politicians have you raised your voice? Have you ever enjoyed the true freedom of democracy? I know you have not and it’s not possible also. Then why should we have this system?” ಎಂದು ನನಗೆ ಮರು ಪ್ರಶ್ನೆ ಹಾಕುತ್ತಾರೆ. ಮುಂದುವರಿದು “ಹಿಂದೆ ನಮ್ಮವನೇ ಆದ ಗಡಾಫಿ ಕೊಳ್ಳೆಹೊಡೆದರೂ ನಮಗೆ ಚನ್ನಾಗಿ ಅನುಕೂಲಮಾಡಿಕೊಟ್ಟಿದ್ದ. ಆದರೆ ಈಗ ಅಮೆರಿಕನ್ನರು, ಮತ್ತು ಬೇರೆಯವರು ಇಲ್ಲಿಯ ತೈಲವನ್ನು ಮುಂದಿನ ಇಪ್ಪತ್ತು ವರ್ಷಗಳ ಕಾಲ ಕೊಳ್ಳೆಹೊಡೆಯುತ್ತಾರೆ. ನನಗೆ ಇದರಲ್ಲಿ ಯಾವ ವ್ಯತ್ಯಾಸವೂ ಕಾಣಿಸುವದಿಲ್ಲ.” ಎಂದು ನಗುತ್ತಾರೆ. ಪೋಸ್ಟ್ ಆಫಿಸಿನ ಜನರಲ್ ಮ್ಯಾನೇಜರ್ ಒಬ್ಬರು “ಹಿಂದೆ ಗಡಾಫಿಯಿರುವಾಗ ಹಸಿರು ಭಾವುಟವಿತ್ತು. ಈಗ ಹೊಸ ಸರಕಾರ ಅದನ್ನು ಬದಲಾಯಿಸಿ ಎಂದು ಹೇಳಿತು. ಬದಲಾಯಿಸಿದ್ದೇವೆ. ಯಾರು ಬಂದರೂ ಹೋದರೂ ನಮಗೆಲ್ಲಾ ಒಂದೇ! ನಾವೆನು ಮಾಡೋಕಾಗುತ್ತೆ?” ಎಂದು ಕೈ ಚೆಲ್ಲುತ್ತಾರೆ. ಅವರ ಅಸಿಸ್ಟಂಟ್ ಜುಮಾ (ಹೆಸರು ಬದಲಾಯಿಸಲಾಗಿದೆ “ಹಿಂದೆ ನಾನು ಆಪಿಸಿಗೆ ಬೆಳಿಗ್ಗೆ ೮ ಕ್ಕೆ ಬಂದು ಮದ್ಯಾಹ್ನ ೧.೩೦ಕ್ಕೆ ಹೋಗುತ್ತಿದ್ದೆ. ಈಗ ಬೆಳಿಗ್ಗೆ ೧೦ ಗಂಟೆಗೆ ಬಂದು ಮದ್ಯಾಹ್ನ ೧೨.೩೦ಕ್ಕೆಲ್ಲಾ ಹೊರಟು ಹೋಗುತ್ತೆನೆ. ಏಕೆಂದರೆ ಈಗ ನಾವು ಸ್ವತಂತ್ರರು. ಏನು ಬೇಕಾದರು ಮಾಡಬಹುದು. Libya is free” ಎಂದು ಜೋರಾಗಿ ನಗತೊಡಗುತ್ತಾಳೆ. ಮುಂದೆ ನಾನು ಸ್ಥಳಿಯ ಪತ್ರಕರ್ತನೊಬ್ಬನನ್ನು ಭೇಟಿಮಾಡಿದೆ. “ನಾನು ಹಿಂದೆ freelance journalist ಆಗಿ ಕೆಲಸ ಮಾಡುತ್ತಿದ್ದೆ. ಈಗ full time journalist ಆಗುತ್ತಿದ್ದೇನೆ. ಏಕೆಂದರೆ ಲಿಬಿಯಾ democratic country ಆಗಲಿದೆ. ಈ democratic country ಗಳಲ್ಲಿ ಬರೆಯಲು ಸಾಕಷ್ಟು ವಿಷಯಗಳಿರುತ್ತವೆ. Freedom of expression ಇರುವದರಿಂದ ನಿಮಿಷಕ್ಕೊಂದೊಂದು ಸುದ್ಧಿಯನ್ನು ಹಾಕಬಹುದು” ಎಂದು ಕಣ್ಣು ಮಿಟುಕಿಸುತ್ತಾನೆ. ಇನ್ನು ವಿದ್ಯಾರ್ಥಿಗಳಂತೂ “ನಮಗೆ ಹೊಸ ಸರಕಾರ ಬೇಡವೇ ಬೇಡ. ಇಷ್ಟವಿಲ್ಲ.” ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಇನ್ನೂ ಗಡಾಫಿಯ ಫೋಟೋವನ್ನು ತಮ್ಮ ಖಾಸಗಿ ಕೋಣೆಗಳಲ್ಲಿ ಮತ್ತು ಹಾಸ್ಟೆಲ್‍ಗಳಲ್ಲಿ ಹಾಕಿಕೊಂಡಿದ್ದಾರೆ. ನಾನು ಮೊನ್ನೆ ಗ್ರಾಮರ್ ವಿಷಯವನ್ನು ಹೇಳಿಕೊಡುವಾಗ ಸುಮ್ಮನೆ ”Gadafi was a dictator” ಎನ್ನುವ ವಾಕ್ಯವೊಂದನ್ನು ಬೋರ್ಡಿನ ಮೇಲೆ ಬರೆದೆ. ತಕ್ಷಣ ವಿದ್ಯಾರ್ಥಿಗಳೆಲ್ಲಾ “No, never. He was never ever a dictator. Mr. Uday, don’t say anything bad of Gadafi. He had given so much for us. We still love him and we still love his favorite color ‘green’. See….. ....” ಎಂದು ಹಸಿರು ಬಣ್ಣದ ಮೊಬೈಲ್ ಮತ್ತು ಪೆನ್ಸಿಲ್‍ಗಳನ್ನು ತೋರಿಸುತ್ತಾರೆ. ನಾನು ನೀವೆಲ್ಲಾ ವಿದ್ಯಾರ್ಥಿಗಳು ಇಂಥ ಚರ್ಚೆಯನ್ನೆಲ್ಲಾ ಬಿಟ್ಟು ಓದಿನ ಕಡೆ ಗಮನ ಕೊಡಬೇಕು ಎಂದು ಬುದ್ಧಿವಾದ ಹೇಳುತ್ತೇನೆ.


    ವಿಜಯದ ಸಂಕೇತವನ್ನು ಬಿಂಬಿಸುವ ಗೋಡೆ ಚಿತ್ರ
    ಹೊಸ ಹಂಗಾಮಿ ಸರಕಾರಕ್ಕೆ ದೇಶದ ಎಲ್ಲೆಡೆ ಗಡಾಫಿ ಬೆಂಬಲಿಗರ ಸಂಖ್ಯೆ ಸಾಕಷ್ಟಿದೆ ಎಂದು ಗೊತ್ತು. ಈಗಾಗಲೇ ಸುಮಾರು 2000 ದಷ್ಟು ಬೆಂಬಲಿಗರನ್ನು ಜೈಲಿಗೆ ಹಾಕಿ ಮನಬಂದಂತೆ ಹಿಂಸಿಸಲಾಗಿದೆ. ಇದನ್ನುಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ತೀವ್ರವಾಗಿ ಖಂಡಿಸಿದೆ. ಜೈಲಲ್ಲಿರುವವರು ನ್ಯಾಯಾಲಯದ ಮೊರೆಹೊಕ್ಕಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಾ? ಇಲ್ಲ ಸಾವೇ ಗತಿಯಾಗುತ್ತಾ? ಎನ್ನುವದನ್ನು ಕಾದುನೊಡಬೇಕಿದೆ. ಈಗಲೂ ಟ್ರಿಪೋಲಿ, ಬೆಂಗಾಜಿ, ಮಿಸ್ರತಾಗಳಲ್ಲಿ ಆಗಾಗ ಗಡಾಫಿ ಬೆಂಬಲಿಗರು ಮತ್ತು ಬಂಡುಕೋರರ ಮಧ್ಯ ಘರ್ಷಣೆಗಳು ಸಂಭವಿಸುತ್ತಿವೆ. ಈ ತೆರದ ಘರ್ಷಣೆಗಳು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವೆ. ಹೊಸ ಸರಕಾರ ಮೊದಲು ಬಲಪ್ರಯೋಗ ಮಾಡಿ ಜನರನ್ನು ತಮ್ಮತ್ತ ಒಲಿಸಿಕೊಳ್ಳಲು ನೋಡಿದರು. ಆದರೆ ಅದು ಸಾಧ್ಯವಾಗದೇ ಹೋದಾಗ ಹೊಸಹೊಸ ಸವಲತ್ತುಗಳನ್ನು ಕೊಡುವದರ ಮೂಲಕ ಅವರನ್ನು ಒಲಿಸಿಕೊಳ್ಳಲು ನೋಡುತ್ತಿದ್ದಾರೆ. ಆ ಪ್ರಕಾರ ಲಿಬಿಯನ್ನರ ಸಂಬಳ ಸಧ್ಯದಲ್ಲಿಯೇ ದ್ವಿಗುಣವಾಗಲಿದೆ ಎಂಬ ಸುದ್ಧಿಯಿದೆ. ಈ ರಮದಾನ್ ಮತ್ತು ಈದ್ ಹಬ್ಬಗಳ ಕೊಡುಗೆಯಾಗಿ ಸರಕಾರಿ ಒಡೆತನದಲ್ಲಿರುವ “ಲಿಬಿಯಾನಾ ಮತ್ತು ಆಲ್ ಮದಾರ್” ಮೊಬೈಲ್‍ಗಳಿಗೆ ತಲಾ ೬೦ ದಿನಾರ್ (ರೂ. ೨೪೦೦) ಗಳಷ್ಟು ಉಚಿತ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಸಚಿವರು ಇನ್ನುಮುಂದೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ೭೫ ದಿನಾರ್ (ರೂ. ೩೦೦೦) ಗಳಷ್ಟು ಒಂಬತ್ತು ತಿಂಗಳ ಕಾಲ ಸ್ಟೈಫಂಡ್ ನೀಡಲಾಗುವದು ಎಂದು ಘೋಷಿಸಿದ್ದಾರೆ. ಒಂದು ಸಾರಿ ಜನರ ಮೇಲೆ ಹಿಡಿತ ಸಾಧಿಸಿದ ಮೇಲೆ ಹಂಗಾಮಿ ಸರಕಾರ ಚುನಾವಣೆಗಳನ್ನು ನಡೆಸಲಿದೆ. ಆನಂತರ ಪ್ರಜಾಪ್ರಭುತ್ವ ಸರಕಾರಕ್ಕೆ ಚಾಲನೆ ಸಿಗಲಿದೆ. ಆದರೆ ಸಧ್ಯದ ಸರಕಾರ, ಗಡಾಫಿಯ ಬೆಂಬಲಿಗರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಾಕೀತು ಮಾಡುತ್ತಿದೆ. ಆದರೆ ಅವರು ನಮಗೇಕೆ ಅವಕಾಶವಿಲ್ಲ? ಅವಕಾಶ ಮಾಡಿಕೊಡದೆಹೋದರೆ ಉಗ್ರರೂಪದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


    ಇತ್ತ ಕಡೆ ಹೊಸ ಸರಕಾರ ಗಡಾಫಿಯ ಹೆಸರನ್ನು ಸಂಪೂರ್ಣವಾಗಿ ಅಳಿಸಿಹಾಕಲು ನೋಡುತ್ತಿದೆ. ಗಡಾಫಿತನ ಎಲ್ಲೂ ಇರಲೇಬಾರದೆಂಬಂತೆ ಪಣ ತೊಟ್ಟಂತೆ ಕಾಣಿಸುತ್ತಿದೆ. ಆತನ ಭಾವಚಿತ್ರವಿರುವ ನೋಟುಗಳನ್ನು ನಿಧಾನವಾಗಿ ಚಲಾವಣೆಯಿಂದ ರದ್ದುಪಡಿಸಲು ನೋಡುತ್ತಿದೆ. ಎಲ್ಲ ಸಾರ್ವಜನಿಕ ಕಛೇರಿ, ಸ್ಥಳಗಳಿಂದ ಆತನ ಫೋಟೋಗಳನ್ನು ತೆಗೆದುಹಾಕಲಾಗಿದೆ. ಆತ ಹಾಕಿಕೊಟ್ಟ ರೀತಿ ರಿವಾಜುಗಳನ್ನು, ಚಿಂತನೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುತ್ತಿದೆ. ಹಣದುಬ್ಬರದಿಂದ ಪದಾರ್ಥಗಳ ಬೆಲೆಗಳು ಮೊದಲಿಗಿಂತ ೧೫% ನಷ್ಟು ಹೆಚ್ಚಾಗಿದ್ದರಿಂದ ಅದನ್ನು ಹತೋಟಿಗೆ ತರಲು ಸರಕಾರ ಹೆಣಗಾಡುತ್ತಿದೆ. ಬ್ಯಾಂಕುಗಳಲ್ಲಿ ಯಾವಾಗಲೂ ದುಡ್ಡಿನ ಕೊರತೆಯಿದ್ದು ಪರಿಸ್ಥಿತಿ ಸುಧಾರಿಸುವವರಿಗೂ ಒಬ್ಬನು ತನ್ನ ಸಂಬಳದ ೪೦% ಭಾಗದಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಯುದ್ಧದ ಸಮಯದಲ್ಲಿ ಎಲ್ಲರ ಕೈಗೆ ಬಂದ ಗನ್ನುಗಳನ್ನು ಸರಕಾರ ಹಿಂತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

    ಸ್ವಾತಂತ್ರ್ಯ ಪ್ರತೀಕದ ಗೋಡೆ ಚಿತ್ರ


    ಈ ಎಲ್ಲದರ ಮಧ್ಯ ಮೊನ್ನೆ ಅಂದರೆ ಫೆಬ್ರುವರಿ ೧೭ ರಂದು ಬಿಗಿ ಭದ್ರತೆಯ ನಡುವೆಯೇ ಲಿಬಿಯಾ ಮೊದಲ ವರ್ಷದ ಕ್ರಾಂತಿಯ ಸಂಭ್ರಮದಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಬೆಂಗಾಜಿಯಲ್ಲಿ ಈ ಆಚರಣೆಗೆ ದೊಡ್ಡಮಟ್ಟದ ಪ್ರತಿಕ್ರಿಯೆ ಸಿಕ್ಕಿತು. ಪ್ರತಿಯೊಂದು ಮನೆಯ ಹೆಣ್ಣುಮಕ್ಕಳು ನವವಧುವಿನಂತೆ ಸಿಂಗರಿಸಿಕೊಂಡು ತಮ್ಮ ಮನೆಯನ್ನು ಬೇರೆ ಬೇರೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಮತ್ತು ರಾಷ್ಟ್ರ ಧ್ವಜಗಳಿಂದ ಅಲಂಕರಿಸಿ ಸ್ವಾತಂತ್ರೋತ್ಸವನ್ನು ಆಚರಿಸಿದರು ಎಂದು ಲಿಬಿಯಾದ ಇಂಗ್ಲೀಷ್ ಪತ್ರಿಕೆ “ದಿ ಟ್ರಿಪೋಲಿ ಪೋಸ್ಟ್” ವರದಿ ಮಾಡಿದೆ. ಆದರೆ ದಕ್ಷಿಣದ ಭಾಗದಲ್ಲಿ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ನೀರಸವಾಗಿತ್ತು. ಈ ಉತ್ಸವದ ಮುನ್ನಾ ದಿನ ಸರಕಾರ ಇಡಿ ಲಿಬಿಯಾದ ತುಂಬಾ ಪ್ರತಿಯೊಂದು ಮನೆಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ ಹಿಟ್ಟು, ಶಾವಿಗೆ, ಎಣ್ಣೆ ಮುಂತಾದ ದಿನಸಿಗಳನ್ನು ಉಚಿತವಾಗಿ ವಿತರಿಸಿದೆ. ಆ ದಿನ ಶುಕ್ರವಾರ ಬಂದಿದ್ದರಿಂದ ಸರಕಾರ ಮಾರನೆ ದಿವಸ
    ಸಾರ್ವತ್ರಿಕ ರಜೆಯನ್ನು ಘೋಷಿಸಿ ಲಿಬಿಯನ್ನರ ಮೆಚ್ಚುಗೆ ಗಳಿಸಲು ನೋಡಿತು. ಸರಕಾರ, ಇದೆ ರೀತಿ ಮುಂದೆಯೂ ಸಹ ಎಲ್ಲ ರಿತಿಯಲ್ಲಿ ಲಿಬಿಯನ್ನರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತದಾ? ಕಾದು ನೋಡಬೇಕಿದೆ.

    -ಉದಯ್ ಇಟಗಿ
    ಈ ಲೇಖನ 4-3-2012 ರ “ಸಂಯುಕ್ತ ಕರ್ನಾಟಕ”ದಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ http://www.samyukthakarnatakaepaper.com/27598/Samyuktha-Karnataka/Mar-04-2012-Bangalore#page/13/1